ಚಾಮರಾಜನಗರ, ಮಾರ್ಚ್ 15: ಒಂಟಿ ದಂತದ ಆನೆ ಹಾವಳಿಗೆ ಕಾಡಂಚಿನ ಗ್ರಾಮಸ್ಥರು ಹೈರಾಣಾಗಿದ್ದಾರೆ. ಒಂಟಿ ಸಲಗನ ಏಟಿಗೆ ಕಬ್ಬಿಣದ ಗೇಟ್ ಛಿದ್ರವಾದ ಘಟನೆ ಚಾಮರಾಜನಗರದ ಗಡಿಗ್ರಾಮ ತಮಿಳುನಾಡಿನ ಅರಳವಾಡಿಯಲ್ಲಿ ನಡೆದಿದೆ. ವಾಹನವೊಂದು ಬರುತ್ತಿದ್ದನ್ನು ಕಂಡ ಒಂಟಿದಂತದ ಕಾಡಾನೆ ಸಲೀಸಾಗಿ ಗೇಟ್ ಮುರಿದು ತೋಟಕ್ಕೆ ನುಗ್ಗಿ ಬೆಳೆ ಮೇಯ್ದಿದೆ. ಕಾಡಾನೆ ಗೇಟ್ ಮುರಿದು ಒಳನುಗ್ಗುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆ ಆಗಿದೆ. ಸದ್ಯ ಕರ್ನಾಟಕ ಮತ್ತು ತಮಿಳುನಾಡಿನ ಜನರಿಗೆ ಕಾಡಾನೆ ತಲೆನೋವಾಗಿದೆ.
ರಾಮನಗರ, ಮಾರ್ಚ್ 15: ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ ಹಿನ್ನೆಲೆ ಅಡ್ಡಮತದಾನ ಭೀತಿ ನಡುವೆ ರಾಮನಗರ (Ramnagar)ಜಿಲ್ಲೆಯ ಬಿಡದಿ ಬಳಿಯ ರೆಸಾರ್ಟ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಡಿಶಾ ಕಾಂಗ್ರೆಸ್ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ಪಕ್ಷದ ನಾಯಕರು ಬೆಂಗಳೂರಿಗೆ ಕರೆತರಿದ್ದು, ಬಿಡದಿ ಸಮೀಪದ ವಂಡರ್ ಲಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಇದೇ ವೇಳೆ ಶಾಸಕರನ್ನು ಖರೀದಿಸಲು ಅಪರಿಚಿತ ವ್ಯಕ್ತಿಗಳು ರೆಸಾರ್ಟ್‌ಗೆ ಬಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಿಡಿದಿಟ್ಟಿರುವ ವ್ಯಕ್ತಿಗಳ ಬಳಿ ಕೆಲವು ಬ್ಲಾಂಕ್ ಚೆಕ್‌ಗಳು ಪತ್ತೆ
ಬೆಳಗ್ಗೆ ವೇಳೆ ನಾಲ್ವರು ವ್ಯಕ್ತಿಗಳು ರೆಸಾರ್ಟ್‌ಗೆ ಬಂದು ಒಡಿಶಾದ ಒಬ್ಬ ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯ ತಿಳಿದ ಕಾಂಗ್ರೆಸ್ ಮುಖಂಡರು ತಕ್ಷಣ ಕ್ರಮ ಕೈಗೊಂಡು ಇಬ್ಬರನ್ನು ಹಿಡಿದು ಇಟ್ಟಿದ್ದಾರೆ. ಇನ್ನಿಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಿಡಿದಿಟ್ಟಿರುವ ವ್ಯಕ್ತಿಗಳ ಬಳಿ ಕೆಲವು ಬ್ಲಾಂಕ್ ಚೆಕ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಬಿರೇಂದ್ರ ಪ್ರಸಾದ್ ಎಂಬುವವರ ಹೆಸರಿರುವ ಚೆಕ್ ಕೂಡ ಸೇರಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳಾಗಿ ಬಿರೇಂದ್ರ ಪ್ರಸಾದ್, ಅಜಿತ್ ಕುಮಾರ್ ಸಾಹು ಮತ್ತು ಸುಮಾಚಲ್ ಮಹಾಕೂದ ಎಂಬ ಹೆಸರುಗಳು ಕೇಳಿಬಂದಿವೆ.
ಘಟನೆಯ ಮಾಹಿತಿ ತಿಳಿದು ಬಿಡದಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಕುದುರೆ ವ್ಯಾಪಾರದ ಆರೋಪ ಕೇಳಿಬಂದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ, ಮಾರ್ಚ್ 15: ಅಡ್ಡಬಂದ ಕಾರು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಸರ್ಕಾರಿ ಬಸ್ ಮರಕ್ಕೆ ಡಿಕ್ಕಿಯಾಗಿರುವ ಘಟನೆ ಬೆಳಗಾವಿಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಬಸ್ನಲ್ಲಿದ್ದ 11 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದಾಗಿ ಸರ್ಕಾರಿ ಆಸ್ಪತ್ರೆಯ ಮುಂಭಾಗವೇ ಬಸ್ ಅಪಘಾತಕ್ಕೀಡಾಗಿದ್ದು, ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟಿ20 ವಿಶ್ವಕಪ್ನ ರನ್ನರ್ ಅಪ್ ನ್ಯೂಝಿಲೆಂಡ್ ತಂಡ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ. ಮೌಂಟ್ ಮೌಂಗನುಯಿನ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಕಿವೀಸ್ ಪಡೆಗೆ ಆರಂಭಿಕ ಆಘಾತ ನೀಡುವಲ್ಲಿ ಸೌತ್ ಆಫ್ರಿಕಾ ಬೌಲರ್ಗಳು ಯಶಸ್ವಿಯಾಗಿದ್ದರು.
ಪರಿಣಾಮ 35 ರನ್ಗಳಿಸುವಷ್ಟರಲ್ಲಿ ನ್ಯೂಝಿಲೆಂಡ್ ತಂಡವು 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೇಮ್ಸ್ ನೀಶಮ್ 26 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಅತ್ತ ಅದಾಗಲೇ ಪಂದ್ಯದ ಮೇಲೆ ಹಿಡಿತ ಹೊಂದಿದ್ದ ಸೌತ್ ಆಫ್ರಿಕಾ ಬೌಲರ್ಗಳು ಕೆಳ ಕ್ರಮಾಂಕದ ಬ್ಯಾಟರ್ಗಳನ್ನು ಬೇಗನೆ ಪೆವಿಲಿಯನ್ಗಟ್ಟಿದರು.
ಈ ಮೂಲಕ ನ್ಯೂಝಿಲೆಂಡ್ ತಂಡವನ್ನು 14.3 ಓವರ್ಗಳಲ್ಲಿ 91 ರನ್ಗಳಿಗೆ ಆಲೌಟ್ ಮಾಡಿದರು. ಸೌತ್ ಆಫ್ರಿಕಾ ನ್ಕೊಬಾನಿ ಮೊಕೊಯೆನಾ 3.3 ಓವರ್ಗಳಲ್ಲಿ 26 ರನ್ ನೀಡಿ 3 ವಿಕೆಟ್ ಪಡೆದರೆ, ಜೆರಾಲ್ಡ್ ಕೋಟ್ಝಿ 2 ವಿಕೆಟ್ ಕಬಳಿಸಿದರು. ಇನ್ನು ಕೇಶವ್ ಮಹಾರಾಜ್ ಹಾಗೂ ಒರ್ಟ್ನಿಲ್ ಬಾರ್ಟ್ಮನ್ ತಲಾ ಎರಡು ವಿಕೆಟ್ ಕಬಳಿಸಿ ಉತ್ತಮ ಸಾಥ್ ನೀಡಿದರು.
ಇನ್ನು ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 16.4 ಓವರ್ಗಳಲ್ಲಿ 93 ರನ್ ಗಳಿಸುವ ಮೂಲಕ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.
ಖ್ಯಾತ ರ‍್ಯಾಪರ್ ಮತ್ತು ಗಾಯಕ ಬಾದ್‌ಶಾ (Badshah) ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ಕಡೆ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಬಂದಿದ್ದರೆ, ಮತ್ತೊಂದೆಡೆ ಕಾನೂನು ಕ್ರಮಗಳ ಅಡಿಯಲ್ಲಿ ಅವರ ಬಂಧನಕ್ಕೆ ಸಿದ್ಧತೆ ನಡೆಯುತ್ತಿದೆ. ಬಾದ್‌ಶಾ ಅವರ ಇತ್ತೀಚಿನ ‘ಟಟೀರಿ’ (Tateeree) ಹಾಡು ಈಗ ಅವರಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಈ ಹಾಡಿನಲ್ಲಿ ಹರಿಯಾಣದ ಸಂಸ್ಕೃತಿ ಮತ್ತು ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆರೋಪದ ಬೆನ್ನಲ್ಲೇ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಅವರಿಗೆ ಪ್ರಾಣ ಬೆದರಿಕೆ (Death Threat) ಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್ ಒಂದರಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಎನ್ನಲಾದ ವ್ಯಕ್ತಿಯೊಬ್ಬ ಬಾದ್‌ಶಾಗೆ ಎಚ್ಚರಿಕೆ ನೀಡಿದ್ದಾನೆ. ‘ಗಾಯಕ ಬಾದ್‌ಶಾ, ನೀನು ಹರಿಯಾಣದ ಸಂಸ್ಕೃತಿಯನ್ನು ಹಾಳುಮಾಡಲು ಯತ್ನಿಸಿದೆ. 2024ರಲ್ಲಿ ನಿನ್ನ ಕ್ಲಬ್‌ನಲ್ಲಿ ನಾವು ಕೇವಲ ಟ್ರೈಲರ್ ತೋರಿಸಿದ್ದೆವು. ಆದರೆ ಈ ಬಾರಿ ನೇರವಾಗಿ ನಿನ್ನ ಹಣೆಗೆ ಗುಂಡಿಡುತ್ತೇವೆ’ ಎಂದು ಭಯಾನಕ ಸಂದೇಶ ರವಾನಿಸಲಾಗಿದೆ. ಈ ಪೋಸ್ಟ್ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇನ್ನೊಂದೆಡೆ ಬಾದ್‌ಶಾ ಅವರಿಗೆ ಬಂಧನದ ಭೀತಿ ಎದುರಾಗಿದೆ. ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಹರಿಯಾಣ ರಾಜ್ಯ ಮಹಿಳಾ ಆಯೋಗವು ಕಠಿಣ ನಿಲುವು ತಳೆದಿದೆ. ಮಾರ್ಚ್ 6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದರೂ ಬಾದ್‌ಶಾ ಗೈರುಹಾಜರಾಗಿದ್ದರು. ಇದರಿಂದ ಕೆರಳಿದ ಮಹಿಳಾ ಆಯೋಗವು ಬಾದ್‌ಶಾ ಅವರ ಪಾಸ್‌ಪೋರ್ಟ್ ಜಪ್ತಿ ಮಾಡಲು ಪೊಲೀಸರಿಗೆ ಸೂಚಿಸಿದೆ.
ಅಲ್ಲದೇ, ಬಾದ್‌ಶಾ ಅವರನ್ನು ಕೂಡಲೇ ಬಂಧಿಸಲು ಹರಿಯಾಣ ಪೊಲೀಸರಿಗೆ ಮಹಿಳಾ ಆಯೋಗವು ನಿರ್ದೇಶನ ನೀಡಿದೆ. ಹರಿಯಾಣದ ಹೆಣ್ಣುಮಕ್ಕಳನ್ನು ಹಾಡಿನ ಮೂಲಕ ಅವಮಾನಿಸಲಾಗಿದೆ ಎಂದು ಆಯೋಗ ಕಿಡಿಕಾರಿದೆ. ಈ ಸಂಬಂಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ಬಾದ್‌ಶಾ ಅವರ ಸುತ್ತ ಸಂಕಷ್ಟದ ಸುಳಿ ಸುತ್ತಿಕೊಂಡಿದೆ.
‘ಟಟೀರಿ’ ಹಾಡಿನಲ್ಲಿ ಶಾಲಾ ಸಮವಸ್ತ್ರ ಧರಿಸಿದ ಹರಿಯಾಣದ ವಿದ್ಯಾರ್ಥಿನಿಯರು ಆಕ್ಷೇಪಾರ್ಹವಾಗಿ ಡ್ಯಾನ್ಸ್ ಮಾಡಿದ್ದಾರೆ ಹಾಗೂ ಅಸಭ್ಯ ಸನ್ನೆಗಳನ್ನು ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂತು. ಇದು ಹರಿಯಾಣದ ಸಂಸ್ಕೃತಿ ಹಾಗೂ ವಿದ್ಯಾರ್ಥಿನಿಯರ ಘನತೆಗೆ ಧಕ್ಕೆ ತಂದಿದೆ ಎಂದು ಅನೇಕರು ದೂರಿದರು. ಈ ಹಾಡಿನ ಸಾಹಿತ್ಯ ಅಸಭ್ಯವಾಗಿದೆ ಎಂದು ಹಲವರು ದೂರು ನೀಡಿದ್ದರು. ಆ ಬಳಿಕ ಹಾಡನ್ನು ರಿಲೀಟ್ ಮಾಡಿದ ಬಾದ್‌ಶಾ ಅವರು ಕ್ಷಮೆ ಕೇಳಿದ್ದರು.
ಸಂಬಲ್ಪುರ, ಮಾರ್ಚ್ 15: ಇಬ್ಬರು ಅಪ್ರಾಪ್ತ ಮಕ್ಕಳನ್ನು ಬಾವಿಗೆ ತಳ್ಳಿ ಮಹಿಳೆ ತಾನೂ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟಮೆ ಒಡಿಶಾದ ಸಂಬಲ್ಪುರದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಜಿಲ್ಲೆಯ ಬಮ್ರಾ ಬ್ಲಾಕ್‌ನ ಮಹುಲಿಪಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಗಿದಿಹಿ ಗ್ರಾಮದ ನಿವಾಸಿ ಸಂಜು ಮಡ್ಕಿ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಸಂಜು ಮಡ್ಕಿ ಶುಕ್ರವಾರ ತನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಬಾವಿಗೆ ಎಸೆದು ಕೊಂದಿದ್ದಾಳೆ ಎನ್ನಲಾಗಿದೆ. ನಂತರ ಪೊಲೀಸರು ಈ ಅಪರಾಧವನ್ನು ಮಕ್ಕಳ ತಾಯಿಯೇ ಮಾಡಿದ್ದಾರೆ ದೃಢಪಡಿಸಿದ್ದಾರೆ.
ಘಟನೆಯ ನಂತರ, ಮಹಿಳೆ ಗ್ರಾಮದಿಂದ ಪರಾರಿಯಾಗಿದ್ದಾಳೆಂದು ವರದಿಯಾಗಿದೆ, ಇದರಿಂದಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಮಹಿಳೆಯ ಪತಿ ಮಹುಲಿಪಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ತನಿಖೆ ಪ್ರಾರಂಭವಾಯಿತು.
ಘಟನೆಯ ಕುರಿತು ಮಾತನಾಡಿದ ಕುಚಿಂಡಾದ ಎಸ್‌ಡಿಪಿಒ ಪ್ರದೀಪ್ ಕುಮಾರ್ ದಾಶ್, ದೂರು ದಾಖಲಾದ ಕೂಡಲೇ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು ಎಂದು ಹೇಳಿದರು. ಶನಿವಾರ ಬೆಳಗ್ಗೆ, ಸಂಜು ಮಡ್ಕಿ ಮತ್ತೊಂದು ಹಳ್ಳಿಯ ಒಂದು ನುಲ್ಲಾ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಪೊಲೀಸರು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತಲುಪಿ, ಶವವನ್ನು ವಶಪಡಿಸಿಕೊಂಡರು ಮತ್ತು ದುರಂತ ಘಟನೆಗೆ ಕಾರಣವಾದ ನಿಖರವಾದ ಸಂದರ್ಭಗಳನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಬೆಂಗಳೂರು, ಮಾರ್ಚ್ 15: ನಗರದ ರೆಸಾರ್ಟ್‌ನಲ್ಲಿ ತಂಗಿರುವ ಒಡಿಶಾ ಶಾಸಕರನ್ನು ಅಪರಿಚಿತ ವ್ಯಕ್ತಿಗಳು ಖರೀದಿಸಲು ಪ್ರಯತ್ನಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯಸಭಾ ಚುನಾವಣೆಗೆ ಮುನ್ನ ನಡೆದ ಈ ಘಟನೆಯಲ್ಲಿ ಶಾಸಕರಿಗೆ ಐದು ಕೋಟಿ ರೂಪಾಯಿ ಮತ್ತು ಖಾಲಿ ಚೆಕ್‌ಗಳ ಆಮಿಷ ಒಡ್ಡಲಾಗಿತ್ತು. ಬೈತರಾಯನಪುರದ ಸುರೇಶ್ ಎಂಬುವರ ಸಹಾಯದಿಂದ ಆನ್‌ಲೈನ್‌ನಲ್ಲಿ ರೆಸಾರ್ಟ್‌ನಲ್ಲಿ ಕೊಠಡಿ ಕಾಯ್ದಿರಿಸಿ ಈ ವ್ಯಕ್ತಿಗಳು ಶಾಸಕರನ್ನು ಭೇಟಿ ಮಾಡಿದ್ದರು. ಶಾಸಕರು ಈ ಪ್ರಸ್ತಾಪವನ್ನು ತಿರಸ್ಕರಿಸಿ ಪಕ್ಷಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕಾಂಗ್ರೆಸ್ ಮುಖಂಡರು ನಾಲ್ವರಲ್ಲಿ ಇಬ್ಬರನ್ನು ಹಿಡಿದಿದ್ದು, ಉಳಿದ ಇಬ್ಬರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ವ್ಯಕ್ತಿಗಳು ತಮ್ಮ ಉದ್ದೇಶವನ್ನು ಒಪ್ಪಿಕೊಂಡಿದ್ದು, ಅವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ದಾಖಲಿಸಲಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ದಾವಣಗೆರೆ, ಮಾರ್ಚ್ 15: ದಾವಣಗೆರೆಯಲ್ಲಿ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿಚ್ಛೇದನಕ್ಕಾಗಿ ಬಂದಿದ್ದ 37 ದಂಪತಿಗಳು ಪರಸ್ಪರ ಹಾರ ಬದಲಿಸಿಕೊಂಡು ಮತ್ತೆ ಒಂದಾಗಿ ಬಾಳಲು ನಿರ್ಧಾರ ಮಾಡಿದ್ದಾರೆ. ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಲಾದ ಈ ಮಹತ್ವದ ವಿದ್ಯಮಾನಕ್ಕೆ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಡಿ.ಕೆ.ವೇಲಾ ಅವರು ಶುಭ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನ್ಯಾಯಾಂಗ ಅಧಿಕಾರಿಯೊಬ್ಬರು, ಈ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ರಾಷ್ಟ್ರೀಯ ಲೋಕ ಅದಾಲತ್‌ಗಳ ಜವಾಬ್ದಾರಿಯನ್ನು ನಿಭಾಯಿಸಿ, ಅಂದಾಜು 500 ವ್ಯಾಜ್ಯಪೂರ್ವ ಪ್ರಕರಣಗಳನ್ನು ಬಗೆಹರಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 15: ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಗೆ ಅಭಾವ ಆಗಿದೆಯೋ ಇಲ್ಲವೋ ಬೇರೆ ವಿಚಾರ, ಜನಸಾಮಾನ್ಯರಲ್ಲಿ ಎಲ್ಪಿಜಿಗೆ (LPG) ಹಾಹಾಕಾರ ಮಾಡುತ್ತಿರುವಂತಹ ಪರಿಸ್ಥಿತಿ ಇದೆ. ಗ್ಯಾಸ್ ಬುಕಿಂಗ್ಗೆ ಜನರು ಮುಗಿಬಿದ್ದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಪ್ಲೇಸ್ಟೋರ್ನಲ್ಲಿ ಇಂಡಿಯನ್ ಆಯಿಲ್ನ ಒನ್ ಆ್ಯಪ್ (Indian Oil’s One) ನಂಬರ್ ಒನ್ ಎನಿಸಿದೆ. ಚ್ಯಾಟ್ಜಿಪಿಟಿ ಇತ್ಯಾದಿ ಸ್ಟಾರ್ ಆ್ಯಪ್ಗಳನ್ನು ಇದು ಹಿಂದಿಕ್ಕಿದೆ.
ಒನ್ ಆ್ಯಪ್ನಲ್ಲಿ ಇಂಡೇನ್ ಗ್ರಾಹಕರು ಎಲ್ಪಿಜಿ ಬುಕಿಂಗ್ ಸೇರಿದಂತೆ ಹಲವಾರು ಕಾರ್ಯಗಳನ್ನು ಮಾಡಬಹುದು. ಹೊಸ ಎಲ್ಪಿಜಿ ಕನೆಕ್ಷನ್, ಏಜೆನ್ಸಿ ಬದಲಾವಣೆ, ಗ್ಯಾಸ್ ಬುಕಿಂಗ್ ಇತ್ಯಾದಿ ಕೆಲಸಗಳನ್ನು ಈ ಒನ್ ಆ್ಯಪ್ನಲ್ಲಿ ಮಾಡಲು ಅವಕಾಶ ಇರುತ್ತದೆ.
ಎಕ್ಸ್ ಬಳಕೆದಾರರೊಬ್ಬರು ಇಂಡಿಯನ್ ಆಯಿಲ್ನ ಈ ಒನ್ ಆ್ಯಪ್ ಟಾಪ್ ಚಾರ್ಟ್ಸ್ನಲ್ಲಿ ನಂಬರ್ ಒನ್ ಆಗಿರುವುದನ್ನು ತಮ್ಮ ಟ್ವೀಟ್ವೊಂದರಲ್ಲಿ ಎತ್ತಿತೋರಿಸಿದ್ದಾರೆ. ನೀವು ಈ ಆ್ಯಪ್ ಈಗ ಡೌನ್ಲೋಡ್ ಮಾಡಿ ಓಪನ್ ಮಾಡಿದಾಗ ಕೆಲ ಫೀಚರ್ಗಳು ಕೆಲಸ ಮಾಡುವುದಿಲ್ಲ. ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಿಢೀರನೇ ಈ ಆ್ಯಪ್ ಗಣನೀಯ ಸಂಖ್ಯೆಯಲ್ಲಿ ಡೌನ್ಲೋಡ್ ಆಗಿರುವುದು ಇದಕ್ಕೆ ಕಾರಣ.
ಎಕ್ಸ್ ಪೋಸ್ಟ್
imagine being on the tech team at indian oil today.
ಚ್ಯಾಟ್ಜಿಪಿ, ಸ್ಟೋರಿ ಟಿವಿ, ಫ್ರೀರೀಲ್ಸ್, ಮೀಶೋ, ಫ್ಲಿಪ್ಕಾರ್ಟ್, ಜಿಯೋಹಾಟ್ಸ್ಟಾರ್ ಇತ್ಯಾದಿ ಆ್ಯಪ್ಗಳನ್ನು ಮೀರಿಸಿ, ಇಂಡಿಯನ್ ಆಯಿಲ್ ಒನ್ ಆ್ಯಪ್ ಅತಿಹೆಚ್ಚು ಡೌನ್ಲೋಡ್ ಆದ ಆ್ಯಪ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬುಕಿಂಗ್ ಮಾಡಲು ಒನ್ ಆ್ಯಪ್ ಬಳಸುವುದು ಅನಿವಾರ್ಯವೇನಲ್ಲ. ನಿಮ್ಮ ಗ್ಯಾಸ್ ಏಜೆನ್ಸಿಯ ಗ್ಯಾಸ್ ಬುಕಿಂಗ್ ನಂಬರ್ ಮೂಲಕವೇ ಸಿಲಿಂಡರ್ ಬುಕಿಂಗ್ ಮಾಡಬಹುದು. ಮೊದಲೆಲ್ಲಾ 1-3 ದಿನದೊಳಗೆ ಸಿಲಿಂಡರ್ ಸಿಗುತ್ತಿತ್ತು. ಈಗ ಸ್ವಲ್ಪ ವಿಳಂಬವಾಗಬಹುದು.
ಇಂಡೇನ್ ಬಳಕೆದಾರರು ವಾಟ್ಸಾಪ್ ಮೂಲಕವೂ ಗ್ಯಾಸ್ ಬುಕಿಂಗ್ ಮಾಡಬಹುದು. 7588888824 ನಂಬರ್ ಅನ್ನು ಮೊದಲು ತಮ್ಮ ಫೋನ್ಗೆ ಸೇವ್ ಮಾಡಿಕೊಳ್ಳಬೇಕು. ಇಂಡೇನ್ ಕನೆಕ್ಷನ್ ಹೊಂದಿರುವ ನೊಂದಾಯಿತ ಮೊಬೈಲ್ ನಂಬರ್ನಲ್ಲಿ ವಾಟ್ಸಾಪ್ ಓಪನ್ ಮಾಡಿ ಮೇಲಿನ ನಂಬರ್ಗೆ REFILL ಎನ್ನುವ ಮೆಸೇಜ್ ಕಳುಹಿಸಬೇಕು. ನಿಮ್ಮ ನೊಂದಾಯಿತ ಮೊಬೈಲ್ ನಂಬರ್ನ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಅದು ಖಚಿತಗೊಂಡ ಬಳಿಕ ಎಲ್ಪಿಜಿ ಬುಕಿಂಗ್ ಮನವಿ ಸ್ವೀಕರಿಸಲಾಗುತ್ತದೆ.
ಗೂರ್ಖಾ, ಮಾರ್ಚ್ 15: ನೇಪಾಳ(Nepal)ದಲ್ಲಿ ಮನಕಾಮನಾ ದೇವಸ್ಥಾನದಿಂದ ಹಿಂದಿರುಗುವಾಗ ಭಾರತೀಯರಿದ್ದ ಬಸ್ ರಸ್ತೆಯಿಂದ ಇಳಿಜಾರಿನ ಪ್ರದೇಶಕ್ಕೆ ಉರುಳಿಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನೇಪಾಳದಗೂರ್ಖಾದ ಶಾಹಿದ್ ಲಖನ್ ಗ್ರಾಮೀಣ ಪುರಸಭೆ -3 ರ ಕಾಂಟಾರ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಮನಕಾಮನಾದಿಂದ ಮಜುವಾ ಕಡೆಗೆ ಬರುತ್ತಿದ್ದ ಮೈಕ್ರೋಬಸ್ (ಬಾಗ್ಮತಿ ಪ್ರಾಂತ್ಯ 006 ಖಾ 8430) ರಸ್ತೆಯಿಂದ ಸುಮಾರು 200 ಮೀಟರ್ ದೂರಕ್ಕೆ ಉರುಳಿಬಿದ್ದಿದೆ. ಬಸ್ಸಿನಲ್ಲಿ 16 ಜನರಿದ್ದರು.
ಮನಕಾಮನಾ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದ ಎಲೆಕ್ಟ್ರಿಕ್ (ಇವಿ) ಮೈಕ್ರೋಬಸ್ ಅಪಘಾತಕ್ಕೀಡಾದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಭಾರತೀಯರು ಎನ್ನುವ ಮಾಹಿತಿ ಲಭ್ಯವಾಗಿದೆ.
ಪೊಲೀಸರ ಪ್ರಕಾರ, 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತು ಉಳಿದ 7 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಚಾಲಕ ಮತ್ತು ಸಹ-ಚಾಲಕನನ್ನು ಹೊರತುಪಡಿಸಿ, ಎಲ್ಲಾ ಪ್ರಯಾಣಿಕರು ಭಾರತೀಯ ನಾಗರಿಕರಾಗಿದ್ದರು, ಅವರು ಮನಕಾಮನಾ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದರು.
ಪೊಲೀಸರು, ಸ್ಥಳೀಯರು ಮತ್ತು ರಕ್ಷಣಾ ತಂಡಗಳ ಸಹಾಯದಿಂದ ಗಾಯಾಳುಗಳು ಮತ್ತು ಶವಗಳನ್ನು ಹೊರತೆಗೆಯಲಾಗಿದೆ. ಅಪಘಾತದ ಕಾರಣ ತನಿಖೆಯಲ್ಲಿದೆ. ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರ ವಾಹನಗಳು ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಒತ್ತಾಯಿಸಿದ್ದಾರೆ.
16 ಭಕ್ತರನ್ನು ಹೊತ್ತೊಯ್ಯುತ್ತಿದ್ದ ಎಲೆಕ್ಟ್ರಿಕ್ ಮೈಕ್ರೋಬಸ್, ಮನಕಾಮನಾ ದೇವಸ್ಥಾನದಿಂದ ಹಿಂತಿರುಗುತ್ತಿದ್ದಾಗ ರಸ್ತೆಯಿಂದ ಹೊರಟು ಸುಮಾರು 200 ಮೀಟರ್ ಇಳಿಜಾರಿನಲ್ಲಿ ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭರತ್ ಬಹದ್ದೂರ್ ಬಿಕೆ ಪ್ರಕಾರ, ಬಲಿಯಾದವರನ್ನು ಮುತ್ತುಕುಮಾರ್ (58), ಅನಾಮಾಲಿಕ್ (58), ಮೀನಾಕ್ಷಿ (59), ಶಿವಗಾಮಿ (53), ವಿಜಯಲ್ (57), ಮೀನಾ (58) ಮತ್ತು ತಮಿಳರಸಿ (60) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಎಲೆಕ್ಟ್ರಿಕ್ ಬಸ್ಸಿನ ಚಾಲಕ ಯಾವುದೇ ಹಾನಿಯಾಗದಂತೆ ಪಾರಾಗಿದ್ದು, ಅವರ ಸಹಾಯಕ ಗಾಯಗೊಂಡಿದ್ದಾರೆ ಎಂದು ದಿ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.