ಬೆಂಗಳೂರು, (ಮಾರ್ಚ್ 13): ಸನ್ನಡತೆ ಆಧಾರದ ಮೇಲೆ ರಾಜ್ಯದ ವಿವಿಧ ಜೈಲುಗಳಲ್ಲಿನ ಸಜಾಬಂಧಿಗಳಾಗಿ ಸೆರೆವಾಸ ಅನುಭವಿಸುತ್ತಿದ್ದ 30 ಮಂದಿ ಸಜಾಬಂಧಿಗಳಿಗೆ ಇಂದು (ಮಾರ್ಚ್ 13) ಅವಧಿ ಪೂರ್ವ ಬಿಡುಗಡೆ ಮಾಡಲಾಗಿದೆ. ಇನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ 14 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಆದ್ರೆ, ಸನ್ನಡತೆ ಆಧಾರದ ಮೇಲೆ ಸರ್ಕಾರ ಅವಧಿಪೂರ್ವ ರಿಲೀಸ್ ಮಾಡಿದೆ. ಇನ್ನು ಇದೇ ವೇಳೆ ತುಮಕೂರಿನ ಕೈದಿಯೋರ್ವ ಜೈಲಿನಿಂದ ಬಿಡುಗಡೆಯಾಗಿದ್ದಕ್ಕೆ ಫುಲ್ ಖುಷ್ ಆಗಿದ್ದಾರೆ. ಕೌಟುಂಬಿಕ ಗಲಾಟೆಯಲ್ಲಿ ಕೊಲೆ ಮಾಡಿ ಜೈಲಿಗೆ ಹೋಗಿದ್ದು, ಇದೀಗ ಬರೋಬ್ಬರಿ 13 ವರ್ಷಗಳ ನಂತರ ಜೈಲಿನಿಂದ ರಿಲೀಸ್ ಆಗಿರುವುದಕ್ಕೆ ಸಂತೋಷಗೊಂಡಿದ್ದಾರೆ. ಇನ್ನು ಏನೆಲ್ಲಾ ಹೇಳಿದ್ದಾರೆ ಕೇಳಿ.
ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟಿ, ದಿವಂಗತ ಮಧುಬಾಲಾ ಅವರ ಬಯೋಪಿಕ್ (Madhubala Biopic) ಬಗ್ಗೆ ಬಿಟೌನ್‌ನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಈ ಚಿತ್ರದಲ್ಲಿ ಮಧುಬಾಲಾ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅನೇಕ ನಟಿಯರ ಹೆಸರು ಕೇಳಿಬರುತ್ತಿದೆ. ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡುವ ಆಲೋಚನೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಇತ್ತು ಎನ್ನಲಾಗಿದೆ.
ವರದಿಗಳ ಪ್ರಕಾರ, ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಮಧುಬಾಲಾ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲು ತೀವ್ರ ಆಸಕ್ತಿ ಹೊಂದಿದ್ದರು. ಬಾಲಿವುಡ್‌ಗೆ ಸಾಯಿ ಪಲ್ಲವಿ ಹೊಸ ಮುಖವಾಗಿರುವುದರಿಂದ, ಮಧುಬಾಲಾ ಅವರಂತಹ ಐತಿಹಾಸಿಕ ಪಾತ್ರಕ್ಕೆ ಅವರು ಹೊಸ ಕಳೆ ನೀಡಬಲ್ಲರು ಎಂದು ಬನ್ಸಾಲಿ ಭಾವಿಸಿದ್ದರು. ಆದರೆ, ಮಾತುಕತೆಗಳು ಅಂದುಕೊಂಡಂತೆ ನಡೆಯಲಿಲ್ಲ. ಮೂಲಗಳ ಪ್ರಕಾರ, ಕಾಲ್‌ಶೀಟ್ ಸಮಸ್ಯೆಯಿಂದಾಗಿ ಸಾಯಿ ಪಲ್ಲವಿ ಈ ಬಹುದೊಡ್ಡ ಅವಕಾಶದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಮಧುಬಾಲಾ ಬಯೋಪಿಕ್ ಕೈತಪ್ಪಿದರೂ, ಸಾಯಿ ಪಲ್ಲವಿ ಬಾಲಿವುಡ್‌ಗೆ ಭರ್ಜರಿಯಾಗಿಯೇ ಎಂಟ್ರಿ ಕೊಡುತ್ತಿದ್ದಾರೆ. ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ‘ಏಕ್ ದಿನ್’ ಚಿತ್ರದ ಮೂಲಕ ಸಾಯಿ ಪಲ್ಲವಿ ಅವರು ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸುನಿಲ್ ಪಾಂಡೆ ನಿರ್ದೇಶನದ ಈ ರೊಮ್ಯಾಂಟಿಕ್ ಸಿನಿಮಾ ಮೇ 1ರಂದು ಬಿಡುಗಡೆ ಆಗಲಿದೆ.
ಇಷ್ಟೇ ಅಲ್ಲದೆ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ ಪಾರ್ಟ್ 1’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅವರು ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿರುವ ಈ ಬೃಹತ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಂತ) ಸೇರಿದಂತೆ ಭಾರತದ ದೊಡ್ಡ ತಾರಾಬಳಗವೇ ಇದೆ.
ಮಧುಬಾಲಾ ಪಾತ್ರದಲ್ಲಿ ಸಾಯಿ ಪಲ್ಲವಿ ಅವರನ್ನು ನೋಡಲಾಗದಿದ್ದರೂ, ಸೀತೆಯ ಪಾತ್ರದಲ್ಲಿ ಅವರ ನಟನೆಯನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಈಗಾಗಲೇ ಮೋಡಿ ಮಾಡಿರುವ ಅವರಿಗೆ ಬಾಲಿವುಡ್ ಪ್ರೇಕ್ಷಕರು ಯಾವ ರೀತಿ ಸ್ವಾಗತ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಬಾಂಗ್ಲಾದೇಶ ಏಕಪಕ್ಷೀಯವಾಗಿ ಗೆದ್ದುಕೊಂಡಿತ್ತು. ಹೀಗಾಗಿ ಎರಡನೇ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಆರಂಭವನ್ನು ಪಡೆದುಕೊಂಡಿತು. ಆದಾಗ್ಯೂ ಪಾಕ್ ಇನ್ನಿಂಗ್ಸ್‌ನ 39ನೇ ಓವರ್ನಲ್ಲಿ ನಡೆದ ಅದೊಂದು ಘಟನೆ ಪಾಕ್ ಟಿ20 ತಂಡದ ನಾಯಕ ಸಲ್ಮಾನ್ ಆಘಾ ಕೆರಳುವಂತೆ ಮಾಡಿದಲ್ಲದೆ, ವಿಕೆಟ್ ಕೂಡ ಕಳೆದುಕೊಳ್ಳುವಂತೆ ಮಾಡಿತು.
ಢಾಕಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ಪಾಕಿಸ್ತಾನದ ಇನ್ನಿಂಗ್ಸ್‌ನ 39 ನೇ ಓವರ್ ವಿಚಿತ್ರ ರನೌಟ್ಗೆ ಸಾಕ್ಷಿಯಾಯಿತು. ಬಾಂಗ್ಲಾದೇಶದ ಬೌಲರ್ ಮೆಹದಿ ಹಸನ್ ಎಸೆದ ಈ ಓವರ್‌ನ ನಾಲ್ಕನೇ ಚೆಂಡನ್ನು ರಿಜ್ವಾನ್ ನೇರವಾಗಿ ಬೌಲರ್ ಕಡೆಗೆ ಆಡಿದರು. ಇತ್ತ ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಸಲ್ಮಾನ್ ಆಘಾ ರನ್ಗಾಗಿ ತಮ್ಮ ಕ್ರೀಸ್‌ನಿಂದ ಹೊರಬಂದರಾದರೂ ಅಲ್ಲಿ ರನ್ ಇಲ್ಲದಿರುವುದನ್ನು ಗಮನಿಸಿ ಅಲ್ಲಿಯೇ ನಿಂತರು. ಅಷ್ಟರಲ್ಲಿ ರಿಜ್ವಾನ್ ಬಾರಿಸಿದ ಚೆಂಡು ಕೂಡ ಆಘಾ ಕಡೆಗೆ ಬಂತು. ಹೀಗಾಗಿ ಆಘಾ ಚೆಂಡನ್ನು ಹಿಡಿದು ಬೌಲರ್ ಮೆಹದಿ ಹಸನ್ಗೆ ರವಾನಿಸಲು ಪ್ರಯತ್ನಿಸಿದರು.
ಈ ಹಂತದಲ್ಲಿ ಚಾಣಾಕ್ಷತೆ ತೋರಿದ ಮೆಹದಿ ಹಸನ್ ಚೆಂಡನ್ನು ಹಿಡಿದು, ನೇರವಾಗಿ ಸ್ಟಂಪ್ಗೆ ಎಸೆದರು. ಇದೆಲ್ಲ ನಡೆಯುವಾಗ ಕ್ರೀಸ್‌ನಿಂದ ಹೊರಗೆ ನಿಂತಿದ್ದ ಆಘಾ, ಕ್ರೀಸ್ ಒಳಗೆ ಬರುವ ಪ್ರಯತ್ನವನ್ನು ಮಾಡಲಿಲ್ಲ. ಹೀಗಾಗಿ ಚೆಂಡನ್ನು ಸ್ಟಂಪ್ಗೆ ಎಸೆದ ಕೂಡಲೇ ಮೆಹದಿ ಹಸನ್ ಔಟ್ಗಾಗಿ ಅಂಪೈರ್ ಬಳಿ ಮನವಿ ಮಾಡಲಾರಂಬಿಸಿದರು. ಇದನ್ನು ನೋಡಿ ಕಕ್ಕಾಬಿಕ್ಕಿಯಾದ ಆಘಾ, ಹಸನ್ ಜೊತೆಗೆ ವಾದಿಸಲು ಪ್ರಾರಂಭಿಸಿದರು. ಇತ್ತ ಫಿಲ್ಡ್ ಅಂಪೈರ್ ಮೂರನೇ ಅಂಪೈರ್ ಬಳಿ ಮರುಪರಿಶೀಲನೆಗೆ ಮನವಿ ಮಾಡಿದರು. ಎಲ್ಲವನ್ನು ಕುಲಂಕುಶವಾಗಿ ಪರಿಶೀಲಿಸಿದ ಅಂಪೈರ್, ಸಲ್ಮಾನ್ ಆಘಾ ಔಟೆಂದು ತೀರ್ಪು ನೀಡಿದರು. ಇದರಿಂದ ಇನ್ನಷ್ಟು ಕೆರಳಿದ ಆಘಾ, ತಮ್ಮ ಹೆಲ್ಮೆಟ್ ಮತ್ತು ಕೈಗವಸುಗಳನ್ನು ತೆಗೆದು ನೆಲದ ಮೇಲೆ ಎಸೆದು ಆಕ್ರೋಶ ಹೊರಹಾಕಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೈಸೂರು, (ಮಾರ್ಚ್ 13): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಮಾರ್ಚ್ 13) ತವರು ಕ್ಷೇತ್ರ ಮೈಸೂರಿನ ವರುಣಾಕ್ಕೆ ಭೇಟಿ ನೀಡಿದ್ದು, ಶ್ರೀ ಬೀರೇಶ್ವರ ಸ್ವಾಮಿ ದೇವಾಲಯದ ಸಂಪ್ರೋಕ್ಷಣ, ಪುನರ್ ಪ್ರತಿಷ್ಠಾಪನೆ, ಕುಂಭಾಭಿಷೇಕ ಹಾಗೂ ಮಹಾದ್ವಾರದ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯನವರನ್ನು ಅದ್ಧೂರಿಯಾಗಿ ತೆರೆ ವಾಹನದಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಂಡರು.
ಇನ್ನು ಇದೇ ವೇಳೆ ಭದ್ರತಾಲೋಪವಾಗಿದೆ. ಸಿದ್ದರಾಮ್ಯಯ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಯುವಕನೋರ್ವ ಏಕಾಏಕಿ ವೇದಿಕೆ ನುಗ್ಗಿದ್ದು, ನಮ್ಮ ಹುಡುಗರು ನಿಮ್ಮ ಜೊತೆ ಫೋಟೋ ತೆಗೆದುಕೊಳ್ಳಬೇಕೆಂದಿದ್ದಾರೆ. ಆದ್ದರಿಂದ ಸ್ವಲ್ಪ ಬಿಡುವು ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾನೆ.
2026 ರ ಟಿ20 ವಿಶ್ವಕಪ್ಗೆ ಅದ್ಧೂರಿ ತೆರೆಬಿದ್ದಿದೆ. ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಗೆಲುವಿಗಾಗಿ ಭಾರತ ತಂಡಕ್ಕೆ ಐಸಿಸಿ ಹಾಗೂ ಬಿಸಿಸಿಐ ಎರಡರಿಂದಲೂ ಭರ್ಜರಿ ಬಹುಮಾನ ಸಿಕ್ಕಿದೆ. ಇನ್ನು ಈ ಟೂರ್ನಿ ಆಯೋಜಿಸಿದ್ದ ಐಸಿಸಿಗೆ ಸಿಕ್ಕ ಹಣವೆಷ್ಟು ಎಂಬುದು ಇದುವರೆಗೂ ತಿಳಿದುಬಂದಿಲ್ಲ.
ಆದಾಗ್ಯೂ ಸದ್ಯ ಹೊರಬಿದ್ದಿರುವ ಮಾಹಿತಿ ಪ್ರಕಾರ, ಕೇವಲ ಜಾಹೀರಾತು ಪ್ರಸಾರದಿಂದಲೇ ಐಸಿಸಿ ಖಜಾನೆಗೆ 1500 ಕೋಟಿಗೂ ಅಧಿಕ ಆದಾಯ ಹರಿದುಬಂದಿದೆ ಎಂದು ವರದಿಯಾಗಿದೆ. ಅದರಲ್ಲೂ ಈ ಆದಾಯದ ಬಹುಪಾಲು ಕೇವಲ 3 ಪಂದ್ಯಗಳಿಂದಲೇ ಬಂದಿರುವುದು ಐಸಿಸಿಯ ಖಜಾನೆಯನ್ನು ತುಂಬಿ ತುಳುಕುವಂತೆ ಮಾಡಿದೆ.
ಎಕ್ಸ್ಚೇಂಜ್ ಫಾರ್ ಮೀಡಿಯಾದ ವರದಿಯ ಪ್ರಕಾರ, ಕೇವಲ ಜಾಹೀರಾತಿನಿಂದಲೇ 15 ಬಿಲಿಯನ್ ಅಂದರೆ ಸುಮಾರು 1500 ಕೋಟಿ ರೂಗಳ ಆದಾಯವನ್ನು ಐಸಿಸಿ ಗಳಿಸಿದೆ. ಮೇಲೆ ಹೇಳಿದಂತೆ ಇಷ್ಟು ಆದಾಯದ ಬಹುಪಾಲು ಮೂರೇ ಮೂರು ಪಂದ್ಯಗಳಿಂದ ಬಂದಿದೆ ಎಂದು ವರದಿಯಾಗಿದೆ.
ಆ ಮೂರು ಪಂದ್ಯಗಳು ಯಾವುವು ಎಂದರೆ.. ಭಾರತ ಮತ್ತು ಪಾಕಿಸ್ತಾನ ಪಂದ್ಯ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಾಗಿವೆ. ವರದಿಯ ಪ್ರಕಾರ, ನಿಯಮಿತ ಪಂದ್ಯಗಳಿಗೆ 10 ಸೆಕೆಂಡುಗಳ ಜಾಹೀರಾತಿನ ದರ ಸುಮಾರು 7.5 ಲಕ್ಷವಾಗಿದ್ದರೂ, ಪಂದ್ಯಾವಳಿ ಮುಂದುವರೆದಂತೆ ಈ ಬೆಲೆ 15 ರಿಂದ 16 ಲಕ್ಷಕ್ಕೆ ಏರಿತು ಎಂದು ಹೇಳಿದೆ. ಹಾಗೆಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಿ 10 ಸೆಕೆಂಡುಗಳ ಜಾಹೀರಾತು ಸ್ಲಾಟ್ 20-25 ಲಕ್ಷಗಳಾಗಿತ್ತು ಎಂದು ವರದಿಯಾಗಿದೆ.
ಇನ್ನು ನಾಕೌಟ್ ಸುತ್ತಿನಲ್ಲಿ ಜಾಹೀರಾತು ದರ ಮತ್ತಷ್ಟು ದುಬಾರಿಯಾಗಿದ್ದು, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಜಾಹೀರಾತು ಸ್ಲಾಟ್ಗಳ ಬೆಲೆ 150,000 ರಿಂದ 200,000 ಲಕ್ಷಕ್ಕೆ ತಲುಪಿತ್ತು. ಐಸಿಸಿಯ ಮೂರು ಪ್ರಮುಖ ಪ್ರಾಯೋಜಕರಾದ ಅರಾಮ್ಕೊ, ಡಿಪಿ ವರ್ಲ್ಡ್ ಮತ್ತು ಎಮಿರೇಟ್ಸ್ ಜಾಹೀರಾತಿಗಾಗಿ ತಲಾ 750 ಕೋಟಿ ರೂ. ಖರ್ಚು ಮಾಡಿದರೆ, ಇತರ ಪ್ರಾಯೋಜಕ ಕಂಪನಿಗಳು 150 ಕೋಟಿ ರೂ. ಖರ್ಚು ಮಾಡಿವೆ ಎಂದು ವರದಿ ಬಹಿರಂಗಪಡಿಸಿದೆ.
ನವದೆಹಲಿ, ಮಾರ್ಚ್ 13: ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮ್ನ ಗುವಾಹಟಿಯಲ್ಲಿ ಇಂದು ಪಿಎಂ ಕಿಸಾನ್ ಸ್ಕೀಮ್ನಡಿ ((PM Kisan scheme) 22ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. 9.32 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂನಂತೆ ಒಟ್ಟು 18,640 ಕೋಟಿ ರೂ ಹಾಕಲಾಗಿದೆ. ಕಳೆದ ಬಾರಿಗಿಂತ ಈ ಸಲ ಫಲಾನುಭವಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ ಆಗಿದೆ. ಇಕೆವೈಸಿ ಆಗಿಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಲಕ್ಷಾಂತರ ಮಂದಿಗೆ ಯೋಜನೆಯ ಲಾಭ ಕೈತಪ್ಪಿದೆ. 21ನೇ ಕಂತಿನ ಹಣವನ್ನು 9,35,79,869 ಮಂದಿ ಪಡೆದಿದ್ದರು. ಈ ಬಾರಿ 3.8 ಲಕ್ಷದಷ್ಟು ಸಂಖ್ಯೆ ಕಡಿಮೆ ಆಗಿದೆ.
ಏನಿದು ಪಿಎಂ ಕಿಸಾನ್ ಸ್ಕೀಮ್?
ಪಿಎಂ ಕಿಸಾನ್ ಯೋಜನೆಯು ರೈತರ ವ್ಯವಸಾಯಕ್ಕೆ ಸರ್ಕಾರ ನೀಡುವ ಸಹಾಯಧನದ ಸ್ಕೀಮ್. ವರ್ಷಕ್ಕೆ 6,000 ರೂ ನೀಡಲಾಗುತ್ತದೆ. ವರ್ಷಕ್ಕೆ ಮೂರು ಕಂತುಗಳಲ್ಲಿ ಈ ಹಣ ವಿತರಣೆ ಆಗುತ್ತದೆ. ನೇರವಾಗಿ ರೈತರ ಬ್ಯಾಂಕ್ ಅಕೌಂಟ್ಗಳಿಗೆ ಈ ಹಣ ಜಮೆ ಆಗುತ್ತದೆ.
ನೀವು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಹಣ ಇನ್ನೂ ಬಂದಿಲ್ಲ ಎಂದಾದಲ್ಲಿ ಹಲವಾರು ಕಾರಣಗಳಿರುವ ಸಾಧ್ಯತೆ ಇದೆ. ನೀವು ಇಕೆವೈಸಿ ಮಾಡಿಲ್ಲದಿರಬಹುದು, ಯೋಜನೆಗೆ ಅರ್ಹರಲ್ಲದಿರಬಹುದು, ಅಥವಾ ಬೇರೇನೇ ಇರಬಹುದು.
ನಿಮಗೆ ಹಣ ಬಂದಿಲ್ಲದಿದ್ದರೆ ಸ್ಕೀಮ್ನಲ್ಲಿ ನಿಮ್ಮ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ. ಈ ಕೆಲಸ ಮಾಡಲು ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ: https://pmkisan.gov.in/
ಇಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಕಾಣುತ್ತದೆ. ಅಲ್ಲಿ ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮವನ್ನು ಆಯ್ದುಕೊಳ್ಳಿ. ನಿಮ್ಮ ಊರಿನ ಎಲ್ಲಾ ಫಲಾನುಭವಿಗಳ ಪಟ್ಟಿ ಸಿಗುತ್ತದೆ. ನಿಮ್ಮ ಹೆಸರಿದೆಯಾ ನೋಡಿಕೊಳ್ಳಿ. ಇದೇ ವೆಬ್ಸೈಟ್ನಲ್ಲಿ ನೀವು ಇಕೆವೈಸಿ ಅಪ್ಡೇಟ್ ಕೂಡ ಮಾಡಬಹುದು.
ಬೀದರ್, ಮಾರ್ಚ್ 13: ಜಗತ್ತಿನಾದ್ಯಾಂತ ಪ್ರಸಿದ್ಧಿ ಪಡೆದಿರುವ ಐತಿಹಾಸಿಕ ಬೀದರಿ ಕಲೆಗೆ ಅಮೆರಿಕಾ, ಇಸ್ರೇಲ್, ಇರಾನ್ ಯುದ್ಧದಿಂದಾಗಿ(iran israel war)ವ್ಯಾಪಾರ ಕುಸಿತವಾಗಿದೆ. ಬೀದರಿ ಕಲೆಯನ್ನ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ. ಬೀದರಿ ಕಲೆಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕರು ಈ ಕಲೆಯನ್ನ ಪ್ರೋತ್ಸಾಹಿಸಬೇಕಾದ ಸರ್ಕಾರ ಕಂಡುಕಾಣದಂತೆ ಕುಳಿತುಬಿಟ್ಟಿದ್ದು, ಯುದ್ಧದ ಎಫೆಕ್ಟ್ ಹಿನ್ನಲೆ ಬಿದ್ರಿ ಕಲಾಕೃತಿಗಳು ಮಾರಾಟವಾಗುತ್ತಿಲ್ಲ.
ಬೀದರ್ ಜಿಲ್ಲೆ ಎಂದ ಕೂಡಲೇ ನಮಗೆ ತಕ್ಷಣ ನೆನಪಾಗುವುದು ಜಗತ್ತಿನಾದ್ಯಾಂತ ಪ್ರಸಿದ್ಧಿ ಪಡೆದಿರುವ ಬೀದರಿ ಕಲೆ. ಇಂತಹ ಅಪರೂಪದ ಕಲೆಗಳು ಮಾರಾಟವಾಗದೆ ಕಲಾವಿದರಿಗೆ ಸಂಕಷ್ಟ ಎದುರಾಗಿದೆ. ಬೀದರ್‌ನ (ಬಿದ್ರಿ ಕಲೆ)ಗೂ ಈಗ ಯುದ್ಧದ ಬಿಸಿ ತಟ್ಟಿದ್ದು, ವಿದೇಶಿ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ. ಶೇಕಡಾ 50ರಷ್ಟು ವಿದೇಶಿ ವ್ಯವಹಾರ ಕಡಿಮೆಯಾಗಿರುವುದರಿಂದ ಬಿದ್ರಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಪ್ಪು ಮಿಶ್ರಿತ ಲೋಹದ ಮೇಲಿನ ಬೆಳ್ಳಿಯ ನವಿರು ಕೆತ್ತನೆಯಿಂದ ತಯಾರಾಗುವ ಬಿದ್ರಿ ಕಲಾಕೃತಿಗಳು ವಿಶ್ವದ ಗ್ರಾಹಕರನ್ನು ಸೆಳೆದಿದ್ದವು. ವಿಶೇಷವಾಗಿ ಯುಎಸ್, ದುಬೈ, ಫ್ರಾನ್ಸ್ ಮತ್ತು ಕೆನಾಡಾ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಯುದ್ಧದ ಕರಿನೆರಳು ಮುಂದುವರಿದರೆ, ಬೀದರ್‌ನ ಈ ಪಾರಂಪರಿಕ ಕೈಗಾರಿಕೆಗೆ ಮತ್ತಷ್ಟು ಹೊಡೆತ ಬೀಳುವ ಭೀತಿ ಎದುರಾಗಿದೆ.
ಈ ವಿದೇಶಿ ಗ್ರಾಹಕರೇ ದುಬಾರಿ ಬಿದ್ರಿ ಕಲಾಕೃತಿಗಳ ಪ್ರಮುಖ ಬೆಂಬಲವಾಗಿದ್ದರು. ಆದರೆ ಯುದ್ದದ ಪರಿಣಾಮ ಅಂತಾರಾಷ್ಟ್ರೀಯ ಸಾಗಾಟ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿವೆ. ವಿಮಾನ ಮತ್ತು ಹಡಗು ಸಂಚಾರದಲ್ಲಿ ಅಡಚಣೆಗಳಿರುವುದರಿಂದ ಕಲಾಕೃತಿಗಳನ್ನು ವಿದೇಶಗಳಿಗೆ ಕಳುಹಿಸುವಲ್ಲಿ ವಿಳಂಬವಾಗುತ್ತಿದೆ. ಆನ್‌ಲೈನ್ ಮೂಲಕ ಬುಕ್ಕಿಂಗ್ ಪ್ರಮಾಣ ಹೆಚ್ಚಿದ್ದರೂ ಸಾಗಾಟದ ಸಮಸ್ಯೆಯಿಂದ ರಫ್ತು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಬಿದ್ರಿ ಕಲೆ ನಂಬಿಕೊಂಡಿರುವ ನೂರಾರು ಕಲಾವಿದರಲ್ಲಿ ಆತಂಕ ಹೆಚ್ಚಾಗಿದೆ.
ಅತ್ಯಂತ ಸೂಕ್ಷ್ಮವಾದ ಕುಸುರಿ ಕಲೆಯಿಂದ ವಸ್ತುಗಳನ್ನ ತಯಾರು ಮಾಡುವುದಕ್ಕೆ ತಿಂಗಳು ಬೇಕಾಗುತ್ತದೆ. ಕಷ್ಟಪಟ್ಟು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಇಲ್ಲವಾಗಿದ್ದು, ಕಲೆಯನ್ನ ನಂಬಿಕೊಂಡವರಿಗೆ ಆತಂಕ ಹೆಚ್ಚಿಸುವಂತೆ ಮಾಡಿದೆ. ಎರಡು ವರ್ಷದ ಹಿಂದೆ ಬಿದರಿ ಕಲೆಗಾರ ಷಾ ರಷೀದ್ ಅಹ್ಮದ್ ಖಾದ್ರಿಗೆ ಈ ಕಲೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ವಂಶಪರಂಪರವಾಗಿ ಬಂದಿದ್ದ ಕುಶಲಕರ್ಮಿಗೆ ಸರ್ಕಾರ ಗುರುತಿಸಿ 74ನೇ ಗಣರಾಜ್ಯೋತ್ಸವದಂದು ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿದೆ.
ಇನ್ನು ಶೆಕಡಾ 50ರಷ್ಟು ವಿದೇಶದಲ್ಲಿ ಬಿದ್ರಿ ಕಲೆಗಳು ಮಾರಾಟವಾಗುತ್ತವೆ. ಇನ್ನೂಳಿದ 50ರಷ್ಟು ನಮ್ಮ ದೇಶದಲ್ಲಿ ಮಾರಾಟವಾಗುತ್ತವೆ ಆದರೆ ವಂಶಪಾರಂಪರಗತವಾಗಿ ಬಂದಿರುವ ಈ ಕಲೆಯಿಂದಲೇ ಬದುಕು ಕಟ್ಟಿಕೊಂಡಿರುವ ಕಲಾವಿದರಿಗೆ ಇವರು ತಯಾರಿಸಿದ ವಸ್ತುಗಳಿಗೆ ಮಾರಾಟಕ್ಕೆ ಸರಕಾರ ಪ್ರೋತ್ಸಾಹ ಕೊಡುತ್ತಿಲ್ಲ. ಜೊತೆಗೆ ಈ ವಸ್ತುಗಳನ್ನ ತಯಾರಿಸಲಿಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ಪೂರೈಸುತ್ತಿಲ್ಲ. ಈ ಕಲೆಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಜನರ ಸ್ಥಿತಿ ಆರಕ್ಕೇರದೆ ಮೂರಕ್ಕಿಳಿಯದಂತಾಗಿದೆ. ನಮ್ಮ ಕಲೆಗೆ ಸರಕಾರದ ಬೆಂಬಲ ಬೇಕಾಗಿದೆ ಎಂದು ಕಲಾವಿದರು ಅಳಲು ತೋಡಿಕೊಂಡಿದ್ದಾರೆ.
ಶತಮಾನಗಳ ಇತಿಹಾಸ ಹೊಂದಿರುವ ಬೀದರಿ ಕಲೆ ಇಂದು ಯುದ್ದದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಬಂದ್ ಆಗಿದೆ. ಜಿಲ್ಲಾಡಳಿತ ಹಾಗೂ ಸರಕಾರದ ದಿವ್ಯ ನಿರ್ಲಕ್ಷದಿಂದ ಇಡೀ ಜಗತ್ತಿಗೆ ಕರ್ನಾಟಕದ ಬೀದರಿ ಕಲೆಯನ್ನ ಪರಿಚಯಿಸಿದ ಕಲಾವಿದರ ಬದುಕು ಮಾತ್ರ ಬೀದಿಗೆ ಬಂದಿದೆ. ಕಲೆ ಹಾಗೂ ಕಲಾವಿದರನ್ನ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಜಿಲ್ಲಾಡಳಿತಕ್ಕಿದೆ. ಇಂತಹ ಅಪರೂಪದಲ್ಲಿ ಅಪರೂಪದ ಕಲೆಗೆ ಪ್ರಚಾರ ಮತ್ತು ಮಾರುಕಟ್ಟೆಯ ಕೊರತೆಯಿದ್ದು, ಸರಕಾರ ಮುಂದೆ ಬಂದು ಬೀದರಿ ಕಲೆಯನ್ನ ಉಳಿಸುವ ಕಡೆಗೆ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ.
ನಿದ್ರೆ (Sleep) ದೇಹಕ್ಕೆ ಎಷ್ಟು ಮುಖ್ಯ ಎಂಬುದು ತಿಳಿದಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಹೆಚ್ಚುತ್ತಿರುವ ಒತ್ತಡ, ಅತಿಯಾದ ಸ್ಕ್ರೀನ್ ಬಳಕೆ ಮತ್ತು ಜೀವನಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳಿಂದ ನಿದ್ರೆ ಹಾಳಾಗುತ್ತಿದೆ. ಅಷ್ಟೇಅಲ್ಲ, ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ದೈನಂದಿನ ಅಭ್ಯಾಸಗಳಲ್ಲಿ ಮಾಡಿಕೊಂಡ ಬದಲಾವಣೆ, ರಾತ್ರಿ ಹೊತ್ತು ಕೆಲಸ ಮಾಡುವುದು ಮತ್ತು ಡಿಜಿಟಲ್ ಅಭ್ಯಾಸಗಳಿಂದ ಎಲ್ಲಾ ವಯೋಮಾನದವರಲ್ಲಿಯೂ ನಿದ್ರೆ ಸಂಬಂಧಿತ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅದರಲ್ಲಿಯೂ ಈ ರೀತಿಯ ಸಮಸ್ಯೆ ನಗರ ನಿವಾಸಿಗಳಲ್ಲಿಯೇ ಹೆಚ್ಚಾಗಿ ಕಂಡುಬರುತ್ತಿದೆ. ಅದಕ್ಕಾಗಿಯೇ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾರ್ಚ್ 13ರಂದು ವಿಶ್ವ ನಿದ್ರೆ ದಿನವನ್ನು ಕೂಡ ಆಚರಣೆ ಮಾಡಲಾಗುತ್ತದೆ.
ರಾತ್ರಿ ವೇಳೆ ದೀರ್ಘಕಾಲ ಸ್ಕ್ರೀನ್ ಎದುರು ಸಮಯ ಕಳೆಯುವುದರಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ ಎಂದು ನಾರಾಯಣ ಹೆಲ್ತ್‌ನ ಸ್ಲೀಪ್ ಮೆಡಿಸಿನ್ ವಿಭಾಗದ ಕ್ಲಿನಿಕಲ್ ಲೀಡ್ ರವಿಚಂದ್ರ ಎಂಆರ್‌ಕೆ ಹೇಳಿದ್ದಾರೆ. ಟೆಲಿವಿಷನ್, ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳಿಂದ ಹೊರಹೊಮ್ಮುವ ನೀಲಿ ಬೆಳಕು ನಿದ್ರೆ ನಿಯಂತ್ರಿಸುವ ಮೆಲಟೊನಿನ್ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದ ಸರ್ಕೇಡಿಯನ್ ರಿದಮ್ ಅಸ್ತವ್ಯಸ್ತವಾಗಿ, ನಿದ್ರೆ ಬರುವ ಸಮಯ ತಡವಾಗುತ್ತದೆ. ಜೊತೆಗೆ ಒಟಿಟಿ ವೇದಿಕೆಗಳಲ್ಲಿ ನಿರಂತರವಾಗಿ ಧಾರಾವಾಹಿ ಅಥವಾ ಸಿನಿಮಾಗಳನ್ನು ವೀಕ್ಷಿಸುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಸ್ಕ್ರೋಲಿಂಗ್ ಮಾಡುವುದರಿಂದ ಮೆದುಳು ವಿಶ್ರಾಂತ ಸ್ಥಿತಿಗೆ ಹೋಗುವುದಿಲ್ಲ. ಇದರಿಂದ ಸುಲಭವಾಗಿ ನಿದ್ರೆ ಬರುವುದಕ್ಕೆ ಅಡಚಣೆ ಉಂಟಾಗುತ್ತದೆ.
ವೈದ್ಯರ ಪ್ರಕಾರ, ತಲೆನೋವು, ದೌರ್ಬಲ್ಯ ಮತ್ತು ಯಾವುದೇ ಕೆಲಸದ ಬಗ್ಗೆ ಗಮನ ಕೇಂದ್ರೀಕರಿಸಲು ಆಗದಿರುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಲಕ್ಷಣಗಳು ಹೆಚ್ಚಾಗಿ ನಿದ್ರೆ ಸರಿಯಾಗಿ ಆಗದೆಯೇ ಅದರ ಕೊರತೆ ಉಂಟಾಗಿರುವುದರ ಸೂಚನೆಯಾಗಿರುತ್ತದೆ. ವಾಸವಿ ಆಸ್ಪತ್ರೆಯ ಒಳರೋಗ ವಿಭಾಗದ ಸಲಹೆಗಾರ ಡಾ. ಶ್ರೀಧರ್ ಶ್ರೀನಿವಾಸನ್ ಜಿ ಹೇಳುವ ಪ್ರಕಾರ, ಅನಿಯಮಿತ ನಿದ್ರೆ ಸಮಯ, ರಾತ್ರಿ ಹೊತ್ತು ಅತಿಯಾಗಿ ಮೊಬೈಲ್ ಬಳಕೆ ಮಾಡುವುದು ಮತ್ತು ತಡವಾಗಿ ಊಟ ಮಾಡುವ ಅಭ್ಯಾಸಗಳು ಈಗ ಎಲ್ಲಾ ವಯೋಮಾನದವರಲ್ಲಿಯೂ ಸಾಮಾನ್ಯವಾಗಿವೆ. ವಿಶೇಷವಾಗಿ ಯುವಜನರಲ್ಲಿ ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ಉಂಟಾಗುವ ನಿದ್ರೆ ಕೊರತೆ ಮೈಗ್ರೇನ್ ಮತ್ತು ಹೈಪರ್‌ಟೆನ್ಶನ್ ಮೊದಲಾದ ಕಾಯಿಲೆಗಳಿಗೆ ಕಾರಣವಾಗಬಹುದು. ಮಾತ್ರವಲ್ಲ, ಕೆಲಸದ ಒತ್ತಡ ಮತ್ತು ಸರಿಯಾದ ನಿದ್ರೆ ಅಭ್ಯಾಸಗಳ ಕೊರತೆ 25 ರಿಂದ 40 ವರ್ಷದ ವಯಸ್ಸಿನ ಉದ್ಯೋಗಿಗಳಲ್ಲಿ ನಿದ್ರೆ ಸರಿಯಾಗಿ ಮಾಡಲು ಸಾಧ್ಯವಾಗದಂತಹ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತಿದೆ. ತಡ ರಾತ್ರಿ ಊಟ ಮತ್ತು ಅಸಮರ್ಪಕ ನಿದ್ರೆ ಪದ್ಧತಿ ಗ್ಯಾಸ್ಟ್ರೋಈಸೊಫೆಜಿಯಲ್ ರಿಫ್ಲಕ್ಸ್ ರೋಗ (GERD)ಕ್ಕೂ ಕಾರಣವಾಗಿದೆ.
ವೈದ್ಯರು ಎಚ್ಚರಿಸುವಂತೆ, ದೀರ್ಘಕಾಲವರೆಗೆ ನಿದ್ರೆ ಸರಿಯಾಗಿ ಮಾಡದಿದ್ದರೆ ಒಬೆಸಿಟಿ, ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಜೊತೆಗೆ ಸ್ಮರಣೆ, ಏಕಾಗ್ರತೆ ಮತ್ತು ಕೆಲಸದ ಉತ್ಪಾದಕತೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಮತ್ತು ಎದ್ದೇಳುವ ಅಭ್ಯಾಸ ಮಾಡಿಕೊಳ್ಳಿ, ಮಲಗುವ ಮೊದಲು ಸ್ಕ್ರೀನ್ ಬಳಕೆಯನ್ನು ಕಡಿಮೆ ಮಾಡಿ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಿದ್ರೆ ಚೆನ್ನಾಗಿ ಮಾಡಿ.
ನವದೆಹಲಿ, ಮಾರ್ಚ್ 13: ದೇಶದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನೆಗೆ ಉತ್ತೇಜನ ನೀಡಲು ಸರ್ಕಾರ ಹೊಸ ರೀತಿಯ ಸಬ್ಸಿಡಿ ಪ್ಲಾನ್ (New subsidy plan) ಹಾಕಿದೆ. ಪಿಎಲ್ಐ ಸ್ಕೀಮ್ (PLI scheme) ಬದಲು ಈ ಹೊಸ ಯೋಜನೆ ಜಾರಿಗೆ ಬರುವ ಚಿಂತನೆಯಲ್ಲಿ ಸರ್ಕಾರ ಇದೆ. ಪಿಎಲ್ಐ ಸ್ಕೀಮ್ನಲ್ಲಿ ಕಂಪನಿಗಳಿಗೆ ರಫ್ತಿಗೆ ಉತ್ತೇಜನ ಕೊಡಲಾಗುತ್ತದೆ. ಹೊಸ ಸ್ಕೀಮ್ನಲ್ಲಿ ಸ್ಥಳೀಯವಾಗಿ ಬಿಡಿಭಾಗಗಳ ಪೂರೈಕೆ ಪಡೆಯುವುದಕ್ಕೆ ಉತ್ತೇಜನ ಕೊಡಲು ಯೋಜಿಸಲಾಗಿದೆ. ಅಂದರೆ, ಭಾರತದೊಳಗೆ ತಯಾರಾಗಿರುವ ಬಿಡಿಭಾಗಗಳನ್ನು ಬಳಸಿ ಸ್ಮಾರ್ಟ್‌ಫೋನ್ ಅಸೆಂಬ್ಲಿಂಗ್ ಮಾಡಿ, ಅದನ್ನು ರಫ್ತು ಮಾಡಿದರೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ.
ಸದ್ಯ, ಆ್ಯಪಲ್, ಸ್ಯಾಮ್ಸುಂಗ್ ಕಂಪನಿಗಳು ತಮ್ಮ ಅನೇಕ ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಅಸೆಂಬ್ಲಿಂಗ್ ಮಾಡಿಸುತ್ತಿವೆ. ಆದರೆ, ಅದಕ್ಕೆ ಬೇಕಾದ ಹೆಚ್ಚಿನ ಬಿಡಿಭಾಗಗಳನ್ನು ಚೀನಾ, ತೈವಾನ್ ಮತ್ತು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ, ಹೊಸ ಸಬ್ಸಿಡಿ ಸ್ಕೀಮ್ನಿಂದ ಸ್ಥಳೀಯವಾಗಿ ಬಿಡಿಭಾಗಗಳ ಉತ್ಪಾದನೆ ಹೆಚ್ಚುತ್ತದೆ. ಆ್ಯಪಲ್, ಸ್ಯಾಮ್ಸುಂಗ್ನಂತಹ ಒಇಎಂ ಕಂಪನಿಗಳಿಗೂ ತಯಾರಿಕಾ ವೆಚ್ಚ ಕಡಿಮೆ ಆಗುತ್ತೆ. ಭಾರತೀಯ ಕಂಪನಿಗಳಿಗೆ ಮ್ಯಾನುಫ್ಯಾಕ್ಚರಿಂಗ್ ಅವಕಾಶ ಮತ್ತು ಪರಿಣಿತಿ ಹೆಚ್ಚುತ್ತದೆ.
ಈ ಸ್ಕೀಮ್ಗೆ ಆಯ್ಕೆಯಾಗುವ ಕಂಪನಿಗಳು ರಫ್ತು ಮಾಡುವ ಉತ್ಪನ್ನಗಳು ಹಾಗು ಆ ಉತ್ಪನ್ನಗಳ ತಯಾರಿಕೆಗೆ ಸ್ಥಳೀಯ ಮೌಲ್ಯ ವರ್ಧನೆ ಎಷ್ಟು ಎಂಬುದರ ಲೆಕ್ಕಾಚಾರದ ಮೇಲೆ ಸಬ್ಸಿಡಿ ನೀಡಲಾಗುತ್ತದೆ. ಉದಾಹರಣೆಗೆ, ಆ್ಯಪಲ್ ಕಂಪನಿ ತನ್ನ ಐಫೋನ್ ಅಸೆಂಬ್ಲಿಂಗ್ಗೆ ಬೇಕಾದ ಬಿಡಿಭಾಗಗಳೆಲ್ಲವನ್ನೂ ಆಮದು ಮಾಡಿಕೊಂಡರೆ ಸಬ್ಸಿಡಿ ಸಿಗುವುದು ಬಹಳ ಕಡಿಮೆ. ಆದರೆ, ಭಾರತದಲ್ಲೇ ತಯಾರಾದ ಕ್ಯಾಮೆರಾ ಮಾಡ್ಯೂಲ್ಗಳು, ಡಿಸ್ಪ್ಲೇ ಇತ್ಯಾದಿ ಬಿಡಿಭಾಗಗಳನ್ನು ಪಡೆದು ಬಳಸಿದಾಗ ಹೆಚ್ಚಿನ ಸಬ್ಸಿಡಿ ಸಿಗುತ್ತದೆ.
ಈಗ ಅಸ್ತಿತ್ವದಲ್ಲಿರುವ ಪಿಎಲ್ಐ ಸ್ಕೀಮ್ನಿಂದ ಸ್ಮಾರ್ಟ್‌ಫೋನ್ ಅಸೆಂಬ್ಲಿಂಗ್ ಕಾರ್ಯ ಭಾರತದಲ್ಲಿ ಗಣನೀಯವಾಗಿ ಹೆಚ್ಚಿದೆ. ಭಾರತದಲ್ಲಿ ಮಾರಾಟವಾಗುವ ಶೇ. 95ಕ್ಕೂ ಹೆಚ್ಚು ಸ್ಮಾರ್ಟ್ಫೋನ್ಗಳು ಇಲ್ಲಿಯೇ ಅಸೆಂಬಲ್ ಆಗಿರುವುದು. ಇದರ ಜೊತೆಗೆ ಬಿಡಿಭಾಗಗಳೂ ಇಲ್ಲೇ ತಯಾರಾದಾಗ ಒಟ್ಟಾರೆ ತಯಾರಿಕೆಯ ಚಕ್ರ ಬಹುತೇಕ ಪೂರ್ಣಗೊಳ್ಳುತ್ತದೆ.
ಭಾರತದಲ್ಲಿ ಸ್ಮಾರ್ಟ್‌ಫೋನ್ ಬಿಡಿಭಾಗಗಳ ತಯಾರಿಕೆ ಹೆಚ್ಚಾದಾಗ ಸಪ್ಲೈ ಚೈನ್ ಮತ್ತಷ್ಟು ಬಲಗೊಳ್ಳುತ್ತದೆ. ಹೀಗಾಗಿ, ಸರ್ಕಾರದ ಹೊಸ ಸಬ್ಸಿಡಿ ಸ್ಕೀಮ್ ಬಗ್ಗೆ ಭಾರತೀಯ ಉದ್ಯಮ ಕುತೂಹಲ ಮತ್ತು ಸ್ವಾಗತಿಸುವ ಸ್ಥಿತಿಯಲ್ಲಿದೆ. ಫಾಕ್ಸ್ಕಾನ್ನಂತಹ ಫೋನ್ ಅಸೆಂಬ್ಲಿಂಗ್ ಕಂಪನಿಗಳು ಭಾರತದಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಬಹುದರ ಜೊತೆಗೆ ತಮ್ಮ ಪೂರೈಕೆ ಸರಪಳಿಯನ್ನು ಭಾರತದಲ್ಲೇ ನಿರ್ಮಿಸಲು ಮುಂದಾಗಬಹುದು. ಇದರಿಂದ ಅಂತಿಮ ಲಾಭ ಭಾರತಕ್ಕೆ ಆಗಲಿದೆ.
ಬೆಂಗಳೂರು, ಮಾರ್ಚ್ 13: ಇತ್ತೀಚೆಗೆ ಸೈಬರ್ ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಸದನದಲ್ಲಿಯೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಏನೋ ತಿಳಿಸಿದ್ದಾರೆ. 2023ರಲ್ಲಿ ರಾಜ್ಯದಲ್ಲಿದ್ದ 22,225 ಪ್ರಕರಣಗಳ ಸಂಖ್ಯೆ 2025ರ ವೇಳೆಗೆ 14,899ಕ್ಕೆ ಇಳಿಕೆಯಾಗಿವೆ. ಪೊಲೀಸ್ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಪ್ರಕರಣಗಳ ತ್ವರಿತ ಪತ್ತೆ ಮತ್ತು ಸಾರ್ವಜನಿಕರಲ್ಲಿ ಮೂಡಿಸಿದ ಜಾಗೃತಿ ಫಲಕೊಟ್ಟಿರೋದಾಗಿ ಹೇಳಿದ್ದಾರೆ. ಆದ್ರೆ ಖದೀಮರು ಮಾತ್ರ ಜನರಿಗೆ ವಂಚನೆ ಮಾಡಲು ಹೊಸ ಹೊಸ ದಾರಿ ಹುಡುಕುತ್ತಿದ್ದಾರೆ. ಖಾಕಿ ಚಾಪೆ ಕೆಳಗೆ ತೂರಿದರೆ ಇವರು ರಂಗೋಲಿ ಕೆಳಗೇ ತೂರುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಿದೆ ಬೆಂಗಳೂರಲ್ಲಿ ನಡೆದಿರುವ ಈ ಘಟನೆ.
ಸೈಬರ್ ಖದೀಮರ ಆಟ ಈಗ ನೆಕ್ಸ್ಟ್ ಲೆವೆಲ್‌ಗೆ ಹೋಗಿದೆ. ಇಷ್ಟು ದಿನ ಬೇರೆ ರಾಜ್ಯದ ಪೊಲೀಸರ ಹೆಸರಲ್ಲಿ ಹೆದರಿಸ್ತಿದ್ದವರು,ಈಗ ಲೋಕಲ್ ಪೊಲೀಸರ ಹೆಸರನ್ನೇ ಬಳಸುತ್ತಿದ್ದಾರೆ. ಬೆಂಗಳೂರಿನ ಮಹಿಳೆಯೊಬ್ಬರಿಗೆ ಬಂದ ಒಂದು ಕರೆ ಚಾಲಾಕಿಗಳ ನಾಟಕ ಬಟಾಬಯಲು ಮಾಡಿದೆ. ಹೌದು, ನಯನಾ ಪ್ರಕಾಶ್ ಎಂಬುವರ ಹೆಸರಲ್ಲಿ ದಾಖಲೆ ಸೃಷ್ಟಿಸಿದ್ದ ಕಿಲಾಡಿಗಳು ಮಹಿಳೆಗೆ ಕರೆ ಮಾಡಿದ್ದಾರೆ. ಮೊದಲು ಆಡಿಯೋ ಕಾಲ್ ಮಾಡಿ, ನಿಮ್ಮ ತಾಯಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೆದರಿಸಿದ್ದಾರೆ. ನಂತರ ಕರೆಯನ್ನ ವಿಡಿಯೋ ಕಾಲ್ಗೆ ಕನ್ವರ್ಟ್ ಮಾಡಿ ತನಿಖೆ ಮಾಡಬೇಕು ಅಂತಾ ದಬಾಯಿಸಿದ್ದಾರೆ. ಈ ಖದೀಮರ ಧೈರ್ಯ ಎಷ್ಟಿದೆ ಅಂದ್ರೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ನಕಲಿ ಸೀಲ್ ಮತ್ತು ಸಹಿಯನ್ನೇ ಬಳಸಿದ್ದಾರೆ. ಸಾಲದ್ದಕ್ಕೆ ಕರ್ನಾಟಕ ಸಿಐಡಿ ಹೆಸರಲ್ಲಿ ಅರೆಸ್ಟ್ ವಾರಂಟ್ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ಆದೇಶ ಅಂತಾ ನಕಲಿ ದಾಖಲೆ ಕಳಿಸಿ, ನಿಮ್ಮ ಮನೆ ಲೊಕೇಶನ್ ಕಳಿಸಿ ನಾವು ಬರ್ತೀವಿ ಅಂತಾ ಮಹಿಳೆಯನ್ನ ಟೆನ್ಶನ್ ಗೆ ತಳ್ಳಿದ್ದಾರೆ.
ಆದರೆ ದಾಖಲೆಗಳನ್ನ ನೋಡಿ ಅನುಮಾನಗೊಂಡ ಮಹಿಳೆ ಅಂಜದೆ ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಅಧಿಕೃತ ಮೇಲ್ ಐಡಿಗೆ ದೂರು ನೀಡಿದ್ದಾರೆ. ಜೊತೆಗೆ ಸೈಬರ್ ಕ್ರೈಂ ಪೋರ್ಟಲ್ನಲ್ಲೂ ಕಂಪ್ಲೇಂಟ್ ರಿಜಿಸ್ಟರ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ರಾಜಾ ಇಮಾಮ್ ಖಾಸಿಂ, ಪೊಲೀಸರು ಯಾವತ್ತೂ ಡಿಜಿಟಲ್ ಅರೆಸ್ಟ್ ಮಾಡಲ್ಲ. ವಿಡಿಯೋ ಕಾಲ್ ಮೂಲಕ ತನಿಖೆ ನಡೆಸಿ ಹಣ ಕೇಳಲ್ಲ. ಇಂತಹ ನಕಲಿ ಆದೇಶ ಪತ್ರಗಳಿಗೆ ಸಾರ್ವಜನಿಕರು ಮರುಳಾಗಬಾರದು. ಅನುಮಾನ ಬಂದರೆ ಕೂಡಲೇ 1930 ಗೆ ಕರೆ ಮಾಡಿ ದೂರು ಕೊಡಿ ಎಂದಿದ್ದಾರೆ. ಒಟ್ಟಿನಲ್ಲಿ ಇಂತಹ ಜಾಲಕ್ಕೆ ಬೆದರಿ ಅನೇಕ ಮಂದಿ ಈಗಾಗಲೇ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಈ ನಡುವೆ ಪೊಲೀಸರ ಹೆಸರಲ್ಲೇ ವಂಚನೆ ಮಾಡೋಕೆ ಹೊರಟಿರುವ ಸೈಬರ್ ಖದೀಮರ ಬಗ್ಗೆ ಸಾರ್ವಜನಿಕರು ಇನ್ನಷ್ಟು ಜಾಗ್ರತೆ ವಹಿಸಬೇಕಿದೆ.