All posts by nagaraj11081993

ಭಾರತೀಯ ವಿಜ್ಞಾನಕ್ಕೆ ಹೆಮ್ಮೆಯ ಕ್ಷಣ; ಡಾ. ಸೌಮ್ಯ ಸ್ವಾಮಿನಾಥನ್​ಗೆ ಲಂಡನ್​​ನ ರಾಯಲ್ ಸೊಸೈಟಿಯ ಫೆಲೋಶಿಪ್ – Kannada News | Indian scientist Dr Soumya Swaminathan Elected as Fellow of the Royal Society

ನವದೆಹಲಿ, ಮೇ 19: ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈಜ್ಞಾನಿಕ ಗೌರವಗಳಲ್ಲಿ ಒಂದಾದ ರಾಯಲ್ ಸೊಸೈಟಿಯ (FRS) ಫೆಲೋ ಆಗಿ ಆಯ್ಕೆಯಾಗಿದ್ದಾರೆ. ಪ್ರಸಿದ್ಧ ಕೃಷಿ ವಿಜ್ಞಾನಿ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಎಂ.ಎಸ್. ಸ್ವಾಮಿನಾಥನ್ ಕೂಡ ಅದೇ ಸಮೂಹದಲ್ಲಿ FRS ಆಗಿ ಆಯ್ಕೆಯಾಗಿದ್ದರು. ಈ ಮೂಲಕ ಅವರಿಬ್ಬರೂ ಲಂಡನ್ ರಾಯಲ್ ಸೊಸೈಟಿಯ ಫೆಲೋಶಿಪ್ ಪಡೆದ ಭಾರತದ ಮೊದಲ ತಂದೆ-ಮಗಳು ಎನಿಸಿಕೊಂಡಿದ್ದಾರೆ.

ಮುಖ್ಯಾಂಶಗಳು:

  • ಭಾರತದ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್​ಗೆ ರಾಯಲ್ ಸೊಸೈಟಿ ಫೆಲೋಶಿಪ್
  • ಅವರ ತಂದೆ ಎಂ.ಎಸ್. ಸ್ವಾಮಿನಾಥನ್​ಗೂ ಲಭಿಸಿತ್ತು ಈ ಗೌರವ
  • ಲಂಡನ್‌ನ ರಾಯಲ್ ಸೊಸೈಟಿ ವಿಶ್ವದ ಅತ್ಯಂತ ಹಳೆಯ ವಿಜ್ಞಾನ ಅಕಾಡೆಮಿಗಳಲ್ಲೊಂದು

ರಾಯಲ್ ಸೊಸೈಟಿಯ 365 ವರ್ಷಗಳ ಇತಿಹಾಸದಲ್ಲಿ ಫೆಲೋಶಿಪ್ ಪಡೆದ ಎರಡನೇ ಭಾರತೀಯ ಮಹಿಳಾ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್. ಮೊದಲನೆಯವರು 2019ರಲ್ಲಿ ಆಯ್ಕೆಯಾದ ಪ್ರಸಿದ್ಧ ಲಸಿಕೆಶಾಸ್ತ್ರಜ್ಞರಾದ ಪ್ರೊ. ಗಗನ್‌ದೀಪ್ ಕಾಂಗ್.

ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮುನ್ನ, ಅವರು 2015 ರಿಂದ 2017 ರವರೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕರಾಗಿ ಮತ್ತು ಭಾರತ ಸರ್ಕಾರದ ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಯೇಸು ಕ್ರಿಸ್ತನ ಅಂತ್ಯಕ್ರಿಯೆಗೆ ಬಳಸಿದ್ದ ಬಟ್ಟೆಗೆ ಭಾರತದ ನಂಟು; ವಿಜ್ಞಾನಿಗಳ ಸಂಶೋಧನೆ ಹೇಳೋದೇನು?

1660 ರಲ್ಲಿ ಸ್ಥಾಪನೆಯಾದ ರಾಯಲ್ ಸೊಸೈಟಿಯು ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯಂತ ಗೌರವಾನ್ವಿತ ವೈಜ್ಞಾನಿಕ ಅಕಾಡೆಮಿಗಳಲ್ಲಿ ಒಂದಾಗಿದೆ. ತಮ್ಮ ಕ್ಷೇತ್ರಗಳಿಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ ವಿಜ್ಞಾನಿಗಳಿಗೆ ಫೆಲೋಶಿಪ್ ನೀಡಲಾಗುತ್ತದೆ.

ಸೌಮ್ಯ ಸ್ವಾಮಿನಾಥನ್ ಯಾರು?:

ಡಾ. ಸೌಮ್ಯ ಸ್ವಾಮಿನಾಥನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದ ಭಾರತದ ಮಕ್ಕಳ ತಜ್ಞೆ ಮತ್ತು ಕ್ಲಿನಿಕಲ್ ವಿಜ್ಞಾನಿಯಾಗಿದ್ದಾರೆ. ಅವರು ವಿಶ್ವ ಆರೋಗ್ಯ ಸಂಸ್ಥೆ (WHO) ಯಲ್ಲಿ ವಹಿಸಿದ್ದ ಪ್ರಮುಖ ನಾಯಕತ್ವದ ಜವಾಬ್ದಾರಿಗಾಗಿ ಜಾಗತಿಕವಾಗಿ ಚಿರಪರಿಚಿತರಾಗಿದ್ದಾರೆ. ಸೌಮ್ಯ ಸ್ವಾಮಿನಾಥನ್ ಅವರ ತಂದೆ, ಭಾರತದ ಹಸಿರು ಕ್ರಾಂತಿಯ ಪಿತಾಮಹ ಹಾಗೂ ಭಾರತ ರತ್ನ ಪುರಸ್ಕೃತರಾದ ಪ್ರೊ. ಎಂ. ಎಸ್. ಸ್ವಾಮಿನಾಥನ್ ಅವರೂ ಸಹ ಹಿಂದೆ ರಾಯಲ್ ಸೊಸೈಟಿಯ ಫೆಲೋ (FRS) ಆಗಿ ಆಯ್ಕೆಯಾಗಿದ್ದರು. ಈಗ ಅವರ ಪುತ್ರಿಯೂ ಅದೇ ಪ್ರತಿಷ್ಠಿತ ಗೌರವವನ್ನು ಪಡೆದುಕೊಳ್ಳುವ ಮೂಲಕ ಈ ವಿಜ್ಞಾನಿ ಕುಟುಂಬವು ದೇಶಕ್ಕೆ ಕೀರ್ತಿ ತಂದಿದೆ.

ಇದನ್ನೂ ಓದಿ: ವಿಜ್ಞಾನಿಗಳು ರೈತರ ಹೊಲಗಳನ್ನೇ ಪ್ರಯೋಗಾಲಯವಾಗಿ ಪರಿವರ್ತಿಸಬೇಕು; ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಕರೆ

ಏನಿದು ರಾಯಲ್ ಸೊಸೈಟಿ?:

ಲಂಡನ್‌ನಲ್ಲಿರುವ ರಾಯಲ್ ಸೊಸೈಟಿಯು ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯುನ್ನತ ವಿಜ್ಞಾನ ಅಕಾಡೆಮಿಗಳಲ್ಲಿ ಒಂದಾಗಿದೆ. ವಿಜ್ಞಾನ, ವೈದ್ಯಕೀಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಅಸಾಧಾರಣ ಕೊಡುಗೆ ನೀಡಿದ ವಿಜ್ಞಾನಿಗಳಿಗೆ ಮಾತ್ರ ಇದರ ಸದಸ್ಯತ್ವವನ್ನು (Fellowship) ನೀಡಲಾಗುತ್ತದೆ. ಸರ್ ಐಸಾಕ್ ನ್ಯೂಟನ್, ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಚಾರ್ಲ್ಸ್ ಡಾರ್ವಿನ್ ಅವರಂತಹ ವಿಶ್ವವಿಖ್ಯಾತ ವಿಜ್ಞಾನಿಗಳು ಇದರ ಸದಸ್ಯರಾಗಿದ್ದರು ಎಂಬುದು ಇದರ ಮಹತ್ವವನ್ನು ಸಾರುತ್ತದೆ.

ಡಾ. ಸೌಮ್ಯ ಸ್ವಾಮಿನಾಥನ್ ಅವರು ಕಳೆದ ಮೂರು ದಶಕಗಳಲ್ಲಿ ಕ್ಷಯರೋಗ (TB) ಮತ್ತು ಎಚ್‌ಐವಿ (HIV) ಕುರಿತು ನಡೆಸಿರುವ ಅದ್ಭುತ ವೈದ್ಯಕೀಯ ಸಂಶೋಧನೆಗಳು ಹಾಗೂ ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ಸಮಯದಲ್ಲಿ ಜಾಗತಿಕ ಆರೋಗ್ಯ ನೀತಿಗಳನ್ನು ರೂಪಿಸುವಲ್ಲಿ ಅವರು ವಹಿಸಿದ ಅತ್ಯುನ್ನತ ನಾಯಕತ್ವವನ್ನು ಗುರುತಿಸಿ ಈ ಫೆಲೋಶಿಪ್ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಟ ಜೂ ಎನ್​ಟಿಆರ್ ಸಿಎಂ ಆಗಲಿದ್ದಾರೆ: ಶಾಸಕ ಹೇಳಿಕೆ – Kannada News | Jr NTR will became CM in future said a Andhra Pradesh MLC

ತಮಿಳುನಾಡಿನಲ್ಲಿ ಸ್ಟಾರ್ ನಟ ವಿಜಯ್ (Vijay) ಚುನಾವಣೆ ಗೆದ್ದು ಸಿಎಂ ಆದ ಬೆನ್ನಲ್ಲೆ, ನೆರೆಯ ಆಂಧ್ರ ಪ್ರದೇಶದಲ್ಲಿ ರಾಜಕೀಯ ಚರ್ಚೆಗಳು ಗರಿ ಗೆದರಿವೆ. ಅದರಲ್ಲೂ ನಟ ಜೂ ಎನ್​​ಟಿಆರ್ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿ ಬರುತ್ತಿದ್ದು, ವಿಜಯ್ ರೀತಿಯೇ ಜೂ ಎನ್​ಟಿಆರ್ ಸಹ ಸಿಎಂ ಆಗಲಿದ್ದಾರೆ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಶಾಸಕರೊಬ್ಬರು ಜೂ ಎನ್​​ಟಿಆರ್ ಬಗ್ಗೆ ಮಾತನಾಡಿ, ಜೂ ಎನ್​​​​ಟಿಆರ್ ಭವಿಷ್ಯದ ಆಂಧ್ರ ಪ್ರದೇಶದ ಸಿಎಂ ಎಂದಿದ್ದಾರೆ.

ವೈಎಸ್​​ರಾ ಪಕ್ಷದ ಮುಖಂಡ ಮತ್ತು ಎಂಎಲ್​​ಸಿ ದುವ್ವಾಡ ಶ್ರೀನಿವಾಸ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಜೂ ಎನ್​​ಟಿಆರ್ ಬಗ್ಗೆ ಮಾತನಾಡಿದ್ದು, ಜೂ ಎನ್​​ಟಿಆರ್​ ಅವರು ಭವಿಷ್ಯದಲ್ಲಿ ಆಂಧ್ರ ಪ್ರದೇಶದ ಸಿಎಂ ಆಗಲಿದ್ದಾರೆ ಎಂದಿದ್ದಾರೆ. ‘ಜೂ ಎನ್‌ಟಿಆರ್‌ಗೆ ಅಪಾರ ಜನಬೆಂಬಲ ಇದೆ. ಅವರ ಮಾತನಾಡುವ ಶೈಲಿ, ಯೋಚನಾ ಲಹರಿ, ಜನರೊಟ್ಟಿಗೆ ಬೆರೆಯುವ ರೀತಿ ಹಾಗೂ ಕುಟುಂಬ ಹಿನ್ನೆಲೆ ಗಮನಿಸಿದರೆ ಅವರು ರಾಜಕೀಯಕ್ಕೆ ಬರುವುದು ಖಾತ್ರಿ. ತೆಲುಗು ಜನರಲ್ಲಿ ಎನ್‌ಟಿಆರ್‌ ಮೇಲೆ ವಿಶೇಷ ಪ್ರೀತಿ ಇದೆ. ಭವಿಷ್ಯದಲ್ಲಿ ಅವರು ರಾಜಕೀಯಕ್ಕೆ ಬಂದರೆ ಸಿಎಂ ಆಗುತ್ತಾರೆ’ ಎಂದಿದ್ದಾರೆ.

ಜೂ ಎನ್​​ಟಿಆರ್ ಅವರಿಗೆ ರಾಜಕೀಯ ಹೊಸದಲ್ಲ. ಈ ಹಿಂದೆ ಅವರು ಆಂಧ್ರದ ಪ್ರಸ್ತುತ ಆಡಳಿತ ಪಕ್ಷ ಟಿಡಿಪಿಯ ರಾಜ್ಯ ಯುವ ಮುಖಂಡರಾಗಿ ಜವಬ್ದಾರಿ ನಿರ್ವಹಿಸಿದ್ದಾರೆ. ಅವಿಭಜಿತ ಆಂಧ್ರದ ಪರ್ಯಟನೆ ನಡೆಸಿ ರಾಜಕೀಯ ಪ್ರಚಾರ ಸಹ ಮಾಡಿದ್ದಾರೆ. ಆದರೆ ಕಳೆದೆರಡು ಚುನಾವಣೆಗಳಲ್ಲಿ ಅವರನ್ನು ಪಕ್ಷವು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಿದೆ. ಪ್ರಸ್ತುತ ಅವರು ಮತ್ತು ಅವರ ಸಹೋದರ ಕಲ್ಯಾಣ್ ರಾಮ್, ಟಿಡಿಪಿ ಪಕ್ಷದಿಂದ ದೂರವೇ ಉಳಿದಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ಯ ಪ್ರೀ ರಿಲೀಸ್ ಇವೆಂಟ್ ಸಿನಿಮಾದಷ್ಟೆ ಅದ್ಧೂರಿ, 150 ಕೋಟಿ ಮೌಲ್ಯದ ಸೆಟಪ್

ನಾಳೆ (ಮೇ 20) ಜೂ ಎನ್​​ಟಿಆರ್ ಹುಟ್ಟುಹಬ್ಬವಿದ್ದು, ಹಲವು ಸಾಮಾಜಿಕ ಕಾರ್ಯಗಳನ್ನು ಅವರು ತಮ್ಮ ಅಭಿಮಾನಿ ಸಂಘದ ನೆರವಿನಿಂದ ಮಾಡಲಿದ್ದು, ಆ ಮೂಲಕ ಜನರಿಗೆ ಹತ್ತಿರವಾಗುವ ಕಾರ್ಯ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ವಿಜಯ್ ರೀತಿಯೇ ಸ್ವಂತ ಪಕ್ಷ ಕಟ್ಟಿ ಜೂ ಎನ್​​ಟಿಆರ್ ಸಹ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಈಗಿನಿಂದಲೇ ಕೇಳಿ ಬರುತ್ತಿವೆ.

ಜೂ ಎನ್​​ಟಿಆರ್ ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದರ ಬಳಿಕ ಯಶ್ ರಾಜ್ ಫಿಲಮ್ಸ್​ ನಿರ್ಮಾಣದ ಹಿಂದಿ ಸಿನಿಮಾ ಒಂದರಲ್ಲಿ ಸಹ ಜೂ ಎನ್​​ಟಿಆರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರು ನಿಗೂಢ ನಾಪತ್ತೆ, ತಿಂಗಳಾದರೂ ಸಿಗದ ಸುಳಿವು – Kannada News | Four members of family missing from month In Shivamogga, case Book

ಶಿವಮೊಗ್ಗ, (ಮೇ 19): ಒಂದೇ ಕುಟುಂಬದ (Family) ನಾಲ್ವರು ನಾಪತ್ತೆಯಾಗಿರುವ(Missing) ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ಶಿವಮೊಗ್ಗದ ಬುದ್ಧನಗರ ನಿವಾಸಿಗಳಾದ ಮೊಹಮ್ಮದ್ ಇಕ್ಬಾಲ್ (62), ನಸ್ರತ್ ಬಾನು (54), ಮೊಹಮ್ಮದ್ ಫಾಜಿಲ್ (35), ಮೊಹಮ್ಮದ್ ಆದಿಲ್ (32) ಎನ್ನುವರು ಕಳೆದ ಒಂದು ತಿಂಗಳಿನಿಂದ ಏಪ್ರಿಲ್ 15ರಿಂದ ನಾಪತ್ತೆಯಾಗಿದ್ದಾರೆ. ಇವತ್ತು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಸಂಬಂಧಿಕರು ಕಾದು ಕುಳಿತ್ತಿದ್ದರು. ಆದರೆ, ತಿಂಗಳು ಕಳೆದರೂ ಸಹ ಬಾರದಿದ್ದರಿಂದ ಆತಂಕಗೊಂಡ ಸಂಬಂಧಿಕರು ಶಿವಮೊಗ್ಗ ದೊಡ್ಡಪೇಟೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್​​ ದಾಖಲಿಸಿದ್ದಾರೆ.

ಮುಖ್ಯಾಂಶ

  • ಶಿವಮೊಗ್ಗದ ಬುದ್ಧನಗರದ ಒಂದೇ ಕುಟುಂಬದ ನಾಲ್ವರು ನಾಪತ್ತೆ
  • ಮೊಹಮ್ಮದ್ ಇಕ್ಬಾಲ್(62), ನಸ್ರತ್ ಬಾನು(54) ಫಾಜಿಲ್(35), ಆದಿಲ್(32) ನಾಪತ್ತೆ.
  • ಏಪ್ರಿಲ್ 15ರಿಂದ ನಾಪತ್ತೆಯಾಗಿರುವ ಕುಟುಂಬಸ್ಥರು
  • ಶಿವಮೊಗ್ಗ ದೊಡ್ಡಪೇಟೆ ಠಾಣೆಯಲ್ಲಿ ಕೇಸ್​​ ದಾಖಲು

ಶಿವಮೊಗ್ಗದ ಬುದ್ಧನಗರದಲ್ಲಿ ನೆಲೆಸಿದ್ದ ಒಂದೇ ಕುಟುಂಬದ ಮೋಹಮ್ಮದ್ ಇಕ್ಬಾಲ್, ನಸ್ರತ್ ಬಾನು, ಮೋಹಮ್ಮದ್ ಫಾಜಿಲ್, ಮೊಹಮ್ಮದ್ ಆದಿಲ್ ಕಳೆದ ಒಂದು ತಿಂಗಳಿನಿಂದ (ಏಪ್ರಿಲ್ 15ರಿಂದ) ಕಾಣೆಯಾಗಿದ್ದಾರೆ. ಎಲ್ಲಿ ಹೋಗಿದ್ದಾರೆ? ಏನೋ ಎನ್ನುವುದೇ ನಿಗೂಢವಾಗಿದೆ. ಸಂಬಂಧಿಕರು ಸಹ ಎಲ್ಲ ಕಡೆ ಹುಡುಕಿದರೂ ಸಹ ಪತ್ತೆಯಾಗಿಲ್ಲ. ಹುಡುಕಿ ಹುಡುಕಿ ಸಾಕಾದ ಬಳಿಕ ಅಂತಿಮವಾಗಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಸಹ ಶೋಧ ಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ: ಅಮ್ಮ-ಅಪ್ಪ ಸ್ವಾರಿ, ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ: ಪತ್ರ ಬರೆದಿಟ್ಟು ಸಹೋದರಿಯರು ನಾಪತ್ತೆ

ನಾಪತ್ತೆಯಾದವರ ಸಂಪೂರ್ಣ ವಿವರ

ಮೊದಲನೆಯದಾಗಿ, 62 ವರ್ಷದ ಮೋಹಮ್ಮದ್ ಇಕ್ಬಾಲ್ ಅವರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಮತ್ತು ಬಿಳಿ ಮೈಬಣ್ಣ ಹೊಂದಿದ್ದಾರೆ. ಇವರೊಂದಿಗೆ 54 ವರ್ಷದ ನಸ್ರತ್ ಬಾನು ಅವರು ನಾಪತ್ತೆಯಾಗಿದ್ದು, ಇವರು 5.2 ಅಡಿ ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ಸೀಳು ತುಟಿಯ ಗುರುತನ್ನು ಹೊಂದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಇದೇ ಕುಟುಂಬದ ಯುವಕರಾದ 35 ವರ್ಷದ ಮೋಹಮ್ಮದ್ ಫಾಜಿಲ್ (5.6 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಬಿಳಿ ಮೈಬಣ್ಣ ಹಾಗೂ ಎದೆಯ ಭಾಗದಲ್ಲಿ ಚರ್ಮಗಂಟು ಇರುವಿಕೆ) ಮತ್ತು 32 ವರ್ಷದ ಮೊಹಮ್ಮದ್ ಆದಿಲ್ (5.4 ಅಡಿ ಎತ್ತರ, ದಪ್ಪ ಮೈಕಟ್ಟು ಹಾಗೂ ಎಣ್ಣೆಗೆಂಪು ಮೈಬಣ್ಣ) ಇಬ್ಬರೂ ಸಹ ಅದೇ ದಿನದಿಂದ ಕಾಣೆಯಾಗಿದ್ದಾರೆ.

ಈ ನಾಲ್ಕೂ ಜನ ಕಾಣೆಯಾದವರ ಬಗ್ಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸುಳಿವು ಅಥವಾ ಮಾಹಿತಿ ಲಭ್ಯ ಆದಲ್ಲಿ ತಕ್ಷಣವೇ ದೊಡ್ಡಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳಾದ 08182-261414, 9972426144, 9480803345 ಅಥವಾ 6264571710 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆಯು ಪ್ರಕಟಣೆ ಹೊರಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಒಂದು ತಿಂಗಳು ತಪ್ಪದೆ ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನೆಸಿ ತಿಂದ್ರೆ ದೇಹದಲ್ಲಿ ಏನೆಲ್ಲಾ ಆಗುತ್ತೆ ಗೊತ್ತಾ? – Kannada News | Raisin Milk Benefits For Skin, Hair, And Digestion: Ayurvedic Morning Drink

ಅಡುಗೆ ಮನೆಯಲ್ಲಿ ಸುಲಭವಾಗಿ ದೊರೆಯುವ ಡ್ರೈ ಫ್ರೂಟ್ಸ್‌ಗಳಲ್ಲಿ ಒಣದ್ರಾಕ್ಷಿ (Raisin) ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ. ಸಾಮಾನ್ಯವಾಗಿ ಪಾಯಸ, ಹಲ್ವಾ ಮತ್ತು ಸಿಹಿ ಪದಾರ್ಥಗಳಲ್ಲಿ ಬಳಸುವ ಒಣದ್ರಾಕ್ಷಿಯನ್ನು ಇತ್ತೀಚಿನ ದಿನಗಳಲ್ಲಿ ಹಲವರು ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಒಣದ್ರಾಕ್ಷಿಯನ್ನು ಹಾಲಿನಲ್ಲಿ ನೆನೆಸಿ ಸೇವಿಸಿದರೆ ದೇಹಕ್ಕೆ ಇನ್ನಷ್ಟು ಪ್ರಯೋಜನಗಳು ದೊರೆಯುತ್ತವೆ. ಹೌದು, ಹಾಲು (Milk) ಮತ್ತು ಒಣದ್ರಾಕ್ಷಿಯ ಸಂಯೋಜನೆ ದೇಹಕ್ಕೆ ಕ್ಯಾಲ್ಸಿಯಂ, ಪ್ರೋಟೀನ್, ಐರನ್ ಹಾಗೂ ಫೈಬರ್‌ಗಳನ್ನು ಸಮೃದ್ಧವಾಗಿ ಒದಗಿಸುತ್ತದೆ. ಇದರಿಂದ ಎಲುಬುಗಳು ಬಲವಾಗುವುದರ ಜೊತೆಗೆ ದೇಹದ ಶಕ್ತಿ ಕೂಡ ಹೆಚ್ಚುತ್ತದೆ. ಹಾಗಾದರೆ ಈ ಅಭ್ಯಾಸದಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಕ್ತಹೀನತೆ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ;

ಒಣದ್ರಾಕ್ಷಿಯಲ್ಲಿ ಐರನ್ ಮತ್ತು ಪೊಟ್ಯಾಸಿಯಂ ಪ್ರಮಾಣ ಹೆಚ್ಚು ಇರುತ್ತದೆ. ಹಾಲಿನಲ್ಲಿ ರಾತ್ರಿ ಪೂರ್ತಿ ನೆನೆಸಿದಾಗ ಅದರ ಪೋಷಕಾಂಶಗಳನ್ನು ದೇಹ ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. ಪ್ರತಿದಿನ ಬೆಳಗ್ಗೆ ಇದನ್ನು ಸೇವಿಸಿದರೆ ರಕ್ತಹೀನತೆ ಕಡಿಮೆಯಾಗಲು ಸಹಾಯವಾಗುತ್ತದೆ. ಜೊತೆಗೆ ಪೊಟ್ಯಾಸಿಯಂ ರಕ್ತದೊತ್ತಡ ನಿಯಂತ್ರಣದಲ್ಲಿರಲು ನೆರವಾಗುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ;

ಒಣದ್ರಾಕ್ಷಿಯಲ್ಲಿ ಇರುವ ಡೈಟರಿ ಫೈಬರ್ ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿ. ಹಾಲಿನಲ್ಲಿ ನೆನೆಸಿದ ನಂತರ ಇದು ಮೃದುವಾಗುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆಯ ಒಳಗಿನ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಹಾಲು ಆರೋಗ್ಯಕ್ಕೆ ಒಳ್ಳೆಯದು ಆದ್ರೆ ಎಲ್ಲರಿಗೂ ಅಲ್ಲ! ಹಾಗಿದ್ರೆ ಯಾರು ಕುಡಿಯಬಾರದು?

ಹೃದಯ ಮತ್ತು ಚರ್ಮದ ಆರೋಗ್ಯಕ್ಕೂ ಒಳ್ಳೆಯದು;

ಒಣದ್ರಾಕ್ಷಿಯಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಮತ್ತು ಆರೋಗ್ಯಕರ ಕೊಬ್ಬುಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಚರ್ಮ ಒಣಗುವುದು, ಮೊಡವೆ ಮತ್ತು ಕಲೆಗಳಂತಹ ಸಮಸ್ಯೆಗಳನ್ನು ಕಡಿಮೆ ಮಾಡಿ ಮುಖದ ಕಾಂತಿಯನ್ನೂ ಹೆಚ್ಚಿಸುತ್ತದೆ.

ತೂಕ ಇಳಿಕೆಗೆ ಸಹ ಉಪಯುಕ್ತ;

ಹೆಚ್ಚಿನ ಫೈಬರ್ ಇರುವುದರಿಂದ ಈ ಮಿಶ್ರಣ ಹೊಟ್ಟೆ ತುಂಬಿದ ಅನುಭವವನ್ನು ಹೆಚ್ಚು ಸಮಯ ನೀಡುತ್ತದೆ. ಇದರಿಂದ ಅತಿಯಾಗಿ ತಿನ್ನುವ ಅಭ್ಯಾಸ ಕಡಿಮೆಯಾಗಬಹುದು. ಹೀಗಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಸಹಕಾರಿಯಾಗಿದೆ.

ಆದರೆ ಯಾವುದೇ ಆಹಾರವಾಗಲಿ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಆದ್ದರಿಂದ ಮಿತ ಪ್ರಮಾಣದಲ್ಲಿ ಹಾಗೂ ವೈದ್ಯರ ಸಲಹೆಯೊಂದಿಗೆ ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ

‘ನಮ್ ಏರಿಯಾಲ್ ಒಂದ್ ದಿನ’, ‘ತುಘಲಕ್’, ‘ಹುಲಿರಾಯ’ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶಿಸಿರುವ ಅರವಿಂದ್ ಕಶ್ಯಪ್ ಇದೀಗ ‘ಕಂಟ್ರಿ ಮೇಡ್ ಭಾಗ 2’ ಹೆಸರಿನ ಸಿನಿಮಾ ನಿರ್ದೇಶಿಸಿದ್ದು, ಇದೊಂದು ಭೂಗತ ಲೋಕದ ಕತೆ ಎನ್ನಲಾಗುತ್ತಿದೆ. ಸಿನಿಮಾದ ಪ್ರಚಾರಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅರವಿಂದ್ ಕಶ್ಯಪ್, ‘ನಮ್ಮ ಸಿನಿಮಾಕ್ಕೆ ಕತೆಯೇ ನಾಯಕ. ಬೇರೆ ನಾಯಕ ನಾಯಕಿ ಇಲ್ಲ’ ಎಂದು ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಳಯರಾಜಾ ಬಗ್ಗೆ ವ್ಯಂಗ್ಯ: ಕ್ಷಮೆಯಾಚಿಸಿದ ‘ಕರುಪ್ಪು’ ಚಿತ್ರತಂಡ – Kannada News | Karuppu movie team apology to ilaiyaraaja for mocking him

ತಮಿಳು ಸ್ಟಾರ್ ನಟ ಸೂರ್ಯ (Suriya) ನಟಿಸಿ, ಬಾಲಾಜಿ ನಿರ್ದೇಶನ ಮಾಡಿರುವ ‘ಕರುಪ್ಪು’ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಿನಿಮಾ ಈಗಾಗಲೇ 100 ಕೋಟಿ ಗಳಿಕೆಯ ಗಡಿ ದಾಟಿದೆ. ಸಿನಿಮಾ ಆಕ್ಷನ್ ಜೊತೆಗೆ ಕಾಮಿಡಿಯನ್ನೂ ಒಳಗೊಂಡಿದ್ದು, ಸಿನಿಮಾದ ನಿರ್ದೇಶಕ ಬಾಲಾಜಿ, ಸೂರ್ಯ ಅವರ ಕೆಲವು ಹಳೆಯ ಸಿನಿಮಾದ ಸೀನ್​​ಗಳನ್ನು ತಮಾಷೆಯ ರೀತಿಯಲ್ಲಿ ರೀಕ್ರಿಯೇಟ್ ಮಾಡಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾ ಟ್ರೆಂಡ್​​ಗಳನ್ನು ಆಧರಿಸಿ ಕೆಲ ಹಾಸ್ಯ ಸಂಭಾಷಣೆಗಳನ್ನು ಸಹ ಬಳಸಿಕೊಂಡಿದ್ದಾರೆ. ಆದರೆ ಈಗ ಅದೇ ‘ಕರುಪ್ಪು’ ತಂಡಕ್ಕೆ ಬಿಸಿ ತುಪ್ಪವಾಗಿದೆ.

ಸಂಗೀತ ಮಾಂತ್ರಿಕ ಇಳಯರಾಜಾ ಅವರು ಹಲವು ಸಿನಿಮಾಗಳ ವಿರುದ್ಧ ಕೃತಿಸ್ವಾಮ್ಯ ಪ್ರಕರಣ ದಾಖಲಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಚರ್ಚೆ ಆಗಿತ್ತು. ಇದನ್ನೇ ಇರಿಸಿಕೊಂಡು ‘ಕರುಪ್ಪು’ ಸಿನಿಮಾನಲ್ಲಿ ವ್ಯಂಗ್ಯದ ಸಂಭಾಷಣೆ ಒಂದನ್ನು ಇರಿಸಲಾಗಿದ್ದು, ಇಳಯರಾಜ ಅಭಿಮಾನಿಗಳು ಈ ವ್ಯಂಗ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಆಕ್ರೋಶ ಹೊರಹಾಕಿದ್ದರು. ಅಭಿಮಾನಿಗಳ ಆಗ್ರಹಕ್ಕೆ ಮಣಿದಿರುವ ‘ಕರುಪ್ಪು’ ಚಿತ್ರತಂಡವು ಅಧಿಕೃತವಾಗಿ ಕ್ಷಮೆಯಾಚಿಸಿದೆ.

ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಿತ್ರತಂಡ ಸಾಮಾಜಿಕ ಮಾಧ್ಯಮಗಳ ಮೂಲಕ ಸುದೀರ್ಘ ಪತ್ರವೊಂದನ್ನು ಹಂಚಿಕೊಂಡು, ‘ನಮ್ಮ ಸಿನಿಮಾದ ಸಂಭಾಷಣೆಯು ಹಿರಿಯ ಸಂಗೀತ ನಿರ್ದೇಶಕರನ್ನು ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ, ಆದರೂ ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾವು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇವೆ’ ಎಂದು ಪ್ರಕಟಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಳಯರಾಜಾ ಅವರು ತಮ್ಮ ಹಳೆಯ ಹಾಡುಗಳನ್ನು ಅನುಮತಿಯಿಲ್ಲದೆ ಕನ್ಸರ್ಟ್‌ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಬಳಸಿಕೊಳ್ಳುವುದರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದನ್ನೇ ಉಲ್ಲೇಖಿಸಿ ‘ಕರುಪ್ಪು’ ಚಿತ್ರದ ದೃಶ್ಯವೊಂದರಲ್ಲಿ ಪಾತ್ರಧಾರಿಗಳು ವ್ಯಂಗ್ಯವಾಗಿ ಸಂಭಾಷಣೆ ನಡೆಸಿದ್ದರು. “ನಾವು ಇಳಯರಾಜಾ ಅವರ ಹಾಡನ್ನು ಸಾರ್ವಜನಿಕವಾಗಿ ಬಳಸಿದರೆ ಅದಕ್ಕೆ ರಾಯಲ್ಟಿ ಅಥವಾ ದಂಡ ಕಟ್ಟಬೇಕಾಗುತ್ತದೆ” ಎಂಬ ಧಾಟಿಯಲ್ಲಿ ಆ ದೃಶ್ಯ ಮೂಡಿಬಂದಿತ್ತು. ಇದು ಇಳಯರಾಜಾ ಅವರ ಕಾನೂನಾತ್ಮಕ ಹಕ್ಕುಗಳ ಹೋರಾಟವನ್ನು ಅಣಕಿಸಿದಂತೆ ಇದೆ ಎಂದು ಅವರ ಬೆಂಬಲಿಗರು ಚಿತ್ರತಂಡದ ವಿರುದ್ಧ ತಿರುಗಿಬಿದ್ದಿದ್ದರು.

ಇದನ್ನೂ ಓದಿ: ‘ಪೆದ್ದಿ’ಯ ಪ್ರೀ ರಿಲೀಸ್ ಇವೆಂಟ್ ಸಿನಿಮಾದಷ್ಟೆ ಅದ್ಧೂರಿ, 150 ಕೋಟಿ ಮೌಲ್ಯದ ಸೆಟಪ್

ತಮ್ಮ ಕ್ಷಮಾಪಣಾ ಪತ್ರದಲ್ಲಿ ‘ಕರುಪ್ಪು’ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರು ಇಳಯರಾಜಾ ಅವರ ಮೇಲಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ. ‘ಇಳಯರಾಜಾ ಅವರು ಭಾರತೀಯ ಚಿತ್ರರಂಗದ ದಂತಕಥೆ. ಅವರ ಸಂಗೀತವನ್ನು ಕೇಳುತ್ತಲೇ ನಾವು ಬೆಳೆದಿದ್ದೇವೆ. ಸಿನಿಮಾದಲ್ಲಿ ಆ ದೃಶ್ಯವನ್ನು ಕೇವಲ ಇಂದಿನ ಪ್ರಚಲಿತ ವಿದ್ಯಮಾನದ ಹಾಸ್ಯಕ್ಕಾಗಿ ಬಳಸಲಾಗಿತ್ತೇ ವಿನಃ, ಅವರ ಸಾಧನೆ ಅಥವಾ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯಾವುದೇ ಉದ್ದೇಶ ನಮಗಿರಲಿಲ್ಲ. ಅವರ ಮೇಲಿನ ಗೌರವ ನಮಗೆ ಎಂದಿಗೂ ಕಡಿಮೆ ಆಗುವುದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾತ್ರವಲ್ಲದೆ ಸಿನಿಮಾದಿಂದ ಆ ದೃಶ್ಯವನ್ನು ತೆಗೆಯುವುದಾಗಿಯೂ ಹೇಳಿದ್ದಾರೆ.

‘ಕರುಪ್ಪು’ ಸಿನಿಮಾನಲ್ಲಿ ಸೂರ್ಯ ಮತ್ತು ತ್ರಿಷಾ ನಟಿಸಿದ್ದು, ಸಿನಿಮಾದ ನಿರ್ದೇಶಕ ಬಾಲಾಜಿ ಸಹ ಪ್ರಮುಖವಾದ ಪಾತ್ರವೊಂದರಲ್ಲಿ ನಟಸಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಸೂರ್ಯಗೆ ‘ಕರುಪ್ಪು’ ಸಿನಿಮಾ ಮರಳಿ ಜೀವದಾನ ನೀಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವತಿಯನ್ನ ಮನೆಗೆ ಕರೆದೊಯ್ದಿದ್ದ ಯುವಕ ಸಿಕ್ಕಿಬಿದ್ದ – Kannada News | Another Love Jihad Case In Hubballi, Muslim youth attacked by right wing activists

ಹುಬ್ಬಳ್ಳಿ (ಮೇ 19): ಛೋಟಾ ಮುಂಬೈ ಎಂದೇ ಖ್ಯಾತಿ ಪಡೆದುಕೊಂಡಿರುವ ಹುಬ್ಬಳ್ಳಿಯಲ್ಲಿ (Hubballi) ಮತ್ತೊಂದು ಲವ್ ಜಿಹಾದ್ ಪ್ರಕರಣ (Love Jihad Case) ಬೆಳಕಿಗೆ ಬಂದಿದೆ. ಸಾಜಿದ್ ಉಣಕಲ್ ಎಂಬ ಯುವಕ ಹಿಂದೂ ಯುವತಿಯ ಬ್ರೈನ್​ವಾಶ್ ಮಾಡಿ ಹುಬ್ಬಳ್ಳಿಯ ಸಾಗರ್ ಕಾಲೋನಿಯಲ್ಲಿರುವ ಮನೆಗೆ ಕರೆದೊಯ್ದ ಮಾದಕವಸ್ತು ನೀಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಬಜರಂಗದಳ, ಹಿಂದೂ ಸಂಘಟನೆ ಕಾರ್ಯಕರ್ತರು ತೆರಳಿ ಯುವಕನಿಗೆ ಥಳಿಸಿ ಯುವತಿಯನ್ನು ಮನೆಗೆ ಕಳುಹಿಸಿದ್ದಾರೆ. ಇನ್ನು ಸಾಜಿದ್ ನನ್ನು ಅಶೋಕ ನಗರ ಠಾಣೆಗೆ ಪೊಲೀಸರ ವಶಕ್ಕೆ ನೀಡಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಆ ಒಂದು ಸಭೆ – Kannada News | Karnataka Power Tussle: Siddaramaiah, DK Shivakumar And Mallikarjun Kharge Holds Meeting In KJ George’s House, here Is Inside Details

ಬೆಂಗಳೂರು, (ಮೇ 19): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ (Karnataka Politics) ಮತ್ತೆ ಪವರ್ ಪಾಲಿಟಿಕ್ಸ್​ ಶುರುವಾಗಿದೆ. ಇಷ್ಟು ದಿನ ರಾಜ್ಯ ರಾಜಕೀಯದಲ್ಲಿ ನಡೀತಿರೋ ಬೆಳವಣಿಗೆ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಪಟ್ಟದ ಮೇಲೆ ಕಣ್ಣಿಟ್ಟು ನಾಯಕರು ತಮ್ಮದೇ ಆದ ತಂತ್ರ, ಪ್ರತಿತಂತ್ರ ಮಾಡ್ತಿದ್ರು. ಆದ್ರೆ ಇದೀಗ ಹೈಕಮಾಂಡ್ ಮಟ್ಟದಲ್ಲಿ ಬೆಳವಣಿಗೆ ಆಗ್ತಿದೆ. ಅದಕ್ಕೆ ಸಾಕ್ಷಿ ಆಗ್ತಿರೋದೇ ನಿನ್ನೆ ಸಚಿವ ಕೆ.ಜೆ.ಜಾರ್ಜ್​ ನಿವಾಸದಲ್ಲಿ ನಡೆದ ಹೈಫ್ರೊಫೈಲ್ ಮೀಟಿಂಗ್. ಹೌದು.. ರಾಜ್ಯದಲ್ಲಿನ ಸಿಎಂ ಕುರ್ಚಿ ಕಿತ್ತಾಟವನ್ನ ಎಲ್ಲೋ ಒಂದ್ಕಡೆ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸ್ತಿದೆ. ನಿನ್ನೆಯಷ್ಟೇ ಕೇರಳ ಸಿಎಂ ವಿ.ಡಿ.ಸತೀಷನ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಘಟಾನುಘಟಿ ನಾಯಕರು ಭಾಗಿ ಆದ್ರು. ಇಡೀ ಹೈಕಮಾಂಡೇ ನಿನ್ನೆ ಕೇರಳದಲ್ಲಿತ್ತು.. ಇದೀಗ ಕೇರಳದಿಂದ ರಾಜ್ಯಕ್ಕೆ ಬರ್ತಿದಂತೆಯೇ ನಿನ್ನೆ (ಮೇ 18) AICCಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೈಫ್ರೊಫೈಲ್ ಮೀಟಿಂಗ್ ಮಾಡಿದ್ದಾರೆ. ಬೆಂಗಳೂರಿನ ಸಚಿವ ಕೆ.ಜೆ.ಜಾರ್ಜ್​ ನಿವಾಸದಲ್ಲಿ ನಾಯಕರು ಅನೌಪಚಾರಿಕ ಮೀಟಿಂಗ್ ಮಾಡಿರೋದಕ್ಕೆ ಫೋಟೋ ಸಾಕ್ಷಿಯೂ ಇದೆ.

ಪಕ್ಷದಲ್ಲಿ ಕೆಲವರು ಆಗ್ರಹ ಮಾಡಿದ್ರು. ಹೈಕಮಾಂಡ್ ಸಮ್ಮುಖದಲ್ಲಿ ಸಿಎಂ, ಡಿಸಿಎಂರನ್ನ ಕರೆದು ಒಂದು ಫೈನಲ್ ಮಾಡಿಬಿಡಿ ಅನ್ನೋ ಆಗ್ರಹವೂ ಇತ್ತು. ನಿನ್ನೆ ನಡೆದ ಸಚಿವ ಕೆ.ಜೆ.ಜಾರ್ಜ್​ ನಿವಾಸದಲ್ಲಿ AICC ಆಧ್ಯಕ್ಷ ಮಲ್ಲಿಕಾರ್ಜುನ ಸಮ್ಮುಖದಲ್ಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮಾತುಕತೆ ಮಾಡಿರೋ ಇನ್​ಸೈಡ್ ಮಾಹಿತಿ ಸಿಕ್ಕಿದೆ. ಜಾರ್ಜ್​ ನಿವಾಸದಲ್ಲಿ ಊಟಕ್ಕೆ ಸೇರಿದ್ದ ನಾಯಕರು ಸಿಎಂ ಕುರ್ಚಿ ವಿಚಾರವೂ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಚಿವ ಜಾರ್ಜ್​ ಯಾಕೆ ಇಲ್ಲಿ ಪ್ರಮುಖ ಆಗ್ತಾರೆ ಅಂದ್ರೆ. ಕಳೆದ ಜನವರಿಯಲ್ಲೇ ದೆಹಲಿಗೆ ಕೆ.ಜೆ.ಜಾರ್ಜ್​ರನ್ನ ರಾಹುಲ್ ಗಾಂಧಿ ಕರೆಸಿ ಮಾತನಾಡಿದ್ರು. ಅಧಿಕಾರ ಹಂಚಿಕೆ ಸೇರಿದಂತೆ ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದಿದ್ರು. ಯಾರು ಪರ ಇದ್ದಾರೆ? ಯಾರು ವಿರೋಧ ಇದ್ದಾರೆ ಎಂದು ಮಾಹಿತಿ ಪಡೆದಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ಫ್ರಿಡ್ಜ್​ನಲ್ಲಿಟ್ಟ ನೀರು ಕುಡಿದರೆ ಏನಾಗುತ್ತದೆ? – Kannada News | Health Tips in Kannada is it Good for Drinking Fridge Water during Summer

ನವದೆಹಲಿ, ಮೇ 19: ಬೇಸಿಗೆ ಬಂದಿದೆ… ಅನೇಕ ಜನರು ಸಾಮಾನ್ಯ ನೀರಿಗಿಂತ ಫ್ರಿಡ್ಜ್‌ನಲ್ಲಿ ಇಟ್ಟ ತಣ್ಣೀರು ಕುಡಿಯಲು ಬಯಸುತ್ತಾರೆ. ಆದರೆ, ಈ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ, ವಿಶೇಷವಾಗಿ ನಿಮ್ಮ ಹೊಟ್ಟೆಗೆ ಎಷ್ಟು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ವೈದ್ಯಕೀಯ ತಜ್ಞರ ಪ್ರಕಾರ, ನಿರಂತರವಾಗಿ ರೆಫ್ರಿಜರೇಟರ್‌ನಲ್ಲಿಟ್ಟ ನೀರನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗಬಹುದು. ಫ್ರಿಡ್ಜ್​ನಲ್ಲಿಟ್ಟ ನೀರಿನಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲಿದೆ.

ಜೀರ್ಣಕ್ರಿಯೆಯ ಮೇಲೆ ತೀವ್ರ ಪರಿಣಾಮ:

ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಒಂದು ನಿರ್ದಿಷ್ಟ ಆಂತರಿಕ ತಾಪಮಾನದ ಅಗತ್ಯವಿದೆ. ನಾವು ಸೇವಿಸುವ ಆಹಾರವನ್ನು ಜೀರ್ಣಿಸಿಕೊಳ್ಳಲು ಹೊಟ್ಟೆಯು ಜೀರ್ಣಕಾರಿ ರಸವನ್ನು ಉತ್ಪಾದಿಸುತ್ತದೆ. ಆದರೆ, ನಾವು ಐಸ್ ನೀರನ್ನು ಕುಡಿದ ತಕ್ಷಣ ಶೀತವು ಜೀರ್ಣಕಾರಿ ರಸಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ, ಇದು ಜೀರ್ಣಾಂಗ ವ್ಯವಸ್ಥೆಗೆ ರಕ್ತದ ಹರಿವನ್ನು ನಿಧಾನಗೊಳಿಸುತ್ತದೆ. ಇದರ ಪರಿಣಾಮವಾಗಿ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ, ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಎಸಿಡಿಟಿ ಉಂಟಾಗುತ್ತದೆ.

ಇದನ್ನೂ ಓದಿ: Meditation Benefits: ಪ್ರತಿದಿನ 10 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ಏನಾಗುತ್ತದೆ ಗೊತ್ತಾ?

ಮಲಬದ್ಧತೆ ಮತ್ತು ಕೊಬ್ಬಿನ ಶೇಖರಣೆ:

ನಾವು ಸೇವಿಸುವ ಆಹಾರದಲ್ಲಿರುವ ಎಣ್ಣೆ ಮತ್ತು ಕೊಬ್ಬುಗಳು ತಣ್ಣೀರಿನ ಸಂಪರ್ಕಕ್ಕೆ ಬಂದಾಗ ಹೆಪ್ಪುಗಟ್ಟುತ್ತವೆ. ಇದು ಕರುಳಿನ ಒಳಗಿನ ಗೋಡೆಗಳನ್ನು ಗಟ್ಟಿಯಾಗಿಸುತ್ತದೆ, ಮಲವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ಇದು ದೀರ್ಘಕಾಲದ ಮಲಬದ್ಧತೆಗೆ ಕಾರಣವಾಗುತ್ತದೆ. ಇದಲ್ಲದೆ, ತಣ್ಣೀರು ದೇಹದಲ್ಲಿನ ಕೊಬ್ಬನ್ನು ಕರಗಿಸುವುದನ್ನು ತಡೆಯುತ್ತದೆ, ಇದು ತೂಕ ಹೆಚ್ಚಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಹೃದಯದ ಬಡಿತವನ್ನು ನಿಧಾನಗೊಳಿಸುತ್ತದೆ:

ವೇಗಸ್ ನರವು ನಮ್ಮ ಮೆದುಳು ಮತ್ತು ಹೊಟ್ಟೆಯನ್ನು ಸಂಪರ್ಕಿಸುವ ಪ್ರಮುಖ ನರವಾಗಿದೆ. ನಾವು ತುಂಬಾ ತಣ್ಣನೆಯ ನೀರನ್ನು ಕುಡಿಯುವಾಗ, ಈ ನರವು ತೀವ್ರ ಒತ್ತಡಕ್ಕೆ ಒಳಗಾಗುತ್ತದೆ. ಇದು ಹೃದಯ ಬಡಿತದಲ್ಲಿ ಹಠಾತ್ ಇಳಿಕೆಗೆ ಕಾರಣವಾಗಬಹುದು ಎಂದು ಸಂಶೋಧನೆ ತೋರಿಸಿದೆ. ಇದರೊಂದಿಗೆ, ಗಂಟಲು ನೋವು, ಟಾನ್ಸಿಲ್ ಮತ್ತು ಶೀತಗಳಂತಹ ಉಸಿರಾಟದ ತೊಂದರೆಗಳು ಸಹ ಸಂಭವಿಸುತ್ತವೆ.

ಗಂಟಲು ನೋವು:

ಫ್ರಿಡ್ಜ್ ನೀರನ್ನು ನೇರವಾಗಿ ಕುಡಿಯುವುದರಿಂದ ಗಂಟಲಿನಲ್ಲಿ ಕಫ ದಪ್ಪವಾಗುತ್ತದೆ. ಇದು ಉಸಿರಾಟದ ಮಾರ್ಗವನ್ನು ನಿರ್ಬಂಧಿಸಿ ಗಂಟಲು ನೋವು, ಕೆಮ್ಮು ಮತ್ತು ಸೈನಸ್ ಅಥವಾ ಗಂಟಲಿನ ಇನ್ಫೆಕ್ಷನ್‌ಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಜಪಾನಿಯರಂತೆ ಆರೋಗ್ಯಕರವಾಗಿ ಜೀವನ ನಡೆಸಲು ಈ ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ತಲೆನೋವು ಅಥವಾ ಬ್ರೈನ್ ಫ್ರೀಜ್:

ತುಂಬಾ ತಣ್ಣಗಿರುವ ನೀರನ್ನು ಕುಡಿದ ತಕ್ಷಣ ಕೆಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಬ್ರೈನ್ ಫ್ರೀಜ್’ ಎನ್ನಲಾಗುತ್ತದೆ. ಇದು ಮೆದುಳಿನ ಸೂಕ್ಷ್ಮ ನರಗಳನ್ನು ತಂಪಾಗಿಸಿ, ತಲೆಯ ಹಿಂಭಾಗ ಅಥವಾ ಮುಂಭಾಗದಲ್ಲಿ ತೀಕ್ಷ್ಣವಾದ ನೋವನ್ನು ಉಂಟುಮಾಡಬಹುದು.

ಹಲ್ಲಿನ ಸೆನ್ಸಿಟಿವಿಟಿ:

ಹಲ್ಲುಗಳು ದುರ್ಬಲವಾಗಿದ್ದರೆ ಅಥವಾ ಹಲ್ಲಿನ ಎನಾಮೆಲ್ ಸವೆದುಹೋಗಿದ್ದರೆ, ಫ್ರಿಡ್ಜ್ ನೀರು ಕುಡಿದ ತಕ್ಷಣ ಹಲ್ಲುಗಳಲ್ಲಿ ಜುಮ್ಮೆನಿಸುವಿಕೆ ಮತ್ತು ಹಲ್ಲು ನೋವು ಉಂಟಾಗಬಹುದು.

ತಜ್ಞರ ಪ್ರಕಾರ, ನಿಮ್ಮ ಬಾಯಾರಿಕೆಯನ್ನು ನೀಗಿಸಲು ರೆಫ್ರಿಜರೇಟರ್‌ನಲ್ಲಿಟ್ಟ ನೀರಿನ ಬದಲು ಮಣ್ಣಿನ ಪಾತ್ರೆಯಲ್ಲಿ ಇಟ್ಟ ನೀರನ್ನು ಕುಡಿಯುವುದು ಉತ್ತಮ. ಮಣ್ಣಿನ ಪಾತ್ರೆಯ ನೀರು ನಿಮ್ಮನ್ನು ನೈಸರ್ಗಿಕವಾಗಿ ತಂಪಾಗಿಸುವುದಲ್ಲದೆ, ದೇಹಕ್ಕೆ ಅಗತ್ಯವಾದ ಖನಿಜಗಳನ್ನು ಒದಗಿಸುತ್ತದೆ ಮತ್ತು ನಿಮ್ಮನ್ನು ಆರೋಗ್ಯವಾಗಿಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದೇಪದೇ ಓಆರ್‌ಎಸ್ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಈ ವಿಷಯ ತಿಳಿದುಕೊಳ್ಳುವುದನ್ನು ಮರೆಯಬೇಡಿ – Kannada News | ORS Water Daily Benefits And Risks: Who Should Avoid Drinking It Regularly

ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ತೀವ್ರ ಬಿಸಿಲಿರುವ ಹಿನ್ನೆಲೆಯಲ್ಲಿ ಆರೋಗ್ಯ ಕಾಪಾಡುವುದು ದೊಡ್ಡ ಸಾಹಸವಾಗಿದೆ. ಈ ಸಮಯದಲ್ಲಿ ಬಿಸಿಲಿನಿಂದ ದೇಹವನ್ನು ಹೈಡ್ರೇಟ್‌ ಇಡಲು ಜನರು ಓಆರ್‌ಎಸ್ (ORS) ಮೊರೆ ಹೋಗುತ್ತಿದ್ದಾರೆ. ಕೆಲವರು ದಿನಪೂರ್ತಿ ನೀರಿನ ಬಾಟಲಿಯಲ್ಲಿ ಓಆರ್‌ಎಸ್ ಮಿಶ್ರಣವನ್ನು ತುಂಬಿಕೊಂಡು ಕುಡಿಯುವ ಅಭ್ಯಾಸವನ್ನೂ ಮಾಡಿಕೊಂಡಿರುತ್ತಾರೆ. ಆದರೆ ಪ್ರತಿದಿನ ಅದರಲ್ಲಿಯೂ ಪದೇಪದೇ ಓಆರ್‌ಎಸ್ ಕುಡಿಯುವುದು ಎಲ್ಲರಿಗೂ ಸೂಕ್ತವೇ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಬಗ್ಗೆ ದೆಹಲಿ ಸಫ್ದರ್ಜಂಗ್ ಆಸ್ಪತ್ರೆಗೆ ಸೇರಿದ ಹಿರಿಯ ವೈದ್ಯ ಡಾ. ದೀಪಕ್ ಸುಮನ್ ಅವರು ಕೆಲವು ಮಾಹಿತಿ ಹೆಂಚಿಕೊಂಡಿದ್ದು, ಬೇಸಿಗೆಯಲ್ಲಿ ಓಆರ್‌ಎಸ್ ದೇಹದಲ್ಲಿ ಉಂಟಾಗುವ ನೀರಿನ ಕೊರತೆಯನ್ನು ಕಡಿಮೆ ಮಾಡುವುದರ ಜೊತೆಗೆ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಲು ಸಹಾಯಕವಾಗುತ್ತದೆ ಎಂದಿದ್ದಾರೆ. ಹಾಗಾದರೆ ಯಾರು ಓಆರ್‌ಎಸ್ ಕುಡಿಯಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು ಎಂಬುದನ್ನು ತಿಳಿದುಕೊಳ್ಳಿ.

ಡಾ. ದೀಪಕ್ ಸುಮನ್ ಹೇಳುವ ಪ್ರಕಾರ, ಓಆರ್‌ಎಸ್ ನಲ್ಲಿ ಸೋಡಿಯಂ, ಪೊಟ್ಯಾಶಿಯಂ ಮತ್ತು ಗ್ಲೂಕೋಸ್ ಇರುವುದರಿಂದ ಡಿಹೈಡ್ರೇಶನ್‌ ಆದಾಗ ದೇಹ ಶೀಘ್ರ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಯಾವುದೇ ಆಗಲಿ ಮಿತಿಯಲ್ಲಿ ಸೇವಿಸುವುದು ಒಳ್ಳೆಯದು ಎಂದು ಎಚ್ಚರಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಓಆರ್‌ಎಸ್ ಕುಡಿಯುವುದರಿಂದ ದೇಹಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಇದರಲ್ಲಿ ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಇರುವುದರಿಂದ ಅತಿಯಾಗಿ ಕುಡಿಯುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಮಕ್ಕಳಲ್ಲಿ ಡಿಹೈಡ್ರೇಶನ್ ಆಗಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಇದನ್ನು ತಡೆಗಟ್ಟಲು ಇಲ್ಲಿದೆ ಸಲಹೆ

ಯಾರಿಗೆ ಓಆರ್‌ಎಸ್ ಅಗತ್ಯ?

ತೀವ್ರ ಬಿಸಿಲಿನಲ್ಲಿ ಹೆಚ್ಚು ಸಮಯ ಕೆಲಸ ಮಾಡುವವರು, ಫೀಲ್ಡ್ ವರ್ಕ್ ಮಾಡುವವರು, ಮಕ್ಕಳು ಮತ್ತು ವೃದ್ಧರಲ್ಲಿ ಡಿಹೈಡ್ರೇಶನ್ ಕಂಡುಬಂದರೆ ಓಆರ್‌ಎಸ್ ಉಪಯುಕ್ತವಾಗಿದೆ. ಜೊತೆಗೆ ಅತಿಸಾರ ಅಥವಾ ಲೂಸ್ ಮೋಶನ್ ಸಮಸ್ಯೆ ಇದ್ದಾಗ ವೈದ್ಯರ ಸಲಹೆಯಂತೆ ಓಆರ್‌ಎಸ್ ಸೇವಿಸುವುದು ಉತ್ತಮ.

ಎಲ್ಲರೂ ಓಆರ್‌ಎಸ್ ಕುಡಿಯಬೇಕೇ?

ವೈದ್ಯರ ಪ್ರಕಾರ, ಸಾಮಾನ್ಯವಾಗಿ ಸಾಕಷ್ಟು ನೀರು ಕುಡಿಯುತ್ತಿರುವ ಮತ್ತು ಡಿಹೈಡ್ರೇಶನ್ ಇಲ್ಲದ ವ್ಯಕ್ತಿಗಳಿಗೆ ಪದೇಪದೇ ಓಆರ್‌ಎಸ್ ಕುಡಿಯುವ ಅಗತ್ಯವಿಲ್ಲ. ಹೆಚ್ಚು ಓಆರ್‌ಎಸ್ ಸೇವಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಬಹುದು. ಇದಲ್ಲದೆ ಉಪ್ಪಿನ ಪ್ರಮಾಣ ಹೆಚ್ಚಿರುವುದರಿಂದ ಹೈ ಬಿಪಿ ರೋಗಿಗಳಿಗೆ ಸಮಸ್ಯೆಯಾಗಬಹುದು. ಅತಿಯಾದ ಸೇವನೆಯಿಂದ ದೇಹದ ಎಲೆಕ್ಟ್ರೋಲೈಟ್ ಸಮತೋಲನ ಹಾಳಾಗಿ ಕಿಡ್ನಿಗೆ ಹಾನಿಯಾಗುವ ಸಾಧ್ಯತೆಯೂ ಇದೆ. ಅದರಲ್ಲಿಯೂ ಕಿಡ್ನಿ ಸಂಬಂಧಿತ ಸಮಸ್ಯೆ ಇರುವವರು, ಹೈ ಬ್ಲಡ್ ಪ್ರೆಶರ್ ಇರುವವರು, ಹೃದಯ ರೋಗಿಗಳು, ಡಯಾಬಿಟೀಸ್ ಇರುವವರು ಇದರಿಂದ ಆದಷ್ಟು ದೂರವಿರುವುದೇ ಒಳ್ಳೆಯದು. ಬೇಸಿಗೆಯಲ್ಲಿ ಸಾಮಾನ್ಯವಾಗಿ ಸಾಕಷ್ಟು ನೀರು, ಮಜ್ಜಿಗೆ, ಎಳನೀರು ಮತ್ತು ತಾಜಾ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರ ಆಯ್ಕೆಯಾಗಿದೆ. ಓಆರ್‌ಎಸ್ ಅನ್ನು ಅಗತ್ಯವಿದ್ದಾಗ ಮಾತ್ರ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಸುರಕ್ಷಿತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link