ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಅಂದ್ರೆ ತಕ್ಷಣ ನೆನಪಾಗೋದು ಅವರ ಲವರ್ ಬಾಯ್ ಇಮೇಜ್. ಆದರೆ, ಅವರ ಮುಂದಿನ ಬಹುನಿರೀಕ್ಷಿತ ಪೌರಾಣಿಕ ಥ್ರಿಲ್ಲರ್ ‘ವೃಷಕರ್ಮ’ (Vrushakarma) ಸಿನಿಮಾಗಾಗಿ ಅವರು ಮಾಡಿಕೊಂಡಿರುವ ದೈಹಿಕ ಬದಲಾವಣೆ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಇತ್ತೀಚೆಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಈಗ ವೈರಲ್ ಆಗಿವೆ. ಜನರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಸಿಕ್ಸ್ ಪ್ಯಾಕ್ (Six Pack) ಅವತಾರದಲ್ಲಿ ನಾಗ ಚೈತನ್ಯ ಮಿಂಚುತ್ತಿದ್ದಾರೆ. ಅಭಿಮಾನಿಗಳಿಗೆ ಈ ಲುಕ್ ಇಷ್ಟ ಆಗಿದೆ.
ಯಾವಾಗಲೂ ಸೌಮ್ಯ ಸ್ವಭಾವದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಾಗ ಚೈತನ್ಯ, ಈ ಬಾರಿ ಮಸಲ್ ಬೆಳೆಸಿ, ದಪ್ಪ ಗಡ್ಡ ಮತ್ತು ಬೇರೆ ಹೇರ್ ಸ್ಟೈಲ್ ಮೂಲಕ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ವರ್ಕ್‌ಔಟ್ ಫೋಟೋ ಹಂಚಿಕೊಂಡಿರುವ ಅವರು, ಕೈಯಲ್ಲಿ ಡಂಬ್ಬೆಲ್ಸ್ ಹಿಡಿದು ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ್ದಾರೆ. ‘ವೃಷಕರ್ಮ’ ಚಿತ್ರದಲ್ಲಿ ಅವರು ನಿಧಿ ಶೋಧಕನ ಪಾತ್ರದಲ್ಲಿ ನಟಿಸುತ್ತಿದ್ದು, ಈ ಲುಕ್ ಪಾತ್ರಕ್ಕೆ ಪೂರಕವಾಗಿದೆ.
ತಮ್ಮ ಬದಲಾವಣೆಯ ಬಗ್ಗೆ ಮಾತನಾಡಿರುವ ನಾಗ ಚೈತನ್ಯ, ‘ವೃಷಕರ್ಮ ಚಿತ್ರದಲ್ಲಿ ನಾನು ನಿಧಿ ಹುಡುಕುವ ಸಾಹಸಿಯ ಪಾತ್ರ ಮಾಡುತ್ತಿದ್ದೇನೆ. ನಿರ್ದೇಶಕರು ಮತ್ತು ನಾನು ಚರ್ಚಿಸಿ, ಈ ಪಾತ್ರಕ್ಕೆ ಅಥ್ಲೆಟಿಕ್ ಬಾಡಿ ಇರಬೇಕು ಎಂದು ನಿರ್ಧರಿಸಿದೆವು. ಇದಕ್ಕಾಗಿ ಸ್ಟ್ರೆಂತ್ ಟ್ರೇನಿಂಗ್, ಈಜು ಮತ್ತು ಯೋಗ ಒಳಗೊಂಡ ವಿಶೇಷ ವರ್ಕ್‌ಔಟ್ ಮಾಡಿದ್ದೇನೆ. ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಕಟ್ಟುನಿಟ್ಟಾದ ಆಹಾರ ಕ್ರಮ ಪಾಲಿಸಿದ್ದೇನೆ’ ಎಂದಿದ್ದಾರೆ. ಫಿಟ್ನೆಸ್ ಟ್ರೇನರ್ ಅರುಣವ ಭಟ್ಟಾಚಾರ್ಯ ಕೂಡ ಚೈತನ್ಯ ಅವರ ಶ್ರಮವನ್ನು ಶ್ಲಾಘಿಸಿದ್ದಾರೆ.
‘ವಿರೂಪಾಕ್ಷ’ ಖ್ಯಾತಿಯ ಕಾರ್ತಿಕ್ ನಿರ್ದೇಶನ ಮಾಡಿರುವ ‘ವೃಷಕರ್ಮ’ ಚಿತ್ರವು ದೊಡ್ಡ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಚಿತ್ರದಲ್ಲಿ ನಾಗ ಚೈತನ್ಯ ಅವರಿಗೆ ಜೋಡಿಯಾಗಿ ಮೀನಾಕ್ಷಿ ಚೌಧರಿ ನಟಿಸುತ್ತಿದ್ದಾರೆ. ಉಳಿದಂತೆ ಜಯರಾಮ್, ಸತ್ಯ ಅಕ್ಕಲ ಮತ್ತು ಸ್ಪರ್ಶ್ ಶ್ರೀವಾಸ್ತವ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮಾರ್ಚ್ 20ರಂದು ಈ ಸಿನಿಮಾ ಅದ್ದೂರಿಯಾಗಿ ತೆರೆಕಾಣಲಿದೆ.
ನಾಗ ಚೈತನ್ಯ ಅವರ ಈ ಹೊಸ ಫೋಟೋ ನೋಡಿದ ಅಭಿಮಾನಿಗಳು, ‘ಇದು ನಿಮ್ಮ ಎರಡನೇ ಇನಿಂಗ್ಸ್’ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸಿಕ್ಸ್ ಪ್ಯಾಕ್ ಅವತಾರದಿಂದಾಗಿ ‘ವೃಷಕರ್ಮ’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುವಂತಾಗಿದೆ.
ಈ ಮನುಷ್ಯರು ತಮ್ಮವರನ್ನು ಬಿಡಿ, ಅಪರಿಚಿತರನ್ನು ಯಾಮಾರಿಸುವುದರಲ್ಲಿ ಬುದ್ಧಿವಂತರು ಅಂದುಕೊಳ್ತೇವೆ. ಆದರೆ ಈ ದೃಶ್ಯ ನೋಡಿದ ಮೇಲೆ ಈ ಶ್ವಾನವು (dog) ಕೂಡ ಯಾಮಾರಿಸೋದ್ರಲ್ಲಿ ಯಾರಿಗೂ ಕಡಿಮೆ ಇಲ್ಲ ಎಂದೆನಿಸುತ್ತದೆ. ಅದಲ್ಲದೇ, ಈ ಹಸಿವು ಅನ್ನುವುದು ಎಂತಹ ಕೆಲಸಕ್ಕೂ ಕೈ ಹಾಕುವಂತೆ ಮಾಡುತ್ತದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಶ್ವಾನವೊಂದು ಹಸಿವಿನಿಂದಾಗಿ ಹೊಟ್ಟೆ ತುಂಬಿಸಿಕೊಳ್ಳಲು ತನ್ನ ಎರಡು ಕಾಲು ಸ್ವಾಧೀನ ಕಳೆದುಕೊಂಡಂತೆ ನಟಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಶಾಕ್ ಆಗಿದ್ದಾರೆ.
D Ghosh ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಆಹಾರ ಗಿಟ್ಟಿಸಿಕೊಳ್ಳಲು ನಾಯಿಯೊಂದು ನಟನೆ ಮಾಡಿದ ರೀತಿಯನ್ನು ನೋಡಬಹುದು. ಹೌದು, ಫುಡ್ ಸ್ಟಾಲ್ ಮುಂಭಾಗದಲ್ಲಿ ಕಾಲೆರಡು ಸ್ವಾಧೀನ ಕಳೆದುಕೊಂಡ ಶ್ವಾನವೊಂದು ಬಂದು ಕುಳಿತಿದೆ. ತನ್ನ ಕಾಲನ್ನು ಎಳೆದುಕೊಂಡು ಹೋಗುತ್ತಿದ್ದ ಶ್ವಾನವನ್ನು ಕಂಡ ಸ್ಟಾಲ್ ಮಾಲೀಕಳು ಅದಕ್ಕೆ ತಿಂಡಿ ಹಾಕಿದ್ದಾಳೆ. ಹೊಟ್ಟೆ ತುಂಬಿಸಿಕೊಂಡ ಈ ಶ್ವಾನವು ಏನು ಆಗಿಲ್ಲವೆಂಬಂತೆ ನಾಲ್ಕು ಕಾಲುಗಳಲ್ಲಿ ನಡೆದುಕೊಂಡು ಹೋಗಿದೆ. ಈ ನಾಯಿಯ ಆಕ್ಟಿಂಗ್ ಕಂಡು ಅಲ್ಲೇ ಇದ್ದವರು ಶಾಕ್ ಆಗಿದ್ದು ಜೋರಾಗಿ ನಕ್ಕಿದ್ದಾರೆ.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ಶ್ವಾನದ ಆಕ್ಟಿಂಗ್ ಮೆಚ್ಚಲೇ ಬೇಕು ಎಂದಿದ್ದಾರೆ. ಮತ್ತೊಬ್ಬರು, ಒಂದು ಕ್ಷಣ ತಲೆ ಗ್ರಿರ್ ಅಂತು ಎಂದು ಹೇಳಿದ್ದಾರೆ. ಇನ್ನೊಬ್ಬರು, ಎಷ್ಟು ಬುದ್ಧಿವಂತ ಪ್ರಾಣಿಯಿದು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೆಟ್ಟಿಲು ಏರಿ ಮೇಲೆ ಹೋಗುವಾಗ ಅಥವಾ ಸ್ವಲ್ಪ ದೂರ ನಡೆದು ಹೋದಾಗ ಹೃದಯ ಬಡಿತ (Heart Beats) ಹೆಚ್ಚಾಗುವುದು ಸಾಮಾನ್ಯವೆಂದು ಕೆಲವರು ಭಾವಿಸುತ್ತಾರೆ. ಆದರೆ ಕೆಲವರು ಸ್ವಲ್ಪ ದೂರ ನಡೆದರೂ ಉಸಿರಾಟ ಹೆಚ್ಚಾಗಿ ಹೃದಯ ಬಡಿತ ವೇಗವಾಗುತ್ತದೆ. ಇದನ್ನು ಕೆಲವರು ಉಸಿರಾಟದ ಸಮಸ್ಯೆ ಎಂದುಕೊಳ್ಳುತ್ತಾರೆ, ಇನ್ನೂ ಕೆಲವರು ಹೃದಯ ಸಂಬಂಧಿತ ಸಮಸ್ಯೆಯೆಂದು ಭಾವಿಸಿ ಚಿಕಿತ್ಸೆ ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಪ್ರತಿಯೊಬ್ಬರಲ್ಲಿಯೂ ಹೃದಯ ಬಡಿತ ಹೆಚ್ಚಾಗುವುದು ಕೇವಲ ದೈಹಿಕ ಸಮಸ್ಯೆಯೇನಾ, ಅಥವಾ ಇದಕ್ಕೆ ಮಾನಸಿಕ ಆರೋಗ್ಯದ ಸಂಬಂಧವೂ ಇದೆಯೇ ಎಂಬುದರ ಕುರಿತ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.
ದಿಲ್ಲಿಯ ರಾಜೀವ್ ಗಾಂಧಿ ಆಸ್ಪತ್ರೆಗೆ ಸೇರಿದ ಕಾರ್ಡಿಯಾಲಜಿ ವಿಭಾಗದ ಹೆಚ್ಚುವರಿ ಪ್ರೊಫೆಸರ್ ಡಾ. ಅಜಿತ್ ಜೈನ್ ಹೇಳುವ ಪ್ರಕಾರ, ಮೆಟ್ಟಿಲು ಏರಿದಾಗ ಹೃದಯ ಬಡಿತ ತುಂಬಾ ವೇಗಗೊಂಡು ಉಸಿರಾಟವೂ ಹೆಚ್ಚಾದರೆ ಅದು ಹೃದಯ ಸಂಬಂಧಿತ ಸಮಸ್ಯೆಯ ಸೂಚನೆಯಾಗಿರಬಹುದು. ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ ಆದಾಗ ಹೃದಯಕ್ಕೆ ಸಮರ್ಪಕವಾಗಿ ಆಮ್ಲಜನಕ ದೊರೆಯುವುದಿಲ್ಲ. ಇದರಿಂದ ಹೃದಯ ಹೆಚ್ಚು ಕೆಲಸ ಮಾಡಬೇಕಾಗಿ ಬರುತ್ತದೆ ಮತ್ತು ಪರಿಣಾಮವಾಗಿ ಉಸಿರಾಟ ಹೆಚ್ಚಾಗುತ್ತದೆ. ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ಹೇಳಿದ್ದಾರೆ.
ಕೆಲವೊಮ್ಮೆ ಹೃದಯ ಬಡಿತ ವೇಗವಾಗುವುದಕ್ಕೆ ಆತಂಕ ಅಥವಾ ಮಾನಸಿಕ ಒತ್ತಡವೂ ಕಾರಣವಾಗಬಹುದು. ಉದಾಹರಣೆಗೆ, ಯಾವುದಾದರೂ ಸ್ಥಳಕ್ಕೆ ಹೋಗುವ ಮೊದಲು ಭಯ ಅಥವಾ ಗಾಬರಿ ಆಗುವುದು, ಕಚೇರಿಯ ಸಭೆಗೂ ಮುನ್ನ ಹೃದಯ ಬಡಿತ ಹೆಚ್ಚಾಗುವುದು ಅಥವಾ ಸದಾ ಯಾವುದಾದರೂ ವಿಷಯದ ಬಗ್ಗೆ ಚಿಂತಿಸುವುದು ಇವು ಮಾನಸಿಕ ಆರೋಗ್ಯ ಸಮಸ್ಯೆಯ ಲಕ್ಷಣಗಳಾಗಿರಬಹುದು. ಇಂತಹ ಸಂದರ್ಭಗಳಲ್ಲಿ ಮನೋವೈದ್ಯರನ್ನು ಸಂಪರ್ಕಿಸುವುದು ಒಳಿತು. ಕೆಲವರ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದರೂ ಹೃದಯ ಬಡಿತ ಹೆಚ್ಚಾಗಬಹುದು. ಇದನ್ನು ಅನಿಮಿಯಾ ಎಂದು ಕರೆಯುತ್ತಾರೆ. ಇದರ ಜೊತೆಗೆ ಥೈರಾಯ್ಡ್ ಸಮಸ್ಯೆಯಲ್ಲಿಯೂ ಹೃದಯದ ಬಡಿತ ವೇಗವಾಗಬಹುದು ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ.
ತಡೆಗಟ್ಟಲು ಏನು ಮಾಡಬೇಕು?
ಪ್ರತಿದಿನ ಕನಿಷ್ಠ 30 ನಿಮಿಷ ನಡೆದು ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರ ಸೇವಿಸುವುದು, ಯೋಗ ಅಥವಾ ಧ್ಯಾನ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ.
ತೆಲುಗು ಚಿತ್ರರಂಗದ (Tollywood) ಜನಪ್ರಿಯ ಹಿರಿಯ ನಟ, ಪದ್ಮಶ್ರೀ ಪ್ರಶಸ್ತಿ ವಿಜೇತ ರಾಜೇಂದ್ರ ಪ್ರಸಾದ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ತಮಿಳಿನ ಸೂಪರ್ ಸ್ಟಾರ್ ನಟ ಮತ್ತು ಮಾಜಿ ಸಿಎಂ ಸಹ ಆಗಿರುವ ಎಂಜಿಆರ್ ಬಗ್ಗೆ ತೀರ ತುಚ್ಛವಾಗಿ ಮಾತನಾಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಇದೀಗ ತಮಿಳಿನ ಕೆಲವು ನಟರು, ಸ್ಟಾರ್ ನಟರುಗಳು ಇದನ್ನು ತೀವ್ರವಾಗಿ ಖಂಡಿಸಿದ್ದು, ರಾಜೇಂದ್ರ ಪ್ರಸಾದ್ ಕೂಡಲೇ ಕ್ಷಮೆ ಕೇಳಬೇಕು ಎಂದಿದ್ದಾರೆ.
ತೆಲುಗಿನ ಹಿರಿಯ ನಟ ಕಾಂತಾರಾವ್ ಅವರ ಗೌರವಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ರಾಜೇಂದ್ರ ಪ್ರಸಾದ್, ಕಾಂತಾರಾವ್ ಅವರನ್ನು ಕೊಂಡಾಡುತ್ತಾ, ‘ಕಾಂತಾರಾವ್ ಅವರ ನಟನೆ ಮತ್ತು ಕ್ರೇಜ್ ನೋಡಿ ಅಂದಿನ ತಮಿಳು ಸೂಪರ್ ಸ್ಟಾರ್, ಮಾಜಿ ಸಿಎಂ ಸಹ ಆಗಿದ್ದ ಎಂಜಿಆರ್ ಅವರೇ ಹೆದರಿ ಮೂತ್ರ ವಿಸರ್ಜೆ ಮಾಡಿಕೊಳ್ಳುತ್ತಿದ್ದರು’ ಎಂದಿದ್ದರು. ತಮ್ಮ ಭಾಷಣದಲ್ಲಿ ಅನವಶ್ಯಕವಾಗಿ ಅವರು ಎಂಜಿಆರ್ ಅವರಿಗೆ ಅವಮಾನಕಾರ ಪದಗಳನ್ನು ಬಳಸಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ವಿವಾದಕ್ಕೆ ಕಾರಣವಾಯ್ತು.
ಇದೀಗ ತಮಿಳಿನ ಹಲವು ನಟರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತೀಯ ಕಲಾವಿದರ ಸಂಘದ (SIAA) ಪ್ರಧಾನ ಕಾರ್ಯದರ್ಶಿ ಹಾಗೂ ನಟ ವಿಶಾಲ್ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರ ಹೇಳಿಕೆ ಕೇಳಿ ಆಘಾತವಾಗಿದೆ. ಒಬ್ಬ ನಟ ಮತ್ತೊಬ್ಬ ನಟನನ್ನು ಹೊಗಳುವುದು ಒಳ್ಳೆಯದು, ಆದರೆ ಇನ್ನೊಬ್ಬ ದಂತಕಥೆಯನ್ನು ಕೀಳಾಗಿ ಕಾಣುವುದು ಸರಿಯಲ್ಲ. ಎಂಜಿಆರ್ ಅವರು ಕೇವಲ ನಟರಲ್ಲ, ತಮಿಳುನಾಡಿನ ಶ್ರೇಷ್ಠ ನಾಯಕ. ನಿಮ್ಮ ಹೇಳಿಕೆ ನಮ್ಮ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ದಯವಿಟ್ಟು ಇದಕ್ಕೆ ಕ್ಷಮೆಯಾಚಿಸಿ ಈ ವಿವಾದಕ್ಕೆ ತೆರೆ ಎಳೆಯಿರಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ತಮಿಳುನಾಡಿನ ನಟರ ಸಂಘದ ಅಧ್ಯಕ್ಷ ನಾಸರ್ ಕೂಡ ವಿಡಿಯೋ ಸಂದೇಶದ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರಾಜೇಂದ್ರ ಪ್ರಸಾದ್ ಅವರೇ, ನೀವು ಕಾಂತಾರಾವ್ ಅವರನ್ನು ಹೊಗಳಿದ್ದು ಕೇಳಿ ಖುಷಿಯಾಯಿತು. ಆದರೆ ಎಂಜಿಆರ್ ಅವರ ಬಗ್ಗೆ ನೀವು ಮಾಡಿದ ಹೋಲಿಕೆ ನನಗೆ ನೋವು ತಂದಿದೆ. ಕೇವಲ ತಮಿಳರಿಗಷ್ಟೇ ಅಲ್ಲ, ತೆಲುಗು ಚಿತ್ರರಂಗದ ನಿಮ್ಮ ಕೆಲವು ಸಹೋದ್ಯೋಗಿಗಳಿಗೂ ಇದು ಇಷ್ಟವಾಗಿಲ್ಲ. ಎಂಜಿಆರ್ ಅವರು ಎನ್.ಟಿ.ಆರ್ ಅವರ ಆಪ್ತರಾಗಿದ್ದರು. ಯಾವುದೇ ರಾಜಕೀಯವಿಲ್ಲದೆ ನಾವು ಅವರನ್ನು ಗೌರವಿಸುತ್ತೇವೆ. ದಯವಿಟ್ಟು ಹೃದಯಪೂರ್ವಕವಾಗಿ ಕ್ಷಮೆಯಾಚಿಸಿ’ ಎಂದು ಮನವಿ ಮಾಡಿದ್ದಾರೆ.
ತಮಿಳು ಚಿತ್ರರಂಗದ ಇತರೆ ಕೆಲವು ನಟರು, ಚಿತ್ರರಂಗಕ್ಕೆ ಸಂಬಂಧಿಸಿದವರು ಸಹ ರಾಜೇಂದ್ರ ಪ್ರಸಾದ್ ಅವರು ಎಂಜಿಆರ್ ಬಗ್ಗೆ ಆಡಿರುವ ಮಾತುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ರಾಜೇಂದ್ರ ಪ್ರಸಾದ್ ಅವರು ಈ ವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಾಜೇಂದ್ರ ಪ್ರಸಾದ್ ಅವರು ಇತ್ತೀಚೆಗೆ ತಮ್ಮ ಹೇಳಿಕೆಗಳಿಂದ ವಿವಾದಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಈ ಹಿಂದೆ ಬ್ರಹ್ಮಾನಂದಂ, ಆಲಿ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದರು. ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದ ಕ್ರಿಕೆಟಿಗ ಡೇವಿಡ್ ವಾರ್ನರ್ ಬಗ್ಗೆಯೂ ಇವರು ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು.
ಬೆಂಗಳೂರು, (ಮಾರ್ಚ್ 12): ಭಾರೀ ಸಂಚಲನ ಮೂಡಿಸಿದ್ದ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ (Biklu Shiva murder case) ಜೈಲುಪಾಲಾಗಿದ್ದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ (MLA Bairathi Basavaraj) ಕೊನೆಗೂ ಜಾಮೀನು ದೊರೆತಿದೆ. ಬೆಂಗಳೂರಿನ ಕೆಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ವಜಾ ಬಳಿಕ ಶಾಸಕನನ್ನು ಬಂಧಿಸಲಾಗಿತ್ತು. ಇದೀಗ ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಬಸವರಾಜ್‌ಗೆ ರಿಲೀಫ್ ಸಿಕ್ಕಿದೆ.
ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಬೈರತಿ ಬಸವರಾಜ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರೂ ಸಹ ಜಾಮೀನು ಸಿಕ್ಕಿರಲಿಲ್ಲ, ಇದರಿಂದ ವಿಧಿಯಿಲ್ಲದೇ ಅಹಮದಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದ ಬೈರತಿ ಬಸವರಾಜ್ ಪೊಲೀಸರ ಮುಂದೆ ಶರಣಾಗಲು ಆಗಮಿಸುತ್ತಿದ್ದರು. ಆ ವೇಳೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಕೊನೆಗೂ ಜನಪ್ರತಿನಿಧಿಗಳ ಕೋರ್ಟ್, ಕೆಲ ಷರತ್ತಿನೊಂದಿಗೆ ಜಾಮೀನು ನೀಡಿದೆ. 2 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ, ಸಾಕ್ಷ್ಯಾಧಾರ ನಾಶಪಡಿಸುವಂತಿಲ್ಲ, ಸಾಕ್ಷಿಗಳನ್ನು ಬೆದರಿಸುವಂತಿಲ್ಲ, ಕೋರ್ಟ್ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ ಎಂದು ಷರತ್ತು ಹಾಕಿ ಜಾಮೀನು ಮಂಜೂರು ಮಾಡಿದೆ.
ಬಿಕ್ಲು ಶಿವ ಪ್ರಕರಣದಲ್ಲಿ ಬಂಧನ ಭೀತಿ ಹಿನ್ನೆಲೆಯಲ್ಲಿ ಶಾಸಕ ಬೈರತಿ ಬಸವರಾಜ್ ಪರಾರಿಯಾಗಿದ್ದರು. ಬಳಿಕ ಹೈಕೋರ್ಟ್ ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ನಂತದ ಸುಪ್ರೀಂಕೋರ್ಟ್ ನಲ್ಲೂ ಸಹ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಇದರ ಬೆನ್ನಲ್ಲೇ ಬೈರತಿ ಬಸವರಾಜ್ ಫೆಬ್ರವರಿ 13ರಂದು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲೇ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.
ಪ್ರಕರಣ ಹಿನ್ನೆಲೆ
ಹಲಸೂರು ಕೆರೆ ಸಮೀಪ 2025ರ ಜುಲೈ 15ರಂದು ರೌಡಿ ಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್‌ನ ಕೊಲೆ ಆಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎನ್ನಲಾಗಿತ್ತು. ಈ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜು ವಿರುದ್ಧ ಆರೋಪ ಕೇಳಿಬಂದಿತ್ತು. ಹೀಗಾಗಿ ಕೊಲೆ ಆರೋಪದ ಮೇರೆಗೆ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಬೈರತಿ ಬಸವರಾಜ್ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬೈರತಿ ಬಸವರಾಜ್ 5ನೇ ಆರೋಪಿಯಾಗಿದ್ದಾರೆ. ಇನ್ನು ಕೊಲೆಯಾದ ಶಿವಪ್ರಕಾಶ್‌ನ ತಾಯಿ ವಿಜಯಲಕ್ಷ್ಮೀ ನೀಡಿದ ದೂರಿನ ಮೇರೆಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನವದೆಹಲಿ, ಮಾರ್ಚ್ 12: ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳನ್ನು (LPG) ಬಿಡುಗಡೆ ಮಾಡಲಾಗುವುದು. ಆದರೆ, ರಾಜ್ಯ ಸರ್ಕಾರಗಳು ಯಾರಿಗೆ ಕೊಡಬಹುದು ಎಂದು ಫಲಾನುಭವಿಗಳನ್ನು ಗುರುತಿಸುತ್ತವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ (Sujata Sharma) ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುಜಾತಾ ಶರ್ಮಾ, ಎಲ್ಪಿಜಿ ವಿಚಾರದಲ್ಲಿ ಜನರು ಆತಂಕ ಪಡಬಾರದು ಎಂದು ಮನವಿ ಮಾಡಿದ್ದಾರೆ.
‘ಗೃಹೇತರ ಬಳಕೆಯ ಎಲ್ಪಿಜಿ ಅಥವಾ ಕಮರ್ಷಿಯಲ್ ಎಲ್ಪಿಜಿ ವಿಚಾರದಲ್ಲಿ ನಾವು ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಂತಹ ಕೆಲ ವಲಯಗಳಿಗೆ ಆದ್ಯತೆ ಕೊಟ್ಟಿದ್ದೇವೆ. ಅದರಲ್ಲಿ ಫಲಾನುಭವಿಗಳ ಪಟ್ಟಿಯನ್ನು ಮಾಡುವಂತೆ ರಾಜ್ಯ ಸರ್ಕಾರಗಳಿಗೆ ನೀಡಿದ್ದೇವೆ. ಆದ್ಯತೆ ಮೇರೆಗೆ ಕಮರ್ಷಿಯಲ್ ಸಿಲಿಂಡರ್ಗಳನ್ನು ನೀಡಲಾಗುವುದು’ ಎಂದು ಸುಜಾತಾ ಶರ್ಮಾ ತಿಳಿಸಿದ್ದಾರೆ.
‘ನಮಗೆ ಬೇಕಾದ ಎಲ್ಪಿಜಿಯಲ್ಲಿ ಶೇ. 60ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಶೇ. 90ರಷ್ಟು ಹಾರ್ಮುಜ್ ಮೂಲಕ ಬರುತ್ತದೆ. ಪರಿಸ್ಥಿತಿ ಕ್ಲಿಷ್ಟಕರವಾಗಿದೆಯಾದರೂ ಸರ್ಕಾರವು ಜನರಿಗೆ ಎಲ್ಪಿಜಿ ಪೂರೈಕೆ ಸಮರ್ಪಕವಾಗಿ ಆಗುವುದನ್ನು ಖಚಿಪಡಿಸಲು ಯತ್ನಿಸುತ್ತಿದೆ. ನಿತ್ಯವೂ 50 ಲಕ್ಷ ಸಿಲಿಂಡರ್ಗಳನ್ನು ಪೂರೈಸುತ್ತಿದ್ದೇವೆ. ಆದರೆ, ಜನರು ಆತಂಕದಿಂದ ಎಲ್ಪಿಜಿ ಬುಕಿಂಗ್ ಮಾಡುವುದು ಹೆಚ್ಚಾಗಿದೆ. ಈ ರೀತಿ ಪ್ಯಾನಿಕ್ ಬುಕಿಂಗ್ ತಪ್ಪಿಸಲು ನಾಗರಿಕರನ್ನು ಕೇಳಿಕೊಳ್ಳುತ್ತೇವೆ’ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿ ಮನವಿ ಮಾಡಿದ್ದಾರೆ.
ದೇಶೀಯ ಎಲ್ಪಿಜಿ ಉತ್ಪಾದನೆ ಶೇ. 28ಕ್ಕೆ ಏರಿಕೆ
‘ಮಾರ್ಚ್ 9ರಂದು ಅಗತ್ಯ ಸರಕುಗಳ ಕಾಯ್ದೆ ಅಡಿ ಎಲ್ಪಿಜಿ ಉತ್ಪಾದನೆ ಗರಿಷ್ಠಗೊಳಿಸುವಂತೆ ಎಲ್ಲಾ ರಿಫೈನರಿಗಳಿಗೆ ನಿರ್ದೇಶನ ನೀಡಲಾಗಿದೆ. ಅದರ ಪರಿಣಾಮವಾಗಿ ಎಲ್ಪಿಜಿ ಉತ್ಪಾದನೆ ಹೆಚ್ಚಾಗಿದೆ. ನಿನ್ನೆ ಶೇ. 25ಎಂದು ಹೇಳಿದ್ದೆ. ಈಗ ಅದು ಶೇ. 28 ಆಗಿದೆ. ಅಂದರೆ ದೇಶೀಯ ಎಲ್ಪಿಜಿ ಉತ್ಪಾದನೆಯಲ್ಲಿ ಹೆಚ್ಚಳ ಆಗಿದೆ. ನಮ್ಮಲ್ಲಿ ಬಹಳ ವಿಸ್ತೃತವಾದ ರೀಟೇಲ್ ಔಟ್ಲೆಟ್ಗಳ ಜಾಲ ಇದೆ. ಒಂದು ಲಕ್ಷ ರೀಟೇಲ್ ಔಟ್ಲೆಟ್ಗಳಿವೆ. ಇವ್ಯಾವುವೂ ಕೂಡ ದಾಸ್ತಾನು ಕೊರತೆ ವರದಿ ಮಾಡಿಲ್ಲ’ ಎಂದು ಸುಜಾತಾ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ನಿತ್ಯವೂ 55 ಬ್ಯಾರಲ್ ತೈಲವನ್ನು ಬಳಸಲಾಗುತ್ತದೆ. ಜಗತ್ತಿನ ನಾಲ್ಕನೇ ಅತಿದೊಡ್ಡ ರಿಫೈನರ್ ಎನಿಸಿದೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸಲ್ ಇತ್ಯಾದಿ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆ ಯಾವಾಗಲೂ ಇರುತ್ತದೆ ಎಂಬ ವಿಚಾರವನ್ನು ಸುಜಾತಾ ಶರ್ಮಾ ತಿಳಿಸಿದ್ದಾರೆ.
ಎಲ್ಪಿಜಿ ಹಾಗೂ ಗ್ಯಾಸ್ ಉತ್ಪನ್ನಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರ ಪರ್ಯಾಯ ಇಂಧನ ಆಯ್ಕೆಗಳನ್ನು ಸಕ್ರಿಯಗೊಳಿಸಿದೆ. ಪ್ರತೀ ತ್ರೈಮಾಸಿಕದಲ್ಲಿ ರಾಜ್ಯಗಳಿಗೆ ಒಂದು ಲಕ್ಷ ಕಿಲೋಲೀಟರ್ ಕೆರೋಸಿನ್ (ಸೀಮೆ ಎಣ್ಣೆ) ನೀಡಲಾಗುತ್ತದೆ. ಇವತ್ತು 48,000 ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿದೆ ಎಂದೂ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಹೇಳಿದ್ದಾರೆ.
ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಚಿತ್ರವು ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಸೆನ್ಸಾರ್ ಮಂಡಳಿಯ ಜೊತೆಗಿನ ಸಂಘರ್ಷದಿಂದಾಗಿ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆ. ಅಲ್ಲದೇ, ಚಿತ್ರದ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಹೊಂದಿದ್ದ ಪ್ರಮುಖ ಒಟಿಟಿ ಸಂಸ್ಥೆ ‘ಅಮೇಜಾನ್ ಪ್ರೈಮ್ ವಿಡಿಯೋ’ (Amazon Prime Video) ತನ್ನ ಒಪ್ಪಂದದಿಂದ ಹಿಂದೆ ಸರಿದಿದೆ ಎಂಬ ವದಂತಿಗಳು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ. ಇದರಿಂದಾಗಿ ದಳಪತಿ ವಿಜಯ್ (Thalapathy Vijay) ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.
ಮಾಧ್ಯಮಗಳ ವರದಿಗಳ ಪ್ರಕಾರ, ‘ಅಮೇಜಾನ್ ಪ್ರೈಮ್ ವಿಡಿಯೋ’ ಈ ಹಿಂದೆ ‘ಜನ ನಾಯಗನ್’ ಸಿನಿಮಾದ ಪೋಸ್ಟ್-ಥಿಯೇಟ್ರಿಕಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಬರೋಬ್ಬರಿ 120 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಆದರೆ, ಚಿತ್ರದ ಬಿಡುಗಡೆಯ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ಹಾಗೂ ಪದೇ ಪದೇ ಮುಂದೂಡಲ್ಪಡುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯು ಒಪ್ಪಂದ ರದ್ದು ಮಾಡಿಕೊಂಡಿದೆ ಎನ್ನಲಾಗಿದೆ.
2026ರ ಸಂಕ್ರಾಂತಿ ಹಬ್ಬಕ್ಕೆ ತೆರೆಕಾಣಬೇಕಿದ್ದ ‘ಜನ ನಾಯಗನ್’ ಸಿನಿಮಾ ಸೆನ್ಸಾರ್ ಕಾರಣಕ್ಕೆ ಅತಂತ್ರ ಸ್ಥಿತಿಯಲ್ಲಿದೆ. ಸೆನ್ಸಾರ್ ಮಂಡಳಿ ಸದಸ್ಯರ ಪ್ರಕಾರ, ಈ ಚಿತ್ರದ ಕೆಲವು ದೃಶ್ಯಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ. ಸಶಸ್ತ್ರ ಪಡೆಗಳನ್ನು ಚಿತ್ರಿಸಿರುವ ರೀತಿ ಆಕ್ಷೇಪಾರ್ಹವಾಗಿದೆ. ಸದ್ಯ ಸಿನಿಮಾವು ರಿವೈಸಿಂಗ್ ಕಮಿಟಿಯ ಮುಂದಿದ್ದು, ಸಮಿತಿಯು ಮುಂಬರುವ ದಿನಗಳಲ್ಲಿ ಚಿತ್ರವನ್ನು ವೀಕ್ಷಿಸಿ ತೀರ್ಪು ನೀಡಲಿದೆ.
ಒಟಿಟಿ ಡೀಲ್ ಕ್ಯಾನ್ಸಲ್ ಆಗಿದೆ ಎಂಬ ಸುದ್ದಿಯನ್ನು ಚಿತ್ರೋದ್ಯಮದ ವಿಶ್ಲೇಷಕರು ಸಂಪೂರ್ಣವಾಗಿ ನಂಬಲು ಸಿದ್ಧರಿಲ್ಲ. ಸಿನಿಮಾ ಬಿಡುಗಡೆ ವಿಳಂಬವಾದಾಗ ಇಂತಹ ವದಂತಿಗಳು ಸಹಜ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರದ ವಿಷಯದಲ್ಲೂ ಇಂತಹದ್ದೇ ವರದಿಗಳು ಬಂದಿದ್ದವು. ಆದರೆ ಒಟಿಟಿ ಸಂಸ್ಥೆಯು ಕೇವಲ ದರವನ್ನು ಮರುನಿಗದಿ ಮಾಡಿಕೊಂಡಿತ್ತೇ ಹೊರತು, ಒಪ್ಪಂದವನ್ನು ರದ್ದುಗೊಳಿಸಿರಲಿಲ್ಲ ಎಂಬುದು ನಂತರ ತಿಳಿಯಿತು.
‘ಜನ ನಾಯಗನ್’ ಸಿನಿಮಾದ ವಿಷಯದಲ್ಲೂ ‘ಅಮೇಜಾನ್ ಪ್ರೈಮ್ ವಿಡಿಯೋ’ ಸಂಸ್ಥೆ ಇದೇ ಹಾದಿ ತುಳಿಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಚಿತ್ರತಂಡ ಅಥವಾ ‘ಅಮೇಜಾನ್ ಪ್ರೈಮ್ ವಿಡಿಯೋ’ ಕಡೆಯಿಂದ ಅಧಿಕೃತವಾಗಿ ಹೇಳಿಕೆ ನೀಡುವವರೆಗೆ ಈ ಗೊಂದಲ ಮುಂದುವರಿಯಲಿದೆ.
ಬೆಂಗಳೂರು, (ಮಾರ್ಚ್ 12): ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಯಾವುದೇ ಆಸ್ತಿ ವಹಿವಾಟು ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿದೆ. ಇದರಿಂದ ಹಲವು ಸಮಸ್ಯೆಗಳು ಸಹ ಉಂಟಾಗಿದ್ದು, ಇ ಖಾತಾಕ್ಕಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಜಿಬಿಎ ಅಧಿಕಾರಿಗಳು ಮಾತ್ರ ಜನರ ಸಮಸ್ಯೆ ಏನು ಎನ್ನುವುದನ್ನೂ ತಿಳಿದುಕೊಳ್ಳುವ ಗೋಚಿಗೂ ಹೋಗಲ್ಲ. ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನ ರಂಗನಾಯಕಿ ಮಹಿಳೆಯೊಬ್ಬರು ಇ ಖಾತಾಕ್ಕಾಗಿ ಇಪ್ಪತ್ತು ವರ್ಷಗಳಿಂದ ಹಿಂದೆ ಅಂದ್ರೆ 2006ರಲ್ಲಿ 16,700 ರೂಪಾಯಿ ಶುಲ್ಕ ಕಟ್ಟಿದ್ದಾರೆ. ಆದ್ರೆ, ಇಪ್ಪತ್ತು ವರ್ಷವಾದರೂ ಸಹ ರಂಗನಾಯಕಿಗೆ ಇ ಖಾತಾ ಸಿಕ್ಕಿಲ್ಲ. ಇದು ಅಧಿಕಾರಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎನ್ನುವುದನ್ನು ತೋರಿಸಿಕೊಡುತ್ತದೆ. ಇನ್ನು ಈ ಬಗ್ಗೆ ಸ್ವತಃ ರಂಗನಾಯಕಿ ಅವರೇ ಜಿಬಿಎ ಆಯುಕ್ತರಿಗೂ ಸಹ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಇನ್ನು ಇ ಖಾತಾಕ್ಕಾಗಿ ಪಟ್ಟ ಕಷ್ಟ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಮಹಿಳೆ ಎಳೆ ಎಳೆಯಾಗಿ ಬಿಟ್ಟಿದ್ದು, ಅದು ಈ ಕೆಳಗಿನಂತಿದೆ ಓದಿ.
ನಾನು ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಹಾಗೂ ನನ್ನ ಸಮಸ್ಯೆಯನ್ನು ಕೇಳಿಸಿಕೊಳ್ಳಲು ಎರಡು ಕಿವಿಗಳು ಸಿಗದ ಕಾರಣಕ್ಕೆ ಇದನ್ನು ಎಲ್ಲರೆದುರು ಹೇಳಿಕೊಳ್ಳಲು ಮಾಧ್ಯಮವೊಂದನ್ನು ಆಯ್ಕೆ ಮಾಡಿಕೊಂಡೆ. ನನ್ನ ಹೆಸರು ರಂಗನಾಯಕಿ. ಅಗತ್ಯಕ್ಕೆ ತಕ್ಕಷ್ಟು ಸ್ವಲ್ಪ ಓದು, ಸಾಸಿವೆ ಡಬ್ಬಿ, ಮನೆ ವ್ಯವಹಾರಕ್ಕೆ ಬೇಕಾದಷ್ಟು ತಿಳಿವಳಿಕೆ ಇರುವ ವ್ಯಕ್ತಿ ನಾನು. ಬೆಂಗಳೂರಿನ, ಬನಶಂಕರಿ ಮೂರನೇ ಹಂತದ, ಹೊಸಕೆರೆಹಳ್ಳಿಯ, ದತ್ತಾತ್ರೇಯನಗರದ ಮೂರನೇ ಮುಖ್ಯರಸ್ತೆಯಲ್ಲಿ ನನ್ನ ಮನೆ ಇದೆ; ಸ್ವಂತದ್ದು. ಆ ನಿವೇಶನ ‘ಬಿ’ ಖಾತಾ ಹೊಂದಿದೆ. ಇತ್ತೀಚೆಗೆ ಬಿ ಖಾತಾಗಳನ್ನು ಎ ಖಾತಾಗೆ ಮಾಡಿಕೊಡುವ ಬಗ್ಗೆ ಡಿಕೆ ಶಿವಕುಮಾರ್ ಅವರು ಹೇಳಿದರಲ್ಲ, ಅದಕ್ಕೆ ಅರ್ಜಿ ಹಾಕಿಕೊಳ್ಳಬೇಕು ಎಂಬಷ್ಟರಲ್ಲಿ ನನಗೆ ನೆನಪಾದ ಸಂಗತಿ ಏನೆಂದರೆ, 2006ನೇ ಇಸವಿಯ ಆಗಸ್ಟ್ ತಿಂಗಳಿನಲ್ಲಿಯೇ ಅಭಿವೃದ್ಧಿ ಶುಲ್ಕ 16,700 ರೂಪಾಯಿ ಪಾವತಿ ಮಾಡಿಯಾಗಿದೆ, ಆಗ ಹಣ ಕಟ್ಟಿದ್ದಕ್ಕೆ ನನ್ನ ಬಳಿ ರಸೀದಿಯೂ ಇದೆ.
ಹಣ ಪಾವತಿ ಮಾಡಿದ ಮೇಲೆ ನಮಗೆ ಎ ಖಾತಾ ಮಾಡಿಕೊಡಲೇ ಇಲ್ಲ. ನಿರಂತರವಾಗಿ ನಮ್ಮ ವಾರ್ಡ್ ವ್ಯಾಪ್ತಿಯ ಅಧಿಕಾರಿಗಳನ್ನೆಲ್ಲ ಭೇಟಿ ಮಾಡಿದೆ, ಅವರಿಗೆ ನಾನು ಹಣ ಪಾವತಿ ಮಾಡಿದ್ದ ರಸೀದಿ ತೋರಿಸಿದೆ, ಎ ಖಾತಾ ಮಾಡಿಕೊಡಿ ಎಂದು ಕೇಳಿಕೊಂಡೆ. ನನ್ನ ಅಕ್ಕ-ಪಕ್ಕದ ಮನೆಯೆಲ್ಲ ಎ ಖಾತಾ ಆಸ್ತಿಗಳಿವೆ. ನಾನು ಹೀಗೆ 16,700 ರೂಪಾಯಿ ಅಭಿವೃದ್ಧಿ ಶುಲ್ಕ ಪಾವತಿ ಸಹ ಮಾಡಿಯಾಗಿದೆ ಎಂದು ಹೇಳಿದೆ. ಹೀಗೆ ನನ್ನ ಮನವಿ ಹೇಗೆ ಒಂದೇ ಥರ ಇರುತ್ತಿತ್ತೋ ಅಧಿಕಾರಿಗಳ ಉತ್ತರವೂ ಒಂದೇ ಇರುತ್ತಿತ್ತು: ಇನ್ನೂ ಎ ಖಾತಾ ಬಿಟ್ಟಿಲ್ಲ, ಬಿಟ್ಟಾಗ ಮಾಡಿಕೊಡ್ತೀವಿ. ಹೀಗೆ ವರ್ಷ ಇಪ್ಪತ್ತು ಕಳೆದುಹೋಗಿದೆ.
ಒಂದು ವೇಳೆ ಆಸ್ತಿ ಕಂದಾಯ ಬಾಕಿ ಉಳಿಸಿಕೊಂಡರೆ ವರ್ಷಕ್ಕೆ ಹನ್ನೆರಡು ಪರ್ಸೆಂಟ್ ಬಡ್ಡಿ ಹಾಕಿ, ಬಿಬಿಎಂಪಿಗೆ ಹಣ ಕಟ್ಟಿಸಿಕೊಳ್ಳುವ ಪರಿಪಾಠ ಇದೆ. ಆದರೆ ನಾವು ಕಟ್ಟಿದ ಹಣ ಮತ್ತು ಹಾಗೆ ಕಟ್ಟಿಸಿಕೊಂಡಿದ್ದಕ್ಕೆ ಮಾಡಿಕೊಡಬೇಕಾದ ಕೆಲಸದ ಬಗ್ಗೆ ಯಾರಿಂದಲೂ ನೆಟ್ಟಗಿನ ಉತ್ತರ ಇಲ್ಲ.
ಈಚೆಗೆ, ಮಾರ್ಚ್ ಆರನೇ ತಾರೀಕು ಬೆಂಗಳೂರು ಪಶ್ಚಿಮ ವಿಭಾಗದ ಆಯಕ್ತರಾದ ರಾಜೇಂದ್ರ ಅವರ ಕಚೇರಿಗೆ ನನ್ನ ಮನವಿ ಪತ್ರವನ್ನು ಮಗನ ಕೈಲಿ ಕೊಟ್ಟು ಕಳಿಸಿದೆ. ಆ ನಂತರ ಮಾರ್ಚ್ ಹನ್ನೊಂದನೇ ತಾರೀಕು ಆ ಅರ್ಜಿ ಸ್ಥಿತಿ ಏನು ಅಂತ ಕೇಳಿದಾಗ, ರಾಜರಾಜೇಶ್ವರಿ ನಗರದ ಆಫೀಸ್ ಗೆ ಕಳಿಸಿದ್ದೀವಿ ಅಂತ ಹೇಳಿದರು. ಓಹ್, ನಮಗೆ ಉತ್ತರ ಸಿಗಬಹುದು ಅಂದುಕೊಂಡು, ಆರ್ಆರ್ ನಗರದಲ್ಲಿ ಇರುವ ಆಫೀಸ್ ಗೆ ಮಗನನ್ನು ಕಳಿಸಿದರೆ, ಅಲ್ಲಿ ಇದ್ದವರು ಆರತಿ ಆನಂದ್ ಅನ್ನೋ ಮೇಡಂ ಅಂತೆ.
ಆಗ ಕಟ್ಟಿರೋ ಹದಿನಾರು ಸಾವಿರಕ್ಕೆ ಈಗ ನಾನೇನು ಮಾಡಬೇಕು? ಕಮಿಷನರ್ ಆಫೀಸಿಂದ ನನಗೆ ನೀವು ಕೊಟ್ಟ ಪತ್ರ ಬರಲಿ, ಆಗ ನಿಮಗೆ ನ್ಯಾಯ ಕೊಡಿಸ್ತೀನಿ ಅಂತ ಹೇಳಿ, ಆ ನಂತರ ಕ್ಷಣವೂ ಅಲ್ಲಿ ನಿಲ್ಲದೆ, ತಮ್ಮ ಮನೆಗೆ ಹೊರಟರಂತೆ. ನಾವು ಸಲ್ಲಿಸಿದ್ದ ಅರ್ಜಿಯ ನಕಲನ್ನು, ನಾವು ಏನು ಹೇಳುತ್ತೇವೆ ಎಂದು ಕೇಳಿಸಿಕೊಳ್ಳುವ ವ್ಯವಧಾನವ ತೋರದ ಆರಂತಿ ಆನಂದ್ ಅವರಿಂದ ‘ನ್ಯಾಯ’ ಸಿಗುವುದು ಹೇಗೋ ನನಗಂತೂ ಗೊತ್ತಾಗಲಿಲ್ಲ. ನಮ್ಮ ಕುಟುಂಬದಲ್ಲಿಯೇ ಓದಿಕೊಂಡಿರುವ ಒಬ್ಬೇಒಬ್ಬ, ಅದೂ ನನ್ನ ಮಗನಿಗೆ ಗೊತ್ತಾಗಬಹುದಾ? ಗೊತ್ತಿಲ್ಲ.
ಕೊನೆ ಪ್ರಯತ್ನ ಅನ್ನೋ ಹಾಗೆ ಮಾಧ್ಯಮಗಳ ಮೂಲಕ ಜನರಿಗೆ ನನ್ನ ಸಮಸ್ಯೆ ಹೇಳಿಕೊಂಡು ಬಿಡೋಣ ಎಂದು ಇದನ್ನೆಲ್ಲ ನನ್ನ ಮಗನಿಗೇ ಹೇಳಿ ಬರೆಸಿದೆ. ನಾನು ಹಣ ಪಾವತಿ ಮಾಡಿದ ರಸೀದಿ ನಿಮ್ಮೆದುರು ಇಡುತ್ತಿದ್ದೇನೆ. ದಯವಿಟ್ಟು ಕರುಣೆಯ ಕಣ್ಣುಗಳಿಂದ ನೀವಾದರೂ ಇದನ್ನು ನೋಡಿ.
ಈಗ ಬಿ ಖಾತಾದಿಂದ ಎ ಖಾತಾಗೆ ಮಾಡಿಕೊಡುವುದಕ್ಕೆ ಶೇಕಡಾ ಐದರಷ್ಟು ಹಣ ಕಟ್ಟಬೇಕಂತೆ. ನಾನು ಇರುವ ಸೈಟಿನ ಅಳತೆಗೆ ಒಂದೂಮುಕ್ಕಾಲು ಲಕ್ಷದಿಂದ ಎರಡು ಲಕ್ಷ ರೂಪಾಯಿ ಕಟ್ಟಬೇಕಂತೆ. ಇಪ್ಪತ್ತು ವರ್ಷಗಳ ಹಿಂದೆ ಬೆಂಗಳೂರು ಮಹಾನಗರ ಪಾಲಿಗೆ ಎಂದಿದ್ದಾಗ ಕಟ್ಟಿದ್ದ 16,700 ರೂಪಾಯಿ ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ದಾಟಿ, ಗ್ರೇಟರ್ ಬೆಂಗಳೂರು ಅಥಾರಿಟಿ ತನಕ ಬಂದಿದೆ. ಈಗ ಶೇಕಡಾ ಐದರಷ್ಟು ಕಟ್ಟಬೇಕಾದ ಮೊತ್ತಕ್ಕೆ ಈ ಹಿಂದೆ ನಾನು ಕಟ್ಟಿದ್ದ ಹಣವನ್ನು ಪರಿಗಣಿಸಿ, ಸಂಪೂರ್ಣ ಮನ್ನಾ ಮಾಡಬೇಕು ಎಂಬುದು ನನ್ನ ಪ್ರಾರ್ಥನೆ.
ಇಪ್ಪತ್ತು ವರ್ಷದ ಹಿಂದಿನ 16,700 ರೂಪಾಯಿಯ ಇವತ್ತಿನ ಮೌಲ್ಯ ಏನು ಎಂಬುದನ್ನು ಡಿಕೆ ಶಿವಕುಮಾರ್ ಅವರಂಥ ದೊಡ್ಡ ಸಾಹೇಬ್ರು, ಕಮಿಷನರ್ ಸಾಹೇಬ್ರು ಎಲ್ಲ ಸೇರಿ ತೀರ್ಮಾನ ಮಾಡಲಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.
ನಮ್ಮ ಆಸ್ತಿಯ ಇಪಿಐಡಿ ಸಂಖ್ಯೆ: 8849715443
ಆಸ್ತಿ ತೆರಿಗೆ ಪಾವತಿ ಅರ್ಜಿ ಸಂಖ್ಯೆ: 1600592919
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ಭಾನುವಾರ ನಡೆದ 2026 ರ ಟಿ20 ವಿಶ್ವಕಪ್ (T20 World Cup) ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಈ ಗೆಲುವಿನ ನಂತರ ಭಾರತದಲ್ಲಿ ಭಾರಿ ಸಂಭ್ರಮಾಚರಣೆ ನಡೆಯಿತು. ಇದೀಗ ವಿಶ್ವಕಪ್ ಮುಗಿದ ನಾಲ್ಕು ದಿನಗಳ ನಂತರ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ತಂಡದ ಉಪನಾಯಕ ಅಕ್ಷರ್ ಪಟೇಲ್ (Axar Patel) ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ತಾನು ಮಾಡಿದ ಆ ತಪ್ಪಿನಿಂದ ಅಕ್ಷರ್ ಪಟೇಲ್ ತುಂಬಾ ಕೋಪಗೊಂಡಿದ್ದರು. ಅಲ್ಲದೆ ನಾವು ಆ ಪಂದ್ಯದಲ್ಲಿ ಸೋತಿದ್ದು,ಉರಿಯುವ ಬೆಂಕಿಗೆ ತುಪ್ಪ ಸುರಿದಂತ್ತಾಗಿತ್ತು ಎಂದು ಸೂರ್ಯಕುಮಾರ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಕ್ಷರ್ ಪಟೇಲ್ ಕೋಪಗೊಂಡಿದ್ಯಾಕೆ? ಸೂರ್ಯಕುಮಾರ್ ಅವರ ಬಳಿ ಕ್ಷಮೆಯಾಚಿಸಿದ್ದು ಏಕೆ ಎಂಬುದನ್ನು ನೋಡುವುದಾದರೆ..
ಮಾಡಿದ ತಪ್ಪಿಗೆ ಸೋಲಿನ ಬೆಲೆ
ವಾಸ್ತವವಾಗಿ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಫೈನಲ್ ಪಂದ್ಯವನ್ನು ಸೇರಿದಂತೆ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿತ್ತು. ಆದರೆ ಈ 9 ಪಂದ್ಯಗಳಲ್ಲಿ ಎರಡು ಪಂದ್ಯಗಳಿಂದ ತಂಡದ ಉಪನಾಯಕ ಅಕ್ಷರ್ ಪಟೇಲ್ ಅವರನ್ನು ಪ್ಲೇಯಿಂಗ್ 11ನಿಂದ ಕೈಬಿಡಲಾಗಿತ್ತು. ಅದರಲ್ಲೂ ಸೂಪರ್-8 ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯಕ್ಕೂ ಅಕ್ಷರ್ ಪಟೇಲ್ ಅವರನ್ನು ತಂಡದಿಂದ ಕೈಬಿಡಲಾಯಿತು. ಇದರ ಪರಿಣಾಮವಾಗಿ ಟೀಂ ಇಂಡಿಯಾ ಈ ಪಂದ್ಯವನ್ನು 76 ರನ್‌ಗಳಿಂದ ಸೋತಿತು. ಈ ಸೋಲಿಗೆ ಅಕ್ಷರ್ ಪಟೇಲ್ರನ್ನು ತಂಡದಿಂದ ಕೈಬಿಟ್ಟಿದ್ದು, ಪ್ರಮುಖ ಕಾರಣವಾಗಿತ್ತು. ಏಕೆಂದರೆ ಅಕ್ಷರ್ ಬದಲಿಯಾಗಿ ಬಂದಿದ್ದ ವಾಷಿಂಗ್ಟನ್ ಸುಂದರ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ವಿಫಲರಾಗಿದ್ದರು. ಹೀಗಾಗಿ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ನಾಯಕ ಸೂರ್ಯ ಹಾಗೂ ಗಂಭೀರ್ ವಿರುದ್ಧ ಗರಂ ಆಗಿದ್ದರು.
ಅಕ್ಷರ್ ತುಂಬಾ ಕೋಪಗೊಂಡಿದ್ದರು
ಇತ್ತ ಅಕ್ಷರ್ ಪಟೇಲ್ ಕೂಡ ತನ್ನನ್ನು ಆ ಪಂದ್ಯದಿಂದ ಹೊರಗಿಟ್ಟಿದಕ್ಕೆ ಬೇಸರಗೊಂಡಿದ್ದರು. ಇದೀಗ ವಿಶ್ವಕಪ್ ಗೆದ್ದ ಬಳಿಕ ಆ ಘಟನೆಯ ಬಗ್ಗೆ ಮಾತನಾಡಿರುವ ಸೂರ್ಯಕುಮಾರ್ ಯಾದವ್, ತಮ್ಮ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲದೆ ಅಕ್ಷರ್ ಪಟೇಲ್ ಬಳಿ ಕ್ಷಮೆಯಾಚಿಸಿರುವುದಾಗಿ ಹೇಳಿದ್ದಾರೆ. ನಾನು ಮಾಡಿದ ಆ ತೀರ್ಮಾನಿಂದ ಅಕ್ಷರ್ ತುಂಬಾ ಕೋಪಗೊಂಡಿದ್ದರು. ಅವರು ಕೋಪ ಮಾಡಿಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಅಕ್ಷರ್ ಅನುಭವಿ ಆಟಗಾರ ಮತ್ತು ಐಪಿಎಲ್ ಫ್ರಾಂಚೈಸಿಯನ್ನು ಮುನ್ನಡೆಸುತ್ತಿದ್ದಾರೆ. ಅಂತಹ ಆಟಗಾರನನ್ನು ಕೈಬಿಟ್ಟಿದ್ದರಿಂದ ಅವರಿಗೆ ನೋವಾಗುವುದು ಸಹಜ.
ಹೀಗಾಗಿ ಪಂದ್ಯದ ನಂತರ ಅಕ್ಷರ್ ಪಟೇಲ್ ಅವರೊಂದಿಗೆ ಮಾತನಾಡಿ ನನ್ನ ನಿರ್ಧಾರಕ್ಕೆ ಕ್ಷಮೆಯಾಚಿಸಿದ್ದೆ. ತಂಡದ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದರೂ, ಅದು ಸರಿಯಾದ ನಿರ್ಧಾರವಲ್ಲ. ಹೀಗಾಗಿ ನಾನು ಅಕ್ಷರ್ ಬಳಿ ಕ್ಷಮೆಯಾಚಿಸಿದೆ. ಆದರೆ ಅಕ್ಷರ್ ಬಹಳ ಪ್ರಬುದ್ಧವಾಗಿ ಪ್ರತಿಕ್ರಿಯಿಸಿದರು ಎಂದು ಸೂರ್ಯ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 12: ಕಳೆದ ಕೆಲವು ವರ್ಷಗಳಿಂದ ಪ್ರಪಂಚದಾದ್ಯಂತ ಮೊಬೈಲ್ ಫೋನ್ ಸ್ಫೋಟಗೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಚಾರ್ಜ್ ಮಾಡುವಾಗ ಅಥವಾ ಬಳಸುತ್ತಿರುವಾಗಲೇ ಮೊಬೈಲ್ ಅತಿಯಾಗಿ ಬಿಸಿಯಾಗುವುದು ಅಥವಾ ಸ್ಫೋಟಗೊಳ್ಳುವ ಘಟನೆಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗೆ ಚೀನಾದಲ್ಲಿ ಅಂತಹ ಒಂದು ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ (Viral Video) ಬಾಲಕಿಯೊಬ್ಬಳು ಫೋನ್ ಹಿಡಿದಿದ್ದಾಗ ಮೊಬೈಲ್ ಸ್ಫೋಟವಾಗಿದೆ. ಅದೃಷ್ಟವಶಾತ್ ಆಕೆ ತೀವ್ರ ಗಾಯಗಳಿಂದ ಪಾರಾಗಿದ್ದಾಳೆ. ಆಕೆಯ ಮನೆಯೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ