All posts by nagaraj11081993

ಮಹಿಳೆಯ ಅನುಮಾನಾಸ್ಪದ ಸಾವು, ನ್ಯಾಯ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯ ಎಚ್ಚರಿಕೆ – Kannada News | Father Alleges Planned Crime After Woman Found Dead in Bhopal

ಭೋಪಾಲ್, ಮೇ 18: ಗಂಡನ ಮನೆಯಲ್ಲಿ ಮಹಿಳೆ(Woman) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. 31 ವರ್ಷ ತ್ವಿಶಾ ಸಾವು ಪ್ರಕರಣ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೊಂದು ಯೋಜಿತ ಕೊಲೆ ಎಂದು ಆರೋಪಿಸಿರುವ ತ್ವಿಶಾ ಅವರ ತಂದೆ ನ್ಯಾಯಕ್ಕಾಗಿ ಒತ್ತಾಯಿಸಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನಿವಾಸದ ಹೊರಗೆ ಸುಡುವ ಬಿಸಿಲಿನಲ್ಲೇ ಬೃಹತ್ ಪ್ರತಿಭಟನೆ ನಡೆಸಿದರು. ಒಂದೊಮ್ಮೆ ನ್ಯಾಯ ಸಿಗದಿದ್ದರೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನನ್ನ ಮಗಳ ಸಾವಿಗೆ ನ್ಯಾಯ ಸಿಗದಿದ್ದರೆ ನಾನು ಮುಖ್ಯಮಂತ್ರಿಯವರ ನಿವಾಸದ ಮುಂದೆಯೇ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಡುತ್ತೇನೆ ಎಂದು ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ಏಮ್ಸ್ ಭೋಪಾಲ್ ನೀಡಿರುವ ಆರಂಭಿಕ ಮರಣೋತ್ತರ ಪರೀಕ್ಷೆಯ ವರದಿ ತೃಪ್ತಿಕರವಾಗಿಲ್ಲ ಎಂದು ಆರೋಪಿಸಿರುವ ಕುಟುಂಬಸ್ಥರು, ದೆಹಲಿಯ ಏಮ್ಸ್‌ನಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಮತ್ತು ಅಲ್ಲಿಯವರೆಗೆ ಮಗಳ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ತ್ವಿಶಾ ಅವರ ಪತಿ ಸಮರ್ಥ್ ಸಿಂಗ್ (ವಕೀಲ) ಮತ್ತು ಅತ್ತೆ ಗಿರಿಬಾಲಾ ಸಿಂಗ್ ತುಂಬಾ ದಿನಗಳಿಂದ ಆಕೆಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ. ವಿಚಾರಣೆ ಆರಂಭವಾಗುವ ಮುನ್ನವೇ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗುತ್ತಿದೆ. ಕುಟುಂಬವು ತಮ್ಮ ಪ್ರಭಾವವನ್ನು ಬಳಸಿ ತನಿಖೆಯ ಹಾದಿ ತಪ್ಪಿಸುತ್ತಿದೆ.

ಮಗಳ ಸಾವಿನ ಎರಡು ದಿನಗಳ ನಂತರ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ರಚಿಸಿರುವ ವಿಶೇಷ ತನಿಖಾ ತಂಡ (SIT) ದ ಮೇಲೂ ನಂಬಿಕೆ ಕಳೆದುಕೊಂಡಿರುವ ಕುಟುಂಬವು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದೆ. ತ್ವಿಶಾ ಅವರ ದೇಹದ ಕೈ ಮತ್ತು ಕಿವಿಗಳ ಮೇಲೆ ಗಾಯದ ಗುರುತುಗಳಿದ್ದು, ಪ್ರಕರಣವನ್ನು ಬಲವಂತವಾಗಿ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ ಎಂಬುದು ಅವರ ಆರೋಪವಾಗಿದೆ.

ಮತ್ತಷ್ಟು ಓದಿ: Video: ಇನೋವಾ ಕಾರಿನಲ್ಲಿ ಬಂದು 7 ಲಕ್ಷ ರೂ. ಮೌಲ್ಯದ ಸೀರೆ ಎಗರಿಸಿದ ಮಹಿಳಾ ಗ್ಯಾಂಗ್!

ಪ್ರಸ್ತುತ ಇರುವ ಭೀಕರ ಬಿಸಿಲಿನಿಂದಾಗಿ ಶವ ಕೊಳೆಯದಂತೆ ತಡೆಯಲು ತ್ವಿಶಾ ಅವರ ದೇಹವನ್ನು ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂರಕ್ಷಿಸಿಡಬೇಕೆಂದು ಕುಟುಂಬಸ್ಥರು ಸಿಎಂ ಅವರ ಒಎಸ್‌ಡಿ ಬಳಿ ವಿನಂತಿಸಿದ್ದಾರೆ. ಇದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ಸಹ ಅವರು ಸಜ್ಜಾಗಿದ್ದಾರೆ.

ವರದಕ್ಷಿಣೆ ಕಿರುಕುಳ, ಹಲ್ಲೆ ಮತ್ತು ಸಾಕ್ಷ್ಯ ನಾಶದ ಆರೋಪಗಳ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದ್ದು, ಎಸಿಪಿ ರಜನೀಶ್ ಕಶ್ಯಪ್ ಇದರ ನೇತೃತ್ವ ವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿ ಪತಿ ಸಮರ್ಥ್ ಸಿಂಗ್ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಕಟಾರಾ ಹಿಲ್ಲಸ್ ಠಾಣೆಯ ಉಸ್ತುವಾರಿ ಸುನಿಲ್ ದುಬೆ ತಿಳಿಸಿದ್ದಾರೆ. ನಿವೃತ್ತ ನ್ಯಾಯಾಧೀಶರ ಜಾಮೀನನ್ನು ಪ್ರಶ್ನಿಸಿ ಕಾನೂನು ಹೋರಾಟ ಮುಂದುವರಿಸಲಾಗುವುದು, ಆದರೆ ಕುಟುಂಬಸ್ಥರು ಶವ ಸ್ವೀಕರಿಸದಿದ್ದರೆ ಕಾನೂನಿನ ನಿಯಮಗಳ ಪ್ರಕಾರ ತಾವೇ ಅಂತ್ಯಕ್ರಿಯೆ ನಡೆಸಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ನೋಯ್ಡಾ ಮೂಲದ ತ್ವಿಶಾ ಶರ್ಮಾ ಮತ್ತು ವಕೀಲ ಸಮರ್ಥ್ ಸಿಂಗ್ 2025ರ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದರು. ಆದರೆ ಕಿರುಕುಳ ತಾಳಲಾರದೆ ತ್ವಿಶಾ ನೋಯ್ಡಾಗೆ ಮರಳಲು ಬಯಸಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಮೇ 12 ರ ರಾತ್ರಿ ಅವರು ಶವವಾಗಿ ಪತ್ತೆಯಾಗಿದ್ದು, ಇಡೀ ಪ್ರಕರಣ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವೆಂಕಿಯ ಬೆಂಕಿ ಸೆಲೆಬ್ರೇಷನ್​ ಅರ್ಥವೇನು ಗೊತ್ತಾ?

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಈ ಅರ್ಧಶತಕ ಪೂರೈಸುತ್ತಿದ್ದಂತೆ ಅಯ್ಯರ್ ತಮ್ಮ ಕೈಗಳನ್ನು ಮೇಲೆಕ್ಕೆತ್ತುವ ಮೂಲಕ ವಿಶೇಷ ಸ್ಟ್ರೈಲ್​ನಲ್ಲಿ ಸಂಭ್ರಮಿಸಿದ್ದರು.

ಇದರ ಬೆನ್ನಲ್ಲೇ ಈ ಸಂಭ್ರಮಕ್ಕೆ ಕಾರಣವೇನು? ಇದರ ಅರ್ಥವೇನು? ಎಂಬ ಗೂಗಲ್ ಹುಡುಕಾಟಗಳು ಶುರುವಾಗಿದ್ದವು. ಈ ಪ್ರಶ್ನೆಗಳಿಗೆ ಸಿಗುವ ಉತ್ತರ ಇಳಯ ದಳಪತಿ ವಿಜಯ್. ಅಂದರೆ ತಮಿಳುನಾಡಿನ ಹೊಸ ಮುಖ್ಯಮಂತ್ರಿ ವಿಜಯ್ ಅವರ ಸ್ಟೈಲ್​ನಲ್ಲಿ ವೆಂಕಿ ಬೆಂಕಿ ಸೆಲೆಬ್ರೇಷನ್ ಮಾಡಿದ್ದರು ಎಂಬುದು.

2017 ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಮೆರ್ಸಲ್ ಚಿತ್ರದಲ್ಲಿ ನಟ ವಿಜಯ್ ಇದೇ ಶೈಲಿಯಲ್ಲಿ ಪೋಸ್ ನೀಡಿ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ಅವರು ರಾಜಕೀಯಕ್ಕೆ ಇಳಿದು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಇತ್ತ ತಮಿಳು ಚಿತ್ರಪ್ರೇಮಿಯಾಗಿರುವ ವೆಂಕಟೇಶ್ ಅಯ್ಯರ್, ತನ್ನ ನೆಚ್ಚಿನ ನಟನ ಐಕಾನಿಕ್ ಪೋಸ್ ಅನ್ನು ಮರುಸೃಷ್ಟಿಸಿ ಅರ್ಧಶತಕವನ್ನು ಸಂಭ್ರಮಿಸಿದ್ದಾರೆ.

ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಜಯ್ ಅಭಿಮಾನಿಗಳು ಹಾಗೂ ಆರ್​ಸಿಬಿ ಫ್ಯಾನ್ಸ್​​ಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಸೆಲೆಬ್ರೇಷನ್ ಅರ್ಥ “ಆಶ್ಚರ್ಯಚಕಿತಗೊಳಿಸುವುದು” ಎನ್ನಲಾಗಿದೆ. ಇಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು ವೆಂಕಿ ಸ್ಫೋಟಕ ಇನಿಂಗ್ಸ್​ನೊಂದಿಗೆ ಎಲ್ಲರನ್ನು ಆಶ್ಚರ್ಯಗೊಳಿಸಿದ್ದು ಸುಳ್ಳಲ್ಲ.

ಪಂದ್ಯದ ಹೈಲೈಟ್ಸ್ ಮತ್ತು ಅಯ್ಯರ್  ಅಬ್ಬರ:

  • ಸ್ಫೋಟಕ ಇನ್ನಿಂಗ್ಸ್: ಗಾಯಗೊಂಡ ರಜತ್ ಪಾಟಿದಾರ್ ಬದಲಿಗೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್, ಪಂಜಾಬ್ ಕಿಂಗ್ಸ್​ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅವರು ಕೇವಲ 40 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 73 ರನ್ ಚಚ್ಚಿದರು.
  • ಆರ್‌ಸಿಬಿ ಭರ್ಜರಿ ಜಯ: ಅಯ್ಯರ್ ಅವರ ಈ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ತಂಡವು 4 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್​ ತಂಡ 23 ರನ್‌ಗಳಿಂದ ಸೋಲೊಪ್ಪಿಕೊಂಡಿದೆ.
  • ಪ್ಲೇಆಫ್‌ಗೆ ಲಗ್ಗೆ: ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಧಿಕೃತವಾಗಿ ಪ್ಲೇಆಫ್​ಗೆ ಪ್ರವೇಶಿಸಿದೆ.

ಸದ್ಯ ಪ್ಲೇಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಕೊನೆಯ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲೂ ಗೆದ್ದು ಆರ್​ಸಿಬಿ 20 ಅಂಕಗಳನ್ನು ಪಡೆಯಲಿದೆಯಾ ಕಾದು ನೋಡಬೇಕಿದೆ.

 

Source link

‘ಆಸೆ’ ಧಾರಾವಾಹಿಗೆ ಎಂಟ್ರಿ ಆಯ್ತು ಸೂರ್ಯ ತಂಗಿ ಪಾತ್ರ – Kannada News | Aase Serial: Tara’s Shocking Re entry Surya’s Sister Returns, Unraveling Old Mysteries

ಆಸೆ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣುತ್ತಿರುವ ಪ್ರಮುಖ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿ ಸಾಕಷ್ಟು ನಿರೀಕ್ಷೆಯನ್ನು ಸೃಷ್ಟಿಸಿದೆ. ಈಗ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರ ಎಂಟ್ರಿ ಆಗಿದೆ. ಅದು ಕೂಡ 860 ಎಪಿಸೋಡ್​​​ಗಳ ಬಳಿಕ ಎಂಬುದು ವಿಶೇಷ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಹಾಗಾದರೆ ಯಾವುದು ಆ ಪಾತ್ರ? ಆ ಬಗ್ಗೆ ಇಲ್ಲಿದೆ ವಿವರ.

ಆಸೆ ಧಾರಾವಾಹಿಯಲ್ಲಿ ರಂಗನಾಥ್ ಅವರಿಗೆ ನಾಲ್ಕು ಮಕ್ಕಳಿದ್ದರು. ಈ ಪೈಕಿ ತಾರಾ ಎಂಬ ಹುಡುಗಿ ಸಣ್ಣ ವಯಸ್ಸಿನಲ್ಲೇ ನಿಧನ ಹೊಂದಿದಳು. ಸಾಯಿಸಿದ್ದು ಮನೋಜ್ ಆದರೂ ಈ ಆರೋಪ ಬಂದಿದ್ದು ಸೂರ್ಯನ ಮೇಲೆ. ಹೀಗಾಗಿ ಸೂರ್ಯ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂತು. ಇದು ಸೂರ್ಯನ ಬಾಲ್ಯವನ್ನೇ ಹಾಳು ಮಾಡಿತು. ಅಮ್ಮನಿಂದ ಅವನನ್ನು ದೂರ ಮಾಡಿತು. ಈಗ ಆ ತಾರ ಮತ್ತೆ ಬಂದಿದ್ದಾಳೆ ಎಂಬುದನ್ನು ತೋರಿಸಲಾಗಿದೆ.

ತಾರಾ ಎಂಬ ಹುಡುಗಿಯನ್ನು ‘ಆಸೆ’ ಧಾರಾವಾಹಿಯಲ್ಲಿ ತರಲಾಗಿದೆ. ಆಕೆ ಒಂದು ಕಂಪನಿಯನ್ನು ನೋಡಿಕೊಳ್ಳುತ್ತಿದ್ದಾಳೆ. ಆಕೆಯನ್ನು ಹುಡುಕುವ ಪ್ರಯತ್ನದಲ್ಲಿರುವ ಮೀನಾಗೆ ತಾರಾಳ ಭೇಟಿ ಮಾಡುವ ಪರಿಸ್ಥಿತಿ ಬಂದಿದೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ತಾರಾ ತನ್ನ ತಂದೆಗೆ ಸಾಕು ಮಗಳು. ಈ ವಿಷಯ ಆಕೆಗೆ ಗೊತ್ತಿಲ್ಲ. ಈ ವಿಷಯ ಯಾವಾಗಲೂ ಗೊತ್ತಾಗದಂತೆ ನೋಡಿಕೊಳ್ಳಬೇಕು ಎಂಬುದು ತಾರಾಳ ತಂದೆಯ ಉದ್ದೇಶ. ಆದರೆ, ಸತ್ಯ ಎಂಬುದು ಒಂದಲ್ಲಾ ಒಂದು ದಿನ ಹೊರ ಬರಲೇಬೇಕಲ್ಲ. ಈಗ ಮೀನಾಳು ತಾರಾಳ ಹುಡುಕುವ ಪ್ರಯತ್ನದಲ್ಲಿ ಇರುವಾಗಲೇ ಆಕೆಯೇ ಎದುರು ಬಂದಿದ್ದಾಳೆ. ಮುಂದೆ ಸತ್ಯ ಗೊತ್ತಾದರೆ ಏನಾಗಬಹುದು ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ಆಸೆ’ ಧಾರಾವಾಹಿ ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ್ರಾ ಅಮೃತಾ ರಾಮಮೂರ್ತಿ?

ತಾರಾ ಸಿಕ್ಕರೆ ತನ್ನನ್ನು ಕೊಲ್ಲಲು ಪ್ರಯತ್ನಿಸಿದ್ದು ಯಾರು ಎಂಬ ವಿಷಯ ಗೊತ್ತಾಗಲಿದೆ. ಇದನ್ನು ಮಾಡಿದ್ದು ಮನೋಜ್ ಎಂಬ ವಿಷಯ ಗೊತ್ತಾದರೆ ಆತನ ತಾಯಿ ಬದಲಾಗುವು ಸಾಧ್ಯತೆ ಇರುತ್ತದೆ. ಮುಂದಿನ ದಿನಗಳಲ್ಲಿ ಈ ವಿಷಯ ರಿವೀಲ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಹವಾಮಾನ ವೈಪರೀತ್ಯದ ನಡುವೆ ಸುಧಾರಿಸಿದ ವಾಯು ಗುಣಮಟ್ಟ! – Kannada News | Bengaluru AQI Today: Air Quality Improves in Bengaluru, Moderate AQI Recorded on May 18

ಹವಾಮಾನ ವೈಪರೀತ್ಯದ ನಡುವೆ ಸುಧಾರಿಸಿದ ವಾಯು ಗುಣಮಟ್ಟ!

ಬೆಂಗಳೂರು, ಮೇ 18: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ಏರಿಕೆ ಮತ್ತು ಧೂಳಿನ ವಾತಾವರಣದಿಂದ ಕಂಗಾಲಾಗಿದ್ದ ಜನತೆಗೆ ಇಂದು ವಾಯು ಗುಣಮಟ್ಟದಲ್ಲಿ (AQI) ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಇಂದು ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 58 (ಸಾಧಾರಣ) ದಾಖಲಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ ಇಂದು 58 ರಷ್ಟು ಸಾಧಾರಣ ದಾಖಲಾಗಿದೆ.
  • ಬದಲಾದ ಹವಾಮಾನ ಮತ್ತು ಮಳೆಯ ಮುನ್ಸೂಚನೆಯಿಂದ ಮಾಲಿನ್ಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.
  • ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅತ್ಯುತ್ತಮ ಗಾಳಿಯ ಗುಣಮಟ್ಟ ವರದಿಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಹೇಗಿದೆ ವಾಯು ಗುಣಮಟ್ಟ

ಹವಾಮಾನ ಇಲಾಖೆ ನೀಡಿರುವ ಮಳೆಯ ಮುನ್ಸೂಚನೆ ಹಾಗೂ ಬದಲಾದ ಹವಾಮಾನದಿಂದಾಗಿ ಬೆಂಗಳೂರಿನ ಗಾಳಿಯ ಗುಣಮಟ್ಟ ಉತ್ತಮಗೊಂಡಿದೆ. ಮಾಲಿನ್ಯಕಾರಕ ಕಣಗಳಾದ PM10 ಮಟ್ಟ 67.2 µg/m³ ಮತ್ತು PM2.5 ಮಟ್ಟ 56.18 µg/m³ ನಷ್ಟು ದಾಖಲಾಗಿದೆ. ನಗರದ ಸಿಲ್ಕ್ ಬೋರ್ಡ್, ಹೆಬ್ಬಾಳ ಮತ್ತು ಜಯನಗರದಂತಹ ಪ್ರಮುಖ ವಾಹನ ದಟ್ಟಣೆಯ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಎಂದಿಗಿಂತ ತುಸು ಕಡಿಮೆ ದಾಖಲಾಗಿದ್ದು, ಬನಶಂಕರಿ ಹಾಗೂ ಬಾಪೂಜಿ ನಗರದಲ್ಲಿ ಅತ್ಯಂತ ಸ್ವಚ್ಛ ಗಾಳಿ ವರದಿಯಾಗಿದೆ.

ಆದಾಗ್ಯೂ, ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು (ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರು) ಮುಂಜಾನೆ ಮತ್ತು ಸಂಜೆ ಹೆಚ್ಚಿನ ಸಮಯ ಹೊರಾಂಗಣದಲ್ಲಿ ಕಳೆಯುವಾಗ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ತಜ್ಞರು ತಿಳಿಸಿದ್ದಾರೆ.

ಒಟ್ಟಾರೆ ಕರ್ನಾಟಕದ AQI ಸ್ಥಿತಿ ಹೇಗಿದೆ?

ಬೆಂಗಳೂರು ಮಾತ್ರವಲ್ಲದೆ ಇಡೀ ಕರ್ನಾಟಕದಾದ್ಯಂತ ವಾಯು ಗುಣಮಟ್ಟವು ಬಹುತೇಕ ನಿಯಂತ್ರಣದಲ್ಲಿದೆ. ಮಳೆಯ ಮುನ್ನೆಚ್ಚರಿಕೆ ಇರುವ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಗಾಳಿಯ ಶುದ್ಧತೆ ಉತ್ತಮವಾಗಿದೆ. ಮೈಸೂರು (AQI 32), ಬೆಳಗಾವಿ (AQI 26) ಮತ್ತು ಗದಗ (AQI 27) ಜಿಲ್ಲೆಗಳಲ್ಲಿ ವಾಯು ಗುಣಮಟ್ಟವು ‘ಅತ್ಯುತ್ತಮ’ (Good) ಶ್ರೇಣಿಯಲ್ಲಿದೆ. ಚಿಕ್ಕಬಳ್ಳಾಪುರ (AQI 66), ಬಾಗಲಕೋಟೆ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸಾಧಾರಣ ವಾಯು ಗುಣಮಟ್ಟ ದಾಖಲಾಗಿದೆ.

ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಹಲವೆಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಧೂಳಿನ ಕಣಗಳು ನೆಲಕಚ್ಚಲಿವೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಇಡೀ ರಾಜ್ಯದ ವಾಯು ಗುಣಮಟ್ಟವು ಮತ್ತಷ್ಟು ಸುಧಾರಿಸುವ ಸಾಧ್ಯತೆಯಿದೆ ಎಂದು ಪರಿಸರ ನಿಯಂತ್ರಣ ಮಂಡಳಿ ಮೂಲಗಳು ತಿಳಿಸಿವೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಮತ್ತು ರಸ್ತೆ ಕಾಮಗಾರಿಗಳು ಇದಕ್ಕೆ ಮುಖ್ಯ ಕಾರಣವೆನ್ನಲಾಗಿದೆ. ಉಸಿರಾಟದ ಸಮಸ್ಯೆ ಇರುವವರು ಮತ್ತು ಮಕ್ಕಳು ಹೊರಗಡೆ ಹೆಚ್ಚು ಸಮಯ ಕಳೆಯುವಾಗ ಮಾಸ್ಕ್ ಧರಿಸುವುದು ಸೂಕ್ತ. ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಗಾಳಿಯಲ್ಲಿನ ಧೂಳಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ಅಪಘಾತ: ಏರ್ ಶೋ ವೇಳೆ ಪರಸ್ಪರ ಡಿಕ್ಕಿಯಾಗಿ ಪತನಗೊಂಡ ಯುದ್ಧ ವಿಮಾನಗಳು – Kannada News | Mid Air Collision Between Jets at US Air Show Captured on Video

ಇಡಾಹೊ, ಮೇ 18: ಪಶ್ಚಿಮ ಇಡಾಹೊದ ಮೌಂಟೇನ್ ಹೋಮ್ ವಾಯುಪಡೆ ನೆಲೆಯಲ್ಲಿ ನಡೆದ ವೈಮಾನಿಕ ಪ್ರದರ್ಶನದ ವೇಳೆ ಯುಎಸ್ ನೌಕಾಪಡೆಯ ಎರಡು ಯುದ್ಧ ವಿಮಾನಗಳು ಗಾಳಿಯಲ್ಲೇ ಭೀಕರವಾಗಿ ಡಿಕ್ಕಿ ಹೊಡೆದಿವೆ. ಅಪಘಾತಕ್ಕೀಡಾದ ವಿಮಾನಗಳನ್ನು ನೌಕಾಪಡೆಯ ಅತ್ಯಾಧುನಿಕ ‘ಇಎ 18-ಜಿ ಗ್ರೋಲರ್ಸ್’ ಎಂದು ಗುರುತಿಸಲಾಗಿದೆ.

ಅತಿ ವೇಗದಲ್ಲಿ ಹಾರಾಟ ನಡೆಸುತ್ತಿದ್ದಾಗ ಸಂಭವಿಸಿದ ಈ ಭೀಕರ ಡಿಕ್ಕಿಯ ಹೊರತಾಗಿಯೂ, ಎರಡೂ ಜೆಟ್‌ಗಳಲ್ಲಿದ್ದ ನಾಲ್ವರು ಸಿಬ್ಬಂದಿ ತಕ್ಷಣವೇ ಸುರಕ್ಷಿತವಾಗಿ ಹೊರಜಿಗಿಯುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಇವರೆಲ್ಲರೂ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಬೇಸ್ ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್, ಮಿಲಿಟರಿ ನೆಲೆಯಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಸದ್ಯ ಈ ಭೀಕರ ಅಪಘಾತದ ಕುರಿತು ತನಿಖೆ ಆರಂಭವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜಗತ್ತಿಗೆ ಎದುರಾಗಿದೆ ಭೀಕರ ಬಡತನದ ಭೀತಿ, ಕೋವಿಡ್, ಯುದ್ಧ ಮತ್ತು ಇಂಧನ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮೋದಿ ಗಂಭೀರ ಎಚ್ಚರಿಕೆ – Kannada News | PM Modi Flags Risk of Rising Poverty Linked to Global Instability

ನವದೆಹಲಿ, ಮೇ 18: ಕಳೆದ ಕೆಲವು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಸರಣಿ ಬಿಕ್ಕಟ್ಟುಗಳಿಂದ ಜಾಗತಿಕ ಸಮುದಾಯ ಪಾಠ ಕಲಿಯದಿದ್ದರೆ, ಪ್ರಪಂಚದಾದ್ಯಂತ ಮತ್ತೊಮ್ಮೆ ಭೀಕರ ಬಡತನ ತಲೆದೂಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಳೆದ ಕೆಲವು ವರ್ಷಗಳ ಅವಧಿಯನ್ನು ಡಿಸಾಸ್ಟರ್ ಡಿಕೇಡ್ ಎಂದು ಬಣ್ಣಿಸಿರುವ ಅವರು, ಜಾಗತಿಕ ಸ್ಥಿರತೆಗೆ ಎದುರಾಗಿರುವ ಸವಾಲುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಆರ್ಥಿಕ ತಜ್ಞರ ಜತೆ ಉನ್ನತ ಮಟ್ಟದ ಸಭೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋಡಿ, ಜಾಗತಿಕ ಆರ್ಥಿಕತೆಯ ಸಧ್ಯದ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ಕೋವಿಡ್ ಮಹಾಮಾರಿ: ಜಾಗತಿಕವಾಗಿ ಕೋಟ್ಯಂತರ ಜನರ ಜೀವನ ಮತ್ತು ದೇಶಗಳ ಆರ್ಥಿಕತೆಯನ್ನು ಇದು ಧ್ವಂಸಗೊಳಿಸಿತ್ತು.

ಭೂರಾಜಕೀಯ ಯುದ್ಧಗಳು: ಜಗತ್ತಿನ ವಿವಿಧೆಡೆ ನಡೆಯುತ್ತಿರುವ ನಿರಂತರ ಸಂಘರ್ಷಗಳು ಹೊಸ ಅನಿಶ್ಚಿತತೆಯನ್ನು ದೃಷ್ಟಿಸಿವೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ, ಇಂಧನ ಮಾರಾಟ ಶೇ.50ರಷ್ಟು ಕುಸಿತ

ಇಂಧನ ಮತ್ತು ಆಹಾರ ಬಿಕ್ಕಟ್ಟು: ಯುದ್ಧ ಮತ್ತು ರಾಜತಾಂತ್ರಿಕ ಬಿಕ್ಕಟ್ಟುಗಳಿಂದಾಗಿ ತೈಲ ಹಾಗೂ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದ್ದು, ಹಣದುಬ್ಬರ ಅಪಾಯಕಾರಿ ಮಟ್ಟವನ್ನು ತಲುಪಿದೆ.
ಕಳೆದ ಒಂದು ದಶಕ ನಿಜಕ್ಕೂ ದುರಂತದ ದಶಕವಾಗಿದೆ. ಸೂಕ್ತ ನೀತಿಗಳು, ಬಲಿಷ್ಠ ಆಡಳಿತ ಮತ್ತು ನಿರಂತರ ಆರ್ಥಿಕ ಸುಧಾರಣೆಗಳು ಇಲ್ಲದಿದ್ದರೆ , ಕಳೆದ ಹತ್ತು ವರ್ಷಗಳಲ್ಲಿ ಬಡತನ ನಿರ್ಮೂಲನೆಯಲ್ಲಿ ಸಾಧಿಸಿದ ಪ್ರಗತಿಯು ಉಲ್ಟಾ ಆಗುವುದು ಗ್ಯಾರಂಟಿ. ಜಗತ್ತು ಮತ್ತೆ ಬಡತನದ ಕೂಪಕ್ಕೆ ತಳ್ಳಲ್ಪಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತ ಹೇಗೆ ಚೇತರಿಸಿಕೊಂಡಿತು ಎಂಬುದನ್ನು ವಿವರಿಸಿದ ಪಿಎಂ ಮೋದಿ, ಸಮಯೋಚಿತ ನೀತಿಗಳು ಮತ್ತು ಆರ್ಥಿಕ ಸುಧಾರಣೆಗಳ ಕಾರಣದಿಂದಾಗಿ ಭಾರತವು ಕೋವಿಡ್ ಆಘಾತದಿಂದ ಹೊರಬಂದಿದ್ದಲ್ಲದೆ, ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಿದೆ” ಎಂದರು. ಭವಿಷ್ಯದ ಆಘಾತಗಳನ್ನು ತಡೆಯಲು ಜಾಗತಿಕ ನಾಯಕರು ಸ್ವಾವಲಂಬನೆ (ಆತ್ಮನಿರ್ಭರತೆ), ನಾವೀನ್ಯತೆ , ಕೌಶಲ್ಯಾಭಿವೃದ್ಧಿ ಮತ್ತು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯತ್ತ ಗಮನ ಹರಿಸಬೇಕು ಎಂದು ಅವರು ಕರೆ ನೀಡಿದರು.

ಅಂತಾರಾಷ್ಟ್ರೀಯ ಒಗ್ಗಟ್ಟಿಗೆ ಕರೆ
ದುರ್ಬಲ ಜನಸಂಖ್ಯೆಯನ್ನು ಬಡತನದಿಂದ ರಕ್ಷಿಸಲು ಜಾಗತಿಕ ಪೂರೈಕೆ ಸರಪಳಿ , ಇಂಧನ ಭದ್ರತೆ ಮತ್ತು ಆಹಾರ ಭದ್ರತೆಯ ವಿಷಯದಲ್ಲಿ ಎಲ್ಲಾ ದೇಶಗಳು ಪರಸ್ಪರ ಸಹಕರಿಸಬೇಕು ಎಂದು ಮೋದಿ ಒತ್ತಾಯಿಸಿದರು. ಜಾಗತಿಕ ಮಟ್ಟದಲ್ಲಿ ತೈಲ ಬೆಲೆಗಳ ಏರಿಳಿತ ಮತ್ತು ಪ್ರಮುಖ ಆರ್ಥಿಕತೆಗಳ ಮಂದಗತಿಯ ಬೆಳವಣಿಗೆಯ ನಡುವೆ ಪ್ರಧಾನಿ ಮೋದಿ ನೀಡಿರುವ ಈ ಎಚ್ಚರಿಕೆ, ಜಾಗತಿಕ ಆರ್ಥಿಕ ನಾಯಕರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೂರನೇ ಭಾನುವಾರ ‘ಕೆಡಿ’ ಗಳಿಸಿದ್ದೆಷ್ಟು? ಒಟ್ಟೂ ಕಲೆಕ್ಷನ್ ವಿವರ ಇಲ್ಲಿದೆ – Kannada News | KD: The Devil Box Office Roars Past 22 Cr Amidst Controversies and Fan Love

ನಿರ್ದೇಶಕ ಪ್ರೇಮ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಷನ್‌ನ ‘ಕೆಡಿ: ದಿ ಡೆವಿಲ್’ ಸಿನಿಮಾ (KD Movie) ರಿಲೀಸ್ ಆಗಿ ಮೂರು ವಾರಗಳು ಕಳೆಯುತ್ತಾ ಬಂದಿವೆ. ದೊಡ್ಡ ಬಜೆಟ್​​ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಬೆಂಗಳೂರಿನ ಭೂಗತ ಜಗತ್ತಿನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಧ್ರುವ ಹಾಗೂ ರೀಷ್ಮಾ ಜೊತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

‘ಕೆಡಿ’ ಸಿನಿಮಾಗೆ ಈವರೆಗೆ 10,795 ಶೋಗಳು ಸಿಕ್ಕಿವೆ. ಈ ಸಿನಿಮಾ ಮೊದಲ ಮೂರು ದಿನ ಉತ್ತಮ ಗಳಿಕೆ ಮಾಡಿತು. ಈ ಸಿನಿಮಾ ಮೂರನೇ ಭಾನುವಾರ 39 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 22 ಕೋಟಿ ರೂಪಾಯಿ ಆಗಿದೆ. ಟಿವಿ, ಒಟಿಟಿ ಹಕ್ಕುಗಳ ಮಾರಾಟದಿಂದ ಸಿನಿಮಾಗೆ ಲಾಭ ಆಗಬಹುದು ಎಂದು ಊಹಿಸಲಾಗಿದೆ.

‘ಕೆಡಿ’ ಸಿನಿಮಾ ಬಿಡುಗಡೆಗೆ ಮುನ್ನ ಸಾಂಗ್ ಮತ್ತು ಟ್ರೇಲರ್ ವಿಚಾರದಲ್ಲಿ ಸಾಕಷ್ಟು ವಿವಾದಗಳನ್ನು ಎದುರಿಸಿತು. ಚಿತ್ರದ ‘ಸೆರಗ ಸರ್ಸೆ’ ಹಾಡಿನಲ್ಲಿ ನೋರಾ ಫತೇಹಿ ಕಾಣಿಸಿಕೊಂಡಿದ್ದರು. ಆದರೆ, ಈ ಹಾಡಿನ ಸಾಹಿತ್ಯ ಅತ್ಯಂತ ಅಶ್ಲೀಲ ಹಾಗೂ ದ್ವಂದ್ವಾರ್ಥದಿಂದ ಕೂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ಸಲ್ಲಿಕೆಯಾದ ಬೆನ್ನಲ್ಲೇ, ಚಿತ್ರತಂಡ ಯೂಟ್ಯೂಬ್‌ನಿಂದ ಈ ಹಾಡನ್ನು ತೆಗೆದುಹಾಕಿತು. ಈ ಹಾಡನ್ನು ಸಿನಿಮಾದಿಂದಲೂ ತೆಗೆಯಲಾಗಿದೆ.

ಇದನ್ನೂ ಓದಿ: ಒಂದು ವಾರಕ್ಕೆ ‘ಕೆಡಿ’ ಸಿನಿಮಾ ಗಳಿಕೆ ಮಾಡಿದ್ದೆಷ್ಟು? ಇಲ್ಲಿದೆ ಲೆಕ್ಕಾಚಾರ

ಇನ್ನು ಚಿತ್ರದ ಟ್ರೇಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸೆನ್ಸಾರ್ ಮಂಡಳಿ ಕಿಡಿಕಾರಿತ್ತು. ಅನುಮತಿ ಇಲ್ಲದ ಕೆಲವು ದೃಶ್ಯಗಳು ಅದರಲ್ಲಿ ಸೇರಿದ್ದ ಕಾರಣಕ್ಕಾಗಿ ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿತ್ತು. ನಂತರ ಪರಿಷ್ಕೃತ ಟ್ರೇಲರ್ ಅನ್ನು ಮರು-ಅಪ್‌ಲೋಡ್ ಮಾಡಲಾಯಿತು. ಈ ಸೆನ್ಸಾರ್ ವಿವಾದಗಳಿಂದಾಗಿ ಸಿನಿಮಾ ಏಪ್ರಿಲ್ 30 ರಂದು ಕೇವಲ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿ, ಇತರ ಭಾಷೆಗಳ ಡಬ್ಬಿಂಗ್ ಆವೃತ್ತಿಗಳ ಬಿಡುಗಡೆ ತಡವಾಯಿತು. ಧ್ರುವ ಸರ್ಜಾ ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಿದ್ದರೂ, ವಿವಾದಗಳೇ ಈ ಚಿತ್ರದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದವು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Weather Forecast: ರಾಜ್ಯದಲ್ಲಿಂದು ಆಲಿಕಲ್ಲು ಮಳೆಯಬ್ಬರ; 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​! – Kannada News | Karnataka rain Update: Heavy Rains, Hailstorm Alert and Orange Alert Issued

ರಾಜ್ಯದಲ್ಲಿಂದು ಆಲಿಕಲ್ಲು ಮಳೆಯಬ್ಬರ; 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​!

ಬೆಂಗಳೂರು, ಮೇ 18: ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ (Weather)ಮತ್ತು ಗಾಳಿ ಸಹಿತ ಗುಡುಗು ಸಿಡಿಲಿನ ಮುನ್ಸೂಚನೆ ನೀಡಿದೆ. ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ವರುಣನ ಅಬ್ಬರ ಜೋರಾಗಿರಲಿದ್ದು, ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರಿ ಮಳೆ ಹಾಗೂ ಆಲಿಕಲ್ಲು ಮಳೆಯ ಮುನ್ನೆಚ್ಚರಿಕೆಯನ್ನು ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಆಲಿಕಲ್ಲು ಮಳೆಯಾಗುವ (Hailstorm) ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ.

ಮುಖ್ಯಾಂಶಗಳು

  • ಮುಂದಿನ ನಾಲ್ಕು ದಿನ ಕರ್ನಾಟಕದಾದ್ಯಂತ ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ.
  • ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಆಲಿಕಲ್ಲಿ ಮಳೆ
  • ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

ಆಲಿಕಲ್ಲು ಮಳೆ

ಉತ್ತರ ಒಳನಾಡಿನ ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಆಲಿಕಲ್ಲು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದೆ. ದಕ್ಷಿಣ ಒಳನಾಡಿನ ದಾವಣಗೆರೆ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯೊಂದಿಗೆ ಆಲಿಕಲ್ಲು ಜೊತೆಗೆ ವರುಣಾರ್ಭಟವಿರಲಿದ್ದು, ಈ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್​ ನೀಡಲಾಗಿದೆ.

ಆಲಿಕಲ್ಲು ಮಳೆ ಮತ್ತು ಬಿರುಗಾಳಿ ಬೀಸುವ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಪ್ರಮುಖವಾಗಿ ರೈತರು ಹಾಗೂ ಜಾನುವಾರು ಸಾಕಣೆದಾರರು ಹವಾಮಾನ ವೈಪರೀತ್ಯದ ಬಗ್ಗೆ ಎಚ್ಚರಿಕೆ ವಹಿಸಲು ಕೋರಲಾಗಿದೆ.

ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಗುಡುಗು ಸಹಿತ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಈ ಭಾಗಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆಯಿದೆ.

ಎಲ್ಲೆಲ್ಲಿ ಸಾಧಾರಣ ಮಳೆ?

ರಾಯಚೂರು, ಯಾದಗಿರಿ, ವಿಜಯಾಪುರ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಚಿಕ್ಕಮಗಳೂರು, ಹಾಸನ, ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ. ಉಳಿದ ಉತ್ತರ ಒಳನಾಡಿನ ಭಾಗಗಳಲ್ಲಿ ಒಣ ಹವಾಮಾನ ಇರಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆ ಅಬ್ಬರ; ಸಿಡಿಲು ಬಡಿದು ಇಬ್ಬರು ಸಾವು, ಶಿವಮೊಗ್ಗದಲ್ಲಿ ರೈಲು ಸಂಚಾರ ವ್ಯತ್ಯಯ

ಮೀನುಗಾರರಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ

ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ತೀರದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ (ಕೆಲವೊಮ್ಮೆ 60 ಕಿ.ಮೀ ವರೆಗೆ) ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ, ಮೇ 19ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಮುಂದಿನ 5 ದಿನಗಳ ಕಾಲ ರಾಜ್ಯದ ಗರಿಷ್ಠ ತಾಪಮಾನದಲ್ಲಿ ಯಾವುದೇ ಮಹತ್ತರ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಸಿಡಿಲು ಮತ್ತು ಬಿರುಗಾಳಿ ಬೀಸುವ ಸಂದರ್ಭದಲ್ಲಿ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಲು ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭರ್ಜರಿ ಗಳಿಕೆ ಮಾಡಿದ ‘ಕರುಪ್ಪು’; ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ತ್ರಿಷಾ ಸಿನಿಮಾ – Kannada News | Karuppu Box Office Storm: Suriya Trisha Film Hits 100 Crore Club in Just 3 Days

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಅಭಿನಯದ ‘ಕರುಪ್ಪು’ ಸಿನಿಮಾ (Karuppu Movie) ಸದ್ದು ಮಾಡುತ್ತಿದೆ. ಸಾಕಷ್ಟು ಅಡೆತಡೆಗಳನ್ನು ಮೀರಿ ರಿಲೀಸ್ ಆದ ಈ ಚಿತ್ರ ಬಾಕ್ಸ್ ಆಫೀಸ್​​ನ್ಲಿ ಯಶಸ್ಸು ಕಂಡಿದೆ. ಆರ್. ಜೆ. ಬಾಲಾಜಿ ನಿರ್ದೇಶನದ ಫ್ಯಾಂಟಸಿ ಆಕ್ಷನ್ ಡ್ರಾಮಾ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಗಳಿಕೆ ಮಾಡುತ್ತಿದೆ. ಕೇವಲ ಮೂರೇ ದಿನಕ್ಕೆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಹಲವು ವರ್ಷಗಳ ಬಳಿಕ ಸೂರ್ಯ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ.

‘ಕರುಪ್ಪು’ ಚಿತ್ರದ ಕಥೆ ಮೊದಲು ಸೂರ್ಯ ಅವರಿಗಾಗಿ ಮಾಡಿದ್ದಾಗಿರಲಿಲ್ಲ, ಬದಲಿಗೆ ತ್ರಿಷಾ ಅವರನ್ನು ಗಮನದಲ್ಲಿ ಇಟ್ಟುಕೊಂಡು ಸಿದ್ಧಪಡಿಸಲಾಗಿತ್ತು. ನಂತರ ನಂತರ ಚಿತ್ರಕ್ಕೆ ಕಮರ್ಷಿಯಲ್ ಮತ್ತು ಮಾಸ್ ಅಂಶಗಳನ್ನು ಸೇರಿಸಿ ಸೂರ್ಯ ಅವರಿಗೆ ಕಥೆ ಹೇಳಿದಾಗ, ಅವರು ತಕ್ಷಣವೇ ಒಪ್ಪಿಕೊಂಡರು. ಹೀಗೆ 2024ರ ಕೊನೆಯಲ್ಲಿ ಈ ಸಿನಿಮಾ ಆರಂಭ ಆಯಿತು. ಈಗ ಚಿತ್ರ ಭಾರೀ ಗಳಿಕೆ ಮಾಡಿದೆ.

‘ಕರಪ್ಪು’ ಚಿತ್ರಕ್ಕೆ ಶುಕ್ರವಾರ 15.50 ಕೋಟಿ ರೂಪಾಯಿ, ಶನಿವಾರ 24.15 ಕೋಟಿ ರೂಪಾಯಿ ಹಾಗೂ ಭಾನುವಾರ 28.35 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಭಾರತದಲ್ಲಿ 68 ಕೋಟಿ ನೆಟ್ ಕಲೆಕ್ಷನ್ ಹಾಗೂ 78 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ವಿದೇಶದಿಂದ ಸಿನಿಮಾಗೆ 42 ಕೋಟಿ ರೂಪಾಯಿ ಗಳಿಕೆ ಆಗಿದ್ದು, ಸಿನಿಮಾದ ಕಲೆಕ್ಷನ್ 120 ಕೋಟಿ ರೂಪಾಯಿ ಆಗಿದೆ. ಈ ಮೂಲಕ ತ್ರಿಷಾ ಹಾಗೂ ಸೂರ್ಯ ದೊಡ್ಡ ಗೆಲುವು ಕಂಡಿದ್ದಾರೆ.

ಇದನ್ನೂ ಓದಿ:  ವಿಜಯ್ ಸಿಎಂ ಆದ ಬಳಿಕ ಗೆದ್ದ ತ್ರಿಷಾ; ‘ಕರುಪ್ಪು’ ಚಿತ್ರ ಹೊಗಳಿದ ಫ್ಯಾನ್ಸ್

ಇನ್ನು ಕರುಪ್ಪು ಸಿನಿಮಾದ ಹಾದಿ ಸುಲಭವಾಗಿರಲಿಲ್ಲ. ಶೂಟಿಂಗ್ ಹಂತದಲ್ಲಿ ಅನುಮತಿ ಪಡೆಯದ ಕಾರಣಕ್ಕೆ ಚೆನ್ನೈ ಬಳಿ ಪೊಲೀಸರು ಚಿತ್ರೀಕರಣವನ್ನು ತಡೆದಿದ್ದರು. ಆದರೆ ಅತಿ ದೊಡ್ಡ ವಿಘ್ನ ಎದುರಾಗಿದ್ದು ಬಿಡುಗಡೆಯ ದಿನ. ಮೇ 14, 2026 ರಂದು ರಿಲೀಸ್ ಆಗಬೇಕಿದ್ದ ಈ ಚಿತ್ರಕ್ಕೆ ಕೊನೆ ಕ್ಷಣದಲ್ಲಿ ಹಣಕಾಸಿನ ಸಮಸ್ಯೆ ಹಾಗೂ ವಿತರಣೆಯ ಬಿಕ್ಕಟ್ಟು ಎದುರಾಗಿ ಮುಂಜಾನೆಯ ಶೋಗಳು ರದ್ದಾದವು. ಇದು ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿಸಿತು. ಅಂತಿಮವಾಗಿ ಸೂರ್ಯ ಮತ್ತು ಚಿತ್ರತಂಡದ ಪ್ರಯತ್ನದಿಂದ ಸಮಸ್ಯೆಗಳು ಬಗೆಹರಿದು, ಮೇ 15 ರಂದು ಸಿನಿಮಾ ಯಶಸ್ವಿಯಾಗಿ ತೆರೆಕಂಡು ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link