All posts by nagaraj11081993

ಹಾಸನ: ವಿಶ್ವ ಪಾರಂಪರಿಕ ತಾಣಕ್ಕಿಲ್ಲ ಸುಸಜ್ಜಿತ ರಸ್ತೆ; 630 ಕೋಟಿ ರೂ ಯೋಜನೆಗೆ ಗ್ರಹಣ – Kannada News | Belur NH 373 Delay: Land Acquisition Woes Stall 630 Cr Road Project in Heritage Town

ಹಾಸನ, ಮಾರ್ಚ್​ 02: ಅದು ವಿಶ್ವವಿಖ್ಯಾತ ಶಿಲ್ಪ ಕಲೆಗಳ ತವರು, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ದೇವಾಲಯ ಇರುವ ನೆಲೆಬೀಡು, ಕರುನಾಡಿನ ಕಲೆ ವಾಸ್ತು ಶಿಲ್ಪವನ್ನ ಅನಾವರಣಗೊಳಿಸುತ್ತಿರುವ ನಗರ. ನಿತ್ಯವೂ ಸಹಸ್ರಾರು ಪ್ರವಾಸಿಗರು ಬಂದು ಹೋಗುವ ಪಟ್ಟಣ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದು ಇಷ್ಟೆಲ್ಲಾ ವಿಶೇಷತೆ ಇರುವ ಊರಿಗೆ ರಾಷ್ಟೀಯ ಹೆದ್ದಾರಿ (National Highway) ಮಂಜೂರಾಗಿ ಬರೋಬ್ಬರಿ 5 ವರ್ಷವೇ ಕಳೆದಿದೆ. ಕುಂಟುತ್ತಾ, ಉರುಳುತ್ತಾ ಸಾಗಿರುವ ಕಾಮಗಾರಿ ಮಾತ್ರ ಮುಗಿಯುವುದಿರಲಿ ಆರಂಭವೇ ಆಗಿಲ್ಲ. 630 ಕೋಟಿ ರೂ ಬೃಹತ್ ಮೊತ್ತದ ರಾಷ್ಟ್ರೀಯ ಹೆದ್ದಾರಿ 373ಕ್ಕೆ ಭೂಸ್ವಾಧೀನ ಗುಮ್ಮ ಕಾಡುತ್ತಿದ್ದು, ನಿತ್ಯವೂ ಸಾವಿರಾರು ವಾಹನಗಳು ಓಡಾಡುವ ರಸ್ತೆಯ ಕಾಮಗಾರಿ ಬೇಗನೆ ಮುಗಿಯಲಿ ಎನ್ನುವ ಆಗ್ರಹ ಕೇಳಿ ಬಂದಿದೆ.

ದೇಶದಲ್ಲಿ ರಾಷ್ಟೀಯ ಹೆದ್ದಾರಿಗಳ ನಿರ್ಮಾಣ ಶರವೇಗದಲ್ಲಿ ಆಗುತ್ತಿದೆ ಎನ್ನುವ ಮಾತುಗಳನ್ನ ಕೇಂದ್ರ ಸರ್ಕಾರ ಹೆದ್ದಾರಿ ಸಚಿವರು ಪದೇ ಪದೇ ಹೇಳೋದನ್ನ ಕೇಳಿದ್ದೇವೆ. ಆದರೆ ಹಾಸನ ಜಿಲ್ಲೆಯ ಐತಿಹಾಸಿಕ ನಗರ, ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಶ್ರೀ ಚನ್ನಕೇಶವಸ್ವಾಮಿ ದೇವಾಲಯವಿರುವ ಬೇಲೂರಿನಿಂದ ಮೈಸೂರಿನ ಬಿಳಿಕೆರೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 373 ಗ್ರಾಮೀಣ ರಸ್ತೆಗಿಂತಲೂ ಕಡೆಯಾಗಿದೆ. ಸಹಸ್ರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ಗುಂಡಿಗಳು ಒಂದೆಡೆಯಾದರೆ ಎರಡು ವರ್ಷಗಳ ಹಿಂದೆ ಚತುಷ್ಪತ ರಸ್ತೆ ನಿರ್ಮಾಣಕ್ಕೆಂದು ಅಲ್ಲಲ್ಲಿ ಇರುವ ರಸ್ತೆಯನ್ನ ಬಗೆದು ಮಾಡಿರುವ ಅವಾಂತರ ವಾಹನ ಸವಾರರಿಗೆ ದೊಡ್ಡ ತಲೆನೋವು ತರಿಸಿದೆ.

ಇದನ್ನೂ ಓದಿ: ಹಾಸನ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಹತ್ತಾರು ವಿಘ್ನ: ಕಾಮಗಾರಿ ಮುಗಿಯೋದು ಯಾವಾಗ?

ಹಾಸನದಿಂದ ಸುಮಾರು 35 ಕಿ.ಮೀಟರ್ ಸೇರಿ ಬೇಲೂರಿನಿಂದ ಬಿಳಿಕೆರೆವರೆಗಿನ ಈ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 630 ಕೋಟಿ ರೂ ಹಣ ಮೀಸಲಿಟ್ಟಿದೆ. ಆದರೆ ರಸ್ತೆಗೆ ಬೇಕಾದ ಭೂಸ್ವಾಧೀನ ಮಾಡುವಲ್ಲಿ ಅಧಿಕಾರಿಗಳು ಮಾಡಿರುವ ವಿಳಂಬದಿಂದಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎನ್ನೋದು ಸ್ಥಳೀಯ ಶಾಸಕರ ಆಕ್ರೋಶ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ, ರಾಜ್ಯದ ಲೋಕೋಪಯೋಗಿ ಸಚಿವರು ಕಾಮಗಾರಿ ಬಗ್ಗೆ ಉತ್ಸಾಹ ತೋರಿದ್ದಾರೆ, ಆದರೆ ಭೂಸ್ವಾಧೀನ ಪ್ರಕ್ರಿಯೆ ಮಾಡುವಲ್ಲಿ ಅಧಿಕಾರಿಗಳು ಮಾಡಿದ ವಿಳಂಬದಿಂದ ಸಮಸ್ಯೆ ಆಗಿದೆ ಎನ್ನುವುದು ಜನಪ್ರತಿನಿಧಿಗಳ ಆರೋಪ.

ಹೆಚ್ಚುವರಿಯಾಗಿ 100 ಕೋಟಿ ರೂ ಹಣ ಬೇಕು

ಹಾಸನದಿಂದ ಬೇಲೂರಿಗೆ ತೆರಳಲಿರುವ ಮಾರ್ಗ ಇದೀಗ ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ. ಬೇಲೂರು ಮೂಲಕ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ಚಿಕ್ಕಮಗಳೂರು, ಶೃಂಗೇರಿ, ಹೊರನಾಡು ಸೇರಿ ಚಾರ್ಮಾಡಿ ಘಾಟ್ ಮೂಲಕ ಮಂಗಳೂರಿನ ಕಡೆಗೆ ತೆರಳಲು ಇರುವುದು ಕೂಡ ಇದೇ ಮಾರ್ಗ. ಹಾಗಾಗಿಯೇ ಐದು ವರ್ಷಗಳ ಹಿಂದೆಯೇ ಈ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಮೀಸಲಿಟ್ಟಿತ್ತು. ಆದರೆ ಇಲ್ಲಿಗೆ ಮೀಸಲಿಟ್ಟ ಹಣವನ್ನ ಬೇರೊಂದು ಕಾಮಗಾರಿಗೆ ವರ್ಗಾವಣೆ ಮಾಡಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು. ಬಳಿಕ ವರ್ಷದ ಹಿಂದೆ ಮತ್ತೆ ಈ ಯೋಜನೆಗೆ ಮರುಜೀವ ಬಂದು, ಕಾಮಗಾರಿ ಆರಂಭಿಸಲು ಗುತ್ತಿಗೆದಾರರು ಅಲ್ಲಲ್ಲಿ ರಸ್ತೆಯನ್ನ ಬಗೆದು, ಮರಳನ್ನು ಕಡಿಯುವುದಕ್ಕೆ ಶುರು ಮಾಡಿದ್ದರು. ಆದರೆ ಈ ಯೋಜನೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ 109 ಕೋಟಿ ರೂ ಹಣವನ್ನ ಮೀಸಲಿಡಲಾಗಿದ್ದು, ಹಾಸನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಬಳಿಕ ಹಾಸನ ನಗರದ ಸುತ್ತಮುತ್ತಲ ಭೂಮಿಯ ಮೌಲ್ಯ ದುಪ್ಪಟ್ಟಾಗಿದೆ. ಹಾಗಾಗಿ ಹೆಚ್ಚುವರಿಯಾಗಿ 100 ಕೋಟಿ ರೂ ಹಣ ಬೇಕು ಎನ್ನೋದು ಒಂದೆಡೆಯಾದರೆ ಭೂಸ್ವಾಧೀನ ಪ್ರಕ್ರಿಯೆ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿ ಕಚೇರಿ ಬೆಂಗಳೂರಿನಲ್ಲಿದ್ದು, ಜನರೊಂದಿಗೆ ಸಂವಹನಕ್ಕೆ ಕೂಡ ಸಮಸ್ಯೆ ಆಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಕಾಮಗಾರಿ ನಿಧಾನವಾಗಿರುವ ಬಗ್ಗೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ಭೂಸ್ವಾಧೀನ ಅಧಿಕಾರಿಗಳ ಕಚೇರಿಯನ್ನು ಕೂಡ ಹಾಸನದಲ್ಲಿ ತೆರೆಯುವ ಬಗ್ಗೆ ಕೂಡ ಚರ್ಚೆ ನಡೆಸಲಾಗಿದ್ದು. ಶೀಘ್ರ ಕಾಮಗಾರಿ ಆರಂಭಿಸುವುದಾಗಿ ಹಾಸನ ಡಿಸಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಸಲಿ ಬದಲು ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು!

ಹಾಸನ ಜಿಲ್ಲೆಯ ಅತೀ ಹೆಚ್ಚು ವಾಹನ ಸಂಚಾರ ಇರುವ ರಸ್ತೆಗಳಲ್ಲಿ ಹಾಸನ ಬೇಲೂರು ರಸ್ತೆಯೂ ಒಂದು ರಾಜ್ಯದ ಹಲವು ಪ್ರಮುಖ ಧಾರ್ಮಿಕ ಕೇಂದ್ರ, ಪ್ರವಾಸಿತಾಣಗಳಿಗೆ ಇದೇ ಪ್ರಮುಖ ಮಾರ್ಗವಾಗಿದ್ದು, ವಾಹನಗಳ ಓಡಾಟ ಹೆಚ್ಚಿರುವ  ಕಾರಣ ಚತುಷ್ಪಥ ರಸ್ತೆ ಆಗಬೇಕು ಎನ್ನೋದು ಹಲವು ವರ್ಷದ ಯೋಜನೆ. ಅದಕ್ಕಾಗಿ ಹಣವೂ ಮೀಸಲಿಡಲಾಗಿದೆ. ಕಾಮಗಾರಿಯೂ ಶುರುವಾಗಿದೆ. ಆದರೆ ಸಣ್ಣ ಪುಟ್ಟ ತೊಡಕುಗಳನ್ನ ನಿವಾರಣೆ ಮಾಡುವಲ್ಲಿ ಆಗಿರುವ ನಿರ್ಲಕ್ಷ್ಯ ಇಡೀ ಯೋಜನೆಯನ್ನೇ ಮಂಕಾಗಿಸಿದ್ದು, ಈ ಬಗ್ಗೆ ಸರ್ಕಾರ ಯೋಜನೆ ಸಾಕಾರಕ್ಕೆ ಅಗತ್ಯ ಕ್ರಮವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಟಾಕ್ಸಿಕ್’ ಮೊದಲ ಹಾಡಿನಿಂದ ಯಶ್ ಅಭಿಮಾನಿಗಳಿಗೆ ನಿರಾಸೆ: ಕಾರಣ ಏನು? – Kannada News | Yash fans upset after Toxic team released only audio track of Tabaahi song

ಹತ್ತಾರು ಕಾರಣಗಳಿಂದ ‘ಟಾಕ್ಸಿಕ್’ (Toxic) ಸಿನಿಮಾ ಹೈಪ್ ಸೃಷ್ಟಿಸುತ್ತಿದೆ. ಈ ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಸಿನಿಮಾಗೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡಿದ್ದಾರೆ. ದೇಶಾದ್ಯಂತ ಇರುವ ಯಶ್ (Yash) ಅಭಿಮಾನಿಗಳು ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ಟೀಸರ್ ನೋಡಿದ ಎಲ್ಲರಿಗೂ ಕೌತುಕ ಹೆಚ್ಚಿದೆ. ಆದರೆ ಮೊದಲ ಹಾಡು ಬಿಡುಗಡೆ ಆದ ಬಳಿಕ ಕೆಲವರಿಗೆ ನಿರಾಸೆ ಆಗಿದೆ. ಹೌದು, ಮಾರ್ಚ್ 2ರಂದು ರಿಲೀಸ್ ಆದ ‘ತಬಾಹಿ..’ (Tabaahi) ಹಾಡಿನ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

‘ತಬಾಹಿ’ ಹಾಡು ರಿಲೀಸ್ ಆಗಲಿದೆ ಎಂದು ಎರಡು ದಿನಗಳ ಮುಂಚೆಯೇ ತಿಳಿಸಲಾಗಿತ್ತು. ಅದಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದರು. ವಿಶಾಲ್ ಮಿಶ್ರಾ ಅವರು ಈ ಹಾಡಿಗೆ ಸಂಗೀತ ನೀಡಿದ್ದಾರೆ ಎಂಬ ಕಾರಣದಿಂದ ಹೈಪ್ ಜಾಸ್ತಿ ಆಗಿತ್ತು. ಅಲ್ಲದೇ ಈ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಮತ್ತು ಯಶ್ ಅವರು ಜೋಡಿಯಾಗಿ ಕಾಣಿಸಿಕೊಂಡಿರುವುದರಿಂದ ಅವರ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಎಗ್ಸೈಟ್ ಆಗಿದ್ದರು.

‘ಜೀ ಮ್ಯೂಸಿಕ್’ ಮೂಲಕ ‘ತಬಾಹಿ’ ಹಾಡು ರಿಲೀಸ್ ಆಯಿತು. ಆದರೆ ಒಂದು ಟ್ವಿಸ್ಟ್ ಎದುರಾಯಿತು. ‘ಟಾಕ್ಸಿಕ್’ ಚಿತ್ರತಂಡದವರು ಈಗ ಬಿಡುಗಡೆ ಮಾಡಿರುವುದು ಕೇವಲ ಆಡಿಯೋ ಸಾಂಗ್! ಇದರಲ್ಲಿ ಯಾವುದೇ ದೃಶ್ಯಗಳು ಕಾಣಿಸಿಲ್ಲ. ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ನೋಡಲು ಕಾದಿದ್ದ ಎಲ್ಲರಿಗೂ ನಿರಾಸೆ ಆಗಿದೆ.

‘ತಬಾಹಿ’ ಹಾಡು:

ಯೂಟ್ಯೂಬ್​​ನಲ್ಲಿ ಈ ಹಾಡಿಗೆ ಕಮೆಂಟ್ ಮಾಡಿದ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ‘ವಿಡಿಯೋ ಎಲ್ಲಿದೆ? ಕೇವಲ ಆಡಿಯೋ ಟ್ರ್ಯಾಕ್ ಮಾತ್ರ ರಿಲೀಸ್ ಮಾಡುತ್ತೇನೆ ಅಂತ ಮೊದಲೇ ಹೇಳಬೇಕಿತ್ತು’ ಎಂದು ಅಭಿಮಾನಿಗಳು ಬೇಸರದಿಂದ ಕಮೆಂಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು 6 ಹಾಡುಗಳು ಇರಲಿವೆ. ಇನ್ನುಳಿದ ಹಾಡುಗಳನ್ನು ಯಾವ ರೀತಿ ರಿಲೀಸ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಟಾಕ್ಸಿಕ್ Vs ಧುರಂದರ್ 2: ಅಡ್ವಾನ್ಸ್ ಬುಕಿಂಗ್​ನಲ್ಲಿ ಮುನ್ನಡೆ ಸಾಧಿಸಿದ ರಣವೀರ್ ಸಿಂಗ್ ಸಿನಿಮಾ

‘ತಬಾಹಿ’ ಹಾಡಿನ ಕನ್ನಡ ವರ್ಷನ್​​ಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಸಾಹಿತ್ಯ ಗಮನಿಸಿದರೆ ಈ ಹಾಡು ಸಖತ್ ರೊಮ್ಯಾಂಟಿಕ್ ಆಗಿ ಮೂಡಿಬಂದಿರುವ ಸಾಧ್ಯತೆ ಇರುತ್ತದೆ. ಈಗಲೇ ಆ ದೃಶ್ಯಗಳನ್ನು ತೋರಿಸಿದರೆ ಕಥೆಯ ಬಗ್ಗೆ ಸುಳಿವು ಸಿಗುವ ಸಾಧ್ಯತೆ ಇರುತ್ತದೆ. ಚಿತ್ರಮಂದಿರದಲ್ಲಿ ಇದನ್ನು ಸರ್ಪ್ರೈಸ್ ಆಗಿ ತೋರಿಸುವ ಉದ್ದೇಶದಿಂದ ಚಿತ್ರತಂಡದವರು ವಿಡಿಯೋ ಸಾಂಗ್ ಬಿಡುಗಡೆ ಮಾಡಿಲ್ಲ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಹ್ರೇನ್ ರಾಜ, ಸೌದಿ ಅರೇಬಿಯಾದ ಪ್ರಿನ್ಸ್​ಗೆ ಕರೆ ಮಾಡಿದ ಪ್ರಧಾನಿ ಮೋದಿ; ಎರಡೂ ದೇಶಗಳ ಮೇಲಿನ ದಾಳಿಗೆ ಖಂಡನೆ – Kannada News | PM Modi Speaks With Saudi arabia Crown Prince and Bahrain King Condemns Iran Attacks

ನವದೆಹಲಿ, ಮಾರ್ಚ್ 2: ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಬಹ್ರೇನ್ ರಾಜ ಮತ್ತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಜೊತೆ ಫೋನ್​ನಲ್ಲಿ ಮಾತನಾಡಿದ್ದಾರೆ. ಈ ಎರಡೂ ದೇಶಗಳ ಮೇಲೆ ಇರಾನ್ (Iran Attack) ನಡೆಸಿದ ದಾಳಿಯನ್ನು ಮೋದಿ ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಮತ್ತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಈ ಎರಡೂ ದೇಶಗಳ ಮೇಲೆ ಇರಾನ್ ನಡೆಸಿದ ದಾಳಿಯನ್ನು ಮೋದಿ ಖಂಡಿಸಿದ್ದು, ಶಾಂತಿಯ ಪುನಃಸ್ಥಾಪನೆಗಾಗಿ ರಾಜತಾಂತ್ರಿಕ ಪ್ರಯತ್ನಗಳಿಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಮೋದಿ, “ಬಹ್ರೇನ್ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದೆ. ಭಾರತವು ಬಹ್ರೇನ್ ಮೇಲಿನ ದಾಳಿಯನ್ನು ಖಂಡಿಸುತ್ತದೆ ಮತ್ತು ಈ ಕಷ್ಟದ ಸಮಯದಲ್ಲಿ ಅಲ್ಲಿನ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತದೆ ಎಂದು ತಿಳಿಸಿದೆ. ಬಹ್ರೇನ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್ ಸಂಘರ್ಷ ತೀವ್ರ ಕಳವಳಕಾರಿ; ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿ ಮನವಿ

ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಕೂಡ ಮೋದಿ ಚರ್ಚಿಸಿದ್ದು, “ಸೌದಿ ಅರೇಬಿಯಾದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವ ಇತ್ತೀಚಿನ ದಾಳಿಗಳನ್ನು ಭಾರತ ಖಂಡಿಸುತ್ತದೆ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಪುನಃಸ್ಥಾಪನೆ ಅತ್ಯಂತ ಮಹತ್ವದ್ದಾಗಿದೆ ಎಂದು ನಾವು ಒಪ್ಪಿಕೊಂಡಿದ್ದೇವೆ. ಈ ಕಷ್ಟದ ಸಮಯದಲ್ಲಿ ಭಾರತೀಯ ಸಮುದಾಯದ ಸುರಕ್ಷತೆಯನ್ನು ನೋಡಿಕೊಂಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಿದ್ದೇನೆ” ಎಂದು ಮೋದಿ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಇರಾನ್​ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಎಷ್ಟು ದಿನಗಳವರೆಗೆ ಮುಂದುವರೆಯಬಹುದು, ಟ್ರಂಪ್ ಹೇಳಿದ್ದೇನು?

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿಯಾಗಿ ದಾಳಿಗಳನ್ನು ನಡೆಸಿದವು. ಇದರಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಇತರ ಡಜನ್ಗಟ್ಟಲೆ ಹಿರಿಯ ವ್ಯಕ್ತಿಗಳು ಸಾವನ್ನಪ್ಪಿದರು. ಇದರಿಂದ ಹಲವಾರು ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಇರಾನ್​ ಪ್ರತೀಕಾರ ತೀರಿಸಿಕೊಳ್ಳುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ಆಹಾರಗಳ ಸೇವನೆ ಹೃದಯಕ್ಕೆ ಅತ್ಯಂತ ಅಪಾಯಕಾರಿ; ತಿನ್ನುವ ಮೊದಲು ಇರಲಿ ಎಚ್ಚರ! – Kannada News | Dangerous Foods for Heart: What to Avoid

ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿ ಮಾಡಿಕೊಂಡಂತಹ ಬದಲಾವಣೆಗಳಿಂದ ಹೃದಯ (Heart) ಸಂಬಂಧಿ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ನಿಧಾನವಾಗಿ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೌದು, ಉತ್ತಮವಲ್ಲದ ಆಹಾರ ಸೇವನೆಯಿಂದ ಹೃದಯದ ರಕ್ತನಾಳಗಳಲ್ಲಿ ಕೊಬ್ಬು ಮತ್ತು ಮಲಿನಾಂಶಗಳು ಜಮೆಯಾಗಬಹುದು, ಇದರಿಂದ ರಕ್ತದ ಹರಿವಿಗೆ ಅಡ್ಡಿಯಾಗಬಹುದು. ಪರಿಣಾಮವಾಗಿ ಹೆಚ್ಚಿನ ಕೊಲೆಸ್ಟ್ರಾಲ್, ರಕ್ತದೊತ್ತಡ (ಹೈ ಬಿಪಿ) ಮತ್ತು ಹೃದಯಾಘಾತದ ಅಪಾಯ ಹೆಚ್ಚುತ್ತದೆ. ದೇಹಕ್ಕೆ ಒಳ್ಳೆಯದಲ್ಲದ ಆಹಾರ ದೇಹದಲ್ಲಿ ಉರಿಯೂತ ಹೆಚ್ಚಿಸಿ, ಹೃದಯಕ್ಕೆ ಹೆಚ್ಚು ಒತ್ತಡ ಉಂಟುಮಾಡಬಹುದು. ಹಾಗಾಗಿ ದೇಹ ನೀಡುವ ಕೆಲವು ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು. ಹಾಗಾದರೆ ನಮ್ಮ ಆಹಾರ ಪದ್ಧತಿ ಸರಿಯಾಗಿ ಇಲ್ಲ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು, ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಆಹಾರ ಪದ್ಧತಿ ಸರಿಯಾಗಿಲ್ಲ ಎಂದಾಗ ದೇಹ ಕೆಲವು ಸೂಚನೆಯನ್ನು ನೀಡುತ್ತವೆ. ಉದಾಹರಣೆಗೆ, ಬೇಗನೇ ದಣಿವು ಕಾಣಿಸಿಕೊಳ್ಳುವುದು, ಎದೆ ಭಾರವಾಗುವುದು, ಉಸಿರಾಟದಲ್ಲಿ ತೊಂದರೆ, ತೂಕ ವೇಗವಾಗಿ ಹೆಚ್ಚಾಗುವುದು ಹಾಗೂ ಪದೇ ಪದೇ ಅಜೀರ್ಣ ಸಮಸ್ಯೆ ಕಾಣಿಸಿಕೊಳ್ಳುವುದು. ಈ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗಮನಿಸದಿದ್ದರೆ ಗಂಭೀರ ಹೃದಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಹೃದಯವನ್ನು ಆರೋಗ್ಯಕರವಾಗಿಡಲು ಆಹಾರ ಪದ್ಧತಿ ಸರಿಯಾಗಿರುವುದು ಅತ್ಯಗತ್ಯವಾಗಿದೆ.

ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗುವ ಆಹಾರಗಳು:

ಡಾ. ಅಜಿತ್ ಜೈನ್ ಹೇಳುವ ಪ್ರಕಾರ, ಕೆಲವು ಆಹಾರ ಪದಾರ್ಥಗಳು ಹೃದಯದ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿವೆ. ಹೆಚ್ಚು ಎಣ್ಣೆಯಲ್ಲಿ ಕರಿದ ಆಹಾರಗಳು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ. ಪ್ರೊಸೆಸ್ಡ್ ಮತ್ತು ಪ್ಯಾಕೆಟ್ ಆಹಾರಗಳಲ್ಲಿ ಉಪ್ಪು ಹಾಗೂ ಕೊಬ್ಬಿನ ಪ್ರಮಾಣ ಹೆಚ್ಚಿರುವುದರಿಂದ ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಸಕ್ಕರೆ ಹೊಂದಿರುವ ಆಹಾರಗಳು ಮತ್ತು ಮಿಠಾಯಿ ಪದಾರ್ಥಗಳು ತೂಕ ಹೆಚ್ಚಳಕ್ಕೆ ಹಾಗೂ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ, ಹಾಗಾಗಿ ಇದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಜೊತೆಗೆ ರೆಡ್ ಮೀಟ್ ಹಾಗೂ ಹೆಚ್ಚಿನ ಕೊಬ್ಬುಳ್ಳ ಆಹಾರಗಳು ರಕ್ತನಾಳಗಳನ್ನು ಸಂಕೋಚಗೊಳಿಸಬಹುದು. ಅಷ್ಟೇಅಲ್ಲ ಪದೇ ಪದೇ ಸೇವನೆ ಮಾಡುವ ಜಂಕ್ ಫುಡ್ ಕೂಡ ಹೃದಯ ದುರ್ಬಲವಾಗುವುದಕ್ಕೆ ಕಾರಣವಾಗಬಹುದು. ಈ ಅಭ್ಯಾಸಗಳನ್ನು ದೀರ್ಘಕಾಲ ಮುಂದುವರಿಸಿದರೆ ಹೃದಯ ರೋಗಗಳ ಅಪಾಯ ಹೆಚ್ಚುತ್ತದೆ.

ಇದನ್ನೂ ಓದಿ: ಒಮ್ಮೆ ಫ್ರೈ ಮಾಡಲು ಬಳಸಿದ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿ ಬಳಸುವುದರಿಂದಲೂ ಕ್ಯಾನ್ಸರ್ ಬರಬಹುದು

ಹೃದಯದ ಆರೋಗ್ಯಕ್ಕೆ ಯಾವ ರೀತಿಯ ಆಹಾರ ಸೇವಿಸಬೇಕು?

ಸಾಮಾನ್ಯವಾಗಿ ಹೃದಯವನ್ನು ಆರೋಗ್ಯವಾಗಿಡಲು ಸಮತೋಲಿತ ಹಾಗೂ ಪೌಷ್ಟಿಕ ಆಹಾರ ಅವಶ್ಯಕವಾಗಿದೆ. ಸೊಪ್ಪು, ತರಕಾರಿಗಳು, ತಾಜಾ ಹಣ್ಣು ಮತ್ತು ಧಾನ್ಯಗಳು ಹೃದಯಕ್ಕೆ ಒಳ್ಳೆಯವು. ಒಮೇಗಾ- 3 ಫ್ಯಾಟಿ ಆಸಿಡ್‌ಗಳಿಂದ ಸಮೃದ್ಧವಾದ ಆಹಾರಗಳು ಹೃದಯವನ್ನು ಬಲಪಡಿಸುತ್ತವೆ. ಬೇಳೆ, ಕಾಯಿ ಹಾಗೂ ಬೀಜಗಳು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಕಡಿಮೆ ಕೊಬ್ಬಿನ ಹಾಲು ಮತ್ತು ಮೊಸರು ಆಹಾರದಲ್ಲಿ ಸೇರಿಸಬಹುದು. ಉಪ್ಪು ಮತ್ತು ಸಕ್ಕರೆಯ ಪ್ರಮಾಣವನ್ನು ನಿಯಂತ್ರಿತವಾಗಿಡಬೇಕು ಹಾಗೂ ಮನೆಯಲ್ಲೇ ತಯಾರಿಸಿದ ತಾಜಾ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಹೃದಯ ದೀರ್ಘಕಾಲ ಆರೋಗ್ಯಕರವಾಗಿರಲು ಸಹಾಯವಾಗುತ್ತದೆ.

ಆಹಾರ ಮಾತ್ರವಲ್ಲ, ಜೀವನಶೈಲಿಯೂ ಹೃದಯದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಲಘು ವ್ಯಾಯಾಮ ಅಥವಾ ನಡಿಗೆ ಮಾಡುವುದರಿಂದ ಹೃದಯ ಬಲವಾಗುತ್ತದೆ. ಜೊತೆಗೆ ಮಾನಸಿಕ ಒತ್ತಡ ಮತ್ತು ಆತಂಕದಿಂದ ದೂರವಿರುವುದು ಕೂಡ ಅಗತ್ಯ, ಏಕೆಂದರೆ ಮನೋಭಾರ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಅದರ ಜೊತೆಗೆ ಸರಿಯಾಗಿ ನಿದ್ರೆ ಮಾಡುವುದು ಮತ್ತು ದೀರ್ಘಕಾಲ ಕುಳಿತೇ ಇರುವುದನ್ನು ತಪ್ಪಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬಾರದು – Kannada News | Chanakya Niti: Chanakya says one should not help such people

ಸಹಾಯ (Help) ಎಂದು ಬೇಡಿ ಬಂದವರಿಗೆ ಉಪಕಾರ ಮಾಡುವುದು ಮಾನವನ ಸಹಜ ಗುಣ. ಪ್ರತಿಯೊಬ್ಬರೂ ಸಹ ತಮ್ಮವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯವನ್ನು ಮಾಡುತ್ತಲೇ ಇರುತ್ತಾರೆ. ಆದರೆ ಈ ರೀತಿ ಎಲ್ಲರಿಗೂ ಸಹಾಯ ಮಾಡುವುದು ಸರಿಯಲ್ಲ, ಇದರಿಂದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಹೌದು ಒಂದು ಜನರಿಗೆ ಸಹಾಯ ಮಾಡಿದರೆ ಅದರಿಂದ ಒಳ್ಳೆಯದಕ್ಕಿಂದ ಕೆಟ್ಟದಾಗುವುದೇ ಹೆಚ್ಚಂತೆ. ಹಾಗಿದ್ರೆ ಯಾರಿಗೆಲ್ಲಾ ಸಹಾಯ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

ಇಂತಹ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ:

ಸಹಾಯ ಮಾಡದವರಿಗೆ ಸಹಾಯ ಮಾಡಬೇಡಿ: ನೀವು ಮೊದಲು ಮಾಡಿದ ಸಹಾಯವನ್ನು ಹಗುರವಾಗಿ ಪರಿಗಣಿಸುವ, ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಸಹಾಯ ಮಾಡದೆ ಕಟುವಾಗಿ ವರ್ತಿಸಿದವರಿಗೆ ನೀವು ಎಂದಿಗೂ ಸಹಾಯ ಮಾಡಬೇಡಿ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಇಂತಹ ಜನರು ನಿಮ್ಮ ಸಹಾಯವನ್ನು ಗೌರವಿಸುವುದಿಲ್ಲ ಜೊತೆಗೆ ಇಂತಹವರಿಂದ ನೀವು ಬರೀ ನಿರಾಶೆಯನ್ನೇ ಅನುಭವಿಸುತ್ತೀರಿ. ಹಾಗಾಗಿ ಈ ರೀತಿಯ ಜನರಿಗೆ ಸಹಾಯ ಮಾಡುವ ತಪ್ಪನ್ನು ಮಾಡಬೇಡಿ.

ಪದೇ ಪದೇ ತಪ್ಪುಗಳನ್ನು ಮಾಡುವ ಜನರು: ಆಚಾರ್ಯ ಚಾಣಕ್ಯ ಹೇಳುವಂತೆ ಕೆಲವು ಜನರು ತಮ್ಮ ತಪ್ಪುಗಳಿಂದ ಕಲಿಯುವುದಿಲ್ಲ, ಬದಲಿಗೆ ಅವುಗಳನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಲೇ ಇರುತ್ತಾರೆ. ಅಂತಹ ಜನರು ಯಾವಾಗಲೂ ಇತರರಿಂದ ಸಹಾಯವನ್ನು ನಿರೀಕ್ಷಿಸುತ್ತಾರೆ. ನೀವು ಅಂತಹ ವ್ಯಕ್ತಿಗೆ ಸಹಾಯ ಮಾಡಿದಾಗ, ಅವರ ಸಮಸ್ಯೆ ಬಗೆಹರಿಯುತ್ತದೆ, ಆದರೆ ಅವರು ಸುಧಾರಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ. ನೀವು ಪ್ರತಿ ಬಾರಿಯೂ ಅವರಿಗೆ ಸಹಾಯ ಮಾಡಿದರೆ ನಿಮ್ಮ ಸಮಯ, ಶಕ್ತಿ ವ್ಯರ್ಥವಾಗುವುದಲ್ಲದೆ, ನಿಮ್ಮ ಮಾನಸಿಕ ಶಾಂತಿಯೂ ಹಾಳಾಗುತ್ತದೆ.

ಸ್ವಾರ್ಥಿ ಜನರು: ಆಚಾರ್ಯ ಚಾಣಕ್ಯರ ಪ್ರಕಾರ, ಸ್ವಾರ್ಥಿಗಳು ಸಂಬಂಧಗಳನ್ನು ಭಾವನೆಗಳ ಆಧಾರದ ಮೇಲೆ ನೋಡುವುದಿಲ್ಲ, ಬದಲಿಗೆ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಉಪಯೋಗಿಸುತ್ತಾರೆ ಮತ್ತು ತಮ್ಮ ಕಾರ್ಯ ಸಾಧಿಸಿದ ನಂತರ ನಿಮ್ಮನ್ನು ದೂರವಿಡುತ್ತಾರೆ. ಇಂತಹ ಸ್ವಾರ್ಥಿಗಳಿಗೆ ಸಹಾಯ ಮಾಡುವುದರಿಂದ ನಿಮ್ಮ ಭಾವನೆಗಳಿಗೆ ಪೆಟ್ಟಾಗುತ್ತದೆ. ಆದ್ದರಿಂದ ಇಂತಹ ಸ್ವಾರ್ಥ ಮನೋಭಾವದವರಿಗೆ ಸಹಾಯವನ್ನು ಮಾಡಬೇಡಿ.

ಇದನ್ನೂ ಓದಿ: ಶ್ರೀಮಂತಿಕೆಯನ್ನು ಗಳಿಸಬೇಕೆಂದರೆ ಮೊದಲು ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ನಕಾರಾತ್ಮಕವಾಗಿ ಯೋಚಿಸುವ ಜನರು: ಚಾಣಕ್ಯ ನೀತಿಯ ಪ್ರಕಾರ, ನಕಾರಾತ್ಮಕ ಚಿಂತನೆಯುಳ್ಳ ಜನರು ಪ್ರತಿಯೊಂದು ಸನ್ನಿವೇಶದಲ್ಲೂ ನ್ಯೂನತೆಗಳು ಮತ್ತು ಸಮಸ್ಯೆಗಳನ್ನು ಮಾತ್ರ ನೋಡುತ್ತಾರೆ. ನೀವು ಅವರಿಗೆ ಎಷ್ಟೇ ಸಹಾಯ ಮಾಡಿದರೂ ಅವರು ಎಂದಿಗೂ ತೃಪ್ತರಾಗಲು ಸಾಧ್ಯವಿಲ್ಲ. ಜೊತೆಗೆ ನೀವು ಅವರಿಗೆ ಸಹಾಯ ಮಾಡಿದ್ದೀರೆಂದು ಕೃತಜ್ಞತೆಯನ್ನೂ ತೋರುವುದಿಲ್ಲ.  ಅಂತಹ ಜನರಿಗೆ ಸಹಾಯ ಮಾಡುವುದರಿಂದ ನಿಮ್ಮ ಮಾನಸಿಕ ಶಾಂತಿ ಸಂಪೂರ್ಣವಾಗಿ ನಾಶವಾಗುತ್ತದೆ, ನಿಮ್ಮ ಆತ್ಮವಿಶ್ವಾಸವೇ ಕಡಿಮೆಯಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಮೋಸಗಾರರು: ಚಾಣಕ್ಯನ ಪ್ರಕಾರ, ಸುಳ್ಳು ಹೇಳುವ ಮತ್ತು ಮೋಸ ಮಾಡುವ ಜನರಿಂದ ಒಬ್ಬರು ದೂರವಿದ್ದಷ್ಟೂ ಒಳ್ಳೆಯದು. ಅಂತಹ ಜನರು ತಮ್ಮ ಅಗತ್ಯಗಳಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಅಂತಹವರಿಗೆ ಸಹಾಯ ಮಾಡುವುದರಿಂದ ನಿಮಗೆ ಅಪಾಯ ಹೆಚ್ಚು. ಇದಲ್ಲದೆ ಕೆಟ್ಟ ಚಟವನ್ನು ಹೊಂದಿರುವ, ದುರಾಸೆ ಮನೋಭಾವದ ಜನರಿಗೂ ಸಹಾಯ ಮಾಡಬಾರದು ಎಂದಿದ್ದಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಂದ್ರ ಗ್ರಹಣದಂದು ಭಕ್ತರಿಗೆ ಮಂತ್ರಾಲಯ ರಾಯರ ದರ್ಶನ ಇರುತ್ತಾ? ಇಲ್ಲಿದೆ ಮಾಹಿತಿ – Kannada News | Lunar Eclipse: Mantralaya Raghavendra Swamy Mutt Open for Darshan to devotees

ರಾಯಚೂರು, ಮಾರ್ಚ್​ 02: ನಾಳೆ ಖಗ್ರಾಸ್ ಚಂದ್ರಗ್ರಹಣ ಹಿನ್ನೆಲೆ ದೇವಸ್ಥಾನಗಳ ಬಾಗಿಲು ಬಂದ್ ಆಗಲಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಆದರೆ ಮಂತ್ರಾಲಯ ರಾಯರ ಮಠದಲ್ಲಿ (Mantralaya Raghavendra Swamy Mutt) ಮಾತ್ರ ಎಂದಿನಂತೆ ಗ್ರಹಣವದ ವೇಳೆಯೂ ಭಕ್ತರಿಗೆ ರಾಯರ ದರ್ಶನಕ್ಕೆ ಅವಕಾಶ ಇದೆ. ಧಾರ್ಮಿಕ ಸೇವೆಗಳು, ಪ್ರಸಾದ ಸೇವೆ ಇರಲ್ಲ. ಅಷ್ಟೇ ಅಲ್ಲ, ರಾಯರಿಗೂ ವಿಶೇಷ ಅಲಂಕಾರಗಳು ಇರಲ್ಲ, ಕೇವಲ ಜಲಾಭಿಷೇಕ ಮಾತ್ರ ಇರತ್ತೆ.

ಧಾರ್ಮಿಕ ಸೇವೆಗಳು ಮಾತ್ರ ಸ್ಥಗಿತ

ಸಾಮಾನ್ಯವಾಗಿ ಗ್ರಹಣಗಳು ಗೋಚರಿಸುವ ವೇಳೆ ಧಾರ್ಮಿಕ ಕೇಂದ್ರಗಳಲ್ಲಿ ದೇವಸ್ಥಾನಗಳ ಬಾಗಿಲುಗಳನ್ನ ಹಾಕಿ, ಗ್ರಹಣದ ಸಂದರ್ಭದಲ್ಲಿ ಕೆಲ ಧಾರ್ಮಿಕ ಪದ್ದತಿಗಳನ್ನ ಅನುಸರಿಸಲಾಗತ್ತೆ. ಆದರೆ ಈ ವರ್ಷದ ಮೊದಲ ಖಗ್ರಾಸ್ ಚಂದ್ರಗ್ರಹಣದ ಹಿನ್ನೆಲೆ, ಮಂತ್ರಾಲಯದ ರಾಯರ ಮಠದಲ್ಲಿ ಯಾವುದೇ ನಿರ್ಬಂಧಗಳಿಲ್ಲ. ರಾಯರ ಭಕ್ತರು ಎಂದಿನಂತೆ ಶ್ರೀ ಮಠಕ್ಕೆ ಆಗಮಿಸಿ ರಾಯರ ದರ್ಶನ ಪಡೆಯಲು ಮುಕ್ತ ಅವಕಾಶ ಇದೆ.

ಇದನ್ನೂ ಓದಿ: Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ? ಯಾರಿಗೆ ಸಂಕಷ್ಟ? ಇಲ್ಲಿದೆ ನೋಡಿ

ಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆ ರಾಯರ ಮಠಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ನಾಳೆ ಗ್ರಹಣ ಇರುವ ಹಿನ್ನೆಲೆ ಸೂರ್ಯೋದಯದಿಂದ ಗ್ರಹಣ ಮುಕ್ತಾಯದವರೆಗೆ ಶ್ರೀ ಮಠದಲ್ಲಿ ಎಂದಿನಂತೆ ಭಕ್ತರಿಗೆ ರಾಯರ ದರ್ಶನ ಲಭ್ಯವಿರುತ್ತದೆ.

ಗ್ರಹಣದ ವೇಳೆ ರಾಯರ ಮಠದಲ್ಲಿ ಏನಿರತ್ತೆ, ಏನಿರಲ್ಲ?

  • ವಿಶೇಷ ಪೂಜೆಗಳು, ಸೇವೆಗಳು ಮತ್ತು ಪ್ರಸಾದದ ವ್ಯವಸ್ಥೆ ಇರಲ್ಲ
  • ರಾಯರ ಮೂಲಬೃಂದಾವನಕ್ಕೆ ಅಲಂಕಾರ ಇರಲ್ಲ, ಕೇವಲ ಜಲಾಭಿಷೇಕ ಮಾತ್ರ ನಡೆಯಲಿದೆ.
  • ಮಠದ ನಿಗದಿತ ಸಮಯದ ಅವಧಿಯಂತೆ ದರ್ಶನಕ್ಕೆ ಅವಕಾಶ ಇರುತ್ತದೆ.
  • ಭಕ್ತರಿಗೆ ತೀರ್ಥ ಪ್ರಸಾದ ಮಾತ್ರ ವಿತರಿಸಲಾಗುತ್ತದೆ.

ಮಂತ್ರಾಲಯ ವಿದ್ಯಾಪೀಠದ ಪ್ರಾಂಶುಪಾಲ ವಾದಿರಾಜಾಚಾರ್ಯ ಹೇಳಿದ್ದಿಷ್ಟು 

ಇತ್ತ ಚಂದ್ರಗ್ರಹಣ ಬಗ್ಗೆ ಮಂತ್ರಾಲಯ ವಿದ್ಯಾಪೀಠದ ಪ್ರಾಂಶುಪಾಲ ವಾದಿರಾಜಾಚಾರ್ಯ ಟಿವಿ9ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ದೇವಸ್ಥಾನಗಳಲ್ಲಿ ಬಾಗಿಲು ಹಾಕಲಾಗತ್ತೆ, ರಾಯರ ಮಠದಲ್ಲಿ ಆ ರೀತಿ ಬಾಗಿಲು ಹಾಕುವ ಪದ್ದತಿ ಇಲ್ಲ. ಭಕ್ತರಿಗೆ ರಾಯರ ದರ್ಶನಕ್ಕೆ ಮುಕ್ತವಾದ ಅವಕಾಶ ಇದೆ ಅಂತ ಹೇಳಿದ್ದಾರೆ.

ಸಾಮಾನ್ಯವಾಗಿ ದೇವತಾ ಸನ್ನಿವೇಶಗಳಲ್ಲಿ ಇರುವ ದೇವಸ್ಥಾನಗಳಲ್ಲಿ ಗ್ರಹಣದ ವೇಳೆ ಬಾಗಿಲು ಹಾಕುವ ಪದ್ಧತಿ ಇದೆ. ಆದರೆ ಇಲ್ಲಿ ರಾಯರು ಯತಿಗಳು, ಅವರು ಈ ಸನ್ನಿಧಿಯಲ್ಲಿ ನೆಲೆಸಿದ್ದಾರೆ ಎಂಬ ಭಕ್ತರ ನಂಬಿಕೆ ಇದೆ. ಸುಮಾರು 350ಕ್ಕೂ ಹೆಚ್ಚು ವರ್ಷಗಳಾದರೂ ರಾಯರು ದೇಹ ತ್ಯಜಿಸಿಲ್ಲ, ಸಾಧನೆಗಾಗಿ ಅಭಿವ್ಯಕ್ತರಾಗಿದ್ದಾರೆ ಎಂಬ ಭಕ್ತಿ ಪರಂಪರೆ ಇದೆ. ಹೀಗಾಗಿ ಇಲ್ಲಿ ಬಾಗಿಲನ್ನ ಹಾಕುವ ಪದ್ದತಿ ಇಲ್ಲ ಅಂತ ವಾದಿರಾಜಾಚಾರ್ಯರು ಮಾಹಿತಿ ಬಂದಿಲ್ಲ.

ಗ್ರಸ್ತೋದಯ ಚಂದ್ರಗ್ರಹಣ ಎಂದರೇನು ಗೊತ್ತಾ?

ಇದಷ್ಟೇ ಅಲ್ಲ, ಗ್ರಹಣದ ಸಮಯದ ಬಗ್ಗೆ ಕೂಡ ವಾದಿರಾಜಾಚಾರ್ಯರು ಪ್ರತಿಕ್ರಿಯಿಸಿದ್ದು, ಗ್ರಹಣ ವಿಶೇಷತೆ, ಅದರ ಅವಧಿ, ಆ ವೇಳೆ ಮಾಡಬೇಕಾದ ಕಾರ್ಯಗಳ ಬಗ್ಗೆಯೂ ತಿಳಿಸಿದ್ದಾರೆ. ಪೂರ್ಣಗ್ರಾಸ ಗ್ರಸ್ತೋದಯ ಚಂದ್ರಗ್ರಹಣ ಎಂದರೆ ಚಂದ್ರ ಹುಟ್ಟಿದ ಸಮಯದಲ್ಲಿ ಗ್ರಹಣದ ಆರಂಭವಾಗುವುದು. ಸಾಮಾನ್ಯವಾಗಿ, ಚಂದ್ರಗ್ರಹಣವು ಚಂದ್ರ ಉದಯದ ನಂತರ ಸಿದ್ಧವಾಗುತ್ತದೆ, ಆದರೆ ಈ ಬಾರಿಗೆ ಚಂದ್ರ ಉದಯದ ಜೊತೆ ಗ್ರಹಣವು ಸಂಭವಿಸಲಿದೆ ಎಂದರು.

ಗ್ರಹಣದ ಸಮಯದಲ್ಲಿ ತಂತ್ರಪ್ರಕಾರವಾಗಿ, 6:26ರ ಸಮಯದಲ್ಲಿ ಚಂದ್ರೋದಯವಾಗುತ್ತದೆ. ಮತ್ತು 6:26 ರಿಂದ 6:47 ರವರೆಗೆ ಗ್ರಹಣದ ಅವಧಿ ಇರುತ್ತದೆ. ಈ ಅವಧಿಯಲ್ಲಿ ಕಣ್ಣಿಗೆ ದೃಶ್ಯವಾಗುವ ಗ್ರಹಣವನ್ನು ನೀವು ಅನುಭವಿಸಬಹುದು ಅಂತ ತಿಳಿಸಿದ್ದಾರೆ. ಅಲ್ಲದೇ ಗ್ರಹಣದ ಅನುಷ್ಠಾನವನ್ನು ಈ ಸಮಯದಲ್ಲಿ ಮಾತ್ರ ಮಾಡುವುದಾದ್ದರಿಂದ, 6:26 ರಿಂದ 6:47 ರವರೆಗೆ 21 ನಿಮಿಷಗಳ ಅವಧಿಯಲ್ಲೇ ಅನುಷ್ಠಾನವನ್ನು ಮಾಡುವುದು ಶ್ರೇಯಕರಾಗುತ್ತದೆ ಎಂದು ವಾದಿರಾಜಾಚಾರ್ಯರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Lunar Eclipse: ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!

ಬರೀ ಇದಷ್ಟೇ ಅಲ್ಲ, ರಾಯರ ಮಠದಲ್ಲಿ ನಾಳೆ ಗ್ರಹಣದ ವೇಳೆ ವಿಶೇಷ ಹೋಮ-ಹವನಗಳು ನಡೆಯಲಿದ್ದು, ಅದರಲ್ಲಿ ಭಕ್ತರು ಮುಕ್ತವಾಗಿ ಭಾಗವಹಿಸಲು ಅವಕಾಶವೂ ಇದೆ. ಇತ್ತ ಗ್ರಹಣದ ಬಳಿಕ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿ ರಾಯರ ದರ್ಶನ ಪಡೆಯುವ ವಾಡಿಕೆಯೂ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೈವಕ್ಕೆ ಅವಮಾನ ಮಾಡಿದ ಕೇಸ್: ಮಾರ್ಚ್ 9ರ ತನಕ ರಣವೀರ್ ಸಿಂಗ್ ನಿರಾಳ – Kannada News | Ranveer Singh gets relief till March 9 in Kantara Chapter 1 Daiva controversy

‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದ ಬಗ್ಗೆ ಮಾತನಾಡುವಾಗ ನಟ ರಣವೀರ್ ಸಿಂಗ್ ಅವರು ದೈವಕ್ಕೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿದ್ದರು. ಅವರ ವಿರುದ್ಧ ಕೇಸ್ ದಾಖಲಾಗಿತ್ತು. ಆ ಪ್ರಕರಣದಲ್ಲಿ ಮಾರ್ಚ್ 9ರವರೆಗೂ ರಣವೀರ್ ಸಿಂಗ್ ಅವರಿಗೆ ರಿಲೀಫ್ ಸಿಕ್ಕಿದೆ. ಕೇಸ್ ರದ್ದು ಕೋರಿ ರಣವೀರ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದಿದೆ. ಯುದ್ಧದಿಂದಾಗಿ ರಣವೀರ್ ಸಿಂಗ್ (Ranveer Singh) ಪರ ವಕೀಲರು ಇಂಗ್ಲೆಂಡ್‌ನಲ್ಲೇ ಉಳಿದಿದ್ದಾರೆ.

ವಿಮಾನವಿಲ್ಲದೇ ಭಾರತಕ್ಕೆ ವಾಪಸಾಗುತ್ತಿಲ್ಲವೆಂದು ಸಜನ್ ಪೂವಯ್ಯ ಹೇಳಿದ್ದಾರೆ. ‘ರಣವೀರ್ ಸಿಂಗ್‌ಗೆ ನೋಟಿಸ್ ನೀಡಿದ್ದೇವೆ, ಸಮಯ ಕೇಳಿದ್ದಾರೆ’ ಎಂದು ಸರ್ಕಾರದ ಪರ ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ಹೇಳಿಕೆ ನೀಡಿದ್ದಾರೆ. ಪೊಲೀಸರು ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಈ ಮೊದಲು ನೀಡಿದ್ದ ಆದೇಶವನ್ನು ಮಾರ್ಚ್ 9ರವರೆಗೆ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.

ಏನಿದು ವಿವಾದ?
ಕಳೆದ ವರ್ಷ ನಡೆದ ಗೋವಾ ಚಲನಚಿತ್ರೋತ್ಸವದಲ್ಲಿ ರಣವೀರ್ ಸಿಂಗ್, ರಿಷಬ್ ಶೆಟ್ಟಿ ಮುಂತಾದವರು ಭಾಗಿಯಾಗಿದ್ದರು. ವೇದಿಕೆಯಲ್ಲಿ ಮಾತನಾಡುವಾಗ ರಣವೀರ್ ಸಿಂಗ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿನ ರಿಷಬ್ ಶೆಟ್ಟಿಯ ನಟನೆಯನ್ನು ಹೊಗಳಿದರು. ಮಾತಿನ ಭರದಲ್ಲಿ ಅವರು ದೈವದ ಅನುಕರಣೆ ಮಾಡಿ ತೋರಿಸಿದರು.

ರಣವೀರ್ ಸಿಂಗ್ ಅವರು ದೈವದ ಅನುಕರಣೆ ಮಾಡಿದ್ದು ಆಕ್ಷೇಪಾರ್ಹವಾಗಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಖಂಡಿಸಿದರು. ದೈವವನ್ನು ನಂಬುವ ಜನರ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಿದೆ ಎಂದು ಆರೋಪಿಸಿ ರಣವೀರ್ ಸಿಂಗ್ ವಿರುದ್ಧ ಕೇಸ್ ದಾಖಲಿಸಲಾಯಿತು. ಈ ಕೇಸ್​ ಕೈ ಬಿಡುವಂತೆ ರಣವೀರ್ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಟಾಕ್ಸಿಕ್ Vs ಧುರಂದರ್ 2: ಅಡ್ವಾನ್ಸ್ ಬುಕಿಂಗ್​ನಲ್ಲಿ ಮುನ್ನಡೆ ಸಾಧಿಸಿದ ರಣವೀರ್ ಸಿಂಗ್ ಸಿನಿಮಾ

2025ರ ಡಿಸೆಂಬರ್ ತಿಂಗಳಲ್ಲಿ ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಯಿತು. ಹೈಗ್ರೌಂಡ್ಸ್ ಪೊಲೀಸರು ಎಫ್​ಐಆರ್ ದಾಖಲು ಮಾಡಿದರು. ಆ ಪ್ರಕರಣವನ್ನು ಕೈ ಬಿಡುವಂತೆ ಮನವಿ ಮಾಡಿರುವ ರಣವೀರ್ ಸಿಂಗ್ ಅವರು ಕೋರ್ಟ್ ಮೊರೆ ಹೋಗಿದ್ದಾರೆ. ಸದ್ಯಕ್ಕೆ ಮಾರ್ಚ್ 9ರವರೆಗೂ ಅವರಿಗೆ ರಿಲೀಫ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಧ್ಯಪ್ರಾಚ್ಯ ಯುದ್ಧಕ್ಕೆ ಗಡಗಡ ನಡುಗಿದ ಪಾಕಿಸ್ತಾನದ ಷೇರುಪೇಟೆ; ಒಂದೇ ದಿನ 15,000 ಅಂಕಗಳು ಪತನ; ಶೇ. 9ರಷ್ಟು ಸಂಪತ್ತು ನಷ್ಟ – Kannada News | Middle east crisis effect, Pakistan stock market down by 9pc in a single session

ಇಸ್ಲಾಮಾಬಾದ್, ಮಾರ್ಚ್ 2: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಜಾಗತಿಕವಾಗಿ ಎಲ್ಲಾ ಷೇರು ಮಾರುಕಟ್ಟೆಗಳನ್ನು ಅಲುಗಾಡಿಸುತ್ತಿದೆ. ಭಾರತದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ತತ್ತರಿಸಿವೆ. ಶೇ. 1-2ರಷ್ಟು ಕುಸಿತ ಕಂಡಿವೆ. ಆದರೆ, ಪಾಕಿಸ್ತಾನದ ಷೇರು ಮಾರುಕಟ್ಟೆ (Pakistan Stock Market) ಅತಿ ಹೆಚ್ಚು ಕರಡಿ ಕುಣಿತ ಕಂಡಿದೆ. ಇಂದು ಸೋಮವಾರದ ವಹಿವಾಟಿನಲ್ಲಿ ಪಾಕಿಸ್ತಾನ ಷೇರು ವಿನಿಮಯ ಕೇಂದ್ರದ ಕೆಎಸ್​ಇ-100 ಇಂಡೆಕ್ಸ್ (KSE-100 index) ಶೇ. 9ರಷ್ಟು ಕುಸಿತ ಕಂಡಿದೆ., ಕೆಎಸ್​ಇ-30 ಇಂಡೆಕ್ಸ್ ಕೂಡ ಕೆಳಗಿನ ಸರ್ಕ್ಯುಟ್ ಮಿತಿ ಮುಟ್ಟಿದೆ.

ಪಾಕಿಸ್ತಾನದ ಷೇರು ಮಾರುಕಟ್ಟೆ ಬಹಳ ಅಸ್ತಿರತೆಯಿಂದ ಕೂಡಿದೆ. ಇಲ್ಲಿ ಲಿಸ್ಟ್ ಆಗಿರುವ ಷೇರುಗಳ ಸಂಖ್ಯೆ ಕಡಿಮೆ ಇರುವುದರಿಂದ ವೊಲಾಟಾಲಿಟಿ ಅಥವಾ ಪ್ರಕ್ಷುಬ್ದತೆ ಅಥವಾ ಕುಲುಕಾಟ ತೀವ್ರವಾಗಿರುತ್ತದೆ.

ಇದನ್ನೂ ಓದಿ: ಜನವರಿವರೆಗೂ ಭಾರತದ ಒಟ್ಟಾರೆ ರಫ್ತು 720 ಬಿಲಿಯನ್ ಡಾಲರ್; ಹಿಂದಿನ ವರ್ಷದಕ್ಕಿಂತ ಶೇ. 6.15 ಹೆಚ್ಚಳ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಇಸ್ರೇಲ್, ಅಮೆರಿಕ, ಇರಾನ್ ಮಧ್ಯೆ ಮಾತ್ರ ಸೀಮಿತವಾಗಿಲ್ಲ. ಕೊಲ್ಲಿ ದೇಶಗಳನ್ನೂ ಇರಾನ್ ಗುರಿ ಮಾಡಿ ದಾಳಿ ಮಾಡುತ್ತಿರುವುದು ಪಾಕಿಸ್ತಾನೀಯರಿಗೆ ಅನಿರೀಕ್ಷಿತ ಬೆಳವಣಿಗೆ ಎನಿಸಿದೆ. ಪಾಕಿಸ್ತಾನದ ಹೆಚ್ಚಿನ ವ್ಯಾಪಾರ ವಹಿವಾಟು ಗಲ್ಫ್ ದೇಶಗಳೊಂದಿಗೆ ಇರುವುದರಿಂದ ಅಲ್ಲಿಯ ಬಿಕ್ಕಟ್ಟು ಈ ದೇಶಕ್ಕೆ ಅತಿಹೆಚ್ಚು ಬಾಧೆ ಉಂಟುಂ ಮಾಡುವ ವಿಚಾರ.

ಕುಸಿತದ ತೀವ್ರತೆಯಿಂದ ಟ್ರೇಡಿಂಗೇ ಬಂದ್

ಪಾಕಿಸ್ತಾನದ ಬ್ಯಾಂಕ್​ಗಳು, ಇಂಧನ ಸಂಸ್ಥೆಗಳು, ಸಿಮೆಂಟ್, ರಸಗೊಬ್ಬರ, ಆಟೊಮೊಬೈಲ್ ಅಸೆಂಬ್ಲಿಂಗ್, ವಿದ್ಯುತ್ ಕಂಪನಿಗಳ ಷೇರುಗಳಿಗೆ ಸೋಮವಾರ ತೀವ್ರ ಹಿನ್ನಡೆಯಾಗಿದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಕೆಎಸ್​ಇ-100 ಮತ್ತು ಕೆಎಸ್​ಇ-30 ಸೂಚ್ಯಂಕಗಳಲ್ಲಿ ಕುಸಿತ ಬಹಳ ತೀವ್ರವಾಗಿತ್ತು. ಹೂಡಿಕೆದಾರರು ಮನಬಂದಂತೆ ಷೇರುಗಳನ್ನು ಮಾರುತ್ತಿರುವ ಟ್ರೆಂಡ್ ಗೋಚರಿಸುತ್ತಿದ್ದಂತೆಯೇ ಟ್ರೇಡಿಂಗ್ ಅನ್ನೇ ನಿಲ್ಲಿಸಲಾಯಿತು. ಟ್ರೇಡಿಂಗ್ ಮುಂದುವರಿದಿದ್ದೇ ಆದಲ್ಲಿ ಪಾಕಿಸ್ತಾನದ ಷೇರು ಮಾರುಕಟ್ಟೆಯ ಕುಸಿತ ಇನ್ನಷ್ಟು ತೀವ್ರವಾಗಿರುತ್ತಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಗೋಪುರದ ಮೇಲೆ ಇರಾನ್ ದಾಳಿ – Kannada News | Bahrain skyscrapers tower on fire after Iran strike

ಬಹ್ರೇನ್, ಮಾರ್ಚ್ 2: ಬಹ್ರೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ಸೌಲಭ್ಯಗಳು ಮತ್ತು ವಸತಿ ಗೋಪುರಗಳ ಮೇಲೆ ಇರಾನ್ (Iran Attack) ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಇದು ಮನಾಮದಲ್ಲಿರುವ ಅಮೆರಿಕದ ನೌಕಾಪಡೆಯ 5ನೇ ಪ್ರಧಾನ ಕಚೇರಿಯ ಬಳಿ ಅಪ್ಪಳಿಸಿತು. ಇರಾನಿನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದವು. ಈ ಸಂಘರ್ಷಕ್ಕೆ ನೇರ ಸಂಪರ್ಕ ಹೊಂದಿಲ್ಲದ ಬಹ್ರೇನ್ ಮೇಲೆ ಇರಾನ್ ದಾಳಿ ನಡೆಸಿದೆ. ಇಲ್ಲಿ ಅಮೆರಿಕದ ವಾಯುನೆಲೆ ಇರುವುದರಿಂದ ಇರಾನ್ ಅಟ್ಯಾಕ್ ಮಾಡಿದೆ. ಈ ದಾಳಿಯಿಂದ ಬಹ್ರೇನ್​ನ ಗಗನಚುಂಬಿ ಕಟ್ಟಡಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇರಾನ್ ತನ್ನ ವಿರುದ್ಧದ ಮಿಲಿಟರಿ ದಾಳಿಗಳನ್ನು ಬೆಂಬಲಿಸುವ ದೇಶಗಳಲ್ಲಿನ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿತ್ತು. ಇದು ಬಹ್ರೇನ್ ಮತ್ತು ಇತರ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿಗಳಿಗೆ ಕಾರಣವಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್ – Kannada News | Congress MLA satish sail Angry On His Party Minister Mankal Vaidya In KDP Meeting at Karwar

ಕಾರವಾರ, (ಮಾರ್ಚ್ 02): ಕಾಂಗ್ರೆಸ್ ಶಾಸಕರು ಹಾಗೂ ಸಚಿವ ನಡುವೆ ಹೊಂದಾಣಿಕೆ ಇಲ್ಲ. ಈ ಸಂಬಂಧ ಶಾಸಕರೇ ಕೆಲ ಸಚಿವರ ಮೇಲೆ ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದರು. ಸಚಿವರು ಕೈಗೆ ಸಿಗಲ್ಲ. ಫೋನ್ ಮಾಡಿದ್ರೆ ರಿಸಿವ್ ಮಾಡಲ್ಲ ಅಂತೆಲ್ಲಾ ಆರೋಪಗಳನ್ನು ಮಾಡಿದ್ದಾರೆ. ಇದರ ಬೆನ್ನಲ್ಲೇ ಇದಕ್ಕೆ ಪೂರಕವೆಂಬಂತೆ ಉತ್ತರ ಕನ್ನಡ ಜಿಲ್ಲಾ ಕೆಡಿಪಿ ಸಭೆಯಲ್ಲಿ ಸಚಿವ ಮಾಂಕಾಳ್ ವೈದ್ಯ ವಿರುದ್ಧದವೇ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗರಂ ಆಗಿದ್ದು, ಕೋಪಗೊಂಡು ಕೆಡಿಪಿ ಸಭೆಯಿಂದಲೇ ಹೊರ ನಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link