ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶImage Credit source: tv9
ಚಾಮರಾಜನಗರ, ಜುಲೈ 27: ಚಾಮರಾಜನಗರ ಜಿಲ್ಲೆಯ (Chamarajanagar) ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ (Bandipur Tiger Reserve) ಭೇಟಿ ನೀಡುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಶಾಕ್ ನೀಡಿದೆ. ಸೆಪ್ಟೆಂಬರ್ 1, 2026ರಿಂದ ಜಾರಿಗೆ ಬರುವಂತೆ ಸಫಾರಿ, ಖಾಸಗಿ ವಾಹನ, ಕ್ಯಾಮೆರಾ ಬಳಕೆ ಸೇರಿದಂತೆ ಹಲವು ಸೇವೆಗಳ ಶುಲ್ಕವನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಹೊಸ ದರಗಳ ಪ್ರಕಾರ ಹಲವು ಸೇವೆಗಳ ಶುಲ್ಕವು ಹಿಂದಿನದರಿಗಿಂತ ಗಣನೀಯವಾಗಿ ಏರಿಕೆಯಾಗಿದ್ದು, ಬಂಡೀಪುರ ಸಫಾರಿ ಪ್ರವಾಸ ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತಷ್ಟು ದುಬಾರಿಯಾಗಲಿದೆ.
ಅರಣ್ಯ ಇಲಾಖೆಯ ಆದೇಶದ ಪ್ರಕಾರ, ಬಸ್ ಮತ್ತು ಜೀಪ್ ಸಫಾರಿಯ ಪ್ರವೇಶ ದರವನ್ನು ಹೆಚ್ಚಿಸಲಾಗಿದೆ. ಇದೇ ವೇಳೆ ಖಾಸಗಿ ವಾಹನಗಳ ಪ್ರವೇಶ ಶುಲ್ಕ, ಬೋಟ್ ಸೇವೆ, ಕ್ಯಾಮೆರಾ ಬಳಕೆ ಹಾಗೂ ಅರಣ್ಯ ಇಲಾಖೆಯ ಅತಿಥಿಗೃಹಗಳ ಶುಲ್ಕಗಳಲ್ಲಿಯೂ ಪರಿಷ್ಕರಣೆ ಮಾಡಲಾಗಿದೆ.
ಬಂಡೀಪುರ ಸಫಾರಿ: ಹೊಸ ದರ ಎಷ್ಟು?
- ಅರಣ್ಯ ಇಲಾಖೆ ಬಸ್ ಸಫಾರಿಗೆ ವಯಸ್ಕರ ದರ ₹650 ರಿಂದ ₹1,000ಕ್ಕೆ ಏರಿಕೆ.
- 12 ವರ್ಷದೊಳಗಿನ ಮಕ್ಕಳಿಗೆ ₹350ರಿಂದ ₹500ಕ್ಕೆ ಹೆಚ್ಚಳ.
- ಅರಣ್ಯ ಇಲಾಖೆ ಜೀಪ್ ಸಫಾರಿಗೆ ವಯಸ್ಕರ ದರ ₹750ರಿಂದ ₹1,500ಕ್ಕೆ ಏರಿಕೆ.
- ಮಕ್ಕಳಿಗೆ ₹750 ದರ ನಿಗದಿ ಮಾಡಲಾಗಿದೆ.
- ಈ ದರಗಳಲ್ಲಿ ನೇಚರ್ ಗೈಡ್ ಶುಲ್ಕ ಸೇರಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕ್ಯಾಮೆರಾ ಬಳಕೆಗೂ ಹೊಸ ನಿಯಮ
ಇದುವರೆಗೆ 200 ಮಿ.ಮೀ.ಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ಪ್ರತ್ಯೇಕ ಶುಲ್ಕ ಇರಲಿಲ್ಲ. ಹೊಸ ಆದೇಶದಂತೆ;
- 200 ಮಿ.ಮೀ.ವರೆಗೆ ಲೆನ್ಸ್ ಹೊಂದಿರುವ ಕ್ಯಾಮೆರಾಗೆ ಶುಲ್ಕ ಇಲ್ಲ.
- 200 ಮಿ.ಮೀ.ಗಿಂತ ಹೆಚ್ಚಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ₹1,500 ಜೊತೆಗೆ 18% GST ಪಾವತಿಸಬೇಕು.
ಖಾಸಗಿ ವಾಹನ ಪ್ರವೇಶ ಶುಲ್ಕವೂ ಹೆಚ್ಚಳ
ಅರಣ್ಯ ಪ್ರದೇಶಕ್ಕೆ ಪ್ರವೇಶಿಸುವ ಖಾಸಗಿ ವಾಹನಗಳಿಗೂ ಹೊಸ ದರ ನಿಗದಿಯಾಗಿದೆ.
- ಕಾರು – ₹100 + 18% GST
- ಲಘು ವಾಣಿಜ್ಯ ವಾಹನ (LCV) – ₹200 + 18% GST
- ಬಸ್ – ₹300 + 18% GST
- ಬಂಡೀಪುರ ಸಫಾರಿಗೆ ಪ್ರತ್ಯೇಕ ಪ್ರವೇಶ ದರ
ಬಂಡೀಪುರದಲ್ಲಿ ಸ್ವಂತ ಜೀಪ್, ಎಲ್‌ಸಿವಿ ಅಥವಾ ಬೋಟ್ ಮೂಲಕ ಅನುಮತಿ ಪಡೆದ ಪ್ರದೇಶಗಳಿಗೆ ಪ್ರವೇಶಿಸುವವರಿಗೂ ಹೊಸ ದರ ನಿಗದಿಯಾಗಿದೆ.
- ವಯಸ್ಕರಿಗೆ – ₹600
- ಮಕ್ಕಳಿಗೆ – ₹300
- ಜೀಪ್ – ₹2,500
- ಲಘು ವಾಣಿಜ್ಯ ವಾಹನ – ₹3,500
- ಬೋಟ್ – ₹3,500
ಬಂಡೀಪುರ ಸಫಾರಿ: ಹೊಸ ದರ ಯಾವಾಗಿನಿಂದ ಜಾರಿ?
ಅರಣ್ಯ ಇಲಾಖೆಯ ಆದೇಶದ ಪ್ರಕಾರ 2026ರ ಸೆಪ್ಟೆಂಬರ್ 1ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಈ ಆದೇಶವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ಸಂಬಂಧಿತ ಅರಣ್ಯ ಪ್ರವಾಸೋದ್ಯಮ ಸೇವೆಗಳಿಗೆ ಅನ್ವಯವಾಗಲಿದೆ.
ಇದನ್ನೂ ಓದಿ: ಮುಂಗಾರು ಮಳೆ ಕೊರತೆ: ಭರಚುಕ್ಕಿ ಜಲಪಾತ ಭಣಭಣ, ಪ್ರವಾಸಿಗರ ಸಂಖ್ಯೆಯಲ್ಲೂ ಇಳಿಮುಖ
ಹೊಸ ದರಗಳು ಪ್ರವಾಸೋದ್ಯಮದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಾರಿಯಾಗಿದ್ದರೂ, ಏಕಾಏಕಿ ದರ ಏರಿಕೆಯಿಂದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಪ್ರವಾಸಿಗರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:56 am, Mon, 27 July 26
