Bhimana Amavasya: ಭೀಮನ ಅಮಾವಾಸ್ಯೆ ಹಬ್ಬದ ಹಿಂದಿನ ಪೌರಾಣಿಕ ಕಥೆ ಇಲ್ಲಿ ತಿಳಿದುಕೊಳ್ಳಿ – Kannada News | Bhimana Amavasya: Significance and Rituals for Husband’s Longevity and Family Prosperity

ಆಷಾಢ ಮಾಸದ ಕೊನೆಯ ದಿನವಾದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ‘ಭೀಮನ ಅಮಾವಾಸ್ಯೆ‘ ಅಥವಾ ‘ಜ್ಯೋತಿರ್ಭೀಮೇಶ್ವರ ವ್ರತ’ ಎಂದು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಪತಿಯ ದೀರ್ಘಾಯುಷ್ಯ, ಕುಟುಂಬದ ಕ್ಷೇಮ ಮತ್ತು ಸೌಭಾಗ್ಯ ವೃದ್ಧಿಗಾಗಿ ಆಚರಿಸಲಾಗುವ ಈ ವ್ರತಕ್ಕೆ ಸುದೀರ್ಘ ಪೌರಾಣಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿದೆ. ಪವಿತ್ರ ಶ್ರಾವಣ ಮಾಸದ ಮನೆಬಾಗಿಲಿಗೆ ಬಂದು ನಿಲ್ಲುವ ಈ ದಿನವು ಜಪ, ತಪ, ಪೂಜೆ ಮತ್ತು ದಾನ-ಧರ್ಮಗಳಿಗೆ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಡುತ್ತದೆ.

ಬ್ರಾಹ್ಮಣ ಕನ್ಯೆಯ ನಿಷ್ಠೆ ಮತ್ತು ಪೌರಾಣಿಕ ಹಿನ್ನೆಲೆ:

ಸ್ಕಂದ ಪುರಾಣದ ಪ್ರಕಾರ, ಹಿಂದೆ ಬಡ ಬ್ರಾಹ್ಮಣನೊಬ್ಬ ಅನಿವಾರ್ಯ ಪರಿಸ್ಥಿತಿಯಲ್ಲಿ ತನ್ನ ಮಗಳನ್ನು ಅಕಾಲಿಕವಾಗಿ ಮರಣ ಹೊಂದಿದ್ದ ರಾಜಕುಮಾರನಿಗೆ ನೀಡಿ ವಿವಾಹ ಮಾಡಿಕೊಡುತ್ತಾನೆ. ಸಂಪ್ರದಾಯದಂತೆ ಆ ಬಾಲಕಿಯು ಶ್ಮಶಾನದಲ್ಲಿ ಮೃತದೇಹದ ಬಳಿ ಕಾಲ ಕಳೆಯಬೇಕಾಗುತ್ತದೆ. ಆದರೆ ಧೈರ್ಯಗೆಡದ ಆಕೆ, ತನ್ನ ತಾಯಿ ಪ್ರತೀವರ್ಷ ಆಚರಿಸುತ್ತಿದ್ದ ಆಷಾಢ ಅಮಾವಾಸ್ಯೆಯ ವ್ರತವನ್ನು ನೆನಪಿಸಿಕೊಂಡು, ಗಂಗಾ ನದಿಯ ದಂಡೆಯಲ್ಲಿ ಮಣ್ಣಿನಿಂದ ಶಿವ-ಪಾರ್ವತಿಯರ ಪ್ರತಿರೂಪವಾಗಿ ದೀಪಗಳನ್ನು (ಜ್ಯೋತಿ) ಮಾಡಿ ಭಕ್ತಿಯಿಂದ ಪೂಜಿಸುತ್ತಾಳೆ. ಆಕೆಯ ನಿಷ್ಕಲ್ಮಶ ಪತಿಭಕ್ತಿಗೆ ಪ್ರಸನ್ನರಾದ ಪರಶಿವ ಹಾಗೂ ಪಾರ್ವತಿ ದೇವಿ ಪ್ರತ್ಯಕ್ಷರಾಗಿ ರಾಜಕುಮಾರನಿಗೆ ಮರುಜೀವ ನೀಡುತ್ತಾರೆ. ಇದರಿಂದಾಗಿ ಈ ವ್ರತಕ್ಕೆ ‘ಪತಿ ಸಂಜೀವಿನಿ ವ್ರತ’ ಎಂಬ ಹೆಸರೂ ಬಂದಿದೆ.

ಮಹಾಭಾರತದ ಭೀಮನ ನಂಟು ಮತ್ತು ವ್ರತದ ಹೆಸರು:

ಮಹಾಭಾರತದ ಪರಾಕ್ರಮಿ ಭೀಮನು ದ್ರೌಪದಿಯ ರಕ್ಷಣೆ ಹಾಗೂ ಶ್ರೇಯಸ್ಸಿಗಾಗಿ ಈ ವ್ರತವನ್ನು ಆಚರಿಸಿ, ಭಕ್ತಿಯಿಂದ ಶಿವ-ಪಾರ್ವತಿಯರ ಆಶೀರ್ವಾದ ಪಡೆದಿದ್ದ ಎಂಬ ಉಲ್ಲೇಖಗಳಿವೆ. ಜೊತೆಗೆ, ಸಾರ್ವಜನಿಕರಿಗೆ ಉಪದ್ರ ನೀಡುತ್ತಿದ್ದ ದುಷ್ಟ ರಾಕ್ಷಸ ಬಕಾಸುರನನ್ನು ಭೀಮನು ಸಂಹರಿಸಿ ಜನರನ್ನು ಭೀತ ಮುಕ್ತಗೊಳಿಸಿದ ಪವಿತ್ರ ದಿನವೂ ಇದಾಗಿದೆ. ಹೀಗಾಗಿ ಈ ವಿಶೇಷ ದಿನವನ್ನು ಭೀಮನ ಸಾಹಸ ಮತ್ತು ಭಕ್ತಿಯ ಸಂಕೇತವಾಗಿ ‘ಭೀಮನ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಪತಿದೇವರ ಪಾದಪೂಜೆ:

ಭೀಮನ ಅಮಾವಾಸ್ಯೆಯ ದಿನದಂದು ಪ್ರತಿಯೊಂದು ಮನೆಯಲ್ಲೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ. ವಿವಾಹಿತ ಮಹಿಳೆಯರು (ಸುಮಂಗಲಿಯರು) ಬೆಳಿಗ್ಗೆ ಉಪವಾಸ ವ್ರತ ಕೈಗೊಂಡು ಶಿವ-ಪಾರ್ವತಿಯರನ್ನು ಪೂಜಿಸಿ, ನಂತರ ತಮ್ಮ ಪತಿಯ ಪಾದಪೂಜೆ ಮಾಡಿ ಆಶೀರ್ವಾದ ಪಡೆಯುತ್ತಾರೆ. ಮದುವೆಯಾಗದ ಯುವತಿಯರು ತಮಗೆ ಸದ್ಗುಣಶೀಲ ಪತಿ ಲಭಿಸಲಿ ಎಂದು ಪ್ರಾರ್ಥಿಸುತ್ತಾರೆ.

ವೈವಾಹಿಕ ಜೀವನದಲ್ಲಿ ಸಾಂಸ್ಕೃತಿಕ ಮಹತ್ವ:

ಭೀಮನ ಅಮಾವಾಸ್ಯೆಯು ಕೇವಲ ಒಂದು ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಕೌಟುಂಬಿಕ ಐಕ್ಯತೆ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ದಂಪತಿಗಳ ನಡುವಿನ ಪ್ರೀತಿ, ಗೌರವ ಮತ್ತು ನಂಬಿಕೆಯನ್ನು ಪುನಶ್ಚೇತನಗೊಳಿಸುವ ಈ ದಿನವು, ಮನೆಮನಗಳಲ್ಲಿ ಧಾರ್ಮಿಕ ಕಳೆ ಹಾಗೂ ಮಂಗಳಕರ ವಾತಾವರಣವನ್ನು ತರುತ್ತದೆ. ಶ್ರಾವಣ ಮಾಸದ ಆಗಮನದ ಸಂಕೇತವಾಗಿರುವ ಈ ಆಚರಣೆಯು ಸಕಲ ಜನರಿಗೂ ಶ್ರೇಯಸ್ಸು ಮತ್ತು ಸುಖ-ಶಾಂತಿಯನ್ನು ಕರುಣಿಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *