Headlines

Boss Movie Review: ಶಿವಸ್ವಾಮಿ ಕೊಲೆ ರಹಸ್ಯದ ಕಥೆ ‘ಬಾಸ್’ ಹೇಗಿದೆ? ಇಲ್ಲಿದೆ ವಿಮರ್ಶೆ – Kannada News | Boss Movie Review: Controversial Thriller Inspired by High Profile Crime Case Movie Rating

ಒಂದು ಕೊಲೆ ನಡೆದು, ಅದರಲ್ಲಿ ಸೆಲೆಬ್ರಿಟಿಯ ಪಾತ್ರವಿದೆ ಎಂದಾಗ ಅದರಲ್ಲೂ ಆ ಪ್ರಕರಣದ ವಿಚಾರಣೆ ಇನ್ನೂ ಚಾಲ್ತಿಯಲ್ಲಿರುವಾಗ ಆ ಬಗ್ಗೆ ಒಂದಷ್ಟು ಕುತೂಹಲ ಇದ್ದೇ ಇರುತ್ತದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲೂ ಹಾಗೆಯೇ ಆಯಿತು. ಏಕೆಂದರೆ ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದು ನಟ ದರ್ಶನ್. ಇದೇ ಕಥೆಯನ್ನು ಆಧರಿಸಿ ‘ಬಾಸ್’ ಸಿದ್ಧವಾಗಿದೆ ಎನ್ನಲಾಗಿತ್ತು. ನಿಜಕ್ಕೂ ಸಿನಿಮಾ ಹಾಗೆಯೇ ಇದೆಯೇ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಬಾಸ್ ಸಿನಿಮಾ ಕಥೆ ಏನು?

ಬೆಂಗಳೂರಿನ ಮೋರಿ ಪಕ್ಕದಲ್ಲಿ ಒಂದು ಹೆಣ ಸಿಗುತ್ತದೆ. ನಾಯಿಗಳು ಅದನ್ನು ಕಚ್ಚಿ ತಿನ್ನುತ್ತಾ ಇರುತ್ತವೆ. ಆ ಬಗ್ಗೆ ಅಪಾರ್ಟ್​​ಮೆಂಟ್ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡುತ್ತಾನೆ. ಪೊಲೀಸರು ಬಂದು ಶವವನ್ನು ತೆಗೆದುಕೊಂಡು ಹೋಗುತ್ತಾರೆ. ಹೆಣವಾಗಿದ್ದು ಯಾರು ಎಂದು ಪೊಲೀಸರು ಚಿಂತಿಸುವಾಗಲೇ ನಾಲ್ಕು ಜನ ಬಂದು ಸರೆಂಡರ್ ಆಗುತ್ತಾರೆ. ನಾವೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಳ್ಳುತ್ತಾರೆ.

ಇದೇ ಸಮಯಕ್ಕೆ ಪೊಲೀಸರಿಗೆ ಮಂತ್ರಿಯೊಬ್ಬರಿಂದ ಕರೆ ಬರುತ್ತದೆ. ಅಸಲಿ ವಿಷಯ ಬೇರೆಯೇ ಇದೆ ಎಂದು ಹೇಳುತ್ತಾರೆ. ಸರೆಂಡರ್ ಆದವರಿಗೆ ಸರಿಯಾಗಿ ಬೆಂಡೆತ್ತಿದಾಗ ಖ್ಯಾತ ಕ್ರಿಕೆಟರ್ ಬಾಸ್ (ತನುಷ್ ಶಿವಣ್ಣ) ಹೆಸರು ಹೊರಬರುತ್ತದೆ. ಆ ಕೊಲೆ ಹೇಗೆ ನಡೆಯಿತು? ಅದನ್ನು ಅಸಲಿಗೆ ಮಾಡಿದ್ದು ಯಾರು ಎಂಬಿತ್ಯಾದಿ ವಿಷಯಗಳನ್ನು ‘ಬಾಸ್’ ಸಿನಿಮಾದಲ್ಲಿ ಹೇಳಲಾಗಿದೆ.

ವಿವಾದಾತ್ಮಕ ವಿಷಯವೇ ಸಿನಿಮಾ ಆದಾಗ

‘ಬಾಸ್’ ಒಂದು ವಿವಾದಾತ್ಮಕ ವಿಷಯ. ಇದನ್ನು ಹೇಳುವ ರಿಸ್ಕ್​ ಅನ್ನು ಲವ ಅವರು ತೆಗೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರು ಸಾಕಷ್ಟು ಅಡೆತಡೆ ಎದುರಿಸಿದ್ದಾರೆ. ಆದರೆ, ಸಿನಿಮಾ ನೋಡಿದ ಬಳಿಕ ಈ ಸಾಹಸ ಮಾಡುವ ಅಗತ್ಯವಿತ್ತೇ ಎನ್ನುವ ಪ್ರಶ್ನೆ ಮೂಡುತ್ತದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಂಚಿಂಚು ಮಾಹಿತಿ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಅದೇ ಕಥೆಯನ್ನು ಶಿವಸ್ವಾಮಿ ಕೊಲೆ ಪ್ರಕರಣವಾಗಿ ಮಾಡುತ್ತೇನೆ ಎಂಬ ಸಾಹಸವೇಕೆ ಎಂದು ಸಿನಿಮಾ ನೋಡಿದ ಬಳಿಕ ಕೆಲವರಿಗೆ ಅನಿಸಬಹುದು.

‘ಬಾಸ್’ ಸಿನಿಮಾದ ಮೊದಲಾರ್ಧ ರೋಚಕವಾಗಿದೆ. ಕೊಲೆಗೂ ಮೊದಲು ಏನೆಲ್ಲ ಆಯಿತು, ಕೊಲೆಯ ಹಿಂದೆ ಏನೆಲ್ಲ ನಡೆದವು ಎಂಬುದನ್ನು ಇಂಚಿಂಚು ಬಿಚ್ಚಿಟ್ಟಿದ್ದಾರೆ. ಈ ತಂಡ ಕಥೆಯನ್ನು ಕೇವಲ ಕಾಲ್ಪನಿಕ ಎಂದು ಹೇಳಿದೆ. ಆದರೆ, ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಇದು ಕಾಲ್ಪನಿಕ ಕಥೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದರಲ್ಲಿ ಅಸಲಿ ವಿಷಯ ಯಾವುದು? ಕಾಲ್ಪನಿಕ ಯಾವುದು ಎಂದು ಜಡ್ಜ್ ಮಾಡೋದು ಕಷ್ಟ. ಅದರಲ್ಲೂ ಪ್ರಕರಣ ಕೋರ್ಟ್​​ನಲ್ಲಿ ವಿಚಾರಣೆಯಲ್ಲಿರುವಾಗ ಬಾಸ್ ಪಾತ್ರ ಇದರಲ್ಲಿ ಏನೂ ಇಲ್ಲ ಎಂಬ ಜಡ್ಜ್​​ಮೆಂಟ್ ಕೊಡುವ ಪ್ರಯತ್ನದ ಬಗ್ಗೆಯೂ ಕೆಲವರಿಗೆ ಅಸಮಾಧಾನ ಮೂಡಬಹುದು.

ಸಂಗೀತ ಇನ್ನಷ್ಟು ಉತ್ತಮವಾಗಿ ಮೂಡಿ ಬಂದಿದ್ದರೆ ‘ಬಾಸ್’ ಸಿನಿಮಾದ ಮತ್ತಷ್ಟು ಪರಿಣಾಮಕಾರಿಯಾಗಿ ಕಾಣಿಸುತ್ತಿತ್ತು. ಈ ಚಿತ್ರದಲ್ಲಿ ಬರೋ ಎಲ್ಲ ಪಾತ್ರಗಳು ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಭಾಗಿ ಆದ ಪಾತ್ರಗಳನ್ನೇ ಹೋಲುತ್ತವೆ. ಹೀಗಾಗಿ, ಹೆಜ್ಜೆ ಹೆಜ್ಜೆಗೂ ರೇಣುಕಾಸ್ವಾಮಿ ಕೊಲೆ ಕೇಸ್​ ಅನ್ನು ಇದು ನೆನಪಿಸುತ್ತದೆ.

ಇದನ್ನೂ ಓದಿ: ‘ನಮ್ಮ ಕೈಲಾದ ಸಹಾಯ ಮಾಡೋಣ ಅಂತ ದರ್ಶನ್ ಹೇಳಿದ್ರು’; ‘ಬಾಸ್’ ಬಗ್ಗೆ ತನುಷ್ ಶಿವಣ್ಣ ಮಾತು

ಈ ಸಿನಿಮಾದಲ್ಲಿ ತನುಷ್ ಶಿವಣ್ಣ ಬಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೈಂ ಕಥೆಯೇ ಹೆಚ್ಚು ಸಾಗೋದರಿಂದ ಅವರು ತೆರೆಮೇಲೆ ಕಾಣಿಸಿಕೊಳ್ಳೋದು ಕಡಿಮೆ. ವಂದಿತಾ ಗೌಡ ಅವರು ಶೀಲಾ ಗೌಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸ್ವಲ್ಪ ಹೊತ್ತು ತೆರೆಮೇಲೆ ಬರುತ್ತಾರೆ. ಪಾಯಲ್ ಚೆಂಗಪ್ಪ ಬಾಸ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಕೆಲವೇ ದೃಶ್ಯಗಳಿಗೆ ಸೀಮಿತವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 11:14 am, Fri, 7 August 26

Source link

Leave a Reply

Your email address will not be published. Required fields are marked *