“ಮ್ಯಾರೇಜಸ್ ಆರ್ ಮೇಡ್ ಇನ್ ಹೆವೆನ್” ಎಂಬ ನುಡಿಯಂತೆ, ವಿವಾಹ ಬಂಧವು ಕೇವಲ ಮಾನವ ಸಂಬಂಧವಲ್ಲ, ಅದೊಂದು ದೈವಿಕ ಸಂಪರ್ಕ. ಮನುಷ್ಯನ ಜೀವನದಲ್ಲಿ ವಿವಾಹವು ಒಂದು ಪ್ರಮುಖ ಪರಿವರ್ತನೆಯ ಕಾಲವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿವಾಹ ಮತ್ತು ಅದರ ಪೂರ್ವಭಾವಿ ಸಂಸ್ಕಾರಗಳಿಗೆ ನೀಡುವ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದಾಗಿ ವಾಗ್ದಾನಗಳ ಮಹತ್ವವನ್ನು ಮರೆಯಲಾಗುತ್ತಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ನಿಶ್ಚಿತಾರ್ಥ (ನಿಶ್ಚಯ ತಾಂಬೂಲ) ಪ್ರಕ್ರಿಯೆಗೆ ಬಂದಾಗ, ಹುಡುಗ-ಹುಡುಗಿಯ ಕುಟುಂಬಗಳು ಒಪ್ಪಿಗೆ ನೀಡಿ, ಮಾತುಕತೆ ಮುಂದುವರಿಸಿ ಅಥವಾ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿ ವಾಗ್ದಾನ ಮಾಡುತ್ತಾರೆ. ಈ ವಾಗ್ದಾನಕ್ಕೆ ಭಗವಂತನೇ ಸಾಕ್ಷಿಯಾಗಿರುತ್ತಾನೆ. ಯಾವುದೇ ಕಾಗದಪತ್ರಗಳಿಲ್ಲದೆ ಮಾಡುವ ಈ ಪ್ರತಿಜ್ಞೆಗೆ ಅತೀವ ಪಾವಿತ್ರತೆಯಿದೆ. ಆದರೆ, ನಿಶ್ಚಯ ತಾಂಬೂಲವನ್ನು ಸ್ವೀಕರಿಸಿ, ನಂತರ ಯಾವುದೇ ಸಬೂಬುಗಳು ಅಥವಾ ಅನುಮಾನಗಳನ್ನು ಮುಂದಿಟ್ಟು ವಿವಾಹವನ್ನು ನಿರಾಕರಿಸಿದರೆ, ಅದು ಭಾರೀ ದೋಷಗಳಿಗೆ ಕಾರಣವಾಗುತ್ತದೆ.
ನಿಶ್ಚಯ ತಾಂಬೂಲದ ಸಮಯದಲ್ಲಿ ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ಹೂವುಗಳು, ಅರಿಶಿನ ಮತ್ತು ಕುಂಕುಮಗಳಂತಹ ಮಂಗಳಕರ ವಸ್ತುಗಳನ್ನು ಬಳಸಲಾಗುತ್ತದೆ. ಈ ಪ್ರತಿಯೊಂದು ವಸ್ತುವಿಗೂ ದೈವಿಕ ಪ್ರಾಮುಖ್ಯತೆಯಿದೆ. ವೀಳ್ಯದೆಲೆಯಲ್ಲಿ ಸಾಕ್ಷಾತ್ ಪಾರ್ವತಿ ದೇವಿಯ ಸಾನಿಧ್ಯವಿರುತ್ತದೆ. ಬಾಳೆಹಣ್ಣು ಮಂಗಳಕರ ಫಲವನ್ನು ಪ್ರತಿನಿಧಿಸುತ್ತದೆ. ತೆಂಗಿನಕಾಯಿಯನ್ನು “ಪೂರ್ಣ ಫಲ” ಎಂದು ಕರೆಯಲಾಗುತ್ತದೆ. ಅಡಿಕೆ ಮಂಗಳಕರವಾದ ವಸ್ತುವಾಗಿದೆ. ಅರಿಶಿನ ಮತ್ತು ಕುಂಕುಮಗಳಲ್ಲಿ ಮಹಾಕಾಳಿಯ ಸ್ವರೂಪ ಅಡಗಿದೆ ಎಂದು ನಂಬಲಾಗಿದೆ. ಕೇವಲ ಅರಿಶಿನ ಕುಂಕುಮವನ್ನು ಮಂತ್ರಿಸಿ ಯಾವುದೇ ಕಾರ್ಯಕ್ಕೆ ಬಳಸಿದರೆ ಅದು ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಸನಾತನ ಸಂಸ್ಕೃತಿಯಲ್ಲಿದೆ. ಇಷ್ಟೆಲ್ಲಾ ಮಂಗಳ ದ್ರವ್ಯಗಳು ಮತ್ತು ಸುಮಂಗಲಿಯರು ಇರುವ ಒಂದು ಕಾರ್ಯಕ್ರಮದಲ್ಲಿ ಸರ್ವ ದೇವತೆಗಳು ಸಹ ಸಾಕ್ಷಿಯಾಗಿರುತ್ತಾರೆ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ಅಂತಹ ಪವಿತ್ರವಾದ ನಿಶ್ಚಯ ತಾಂಬೂಲವನ್ನು ಒಪ್ಪಿ, ನಂತರ ತಿರಸ್ಕರಿಸಿದರೆ, ಅದನ್ನು ಮಹಾಪಾಪ ಎಂದು ಪರಿಗಣಿಸಲಾಗುತ್ತದೆ. ಈ ಪಾಪದಿಂದಾಗಿ ವ್ಯಕ್ತಿಯ ಕುಟುಂಬದಲ್ಲಿ ಹಲವು ದೋಷಗಳು ಅಂಟಿಕೊಳ್ಳುತ್ತವೆ. ತಿರಸ್ಕರಿಸಿದ ಗಂಡಾಗಲಿ ಅಥವಾ ಹೆಣ್ಣಾಗಲಿ, ಅವರ ಜೀವನದ ಕೊನೆಯ ಭಾಗದಲ್ಲಿ ಅತಿ ಹೆಚ್ಚು ದೋಷಗಳನ್ನು ಎದುರಿಸುತ್ತಾರೆ. ಇದು ಕೇವಲ ವ್ಯಕ್ತಿಗಳಿಗೆ ಕೊಟ್ಟ ವಾಗ್ದಾನ ಭಂಗವಲ್ಲ, ದೈವಿಕ ಶಕ್ತಿಗಳಿಗೇ ಮಾಡಿದ ಅಗೌರವ. ಇದರ ಫಲವಾಗಿ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ, ಅದೃಷ್ಟ ಕುಂದುತ್ತದೆ, ಸ್ಥಾನಪಲ್ಲಟಗಳು ಸಂಭವಿಸುತ್ತವೆ. ಮುಂದಿನ ದಿನಗಳಲ್ಲಿ ಕುಲದೇವರ ಅಸಮಾಧಾನಕ್ಕೂ ಇದು ಕಾರಣವಾಗುತ್ತದೆ.
ಅನೇಕರು ತಮ್ಮ ಜಾತಕ ಚೆನ್ನಾಗಿದ್ದರೂ, ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದರೂ, ಅದೃಷ್ಟ ಕೈಕೊಟ್ಟಿದೆ ಎಂದು ಹೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ, ನಿಶ್ಚಯ ತಾಂಬೂಲದಂತಹ ಪವಿತ್ರ ವಾಗ್ದಾನಗಳನ್ನು ಮುರಿದಿರುವುದು ಆಗಿರಬಹುದು. ಸನಾತನ ಧರ್ಮದ ನಂಬಿಕೆಗಳ ಪ್ರಕಾರ, “ಮಾಡಿದ್ದುಣ್ಣೋ ಮಾರಾಯ” ಎನ್ನುವಂತೆ, ಈ ಕರ್ಮದ ಫಲವನ್ನು ಅನುಭವಿಸಲೇಬೇಕು. ಇದು ಭಗವಂತನ ಶಿಕ್ಷೆ, ಎಲ್ಲಾ ಶಿಕ್ಷೆಗಳಿಗಿಂತ ದೊಡ್ಡದು. ಆದ್ದರಿಂದ, ಗಂಡಾಗಲಿ ಅಥವಾ ಹೆಣ್ಣಾಗಲಿ, ನಿಶ್ಚಯ ತಾಂಬೂಲವನ್ನು ಸ್ವೀಕರಿಸುವ ಮೊದಲು ಕೂಲಂಕಷವಾಗಿ, ಎಲ್ಲವನ್ನೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕ. ಒಮ್ಮೆ ಒಪ್ಪಿಕೊಂಡ ನಂತರ, ಅದನ್ನು ತಿರಸ್ಕರಿಸಬಾರದು. ಇಲ್ಲವಾದರೆ, ಕುಲದೇವರ ಅಪವಾದಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ