ಬಾಗಲಕೋಟೆ, ಏ.9: ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಬೆಳ್ಳಂಬೆಳಿಗ್ಗೆಯೇ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ತಮ್ಮ ಕುಟುಂಬ ಸಮೇತರಾಗಿ ಮತದಾನ ಮಾಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ಗೆಲುವಿನ ಕುರಿತು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲುಂಡಿದ್ದ ವೀರಣ್ಣ ಚರಂತಿಮಠ ಅವರು, ಈ ಬಾರಿಯ ವಾತಾವರಣ ಚೆನ್ನಾಗಿದೆ ಎಂದರು. ಇದೇ ವೇಳೆ, ಕಾಂಗ್ರೆಸ್ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್‌ನವರು ಲಕ್ಷಾಂತರ, ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ. ಅಲ್ಲದೆ, ಗೋಕಾಕ್, ಅರಬಾವಿ ಮತ್ತು ಬೆಳಗಾವಿ ಜಿಲ್ಲೆಗಳಿಂದ ಹೊರಗಿನವರು ಬಂದು ಬೀಡುಬಿಟ್ಟಿದ್ದಾರೆ ಎಂದು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ತಿಳಿಸಿದರು. ಎಲ್ಲ ಯುವಕ, ಯುವತಿಯರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾರತೀಯ ಜನತಾ ಪಕ್ಷದ ಕಮಲದ ಗುರುತಿಗೆ ಮತ ಹಾಕುವಂತೆ ಮನವಿ ಮಾಡಿದರು.
ವಿಘ್ನೇಶ್ ಶಿವನ್ ನಿರ್ದೇಶನದ ‘ಎಲ್ಯುಕೆ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರ ಏಪ್ರಿಲ್ 10ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್ಗೂ ಮೊದಲು ವಿಘ್ನೇಶ್ ಹಾಗೂ ನಯನತಾರಾ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಆ ವಿಡಿಯೋ ಇಲ್ಲಿದೆ.
ಆನೇಕಲ್, ಏಪ್ರಿಲ್ 09: ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್ ಹರಿದ ಪರಿಣಾಮ ಹಸೆಮಣೆ ಏರಬೇಕಿದ್ದ ಯುವಕ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹುಳಿಮಾವು ಜಾತ್ರೆಯಲ್ಲಿ ನಡೆದಿದೆ. ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ನಿನ್ನೆ ನಡೆದಿದ್ದು, ರಥೋತ್ಸವ ಹಿನ್ನಲೆ ರಾತ್ರಿ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಲ್ಲಕ್ಕಿಗಳನ್ನ ನೋಡುತ್ತಾ ನಿಂತಿದ್ದ ಯುವಕನ ಮೇಲೆ ಟ್ರ್ಯಾಕ್ಟರ್ ಹರಿದಿದ್ದು, ಅಕ್ಷತ್ (27) ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗಿತ್ತಾದರೂ ಮಾರ್ಗ ಮಧ್ಯೆಯೇ ಉಸಿರು ಚೆಲ್ಲಿದ್ದಾರೆ.
ಬನಶಂಕರಿ ನಿವಾಸಿಯಾಗಿರುವ ಅಕ್ಷತ್, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಮದುವೆಯ ಅಹ್ವಾನ ಪತ್ರಿಕೆ ವಿತರಿಸಲೆಂದು ಬಂದಿದ್ದರು. ಹಾಗೆ ಜಾತ್ರೆಯನ್ನೂ ನೋಡಿ ಹೋಗೊಣ ಎಂದು ಅಲ್ಲಿಯೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಇನ್ನು ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದಲೇ ಅಪಘಾತ ನಡೆದಿದೆ ಎನ್ನಲಾಗಿದ್ದು, ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹುಳಿಮಾವು ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು, ಸ್ಥಳಕ್ಕೆ ಬೆಂಗಳೂರು ದಕ್ಷಿಣ ಸಂಚಾರ ಡಿಸಿಪಿ ಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರ್ಘಟನೆ ನಡೆದು ಓರ್ವ ಮೃತಪಟ್ಟಿದ್ದರೂ ದೇವಾಲಯದ ಟ್ರಸ್ಟಿಗಳು ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೆಂದನಹಳ್ಳಿ ಗೇಟ್ ಬಳಿ ಕಾರು ಡಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ವಿಜಯ್, ದೊಡ್ಡಗೌಡ, ಅಂಬರೀಶ್ ಗಾಯಾಳುಗಳಾಗಿದ್ದು, ಇವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ 14 ಪಂದ್ಯಗಳು ಮುಗಿದಿವೆ. ಇದಾಗ್ಯೂ ಕೆಲ ಸ್ಟಾರ್ ಆಟಗಾರರು ಇನ್ನೂ ಕೂಡ ತಂಡವನ್ನು ಕೂಡಿಕೊಂಡಿಲ್ಲ. ಅಂದರೆ ಗಾಯದ ಸಮಸ್ಯೆಯ ಕಾರಣ ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದೀಗ ಈ ಆಟಗಾರರ ಇಂಜುರಿ ಅಪ್ಡೇಟ್ ಹೊರಬಿದಿದ್ದು, ಯಾವ ಆಟಗಾರ ಯಾವಾಗ ಕಣಕ್ಕಿಳಿಯಲಿದ್ದಾರೆ ಎಂದು ನೋಡುವುದಾದರೆ…
ಎಂ.ಎಸ್. ಧೋನಿ (CSK): ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಿಂತೆ ಮುಂದಿನ ಪಂದ್ಯದಲ್ಲೂ ಮುಂದುವರೆಯಲಿದೆ. ಏಕೆಂದರೆ ಕಾಲಿನ ಸ್ನಾಯು ಸೆಳೆತದಿಂದ (Calf Strain) ಧೋನಿ ಇನ್ನೂ ಚೇತರಿಸಿಕೊಂಡಿಲ್ಲ. ಸದ್ಯದ ವರದಿಗಳ ಪ್ರಕಾರ, ಏಪ್ರಿಲ್ 11 ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಧೋನಿ ಅಲಭ್ಯರಾಗಲಿದ್ದಾರೆ.
ಮಿಚೆಲ್ ಸ್ಟಾರ್ಕ್ (DC): ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಭುಜ ಮತ್ತು ಮೊಣಕೈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಟಾರ್ಕ್ ಏಪ್ರಿಲ್ 21ರ ಸುಮಾರಿಗೆ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
ಡೆವಾಲ್ಡ್ ಬ್ರೆವಿಸ್ (CSK): ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಸ್ಫೋಟಕ ದಾಂಡಿಗ ಡೆವಾಲ್ಡ್ ಬ್ರೆವಿಸ್ ಅವರು ತಮ್ಮ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಏಪ್ರಿಲ್ 11ರಂದು ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಅವರು ಲಭ್ಯವಿರಲಿದ್ದಾರೆ ಎಂದು ಸಿಎಸ್ಕೆ ತಂಡ ಖಚಿತಪಡಿಸಿದೆ.
ವನಿಂದು ಹಸರಂಗ (LSG): ಶ್ರೀಲಂಕಾದ ಆಲ್ರೌಂಡರ್ ಹಸರಂಗ ಅವರ ವಿಷಯದಲ್ಲಿ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಕಾಲಿನ ಸ್ನಾಯು ಹರಿತದ (Hamstring tear) ಸಮಸ್ಯೆಯಿಂದ ಬಳಲುತ್ತಿರುವ ಅವರು ಇನ್ನೂ ಫಿಟ್ನೆಸ್ ಟೆಸ್ಟ್ ಪೂರ್ಣಗೊಳಿಸಬೇಕಿದೆ. ಹೀಗಾಗಿ ಅವರು ಈ ಸೀಸನ್ನಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಮಥೀಶ ಪತಿರಾಣ (KKR): ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗಿ ಪತಿರಾಣ ಅವರು ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಪ್ರಿಲ್ 16ರ ಪಂದ್ಯಕ್ಕೆ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ಪರ ಮೈದಾನಕ್ಕಿಳಿಯಲಿದ್ದಾರೆ.
ಚಿಕ್ಕಮಗಳೂರು, ಏ.9: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಮನ ಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. 77 ವರ್ಷದ ಸಿರಿಲ್ ಮೋನಿಸ್ ಎಂಬುವವರು ಅನಾರೋಗ್ಯದಿಂದ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಆದರೆ, ಅವರ ಪತ್ನಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ, ಪತಿ ಸಾವನ್ನಪ್ಪಿರುವುದು ಅವರಿಗೆ ತಿಳಿದಿರಲೇ ಇಲ್ಲ. ಸುಮಾರು 10 ದಿನಗಳ ಕಾಲ ಅವರು ಕೊಳೆತು ಹುಳ ಹಿಡಿದಿದ್ದ ಪತಿಯ ಶವದ ಪಕ್ಕದಲ್ಲೇ ಕಾಲ ಕಳೆದಿದ್ದಾರೆ.
ಮನೆಯಿಂದ ವಿಪರೀತ ದುರ್ವಾಸನೆ ಬಂದಾಗ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದಾಗ ಪತ್ನಿ “ನನ್ನ ಗಂಡ ನನಗೆ ಬೇಕು, ಯಾರೂ ಮುಟ್ಟಬೇಡಿ” ಎಂದು ಶವವನ್ನು ಮುಟ್ಟಲು ಬಿಡದೆ ಹಠ ಹಿಡಿದಿದ್ದರು. ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಮಗ ನಿತ್ಯ ಕರೆ ಮಾಡಿದಾಗಲೂ ತಾಯಿ “ಅಪ್ಪ ಚೆನ್ನಾಗಿದ್ದಾರೆ” ಎಂದೇ ಹೇಳುತ್ತಿದ್ದರು. ಅಪ್ಪ ಸತ್ತ 10 ದಿನಗಳ ನಂತರ ಮಗ ಬಂದರೂ, ತಂದೆಯ ಮುಖ ನೋಡುವ ಭಾಗ್ಯ ಆತನಿಗೆ ಸಿಗಲಿಲ್ಲ. ಇನ್ನು ಮಗಳು ಅಪ್ಪ ಸತ್ತರೂ ಬಂದು ನೋಡಿಲ್ಲ.
ಶವ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸ್ಥಳೀಯರು ಮುಟ್ಟಲು ಹಿಂಜರಿದರು. ಈ ವೇಳೆ ಸಮಾಜ ಸೇವಕ ಆರೀಫ್ ಅವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿ, ಅಂತ್ಯಸಂಸ್ಕಾರಕ್ಕೆ ನೆರವಾದರು.ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಸಂಜೆ ವೇಳೆಗೆ ಮೋನಿಸ್ ಅವರ ಅಂತ್ಯಸಂಸ್ಕಾರ ನೆರವೇರಿತು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು, ಏಪ್ರಿಲ್ 09: ಆಟವಾಡುವಾಗ ಮೊದಲನೇ ಮಹಡಿಯಿಂದ ಬಿದ್ದು ಮಗುವೊಂದು ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ (Bengaluru) ನಾಯಂಡಳ್ಳಿಯಲ್ಲಿ ನಡೆದಿದೆ. ಆಯತಪ್ಪಿ ಬಿದ್ದ ಪರಿಣಾಮ ಒಂದೂವರೆ ವರ್ಷದ ಹೆಣ್ಣು ಮಗು ಸಹನಾಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಏಪ್ರಿಲ್ 6ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಹಡಿಯಿಂದ ಹೆಣ್ಣು ಮಗು ಬೀಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಗುವಿನ ಆರೋಗ್ಯದಲ್ಲಿ ಚೇತರಿಕೆ
ಇನ್ನು ಗಂಭೀರ ಗಾಯಗೊಂಡಿರುವ ಮಗು ಸಹನಾ ನವೀನ್ ಮತ್ತು ಜಯಶ್ರೀ ದಂಪತಿಯದ್ದಾಗಿದ್ದು, ಮಗಳ ಸದ್ಯದ ಆರೋಗ್ಯದ ಬಗ್ಗೆ ತಂದೆ ನವೀನ್ ಮಾಹಿತಿ ನೀಡಿದ್ದಾರೆ. ಬಸವನಗುಡಿಯ ರಂಗದೊರೆ ಸ್ಮಾರಕ ಆಸ್ಪತ್ರೆಯ ಐಸಿಯುನಲ್ಲಿ ಸಹನಾಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ತಲೆ ಭಾಗಕ್ಕೆ ಸ್ವಲ್ಪ ಗಾಯವಾಗಿದ್ದು ಬಿಟ್ಟರೆ ಮತ್ತೆಲ್ಲಿಯೂ ಏನೂ ಆಗಿಲ್ಲ. ತಲೆಗೆ ಮೂರು ಹೊಲಿಗೆ ಹಾಕಲಾಗಿದ್ದು, ಸಹನಾ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ.
ಮಗುವಿನ ಜೊತೆಗೇ ಇದ್ದ ತಾಯಿ ಜಯಶ್ರೀ ಹಾಲು ಕಾಯಿಸಲು ಇಟ್ಟಿದ್ದರು. ಹೀಗಾಗಿ ಹಾಲು ಉಕ್ಕಿತಾ ಎಂದು ನೋಡಿ ಬರಲು ಅರೆಕ್ಷಣ ಅವರು ತೆರಳಿದ್ದರು. ಅಷ್ಟರಲ್ಲಿ ಮಗು ಸಹನಾ ಮಹಡಿಯಿಂದ ಬಿದ್ದು ಗಾಯಗೊಂಡಿದೆ. ಹೊರಗಡೆ ಇದ್ದ ಚೇರ್ ಹತ್ತಿದ ಪರಿಣಾಮ ಮಗುವಿಗೆ ಆಯತಪ್ಪಿದೆ. ಮಗು ಕೆಳಗಡೆ ಬಿದ್ದಿದ್ದನ್ನು ಕಂಡ ರಸ್ತೆಯಲ್ಲಿ ತೆರಳುತ್ತಿದ್ದ ಜನ ಕಿರುಚಾಡುತ್ತಿದ್ದಂತೆ ಹೊರಬಂದು ಮಗುವಿನ ಸ್ಥಿತಿ ಕಂಡ ಜಯಶ್ರೀ ಲೋ ಬಿಪಿ ಉಂಟಾಗಿ ಅಸ್ವಸ್ಥರಾಗಿದ್ದರು. ಸದ್ಯಕ್ಕೆ ಅವರೂ ಚೇತರಿಸಿಕೊಂಡಿದ್ದು, ದಂಪತಿಗೆ ಸಹನಾ ಏಕೈಕ ಮಗು ಎನ್ನಲಾಗಿದೆ. ಮಗು ಸಹಾನಳ ತಂದೆ ನವಿನ್ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ವ್ಯಕ್ತಿ ಎಂಬ ವಿಚಾರವೂ ಈ ವೇಳೆ ಗೊತ್ತಾಗಿದೆ.
ಪುದುಚೇರಿ, ಏಪ್ರಿಲ್ 09: ಇಂದು ಎರಡು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಅದರಲ್ಲಿ ಪುದುಚೇರಿ ಕೂಡ ಒಂದು. ಇಂದು ಬೆಳಗ್ಗೆಯಿಂದಲೇ ಮತದಾನ ಶುರುವಾಗಿದೆ. ಮತದಾರರು ಮತಗಟ್ಟೆಗೆ ಬರುತ್ತಿದ್ದಂತೆ ಒಂದು ಅಚ್ಚರಿ ಕಾದಿತ್ತು. ರೋಬೋಟ್ ನೀಲಾ ಕೈಯಲ್ಲಿ ಹೂವು, ಸ್ವೀಟುಗಳನ್ನು ಹಿಡಿದು ಮತದಾರರನ್ನು ಸ್ವಾಗತಿಸುತ್ತಿರುವುದು ಕಂಡು ಬಂತು. ಪುದುಚೇರಿಯ ಸರ್ಕಾರಿ ಶಾಲೆಯ ಮತದಾನ ಕೇಂದ್ರದಲ್ಲಿ ನೀಲಾ ಎಂಬ ರೋಬೋಟ್ ಮತದಾರರನ್ನು ಸ್ವಾಗತಿಸುತ್ತಿದೆ, ಮತದಾನದ ಅನುಭವಕ್ಕೆ ತಂತ್ರಜ್ಞಾನದ ಟಚ್ ಸಿಕ್ಕಂತಾಗಿದೆ.
ಬಳ್ಳಾರಿ, ಏಪ್ರಿಲ್ 9: ಬಳ್ಳಾರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬುಧವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಹಗರಿ ಗ್ರಾಮದ ಬಳಿ ರೈಲು ಚಲಿಸುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ತಕ್ಷಣ ರೈಲು ನಿಲ್ಲಿಸಿ ಬೆಂಕಿ ನಂದಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ನಂದಿಸಿದ ಬಳಿಕ ರೈಲು ಪ್ರಯಾಣ ಮುಂದುವರಿಸಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರು, ಏಪ್ರಿಲ್ 9: ಕರ್ನಾಟಕದ (Karnataka) ಗಿರಿಶ್ರೇಣಿಗಳಲ್ಲಿ ಚಾರಣಕ್ಕೆ (Trekking) ಹೋಗುವವರ ಸುರಕ್ಷತೆಯನ್ನು ಖಚಿತಪಡಿಸಲು ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಚಂದ್ರದ್ರೋಣ ಪರ್ವತ ಶ್ರೇಣಿ ಮತ್ತು ಕೊಡಗಿನ ತಡಿಯಂಡಮೋಳ್ನಲ್ಲಿ ಇತ್ತೀಚೆಗೆ ಚಾರಣಿಗರು ನಾಪತ್ತೆಯಾದ ಆತಂಕಕಾರಿ ಪ್ರಕರಣಗಳ ಹಿನ್ನೆಲೆಯಲ್ಲಿ, ಸಚಿವ ಈಶ್ವರ ಖಂಡ್ರೆ ಅವರು ದೇಶಕ್ಕೇ ಮಾದರಿಯಾಗುವಂತಹ ಪ್ರಮಾಣಿತ ಕಾರ್ಯವಿಧಾನ (SOP) ರೂಪಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹೊಸ SOP ನಲ್ಲಿ ಏನೇನು ಇರಲಿದೆ?
ಹೊಸ ಪ್ರಮಾಣಿತ ಕಾರ್ಯವಿಧಾನದಲ್ಲಿ ಏನೇನು ಇರಬೇಕು ಎಂಬ ಬಗ್ಗೆಯೂ ಸಚಿವರು ಸೂಚನೆ ನೀಡಿದ್ದಾರೆ. ಆ ಕುರಿತ ವಿವರ ಇಲ್ಲಿದೆ;
ಟ್ರ್ಯಾಕಿಂಗ್ ಆ್ಯಪ್ ಅಳವಡಿಕೆ
ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಸುವ ‘ಎಂ-ಸ್ಟ್ರೈಪ್ಸ್’ ಮಾದರಿಯಲ್ಲೇ ಚಾರಣಿಗರಿಗಾಗಿ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಚಾರಣದ ಅವಧಿಯಲ್ಲಿ ಈ ಆ್ಯಪ್ ಚಾರಣಿಗರ ಮೊಬೈಲ್‌ನಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸಲಿದ್ದು, ಯಾರಾದರೂ ದಾರಿ ತಪ್ಪಿಸಿಕೊಂಡರೆ ಅವರನ್ನು ಪತ್ತೆಹಚ್ಚುವುದು ಸುಲಭವಾಗಲಿದೆ.
ಚಾರಣಿಗರಿಗೆ ಕಡ್ಡಾಯ ಗುಂಪು ವಿಮೆ
ಚಾರಣಿಗರ ಸುರಕ್ಷತೆಯ ದೃಷ್ಟಿಯಿಂದ ಅವರಿಗೆ ಕಡ್ಡಾಯವಾಗಿ ಗುಂಪು ವಿಮೆ (Group Insurance) ಮಾಡಿಸುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ. ಇದರಿಂದ ಅನಿರೀಕ್ಷಿತ ಅಪಘಾತಗಳ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ನೆರವು ಸಿಗಲಿದೆ.
ನೇಚರ್ ಗೈಡ್‌ಗಳಿಗೆ ಹೆಚ್ಚಿನ ಹೊಣೆ
ಚಾರಣಿಗರ ಜೊತೆ ಹೋಗುವ ಗೈಡ್‌ಗಳಿಗೆ ಇನ್ಮುಂದೆ ಹೆಚ್ಚಿನ ಹೊಣೆಗಾರಿಕೆ ಇರಲಿದೆ. ಪ್ರತಿ ಗೈಡ್ಗೆ ‘ವೈರ್‌ಲೆಸ್ ಸೆಟ್’ ನೀಡುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ನೆಟ್‌ವರ್ಕ್ ಇಲ್ಲದ ಕಾಡಿನ ಭಾಗದಲ್ಲೂ ಸಂಪರ್ಕ ಸಾಧ್ಯವಾಗುತ್ತದೆ.
ಹಳೆಯ ಘಟನೆಗಳಿಂದ ಪಾಠ
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆಯಾಗಿರುವುದು ಹಾಗೂ ಕೊಡಗಿನ ತಡಿಯಂಡಮೋಳ್ನಲ್ಲಿ ಶರಣ್ಯ ಎಂಬ ಯುವತಿ ನಾಪತ್ತೆಯಾಗಿ ಬಳಿಕ ಪತ್ತೆಯಾದ ಪ್ರಕರಣದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಈ ತಾಂತ್ರಿಕ ಮತ್ತು ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯಲ್ಲಿ ಪಂದ್ಯದ ಶಿಸ್ತು ಮತ್ತು ಸಮಯ ಪಾಲನೆಯನ್ನು ಕಾಪಾಡಿಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಮುಖ್ಯವಾಗಿ ಪಂದ್ಯದ ವೇಳೆ ತಂಡದ ‘ಬೆಂಚ್ ಆಟಗಾರರ’ (ಆಡದ ಆಟಗಾರರು) ಅನಗತ್ಯ ಓಡಾಟಕ್ಕೆ ಬಿಸಿಸಿಐ ಕಡಿವಾಣ ಹಾಕಿದೆ.
ಪಂದ್ಯದ ವೇಳೆ ಮೈದಾನದ ಒಳಗೆ ಮತ್ತು ಬೌಂಡರಿ ಗೆರೆಯ ಸುತ್ತ ಉಂಟಾಗುವ ಗೊಂದಲಗಳನ್ನು ತಪ್ಪಿಸಲು ಈ ಕೆಳಗಿನ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ:
ಮೈದಾನ ಪ್ರವೇಶಕ್ಕೆ ನಿರ್ಬಂಧ: ತಂಡದ ಪಟ್ಟಿಯಲ್ಲಿ ಹೆಸರಿಸಲಾದ 16 ಆಟಗಾರರಿಗೆ (ಇಂಪ್ಯಾಕ್ಟ್ ಪ್ಲೇಯರ್ ಸೇರಿ) ಮಾತ್ರ ಮೈದಾನದ ಒಳಗೆ ಪ್ರವೇಶಿಸಲು ಅನುಮತಿ ಇರುತ್ತದೆ. ಈ 16 ಆಟಗಾರರ ಪಟ್ಟಿಯಲ್ಲಿ ಇಲ್ಲದ ಉಳಿದ ಆಟಗಾರರು ಪಂದ್ಯ ನಡೆಯುವಾಗ ಡ್ರಿಂಕ್ಸ್ ತರುವುದು, ಬ್ಯಾಟ್ ನೀಡುವುದು ಅಥವಾ ಸಂದೇಶ ರವಾನಿಸಲು ಮೈದಾನ ಪ್ರವೇಶಿಸುವಂತಿಲ್ಲ.
ಬೌಂಡರಿ ಲೈನ್ ಬಳಿ ಕೇವಲ ಐವರು: ಪಂದ್ಯದ ವೇಳೆ ಬೌಂಡರಿ ಲೈನ್ ಸುತ್ತ ತರಬೇತಿ ಬಿಬ್ಸ್ (Bibs) ಧರಿಸಿ ಓಡಾಡುವ ಆಟಗಾರರ ಸಂಖ್ಯೆಯನ್ನು ಐದಕ್ಕೆ (5) ಸೀಮಿತಗೊಳಿಸಲಾಗಿದೆ. ಈ ಐವರು ಆಟಗಾರರು ನಾಮನಿರ್ದೇಶಿತ 16 ಆಟಗಾರರ ಪೈಕಿ ಇರಬಹುದು ಅಥವಾ ತಂಡದ ಇತರೆ ಆಟಗಾರರಾಗಿರಬಹುದು.
ಡಗೌಟ್ ನಿಯಮ: ಬೌಂಡರಿ ಲೈನ್ ಸುತ್ತ ತರಬೇತಿ ಬಿಬ್ಸ್ ಧರಿಸಿದ ಆಟಗಾರರನ್ನು ಬಿಟ್ಟು ಉಳಿದ ಎಲ್ಲಾ ಆಟಗಾರರು ಕಡ್ಡಾಯವಾಗಿ ತಂಡದ ಡಗೌಟ್‌ನಲ್ಲೇ ಇರಬೇಕು.
ಜಾಹೀರಾತು ಫಲಕಗಳ ನಿಯಮ: ಬೌಂಡರಿ ಲೈನ್ ಮತ್ತು ಎಲ್ಇಡಿ (LED) ಜಾಹೀರಾತು ಫಲಕಗಳ ನಡುವಿನ ಜಾಗದಲ್ಲಿ ಆಟಗಾರರು ಅನಗತ್ಯವಾಗಿ ಓಡಾಡುವಂತಿಲ್ಲ.
ಬೌಂಡರಿ ಲೈನ್ನಲ್ಲಿ ಕೂರುವಂತಿಲ್ಲ: ಯಾವುದೇ ಆಟಗಾರ ಅಥವಾ ಸಿಬ್ಬಂದಿ ಎಲ್ಇಡಿ ಬೋರ್ಡ್‌ಗಳ ಮುಂದೆ ಕುಳಿತುಕೊಳ್ಳುವಂತಿಲ್ಲ, ಇದು ಪ್ರಾಯೋಜಕರ ಪ್ರಚಾರಕ್ಕೆ ಅಡ್ಡಿಯಾಗಬಾರದು ಎಂಬುದು ಬಿಸಿಸಿಐ ಉದ್ದೇಶ.
ಈ ಹಿಂದೆ ಪ್ರಕಟಿಸಿದ ನಿಯಮಗಳು:
ಪಂದ್ಯದ ದಿನದ ಅಭ್ಯಾಸ: ಪಂದ್ಯ ನಡೆಯುವ ದಿನದಂದು ಮುಖ್ಯ ಪಿಚ್‌ನ ಸುತ್ತಲಿನ ಜಾಗದಲ್ಲಿ ಯಾವುದೇ ಅಭ್ಯಾಸ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸಮವಸ್ತ್ರ ಸಂಹಿತೆ: ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಟಗಾರರು ಸ್ಲೀವ್‌ಲೆಸ್ ಜೆರ್ಸಿ ಅಥವಾ ಫ್ಲಾಪಿ ಹ್ಯಾಟ್‌ಗಳನ್ನು ಧರಿಸುವಂತಿಲ್ಲ.
ಖಾಸಗಿ ವಾಹನಗಳಿಗೆ ನೋ ಎಂಟ್ರಿ: ಆಟಗಾರರು ಕ್ರೀಡಾಂಗಣಕ್ಕೆ ಬರಲು ಕಡ್ಡಾಯವಾಗಿ ತಂಡದ ಬಸ್ ಮಾತ್ರ ಬಳಸಬೇಕು, ಖಾಸಗಿ ವಾಹನ ಬಳಕೆಗೆ ಅನುಮತಿ ಇಲ್ಲ.
ಐಪಿಎಲ್ ಪಂದ್ಯಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಭಾವ ಬೀರುತ್ತಿರುವುದರಿಂದ, ಪಂದ್ಯದ ಘನತೆ ಮತ್ತು ವೃತ್ತಿಪರತೆಯನ್ನು ಕಾಪಾಡಿಕೊಳ್ಳಲು ಈ ಬದಲಾವಣೆಗಳು ಅನಿವಾರ್ಯ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ. ಈ ನಿಯಮಗಳನ್ನು ಉಲ್ಲಂಘಿಸುವ ತಂಡಗಳಿಗೆ ಕಠಿಣ ದಂಡ ವಿಧಿಸುವ ಸಾಧ್ಯತೆಯೂ ಇದೆ.