Category Archives: Blog

Your blog category

SRH vs LSG: ಗೆಲುವಿನ ಖಾತೆ ತೆರೆದ ಲಕ್ನೋ; ತವರಿನಲ್ಲಿ ಸೋತ ಸನ್‌ರೈಸರ್ಸ್

SRH vs LSG: ಗೆಲುವಿನ ಖಾತೆ ತೆರೆದ ಲಕ್ನೋ; ತವರಿನಲ್ಲಿ ಸೋತ ಸನ್‌ರೈಸರ್ಸ್

ಹೈದರಾಬಾದ್​ನಲ್ಲಿ ನಡೆದ ಐಪಿಎಲ್ 2026 (IPL 2026) ರ 10ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಕೊನೆಯ ಓವರ್​ನಲ್ಲಿ ಮಣಿಸಿದ ಲಕ್ನೋ ಸೂಪರ್​ಜೈಂಟ್ಸ್ ತಂಡ (SRH vs LSG) ಲೀಗ್​ನಲ್ಲಿ ತನ್ನ ಗೆಲುವಿನ ಖಾತೆ ತೆರೆಯಿತು. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋತಿದ್ದ ಲಕ್ನೋ, ಇದೀಗ ತನ್ನ ಎರಡನೇ ಪಂದ್ಯದಲ್ಲಿ ಬಲಿಷ್ಠ ಹೈದರಾಬಾದ್‌ ತಂಡವನ್ನು 5 ವಿಕೆಟ್​ಗಳಿಂದ ಸೋಲಿಸಿತು. ಇತ್ತ ಈ ಲೀಗ್​ನಲ್ಲಿ ಮೂರನೇ ಪಂದ್ಯವನ್ನಾಡಿದ ಸನ್‌ರೈಸರ್ಸ್ ತಂಡ ಎರಡನೇ ಸೋಲನ್ನು ಎದುರಿಸಬೇಕಾಯಿತು. ಅದರಲ್ಲೂ ತವರಿನಲ್ಲಿ ತನ್ನ ಮೊದಲ ಪಂದ್ಯವನ್ನಾಡಿದ ಸನ್‌ರೈಸರ್ಸ್ ತನ್ನ ಕಳಪೆ ಬ್ಯಾಟಿಂಗ್​ಗೆ ಸೋಲಿನ ಬೆಲೆ ತೆರಬೇಕಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ 157 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ ಕೊನೆಯ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು.

ಸನ್​ರೈಸರ್ಸ್ ಬ್ಯಾಟಿಂಗ್ ವೈಫಲ್ಯ

ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಅಭಿಷೇಕ್ ಶರ್ಮಾ ಖಾತೆ ತೆರೆಯದೆಯೇ ಔಟಾದರು. ಅದಾದ ನಂತರ, ಟ್ರಾವಿಸ್ ಹೆಡ್ ಅವರ ಆಟ ಕೇವಲ 7 ರನ್‌ಗಳಿಗೆ ಕೊನೆಗೊಂಡಿತು. ಇಶಾನ್ ಕಿಶನ್ 1 ರನ್ ಗಳಿಸಿ ಟೆಂಟ್‌ಗೆ ಮರಳಿದರು. ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಕೇವಲ 14 ರನ್ ಗಳಿಸಲು ಸಾಧ್ಯವಾಯಿತು. ತಂಡ ಸಂಕಷ್ಟದಲ್ಲಿದ್ದಾಗ, ಹೆನ್ರಿಕ್ ಕ್ಲಾಸೆನ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಇನ್ನಿಂಗ್ಸ್​ಗೆ ಚೇತರಿಕೆ ನೀಡಿದರು. ಐದನೇ ವಿಕೆಟ್‌ಗೆ 63 ಎಸೆತಗಳಲ್ಲಿ 116 ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿದರು.

ಕ್ಲಾಸೆನ್- ನಿತೀಶ್ ಅರ್ಧಶತಕ

ಹೆನ್ರಿಕ್ ಕ್ಲಾಸೆನ್ 62 ರನ್ ಗಳಿಸಿದರೆ, ನಿತೀಶ್ ಕುಮಾರ್ ರೆಡ್ಡಿ 56 ರನ್ ಗಳಿಸಿದರು. ಅದಾದ ನಂತರ, ಕೆಳ ಹಂತದ ಬ್ಯಾಟ್ಸ್‌ಮನ್‌ಗಳು ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ಮೊದಲ ಎಸೆತದಲ್ಲೇ ಹರ್ಷ್ ದುಬೆ ಔಟಾದರು. ಶಿವಾಂಗ್ ಕುಮಾರ್ 5 ರನ್ ಗಳಿಸಿ ಔಟಾದರು. ಲಕ್ನೋ ತಂಡದ ಪರ ಮೊಹಮ್ಮದ್ ಶಮಿ 2, ಪ್ರಿನ್ಸ್ ಯಾದವ್ 2, ಆವೇಶ್ ಖಾನ್ 2, ದಿಗ್ವೇಶ್ ಸಿಂಗ್ ರಥಿ 1 ಮತ್ತು ಮಣಿಮಾರನ್ ಸಿದ್ಧಾರ್ಥ್ 1 ವಿಕೆಟ್ ಪಡೆದರು.

ಲಕ್ನೋಗೆ ಸಾಧಾರಣ ಆರಂಭ

ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ಪರ ಏಡನ್ ಮಾರ್ಕ್ರಾಮ್ ಮತ್ತು ಮಿಚೆಲ್ ಮಾರ್ಷ್ ಉತ್ತಮ ಆರಂಭ ನೀಡಿದರು . ಮೊದಲ ವಿಕೆಟ್‌ಗೆ 37 ರನ್‌ಗಳ ಜೊತೆಯಾಟ ನೀಡಿದರು. ಮಿಚೆಲ್ ಮಾರ್ಷ್ 14 ರನ್‌ಗಳಿಗೆ ಔಟಾದರು. ನಂತರ ಏಡನ್ ಮಾರ್ಕ್ರಾಮ್ ಮತ್ತು ರಿಷಭ್ ಪಂತ್ 40 ರನ್‌ಗಳ ಜೊತೆಯಾಟ ನಡೆಸಿದರು. ಏಡನ್ ಮಾರ್ಕ್ರಾಮ್ ಔಟಾದ ನಂತರ, ಆಯುಷ್ ಬದೋನಿ ಬಂದರು. ಅವರ ಆಟ ಕೇವಲ 12 ರನ್‌ಗಳಿಗೆ ಕೊನೆಗೊಂಡಿತು. ನಿಕೋಲಸ್ ಪೂರನ್ ಕೇವಲ 1 ರನ್‌ಗೆ ಔಟಾದರು. 105 ರನ್‌ಗಳಿಗೆ ನಾಲ್ಕನೇ ವಿಕೆಟ್ ಪತನದೊಂದಿಗೆ ಒತ್ತಡ ಹೆಚ್ಚಾಯಿತು.

SRH vs LSG: ನಂಬಲಸಾಧ್ಯ..! ಪವರ್‌ಪ್ಲೇನಲ್ಲಿ ಅತಿ ಕಡಿಮೆ ಮೊತ್ತ ದಾಖಲಿಸಿದ ಸನ್‌ರೈಸರ್ಸ್

ಪಂತ್ ಗೆಲುವಿನ ಅರ್ಧಶತಕ

ಆದರೆ ನಾಯಕನ ಆಟವನ್ನಾಡಿದ ರಿಷಭ್ ಪಂತ್ ತಂಡವು ಸಂಕಷ್ಟದಲ್ಲಿದ್ದಾಗ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ಅಬ್ದುಲ್ ಸಮದ್ 12 ರನ್‌ಗಳಿಗೆ ಔಟಾದಾಗ ಒತ್ತಡ ಮತ್ತೊಮ್ಮೆ ಹೆಚ್ಚಾಯಿತು. ಆದರೆ ರಿಷಭ್ ಪಂತ್ ಒಂದು ಬದಿಯಲ್ಲಿ ಆಟವನ್ನು ಮುಂದುವರಿಸಿ ಅರ್ಧಶತಕವನ್ನು ಸಹ ಪೂರೈಸಿದರು. ಕೊನೆಯ ಓವರ್‌ನಲ್ಲಿ ಗೆಲ್ಲಲು 9 ರನ್‌ಗಳು ಬೇಕಾಗಿದ್ದವು. ಪಂತ್ ಮೊದಲ ಎರಡು ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಅಂತಿಮವಾಗಿ ಪಂತ್ 50 ಎಸೆತಗಳಲ್ಲಿ 68 ರನ್​ ಬಾರಿಸಿ ಅಜೇಯರಾಗಿ ಉಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: 30 ದಿನಗಳ ಈ ಪ್ಲ್ಯಾನ್ ಅನುಸರಿಸಿದ್ರೆ ಬೆಂಗಳೂರಿನಲ್ಲಿ ಬದುಕೋದು ಸುಲಭ ಎಂದ ಮಹಿಳೆ

ಬೆಂಗಳೂರು, ಏಪ್ರಿಲ್ 05 : ಬೆಂಗಳೂರು (Bengaluru) ಅಂದ್ರೆ ಈಗಿನ ಯುವಕ ಯುವತಿಯರಿಗೆ ಅದೇನೋ ಸೆಳೆತ. ಹೀಗಾಗಿ ಓದು ಮುಗಿಯುತ್ತಿದ್ದಂತೆ ಅದೆಷ್ಟೋ ಯುವಕ ಯುವತಿಯರು ಉದ್ಯೋಗ ಅರಸುತ್ತಾ ನಗರಕ್ಕೆ ಬರ್ತಾರೆ. ಹೀಗೆ ಬಂದವರಿಗೆ ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳೋದು ಕಷ್ಟವಾಗಬಹುದು. ಆದರೆ, ಬೆಂಗಳೂರಿನಲ್ಲಿ ವಾಸಿಸುವ ಬಂಗಾಳಿ ಮಹಿಳೆಯೊಬ್ಬರು ನಗರಕ್ಕೆ ಬರುವ ಹೊಸಬರಿಗೆ 30 ದಿನಗಳ ಪ್ಲ್ಯಾನ್ ಹಂಚಿಕೊಂಡಿದ್ದಾರೆ. ಕೇವಲ ಮೂವತ್ತು ದಿನಗಳಲ್ಲಿ ಈ ಹೊಸ ನಗರಕ್ಕೆ ಹೊಂದಿಕೊಂಡು ಮೊದಲ ಕೆಲವು ವಾರಗಳಲ್ಲಿ ಆತಂಕವಿಲ್ಲದೆ ಜೀವನ ನಡೆಸಬಹುದು ಎಂದು ವಿವರಿಸಿದ್ದಾರೆ. ಈ ಮಹಿಳೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಸಲಹೆಯನ್ನು ಮೆಚ್ಚಿಕೊಂಡಿದ್ದಾರೆ.

ಪ್ರಿಯಾಂಕಾ ಮಂಡಲ್ (priyankablrdairy) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಈ ಮಹಿಳೆ, ಬೆಂಗಳೂರಿನಲ್ಲಿ ಕಷ್ಟಪಡುವುದು ಸರ್ವೇ ಸಾಮಾನ್ಯ. ಆದರೆ ನೀವು ಈ 30 ದಿನಗಳ ಯೋಜನೆಯನ್ನು ಅನುಸರಿಸಿದರೆ, ಇಲ್ಲಿನ ಜೀವನ ಇನ್ನು ಸುಲಭವಾಗಿಸಬಹುದು. ಮೊದಲ ವಾರದಲ್ಲಿ, ಮನೆಯನ್ನು ತಕ್ಷಣ ಹುಡುಕುವ ಬದಲು ತಾತ್ಕಾಲಿಕ ವಾಸ್ತವ್ಯದತ್ತ ಗಮನ ಹರಿಸಿ. ಎರಡನೇ ವಾರದಲ್ಲಿ, ನಿಮ್ಮ ದೈನಂದಿನ ಪ್ರಯಾಣಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಇದುವೇ ನಿಮ್ಮ ದೈನಂದಿನ ಜೀವನದಲ್ಲಿ ನಿಜವಾದ ಬದಲಾವಣೆ ತರಬಹುದು ಎಂದು ಹೇಳಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಮೂರನೇ ವಾರದ ವೇಳೆಗೆ, ನಿಮ್ಮ ಆಹಾರ, ದಿನಸಿ ಮತ್ತು ದೈನಂದಿನ ಅಭ್ಯಾಸಗಳನ್ನು ವಿಂಗಡಿಸುವ ಮೂಲಕ ದಿನಚರಿಯನ್ನು ನಿರ್ಮಿಸಲು ಪ್ರಾರಂಭಿಸಿ. ಇವು ಮಾಡಿದಿದ್ದಲ್ಲಿ ತಿಂಗಳು ಅಸ್ತವ್ಯಸ್ತವಾಗಿರಬಹುದು. ಕೊನೆಯ ವಾರದಲ್ಲಿ, ನಗರವನ್ನು ಅನ್ವೇಷಿಸಲು ಮತ್ತು ಹೊಸ ಜನರನ್ನು ಭೇಟಿ ಮಾಡಲು ಸಮಯ ತೆಗೆದುಕೊಳ್ಳಿ. ಈ ಕೆಲಸ ಮಾಡದೇ ಹೋದರೆ ಈ ನಗರವು ಎಂದಿಗೂ ನಿಮ್ಮದೇ ಎಂದು ಅನಿಸುವುದಿಲ್ಲ. ಬೆಂಗಳೂರು ಸವಾಲಿನದ್ದಾಗಿರಬಹುದು, ಆದರೆ ಸರಿಯಾದ ಯೋಜನೆಯೊಂದಿಗೆ, ನ್ಯಾವಿಗೇಟ್ ಮಾಡಲು ಹಾಗೂ ಆನಂದಿಸಲು ತುಂಬಾ ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 2BHK ಮನೆಗೆ 70 ಸಾವಿರ ರೂ. ಬಾಡಿಗೆ!, ಭಯಾನಕ ಅನುಭವ ಬಿಚ್ಚಿಟ್ಟ ವ್ಯಕ್ತಿ

ಈ ವಿಡಿಯೋ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರಿನಲ್ಲಿ ಪ್ರಯಾಣವೇ ಸರ್ವಸ್ವ, ನೀವು ಈ ತಪ್ಪು ಮಾಡಿದರೆ ನಿಮ್ಮ ದೈನಂದಿನ ಜೀವನವು ಒತ್ತಡದಿಂದ ಕೂಡಿರುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಾನು ನಿಮ್ಮ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದಿದ್ದಾರೆ. ಮತ್ತೊಬ್ಬರು, ಶಾಶ್ವತ ಮನೆಯನ್ನು ಹುಡುಕಲು ಆತುರಪಡದಿರುವುದು ವಾಸ್ತವವಾಗಿ ತುಂಬಾ ಪ್ರಾಯೋಗಿಕ ಸಲಹೆಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Source link

RCB vs CSK IPL 2026 Live Score: ಟಾಸ್ ಗೆದ್ದ ಸಿಎಸ್​ಕೆ ಬೌಲಿಂಗ್ ಆಯ್ಕೆ – Kannada News | Royal Challengers Bengaluru vs Chennai Super Kings IPL 2026 Live Cricket Score RCB vs CSK Match on 5th april latest news in Kannada

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಐಪಿಎಲ್ 2026 ರ ಇದುವರೆಗಿನ ಅತಿದೊಡ್ಡ ಪಂದ್ಯಕ್ಕೆ ಸಾಕ್ಷಿಯಾಗಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಸೀಸನ್​ನ 11 ನೇ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ರಜತ್ ಪಟಿದಾರ್ ತಂಡವು ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿದೆ. ಏತನ್ಮಧ್ಯೆ, ತನ್ನ ಎರಡೂ ಪಂದ್ಯಗಳಲ್ಲಿ ಸೋತಿರುವ ರುತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಗೆಲುವನ್ನು ಎದುರು ನೋಡುತ್ತಿದೆ.

Source link

ಕೊಡಗಿನಲ್ಲಿ ಟ್ರೆಕ್ಕಿಂಗ್​ಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದ ಯುವತಿ 4 ದಿನದ ಬಳಿಕ ಪತ್ತೆ

ಕೊಡಗು, ಏಪ್ರಿಲ್​ 05: ಮಡಿಕೇರಿಯ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಕೊ‌ನೆಗೂ ಪತ್ತೆ ಆಗಿದ್ದಾರೆ. ಆ ಮೂಲಕ ನಾಲ್ಕು ದಿನಗಳ‌ ಕಾರ್ಯಾಚರಣೆ ಯಶಸ್ವಿ ಆಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ರಸ್ತೆ ಅರಿವಾಗದೆ ಪಾಳು ಬಿದ್ದ ಬಂಗಲೆಯೊಂದರಲ್ಲೇ ಶರಣ್ಯ ಉಳಿದುಕೊಂಡಿದ್ದರು. ಸ್ಥಳೀಯ ಜನಾಂಗದವರ ಸಹಾಯ ಬೆನ್ನಲ್ಲೇ ಇದೀಗ ಯುವತಿ ಪತ್ತೆ ಆಗಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ.

Source link

‘ರಾಮಾಯಣ’ ಸಿನಿಮಾದ ಹೈಲೈಟ್ ವಿಎಫ್​​ಎಕ್ಸ್ ಅಲ್ಲ, ನಿರ್ದೇಶಕ ಹೇಳಿದ್ದೇನು?

ರಣ್​​ಬೀರ್ ಕಪೂರ್ (Ranbir Kapoor), ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಭಾರಿ ಅದ್ಧೂರಿ ವಿಎಫ್​​ಎಕ್ಸ್, ಅದ್ಧೂರಿ ಸೆಟ್​​ಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಪೌರಾಣಿಕ ಕತೆಗೆ ಭವ್ಯತೆಯನ್ನು ಸೇರಿಸಿ ಪ್ರೇಕ್ಷಕರಿಗೆ ನೀಡಲಾಗುತ್ತಿದೆ ‘ರಾಮಾಯಣ’ ಸಿನಿಮಾನಲ್ಲಿ. ಹಲವು ಆಸ್ಕರ್​​ಗಳನ್ನು ಗೆದ್ದಿರುವ ಡಿಎನ್​​ಇಜಿ ಸಂಸ್ಥೆ ಈ ಸಿನಿಮಾಕ್ಕೆ ವಿಎಫ್​​ಎಕ್ಸ್ ಮಾಡಿದೆ. ಸಿನಿಮಾಕ್ಕೆ ಇಬ್ಬರು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರು ಸಂಗೀತ ನೀಡಲಿದ್ದಾರೆ. ರಣ್​​ಬೀರ್, ಯಶ್ ಇನ್ನೂ ಹಲವು ಸ್ಟಾರ್​​ಗಳು ಸಿನಿಮಾನಲ್ಲಿ ನಟಿಸಲಿದ್ದಾರೆ. ಇಷ್ಟೆಲ್ಲ ಇದ್ದರೂ, ಸಿನಿಮಾದ ಮುಖ್ಯ ಹೈಲೆಟ್ ಪಾಯಿಂಟ್ ಬೇರೆ ಏನೋ ಇದೆಯಂತೆ. ಖುದ್ದು ಸಿನಿಮಾದ ನಿರ್ದೇಶಕ ನಿತೇಶ್ ತಿವಾರಿ ಈ ಬಗ್ಗೆ ಮಾತನಾಡಿದ್ದಾರೆ.

ನಿರ್ದೇಶಕ ನಿತೇಶ್ ತಿವಾರಿ ಅವರು ಹೇಳಿರುವಂತೆ ಅವರ ಪ್ರಕಾರ ಈ ವರ್ಷ ಬಿಡುಗಡೆ ಆಗಲಿರುವ ‘ರಾಮಾಯಣ’ ಸಿನಿಮಾದ ಮೊದಲ ಭಾಗದಲ್ಲಿ ಹೈಲೆಟ್ ದೃಶ್ಯವೆಂದರೆ ಅದು ರಾಮ ಅಯೋಧ್ಯೆ ಬಿಟ್ಟು ಹೋಗುವ ದೃಶ್ಯವಂತೆ. ನಿತೇಶ್ ತಿವಾರಿ ಅವರು ಹೇಳಿರುವಂತೆ ‘ಸಿನಿಮಾ ಬಿಡುಗಡೆ ಆದಾಗ ಜನ ಆ ದೃಶ್ಯಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ನೋಡಲು ಕಾತರನಾಗಿ ಕಾಯುತ್ತಿದ್ದೇನೆ. ಆ ಇಡೀ ಸನ್ನಿವೇಶ ನಮ್ಮ ಸಿನಿಮಾನಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ನಾನಂತೂ ಪ್ರತಿ ಬಾರಿ ಆ ದೃಶ್ಯವನ್ನು ನೋಡಿದಾಗಲೂ ಕಣ್ಣೀರಾಗುತ್ತೇನೆ. ಆ ದೃಶ್ಯ ನಮ್ಮ ಸಿನಿಮಾದ ಬಹಳ ಮುಖ್ಯವಾದ ದೃಶ್ಯ’ ಎಂದಿದ್ದಾರೆ ನಿತೇಶ್ ತಿವಾರಿ.

ಇದನ್ನೂ ಓದಿ:ರಾವಣನ ಪಾತ್ರ ಮಾಡಿದ ಯಶ್​ನ ಹಾಡಿ ಹೊಗಳಿದ ರಣಬೀರ್ ಕಪೂರ್

ಇದೀಗ ಬಿಡುಗಡೆ ಆಗಿರುವ ‘ರಾಮಾಯಣ’ ಟೀಸರ್​​ನಲ್ಲಿ ಆ ಸನ್ನಿವೇಶದ ಎರಡು ಸಣ್ಣ ದೃಶ್ಯಗಳನ್ನು ಸೇರಿಸಲಾಗಿದೆ. ಆದರೆ ಸಿನಿಮಾದ ವೈಭವದ ದೃಶ್ಯಗಳು, ಕೆಲ ಆಕ್ಷನ್ ದೃಶ್ಯಗಳು, ಪುಷ್ಪಕ ವಿಮಾನ ಮತ್ತು ರಣ್​​ಬೀರ್ ಕಪೂರ್ ಅವರ ರಾಮನ ಪಾತ್ರದ ಮೇಲೆ ಟೀಸರ್ ಹೆಚ್ಚು ಪೋಕಸ್ ಆಗಿತ್ತು. ಸಿನಿಮಾದ ಟೀಸರ್ ಬಿಡುಗಡೆ ಆದ ಬಳಿಕ ಸಹಜವಾಗಿಯೇ ಕೆಲವರು ಮೆಚ್ಚಿಕೊಂಡರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

‘ರಾಮಾಯಣ’ ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಯಶ್ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಸಾಯಿ ಪಲ್ಲವಿ ಸೀತೆ ಹಾಗೂ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರು ಸಂಗೀತ ನೀಡಿದ್ದಾರೆ. ರಾಮಾಯಣ ಸಿನಿಮಾದ ಎರಡೂ ಭಾಗಗಳಿಗೆ 4000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆಯಂತೆ. ಸಿನಿಮಾದ ಮೊದಲ ಭಾಗ ಇದೇ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಐಐಎಂನ ವಾಲ್ ಆಫ್ ಫೇಮ್​ನಲ್ಲಿ ಸ್ಥಾನ ಗಿಟ್ಟಿಸಿದ ಧ್ವಿತ್​ನ ಯಶೋಗಾಥೆ

ಬೆಂಗಳೂರು, ಏಪ್ರಿಲ್ 5: ಭಾರತದ ಅತ್ಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಐಐಎಂ ಬೆಂಗಳೂರು (IIM Bangalore) ಈ ಬಾರಿ ದೊಡ್ಡ ಪ್ರತಿಭೆಯೊಂದನ್ನು ಲೋಕಕ್ಕೆ ಕೊಡುಗೆಯಾಗಿ ನೀಡಿದೆ. ಅದ್ಭುತ ಶೈಕ್ಷಣಿಕ ಸಾಧನೆಗಾಗಿ ಧ್ವಿತ್ ಮೆಹತಾ (Dhvit Mehta) ಐಐಎಂ ಬೆಂಗಳೂರಿನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. ಅವರ ಹೆಸರನ್ನು ವಾಲ್ ಆಫ್ ಫೇಮ್​ಗೆ ಸೇರಿಸಲಾಗಿದೆ. ಐಐಟಿ ಮತ್ತಿತರ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ಬಂದಿದ್ದ ಘಟಾನುಘಟಿ ಅಭ್ಯರ್ಥಿಗಳು ಆ ಬ್ಯಾಚ್​ನಲ್ಲಿ ಇದ್ದರು. ಇವರ ತೀವ್ರ ಪೈಪೋಟಿ ನಡುವೆ 27 ವರ್ಷದ ಧ್ವಿತ್ ಮೆಹತಾ ಅತ್ಯುತ್ತಮ ಎನಿಸಿದ್ದ ಅಸಾಧಾರಣ ಸಂಗತಿ.

ಗುಜರಾತ್ ಮೂಲದ ಧ್ವಿತ್ ಮೆಹತಾ ಗುಜರಾತ್​ನ ಆನಂದ್ ನಗರದ ಆನಂದಾಲಯ ಸ್ಕೂಲ್​ನಲ್ಲಿ ಓದಿ, ಐಐಟಿ ಅಲಹಾಬಾದ್​ನಲ್ಲಿ ಬಿಟೆಕ್ ಮತ್ತು ಎಂಟೆಕ್ ಎಂಜಿನಿಯರ್ ಪೂರೈಸಿದ್ದಾರೆ. ಚಿಕ್ಕಂದಿನಲ್ಲಿ ಕೋಡಿಂಗ್ ಕಡೆಗೆ ಆಸಕ್ತಿ ಹೊಂದಿದ್ದರಿಂದ ತಂತ್ರಜ್ಞಾನ ಕ್ಷೇತ್ರವು ಅವರನ್ನು ಸಳೆಯಿತು.

ಇದನ್ನೂ ಓದಿ: ಪಾಕಿಸ್ತಾನದ ಪಾಪಿಗಳು; ದಾವೂದ್ ಇಬ್ರಾಹಿಂ ವರ್ಸಸ್ ಲೆಯಾರಿ ಕಿಂಗ್ ರೆಹಮಾನ್ ಡಕಾಯಿಟ್

2021ರಿಂದ ಅವರು ಅಮೆರಿಕ ಮತ್ತು ಯೂರೋಪ್​ನಲ್ಲಿ ಮೈಕ್ರೋಸಾಫ್ಟ್ ಇತ್ಯಾದಿ ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದರು. ಸ್ಥಿರವಾದ ವೃತ್ತಿ ಸಿಕ್ಕಿತಾದರೂ ಧ್ವಿತ್ ಅವರಿಗೆ ಎಲ್ಲೋ ಒಂದು ಕಡೆ ಫಿನಾನ್ಸ್ ವಿಷಯ ಬಹಳ ಆಸಕ್ತಿ ಕೆರಳಿಸತೊಡಗಿತು.

ಆಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳದ ಧ್ವಿತ್, ಬಹಳ ಕಠಿಣವಾದ ಸಿಎಫ್​ಎ ಪ್ರೋಗ್ರಾಮ್ ಸೇರಿದರು. ಕೋಚಿಂಗ್ ಇಲ್ಲದೇ ಲೆವೆಲ್ 1 ಮತ್ತು 2 ಅನ್ನು ಪಾಸ್ ಮಾಡಿದರು. ಮೈಕ್ರೋಸಾಫ್ಟ್​ನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಈ ಸಾಧನೆ ಮಾಡಿದ್ದರು.

ಧ್ವಿತ್ ಮೆಹತಾ ಅವರು ಐಐಎಂ ಬೆಂಗಳೂರಲ್ಲಿ ಮಾತನಾಡಿರುವುದು

2024ರಲ್ಲಿ ಮೈಕ್ರೋಸಾಫ್ಟ್ ಕಂಪನಿ ತೊರೆದು ನಾರ್ವೆಯಿಂದ ಭಾರತಕ್ಕೆ ಬಂದು ಐಐಎಂ ಬೆಂಗಳೂರಿನಲ್ಲಿ ಎಂಬಿಎಗೆ ಸೇರಿದರು. ಎಂಬಿಎಗೆ ಸೇರುವ ಅವರ ಪ್ರಯತ್ನ 2021ರಿಂದಲೂ ನಡೆದಿತ್ತು. ಬಹಳ ಸುಲಭವಾಗಿ ಟಾಪ್ ಸ್ಕೋರ್ ಮಾಡುತ್ತಿದ್ದ ಅವರಿಗೆ ಐಐಎಂ ಬೆಂಗಳೂರು ಸೇರುವುದು ಬೇಕಾಗಿತ್ತು. ಬಹಳ ಪೈಪೋಟಿ ಇದ್ದ ಬ್ಯಾಚ್​ನಲ್ಲಿ ಅವರು ಸರ್ವೋಚ್ಚ ಎನಿಸಿದ್ದಾರೆ. 2026ರ ಮಾರ್ಚ್ 27ರಂದು ನಡೆದ ಘಟಿಕೋತ್ಸವದಲ್ಲಿ ಧ್ವಿತ್​ಗೆ ಗೋಲ್ಡ್ ಮೆಡಲ್ ಕೊಡಲಾಯಿತು.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಸತ್ತರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ; ನಿಜವಾ, ವದಂತಿಯಾ?

ಧ್ವಿತ್ ಮೆಹತಾ ಅವರು ಈಗ ಮುಂಬೈನ ಕಂಪನಿಯೊಂದರಲ್ಲಿ ಇನ್ವೆಸ್ಟ್​ಮೆಂಟ್ ಬ್ಯಾಂಕಿಂಗ್​ನಲ್ಲಿ ವೃತ್ತಿ ಆರಂಭಿಸುವ ಇರಾದೆಯಲ್ಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿಕೆಟ್​ ಉರುಳುತ್ತಿದ್ದಂತೆ ದೇವರ ಫೋಟೋವನ್ನು ಹಣೆಗೊತ್ತಿ ಕೈ ಮುಗಿದ ಗೋಯೆಂಕಾ

ಐಪಿಎಲ್‌ನಲ್ಲಿ ಲಕ್ನೋ ತಂಡ ತನ್ನ ಪ್ರದರ್ಶನದಿಂದ ಸದ್ದು ಮಾಡಿದ್ದಕ್ಕಿಂತ ಹೆಚ್ಚಾಗಿ ಆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಮ್ಮ ನಡವಳಿಕೆಗಳಿಂದ ಸುದ್ದಿಯಾಗಿದ್ದಾರೆ. ಈ ಹಿಂದಿನ ಸೀಸನ್​ಗಳಲ್ಲಿ ತಂಡದ ನಾಯಕರನ್ನು ಕ್ರೀಡಾಂಗಣದಲ್ಲೇ ಬಹಿರಂಗವಾಗಿ ನಿಂಧಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಗೋಯೆಂಕಾ, ಈ ಆವೃತ್ತಿಯಲ್ಲೂ ಅದೇ ಪ್ರವೃತ್ತಿಯನ್ನು ಮುಂದುವರೆಸಿದ್ದರು. ಲಕ್ನೋ ತಂಡ ಡೆಲ್ಲಿ ವಿರುದ್ಧ ಸೋತಾಗ ತಂಡದ ನಾಯಕ ರಿಷಭ್ ಪಂತ್​ಗೆ ಗೋಯೆಂಕಾ ಮೈದಾನದಲ್ಲೇ ಕ್ಲಾಸ್ ತೆಗೆದುಕೊಂಡಿದ್ದರು. ಇದನ್ನು ಗಮನಿಸಿದ್ದ ಬಿಸಿಸಿಐ, ಬಹಿರಂಗವಾಗಿ ಆಟಗಾರರನ್ನು ಅಥವಾ ನಾಯಕರನ್ನು ನಿಂಧಿಸಿದಂತೆ ಎಲ್ಲಾ ತಂಡಗಳ ಮಾಲೀಕರಿಗೆ ಖಡಕ್ ಸಂದೇಶ ರವಾನಿಸಿತ್ತು. ಇದೀಗ ಇದೆಲ್ಲದರ ನಡುವೆ ಇದೀಗ ಸಂಜೀವ್ ಗೋಯೆಂಕಾ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ವಾಸ್ತವವಾಗಿ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್​ಜೈಂಟ್ಸ್ ತಂಡ, ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಅವರ ತವರು ನೆಲದಲ್ಲಿ ಎದುರಿಸಿತ್ತು. ಸನ್‌ರೈಸರ್ಸ್ ತಂಡಕ್ಕೆ ಇದು ತವರು ಪಂದ್ಯವಾಗಿದ್ದರಿಂದ ತಂಡದಿಂದ ಸ್ಫೋಟಕ ಬ್ಯಾಟಿಂಗ್​ನ ನಿರೀಕ್ಷೆ ಇತ್ತು. ಆದರೆ ಇದಕ್ಕೆ ಲಕ್ನೋ ವೇಗಿಗಳು ಅವಕಾಶ ಮಾಡಿಕೊಡಲಿಲ್ಲ. ತಂಡದ ಪ್ರಮುಖ 4 ವಿಕೆಟ್​ಗಳು ಬಹುಬೇಗನೇ ಉದುರಿದವು. ಇದರಿಂದ ಸನ್‌ರೈಸರ್ಸ್ ತಂಡದ ರನ್ ವೇಗ ಪಾತಳಕ್ಕೆ ಕುಸಿಯಿತು. ಇದೆಲ್ಲದರ ನಡುವೆ ಸನ್‌ರೈಸರ್ಸ್ ತಂಡದ ನಾಯಕ ಇಶಾನ್ ಕಿಶನ್ ಅವರ ವಿಕೆಟ್ ಬಿದ್ದಾಗ, ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನೀಡಿದ ಪ್ರತಿಕ್ರಿಯೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸನ್‌ರೈಸರ್ಸ್ ತಂಡ ಪವರ್‌ಪ್ಲೇನಲ್ಲಿಯೇ ಪ್ರಮುಖ 3 ವಿಕೆಟ್​ಗಳನ್ನು ಕಳೆದುಕೊಂಡಿತು. ಅದರಲ್ಲೂ ಆರಂಭಿಕರಾದ ಅಭಿಷೇಕ್ ಶರ್ಮಾ ಖಾತೆ ತೆರೆಯದೆ ಔಟಾದರೆ, ಟ್ರಾವಿಸ್ ಹೆಡ್ ಕೂಡ 7 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಈ ಎರಡು ವಿಕೆಟ್​ಗಳು ಬಿದ್ದಾಗಲೇ ಸಾಕಷ್ಟು ಖುಷಿಯಲ್ಲಿದ್ದ ಗೋಯೆಂಕಾ ಅವರಿಗೆ ಅವರ ಖುಷಿಯನ್ನು ಇಮ್ಮಡಿಗೊಳಿಸುವ ಮತ್ತೊಂದು ಘಟನೆ ನಡೆಯಿತು. ಆರಂಭಿಕ ಆಘಾತದಿಂದ ತಂಡವನ್ನು ಮೇಲೇತ್ತುವ ಕೆಲಸ ಮಾಡುವ ಜವಾಬ್ದಾರಿ ಹೊತ್ತಿದ್ದ ತಂಡದ ನಾಯಕ ಇಶಾನ್ ಕಿಶನ್ ಕೂಡ ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಕೇವಲ 1 ರನ್​ ಗಳಿಸಿ ಔಟಾದರು. ಕಿಶನ್ ಔಟಾದ ಕೂಡಲೇ ಸಂಜೀವ ಗೋಯೆಂಕಾ ತಮ್ಮ ಆಸನದಿಂದ ಮೇಲೆದ್ದು, ತಮ್ಮ ಕಿಸೆಯಲ್ಲಿದ್ದ ದೇವರ ಫೋಟೋವನ್ನು ಹೊರತೆಗೆದು ಅದನ್ನು ತಮ್ಮ ಹಣೆಗೆ ಒತ್ತಿಕೊಂಡರು. ನಂತರ ತಮ್ಮ ಎರಡು ಕೈಗಳನ್ನು ಜೋಡಿಸಿ ದೇವರಿಗೆ ನಮಸ್ಕರಿಸಿದರು. ಈ ವೇಳೆ ಅವರ ಮೊಗದಲ್ಲಿ ಸಂತಸ ತುಂಬಿ ತುಳುಕುತ್ತಿತ್ತು. ಇದೀಗ ಇದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೃಥ್ವಿ ಅಂಬರ್-ಕಾರ್ತಿಕ್ ಮಹೇಶ್​ಗೆ ‘ಗ್ಯಾಸ್ ಟ್ರಬಲ್’: ಇಬ್ಬರಲ್ಲಿ ಯಾರು ಹೀರೊ?

ನಟ ಪೃಥ್ವಿ ಅಂಬರ್ (Prithvi Ambar) ಮತ್ತು ಬಿಗ್​​ಬಾಸ್ 10 ವಿಜೇತ ಕಾರ್ತಿಕ್ ಮಹೇಶ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸಲಿದ್ದು, ಸಿನಿಮಾ ಘೋಷಣೆಗೆಂದು ವಿಶೇಷ ಪ್ರೋಮೊ ಮಾಡಲಾಗಿದೆ. ಹಾಸ್ಯಮಯವಾದ ಈ ಪ್ರೋಮೊನಲ್ಲಿ ಪೃಥ್ವಿ ಅಂಬರ್​​ಗೆ ‘ಗ್ಯಾಸ್ ಟ್ರಬಲ್’ ಕಾರ್ತಿಕ್​​ಗೂ ‘ಗ್ಯಾಸ್ ಟ್ರಬಲ್’ ನಿರ್ಮಾಪಕರಿಗೆ ಡೊನಾಲ್ಡ್ ಟ್ರಂಪ್, ಇನ್ನೂ ಯಾರ್ಯಾರಿಂದಲೋ ಕರೆ ಬರುತ್ತಿವೆ. ಒಟ್ಟಾರೆ ಚಿತ್ರ ವಿಚಿತ್ರವಾದ ಈ ವಿಡಿಯೋದ ಉದ್ದೇಶವೇನು? ಇಬ್ಬರೂ ನಟಿಸುತ್ತಿರುವ ಸಿನಿಮಾ ಯಾವುದು? ಇಬ್ಬರಲ್ಲಿ ಯಾರು ಹೀರೋ? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Traditional Guidelines: ವಿದ್ಯಾರ್ಥಿಗಳು ತಾಂಬೂಲ ಯಾಕೆ ತಿನ್ನಬಾರದು? ಕಾರಣ ಇಲ್ಲಿ ತಿಳಿಯಿರಿ

ಯಾವುದೇ ಶುಭ ಕಾರ್ಯ ಅಥವಾ ಸಂತೋಷದ ಕಾರ್ಯಕ್ರಮಗಳಲ್ಲಿ ಉತ್ತಮ ಭೋಜನದ ನಂತರ ತಾಂಬೂಲವನ್ನು ಸೇವಿಸುವುದು ಭಾರತೀಯ ಸಂಪ್ರದಾಯದಲ್ಲಿ ಮಹತ್ವ ಪಡೆದಿದೆ. ವೈಜ್ಞಾನಿಕವಾಗಿ ತಾಂಬೂಲ ಸೇವನೆಯು ಆರೋಗ್ಯ ವೃದ್ಧಿಗೆ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಪಚನ ಕ್ರಿಯೆಯನ್ನು ಪೂರ್ಣಗೊಳಿಸಲು ಸಹಕಾರಿಯಾಗಿದೆ. ಅಧ್ಯಾತ್ಮಿಕವಾಗಿ ಮತ್ತು ಸಾಮಾಜಿಕವಾಗಿ ನೋಡಿದಾಗ, ತಾಂಬೂಲವು ಮಹಾಲಕ್ಷ್ಮಿಯ ಸಂಕೇತ, ಐಶ್ವರ್ಯ, ಸಮೃದ್ಧಿ ಮತ್ತು ಸಂತೋಷದ ಪ್ರತೀಕವಾಗಿದೆ. ವಿವಾಹ, ಗೃಹ ಪ್ರವೇಶ, ಉಪನಯನ, ಗೃಹಾರಂಭದಂತಹ ಯಾವುದೇ ಶುಭ ಸಂದರ್ಭಗಳಲ್ಲಿ ಸಂತೋಷದಿಂದ ಊಟ ಮಾಡಿದ ನಂತರ ತಾಂಬೂಲವನ್ನು ಸ್ವೀಕರಿಸಲಾಗುತ್ತದೆ.

ಆದರೆ, ಎಲ್ಲರಿಗೂ ಶುಭವೆನಿಸುವ ಈ ತಾಂಬೂಲವನ್ನು ವಿದ್ಯಾರ್ಥಿಗಳು ಸೇವಿಸಬಾರದು ಎಂದು ಶಾಸ್ತ್ರಗಳು ತಿಳಿಸುತ್ತವೆ. ಈ ಬಗ್ಗೆಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ವಿದ್ಯೆಯನ್ನು ಅರ್ಜಿಸುತ್ತಿರುವ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮತ್ತು ಬ್ರಹ್ಮಚಾರಿಗಳು ತಾಂಬೂಲವನ್ನು ಸೇವಿಸುವುದು ಅಥವಾ ಭಕ್ಷಿಸುವುದು ಶುಭವಲ್ಲ. ಕೇವಲ ಗೃಹಸ್ಥರು ಮತ್ತು ವಯಸ್ಸಾದವರಿಗೆ ಮಾತ್ರ ಇದು ಶುಭಕರ ಎಂದು ಹೇಳಲಾಗುತ್ತದೆ. ತಾಂಬೂಲದಲ್ಲಿ ವೀಳ್ಯದೆಲೆ, ಅಡಿಕೆ, ಸುಣ್ಣ, ಏಲಕ್ಕಿ, ಕಸ್ತೂರಿ, ಜಾಜಿ, ಜಾಪತ್ರೆ ಮುಂತಾದ ಪದಾರ್ಥಗಳು ಸೇರಿರುತ್ತವೆ.

ವಿದ್ಯಾರ್ಥಿಗಳು ತಾಂಬೂಲ ಸೇವನೆ ಮಾಡಿದರೆ ಮಾನಸಿಕವಾಗಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ. ಇದು ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರಿ, ಅವರ ಅಧ್ಯಯನಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ತಾಂಬೂಲ ಸೇವನೆಯಿಂದ ನಾಲಿಗೆ ದಪ್ಪವಾಗಬಹುದು. ಮನಸ್ಸಿನ ಭಾವನೆಗಳು ವಿಕೃತಗೊಳ್ಳಬಹುದು. ಅಹಂಕಾರವೂ ಹೆಚ್ಚಾಗಬಹುದು. ಇವೆಲ್ಲವೂ ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಜ್ಞಾನಾರ್ಜನೆಗೆ ಮಾರಕವಾಗಿ ಪರಿಣಮಿಸಬಹುದು.

ಹಿಂದೆ ಗುರುಕುಲಗಳಲ್ಲಿ ವಿದ್ಯಾರ್ಥಿಗಳನ್ನು ಶ್ರೀಮಂತರು, ಬಡವರು, ರಾಜನ ಮಕ್ಕಳೇ ಆಗಲಿ ಸಮಾನವಾಗಿ ಕಾಣಲಾಗುತ್ತಿತ್ತು. ಅಲ್ಲಿ ಸಮಾನ ವಸ್ತ್ರ ಸಂಹಿತೆ, ಸಮಾನ ಆಸನ ಮತ್ತು ಸಮಾನ ಆಹಾರವನ್ನು ನೀಡಲಾಗುತ್ತಿತ್ತು. ಅಧ್ಯಯನಕ್ಕೆ ಪೂರಕ ವಾತಾವರಣವನ್ನು ನಿರ್ಮಿಸಲು, ಗುರುಕುಲಗಳಲ್ಲಿ ವಿದ್ಯಾರ್ಥಿಗಳಿಗೆ ಕೆಲವು ಆಹಾರ ಪದಾರ್ಥಗಳನ್ನು ನೀಡುವುದನ್ನು ನಿಷೇಧಿಸಲಾಗಿತ್ತು. ಈರುಳ್ಳಿ, ಬೆಳ್ಳುಳ್ಳಿ, ಬದನೆಕಾಯಿ, ಗಿಣ್ಣ, ಮೂಲಂಗಿ, ಹುಳಿ ಮೊಸರಿನಂತಹ ಆಹಾರ ಪದಾರ್ಥಗಳನ್ನು ನೀಡುವುದಿಲ್ಲ. ಈ ನಿಯಮಗಳು ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮತ್ತು ಕಲಿತ ವಿದ್ಯೆಯನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದ್ದವು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ತಾಂಬೂಲ ಮಾತ್ರವಲ್ಲದೆ, ವಿದ್ಯಾರ್ಥಿಗಳಿಗೆ ಕೆಲವು ಇತರ ನಿಯಮಗಳನ್ನೂ ಸಹ ಹಿಂದಿನ ಕಾಲದಲ್ಲಿ ವಿಧಿಸಲಾಗುತ್ತಿತ್ತು. ವಿದ್ಯಾರ್ಥಿಗಳು ಕನ್ನಡಿಯಲ್ಲಿ ತಮ್ಮನ್ನು ನೋಡಿಕೊಳ್ಳಬಾರದು, ತಲೆ ಬಾಚಿಕೊಳ್ಳಬಾರದು, ಸುಗಂಧ ದ್ರವ್ಯಗಳನ್ನು ಬಳಸಬಾರದು ಎಂದು ಹೇಳಲಾಗುತ್ತಿತ್ತು. ನೈಸರ್ಗಿಕವಾಗಿ ಇರಬೇಕು ಎಂಬುದು ಇದರ ಹಿಂದಿನ ಉದ್ದೇಶ. ಚಾಪೆ ಮೇಲೆ ಮಲಗುವುದು ಶುದ್ಧವೆಂದು ಪರಿಗಣಿಸಲಾಗಿತ್ತು. ಬಿಸಿನೀರನ್ನು ಬಳಸದೆ ಬೆಚ್ಚಗಿನ ಅಥವಾ ಸಾಮಾನ್ಯ ನೀರನ್ನು ಬಳಸಬೇಕು, ಗಟ್ಟಿಯಾದ ಅಥವಾ ವಿಚಿತ್ರವಾದ ಪಾದರಕ್ಷೆಗಳನ್ನು ಧರಿಸಬಾರದು ಎಂಬ ನಿಯಮಗಳಿದ್ದವು. ಹಾಗೆಯೇ, ಅಧ್ಯಯನ ಮಾಡುವ ವಿದ್ಯಾರ್ಥಿಗಳು ಅತಿಯಾಗಿ ಹಾಸ್ಯ ಮಾಡಬಾರದು. ಹಾಸ್ಯವೇ ಅಭ್ಯಾಸವಾದರೆ ಜೀವನವೂ ಹಾಸ್ಯಮಯವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು. ಮಧ್ಯಾಹ್ನದ ನಿದ್ದೆಯು ಕೂಡ ವಿದ್ಯಾರ್ಥಿಗಳಿಗೆ ಶುಭವಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಯಾವುದೇ ವಿದ್ಯಾರ್ಥಿ, ಅದು ಎಲ್.ಕೆ.ಜಿ.ಯಿಂದ ಪಿ.ಎಚ್.ಡಿ.ವರೆಗಿನವರಾಗಿರಲಿ, ತಮ್ಮ ವಿದ್ಯಾರ್ಜನೆಯ ಕಾಲ ಪೂರ್ಣಗೊಳ್ಳುವವರೆಗೆ ತಾಂಬೂಲವನ್ನು ಸೇವಿಸಬಾರದು. ಪೋಷಕರು ಕೂಡ ಇದನ್ನು ಪ್ರೋತ್ಸಾಹಿಸಬಾರದು. ಶುಭ ಕಾರ್ಯಗಳಲ್ಲಿ ನೀಡುವ ಪಾನ್‌ ಬೀಡಾವನ್ನು ಸಹ ತಾಂಬೂಲದ ಲೆಕ್ಕಕ್ಕೆ ಸೇರಿಸಿ ವಿದ್ಯಾರ್ಥಿಗಳು ತ್ಯಜಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB-CSK ಪಂದ್ಯ: ಸ್ಟೇಡಿಯಂ ಬಳಿ ಅನುಮಾನಾಸ್ಪದವಾಗಿ ಓಡಾಡ್ತಿದ್ದ 8 ಜನ ಪೊಲೀಸ್ ವಶಕ್ಕೆ

ಬೆಂಗಳೂರು, ಏಪ್ರಿಲ್​​ 05: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಸಂಜೆ 7.30ಕ್ಕೆ ಆರ್​ಸಿಬಿ (RCB) ಹಾಗೂ ಚೆನ್ನೈ ತಂಡದ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪಂದ್ಯ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾತರರಾಗಿದ್ದು, ಕ್ರೀಡಾಂಗಣದತ್ತ ಆಗಮಿಸುತ್ತಿದ್ದಾರೆ. ಕ್ರೀಡಾಂಗಣದ ಬಳಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಪ್ರತಿಯೊಬ್ಬರನ್ನು ಪರಿಶೀಲನೆ ನಡೆಸಿ ಒಳ ಬಿಡುತ್ತಿದ್ದಾರೆ. ಈ ಮಧ್ಯೆ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಜಾರ್ಖಂಡ್ ಮೂಲದ ನಾಲ್ವರು ಸೇರಿ ಒಟ್ಟು 8 ಜನರನ್ನು ಪೊಲೀಸರು ವಶಕ್ಕೆ ಪಡಿದಿದ್ದಾರೆ.

ಕಳ್ಳತನ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಎಂದ ಸೀಮಂತ್ ಕುಮಾರ್ ಸಿಂಗ್

ಇತ್ತೀಚೆಗೆ ಮೊಬೈಲ್ ಕಳ್ಳತನ ಹಿನ್ನೆಲೆ ಉತ್ತರ ಭಾರತದಿಂದ ಬಂದಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಅನುಮಾನಸ್ಪದವಾಗಿ ಓಡಾಡುತ್ತಿದ್ದವರನ್ನು ವಶಕ್ಕೆ ಪಡೆದಿರುವ ಪೊಲೀಸರು ದಾಖಲೆ ಪತ್ರ ಮತ್ತು ಟಿಕೆಟ್​ ಎಲ್ಲವನ್ನೂ ಪರಿಶೀಲಿಸುತ್ತಿದ್ದಾರೆ. ಇನ್ನು ಪಿಕ್ ಪಾಕೆಟ್ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

72 ಮೊಬೈಲ್ ಕದ್ದಿದ್ದ 13 ಮಂದಿ ಅರೆಸ್ಟ್

ಇತ್ತೀಚೆಗೆ ಅಂದರೆ ಮಾರ್ಚ್​ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಆರ್‌ಸಿಬಿ ಮಧ್ಯೆ ಐಪಿಎಲ್​ ಉದ್ಘಾಟನಾ ಪಂದ್ಯ ನಡೆದಿತ್ತು. ಪಂದ್ಯ ನೋಡ್ತಾ ಫ್ಯಾನ್ಸ್​ ಕುಣಿದು ಕುಪ್ಪಳಿಸುತ್ತಿದ್ದರೆ, ಅಪ್ರಾಪ್ತ ಹುಡುಗರ ಗ್ಯಾಂಗ್​​ ಮೊಬೈಲ್‌ಗಳನ್ನ ಸದ್ದಿಲ್ಲದೆ ಕದಿಯುತ್ತಿದ್ದರು. ಒಂದಲ್ಲ, ಎರಡಲ್ಲ, ಬರೋಬ್ಬರಿ 72 ಮೊಬೈಲ್​ಗಳನ್ನ ಸೈಲೆಂಟಾಗಿ ದೋಚಿದ್ದರು.

ಇದನ್ನೂ ಓದಿ: ಬಂದಿದ್ದು ಜಾರ್ಖಂಡ್​ನಿಂದ, ಧರಿಸಿದ್ದು ಆರ್​ಸಿಬಿ ಜೆರ್ಸಿ, ಮಾಡಬಾರದ ಕೆಲಸ ಮಾಡಿ ಪೊಲೀಸ್ ಬಲೆಗೆ ಬಿದ್ದ ಖದೀಮರು!

ಹೀಗೆ 72 ಮೊಬೈಲ್​ ಕದ್ದ 9 ಅಪ್ರಾಪ್ತರು ಸೇರಿ 13 ಮಂದಿಯನ್ನ ಅರೆಸ್ಟ್ ಮಾಡಲಾಗಿತ್ತು. ಜಾರ್ಖಂಡ್​ನಿಂದ ಅಪ್ರಾಪ್ತರ ಗ್ಯಾಂಗ್ ಕಟ್ಕೊಂಡು ಬಂದಿದ್ದ ಸೋಹನ್ ಕುಮಾರ್, ಸಂಜೀತ್ ಕುಮಾರ್, ಇಶಾಲ್‌ಕುಮಾರ್ ಮತ್ತು ಶುಭಮನ್​ನ ಗ್ಯಾಂಗ್ ಅಂದರ್​ ಆಗಿತ್ತು.

ಇದನ್ನೂ ಓದಿ: RCB vs CSK IPL 2026: ಹೈವೋಲ್ಟೇಜ್ ಪಂದ್ಯದ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಪೊಲೀಸ್ ಬಿಗಿ ಭದ್ರತೆ!

ಇನ್ನು ಮೈದಾನದ ಸುತ್ತಮುತ್ತ ಭದ್ರತೆಗೆ 2,300 ಪೊಲೀಸರ ನಿಯೋಜನೆ ಮಾಡಲಾಗಿದೆ. ಜನಸಂದಣಿ ನಿಯಂತ್ರಣಕ್ಕೆ ಬಿಎಂಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್, ಮೆಟ್ರೋ ಸೇವೆ ಈ ಹಿಂದಿನ ಪಂದ್ಯದಂತೆಯೇ ಇರಲಿದೆ. ತಡರಾತ್ರಿ 2 ಗಂಟೆಯವರೆಗೂ ನಮ್ಮ ಮೆಟ್ರೋ ರೈಲು ಸಂಚಾರವಿರುತ್ತೆ. ಸುರಕ್ಷತೆಗಾಗಿ ಸ್ಟೇಡಿಯಂ ಸಮೀಪದ ರಸ್ತೆಗೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ಟಿಕೆಟ್ ಇಲ್ಲದವರು ಸ್ಟೇಡಿಯಂ ಸುತ್ತಮುತ್ತ ಬಾರದಂತೆ ಸೂಚನೆ ನೀಡಲಾಗಿದೆ. ನಕಲಿ ಟಿಕೆಟ್ ಮಾರಾಟ, ಬೆಟ್ಟಿಂಗ್ ಚಟುವಟಿಕೆ ಮೇಲೆ ಸಿಸಿಬಿ ನಿಗಾ ಇಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link