ತುಮಕೂರು, ಮಾ.25: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಭ್ರಷ್ಟಾಚಾರದ ಬಣ್ಣ ಬಯಲಾಗಿದೆ. ಆರೋಗ್ಯ ಜಾಗೃತಿ ಕಾರ್ಯಕ್ರಮದ ಬಿಲ್ ಪಾವತಿಸಲು ಎನ್ಜಿಒ ಅಧ್ಯಕ್ಷರಿಂದ ಲಂಚ ಸ್ವೀಕರಿಸುತ್ತಿದ್ದ ಲೆಕ್ಕಪತ್ರ ವ್ಯವಸ್ಥಾಪಕ ಅರವಿಂದ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. 2025-26ರ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಜಿಲ್ಲೆಯ 10 ತಾಲೂಕುಗಳ ಜಾತ್ರೆ ಮತ್ತು ಸಂತೆಗಳಲ್ಲಿ ಆರೋಗ್ಯ ಜಾಗೃತಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ ಜಾತ್ರೆ, ಸಂತೆಗಳಲ್ಲಿ ಆರೋಗ್ಯ ಕುರಿತ ವಸ್ತು ಪ್ರದರ್ಶನ ಮಾಡಲಾಗಿತ್ತು. ಈ ಕಾರ್ಯಕ್ರಮ ನಡೆಸಿದ್ದ ಎನ್ಜಿಒಗೆ ಬರಬೇಕಿದ್ದ 1.98 ಲಕ್ಷ ರೂ. ಬಿಲ್ ಪಾವತಿಸಲು ಅರವಿಂದ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಿಲ್ ಬಿಡುಗಡೆ ಮಾಡಲು ಅರವಿಂದ್ 12 ಸಾವಿರ ರೂ. ಲಂಚ ಕೇಳಿದ್ದರು. ಎನ್ಜಿಒ ಅಧ್ಯಕ್ಷ ರಾಜಶೇಖರ್ ಅವರು ಲಂಚ ನೀಡಲು ನಿರಾಕರಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಇಂದು ಸಂಜೆ 4:10ಕ್ಕೆ ಕಚೇರಿ ಕಾಂಪೌಂಡ್ ಒಳಗೆ ರಾಜಶೇಖರ್ ಅವರಿಂದ 12 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಅರವಿಂದ್ ಅವರನ್ನು ವಶಕ್ಕೆ ಪಡೆದಿದ್ದಾರೆ.
‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾದ ಕಥೆ ಬಗ್ಗೆ ಗುರು ದೇಶಪಾಂಡೆ, ರಾಘವೇಂದ್ರ ನಾಯ್ಕ್ ಅವರು ತಕರಾರು ತೆಗೆದಿದ್ದಾರೆ. ಕೃತಿಚೌರ್ಯ ಆಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಆರೋಪಕ್ಕೆ ‘ಲವ್ ಮಾಕ್ಟೇಲ್ 3’ ಸಿನಿಮಾದ ನಿರ್ದೇಶಕ, ನಟ ಡಾರ್ಲಿಂಗ್ ಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಸೆಕೆಂಡ್ ಹಾಫ್ ಕಥೆ ಕದ್ದಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಬಂದಿದೆ. ಒಬ್ಬ ಫಿಲ್ಮ್ ಮೇಕರ್ಗೆ ಇದಕ್ಕಿಂತ ಬೇರೆ ಅವಮಾನ ಇಲ್ಲ. ನಮ್ಮ ಮರ್ಯಾದೆ ಹೋಗಿದೆ. ಅದಕ್ಕಾಗಿ ನಾನು ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯ್ಕ್ ಮೇಲೆ ಕಾನೂನು ಹೋರಾಟ ಮಾಡುತ್ತೇನೆ. ನಾನು ರಾಜಿ ಆಗಲ್ಲ. ಇಂಥವರಿಗೆ ಈ ರೀತಿಯೇ ಉತ್ತರ ನೀಡಬೇಕು’ ಎಂದು ಡಾರ್ಲಿಂಗ್ ಕೃಷ್ಣ (Darling Krishna) ಅವರು ಗರಂ ಆಗಿದ್ದಾರೆ.
ಅಲಹಾಬಾದ್, ಮಾರ್ಚ್ 25: ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮಿಯವರ ವಿರುದ್ಧ ದಾಖಲಾದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅವರಿಗೆ ಮತ್ತು ಅವರ ಶಿಷ್ಯ ಸ್ವಾಮಿ ಮುಕುಂದಾನಂದ ಗಿರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅಲಹಾಬಾದ್ ಹೈಕೋರ್ಟ್ (Allahabad High Court) ಅವರಿಬ್ಬರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಂಗೀಕರಿಸಿದೆ. ನ್ಯಾಯಮೂರ್ತಿ ಜಿತೇಂದ್ರ ಕುಮಾರ್ ಸಿನ್ಹಾ ಅವರ ಏಕ ಪೀಠವು ಈ ತೀರ್ಪು ನೀಡಿದೆ.
ಇದಕ್ಕೂ ಮೊದಲು ಫೆಬ್ರವರಿ 27ರಂದು ಅವಿಮುಕ್ತೇಶ್ವರಾನಂದ ಸ್ವಾಮೀಜಿ ಅವರ ಬಂಧನಕ್ಕೆ ತಡೆ ನೀಡಿ ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆದೇಶ ಹೊರಡುವವರೆಗೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಬಾರದು ಎಂದು ಕೋರ್ಟ್ ನಿರ್ದೇಶಿಸಿತ್ತು. ಈ ವಿಷಯವನ್ನು ಆಲಿಸಿದ ನಂತರ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಹಾಗೇ, ಅರ್ಜಿದಾರರು ತನಿಖೆಗೆ ಸಹಕರಿಸುವಂತೆ ಸೂಚಿಸಿತ್ತು.
ಈ ಮೊದಲು ಪ್ರಯಾಗ್‌ರಾಜ್‌ನ ಜಿಲ್ಲಾ ನ್ಯಾಯಾಲಯವು ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಇತರರ ವಿರುದ್ಧ ಅಪ್ರಾಪ್ತ ವಯಸ್ಕನನ್ನು ಒಳಗೊಂಡ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಪೋಕ್ಸೋ ಮತ್ತು ಅತ್ಯಾಚಾರ ವಿಶೇಷ ನ್ಯಾಯಾಲಯದ ಅಧ್ಯಕ್ಷತೆ ವಹಿಸಿರುವ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿನೋದ್ ಕುಮಾರ್ ಚೌರಾಸಿಯಾ ಅವರು ಈ ಆದೇಶವನ್ನು ಹೊರಡಿಸಿದ್ದರು.
ತುಳಸಿ ಪೀಠದ ಮುಖ್ಯಸ್ಥ ಸ್ವಾಮಿ ರಾಮಭದ್ರಾಚಾರ್ಯರ ಶಿಷ್ಯ ಅಶುತೋಷ್ ಬ್ರಹ್ಮಚಾರಿ ಅವರು ದೂರು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಝುನ್ಸಿ ಪೊಲೀಸರಿಗೆ ಎಫ್‌ಐಆರ್ ದಾಖಲಿಸಿ ಈ ವಿಷಯದ ಬಗ್ಗೆ ತನಿಖೆ ಆರಂಭಿಸುವಂತೆ ಸೂಚಿಸಿತ್ತು. ಬಳಿಕ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಅವರ ಸಹಚರ ಮುಕುಂದಾನಂದ ಗಿರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಐಪಿಎಲ್ 2026 ಕ್ಕೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ವೈಯಕ್ತಿಕ ಬದುಕಿನಲ್ಲಿ ಕಾನೂನಿನ ಕುಣಿಕೆಯಲ್ಲಿ ಸಿಲುಕಿಕೊಂಡಿರುವ ತಂಡದ ವೇಗದ ಬೌಲರ್ ಯಶ್ ದಯಾಳ್ ಅವರನ್ನು ಈ ಆವೃತ್ತಿಯಿಂದ ಹೊರಗಿಡುವ ನಿರ್ಧಾರ ಮಾಡಿದೆ. ಇದು ತಂಡದ ಬೌಲಿಂಗ್ ವಿಭಾಗವನ್ನು ಕೊಂಚ ದುರ್ಬಲಗೊಳಿಸಿದೆ. ಹಾಗಿದ್ದರೆ, ಯಶ್ ದಯಾಳ್ ಸ್ಥಾನವನ್ನು ತಂಡದಲ್ಲಿ ಯಾರು ತುಂಬಬಹುದು ಎಂಬುದನ್ನು ನೋಡುವುದಾದರೆ..
ಮಂಗೇಶ್ ಯಾದವ್: ಯಶ್ ದಯಾಳ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯಬಹುದಾದ ವೇಗಿಗಳಲ್ಲಿ ಮಂಗೇಶ್ ಯಾದವ್ ಅವರ ಹೆಸರು ಜಾಸ್ತಿ ಚಾಲ್ತಿಯಲ್ಲಿದೆ. ದಯಾಳ್ ಅವರಂತೆ ಮಂಗೇಶ್ ಯಾದವ್ ಕೂಡ ಎಡಗೈ ವೇಗದ ಬೌಲರ್ ಆಗಿರುವುದರಿಂದ ಆರ್ಸಿಬಿಗೆ ಇದಯ ಸೂಕ್ತ ಆಯ್ಕೆಯಾಗಬಹುದು. ಇದಕ್ಕೆ ಪೂರಕವಾಗಿ ತಂಡದ ಅಭ್ಯಾಸದ ವೇಳೆ ಮಂಗೇಶ್ ಯಾದವ್ ಅವರ ಬೌಲಿಂಗ್ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಿರುವುದು. ಇವರ ಆಯ್ಕೆಯನ್ನು ಖಚಿತಪಡಿಸಿದೆ.
ರಸಿಕ್ ಸಲಾಂ: ಇನ್ನೊಂದು ಆಯ್ಕೆಯೆಂದರೆ ಅದು ಆಯ್ಕೆ ರಸಿಕ್ ಸಲಾಂ. ಬಲಗೈ ಮಧ್ಯಮ ವೇಗಿ ಮತ್ತು ನಿಧಾನಗತಿಯ ಎಸೆತಕ್ಕೆ ಹೆಸರುವಾಸಿಯಾಗಿರುವ ರಸಿಕ್ ಸಲಾಂ ಕಳೆದ ಆವೃತ್ತಿಯಲ್ಲಿ ಕೆಲವು ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದರು. ಟಿ20 ಕ್ರಿಕೆಟ್ನಲ್ಲಿ ಹೆಚ್ಚಿನ ಅನುಭವ ಹೊಂದಿರುವ ರಸಿಕ್ 42 ಪಂದ್ಯಗಳಲ್ಲಿ 50 ವಿಕೆಟ್ಗಳನ್ನು ಪಡೆದಿದ್ದಾರೆ. ವಿಶೇಷವಾಗಿ ಅವರು ಮಧ್ಯಮ ಮತ್ತು ಡೆತ್ ಓವರ್ಗಳಲ್ಲಿ ಪರಿಣಾಮಕಾರಿಯಾಗಿದ್ದಾರೆ.
ಅಭಿನಂದನ್ ಸಿಂಗ್: ಮೂರನೇ ಆಯ್ಕೆಯಾಗಿ ಅಭಿನಂದನ್ ಸಿಂಗ್ ಕೂಡ ಚರ್ಚೆಯಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿಯೂ ಅವರು ಆರ್ಸಿಬಿ ತಂಡದಲ್ಲಿದ್ದರು. ಯುಪಿ ಟಿ20 ಲೀಗ್ನಲ್ಲಿ ಅವರ ಪ್ರದರ್ಶನ ಗಮನಾರ್ಹವಾಗಿದ್ದು ಆಡಿದ 11 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಪಡೆದಿದ್ದಾರೆ.
ಯಶ್ ದಯಾಳ್ ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಪರ ಪ್ರಮುಖ ಆಟಗಾರರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ, ತಂಡವು ತನ್ನ ಬೌಲಿಂಗ್ ಸಂಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಈಗ ತಂಡದ ಆಡಳಿತವು ಅನುಭವಕ್ಕೆ ಆದ್ಯತೆ ನೀಡುತ್ತದೆಯೇ ಅಥವಾ ಯುವಕರಿಗೆ ಅವಕಾಶ ನೀಡುತ್ತದೆಯೇ ಎಂದು ನೋಡಲು ಆಸಕ್ತಿದಾಯಕವಾಗಿದೆ.
2026 ರ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆರಂಭಿಕ ಆಟಗಾರ ಇಂಗ್ಲೆಂಡ್ನ ಬೆನ್ ಡಕೆಟ್ ಟೂರ್ನಿಯಿಂದ ತಮ್ಮ ಹೆಸರನ್ನು ಹಿಂಪಡೆದುಕೊಂಡಿದ್ದಾರೆ. ಲೀಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಡಕೆಟ್ ಅವರ ಈ ನಿರ್ಧಾರ ಡೆಲ್ಲಿ ಕ್ಯಾಪಿಟಲ್ಸ್ ಸಿದ್ಧತೆಗಳಿಗೆ ಅಡ್ಡಿಯಾಗಿದೆ.
ಇಂಗ್ಲಿಷ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಐಪಿಎಲ್ನಿಂದ ಹಿಂದೆ ಸರಿಯುತ್ತಿರುವ ಘೋಷಣೆ ಮಾಡಿರುವ ಡಕೆಟ್ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ನಡೆದ ಹರಾಜಿನಲ್ಲಿ ಎಡಗೈ ಬ್ಯಾಟ್ಸ್ಮನ್ ಬೆನ್ ಡಕೆಟ್ ಅವರನ್ನು ದೆಹಲಿ ಕ್ಯಾಪಿಟಲ್ಸ್ 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿತು. ಇದು ಡಕೆಟ್ ಅವರ ಐಪಿಎಲ್ನ ಚೊಚ್ಚಲ ಆವೃತ್ತಿಯಾಗುವುದರ ಜೊತೆಗೆ ಅವರಿಗೆ ಆಡುವ ಅವಕಾಶವೂ ಸಿಗುವುದರಲ್ಲಿತ್ತು.
ಇನ್ನು ಐಪಿಎಲ್ನಿಂದ ಹಿಂದೆ ಸರಿಯುವುದಕ್ಕೆ ಕಾರಣವನ್ನು ನೀಡಿರುವ ಬೆನ್ ಡಕೆಟ್, ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದತ್ತ ಗಮನ ಹರಿಸುವ ನಿರ್ಧಾರವನ್ನು ಉಲ್ಲೇಖಿಸಿ, ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಲುವಾಗಿ ಐಪಿಎಲ್ 2026 ರಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ. ಡಕೆಟ್ ತಮ್ಮ ನಿರ್ಧಾರಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಬಳಿ ಕ್ಷಮೆಯಾಚಿಸಿ, ಮುಂಬರುವ ವರ್ಷಗಳಲ್ಲಿ ಮತ್ತೆ ಡೆಲ್ಲಿ ಪರ ಆಡುವುದಾಗಿ ತಿಳಿಸಿದ್ದಾರೆ.
ಆದರೆ ಇದೀಗ, ಡಕೆಟ್ ಅವರ ಈ ನಿರ್ಧಾರದಿಂದಾಗಿ, ಬಿಸಿಸಿಐ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತವಾಗಿದೆ. 2024 ರ ಐಪಿಎಲ್ ನಂತರ ವಿದೇಶಿ ಆಟಗಾರರ ಈ ಹಠಾತ್ ಹಿಂತೆಗೆತವನ್ನು ತಡೆಯಲು ಬಿಸಿಸಿಐ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿತ್ತು. ಅದರಂತೆ ಹರಾಜಿನಲ್ಲಿ ಮಾರಾಟವಾದ ನಂತರ ಐಪಿಎಲ್ನಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡ ಯಾವುದೇ ವಿದೇಶಿ ಆಟಗಾರನನ್ನು ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್ನಿಂದ ನಿಷೇಧಿಸುವ ನಿರ್ಧಾರಕ್ಕೆ ಬಂದಿದೆ. ಈ ಅವಧಿಯಲ್ಲಿ, ಆಟಗಾರನು ತನ್ನ ಹೆಸರನ್ನು ಹರಾಜಿಗೆ ಸಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಡಕೆಟ್ ಮುಂದಿನ 2 ವರ್ಷಗಳ ಕಾಲ ಐಪಿಎಲ್ನಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ಬೆನ್ ಡಕೆಟ್ಗೂ ಮೊದಲು ಇಂಗ್ಲೆಂಡ್ ಏಕದಿನ ಮತ್ತು ಟಿ20 ತಂಡದ ನಾಯಕ ಹ್ಯಾರಿ ಬ್ರೂಕ್ ಕೂಡ ಇದೇ ರೀತಿಯ ಕೆಲಸ ಮಾಡಿದ್ದರು. 2025 ರ ಸೀಸನ್ ಪ್ರಾರಂಭವಾಗುವ ಮೊದಲು ಬ್ರೂಕ್ ಐಪಿಎಲ್ನಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡಿದ್ದರು. ಇದರ ಪರಿಣಾಮವಾಗಿ ಅವರನ್ನು ಪ್ರಸ್ತುತ ಐಪಿಎಲ್ನಿಂದ ನಿಷೇಧಿಸಲಾಗಿದೆ. ಇದೀಗ ಅವರು 2028 ರ ಐಪಿಎಲ್ನಲ್ಲಿ ಆಡಬಹುದಾಗಿದೆ. ಮತ್ತೊಂದೆಡೆ, ಬೆನ್ ಡಕೆಟ್ 2029 ರ ಸೀಸನ್ವರೆಗೂ ಐಪಿಎಲ್ನಲ್ಲಿ ಆಡಲು ಕಾಯಬೇಕಿದೆ.
ನವದೆಹಲಿ, ಮಾರ್ಚ್ 25: ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ (BJP) ನಾಯಕಿ ಮಾಧವಿ ಲತಾ (Madhavi Latha) ಅವರು ಪ್ರಾರ್ಥನೆ ಮಾಡಿರುವ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣದ ಮಹಿಳಾ ಪ್ರಾರ್ಥನಾ ಕೊಠಡಿಯೊಳಗೆ ಮಾಧವಿ ಲತಾ ಮುಸ್ಲಿಂ ಮಹಿಳೆಯರೊಂದಿಗೆ ಕುಳಿತು ದೇವರ ಶ್ಲೋಕಗಳನ್ನು ಹೇಳಿದ್ದಾರೆ. ವಿಮಾನ ನಿಲ್ದಾಣದ ಪ್ರಾರ್ಥನಾ ಸ್ಥಳದೊಳಗೆ ಮಾಧವಿ ಲತಾ “ದುರ್ಗಾ ಸೂಕ್ತಂ”ನ ಶ್ಲೋಕಗಳನ್ನು ಪಠಿಸಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಲವರು ಅವರಿಗೆ ಬೆಂಬಲ ನೀಡಿದ್ದರೆ ಇನ್ನು ಕೆಲವರು ವಿರೋಧಿಸಿದ್ದಾರೆ. ಈ ವಿಡಿಯೋ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ತುಮಕೂರು, ಮಾ.25: ನಗರದ ದೇವರಾಜ ಅರಸು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯೊಬ್ಬಳ ಅತಿ ಆತುರದ ನಿರ್ಧಾರವೊಂದು ದೊಡ್ಡ ಎಡವಟ್ಟಿಗೆ ಕಾರಣವಾಗಿದೆ. ಬಸ್ ಪ್ಲಾಟ್‌ಫಾರ್ಮ್‌ಗೆ ಬರುವ ಮೊದಲೇ ಕಿಟಕಿಯ ಮೂಲಕ ಸೀಟ್ ಹಿಡಿಯಲು ಹೋದ ವಿದ್ಯಾರ್ಥಿನಿ, ಬಸ್‌ನ ಹಿಂದಿನ ಚಕ್ರಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾರೆ. ತುಮಕೂರು-ಪಾವಗಡ ಮಾರ್ಗದ ಬಸ್ ಹತ್ತಲು ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಏಕಾಏಕಿ ಮುಗಿಬಿದ್ದಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಬಸ್ ನಿಲ್ಲುವ ಮೊದಲೇ ಕಿಟಕಿಯ ಒಳಗೆ ಬ್ಯಾಗ್ ಇಟ್ಟು ಸೀಟ್ ಕಾಯ್ದಿರಿಸಲು ಪ್ರಯತ್ನಿಸಿದ್ದಾಳೆ. ಚಲಿಸುತ್ತಿದ್ದ ಬಸ್‌ನ ವೇಗಕ್ಕೆ ವಿದ್ಯಾರ್ಥಿನಿಯ ನಿಯಂತ್ರಣ ತಪ್ಪಿ, ಆಕೆಯ ಕಾಲು ಬಸ್‌ನ ಹಿಂದಿನ ಚಕ್ರದಡಿಗೆ ಸಿಲುಕಿದೆ. ಇದರಿಂದ ಆಕೆಯ ಕಾಲು ಸಂಪೂರ್ಣವಾಗಿ ಜಖಂಗೊಂಡಿದೆ. ಈ ಆಘಾತಕಾರಿ ದೃಶ್ಯವು ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡಲು ಭಯಾನಕವಾಗಿದೆ. ಗಾಯಾಳು ವಿದ್ಯಾರ್ಥಿನಿಯನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಳಿಕ ತುಮಕೂರು ನಗರ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವದೆಹಲಿ, ಮಾರ್ಚ್ 25: ಅಂತರರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾದ ಎಸ್ ಅಂಡ್ ಪಿ ಗ್ಲೋಬಲ್ ಸಂಸ್ಥೆ (S&P Global) ಭಾರತದ ಆರ್ಥಿಕ ಬೆಳವಣಿಗೆಯ ಹಾದಿ ಬಗ್ಗೆ ಸಕಾರಾತ್ಮಕವಾಗಿದೆ. 2026-27ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.1ರಷ್ಟು ಬೆಳೆಯಬಹುದು ಎಂದು ಈ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಅಂದಾಜು ಮಾಡಿದೆ. ಕಳೆದ ಬಾರಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಅದು ಭಾರತದ ಜಿಡಿಪಿ (Indian Economy) ಶೇ. 6.7ರಷ್ಟು ಹೆಚ್ಚಬಹುದು ಎಂದು ಹೇಳಿತ್ತು. ಈಗ ತನ್ನ ಅಭಿಪ್ರಾಯ ಬದಲಿಸಿರುವ ಅದು ಬೆಳವಣಿಗೆಯ ಅಂದಾಜನ್ನು 40 ಮೂಲಾಂಕಗಳಷ್ಟು ಹೆಚ್ಚಿಸಿದೆ.
ಇರಾನ್ ಯುದ್ಧದಿಂದ ಜಾಗತಿಕ ಅನಿಶ್ಚಿತತೆ ಇನ್ನಷ್ಟು ಬಿಗಡಾಯಿಸಿರುವುದು, ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಆಗಿರುವು, ಇವೇ ಮುಂತಾದ ನಕಾರಾತ್ಮಕ ವಾತಾವರಣದ ನಡುವೆಯೂ ಭಾರತದ ಆರ್ಥಿಕತೆಯ ಬೆಳವಣಿಗೆ ಬಗ್ಗೆ ಎಸ್ ಅಂಡ್ ಪಿ ಹೆಚ್ಚು ನಿರೀಕ್ಷೆ ಇಟ್ಟಿರುವುದು ಗಮನಾರ್ಹ ಸಂಗತಿ. ದೇಶದೊಳಗೆ ಖಾಸಗಿ ಅನುಭೋಗ ಉತ್ತಮವಾಗಿರುವುದು ಆರ್ಥಿಕತೆಯ ಬೆಳವಣಿಗೆಗೆ ಪುಷ್ಟಿ ಕೊಡಬಹುದು ಎನ್ನುವುದು ಈ ಏಜೆನ್ಸಿಯ ಅನಿಸಿಕೆ.
‘2027ರ ಮಾರ್ಚ್ಗೆ ಅಂತ್ಯವಾಗುವ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಶೇ. 7.1ರಷ್ಟು ಹೆಚ್ಚಬಹುದು ಎಂಬುದು ನಮ್ಮ ಅಂದಾಜು. 2025-26ರಲ್ಲಿ ಜಿಡಿಪಿಯ ಶೇ. 7.6ರ ಬೆಳವಣಿಗೆಗಿಂತ 2026-27ರಲ್ಲಿ ಬೆಳವಣಿಗೆ ಮಂದಗೊಳ್ಳಬಹುದು. ಆ ವರ್ಷ ಆರ್ಥಿಕ ಬೆಳವಣಿಗೆಗೆ ಪುಷ್ಟಿ ಕೊಡುವ ಸಂಗತಿಗಳೆಂದರೆ ಉತ್ತಮ ಖಾಸಗಿ ಅನುಭೋಗ, ಖಾಸಗಿ ಹೂಡಿಕೆ ಮತ್ತು ಉತ್ತಮ ರಫ್ತು’ ಎಂದು ಎಸ್ ಅಂಡ್ ಪಿ ಗ್ಲೋಬಲ್ ಸಂಸ್ಥೆಯ ಇತ್ತೀಚಿನ ಏಷ್ಯಾ ಪೆಸಿಫಿಕ್ ಆರ್ಥಿಕ ವಿಶ್ಲೇಷಣೆಯ ವರದಿಯಲ್ಲಿ ತಿಳಿಸಿದೆ.
ಜಾಗತಿಕ ಸಂಘರ್ಷಗಳ ಪರಿಣಾಮ ಇಲ್ಲದಿಲ್ಲ…
ಜಾಗತಿಕ ಸಂಘರ್ಷಗಳು ಮತ್ತು ವ್ಯಾಪಾರ ಅಸ್ಥಿರತೆಯ ಅಂಶಗಳು ಭಾರತದಲ್ಲಿ ಬೆಲೆ ಏರಿಕೆಗೆ ಎಡೆ ಮಾಡಿಕೊಡಬಹುದು. ಹೂಡಿಕೆಗಳು ಸಂಕುಚಿತಗೊಳ್ಳುವಂತೆ ಮಾಡಬಹುದು ಎಂದು ಎಸ್ ಅಂಡ್ ಪಿ ಗ್ಲೋಬಲ್ ಏಜೆನ್ಸಿಯ ವರದಿಯಲ್ಲಿ ಎಚ್ಚರಿಸಲಾಗಿದೆ.
ಭಾರತದ ಜಿಡಿಪಿ ವೃದ್ಧಿ ಬಗ್ಗೆ ಎಸ್ ಅಂಡ್ ಪಿ ಗ್ಲೋಬಲ್ ಅಂದಾಜು
2025-26ಕ್ಕೆ ಶೇ. 7.6 ಜಿಡಿಪಿ ಹೆಚ್ಚಳ
2026-27ಕ್ಕೆ ಶೇ. 7.1 ಜಿಡಿಪಿ ಹೆಚ್ಚಳ
2027-28ಕ್ಕೆ ಶೇ. 7.2 ಜಿಡಿಪಿ ಹೆಚ್ಚಳ
2028-29ಕ್ಕೆ ಶೇ. 7.0 ಜಿಡಿಪಿ ಹೆಚ್ಚಳ
‘ಅಧಿಕ ಇಂಧನ ಬೆಲೆಗಳಿಂದಾಗಿ ಆರ್ಥಿಕತೆಗಳ ಖರೀದಿ ಶಕ್ತಿ ಕುಂಠಿತಗೊಳ್ಳುತ್ತದೆ. ಆಂತರಿಕ ಬೇಡಿಕೆ ತಗ್ಗುತ್ತದೆ. ಭಾರತ, ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್ ಇತ್ಯಾದಿ ದೇಶಗಳಲ್ಲಿ ಅಧಿಕ ತೈಲ ಬೆಲೆಗಳಿಂದಾಗಿ ಸರ್ಕಾರಗಳು ಸಬ್ಸಿಡಿಗಳಿಗೆ ಹೆಚ್ಚು ವ್ಯಯಿಸುವಂತಾಗಬಹುದು. ಇದರಿಂದ ಹಣಕಾಸು ಸ್ಥಿತಿ ದುರ್ಬಲಗೊಳ್ಳಬಹುದು ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿಯ ವರದಿಯು ಅಭಿಪ್ರಾಯಪಟ್ಟಿದೆ.
ಬಾಲಿವುಡ್‌ನಲ್ಲಿ ನಟ ರಣವೀರ್ ಸಿಂಗ್ (Ranveer Singh) ಅವರು ಹೊಸ ಬಾಕ್ಸ್ ಆಫೀಸ್ ಸುಲ್ತಾನ್ ಆಗಿದ್ದಾರೆ. ಅವರು ಅಭಿನಯಿಸಿದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಚಿತ್ರವು ಥಿಯೇಟರ್‌ಗಳಲ್ಲಿ ಸುನಾಮಿ ಎಬ್ಬಿಸಿದೆ. ಈ ಚಿತ್ರದ ಅಭೂತಪೂರ್ವ ಯಶಸ್ಸು ಈಗ ಅಕ್ಷಯ್ ಕುಮಾರ್ ಅವರ ಮುಂಬರುವ ಹಾರರ್-ಕಾಮಿಡಿ ಚಿತ್ರ ‘ಭೂತ್ ಬಂಗ್ಲ’ (Bhooth Bangla) ಮೇಲೆ ಪ್ರಭಾವ ಬೀರಲಾರಂಭಿಸಿದೆ. ಹಾಗಾಗಿ ‘ಭೂತ್ ಬಂಗ್ಲ’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎಂಬ ಗಾಸಿಪ್ ಕೇಳಿಬರುತ್ತಿದೆ.
ಮಾರ್ಚ್ 19ರಂದು ಬಿಡುಗಡೆಯಾದ ‘ಧುರಂಧರ್ 2’ ಸಿನಿಮಾ ವೀಕೆಂಡ್ ಮಾತ್ರವಲ್ಲದೇ ವಾರದ ದಿನಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಕ್ರೇಜ್ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಏಪ್ರಿಲ್ 10ರಂದು ಬಿಡುಗಡೆ ಆಗಬೇಕಿದ್ದ ‘ಭೂತ್ ಬಂಗ್ಲ’ ಚಿತ್ರವನ್ನು ಒಂದು ವಾರ ಮುಂದೂಡಲು ಚಿತ್ರತಂಡ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
‘ಧುರಂಧರ್ 2 ಸಿನಿಮಾ ಐತಿಹಾಸಿಕ ಕಲೆಕ್ಷನ್ ಮಾಡುತ್ತಿದೆ. ಇದು ತನ್ನ ನಾಲ್ಕನೇ ವಾರದಲ್ಲೂ (ಅಂದರೆ ಏಪ್ರಿಲ್ 10ರ ಆಸುಪಾಸು) ಪ್ರಬಲವಾಗಿ ಮುನ್ನುಗ್ಗುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ ಏಪ್ರಿಲ್ 17ರಂದು ಯಾವುದೇ ದೊಡ್ಡ ಹಿಂದಿ ಚಿತ್ರಗಳು ಬಿಡುಗಡೆಗೆ ನಿಗದಿಯಾಗಿಲ್ಲ. ಹೀಗಾಗಿ ಪೈಪೋಟಿ ತಪ್ಪಿಸಲು ‘ಭೂತ್ ಬಂಗ್ಲ’ ಚಿತ್ರವನ್ನು ಏಪ್ರಿಲ್ 17ಕ್ಕೆ ಮುಂದೂಡುವುದು ಸೂಕ್ತ ಎಂಬ ಚರ್ಚೆ ನಡೆಯುತ್ತಿದೆ’ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ.
ಆದರೆ, ಮತ್ತೊಂದು ಮಾಹಿತಿ ಪ್ರಕಾರ, ಏಪ್ರಿಲ್ 10ರ ಹೊತ್ತಿಗೆ ಹೆಚ್ಚಿನ ಜನರು ‘ಧುರಂಧರ್ 2’ ಸಿನಿಮಾವನ್ನು ನೋಡಿ ಮುಗಿಸಿರುತ್ತಾರೆ. ಹಾಗಾಗಿ ಹೊಸ ಚಿತ್ರ ‘ಭೂತ್ ಬಂಗ್ಲ’ ಬಿಡುಗಡೆ ಆದರೆ ಹೆಚ್ಚಿನ ಲಾಭ ಸಿಗಬಹುದು ಎಂಬ ವಾದವೂ ಇದೆ. ನಟ ಅಕ್ಷಯ್ ಕುಮಾರ್ ಮತ್ತು ನಿರ್ಮಾಪಕಿ ಏಕ್ತಾ ಕಪೂರ್ ಈ ಬಗ್ಗೆ ಮುಂದಿನ 24 ಗಂಟೆಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಒಂದು ವೇಳೆ ‘ಭೂತ್ ಬಂಗ್ಲ’ ಚಿತ್ರವು ನಿಗದಿತ ದಿನಾಂಕವಾದ ಏಪ್ರಿಲ್ 10ರಂದೇ ಬಿಡುಗಡೆ ಆಗುವುದಾದರೆ, ಬಹುನಿರೀಕ್ಷಿತ ಟ್ರೇಲರ್ ಅನ್ನು ಈ ಶುಕ್ರವಾರ (ಮಾರ್ಚ್ 27) ಬಿಡುಗಡೆ ಮಾಡಲು ತಂಡ ಸಜ್ಜಾಗಿದೆ. ಒಂದು ವೇಳೆ, ಸಿನಿಮಾ ಮುಂದೂಡಿಕೆಯಾದರೆ ಟ್ರೇಲರ್ ಲಾಂಚ್ ಕೂಡ ವಿಳಂಬವಾಗಲಿದೆ. ಈ ಬಗ್ಗೆ ಸಿನಿಪ್ರಿಯರಿಗೆ ಕೌತುಕ ಹೆಚ್ಚಾಗಿದೆ.
ನವದೆಹಲಿ, ಮಾರ್ಚ್ 25: ಕಮರ್ಷಿಯಲ್ ಎಲ್ಪಿಜಿಯ ಬಿಕ್ಕಟ್ಟು (LPG Crisis) ಶುರುವಾದಾಗಿನಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ಅಡುಗೆ ಮಾಡಲು ಪರದಾಡುತ್ತಿವೆ. ಕೆಲವು ರೆಸ್ಟೋರೆಂಟ್ಗಳು ಬಾಯ್ಲರ್, ಎಲೆಕ್ಟ್ರಿಕ್ ಸ್ಟೌವ್ಗಳನ್ನು ಬಳಸುತ್ತಿವೆ. ಕೆಲವು ಹೋಟೆಲ್ಗಳಲ್ಲಿ ಗ್ಯಾಸ್ ಅಭಾವದ ನೆಪ ಹೇಳಿ ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಈ ವಿಚಾರವಾಗಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಿಂದ (CCPA) ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.
ಒಂದುವೇಳೆ ನೀವು ಹೋಗುವ ಹೋಟೆಲ್ ಬಿಲ್ಗಳಲ್ಲಿ ಗ್ಯಾಸ್ ಚಾರ್ಜ್ ಅಥವಾ ಎಲ್ಪಿಜಿ ಚಾರ್ಜ್ ಎಂದು ನಮೂದಿಸಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಈ ರೀತಿ ಹಣ ವಸೂಲಿ ಮಾಡುವುದು ಅಕ್ರಮ. ಗ್ಯಾಸ್ ಸರ್‌ಚಾರ್ಜ್, ಇಂಧನ ರಿಕವರಿ ಹೆಸರಿನಲ್ಲಿ ಬಿಲ್ ಮಾಡೋದು ಶಿಕ್ಷಾರ್ಹ ಅಪರಾಧ. ಮೆನುವಿನಲ್ಲಿ ಉಲ್ಲೇಖಿಸಲಾದ ಬೆಲೆಗೆ ಅನ್ವಯವಾಗುವ ತೆರಿಗೆಗಳನ್ನು ಮಾತ್ರ ಸೇರಿಸಬಹುದು ಎಂದು ಸೂಚಿಸಿದೆ. ಹೆಚ್ಚುವರಿ ಶುಲ್ಕದಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆಗುತ್ತದೆ. ಆಹಾರದ ಬೆಲೆಯಲ್ಲೇ ವೆಚ್ಚ ಸೇರಿರಬೇಕು ಎಂದು ಸಿಸಿಪಿಎ ಸ್ಪಷ್ಟನೆ ನೀಡಿದೆ.
ಇಂಧನ, LPG, ವಿದ್ಯುತ್ ಮತ್ತು ಇತರ ಕಾರ್ಯಾಚರಣೆಯ ವೆಚ್ಚಗಳಂತಹ ಇನ್‌ಪುಟ್ ವೆಚ್ಚಗಳು ವ್ಯವಹಾರವನ್ನು ನಡೆಸುವ ವೆಚ್ಚದ ಭಾಗವಾಗಿದೆ. ಅದು ಮೆನು ಐಟಂಗಳ ಬೆಲೆಯಲ್ಲಿ ಸೇರಿಸಬೇಕು ಎಂದು CCPA ಸ್ಪಷ್ಟಪಡಿಸಿದೆ.
ಆಹಾರದ ಬೆಲೆಯಲ್ಲೇ ಇಂಧನ ಮತ್ತು ಸೇವೆಯ ವೆಚ್ಚ ಸೇರಿರಬೇಕೆಂದು ಸೂಚಿಸಲಾಗಿದೆ. ಬೆಲೆ ಮತ್ತು ಅನ್ವಯವಾಗುವ ತೆರಿಗೆ ಹೊರತುಪಡಿಸಿ ಬೇರೆ ಶುಲ್ಕ ವಿಧಿಸುವಂತಿಲ್ಲ. ಗ್ಯಾಸ್ ದರ ಏರಿಕೆಯ ನೆಪವೊಡ್ಡಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಹಾಕದಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಹಾಗೇ, ಕಾನೂನಿನಿಂದ ಪಾರಾಗಲು ಹೊಸ ಹೆಸರಲ್ಲಿ ಹಣ ಪಡೆಯುವುದು ಕೂಡ ಅಪರಾಧವಾಗಿದೆ. ಸೇವಾ ಶುಲ್ಕದ ನಿಯಮ ತಪ್ಪಿಸಲು ಹಣ ಪಡೆಯುವುದು ಅಪರಾಧ.
ಅನಗತ್ಯ ಚಾರ್ಜ್‌ಗಳ ವಿರುದ್ಧ ನೀವು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ದೂರು ನೀಡಬಹುದು. ಹೆಲ್ಪ್ಲೈನ್ 1915 ಅಥವಾ ಇ-ಜಾಗೃತಿ ಪೋರ್ಟಲ್ ಮೂಲಕ ದೂರು ಸಲ್ಲಿಸಬಹುದು. ಡಿಸಿ ಅಥವಾ ಸಿಸಿಪಿಎಗೆ ಇ-ಮೇಲ್ ಮೂಲಕವೂ ದೂರು ನೀಡಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ