ಗುಜರಾತ್‌ನ ಪಠಾಣ್ ಜಿಲ್ಲೆಯಲ್ಲಿ ಒಂದು ಕುತೂಹಲಕಾರಿ ಘಟನೆ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮೂಲಗಳ ಮಾಹಿತಿಯ ಪ್ರಕಾರ, ಪಠಾಣ್ ಬಳಿಯ ಅಘರ್ ಗ್ರಾಮದಲ್ಲಿ ಮಹಿಳೆಯೊಬ್ಬರು ಮೊಬೈಲ್ ಫೋನ್‌ನೊಂದಿಗೆ ನಿಂತಿದ್ದಾಗ ಇದ್ದಕ್ಕಿದ್ದಂತೆ ಮುಸುವಗಳ (ಕೋತಿಗಳ ಒಂದು ಪ್ರಭೇದ) ಗುಂಪು ಅಲ್ಲಿಗೆ ಬಂದಿದೆ. ಈ ಸಮಯದಲ್ಲಿ, ಒಂದು ಕೋತಿ ಮಹಿಳೆಯ ಕೈಯಿಂದ ಮೊಬೈಲ್ ಫೋನ್ ಕಸಿದುಕೊಂಡಿದೆ. ನಂತರ ನಡೆದ ಘಟನೆ ಅಲ್ಲಿದ್ದ ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ.
ಕೋತಿ ಮೊಬೈಲ್ ಅನ್ನು ಒಂದು ಬದಿಯಲ್ಲಿ ಹಿಡಿದುಕೊಂಡು ಸ್ಕ್ರೀನ್ನೊಂದಿಗೆ ಆಟವಾಡಲು ಪ್ರಾರಂಭಿಸಿದೆ. ಅದು ಮೊಬೈಲ್ ಬಳಕೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಒಂದು ಹಂತದಲ್ಲಿ, ಕೋತಿ ಸೆಲ್ಫೀ ತೆಗೆಯಲು ಯತ್ನಿಸಿದಂತೆ ಕಾಣಿಸಿದೆ.
ಗುಂಪಿನಲ್ಲಿದ್ದ ಇತರ ಮಂಗಗಳು ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿವೆ. ಆದರೆ ಈ ಮಂಗ ಮುಸುವ ಕೊಡಲು ನಿರಾಕರಿಸಿದೆ. ಈ ಎಲ್ಲ ದೃಶ್ಯಗಳನ್ನು ಸ್ಥಳದಲ್ಲಿದ್ದವರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಮಂಡ್ಯ, ಮಾ.25: ದಾವಣಗೆರೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ವಿರುದ್ಧ ಅಸಂವಿಧಾನಿಕ ಪದಬಳಕೆ ಹಾಗೂ ಲಘುವಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಂಡ್ಯ ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದ್ದು, ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಶಾಸಕ ಪ್ರದೀಪ್ ಈಶ್ವರ್ ಅವರ ಹೇಳಿಕೆಗಳು ಸಂಸ್ಕಾರಯುತವಾಗಿಲ್ಲ. ಆದ್ದರಿಂದ ಅವರನ್ನು ತಕ್ಷಣವೇ ನಿಮಾನ್ಸ್ (NIMHANS) ಆಸ್ಪತ್ರೆಗೆ ಸೇರಿಸಿ ಮಾನಸಿಕ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಮಾನಸಿಕವಾಗಿ ಸದೃಢರಾಗಿದ್ದಾರೆ ಎಂಬ ಪ್ರಮಾಣಪತ್ರ ತರುವವರೆಗೆ ಅವರನ್ನು ಶಾಸಕ ಸ್ಥಾನದಿಂದ ಅಮಾನತುಗೊಳಿಸಬೇಕು ಎಂಬ ವಿಲಕ್ಷಣ ಬೇಡಿಕೆಯನ್ನು ಇಡಲಾಗಿದೆ.
ಬಹಿರಂಗ ಸಭೆಗಳಲ್ಲಿ ಭಾಗವಹಿಸಿ ಶಾಂತಿ ಕದಡುತ್ತಿದ್ದಾರೆ ಎಂಬ ಕಾರಣ ನೀಡಿ, ಅವರನ್ನು ದಾವಣಗೆರೆ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರಿಗೆ ಬಹುವಚನ ಬಳಕೆ ಮತ್ತು ಸಂವಿಧಾನಿಕ ಪದಗಳ ಬಗ್ಗೆ ಪಾಠ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಕಳೆದ ನವೆಂಬರ್ನಿಂದ ಕೇಳಿಬರುತ್ತಿದ್ದ ಸುದ್ದಿ ಇದೀಗ ನಿಜವಾಗಿದೆ. ಐಪಿಎಲ್ನ ಅತ್ಯಂತ ಜನಪ್ರಿಯ ತಂಡ ಹಾಗೂ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇದೀಗ ಹೊಸ ಮಾಲೀಕರ ಕೈಸೇರಿದೆ. ಸತತ 18 ವರ್ಷಗಳ ಬಳಿಕ ಐಪಿಎಲ್ನ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆರ್ಸಿಬಿ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಬರೋಬ್ಬರಿ 16,600 ಕೋಟಿ ರೂಗಳಿಗೆ ಆರ್‌ಸಿಬಿಯನ್ನು ಖರೀದಿ ಮಾಡಲಾಗಿದೆ. ವರದಿಯ ಪ್ರಕಾರ, ಆರ್ಸಿಬಿ ಪ್ರಸ್ತುತ ಮಾಲೀಕತ್ವ ನಾಲ್ಕು ಕಂಪನಿಗಳ ಒಕ್ಕೂಟದ ಕೈಸೇರಿದೆ. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್‌ಸ್ಟೋನ್ ಆರ್ಸಿಬಿಯ ಮಾಲೀಕತ್ವ ಹೊಂದಿವೆ. ಈ 18 ವರ್ಷಗಳಲ್ಲಿ ಆರ್ಸಿಬಿ ಮೂರನೇ ಬಾರಿಗೆ ಹೊಸ ಮಾಲೀಕರನ್ನು ಪಡೆದುಕೊಂಡಿದೆ. ಹಾಗಿದ್ದರೆ, ಈ ಹಿಂದೆ ಆರ್ಸಿಬಿ ಎಷ್ಟು ವರ್ಷ ಯಾರ ಒಡೆತನದಲ್ಲಿತ್ತು ಎಂಬುದನ್ನು ನೋಡುವುದಾದರೆ..
456 ಕೋಟಿ ರೂ.ಗೆ ಆರ್ಸಿಬಿ ಖರೀದಿ
2008 ರಲ್ಲಿ ಮೊದಲ ಬಾರಿಗೆ ಐಪಿಎಲ್ ಪ್ರಾರಂಭವಾಗುವ ಮೊದಲು ಬಿಸಿಸಿಐ ಒಟ್ಟು ಎಂಟು ಫ್ರಾಂಚೈಸಿಗಳನ್ನು ಮಾರಾಟ ಮಾಡಿತ್ತು. ಈ ವೇಳೆ ಕನ್ನಡಿಗ ಹಾಗೂ ಕಿಂಗ್‌ಫಿಷರ್ ಮಾಲೀಕ ವಿಜಯ್ ಮಲ್ಯ ಬೆಂಗಳೂರು ತಂಡವನ್ನು ಸರಿಸುಮಾರು 456 ಕೋಟಿ ರೂ.ಗೆ ಖರೀದಿಸಿದ್ದರು. ಈ ಮೂಲಕ ಆರ್ಸಿಬಿ ಎರಡನೇ ಅತ್ಯಂತ ದುಬಾರಿ ಫ್ರಾಂಚೈಸಿ ಎನಿಸಿಕೊಂಡಿತ್ತು. ಮೊದಲ ಸ್ಥಾನದಲ್ಲಿ ಮುಖೇಶ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿತ್ತು. ಇದೀಗ ಹೊಸ ಮಾಲೀಕರ ಕೈಸೇರಿರುವ ಆರ್ಸಿಬಿ ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ತಂಡ ಎನಿಸಿಕೊಂಡಿದೆ.
2008 ರಲ್ಲಿ ಆರ್ಸಿಬಿ ತಂಡವನ್ನು ಖರೀದಿಸಿದ್ದರ ಹಿಂದಿದ್ದ ಉದ್ದೇಶವನ್ನು ವಿವರಿಸಿದ್ದ ಅಂದಿನ ಮಾಲೀಕ ವಿಜಯ್ ಮಲ್ಯ, ‘ಆರ್‌ಸಿಬಿಯನ್ನು ಖರೀದಿಸುವ ಹಿಂದಿನ ನನ್ನ ಏಕೈಕ ಉದ್ದೇಶ ನನ್ನ ವಿಸ್ಕಿ ಬ್ರ್ಯಾಂಡ್ ರಾಯಲ್ ಚಾಲೆಂಜ್ ಅನ್ನು ಪ್ರಚಾರ ಮಾಡುವುದೇ ಹೊರತು, ಅದರ ಹಿಂದೆ ಯಾವುದೇ ಕ್ರಿಕೆಟ್ ಪ್ರೀತಿ ಇರಲಿಲ್ಲ’ ಎಂದಿದ್ದರು.
2016 ರಲ್ಲಿ ಡಿಯಾಜಿಯೊ ಪಾಲಾದ ಆರ್ಸಿಬಿ
ಆದಾಗ್ಯೂ ಉದ್ಯಮಿ ವಿಜಯ್ ಮಲ್ಯ ಸಾಮ್ರಾಜ್ಯ ನಷ್ಟದಿಂದ ದಿವಾಳಿಯಾದಾಗ 2012 ರಲ್ಲಿ ಬ್ರಿಟನ್ ಮೂಲಕ ಡಿಯಾಜಿಯೊ ಸಂಸ್ಥೆ, ಮಲ್ಯ ಒಡೆತನದಲ್ಲಿದ್ದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಅನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ನಂತರ ಆರ್ಥಿಕ ಮತ್ತು ಕಾನೂನು ತೊಂದರೆಗೆ ಸಿಲುಕಿದ ವಿಜಯ್ ಮಲ್ಯ, ದೇಶ ತೊರೆದಿದ್ದು ಮಾತ್ರವಲ್ಲದೆ 2016 ರಲ್ಲಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಮಂಡಳಿಯಿಂದ ಹೊರಬಂದರು. ಪರಿಣಾಮವಾಗಿ ಡಿಯಾಜಿಯೊ ಸಂಸ್ಥೆ, ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಜೊತೆಗೆ ಆರ್ಸಿಬಿಯ ಮಾಲೀಕತ್ವವನ್ನು ಅಧಿಕೃತವಾಗಿ ಪಡೆದುಕೊಂಡಿತು.
ಹೆಸರು ಬದಲಿಸಿದ ಬಳಿಕ ಟ್ರೋಫಿ ಗೆದ್ದಿದ್ದ ಆರ್ಸಿಬಿ
ನಂತರ 2023 ರಲ್ಲಿ ಮಹಿಳಾ ಪ್ರೀಮಿಯರ್ ಲೀಗ್ನಲ್ಲೂ ತನ್ನ ಸಾಮ್ರಾಜ್ಯ ವಿಸ್ತರಿಸಿದ ಡಿಯಾಜಿಯೊ ಸಂಸ್ಥೆ, ಆರ್ಸಿಬಿ ಮಹಿಳಾ ತಂಡವನ್ನು ಖರೀದಿ ಮಾಡಿತು. ಬಳಿಕ 2024 ರಲ್ಲಿ ತಂಡದ ಹೆಸರನ್ನು ಬದಲ್ಲಿಸಿದ್ದ ಡಿಯಾಜಿಯೊ, ‘Royal Challengers Bangalore’ ಎಂದಿದ್ದ ಹೆಸರನ್ನು ‘Royal Challengers Bengaluru’ ಎಂದು ಬದಲಿಸಿತ್ತು. ಇದಕ್ಕೆ ಶುಭ ಸೂಚಕವೆಂಬಂತೆ ಹೆಸರು ಬದಲಿಸಿದ್ದ ಒಂದು ವರ್ಷದ ಬಳಿಕ ಅಂದರೆ 2025 ರಲ್ಲಿ ಆರ್ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಇದೀಗ 2026 ರ ಸೀಸನ್ ಆರಂಭಕ್ಕೂ ಮುನ್ನ ಹೊಸ ಮಾಲೀಕರನ್ನು ಬಡೆದುಕೊಂಡಿರುವ ಆರ್ಸಿಬಿ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 25: ಕಾಂಗ್ರೆಸ್(Congress)ಗೆ ಹೊಸ ಸಂಕಷ್ಟ ಎದುರಾಗಿದೆ. ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯನ್ನು ಖಾಲಿ ಮಾಡುವಂತೆ ನೋಟಿಸ್ ಜಾರಿಮಾಡಲಾಗಿದೆ. ಖಾಲಿ ಮಾಡಲು ಮಾರ್ಚ್ 28ರವರೆಗೆ ಅವಕಾಶ ನೀಡಲಾಗಿದೆ. ಪಕ್ಷವು ತನ್ನ ಕಾರ್ಯಾಚರಣೆಯನ್ನು ಈಗಾಗಲೇ ಐಟಿಒ ಬಳಿಯ ಇಂದಿರಾ ಭವನದಲ್ಲಿರುವ ತನ್ನ ಹೊಸ ಪ್ರಧಾನ ಕಚೇರಿಗೆ ಸ್ಥಳಾಂತರಿಸಿದ್ದರೂ ಸಹ, ಪ್ರಮುಖ ನಿರ್ಧಾರಗಳನ್ನು ಅಲ್ಲಿಂದಲೇ ತೆಗೆದುಕೊಳ್ಳಲಾಗುತ್ತಿತ್ತು.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ಕ್ರಮವನ್ನು ಟೀಕಿಸಿ, ಇದನ್ನು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಕರೆದಿದ್ದಾರೆ ಮತ್ತು ಪಕ್ಷವು ಲಭ್ಯವಿರುವ ಎಲ್ಲಾ ನಿಯಮಗಳನ್ನು ಅನುಸರಿಸುತ್ತದೆ ಎಂದಿದ್ದಾರೆ.
ಸುಮಾರು 48 ವರ್ಷಗಳ ಕಾಲ ಕಾಂಗ್ರೆಸ್‌ನ ಕೇಂದ್ರ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸಿತ್ತು. ಪಕ್ಷವು ಕಳೆದ ವರ್ಷ ತನ್ನ ಹೊಸ ಪ್ರಧಾನ ಕಚೇರಿಯಾದ ಇಂದಿರಾ ಭವನಕ್ಕೆ ಸ್ಥಳಾಂತರಗೊಂಡರೂ, ಪಕ್ಷದ ಚಟುವಟಿಕೆಗಳು ಹಳೆಯ ಕಚೇರಿಯಲ್ಲಿಯೇ ಮುಂದುವರೆದಿತ್ತು.
ಈ ನೋಟಿಸ್ ಬಗ್ಗೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದು ಪ್ರಜಾಪ್ರಭುತ್ವ ಸರ್ಕಾರವಲ್ಲ. ಇದು ದುರದೃಷ್ಟಕರ. ನಾವು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ.
ಬುಧವಾರ ಹೊರಡಿಸಲಾದ ನೋಟಿಸ್‌ನಲ್ಲಿ, ಎಸ್ಟೇಟ್ ಇಲಾಖೆಯು 24 ಅಕ್ಬರ್ ರಸ್ತೆಯ ಜೊತೆಗೆ, 5 ರೈಸಿನಾ ರಸ್ತೆಯಲ್ಲಿರುವ ಭಾರತೀಯ ಯುವ ಕಾಂಗ್ರೆಸ್ ಕಚೇರಿಯನ್ನು ಸಹ ಮಾರ್ಚ್ 28 ರೊಳಗೆ ಖಾಲಿ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ಬಂಗಲೆಯನ್ನು ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಹಂಚಿಕೆ ಮಾಡಲಾಗಿದ್ದು, ಅದರ ಅಂಗಸಂಸ್ಥೆ ಘಟಕವು ಅದನ್ನು ಬಳಸುತ್ತಿದೆ ಎಂದು ವರದಿಯಾಗಿದೆ.
#WATCH | Delhi: Congress Leader Pawan Khera says, “Our 24 Akbar Road office and Youth Congress office have received a notice. What is the priority of the entire country today? The priority of the country is that there is no need to get stuck in the LPG lines, no need to buy in… pic.twitter.com/20L26x0LAg
ಕಾಂಗ್ರೆಸ್ ನಾಯಕ ಪವನ್ ಖೇರಾ ಮಾತನಾಡಿ, ಅಕ್ಬರ್ ರಸ್ತೆ ಕಚೇರಿ ಮತ್ತು ಯುವ ಕಾಂಗ್ರೆಸ್ ಕಚೇರಿಗೆ ನೋಟಿಸ್ ಬಂದಿದೆ. ಈಗ ದೇಶದ ಆದ್ಯತೆ ಏನು ಎಂಬ ಪ್ರಶ್ನೆ ಮೂಡಿದೆ. ಎಲ್ಪಿಜಿಯನ್ನು ಯಾವುದೇ ಅಡೆತಡೆ ಇಲ್ಲದೆ ದೇಶಕ್ಕೆ ತರುವುದು, ಕಾಳಸಂತೆಯಲ್ಲಿ ಮಾರಾಟವಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಗರಂ ಮಸಾಲ, ಬಾಳೆಹಣ್ಣು, ದ್ರಾಕ್ಷಿ, ಅರಿಶಿನ, ಬಾಸ್ಮರಿ ಅಕ್ಕಿ ಎಲ್ಲವೂ ಈಗ ಸಿಲುಕಿಕೊಂಡಿದೆ. ಇದು ನಮ್ಮ ದೇಶದ ಆದ್ಯತೆಯಾಗಬೇಕು ಎಂದರು.
ಬೆಂಗಳೂರು, ಮಾ.25: ಇಸ್ರೇಲ್-ಇರಾನ್ ನಡುವಿನ ಯುದ್ಧದ ಕಾರ್ಮೋಡಗಳು ಈಗ ಬೆಂಗಳೂರಿನ ರಸ್ತೆಗಳ ಮೇಲೂ ಬಿದ್ದಿದೆ. ಯುದ್ಧದ ಹಿನ್ನೆಲೆಯಲ್ಲಿ ಬಿಟುಮೆನ್ (Bitumen) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ನಗರದ ಪ್ರಮುಖ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳು ಅರ್ಧಕ್ಕೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ. ಡಾಂಬರು ಮಿಶ್ರಣಕ್ಕೆ ಅತ್ಯಗತ್ಯವಾಗಿರುವ ‘ಬಿಟುಮೆನ್’ ಕಚ್ಚಾ ತೈಲದ ಉಪ ಉತ್ಪನ್ನವಾಗಿದೆ. ಭಾರತಕ್ಕೆ ಇದರ ಬಹುಪಾಲು ಪೂರೈಕೆ ಕೊಲ್ಲಿ ರಾಷ್ಟ್ರಗಳಿಂದ ಆಗುತ್ತದೆ. ಯುದ್ಧದಿಂದಾಗಿ ಹಡಗುಗಳ ಸಂಚಾರ ಮತ್ತು ಪೂರೈಕೆಗೆ ಪೆಟ್ಟು ಬಿದ್ದಿದೆ. ಬೆಂಗಳೂರಿನ ಗುತ್ತಿಗೆದಾರರು ಮಂಗಳೂರು ರಿಫೈನರೀಸ್ (MRPL) ಮತ್ತು ಮದ್ರಾಸ್ ರಿಫೈನರೀಸ್ ಮೂಲಕ ಬಿಟುಮೆನ್ ಪಡೆಯುತ್ತಿದ್ದರು. ಆದರೆ ಈಗ ಅಲ್ಲಿಯೂ ಪೂರೈಕೆ ಕಡಿಮೆಯಾಗಿದೆ. ಪೂರೈಕೆ ಕಡಿಮೆ ಇರುವುದರಿಂದ ಬಿಟುಮೆನ್ ಬೆಲೆ ಗಗನಕ್ಕೇರಿದೆ. ಹಿಂದೆ ಒಂದು ಟನ್ ಬಿಟುಮೆನ್‌ಗೆ 45,000 ರೂ. ಇದ್ದ ದರ, ಈಗ 60,000 ರೂ.ಗೆ ಏರಿಕೆಯಾಗಿದೆ. ದರ ಏರಿಕೆಯಿಂದಾಗಿ ಗುತ್ತಿಗೆದಾರರ ವೆಚ್ಚ ವಿಪರೀತ ಹೆಚ್ಚಾಗಿದ್ದು, ಹಳೆಯ ದರದಲ್ಲಿ ಕಾಮಗಾರಿ ಮುಂದುವರಿಸುವುದು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು, (ಮಾರ್ಚ್ 25): ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಕೆಲ ಸ್ವಾರಸ್ಯಕರ ಪ್ರಸಂಗಗಳು ಜರುಗಿವೆ. ಅದರಲ್ಲೂ ಮುಖ್ಯವಾಗಿ ಡಿಕೆ ಶಿವಕುಮಾರ್ ಶಾಲ್ ಹಾಕುತ್ತಿರುವ ಬಗ್ಗೆ ಚರ್ಚೆಯಾಗಿದ್ದು, ಬಿಜೆಪಿ ಶಾಸಕ ಸುನೀಲ್ಕುಮಾರ್ ಮಧ್ಯಪ್ರವೇಶಿಸಿ, ನೀವು ಶಾಲು ಹಾಕಿದಮೇಲೆ ಮುಖ್ಯಮಂತ್ರಿ ಆಗಿದ್ದೀರಿ. ಅದಕ್ಕೆ ಡಿಕೆ ಕೂಡ ಶಾಲು ಹಾಕ್ತಿದ್ದಾರೆಂದು ಸಿದ್ದರಾಮಯ್ಯನವರ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೊದಲು ಟವೆಲ್ ಹಾಕುತ್ತಿದ್ದೆ. ಅದು ಯಾವಾಗಲೂ ಬಿದ್ದು ಹೋಗುತ್ತಿತ್ತು. ಅವತ್ತಿನಿಂದ ನಾನು ಶಾಲು ಹಾಕ್ತಿರೋದು, ಬೇರೆ ಅರ್ಥ ಬೇಡ. ನಾನು ದೇವರಿದ್ದಾನೆ ಎನ್ನುಉದನ್ನು ಒಪ್ಪುತ್ತೇನೆ. ಆದರೆ ದೇವಸ್ಥಾನದಲ್ಲಿಲ್ಲ. ಉಳ್ಳವರು ದೇವಾಲಯ ಮಾಡುವರು, ನಾನೇನು ಮಾಡಲಯ್ಯ, ಈ ಬಗ್ಗೆ ಬಸವಣ್ಣ ಅವರು ಹೇಳಿದ್ರು ಎಂದು ಬಸವಣ್ಣನ ವಚನದ ಮೂಲಕ, ಸುನೀಲ್ ಕುಮಾರ್ ಹೆ ಟಾಂಗ್ ಕೊಟ್ಟರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಧಾರವಾಡ, ಮಾರ್ಚ್ 25: ಜಿಲ್ಲೆಯಲ್ಲಿ ಮಾಜಿ ಶಾಸಕನ ಪುತ್ರನ ಹತ್ಯೆ ಪ್ರಕರಣ ಭಾರೀ ತಿರುವು ಪಡೆದಿದ್ದು, ಘಟನೆ ಪೂರ್ವನಿಯೋಜಿತ ಕೊಲೆ ಎಂಬ ಶಂಕೆ ಮತ್ತಷ್ಟು ಗಾಢವಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಅವರ ಶವ ಧಾರವಾಡ (Dharwad)ತಾಲೂಕಿನ ರಾಮಾಪುರ ಅರಣ್ಯ ಪ್ರದೇಶದಲ್ಲಿ ಕಾರಿನೊಳಗೆ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಮಂಗಳವಾರ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಮೂವರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಗೆ ಸಾಲದ ರೂಪದಲ್ಲಿ ಹಣ ನೀಡಿದ್ದ ರಾಜು
ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿರುವ ದಟ್ಟ ಅರಣ್ಯ ಪ್ರದೇಶದಲ್ಲಿ ಗುರುತು ಸಿಗದಷ್ಟು ಸ್ಥಿತಿಯಲ್ಲಿ ಸುಟ್ಟು ಕರಕಲಾದ ರಾಜುನ ಶವ ಸಿಕ್ಕಿತ್ತು. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿತ್ತು. ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆಯಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಮೃತನಿಗಿದ್ದ ಅನೈತಿಕ ಸಂಬಧದ ಹಿನ್ನೆಲೆ ಕೊಲೆ ನಡೆದಿದೆ ಎನ್ನಲಾಗಿದೆ.
ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ರಾಜು ಬೋಳಶೆಟ್ಟಿ, ದೈಹಿಕ ಸಂಪರ್ಕಕ್ಕೆ ಬಂದಾಗ ಆಕೆಗೆ ಹಣ ನೀಡುತ್ತಿದ್ದ. ಸಾಲದ ರೂಪದಲ್ಲಿಯೇ ಮಹಿಳೆಗೆ ಹಣ ನೀಡುತ್ತದ್ದ ರಾಜು, 2 ಲಕ್ಷ ರೂ. ಗೂ ಹೆಚ್ಚು ಹಣ ಕೊಟ್ಟಿದ್ದ. ಇದೇ ವಿಚಾರಕ್ಕೆ ಮಹಿಳೆ ಹಾಗೂ ರಾಜು ನಡುವೆ ಮನಸ್ತಾಪ ಆಗಿತ್ತು. ನಿನ್ನೆಯೂ ಆತ ದೈಹಿಕ ಸಂಪರ್ಕಕ್ಕಾಗಿ ಹೊಲಕ್ಕೆ ಮಹಿಳೆಯನ್ನು ಕರೆದಿದ್ದ. ಇದೇ ವೇಳೆ ಮಹಿಳೆ, ಆಕೆಯ ಮಗ ಹಾಗೂ ಆಕೆಯ ಪ್ರಿಯಕರ ಸೇರಿ ಈ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.
ರಾಜು ಬೋಳಶೆಟ್ಟಿಯ ಕಾರಿನಲ್ಲೇ ರಾಮಾಪುರ ಅರಣ್ಯಕ್ಕೆ ಆತನ ಶವವನ್ನು ತಂದ ಈ ಮೂವರು, ಹಿಂದಿನ ಸೀಟಿನಲ್ಲಿ ಶವವಿಟ್ಟು, ತಾವು ತಂದಿದ್ದ 10 ಲೀ. ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಘಟನೆ ಬಳಿಕ ಮೂವರೂ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಕೆಲವೇ ಘಂಟೆಗಳಲ್ಲಿ ಮೂವರನ್ನೂ ಸೆರೆ ಹಿಡಿಯಲಾಗಿದೆ.
ನವದೆಹಲಿ, ಮಾರ್ಚ್ 25: ಎಲ್ಪಿಜಿ ಪೂರೈಕೆಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಈಗ ಭಾರತದಲ್ಲಿ ಪರ್ಯಾಯ ವ್ಯವಸ್ಥೆ ಹೆಚ್ಚಿಸಲು ಅನಿವಾರ್ಯವಾಗಿಸಿದೆ. ಸರ್ಕಾರವು ನೈಸರ್ಗಿಕ ಅನಿಲ (Natural Gas) ಸೌಕರ್ಯಗಳಾದ ಪಿಎನ್ಜಿ ಮತ್ತು ಸಿಎನ್ಜಿ ಲಭ್ಯತೆ ಹೆಚ್ಚಿಸಲು ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಬೇಕಾದ ಸುಧಾರಣೆಗಳನ್ನು ತರುತ್ತಿದೆ. ಪಿಎನ್ಜಿ ಸೌಕರ್ಯವನ್ನು ವೇಗವಾಗಿ ಹೆಚ್ಚಿಸಲು ಈ ಸುಧಾರಣೆ ತರಲಾಗಿದೆ. ಈ ಸಂಬಂಧ ಸರ್ಕಾರವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ ಆದೇಶ 2026 ಅನ್ನು ಹೊರಡಿಸಿದೆ.
ವಿವಿಧ ಪ್ರದೇಶಗಳಿಗೆ ನ್ಯಾಚುರಲ್ ಗ್ಯಾಸ್ ಪೈಪ್ಲೈನ್ ಹಾಕಲು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟರ್ಗಳಿಗೆ ಅನೇಕ ತಡೆಗಳು, ಸಮಸ್ಯೆಗಳಿವೆ. ಭೂಮಿ ಸಿಗದೇ ಇರುವುದು, ಅನುಮೋದನೆ ದೊರಕದೇ ಇರುವುದು, ಅಧಿಕ ಶುಲ್ಕ ಇರುವುದು ಇತ್ಯಾದಿ ತಡೆಗಳನ್ನು ನಿವಾರಿಸಿ, ನ್ಯಾಚುರಲ್ ಗ್ಯಾಸ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಗೆ ಪೈಪ್ಲೈನ್ ಅಳವಡಿಸುವ ಕಾರ್ಯಗಳನ್ನು ಸುಗಮಗೊಳಿಸಲು ಸರ್ಕಾರವು ಏಕರೀತಿಯ ಒಂದು ಫ್ರೇಮ್ವರ್ಕ್ ರೂಪಿಸುವುದು ಅಗತ್ಯ ಇದೆ ಎಂದು ಪೆಟ್ರೋಲಿಯಂ ಸಚಿವಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಲ್ಪಿಜಿ ಪೂರೈಕೆಯಲ್ಲಿ ಆಗಿರುವ ವ್ಯತ್ಯಯವನ್ನು ಸರಿದೂಗಿಸಲು ಸರ್ಕಾರವು ನೈಸರ್ಗಿಕ ಅನಿಲದತ್ತ ಗಮನ ಹರಿಸಿದೆ. ನ್ಯಾಚುರಲ್ ಗ್ಯಾಸ್ಗೆ ಭಾರತವು ಗಲ್ಫ್ ರಾಷ್ಟ್ರಗಳ ಮೇಲೆ ಅವಲಂಬನೆ ಕಡಿಮೆ ಇದೆ. ಹೀಗಾಗಿ, ಎಲ್ಪಿಜಿಗೆ ಹೋಲಿಸಿದರೆ ಎಲ್ಎನ್ಜಿ ಮತ್ತು ಪಿಎನ್ಜಿ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಯವಾಗಿಲ್ಲ. ಆದರೆ, ಪಿಎನ್ಜಿ ಅಥವಾ ಪೈಪ್ಡ್ ಗ್ಯಾಸ್ ನೆಟ್ವರ್ಕ್ ಎಲ್ಲೆಡೆ ಸಾಕಷ್ಟು ಮಟ್ಟದಲ್ಲಿ ಲಭ್ಯ ಇಲ್ಲದಿರುವುದು ಪ್ರಮುಖ ಹಿನ್ನಡೆಯಾಗಿದೆ.
ಭಾರತದಲ್ಲಿ ಒಂದೂವರೆ ಕೋಟಿಗೂ ಸ್ವಲ್ಪ ಹೆಚ್ಚು ಮನೆಗಳಿಗೆ ಪಿಎನ್ಜಿ ಕನೆಕ್ಷನ್ ಇದೆ. ಹೆಚ್ಚಿನ ನಗರಗಳಲ್ಲಿ ಪಿಎನ್ಜಿ ಪೂರೈಕೆ ಇದೆಯಾದರೂ ವ್ಯಾಪಕವಾಗಿ ಪೈಪ್ಲೈನ್ ಅಳವಡಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಕೆಲ ಪ್ರದೇಶಗಳಲ್ಲಿ ಪೈಪ್ಲೈನ್ ಇದ್ದರೆ, ಮತ್ತಷ್ಟು ಪ್ರದೇಶಗಳಲ್ಲಿ ಅಳವಡಿಕೆಯೇ ಆಗಿಲ್ಲ. ಹೀಗಾಗಿ, ಹೆಚ್ಚಿನ ಮನೆಗಳಿಗೆ ಪಿಎನ್ಜಿ ಸಂಪರ್ಕವೇ ಲಭ್ಯ ಇಲ್ಲದಂತಾಗಿದೆ. ಈ ಸಮಸ್ಯೆ ನೀಗಿಸಲು ಸರ್ಕಾರ ಈ ಹೊಸ ಆದೇಶ ಹೊರಡಿಸಿದೆ.
ಈ ಆದೇಶವು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಟಿಂಗ್ ಸಂಸ್ಥೆಗಳಿಗೆ ಹೆಚ್ಚಿನ ಶಕ್ತಿ ಸಿಗಲಿದೆ. ತ್ವರಿತವಾಗಿ ಪೈಪ್ಲೈನ್ಗಳನ್ನು ಅಳವಡಿಸಲು ಸಾಧ್ಯವಾಗಬಹುದು. ಇದರಿಂದ ಜನರನ್ನು ಎಲ್ಪಿಜಿಯಿಂದ ಪಿನ್ಜಿ ಸಂಪರ್ಕಕ್ಕೆ ವರ್ಗಾಯಿಸುವುದು ಸುಲಭವಾಗುತ್ತದೆ. ಎಲ್ಪಿಜಿ ತಂದಿರುವ ಬಿಕ್ಕಟ್ಟು ಈಗ ಪಿಎನ್ಜಿ ಸೌಕರ್ಯ ಹೆಚ್ಚಿಸಲು ಅನುಕೂಲ ಮಾಡಿಕೊಟ್ಟಿದೆ.
ಬೆಂಗಳೂರು, ಮಾರ್ಚ್ 25: ಕರ್ನಾಟಕ ಬಜೆಟ್ 2026 ಮಂಡನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ರಾಹುಕಾಲ ನೋಡಿಕೊಂಡು ಸಮಯ ನಿಗದಿ ಮಾಡಿದ್ದರು ಎಂಬ ಪ್ರತಿಪಕ್ಷ ನಾಯಕರ ಟೀಕೆ ಬುಧವಾರ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ನಾಂದಿಹಾಡಿತು. ಈ ವಿಚಾರವಾಗಿ, ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದರು. ಅದಕ್ಕುತ್ತರಿಸಿದ ಸಿದ್ದರಾಮಯ್ಯ, ಅಧಿಕಾರಿಗಳು ಹಾಗೂ ಮನೆಯವರ ಮಾತು ಕೇಳಿ ರಾಹುಕಾಲ ನೋಡಿದ್ದು ನಿಜ. ಆದರೆ, ವೈಯಕ್ತಿಕವಾಗಿ ರಾಹುಕಾಲ, ಗುಳಿಕಕಾಲ ಅಥವಾ ಯಾವುದೇ ರೀತಿಯ ಗ್ರಹಣ ಕಾಲಗಳಲ್ಲಿ ನಂಬಿಕೆಯಿಲ್ಲ ಎಂದು ಹೇಳಿದರು.
ಈ ಹಿಂದೆ ಹಲವು ಬಾರಿ ರಾಹುಕಾಲದಲ್ಲೇ ಬಜೆಟ್ ಮಂಡಿಸಿದ್ದ ಉದಾಹರಣೆಗಳನ್ನೂ ಸಿದ್ದರಾಮಯ್ಯ ಅವರು ನೀಡಿದ್ದಾರೆ. ಅಲ್ಲದೆ, ‘ಯುಗಾದಿ ದಿನ ಹಾಗೂ ಶಿವರಾತ್ರಿ ದಿನ ಯಾರಾದರೂ ಮಾಂಸ ಸೇವನೆ ಮಾಡುತ್ತಾರಾ? ನಾನು ತಿನ್ನುತ್ತೇನೆ, ನನ್ನಿಷ್ಟ’ ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 25: ಶ್ರೀರಾಮನವಮಿ (Ram Navami) ಹಬ್ಬದ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ಸಾರ್ವಜನಿಕ ಸೂಚನೆಯನ್ನು ಹೊರಡಿಸಿದೆ. ಮಾರ್ಚ್ 27, ಶುಕ್ರವಾರದಂದು ನಗರಾದ್ಯಂತ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಪ್ರಾಧಿಕಾರದ ಪಶುಸಂಗೋಪನಾ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಜಿಬಿಎ ಹೊರಡಿಸಿದ ಆದೇಶದಲ್ಲೇನಿದೆ?
ಎಲ್ಲಾ ಕಸಾಯಿಖಾನೆಗಳನ್ನು ಆ ದಿನ ಮುಚ್ಚುವಂತೆ ಜಿಬಿಎ ಆದೇಶ ಹೊರಡಿಸಿದ್ದು, ಮಾಂಸ ಮಾರಾಟ ಮಾಡುವ ಅಂಗಡಿಗಳು ಹಾಗೂ ಔಟ್‌ಲೆಟ್‌ಗಳಲ್ಲಿ ಯಾವುದೇ ರೀತಿಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ ಎನ್ನಲಾಗಿದೆ. ನಗರ ವ್ಯಾಪ್ತಿಯಲ್ಲಿರುವ ಎಲ್ಲ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಬಿಎ ಆದೇಶ
ನಿಯಮ ಉಲ್ಲಂಘಿಸಿದರೆ ಕ್ರಮ!
ಹಬ್ಬದ ದಿನದ ಶಾಂತಿ, ಸೌಹಾರ್ದತೆ ಮತ್ತು ಧಾರ್ಮಿಕ ಭಾವನೆಗಳನ್ನು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.ನಗರದಲ್ಲಿ ಯಾವುದೇ ರೀತಿಯ ಅಸಭ್ಯತೆ ಅಥವಾ ಅಕ್ರಮ ನಡೆಯದಂತೆ ನಿಗಾ ವಹಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಸಹಕರಿಸಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.