ನವದೆಹಲಿ, ಮಾರ್ಚ್ 23: ನಾವು ಇಂದು ಇತಿಹಾಸದ ಒಂದು ಪ್ರಮುಖ ಘಟ್ಟದಲ್ಲಿದ್ದೇವೆ. ಇಡೀ ವಿಶ್ವವೇ ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿದೆ. ನಮ್ಮ ಭಾರತ ದೇಶಕ್ಕೂ ಇದರ ಬಿಸಿ ತಟ್ಟಿದ್ದರೂ ಸಹ ಜಗತ್ತಿನಲ್ಲಿ ಭಾರತ ಇಂದು ಧೈರ್ಯ ಮತ್ತು ಸ್ಥಿರವಾಗಿ ಎದ್ದು ನಿಂತಿದೆ ಎಂದು ಎಕ್ಸಿಕ್ಯೂಟಿವ್ ವೈಸ್ ಚೇರ್ಮನ್, ಮೈ ಹೋಂ ಗ್ರೂಪ್ ರಾಮು ರಾವ್ ಜೂಪಲ್ಲಿ ಹೇಳಿದ್ದಾರೆ. ಟಿವಿ9 ವಾರ್ಷಿಕ ಶೃಂಗಸಭೆ ‘ವಾಟ್ ಇಂಡಿಯಾ ಥಿಂಕ್ಸ್ ಟುಡೆ’ಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ವೈವಿಧ್ಯತೆಯ ಶಕ್ತಿಯನ್ನು ಹೊಂದಿದೆ. ಭಾರತವು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದು, ವಾರ್ಷಿಕವಾಗಿ ಶೇ. 7ರಷ್ಟು ಬೆಳವಣಿಗೆಯನ್ನು ಕಾಣುತ್ತಿದೆ ಎಂದಿದ್ದಾರೆ.
ಬೊಗೋಟಾ (ಕೊಲಂಬಿಯಾ), ಮಾರ್ಚ್ 23: ಕೊಲಂಬಿಯಾದಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಕೊಲಂಬಿಯಾದ ಮಿಲಿಟರಿಯ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಾಯುಪಡೆಯ ಈ ಹರ್ಕ್ಯುಲಸ್ ಸಿ -130 ವಿಮಾನವು 110 ಸೈನಿಕರನ್ನು ಹೊತ್ತೊಯ್ಯುತ್ತಿತ್ತು. ಈ ಘಟನೆಯಲ್ಲಿ ಕೊಲಂಬಿಯಾದ ವಿಮಾನದಲ್ಲಿದ್ದ ಎಲ್ಲ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಕೊಲಂಬಿಯಾದ ಮಿಲಿಟರಿ ಇನ್ನೂ ಈ ಘಟನೆಯ ಸಾವಿನ ಪ್ರಮಾಣದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 23: ಟಿವಿ9 ನೆಟ್‌ವರ್ಕ್‌ನ “ಇಂಡಿಯಾ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026” (WITT Summit 2026) ಇಂದಿನಿಂದ ದೆಹಲಿಯಲ್ಲಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಭಾರತ ಮತ್ತು ಜಗತ್ತು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಈ ಶೃಂಗಸಭೆಯಲ್ಲಿ ಅವರು ಸತತ ಮೂರನೇ ಬಾರಿಗೆ ಭಾಗವಹಿಸುತ್ತಿದ್ದಾರೆ. ಇಂದು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೈ ಹೋಮ್ ಗ್ರೂಪ್ಸ್ ಚೇರ್ಮನ್ ರಾಮೇಶ್ವರ ರಾವ್ ಜೂಪಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.
ನಾಳೆಯೂ ನಡೆಯುವ ಈ ಶೃಂಗಸಭೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಉತ್ತರಾಖಂಡದ ಸಿಎಂ ಪುಷ್ಕರ್ ಧಾಮಿ, ರಾಜಸ್ಥಾನದ ಸಿಎಂ ಭಜನ್‌ಲಾಲ್ ಶರ್ಮಾ, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಮಾನ್ ಭಾಗವಹಿಸಲಿದ್ದಾರೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭಾಷಣ ಮಾಡಲಿದ್ದಾರೆ. ಲೋಕಸಭಾ ಸದಸ್ಯರಾದ ಅಖಿಲೇಶ್ ಯಾದವ್ ಮತ್ತು ಅಸಾದುದ್ದೀನ್ ಓವೈಸಿ ಕೂಡ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸ್ಟಾರ್ ಕಲಾವಿದ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದೆ. ಕೇವಲ ಪ್ರೇಕ್ಷಕರು ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ದಿಗ್ಗಜ ನಟ, ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಈ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್’ ಎಂದು ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ‘ಧುರಂಧರ್ 2’ (Dhurandhar 2) ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಸಿನಿಮಾ ವೀಕ್ಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಜನಿಕಾಂತ್ ಅವರು ಚಿತ್ರತಂಡವನ್ನು ಭರ್ಜರಿಯಾಗಿ ಅಭಿನಂದಿಸಿದ್ದಾರೆ. ‘ವಾಟ್ ಎ ಫಿಲ್ಮ್. ಧುರಂಧರ್ 2! ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್. ರಣವೀರ್ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಇದು ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ. ಜೈ ಹಿಂದ್’ ಎಂದು ರಜನಿ ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಭಾರತದ ಸೂಪರ್‌ಸ್ಟಾರ್‌ನಿಂದ ಇಂತಹ ಮೆಚ್ಚುಗೆಯ ಮಾತುಗಳು ಬಂದಿರುವುದು ಚಿತ್ರದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ಜಿಯೋ ಸ್ಟುಡಿಯೋಸ್’ ಸಂಸ್ಥೆ ನಿರ್ಮಾಣ ಮಾಡಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ಎಲ್ಲಾ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡಿದೆ. ಮೊದಲ ವಾರಾಂತ್ಯದಲ್ಲೇ ವಿಶ್ವದಾದ್ಯಂತ ಬರೋಬ್ಬರಿ 761 ಕೋಟಿ ರೂಪಾಯಿ ಗಳಿಸುವ ಮೂಲಕ ಇದು ಭಾರತದ ಸಾರ್ವಕಾಲಿಕ ಅತಿದೊಡ್ಡ ಬ್ಲಾಕ್‌ಬಸ್ಟರ್ ಆರಂಭವನ್ನು ಪಡೆದಿದೆ.
What a film … #Dhurandhar2 !!! Aditya Dhar box office -ka baap !!! Many congratulations to Ranveer and the entire cast and crew. A must watch film for every indian. Jai hind @AdityaDharFilms@RanveerOfficial
ಭಾರತದ ಮಾರುಕಟ್ಟೆಯಲ್ಲಿ ಅತಿ ವೇಗವಾಗಿ 300 ಕೋಟಿ ರೂಪಾಯಿ ಕ್ಲಬ್ ಸೇರಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬುಕ್ ಮೈ ಶೋನಲ್ಲಿ ಒಂದು ಗಂಟೆಯಲ್ಲಿ ಅತಿ ಹೆಚ್ಚು ಟಿಕೆಟ್‌ಗಳು ಮಾರಾಟವಾದ ದಾಖಲೆಯೂ ಈ ಚಿತ್ರದ ಹೆಸರಿಗೆ ಸೇರಿದೆ. ವಿದೇಶಗಳಲ್ಲಿ ಮೊದಲ ವಾರಾಂತ್ಯದಲ್ಲಿ ಸುಮಾರು 210 ಕೋಟಿ ರೂಪಾಯಿ ಗಳಿಸಿ ಅತಿ ದೊಡ್ಡ ಓವರ್‌ಸೀಸ್ ಓಪನಿಂಗ್ ಕಂಡ ಭಾರತೀಯ ಚಿತ್ರ ಎನಿಸಿಕೊಂಡಿದೆ.
ಆದಿತ್ಯ ಧರ್ ಅವರ ನಿರ್ದೇಶನ ಮತ್ತು ರಣವೀರ್ ಸಿಂಗ್ ಅವರ ಪವರ್‌ಫುಲ್ ಅಭಿನಯದಿಂದ ಈ ಮಟ್ಟದ ಯಶಸ್ಸು ಸಿಕ್ಕಿದೆ. ದೇಶಪ್ರೇಮದ ಕಥಾಹಂದರ ಹೊಂದಿರುವ ಈ ಸಿನಿಮಾ ಈಗ ಜಾಗತಿಕ ಮಟ್ಟದಲ್ಲಿ ಭಾರತೀಯ ಚಿತ್ರರಂಗದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದೆ. ಈ ನಡುವೆ ಅನೇಕ ಸೆಲೆಬ್ರಿಟಿಗಳಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಇದೊಂದು ಪ್ರೊಪಗಾಂಡ ಸಿನಿಮಾ ಎಂಬ ಟೀಕೆ ಕೂಡ ವ್ಯಕ್ತವಾಗಿದೆ.
ನವದೆಹಲಿ, ಮಾರ್ಚ್ 23: ಇರಾನ್, ಇಸ್ರೇಲ್-ಅಮೆರಿಕದ ನಡುವೆ ಯುದ್ಧ ನಡೆಯುತ್ತಿರುವುದರಿಂದ ಅದರ ಪರಿಣಾಮಗಳನ್ನು ಬೇರೆ ದೇಶಗಳೂ ಅನುಭವಿಸುತ್ತಿವೆ. ಮಧ್ಯ ಏಷ್ಯಾದ ಈ ಸಂಘರ್ಷದ ಕುರಿತು ಇಂದು ಟಿವಿ9ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit 2026) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. “2014ರ ನೀರಸತೆಯನ್ನು ಬಿಟ್ಟು ಭಾರತವು ಹೊಸ ಆತ್ಮವಿಶ್ವಾಸದೊಂದಿಗೆ ಹೊರಹೊಮ್ಮುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಇಂದಿನ ಯುದ್ಧ ವಾತಾವರಣದವರೆಗೆ ಭಾರತೀಯರು ಪ್ರತಿ ವರ್ಷವೂ ಪರೀಕ್ಷೆಗಳನ್ನು ಎದುರಿಸುತ್ತಲೇ ಇದ್ದಾರೆ. 140 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದಿಂದ ಮಾತ್ರ ನಾವು ಪ್ರತಿಯೊಂದು ವಿಪತ್ತನ್ನು, ಸವಾಲನ್ನು ಎದುರಿಸಲು ಸಾಧ್ಯವಾಗಿದೆ. ಯುದ್ಧದ ಸಮಯದಲ್ಲೂ ಭಾರತ ಅನುಸರಿಸುತ್ತಿರುವ ತಂತ್ರಗಳು ಮತ್ತು ಆರ್ಥಿಕ ಸ್ಥಿರತೆಯಿಂದ ಜಗತ್ತು ಬೆರಗುಗೊಂಡಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಫೆಬ್ರವರಿ 28ರಿಂದ ಜಗತ್ತು ಪ್ರಕ್ಷುಬ್ಧತೆಯಿಂದ ಕೂಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದ ಯಾವುದೇ ದೇಶವು ಪ್ರಭಾವಿತವಾಗದೆ ಇರುವುದು ಅಸಾಧ್ಯ. ಯುದ್ಧಗಳು ನಮ್ಮ ಗಡಿಗಳಿಂದ ದೂರದಲ್ಲಿ ನಡೆಯುತ್ತಿದ್ದರೂ ಅವುಗಳ ಅಡ್ಡಪರಿಣಾಮಗಳನ್ನು ಪ್ರಪಂಚದಾದ್ಯಂತ ದೇಶಗಳು ಅನುಭವಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇಂತಹ ಭೀಕರ ಪರಿಸ್ಥಿತಿಯಲ್ಲೂ ಭಾರತ ತನ್ನ ಅಭಿವೃದ್ಧಿಯ ವೇಗವನ್ನು ನಿಧಾನಗೊಳಿಸಿಲ್ಲ” ಎಂದು ಅವರು ಹೆಮ್ಮೆಯಿಂದ ಘೋಷಿಸಿದರು.
“ಜಗತ್ತು ವಿಭಿನ್ನ ಬಣಗಳಾಗಿ ವಿಭಜನೆಯಾಗುತ್ತಿದ್ದರೆ ಭಾರತ ದೇಶಗಳ ನಡುವೆ ಅಭೂತಪೂರ್ವ ಸೇತುವೆಗಳನ್ನು ನಿರ್ಮಿಸುತ್ತಿದೆ. ಜಾಗತಿಕ ದಕ್ಷಿಣದಿಂದ ನಮ್ಮ ನೆರೆಹೊರೆಯವರವರೆಗೆ ಭಾರತವು ವಿಶ್ವಾಸಾರ್ಹ ಪಾಲುದಾರನಾಗಿ ಮಾರ್ಪಟ್ಟಿದೆ. ನಾವು ಶಾಂತಿ ಮತ್ತು ಸಂವಾದಕ್ಕಾಗಿ ಮಾತ್ರ ನಿಲ್ಲುತ್ತೇವೆ. ಅದು ಬಿಟ್ಟು ನಾವು ಯಾವ ದೇಶದ ಪರವಾಗಿಯೂ ಅಲ್ಲ” ಎಂದು ಮೋದಿ ವಿವರಿಸಿದರು.
“ಯುದ್ಧದ ಪರಿಣಾಮದ ಹೊರತಾಗಿಯೂ, ಭಾರತವು ತನ್ನ ಅಭಿವೃದ್ಧಿಯ ವೇಗವನ್ನು ನಿಲ್ಲಿಸಿಲ್ಲ. ಕಳೆದ 23 ದಿನಗಳಲ್ಲಿ ಸರ್ಕಾರ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಯುದ್ಧದ ನಡುವೆಯೂ ಭಾರತ ಪ್ರಗತಿಯನ್ನು ಕಾಯ್ದುಕೊಂಡಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, (ಮಾರ್ಚ್ 23): ದೆಹಲಿಯಲ್ಲಿ ನಡೆಯುತ್ತಿರುವ ಟಿವಿ9 ವಾರ್ಷಿಕ ಶೃಂಗಸಭೆ ‘ವಾಟ್ ಇಂಡಿಯಾ ಥಿಂಕ್ಸ್ ಟುಡೆ’ ಸಮಿಟ್ನಲ್ಲಿ (‘TV9 What India Thinks Today Summit- 2026’) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇದರೊಂದಿಗೆ ಪ್ರಧಾನಿ ಮೋದಿಯವರು ಟಿವಿ9ನ ನಾಲ್ಕು ಶೃಂಗಸಭೆಗಳ ಪೈಕಿ ಸತತ ಮೂರನೇ ಬಾರಿಗೆ ಟಿವಿ9 ಶೃಂಗಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುರುವುದು ವಿಶೇಷವಾಗಿದೆ. ಇನ್ನು ಈ ಟಿವಿ9 ವಾರ್ಷಿಕ ಶೃಂಗಸಭೆ ‘ವಾಟ್ ಇಂಡಿಯಾ ಥಿಂಕ್ಸ್ ಟುಡೆ’ ಸಮಿಟ್ನಲ್ಲಿ ಮೋದಿ ಮಾತನಾಡಿ, ಭಾರತದ ಆರ್ಥಿಕತೆ, ಭಾರತದ ಸಾಧನೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.
ಟೀಂ ಇಂಡಿಯಾದ ಸತತ ಎರಡನೇ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈಗ ಐಪಿಎಲ್ನತ್ತ ಮುಖಾಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಅವರನ್ನು ಮತ್ತೆ ಮೈದಾನಕ್ಕೆ ನೋಡಲು ಉತ್ಸುಕರಾಗಿದ್ದಾರೆ. ಆದಾಗ್ಯೂ, ಸೀಸನ್ ಪ್ರಾರಂಭವಾಗುವ ಮೊದಲೇ ಬುಮ್ರಾ ಎಲ್ಲರ ಕಳವಳಕ್ಕೆ ಕಾರಣರಾಗಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಐಪಿಎಲ್ ಆರಂಭವಾಗುವ ಒಂದು ವಾರಕ್ಕೂ ಮೊದಲು ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಇದ್ದಕ್ಕಿದ್ದಂತೆ ಆಗಮಿಸಿದ್ದಾರೆ. ಇದು ಬುಮ್ರಾ ಮತ್ತೆ ಗಾಯಗೊಂಡಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದರ ಜೊತೆಗೆ ಮುಂಬೈ ಇಂಡಿಯನ್ಸ್ ತಂಡ ಬುಮ್ರಾ ಇಲ್ಲದೆ ಸೀಸನ್ ಪ್ರಾರಂಭಿಸಬೇಕೇ? ಎಂಬ ಪ್ರಶ್ನೆಗಳನ್ನು ಮೂಡಿಸಿವೆ. ಏಕೆಂದರೆ ಭಾರತೀಯ ಆಟಗಾರರು ಸಾಮಾನ್ಯವಾಗಿ ಫಿಟ್ನೆಸ್ ಸಮಸ್ಯೆಗಳಿದ್ದಾಗ ಮಾತ್ರ ಸಿಒಇಗೆ ಹೋಗುತ್ತಾರೆ.
ಮುಂಬೈ ಇಂಡಿಯನ್ಸ್ ತಂಡದ ಎಲ್ಲಾ ಆಟಗಾರರು ತಯಾರಿಯಲ್ಲಿ ನಿರತರಾಗಿದ್ದರೂ, ಬುಮ್ರಾ ಇದುವರೆಗೂ ತಂಡವನ್ನು ಸೇರಿಕೊಂಡಿಲ್ಲದ ಕಾರಣ ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಪ್ರಶ್ನೆಗಳು ಏಳುತ್ತಿವೆ. ಟಿ20 ವಿಶ್ವಕಪ್ನಲ್ಲಿ ಭಾಗವಹಿಸಿದ ಬುಮ್ರಾ ಸೇರಿದಂತೆ ಎಲ್ಲಾ ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೆಚ್ಚುವರಿ ವಿರಾಮ ನೀಡಲಾಗಿದ್ದು, ಇದನ್ನು ಕೋಚ್ ಮಹೇಲಾ ಜಯವರ್ಧನೆ ಸ್ವತಃ ಘೋಷಿಸಿದ್ದಾರೆ. ಆದಾಗ್ಯೂ, ನಾಯಕ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ತಂಡವನ್ನು ಸೇರಿದ್ದರೂ, ಬುಮ್ರಾ ಪ್ರಸ್ತುತ ತಂಡದಲ್ಲಿಲ್ಲ.
32 ವರ್ಷದ ಅನುಭವಿ ವೇಗದ ಬೌಲರ್ ಬುಮ್ರಾ, ಈ ಹಿಂದೆ ಫಿಟ್ನೆಸ್ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದರಿಂದ ಬುಮ್ರಾ 2023 ರ ಐಪಿಎಲ್ನಲ್ಲಿ ಆಡಿರಲಿಲ್ಲ. ಅದಕ್ಕೂ ಮೊದಲು, ಅವರು 2022 ರ ಟಿ20 ವಿಶ್ವಕಪ್ಗೂ ತಂಡದ ಭಾಗವಾಗಿರಲಿಲ್ಲ.
ಇದಲ್ಲದೆ, ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ಸಮಯದಲ್ಲಿ ಗಾಯಗೊಂಡಿದ್ದ ಬುಮ್ರಾ ಹಲವಾರು ವಾರಗಳ ಕಾಲ ತಂಡದಿಂದ ಹೊರಗಿದ್ದರು. ಇದೀಗ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ಗೆ ಬುಮ್ರಾ ಅವರ ಹಠಾತ್ ಆಗಮನವು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂಬೈ ಇಂಡಿಯನ್ಸ್ ಮಾರ್ಚ್ 29 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ಅದಕ್ಕೂ ಮೊದಲು ಬುಮ್ರಾ ತಂಡದಲ್ಲಿ ಆಡುತ್ತಾರಾ? ಇಲ್ಲವಾ ಎಂಬುದು ಖಚಿತವಾಗಲಿದೆ.
ನವದೆಹಲಿ, (ಮಾರ್ಚ್ 23): ದೆಹಲಿಯಲ್ಲಿ ನಡೆಯುತ್ತಿರುವ ಟಿವಿ9 ವಾರ್ಷಿಕ ಶೃಂಗಸಭೆ ‘ವಾಟ್ ಇಂಡಿಯಾ ಥಿಂಕ್ಸ್ ಟುಡೆ’ ಸಮಿಟ್ನಲ್ಲಿ (‘TV9 What India Thinks Today Summit- 2026’) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇನ್ನು ಟಿವಿ9 ನೆಟ್ವರ್ಕ್ ಸಿಇಒ ಮತ್ತು ಎಂಡಿ ಬರುಣ್ ದಾಸ್ ಅವರು ಪ್ರಧಾನಿ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಇದರೊಂದಿಗೆ ಪ್ರಧಾನಿ ಮೋದಿ ಟಿವಿ9ನ ನಾಲ್ಕು ಶೃಂಗಸಭೆಗಳ ಪೈಕಿ ಸತತ ಮೂರನೇ ಬಾರಿಗೆ ಟಿವಿ9 ಶೃಂಗಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುರುವುದು ವಿಶೇಷವಾಗಿದೆ.
ಇದೇ ವೇಳೆ ಮಾತನಾಡಿದ ಬರುಣ್ ದಾಸ್, ನಾವು ಇಂದು ಅತ್ಯಂತ ಅಸ್ಥಿರವಾದ ದಿನಗಳಲ್ಲಿ ಬದುಕುತ್ತಿದ್ದೇವೆ. ಪಶ್ಚಿಮ ಏಷ್ಯಾದ ಯುದ್ಧಕ್ಕೂ ಮೊದಲು ಸುಂಕದ ಸಮರವು ವಿಶ್ವದ ಆರ್ಥಿಕತೆಯನ್ನು ನಡುಗಿಸಿತ್ತು. ಸೇನಾ ಬಲದ ಯುದ್ಧ ಒಂದಾದರೆ, ಆರ್ಥಿಕ ಯುದ್ಧ ಮತ್ತೊಂದು. ಜಗತ್ತಿನ 830 ಕೋಟಿ ಜನರು ಬಾಧಿತರಾಗಿದ್ದಾರೆ. ಈ ಜಾಗತಿಕ ಅಸ್ಥಿರತೆ ನಡುವೆ ಭಾರತ ಅಭಿವೃದ್ದಿ ಹೊಂದುತ್ತಿರುವುದು ಮಾತ್ರವಲ್ಲ, ಜಾಗತಿಕ ವ್ಯವಸ್ಥೆ ಸ್ಥಿರಗೊಳಿಸಲು ನೆರವಾಗಿದೆ ಎಂದರು.
‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shivarajkumar) ಎಂದರೆ ಅಭಿಮಾನಿಗಳಿಗೆ ಸಖತ್ ಇಷ್ಟ. ಶಿವಣ್ಣ ಕೂಡ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಾರೆ. ‘ಅಭಿಮಾನಿ ದೇವರುಗಳು’ ಎಂದು ನಂಬಿದ ಫ್ಯಾಮಿಲಿ ಅವರದ್ದು. ಆ ಮಾತಿಗೆ ಆಗಾಗ ಸಾಕ್ಷಿ ಸಿಗುತ್ತಲೇ ಇರುತ್ತದೆ. ಅಥಣಿಯಿಂದ ಶಿವಣ್ಣ ಅವರನ್ನು ನೋಡಲು ವಿಶೇಷ ಚೇತನ ಅಭಿಮಾನಿಯೊಬ್ಬರು ಬೆಂಗಳೂರಿಗೆ ಬಂದಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (DKD) ರಿಯಾಲಿಟಿ ಶೋ ಚಿತ್ರೀಕರಣದ ಸೆಟ್ನಲ್ಲಿ ಅವರನ್ನು ಭೇಟಿ ಮಾಡಲಾಗಿದೆ. ಶಿವಣ್ಣ (Shivanna) ಅವರು ವಿಶೇಷ ಚೇತನ ಅಭಿಮಾನಿಗೆ ಫೋಟೋ ನೀಡಿ, ಆರ್ಥಿಕ ಸಹಾಯ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ. ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಿ ಫೋಟೋ ತೆಗೆದುಕೊಂಡ ಆ ಅಭಿಮಾನಿ ಸಖತ್ ಖುಷಿಪಟ್ಟಿದ್ದಾರೆ.
ಹಾಸನ, ಮಾರ್ಚ್ 23: ಕೇವಲ 7 ಸಾವಿರ ರೂ ಹಣಕ್ಕಾಗಿ ಗಾಂಜಾ ಅಮಲಿನಲ್ಲಿ ಗೆಳೆಯನ್ನೇ ಹತ್ಯೆಗೈದ (kill) ಪ್ರಕರಣವನ್ನು ಬೇಧಿಸಿರುವ ಪೊಲೀಸರು ಐವರ ಹೆಡೆಮುರಿ ಕಟ್ಟಿದ್ದಾರೆ. ವರುಣ್ನ್ನ ಸಿನಿಮೀಯ ರೀತಿಯಲ್ಲಿ ಅಪಹರಿಸಿ ಕರೆತಂದು ಕೂಡಿ ಹಾಕಿ ಸ್ನೇಹಿತರ ಗ್ಯಾಂಗ್ ಹಲ್ಲೆ ಮಾಡಿ ಬಳಿಕ ಕೊಲೆಗೈದು ಎರಡು ದಿನ ಶವದ ಜೊತೆ ಕಳೆದು ಬಳಿಕ ಸುಟ್ಟು ಎಸ್ಕೇಪ್ ಆಗಿದ್ದವರ ಬೆನ್ನಟ್ಟಿದ ಪೊಲೀಸರು, ನಾಪತ್ತೆ ಕೇಸ್ನ ಮಿಸ್ಟ್ರಿಯನ್ನ ಬಯಲು ಮಾಡಿದ್ದಾರೆ. ಕೊಟ್ಟ ಸಾಲ ವಾಪಸ್ ಕೊಟ್ಟಿಲ್ಲ ಎನ್ನುವ ಒಂದೇ ಕಾರಣಕ್ಕೆ ಅಮಾನುಷವಾಗಿ ಕೊಲೆ ಮಾಡಿದವರು ಒಬ್ಬೊಬ್ಬರಾಗಿ ಪೊಲೀಸರ ಕೈಗೆ ಸಿಗುತ್ತಿದ್ದಾರೆ. ಪ್ರಮುಖ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಐವರ ಬಂಧನ
ನಿನ್ನೆ ನಡೆದಿದ್ದ ಭೀಕರ ಕೊಲೆಗೆ ಇಡೀ ಹಾಸನ ಜಿಲ್ಲೆಯೇ ಬೆಚ್ಚಿಬಿದ್ದಿತ್ತು. ಅರಸೀಕೆರೆ ತಾಲ್ಲೂಕಿನ ಕಾಡಯ್ಯನಕೊಪ್ಪಲು ಗ್ರಾಮದ ವರುಣ್(22) ನನ್ನ ಆತನ ಸ್ನೇಹಿತ ಶಶಾಂಕ್ ಹಾಗೂ ಇತರೆ 7 ಜನರು ಸೇರಿ ಮಾರ್ಚ್ 10ರಂದು ಅಪಹರಿಸಿದ್ದಾರೆ. 7 ಸಾವಿರ ರೂ ಸಾಲದ ಹಣ ಕೊಟ್ಟಿಲ್ಲ ಎಂದು ಕರೆದೊಯ್ದು ಕಿರಣ್ ಎಂಬಾತನ ತೋಟದ ಮನೆಯಲ್ಲಿಟ್ಟು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಮಾರ್ಚ್ 12ರವರೆಗೆ ಎರಡು ದಿನ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಬಳಿಕ ಮಾರ್ಚ್ 13ರ ಮುಂಜಾನೆ ಅರಸೀಕೆರೆ ತಾಲ್ಲೂಕಿನ ಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟದ ಸಮೀಪ ಶವವನ್ನು ಸಂಪೂರ್ಣವಾಗಿ ಸುಟ್ಟು ಎಸ್ಕೇಪ್ ಆಗಿದ್ದಾರೆ.
ಮಾರ್ಚ್ 10ರಿಂದ ಮಗ ಕಾಣುತ್ತಿಲ್ಲ ಎಂದು ವರುಣ್ ತಾಯಿ ಕಲಾವತಿ ಮಾರ್ಚ್ 15ರಂದು ಗಂಡಸಿ ಠಾಣೆಗೆ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಭೀಕರ ಕೊಲೆ ರಹಸ್ಯ ಬಯಲಾಗಿತ್ತು. ಮಾರ್ಚ್ 19ರಂದು ದುದ್ದಾ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಮಾಡಿಕೊಂಡು ತನಖೆ ನಡೆಸಿ ಸದ್ಯ ಸತೀಶ್, ಉಮರ್, ವಿಜಯ್, ಚೇತನ್ ಹಾಗೂ ಮನು ಎಂಬುವವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ, ಕೊಲೆಯ ಪ್ರಮುಖ ಆರೋಪಿ ಶಶಾಂಕ್ ಹಾಗೂ ಇನ್ನು ಹಲವರ ಬಂಧನಕ್ಕೆ ಬಲೆಬೀಸಲಾಗಿದೆ ಎಂದಿದ್ದಾರೆ.
ಎಸ್ಪಿ ಶುಭಾನ್ವಿತ ಹೇಳಿದ್ದಿಷ್ಟು
ವರುಣ್ನಿಂದ ಗಾಂಜಾ ಪಡೆಯಲು ಶಶಾಂಕ್ 7 ಸಾವಿರ ರೂ ಹಣ ನೀಡಿದ್ದ. ಆದರೆ ವರುಣ್ ಗಾಂಜಾ ನೀಡಿರಲಿಲ್ಲ. ಹೀಗಾಗಿ ಶಶಾಂಕ್ ತನ್ನ ಸ್ನೇಹಿತರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಶುಭಾನ್ವಿತ ಹೇಳಿದ್ದಾರೆ.
ಆರು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದರಿಂದ ಕೆಲಸಕ್ಕೆಂದು ಬೆಂಗಳೂರು ಸೇರಿಕೊಂಡಿದ್ದ ವರುಣ್, ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಯುಗಾದಿ ಹಿನ್ನೆಲೆ ತಾಯಿ ಜೊತೆಗೆ ಊರಿಗೆ ಬಂದಿದ್ದ. ಬೈಕ್ ರಿಪೇರಿ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೋದವನು ವಾಪಸ್ ಬರಲಿಲ್ಲ. ಎಲ್ಲೆಡೆ ಹುಡುಕಾಡಿದ್ದ ತಾಯಿ ಕಡೆಗೆ ನಾಪತ್ತೆ ಕೇಸ್ ನೀಡಿದ್ದರು. ಆದರೆ ಅಷ್ಟರಲ್ಲಿ ಶಶಾಂಕ್ ಗ್ಯಾಂಗ್ ವರುಣ್ ಹಾಗೂ ಆತನ ಸ್ನೇಹಿತ ಲೋಹಿತ್ನನ್ನ ಕಿಡ್ನ್ಯಾಪ್ ಮಾಡಿ ಬಳಿಕ ಕೊಂದೇ ಬಿಟ್ಟಿದ್ದಾರೆ.
ಶವದೊಂದಿಗೆ ಒಂದು ದಿನ ಕಳೆದ ಕಿರಾತಕರು
ವರುಣ್ ಶವವನ್ನು ಹಾಸನದ ಗುಡ್ಡೇಗೌಡನ ಕೊಪ್ಪಲಿನ ಶಶಾಂಕ್ ರೂಮ್ನಲ್ಲಿಟ್ಟು ಒಂದು ದಿನ ಶವ ಎಲ್ಲಿ ವಿಲೇವಾರಿ ಮಾಡುವುದು ಎಂದು ಹುಡುಕಾಡಿದ್ದಾರೆ. ಕಡೆಗೆ ದೂರದ ಅರಸೀಕೆರೆಗೆ ಕೊಂಡೊಯ್ದು ಶವ ಸಂಪೂರ್ಣ ಸುಟ್ಟು ಹೋಗುವವರೆಗೆ ಅಲ್ಲೆ ಇದ್ದು ಬಳಿಕ ಎಲ್ಲರೂ ಎಸ್ಕೇಪ್ ಆಗಿದ್ದಾರೆ. ಆದರೆ ಯಾವಾಗ ಮಿಸ್ಸಿಂಗ್ ಕೇಸ್ನಲ್ಲಿ ಸಿಕ್ಕ ಕೆಲ ಸಾಕ್ಷಿಗಳನ್ನ ವಿಚಾರಣೆ ಮಾಡಿದ ಪೊಲೀಸರಿಗೆ ಪ್ರಕರಣದಲ್ಲಿ ಬೇರೆಯ ಸುಳಿವು ಸಿಕ್ಕಿದೆ. ತಕ್ಷಣ ಅಲರ್ಟ್ ಆಗಿ ತನಿಖೆಗಿಳಿದಾಗ ಕೊಲೆ ರಹಸ್ಯ ಬಯಲಾಗಿದೆ.
ಸದ್ಯ ಐವರು ಆರೋಪಿಗಳ ಬಂಧನವಾಗಿದೆ. ಕೊಲೆ ಮಾಡಿ ಶವ ಸುಟ್ಟಿರು ಸಂಬಂಧ ಕೆಲ ಸಾಕ್ಷಿಗಳ ಸುಳಿವು ಸಿಕ್ಕಿದೆ. ಇದನ್ನೆ ಸಂಗ್ರಹ ಮಾಡಿ ತನಿಖೆ ನಡೆಸಲಾಗುತ್ತಿದೆ. ಕೊಲೆ ಎಲ್ಲಿ ಮಾಡಲಾಯ್ತು, ಕೊಲೆಗೆ ಬೇರೆ ಏನಾದರು ಕಾರಣ ಇದೆಯಾ ಎಲ್ಲವೂ ಪ್ರಮುಖ ಆರೋಪಿ ಶಶಾಂಕ್ ಬಂಧನದ ಬಳಿಕ ತಿಳಿಯಲಿದ್ದು, ಸದ್ಯ 8 ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಬೇರೆ ಯಾರಾದರೂ ಕೊಲೆಯಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ದವೂ ಕಠಿಣ ಕ್ರಮ ಎಂದು ಎಸ್ಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿ ಕೊಲೆಗೈಯಲಾಗಿದೆಯೋ, ಇಲ್ಲಾ ಗಾಂಜಾ ವ್ಯವಹಾರದ ಸಲುವಾಗಿ ಶುರುವಾದ ಕಿತ್ತಾಟ ಕೊಲೆಯಲ್ಲಿ ಕೊನೆಯಾಗಿದೆಯೋ ತನಿಖೆಯಲ್ಲೇ ಬಯಲಾಗಬೇಕಿದೆ. ಸದ್ಯ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿದ್ದಾರೆ.