Category Archives: Blog

Your blog category

ಇಂಡಿಯಾ ಪೋಸ್ಟ್‌ನಿಂದ ನೆಕ್ಸ್ಟ್-ಡೇ ಡೆಲಿವರಿ ಸೇವೆ: ಬೆಂಗಳೂರು ಸೇರಿ ಲಿಸ್ಟ್​​ನಲ್ಲಿರುವ ನಗರಗಳ ಪಟ್ಟಿ ಇಲ್ಲಿದೆ

ಇಂಡಿಯಾ ಪೋಸ್ಟ್‌ನಿಂದ ನೆಕ್ಸ್ಟ್-ಡೇ ಡೆಲಿವರಿ ಸೇವೆ: ಬೆಂಗಳೂರು ಸೇರಿ ಲಿಸ್ಟ್​​ನಲ್ಲಿರುವ ನಗರಗಳ ಪಟ್ಟಿ ಇಲ್ಲಿದೆ

ಬೆಂಗಳೂರು, ಮಾರ್ಚ್​​ 16: ಪಾರ್ಸೆಲ್‌ಗಳು, ಕಾನ್ಸೈನ್‌ಮೆಂಟ್‌ಗಳು ಮತ್ತು ಇತರ ಅಂಚೆ ವಸ್ತುಗಳನ್ನು 24 ಗಂಟೆಗಳೊಳಗೆ ತಲುಪಿಸುವ ಹೊಸ ಎಕ್ಸ್‌ಪ್ರೆಸ್ ಸೇವೆಯನ್ನು ಆರಂಭಿಸಲು ಇಂಡಿಯಾ ಪೋಸ್ಟ್ ಸಿದ್ಧವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ’24 ಸ್ಪೀಡ್ ಪೋಸ್ಟ್’ ಎಂಬ ಈ ಹೊಸ ಸೇವೆಯನ್ನು ಮಾರ್ಚ್ 17ರಿಂದ (ನಾಳೆ) ಆರಂಭಿಸಲಾಗುತ್ತಿದ್ದು, ತುರ್ತು ಹಾಗೂ ಸಮಯಕ್ಕೆ ತಲುಪಬೇಕಾದ ಪಾರ್ಸೆಲ್‌ಗಳಿಗೆ ಮರುದಿನವೇ ಗ್ಯಾರಂಟಿ ಡೆಲಿವರಿ ನೀಡಲಾಗುತ್ತದೆ ಎಂದು ತಿಳಿಸಿದೆ.

ಈ ಸೇವೆಯನ್ನು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಹಾಗೂ ರಾಜ್ಯ ಸಚಿವ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ನವದೆಹಲಿಯ ಆಕಾಶವಾಣಿ ಭವನದ ರಂಗ ಭವನ ಸಭಾಂಗಣದಲ್ಲಿ ಮಧ್ಯಾಹ್ನ 12:30ಕ್ಕೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಸೇವೆಯ ವಿಶೇಷತೆಗಳು

‘24 ಸ್ಪೀಡ್ ಪೋಸ್ಟ್’ ಸೇವೆ ಮೂಲಕ ಪ್ರಮುಖ ಮಹಾನಗರಗಳಲ್ಲಿ ಮುಂದಿನ ದಿನವೇ (Next-Day) ಖಚಿತ ಡೆಲಿವರಿ ಸೌಲಭ್ಯ ಲಭ್ಯವಾಗಲಿದೆ. ಇದಲ್ಲದೆ OTP ಆಧಾರಿತ ಸುರಕ್ಷಿತ ಡೆಲಿವರಿ, ಎಂಡ್-ಟು-ಎಂಡ್ ಟ್ರ್ಯಾಕಿಂಗ್ ವ್ಯವಸ್ಥೆ, SMS ಅಲರ್ಟ್ ಮೂಲಕ ಪಾರ್ಸೆಲ್ ಸ್ಥಿತಿ ಮಾಹಿತಿ ಸೇರಿ ಹಲವು ಸೌಲಭ್ಯಗಳು ದೊರೆಯಲಿವೆ.

ಯಾವ್ಯಾವ ನಗರಗಳಲ್ಲಿ ಸೇವೆ ಲಭ್ಯ?

ಮೊದಲ ಹಂತದಲ್ಲಿ ಈ ಸೇವೆ ದೇಶದ ಆರು ಪ್ರಮುಖ ಮಹಾನಗರಗಳಲ್ಲಿ ಲಭ್ಯವಾಗಲಿದೆ. ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್​​ನಲ್ಲಿ ಸೇವೆ ಶುರುವಾಗಲಿದೆ. ಇದರ ಜೊತೆಗೆ D+1 ದಿನದಲ್ಲಿ ತಲುಪುವ ‘24 ಸ್ಪೀಡ್ ಪೋಸ್ಟ್’ ಹಾಗೂ D+2 ದಿನಗಳಲ್ಲಿ ತಲುಪುವ ‘48 ಸ್ಪೀಡ್ ಪೋಸ್ಟ್’ ಸೇವೆಗಳನ್ನೂ ಆರಂಭಿಸಲಾಗುತ್ತದೆ. ಇದಕ್ಕಾಗಿ ವಿಶೇಷ ಪ್ರೊಸೆಸಿಂಗ್ ವಿಂಡೋಗಳು ಮತ್ತು ಆದ್ಯತೆಯ ಏರ್ ಟ್ರಾನ್ಸ್‌ಪೋರ್ಟ್ ವ್ಯವಸ್ಥೆ ಇರಲಿದೆ.

ಮನಿ-ಬ್ಯಾಕ್ ಗ್ಯಾರಂಟಿ ಸೌಲಭ್ಯ

ಡೆಲಿವರಿ ತಡವಾದರೆ ಮನಿ-ಬ್ಯಾಕ್ ಗ್ಯಾರಂಟಿ ಸೌಲಭ್ಯವೂ ಇರಲಿದೆ. ಅಂಚೆ ಇಲಾಖೆಯನ್ನು ದೇಶದ ಪ್ರಮುಖ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ರೂಪಿಸುವ ನಿಟ್ಟಿನಲ್ಲಿ, ಪಾರ್ಸೆಲ್ ಪ್ರೊಸೆಸಿಂಗ್ ಮತ್ತು ಡೆಲಿವರಿ ವ್ಯವಸ್ಥೆಯನ್ನು ಆಧುನಿಕಗೊಳಿಸಲಾಗಿದೆ. ದೇಶದಾದ್ಯಂತ ವೇಗ, ವಿಶ್ವಾಸಾರ್ಹತೆ ಹಾಗೂ ಗ್ರಾಹಕ ಅನುಭವವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೋಮಾದಿಂದ ಹೊರಬರುವ ಸಮಯ ಪ್ರತಿಯೊಬ್ಬರಲ್ಲಿಯೂ ಭಿನ್ನವಾಗಿರುವುದಕ್ಕೆ ಕಾರಣವೇನು?

ಕೋಮಾ ಒಂದು ಗಂಭೀರ ವೈದ್ಯಕೀಯ ಸ್ಥಿತಿ ಆಗಿದ್ದು, ಇದು ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ನಿಮಗೆ ತಿಳಿದಿರಬಹುದು ಕೋಮಾ (Coma) ಎಂದರೆ ವ್ಯಕ್ತಿ ದೀರ್ಘಕಾಲದ ವರೆಗೆ ಅಚೇತನ ಸ್ಥಿತಿಯಲ್ಲಿ ಇರುವ ಗಂಭೀರ ಆರೋಗ್ಯ ಪರಿಸ್ಥಿತಿ. ಈ ಸಂದರ್ಭದಲ್ಲಿ ವ್ಯಕ್ತಿ ಸುತ್ತಮುತ್ತ ನಡೆಯುತ್ತಿರುವ ಘಟನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ವ್ಯಕ್ತಿ ಎಚ್ಚರಗೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಸಾಮಾನ್ಯವಾಗಿ ಮಾತನಾಡಲು ಅಥವಾ ಚಲಿಸಲು ಸಾಧ್ಯವಾಗುವುದಿಲ್ಲ. ಆದರೆ ನೀವು ಎಂದಾದರೂ ಗಮನಿಸಿದ್ದೀರಾ, ಕೋಮಾದಿಂದ ಹೊರಬರುವ ಸಮಯ ಏಕೆ ಪ್ರತಿ ರೋಗಿಯಲ್ಲೂ ವಿಭಿನ್ನವಾಗಿರುತ್ತದೆ. ಪ್ರತಿಯೊಬ್ಬರೂ ಕೂಡ ಈ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ಸಾಮಾನ್ಯವಾಗಿ ಮೆದುಳಿಗೆ ಗಂಭೀರ ಗಾಯವಾಗುವುದು, ಬ್ರೇನ್ ಸ್ಟ್ರೋಕ್, ಆಮ್ಲಜನಕದ ಕೊರತೆ, ಸೋಂಕು, ಮದ್ಯ ಅಥವಾ ಔಷಧಿಗಳ ಅತಿಯಾದ ಸೇವನೆ ಅಥವಾ ಗಂಭೀರ ಕಾಯಿಲೆಗಳ ಕಾರಣದಿಂದ ಕೋಮಾ ಉಂಟಾಗಬಹುದು. ಮೆದುಳಿಗೆ ಬೇಕಾದಷ್ಟು ಆಮ್ಲಜನಕ ಅಥವಾ ರಕ್ತ ದೊರೆಯದಾಗ ಅದರ ಸಾಮಾನ್ಯ ಕಾರ್ಯಗಳು ಅಸ್ತವ್ಯಸ್ತವಾಗುತ್ತವೆ ಮತ್ತು ವ್ಯಕ್ತಿ ಕೋಮಾ ಸ್ಥಿತಿಗೆ ಹೋಗುವ ಸಾಧ್ಯತೆ ಇರುತ್ತದೆ. ಕೋಮಾ ಸ್ಥಿತಿಯಲ್ಲಿ ರೋಗಿಗೆ ಆಹಾರ, ಉಸಿರಾಟ ಹಾಗೂ ದೇಹದ ಇತರ ಕ್ರಿಯೆಗಳನ್ನು ನಿರ್ವಹಿಸಲು ವೈದ್ಯಕೀಯ ಸಹಾಯ ಅಗತ್ಯವಾಗಬಹುದು. ಕೆಲವೊಮ್ಮೆ ರೋಗಿಗೆ ಸುತ್ತಮುತ್ತಲಿನ ಧ್ವನಿಗಳು ಕೇಳಿಸಬಹುದು, ಆದರೆ ನೀಡಲು ಸಾಧ್ಯವಾಗುವುದಿಲ್ಲ. ಈ ಸ್ಥಿತಿ ಕೆಲವೇ ದಿನಗಳ ಕಾಲ ಇರಬಹುದು ಅಥವಾ ಕೆಲವೊಮ್ಮೆ ಬಹಳ ವರ್ಷಗಳ ಕಾಲ ಮುಂದುವರಿಯಬಹುದು. ಆದ್ದರಿಂದ ಕೋಮಾವನ್ನು ಗಂಭೀರ ವೈದ್ಯಕೀಯ ತುರ್ತು ಪರಿಸ್ಥಿತಿಯೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಹರೀಶ್ ರಾಣಾ ಪ್ರಕರಣದ ಬೆನ್ನಲ್ಲೇ ಹೊಸ ಚರ್ಚೆ: ಕೋಮಾ ಮತ್ತು ಬ್ರೈನ್ ಡೆಡ್ಗೂ ಏನೆಲ್ಲಾ ವ್ಯತ್ಯಾಸ?

ಕೋಮಾದಿಂದ ಹೊರಬರುವ ಸಮಯ ಏಕೆ ವಿಭಿನ್ನವಾಗಿರುತ್ತದೆ?

ದೆಹಲಿ ಜಿಬಿ ಪಂತ್ ಆಸ್ಪತ್ರೆಯ ನ್ಯೂರೋಸರ್ಜರಿ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ದಲ್ಜೀತ್ ಸಿಂಗ್ ಅವರು ಹೇಳುವ ಪ್ರಕಾರ, ಕೋಮಾದಿಂದ ಹೊರಬರುವ ಅವಧಿ ಪ್ರತಿ ರೋಗಿಯಲ್ಲೂ ವಿಭಿನ್ನವಾಗಿರುತ್ತದೆ. ಇದು ಮೆದುಳಿಗೆ ಎಷ್ಟರ ಮಟ್ಟಿಗೆ ಹಾನಿಯಾಗಿದೆ ಮತ್ತು ಕೋಮಾ ಯಾವ ಕಾರಣದಿಂದ ಉಂಟಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಮೆದುಳಿಗೆ ಸ್ವಲ್ಪ ಮಟ್ಟಿನ ಹಾನಿಯಾಗಿದ್ದು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತಿದ್ದರೆ, ರೋಗಿ ಕೆಲವೇ ಕೆಲವು ದಿನಗಳಲ್ಲಿ ಅಥವಾ ವಾರಗಳಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಮೆದುಳಿಗೆ ಗಂಭೀರ ಗಾಯವಾಗಿದ್ದರೆ ಅಥವಾ ದೀರ್ಘಕಾಲ ಆಮ್ಲಜನಕದ ಕೊರತೆ ಉಂಟಾಗಿದ್ದರೆ, ಚೇತರಿಕೆ ಪಡೆಯಲು ಹೆಚ್ಚು ಸಮಯ ಬೇಕಾಗಬಹುದು. ರೋಗಿಯ ವಯಸ್ಸು, ದೇಹದ ಸ್ಥಿತಿ ಮತ್ತು ಈಗಾಗಲೇ ಇರುವ ಕಾಯಿಲೆಗಳೂ ಕೂಡ ಪ್ರಮುಖ ಪಾತ್ರವಹಿಸುತ್ತವೆ. ಕೆಲವೊಮ್ಮೆ ರೋಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಾನೆ ಮತ್ತು ಕಾಲಕ್ರಮೇಣ ಅವನ ಪ್ರತಿಕ್ರಿಯೆಗಳು ಸುಧಾರಿಸುತ್ತವೆ. ಆದ್ದರಿಂದ ಕೋಮಾದಿಂದ ಹೊರಬರುವ ಅವಧಿ ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿರುತ್ತದೆ.

ಚಿಕಿತ್ಸೆ ಮತ್ತು ಆರೈಕೆ ಅತ್ಯಂತ ಮುಖ್ಯ

ಕೋಮಾ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಮತ್ತು ನಿರಂತರ ಆರೈಕೆ ಅತ್ಯಂತ ಅಗತ್ಯವಾಗಿದೆ. ವೈದ್ಯರು ಮೊದಲಿಗೆ ಕೋಮಾ ಯಾವ ಕಾರಣದಿಂದ ಉಂಟಾಗಿದೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಾರೆ ಮತ್ತು ಅದರ ಆಧಾರದ ಮೇಲೆ ಚಿಕಿತ್ಸೆ ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ರೋಗಿಗೆ ವೆಂಟಿಲೇಟರ್ ಅಥವಾ ಇತರ ಲೈಫ್ ಸಪೋರ್ಟ್ ವ್ಯವಸ್ಥೆಗಳ ಅಗತ್ಯವಾಗಬಹುದು. ಜೊತೆಗೆ ದೇಹದ ಪ್ರಮುಖ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಔಷಧಿಗಳು ಮತ್ತು ವಿಶೇಷ ಚಿಕಿತ್ಸೆಯನ್ನು ನೀಡಲಾಗುತ್ತದೆ. ರೋಗಿಯ ನಿಯಮಿತ ಪರೀಕ್ಷೆ, ಸರಿಯಾದ ಪೌಷ್ಟಿಕ ಆಹಾರ ಮತ್ತು ಸ್ವಚ್ಛತೆ ಕೂಡ ಬಹಳ ಮುಖ್ಯವಾಗಿವೆ. ಕುಟುಂಬ ಸದಸ್ಯರು ಮತ್ತು ವೈದ್ಯಕೀಯ ತಂಡದ ಉತ್ತಮ ಆರೈಕೆಯಿಂದ ರೋಗಿಯ ಸ್ಥಿತಿಯಲ್ಲಿ ನಿಧಾನವಾಗಿ ಸುಧಾರಣೆ ಕಂಡುಬರುವ ಸಾಧ್ಯತೆ ಹೆಚ್ಚುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು

ಕಾರವಾರ, (ಮಾರ್ಚ್ 16): ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಪವಾಡ ಸದೃಶ್ಯವಾಗಿ ಬದುಕುಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಸ್ತೂರ ಬಾ ನಗರದಲ್ಲಿ ನಡೆದಿದೆ. ಕಸ್ತೂರ ಬಾ ನಗರದ ಬಾಲೆ ಭುವಿ(2) ಬದಕುಳಿದ ಮಗು. ಆಟವಾಡುತ್ತ ಭುವಿ ಏಕಾಏಕಿ ನಾಪತ್ತೆಯಾಗಿದ್ದ. ಇದರಿಂದ ಆತಂಕಗೊಂಡು ಮನೆ ಸುತ್ತಮುತ್ತ ಹುಡುಕಿದರೂ ಪತ್ತೆಯಾಗಿಲ್ಲ. ಕೊನೆಗೆ ಮನೆಯ ಮುಂದಿನ ಬಾವಿಯಲ್ಲಿ ನೋಡಿದಾಗ ಮಗು ಅಳುವ ಶಬ್ದ ಕೇಳಿದೆ. ಕೂಡಲೇ ಬ್ಯಾಟರಿ ಬಿಟ್ಟು ನೋಡಿದಾಗ ಮಗು ಬಾವಿಯೊಳಗೆ ಪೈಪ್​​​ಗೆ ಸಿಲುಕಿರುವುದು ಕಂಡುಬಂದಿದ್ದು, ತಕ್ಷಣವೇ ಪಯ್ಯ ಚವಟಿ ಎಂಬ ವ್ಯಕ್ತಿ ಬಾವಿಗೆ ಇಳಿದು ಮಗುವನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಿಂದೆ ನಿಂತಿದ್ದ ನಟನ ಕಂಡು ಶ್ರೀಲೀಲಾ ಗರಂ? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ

ನಟ ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ‘ಉಸ್ತಾದ್ ಭಗತ್ ಸಿಂಗ್’ (Ustaad Bhagat Singh) ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಹರೀಶ್ ಶಂಕರ್ ನಿರ್ದೇಶನದ ಈ ಸಿನಿಮಾ ಮಾರ್ಚ್ 19ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ. ಈ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಬಹಳ ವೈಭವದಿಂದ ನಡೆಯಿತು. ಅದರಲ್ಲಿ ನಟಿ ಶ್ರೀಲೀಲಾ ಕೂಡ ಭಾಗಿ ಆಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಶ್ರೀಲೀಲಾ (Sreeleela) ಅವರ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅದರ ಅಸಲಿ ವಿಷಯ ಏನು ಎಂಬುದು ಈಗ ಬಹಿರಂಗ ಆಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ? ಕಾರ್ಯಕ್ರಮದ ವೇಳೆ ಶ್ರೀಲೀಲಾ ಅವರು ತಮ್ಮ ಹಿಂದೆ ನಿಂತಿದ್ದ ನಟ ಮಹೇಶ್ ಆಚಂಟ ಕಡೆಗೆ ಅಸಮಾಧಾನದಿಂದ ತಿರುಗಿ ನೋಡಿದರು. ಶ್ರೀಲೀಲಾ ತಿರುಗಿ ನೋಡಿದಾಗ ಮಹೇಶ್ ಅವರು ಮೊದಲು ನಗುತ್ತಾ ನಿಂತಿದ್ದರೂ, ಕೂಡಲೇ ಮೌನಕ್ಕೆ ಶರಣಾದರು. ಇದನ್ನು ಗಮನಿಸಿದ ನೆಟ್ಟಿಗರು, ‘ಶ್ರೀಲೀಲಾ ಯಾಕೆ ಅಷ್ಟು ಕೋಪ ಮಾಡಿಕೊಂಡರು? ಇಬ್ಬರ ನಡುವೆ ಏನೋ ನಡೆದಿದೆ’ ಎಂದು ನಾನಾ ರೀತಿಯ ಕಥೆಗಳನ್ನು ಕಟ್ಟಲು ಆರಂಭಿಸಿದರು.

ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ರೀತಿಯ ವದಂತಿಗಳು ಹರಿದಾಡಿದ್ದವು. ಪವನ್ ಕಲ್ಯಾಣ್ ಅವರು ವೇದಿಕೆಯ ಮೇಲೆ ಗಂಭೀರವಾಗಿ ಭಾಷಣ ಮಾಡುತ್ತಿದ್ದಾಗ, ಮಹೇಶ್ ಆಚಂಟ ಅವರು ಫೋನ್‌ನಲ್ಲಿ ಸೌಂಡ್ ಇಟ್ಟುಕೊಂಡು ವಿಡಿಯೋ ನೋಡುತ್ತಿದ್ದರು. ಅದಕ್ಕೆ ಶ್ರೀಲೀಲಾ ಕೋಪಗೊಂಡರು ಎಂಬುದು ಕೆಲವರ ವಾದ. ಶ್ರೀಲೀಲಾ ಅವರ ಫೋನ್ ಮಹೇಶ್ ಬಳಿ ಇತ್ತು, ಅದನ್ನು ಚೆಕ್ ಮಾಡಲು ಅವರು ಹಿಂದೆ ತಿರುಗಿದ್ದರು ಎಂಬುದು ಇನ್ನು ಕೆಲವರ ಅಭಿಪ್ರಾಯ.

ಈ ಎಲ್ಲ ಅಂತೆ-ಕಂತೆಗಳಿಗೆ ಈಗ ಸ್ವತಃ ಮಹೇಶ್ ಆಚಂಟ ಅವರೇ ತೆರೆ ಎಳೆದಿದ್ದಾರೆ. ಗೊಂದಲಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆ ವೈರಲ್ ವಿಡಿಯೋವನ್ನು ಹಂಚಿಕೊಂಡಿರುವ ಅವರು ಅಸಲಿ ವಿಷಯವನ್ನು ಬಯಲು ಮಾಡಿದ್ದಾರೆ. ಅವರ ಸ್ಪಷ್ಟನೆಯೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

ಇದನ್ನೂ ಓದಿ: ಪವನ್ ಕಲ್ಯಾಣ್ ಅನುಪಸ್ಥಿತಿಯಲ್ಲಿ ಪ್ರಚಾರದ ಜವಾಬ್ದಾರಿ ಹೊತ್ತ ಶ್ರೀಲೀಲಾ

‘ಶ್ರೀಲೀಲಾ ಅವರ ಫೋನ್ ನನ್ನ ಬಳಿ ಇತ್ತು. ಅವರು ಹಿಂದೆ ತಿರುಗಿದಾಗ ಫೋನ್‌ಗಾಗಿ ತಿರುಗಿ ನೋಡಿರಬಹುದು ಎಂದು ನಾನು ಭಾವಿಸಿದೆ. ಆದರೆ ವಾಸ್ತವದಲ್ಲಿ ಅವರು ನಮ್ಮ ಹಿಂದೆ ಇದ್ದ ದೊಡ್ಡ ಸ್ಕ್ರೀನ್ ನೋಡಲು ತಿರುಗಿದ್ದರು ಅಷ್ಟೇ. ಅಲ್ಲಿ ಯಾವುದೇ ಗಂಭೀರ ಘಟನೆ ನಡೆದಿಲ್ಲ ಮತ್ತು ಅವರು ಯಾರಿಗೂ ಅವಮಾನ ಮಾಡಿಲ್ಲ. ದಯವಿಟ್ಟು ವದಂತಿಗಳನ್ನು ನಂಬಬೇಡಿ’ ಎಂದು ಮಹೇಶ್ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಯುದ್ಧದ ನಡುವೆಯೂ ಅರ್ಮೇನಿಯಾ ಮೂಲಕ ಇರಾನ್​ನಿಂದ 550 ಭಾರತೀಯರ ಸ್ಥಳಾಂತರ

ನವದೆಹಲಿ, ಮಾರ್ಚ್ 16: ಇರಾನ್​ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸಾಕಷ್ಟು ಪ್ರಯತ್ನಗಳನ್ನು ನಡೆಸಿತ್ತು. ಅದಕ್ಕಾಗಿ ಅಲ್ಲಿನ ರಾಯಭಾರ ಕಚೇರಿ ಸಹಾಯವಾಣಿ, ನಿಯಂತ್ರಣ ಕೊಠಡಿಯನ್ನು ಕೂಡ ತೆರೆದಿತ್ತು. ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್​ನ ದಾಳಿ ಮುಂದುವರೆದಿರುವುದರಿಂದ ಅರ್ಮೇನಿಯಾ ಮೂಲಕ 550 ಭಾರತೀಯರು ಇರಾನ್​ನ ಗಡಿ ದಾಟಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಭೂ ಗಡಿಯ ಮೂಲಕ ಭಾರತೀಯರ ಸ್ಥಳಾಂತರಕ್ಕೆ ಅವಕಾಶ ನೀಡಿದ ಅರ್ಮೇನಿಯಾ ಸರ್ಕಾರಕ್ಕೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಧನ್ಯವಾದ ತಿಳಿಸಿದ್ದಾರೆ.

“ಇರಾನ್‌ನಿಂದ ಇಲ್ಲಿಯವರೆಗೆ 550ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಅರ್ಮೇನಿಯಾ ಸರ್ಕಾರ ಮತ್ತು ಅರ್ಮೇನಿಯಾದ ಜನರಿಗೆ ಧನ್ಯವಾದಗಳು. ಈ ಸವಾಲಿನ ಸಮಯದಲ್ಲಿ ನೀವು ನೀಡಿದ ಬೆಂಬಲವನ್ನು ಮರೆಯಲಾಗದು” ಎಂದು ಸಚಿವ ಎಸ್. ಜೈಶಂಕರ್ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ನಾವು ಕೇಳಿದರೂ ಇರಾನ್ ಒಪ್ಪಂದಕ್ಕೆ ಸಿದ್ಧವಿಲ್ಲ; ಯುದ್ಧ ನಿಲ್ಲಿಸುವ ಬಗ್ಗೆ ಟ್ರಂಪ್ ಪ್ರತಿಕ್ರಿಯೆ

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳಾಂತರಿಸುವಿಕೆಯನ್ನು ಸಂಘಟಿಸಿತು. ಅದು ಭೂ ಗಡಿಗಳಲ್ಲಿ ವೀಸಾ ಮತ್ತು ವಲಸೆ ಔಪಚಾರಿಕತೆಗಳೊಂದಿಗೆ ನಾಗರಿಕರಿಗೆ ಸಹಾಯ ಮಾಡಿತು. ಅರ್ಮೇನಿಯಾಕ್ಕೆ ದಾಟಿದವರಲ್ಲದೆ ಸುಮಾರು 90 ಭಾರತೀಯ ಪ್ರಜೆಗಳು ರಾಯಭಾರ ಕಚೇರಿಯ ಸಹಾಯದೊಂದಿಗೆ ಇರಾನ್‌ನಿಂದ ಅಜೆರ್ಬೈಜಾನ್‌ ಗಡಿಯೊಳಗೆ ಪ್ರವೇಶಿಸಿದ್ದಾರೆ ಎಂದಿದ್ದಾರೆ.

ಅರ್ಮೇನಿಯಾಕ್ಕೆ ದಾಟಿದ 550 ಸ್ಥಳಾಂತರಿಸುವವರಲ್ಲಿ 284 ಮಂದಿ ಧಾರ್ಮಿಕ ಉದ್ದೇಶಗಳಿಗಾಗಿ ಇರಾನ್‌ಗೆ ಪ್ರಯಾಣಿಸಿದ ಯಾತ್ರಿಕರು ಎಂದು ಜೈಸ್ವಾಲ್ ಹೇಳಿದ್ದಾರೆ. ಅವರಲ್ಲಿ ಕೆಲವರು ಈಗಾಗಲೇ ಭಾರತಕ್ಕೆ ಮರಳಿದ್ದರೆ, ಇನ್ನು ಕೆಲವರು ಮುಂಬರುವ ದಿನಗಳಲ್ಲಿ ವಿಮಾನದಲ್ಲಿ ಮರಳುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು, ನಾವಿಕರು, ಉದ್ಯಮಿಗಳು, ವೃತ್ತಿಪರರು ಮತ್ತು ಯಾತ್ರಿಕರು ಸೇರಿದಂತೆ ಸುಮಾರು 9,000 ಭಾರತೀಯ ಪ್ರಜೆಗಳು ಪ್ರಸ್ತುತ ಇರಾನ್‌ನಲ್ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಈ ಹಿಂದೆ ಹೇಳಿತ್ತು. ಭಾರತಕ್ಕೆ ತಮ್ಮ ಮುಂದಿನ ಪ್ರಯಾಣವನ್ನು ಸುಗಮಗೊಳಿಸಲು ದೇಶವನ್ನು ತೊರೆಯಲು ಬಯಸುವವರಿಗೆ ಅರ್ಮೇನಿಯಾ ಅಥವಾ ಅಜೆರ್ಬೈಜಾನ್‌ಗೆ ಪ್ರಯಾಣಿಸಲು ಭಾರತ ಇರಾನ್​ನಲ್ಲಿರುವ ಭಾರತೀಯರಿಗೆ ಸಲಹೆ ನೀಡುತ್ತಿದೆ.

ಇದನ್ನೂ ಓದಿ: ಇರಾನ್ ಸುಪ್ರೀಂ ನಾಯಕ ಖಮೇನಿ ಬಳಸುತ್ತಿದ್ದ ವಿಮಾನವನ್ನು ಧ್ವಂಸ ಮಾಡಿದ ಇಸ್ರೇಲ್

ಹಾಗೇ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ ಗಲ್ಫ್ ಪ್ರದೇಶದಿಂದ ಸುಮಾರು 20,000 ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ವಾಯುಪ್ರದೇಶದ ನಿರ್ಬಂಧಗಳ ಹೊರತಾಗಿಯೂ ಈ ಪ್ರದೇಶದ ಹಲವಾರು ದೇಶಗಳ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದೊಂದಿಗೆ ಭಾರತದ ಟ್ರೇಡ್ ಡೀಲ್ ಯಾವಾಗ? ಹೊಸ ಟ್ಯಾರಿಫ್ ಫ್ರೇಮ್​ವರ್ಕ್​ಗೆ ಕಾಯುತ್ತಿದೆ ಭಾರತ

ನವದೆಹಲಿ, ಮಾರ್ಚ್ 16: ಅಮೆರಿಕದಿಂದ ಹೊಸ ಟ್ಯಾರಿಫ್ ಫ್ರೇಮ್​ವರ್ಕ್ (Tariffs framework) ಸ್ಪಷ್ಟವಾದ ಬಳಿಕವಷ್ಟೇ ಭಾರತದಿಂದ ಟ್ರೇಡ್ ಡೀಲ್​ಗೆ ಸಹಿ ಹಾಕಲಾಗುತ್ತದೆ ಎಂದು ಸರ್ಕಾರದಿಂದ ಸ್ಪಷ್ಟನೆ ಬಂದಿದೆ. ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಎರಡೂ ದೇಶಗಳ ಮಧ್ಯೆ ವ್ಯಾಪಾರ ಒಪ್ಪಂದಕ್ಕೆ ಮಾತುಕತೆಗಳು ಇನ್ನೂ ಚಾಲನೆಯಲ್ಲಿರುವ ಸಂಗತಿಯನ್ನು ತಿಳಿಸಿದ್ದಾರೆ.

ಅಮೆರಿಕದೊಂದಿಗೆ ಒಪ್ಪಂದದ ವಿವರಗಳ ಬಗ್ಗೆ ಮಾತನಾಡುತ್ತಿದ್ದೇವೆ. ಹೊಸ ಟ್ಯಾರಿಫ್ ಚೌಕಟ್ಟು ಜಾರಿಗೆ ಬಂದ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ ಎಂದು ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ. ವಾಣಿಜ್ಯ ಕಾರ್ಯದರ್ಶಿಗಳು ಟ್ರೇಡ್ ಡೀಲ್ ಸಂಬಂಧ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿರುವ ತಂಡದ ನೇತೃತ್ವ ವಹಿಸಿದ್ದಾರೆ.

ಇದನ್ನೂ ಓದಿ: ಏಪ್ರಿಲ್ 1ರಿಂದ ಫಾಸ್​ಟ್ಯಾಗ್ ವಾರ್ಷಿಕ ಪಾಸ್ ಶುಲ್ಕದಲ್ಲಿ ಏರಿಕೆ; ಇಲ್ಲಿದೆ ಹೊಸ ದರ

ಕಳೆದ ತಿಂಗಳು (ಫೆಬ್ರುವರಿ) ಭಾರತ ಮತ್ತು ಅಮೆರಿಕ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದದ ಫ್ರೇಮ್​ವರ್ಕ್ ಸಿದ್ಧವಾಗಿತ್ತು. ಈ ತಿಂಗಳೇ (ಮಾರ್ಚ್) ಅದಕ್ಕೆ ಸಹಿ ಹಾಕುವ ನಿರೀಕ್ಷೆ ಇತ್ತು. ಆದರೆ, ಆ ಮಧ್ಯೆ ಅಮೆರಿಕದ ಸುಪ್ರೀಂಕೋರ್ಟ್ ಟ್ಯಾರಿಫ್ ಕ್ರಮವನ್ನು ರದ್ದುಗೊಳಿಸಿ ತೀರ್ಪು ಕೊಟ್ಟಿದ್ದು ಇತ್ಯಾದಿ ವಿದ್ಯಮಾನಗಳಿಂದ ವ್ಯಾಪಾರ ನೀತಿಯಲ್ಲಿ ಏರುಪೇರಾಗಿದೆ. ಹೀಗಾಗಿ, ಮಧ್ಯಂತರ ವ್ಯಾಪಾರ ಒಪ್ಪಂದ ಏರ್ಪಡದೆ ಸ್ಥಗಿತಗೊಂಡಿದೆ.

ವ್ಯಾಪಾರ ಒಪ್ಪಂದದ ಕಾನೂನು ಅಂಶ ಅಥವಾ ನಿಯಮವನ್ನು ಅಂತಿಮಗೊಳಿಸಲು ಭಾರತ ಮತ್ತು ಅಮೆರಿಕದ ಮುಖ್ಯ ಸಂಧಾನಕಾರರ ನಡುವೆ ಮಾತುಕತೆಗೆ ನಿಗದಿಯಾಗಿದ್ದ ಭೇಟಿಯನ್ನು ಮುಂದೂಡಲಾಗಿದೆ. ಮಧ್ಯಂತರ ವ್ಯಾಪಾರ ಒಪ್ಪಂದ ಅಂತಿಮಗೊಳ್ಳುವ ಸಂದರ್ಭದಲ್ಲಿ ಅಮೆರಿಕವು ಭಾರತದ ಸರಕುಗಳ ಮೇಲಿನ ಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸಲು ನಿರ್ಧರಿಸಿಲಾಗಿತ್ತು. ಚೀನಾ, ವಿಯೆಟ್ನಾಂ, ಥಾಯ್ಲೆಂಡ್, ಬಾಂಗ್ಲಾದೇಶ ಮೊದಲಾದ ಭಾರತದ ಪ್ರತಿಸ್ಪರ್ಧಿಗಳಿಗಿಂತ ಈ ಟ್ಯಾರಿಫ್ ದರ ತುಸು ಕಡಿಮೆ.

ಇದನ್ನೂ ಓದಿ: ಪ್ಲೇಸ್ಟೋರ್​ನಲ್ಲಿ ಚ್ಯಾಟ್​ಜಿಪಿಟಿ, ಫ್ಲಿಪ್​ಕಾರ್ಟ್ ಅನ್ನು ಮೀರಿಸಿದ ಎಲ್​ಪಿಜಿ ಬುಕಿಂಗ್ ಆ್ಯಪ್

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅಮೆರಿಕವೇನಾದರೂ ತನ್ನ ಟ್ಯಾರಿಫ್ ನೀತಿಯಲ್ಲಿ ಬದಲಾವಣೆ ಮಾಡಿ ಎಲ್ಲಾ ದೇಶಗಳ ಮೇಲಿನ ಟ್ಯಾರಿಫ್ ಅನ್ನು ಕಡಿಮೆಗೊಳಿಸಿದಲ್ಲಿ ಭಾರತಕ್ಕೆ ಹಾಕಿರುವ ಶೇ. 18 ಟ್ಯಾರಿಫ್ ದರವೂ ಕಡಿಮೆಗೊಳ್ಳಬಹುದು. ಜಪಾನ್, ಸೌತ್ ಕೊರಿಯಾ, ಬ್ರಿಟನ್, ಕೆನಡಾ ಇತ್ಯಾದಿ ಕೆಲವೇ ದೇಶಗಳಿಗೆ ಮಾತ್ರ ಅಮೆರಿಕ ಶೇ. 10ರ ಆಸುಪಾಸಿನಲ್ಲಿ ಟ್ಯಾರಿಫ ಹಾಕಿದೆ. ಉಳಿದ ದೇಶಗಳಿಗೆ ಶೇ. 18ಕ್ಕಿಂತಲೂ ಹೆಚ್ಚಿನ ಟ್ಯಾರಿಫ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯುವಕನ ಪ್ರಾಣವನ್ನೇ ಬಲಿ ಪಡೆದ ಸ್ನೇಹಿತನ ಸಹೋದರಿ ಜೊತೆಗಿನ ಅಕ್ರಮ ಸಂಬಂಧ: ಗೆಳೆಯನಿಂದಲೇ ನಡೀತು ಭೀಕರ ಹತ್ಯೆ

ಚಾಮರಾಜನಗರ, ಮಾರ್ಚ್​​ 16: ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ದೊಡ್ಡಕೆರೆ ಏರಿ ಬಳಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್​​ ಸಿಕ್ಕಿದೆ. ಸ್ನೇಹಿತನ ಸಹೋದರಿಯ ಜೊತೆಗಿನ ಅಕ್ರಮ ಸಂಬಂಧವೇ ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ (23) ಕೊಲೆಗೆ ಕಾರಣ ಎಂಬ ಸತ್ಯ ಬಯಲಾಗಿದೆ. ಗೆಳೆಯನ ಜೊತೆ ಬೈಕ್​​ ಏರಿ ಪಾರ್ಟಿಗೆ ಹೋಗಿದ್ದ ನಂಜುಂಡಸ್ವಾಮಿಯ ಶವ ಕತ್ತು ಸೀಳಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಜಯ್​ ಎಂಬಾತನ ಜೊತೆಗೆ ಈತ ತೆರಳಿದ್ದ ಎನ್ನಲಾಗಿದ್ದು, ಆತನೇ ಕೊಲೆ ಆರೋಪಿ ಎಂಬುದೀಗ ಬಹಿರಂಗಗೊಂಡಿದೆ.

ಕೆಲಸ ಮುಗಿಸಿ ಮನೆಗೆ ಬಂದಿದ್ದ ನಂಜುಂಡಸ್ವಾಮಿಯನ್ನು ಬಲವಂತದಿಂದ ಪಾರ್ಟಿ ಮಾಡೋಣ ಬಾ ಎಂದು ಆತನ ಸ್ನೇಹಿತ ಮತ್ತು ಸೋದರ ಸಂಬಂಧಿಯಾಗಿರುವ ಅಜಯ್ ಅಲಿಯಾಸ್ ಪ್ರಮೋದ್ ಕರೆದುಕೊಂಡು ಹೋಗಿದ್ದ. ನಂಜುಂಡಸ್ವಾಮಿ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾನೆ. ಬಾಲ್ಯದಿಂದಲೂ ಅಜಯ್​​ ಮತ್ತು ನಂಜುಂಡಸ್ವಾಮಿ ಗೆಳೆಯರಾಗಿದ್ದು, ಇಬ್ಬರೂ ಹೇಳಿಕೊಳ್ಳುವಂತಹ ಯಾವುದೇ ಕೆಲಸ ಮಾಡದಿದ್ದರೂ ದಿನ ನಿತ್ಯ ಕಂಠಪೂರ್ತಿ ಕುಡಿಯೋದನ್ನ ಮಾತ್ರ ಅಭ್ಯಾಸ ಮಾಡಿಕೊಂಡಿದ್ದರು. ಈ ನಡುವೆ ತನ್ನ ಸಹೋದರಿಯ ಜೊತೆಗೆ ನಂಜುಂಡಸ್ವಾಮಿ ಅಕ್ರಮ ಸಂಬಂಧ ಹೊಂದಿರೋದು ತಿಳಿದ ಅಜಯ್​​ ಸಿಟ್ಟಿನಲ್ಲಿ ಕೊಲೆ ಮಾಡಿರೋದು ಗೊತ್ತಾಗಿದೆ.

ಇದನ್ನೂ ಓದಿ: ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ; ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ಯಾರು?

ಇನ್ನು ಅಜಯ್​​ ಸಹೋದರಿಗೆ ಅದಾಗಲೇ ಮದುವಾಗಿದ್ದರೂ ನಂಜುಂಡಸ್ವಾಮಿ ಜೊತೆ ಲವ್ವಿ ಡವ್ವಿ ನಡೆದಿತ್ತು. ಆಕೆಯ ಜೊತೆ ಖಾಸಗಿ ಕ್ಷಣದಲ್ಲಿರುವಾಗಲೇ ಆಕೆಯ ಪತಿ ಕೈಯಲ್ಲಿ ಇವರಿಬ್ಬರು ರೆಡ್​​ ಹ್ಯಾಂಡ್​​ ಆಗಿ ಸಿಕ್ಕಿಬಿದ್ದಿದ್ದರು. ಈ ವಿಚಅರ ಅಜಯ್​​ ಕಿವಿಗೂ ಬಿದ್ದಿತ್ತು. ಹೀಗಾಗಿ ತೀವ್ರ ಕೋಪಗೊಂಡಿದ್ದ ಈತ ಮಾರ್ಚ್ 1 ರಂದು ಮನೆಯಲ್ಲಿ ಮಲಗಿದ್ದ ನಂಜುಂಡನನ್ನ ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿ ಬಳಿಕ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿರೋದು ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಆರೋಪಿ ಅಜಯ್ ಅಲಿಯಾಸ್ ಪ್ರಮೋದ್​​ನ ಬಂಧಿಸಿರುವ ಗುಂಡ್ಲುಪೇಟೆ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರವನ್ನ ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಆತನನ್ನು ಒಪ್ಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಡೆಕಾಯಿ ಜೊತೆಗೆ ಈ ತರಕಾರಿಗಳನ್ನು ತಿನ್ನಲೇಬಾರದಂತೆ

ತರಕಾರಿ (vegetable) ಸೇವನೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ನಿಜ.  ಆದರೆ ಕೆಲವು ತರಕಾರಿಗಳನ್ನು ಬೇರೆ ಕೆಲವೊಂದಿಷ್ಟು ತರಕಾರಿಯೊಂದಿಗೆ ಸೇವಿಸಿದರೆ ಅದು ಪ್ರಯೋಜನಕಾರಿಯಾಗುವ ಬದಲು ಆರೋಗ್ಯದ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅಂತಹ ತರಾರಿಗಳಲ್ಲಿ ಬೆಂಡೆಕಾಯಿ ಕೂಡ ಒಂದು. ಬೇಸಿಗೆಯಲ್ಲಿ ಹೇರಳವಾಗಿ ಲಭ್ಯವಿರುವ ಬೆಂಡೆಕಾಯಿ ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ತರಕಾರಿಯಾಗಿದ್ದು, ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆದ್ರೆ ಈ ಬೆಂಡೆಕಾಯಿ ಜೊತೆಗೆ ಈ ಒಂದಷ್ಟು ತರಕಾರಿಗಳನ್ನು ಸೇವಿಸಿದರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾದ್ರೆ ಆರೋಗ್ಯದ ದೃಷ್ಟಿಯಿಂದ ಬೆಂಡೆಕಾಯಿ ಜೊತೆ ಯಾವ ತರಕಾರಿಗಳನ್ನು ಸೇವನೆ ಮಾಡಬಾರದು ಎಂಬುದನ್ನು ನೋಡೋಣ.

ಬೆಂಡೆಕಾಯಿ ಜೊತೆಗೆ ಈ ತರಕಾರಿಗಳನ್ನು ತಿನ್ನಲೇಬೇಡಿ:

ಆಲೂಗಡ್ಡೆ: ಆಲೂಗಡ್ಡೆ ಮತ್ತು ಬೆಂಡೆಕಾಯಿಯನ್ನು ಒಟ್ಟಿಗೆ ಸೇವಿಸಬಾರದು. ಏಕೆಂದರೆ ಬೆಂಡೆಕಾಯಿಯಲ್ಲಿ ಫೈಬರ್ ಅಧಿಕವಾಗಿದ್ದರೆ, ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುತ್ತವೆ. ಅವುಗಳನ್ನು ಒಟ್ಟಿಗೆ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಅಸಮತೋಲನ ಉಂಟಾಗುತ್ತದೆ ಮತ್ತು ಬೊಜ್ಜು ಉಂಟಾಗುತ್ತದೆ. ಆದ್ದರಿಂದ, ಅವುಗಳನ್ನು ಒಟ್ಟಿಗೆ ಸೇವಿಸುವುದನ್ನು ತಪ್ಪಿಸಿ.

ಬದನೆಕಾಯಿ: ಬದನೆಕಾಯಿಯು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವ ಕೆಲವು ಸಂಯುಕ್ತಗಳನ್ನು ಹೊಂದಿರುತ್ತದೆ, ಕೆಲವು ಅಲರ್ಜಿಕ್ ಅಂಶಗಳನ್ನು ಹೊಂದಿರುತ್ತದೆ ಮತ್ತು ಬೆಂಡೆಕಾಯಿ ಜಿಗುಟಾದ ರಚನೆಯನ್ನು ಹೊಂದಿರುತ್ತದೆ. ಹಾಗಾಗಿ ಇವುಗಳನ್ನು ಒಟ್ಟಾಗಿ ಸೇವನೆ ಮಾಡಿದರೆ ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ.‌ ಚರ್ಮದ ಅಲರ್ಜಿ ಉಂಟಾಗುತ್ತದೆ.

ಮೂಲಂಗಿ: ಮೂಲಂಗಿಯಲ್ಲಿ ಸಲ್ಫರ್ ಸಂಯುಕ್ತಗಳಿದ್ದು ಅದು ಹೊಟ್ಟೆಯಲ್ಲಿ ಅನಿಲವನ್ನು ಹೆಚ್ಚಿಸುತ್ತದೆ. ಬೆಂಡೆಕಾಯಿ ಮತ್ತು ಮೂಲಂಗಿ ಎರಡೂ ವಿಭಿನ್ನ ಸ್ವಭಾವದ ತರಕಾರಿಗಳು. ಅವುಗಳನ್ನು ಒಟ್ಟಿಗೆ ತಿನ್ನುವುದರಿಂದ  ಗ್ಯಾಸ್, ಆಮ್ಲೀಯತೆ ಮತ್ತು ಚರ್ಮದ ಅಲರ್ಜಿ ಉಂಟಾಗುತ್ತದೆ.

ಇದನ್ನೂ ಓದಿ: ಅಡುಗೆಯ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪು ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿಯಂತೆ‌

ಹಾಗಲಕಾಯಿ: ಹಾಗಲಕಾಯಿ ಮತ್ತು ಬೆಂಡೆಕಾಯಿಯನ್ನು ಒಟ್ಟಿಗೆ ಸೇವಿಸುವುದನ್ನು ಸಹ ತಪ್ಪಿಸಬೇಕು. ಈ ಎರಡೂ ವಸ್ತುಗಳು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಈಗಾಗಲೇ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಬೆಂಡೆಕಾಯಿ ಮತ್ತು ಹಾಗಲಕಾಯಿಯನ್ನು ಒಟ್ಟಿಗೆ ತಿನ್ನಬಾರದು. ಇದು  ಆಮ್ಲೀಯತೆ, ಹೊಟ್ಟೆಯ ಕಿರಿಕಿರಿ, ನಿರ್ಜಲೀಕರಣ ಮತ್ತು ತಲೆನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಇದು ಮಾತ್ರವಲ್ಲದೆ ಚಹಾ, ಹಾಲು, ಮೊಸರು, ಕೆಂಪು ಮಾಂಸದ ಜೊತೆಯೂ ಬೆಂಡೆಕಾಯಿಯನ್ನು ಸೇವನೆ ಮಾಡಬಾರದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಪ್ಸ್ಟೀನ್ ಲಿಂಕ್ ಆರೋಪದ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಹರ್ದೀಪ್ ಸಿಂಗ್ ಪುರಿ ಪುತ್ರಿ

ನವದೆಹಲಿ, ಮಾರ್ಚ್ 16: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರ ಪುತ್ರಿ ಹಿಮಾಯನಿ ಪುರಿ ಹಲವಾರು ವ್ಯಕ್ತಿಗಳು ಮತ್ತು ಆನ್‌ಲೈನ್ ಪ್ಲಾಟ್​ಫಾರ್ಮ್​ಗಳ ವಿರುದ್ಧ 10 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ವ್ಯಕ್ತಿಗಳು ಮತ್ತು ಪ್ಲಾಟ್​ಫಾರ್ಮ್​ಗಳು ತಮ್ಮ ಬಗ್ಗೆ ಮಾನಹಾನಿಕರ ವಿಷಯವನ್ನು ಹರಡುತ್ತಿದ್ದು, ಕ್ರಿಮಿನಲ್ ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧ ಕಲ್ಪಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹರ್ದೀಪ್ ಸಿಂಗ್ ಪುರಿ ಅವರ ಪುತ್ರಿ ದೆಹಲು ಹೈಕೋರ್ಟ್​ನಲ್ಲಿ 10 ಕೋಟಿ ರೂ.ಗಳ ಸಿವಿಲ್ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.

ಎಎನ್‌ಐ ವರದಿ ಪ್ರಕಾರ, ಹಿಮಾಯನಿ ಪುರಿ ತಮ್ಮ ಅರ್ಜಿಯಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ತಮ್ಮ ಬಗ್ಗೆ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದ್ದು, ತಮ್ಮ ಮತ್ತು ಎಪ್ಸ್ಟೀನ್ ನಡುವಿನ ಸಂಬಂಧವನ್ನು ತಪ್ಪು ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ. ಈ ವಿಷಯವು ತಮ್ಮ ಖ್ಯಾತಿ ಮತ್ತು ವೈಯಕ್ತಿಕ ವಿಶ್ವಾಸಾರ್ಹತೆಗೆ ಗಂಭೀರ ಹಾನಿಯನ್ನುಂಟುಮಾಡಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಎಪ್​ಸ್ಟೀನ್​ ಫೈಲ್ಸ್​ ಎಂದರೇನು? ಟ್ರಂಪ್ ಹೆಸರಿರುವುದು ನಿಜವೇ? ಎಲಾನ್ ಮಸ್ಕ್ ಆರೋಪವೇನು?

ಹಿಮಾಯನಿ ಪುರಿ ಅವರು ಜೆಫ್ರಿ ಎಪ್ಸ್ಟೀನ್ ಜೊತೆ ನೇರ ಅಥವಾ ಪರೋಕ್ಷ ವ್ಯವಹಾರ, ಹಣಕಾಸು, ವೈಯಕ್ತಿಕ ಅಥವಾ ನೆಟ್‌ವರ್ಕ್ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ಸೂಚಿಸುವ ಆಧಾರರಹಿತ ಆರೋಪಗಳನ್ನು ಪ್ರತಿವಾದಿಗಳು ಸೃಷ್ಟಿಸಿದ್ದಾರೆ ಮತ್ತು ಪ್ರಸಾರ ಮಾಡಿದ್ದಾರೆ. ಅವರು ಎಪ್ಸ್ಟೀನ್ ಅಥವಾ ಅವರ ಸಹಚರರಿಂದ ಹಣಕಾಸಿನ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಲೆಹ್ಮನ್ ಬ್ರದರ್ಸ್‌ನ ಪತನಕ್ಕೆ ರಾಬರ್ಟ್ ಮಿಲ್ಲಾರ್ಡ್ ಪುರಿಯವರೊಂದಿಗೆ ಕೆಲಸ ಮಾಡಿದ್ದಾರೆ ಎಂದು ಕೆಲವು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಪ್ರಕಟಿಸಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಈ ಆರೋಪಗಳು “ಸಂಪೂರ್ಣವಾಗಿ ಸುಳ್ಳು, ದುರುದ್ದೇಶಪೂರಿತವಾದುದು” ಎಂದು ಹಿಮಾಯನಿ ಪುರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಎಕ್ಸ್, ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಲಿಂಕ್ಡ್‌ಇನ್ ಸೇರಿದಂತೆ ಹಲವಾರು ಪ್ಲಾಟ್​​ಫಾರ್ಮ್​ಗಳು, ಬ್ಲಾಗ್‌ಗಳು ಮತ್ತು ಡಿಜಿಟಲ್ ಸುದ್ದಿ ಪೋರ್ಟಲ್‌ಗಳಲ್ಲಿ ಈ ವಿಷಯವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇವು ವರದಿಗಳು, ಪೋಸ್ಟ್‌ಗಳು, ವೀಡಿಯೊಗಳು, ಕಿರುಚಿತ್ರಗಳು, ಥಂಬ್‌ನೇಲ್‌ಗಳು ಮತ್ತು ಹೆಡ್​​ಲೈನ್​ಗಳ ಮೂಲಕ ಸುಳ್ಳು ನಿಸುದ್ದಿಗಳನ್ನು ಹರಡಿದೆ ಮತ್ತು ತಮ್ಮ ಖ್ಯಾತಿಗೆ ಹಾನಿ ಮಾಡಲು ಪ್ರಯತ್ನಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಸಂಚಲನ ಸೃಷ್ಟಿಸಿದ ಜೆಫ್ರಿ ಎಪ್ಸ್ಟೀನ್‌ ದಾಖಲೆ; ಪಟ್ಟಿಯಲ್ಲಿದೆ ಪ್ರಮುಖರ ಹೆಸರು, ಏನಿದು ಪ್ರಕರಣ?

ಹೀಗಾಗಿ, ವಿವಾದಿತ ವಿಷಯವನ್ನು ಡಿಲೀಟ್ ಮಾಡಲು ನ್ಯಾಯಾಲಯದ ಆದೇಶ, ಮುಂದಿನ ದಿನಗಳಲ್ಲಿ ಅಂತಹ ವಿಷಯವನ್ನು ಪ್ರಕಟಿಸದಂತೆ ಶಾಶ್ವತ ತಡೆಯಾಜ್ಞೆ, 10 ಕೋಟಿ ರೂ. ಪರಿಹಾರ ಮತ್ತು ಪ್ರತಿವಾದಿಗಳಿಂದ ಬೇಷರತ್ತಾದ ಕ್ಷಮೆಯಾಚನೆಯನ್ನು ಹಿಮಾಯನಿ ಪುರಿ ಕೋರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್ ನೀಡಿದ ಸರ್ಕಾರ

ಬೆಂಗಳೂರು, (ಮಾರ್ಚ್ 16): ಎಸ್​​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆಗೆ (SSLC Exams) ದಿನಗಣನೆ ಆರಂಭವಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್​​​​​ಆರ್​​​ಟಿಸಿ (KSRTC) ಉಚಿತ ಪ್ರಯಾಣ ಘೋಷಿಸಿದೆ. ಪರೀಕ್ಷಾ ದಿನಗಳಲ್ಲಿ ಉಚಿತ ಬಸ್ ಪ್ರಯಾಣದ (Bus Travel) ಸೌಲಭ್ಯವನ್ನು ಘೋಷಿಸಿದೆ.  ಹೌದು.. ಎಸ್​​ಎಸ್​​ಎಲ್​ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ತೋರಿಸಿ, ನಿವಾಸದಿಂದ ಪರೀಕ್ಷಾ ಕೇಂದ್ರದವರೆಗೆ ಕೆಎಸ್​ಆರ್​​ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾರ್ಚ್‌ 18 ರಿಂದ ಏಪ್ರಿಲ್‌ 2 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ಗಂಟೆ ವರೆಗೆ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆ ಬರೆಯಬೇಕಾದರೆ ಹಾಲ್ ಟಿಕೆಟ್ ಅವಶ್ಯವಾಗಿದೆ. ಅದೇ ರೀತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಬಸ್ ಕಂಡೆಕ್ಟರ್​ಗೆ ಹಾಲ್ ಟಿಕೆಟ್ ತೋರಿಸಿದರಷ್ಟೇ ಉಚಿತವಾಗಿ ಪ್ರಯಾಣಿಸುವ ಅವಕಾಶ ಸಿಗಲಿದೆ. ಹೀಗಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮರೆಯದೆ ಹಾಲ್ ಟಿಕೆಟ್ ತೆಗೆದುಕೊಂಡು ಹೋಗಿ.

ಇದನ್ನೂ ಓದಿ: SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಪರೀಕ್ಷೆ ಶುರುವಾಗುವ ಸಮಯ ವಿವರ

ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ

2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1 (SSLC Exam) ಮಾರ್ಚ್ 18ರಿಂದ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರದ (exam center) ಸುತ್ತಮುತ್ತ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಬೆಂಗಳೂರು (bengaluru) ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ.

ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ದಿನಾಂಕ: 18-03-2026 ರಿಂದ 02-04-2026 ರವರೆಗೆ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ -1 ಅನ್ನು ಬೆಂಗಳೂರು ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಿದ್ದು, ಪರೀಕ್ಷೆಗಳನ್ನು ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಸಲುವಾಗಿ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಸ್ಥಳವೆಂದು ಘೋಷಿಸುವಂತೆ ಹಾಗೂ ನಿಷೇಧಿತ ಪ್ರದೇಶದಲ್ಲಿ ಜೆರಾಕ್ಸ್ / ಸೈಬರ್/ ಕಂಪ್ಯೂಟರ್ ಸೆಂಟರ್‌ಗಳನ್ನು ಮುಚ್ಚುವಂತೆ ಕೋರಲಾಗಿರುತ್ತದೆ ಎಂದಿದ್ದಾರೆ.

ಈ ವಿಷಯದ ಬಗ್ಗೆ ನಾನು ಖುದ್ದಾಗಿ ಮಾಡಿದ ವಿಚಾರಣೆಯಿಂದ ಮತ್ತು ಗುಪ್ತವಾರ್ತಾ ವರದಿಯಿಂದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ -1 ಅನ್ನು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯ ಪ್ರದೇಶಕ್ಕೆ ಅನ್ವಯಿಸುವಂತೆ ನಿಷೇಧಾಜ್ಞೆ ಹೊರಡಿಸುವುದು ಅಗತ್ಯವಿರುವುದನ್ನು ಮನಗಂಡಿರುತ್ತೇನೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link