ಚಿತ್ರದುರ್ಗ, ಮಾರ್ಚ್ 08: ನಗರದಲ್ಲಿ ಬಿಜೆಪಿಯಿಂದ ಇಂದು ಎಸ್ಸಿ, ಎಸ್ಟಿ ಜನಾಂದೋಲನ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪಾದಯಾತ್ರೆ ನಡೆಸುವುದಾಗಿ ಬಿಜೆಪಿ ಘೋಷಿಸಿದೆ. ಮಾರ್ಚ್ 22ರಂದು ಚಿತ್ರದುರ್ಗದಿಂದ ಪಾದಯಾತ್ರೆ ಆರಂಭಿಸಿ, ಮಾರ್ಚ್ 27ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಬಿಜೆಪಿ ಜನಾಂದೋಲನ ಮುಖ್ಯಸ್ಥ ಪಿ. ರಾಜೀವ್ ಅವರು ಮಾತನಾಡಿ, ಮಾರ್ಚ್ 23ರೊಳಗೆ ರಾಜ್ಯ ಸರ್ಕಾರ ಹೋರಾಟಕ್ಕೆ ಸ್ಪಂದಿಸಬೇಕು. ಇಲ್ಲವಾದರೆ ಹೋರಾಟದ ಸ್ವರೂಪ ಉಗ್ರವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದೆಹಲಿ, ಮಾ.8: ದೇಶಸೇವೆಯಲ್ಲಿದ್ದಾಗ ವೀರಮರಣವನ್ನಪ್ಪಿದ ಭಾರತೀಯ ವಾಯುಪಡೆಯ (IAF) ಸ್ಕ್ವಾಡ್ರನ್ ಲೀಡರ್ ಅನುಜ್ ವಶಿಷ್ಠ ಅವರ ಅಂತಿಮ ಸಂಸ್ಕಾರವು ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಈ ವೇಳೆ ಅವರ ಭಾವಿ ಪತ್ನಿ, ಸ್ವತಃ ವಾಯುಪಡೆಯ ಪೈಲಟ್ ಆಗಿರುವ ಅಧಿಕಾರಿ ಅಂತಿಮ ನಮನ ಸಲ್ಲಿಸಿದ ದೃಶ್ಯ ಪ್ರತಿಯೊಬ್ಬರ ಕಣ್ಣಾಲಿಗಳನ್ನು ತೇವಗೊಳಿಸಿದೆ. ಸ್ಕ್ವಾಡ್ರನ್ ಲೀಡರ್ ಅನುಜ್ ವಶಿಷ್ಠ ಅವರು ಕರ್ತವ್ಯದ ಅವಧಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಹುತಾತ್ಮರಾಗಿದ್ದರು. ಅವರ ಪಾರ್ಥಿವ ಶರೀರಕ್ಕೆ ಸಕಲ ಮಿಲಿಟರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಅನುಜ್ ಅವರ ಭಾವಿ ಪತ್ನಿ ಕೂಡ ಭಾರತೀಯ ವಾಯುಪಡೆಯಲ್ಲೇ ಅಧಿಕಾರಿಯಾಗಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದ ನಡುವೆಯೂ, ಅವರು ತಮ್ಮ ವಾಯುಪಡೆಯ ಸಮವಸ್ತ್ರದಲ್ಲೇ (Uniform) ಬಂದು ಸಲ್ಯೂಟ್ ಮಾಡುವ ಮೂಲಕ ಅಂತಿಮ ವಿದಾಯ ಸಲ್ಲಿಸಿದರು. ಈ ಭಾವುಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ದೇಶದಾದ್ಯಂತ ಜನರು ವೀರ ಯೋಧನ ತ್ಯಾಗಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು “ಅಮರ ರಹೇ” ಘೋಷಣೆಗಳನ್ನು ಕೂಗಿದರು. ಯೋಧನ ಕುಟುಂಬದ ಧೈರ್ಯ ಮತ್ತು ಅವರ ಭಾವಿ ಪತ್ನಿಯ ಕರ್ತವ್ಯ ನಿಷ್ಠೆಗೆ ನೆಟ್ಟಿಗರು ನಮನ ಸಲ್ಲಿಸುತ್ತಿದ್ದಾರೆ.
ದುನಿಯಾ ವಿಜಯ್ (Duniya Vijay), ರಚಿತಾ ರಾಮ್, ರಾಜ್ ಬಿ ಶೆಟ್ಟಿ ನಟಿಸಿದ್ದ ‘ಲ್ಯಾಂಡ್ಲಾರ್ಡ್’ ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಜಡೇಶ್ ಕೆ ಹಂಪಿ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ವಿಮರ್ಶೆಗಳು ವ್ಯಕ್ತವಾಗಿದ್ದವು. ಕ್ರಾಂತಿಕಾರಿ ಕತೆಯನ್ನು ಹೊಂದಿದ ಈ ಸಿನಿಮಾ ಇದೀಗ ಒಟಿಟಿಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆದ ಈ ಸಿನಿಮಾ ಒಟಿಟಿಯಲ್ಲಿಯೂ ಸಹ ಪ್ರೇಕ್ಷಕರನ್ನು ಸೆಳೆಯುವುದೇ ಎಂಬುದು ಕುತೂಹಲ ಮೂಡಿಸಿದೆ.
ಜನವರಿ 23ರಂದು ಚಿತ್ರಮಂದಿರಗಳಲ್ಲಿ ‘ಲ್ಯಾಂಡ್ಲಾರ್ಡ್’ ಸಿನಿಮಾ ಬಿಡುಗಡೆ ಆಗಿತ್ತು. ಜಾತಿ ಪದ್ಧತಿ, ಜೀತ ಪದ್ಧತಿಗಳ ವಿರುದ್ಧ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು. ಸಿನಿಮಾನಲ್ಲಿ ದುನಿಯಾ ವಿಜಯ್ ಭಿನ್ನ ರೀತಿಯ ಪಾತ್ರದಲ್ಲಿ ನಟಿಸಿದ್ದರು. ತುಸು ವಯಸ್ಸಾದ ಆದರೆ ಖಡಕ್ ಆದ ಪಾತ್ರದಲ್ಲಿ ದುನಿಯಾ ವಿಜಯ್ ನಟಿಸಿದ್ದರು. ನಾಯಕಿ ಪಾತ್ರದಲ್ಲಿ ನಟಿಸಿದ್ದ ರಚಿತಾ ರಾಮ್ ಸಹ ವಯಸ್ಸಾದ ಮಹಿಳೆಯ ಪಾತ್ರದಲ್ಲಿ ನಟಿಸಿದ್ದು ವಿಶೇಷವಾಗಿತ್ತು. ದುನಿಯಾ ವಿಜಯ್ ಪುತ್ರಿ ರಿತನ್ಯ ಸಹ ಈ ಸಿನಿಮಾನಲ್ಲಿ ಮಹತ್ವದ ಪಾತ್ರದಲ್ಲಿ ನಟಿಸಿದ್ದರು. ರಾಜ್ ಬಿ ಶೆಟ್ಟಿ ವಿಲನ್ ಪಾತ್ರದಲ್ಲಿ ನಟಿಸಿದ್ದರು.
‘ಲ್ಯಾಂಡ್ಲಾರ್ಡ್’ ಸಿನಿಮಾವು ಜೀ5 ಒಟಿಟಿಯಲ್ಲಿ ಮಾರ್ಚ್ 13 ರಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಮತ್ತೊಂದು ವರದಿಯ ಪ್ರಕಾರ, ಯುಗಾದಿ ಹಬ್ಬದ ವೇಳೆಗೆ ಅಂದರೆ ಮಾರ್ಚ್ 18ರ ವೇಳೆಗೆ ಈ ಸಿನಿಮಾ ಒಟಿಟಿಗೆ ಬರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದಾಗ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ದೊರೆತಿತ್ತು, ಖುದ್ದು ಸಿಎಂ ಸಿದ್ದರಾಮಯ್ಯ ಅವರು ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿ, ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನು ಹಂಚಿಕೊಂಡಿದ್ದರು. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ.
‘ಲ್ಯಾಂಡ್ಲಾರ್ಡ್’ ಸಿನಿಮಾನಲ್ಲಿ ದುನಿಯಾ ವಿಜಯ್ ಜೊತೆಗೆ ರಚಿತಾ ರಾಮ್, ರಾಜ್ ಬಿ ಶೆಟ್ಟಿ, ಉಮಾಶ್ರೀ ಅವರುಗಳು ನಟಿಸಿದ್ದರು. ದುನಿಯಾ ವಿಜಯ್ ಪುತ್ರಿ ರಿತನ್ಯ, ಸಿನಿಮಾನಲ್ಲಿಯೂ ಸಹ ದುನಿಯಾ ವಿಜಯ್ ಪಾತ್ರದ ಪುತ್ರಿಯ ಪಾತ್ರದಲ್ಲಿಯೇ ನಟಿಸಿದ್ದರು. ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾದ ಮೂಲಕ ಗಮನ ಸೆಳೆದಿದ್ದ ಸಿರೀಶ್ ಬೈಕಾಡಿ ಸಹ ಈ ಸಿನಿಮಾನಲ್ಲಿ ನಟಿಸಿದ್ದರು. ಸಿನಿಮಾ ಇದೀಗ ಒಟಿಟಿಗೆ ಬರುತ್ತಿದ್ದು, ಯುಗಾದಿ ಸಮಯದಲ್ಲಿಯೇ ಟಿವಿಯಲ್ಲಿಯೂ ಪ್ರದರ್ಶನ ಆಗಲಿದೆ ಎನ್ನಲಾಗುತ್ತಿದೆ.
ದುನಿಯಾ ವಿಜಯ್ ಪ್ರಸ್ತುತ ಇನ್ನೂ ಕೆಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮಿಳಿನ ‘ಮೂಕುತ್ತಿ ಅಮ್ಮನ್ 2’, ತೆಲುಗಿನಲ್ಲಿ ಪುರಿ ಜಗನ್ನಾಥ್ ನಿರ್ದೇಶಿಸಿ, ವಿಜಯ್ ಸೇತುಪತಿ ನಟಿಸುತ್ತಿರುವ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಸಿನಿಮಾ, ಅವರದ್ದೇ ನಿರ್ದೇಶನದ ‘ಸಿಟಿಲೈಟ್ಸ್’, ಸೂರಿ ನಿರ್ದೇಶನದ ಹೊಸ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಸಿಟಿಲೈಟ್ಸ್’ ಸಿನಿಮಾನಲ್ಲಿ ವಿನಯ್ ರಾಜ್ಕುಮಾರ್ ನಾಯಕರಾಗಿದ್ದಾರೆ.
ಕಳಪೆ ಫಾರ್ಮ್ನಿಂದಾಗಿ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ 11 ನಿಂದಲೇ ಹೊರಬಿದ್ದಿದ್ದ ಸಂಜು ಸ್ಯಾಮ್ಸನ್ ಆ ಬಳಿಕ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಮಾತ್ರವಲ್ಲದೆ ಟೀಂ ಇಂಡಿಯಾದ ಎರಡು ನಿರ್ಣಾಯಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಫೈನಲ್ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಬ್ಯಾಟ್ನಿಂದ ಅದೇ ರೀತಿಯ ಇನ್ನಿಂಗ್ಸ್ ಮೂಡಿಬಂದಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದರು. ಈ ಫೈನಲ್‌ನಲ್ಲಿ ಅರ್ಧಶತಕ ಗಳಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದ್ದು ಮಾತ್ರವಲ್ಲದೆ, ಹ್ಯಾಟ್ರಿಕ್ ಅರ್ಧಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು.
ಈ ಮೂಲಕ ಸೆಮಿಫೈನಲ್ ಮತ್ತು ಫೈನಲ್ ಎರಡರಲ್ಲೂ ಐವತ್ತಕ್ಕೂ ಹೆಚ್ಚು ಸ್ಕೋರ್ ದಾಖಲಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಮಾತ್ರವಲ್ಲದೆ ನಾಕೌಟ್ ಸುತ್ತಿಗೆ ಮುನ್ನ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಅಜೇಯ 97 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದರು.
ಇನ್ನು ಈ ಫೈನಲ್ ಪಂದ್ಯದಲ್ಲಿ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿಕೊಟ್ಟ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಅವರೊಂದಿಗೆ 98 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು. ಅಭಿಷೇಕ್ ಬಿರುಗಾಳಿಯ ಇನ್ನಿಂಗ್ಸ್ ಆಡಿದರೆ, ಸಂಜು ಸ್ಯಾಮ್ಸನ್ ಕೂಡ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದರೊಂದಿಗೆ, ವಿರಾಟ್ ಕೊಹ್ಲಿ 12 ವರ್ಷಗಳ ಹಿಂದೆ ಮಾಡಿದ್ದ ಸಾಧನೆಯನ್ನು ಸ್ಯಾಮ್ಸನ್ ಸರಿಗಟ್ಟಿದರು.
ಟಿ20 ವಿಶ್ವಕಪ್ನ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಐವತ್ತಕ್ಕೂ ಹೆಚ್ಚು ಸ್ಕೋರ್ಗಳನ್ನು ಗಳಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್. ಹಾಗೆಯೇ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಸಂಜು ಪಾತ್ರರಾಗಿದ್ದಾರೆ. ಸಂಜುಗೂ ಮೊದಲು ವಿರಾಟ್ ಕೊಹ್ಲಿ 2014 ರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ್ದರು. ಹಾಗೆಯೇ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಂತರ ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಅರ್ಧಶತಕಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಸಂಜು ಸ್ಯಾಮ್ಸನ್ ಪಾತ್ರರಾಗಿದ್ದಾರೆ.
ಈ ಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 89 ರನ್ಗಳ ಇನ್ನಿಂಗ್ಸ್ ಆಡಿದರು. ಆದಾಗ್ಯೂ ಸತತ ಮೂರನೇ ಪಂದ್ಯದಲ್ಲೂ ಸಂಜು ಶತಕ ವಂಚಿತರಾದರು. ಆದಾಗ್ಯೂ ಈ ಇನ್ನಿಂಗ್ಸ್ ಮೂಲಕ ಸಂಜು ಒಂದು ಆವೃತ್ತಿಯ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿದರು.
ಸಂಜು ಈ ವಿಶ್ವಕಪ್‌ನಲ್ಲಿ ಆಡಿದ ಐದು ಪಂದ್ಯಗಳಲ್ಲಿ 321 ರನ್ ಬಾರಿಸಿದ್ದಾರೆ. ಇದು ಟಿ20 ವಿಶ್ವಕಪ್‌ನಲ್ಲಿ ಯಾವುದೇ ಭಾರತೀಯ ಆಟಗಾರ ಗಳಿಸಿದ ಅತ್ಯಧಿಕ ರನ್ ಆಗಿದೆ. ಇದಕ್ಕೂ ಮೊದಲು, ವಿರಾಟ್ 2014 ರ ಟಿ20 ವಿಶ್ವಕಪ್‌ನಲ್ಲಿ 319 ರನ್ ಸಿಡಿಸಿದ್ದರು. ಇದೀಗ 12 ವರ್ಷಗಳ ನಂತರ ಈ ದಾಖಲೆ ಸಂಜು ಪಾಲಾಗಿದೆ. ಸಂಜು ಸ್ಯಾಮ್ಸನ್ ಐದು ಪಂದ್ಯಗಳಲ್ಲಿ 80.2 ಸರಾಸರಿಯಲ್ಲಿ 321 ರನ್ ಗಳಿಸಿದ್ದಾರೆ. ಇದರಲ್ಲಿ 24 ಸಿಕ್ಸರ್ಗಳು ಮತ್ತು 27 ಬೌಂಡರಿಗಳು ಸೇರಿವೆ.
ಪ್ಯಾನ್ ಇಂಡಿಯಾ ಸ್ಟಾರ್, ಟಾಲಿವುಡ್ನ ಸೂಪರ್ ಸ್ಟಾರ್ ಜೂ ಎನ್ಟಿಆರ್ (Jr NTR) ಅವರು ಇಂದು (ಮಾರ್ಚ್ 08) ಬೆಂಗಳೂರಿಗೆ ಆಗಮಿಸಿದ್ದರು. ನೆರೆ ರಾಜ್ಯದ ಸ್ಟಾರ್ ನಟ-ನಟಿಯರು ಸಿನಿಮಾ ಪ್ರಚಾರಕ್ಕಾಗಿ ಮಾತ್ರವೇ ಬೆಂಗಳೂರನ್ನು, ಕರ್ನಾಟಕವನ್ನು ನೆನಪು ಮಾಡಿಕೊಳ್ಳುತ್ತಾರೆ. ಆದರೆ ಜೂ ಎನ್ಟಿಆರ್ ಅವರ ಯಾವ ಸಿನಿಮಾ ಸಹ ಸದ್ಯಕ್ಕೆ ಬಿಡುಗಡೆ ಆಗುತ್ತಿಲ್ಲ ಆದರೂ ಇಂದು ಹಠಾತ್ತನೇ ಅವರು ಬೆಂಗಳೂರಿಗೆ ಬಂದಿದ್ದರು. ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಲ್ಲದೆ, ಕನ್ನಡದಲ್ಲಿಯೇ ಮಾತನಾಡಿದರು.
ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗಾಗಿ ಜೂ ಎನ್ಟಿಆರ್ ಅವರು ಇಂದು ಬೆಂಗಳೂರಿಗೆ ಬಂದಿದ್ದರು. ಕಿಮ್ಸ್ ಜೊತೆಗೆ ಜೂ ಎನ್ಟಿಆರ್ ಅವರಿಗೆ ಬಲು ಆಪ್ತ ಬಂಧ ಇದೆ. 1983ರಲ್ಲಿ ಜೂ ಎನ್ಟಿಆರ್ ಅವರ ತಾತ ಎನ್ಟಿಆರ್ ಅವರೇ ಕಿಮ್ಸ್ಗೆ ಅಡಿಗಲ್ಲು ಹಾಕಿದ್ದರು. ಜೂ ಎನ್ಟಿಆರ್, 2009 ಭಾರಿ ರಸ್ತೆ ಅಪಘಾತಕ್ಕೆ ಈಡಾಗಿದ್ದರೂ ಸಹ ಅವರು ಕಿಮ್ಸ್ನಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಇದೇ ಕಾರಣಕ್ಕೆ ಇಂದು ಕಿಮ್ಸ್ನ ಹೊಸ ಘಟಕದ ಉದ್ಘಾಟನೆಗೆ ಅವರು ಆಗಮಿಸಿದ್ದರು.
ಈ ವೇಳೆ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ನಟ ಜೂ ಎನ್ಟಿಆರ್, ‘ನನಗೆ ಕರ್ನಾಟಕಕ್ಕೆ ಬರುವುದೆಂದರೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತದೆ. ನನ್ನ ತಾಯಿಯದ್ದು ಕುಂದಾಪುರ. ನನ್ನ ತಾಯಿ ಭಾಷೆ ಕನ್ನಡ. ಹಾಗಾಗಿ ಕರ್ನಾಟಕಕ್ಕೆ ಬರುವುದೆಂದರೆ ನನಗೆ ವಿಶೇಷ ಪ್ರೀತಿ’ ಎಂದು ಜೂ ಎನ್ಟಿಆರ್ ಹೇಳಿದರು. ಕಿಮ್ಸ್ನ ಸೇವೆಯನ್ನು ಕೊಂಡಾಡಿದ ಜೂ ಎನ್ಟಿಆರ್, ಕಿಮ್ಸ್ನವರು ‘ಪೇಷೆಂಟ್ ಈಸ್ ಪ್ಯಾರಾಮೌಂಟ್’ ಎಂಬ ಧ್ಯೇಯ ವಾಕ್ಯದೊಂದಿಗೆ ಸಲ್ಲಿಸುತ್ತಿರುವ ಸೇವೆ ಬೆಲೆಕಟ್ಟಲಾರದ್ದು, ಅವರು ಈ ಉದ್ಯಮದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಅಪಾರ ಯಶಸ್ಸು ಅವರಿಗೆ ಸಿಗಲಿ ಎಂದು ಹಾರೈಸಿದರು.
ಮಹಿಳಾ ದಿನಾಚರಣೆ ಬಗ್ಗೆ ಮಾತನಾಡಿದ ಜೂ ಎನ್ಟಿಆರ್, ‘ಮಹಿಳೆಯರನ್ನು ಹೇಗೆ ನೋಡಬೇಕು, ಮಹಿಳೆಯರಿಗೆ ಗೌರವ ಕೊಡಬೇಕು ಎಂಬುದನ್ನು ಪದೇ ಪದೇ ನೆನಪು ಮಾಡಿಸುವ ಪರಿಸ್ಥಿತಿ ಇದೇ ಎಂಬುದೇ ನನಗೆ ಬೇಸರ ತರುವ ವಿಷಯ. ಮಹಿಳೆಯರು ಎಷ್ಟು ಮುಖ್ಯ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಅದು ಸ್ವಾಭಾವಿಕವಾಗಿ ಬರಬೇಕು. ಅದೆಲ್ಲ ಮನೆಯಿಂದಲೇ ಪ್ರಾರಂಭ ಆಗಬೇಕು, ನನ್ನ ಇಬ್ಬರು ಗಂಡು ಮಕ್ಕಳು ಸಹ ಹೆಣ್ಣು ಮಕ್ಕಳನ್ನು ಗೌರವಿಸುವ ವ್ಯಕ್ತಿಗಳಾಗಿಯೇ ಬೆಳೆಯಲಿದ್ದಾರೆ ಎಂಬುದು ನಾನು ಖಾತ್ರಿಪಡಿಸುತ್ತಿದ್ದೇನೆ’ ಎಂದರು ಜೂ ಎನ್ಟಿಆರ್.
ರಸ್ತೆ ಸುರಕ್ಷತೆ ಬಗ್ಗೆಯೂ ಮಾತನಾಡಿದ ಜೂ ಎನ್ಟಿಆರ್, ‘ರಸ್ತೆ ಅಪಘಾತದಿಂದ ಭಾರಿ ನಷ್ಟವನ್ನು ನಮ್ಮ ಕುಟುಂಬ ಅನುಭವಿಸಿದೆ. ನಾನು, ನನ್ನ ದೊಡ್ಡ ಅಣ್ಣ ಮತ್ತು ತಂದೆಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದೇನೆ. ನಾನು ಸಹ ಸ್ವತಃ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದೆ, ಜೀವವೇ ಹೋಗುವ ಸ್ಥಿತಿ ಅಂದು ಇತ್ತು. ರಸ್ತೆ ಸುರಕ್ಷತೆ ಮತ್ತು ಡ್ರೈವಿಂಗ್ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಡ್ರೈವಿಂಗ್ ಮಾಡಬೇಕಾದರೆ ಕುಟುಂಬವನ್ನು ಮನಸ್ಸಿನಲ್ಲಿಟ್ಟುಕೊಂಡು ಡ್ರೈವ್ ಮಾಡಿ. ಆಗ ಎಚ್ಚರಿಕೆ ಇರುತ್ತದೆ. ಜವಾಬ್ದಾರಿ ಎಂಬುದು ಒಳಗಿನಿಂದಲೇ ಬರಲಿ, ಅದು ಹೇರಿಕೆ ಆಗುವುದು ಬೇಡ’ ಎಂದಿದ್ದಾರೆ ಜೂ ಎನ್ಟಿಆರ್.
ಇನ್ನು ಅಭಿಮಾನಿಗಳ ಬಗ್ಗೆ ಮಾತನಾಡಿದ ಜೂ ಎನ್ಟಿಆರ್, ‘ನಿಮ್ಮ ಪ್ರೀತಿಯನ್ನು ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ. ಅಭಿಮಾನದ ಸಹೋದರರು ನೀವು. ನಿಮಗೆಲ್ಲರಿಗೂ ಕೋಟಿ-ಕೋಟಿ ಧನ್ಯವಾದ. ನಿಮ್ಮಲ್ಲಿ ಕೇಳಿಕೊಳ್ಳುವುದಿಷ್ಟೆ ಜಾಗೃತೆಯಾಗಿ ಮನೆಗೆ ಹೋಗಿ, ನಮ್ಮ ಮನೆಯಲ್ಲಿ ನಡೆದ ದುರ್ಘಟನೆ ನಿಮ್ಮ ಮನೆಯಲ್ಲಿ ನಡೆಯಬಾರದು, ನಿಮ್ಮ ಪ್ರೀತಿಗೆ, ಆಜನ್ಮ ಋಣದಲ್ಲಿರುತ್ತೇನೆ’ ಎಂದರು.
2026 ರ ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯ ನ್ಯೂಜಿಲೆಂಡ್ ಹಾಗೂ ಟೀಂ ಇಂಡಿಯಾ (India vs New Zealand) ನಡುವೆ ಅಹಮದಾಬಾದ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರು. ಮೊದಲ ಓವರ್‌ನಲ್ಲಿ ಸ್ಟ್ರೈಕ್ ತೆಗೆದುಕೊಂಡ ಸಂಜು ಸ್ಯಾಮ್ಸನ್ (Sanju Samson) ಅದ್ಭುತ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಖಾತೆ ತೆರೆದರು. ಇದರೊಂದಿಗೆ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ಮ್ಯಾಟ್ ಹೆನ್ರಿ ಅವರ ಎಸೆತದಲ್ಲಿ ಸಂಜು ಸ್ಯಾಮ್ಸನ್ ಸಿಕ್ಸ್ ಬಾರಿಸಿದ ತಕ್ಷಣ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಸಂಜು ಸ್ಯಾಮ್ಸನ್ ಇದುವರೆಗೆ ಆಡಿರುವ ನಾಲ್ಕು ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಮೊದಲ ಓವರ್‌ನಲ್ಲಿ ಸಿಕ್ಸ್ ಬಾರಿಸಿದ್ದಾರೆ . ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ 40 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದ ಇಂಗ್ಲೆಂಡ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸಂಜು ಕೇವಲ 21 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಫಿಲ್ ಸಾಲ್ಟ್ ಜೊತೆಗೆ, ರಹಮಾನಲ್ಲಾ ಗುರ್ಬಾಜ್ ಟಿ20 ವಿಶ್ವಕಪ್ ಪಂದ್ಯಗಳ ಮೊದಲ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಮತ್ತು ಕ್ವಿಂಟನ್ ಡಿ ಕಾಕ್ ಕೂಡ ಈ ಸಾಧನೆಯನ್ನು ಮೂರು ಬಾರಿ ಮಾಡಿದ್ದಾರೆ. ಆದಾಗ್ಯೂ, ಸಂಜು ಸ್ಯಾಮ್ಸನ್ ನಾಲ್ಕು ಸಿಕ್ಸರ್ ಬಾರಿಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಮೊದಲ ಓವರ್ನಲ್ಲೇ ಸಿಕ್ಸರ್
ನಮೀಬಿಯಾ ವಿರುದ್ಧದ ಪಂದ್ಯದ ಮೊದಲ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಸಿಕ್ಸರ್ ಬಾರಿಸಿದ್ದರು. ನಂತರ ಜಿಂಬಾಬ್ವೆ ವಿರುದ್ಧವೂ ಸಿಕ್ಸರ್ ಬಾರಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಸ್ಯಾಮ್ಸನ್ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ್ದರು. ಇದೀಗ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಸ್ಯಾಮ್ಸನ್ ಮೊದಲ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ್ದಾರೆ.
ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಫೈನಲ್‌ನಲ್ಲಿ ಟೀಂ ಇಂಡಿಯಾಗೆ ಭರ್ಜರಿ ಆರಂಭ ನೀಡಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಕೇವಲ ನಾಲ್ಕು ಓವರ್‌ಗಳಲ್ಲಿ ತಂಡದ ಸ್ಕೋರ್ ಅನ್ನು ಅರ್ಧಶತಕದ ಗಡಿ ದಾಟಿಸಿದರು. ಇದು ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಭಾರತದ ವೇಗದ ಆರಂಭಿಕ ಅರ್ಧಶತಕದ ಜೊತೆಯಾಟವಾಗಿದೆ. ಹಾಗೆಯೇ ಈ ಜೋಡಿ ಮೊದಲ ವಿಕೆಟ್ಗೆ 7.1 ಓವರ್‌ಗಳಲ್ಲಿ 98 ರನ್ಗಳ ಜೊತೆಯಾಟವನ್ನು ನೀಡಿತು. ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 52 ರನ್ ಬಾರಿಸಿ ಔಟಾದರು.
ಟೆಹರಾನ್, ಮಾರ್ಚ್ 8: ಬಹರೇನ್ ದೇಶದ ಮನಾಮದಲ್ಲಿರುವ ಅಮೆರಿಕದ ಐದನೇ ನೌಕಾಪಡೆ ಅಥವಾ ಫಿಫ್ಟ್ ಫ್ಲೀಟ್ (US 5th Fleet) ಮೇಲೆ ಇರಾನ್ ಮತ್ತೆ ದಾಳಿ ಎಸಗಿದೆ. ಇರಾನ್ನ ಹಲವಾರು ಕ್ಷಿಪಣಿಗಳು ಮತ್ತು ಡ್ರೋನ್ಗಳು ಅಮೆರಿಕದ ನೌಕೆಗಳ ಮೇಲೆ ಎರಗಿವೆ. ಈ ದಾಳಿಯಲ್ಲಿ 21 ಸೈನಿಕರು ಬಲಿಯಾಗಿದ್ದಾರೆ. ಕಳೆದ ತಿಂಗಳು, ಫೆಬ್ರುವರಿ 28ರಂದು ಕೂಡ ಇದೇ ಫಿಫ್ತ್ ಫ್ಲೀಟ್ ಹೆಡ್ಕ್ವಾರ್ಟರ್ಸ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಬ್ಯಾಲಿಸ್ಟಿಕ್ ಮಿಸೈಲ್ಗಳು ಮತ್ತು ಶಾಹಿದ್-136 ಡ್ರೋನ್ಗಳಿಂದ ದಾಳಿ ಮಾಡಲಾಗಿತ್ತು.
ರಾಡಾರ್ ಸೌಕರ್ಯಗಳು, ಸರ್ವಿಸ್ ಕಟ್ಟಡಗಳು, ಸೆಟಿಲೈಟ್ ಕಮ್ಯೂನಿಕೇಶನ್ ಟರ್ಮಿನಲ್ಗಳು ಸೇರಿದಂತೆ ಹಲವು ಕಟ್ಟಡಗಳಿಗೆ ಹಾನಿಯಾಗಿದ್ದು ಗೊತ್ತಾಗಿದೆ. ಮೊನ್ನೆ ಮಾರ್ಚ್ 6ರಂದು ಭಾರತಕ್ಕೆ ಬಂದು ವಾಪಸ್ ಹೋಗುತ್ತಿದ್ದ ಇರಾನೀ ಯುದ್ಧನೌಕೆಯೊಂದನ್ನು ಅಮೆರಿಕದ ಟಾರ್ಪಿಡೋ ದಾಳಿಯಲ್ಲಿ ಧ್ವಂಸ ಮಾಡಲಾಗಿದೆ. ಇದರಲ್ಲಿ ಹಲವು ಜನರು ಬಲಿಯಾಗಿದ್ದರು. ಅದರ ಬೆನ್ನಲ್ಲೇ ಇರಾನ್ ಇದೀಗ ಮುಯ್ಯಿ ದಾಳಿಯಾಗಿ ಅಮೆರಿಕದ ಫಿಫ್ಟ್ ಫ್ಲೀಟ್ ಮೇಲೆ ಎರಗಿದೆ.
ಅಮೆರಿಕದ ಹಡಗುಗಳ ಪಡೆಗಳಲ್ಲಿ ಒಂದು. ಫಸ್ಟ್ ಫ್ಲೀಟ್, ಸೆಕೆಂಡ್ ಫ್ಲೀಟ್, ಥರ್ಡ್ ಫ್ಲೀಟ್, ಹೀಗೆ 12 ಫ್ಲೀಟ್ಗಳಿವೆ. ಕೆಲವು ಸಕ್ರಿಯವಾಗಿವೆ, ಕೆಲವು ನಿಷ್ಕ್ರಿಯಗೊಂಡಿವೆ. ಒಂದೊಂದು ಫ್ಲೀಟ್ ಕೂಡ ನಿರ್ದಿಷ್ಟ ಸಮುದ್ರಪ್ರದೇಶದಲ್ಲಿ ಕಣ್ಗಾವಲು ಇಟ್ಟಿರುತ್ತವೆ.
ಫಿಫ್ತ್ ಫ್ಲೀಟ್ನ ಹೆಡ್ಕ್ವಾರ್ಟರ್ಸ್ ಬಹರೇನ್ನಲ್ಲಿದೆ. ಇದರಲ್ಲಿ ಸುಮಾರು 20-25 ಯುದ್ಧ ನೌಕೆಗಳಿವೆ. ಪರ್ಷಿಯಲ್ ಕೊಲ್ಲಿ, ಕೆಂಪು ಸಮುದ್ರ ಮತ್ತು ಅರೇಬಿಯನ್ ಸಮುದ್ರ ಸೇರಿದಂತೆ 2.5 ಮಿಲಿಯನ್ ಚದರ ಮೈಲುಗಳಷ್ಟು ಸಾಗರ ಪ್ರದೇಶವನ್ನು ಈ ಪಡೆ ಗಮನಿಸುತ್ತಿರುತ್ತದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಾಗಣೆಗೆ ಅಡ್ಡಿ ಇಲ್ಲದಂತೆ ಎಚ್ಚರ ವಹಿಸುವುದು ಸೇರದಂತೆ ಹಲವು ಗುರುತರ ಕಾರ್ಯಗಳನ್ನು ಇದು ಮಾಡುತ್ತದೆ.
ಹಾರ್ಮುಜ್ ಸ್ಟ್ರೇಟ್ ಅನ್ನು ತನ್ನ ಪೂರ್ಣ ಹತೋಟಿಗೆ ತೆಗೆದುಕೊಳ್ಳಲು ಇರಾನ್ಗೆ ಅಡ್ಡಿಯಾಗಿರುವುದು ಅಮೆರಿಕದ ಈ ಫಿಫ್ತ್ ಫ್ಲೀಟ್ ನೌಕಾಪಡೆ. ಹೀಗಾಗಿ, ಇದನ್ನು ಗುರಿಯಾಗಿಸಿ ಇರಾನ್ ದಾಳಿಗಳನ್ನು ಮಾಡಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
2026 ರ ಟಿ20 ವಿಶ್ವಕಪ್ ಫೈನಲ್ ನಡುವೆ ಬಿಸಿಸಿಐ, ಕ್ರಿಕೆಟ್ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ವಿಶ್ವ ಕ್ರಿಕೆಟ್ನ ಅತ್ಯಂತ ಯಶಸ್ವಿ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿ ಇದೇ ಮಾಚ್ 28 ರಿಂದ ಆರಂಭವಾಗಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದ ನಡುವೆ ಐಪಿಎಲ್ನ ಅಧಿಕೃತ ಪ್ರಸಾರಕರಾಗಿರುವ ಸ್ಟಾರ್ ಸ್ಪೋರ್ಟ್ಸ್ ತನ್ನ ಸೋಶಿಯಲ್ ಮೀಡಯಾ ಖಾತೆಯಲ್ಲಿ ಐಪಿಎಲ್ ಆರಂಭದ ದಿನಾಂಕವನ್ನು ಬಹಿರಂಗಪಡಿಸಿದೆ.
ಪೂರ್ಣ ವೇಳಾಪಟ್ಟಿ ಬಾಕಿ ಇದೆ
ಆದಾಗ್ಯೂ 2026 ರ ಐಪಿಎಲ್ನ ಪೂರ್ಣ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಈ ಆವೃತ್ತಿಯ ಆರಂಭಿಕ ಪಂದ್ಯ ಯಾವಾಗ ನಡೆಯಲಿದೆ ಎಂಬುದು ಸ್ಪಷ್ಟವಾಗಿದೆ. ಕೆಲವು ದಿನಗಳಿಂದ ಕೇಳಿಬರುತ್ತಿರುವ ಮಾಹಿತಿಯ ಪ್ರಕಾರ, ಐಪಿಎಲ್ 2026 ರ ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆಯಿದೆ. ಮೊದಲ ಪಂದ್ಯವು ಕಳೆದ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರನ್ನರ್ ಅಪ್ ಪಂಜಾಬ್ ಕಿಂಗ್ಸ್ ನಡುವೆ ನಡೆಯುವ ಸಾಧ್ಯತೆಯಿದೆ ಎಂದು ವರದಿಗಳಿವೆ.
ಅದೇ ರೀತಿ, ಐಪಿಎಲ್ 2026 ರ ಫೈನಲ್ ಪಂದ್ಯವೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆಗಳಿವೆ. ಹಾಗೆಯೇ ಈ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಐದು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಇದರ ಜೊತೆಗೆ, ಒಂದು ಪ್ಲೇಆಫ್ ಪಂದ್ಯ ಕೂಡ ಇದೇ ಮೈದಾನದಲ್ಲಿ ನಡೆಯುವ ಸಾಧ್ಯತೆಯಿದೆ. ಆದಾಗ್ಯೂ, ಬಿಸಿಸಿಐ ಶೀಘ್ರದಲ್ಲೇ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದ್ದು, ಅದರಲ್ಲಿ ಪೂರ್ಣ ಚಿತ್ರಣ ಸಿಗಲಿದೆ.
2 ಹಂತಗಳಲ್ಲಿ ಐಪಿಎಲ್ ವೇಳಾಪಟ್ಟಿ ಬಿಡುಗಡೆ..?
ಈ ಬಾರಿ, ಐಪಿಎಲ್ 2026 ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಘೋಷಿಸುವ ಸಾಧ್ಯತೆಯಿದೆ ಎಂಬ ಮಾಹಿತಿ ಈಗಾಗಲೇ ಹರಿದಾಡುತ್ತಿದೆ. ಮೊದಲ ಹಂತದ ವೇಳಾಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿ ಈಗಾಗಲೇ ಅನುಮೋದಿಸಿದೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ವೇಳಾಪಟ್ಟಿಯನ್ನು ಘೋಷಿಸುವಲ್ಲಿ ಸ್ವಲ್ಪ ವಿಳಂಬವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಾಮರಾಜನಗರ, ಮಾರ್ಚ್ 08: ಬಜೆಟ್ನಲ್ಲಿ ಉಡುತೊರೆ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಗೆ 490 ಕೋಟಿ ರೂ. ನೀರಾವರಿ ಯೋಜನೆಗೆ ಅಸ್ತು ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಹೆಸರಿನಲ್ಲಿ ಮಾದಪ್ಪನಿಗೆ JDS ಹನೂರು ಶಾಸಕ ಮಂಜುನಾಥ್ರಿಂದ ಪೂಜೆ ಸಲ್ಲಿಸಲಾಗಿದೆ. ಉಡುತೊರೆ ಜಲಾಶಯಕ್ಕೆ ನೀರು ತುಂಬಿಸಬೇಕೆಂದು ಒತ್ತಾಯ ಇತ್ತು. 490 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಿಸುವುದಾಗಿ ಬಜೆಟ್ನಲ್ಲಿ ಅನುದಾನ ಘೋಷಿಸಲಾಗಿದೆ. ಹಾಗಾಗಿ ಸಿಎಂ, ಡಿಸಿಎಂ ಸೇರಿದಂತೆ ಸಚಿವರಾದ ಕೆ.ವೆಂಕಟೇಶ್, ಡಾ.ಹೆಚ್.ಸಿ.ಮಹದೇವಪ್ಪ ಹೆಸರಲ್ಲೂ ಪೂಜೆ ಮಾಡಿಸಲಾಗಿದೆ.
ಮನೆಗೆ ಮಗುವಿನ (child) ಆಗಮನವಾಗುತ್ತಿದ್ದಂತೆ ಆ ಖುಷಿಯೇ ಬೇರೆ. ಇನ್ನುಈ ಪುಟ್ಟ ಮಗುವನ್ನು ಹೇಗೆ ಎತ್ತಿಕೊಳ್ಳುವಾಗ ಭಯವಾಗುವುದು ಸಹಜ. ಹೀಗಾಗಿ ನವಜಾತ ಶಿಶುವನ್ನು ಎತ್ತಿಕೊಳ್ಳಲು ಹಿಂದೇಟು ಹಾಕುವುದೇ ಹೆಚ್ಚು. ಇಲ್ಲೊಬ್ಬ ತಂದೆಯದ್ದು (father) ಅದೇ ಕಥೆ. ಆಗ ತಾನೇ ಜನಿಸಿದ ಮಗುವನ್ನು ವೈದ್ಯರು ವ್ಯಕ್ತಿಯ ಕೈಗೆ ಕೊಟ್ಟಿದ್ದು, ಆ ವ್ಯಕ್ತಿ ಮಾತ್ರ ಭಯದಲ್ಲೇ ಹಿಂದೇಟು ಹಾಕಿರುವ ವಿಡಿಯೋ ವೈರಲ್ ಆಗಿದೆ. ತಂದೆಯಾದ ಖುಷಿ ನಡುವೆ ಈ ವ್ಯಕ್ತಿ ನೀಡಿದ ರಿಯಾಕ್ಷನ್‌ಗೆ ನೆಟ್ಟಿಗರು ಶಾಕ್ ಆಗಿದ್ದಾರೆ.
ತಮಿಳ್ (Tamil) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಂದೆಯಾದ ಸಂಭ್ರಮದಲ್ಲಿರುವುದನ್ನು ಕಾಣಬಹುದು. ವೈದ್ಯರು ಆಗ ತಾನೇ ಹುಟ್ಟಿದ ಮಗುವನ್ನು ಕೈಗೆ ನೀಡಿದ್ದಾರೆ. ಆದರೆ ಈ ವ್ಯಕ್ತಿ ಮಾತ್ರ ನವಜಾತ ಶಿಶುವನ್ನು ಎತ್ತಿಕೊಳ್ಳಲು ಭಯ ಪಡುತ್ತಾ ಹಿಂದೇಟು ಹಾಕುತ್ತಿದ್ದು, ವೈದ್ಯರು ಭುಜ ತಟ್ಟಿ ಸಮಾಧಾನ ಪಡಿಸುವುದನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಐ ಮಿಸ್ ಯು ಪಪ್ಪಾ ಎಂದರೆ, ಮತ್ತೊಬ್ಬರು ಪ್ರತಿಯೊಬ್ಬ ತಂದೆಯ ಜೀವನದ ಸಂತೋಷದ ಹಾಗೂ ಮರೆಯಲಾರದ ಕ್ಷಣ ಎಂದು ಹೇಳಿದ್ದಾರೆ. ಇನ್ನೊಬ್ಬರು ತಂದೆಯಾಗುವ ಸಮಯದಲ್ಲಿ ಆತಂಕ ಭಯ ಸಹಜ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ