ಆದಾಯ ತೆರಿಗೆ ಇಲಾಖೆ ಈಗೀಗ ಬಹಳ ಕ್ರಿಯಾಶೀಲವಾಗಿದ್ದು, ತೆರಿಗೆ ವಂಚಕರು, ಕಪ್ಪು ಹಣದ ಜಾಡನ್ನು ಪತ್ತೆ ಮಾಡಲು ಬಹಳ ಎಚ್ಚರ ವಹಿಸುತ್ತದೆ. ಅಸಹಜ ಆದಾಯ ಹೆಚ್ಚಳ, ವಹಿವಾಟುಗಳಾದಲ್ಲಿ ಅದರ ಗಮನಕ್ಕೆ ಬೇಗ ಬರುತ್ತದೆ. ಅವನ್ನು ಪತ್ತೆ ಮಾಡಲೆಂದೇ ಎಐ ಇತ್ಯಾದಿ ಆಧುನಿಕ ತಂತ್ರಜ್ಞಾನವನ್ನು ಇಲಾಖೆ (Income Tax department) ಬಳಸುತ್ತದೆ. ಇತ್ತೀಚೆಗೆ ಮಹಿಳೆಯೊಬ್ಬರು ತಮ್ಮ ಘೋಷಿತ ಆದಾಯಕ್ಕಿಂತ ಹತ್ತು ಪಟ್ಟು ಹೆಚ್ಚು ಮೊತ್ತದಷ್ಟು ಹಣವನ್ನು ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟಲು ಬಳಸಿ, ಐಟಿ ಕಣ್ಣಿಗೆ ಸಿಕ್ಕು, ಕೋರ್ಟ್ ಕಟಕಟೆ ಏರಬೇಕಾದ ಘಟನೆ ಬೆಳಕಿಗೆ ಬಂದಿದೆ. ಇದು ಪ್ರತಿಯೊಬ್ಬರೂ ಕಲಿಯಬೇಕಾದ ಪಾಠ ಎನಿಸಬಹುದು.
ಪ್ರತಿಭಾ ಎನ್ನುವ ಮಹಿಳೆ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ತನ್ನ ವಾರ್ಷಿಕ ಆದಾಯ 4.81 ಲಕ್ಷ ರೂ ಎಂದು ಐಟಿಆರ್ನಲ್ಲಿ ಘೋಷಿಸಿದ್ದರು. ಆದರೆ, ಆ ವರ್ಷ ಆಕೆ 50 ಲಕ್ಷ ರೂ ಮೊತ್ತದ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿಸಿದ್ದರು. ಇದು ಆದಾಯ ಇಲಾಖೆಯ ಗಮನಕ್ಕೆ ಬಂದಿದೆ.
ಘೋಷಿತ ಆದಾಯ 4.81 ಇರುವಾಗ ಇನ್ಷೂರೆನ್ಸ್ ಪ್ರೀಮಿಯಮ್ಗೆ ಪಾವತಿಸಲು 50 ಲಕ್ಷ ರೂ ಎಲ್ಲಿಂದ ಬಂತು ಎನ್ನುವುದು ಐಟಿ ಅನುಮಾನ. ಆ ಹಣದ ಮೂಲ ಯಾವುದೆಂದು ಸರಿಯಾಗಿ ವಿವರಿಸದಿದ್ದಾಗ ಅದನ್ನು ಅನ್ಎಕ್ಸ್ಪ್ಲೇನ್ಡ್ ಇನ್ವೆಸ್ಟ್ಮೆಂಟ್ ಎಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಎನ್ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್ಗೂ ಸೈ, ಹೆಲ್ತ್ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?
ಯಾವುದೇ ಪ್ರಾಪರ್ಟಿ ಖರೀದಿ ನಡೆದಾಗ, ದೊಡ್ಡ ಮೊತ್ತದ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿಯಾದಾಗ, ದೊಡ್ಡ ಮೊತ್ತದ ಬ್ಯಾಂಕ್ ಠೇವಣಿ ಆದಾಗ, ಷೇರು ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ ದೊಡ್ಡ ಹೂಡಿಕೆಗಳಾದಾಗ, ಇತ್ಯಾದಿ ಸಂದರ್ಭದಲ್ಲಿ ತೆರಿಗೆ ಅಧಿಕಾರಿಗಳು ಆ ವಹಿವಾಟು ನಡೆಸಿದ ವ್ಯಕ್ತಿಯ ಆದಾಯ ಹರಿವನ್ನು ಪರಿಶೀಲಿಸುತ್ತಾರೆ. ಐಟಿ ರಿಟರ್ನಸ್ನಲ್ಲಿ ಫೈಲ್ ಮಾಡಲಾದ ವಿವರವನ್ನು ಪರಿಶೀಲಿಸುತ್ತಾರೆ. ಮಹಿಳೆಯ ಕೇಸ್ನಲ್ಲೂ ಆಗಿದ್ದು ಇದೆಯೇ.
ಕೋರ್ಟ್ನಲ್ಲಿ ಮಹಿಳೆಯ ವಿವರಣೆಗೆ ಸಿಗಲಿಲ್ಲ ಸಮಾಧಾನ
50 ಲಕ್ಷ ರೂ ಹಣ ಎಲ್ಲಿಂದ ಬಂತು ಎಂದು ಕೇಳಿದಾಗ ಮಹಿಳೆ, ಅದು ತನ್ನ ವೈಯಕ್ತಿಕ ಹಣವಲ್ಲ. ತನ್ನ ಕುಟುಂಬದ ಹಿಂದೂ ಅವಿಭಜಿತ ಕುಟುಂಬ ಅಥವಾ ಎಚ್ಯುಎಫ್ಗೆ ಸೇರಿದ ಹಣ. ತಮ್ಮ ಕುಟುಂಬ ಹೊಂದಿರುವ ಸೇಬಿನ ತೋಟದಿಂದ ಬಂದ ಕೃಷಿ ಆದಾಯದ ಹಣ ಎಂದು ಆಕೆ ವಿವರಣೆ ಕೊಟ್ಟರು.
ಇಂಥ ಸಂದರ್ಭದಲ್ಲಿ ನಿರ್ದಿಷ್ಟ ಆದಾಯ ಬರುವಂತಹ ಕ್ಯಾಷ್ ಫ್ಲೋ ದಾಖಲೆಗಳು, ಎಂಒಯು, ಅಥವಾ ಸೇಲ್ ಡೀಡ್ ಅಥವಾ ಇನ್ನೇನಾದರೂ ಮಾರಾಟ ದಾಖಲೆಗಳಿವೆಯಾ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈ ಮಹಿಳೆಯ ಪ್ರಕರಣದಲ್ಲೂ ಇದನ್ನು ಪರಿಶೀಲಿಸಲಾಗಿದೆ. ಆದರೆ ಸೂಕ್ತ ದಾಖಲೆಗಳು ಸಿಗಲಿಲ್ಲ. ಅಂದರೆ, 50 ಲಕ್ಷ ರೂ ಪ್ರೀಮಿಯಮ್ ಪಾವತಿಗೆ ಬೇಕಾದಷ್ಟು ಹಣವು ಆಕೆಯ ಕುಟುಂಬದಲ್ಲಿ ಇತ್ತು ಎನ್ನುವುದಕ್ಕೆ ದಾಖಲೆಗಳು ಇರಲಿಲ್ಲ.
ಇದನ್ನೂ ಓದಿ: ಮಾರ್ಕೆಟ್ ಟ್ರೆಂಡ್, ಎಕ್ಸ್ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು
ಮಹಿಳೆಯ ವಿವರಣೆಯು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಗೆ ಸಮಾಧಾನ ಕೊಡಲಿಲ್ಲ. ಆಕೆಯ ವಿರುದ್ಧ ತೀರ್ಪು ಬಂದಿತು. ಆಕೆ ದಂಡ ಸಮೇತವಾಗಿ 50 ಲಕ್ಷ ರೂಗೆ ತೆರಿಗೆ ಇತ್ಯಾದಿಯನ್ನು ಪಾವತಿಸುವಂತಾಯಿತು.
ನೀವೂ ಕೂಡ ದೊಡ್ಡ ಮೊತ್ತದ ಹಣವನ್ನು ಯಾವುದರಲ್ಲಾದರೂ ಹೂಡಿಕೆ ಮಾಡುತ್ತಿದ್ದಾಗ, ಆ ಹಣ ಎಲ್ಲಿಂದ ಬಂತು ಎನ್ನುವುದಕ್ಕೆ ಸೂಕ್ತ ದಾಖಲೆಗಳನ್ನು ಹೊಂದಿರುವುದು ಬಹಳ ಮುಖ್ಯ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ