Category Archives: Blog

Your blog category

ಮನೆ ಮುಂದೆ ಸೈಕಲ್ ಓಡಿಸುತ್ತಿದ್ದ ಬಾಲಕನ ಮೇಲೆ ಹರೀತು ಕಾರು! ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ – Kannada News | Bengaluru: Boy on Cycle Hit by car in Girinagar, CCTV Captures Horrific Crash

ಬೆಂಗಳೂರು, ಫೆಬ್ರುವರಿ 08: ಮನೆಯ ಮುಂದೆ ಸೈಕಲ್ ಹೊಡೆಯುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ (Car accident) ಹೊಡೆದಿರುವ ಘಟನೆ ಗಿರಿನಗರದ ಮೊದಲನೇ ಮುಖ್ಯ ರಸ್ತೆಯಲ್ಲಿ ನಡೆದಿದೆ. ರಸ್ತೆ ಬದಿ ನಿಂತಿದ್ದ ಮಹೀಂದ್ರಾ XUV300 ಕಾರನ್ನು ಚಾಲಕ ರಸ್ತೆಗಿಳಿಸುವ ವೇಳೆ ಸೈಲಕ್​ನಲ್ಲಿದ್ದ ಬಾಲಕ ವಿಕಾಸ್ ಅಡ್ಡ ಬಂದಿದ್ದಾನೆ. ಈ ವೇಳೆ ಕಾರು ಬಾಲಕನಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಾಯಗೊಂಡ ವಿಕಾಸ್‌ನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ದೃಶ್ಯವು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್​ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ – Kannada News | Sarvam AI releases advanced document intelligence model for Indic languages, gets praises from critical reviewers

ನವದೆಹಲಿ, ಫೆಬ್ರುವರಿ 8: ಭಾರತದ ಎಐ ಸ್ಟಾರ್ಟಪ್ ಸರ್ವಮ್ ಎಐ (Sarvam AI) ಇದೀಗ ಹೊಸ ಹೊಸ ಮಲ್ಟಿಮೋಡಲ್ ಎಐ ಮಾಡಲ್​ವೊಂದನ್ನು ಅನಾವರಣಗೊಳಿಸಿದೆ. ಸರ್ವಮ್ ವಿಶನ್ (Sarvam Vision) ಎಂದು ಕರೆಯಲಾಗಿರುವ ಈ ಮಾಡಲ್ ಭಾರತೀಯ ಭಾಷೆಗಳಲ್ಲಿ ಡಾಕ್ಯುಮೆಂಟ್ ಇಂಟೆಲಿಜೆನ್ಸ್, ಆಪ್ಟಿಕಲ್ ಕ್ಯಾರೆಕ್ಟರ್ ರೆಗಗ್ನಿಶನ್ (ಒಸಿಆರ್) ಮತ್ತು ವಿಶುವಲ್ ಲ್ಯಾಂಗ್ವೇಜ್ ಗ್ರಹಿಕೆಯ (Visual Language Understanding) ಪರಿಣಿತಿ ಹೊಂದಿದೆ. ಅಂದರೆ, ಭಾರತೀಯ ಭಾಷೆಗಳ ವಿಡಿಯೋ, ಪಠ್ಯ ಮತ್ತು ದಾಖಲೆಗಳನ್ನು ಇದು ಗ್ರಹಿಸಿ, ನಿಮಗೆ ಬೇಕಾದ ಹೂರಣವಾಗಿ ಸಿದ್ದಪಡಿಸಬಲ್ಲುದು.

ಇದರ ಡಾಕ್ಯುಮೆಂಟ್ ಇಂಟೆಲಿಜೆನ್ಸ್ ಸಾಮರ್ಥ್ಯ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ. ಚ್ಯಾಟ್​ಜಿಪಿಟಿ 5.2, ಜೆಮಿನಿ 3 ಪ್ರೋ ಇತ್ಯಾದಿ ವಿಶ್ವದ ಶಕ್ತಿಶಾಲಿ ಎಐ ಮಾಡಲ್​ಗಳನ್ನು ಮೀರಿಸುವ ಮಟ್ಟಿಗೆ ಇದರ ಡಾಕ್ಯುಮೆಂಟ್ ಇಂಟೆಲಿಜೆನ್ಸ್ ಸಾಮರ್ಥ್ಯ ಇದೆ. ಭಾರತದ ಹೆಚ್ಚಿನ ಸಾಂಪ್ರದಾಯಿಕ ಜ್ಞಾನವು ಭೌತಿಕ ದಾಖಲೆಗಳು, ಸ್ಕ್ಯಾನ್ ಆದ ಪ್ರತಿಗಳು ಇತ್ಯಾದಿಗಳ ರೂಪದಲ್ಲಿವೆ. ಇವುಗಳಲ್ಲಿರುವ ಪಠ್ಯವನ್ನು ಹೆಕ್ಕಿ ತೆಗೆಯುವ ಕೆಲಸವನ್ನು ಸರ್ವಮ್ ಎಐ ನಿರಾಯಾಸವಾಗಿ ಮಾಡಬಲ್ಲುದು.

ಇದನ್ನೂ ಓದಿ: ಭಾರತೀಯರ ಇಂಧನ ಭದ್ರತೆಗೆ ಮೊದಲ ಆದ್ಯತೆ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ

ಭಾರತೀಯ ಭಾಷೆಗಳ ಪಠ್ಯವನ್ನು ಸರ್ವಮ್ ಎಐನಷ್ಟು ಕರಾರುವಾಕ್ಕಾಗಿ ವಿಶ್ವದ ಯಾವುದೇ ಮಾಡಲ್​ಗಳು ಓದಲಾಗಿಲ್ಲ ಎಂದು ಹೇಳಲಾಗುತ್ತಿದೆ. ಕನ್ನಡವೂ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಇದು ಪರಿಣಿತಿ ಹೊಂದಿದೆ. ಪಠ್ಯ ಮತ್ತು ದೃಶ್ಯಗಳಲ್ಲಿರುವ ವಿಚಾರಗಳನ್ನು ಇದು ಹೆಚ್ಚು ನಿಖರವಾಗಿ ಗ್ರಹಿಸಬಲ್ಲುದು.

ಕಟು ಟೀಕಾಕಾರರಿಂದಲೂ ಸರ್ವಮ್ ಪ್ರಶಂಸೆ

ಸರ್ವಮ್ ಎಐ ಆವಿಷ್ಕಾರಗಳನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಶಂಸಿಸಿದ್ದಾರೆ. ‘ದೇಶೀಯ ಮಾಡಲ್ ನಿರ್ಮಿಸುವ ತಂತ್ರಗಾರಿಕೆಯು ಫಲಕೊಡುತ್ತಿದೆ. ನಮ್ಮ ಎಐ ಮಿಷನ್​ನ ಭಾಗವಾಗಿ ಸರ್ವಂ ಬಿಡುಗಡೆ ಮಾಡಿದ ಸುಧಾರಿತ ಮಾಡಲ್ ಅನ್ನು ಕಟು ಟೀಕಾಕಾರರೂ ಪ್ರಶಂಸಿಸುತ್ತಿದ್ದಾರೆ. ಈ ಮಧ್ಯೆ ನಮ್ಮ ಬುದ್ಧಿವಂತ ಯುವ ಎಂಜಿನಿಯರುಗಳು ಮೆಟೀರಿಯಲ್ ಸೈನ್ಸ್, ಹೆಲ್ತ್​ಕೇರ್ ಮತ್ತು ಸೈಬರ್​ಸೆಕ್ಯೂರಿಟಿ ಕ್ಷೇತ್ರದಲ್ಲಿ ನಾವೀನ್ಯತೆ ಸಾಧಿಸಲು ಕೆಲಸ ಮಾಡುತ್ತಿದ್ದು, ಅದನ್ನು ಇಡೀ ವಿಶ್ವವೇ ಆದರಿಸುವಂತಾಗುತ್ತದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರು ಟ್ವೀಟ್ ಮಾಡಿದ್ದಾರೆ.

ವರ್ಷದ ಹಿಂದೆ ಸರ್ವಮ್ ಎಐನ ಮೂಲ ಮಾಡಲ್ ಬಿಡುಗಡೆಯಾದಾಗ ಕಟುವಾಗಿ ಟೀಕಿಸಿದ್ದ ವ್ಯಕ್ತಿಯೊಬ್ಬರು ಈಗ ಸರ್ವಮ್​ನ ಅಡ್ವಾನ್ಸ್ಡ್ ಮಾಡಲ್ ಕಂಡು ಬೆರಗಾಗಿದ್ದಾರೆ. ತಾನು ಸರ್ವಮ್ ಬಗ್ಗೆ ಆಗ ಹೇಳಿದ್ದು ತಪ್ಪಾಗಿದೆ ಎಂದು ಹೇಳಿ, ಸರ್ವಮ್ ಅದೆಷ್ಟು ಉಪಯುಕ್ತ ಮಾಡಲ್ ಆಗಿ ರೂಪುಗೊಂಡಿದೆ ಎಂಬುದನ್ನು ವಿವರಿಸಿದ್ದಾರೆ. ವೈಷ್ಣವ್ ಅವರು ಆ ವ್ಯಕ್ತಿಯ ಆ ಟ್ವೀಟ್ ಅನ್ನು ಪ್ರಸ್ತಾಪಿಸಿದ್ದಾರೆ.

ಅಶ್ವಿನಿ ವೈಷ್ಣವ್ ಅವರ ಟ್ವೀಟ್

ಇದನ್ನೂ ಓದಿ: ಭಾರತ ಯಾವುದೇ ದೇಶದಿಂದ ತೈಲ ಖರೀದಿಸಲು ಸ್ವತಂತ್ರವಾಗಿದೆ, ವೆನೆಜುವೆಲಾದ ತೈಲ ಖರೀದಿ ಕುರಿತು ರಷ್ಯಾ ಮಾತು

ಸರ್ವಮ್ ಬಗ್ಗೆ ಹೇಳಿದ್ದೇನು?

‘ವರ್ಷದ ಹಿಂದೆ ಅವರ ಬಗ್ಗೆ (ಸರ್ವಮ್ ಎಐ) ನಾನು ಬರೆದಾಗ, ಸಣ್ಣ ಭಾರತೀಯ ಭಾಷಾ ಮಾಡಲ್​ಗಳನ್ನು ಟ್ರೈನ್ ಮಾಡುವ ರೀತಿ ತಪ್ಪಿದೆ ಎನಿಸಿತ್ತು. ಆದರೆ, ಪೂರ್ಣ ಪರಿವರ್ತನೆಯೇ ಮಾಡಿಬಿಟ್ಟಿದ್ದಾರೆ. ಇಂಡಿಕ್ ಲ್ಯಾಂಗ್ವೇಜ್​ಗಳಿಗೆ ಇವರ ಪಠ್ಯದಿಂದ ಮಾತು, ಮಾತಿನಿಂದ ಪಠ್ಯ, ಒಸಿಆರ್ ಮಾಡಲ್​ಗಳು ಅತ್ಯುತ್ತಮ ಎನಿಸಿವೆ. ಬೆಲೆಯೂ ಕಡಿಮೆ ಇದೆ. ವೆಬ್​ಸೈಟ್ ಕೂಡ ಸುಂದರವಾಗಿದೆ. ಬಳಕೆಗೆ ಸುಲಭವಿದೆ’ ಎಂದು ಡೀಡಿ ಹೆಸರಿನ ಆ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 11:36 am, Sun, 8 February 26

Source link

ನೆರೆ ರಾಜ್ಯಗಳಲ್ಲಿ ಹಕ್ಕಿ ಜ್ವರದ ಅಬ್ಬರ: ಕರ್ನಾಟಕದಲ್ಲೂ ಶುರುವಾಯತ್ತು H5N1 ಟೆನ್ಷನ್ – Kannada News | Bird Flu Alert in Karnataka: Doctors Urge Preventive Measures

ಬೆಂಗಳೂರು, ಫೆಬ್ರವರಿ 08: ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಹಕ್ಕಿ ಜ್ವರದ ಭೀತಿ ಹಿನ್ನೆಲೆ ರಾಜ್ಯದಲ್ಲೂ H5N1 ಟೆನ್ಷನ್ ಶುರುವಾಗಿದೆ. ಹಕ್ಕಿ ಜ್ವರಕ್ಕೆ ತಮಿಳನಾಡಿನಲ್ಲಿ 1,500ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿದ್ದರೆ, ಇತ್ತ ಮಹಾರಷ್ಟ್ರದಲ್ಲೂ ವೈರಸ್​​ ಸದ್ದು ಮಾಡತೊಡಗಿದೆ. ಹೀಗಾಗಿ ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಪಶುಸಂಗೋಪಾನ ಇಲಾಖೆ ಸೂಚಿಸಿದೆ. ಹಕ್ಕಿ ಜ್ವರದ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಏನಿದು ಹಕ್ಕಿಜ್ವರ?

ಇದು H5N1 ವೈರಸ್‌ನಿಂದ ಪಕ್ಷಿಗಳಲ್ಲಿ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸೋಂಕಿತ ಪಕ್ಷಿಗಳ ನೇರ ಸಂಪರ್ಕ, ಲಾಲಾರಸ ಅಥವಾ ಮಲದಿಂದ ಮನುಷ್ಯರಲ್ಲೂ ಹಕ್ಕಿ ಜ್ವರ ಕಾಣಿಸಿಕೊಳ್ಳಬಹುದಾಗಿದೆ. ಸೋಂಕಿತ ಪ್ರಾಣಿಗಳ ಮಲ, ಮೂಗು ಅಥವಾ ಬಾಯಿಯ ಸ್ರವಿಸುವಿಕೆಯಿಂದ ಮನುಷ್ಯರಿಗೆ ಈ ವೈಎಸ್​​ ಹರಡುವ ಸಾಧ್ಯತೆ ಹೆಚ್ಚು. ಮಾನವರಲ್ಲಿ ಹಕ್ಕಿ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಸೋಂಕಿತ ಹಕ್ಕಿಯೊಂದಿಗೆ ಸಂಪರ್ಕಕ್ಕೆ ಬಂದ 4 ರಿಂದ 6 ದಿನಗಳ ನಂತರ ಪ್ರಾರಂಭವಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಹಕ್ಕಿ ಜ್ವರ ಹೇಗೆ ಹರಡುತ್ತೆ? ಯಾವ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು

ರೋಗ ಲಕ್ಷಣಗಳು ಏನು?

  • ಉಸಿರಾಟದಲ್ಲಿ ತೊಂದರೆ
  • ಜ್ವರ
  • ಕಣ್ಣು ಕೆಂಪಾಗುವುದು ಮತ್ತು ಕಿರಿಕಿರಿ
  • ಕೆಮ್ಮು
  • ಗಂಟಲು ನೋವು
  • ಸ್ನಾಯು ಅಥವಾ ದೇಹದ ನೋವು
  • ತಲೆನೋವು -ಆಯಾಸ
  • ನ್ಯೂಮೋನಿಯಾ

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯ ಡಾ.ಸುರೇಶ್, ಪೌಲ್ಟ್ರಿ ಮತ್ತು ವೆಟರ್ನರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತೆ. ಹಕ್ಕಿ ಜ್ವರಕ್ಕೆ ತುತ್ತಾದವರ ಸಾವಿನ ಪ್ರವಾಣ ಶೇ.50ರಷ್ಟಿದ್ದು, ಸೋಂಕು ಹೆಚ್ಚಾದರೆ ಸಾಂಕ್ರಾಮಿಕ ಆಗುವ ಸಾಧ್ಯತೆ ಇದೆ. ಹೀಗಾಗಿ ಸೆಮಿ ಬಾಯ್ಲ್ಡ್‌ ಫುಡ್ ಬಗ್ಗೆ ಜನರು ಎಚ್ಚರ ವಹಿಸಬೇಕು. ಅರೆಬೆಂದ ಮಾಂಸಾಹಾರದಿಂದ ಈ ವೈರಸ್​​ ಹರಡುವ ಸಾಧ್ಯತೆ ಹೆಚ್ಚಿದೆ. ಹ್ಯಾಂಡ್ ಹೈಜಿನ್ ಕಡೆಗೂ ಮುಖ್ಯವಾಗಿ ಗಮನ ವಹಿಸಬೇಕು ಎಂದು ತಿಳಿಸಿದ್ದಾರೆ. ರೋಗ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಯ ವಹಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆಯೂ ಅವರು ಸಲಹೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Viral Post: ಮದುವೆ ದುಡ್ಡಿನಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲೇ ಸಿಂಪಲ್​ ಆಗಿ ವಿವಾಹವಾದ ಜೋಡಿ – Kannada News | Wedding Budget to Home: Couple’s Smart Choice for Debt Free Marriage and Future

ಮದುವೆ ಜೀವನ ಒಂದು ಮುಖ್ಯ ಭಾಗ ಮತ್ತು ಅದು ಎಲ್ಲ ರೀತಿಯಲ್ಲೂ ಪರಿಪೂರ್ಣವಾಗಬೇಕೆಂಬ ಆಸೆಯಿಂದ ಸಾಕಷ್ಟು ಜನರು ಸಾಲ ಮಾಡಿ ಅದ್ದೂರಿಯಾಗಿ ವಿವಾಹವಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ವೆಡ್ಡಿಂಗ್​ ಲೋನ್​ ಕೂಡ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಮದುವೆ ಆಗಿ ವರ್ಷಗಳೇ ಕಳೆದರೂ ಕೂಡ ಖುಷಿಗಿಂತ ಸಾಲ ಮುಗಿದಿಲ್ಲ ಎಂಬ ಚಿಂತೆಯೇ ಜೋಡಿಯನ್ನು ಹೆಚ್ಚು ಕಾಡುತ್ತಿರುತ್ತದೆ. ಆದರೆ ಇಲ್ಲೊಂದು ಜೋಡಿ ಒಂದು ದಿನದ ಆಚರಣೆಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡುವ ಬದಲು, ಆ ದುಡ್ಡಿನಲ್ಲಿ ತಮ್ಮ ಜೀವನದುದ್ದಕ್ಕೂ ಆಸರೆಯಾಗುವ ಮನೆಯೊಂದನ್ನು ಖರೀದಿಸಿದ್ದಾರೆ. ಈ ಮೂಲಕ ಮದುವೆ ದುಡ್ಡಿನಲ್ಲಿ ಮನೆ ಖರೀದಿಸಿ, ಹೊಸ ಮನೆಯಲ್ಲೇ ಸಿಂಪಲ್​​ ಆಗಿ ಮದುವೆಯಾಗಿದ್ದಾರೆ.

@ArnazHathiram ಎಂಬ ಟ್ವಿಟರ್​ ಖಾತೆಯಲ್ಲಿ ಈ ವಿಶಿಷ್ಟ ಮದುವೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಪೋಸ್ಟ್​ನಲ್ಲಿ ಹೊಸ ಮನೆಯಲ್ಲೇ ವಿವಾಹವಾಗಿರುವ ಫೋಟೋವನ್ನು ಕಾಣಬಹುದು. ನವ ಜೋಡಿಯ ಈ ನಿರ್ಧಾರಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ಪಿಯುಸಿ ವಿದ್ಯಾರ್ಥಿ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ಬಂದ ಅತಿಥಿಗಳಿಗೆ ಹೆಚ್ಚು ಖರ್ಚು ಮಾಡದೆ, ತಮ್ಮ ಕನಸಿನ ಮನೆಯಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ಅತ್ಯಂತ ಸರಳ ರೀತಿಯಲ್ಲಿ ವಿವಾಹವಾಗಿದ್ದಾರೆ. ಮದುವೆಯ ಹೆಸರಿನಲ್ಲಿ ಸಾಲ ಮಾಡಿ ನಂತರ ಉಂಟಾಗುವ ಆರ್ಥಿಕ ತೊಂದರೆಗಳಿಗಿಂತ ಇಂತಹ ಪ್ರಾಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ಈ ದಂಪತಿ ಸಾಬೀತುಪಡಿಸಿದ್ದಾರೆ. ಕೇವಲ ಪ್ರದರ್ಶನಕ್ಕಾಗಿ ಅಲ್ಲ, ಭವಿಷ್ಯದ ಭದ್ರತೆಗಾಗಿ ಹೂಡಿಕೆ ಮಾಡುವುದು ಉತ್ತಮ ವಿಷಯ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್ – Kannada News | Saurabh Netravalkar Scripts Unwanted Record in T20 World Cup 2026

ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್​ಗಳನ್ನು ಎಸೆದ ಬೌಲರ್ ಯಾರು? ಈ ಪ್ರಶ್ನೆಗೆ ಉತ್ತರ ಸೌರಭ್ ನೇತ್ರವಲ್ಕರ್. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಸೌರಭ್ ನೇತ್ರವಲ್ಕರ್ 4 ಓವರ್​ಗಳಲ್ಲಿ ಚಚ್ಚಿಸಿಕೊಂಡಿದ್ದು ಬರೋಬ್ಬರಿ 65 ರನ್​ಗಳು.

ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಸ್ಪೆಲ್ ಎಸೆದ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಸನತ್ ಜಯಸೂರ್ಯ ಹೆಸರಿನಲ್ಲಿತ್ತು.

2007 ರ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ವಿರುದ್ಧ ಸನತ್ ಜಯಸೂರ್ಯ 4 ಓವರ್​ಗಳಲ್ಲಿ ಬರೋಬ್ಬರಿ 64 ರನ್ ನೀಡಿದ್ದರು. ಇದಾದ ಬಳಿಕ ಯಾವುದೇ ಬೌಲರ್ ಇಷ್ಟೊಂದು ದುಬಾರಿಯಾಗಿರಲಿಲ್ಲ.

ಆದರೆ ಸೌರಭ್ ನೇತ್ರವಲ್ಕರ್ ಓವರ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದಿದ್ದಾರೆ. ಪರಿಣಾಮ ಸೌರಭ್ ಕಡೆಯಿಂದ 4 ಓವರ್​ಗಳಲ್ಲಿ ಬರೋಬ್ಬರಿ 65 ರನ್​ಗಳು ಮೂಡಿಬಂದಿವೆ.  ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಬ್ಯಾಟರ್​ಗಳು 20 ಓವರ್​ಗಳಲ್ಲಿ 161 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವು 20 ಓವರ್​ಗಳಲ್ಲಿ 132 ರನ್​ಗಳಿಸಿ 29 ರನ್​ಗಳಿಂದ ಸೋಲೊಪ್ಪಿಕೊಂಡಿದೆ.

Source link

ಬಳ್ಳಾರಿ: ವರ್ಗಾವಣೆಯಾದ IPS ಅಧಿಕಾರಿ ವರ್ತಿಕಾ ವಿರುದ್ಧ ಬೆದರಿಕೆ ಆರೋಪ! ಮೊಬೈಲ್ ಸಂಭಾಷಣೆ ವೈರಲ್ – Kannada News | Ballari IPS Vartika Katiyar Faces New Allegations of Threatening Juniors and Admin Interference After Transfer from DIGP Post

ವರ್ಗಾವಣೆಯಾದ IPS ಅಧಿಕಾರಿ ವರ್ತಿಕಾ ವಿರುದ್ಧ ಬೆದರಿಕೆ ಆರೋಪ!

ಬಳ್ಳಾರಿ, ಫೆಬ್ರುವರಿ 08: ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದ ಬ್ಯಾನರ್ ಗಲಭೆ (Banner clash) ಪ್ರಕರಣದ ಬಳಿಕ DIGP ಹುದ್ದೆಯಿಂದ ವರ್ಗಾವಣೆಗೊಂಡಿರುವ IPS ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಇದೀಗ ಗಂಭೀರ ಆರೋಪಗಳು ಕೇಳಿಬಂದಿವೆ. ವರ್ಗಾವಣೆ ಆದ ನಂತರವೂ ಕಡತಗಳ ವಿಚಾರದಲ್ಲಿ ಕೆಳ ಹಂತದ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಸಂಚಲನ ಮೂಡಿಸಿದೆ.

ನೂತನ ಅಧಿಕಾರಿಗೆ ಕಡತ ನೀಡಬೇಡಿ ಎಂದ ಅಧಿಕಾರಿ

ಬಳ್ಳಾರಿ ವಲಯ ಆಡಳಿತಾಧಿಕಾರಿಗೆ ವಾಟ್ಸಾಪ್ ಕರೆ ಮೂಲಕ ಮಾತನಾಡಿದ ವರ್ತಿಕಾ ಕಟಿಯಾರ್, ಹೊಸದಾಗಿ ಆಗಮಿಸಿರುವ ಅಧಿಕಾರಿಗೆ ಯಾವುದೇ ಪ್ರಮುಖ ದಾಖಲೆಗಳನ್ನು ಹಸ್ತಾಂತರಿಸದಂತೆ ಸೂಚನೆ ನೀಡಿದ್ದಾರೆಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ತಮ್ಮ ವರ್ಗಾವಣೆ ವಿಚಾರ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (CAT)ಯಲ್ಲಿ ವಿಚಾರಣೆಯಲ್ಲಿದೆ ಎಂದು ಹೇಳಿಕೊಂಡಿರುವ ವರ್ತಿಕಾ ಕಟಿಯಾರ್, ಕಡತಗಳನ್ನು ನೀಡಿದರೆ CATನಲ್ಲಿ ಪ್ರತಿವಾದಿಯಾಗಿ ಸೇರಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ಈ ಸಂಬಂಧ ವಲಯ ಆಡಳಿತಾಧಿಕಾರಿಗೆ ಮಾಡಿರುವ ಕರೆಗಳ ವಿಡಿಯೋ ಹಾಗೂ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವೈರಲ್ ವೀಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ ಬಳ್ಳಾರಿ ಬ್ಯಾನರ್ ಗಲಾಟೆ: ಡಿಐಜಿಪಿ ವರ್ತಿಕಾ ಕಟಿಯಾರ್ ಎತ್ತಂಗಡಿ; ನೂತನ ಎಸ್ಪಿ ನೇಮಕ

ಮೌಖಿಕ ಸೂಚನೆ ನೀಡದಂತೆ ಆಡಳಿತಾಧಿಕಾರಿ ಪತ್ರ

ಇದಕ್ಕೆ ಪ್ರತಿಕ್ರಿಯೆಯಾಗಿ ಬಳ್ಳಾರಿ ವಲಯ ಆಡಳಿತಾಧಿಕಾರಿ ಬಸವರಾಜ್ ಅವರು ವರ್ತಿಕಾ ಕಟಿಯಾರ್ ಅವರಿಗೆ ಅಧಿಕೃತ ಪತ್ರ ಬರೆದು, ನಿಮ್ಮ ನಿರ್ದೇಶನಗಳು ನನ್ನ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುತ್ತಿವೆ ಎಂದು ತಿಳಿದ್ದಾರೆ. ಯಾವುದೇ ರೀತಿಯ ಕರೆ, ಪತ್ರ ಅಥವಾ ಮೌಖಿಕ ಸೂಚನೆಗಳನ್ನು ನೀಡದಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಗಲಭೆ ಬಳಿಕ ಜನವರಿ 7ರಂದು DIGP ಹುದ್ದೆಯಿಂದ ವರ್ಗಾವಣೆಗೊಂಡಿರುವ ವರ್ತಿಕಾ ಕಟಿಯಾರ್ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿ CATಗೆ ಮೇಲ್ಮವಿ ಸಲ್ಲಿಸಿದ್ದರು. ಆದರೆ ವರ್ಗಾವಣೆ ಬಳಿಕವೂ ಆಡಳಿತಾತ್ಮಕ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳು ಇದೀಗ ರಾಜ್ಯದ ಆಡಳಿತ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Maha Shivaratri 2026: ಮಹಾ ಶಿವರಾತ್ರಿಯಂದು ಮೂರು ಶಕ್ತಿಶಾಲಿ ರಾಜಯೋಗ ರೂಪು; ಈ ರಾಶಿಗೆ ಅದೃಷ್ಟ

ಮಹಾ ಶಿವರಾತ್ರಿ ಕೇವಲ ಒಂದು ಧಾರ್ಮಿಕ ಹಬ್ಬ ಮಾತ್ರವಲ್ಲ, ಅದು ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿದೆ. ಶಿವನ ಆರಾಧನೆಗೆ ಮೀಸಲಾದ ಈ ಪವಿತ್ರ ದಿನವು ಮನಸ್ಸಿನ ಶುದ್ಧೀಕರಣ, ಪಾಪಕ್ಷಯ ಮತ್ತು ಜೀವನದಲ್ಲಿ ಹೊಸ ಆರಂಭಕ್ಕೆ ಸಂಕೇತವಾಗಿದೆ. ಈ ವರ್ಷ ಫೆಬ್ರವರಿ 15ರಂದು ಆಚರಿಸಲಾಗುವ ಮಹಾ ಶಿವರಾತ್ರಿ ವಿಶೇಷ ಗ್ರಹಸ್ಥಿತಿಗಳ ಕಾರಣದಿಂದ ಅಪರೂಪದ ಮಹತ್ವವನ್ನು ಪಡೆದುಕೊಂಡಿದೆ. ಈ ದಿನ ಚತುರ್ಗ್ರಹಿ ಯೋಗ, ಬುಧಾದಿತ್ಯ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ ಎಂಬ ಮೂರು ಶಕ್ತಿಶಾಲಿ ರಾಜಯೋಗಗಳು ರೂಪುಗೊಳ್ಳುತ್ತಿದ್ದು, ಇವು ಕೆಲವು ರಾಶಿಗಳ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ. ಆರ್ಥಿಕ ಲಾಭ, ವೃತ್ತಿ ಬೆಳವಣಿಗೆ, ಮನಶ್ಶಾಂತಿ ಮತ್ತು ಕುಟುಂಬ ಸುಖದಂತಹ ಅನೇಕ ಶುಭ ಫಲಿತಾಂಶಗಳು ಈ ಅವಧಿಯಲ್ಲಿ ಕಾಣಿಸಿಕೊಳ್ಳಬಹುದು.

ಮೇಷ ರಾಶಿ:

ಮೇಷ ರಾಶಿಯವರಿಗೆ ಈ ಮಹಾ ಶಿವರಾತ್ರಿ ಹೊಸ ಆಶಾಕಿರಣ ತರಲಿದೆ. ದೀರ್ಘಕಾಲದಿಂದ ಕಾಡುತ್ತಿದ್ದ ಆರ್ಥಿಕ ಸಮಸ್ಯೆಗಳು ಕ್ರಮೇಣ ನಿವಾರಣೆಯಾಗಲಿದೆ. ಸ್ಥಗಿತಗೊಂಡ ಕೆಲಸಗಳು ಮತ್ತೆ ಚೇತರಿಸಿಕೊಂಡು ಮುಂದುವರಿಯಲಿದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಮನೆ, ವಾಹನ ಅಥವಾ ಐಷಾರಾಮಿ ವಸ್ತುಗಳ ಖರೀದಿಗೆ ಅನುಕೂಲಕರ ಕಾಲವಾಗಿರುತ್ತದೆ. ಅವಿವಾಹಿತರಿಗೆ ಸೂಕ್ತ ಸಂಗಾತಿ ದೊರೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಓದಿನಲ್ಲಿ ಉತ್ತಮ ಸಾಧನೆ ತೋರಿಸಿ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಶನಿಯ ಪ್ರಭಾವ ಕಡಿಮೆಯಾಗುವುದರಿಂದ ಮಾನಸಿಕ ಒತ್ತಡವೂ ಇಳಿಯಲಿದೆ.

ಕನ್ಯಾ ರಾಶಿ:

ಕನ್ಯಾ ರಾಶಿಯವರಿಗೆ ಈ ಸಮಯ ಆರ್ಥಿಕ ಸ್ಥಿರತೆ ಮತ್ತು ಸಂತೋಷದ ಸಂಕೇತವಾಗಿರುತ್ತದೆ. ರಾಜಯೋಗಗಳ ಪರಿಣಾಮದಿಂದ ಆದಾಯದ ಹೊಸ ಮಾರ್ಗಗಳು ತೆರೆದಾಡುತ್ತವೆ. ಹಳೆಯ ಸಾಲಗಳು ಕಡಿಮೆಯಾಗುವ ಅಥವಾ ತೀರಿಸುವ ಅವಕಾಶಗಳು ಸಿಗಬಹುದು. ಕುಟುಂಬ ಜೀವನದಲ್ಲಿ ಸೌಹಾರ್ದ ಹೆಚ್ಚಾಗುತ್ತದೆ. ಮದುವೆಯಾಗದವರಿಗೆ ಉತ್ತಮ ಸಂಬಂಧದ ಮಾತುಕತೆಗಳು ಆರಂಭವಾಗಬಹುದು. ಮಕ್ಕಳ ಶಿಕ್ಷಣ ಮತ್ತು ವೃತ್ತಿಜೀವನದಲ್ಲೂ ಪ್ರಗತಿ ಕಾಣಬಹುದು. ಹಠಾತ್ ಲಾಭ ಅಥವಾ ಶುಭ ಸುದ್ದಿ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ತರಬಹುದು.

ಇದನ್ನೂ ಓದಿ: ಈ ರಾಶಿಯವರು ತಪ್ಪಿಯೂ ಬೆಳ್ಳಿ ಧರಿಸಬೇಡಿ, ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು!

ಕುಂಭ ರಾಶಿ:

ಕುಂಭ ರಾಶಿಯವರಿಗೆ ಮಹಾ ಶಿವರಾತ್ರಿ ವಿಶೇಷವಾಗಿ ವೃತ್ತಿ ಮತ್ತು ಆಸ್ತಿ ಸಂಬಂಧಿತ ಕ್ಷೇತ್ರಗಳಲ್ಲಿ ಲಾಭಕರವಾಗಿರುತ್ತದೆ. ಉದ್ಯೋಗದಲ್ಲಿರುವವರಿಗೆ ಪದೋನ್ನತಿ ಅಥವಾ ಹೊಸ ಅವಕಾಶಗಳು ಸಿಗಲಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶಗಳು ಲಭ್ಯವಾಗುವ ಸೂಚನೆಗಳಿವೆ. ಮನೆ ಅಥವಾ ಭೂಮಿಯನ್ನು ಖರೀದಿಸಲು ಬಯಸುವವರಿಗೆ ಇದು ಸೂಕ್ತ ಕಾಲ. ಸಮಾಜದಲ್ಲಿ ಗೌರವ ಹಾಗೂ ಮನ್ನಣೆ ಹೆಚ್ಚಾಗುತ್ತದೆ. ದೀರ್ಘಾವಧಿಯ ಹೂಡಿಕೆಗಳಿಗೆ ಸಹ ಈ ಅವಧಿ ಅನುಕೂಲಕರವಾಗಿದ್ದು, ಆರೋಗ್ಯ ಮತ್ತು ಉತ್ಸಾಹವೂ ಉತ್ತಮವಾಗಿರುತ್ತದೆ.

ಒಟ್ಟಾರೆ, ಈ ಮಹಾ ಶಿವರಾತ್ರಿ ಕೇವಲ ಗ್ರಹಯೋಗಗಳ ದೃಷ್ಟಿಯಿಂದ ಮಾತ್ರವಲ್ಲ, ಭಕ್ತಿ ಮತ್ತು ಧ್ಯಾನದ ಮೂಲಕ ಜೀವನವನ್ನು ಬದಲಾಯಿಸುವ ಅಪರೂಪದ ಅವಕಾಶವಾಗಿದೆ. ಶಿವನನ್ನು ಶ್ರದ್ಧೆಯಿಂದ ಪೂಜಿಸಿ, ಸಕಾರಾತ್ಮಕ ಮನೋಭಾವದೊಂದಿಗೆ ನಿರ್ಧಾರಗಳನ್ನು ತೆಗೆದುಕೊಂಡರೆ, ಜೀವನದಲ್ಲಿ ಹೊಸ ಬೆಳಕು ಮತ್ತು ಯಶಸ್ಸು ಕಾಣಬಹುದು. ಶಿವನ ಕೃಪೆ ಇದ್ದರೆ ಕಷ್ಟಗಳು ದೂರಾಗಿ ಸಮೃದ್ಧಿಯ ದಾರಿ ತೆರೆದುಕೊಳ್ಳುತ್ತದೆ ಎಂಬ ನಂಬಿಕೆಯಿಂದ ಈ ಪವಿತ್ರ ದಿನವನ್ನು ಆಚರಿಸುವುದು ಅತ್ಯಂತ ಫಲಪ್ರದವಾಗಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಿನಾಶ ಕಾಲೆ’ ಸಿನಿಮಾಗೆ ಸಾಥ್ ನೀಡಿದ ಮಲ್ಲಮ್ಮ, ಡಾಗ್ ಸತೀಶ್, ಕರಿಬಸಪ್ಪ – Kannada News | Bigg Boss Mallamma new movie Vinasha Kale muhurtha attended by Dog Satish and Karibasappa

‘ವಿನಾಶ ಕಾಲೆ ವಿಪರೀತ ಬುದ್ದಿ’ ಎಂಬ ಮಾತಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ ಎನ್ನುತ್ತಾರೆ. ‘ವಿನಾಶ ಕಾಲೆ’ (Vinasha Kale) ಎಂಬುದನ್ನೇ ಶೀರ್ಷಿಕೆಯಾಗಿ ಇಟ್ಟುಕೊಂಡು ಹೊಸ ಸಿನಿಮಾ ಮೂಡಿಬರುತ್ತಿದೆ. ಇತ್ತೀಚೆಗೆ ಈ ಸಿನಿಮಾಗೆ ಮುಹೂರ್ತ ಮಾಡಲಾಯಿತು. ರಾಜಾಜಿನಗರದ ಕೈಗಾರಿಕಾ ಕೇಂದ್ರದಲ್ಲಿರುವ ಮದ್ದುರಮ್ಮ ದೇವಿ ಹಾಗೂ ಯಲ್ಲಮ್ಮ ದೇವಿ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ. ಹರೀಶ್ ಅವರು ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಈ ವೇಳೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಪರ್ಧಿಗಳಾದ ಕರಿಬಸಪ್ಪ, ಡಾಗ್ ಸತೀಶ್, ಮಲ್ಲಮ್ಮ (Mallamma) ಅವರು ಸಾಥ್ ನೀಡಿದರು.

‘ಶಕ್ತಿ ಫಿಲ್ಮ್ಸ್’ ಮೂಲಕ ‘ವಿನಾಶ ಕಾಲೆ’ ಸಿನಿಮಾ ನಿರ್ಮಾಣ ಆಗುತ್ತಿದೆ. ತುಮಕೂರು ಮೂಲದ ಎಸ್. ಕಿರಣ್‌ಕುಮಾರ್ ಅವರು ಕಳೆದ ಐದು ವರ್ಷಗಳಿಂದ ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡು ಈಗ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪಾವನಿ ಸಿರಿ, ರಿಷಿಕಾ ಗೌಡ, ವೈಷ್ಣವಿ, ರಚನಾ, ಶ್ರೀನಿಧಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಶೋಭ ಅವರು ಮಾಂತ್ರಿಕಳಾಗಿ ಕಾಣಿಸಿಕೊಳ್ಳಲಿದ್ದಾರೆ. ಮಂಡ್ಯಸಿದ್ದು ಅವರು ಅಘೋರಿ ಪಾತ್ರ ಮಾಡುತ್ತಿದ್ದಾರೆ. ಬಿಗ್ ಬಾಸ್ ಮಲ್ಲಮ್ಮ, ಪ್ರವಲಿಕಾ, ದಿಶಾ ಮುಂತಾದವರು ನಟಿಸುತ್ತಿದ್ದಾರೆ. ಪಾತ್ರವರ್ಗಕ್ಕೆ ಐದು ಹುಡುಗಿಯರು ಆಯ್ಕೆಯಾಗಿದ್ದಾರೆ. ಹುಡುಗರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮಾರ್ಚ್ ತಿಂಗಳಿಂದ ಮೂವತ್ತು ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು ಮುಂತಾದೆಡೆ ಶೂಟಿಂಗ್ ನಡೆಯುತ್ತದೆ.

ಮಂಜುಕವಿ ಅವರು ‘ವಿನಾಶ ಕಾಲೆ’ ಸಿನಿಮಾದ ಮೂರು ಹಾಡುಗಳಿಗೆ ಸಂಗೀತ ನೀಡಿ ಸಾಹಿತ್ಯ ಬರೆದಿದ್ದಾರೆ. ವಿನಯ್‌ ಗೌಡ ಛಾಯಾಗ್ರಹಣ ಮಾಡಲಿದ್ದಾರೆ. ಜೀವನ್ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕರು ಈ ಸಿನಿಮಾದ ಕತೆ ಏನೆಂಬುದನ್ನು ವಿವರಿಸಿದರು. ಇದು ಸತ್ಯ ಘಟನೆ ಆಧಾರಿತ ಸಿನಿಮಾ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮುಗಿದು ಇಷ್ಟು ದಿನವಾದ್ರೂ ಕಡಿಮೆ ಆಗಿಲ್ಲ ಗಿಲ್ಲಿ ನಟ ಹವಾ

‘ಕಡಿಮೆ ಸಮಯದಲ್ಲಿ ದುಡ್ಡು ಮಾಡಬೇಕೆಂಬ ದುರಾಸೆಯಿಂದ ದೈವ ಸಂಬಂದಕ್ಕೆ ಕೈ ಹಾಕಿದರೆ ಏನೇನು ಅನಾಹುತಗಳು ನಡೆಯುತ್ತದೆ ಎಂಬುದು ಈ ಸಿನಿಮಾದಲ್ಲಿದೆ. ಮಧ್ಯಮ ವರ್ಗದ ಕುಟುಂಬದ ಹುಡುಗರು ಮತ್ತು ಹುಡುಗಿಯರು ಉದ್ಯೋಗ ಅರಸಿಕೊಂಡು ನಗರಕ್ಕೆ ಬರುತ್ತಾರೆ. ಇದರಿಂದ ಧಿಡೀರ್ ಶ್ರೀಮಂತರಾಗಲು ಕೆಟ್ಟ ಹಾದಿಗೆ ಹೋಗುತ್ತಾರೆ. ಅದರ ಪರಿಣಾಮದಿಂದ ಯಾವ ರೀತಿ ತತ್ತರಿಸಿ ಹೋಗುತ್ತಾರೆ ಎಂಬುದನ್ನು ಹಾರರ್ ಥ್ರಿಲ್ಲರ್ ಮಾದರಿಯಲ್ಲಿ ತೋರಿಸುತ್ತೇವೆ’ ಎಂದು ನಿರ್ದೇಶಕರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸ್ ಸಿಬ್ಬಂದಿ ಗರಂ: ವಿಡಿಯೋ ವೈರಲ್​ – Kannada News | Police Staff Angry at Woman Over Repeated Calls to 112 Helpline; Video Goes Viral

ಹಾಸನ, ಫೆಬ್ರವರಿ 08: ನೆರವಿಗಾಗಿ ಕರೆ ಮಾಡಿದ್ದ ಮಹಿಳೆ ಮೇಲೆ ಪೊಲೀಸ್ ಸಿಬ್ಬಂದಿ ಗರಂ ಆಗಿ ರೇಗಾಡಿ ಗರಂ ಆಗಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ನಡೆದಿದೆ. ಪತಿ ಮನೆಯವರ ಕಿರುಕುಳ ಎಂದು ಅರ್ಪಿತಾ ಎಂಬಾಕೆ 112ಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದು ಮಹಿಳೆ ಸಮಸ್ಯೆ ಆಲಿಸಿ ದೂರು ನೀಡಲು ಸಿಬ್ಬಂದಿ ತಿಳಿಸಿದ್ದರೂ ಪದೇಪದೆ ಕರೆ ಮಾಡಿದ್ದಕ್ಕೆ ಮಹಿಳೆ ಜೊತೆಗೆ ಪೊಲೀಸ್ ಅಧಿಕಾರಿ ರೇಗಾಡಿದ್ದಾರೆ. ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯ ವಿಡಿಯೋ ವೈರಲ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತೆಕ್ಕಲಕೋಟೆ ಬಳಿ ಉತ್ಖನನದಲ್ಲಿ ಸಿಕ್ತು ಒಂದರ ಪಕ್ಕದಲ್ಲೊಂದು 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು! – Kannada News | Ancient Human Remains Discovered at Ballari Tekkalakote Excavation

ತೆಕ್ಕಲಕೋಟೆ ಬಳಿ ಉತ್ಖನನದಲ್ಲಿ ಸಿಕ್ತು ಒಂದರ ಪಕ್ಕದಲ್ಲೊಂದು 5 ಸಾವಿರ ವರ್ಷ ಹಳೆಯ ಅಸ್ಥಿಪಂಜರಗಳು!

ಬಳ್ಳಾರಿ, ಫೆಬ್ರುವರಿ 08: ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ (Excavation) ವೇಳೆ ಪ್ರಾಗೈತಿಹಾಸಿಕ ಕಾಲಕ್ಕೆ ಸೇರಿದ ಎರಡು ಮಾನವ ಅಸ್ಥಿಪಂಜರಗಳು ಪತ್ತೆಯಾಗಿವೆ. ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ನೇತೃತ್ವದ ಸಂಶೋಧಕರ ತಂಡ ಈ ಉತ್ಖನನ ಕಾರ್ಯವನ್ನು ನಡೆಸುತ್ತಿದೆ. ಕಳೆದ ವಾರ ಮಣ್ಣನ್ನು ಅಗೆದಾಗ ಮೊದಲು ಮಾನವ ಮೂಳೆಗಳು ಪತ್ತೆಯಾಗಿದ್ದು, ನಂತರ ಮತ್ತಷ್ಟು ಆಳವಾಗಿ ಅಗೆದಾಗ ಸುಮಾರು 5.5 ಅಡಿ ಉದ್ದದ ಎರಡು ಸಂಪೂರ್ಣ ಮಾನವ ಅಸ್ಥಿಪಂಜರಗಳು ಒಂದರ ಪಕ್ಕದಲ್ಲೊಂದು ಪತ್ತೆಯಾಗಿವೆ.

ಪಳೆಯುಳಿಕೆ ಸುತ್ತ ಮುತ್ತ ಮಡಿಕೆ ಚೂರುಗಳು ಪತ್ತೆ

ಅಸ್ಥಿಪಂಜರಗಳು ಯಾವುದೇ ರೀತಿಯಲ್ಲಿ ಹಾಳಾಗದೆ ಉತ್ತಮ ಸ್ಥಿತಿಯಲ್ಲಿ ದೊರೆತಿದ್ದು, ಮೃತದೇಹಗಳ ಮೇಲೆ ಕಲ್ಲುಗಳನ್ನು ಇಟ್ಟು ಶವಸಂಸ್ಕಾರ ಮಾಡಿದ ಪದ್ಧತಿಯ ಸ್ಪಷ್ಟ ಕುರುಹುಗಳು ಕಂಡುಬಂದಿವೆ. ಪಳೆಯುಳಿಕೆಗಳ ಸುತ್ತ ಮಡಿಕೆ ಚೂರುಗಳು, ಸೂಕ್ಷ್ಮ ಶಿಲಾಯುಗದ ಅವಶೇಷಗಳು ಹಾಗೂ ಮಾನವ ಆಯುಧ ಬಳಕೆಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ. ಇದರಿಂದ ಇದು ನವಶಿಲಾಯುಗ ಅಥವಾ ಪ್ರಾಗೈತಿಹಾಸಿಕ ಕಾಲದ ಪ್ರಮುಖ ಮಾನವ ನೆಲೆ ಆಗಿರಬಹುದೆಂದು ತಜ್ಞರು ಅಂದಾಜಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ವೀಡಿಯೋ ನೋಡಿ

ಇದನ್ನೂ ಓದಿ Ballari: ತೆಕ್ಕಲಕೋಟೆ ಬಳಿ ಉತ್ಖನನದ ವೇಳೆ ಸಾವಿರಾರು ವರ್ಷಗಳ ಹಿಂದಿನ ಅಸ್ಥಿಪಂಜರ ಪತ್ತೆ

ಕಾರ್ಬನ್ ಡೇಟಿಂಗ್‌ಗೆ ನಿರ್ಧಾರ

ಪತ್ತೆಯಾದ ಅಸ್ಥಿಪಂಜರಗಳು ಸುಮಾರು 3,000 ರಿಂದ 5,000 ವರ್ಷಗಳ ಹಿಂದಿನವು ಆಗಿರಬಹುದೆಂದು ಹೇಳಲಾಗಿದ್ದು, ನಿಖರ ಕಾಲಮಾನದ ನಿರ್ಧಾರಕ್ಕಾಗಿ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಉತ್ಖನನ ಕಾರ್ಯದ ನಿರ್ದೇಶಕರಾದ ಪರಂಪರೆ ಇಲಾಖೆ ಉಪ ನಿರ್ದೇಶಕ ಆರ್. ಶೇಜೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತೆಕ್ಕಲಕೋಟೆ ಪ್ರದೇಶವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link