Category Archives: Blog

Your blog category

ಇಂಗ್ಲೆಂಡ್​ನಲ್ಲಿ ಮಹಿಳಾ ಟಿ20 ವಿಶ್ವಕಪ್; ಭಾರತದ ಕಾಲಮಾನದ ಪ್ರಕಾರ ಪಂದ್ಯಗಳು ಎಷ್ಟು ಗಂಟೆಗೆ ಆರಂಭ? – Kannada News

10 ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ (Women’s T20 World Cup 2026)​ ಜೂನ್ 12 ರಿಂದ ಜುಲೈ 5 ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆಯಲಿದೆ. 24 ದಿನಗಳ ಈ ಪಂದ್ಯಾವಳಿಯಲ್ಲಿ ಹನ್ನೆರಡು ತಂಡಗಳು ಭಾಗವಹಿಸಲಿದ್ದು, ಒಟ್ಟು 33 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಉದ್ಘಾಟನಾ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಭಾರತ ಜೂನ್ 14 ರಂದು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಬಾರಿ, ಪಂದ್ಯಾವಳಿಯ ಒಟ್ಟು ಬಹುಮಾನದ ಹಣವನ್ನು 83ಕೋಟಿ ರೂ.ಗೆ ಏರಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಇನ್ನು ಈ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವೆನಿಸಿಕೊಂಡಿರುವ ಆಸ್ಟ್ರೇಲಿಯಾ 6 ಬಾರಿ ಚಾಂಪಿಯನ್ ಆಗಿದ್ದರೆ, ಇಂಗ್ಲೆಂಡ್ 3 ಬಾರಿ ಟ್ರೋಫಿ ಎತ್ತಿಹಿಡಿದಿದೆ. ಟೀಂ ಇಂಡಿಯಾ ಒಮ್ಮೆ ಫೈನಲ್ ಆಡಿದೆಯಾದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. ಇನ್ನು ಪಂದ್ಯಾವಳಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿವರ ಇಲ್ಲಿದೆ.

ಪಂದ್ಯಗಳು ಎಷ್ಟು ಗಂಟೆಗೆ ಆರಂಭವಾಗಲಿವೆ?

ಟಿ20 ವಿಶ್ವಕಪ್ ಪಂದ್ಯಗಳು ಸ್ಥಳೀಯ ಸಮಯದ ಪ್ರಕಾರ, ಪಂದ್ಯಗಳು ಸಂಜೆ 6:30 ಕ್ಕೆ ಪ್ರಾರಂಭವಾಗುತ್ತವೆ. ಆದರೆ ನೀವು ಭಾರತ, ಶ್ರೀಲಂಕಾ ಅಥವಾ ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದರೆ, ಪಂದ್ಯವನ್ನು ವೀಕ್ಷಿಸಲು ನಿದ್ದೆಗೆಡಬೇಕಾಗುತ್ತದೆ. ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಸುಮಾರು 4.30 ಗಂಟೆಗಳ ಸಮಯದ ವ್ಯತ್ಯಾಸವಿರುವುದರಿಂದ ಭಾರತದಲ್ಲಿ ರಾತ್ರಿ 11 ಗಂಟೆಯಿಂದ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ. ಇಂಗ್ಲೆಂಡ್‌ನಲ್ಲಿ ಸಂಜೆ 6:30 ಆಗಿದ್ದರೆ, ಭಾರತದಲ್ಲಿ ರಾತ್ರಿ 11 ಗಂಟೆ. ಆದ್ದರಿಂದ, ಇತರ ತಂಡಗಳ ಕೆಲವು ಪಂದ್ಯಗಳು ಭಾರತೀಯ ಸಮಯ ರಾತ್ರಿ 11 ಗಂಟೆಯಿಂದ ಆರಂಭವಾಗುತ್ತವೆ.

ಟಿ20 ವಿಶ್ವಕಪ್​ನಲ್ಲಿ ಭಾರತ- ಪಾಕ್ ನಡುವೆ ಫೈಟ್; ಹೇಗಿದೆ ಮುಖಾಮುಖಿ ದಾಖಲೆ?

ಟೀಂ ಇಂಡಿಯಾ ಪಂದ್ಯಗಳು ಎಷ್ಟು ಗಂಟೆಗೆ ಆರಂಭ?

ಸಮಾಧಾನಕರ ಸುದ್ದಿ ಏನೆಂದರೆ ಟೀಂ ಇಂಡಿಯಾ ಪಂದ್ಯಗಳು ಇಂಗ್ಲೆಂಡ್ ಸಮಯದ ಪ್ರಕಾರ, ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುತ್ತವೆ. ಅಂದರೆ ಭಾರತದ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತವೆ. ಇದಲ್ಲದೆ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಸ್ಥಳೀಯ ಸಮಯ ಮಧ್ಯಾಹ್ನಕ್ಕೆ ನಿಗದಿಪಡಿಸಲಾಗಿದೆ, ಆದ್ದರಿಂದ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತವೆ.

ಟೀಂ ಇಂಡಿಯಾ ವೇಳಾಪಟ್ಟಿ

  • 14/06/2026: ಭಾರತ vs ಪಾಕಿಸ್ತಾನ- ಎಡ್ಜ್‌ಬಾಸ್ಟನ್
  • 17/06/2026: ಭಾರತ vs ನೆದರ್‌ಲ್ಯಾಂಡ್ಸ್- ಹೆಡಿಂಗ್ಲಿ
  • 21/06/2026: ದಕ್ಷಿಣ ಆಫ್ರಿಕಾ vs ಭಾರತ- ಓಲ್ಡ್ ಟ್ರಾಫರ್ಡ್ ಮೈದಾನ
  • 25/06/2026- ಭಾರತ vs ಬಾಂಗ್ಲಾದೇಶ- ಓಲ್ಡ್ ಟ್ರಾಫರ್ಡ್ ಮೈದಾನ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:26 pm, Thu, 11 June 26

Source link

ಒಂದೇ ಸಮುದಾಯಕ್ಕೆ ಸೀಮಿತಾವಾಯ್ತಾ ಒಬಿಸಿ ಅನುದಾನ? ಕುರುಬ ಸಮುದಾಯದ 89 ಸಂಸ್ಥೆಗಳಿಗೆ ಬಂಪರ್ – Kannada News

ಬೆಂಗಳೂರು, (ಜೂನ್ 11): ಒಂದು ಸರ್ಕಾರ ಅಧಿಕಾರದಿಂದ ನಿರ್ಗಮಿಸುವ ಅಥವಾ ನಾಯಕತ್ವ ಬದಲಾವಣೆಯಾಗುವ ಸಂಕ್ರಮಣ ಕಾಲದಲ್ಲಿ ಅತ್ಯಂತ ತರಾತುರಿಯಲ್ಲಿ ಕೈಗೊಳ್ಳುವ ನಿರ್ಧಾರಗಳು ಯಾವಾಗಲೂ ಅನುಮಾನದ ಕಣ್ಣೋಟಕ್ಕೆ ಗುರಿಯಾಗುತ್ತವೆ. ಹೌದು..ಹಿಂದುಳಿದ ವರ್ಗಗಳ ಅನುದಾನ (Karnataka Backward Classes fund) ಹಂಚಿಕೆಯಲ್ಲೂ ಬೇಧ ಭಾವ ತಾರತಮ್ಯ ಎಸಗಿದ ಮತ್ತೊಂದು ಮುಖ ಹೊರ ಬಿದ್ದಿದೆ‌. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಪ್ರಮಾಣವಚನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ, ಆರ್ಥಿಕ ಇಲಾಖೆಯ ಮೂಲಕ 155 ವಿವಿಧ ಸಂಸ್ಥೆಗಳಿಗೆ 71.85 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿರುವುದು ಚರ್ಚೆ ಹುಟ್ಟುಹಾಕಿದೆ. ಅಹಿಂದ ವರ್ಗದ ಅಗ್ರಗಣ್ಯ ನಾಯಕ ಎಂದೇ ಕರೆಯಿಸಿಕೊಳ್ಳುವ ಸಿದ್ದರಾಮಯ್ಯ ಸಮಸಮಾಜದ ಮಾತುಗಳನ್ನಾಡುತ್ತಾರೆ. ಹೋದಲ್ಲಿ ಬಂದಲ್ಲಿ ಎಲ್ಲ ವೇದಿಕೆಯಲ್ಲಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಕನಸು ಬಿತ್ತುತ್ತಾರೆ. ಆದರೆ ಅವರು ಬಿತ್ತುತ್ತಿರುವ ಕನಸನ್ನು ಅವರೇ ಸಾಕಾರಗೊಳಿಸುವಲ್ಲಿ ಎಡವಿದರೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಅನುದಾನ ಹಂಚಿಕೆಯಲ್ಲೂ ಬೇಧ ಭಾವ

2026-27ನೇ ಸಾಲಿನ ಬಜೆಟ್​ನಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಭವನಗಳ ನಿರ್ಮಾಣಕ್ಕಾಗಿ 136 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಇದು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಾವಿರಕ್ಕೂ ಹೆಚ್ಚು ಜಾತಿಗಳಿಗೆ ತಲುಪಬೇಕಾದ ಹಕ್ಕು. ಆದರೆ ವಾಸ್ತವದಲ್ಲಿ ನಡೆದಿರುವುದು ಬೇರೆಯೇ. ಬಜೆಟ್​ನಲ್ಲಿ ಮೀಸಲಿಟ್ಟ ಹಣದ ಬರೋಬ್ಬರಿ ಶೇ57ರಷ್ಟು ಪಾಲನ್ನು ಕೇವಲ 3-4 ಸಮುದಾಯಗಳಿಗೆ ಸೀಮಿತಗೊಳಿಸಿರುವುದು ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಡೆದಿರುವ ದೊಡ್ಡ ಎಡವಟ್ಟು.

ಇದನ್ನೂ ನೋಡಿ: ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ?

ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್​ಗೆ 50 ಲಕ್ಷ ರೂಪಾಯಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆದೇಶದಲ್ಲಿ ಮಂಜೂರಾದ 155 ಸಂಸ್ಥೆಗಳ ಪೈಕಿ 89 ಸಂಸ್ಥೆಗಳು ಕುರುಬ ಸಮುದಾಯಕ್ಕೆ ಸೇರಿರುವುದು ಇಲಾಖೆಯ ತಾರತಮ್ಯ ನೀತಿಗೆ ಹಿಡಿದ ಕನ್ನಡಿಯಾಗಿದೆ. ಇನ್ನು ಟಿ. ನರಸೀಪುರದಂತಹ ಒಂದೇ ತಾಲೂಕಿಗೆ 13 ಸಮುದಾಯ ಭವನಗಳನ್ನು ಮಂಜೂರು ಮಾಡಲಾಗಿದೆ. ಗದಗದಲ್ಲಿರುವ ನಿರ್ದಿಷ್ಟ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್​ಗೆ 50 ಲಕ್ಷ ರೂಪಾಯಿಗಳ ಅನುದಾನ ನೀಡಿರುವುದು ಈ ಹಂಚಿಕೆಯ ಹಿಂದೆ ಕಲ್ಯಾಣದ ದೃಷ್ಟಿಕೋನಕ್ಕಿಂತ ಹೆಚ್ಚಾಗಿ ‘ರಾಜಕೀಯ ಪ್ರೇರಿತ ಕೃಪೆ’ಯಿದೆಯೋ ಎಂಬ ಸಂಶಯವನ್ನು ಬಲಪಡಿಸುತ್ತದೆ.

ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸಾವಿರಕ್ಕೂ ಹೆಚ್ಚು ಜಾತಿಗಳಿವೆ. ಕೇವಲ ಪ್ರವರ್ಗ-1ರ ಅಡಿಯಲ್ಲೇ 147 ಜಾತಿಗಳಿರುವಾಗ, ಉಳಿದ ಸಮುದಾಯಗಳ ಪಾಡೇನು? ಮಡಿವಾಳ, ಸವಿತಾ ಸಮಾಜ, ಹೆಳವ ಸೇರಿದಂತೆ ಅನೇಕ ಸಮುದಾಯಗಳು ತಮ್ಮ ಅಸ್ತಿತ್ವ ಮತ್ತು ಅಭಿವೃದ್ಧಿಗಾಗಿ ಹೋರಾಡುತ್ತಿವೆ. ಇವುಗಳಿಗೆ ಸಿಗಬೇಕಾದ ಹಕ್ಕುಗಳು ನಿರ್ದಿಷ್ಟ ಸಮುದಾಯಗಳ ಪಾಲಾಗುತ್ತಿದ್ದರೆ, ಈಡಿಗ, ಕುಂಬಾರ ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳ ಅಭಿವೃದ್ದಿಗೆ ಗಮನ ನೀಡಬೇಕಿದೆ. ಹಿಂದುಳಿದ ವರ್ಗಗಳ ಇಲಾಖೆ ತಾನೇ ರಚಿಸಿಕೊಂಡ ‘ಸಾಮಾಜಿಕ ನ್ಯಾಯದ ತತ್ವ’ಕ್ಕೆ ತಾನೇ ಅಪಚಾರವೆಸಗಿದಂತಲ್ಲವೇ? ಹೀಗಾಗಿ ಎಲ್ಲಾ ಸಮುದಾಯಗಳನ್ನ ಸಮಾನವಾಗಿ ಕಾಣಬೇಕು. ಆದೇಶವನ್ನ ಮರು ಪರಿಶೀಲನೆ ಮಾಡಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರುಶಕ್ತಿ ಪೀಠದ ಪ್ರಣವಾನಂದಸ್ವಾಮೀಜಿ ಒತ್ತಾಯಿಸಿದ್ದಾರೆ.

ಸರಕಾರದ ಅನುದಾನ ಹಂಚಿಕೆಯು ಅರ್ಹತೆ ಮತ್ತು ಅಗತ್ಯತೆಯನ್ನು ಆಧರಿಸಿರಬೇಕೇ ಹೊರತು, ಪ್ರಭಾವ ಮತ್ತು ಜಾತಿಯ ಬಲವನ್ನು ಆಧರಿಸಿರಬಾರದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಇನ್ನು ಮುಂದೆ ಕೇವಲ ಒಂದು ಸಮುದಾಯದ “ಖಜಾನೆ”ಯಾಗದೆ, ಹೆಸರಿನಲ್ಲಿರುವಂತೆ ನಿಜಕ್ಕೂ ಹಿಂದುಳಿದ ಸಮುದಾಯಗಳ ಏಳಿಗೆಗೆ ಕೆಲಸ ಮಾಡಲಿದೆಯೇ? ಅಥವಾ ರಾಜಕೀಯ ಅಧಿಕಾರದ ಆಟಕ್ಕೆ ಇಲಾಖೆಯ ಬಜೆಟ್ ಬಳಕೆ ಆಗುತ್ತದೆಯೇ..? ಈ ತರಾತುರಿಯ ಆದೇಶಗಳ ಹಿಂದಿರುವ ಅಂತರಂಗವನ್ನ ಸರ್ಕಾರವೇ ಬಹಿರಂಗಪಡಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇಂದು ರಾತ್ರಿ ಇರಾನ್ ಮೇಲೆ ಬೃಹತ್ ದಾಳಿ ನಡೆಸುತ್ತೇವೆ; ಟ್ರಂಪ್ ಎಚ್ಚರಿಕೆ – Kannada News

ವಾಷಿಂಗ್ಟನ್, ಜೂನ್ 11: ಮಧ್ಯಪ್ರಾಚ್ಯದಲ್ಲಿ ಯುದ್ಧ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇರಾನ್ ಜೊತೆ ಕದನ ವಿರಾಮದ ಪ್ರಸ್ತಾಪವನ್ನಿಟ್ಟಿದ್ದ ಅಮೆರಿಕ ಇದೀಗ ಇರಾನ್ ಮೇಲೆ ಸಮರ ಸಾರುವುದಾಗಿ ಘೋಷಿಸಿದೆ. ಇಂದು ರಾತ್ರಿ ಇರಾನ್ ಮೇಲೆ ಭೀಕರ ದಾಳಿ ನಡೆಸುತ್ತೇವೆ ಎಂದು ಟ್ರಂಪ್ (Donald Trump) ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾದ ಸಂಘರ್ಷ ಇನ್ನಷ್ಟು ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ. ಅಮೆರಿಕ (United States) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಇರಾನ್ ವಿರುದ್ಧ ಹೊಸ ಮಿಲಿಟರಿ ದಾಳಿಗಳ ಎಚ್ಚರಿಕೆ ನೀಡಿದ್ದಾರೆ. ಅಮೆರಿಕವು ಇಂದು ರಾತ್ರಿ ಇರಾನ್ ದೇಶದ ಮೇಲೆ ಅತ್ಯಂತ ಭೀಕರ ದಾಳಿ ಮಾಡಲಿದೆ ಎಂದು ಹೇಳಿರುವ ಅವರು, ಇರಾನ್‌ನ ಮಿಲಿಟರಿ ಸಾಮರ್ಥ್ಯವು ಈಗಾಗಲೇ ತೀವ್ರವಾಗಿ ದುರ್ಬಲಗೊಂಡಿದೆ ಎಂದು ಪ್ರತಿಪಾದಿಸಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘ಟ್ರುತ್ ಸೋಶಿಯಲ್’ ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಭವಿಷ್ಯದಲ್ಲಿ ಅಮೆರಿಕವು ವೆನೆಜುವೆಲಾದಲ್ಲಿ ಮಾಡಿದಂತೆಯೇ ಖಾರ್ಗ್ ದ್ವೀಪ ಸೇರಿದಂತೆ ಇರಾನ್‌ನ ಪ್ರಮುಖ ತೈಲ ಮತ್ತು ಅನಿಲ ಘಟಕಗಳನ್ನು ತನ್ನ ವಶಕ್ಕೆ ಪಡೆದು, ಅದರ ಸಂಪೂರ್ಣ ನಿಯಂತ್ರಣವನ್ನು ಸಾಧಿಸಲಿದೆ ಎಂದು ಹೇಳಿದ್ದಾರೆ.

“ಅಮೆರಿಕವು ಇಂದು ರಾತ್ರಿ ಇರಾನ್ ಮೇಲೆ ಅತ್ಯಂತ ಕಠಿಣವಾಗಿ ದಾಳಿ ನಡೆಸಲಿದೆ. ಇರಾನ್‌ನ ನೌಕಾಪಡೆ, ವಾಯುಪಡೆ, ರೇಡಾರ್, ವೈಮಾನಿಕ ರಕ್ಷಣಾ ವ್ಯವಸ್ಥೆ ಹಾಗೂ ಇತರ ಎಲ್ಲಾ ರೀತಿಯ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಸಾಮರ್ಥ್ಯಗಳು ಈಗಾಗಲೇ ನಾಶವಾಗಿವೆ!” ಎಂದು ಟ್ರಂಪ್ ಬರೆದಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್; ಅಮೆರಿಕ ದಾಳಿಗೆ ಇರಾನ್ ಪ್ರತೀಕಾರ

“ಸದ್ಯದಲ್ಲೇ ನಾವು ಖಾರ್ಗ್ ದ್ವೀಪ ಮತ್ತು ಇತರ ತೈಲ ಮೂಲಸೌಕರ್ಯ ಕೇಂದ್ರಗಳನ್ನು ನಮ್ಮ ವಶಕ್ಕೆ ಪಡೆಯಲಿದ್ದೇವೆ. ವೆನೆಜುವೆಲಾದಲ್ಲಿ ನಾವು ಮಾಡಿದಂತೆಯೇ ಅವರ ತೈಲ ಮತ್ತು ಅನಿಲ ಮಾರುಕಟ್ಟೆಗಳ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳಲಿದ್ದೇವೆ” ಎಂದು ಅವರು ಮತ್ತೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಪೋಸ್ಟ್ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ, ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲೂ ಟ್ರಂಪ್ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ತಮ್ಮ ಇಚ್ಛೆಯನ್ನು ಪುನರುಚ್ಚರಿಸಿದ್ದಾರೆ. “ನಾವು ಇರಾನ್ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಆದರೆ, ನನ್ನ ಮೊದಲ ಆದ್ಯತೆ ಯಾವಾಗಲೂ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದೇ ಆಗಿದೆ. ನನ್ನ ಆಯ್ಕೆ ಅದೇ ಆಗಿರುತ್ತದೆ. ಆದರೆ ಅದನ್ನು ವಶಪಡಿಸಿಕೊಳ್ಳಲು ಅಮೆರಿಕಕ್ಕೆ ಸದ್ಯ ಧೈರ್ಯವಿದೆಯೇ ಎಂದು ನನಗೆ ಗೊತ್ತಿಲ್ಲ,” ಎಂದಿದ್ದಾರೆ.

ಟ್ರಂಪ್​ಗೆ ತಿರುಗೇಟು ನೀಡಿರುವ ಇರಾನ್ ಅಮೆರಿಕದ ಅಂತ್ಯ ಸಮೀಪಿಸುತ್ತಿದೆ. ಅಮೆರಿಕಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಪ್ರತಿಕ್ರಿಯೆ ನೀಡಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮೇಲೆ ಅಮೆರಿಕದ ಹೆಲಿಕಾಪ್ಟರ್‌ ಪತನ; ಇರಾನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇವೆಂದ ಟ್ರಂಪ್

ಇರಾನ್-ಇಸ್ರೇಲ್ ಹಾಗೂ ಅಮೆರಿಕದ ನಡುವೆ ಶಾಂತಿ ಸ್ಥಾಪನೆಗಾಗಿ ರಾಜತಾಂತ್ರಿಕ ಸಂಪರ್ಕಗಳು ನಡೆಯುತ್ತಿದ್ದರೂ, ಇಡೀ ಪ್ರದೇಶದಲ್ಲಿ ಭೀಕರ ಯುದ್ಧ ಮುಂದುವರಿದಿದೆ. ಇಂದು ಅಮೆರಿಕ ಸೇನೆಯು ಇರಾನ್‌ನ ಸಿಸಿಟಿವಿ ವ್ಯವಸ್ಥೆಗಳು, ಸಂವಹನ ಜಾಲಗಳು ಮತ್ತು ವಾಯು ರಕ್ಷಣಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್‌ನಾದ್ಯಂತ ತೀವ್ರ ದಾಳಿಗಳನ್ನು ನಡೆಸಿದೆ. ಇರಾನ್ ನಿರಂತರವಾಗಿ ನಡೆಸುತ್ತಿರುವ ಆಕ್ರಮಣಕಾರಿ ನಡವಳಿಕೆಗೆ ಪ್ರತಿಯಾಗಿ ಈ ದಾಳಿ ಮಾಡಲಾಗಿದೆ ಎಂದು ವಾಷಿಂಗ್ಟನ್ ಸಮರ್ಥಿಸಿಕೊಂಡಿದೆ. ಇರಾನ್ ಸರ್ಕಾರ ಅಮೆರಿಕದ ನಿಯಮಗಳನ್ನು ತಕ್ಷಣವೇ ಒಪ್ಪಿಕೊಳ್ಳದಿದ್ದರೆ ಮಿಲಿಟರಿ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.

ಇದಕ್ಕೆ ಇರಾನ್ ಸಹ ಗಲ್ಫ್ ಪ್ರದೇಶದಾದ್ಯಂತ ಇರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ತಿರುಗೇಟು ನೀಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ವಾಯು ನೆಲೆಗಳು ಮತ್ತು ಯುಎಸ್ ನೌಕಾಪಡೆಯ ಐದನೇ ಫ್ಲೀಟ್ ಪ್ರಧಾನ ಕಚೇರಿ ಸೇರಿದಂತೆ ಅಮೆರಿಕದ 18 ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ. ಜೋರ್ಡಾನ್‌ನಲ್ಲಿರುವ ಅಲ್-ಅಜ್ರಾಕ್ ವಾಯು ನೆಲೆಯ ಮೇಲೆಯೂ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಪಡೆಗಳು ಹೇಳಿಕೊಂಡಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ವೆಸ್ಟ್ ನೈಲ್ ಜ್ವರ ಎಂದರೇನು? ಲಕ್ಷಣಗಳು ಹೇಗಿರುತ್ತದೆ? ಇದನ್ನು ತಡೆಗಟ್ಟುವುದು ಹೇಗೆ ತಿಳಿಯಿರಿ – Kannada News

ಕೇರಳದಲ್ಲಿ ವೆಸ್ಟ್ ನೈಲ್ ಜ್ವರ (West Nile Virus) ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ರಾಜ್ಯಾದ್ಯಂತ ಹೆಚ್ಚಿನ ನಿಗಾವಹಿಸುತ್ತಿದೆ. ಅದಲ್ಲದೆ ರಾಜ್ಯದಲ್ಲಿ ಶಿಗೆಲ್ಲಾ ಸೋಂಕಿನ ಪ್ರಕರಣಗಳೂ ಹೆಚ್ಚುತ್ತಿರುವುದರಿಂದ ಆರೋಗ್ಯ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಈ ಎರಡೂ ಕಾಯಿಲೆಗಳು ಪರಸ್ಪರ ಸಂಬಂಧ ಹೊಂದಿಲ್ಲದಿದ್ದರೂ, ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಅಪಾಯ ಹೆಚ್ಚುತ್ತಿರುವುದರಿಂದ ಜನರು ಆದಷ್ಟು ಜಾಗರೂಕರಾಗಿರಬೇಕಾಗಿದೆ. ಹಾಗಾದರೆ ವೆಸ್ಟ್ ನೈಲ್ ಜ್ವರ ಯಾವ ರೀತಿ ಬರುತ್ತದೆ, ಲಕ್ಷಣಗಳು ಹೇಗಿರುತ್ತದೆ ಮತ್ತು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವೆಸ್ಟ್ ನೈಲ್ ಜ್ವರವು ಸೊಳ್ಳೆಗಳಿಂದ ಹರಡುವ ವೈರಲ್ ಸೋಂಕಾಗಿದೆ. ಸೋಂಕಿತ ಪಕ್ಷಿಗಳನ್ನು ಕಚ್ಚಿದ ಸೊಳ್ಳೆಗಳು ನಂತರ ಮಾನವರು ಅಥವಾ ಪ್ರಾಣಿಗಳನ್ನು ಕಚ್ಚುವ ಮೂಲಕ ವೈರಸ್ ಹರಡಿಸಬಹುದು. ಡೆಂಗ್ಯೂ ಅಥವಾ ಚಿಕನ್‌ಗುನ್ಯಾ ರೀತಿಯಷ್ಟು ಜನರಿಗೆ ತಿಳಿಯದಿದ್ದರೂ, ಕೆಲ ಸಂದರ್ಭಗಳಲ್ಲಿ ಇದು ಗಂಭೀರ ನರ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲಿಯೂ ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಅಪಾಯ ಹೆಚ್ಚು ಎನ್ನಲಾಗಿದೆ.

ವೆಸ್ಟ್ ನೈಲ್ ಜ್ವರದ ಲಕ್ಷಣಗಳು:

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಸುಮಾರು 80% ಮಂದಿಯಲ್ಲಿ ಯಾವುದೇ ಲಕ್ಷಣಗಳು ಕಾಣಿಸದೇ ಇರಬಹುದು. ಉಳಿದವರಲ್ಲಿ ಕೆಳಗಿನ ಲಕ್ಷಣಗಳು ಕಂಡುಬರುವ ಸಾಧ್ಯತೆ ಇದೆ ಅವುಗಳಲ್ಲಿ ಜ್ವರ, ತಲೆನೋವು, ದೇಹದಲ್ಲಿ ನೋವು, ದೌರ್ಬಲ್ಯ, ವಾಂತಿ ಅಥವಾ ವಾಕರಿಕೆ, ಸಂಧಿ ನೋವು, ಚರ್ಮದ ಮೇಲೆ ಉರಿ ಅಥವಾ ಅಲರ್ಜಿ, ಲಿಂಫ್ ಗ್ರಂಥಿಗಳ ಉಬ್ಬರವು ಸಾಮಾನ್ಯವಾಗಿ ಸೋಂಕಿತ ಸೊಳ್ಳೆ ಕಚ್ಚಿದ ಕೆಲವು ದಿನಗಳಿಂದ ಎರಡು ವಾರಗಳೊಳಗೆ ಲಕ್ಷಣಗಳು ಕಾಣಿಸಬಹುದು.

ಇದನ್ನೂ ಓದಿ: ಏನಿದು ಶಿಗೆಲ್ಲೋಸಿಸ್ ಸೋಂಕು? ಕೇರಳದಲ್ಲಿ ಹೊಸ ವೈರಲ್ ಸೋಂಕಿಗೆ ಜನ ಹೆದರುತ್ತಿರುವುದಕ್ಕೆ ಕಾರಣವೇನು?

ಯಾವಾಗ ಗಂಭೀರವಾಗಬಹುದು?

ಕೆಲವರಲ್ಲಿ ಸೋಂಕು ಮೆದುಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು:

  • ತೀವ್ರ ಜ್ವರ
  • ಕುತ್ತಿಗೆ ಗಟ್ಟಿಯಾಗುವುದು
  • ಗೊಂದಲ ಅಥವಾ ವರ್ತನೆಯಲ್ಲಿ ಬದಲಾವಣೆ
  • ನಡುಕ
  • ಸ್ನಾಯು ದುರ್ಬಲತೆ
  • ಫಿಟ್ಸ್

ತಡೆಗಟ್ಟುವುದು ಹೇಗೆ?

ಈ ಸೋಂಕಿಗೆ ಮಾನವರಿಗಾಗಿ ವಿಶೇಷ ಔಷಧಿ ಅಥವಾ ಲಸಿಕೆ ಲಭ್ಯವಿಲ್ಲ. ಆದ್ದರಿಂದ ತಡೆಗಟ್ಟುವಿಕೆ ಅತ್ಯಂತ ಮುಖ್ಯವಾಗಿದೆ. ಹೆಚ್ಚಿನ ವಿಶ್ರಾಂತಿ ಪಡೆಯುವುದು, ನೀರನ್ನು ಹೆಚ್ಚಾಗಿ ಕುಡಿಯುವುದು ಮತ್ತು ಜ್ವರವನ್ನು ನಿಯಂತ್ರಣ ಮಾಡಬೇಕಾಗುತ್ತದೆ. ಸೊಳ್ಳೆ ನಿಯಂತ್ರಣಕ್ಕಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ಟ್ಯಾಂಕ್‌ಗಳನ್ನು ಮುಚ್ಚಿಡುವುದು, ಕಸದ ಡಬ್ಬಿ ಮತ್ತು ಟೈರ್‌ಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡುವುದು ಮುಖ್ಯ. ಅದರ ಜೊತೆಗೆ ಸೊಳ್ಳೆ ತಡೆಯುವ ಕ್ರೀಮ್ ಬಳಸುವುದು, ಕಿಟಕಿ ಮತ್ತು ಬಾಗಿಲುಗಳಿಗೆ ಜಾಲರಿ ಅಳವಡಿಸುವುದು, ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದರಿಂದ ಸ್ವಲ್ಪ ಮಟ್ಟಿಗೆ ಸುರಕ್ಷಿತವಾಗಿರಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊರಗೆ ಸಿಗುವ ಮಾವಿನ ಜ್ಯೂಸ್ ಇಷ್ಟಪಟ್ಟು ಕುಡಿಯುತ್ತೀರಾ? ಹಾಗಿದ್ರೆ ನೀವು ಈ ಸ್ಟೋರಿ ಓದಲೇಬೇಕು – Kannada News

ಇತ್ತೀಚೆಗೆ ಗುಜರಾತ್‌ನಲ್ಲಿ ಹಾಳಾಗಿರುವ, ಹುಳ ಬಿದ್ದ ಮಾವಿನ ಹಣ್ಣುಗಳನ್ನು ಜ್ಯೂಸ್ ತಯಾರಿಕೆಗೆ ಬಳಸಲಾಗುತ್ತಿದ್ದ ಘಟನೆ ಬೆಳಕಿಗೆ ಬಂದಿತ್ತು. ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ (FSSAI) ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಹಾಳಾದ ಹಣ್ಣುಗಳನ್ನು ವಶಪಡಿಸಿಕೊಂಡಿದ್ದರು. ಈ ಘಟನೆ ಬಳಿಕ ಹೊರಗೆ ಸಿಗುವ ಜ್ಯೂಸ್ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ. ಸ್ವಲ್ಪ ಹೆಚ್ಚು ಹಣ್ಣಾದದ್ದು ಸಾಮಾನ್ಯವಾಗಿ ದೊಡ್ಡ ಸಮಸ್ಯೆ ಉಂಟುಮಾಡದೇ ಇರಬಹುದು. ಆದರೆ ಕೊಳೆತ ಅಥವಾ ಸಣ್ಣ ಹುಳ ಇರುವ ಹಣ್ಣುಗಳಲ್ಲಿ ಬ್ಯಾಕ್ಟೀರಿಯಾ, ಫಂಗಸ್ ಮತ್ತು ಕೀಟಗಳು ವೇಗವಾಗಿ ಬೆಳೆಯುತ್ತವೆ. ಮೇಲ್ನೋಟಕ್ಕೆ ಸ್ವಲ್ಪ ಭಾಗದಲ್ಲಿ ಮಾತ್ರ ಕಾಣಿಸಿಕೊಂಡರೂ ಅದರ ವಿಷಕಾರಿ ಅಂಶ ಹಣ್ಣಿನ ಒಳಭಾಗಕ್ಕೂ ಹರಡಿರಬಹುದು. ಹಾಗಾದರೆ ಈ ರೀತಿ ಹೊರಗಡೆ ಕುಡಿಯುವ ಜ್ಯೂಸ್ ಎಷ್ಟು ಆರೋಗ್ಯಕ್ಕೆ ಒಳ್ಳೆಯದು, ಒಂದು ವೇಳೆ ಹಾಳಾಗಿರುವ ಹಣ್ಣಿನಿಂದ ಮಾಡಿದ ಜ್ಯೂಸ್ ಕುಡಿದರೆ ಏನಾಗಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಾಳಾದ ಜ್ಯೂಸ್ ಕುಡಿದರೆ ಏನಾಗಬಹುದು?

ತಜ್ಞರ ಪ್ರಕಾರ, ಸ್ವಲ್ಪ ಹಾಳಾದ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಕುಡಿದರೂ ಕೂಡ ದೇಹಕ್ಕೆ ಹಾನಿಕರ ಬ್ಯಾಕ್ಟೀರಿಯಾ ಮತ್ತು ವಿಷಕಾರಿ ಅಂಶಗಳು ದೇಹದೊಳಗೆ ಹೋಗಬಹುದು. ಜೊತೆಗೆ ಹೊಟ್ಟೆನೋವು, ವಾಂತಿ, ಹೊಟ್ಟೆ ಉಬ್ಬರ, ಜ್ವರ, ಫುಡ್ ಪಾಯ್ಸನಿಂಗ್ ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಫಂಗಸ್‌ನಿಂದ ಕಂಡುಬರುವ “ಮೈಕೋಟಾಕ್ಸಿನ್” ಎಂಬ ವಿಷಕಾರಿ ಅಂಶ ಯಕೃತ್ ಮತ್ತು ಮೂತ್ರಪಿಂಡಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಮಕ್ಕಳಿಗೆ ಮತ್ತು ವೃದ್ಧರಿಗೆ ಹೆಚ್ಚು ಅಪಾಯ

ಹುಳು ಬಿದ್ದ ಹಣ್ಣುಗಳಲ್ಲಿ ಅಪಾಯಕಾರಿ ಕೀಟಾಣುಗಳು ಇರುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಇದು ಹೆಚ್ಚು ಅಪಾಯಕಾರಿಯಾಗಿದೆ.

ಇದನ್ನೂ ಓದಿ: ಹಾಲು ಹಾಕಿದ ಚಹಾ ಕುಡಿದರೆ ಅಸಿಡಿಟಿ ಆಗುತ್ತಾ? ಹಾಗಿದ್ರೆ ಈ ಸಿಂಪಲ್ ಟ್ರಿಕ್ ಪಾಲಿಸಿ ನೋಡಿ

ರಾಸಾಯನಿಕಗಳಿಂದ ಹಣ್ಣನ್ನು ಗುರುತಿಸುವುದು ಹೇಗೆ?

ಕೆಲ ವ್ಯಾಪಾರಿಗಳು “ಕ್ಯಾಲ್ಸಿಯಂ ಕಾರ್ಬೈಡ್” ಬಳಸಿ ಕೃತಕವಾಗಿ ಹಣ್ಣಾಗಿಸುತ್ತಾರೆ. ಇಂತಹ ಹಣ್ಣುಗಳಲ್ಲಿ ಒಂದೇ ತರದ ಗಾಢ ಹಳದಿ ಬಣ್ಣ, ರುಚಿಯಲ್ಲಿ ಅಸಹಜತೆ, ಕಡಿಮೆ ರಸ, ನೀರಿನಲ್ಲಿ ತೇಲುವ ಗುಣ ಕಾಣಿಸಬಹುದು.

ಜ್ಯೂಸ್ ಕುಡಿಯುವಾಗ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?

  • ನಿಮ್ಮ ಎದುರಲ್ಲೇ ಹಣ್ಣು ಕತ್ತರಿಸಿ ಜ್ಯೂಸ್ ಮಾಡಿಸಿಕೊಳ್ಳಿ
  • ಮುಂಚಿತವಾಗಿ ತಯಾರಿಸಿದ ಪಲ್ಪ್ ಅಥವಾ ಜ್ಯೂಸ್ ಕುಡಿಯುವುದನ್ನು ತಪ್ಪಿಸಿ
  • ಹಣ್ಣುಗಳನ್ನು ಚೆನ್ನಾಗಿ ತೊಳೆದು ಬಳಸಿ
  • ಸಾಧ್ಯವಾದರೆ ಮನೆಯಲ್ಲೇ ತಾಜಾ ಜ್ಯೂಸ್ ತಯಾರಿಸಿ ಕುಡಿಯಿರಿ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಜೈಲರ್ 2’ ಚಿತ್ರತಂಡಕ್ಕೆ ಸೇರ್ಪಡೆಯಾದ ಹೃತಿಕ್ ರೋಷನ್; ರಜನಿ ಜೊತೆ 2 ದಿನ ಶೂಟಿಂಗ್ – Kannada News

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರದ ಸೀಕ್ವೆಲ್ ‘ಜೈಲರ್ 2’ (Jailer 2) ಬಗ್ಗೆ ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡುತ್ತಿದೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ತಲೈವಾ ಜೊತೆ ಬಾಲಿವುಡ್‌ನ ಯಾವ ಸ್ಟಾರ್ ನಟ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ತಾಜಾ ವರದಿಗಳ ಪ್ರಕಾರ, ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್ (Hrithik Roshan) ಈ ಚಿತ್ರದ ಪ್ರಮುಖ ಅತಿಥಿ ಪಾತ್ರಕ್ಕೆ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಮೊದಲಿಗೆ ಈ ಪಾತ್ರಕ್ಕಾಗಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರನ್ನು ಸಂಪರ್ಕಿಸಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.

ಶಾರುಖ್ ಖಾನ್ ಅವರು ಸದ್ಯ ತಮ್ಮ ಮುಂಬರುವ ಚಿತ್ರ ‘ಕಿಂಗ್’ ಸೇರಿದಂತೆ ಹಲವು ಪೂರ್ವ ನಿಯೋಜಿತ ಶೂಟಿಂಗ್ ಶೆಡ್ಯೂಲ್‌ಗಳಲ್ಲಿ ಬ್ಯುಸಿಯಾಗಿರುವುದರಿಂದ, ಡೇಟ್ಸ್ ಹೊಂದಿಸಲು ಸಾಧ್ಯವಾಗದೆ ‘ಜೈಲರ್ 2’ ಸಿನಿಮಾದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಶಾರುಖ್ ಅವರ ನಿರ್ಗಮನದ ಬೆನ್ನಲ್ಲೇ ಚಿತ್ರತಂಡ ಹೃತಿಕ್ ರೋಷನ್ ಅವರನ್ನು ಸಂಪರ್ಕಿಸಿದ್ದು, ಅವರು ಚಿತ್ರಕಥೆ ಇಷ್ಟವಾಗಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.

‘ವೆರೈಟಿ ಇಂಡಿಯಾ’ ವರದಿಯ ಪ್ರಕಾರ, ಹೃತಿಕ್ ರೋಷನ್ ಜೂನ್ 22 ಮತ್ತು 23ರಂದು ಚೆನ್ನೈನಲ್ಲಿ ತಮ್ಮ ಪಾತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಹೃತಿಕ್ ಅವರ ಪಾತ್ರದ ವಿವರಗಳನ್ನು ಸದ್ಯಕ್ಕೆ ರಹಸ್ಯವಾಗಿಡಲಾಗಿದ್ದರೂ, ಇದು ಕೇವಲ ಬಂದು ಹೋಗುವ ಸಾಧಾರಣ ಅತಿಥಿ ಪಾತ್ರವಲ್ಲ ಎನ್ನಲಾಗಿದೆ. ಚಿತ್ರದ ಕಥೆ ಒಂದು ಪ್ರಮುಖ ತಿರುವು ಪಡೆದುಕೊಳ್ಳುವ ಸಂದರ್ಭದಲ್ಲಿ ಅವರ ಪಾತ್ರದ ಎಂಟ್ರಿಯಾಗಲಿದೆ.

ರಜನಿಕಾಂತ್ ಅವರ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರಕ್ಕೆ ಸಹಾಯ ಮಾಡುವ ಮೂಲಕ ಇಡೀ ಕಥೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಈ ಪಾತ್ರ ಅತ್ಯಂತ ನಿರ್ಣಾಯಕವಾಗಿರಲಿದೆ. ಇದಕ್ಕಾಗಿ ಚಿತ್ರತಂಡ ಹೃತಿಕ್ ರೋಷನ್ ಅವರಿಗೆ ಸಂಪೂರ್ಣವಾಗಿ ವಿಭಿನ್ನ ಹಾಗೂ ಹೊಸ ಲುಕ್ ವಿನ್ಯಾಸಗೊಳಿಸುತ್ತಿದೆ. ಜೂನ್ 22ರಂದು ಕ್ಯಾಮೆರಾ ಮುಂದೆ ನಿಲ್ಲುವ ಮುನ್ನವೇ ಹೃತಿಕ್ ಅವರಿಗೆ ವಿಶೇಷ ಲುಕ್ ಟೆಸ್ಟ್ ಕೂಡ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ಚಿತ್ರರಂಗಕ್ಕೆ ಬರಲು ಸಜ್ಜಾದ ಹೃತಿಕ್ ರೋಷನ್ ಮಗ ಹೃದಾನ್ ರೋಷನ್

ಹೃತಿಕ್ ರೋಷನ್ ‘ಜೈಲರ್ 2’ ಚಿತ್ರತಂಡ ಸೇರಿರುವುದು ಅಭಿಮಾನಿಗಳಿಗೆ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಹೌದು, ಬರೋಬ್ಬರಿ 40 ವರ್ಷಗಳ ಹಿಂದೆ ಅಂದರೆ 1986ರಲ್ಲಿ ತೆರೆಕಂಡ ‘ಭಗವಾನ್ ದಾದಾ’ ಚಿತ್ರದಲ್ಲಿ ಹೃತಿಕ್ ರೋಷನ್ ಬಾಲನಟನಾಗಿ ರಜನಿಕಾಂತ್ ಜೊತೆ ನಟಿಸಿದ್ದರು. ಆ ಸಿನಿಮಾದಲ್ಲಿ ರಜನಿಕಾಂತ್ ಅವರ ಸಾಕುಮಗನ ಪಾತ್ರದಲ್ಲಿ ಹೃತಿಕ್ ಕಾಣಿಸಿಕೊಂಡಿದ್ದರು. ಈಗ ದಶಕಗಳ ನಂತರ ಇಬ್ಬರು ಸೂಪರ್ ಸ್ಟಾರ್‌ಗಳು ಮತ್ತೆ ಒಟ್ಟಿಗೆ ಬೆಳ್ಳಿತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್​​ಗೆ ಈಗಾಗಲೇ ಹಣ ಕಟ್ಟಿದ್ರೆ ವಾಪಸ್ ಸಿಗಲಿದೆ; ಬಾಯ್ಸ್​​​​ ನಿಮಗೂ ಉಚಿತ ಪ್ರಯಾಣ – Kannada News

ಬೆಂಗಳೂರು, ಜೂ.11: ರಾಜ್ಯದ ವಿದ್ಯಾರ್ಥಿ ಸಮೂಹಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಶಕ್ತಿ ಯೋಜನೆಯಡಿ ಇದುವರೆಗೆ ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿದ್ದ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು, ಇದೀಗ ಗಂಡು ಮಕ್ಕಳಿಗೂ ವಿಸ್ತರಿಸುವ ಮೂಲಕ ರಾಜ್ಯದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಈ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ವಿದ್ಯಾರ್ಥಿಗಳಿಗೆ ಈ ಉಚಿತ ಬಸ್ ಪಾಸ್ ಯೋಜನೆಯನ್ನು ಘೋಷಣೆ ಮಾಡಿದ್ದರು. ಅದರಂತೆ ಈಗ ಸಾರಿಗೆ ಇಲಾಖೆಯು ಯೋಜನೆ ಜಾರಿಗೆ ಸಂಪೂರ್ಣ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ಇನ್ನು ಒಂದೆರಡು ದಿನಗಳಲ್ಲಿ ಅಧಿಕೃತ ಗೈಡ್‌ಲೈನ್ಸ್ ಬಿಡುಗಡೆಯಾಗಲಿದೆ. ಈ ನಿರ್ಧಾರದಿಂದಾಗಿ ರಾಜ್ಯದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಭಾರಿ ಆರ್ಥಿಕ ನೆರವು ಸಿಗಲಿದೆ.

ಉಚಿತ ಬಸ್ ಪಾಸ್ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಇನ್ನು ಒಂದೆರಡು ದಿನಗಳಲ್ಲಿ ತಮ್ಮ ಹತ್ತಿರದ ‘ಕರ್ನಾಟಕ ಒನ್’ ಅಥವಾ ‘ಬೆಂಗಳೂರು ಒನ್’ ಕೇಂದ್ರಗಳಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಸಲ್ಲಿಸುವ ದಾಖಲಾತಿಗಳು ಹಾಗೂ ಅರ್ಜಿಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ, ಸಂಪೂರ್ಣ ಉಚಿತವಾಗಿ ಬಸ್ ಪಾಸ್‌ಗಳನ್ನು ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ?

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಹಣ ಪಾವತಿ ಮಾಡಿ ಬಸ್ ಪಾಸ್ ಖರೀದಿಸಿರುವ ವಿದ್ಯಾರ್ಥಿಗಳಿಗೆ ಸಚಿವರು ಮತ್ತೊಂದು ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ. ಅಂತಹ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ, ಅವರು ಪಾಸ್‌ಗಾಗಿ ಪಾವತಿಸಿರುವ ಸಂಪೂರ್ಣ ಹಣವನ್ನು ಸರ್ಕಾರವೇ ನೇರವಾಗಿ ವಿದ್ಯಾರ್ಥಿಗಳಿಗೆ ಮರುಪಾವತಿ ಮಾಡಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಈ ಐತಿಹಾಸಿಕ ಗ್ಯಾರಂಟಿ ನಡೆಗೆ ವಿದ್ಯಾರ್ಥಿ ವಲಯ ಹಾಗೂ ಪೋಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ? – Kannada News

ಬೆಂಗಳೂರು, (ಜೂನ್ 11): ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ(Guarantee scheme)ಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ’ (Gruhalakshmi) ಯೋಜನೆ ಪರಿಷ್ಕರಣೆ ಮಾಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಫಿಲ್ಟರ್ ಮಾಡಿದ್ದು, ನೋಂದಣಿಯಾದ 1.30 ಕೋಟಿ ಮಂದಿ ಪೈಕಿ 3.89 ಲಕ್ಷ ಮಂದಿಯನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ. 1.94 ಲಕ್ಷ ಫನಾನುಭವಿಗಳು ಐಟಿ ಜಿಎಸ್​ಟಿ ಪಾವತಿಸುವವರು ಆಗಿದ್ದರೆ, 1.95 ಲಕ್ಷ ಫಲಾನುಭವಿಗಳು ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟು 3.89 ಲಕ್ಷ ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಬಂದ್ ಮಾಡಲಾಗಿದೆ. ಅದರಲ್ಲೂ ಬೆಂಗಳೂರು ನಗರ ಜಿಲ್ಲೆಯಲ್ಲಿ 47,871 ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ. ತಾಂತ್ರಿಕ ಲೋಪ ತಡೆಯಲು ಶೀಘ್ರದಲ್ಲೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಬರಲಿದ್ದು, ಈ ಪರಿಷ್ಕರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ಮಾಸಿಕ ಬರೋಬ್ಬರಿ 77 ಕೋಟಿ ರೂ. ಉಳಿತಾಯವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅಡುಗೆ ಮನೆಯಲ್ಲಿ ಅಜ್ಜಿ ಉಪ್ಪಿನಕಾಯಿ ಮಾಡ್ತಿದ್ರೆ, ತನ್ನನ್ನು ಎತ್ತಿಕೊಳ್ಳಲು ಕೈ ಚಾಚಿದ ಪುಟಾಣಿ – Kannada News

ಅಜ್ಜಿ ಮೊಮ್ಮಗ ಕ್ಯೂಟ್‌ ಸಂಭಾಷಣೆImage Credit source: Instagram

ಕೆಲವರಿಗೆ ತಮ್ಮ ಹೆತ್ತವರಿಗಿಂತ ತಮ್ಮ ಅಜ್ಜ ಅಜ್ಜಿಯೇ (grand parents) ಎಲ್ಲವೂ ಆಗಿರುತ್ತಾರೆ. ಈ ಹಿರಿಜೀವಗಳ ಪ್ರೀತಿ, ಕಾಳಜಿಯೊಂದಿಗೆ ಬೆಳೆಯುತ್ತಾರೆ. ಇದೀಗ ಪುಟಾಣಿಯೊಂದು ತನ್ನ ಅಜ್ಜಿಯ ಮಾತಿಗೆ ಕ್ಯೂಟ್ ರಿಯಾಕ್ಷನ್ ನೀಡಿದೆ. ಅಡುಗೆ ಮನೆಯಲ್ಲಿ ಅಜ್ಜಿ ಹಾಗೂ ಮೊಮ್ಮಗನ ಸಿಹಿಯಾದ ಸಂವಾದವು ಹೃದಯಸ್ಪರ್ಶಿ ಕ್ಷಣವಾಗಿ ಮಾರ್ಪಟ್ಟಿದೆ. ಅಜ್ಜಿ ಉಪ್ಪಿನಕಾಯಿ ತಯಾರಿಸುವುದರಲ್ಲಿ ಬ್ಯುಸಿಯಾಗಿದ್ರೆ ಪುಟ್ಟ ಕಂದಮ್ಮ ತನ್ನನ್ನು ಎತ್ತಿಕೊಳ್ಳುವಂತೆ ಕೈ ಚಾಚಿರುವ  ವಿಡಿಯೋ ವೈರಲ್ ಆಗಿದೆ. ಈ ಹೃದಯಸ್ಪರ್ಶಿ ದೃಶ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ವಂದನಾ ವರ್ಮ (@vandanaverma911) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಅಜ್ಜಿ ಹಾಗೂ ಪುಟಾಣಿ ಕ್ಯೂಟ್ ಸಂಭಾಷಣೆಯನ್ನು ನೋಡಬಹುದು. ಅಡುಗೆ ಮನೆಯಲ್ಲಿ ಅಜ್ಜಿ ಉಪ್ಪಿನಕಾಯಿ ತಯಾರಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಮೊಮ್ಮಗನನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಂಭಾಷಣೆಯಲ್ಲಿ ತೊಡಗಿದ್ದಾರೆ. ಪುಟಾಣಿ ಅಜ್ಜಿ ಏನು ಮಾಡುತ್ತಿದ್ದಾಳೆಂದು ಬಹಳ ಕುತೂಹಲದಿಂದ ನೋಡುತ್ತಿದ್ದಾನೆ.

ತನ್ನ ಮೊಮ್ಮಗನ ಬಳಿ ಅಜ್ಜಿ ಏನು ಮಾಡ್ತಾ ಇದ್ದಾಳೆ ಎಂದು ಕೇಳುತ್ತಾಳೆ. ಕೊನೆಗೆ ಉಪ್ಪಿನಕಾಯಿ ಮಾಡುತ್ತಿದ್ದಾಳೆ ಎಂದು ಉತ್ತರಿಸಿದ್ದಾಳೆ. ಆ ಬಳಿಕ ಕತ್ತರಿಸಿಟ್ಟ ಮಾವಿನಕಾಯಿ ತುಂಡುಗಳಲ್ಲಿ ಸಣ್ಣ ತುಂಡನ್ನು ಮೊಮ್ಮಗ ಕೈಗೆ ಕೊಟ್ಟು ತಿನ್ನಲು ಹೇಳುವುದನ್ನು ನೀವು ನೋಡಬಹುದು. ತದನಂತರ ಕೀಟಲೆ ಮಾಡುತ್ತಾ ನನ್ನ ಬಾಯಲ್ಲಿ ನೀರೂರುತ್ತಿದೆ ಎಂದು ಹೇಳುವುದನ್ನು ಕಾಣಬಹುದು. ಈ ಪುಟಾಣಿಗೆ ಮಾವಿನಕಾಯಿ ತಿನ್ನುವಂತೆ ಅಜ್ಜಿ ಹೇಳಿದ್ದಾಳೆ. ಆದರೆ ಪುಟಾಣಿ ತನ್ನ ಎರಡು ಕೈಗಳನ್ನು ಚಾಚಿ ಮುಂದಕ್ಕೆ ಬಾಗಿದ್ದು ಅಜ್ಜಿಯ ಅಪ್ಪುಗೆಯನ್ನು ಬಯಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: 87ರ ವಯಸ್ಸಿನಲ್ಲಿ ಮೊದಲ ಬಾರಿ ಸಮುದ್ರ ತೀರಕ್ಕೆ ಹೋದ ಅಜ್ಜಿ, ರಿಯಾಕ್ಷನ್ ಹೇಗಿತ್ತು ನೋಡಿ

ಈ ವಿಡಿಯೋ ತೊಂಭತ್ತು ಸಾವಿರಕ್ಕೂ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜಿಯನ್ನು ಪ್ರೀತಿಸುವುದು ಇದೇ ಕಾರಣಕ್ಕೆ ಎಂದಿದ್ದಾರೆ. ಇನ್ನೊಬ್ಬರು, ಈ ಪುಟಾಣಿ ತುಂಬಾ ಒಳ್ಳೆಯವನು. ಈ ವಯಸ್ಸಿನ ಮಕ್ಕಳು ತಮ್ಮ ಕೈಯಲ್ಲಿರುವುದನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅಜ್ಜ ಅಜ್ಜಿಯ ಪ್ರೀತಿ ಸಿಕ್ಕಿರುವವರೇ ಪುಣ್ಯವಂತರು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:55 pm, Thu, 11 June 26

Source link

ಜೈಲಿನಲ್ಲಿ ಕುಳಿತು ಪತ್ನಿ ಕೊಲೆಗೆ ಸ್ಕೆಚ್: ಶಿವಮೊಗ್ಗದಲ್ಲಿ ನಾಲ್ವರು ಬುರ್ಖಾ ಹಾಕಿಕೊಂಡು ಬಂದವರಿಗೆ ಸಾರ್ವಜನಿಕರಿಂದ ಧರ್ಮದೇಟು – Kannada News

ಶಿವಮೊಗ್ಗ, ಜೂ.11: ಜೈಲಿನಲ್ಲಿರುವ ಕೊಲೆ ಆರೋಪಿಯೊಬ್ಬ ತನ್ನ ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಸ್ವಂತ ಪತ್ನಿಯ ಮೇಲೆಯೇ ದಾಳಿ ನಡೆಸಲು ಬುರ್ಖಾಧಾರಿ ಗ್ಯಾಂಗ್ ಕಳುಹಿಸಿರುವ ಆಘಾತಕಾರಿ ಘಟನೆ ಶಿವಮೊಗ್ಗದ ಕೆ.ಆರ್. ಪುರಂನಲ್ಲಿ ನಡೆದಿದೆ. ಆದರೆ, ಸ್ಥಳೀಯ ನಾಗರಿಕರ ಸಮಯಪ್ರಜ್ಞೆಯಿಂದಾಗಿ ಬುರ್ಖಾ ಧರಿಸಿ ಬಂದಿದ್ದ ಗ್ಯಾಂಗ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು, ಹಿಗ್ಗಾಮುಗ್ಗಾ ಧರ್ಮದೇಟು ತಿಂದು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕಳೆದ ಒಂದು ವರ್ಷದಿಂದ ಕೊಲೆ ಪ್ರಕರಣವೊಂದರ ವಿಚಾರಣಾಧೀನ ಖೈದಿಯಾಗಿರುವ ವ್ಯಕ್ತಿಯೇ ಈ ಇಡೀ ಷಡ್ಯಂತ್ರದ ಮಾಸ್ಟರ್ ಮೈಂಡ್. ಜೈಲಿನಲ್ಲಿರುವ ತನಗೆ ಐಷಾರಾಮಿ ಜೀವನ ನಡೆಸಲು ಮತ್ತು ಖರ್ಚಿಗೆ ಹಣ ನೀಡುತ್ತಿಲ್ಲ ಹಾಗೂ ತನ್ನನ್ನು ನೋಡಲು ಜೈಲಿಗೆ ಬರುತ್ತಿಲ್ಲ ಎಂಬ ಕಾರಣಕ್ಕೆ ಈತ ಪತ್ನಿ ತಬಸ್ಸುಮ್ ಬಾನು ವಿರುದ್ಧ ತೀವ್ರ ಆಕ್ರೋಶಗೊಂಡಿದ್ದನು. ಪತ್ನಿ ಮತ್ತು ಮಕ್ಕಳು ಜೀವನ ನಡೆಸುವುದೇ ಕಷ್ಟವಾಗಿರುವಾಗ ಪತಿಯ ಈ ಬೇಡಿಕೆಗಳಿಗೆ ಸ್ಪಂದಿಸಿರಲಿಲ್ಲ. ಇದರಿಂದ ಸೇಡು ತೀರಿಸಿಕೊಳ್ಳಲು ಜೈಲಿನಿಂದಲೇ ತನ್ನ ಸಹಚರರಿಗೆ ಪತ್ನಿಗೆ ಹೆದರಿಸಿ, ಮುಗಿಸುವಂತೆ ಸುಪಾರಿ ನೀಡಿದ್ದನು.

ಪತಿಯ ಆದೇಶದಂತೆ ಅಸ್ಲಾಂ (25), ಮಹೇಶ್ (20), ದರ್ಶನ್ (20) ಮತ್ತು ಮುನ್ನಾ (24) ಎಂಬ ನಾಲ್ವರು ಯುವಕರು ತಮ್ಮ ಗುರುತು ಸಿಗದಂತೆ ಸಂಪೂರ್ಣ ಬುರ್ಖಾ ಧರಿಸಿ ಕೆ.ಆರ್. ಪುರಂನಲ್ಲಿರುವ ಮಹಿಳೆಯ ಮನೆ ಬಳಿ ಬಂದಿದ್ದಾರೆ. ಆದರೆ, ಇವರ ವಿಚಿತ್ರ ನಡವಳಿಕೆ ಮತ್ತು ಚಲನವಲನಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳಿಗೆ ತಕ್ಷಣವೇ ಅನುಮಾನ ಬಂದಿದೆ. ತಡಮಾಡದ ಸಾರ್ವಜನಿಕರು ಒಟ್ಟಾಗಿ ನಾಲ್ವರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಥಳೀಯರು ತಪಾಸಣೆ ನಡೆಸಿದಾಗ ಬುರ್ಖಾ ಒಳಗಿದ್ದ ಗಂಡಸರ ಅಸಲಿ ಮುಖವಾಡ ಬಯಲಾಗಿದೆ. ಇದರಿಂದ ಕೆರಳಿದ ಸಾರ್ವಜನಿಕರು ನಾಲ್ವರಿಗೂ ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಗಲಾಟೆಯ ನಡುವೆ ಮುನ್ನಾ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆ, ಉಳಿದ ಮೂವರು ಆರೋಪಿಗಳಾದ ಅಸ್ಲಾಂ, ಮಹೇಶ್ ಮತ್ತು ದರ್ಶನ್‌ನನ್ನು ಹಿಡಿದು ದೊಡ್ಡಪೇಟೆ ಪೊಲೀಸರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ಅಡ್ಡ ಬಂದ ನಾಗರ ಹಾವು: ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್

ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಮಹಿಳೆಯ ಪ್ರಾಣ ಉಳಿದಿದೆ ಎಂದು ಕುಟುಂಬದವರು ಹೇಳಿದ್ದಾರೆ. ಬುರ್ಖಾ ಧರಿಸಿ ಇಂತಹ ಅಪರಾಧ ಕೃತ್ಯಗಳಿಗೆ ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:25 pm, Thu, 11 June 26

Source link