Category Archives: Blog

Your blog category

ಏರ್​ಪೋರ್ಟ್ ರಸ್ತೆಯಲ್ಲಿ ಅಪಘಾತ ಹೆಚ್ಚಳ: 1 ವರ್ಷದಲ್ಲಿ 50ಕ್ಕೂ ಅಧಿಕ ಜನ ಸಾವು, ಜಾಗೃತಿ ಮೂಡಿಸಲು ಬಂದ ಯಮ – Kannada News | Devanahalli Airport Road Safety: Yamaraja Campaign Tackles Accidents and Helmet Use

ರಸ್ತೆ ಸಂಚಾರದ ಬಗ್ಗೆ ಯಮರಾಜನಿಂದ ಜಾಗೃತಿImage Credit source: tv9 kannada

ದೇವನಹಳ್ಳಿ, ಫೆಬ್ರವರಿ 01: ಏರ್​ಪೋರ್ಟ್​​ ರಸ್ತೆ (Airport Road) ನಿತ್ಯ ಸಾವಿರಾರು ವಾಹನಗಳ ಸಂಚಾರದಿಂದ 24 ಗಂಟೆಯೂ ಫುಲ್ ಬ್ಯುಸಿಯಾಗಿರುವ ನಗರದ ಪ್ರಮುಖ ರಸ್ತೆ. ಹೀಗಾಗಿ ಈ ರಸ್ತೆಯಲ್ಲಿ ನೂರಾರು ಅಪಘಾತಗಳು, ಹತ್ತಾರು ಜನರ ಸಾವುಗಳು (deacth) ಸಂಭವಿಸುತ್ತಿದ್ದರು ವಾಹನ ಸವಾರರು ಮಾತ್ರ ಎಚ್ಚೆತ್ತುಕೊಂಡಿರಲಿಲ್ಲ. ಹಾಗಾಗಿ ಸಂಚಾರ ನಿಯಮ ತಿಳಿಸುವುದಕ್ಕೆ ಅಂತ ಸ್ವತಃ ಯಮರಾಜನೇ ರಸ್ತೆಗಿಳಿದಿದ್ದು, ಸವಾರರಿಗೆ ಎಚ್ಚರಿಕೆ ನೀಡಿದ್ದಾನೆ.

ಚಿತ್ರಗುಪ್ತ ಮತ್ತು ಯಮರಾಜರಿಂದ ಸಂಚಾರ ಜಾಗೃತಿ

ವೀಕೆಂಡ್ ಮೂಡ್​ನಲ್ಲಿ ಜಾಲಿ ರೈಡ್​​ಗೆ ಅಂತ ರಸ್ತೆಗಿಳಿಯುತ್ತಿದ್ದವರಿಗೆ ಯಾವಾಗಲೂ ಸಂಚಾರಿ ಪೊಲೀಸರು ಎದುರಾಗ್ತಿದ್ದರು. ಆದರೆ ಇಂದು ಮಾತ್ರ ಸಂಚಾರಿ ಪೊಲೀಸರ ಬದಲಿಗೆ ಸ್ವತಃ ಚಿತ್ರಗುಪ್ತ ಮತ್ತು ಯಮರಾಜ ಪ್ರತ್ಯಕ್ಷವಾಗಿ ಸಂಚಾರ ಜಾಗೃತಿ ಮೂಡಿಸಿದರು.

ಇದನ್ನೂ ಓದಿ: ತಪಾಸಣೆ ನೆಪದಲ್ಲಿ ವಿದೇಶಿ ಮಹಿಳೆಯ ಖಾಸಗಿ ಅಂಗ ಸ್ಪರ್ಶಿಸಿ ತಬ್ಬಿಕೊಂಡ ಏರ್​ಲೈನ್ಸ್ ಸಿಬ್ಬಂದಿಯ ಬಂಧನ

ಅಂದಹಾಗೆ ದೇವನಹಳ್ಳಿ ಬಳಿ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ಥಾಣವಾದ ನಂತರ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೆ ಬರ್ತಿದ್ದು, ನಿತ್ಯ ನಡೆಯುವ ಅಪಘಾತಗಳಿಂದ ಜನರು ಕೈ-ಕಾಲು ಮುರಿದುಕೊಳ್ಳುವುದರ ಜೊತೆಗೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಇಂದು ಸ್ವತಃ ಯಮ ವೇಷಧಾರಿ ಹಾಗೂ ಚಿತ್ರಗುಪ್ತರು ರಸ್ತೆಗಿಳಿದಿದ್ದು, ಟೋಲ್ ಬಳಿ ಬಂದ ವಾಹನ ಸವಾರರಿಗೆ ಬುದ್ಧಿವಾದ ಹೇಳಿದರು.

ದೇವನಹಳ್ಳಿಯ ಏರ್​ಪೋರ್ಟ್ ಟೋಲ್ ಪ್ಲಾಜಾ ಬಳಿ ವಾಹನ ಸವಾರರನ್ನ ಅಡ್ಡಗಟ್ಟಿದ ಯಮ ಹಾಗೂ ಚಿತ್ರಗುಪ್ತ ವಾಹನ ಸವಾರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯಾವುದೇ ರಕ್ಷಣೆ ಇಲ್ಲದೆ ಕಳಪೆ ಹಾಫ್​ ಹೆಲ್ಮೆಟ್ ಹಾಕಿ ಸಂಚಾರ ಮಾಡುತ್ತಿದ್ದ ಜನರಿಗೆ ಬುದ್ದಿವಾದ ಹೇಳಿದರು. ಪೊಲೀಸರು ಕೇವಲ ದಂಡ ವಿಧಿಸುತ್ತಾರೆ, ನಾನು ನೇರವಾಗಿ ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ಜೀವ ಮುಖ್ಯ ಸುರಕ್ಷಿತ ಹೆಲ್ಮೆಟ್ ಧರಿಸಿ ಅಂತ ವಾಹನ ಸವಾರರಿಗೆ ಸಂಚಾರಿ ನಿಯಮಗಳ ಬಗ್ಗೆ ಬಿತ್ತಿ ಪತ್ರಗಳನ್ನ ನೀಡಿ ಅರಿವು ಮೂಡಿಸಿದರು.

50ಕ್ಕೂ ಅಧಿಕ ಜನರು ಸಾವು

ಕೆಂಪೇಗೌಡ ಏರ್​ಪೋರ್ಟ್ ರಸ್ತೆಯಲ್ಲಿ ನಿತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಅಪಘಾತಗಳಿಂದ ಸಾಯುವವರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಕಳೆದ 2025ರಲ್ಲಿ ಯಲಹಂಕದಿಂದ ದೇವನಹಳ್ಳಿವರೆಗೆ 25 ಕಿ.ಮೀ ದೂರದಲ್ಲಿ ನೂರಕ್ಕೂ ಅಧಿಕ ಗಂಭೀರ ಅಪಘಾತಗಳಾಗಿದ್ದು, 50ಕ್ಕೂ ಅಧಿಕ ಜನರು ಸಾವನ್ನಪಿದ್ದರೆ, ನೂರಾರು ಜನ ಕೈ-ಕಾಲು ಮುರಿದುಕೊಂಡಿದ್ದಾರೆ. ಹೀಗಾಗಿ ಜನರಲ್ಲಿ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸಿದ್ದು, ಕಾರು ಚಾಲಕರು ಸೀಟ್ ಬೆಲ್ಟ್ ಮತ್ತು ಬೈಕ್ ಸವಾರರು ಮುಂಭಾಗ ಹಾಗೂ ಹಿಂಭಾಗ ಪ್ರಯಾಣಿಕರು ಐಎಸ್ಐ ಗುಣಮಟ್ಟದ ಹೆಲ್ಮೆಟ್ ಧರಿಸಿ ಸಂಚಾರ ಮಾಡುವಂತೆ ತಿಳಿಸಿದರು.

ಇದನ್ನೂ ಓದಿ: ದೇವನಹಳ್ಳಿ ಸುತ್ತಮುತ್ತ ದಟ್ಟ ಮಂಜು: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

ಒಟ್ಟಾರೆ ಏರ್​ಪೋರ್ಟ್ ರಸ್ತೆಯಲ್ಲಿ ನಿತ್ಯ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಸಾವು-ನೋವುಗಳ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಇನ್ನೂ ಅತೀ ವೇಗ ಹಾಗೂ ಅಪಘಾತಗಳನ್ನ ತಡೆಗಟ್ಟಲು ಎಐ ಕ್ಯಾಮರಾ ಸೇರಿದಂತೆ ಕಟ್ಟುನಿಟ್ಟಿನ ಸಂಚಾರಿ ನಿಯಮಗಳನ್ನ ಜಾರಿಗೆ ತಂದಿದ್ದು ಇನ್ನಾದರೂ ಸವಾರರು ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Goddess saraswati: ಸರಸ್ವತಿ ದೇವಿಯನ್ನು ಜ್ಞಾನದ ದೇವತೆ ಎಂದು ಏಕೆ ಕರೆಯಲಾಗುತ್ತದೆ? – Kannada News | Saraswati: Unveiling True Knowledge and Wisdom in Indian Culture’s Ancient Philosophy

ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ ಎಂದರೆ ಕೇವಲ ಪುಸ್ತಕದ ಮಾಹಿತಿ ಅಥವಾ ಪರೀಕ್ಷಾ ಅಂಕಗಳು ಅಲ್ಲ. ಅದು ತಿಳುವಳಿಕೆ, ಆತ್ಮಪರಿಶೀಲನೆ ಮತ್ತು ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬುದ್ಧಿವಂತಿಕೆ. ಈ ಆಳವಾದ ಅರ್ಥವನ್ನೇ ಪ್ರತಿನಿಧಿಸುವ ದೇವತೆಯಾಗಿ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ಸಮೃದ್ಧಿಯ ಸಂಕೇತ, ದುರ್ಗಾ ಶಕ್ತಿಯ ರೂಪವಾಗಿದ್ದರೆ, ಸರಸ್ವತಿಯನ್ನು ಮಾತ್ರ ಜ್ಞಾನದ ದೇವತೆಯೆಂದು ಏಕೆ ಕರೆಯಲಾಗುತ್ತದೆ ಎಂಬ ಪ್ರಶ್ನೆ ಅನೇಕರಿಗೆ ಮೂಡುತ್ತದೆ. ಇದರ ಉತ್ತರ ಪ್ರಾಚೀನ ವೇದಗಳು, ಭಾಷಾಶಾಸ್ತ್ರ ಮತ್ತು ಆಧುನಿಕ ಮನೋವಿಜ್ಞಾನದಲ್ಲಿದೆ.

‘ಸರಸ್ವತಿ’ ಎಂಬ ಹೆಸರಿನ ಅರ್ಥವೇನು?

‘ಸರಸ್ವತಿ’ ಎಂಬ ಪದವು ಸಂಸ್ಕೃತದ ‘ಸರಸ್’ (Saras) ಎಂಬ ಸಂಸ್ಕೃತ ಪದದಿಂದ ಬಂದಿದೆ, ಇದು ನಿರಂತರ ಹರಿವು ಅಥವಾ ಶುದ್ಧ ನೀರನ್ನು ಸೂಚಿಸುತ್ತದೆ. ಜ್ಞಾನವು ನದಿಯಂತೆ ನಿರಂತರವಾಗಿ ಹರಿಯುತ್ತದೆ ಮತ್ತು ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ. ಭಾರತೀಯ ತತ್ವಶಾಸ್ತ್ರದಲ್ಲಿ ಜ್ಞಾನವನ್ನು ಎಂದಿಗೂ ಸ್ಥಿರವೆಂದು ಪರಿಗಣಿಸುವುದಿಲ್ಲ. ಅದು ನದಿಯಂತೆ ನಿರಂತರವಾಗಿ ಹರಿದು, ವಿಸ್ತಾರಗೊಳ್ಳುತ್ತಾ ಬೆಳೆಯುತ್ತದೆ. ಈ ಕಾರಣಕ್ಕೇ ಸರಸ್ವತಿಯನ್ನು ಮೊದಲಿಗೆ ಋಗ್ವೇದದಲ್ಲಿ ನದಿಯಾಗಿ ವರ್ಣಿಸಲಾಗಿದೆ. ನಂತರದ ವೈದಿಕ ಸಾಹಿತ್ಯದಲ್ಲಿ ಅವಳು ಜ್ಞಾನ, ವಾಣಿ ಮತ್ತು ಬುದ್ಧಿಯ ಸಂಕೇತವಾಗಿ ರೂಪಾಂತರಗೊಂಡಿದ್ದಾಳೆ. ಋಗ್ವೇದದ ಹಲವು ಸೂಕ್ತಗಳಲ್ಲಿ ಸರಸ್ವತಿಯನ್ನು ಮಾನವನ ಬುದ್ಧಿಯನ್ನು ಶುದ್ಧೀಕರಿಸುವ ಶಕ್ತಿಯೆಂದು ಬಣ್ಣಿಸಲಾಗಿದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಸರಸ್ವತಿಯ ರೂಪದಲ್ಲಿರುವ ಜ್ಞಾನದ ಸಂಕೇತಗಳು:

ಸರಸ್ವತಿಯ ಪ್ರತಿಯೊಂದು ಅಂಶವೂ ಜ್ಞಾನದ ವಿಭಿನ್ನ ಮುಖವನ್ನು ಸೂಚಿಸುತ್ತದೆ. ಅವಳ ಕೈಯಲ್ಲಿರುವ ವೀಣೆ ಸೃಜನಶೀಲತೆ ಮತ್ತು ಶಿಸ್ತಿನ ಸಂಯೋಜನೆಯ ಸಂಕೇತ. ಸಂಗೀತವು ನಿಯಮಗಳ ಒಳಗೆ ಸ್ವಾತಂತ್ರ್ಯ ಕಲಿಸುವಂತೆ, ನಿಜವಾದ ಜ್ಞಾನವೂ ನಿಯಂತ್ರಿತ ಚಿಂತನೆಯ ಮೂಲಕವೇ ಬೆಳೆಯುತ್ತದೆ. ದೇವಿಯ ವಾಹನವಾದ ಹಂಸವು ಅತ್ಯಂತ ಮಹತ್ವದ್ದಾಗಿದೆ. ಪೌರಾಣಿಕ ನಂಬಿಕೆಯಂತೆ, ಹಂಸವು ಹಾಲು ಮತ್ತು ನೀರಿನ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲದು. ಇದು ಸತ್ಯ–ಸುಳ್ಳು, ಸರಿಯಾದದು–ತಪ್ಪಾದದ್ದು ಎಂಬ ಭೇದವನ್ನು ಅರಿಯುವ ವಿವೇಕದ ಸಂಕೇತವಾಗಿದೆ.

ಪ್ರಾಚೀನ ಧರ್ಮಗ್ರಂಥಗಳು ಮತ್ತು ಆಧುನಿಕ ವಿಜ್ಞಾನ:

ಆಧುನಿಕ ಶೈಕ್ಷಣಿಕ ಮನೋವಿಜ್ಞಾನ ಮತ್ತು ಅರಿವಿನ ವಿಜ್ಞಾನವೂ ಜ್ಞಾನ ಸಂಪಾದನೆಗೆ ಏಕಾಗ್ರತೆ, ಸೃಜನಶೀಲತೆ ಮತ್ತು ಗಮನ ಮುಖ್ಯವೆಂದು ಹೇಳುತ್ತದೆ. ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ಪ್ರಕಟಿಸಿದ ಅಧ್ಯಯನಗಳ ಪ್ರಕಾರ, ಸಂಗೀತಾಭ್ಯಾಸ ಮತ್ತು ಅಧ್ಯಯನವು ಮೆದುಳಿನ ನರ ಸಂಪರ್ಕಗಳನ್ನು ಬಲಪಡಿಸುತ್ತದೆ. ಈ ಅಂಶಗಳು ಸರಸ್ವತಿಯ ವೀಣೆ ಮತ್ತು ವಾಣಿಯ ಸಂಕೇತಗಳೊಂದಿಗೆ ನೇರವಾಗಿ ಹೊಂದಿಕೆಯಾಗುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಟ್ಟೂರು ತ್ರಿಬಲ್​​ ಮರ್ಡರ್​​ಗೆ ಹೊಸ ಟ್ವಿಸ್ಟ್​​​​​: ಮರ್ಯಾದಾ ಹತ್ಯೆಯೋ? ಹಣಕ್ಕಾಗಿ ಕೊಲೆಯೋ? – Kannada News | Vijaynagara Triple Murder: Honour Killing or Money Motive? Police Probe Continues

ಆರೋಪಿ ಅಕ್ಷಯ್​ ಮತ್ತು ಮೃತ ಮೂವರುImage Credit source: Tv9 Kannada

ಬೆಂಗಳೂರು, ಫೆ. 01: ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ತ್ರಿವಳಿ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್​​ ಪಡೆಯುತ್ತಿದೆ. ಆರೋಪಿ ಅಕ್ಷಯ್, ತಂಗಿಯ ಪ್ರೇಮ ಪ್ರಕರಣ ಮತ್ತು ಆಕೆ ಗರ್ಭಿಣಿಯಾಗಿರುವುದು ತಿಳಿದು ಮರ್ಯಾದಾ ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದ. ಆದ್ರೆ ತನಿಖೆ ವೇಳೆ ತಂಗಿ ಗರ್ಭಿಣಿ ಎಂದು ಈತ ಕತೆ ಕಟ್ಟಿದ್ದಾನಾ ಎನ್ನುವ ಶಂಕೆಯೀಗ ಪೊಲೀಸರನ್ನು ಕಾಡ್ತಿದೆ. ಬೆಟ್ಟಿಂಗ್, ಗ್ಯಾಂಬ್ಲಿಂಗ್ ಚಟಕ್ಕೆ ಬಿದ್ದಿದ್ದ ಆರೋಪಿ ಅಕ್ಷಯ್,  ಹಣದ ವಿಚಾರಕ್ಕೆ ಮನೆಯವರನ್ನು ಕೊಲೆಗೈದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಿಗೆ ಬಂದಿವೆ.

ಮನೆ ಮಾರಿದ್ದ ಹಣದ ಮೇಲೆ ಅಕ್ಷಯ್​​ಗೆ​​ ಕಣ್ಣು?

ದಾವಣಗೆರೆ ಜಿಲ್ಲೆ ಜಗಳೂರಿನಲ್ಲದ್ದ ಮನೆ ಮಾರಾಟದಿಂದ ಅಕ್ಷಯ್ ಕುಟುಂಬಕ್ಕೆ 1.5 ಕೋಟಿ ರುಪಾಯಿ ಹಣ ಬಂದಿತ್ತು. ಈ ದುಡ್ಡನ್ನು ಮಗಳ ಮದುವೆಗೆ ಎಂದು ತಂದೆ ಭೀಮರಾಜ್ ಹಾಗೇಯೇ ಇರಿಸಿದ್ದರು. ಆದರೆ ಬೆಟ್ಟಿಂಗ್​ನಿಂದ ಸಾಲ ಮಾಡಿಕೊಂಡಿದ್ದ ಮಗ ಅಕ್ಷಯ್, ಮನೆ ಮಾರಾಟದ ಹಣ ಕೊಡುವಂತೆ ತಂದೆಯನ್ನು ಪೀಡಿಸುತ್ತಿದ್ದನಂತೆ. ಆದರೆ ಮನೆಯವರು ಅಕ್ಷಯ್​ಗೆ ಹಣ ನೀಡಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ತಂದೆ, ತಾಯಿ ಹಾಗೂ ತಂಗಿಯನ್ನ ಈತ ಕೊಂದಿರುವ ಶಂಕೆ ತನಿಖೆ ವೇಳೆ ಪೊಲೀಸರಿಗೆ ಬಂದಿದೆ. ಪ್ರಕರಣ ಆರಂಭದಿಂದಲೂ ಆರೋಪಿ ಅಕ್ಷಯ್​​ ಒಂದೊಂದು ಕತೆ ಹೇಳಿಕೊಂಡು ಬಂದಿದ್ದಾನೆ. ಆರಂಭದಲ್ಲಿ ಬೆಂಗಳೂರಿಗೆ ಬಂದಿದ್ದ ಕುಟುಂಬ ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ಹೇಳಿ ಈತ ಯಾಮಾರಿಸಿದ್ದ. ಈಗ ಮದುವೆಗೆ ಮೊದಲೇ ತಂಗಿ ಗರ್ಭಿಣಿ ಆದ ಕಾರಣ ಕುಟುಂಬವನ್ನು ಹತ್ಯೆ ಮಾಡಿರೋದಾಗಿ ಈತ ಹೇಳಿರೋದು ಪೊಲೀಸರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ.

ಇದನ್ನೂ ಓದಿ: ತ್ರಿವಳಿ ಕೊಲೆಯ ಕಾರಣ ಬಯಲು, ಲವ್ವಿಡವ್ವಿಯಿಂದ ತಂಗಿ ಗರ್ಭಿಣಿಯಾದ್ದು ತಿಳಿದು ಕುಟುಂಬವನ್ನೇ ಮುಗಿಸಿದ ಅಣ್ಣ!

ಆರೋಪಿ ಅಕ್ಷಯ್​​, ಮೂವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಕೊಲೆಗೈದಿದ್ದ. ಮೊದಲು ಚಾಕುವಿನಿಂದ ಇರಿದು ತಾಯಿಯನ್ನು ಕೊಲೆ ಮಾಡಿರುವ ಪಾಪಿ ಪುತ್ರ, ಬಳಿಕ ತಂಗಿಗೆ ಕರೆ ಮಾಡಿ ನಿನಗೆ ಗಿಫ್ಟ್ ತಂದಿರುವೆ ಅಂತಾ ಮನೆಗೆ ಕರೆದು ಆಕೆಯನ್ನೂ ಸಾಯಿಸಿದ್ದ. ಇಬ್ಬರ ಮೃತದೇಹಗಳನ್ನು ಕೊಠಡಿಯಲ್ಲಿ ಇಟ್ಟಿದ್ದ. ಮನೆಗೆ ಬಂದ ತಂದೆ ಟಿವಿ ನೋಡುತ್ತಾ ಕುಳಿತಿದ್ದಾಗ ಅವರ ಕತೆಯನ್ನೂ ಮುಗಿಸಿ, ಮನೆಯ ಹಾಲ್​ನಲ್ಲೇ ಮೂರು ಮೃತದೇಹಗಳನ್ನು ಹೂತಿದ್ದ ಎಂಬ ವಿಷಯ ತನಿಖೆ ವೇಳೆ ಬಯಲಾಗಿತ್ತು.

ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

T20 World Cup: ಭಾರತಕ್ಕೆ ಬಂದ ಪಾಕ್ ಮೂಲದ ಆಟಗಾರರಿಗೆ ತಿಲಕವಿಟ್ಟು ಸ್ವಾಗತ – Kannada News | 2026 T20 World Cup: USA Cricket Team Receives Traditional Indian Welcome, Gears Up for Group A

2026 ರ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 7, 2026 ರಂದು ಪ್ರಾರಂಭವಾಗಿ ಮಾರ್ಚ್ 8 ರವರೆಗೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ 20 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಹೀಗಾಗಿ ಭಾರತ ಮತ್ತು ಶ್ರೀಲಂಕಾಕ್ಕೆ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ಆಗಮಿಸಲು ಪ್ರಾರಂಭಿಸಿವೆ. ಅದರಂತೆ ಭಾರತಕ್ಕೆ ಆಗಮಿಸಿದ ಯುಎಸ್ಎ ಕ್ರಿಕೆಟ್ ತಂಡವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಭಾರತೀಯ ಸಂಪ್ರದಾಯಕ್ಕೆ ಅನುಗುಣವಾಗಿ ಆಟಗಾರರನ್ನು ಸ್ವಾಗತಿಸಲಾಗುತ್ತಿರುವ ವೀಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತಿಲಕವಿಟ್ಟು ಆಟಗಾರರಿಗೆ ಸ್ವಾಗತ

ವೈರಲ್ ಆಗುತ್ತಿರುವ ವೀಡಿಯೊವೊಂದರಲ್ಲಿ, ಭಾರತೀಯ ಸಂಪ್ರದಾಯದ ಪ್ರಕಾರ ಯುಎಸ್ ಕ್ರಿಕೆಟ್ ತಂಡದ ಆಟಗಾರರ ಹಣೆಗೆ ತಿಲಕವಿಡುವ ಮೂಲಕ ಸ್ವಾಗತಿಸಲಾಯಿತು. ಗಮನಾರ್ಹವಾಗಿ, ಯುಎಸ್ಎ ತಂಡದಲ್ಲಿ ಮೂವರು ಪಾಕಿಸ್ತಾನಿ ಮೂಲದ ಆಟಗಾರರಿದ್ದಾರೆ. ಶಯಾನ್ ಜಹಾಂಗೀರ್, ಅಲಿ ಖಾನ್ ಮತ್ತು ಮೊಹಮ್ಮದ್ ಮೊಹ್ಸಿನ್ ಅವರಿಗೂ ತಿಲಕ ಇಟ್ಟು ಸ್ವಾಗತಿಸಲಾಯಿತು, ಇದು ಎಲ್ಲರ ಗಮನ ಸೆಳೆಯಿತು.

ಗಮನಿಸಬೇಕಾದ ಅಂಶವೆಂದರೆ, ಯುಎಸ್ಎ ತಂಡವು ಈ ಪಂದ್ಯಾವಳಿಯಲ್ಲಿ ಎರಡನೇ ಬಾರಿಗೆ ಭಾಗವಹಿಸುತ್ತಿದೆ. ಕಳೆದ ವರ್ಷ ತಮ್ಮ ಚೊಚ್ಚಲ ಟಿ20 ವಿಶ್ವಕಪ್ ಆಡಿದ್ದ ಅಮೆರಿಕ ಮೊದಲ ಆವೃತ್ತಿಯಲ್ಲೇ ಸೂಪರ್ 8 ಹಂತ ತಲುಪುವ ಮೂಲಕ ಇತಿಹಾಸ ನಿರ್ಮಿಸಿತ್ತು. ಈ ಬಾರಿಯೂ ಅದೇ ಪ್ರದರ್ಶನವನ್ನು ಪುನಾರವರ್ತಿಸಲು ತಂಡವು ಪ್ರಯತ್ನಿಸಲಿದೆ. ಈ ಆವೃತ್ತಿಯಲ್ಲೂ ಮೋನಾಂಕ್ ಪಟೇಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಬಾರಿ, ಯುಎಸ್ಎ ಭಾರತ, ಪಾಕಿಸ್ತಾನ, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ವಿರುದ್ಧ ಗ್ರೂಪ್ ಎ ನಲ್ಲಿ ಸ್ಪರ್ಧಿಸಲಿದೆ.

ಯುಎಸ್ಎ ವೇಳಾಪಟ್ಟಿ

ಫೆಬ್ರವರಿ 7: ಅಮೆರಿಕ vs ಭಾರತ, ಮುಂಬೈ

ಫೆಬ್ರವರಿ 10: ಅಮೆರಿಕ vs ಪಾಕಿಸ್ತಾನ, ಕೊಲಂಬೊ

ಫೆಬ್ರವರಿ 13: ಅಮೆರಿಕ vs ನೆದರ್ಲ್ಯಾಂಡ್ಸ್, ಚೆನ್ನೈ

ಫೆಬ್ರವರಿ 15: ಅಮೆರಿಕ vs ನಮೀಬಿಯಾ, ಚೆನ್ನೈ

2026 ರ ಟಿ20 ವಿಶ್ವಕಪ್‌ಗಾಗಿ ಯುಎಸ್‌ಎ ತಂಡ: ಮೊನಾಂಕ್ ಪಟೇಲ್ (ನಾಯಕ), ಜೆಸಿ ಸಿಂಗ್, ಆಂಡ್ರೀಸ್ ಗೌಸ್, ಶೆಹನ್ ಜಯಸೂರ್ಯ, ಮಿಲಿಂದ್ ಕುಮಾರ್, ಶಯಾನ್ ಜಹಾಂಗೀರ್, ಸೈತೀಜ ಮುಕ್ಕಮಲ, ಸಂಜಯ್ ಕೃಷ್ಣಮೂರ್ತಿ, ಹರ್ಮೀತ್ ಸಿಂಗ್, ನೋಸ್ತೂಶ್ ಕೆಂಜಿಗೆ, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಸೌರಭ್ ನೇತ್ರವಾಲ್ಕರ್, ಅಲಿ ಖಾನ್, ಮೊಹಮ್ಮದ್ ಮೊಹ್ಸಿನ್, ಶುಭಂ ರಂಜನೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

February Weekly Horoscope 2026: ನಿಮ್ಮ ರಾಶಿಗನುಗುಣವಾಗಿ ಫೆಬ್ರವರಿ ಮೊದಲ ವಾರದ ಭವಿಷ್ಯ ತಿಳಿಯಿರಿ – Kannada News | February Weekly Horoscope 2026: Zodiac Predictions and Planetary Effects for Your Rashi

2026ರ ಫೆಬ್ರವರಿಯ ಮೊದಲ ವಾರ ಇದಾಗಿದ್ದು ಗ್ರಹಗತಿಗಳ ನಿಖರ ಸ್ಥಾನವನ್ನು ಆಧರಿಸಿ, ಶುಭಾಶುಭಗಳು ನಿರ್ಣಯವಾಗುವುದು. ​ಮುಖ್ಯವಾಗಿ ಈ ಸಮಯದಲ್ಲಿ ಶನಿ ಮೀನ ರಾಶಿಯಲ್ಲಿ, ಗುರು ಮಿಥುನ ರಾಶಿಯಲ್ಲಿ ಮತ್ತು ರಾಹು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಇವರ ಆಧಾರದ ಮೇಲೆ ಈ ವಾರ ಫಲಗಳು ಹೇಗಿರಲಿವೆ?

ಮೇಷ ರಾಶಿ:

ನಿಮ್ಮ ರಾಶ್ಯಾಧಿಪತಿ ಮಂಗಳನ ಶುಭ ದೃಷ್ಟಿಯಿಂದ ವೃತ್ತಿಯಲ್ಲಿ ಉತ್ಸಾಹ ಇರಲಿದೆ. ತೃತೀಯ ಗುರುವು ಧೈರ್ಯ ನೀಡಲಿದ್ದು, ಸಹೋದರರಿಂದ ಸಹಕಾರ ಸಿಗಲಿದೆ. ಆರ್ಥಿಕವಾಗಿ ಹೂಡಿಕೆಗೆ ಲಾಭದಾಯಕ ಸಮಯ. ಆದರೆ ಶನಿಯ 12ನೇ ಮನೆಯ ಸಂಚಾರದಿಂದ ಅನಗತ್ಯ ಖರ್ಚುಗಳು ಬರಬಹುದು, ಜಾಗರೂಕರಾಗಿರಿ.

​ವೃಷಭ ರಾಶಿ:

ದ್ವಿತೀಯದಲ್ಲಿ ಗುರುವಿನ ಸ್ಥಿತಿಯಿಂದ ಹಣಕಾಸಿನ ಹರಿವು ಚೆನ್ನಾಗಿರಲಿದೆ. ಮಾತಿನಿಂದ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ಲಾಭ ಸ್ಥಾನದ ಶನಿಯು ಸ್ಥಿರ ಆದಾಯಕ್ಕೆ ದಾರಿ ಮಾಡಿಕೊಡಲಿದ್ದಾನೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಲಿದೆ. ಆದರೆ ರಾಹುವಿನ ಪ್ರಭಾವದಿಂದ ಆರೋಗ್ಯದ ಬಗ್ಗೆ ಕಿರಿಕಿರಿ ಉಂಟಾಗಬಹುದು, ಆಹಾರ ಕ್ರಮದ ಕಡೆ ಗಮನವಿರಲಿ.

​ಮಿಥುನ ರಾಶಿ:

ನಿಮ್ಮ ರಾಶಿಯಲ್ಲಿಯೇ ಗುರು ಇರುವುದರಿಂದ ಆತ್ಮವಿಶ್ವಾಸ ಹೆಚ್ಚಲಿದೆ. ಹೊಸ ಯೋಜನೆಗಳಿಗೆ ಚಾಲನೆ ನೀಡಲು ಸಕಾಲ. ದಶಮದಲ್ಲಿ ಶನಿ ಇರುವುದರಿಂದ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲಿಗೆ ಬೀಳಲಿವೆ. ವ್ಯಾಪಾರದಲ್ಲಿ ಲಾಭ ಸಾಧಾರಣವಾಗಿರುತ್ತದೆ. ಸಂಗಾತಿಯೊಂದಿಗೆ ಸಣ್ಣ ಭಿನ್ನಾಭಿಪ್ರಾಯ ಮೂಡಬಹುದು, ತಾಳ್ಮೆಯಿಂದ ವರ್ತಿಸಿ.

​ಕರ್ಕಾಟಕ ರಾಶಿ:

ದ್ವಾದಶ ಭಾವದ ಗುರುವಿನಿಂದಾಗಿ ಶುಭ ಕಾರ್ಯಗಳಿಗಾಗಿ ಹಣ ಖರ್ಚಾಗಲಿದೆ. ದೂರದ ಪ್ರಯಾಣದ ಯೋಗವಿದೆ. ಭಾಗ್ಯ ಸ್ಥಾನದ ಶನಿಯು ಪಿತ್ರಾರ್ಜಿತ ಆಸ್ತಿಯಲ್ಲಿ ಲಾಭ ನೀಡಲಿದ್ದಾನೆ. ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕಚೇರಿಯಲ್ಲಿ ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ.

​ಸಿಂಹ ರಾಶಿ:

ಲಾಭ ಸ್ಥಾನದ ಗುರುವಿನಿಂದ ಆರ್ಥಿಕ ಪ್ರಗತಿ ಅದ್ಭುತವಾಗಿರಲಿದೆ. ಹಳೆಯ ಸಾಲಗಳು ತೀರುವ ಸಾಧ್ಯತೆ ಇದೆ. ಅಷ್ಟಮ ಶನಿಯ ಪ್ರಭಾವವಿರುವುದರಿಂದ ವಾಹನ ಚಾಲನೆಯಲ್ಲಿ ಅತೀವ ಎಚ್ಚರಿಕೆ ಅಗತ್ಯ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಕೆಲಸದ ಸ್ಥಳದಲ್ಲಿ ಬದಲಾವಣೆ ಕಂಡುಬರಲಿದೆ. ಸಂಗಾತಿಯಿಂದ ಬೆಂಬಲ ಸಿಗಲಿದೆ.

​ಕನ್ಯಾ ರಾಶಿ:

ದಶಮದ ಗುರುವಿನ ಪ್ರಭಾವದಿಂದ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಮತ್ತು ಬಡ್ತಿಯ ಸಾಧ್ಯತೆ ಇದೆ. ಸಪ್ತಮದಲ್ಲಿ ಶನಿ ಇರುವುದರಿಂದ ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರವಿರಲಿ. ಆರ್ಥಿಕವಾಗಿ ಈ ವಾರ ಸಮಾಧಾನಕರವಾಗಿರಲಿದೆ. ಮಕ್ಕಳ ಶಿಕ್ಷಣಕ್ಕಾಗಿ ಓಡಾಟ ನಡೆಸಬೇಕಾಗಬಹುದು. ಸ್ನಾಯು ಸೆಳೆತದಂತಹ ಸಣ್ಣ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

​ತುಲಾ ರಾಶಿ:

ಭಾಗ್ಯಸ್ಥಾನದ ಗುರುವಿನಿಂದ ಅದೃಷ್ಟ ನಿಮ್ಮ ಕಡೆ ಇರಲಿದೆ. ತಂದೆಯಿಂದ ಅಥವಾ ಹಿರಿಯರಿಂದ ಆರ್ಥಿಕ ಸಹಾಯ ದೊರೆಯಲಿದೆ. ಆರನೇ ಮನೆಯ ಶನಿಯು ನಿಮ್ಮ ಶತ್ರುಗಳ ಮೇಲೆ ಜಯ ತಂದುಕೊಡಲಿದ್ದಾನೆ. ಕೋರ್ಟ್ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ವಿದೇಶ ಪ್ರಯಾಣದ ಕನಸು ನನಸಾಗಬಹುದು. ದೈಹಿಕ ವ್ಯಾಯಾಮಕ್ಕೆ ಆದ್ಯತೆ ನೀಡಿ.

ವೃಶ್ಚಿಕ ರಾಶಿ:

ಅಷ್ಟಮದ ಗುರುವಿನಿಂದ ಹಣಕಾಸಿನ ಹರಿವಿನಲ್ಲಿ ಏರಿಳಿತವಿರಲಿದೆ. ಐದನೇ ಮನೆಯಲ್ಲಿ ಶನಿ ಇರುವುದರಿಂದ ಸಂತಾನ ಅಥವಾ ಶಿಕ್ಷಣದ ವಿಷಯದಲ್ಲಿ ಸ್ವಲ್ಪ ಕಾಳಜಿ ವಹಿಸಬೇಕು. ಆತುರದ ನಿರ್ಧಾರಗಳು ನಷ್ಟ ತರಬಹುದು. ಉದ್ಯೋಗದಲ್ಲಿ ಸಹೋದ್ಯೋಗಿಗಳ ಕಿರಿಕಿರಿ ಇರಬಹುದು. ವಾರದ ಕೊನೆಯಲ್ಲಿ ಅನಿರೀಕ್ಷಿತ ಧನಲಾಭ ಅಥವಾ ಗೆಳೆಯರ ಭೇಟಿಯ ಸಾಧ್ಯತೆ ಇದೆ.

​ಧನಸ್ಸು ರಾಶಿ:

ಸಪ್ತಮ ಗುರುವಿನ ಪ್ರಭಾವದಿಂದ ವಿವಾಹ ಪ್ರಯತ್ನಗಳು ಸಫಲವಾಗಲಿವೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ. ನಾಲ್ಕನೇ ಮನೆಯ ಶನಿಯಿಂದ ಮನೆ ಅಥವಾ ವಾಹನದ ರಿಪೇರಿಗಾಗಿ ಖರ್ಚು ಬರಬಹುದು. ವೃತ್ತಿ ಜೀವನದಲ್ಲಿ ಸ್ಥಿರತೆ ಇರಲಿದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ.

​ಮಕರ ರಾಶಿ:

ಆರನೇ ರಾಶಿಯ ಗುರುವಿನಿಂದಾಗಿ ಸಾಲದ ಹೊರೆ ಕಡಿಮೆಯಾಗಲಿದೆ. ತೃತೀಯದಲ್ಲಿ ಶನಿ ಇರುವುದರಿಂದ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಹೋದರರೊಂದಿಗೆ ಸಂಬಂಧ ಸುಧಾರಿಸಲಿದೆ. ವ್ಯಾಪಾರದಲ್ಲಿ ಹೊಸ ಗ್ರಾಹಕರು ಸಿಗಲಿದ್ದಾರೆ. ಶೀತ ಅಥವಾ ಅಲರ್ಜಿಯಂತಹ ಸಮಸ್ಯೆಗಳು ಕಾಡಬಹುದು. ಮಾನಸಿಕವಾಗಿ ಸ್ವಲ್ಪ ದಣಿವು ಅನುಭವಿಸುವಿರಿ.

​ಕುಂಭ ರಾಶಿ:

ಪಂಚಮ ಗುರುವಿನ ಅನುಗ್ರಹದಿಂದ ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಎರಡನೇ ಮನೆಯಲ್ಲಿ ಶನಿ ಇರುವುದರಿಂದ ಮಾತಿನ ಮೇಲೆ ಹಿಡಿತವಿರಲಿ, ಇಲ್ಲದಿದ್ದರೆ ಸಂಬಂಧಗಳು ಹಾಳಾಗಬಹುದು. ಆರ್ಥಿಕವಾಗಿ ಲಾಭದಾಯಕ ವಾರ. ಮಕ್ಕಳ ಕಡೆಯಿಂದ ಶುಭ ಸುದ್ದಿ ಕೇಳುವಿರಿ. ರಾಹುವಿನಿಂದಾಗಿ ಮನಸ್ಸಿನಲ್ಲಿ ಸಣ್ಣ ಆತಂಕ ಇರಬಹುದು, ಧ್ಯಾನ ಮಾಡಿ.

​ಮೀನ ರಾಶಿ:

ನಿಮ್ಮ ರಾಶಿಯಲ್ಲಿಯೇ ಶನಿ ಸಂಚರಿಸುತ್ತಿರುವುದರಿಂದ ಕೆಲಸದಲ್ಲಿ ವಿಳಂಬ ಮತ್ತು ಮಾನಸಿಕ ಒತ್ತಡ ಇರಬಹುದು. ಆದರೆ ನಾಲ್ಕನೇ ಮನೆಯ ಗುರುವು ಸುಖ ಭೋಗಗಳನ್ನು ನೀಡಲಿದ್ದಾನೆ. ಮನೆಯಲ್ಲಿ ಶಾಂತಿ ನೆಲೆಸಲಿದೆ. ಆಸ್ತಿ ಖರೀದಿ ಪ್ರಯತ್ನಗಳು ಯಶಸ್ವಿಯಾಗಲಿವೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

Published On – 5:30 pm, Sun, 1 February 26

Source link

ಭಾರತದ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಬಲಪಡಿಸುವ ಬಜೆಟ್; ಪ್ರಧಾನಿ ಮೋದಿ ಬಣ್ಣನೆ – Kannada News | Budget 2026 strengthens foundation for Indias bright future says PM Narendra Modi

ನವದೆಹಲಿ, ಫೆಬ್ರವರಿ 1: ಈ ಬಾರಿಯ ಕೇಂದ್ರ ಬಜೆಟ್ (Budget 2026) ಐತಿಹಾಸಿಕ ಬಜೆಟ್ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಬಣ್ಣಿಸಿದ್ದಾರೆ. ಇದು ಮಹಿಳೆಯರ ಸಬಲೀಕರಣವನ್ನು ಪ್ರತಿಬಿಂಬಿಸುತ್ತದೆ, ಭಾರತದ ಸುಧಾರಣಾ ಪ್ರಯಾಣವನ್ನು ವೇಗಗೊಳಿಸುತ್ತದೆ ಮತ್ತು ದೇಶದ ಭವಿಷ್ಯದ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಹಾಕುತ್ತದೆ ಎಂದು ಹೇಳಿದ್ದಾರೆ. ಹಾಗೇ, ಸತತ 9ನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್ ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸಿದ ಮೂಲಕ ಮಹಿಳಾ ಹಣಕಾಸು ಸಚಿವೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಬಜೆಟ್ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಭಾರತದ ಹಾದಿಯನ್ನು ಬಲಪಡಿಸುತ್ತದೆ. ಇಂದಿನ ಬಜೆಟ್ ಐತಿಹಾಸಿಕವಾಗಿದೆ. ಇದು ದೇಶದ ಮಹಿಳಾ ಶಕ್ತಿಯ ಬಲವಾದ ಸಬಲೀಕರಣವನ್ನು ಪ್ರತಿಬಿಂಬಿಸುತ್ತದೆ. ಈ ಬಜೆಟ್ ಅಪಾರ ಅವಕಾಶಗಳ ಹೆದ್ದಾರಿಯಂತೆ ಕಾರ್ಯನಿರ್ವಹಿಸುತ್ತದೆ. ಭಾರತದ 140 ಕೋಟಿ ನಾಗರಿಕರು ದೇಶವು ಸಾಧ್ಯವಾದಷ್ಟು ಬೇಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬೇಕೆಂದು ಬಯಸುತ್ತಾರೆ. ಈ ಬಜೆಟ್ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪ್ರಯತ್ನಕ್ಕೆ ಬಲವಾದ ಅಡಿಪಾಯವನ್ನು ಒದಗಿಸುತ್ತದೆ ಎಂದಿದ್ದಾರೆ.
ಈ ಬಜೆಟ್ “ಅಪಾರ ಅವಕಾಶಗಳ ಹೆದ್ದಾರಿ”ಯಾಗಿದ್ದು, ಇದು “ವರ್ತಮಾನದ ಕನಸುಗಳನ್ನು ವಾಸ್ತವಕ್ಕೆ ತಿರುಗಿಸುತ್ತದೆ” ಮತ್ತು “ಭಾರತದ ಉಜ್ವಲ ಭವಿಷ್ಯಕ್ಕೆ ಬಲವಾದ ಅಡಿಪಾಯ” ಹಾಕುತ್ತದೆ. 2047ರ ವೇಳೆಗೆ ವಿಕಸಿತ ಭಾರತವನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Budget 2026: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ಈ ಬಜೆಟ್ ಅನ್ನು ವಿಶಿಷ್ಟ ಎಂದು ಕರೆದ ಪ್ರಧಾನಿ ಮೋದಿ, “ಇದು ಹಣಕಾಸಿನ ಕೊರತೆಯನ್ನು ಕಡಿಮೆ ಮಾಡುವುದು ಮತ್ತು ಹಣದುಬ್ಬರವನ್ನು ನಿಯಂತ್ರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಜೊತೆಗೆ ಹೆಚ್ಚಿನ ಕ್ಯಾಪೆಕ್ಸ್ ಮತ್ತು ಹೆಚ್ಚಿನ ಬೆಳವಣಿಗೆಗೆ ಒತ್ತು ನೀಡುತ್ತದೆ. ಈ ಬಜೆಟ್ ಭಾರತದ ಜಾಗತಿಕ ಪಾತ್ರವನ್ನು ಬಲಪಡಿಸುತ್ತದೆ” ಎಂದಿದ್ದಾರೆ.

“ಮಹಿಳಾ ನೇತೃತ್ವದ ಸ್ವ-ಸಹಾಯ ಗುಂಪುಗಳಿಗೆ ಆಧುನಿಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಈ ಬಜೆಟ್ ಆದ್ಯತೆ ನೀಡುತ್ತದೆ. ಪ್ರತಿ ಜಿಲ್ಲೆಯಲ್ಲೂ ಹುಡುಗಿಯರಿಗೆ ಹೊಸ ಹಾಸ್ಟೆಲ್‌ಗಳನ್ನು ನಿರ್ಮಿಸಲು ಪ್ರಯತ್ನಗಳು ನಡೆಯುತ್ತಿವೆ. ಇದು ಹೆಚ್ಚು ಜನರು ಶಿಕ್ಷಣವನ್ನು ಪಡೆಯಲು ಸಹಾಯ ಮಾಡುತ್ತದೆ. ಸರ್ಕಾರ ಯಾವಾಗಲೂ ಕೃಷಿ ಮತ್ತು ಮೀನುಗಾರಿಕೆಗೆ ಆದ್ಯತೆ ನೀಡಿದೆ. ಈ ಬಜೆಟ್ ತೆಂಗಿನಕಾಯಿ, ಗೋಡಂಬಿ, ಕೋಕೋ ಮತ್ತು ಶ್ರೀಗಂಧದ ಉತ್ಪಾದನೆಯಲ್ಲಿ ತೊಡಗಿರುವ ರೈತರನ್ನು ಬೆಂಬಲಿಸಲು ಪ್ರಮುಖ ಕ್ರಮಗಳನ್ನು ಪರಿಚಯಿಸುತ್ತದೆ” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಜೆಟ್​​ ಬಗ್ಗೆ ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​​​ಗಳ ಹವಾ – Kannada News | Middle Class Budget 2026 Memes: Viral Humor, Tax Hopes and Economic Term Jokes

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿದ್ದಂತೆ, ಇತ್ತ ಸೋಶಿಯಲ್ ಮೀಡಿಯಾದಲ್ಲಿ ಮೀಮ್‌ಗಳ (Memes) ಮಹಾಪೂರವೇ ಹರಿದುಬಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನೆಟ್ಟಿಗರು ಹಾಸ್ಯ ಪ್ರಜ್ಞೆಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. “ಹೊಸ ತೆರಿಗೆ ಪದ್ಧತಿಯಲ್ಲಿ ವಿನಾಯಿತಿ ಸಿಗುತ್ತೆ ಅಂತ ಕಾಯ್ತಿರೋ ಮಧ್ಯಮ ವರ್ಗದ ಜನ” ಎಂಬ ಶೀರ್ಷಿಕೆಯಡಿ, ಹಳೆಯ ಸಿನಿಮಾದ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದಾರೆ . ಸರ್ಕಾರ ನಮಗೆ ಏನು ಕೊಡುತ್ತೆ ಅನ್ನೋದಕ್ಕಿಂತ, ನಮ್ಮಿಂದ ಏನು ತಗೊಳ್ಳಲ್ಲ ಅನ್ನೋದೇ ದೊಡ್ಡ ಬಜೆಟ್” ಎಂಬ ಸಾಲುಗಳು ಸಿಕ್ಕಾಪಟ್ಟೆ ಶೇರ್ ಆಗುತ್ತಿವೆ.

ಬಜೆಟ್ ಭಾಷಣದ ವೇಳೆ ಸಚಿವರು ಬಳಸುವ ‘Fiscal Deficit’, ‘Capex’, ‘GDP Growth’ ಅಂತಹ ಪದಗಳನ್ನು ಕೇಳಿ ಸಾಮಾನ್ಯ ಜನರು ಗಾಬರಿಯಿಂದ ನೋಡುತ್ತಿರುವ ‘ರಿಯಾಕ್ಷನ್ ವಿಡಿಯೋ’ಗಳು ನಗು ತರಿಸುತ್ತಿದೆ. “ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ” ಅನ್ನೋ ರೀತಿಯ ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್ ಕಾಮಿಡಿ ದೃಶ್ಯಗಳನ್ನು ಜನ ಬಳಸುತ್ತಿದ್ದಾರೆ. ಇದರ ಜತೆಗೆ ಕಳೆದ ಬಜೆಟ್‌ಗಳಲ್ಲಿ ಮೈತ್ರಿ ಪಕ್ಷಗಳ ರಾಜ್ಯಗಳಿಗೆ ಸಿಕ್ಕ ಪ್ರಾಮುಖ್ಯತೆಯನ್ನು ನೆನಪಿಸಿಕೊಂಡು, ಈ ಬಾರಿಯೂ “ನಮಗೆ ಏನು ಸಿಗುತ್ತೆ?” ಅಂತ ಕಾಯುತ್ತಿರುವ ಪ್ರಾದೇಶಿಕ ನಾಯಕರ ಮೀಮ್‌ಗಳು ಸದ್ದು ಮಾಡುತ್ತಿವೆ.

ಜೆಟ್‌ಗೆ ಮುನ್ನ ನಡೆದ ಹಲ್ವಾ ಸೆರೆಮನಿಯನ್ನು ಇಟ್ಟುಕೊಂಡು, “ಹಲ್ವಾ ತಿನ್ನೋರು ಅವರು, ನಮಗೆ ಹಲ್ವಾ ಕೊಡೋರು ಅವರು” (ನಮಗೆ ಮೋಸ ಮಾಡ್ತಾರೆ ಅನ್ನೋ ಅರ್ಥದಲ್ಲಿ) ಎಂಬ ಕಾಲೆಳೆಯುವ ಪೋಸ್ಟ್‌ಗಳು ಹರಿದಾಡುತ್ತಿವೆ.ಜೆಟ್ ಮುಗಿದ ತಕ್ಷಣ ಎಲ್ಲರೂ ಗೂಗಲ್‌ನಲ್ಲಿ “ಯಾವ ವಸ್ತುಗಳು ಅಗ್ಗವಾಗಿವೆ?” (What is cheaper?) ಅಂತ ಹುಡುಕುವ ವಿಡಿಯೋಗಳು ಮತ್ತು “ಸಿಗರೇಟ್ ಬೆಲೆ ಏರಿಕೆ” ಬಗ್ಗೆ ಬರುವ ತಮಾಷೆಯ ಪೋಸ್ಟ್‌ಗಳು ಟ್ರೆಂಡ್ ಆಗುತ್ತಿವೆ. ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಭಾರಿ ವಿನಾಯಿತಿ ಸಿಗುತ್ತೆ ಎಂದು ಕಾದು ಕುಳಿತವರಿಗೆ ‘ಏನೂ ಸಿಗಲಿಲ್ಲ’ ಎಂಬ ಅರ್ಥದಲ್ಲಿ ಈ ಹಳೆಯ ಚಿತ್ರದ ದೃಶ್ಯ ಬಳಸಲಾಗುತ್ತಿದೆ.”ನನ್ನ ಅಕೌಂಟ್‌ನಲ್ಲಿ 470 ರೂ. ಇದೆ, ಆದ್ರೂ ನಾನು ಬಜೆಟ್ ನೋಡ್ತಿದ್ದೇನೆ” ಎಂಬ ಮೀಮ್ ಮಧ್ಯಮ ವರ್ಗದವರ ಪರಿಸ್ಥಿತಿಯನ್ನು ಹಾಸ್ಯಮಯವಾಗಿ ಬಿಂಬಿಸುತ್ತಿದೆ.

ಇದನ್ನೂ ಓದಿ: ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ರೂ.; ಬಜೆಟ್ ಮಂಡನೆ ಬಳಿಕ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ

ಸರ್ಕಾರವು ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ಮೇಲಿನ ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಅನ್ನು ಹೆಚ್ಚಿಸಿರುವುದರಿಂದ, ಟ್ರೇಡರ್‌ಗಳು ಎಂಬ ಲಗಾನ್ ಸಿನಿಮಾ ಶೈಲಿಯ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರ್ಷಪೂರ್ತಿ ಹಣಕಾಸಿನ ಬಗ್ಗೆ ಅರಿವಿಲ್ಲದವರು ಬಜೆಟ್ ದಿನ ಮಾತ್ರ “ದೇಶದ ಜಿಡಿಪಿ ಹಾಗಿದೆ, ಫಿಸ್ಕಲ್ ಡೆಫಿಸಿಟ್ ಹೀಗಿದೆ” ಎಂದು ವಿಶ್ಲೇಷಣೆ ಮಾಡುವುದನ್ನು ಲೇವಡಿ ಮಾಡುವ ಮೀಮ್‌ಗಳು ವೈರಲ್ ಆಗಿವೆ. “ಬಜೆಟ್ ದಿನದಂದು ಅರ್ಥಶಾಸ್ತ್ರಜ್ಞರ ಸಂಖ್ಯೆಯಲ್ಲಿ ಭಾರಿ ಏರಿಕೆ” ಎಂಬ ಶೀರ್ಷಿಕೆಯಡಿ ಗಣಿತದ ಗ್ರಾಫ್‌ಗಳನ್ನು ಬಳಸಲಾಗುತ್ತಿದೆ.

ಬಜೆಟ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಜೆಟ್ 2026 ಪ್ರಕಟಣೆ; ಬಾಂಗ್ಲಾದೇಶದಿಂದ ಹಿಡಿದು ಮಾರಿಷಸ್​ವರೆಗೆ ವಿವಿಧ ದೇಶಗಳಿಗೆ ಭಾರತ ಮಾಡುವ ಧನಸಹಾಯವೆಷ್ಟು? – Kannada News | Budget 2026 27 estimation of Rs 8,792 crore of grants and loan to various countries and international bodies

ನವದೆಹಲಿ, ಫೆಬ್ರುವರಿ 1: ಭಾರತ ತನ್ನ ನೆರೆ ರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳಿಗೆ ಬೇರೆ ಬೇರೆ ಕಾರಣಕ್ಕೆ ಸಾಲ ಹಾಗೂ ದೇಣಿಗೆಗಳನ್ನು ನೀಡುತ್ತದೆ. ಈ ಬಾರಿಯ ಬಜೆಟ್​ನಲ್ಲಿ (Union Budget 2026) ಮಾಡಲಾಗಿರುವ ಅಂದಾಜು ಪ್ರಕಾರ ಭಾರತದಿಂದ 2026-27ರ ವರ್ಷದಲ್ಲಿ 8,792.32 ಕೋಟಿ ರೂ ಹಣದ ನೆರವನ್ನು ಕೊಡುವ ಯೋಜನೆ ಇದೆ. ಇದರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲೇ 6,997 ಕೋಟಿ ರೂ ಅನುದಾನಗಳು ವಿವಿಧ ದೇಶಗಳಿಗೆ ಸಂದಾಯವಾಗಲಿವೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಮುಂದಿನ ವರ್ಷ ನೀಡಲಾಗುವ 6,997.56 ಕೋಟಿ ರೂ ಹಣದ ನೆರವಿನಲ್ಲಿ 519.92 ಕೋಟಿ ರೂ ಸಾಲ ಇದೆ. ಅಫ್ಘಾನಿಸ್ತಾನದಿಂದ ಹಿಡಿದು ಮಯನ್ಮಾರ್​ವರೆಗೆ ಹಲವು ದೇಶಗಳಿಗೆ ಭಾರತ ದೇಣಿಗೆ ನೀಡುತ್ತಿದೆ. ಭೂತಾನ್ ದೇಶಕ್ಕೆ ಅತಿಹೆಚ್ಚಿನ ಸಹಾಯವನ್ನು ಭಾರತ ಮಾಡುತ್ತಾ ಬಂದಿದೆ. ಈ ಬಾರಿಯೂ ಇದು ಮುಂದುವರಿದಿದೆ.

6,997 ಕೋಟಿ ರೂ ಪೈಕಿ 2,288 ಕೋಟಿ ರೂ ಅನ್ನು ಭೂತಾನ್​ಗೆ ನೀಡಲಾಗುತ್ತಿದೆ. ನೇಪಾಳ ಮತ್ತು ಮಾಲ್ಡೀವ್ಸ್ ದೇಶಗಳಿಗೂ ಅಧಿಕ ನೆರವನ್ನು ಭಾರತ ಬಿಡುಗಡೆ ಮಾಡುತ್ತಿದೆ. ಇದಲ್ಲದೆ, ಅಂತಾರಾಷ್ಟ್ರೀಯ ಸಾಂಸ್ಕೃತಿ ಮತ್ತು ಪಾರಂಪರಿಕ ಯೋಜನೆ, ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮಗಳಿಗೆ ಭಾರತ ಸುಮಾರು 1,300 ಕೋಟಿ ರೂ ನೀಡುತ್ತದೆ.

ಇದನ್ನೂ ಓದಿ: ಷೇರುಪೇಟೆ ಮೇಲೆ ಪರಿಣಾಮ ಬೀರಬಲ್ಲ ಪ್ರಮುಖ ಬಜೆಟ್ ಘೋಷಣೆಗಳು

ಹಣಕಾಸು ಸಚಿವಾಲಯದಿಂದ ನೀಡಲಾಗುವ ಅಂತಾರಾಷ್ಟ್ರೀಯ ನೆರವು ಸುಮಾರು 1,794.76 ಕೋಟಿ ರೂ. ಇದರಲ್ಲಿ ಇಂಡಿಯನ್ ಡೆವಲಪ್ಮೆಂಟ್ ಅಂಡ್ ಎಕನಾಮಿಕ್ ಅಸಿಸ್ಟೆನ್ಸ್ ಸ್ಕೀಮ್ ಅಡಿಯಲ್ಲಿ ನೀಡಲಾಗುವ ಹಣವೇ 1,675.18 ಕೋಟಿ ರೂ ಇದೆ.

2026-27ರಲ್ಲಿ ಹಣಕಾಸು ಸಚಿವಾಲಯದಿಂದ ಬಿಡುಗಡೆಯಾಗಲಿರುವ ಬಾಹ್ಯ ನೆರವು

  • ಅಫ್ಗಾನಿಸ್ತಾನ: 150 ಕೋಟಿ ರೂ
  • ಬಾಂಗ್ಲಾದೇಶ: 60 ಕೋಟಿ ರೂ
  • ಭೂತಾನ್: 2,288.56 ಕೋಟಿ ರೂ
  • ನೇಪಾಳ: 800 ಕೋಟಿ ರೂ
  • ಶ್ರೀಲಂಕಾ: 400 ಕೋಟಿ ರೂ
  • ಮಾಲ್ಡೀವ್ಸ್: 550 ಕೋಟಿ ರೂ
  • ಮಂಗೋಲಿಯಾ: 25 ಕೋಟಿ ರೂ
  • ಮಯನ್ಮಾರ್: 300 ಕೋಟಿ ರೂ
  • ಸೇಶೆಲೆಸ್: 19 ಕೋಟಿ ರೂ
  • ಮಾರಿಷಸ್: 550 ಕೋಟಿ ರೂ
  • ಆಫ್ರಿಕನ್ ದೇಶಗಳು: 225 ಕೋಟಿ ರೂ
  • ಯೂರೇಷನ್ ದೇಶಗಳು: 38 ಕೋಟಿ ರೂ
  • ಲ್ಯಾಟಿನ್ ಅಮೆರಿಕನ್ ದೇಶಗಳು: 120 ಕೋಟಿ ರೂ
  • ಇತರ ಅಭಿವೃದ್ಧಿಶೀಲ ದೇಶಗಳು: 80 ಕೋಟಿ ರೂ
  • ಕಲ್ಚರಲ್ ಅಂಡ್ ಹೆರಿಟೇಜ್ ಪ್ರಾಜೆಕ್ಟ್ ನೆರವು: 20 ಕೋಟಿ ರೂ
  • ವಿಪತ್ತು ಪರಿಹಾರಕ್ಕೆ: 80 ಕೋಟಿ ರೂ
  • ಇಂಟರ್ನ್ಯಾಷನಲ್ ಟ್ರೈನಿಂಗ್​ಗೆ ನೆರವು: 1,292 ಕೋಟಿ ರೂ

ಇದನ್ನೂ ಓದಿ: ರಾಜ್ಯಗಳಿಗೆ ಶೇ. 41 ತೆರಿಗೆ ಹಂಚಿಕೆ ಸೂತ್ರ; 16ನೇ ಹಣಕಾಸು ಆಯೋಗದ ಶಿಫಾರಸು ಒಪ್ಪಿದ ಕೇಂದ್ರ

ಈ ಮೇಲಿನ ಪಟ್ಟಿಯಿಂದ ಛಾಬಹಾರ್ ಬಂದರು ಅಭಿವೃದ್ಧಿಗೆ ನೀಡಬೇಕಿದ್ದ 400 ಕೋಟಿ ರೂ ನೆರವನ್ನು ಸದ್ಯ ಹಿಂಪಡೆಯಲಾಗಿದೆ. ಇರಾನ್ ಯುದ್ಧದ ಪರಿಸ್ಥಿತಿಯಲ್ಲಿ ಇರುವುದರಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು. ಇನ್ನು, ಹಣಕಾಸು ಸಚಿವಾಲಯದಿಂದ 1,794.76 ಕೋಟಿ ರೂ ನೆರವು ನೀಡುವ ಅಂದಾಜು ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತೆಲುಗು ಚಿತ್ರರಂಗದ ಗಣ್ಯರ ಭೇಟಿಯಾದ ಆರ್​​​ಎಸ್​​ಎಸ್ ಮುಖ್ಯಸ್ಥ ಮೋಹನ್ ಭಾಗವತ್: ಕಾರಣ? – Kannada News | RSS Chief Mohan Bhagavat met Tollywood celebrities in Hyderabad

ಸಿನಿಮಾ (Cinema) ಹಾಗೂ ರಾಜಕಾರಣ ಎರಡಕ್ಕೂ ಬಹಳ ಹತ್ತಿರದ ಸಂಬಂಧ. ಅದರಲ್ಲೂ ರಾಜಕಾರಣಿಗಳು ಪಕ್ಷದ ಅಥವಾ ವೈಯಕ್ತಿಕ ಲಾಭಕ್ಕಾಗಿ ದಶಕಗಳಿಂದಲೂ ಸಿನಿಮಾಗಳನ್ನು ಬಳಸಿಕೊಂಡೇ ಬರುತ್ತಿದ್ದಾರೆ. ಸಾಮಾನ್ಯರ ಮೇಲೆ ಅಪಾರ ಪ್ರಭಾವ ಬೀರಬಲ್ಲ ಸಿನಿಮಾದ ಶಕ್ತಿಯನ್ನು ಅರಿತಿರುವ ರಾಜಕಾರಣಿಗಳು ಸಿನಿಮಾದವರೊಟ್ಟಿಗೆ ಉತ್ತಮ ಬಾಂಧವ್ಯವನ್ನೇ ಇರಿಸಿಕೊಂಡಿದ್ದಾರೆ. ರಾಜಕೀಯ ಪಕ್ಷ ಅಲ್ಲದೇ ಇದ್ದರೂ ಸಹ ಆರ್​​ಎಸ್​​ಎಸ್ ದೇಶದ ರಾಜಕೀಯದ ಮೇಲೆ ಪ್ರತ್ಯಕ್ಷ, ಪರೋಕ್ಷ ಪ್ರಭಾವ ಬೀರುತ್ತಲೇ ಬರುತ್ತಿದೆ. ಇದೀಗ ಸಂಘದ ರಾಷ್ಟ್ರ ಪ್ರಮುಖ್ ಆಗಿರುವ ಮೋಹನ್ ಭಾಗವತ್ ಅವರು ತೆಲುಗು ಚಿತ್ರರಂಗದ ಸ್ಟಾರ್ ನಟರು ಮತ್ತು ಕೆಲ ಪ್ರಮುಖ ನಿರ್ಮಾಪಕರನ್ನು ಭೇಟಿ ಆಗಿರುವುದು ಕುತೂಹಲ ಮೂಡಿಸಿದೆ.

ಮೋಹನ್ ಭಾಗವತ್ ಅವರು ಎರಡು ದಿನಗಳ ಹೈದರಾಬಾದ್ ಪ್ರವಾಸದಲ್ಲಿದ್ದು ಸುಮಾರು 150 ಮಂದಿ ಮಾಜಿ ಮತ್ತು ಹಾಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಕಾರ್ಯಕ್ರಮ ಹೈದರಾಬಾದ್​​ನ ಜಲ ವಿಹಾರ್​​ನಲ್ಲಿ ಆಯೋಜನೆ ಆಗಿತ್ತು. ಕಾರ್ಯಕ್ರಮದ ಬಳಿಕ ಸಂಜೆ ವೇಳೆಗೆ ತೆಲುಗು ಚಿತ್ರರಂಗದ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಭಾಗವತ್ ಅವರು ಹಲವಾರು ಮಂದಿ ತೆಲುಗು ನಟ-ನಟಿಯರು ಮತ್ತು ಸಿನಿಮಾ ನಿರ್ಮಾಪಕರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ.

ವೆಂಕಟೇಶ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ತೆಲುಗು ಸಿನಿಮಾ ರಂಗಕ್ಕೆ ಸಂಬಂಧಿಸಿದ ಸುಮಾರು 140 ಮಂದಿ ಭಾಗಿ ಆಗಿದ್ದರು ಎನ್ನಲಾಗುತ್ತಿದೆ. ಈ ಕಾರ್ಯಕ್ರಮದ ಆಯೋಜನೆ ಮಾಡಿದ್ದು ಎಸ್​​ಎಸ್ ರಾಜಮೌಳಿ ಅವರ ತಂದೆ, ರಾಜ್ಯಸಭಾ ಸದಸ್ಯರೂ ಆಗಿರುವ ಕತೆಗಾರ ವಿಜಯೇಂದ್ರ ಪ್ರಸಾದ್ ಎನ್ನಲಾಗಿದೆ.

ಇದನ್ನೂ ಓದಿ:ಒಟಿಟಿಗೆ ಬಂತು ಆಶಿಕಾ, ದುಷ್ಯಂತ್, ಸಿಂಪಲ್ ಸುನಿ ಸಿನಿಮಾ ‘ಗತವೈಭವ’

ಮೋಹನ್ ಭಾಗವತ್ ಅವರ ಕಾರ್ಯಕ್ರಮದಲ್ಲಿ ನಟರಾದ ವೆಂಕಟೇಶ್, ಅಕ್ಕಿನೇನಿ ನಾಗಾರ್ಜು, ತೇಜ್ ಸಜ್ಜಾ, ನಟ ನಾನಿ, ವರುಣ್ ತೇಜ್, ರಾಣಾ ದಗ್ಗುಬಾಟಿ, ರಾಮ್ ಪೋತಿನೇನಿ ಇನ್ನೂ ಹಲವರು ಭಾಗಿ ಆಗಿದ್ದರು. ಮೈತ್ರಿ ಮೂವಿ ಮೇಕರ್ಸ್​​ನ ನಿರ್ಮಾಪಕರಾದ ಮೈತ್ರಿ ರವಿ, ಖ್ಯಾತ ನಿರ್ಮಾಪಕ ಸುರೇಶ್ ಬಾಬು ಇನ್ನೂ ಹಲವರು ಭಾಗಿ ಆಗಿದ್ದರು ಎನ್ನಲಾಗುತ್ತಿದೆ.

ವಿಜಯೇಂದ್ರ ಪ್ರಸಾದ್ ಅವರು ಈ ಹಿಂದೆ ತಾವು ಆರ್​​ಎಸ್​​ಎಸ್ ಬಗ್ಗೆ ಸಿನಿಮಾ ಮಾಡುವ ಆಶಯವನ್ನು ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಇದೀಗ ತೆಲುಗು ಚಿತ್ರರಂಗದ ಗಣ್ಯರು ಮೋಹನ್ ಭಾಗವತ್ ಅವರನ್ನು ಭೇಟಿ ಆಗಿರುವುದು ಕುತೂಹಲ ಕೆರಳಿಸಿದೆ. ಆದರೆ ಸಭೆಯಲ್ಲಿ ಚರ್ಚೆ ಆದ ವಿಷಯಗಳ ಮಾಹಿತಿ ಬಹಿರಂಗವಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಕೇತುವಿನಿಂದ ಯಾರಿಗೆ ಯಾವ ಫಲ? – Kannada News | Ketu in Purva Phalguni 2026: Zodiac Predictions, Auspicious and Inauspicious Results

2026ರ ಆರಂಭದಲ್ಲಿ ಕೇತುವು ಕನ್ಯಾ ರಾಶಿಯಲ್ಲಿರುತ್ತಾನೆ. ಆದರೆ ಕೇತುವಿನ ಹಿಮ್ಮುಖ ಚಲನೆಯ ಆಧಾರದ ಮೇಲೆ, ಅವನು ಪೂರ್ವಾಫಲ್ಗುಣಿ ನಕ್ಷತ್ರಕ್ಕೆ ಸಿಂಹ ರಾಶಿ ಪ್ರವೇಶಿಸಿದಾಗ ಉಂಟಾಗುವ ಶುಭಾಶುಭ ಫಲಗಳ ವಿವರ ಇಲ್ಲಿದೆ. ಕೇತುವು ಶುಕ್ರನ ನಕ್ಷತ್ರವಾದ ಪೂರ್ವಾಫಲ್ಗುಣಿಯಲ್ಲಿ ಸಂಚರಿಸುವಾಗ ಭೋಗ ಮತ್ತು ವೈರಾಗ್ಯಗಳ ನಡುವೆ ಸಂಘರ್ಷ ಉಂಟಾಗುತ್ತದೆ.

​ಇದರಿಂದ ವಿವಿಧ ರಾಶಿಗಳ ಮೇಲಾಗುವ ಪ್ರಭಾವ ಹೀಗಿದೆ.

​ಶುಭ ಫಲ ಪಡೆಯುವ ರಾಶಿಗಳು

​ಮೇಷ ರಾಶಿ:

ಪಂಚಮ ಭಾವದಲ್ಲಿ ಕೇತು ಬರುವುದರಿಂದ ಸೃಜನಾತ್ಮಕ ಶಕ್ತಿ ಹೆಚ್ಚಲಿದೆ. ಹಳೆಯ ಹೂಡಿಕೆಗಳಿಂದ ಲಾಭವಾಗಲಿದೆ. ಆಧ್ಯಾತ್ಮಿಕ ಸಾಧಕರಿಗೆ ಇದು ಸುವರ್ಣ ಕಾಲ.

​ತುಲಾ ರಾಶಿ:

ಹನ್ನೊಂದನೇ ಮನೆಯಲ್ಲಿ ಕೇತು ಇರುವುದರಿಂದ ಅನಿರೀಕ್ಷಿತ ಧನಲಾಭವಾಗಲಿದೆ. ಈ ಹಿಂದೆ ನಿಂತುಹೋದ ಕೆಲಸಗಳು ಮರಳಿ ಆರಂಭವಾಗಲಿವೆ. ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದೆ.

​ಧನು ರಾಶಿ:

ಭಾಗ್ಯ ಸ್ಥಾನದಲ್ಲಿ ಕೇತು ಸಂಚರಿಸುವುದರಿಂದ ಧಾರ್ಮಿಕ ಪ್ರವಾಸಗಳು ಯಶಸ್ವಿಯಾಗಲಿವೆ. ತಂದೆಯ ಆಸ್ತಿಯಲ್ಲಿ ಪಾಲ ಸಿಗುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ವೃದ್ಧಿಸುತ್ತದೆ.

​ಮಿಶ್ರ ಫಲ ರಾಶಿಗಳು

​ಸಿಂಹ ರಾಶಿ:

ನಿಮ್ಮದೇ ರಾಶಿಯ ನಕ್ಷತ್ರದಲ್ಲಿ ಕೇತು ಇರುವುದರಿಂದ ಮಾನಸಿಕ ಗೊಂದಲ ಹೆಚ್ಚಲಿದೆ. ವೈಯಕ್ತಿಕ ನಿರ್ಧಾರಗಳಲ್ಲಿ ತಪ್ಪುಗಳಾಗಬಹುದು. ಆರೋಗ್ಯ, ವಿಶೇಷವಾಗಿ ಹೃದಯ ಅಥವಾ ಬೆನ್ನಿನ ಸಮಸ್ಯೆ ಬಗ್ಗೆ ಎಚ್ಚರವಿರಲಿ.

​ಕುಂಭ ರಾಶಿ:

ಸಪ್ತಮ ಭಾವದಲ್ಲಿ ಕೇತು ಸಂಚರಿಸುವುದರಿಂದ ದಾಂಪತ್ಯ ಜೀವನದಲ್ಲಿ ವಿರಸ ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ನಂಬಿಕೆ ದ್ರೋಹವಾಗುವ ಸಂಭವವಿದೆ. ಹೊಸ ಒಪ್ಪಂದಗಳಿಗೆ ಇದು ಸಕಾಲವಲ್ಲ.

​ವೃಶ್ಚಿಕ ರಾಶಿ:

ಹತ್ತನೇ ಮನೆಯಲ್ಲಿ ಕೇತು ಇರುವುದರಿಂದ ಉದ್ಯೋಗದಲ್ಲಿ ಅಸ್ಥಿರತೆ ಕಾಡಬಹುದು. ಮೇಲಧಿಕಾರಿಗಳೊಂದಿಗೆ ವಾದ ಮಾಡಬೇಡಿ. ವೃತ್ತಿ ಬದಲಾವಣೆಯ ಆಲೋಚನೆ ಸದ್ಯಕ್ಕೆ ಬೇಡ.

​ಪೂರ್ವಾಫಲ್ಗುಣಿ ನಕ್ಷತ್ರವು ಶುಕ್ರನ ಅಧಿಪತ್ಯಕ್ಕೆ ಒಳಪಟ್ಟಿರುವುದರಿಂದ, ಈ ಅವಧಿಯಲ್ಲಿ ಶುಕ್ರನು ಜಾತಕದಲ್ಲಿ ಪ್ರಬಲನಾಗಿದ್ದರೆ ಅಶುಭ ಫಲಗಳು ಕಡಿಮೆಯಾಗುತ್ತವೆ.

ಶುಕ್ರವಾರ ಲಕ್ಷ್ಮಿ ದೇವಿಗೆ ಕುಂಕುಮಾರ್ಚನೆ, ಗಣಪತಿ ಅಥರ್ವಶೀರ್ಷ ಪಠಣ ಮಾಡುವುದರಿಂದ, ದೂರ್ವಾಪತ್ರ ಸಮರ್ಪಣೆಯಿಂದ ಕೇತುವಿನ ದೋಷ ನಿವಾರಣೆಯಾಗುತ್ತದೆ.

– ಲೋಹಿತ ಹೆಬ್ಬಾರ್

Source link