ರಣರೋಚಕ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮಣಿಸಿದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದೆ. ಮೊಹಾಲಿಯ ಬಿಂದ್ರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊನೆಯ ದಿನದಂದು ಗೆಲುವಿಗೆ 250 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ನಾಯಕ ದೇವದತ್ ಪಡಿಕ್ಕಲ್ ಅವರ ಅಜೇಯ ಶತಕ ಹಾಗೂ ಮಯಾಂಕ್ ಅಗರ್ವಾಲ್ ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್ಗಳನ್ನು ಕಳೆದುಕೊಂಡು ಇನ್ನು 25 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು. ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಪಡಿಕ್ಕಲ್ ತಮ್ಮ ಚೊಚ್ಚಲ ನಾಯಕತ್ವದಲ್ಲೇ ತಂಡವನ್ನು ಗೆಲುವಿನತ್ತ ಮುನ್ನಡೆಸಿದಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್ನಲ್ಲಿ 309 ರನ್ ಕಲೆಹಾಕಿತು. ಿಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಆರಂಭಿಕ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಗೋಪಾಲ್ ಅವರ ಅರ್ಧಶತಕದ ನೆರವಿನಿಂದ 316 ರನ್ ಕಲೆಹಾಕಿ ಮೊದಲ ಇನ್ನಿಂಗ್ಸ್ನಲ್ಲಿ 7 ರನ್ಗಳ ಮುನ್ನಡೆ ಸಾಧಿಸಿತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ತಂಡ 256 ರನ್ಗಳಿಗೆ ಆಲೌಟ್ ಆಗುವ ಮೂಲಕ ಕರ್ನಾಟಕ ತಂಡಕ್ಕೆ 250 ರನ್ಗಳ ಗೆಲುವಿನ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ಪರ ನಾಯಕ ದೇವದತ್ ಪಡಿಕ್ಕಲ್ ಅಬ್ಬರದ ಇನ್ನಿಂಗ್ಸ್ ಆಡಿದರು. ಮಯಾಂಕ್ ಜೊತೆ ಶತಕದ ಜೊತೆಯಾಟ ನಡೆಸಿದ ದೇವದತ್ ಪಡಿಕ್ಕಲ್ ತಮ್ಮ ಶತಕವನ್ನು ಪೂರೈಸಿದರು. ಇತ್ತ ಮಯಾಂಕ್ ಅರ್ಧಶತಕ ಬಾರಿಸಿ ಔಟಾದರೆ, ಕೊನೆಯವರೆಗೂ ಅಜೇಯರಾಗಿ ಉಳಿದ ಪಡಿಕ್ಕಲ್ 85 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 120 ರನ್ ಬಾರಿಸಿದರು. ಕೊನೆಯಲ್ಲಿ ಶ್ರೇಯಸ್ ಗೋಪಾಲ್ ಕೂಡ 33 ರನ್ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದರು.
ಹಾಸನ, ಫೆಬ್ರವರಿ 01): ಪತಿಯ ಅತಿಯಾದ ಅನುಮಾನ ಮತ್ತು ವರದಕ್ಷಿಣೆ ಕಿರುಕುಳಕ್ಕೆ (Dowry harassment) ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೋರ್ವರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹಾಸನದ (Hassan) ಹೆಚ್. ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ. ಎಚ್. ಎಲ್. ಇಂದ್ರ (24) ಮೃತ ಮಹಿಳೆ. ಮದುವೆಯಾಗಿ ನಾಲ್ಕು ವರ್ಷಗಳಾಗಿದ್ದು, ಪತಿ ವರದಕ್ಷಿಣೆ ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದನೆನ್ನಲಾಗಿದೆ. ಈ ಸಂಬಂಧ ಪತಿ, ಅತ್ತೆ ಮತ್ತು ಅತ್ತಿಗೆ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಇನ್ನು ಈ ಘಟನೆ ಬಗ್ಗೆ ಮೃತ ಇಂದ್ರ ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಐದು ವರ್ಷವಾದರೂ ಅವನಿಗೆ ಮಕ್ಕಳು ಮಾಡಿಕೊಳ್ಳಲು ಆಗಿಲ್ಲ. ಈಗ ಆ ಹುಡುಗಿನ ಅನ್ಯಾಯವಾಗಿ ಕೊಂದಿದ್ದಾರೆ. ಪೊಲೀಸರೇ ಇದಕ್ಕೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.
ನವದೆಹಲಿ, ಫೆಬ್ರವರಿ 1: ಕಳೆದ 8 ಬಾರಿ ಬಜೆಟ್ ಮಂಡನೆ ಮಾಡಿದಾಗಲೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಸೀರೆಯ ಬಗ್ಗೆ ಬಹಳ ಚರ್ಚೆಗಳಾಗಿತ್ತು. ಅವರು ಉಡುವ ಸೀರೆಯ ಬಣ್ಣ, ವಿನ್ಯಾಸಕ್ಕೆ ಒಂದೊಂದು ಅರ್ಥವಿರುತ್ತಿತ್ತು. ಈ ಬಾರಿಯೂ ಅವರು ಯಾವ ಬಣ್ಣದ ಸೀರೆ ಉಡುತ್ತಾರೆ ಎಂಬುದರ ಬಗ್ಗೆ ಭಾರೀ ಕುತೂಹಲವಿತ್ತು. ಪ್ರತಿ ಬಾರಿಯೂ ಕೈಮಗ್ಗದ ಸೀರೆಗೆ ಆದ್ಯತೆ ನೀಡುವ ನಿರ್ಮಲಾ ಸೀತಾರಾಮನ್ ಇಂದು ಕೈಮಗ್ಗದ ಕಾಂಜೀವರಂ ರೇಷ್ಮೆ ಸೀರೆಯನ್ನು ಉಟ್ಟಿದ್ದರು. ನೇರಳೆ ಬಣ್ಣದ ಈ ಸೀರೆ ರಾಜಕೀಯವಾಗಿಯೂ ಬಹಳ ಪ್ರಾಮುಖ್ಯತೆ ಪಡೆದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಬಜೆಟ್ ದಿನದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಡುವ ಸೀರೆ ಕೇವಲ ಫ್ಯಾಷನ್ ದೃಷ್ಟಿಯಿಂದ ಮಾತ್ರವಲ್ಲ ನಮ್ಮ ದೇಶದ ಸಂಸ್ಕೃತಿಯ ದೃಷ್ಟಿಯಿಂದಲೂ ಬಹಳ ಮುಖ್ಯವಾಗಿರುತ್ತದೆ. ಇಂದು ಅವರು ಉಟ್ಟಿದ್ದ ಕಾಂಜೀವರಂ ಸೀರೆಯು ಹಲವು ಶತಮಾನಗಳ ಭಾರತೀಯ ನೇಯ್ಗೆಯನ್ನು ಪ್ರತಿನಿಧಿಸುತ್ತದೆ. ಇದರ ಜೊತೆಗೆ ನಿರ್ಮಲಾ ಸೀತಾರಾಮನ್ ಉಡುವ ಸೀರೆಯ ಆಯ್ಕೆಗೆ ರಾಜಕೀಯದ ಮುಖವೂ ಇದೆ ಎಂಬುದು ನಿಮಗೆ ಗೊತ್ತಾ? ಅವರು ಪ್ರತಿ ಬಾರಿ ಬಜೆಟ್ ವೇಳೆ ಸೀರೆಯನ್ನು ಆಯ್ಕೆ ಮಾಡುವಾಗ ಯಾವ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆಯೋ ಅದೇ ರಾಜ್ಯದ ಕೈಮಗ್ಗದ ಅಥವಾ ಸಾಂಪ್ರದಾಯಿಕ ಸೀರೆಯನ್ನು ಉಡುವ ಪದ್ಧತಿಯನ್ನು ರೂಢಿಸಿಕೊಂಡು ಬಂದಿದ್ದಾರೆ.
ತಮಿಳುನಾಡು ಅವರ ತವರು ರಾಜ್ಯವಾಗಿರುವುದರಿಂದ ಮತ್ತು ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವುದರಿಂದ ನಿರ್ಮಲಾ ಸೀತಾರಾಮನ್ ಈ ಬಾರಿ ತಮಿಳುನಾಡಿನ ಕಾಂಜೀವರಂ ಸೀರೆಯನ್ನು ಬಜೆಟ್ ಮಂಡನೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಮಂಗಳಗಿರಿ ಕಾಟನ್ ಸೀರೆಯಿಂದ ಕಾಂಜೀವರಂ ರೇಷ್ಮೆ ಸೀರೆಯವರೆಗೆ ಅವರು ಬಜೆಟ್ ಮಂಡನೆಗೆ ಉಟ್ಟಿರುವ ಪ್ರತಿ ಸೀರೆಯು ಕರಕುಶಲತೆ, ಸಂಸ್ಕೃತಿ ಮತ್ತು ರಾಜಕೀಯದ ಕಥೆಯನ್ನು ಹೇಳುತ್ತದೆ.
2022ರಲ್ಲಿ ಒಡಿಶಾದ ಬೊಮ್ಕೈ ಸೀರೆ ಹಾಗೂ 2021ರಲ್ಲಿ ತೆಲಂಗಾಣದ ಪೋಚಂಪಲ್ಲಿ ಇಕಾಟ್ ಸೀರೆಯನ್ನು ಉಟ್ಟಿದ್ದರು. 2020ರಲ್ಲಿ ಗೋಲ್ಡನ್ ಕಲರ್ ರೇಷ್ಮೆ ಸೀರೆ ಉಟ್ಟಿದ್ದರು. ಆದರೆ, ಆ 3 ವರ್ಷಗಳು ಮಾತ್ರ ಯಾವುದೇ ಚುನಾವಣೆ ನಡೆದಿರಲಿಲ್ಲ.
2019ರಲ್ಲಿ ಆಂಧ್ರದ ಮಂಗಳಗಿರಿ ಕಾಟನ್ ಸೀರೆ ಉಟ್ಟಿದ್ದರು. ಆ ವರ್ಷ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆ ನಡೆದಿತ್ತು.
ಹೀಗಾಗಿ, ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ದಿನದ ಸೀರೆಗಳು ಕೇವಲ ಒಂದು ಉಡುಗೆ ಮಾತ್ರವಲ್ಲ. ಅದಕ್ಕಿಂತಲೂ ಹೆಚ್ಚಿನದಾಗಿ ರಾಜಕೀಯವಾಗಿಯೂ ಅವು ಮಹತ್ವ ಪಡೆದಿರುತ್ತದೆ. ಹಾಗೆಂದು ನಿರ್ಮಲಾ ಸೀತಾರಾಮನ್ ತಮ್ಮ ರಾಜ್ಯದ ಸೀರೆಯನ್ನು ಉಟ್ಟು ಬಜೆಟ್ ಮಂಡಿಸಿದ್ದಾರೆ ಎಂಬ ಕಾರಣಕ್ಕೆ ಜನ ಬಿಜೆಪಿಗೆ ಮತ ಹಾಕುವುದಿಲ್ಲ. ಬಜೆಟ್ ಮಂಡನೆ ವೇಳೆ ಹೇಗೆ ಚುನಾವಣಾ ರಾಜ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆಯೋ ಹಾಗೆಯೇ ನಿರ್ಮಲಾ ಸೀತಾರಾಮನ್ ಕೂಡ ತಮ್ಮ ಸೀರೆಯ ಆಯ್ಕೆಯ ವಿಷಯದಲ್ಲಿ ಆ ರಾಜ್ಯಕ್ಕೆ ಮಹತ್ವ ನೀಡುತ್ತಾರೆ. ಇದು ಮತಗಳ ಮೇಲೆ ಪರಿಣಾಮ ಬೀರಲಿ ಅಥವಾ ಬೀರದೆ ಇರಲಿ; ತಮ್ಮ ರಾಜ್ಯಕ್ಕೆ ಆದ್ಯತೆ ನೀಡಿದ್ದಾರೆ ಎಂಬುದಂತೂ ಅವರ ಮನಸಲ್ಲಿ ದಾಖಲಾಗುತ್ತದೆ ಎಂಬ ಉದ್ದೇಶ ಸಚಿವರದ್ದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹಾಸನ, ಫೆಬ್ರವರಿ 01: ಪತಿಯ ಅತಿಯಾದ ಅನುಮಾನ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ. ಎಚ್. ಎಲ್. ಇಂದ್ರ (24) ಮೃತರಾಗಿದ್ದು, ಹೆಚ್. ಮೈಲಳ್ಳಿ ಗ್ರಾಮದಲ್ಲಿನ ಪತಿ ಮನೆಯಲ್ಲಿ ಇವರು ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆಗಾಗಿ ಹಾಸನದ ಹಿಮ್ಸ್ಗೆ ದಾಖಲಿಸಲಾಗಿತ್ತಾದರೂ ದೇಹ ಸ್ಪಂದಿಸದ ಕಾರಣ ಅಂತಿಮವಾಗಿ ಯುವತಿ ಕೊನೆಯುಸಿರೆಳೆದಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಹೆಚ್. ಮೈಲಳ್ಳಿ ಗ್ರಾಮದ ಎಂ.ಎಚ್. ಸ್ವಾಮಿ ಜೊತೆ ಇಂದ್ರ ಅವರ ವಿವಾಹವಾಗಿತ್ತು. ಮದುವೆ ಸಮಯದಲ್ಲಿ ಪತ್ನಿ ಮನೆಯವರು ಹಣ, ಒಡವೆ ನೀಡಿದ್ದರೂ ಸ್ವಾಮಿ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ತಾನು ನಡೆಸುತ್ತಿದ್ದ ಬೇಕರಿ ವ್ಯವಹಾದಲ್ಲಿಯೂ ನಷ್ಟ ಉಂಟಾದ ಬಳಿಕ ಪತಿ ಕಿರುಕುಳ ಹೆಚ್ಚಾಗಿದೆ. ಇದೇ ವಿಚಾರವಾಗಿ ಒಂದೆರಡು ಬಾರಿ ರಾಜಿ ಪಂಚಾಯ್ತಿ ಕೂಡ ನಡೆದಿತ್ತು. ಆದರೂ ಬದಲಾಗದ ಸ್ವಾಮಿ, ಕಿರುಕುಳ ಮುಂದುವರಿಸಿದ್ದ ಎಂದು ದೂರಲಾಗಿದೆ. ಘಟನೆ ಬೆನ್ನಲ್ಲೇ ಮೃತ ಇಂದ್ರ ಪತಿ ಸ್ವಾಮಿ, ಅತ್ತೆ ಶಂಕ್ರಮ್ಮ, ಅತ್ತಿಗೆ ಪುಟ್ಟಿ ವಿರುದ್ದ ಪೊಲೀಸ್ ದೂರು ದಾಖಲಾಗಿದೆ.
ಇನ್ನು ಪತಿ ಸ್ವಾಮಿ ವರದಕ್ಷಿಣೆ ರೂಪದಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟ ಹಿನ್ನೆಲೆ 1.3 ಲಕ್ಷ ಹಣವನ್ನು ಮಗಳು ತನ್ನ ತಾಯಿಯಿಂದ ಪಡೆದು ಪತಿಗೆ ನೀಡಿದ್ದಳು. ಬಡ್ಡಿ ಸಾಲ ಮಾಡಿ ಆ ಹಣವನ್ನು ಇಂದ್ರ ತಾಯಿ ಗೌರಮ್ಮ ನೀಡಿದ್ದರು. ಆತ್ಮಹತ್ಯೆ ಯತ್ನಕ್ಕೂ ಮುನ್ನ ತಾಯಿಗೆ ಕರೆ ಮಾಡಿದ್ದ ಇಂದ್ರ, ಕಿರುಕುಳ ಸಹಿಸಲು ಸಾಧ್ಯವಾಗುತ್ತಿಲ್ಲ. ತನ್ನನ್ನು ಬಂದು ಕರೆದುಕೊಂಡು ಹೋಗುವಂತೆ ಬೇಡಿಕೊಂಡಿದ್ದಳು. ರಾತ್ರಿ ಸಮಯವಾಗಿದ್ದರಿಂದ ತಕ್ಷಣ ತೆರಳಲು ಗೌರಮ್ಮಗೆ ಸಾಧ್ಯವಾಗಿರಲಿಲ್ಲ. ಆದ್ರೆ ಬೆಳಿಗ್ಗೆ ವೇಳೆಗೆ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋದು ಪೋಷಕರಿಗೆ ಗೊತ್ತಾಗಿದೆ ಎನ್ನಲಾಗಿದೆ.
ಕಲಬುರಗಿ, (ಫೆಬ್ರವರಿ 01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು (ಫೆಬ್ರವರಿ 01) 2026-27ನೇ ಸಾಲಿನ ಬಜೆಟ್ (Union Budget 2026) ಮಂಡಿಸಿದ್ದಾರೆ. 53.47 ಲಕ್ಷ ಕೋಟಿ ರೂಪಾಯಿ ಮೌಲ್ಯದ ಈ ಬಜೆಟ್ ಮಂಡಿಸಿದ್ದಾರೆ. ಇನ್ನು ಈ ಬಗ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದು, ಕರ್ನಾಟಕಕ್ಕೆ ಬಜೆಟ್ನಲ್ಲಿ ಏನೂ ಕೊಟ್ಟಿಲ್ಲ. ಕರ್ನಾಟಕ್ಕೆ ಕೇಂದ್ರ ಸರ್ಕಾರ ಚೊಂಬು ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರದ ಬಜೆಟ್ ನಿರಾಶಾದಾಯಕವಾಗಿದೆ. ಯಾವುದೇ ದೂರದೃಷ್ಟಿಯಿಲ್ಲದ ಬಜೆಟ್ ಇದು.ಇಂದು ಮಂಡಿಸಿರುವ ಬಜೆಟ್ ಬರೀ ಹೇಳಿಕೆಗಳಿಂದ ಕೂಡಿದೆ.ಪರಿಷ್ಕೃತ ಅಂದಾಜು ಗಾತ್ರ 49 ಲಕ್ಷ 64 ಸಾವಿರ ಕೋಟಿ. ಒಂದು ಲಕ್ಷ ಕೋಟಿಯಷ್ಟು ಪರಿಷ್ಕೃತ ಅಂದಾಜು ಕಡಿಮೆ. ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಘೋಷಣೆ ಮಾಡಿದ್ದಾರೆ. ಇದರಿಂದ ಕರ್ನಾಟಕಕ್ಕೆ ಏನು ಅನುಕೂಲ. ಮುಂದಿನ 5 ವರ್ಷಗಳಿಂದ ಯೋಜನೆ ಎಂದು ಹೇಳಿದ್ದಾರೆ ಅಷ್ಟೇ. ನಮಗೆ ಬೇಕಿರುವುದು ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು. ಬೆಂಗಳೂರು-ಮಂಗಳೂರಿಗೆ ಹೈಸ್ಪೀಡ್ ಬೇಕು. ಕೇಂದ್ರದವರು ವಿಕಸಿತ ಭಾರತ ಬಗ್ಗೆ ಬಹಳ ಮಾತನಾಡಿದ್ರು. ಆದರೆ ಅದು ಬರೀ ಮಾತಿನಲ್ಲಿದೆ, ಕೃತಿಯಾಗಿ ಅವರು ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಚುನಾವಣೆಯಲ್ಲಿ ನಟಿ ಜಯಮಾಲಾ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಚಿತ್ರರಂಗದಲ್ಲಿ ಅಪಾರ ಅನುಭವ ಹೊಂದಿರುವ ಅವರು ಈಗ ಅಧಿಕಾರ ವಹಿಸಿಕೊಂಡಿದ್ದಾರೆ. ಮಾಜಿ ಅಧ್ಯಕ್ಷರಾದ ನರಸಿಂಹಲು ಅವರು ಅಧಿಕಾರ ಹಸ್ತಾಂತರಿಸಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಜಯಮಾಲಾ (Jayamala) ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ. 1970ರ ದಶಕದಿಂದಲೂ ನಟಿಯಾಗಿ ಜಯಮಾಲಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ಮೊದಲು ಕೂಡ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ (Karnataka Film Chamber of Commerce President) ಕಾರ್ಯ ನಿರ್ವಹಿಸಿದ್ದರು. ‘ಚಿತ್ರೋದ್ಯಮದ ಹಿತದೃಷ್ಟಿಯಿಂದ ಹೊಸ ಅಧ್ಯಕ್ಷರು ಬಂದಿದ್ದಾರೆ. ಈ ವರ್ಷ ಒಳ್ಳೊಳ್ಳೆಯ ಕೆಲಸ ಮಾಡಲು ನಮಗೆಲ್ಲ ಸಹಕಾರಿ ನೀಡಿ, ಚಿತ್ರೋದ್ಯಮದ ಅಭಿವೃದ್ಧಿಗಾಗಿ ಕೆಲಸ ಮಾಡಲಿ’ ಎಂದು ನಿರ್ಮಾಪಕ ಕೆ. ಮಂಜು ಅವರು ಹೇಳಿದ್ದಾರೆ.
ನಮ್ಮಲ್ಲಿ ಬಹುತೇಕ ಹೆಚ್ಚಿನವರಿಗೆ ಚಹಾ (tea) ಅಂದ್ರೆ ಪಂಚಪ್ರಾಣ. ಅವರ ದಿನ ಆರಂಭವಾಗುವುದೇ ಒಂದು ಕಪ್ ಚಹಾದೊಂದಿಗೆ. ಅದರಲ್ಲೂ ಕೆಲವರಂತೂ ಊಟ ಮಾಡಿದ ತಕ್ಷಣವೇ ಟೀ ಕುಡಿದು ಬಿಡುತ್ತಾರೆ. ಹೌದು ವಿಶೇಷವಾಗಿ ಮಧ್ಯಾಹ್ನ ಊಟ ಮಾಡಿದ ನಂತರ ಬರುವ ನಿದ್ರೆ, ಆಲಸ್ಯವನ್ನು ಹೋಗಲಾಡಿಸಲು ಚಹಾ ಕುಡಿಯುತ್ತಾರೆ. ಹೀಗೆ ಊಟ ಮಾಡಿದ ತಕ್ಷಣವೇ ಟೀ ಕುಡಿಯುವುದರಿಂದ ಚಹಾದಲ್ಲಿರುವ ಅಂಶಗಳು ದೇಹವು ಆಹಾರದ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ನೀವು ಎಷ್ಟೇ ಆರೋಗ್ಯಕರ ಅಥವಾ ವಿಟಮಿನ್ ಭರಿತ ಆಹಾರವನ್ನು ಸೇವಿಸಿದ್ದರೂ, ನೀವು ತಕ್ಷಣ ಚಹಾ ಕುಡಿದರೆ, ಅದು ದೇಹದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಿದ್ರೆ ಊಟ ಮಾಡಿದ ತಕ್ಷಣ ಟೀ ಕುಡಿಯೋದರಿಂದ ಆಗುವ ತೊಂದರೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಊಟ ಮಾಡಿದ ತಕ್ಷಣ ಚಹಾ ಸೇವಿಸಿದರೆ ಏನಾಗುತ್ತದೆ?
ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯ ಅಪಾಯ: ಚಹಾವು ‘ಟ್ಯಾನಿನ್’ ಮತ್ತು ‘ಪಾಲಿಫಿನಾಲ್‌ಗಳು’ ಎಂಬ ಸಂಯುಕ್ತಗಳನ್ನು ಹೊಂದಿರುತ್ತದೆ. ಈ ಸಂಯುಕ್ತಗಳು ಆಹಾರದಲ್ಲಿರುವ ಕಬ್ಬಿಣಾಂಶದೊಂದಿಗೆ ವಿಶೇಷವಾಗಿ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳಲ್ಲಿ ಕಂಡುಬರುವ ನಾನ್-ಹೀಮ್ ಕಬ್ಬಿಣದೊಂದಿಗೆ ಬಂಧಿಸುತ್ತವೆ. ಈ ಬಂಧದಿಂದಾಗಿ, ದೇಹವು ಕಬ್ಬಿಣವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಭ್ಯಾಸವು ದೀರ್ಘಕಾಲದವರೆಗೆ ಮುಂದುವರಿದರೆ, ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುತ್ತದೆ, ಇದು ನಂತರ ರಕ್ತಹೀನತೆಯಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ: ಚಹಾದಲ್ಲಿರುವ ಕೆಫೀನ್ ಮತ್ತು ಟ್ಯಾನಿನ್‌ಗಳು ಜೀರ್ಣಕಾರಿ ಕಿಣ್ವಗಳನ್ನು ಪ್ರತಿಬಂಧಿಸುತ್ತವೆ. ಊಟ ಮಾಡಿದ ತಕ್ಷಣ ಚಹಾ ಕುಡಿಯುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ, ಇದು ಹೊಟ್ಟೆ ಉಬ್ಬರ, ಗ್ಯಾಸ್, ಆಮ್ಲೀಯತೆ ಮತ್ತು ಹೊಟ್ಟೆ ಭಾರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ರೋಗನಿರೋಧಕ ಶಕ್ತಿ ಮತ್ತು ಮೂಳೆಗಳು ದುರ್ಬಲಗೊಳ್ಳುವ ಸಾಧ್ಯತೆ ಇದೆ: ನಿಯಮಿತವಾಗಿ ಊಟ ಮಾಡಿದ ತಕ್ಷಣ ಟೀ ಕುಡಿಯುವ ಅಭ್ಯಾಸವನ್ನು ಪಾಲಿಸುತ್ತಾ ಬಂದರೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಪರಿಣಾಮವಾಗಿ, ರೋಗನಿರೋಧಕ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ ಮತ್ತು ಇದು ಮೂಳೆಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಹೊರತಾಗಿ, ಕೆಫೀನ್ ‘ಮೂತ್ರವರ್ಧಕ’ ಆಗಿರುವುದರಿಂದ ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡಬಹುದು.
ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ಊಟವಾದ ತಕ್ಷಣ ಚಹಾ ಕುಡಿಯುವುದರಿಂದ ದೇಹದ ನೈಸರ್ಗಿಕ ಜೀರ್ಣಕ್ರಿಯೆ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ, ಇದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು. ಆದ್ದರಿಂದ, ಊಟವಾದ ತಕ್ಷಣ ಚಹಾ ಕುಡಿಯುವುದನ್ನು ತಪ್ಪಿಸಿ.
ಊಟದ ಮಾಡಿದ ಎಷ್ಟು ಸಮಯದ ನಂತರ ಚಹಾ ಕುಡಿಯಬೇಕು?
ಊಟವಾದ ತಕ್ಷಣ ಚಹಾ ಕುಡಿಯುವುದನ್ನು ತಪ್ಪಿಸಲು ತಜ್ಞರು ಸೂಚಿಸುತ್ತಾರೆ. ನೀವು ಚಹಾ ಕುಡಿಯುವವರಾಗಿದ್ದರೆ, ಊಟವಾದ ಕನಿಷ್ಠ 45 ನಿಮಿಷದಿಂದ 1 ಗಂಟೆಯ ನಂತರ ಕುಡಿಯಬೇಕು. ಏಕೆಂದರೆ ಈ ಅವಧಿಯು ದೇಹವು ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲು ಮತ್ತು ಪೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಮಯವನ್ನು ನೀಡುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಟೀ ಕಾಫಿ ಬದಲಿಗೆ ಉಗುರು ಬೆಚ್ಚಗಿನ ನೀರು ಅಥವಾ ಸೋಂಪು ನೀರು ಕುಡಿಯಬಹುದು.
ಬಾಗಲಕೋಟೆ, (ಫೆಬ್ರವರಿ 01): ಮಹಿಳೆಯೊಬ್ಬರು (Woman) ತನ್ನ ಮೂವರು ಮಕ್ಕಳನ್ನು ಕೊಂದು ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ಬಾಗಲಕೋಟೆ (Bagalkot) ಜಿಲ್ಲೆ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹದಿಂದ ಬೇಸತ್ತು ರೂಪಾ ಎನ್ನುವ ಮಹಿಳೆ ತನ್ನ ಮೂರು ಮಕ್ಕಳನ್ನು ನೇಣಿಗೆ ಹಾಕಿ ಕೊಂದು ಬಳಿಕ ತಾನೂ ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸಮೃದ್ಧಿ(5), ಪ್ರೀತಮ್(4), ಸುಕ್ಷಿತ್(2) ಮೃತ ಮಕ್ಕಳು. ಇನ್ನು ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ರೂಪಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೂಪಾ 2018ರಲ್ಲಿ ಹನಮಂತ ಬಾದಾಮಿ ಎನ್ನುವಾತನೊಂದಿಗೆ ಮದುವೆ ಮಾಡಿಕೊಂಡಿದ್ದು, ದಂಪತಿಗೆ ಮೂರು ಮಕ್ಕಳು ಸಹ ಇದ್ದವು. ಆದ್ರೆ, ಅತ್ತೆ ರೇಣವ್ವ ಕಿರುಕುಳ ಹೆಚ್ಚಾಗಿತ್ತು. ಇದರಿಂದ ಬೇಸತ್ತು ರೂಪಾ ಮೊದಲು ತನ್ನ ಮೂವರು ಮಕ್ಕಳಿಗೆ ಹಗ್ಗದಿಂದ ಮನೆಯ ಜಂತಿಗೆ ನೇಣು ಹಾಕಿ ಕೊಂದಿದ್ದಾಳೆ. ಬಳಿಕ ತಾನೂ ಡೀಸೆಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಬದುಕುಳಿದಿದ್ದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇನ್ನು ಘಟನಾ ಸ್ಥಳಕ್ಕೆ ಬಾದಾಮಿ ಠಾಣೆ ಪೊಲೀಸರ ಹಾಗೂ ಬಾಗಲಕೋಟೆ ಎಸ್ ಪಿ ಸಿದ್ದಾರ್ಥ ಗೋಯೆಲ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೌಟುಂಬಿಕ ಕಲಹಕ್ಕೆ ರೂಪಾಳ ದುಡುಕಿನ ನಿರ್ಧಾರಕ್ಕೆ ಅನಾಯಸವಾಗಿ ಮೂವರು ಮಕ್ಕಳ ಜೀವ ಹೋಗಿದ್ದು ದುರಂತವೇ ಸರಿ.
ಘಟನೆಗೆ ಬಗ್ಗೆ ಪ್ರಾಥಮಿಕ ಮಾಹಿತಿ ಬಿಚ್ಚಿಟ್ಟ ಎಸ್ಪಿ
ಹಿರೇಮಚ್ಚಳಗುಡ್ಡದಲ್ಲಿ ತಾಯಿ ಮೂರು ಮಕ್ಕಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಕ್ಕಳು ಮೃತಪಟ್ಟಿವೆ. ತಾಯಿಗೆ ಸೀರಿಯಸ್ ಆಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಗೆ ಕಾರಣ ಗಂಡ ಹೆಂಡತಿ ಜಗಳ , ಅತ್ತೆ ಮಾವ ಕಿರುಕಳ ಬಗ್ಗೆ ಪ್ರಾಥಮಿಕ ಮಾಹಿತಿ ಇದೆ. ಈ ಬಗ್ಗೆ ಪೂರ್ಣ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಸ್ಥಳದಲ್ಲೇ ಸಿಪಿಐ ಮತ್ತು ಪಿಎಸ್ಐ ಇದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಅತ್ತೆ ಮಾವನ ಕಿರುಕಳ ಬಗ್ಗೆ ಹೆಚ್ಚು ಆರೋಪ ಇದೆ. ಆದ್ರೆ ತಾಯಿ ಕಂಡಿಷನ್ ನೋಡಿಕೊಂಡು, ವೈದ್ಯರ ಸಲಹೆ ಮೇರೆಗೆ ತಾಯಿ ಹೇಳಿಕೆ ಪಡೆಯುತ್ತೇವೆ ಎಂದು ಮಾಹಿತಿ ನೀಡಿದರು.
ನಾವು ಮತ್ತು ಎಕ್ಸಿಕ್ಯುಟಿವ್ ಮೆಜಿಸ್ಟ್ರೇಟ್ ಕಡೆಯಿಂದ ರೆಕಾರ್ಡ್ ಮಾಡಿ ಮಾಹಿತಿ ಪಡೆಯುತ್ತೇವೆ. ಇಂದು ಮಧ್ಯಾಹ್ನ 1.30 ಗಂಟೆಯೊಳಗೆ ಈ ಘಟನೆ ನಡೆದಿದೆ. ಗಂಡ ಮನೆಗೆ ಬಂದು ನೋಡಿದಾಗ ಘಟನೆ ಗೊತ್ತಾಗಿದೆ ಅಂತಿದ್ದಾರೆ. ಒಟ್ಟಾರೆ ಸಂಪೂರ್ಣ ತನಿಖೆ ನಂತರವೇ ಘಟನೆಗೆ ನಿಖರ ಕಾರಣ ತಿಳಿಯಲಿದೆ ಎಂದರು.
ರಜನೀಕಾಂತ್ (Rajinikanth) ಭಾರತದ ನಂಬರ್ 1 ಸ್ಟಾರ್. ಅವರಿಗೆ ಇರುವಷ್ಟು ಅಭಿಮಾನಿಗಳು ಬಹುಷಃ ಇನ್ಯಾವ ನಟರಿಗೂ ಇದ್ದಂತಿಲ್ಲ. ಭಾರತ ಮಾತ್ರವಲ್ಲ, ಅಮೆರಿಕ, ಸಿಂಗಪುರ, ಮಲೇಷ್ಯಾ, ಜಪಾನ್ ಇನ್ನೂ ಹಲವು ದೇಶಗಳಲ್ಲಿ ಈಗಲ್ಲ, ದಶಕಗಳ ಹಿಂದೆಯೇ ಸ್ಟಾರ್ ನಟ ಅವರು. ಎಷ್ಟೇ ದೊಡ್ಡ ಸ್ಟಾರ್ ನಟ ಆಗಿದ್ದರೂ ಸಹ ಬಹಳ ವಿನಯಂತ, ಸಜ್ಜನ ರಜನೀಕಾಂತ್. ಅಧ್ಯಾತ್ಮದಲ್ಲಿ ಆಸಕ್ತಿ ಉಳ್ಳ ರಜನೀಕಾಂತ್ ತಮ್ಮನ್ನು ತಾವು ಹೊಗಳಿಕೊಂಡಿದ್ದು, ಅಹಂ ಭಾವ ಪ್ರದರ್ಶಿಸಿದ್ದೆಲ್ಲ ಇಲ್ಲ. ಆದರೆ ಇತ್ತೀಚೆಗಿನ ಕಾರ್ಯಕ್ರಮ ಒಂದರಲ್ಲಿ ಮತ್ತೊಬ್ಬ ಸ್ಟಾರ್ ನಟನ ಹೆಸರು ಹೇಳಿ, ಅವನಿಗಿಂತಲೂ ನಾನು ದೊಡ್ಡ ಸ್ಟಾರ್ ಎಂದಿದ್ದಾರೆ ರಜನೀಕಾಂತ್. ಅದೇಕೆ? ವಿವರ ಇಲ್ಲಿದೆ.
ರಜನೀಕಾಂತ್ ಸ್ಟಾರ್ ನಟ ಆಗಿರುವ ಜೊತೆಗೆ ಅದ್ಭುತ ವ್ಯಕ್ತಿ. ಅದರಲ್ಲೂ ಗೆಳೆತನಕ್ಕೆ ಅವರು ವಿಶೇಷ ಮನ್ನಣೆ ನೀಡುತ್ತಾರೆ. ಇದಕ್ಕೆ ಉದಾಹರಣೆ ಬೆಂಗಳೂರಿನ ಅವರ ಡ್ರೈವರ್ ಫ್ರೆಂಡ್ ರಾಜ್ ಬಹದ್ಧೂರ್. ತಮ್ಮ ಹಳೆಯ ಗೆಳೆಯರೊಟ್ಟಿಗೆ ಈಗಲೂ ಬಾಂಧವ್ಯ ಇರಿಸಿಕೊಂಡಿರುವ ಜೊತೆಗೆ ಅವರೊಟ್ಟಿಗೆ ಅದೇ ತುಂಟತನ, ಸಲುಗೆಯನ್ನು ಇರಿಸಿಕೊಂಡಿದ್ದಾರೆ. ಹಾಗೆಯೇ ಚಿತ್ರರಂಗದಲ್ಲಿಯೂ ರಜನೀಕಾಂತ್ ಅವರಿಗೆ ಹಲವು ಸಲುಗೆಯ ಗೆಳೆಯರಿದ್ದಾರೆ ಅವರಲ್ಲಿ ತೆಲುಗಿನ ಹಿರಿಯ ನಟ ಮೋಹನ್ಬಾಬು ಸಹ ಒಬ್ಬರು.
ಮೋಹನ್ ಬಾಬು ಅವರು ಚಿತ್ರರಂಗಕ್ಕೆ ಕಾಲಿರಿಸಿ 50 ವರ್ಷಗಳಾದ ಸಂಭ್ರಮಾಚರಣೆ ಇತ್ತೀಚೆಗಷ್ಟೆ ನಡೆದಿತ್ತು. ಕಾರ್ಯಕ್ರಮದಲ್ಲಿ ರಜನೀಕಾಂತ್ ಅತಿಥಿಯಾಗಿ ಭಾಗವಹಿಸಿದ್ದರು. ಮೋಹನ್ ಬಾಬು ಅವರು ಸ್ವಭಾವತಃ ತುಸು ಭಿನ್ನ ವ್ಯಕ್ತಿ. ತಮ್ಮ ಹಿರಿಮೆ-ಗರಿಮೆಯನ್ನು ಹೇಳಿ-ಹೇಳಿ ಪ್ರಚಾರ ಪಡೆಯುವ ವ್ಯಕ್ತಿ. ಆದರೆ ಅದೇ ಸಭೆಯಲ್ಲಿ ಮಾತನಾಡಿದ ರಜನೀಕಾಂತ್, ಮೋಹನ್ ಬಾಬು ಅವರಿಗೆ ತಮಾಷೆಯಾಗಿ ಕಾಲೆಳೆಯುತ್ತಾ, ಅವರಿಗೆ ಉರಿಸಲೆಂದೇ ತಮ್ಮ ಅಭಿಮಾನಿಗಳ ಬಗ್ಗೆ, ಸ್ಟಾರ್ ಗಿರಿಯ ಬಗ್ಗೆ ಮಾತನಾಡಿದ್ದಾರೆ.
ರಜನೀಕಾಂತ್ ಅವರ ಭಾಷಣದ ತುಣುಕು ಇದೀಗ ವೈರಲ್ ಆಗಿದ್ದು, ‘ನಾನು ಮೋಹನ್ಬಾಬು ಒಟ್ಟಿಗೆ ಚಿತ್ರರಂಗಕ್ಕೆ ಬಂದವರು. ಖಂಡಿತವಾಗಿ ನಾನು, ಅವರಿಗಿಂತ (ಮೋಹನ್ ಬಾಬು) ದೊಡ್ಡ ಕಲಾವಿದ. ಅವರಿಗಿಂತಲೂ ದೊಡ್ಡ ಸ್ಟಾರ್. ಅವರಿಗೆ ಕೇವಲ ಆಂಧ್ರ, ತೆಲಂಗಾಣದಲ್ಲಿ ಅಭಿಮಾನಿಗಳು ಇದ್ದಾರೆ. ಆದರೆ ನನಗೆ ಆಂಧ್ರ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ಅಮೆರಿಕ, ಜಪಾನ್ ಇನ್ನೂ ಎಲ್ಲೆಲ್ಲೋ ಇದ್ದಾರೆ’ ಎಂದಿದ್ದಾರೆ ರಜನೀಕಾಂತ್.
‘ಆದರೆ ಇವರಂಥ (ಮೋಹನ್ಬಾಬು) ಗೆಳೆಯ ಇಲ್ಲ. ಈಗ ಮೋಹನ್ಬಾಬುಗೆ ಎಲ್ಲವೂ ಸಿಕ್ಕಿದೆ. ಇನ್ನು ಸಿಕ್ಕಬೇಕಿರುವುದು ನೆಮ್ಮದಿ ಮತ್ತು ಆರೋಗ್ಯ. ಮೋಹನ್ಬಾಬು ಅವರಿಗೆ ಒಳ್ಳೆಯ ಆರೋಗ್ಯ ಸಿಗಲಿ, ಮುಂದಿನ ಜೀವನವನ್ನು ಅವರು ನೆಮ್ಮದಿಯಿಂದ ಕಳೆಯಲಿ’ ಎಂದು ರಜನೀಕಾಂತ್ ಹಾರೈಸಿದ್ದಾರೆ.
ಚಿಕ್ಕಬಳ್ಳಾಪುರ, ಫೆ. 01: ಚಿಮುಲ್ ಚುನಾವಣೆಯಲ್ಲಿ ಮತದಾರರಿಗೆ ಹಣ ಮತ್ತು ಬೆಳ್ಳಿ ತಟ್ಟೆಗಳ ಮೂಲಕ ಭಾರಿ ಆಮಿಷ ಒಡ್ಡಲಾಗಿರು ದೃಶ್ಯಗಳು ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿವೆ. ಮತಗಟ್ಟೆಗಳ ಬಳಿಯೇ ಮತದಾರರಿಗೆ ಆಮಿಷ ಒಡ್ಡಲಾಗಿದ್ದು, ಕೈವಾರ ಕ್ಷೇತ್ರದಲ್ಲಿ ಮತದಾರರಿಗೆ ತಲಾ 2 ಲಕ್ಷ ರೂಪಾಯಿ ಹಂಚಿಕೆ ಮಾಡಲಾಗಿದೆ. ಇತ್ತ ನಂದಿ ಕ್ಷೇತ್ರದಲ್ಲಿ ತಲಾ 8 ಲಕ್ಷ ರೂಪಾಯಿಯವರೆಗೂ ಆಮಿಷ ಒಡ್ಡಲಾಗಿದ್ದರೆ, ಒಬ್ಬ ಅಭ್ಯರ್ಥಿ ಮುಕ್ಕಾಲು ಕೆ.ಜಿ. ತೂಕದ ಬೆಳ್ಳಿ ತಟ್ಟೆ ಹಾಗೂ 2 ಲಕ್ಷ ರೂಪಾಯಿ ನಗದು ನೀಡಿದ್ದಾರೆ. ಮತ್ತೊಬ್ಬ ಅಭ್ಯರ್ಥಿ 8 ಲಕ್ಷ ರೂಪಾಯಿ ನಗದು ಮತ್ತು ಬೆಳ್ಳಿ ತಟ್ಟೆ ವಿತರಿಸಿದ್ದಾರೆ. ಕೋಲಾರದಿಂದ ವಿಭಜನೆಯಾದ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ಸಹಕಾರ ಸಂಘಕ್ಕೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಒಟ್ಟು 952 ಮತದಾರರು ಇದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಲಕ್ಷಗಟ್ಟಲೆ ಹಣದ ಹಂಚಿಕೆ ಆರೋಪ ಕೇಳಿಬಂದಿದೆ.