Category Archives: Blog

Your blog category

RRB Recruitment 2026: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ; 6,565 ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಆಹ್ವಾನ – Kannada News

ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶImage Credit source: Pinterest

ಸರ್ಕಾರಿ ಕೆಲಸದ ಹುಡುಕಾಟದಲ್ಲಿರುವ ದೇಶದ ನಿರುದ್ಯೋಗಿ ಯುವಕ-ಯುವತಿಯರಿಗೆ ಭಾರತೀಯ ರೈಲ್ವೆ ಇಲಾಖೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೇಂದ್ರ ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ರೈಲ್ವೆ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಖಾಲಿ ಇರುವ ಒಟ್ಟು 6,565 ಟೆಕ್ನೀಷಿಯನ್ ಹುದ್ದೆಗಳ ಭರ್ತಿಗಾಗಿ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 30 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರೈಲ್ವೆ ವಲಯಗಳಲ್ಲಿ ಈ ನೇಮಕಾತಿ ನಡೆಯಲಿದೆ.

ಉದ್ಯೋಗಗಳ ವಿವರ ಮತ್ತು ಮಾಸಿಕ ವೇತನ ಶ್ರೇಣಿ:

ರೈಲ್ವೆ ಮಂಡಳಿಯು ಈ ಬಾರಿ ಎರಡು ಪ್ರಮುಖ ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಮೊದಲನೆಯದಾಗಿ ಒಟ್ಟು 323 ಟೆಕ್ನೀಷಿಯನ್ ಗ್ರೇಡ್-1 (ಸಿಗ್ನಲ್) ಹುದ್ದೆಗಳಿದ್ದು, ಇವುಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆರಂಭಿಕ ಮಾಸಿಕ ವೇತನವಾಗಿ ರೂ. 29,200 ಸಿಗಲಿದೆ. ಇನ್ನುಳಿದಂತೆ ಅತಿ ಹೆಚ್ಚು ಅಂದರೆ ಒಟ್ಟು 6,242 ಟೆಕ್ನೀಷಿಯನ್ ಗ್ರೇಡ್-3 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಈ ಹುದ್ದೆಗಳಿಗೆ ಮಾಸಿಕ ವೇತನವಾಗಿ ರೂ. 19,900 ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳ ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು ಹುದ್ದೆಗಳಿಗೆ ಅನುಗುಣವಾಗಿ ಪ್ರತ್ಯೇಕಿಸಲಾಗಿದೆ. ಟೆಕ್ನೀಷಿಯನ್ ಗ್ರೇಡ್-1 ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 18 ರಿಂದ 33 ವರ್ಷದ ಒಳಗಿರಬೇಕು. ಹಾಗೆಯೇ, ಟೆಕ್ನೀಷಿಯನ್ ಗ್ರೇಡ್-3 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷದ ವಯೋಮಿತಿ ನಿಗದಿಪಡಿಸಲಾಗಿದೆ. ನಿಯಮಾವಳಿಗಳ ಪ್ರಕಾರ ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಶೈಕ್ಷಣಿಕ ಅರ್ಹತೆ ಏನಿರಬೇಕು?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗೆ ತಕ್ಕಂತೆ ಅಗತ್ಯ ವಿದ್ಯಾರ್ಹತೆ ಹೊಂದಿರಬೇಕು. ಟೆಕ್ನೀಷಿಯನ್ ಗ್ರೇಡ್-3 ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ 10ನೇ ತರಗತಿ (SSLC) ಪಾಸಾಗಿರಬೇಕು ಮತ್ತು ಸಂಬಂಧಪಟ್ಟ ಟ್ರೇಡ್‌ನಲ್ಲಿ ಐಟಿಐ (ITI) ಸರ್ಟಿಫಿಕೇಟ್ ಹೊಂದಿರಬೇಕು ಅಥವಾ ಡಿಪ್ಲೊಮಾ ಮುಗಿಸಿರಬೇಕು. ಇನ್ನು ಟೆಕ್ನೀಷಿಯನ್ ಗ್ರೇಡ್-1 (ಸಿಗ್ನಲ್) ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ (B.Sc) ಅಥವಾ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಆಯ್ಕೆ ವಿಧಾನ ಮತ್ತು ಪರೀಕ್ಷಾ ಪ್ರಕ್ರಿಯೆ:

ಅರ್ಹ ಅಭ್ಯರ್ಥಿಗಳನ್ನು ಒಟ್ಟು ಮೂರು ಹಂತಗಳ ಕಠಿಣ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯನ್ನು (CBT) ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಮುಂದಿನ ಹಂತವಾದ ಮೂಲ ದಾಖಲೆಗಳ ಪರಿಶೀಲನೆಗೆ (Document Verification) ಕರೆಯಲಾಗುತ್ತದೆ. ಕೊನೆಯದಾಗಿ, ದೈಹಿಕ ಮತ್ತು ವೈದ್ಯಕೀಯ ಸಾಮರ್ಥ್ಯವನ್ನು ಪರೀಕ್ಷಿಸಲು ವೈದ್ಯಕೀಯ ತಪಾಸಣೆಯನ್ನು (Medical Examination) ನಡೆಸಿ ಅರ್ಹರನ್ನು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಜೂನ್ 30ಕ್ಕೆ ಸಂಪೂರ್ಣ ನೋಟಿಫಿಕೇಶನ್ ಬಿಡುಗಡೆ:

ಪ್ರಸ್ತುತ ರೈಲ್ವೆ ಮಂಡಳಿಯು ಕೇವಲ ಸಂಕ್ಷಿಪ್ತ ಅಧಿಸೂಚನೆಯನ್ನು ಮಾತ್ರ ಹೊರಡಿಸಿದೆ. ಪರೀಕ್ಷಾ ಪಠ್ಯಕ್ರಮ (Syllabus), ಅರ್ಜಿ ಶುಲ್ಕ, ವಲಯವಾರು ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರಗಳನ್ನೊಳಗೊಂಡ ಅಧಿಕೃತ ಸುದೀರ್ಘ ಅಧಿಸೂಚನೆಯು ಜೂನ್ 30, 2026 ರಂದು ಬಿಡುಗಡೆಯಾಗಲಿದೆ. ಆಸಕ್ತ ಅಭ್ಯರ್ಥಿಗಳು ರೈಲ್ವೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಜೂನ್ 30 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮದುವೆಗೂ ಸ್ವಲ್ಪ ಮುನ್ನ ಗೆಳೆಯನೊಂದಿಗೆ ಅಕ್ಕ ಪರಾರಿ, ತಂಗಿಗಾದರೂ ಕೊಟ್ಟು ಮದುವೆ ಮಾಡೋಣವೆಂದ್ರೆ ಆಕೆಯ ಪ್ರಿಯಕರನೂ ಪ್ರತ್ಯಕ್ಷ – Kannada News

ಬರೇಲಿ, ಜೂನ್ 09: ಉತ್ತರ ಪ್ರದೇಶದ ಬರೇಲಿಯಲ್ಲಿ ಮದುವೆಯೊಂದು ನಿಶ್ಚಯವಾಗಿತ್ತು. ಇನ್ನೇನು ಮದುವೆ(Marriage) ಶಾಸ್ತ್ರಗಳು ನಡೆಯಬೇಕೆನ್ನುವಷ್ಟರಲ್ಲಿ ವಧು ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ತಂಗಿಯನ್ನಾದರೂ ಆ ವರನಿಗೆ ಕೊಟ್ಟು ಮದುವೆ ಮಾಡಬೇಕೆಂದರೆ ಆಕೆಗೂ ಪ್ರಿಯಕರನಿದ್ದು ಕುಟುಂಬದವರ ಎದುರು ಬಂದು ನಿಂತಿದ್ದ ಘಟನೆ ನಡೆದಿದೆ.

ವಧು ಮತ್ತು ಆಕೆಯ ತಂಗಿಯ ವೈಯಕ್ತಿಕ ನಿರ್ಧಾರಗಳಿಂದ ಮದುವೆ ಮನೆಯಲ್ಲಿ ಉಂಟಾದ ದಿಢೀರ್ ಗೊಂದಲವು ಸಮಾಜದಲ್ಲಿ ಯುವ ಪೀಳಿಗೆಯ ಆಲೋಚನೆಗಳು ಮತ್ತು ಕೌಟುಂಬಿಕ ಸಮ್ಮತಿಯ ಮಹತ್ವದ ಕುರಿತು ಹೊಸ ಸಂವಾದವನ್ನು ಹುಟ್ಟುಹಾಕಿದೆ.

ನರಿಯಾವಾಲ್‌ನಲ್ಲಿರುವ ಮದುವೆ ಮಂಟಪದಲ್ಲಿ ಮದುವೆಯ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದವು. ವರನ ಕಡೆಯವರು ಅದ್ಧೂರಿಯಾಗಿ ಮೆರವಣಿಗೆಯ ಮೂಲಕ ಮಂಟಪಕ್ಕೆ ಆಗಮಿಸುತ್ತಿದ್ದ ಸಂದರ್ಭದಲ್ಲೇ, ವಧು ತನ್ನ ವೈಯಕ್ತಿಕ ಕಾರಣಗಳಿಂದಾಗಿ ಆಭರಣಗಳೊಂದಿಗೆ ಮನೆಯಿಂದ ಹೊರಹೋಗಿರುವ ವಿಷಯ ಕುಟುಂಬಸ್ಥರಿಗೆ ತಿಳಿಯಿತು.

ಮತ್ತಷ್ಟು ಓದಿ: ತಮ್ಮಂತೆಯೇ ಬಟ್ಟೆ ತೊಟ್ಟು ಮದುವೆ ಮನೆಯಲ್ಲಿ ಭಾರಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಪುರುಷರ ವೇಷ ಕಳಚಿದ ಮಂಗಳಮುಖಿಯರು

ಕೊನೆಯ ಕ್ಷಣದಲ್ಲಿ ಎದುರಾದ ಈ ಮುಜುಗರದಿಂದ ಎರಡೂ ಕುಟುಂಬಗಳನ್ನು ರಕ್ಷಿಸಲು ಮತ್ತು ಮದುವೆಯ ಸಡಗರವನ್ನು ಉಳಿಸಲು ಗ್ರಾಮದ ಹಿರಿಯರು ತಕ್ಷಣವೇ ಮಧ್ಯಸ್ಥಿಕೆ ವಹಿಸಿದರು. ಸ್ಥಳೀಯ ಪಂಚಾಯತ್ ಆಯೋಜಿಸಿ ದೀರ್ಘ ಚರ್ಚೆ ನಡೆಸಿದ ಹಿರಿಯರು, ವರನಿಗೆ ವಧುವಿನ ಕಿರಿಯ ಸಹೋದರಿಯನ್ನು ಮದುವೆ ಮಾಡಿಕೊಡಲು ಅತ್ಯಂತ ಪ್ರಬುದ್ಧವಾದ ಪ್ರಸ್ತಾಪವನ್ನು ಮುಂದಿಟ್ಟರು. ಎರಡೂ ಕುಟುಂಬಗಳು ಸಾಮಾಜಿಕ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದವು.

ಆದರೆ ಕೆಲವೇ ನಿಮಿಷಗಳಲ್ಲಿ ಈ ಘಟನೆಗೆ ಆಸಕ್ತಿದಾಯಕ ತಿರುವು ಸಿಕ್ಕಿತು. ಕಿರಿಯ ಸಹೋದರಿಯೂ ಸಹ ಈಗಾಗಲೇ ಬೇರೊಬ್ಬ ಯುವಕನನ್ನು ಇಷ್ಟಪಡುತ್ತಿದ್ದು, ಆಕೆಗೂ ಈ ಮದುವೆಯಲ್ಲಿ ಮನಸ್ಸಿಲ್ಲ ಎಂಬ ಸತ್ಯ ಬಹಿರಂಗವಾಯಿತು. ಆಕೆಯ ಪ್ರಿಯಕರನೆನ್ನಲಾದ ಯುವಕನೇ ನೇರವಾಗಿ ಮಂಟಪಕ್ಕೆ ಬಂದು ತಾವಿಬ್ಬರು ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ಹೆತ್ತವರಿಗೆ ತಿಳಿಸಿದ್ದಾನೆ.

ಮಕ್ಕಳ ಈ ಹಠಾತ್ ನಿರ್ಧಾರಗಳಿಂದ ದಿಗ್ಭ್ರಮೆಗೊಂಡ ಕುಟುಂಬಸ್ಥರು ಮತ್ತು ನೆರೆದಿದ್ದವರ ನಡುವೆ ಭಾವುಕತೆಯ ಅತಿರೇಕದಿಂದಾಗಿ ಸಣ್ಣಮಟ್ಟದ ಮಾತಿನ ಚಕಮಕಿ ನಡೆದು, ಅದು ಕೋಲು ಹಾಗೂ ಕಲ್ಲು ತೂರಾಟದಂತಹ ದೈಹಿಕ ಘರ್ಷಣೆಗೆ ತಿರುಗಿತು. ಈ ಗಲಾಟೆಯಲ್ಲಿ ವಧುವಿನ ಸೋದರಸಂಬಂಧಿ ಸೇರಿದಂತೆ ಮೂವರು ಗಾಯಗೊಂಡರು.

ಪೊಲೀಸರ ತ್ವರಿತ ಹಸ್ತಕ್ಷೇಪ 
ಮದುವೆ ಮಂಟಪದಲ್ಲಿ ಗಲಾಟೆ ನಡೆಯುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ಬಿತ್ರಿ ಚೈನ್‌ಪುರ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದು ಪರಿಸ್ಥಿತಿಯನ್ನು ಸಂಪೂರ್ಣ ಹತೋಟಿಗೆ ತಂದರು. ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಕದಡದಂತೆ ತಡೆಯಲು ಪೊಲೀಸರು ಗಲಾಟೆ ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದರು.

ಬಲವಂತದ ಮದುವೆಗಿಂತ ಮಕ್ಕಳ ಇಚ್ಛೆಗೆ ಗೌರವ ನೀಡುವುದು ಸೂಕ್ತ ಎಂದು ಅರಿತ ಎರಡೂ ಕಡೆಯ ಕುಟುಂಬದವರು ಸದ್ಯಕ್ಕೆ ಮದುವೆಯನ್ನು ರದ್ದುಗೊಳಿಸಲು ಒಪ್ಪಿಕೊಂಡರು. ವರನ ಕಡೆಯವರು ಯಾವುದೇ ಹೆಚ್ಚಿನ ವಿವಾದಕ್ಕೆ ಆಸ್ಪದ ನೀಡದೆ ಸೌಮ್ಯವಾಗಿ ತಮ್ಮ ಮನೆಗೆ ಮರಳಿದರು.

ಪೊಲೀಸರು ಮತ್ತು ಹಿರಿಯರ  ಹಸ್ತಕ್ಷೇಪದಿಂದಾಗಿ ಇಬ್ಬರು ಹೆಣ್ಣುಮಕ್ಕಳು ತಮ್ಮ ಇಷ್ಟವಿಲ್ಲದ ಮದುವೆಯಿಂದ ಪಾರಾಗುವಂತಾಯಿತು. ಯಾವುದೇ ದೊಡ್ಡ ಮಟ್ಟದ ಅನಾಹುತಗಳಿಲ್ಲದೆ ಇಡೀ ಪ್ರಕರಣವು ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದ್ದು, ಕೌಟುಂಬಿಕ ನಿರ್ಧಾರಗಳಲ್ಲಿ ಮಕ್ಕಳ ಮುಕ್ತ ಅಭಿಪ್ರಾಯಗಳನ್ನು ಆಲಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಗ್ ಬಾಸ್ ಮನೆಗೆ ಹೋಗಬೇಕಾ? ಆಡಿಷನ್ ವಿಡಿಯೋ ಮಾಡುವಾಗ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ – Kannada News

ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 13ರ ಆಡಿಷನ್ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಈ ಬಾರಿ ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಗೆ ಹೋಗಲು ಕಲರ್ಸ್ ಕನ್ನಡ ವಾಹಿನಿ ಸುವರ್ಣಾವಕಾಶ ನೀಡಿದೆ. ಈಗಾಗಲೇ ಸಾವಿರಾರು ಜನ ತಮ್ಮ ಅದೃಷ್ಟ ಪರೀಕ್ಷಿಸಲು ಆಡಿಷನ್ ವಿಡಿಯೋಗಳನ್ನು ಸಿದ್ಧಪಡಿಸುತ್ತಿದ್ದಾರೆ. ಆದರೆ, ನೀವು ಮಾಡುವ ಒಂದು ಸಣ್ಣ ತಪ್ಪು ನಿಮ್ಮ ಬಿಗ್ ಬಾಸ್ ಕನಸನ್ನು ಭಂಗಗೊಳಿಸಬಹುದು!

ನಿಮ್ಮ ಆಡಿಷನ್ ವಿಡಿಯೋ ರಿಜೆಕ್ಟ್ ಆಗಬಾರದು ಎಂದರೆ ವಿಡಿಯೋ ಮಾಡುವಾಗ ಈ ಕೆಳಗಿನ ಪ್ರಮುಖ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಈ ಕುರಿತು ಕಲರ್ಸ್ ಕನ್ನಡ ವಾಹಿನಿ ವಿಡಿಯೋ ಹಂಚಿಕೊಂಡಿದೆ.

3 ನಿಮಿಷಗಳ ನಿಖರ ವಿಡಿಯೋ ಇರಲಿ:

ವಾಹಿನಿ ನೀಡಿರುವ ಅಧಿಕೃತ ನಿಯಮದ ಪ್ರಕಾರ, ನಿಮ್ಮ ಆಡಿಷನ್ ವಿಡಿಯೋ ಕಡ್ಡಾಯವಾಗಿ 3 ನಿಮಿಷಗಳ ಕಾಲಾವಧಿಯದ್ದೇ ಆಗಿರಬೇಕು. ಅದಕ್ಕಿಂತ ತೀರಾ ಕಡಿಮೆ ಅಥವಾ ಅತಿ ಉದ್ದದ ವಿಡಿಯೋಗಳನ್ನು ಮಾಡಿದರೆ ಅವುಗಳನ್ನು ಪರಿಗಣಿಸುವುದಿಲ್ಲ. ಆದ್ದರಿಂದ ನಿಗದಿತ ಸಮಯದೊಳಗೇ ನಿಮ್ಮ ವಿವರಣೆಯನ್ನು ಅಚ್ಚುಕಟ್ಟಾಗಿ ನೀಡಬೇಕು.

ಸ್ಪಷ್ಟವಾದ ವಿವರಣೆ ಅತ್ಯಗತ್ಯ:

ವಿಡಿಯೋದಲ್ಲಿ ಕೇವಲ ನಿಮ್ಮ ಹೆಸರು, ಊರು ಹೇಳುವುದಷ್ಟೇ ಅಲ್ಲದೆ, ‘ನೀವು ಯಾಕೆ ಬಿಗ್ ಬಾಸ್ ಮನೆಗೆ ಹೋಗಲು ಅರ್ಹರು?’ ಮತ್ತು ‘ನಿಮ್ಮ ವ್ಯಕ್ತಿತ್ವದ ವಿಶೇಷತೆ ಏನು?’ ಎಂಬುದನ್ನು ನಿಮ್ಮದೇ ಆದ ಶೈಲಿಯಲ್ಲಿ ಸ್ಪಷ್ಟವಾಗಿ ವಿವರಿಸಬೇಕು. ನಿಮ್ಮ ಮುಗ್ಧತೆ, ಧೈರ್ಯ ಅಥವಾ ಯಾವುದೇ ವಿಭಿನ್ನ ಪ್ರತಿಭೆ ಇದ್ದರೆ ಅದನ್ನು ಮುಕ್ತವಾಗಿ ಹಂಚಿಕೊಳ್ಳಿ.

ವೀಡಿಯೊ ಕ್ವಾಲಿಟಿ ಮತ್ತು ಹಿನ್ನೆಲೆ:

ಅನೇಕರು ಆತುರದಲ್ಲಿ ಕತ್ತಲಿರುವ ಜಾಗದಲ್ಲಿ ಅಥವಾ ಅತಿ ಹೆಚ್ಚು ಗಲಾಟೆ ಇರುವಲ್ಲಿ ವಿಡಿಯೋ ಮಾಡುತ್ತಾರೆ. ಇಂತಹ ತಪ್ಪು ಮಾಡಬೇಡಿ. ನಿಮ್ಮ ಮುಖ ಮತ್ತು ಧ್ವನಿ ಸ್ಪಷ್ಟವಾಗಿ ಕೇಳಿಸುವಂತೆ ಉತ್ತಮ ಬೆಳಕಿರುವ ಜಾಗದಲ್ಲಿ ವಿಡಿಯೋ ರೆಕಾರ್ಡ್ ಮಾಡಿ.

ಇದನ್ನೂ ಓದಿ:

ಅಪ್‌ಲೋಡ್ ಮಾಡುವುದು ಹೇಗೆ?

ನಿಮ್ಮ 3 ನಿಮಿಷದ ವಿಡಿಯೋ ಸಿದ್ಧವಾದ ಬಳಿಕ, ಅದನ್ನು ವಾಹಿನಿಯ ಅಧಿಕೃತ ವೆಬ್‌ಸೈಟ್ ಆದ colorskannada.jiostar.com ಗೆ ಭೇಟಿ ನೀಡಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಕೆಲವರು ಈ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಕಲರ್ಸ್ ಕನ್ನಡಕ್ಕೆ ಟ್ಯಾಗ್ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಥೀಯೇಟರ್ ಬಳಿಕ ಒಟಿಟಿಯಲ್ಲೂ ದಾಖಲೆ ಬರೆದ ‘ಧುರಂಧರ್ 2’ – Kannada News

‘ಧುರಂಧರ್ ದಿ ರಿವೆಂಜ್’ (Dhurandhar The Revenge) ಸಿನಿಮಾ ಕೆಲ ದಿನಗಳ ಹಿಂದಷ್ಟೆ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿದೆ. ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆದ ಈ ಸಿನಿಮಾ ಇದೀಗ ಒಟಿಟಿಯಲ್ಲೂ ದಾಖಲೆ ಬರೆದಿದೆ. ‘ಧುರಂಧರ್ 2’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ 5 ಕೋಟಿ (50 ಮಿಲಿಯನ್) ವೀಕ್ಷಕರನ್ನು ತಲುಪಿದೆ. ಇದು ಚಿತ್ರಮಂದಿರಗಳಲ್ಲಿ ಮೊದಲ ವಾರಾಂತ್ಯದಲ್ಲಿ ‘ಧುರಂಧರ್ 2’ ವೀಕ್ಷಕರ ಸಂಖ್ಯೆಗಿಂತ ಸುಮಾರು 5 ಪಟ್ಟು ಹೆಚ್ಚು.

ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ‘ಧುರಂಧರ್ 2’ ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲ ಬಿಡುಗಡೆ ಆಗಿದ್ದು, ಸ್ಟ್ರೀಂ ಆಗುತ್ತಿದೆ. ಥಿಯೇಟರ್‌ ನಲ್ಲಿ ಅದ್ಧೂರಿ ಪ್ರದರ್ಶನ ಕಂಡ ಬಳಿಕವೂ ಸಿನಿಮಾ ಕುತೂಹಲ ಉಳಿಸಿಕೊಂಡಿದ್ದು ಒಟಿಟಿಯಲ್ಲಿಯೂ ಕೋಟ್ಯಂತರ ಜನರನ್ನು ತಲುಪುತ್ತಿದೆ. ಜಿಯೋ ಹಾಟ್​​ಸ್ಟಾರ್​​ನಲ್ಲಿ ಚಿತ್ರದ ಒಟ್ಟು ವೀಕ್ಷಣಾ ಅವಧಿಯಲ್ಲಿ ಸುಮಾರು 60% ರಷ್ಟು ಕನೆಕ್ಟೆಡ್ ಟಿವಿ ಸಾಧನಗಳಿಂದ ಬಂದಿದೆ ಎಂದು ಜಿಯೋ ಹಾಟ್​​ಸ್ಟಾರ್ ಹೇಳಿದೆ. ಅಂದರೆ ‘ಧುರಂಧರ್ 2’ ಸಿನಿಮಾವನ್ನು ಕುಟುಂಬವೆಲ್ಲ ಕೂತು ಒಟ್ಟಿಗೆ ನೋಡಿದೆ ಎಂಬುದನ್ನು ಈ ಅಂಕಿ-ಸಂಖ್ಯೆ ಹೇಳುತ್ತಿದೆ.

ಈ ಅಭೂತಪೂರ್ವ ಯಶಸ್ಸಿಗೆ ಚಿತ್ರದ ಭವ್ಯವಾದ ಡಿಜಿಟಲ್ ಪ್ರೀಮಿಯರ್ ಅನುಭವವೂ ಒಂದು ಪ್ರಮುಖ ಕಾರಣವಾಗಿದೆ ಎಂದು ಜಿಯೋ ಹಾಟ್​​ಸಾರ್ ಹೇಳಿದ್ದು, ಅಭಿಮಾನಿಗಳಿಗೆ ಚಿತ್ರದ ‘ರಾ ಆಂಡ್ ಉಂದೇಖಾ’ ಆವೃತ್ತಿಯ ವಿಶೇಷ ಪ್ರವೇಶದ ಜೊತೆಗೆ, ಚಿತ್ರದ ತಾರಾಗಣದ ಸುಂದರ ಕ್ಷಣಗಳು, ತೆರೆಮರೆಯ ಕಥೆಗಳು ಮತ್ತು ಬಿಹೈಂಡ್ ದಿ ಸೀನ್ಸ್ ಒಳಗೊಂಡ 30 ನಿಮಿಷಗಳ ವಿಶೇಷ ಪ್ರಿ-ಶೋ ಅನ್ನು ಪ್ರದರ್ಶಿಸಲಾಯಿತು. ಇದರ ಪರಿಣಾಮವಾಗಿ, ಇದು ಕೇವಲ ಒಂದು ಸಿನಿಮಾ ವೀಕ್ಷಣೆಯಾಗಿ ಉಳಿಯದೇ, ವೀಕ್ಷಕರನ್ನು ಆಳವಾಗಿ ತೊಡಗಿಸಿಕೊಳ್ಳುವಂತೆ ಮಾಡಿತು ಮತ್ತು ಜನರನ್ನು ಮತ್ತೊಮ್ಮೆ ಸಿನಿಮಾ ನೋಡುವಂತೆ ಪ್ರೇರೇಪಿಸಿತು ಎಂದಿದ್ದಾರೆ ಜಿಯೋ ಹಾಟ್​​ಸ್ಟಾರ್ ಮುಖ್ಯಸ್ಥ ಅಲೋಕ್ ಜೈನ್.

ಇದನ್ನೂ ಓದಿ:ಜಪಾನಿನಲ್ಲಿ ಬಿಡುಗಡೆಗೆ ಸಜ್ಜಾದ ‘ಧುರಂಧರ್’, ಮುರಿಯುತ್ತಾ ‘ದಂಗಲ್’ ದಾಖಲೆ

‘ಧುರಂಧರ್’ ಚಿತ್ರವು ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ 3.2 ಕೋಟಿಗೂ (32 ಮಿಲಿಯನ್) ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು. ‘ಧುರಂಧರ್ 2’ ಸಿನಿಮಾ ಸಹ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ. ಡಿಜಿಟಲ್ ಪ್ರೀಮಿಯರ್‌ಗೆ ಜಾಹೀರಾತುದಾರರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, 50 ಕ್ಕೂ ಹೆಚ್ಚು ಬ್ರಾಂಡ್‌ಗಳು ಮತ್ತು 13 ಪ್ರಮುಖ ಪ್ರಾಯೋಜಕರು ಈ ಚಿತ್ರದೊಂದಿಗೆ ಕೈಜೋಡಿಸಿದ್ದರು ಎಂದು ಜಿಯೋ ಹಾಟ್​​ಸ್ಟಾರ್ ಹೇಳಿದೆ. ‘ಧುರಂಧರ್ ದಿ ರಿವೆಂಜ್’ ಸಿನಿಮಾ ಈಗ ಜಿಯೋಹಾಟ್‌ಸ್ಟಾರ್‌ನಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ‘ಧುರಂಧರ್ 2’ ಸಿನಿಮಾ ಹೊರದೇಶಗಳಲ್ಲಿ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆದರೆ, ಭಾರತದಲ್ಲಿ ಜಿಯೋ ಹಾಟ್​​ಸ್ಟಾರ್​​ನಲ್ಲಿ ಬಿಡುಗಡೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SBI Apprentice 2026: ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​; SBI ನ ಅಪ್ರೆಂಟಿಸ್ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ! – Kannada News

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾImage Credit source: Pinterest

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಪದವೀಧರರಿಗೆ ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತೊಂದು ಸುವರ್ಣಾವಕಾಶ ನೀಡಿದೆ. ದೇಶಾದ್ಯಂತ ಖಾಲಿ ಇರುವ ಒಟ್ಟು 7,150 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಎಸ್‌ಬಿಐ ಅಧಿಕೃತವಾಗಿ ವಿಸ್ತರಿಸಿದೆ. ಈ ಹಿಂದೆ ನಿಗದಿಯಾಗಿದ್ದ ಕೊನೆಯ ದಿನಾಂಕ ಜೂನ್ 08 ಕ್ಕೆ ಮುಕ್ತಾಯಗೊಳ್ಳಬೇಕಿತ್ತಾದರೂ, ಅಭ್ಯರ್ಥಿಗಳ ಅನುಕೂಲಕ್ಕಾಗಿ ಈ ಅವಧಿಯನ್ನು ಈಗ ಜೂನ್ 15 ರವರೆಗೆ ವಿಸ್ತರಿಸಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ.

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಹತೆಗಳೇನು?

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Degree) ಪೂರ್ಣಗೊಳಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರಾಯೋಗಿಕ ಕೌಶಲ್ಯ ಅಭಿವೃದ್ಧಿ ಮತ್ತು ಸಮಗ್ರ ತರಬೇತಿಯನ್ನು ನೀಡುವ ಉದ್ದೇಶದಿಂದ ಈ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಅಧಿಕೃತ ಸ್ಥಳೀಯ ಭಾಷೆಯಲ್ಲಿ (ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡ) ಬರೆಯಲು, ಓದಲು ಮತ್ತು ಮಾತನಾಡಲು ಪ್ರಾವೀಣ್ಯತೆಯನ್ನು ಹೊಂದಿರಬೇಕಿರುವುದು ಕಡ್ಡಾಯವಾಗಿದೆ.

ವಯೋಮಿತಿ ಮತ್ತು ಆಕರ್ಷಕ ಸ್ಟೈಫಂಡ್ ವಿವರ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಏಪ್ರಿಲ್ 1, 2026 ರ ಅನ್ವಯ ಕನಿಷ್ಠ 20 ವರ್ಷ ತುಂಬಿರಬೇಕು ಮತ್ತು ಗರಿಷ್ಠ 28 ವರ್ಷಗಳ ಒಳಗಿರಬೇಕು. ನಿಯಮಾವಳಿಗಳ ಪ್ರಕಾರ ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ. ಇನ್ನು ಈ ಅಪ್ರೆಂಟಿಸ್‌ಶಿಪ್ ಅವಧಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ರೂ. 15,000 ಸ್ಟೈಫಂಡ್ (Stipend) ನೀಡಲಾಗುತ್ತದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ; 6,565 ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಆಹ್ವಾನ

ಆನ್‌ಲೈನ್ ಲಿಖಿತ ಪರೀಕ್ಷೆ ಹೇಗಿರುತ್ತದೆ?

ಅಭ್ಯರ್ಥಿಗಳ ಅಂತಿಮ ಆಯ್ಕೆಯು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆಯನ್ನು ಆಧರಿಸಿರುತ್ತದೆ. ಈ ಆನ್‌ಲೈನ್ ಲಿಖಿತ ಪರೀಕ್ಷೆಯು ಜುಲೈ 2026 ರಲ್ಲಿ ನಡೆಯಲಿದ್ದು, ಒಟ್ಟು 100 ಅಂಕಗಳಿಗೆ 100 ಬಹು ಆಯ್ಕೆ (MCQ) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ವ್ಯವಸ್ಥೆ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೂ 1/4 ರಷ್ಟು ಅಂದರೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಪ್ರಾದೇಶಿಕ ಭಾಷೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ:

ಸಾಮಾನ್ಯ ಇಂಗ್ಲಿಷ್ ವಿಭಾಗವನ್ನು ಹೊರತುಪಡಿಸಿ, ಉಳಿದ ಮೂರು ವಿಭಾಗಗಳ ಪ್ರಶ್ನೆಗಳನ್ನು ಅಭ್ಯರ್ಥಿಗಳು ಇಂಗ್ಲಿಷ್, ಹಿಂದಿ ಸೇರಿದಂತೆ ತಾವು ಆಯ್ಕೆ ಮಾಡಿದ ಪ್ರಾದೇಶಿಕ ಭಾಷೆಯಲ್ಲಿ (ಕನ್ನಡದಲ್ಲಿಯೂ ಸಹ) ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಸ್ಥಳೀಯ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಒಂದು ಪ್ರಮುಖ ವಿನಾಯಿತಿ ನೀಡಲಾಗಿದ್ದು, ಅಭ್ಯರ್ಥಿಗಳು ತಮ್ಮ 10ನೇ ಅಥವಾ 12ನೇ ತರಗತಿಯ ಅಂಕಪಟ್ಟಿಯಲ್ಲಿ ಸ್ಥಳೀಯ ಭಾಷೆಯನ್ನು (ಉದಾಹರಣೆಗೆ ಕನ್ನಡ) ಒಂದು ವಿಷಯವಾಗಿ ಅಧ್ಯಯನ ಮಾಡಿರುವುದಕ್ಕೆ ಪುರಾವೆಗಳನ್ನು ಹೊಂದಿದ್ದರೆ, ಅವರಿಗೆ ಸ್ಥಳೀಯ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಆಸಕ್ತರು ತಡ ಮಾಡದೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ ಭೇಟಿ ನೀಡಿ ಜೂನ್ 15ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾನೂನು ಜಾಗೃತಿ: ಝೀರೋ ಎಫ್​ಐಆರ್​ ಎಂದರೇನು? ಯಾರಿಗೆಲ್ಲಾ ಉಪಯೋಗ ಇಲ್ಲಿದೆ ಮಾಹಿತಿ – Kannada News

ನವದೆಹಲಿ, ಜೂನ್ 09: ದೇಶದ ಕಾನೂನು ವ್ಯವಸ್ಥೆಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ನ್ಯಾಯದ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಹೊಸ ಅಪರಾಧ ಕಾನೂನುಗಳು ಜನಸಾಮಾನ್ಯರಿಗೆ, ವಿಶೇಷವಾಗಿ ಸಂಕಷ್ಟದಲ್ಲಿರುವವರಿಗೆ  ವರದಾನವಾಗಬಹುದು. ಇದರಲ್ಲಿ ಅತ್ಯಂತ ಪ್ರಮುಖವಾದದ್ದು ‘ಝೀರೋ ಎಫ್‌ಐಆರ್’ (Zero FIR). ಈ ಹಿಂದೆ ಅಪರಾಧ ನಡೆದಾಗ “ಇದು ನಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದಿಲ್ಲ” ಎಂದು ಪೊಲೀಸರು ಹೇಳಿದಾಗ ಸಾರ್ವಜನಿಕರು ಅಲೆಯಬೇಕಾದ ಪರಿಸ್ಥಿತಿ ಇತ್ತು. ಆದರೆ, ಪ್ರಸ್ತುತ ಜಾರಿಯಲ್ಲಿರುವ ಸುಧಾರಿತ ಕಾನೂನಿನಡಿಯಲ್ಲಿ ಈ ಗೊಂದಲಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದ್ದು, ದೇಶದ ಯಾವುದೇ ಪೊಲೀಸ್ ಠಾಣೆಯಲ್ಲಾದರೂ ತಕ್ಷಣವೇ ದೂರು ದಾಖಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಈ ಅತ್ಯಂತ ಸರಳ ಮತ್ತು ಜನಸ್ನೇಹಿ ಕಾನೂನು ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ.

‘ಝೀರೋ ಎಫ್‌ಐಆರ್’ ಎಂದರೇನು?
ಸಾಮಾನ್ಯವಾಗಿ ಒಂದು ಅಪರಾಧ ನಡೆದಾಗ ಆಯಾ ಪ್ರದೇಶದ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಮಾತ್ರ ನಿಯಮಿತ ಸಂಖ್ಯೆಯೊಂದಿಗೆ ಎಫ್‌ಐಆರ್ ದಾಖಲಿಸಲಾಗುತ್ತದೆ. ಆದರೆ, ಅಪರಾಧ ನಡೆದ ಸ್ಥಳವು ದೂರವಿದ್ದಾಗ ಅಥವಾ ಸಂತ್ರಸ್ತರು ಬೇರೆ ಯಾವುದೋ ಊರಿನಲ್ಲಿದ್ದಾಗ, ಅವರು ತಮ್ಮ ಹತ್ತಿರದ ಯಾವುದೇ ಪೊಲೀಸ್ ಠಾಣೆಗೆ ಹೋಗಿ ತಕ್ಷಣವೇ ದೂರು ನೀಡಬಹುದು.
ಇಂತಹ ಸಂದರ್ಭದಲ್ಲಿ ಪೊಲೀಸರು ತಮ್ಮ ಅಧಿಕಾರ ವ್ಯಾಪ್ತಿಯನ್ನು ನೋಡದೆ, ಯಾವುದೇ ಸಂಖ್ಯೆಯನ್ನು ನೀಡದೆಯೇ (ಅಂದರೆ ‘ಝೀರೋ’ ಸಂಖ್ಯೆಯ ಅಡಿಯಲ್ಲಿ) ದೂರನ್ನು ದಾಖಲಿಸಿಕೊಳ್ಳುತ್ತಾರೆ. ಇದನ್ನೇ ‘ಝೀರೋ ಎಫ್‌ಐಆರ್’ ಎನ್ನಲಾಗುತ್ತದೆ.

ಮತ್ತಷ್ಟು ಓದಿ: ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿಎಂ ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ

ದೇಶಾದ್ಯಂತ ಜಾರಿಗೆ ಬಂದಿರುವ ನೂತನ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ (BNS), ಭಾರತೀಯ ನಾಗರಿಕ ರಕ್ಷಣಾ ಸಂಹಿತೆ (BNSS) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ (BSA) ಗಳು ನಮ್ಮ ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಧುನೀಕರಿಸಿವೆ. ಇದು ಬ್ರಿಟಿಷರ ಕಾಲದ ಹಳೆಯ ಐಪಿಸಿ (IPC) ಮತ್ತು ಸಿಆರ್‌ಪಿಸಿ (CrPC) ನಿಯಮಗಳನ್ನು ಇತಿಹಾಸದ ಪುಟಗಳಿಗೆ ಸೇರಿಸಿದೆ.

ಅಡೆತಡೆ ಮುಕ್ತಿ: ಹೊಸ ಕಾನೂನಿನ ಪ್ರಕಾರ, ದೇಶದ ಯಾವುದೇ ಮೂಲೆಯಲ್ಲಿ ಅಪರಾಧ ನಡೆದಿದ್ದರೂ ಸಂತ್ರಸ್ತರು ತಮಗಿರುವ ಅನುಕೂಲಕರ ಪೊಲೀಸ್ ಠಾಣೆಯಲ್ಲೇ ಝೀರೋ ಎಫ್‌ಐಆರ್ ದಾಖಲಿಸಬಹುದು. ಈಗ ಝೀರೋ ಎಫ್‌ಐಆರ್ ಅನ್ನು ಆನ್‌ಲೈನ್ ಮೂಲಕವೂ (ಇ-ಎಫ್‌ಐಆರ್) ದಾಖಲಿಸಲು ಅವಕಾಶವಿದೆ. ಇದರೊಂದಿಗೆ, ಎಸ್‌ಎಂಎಸ್ ಮೂಲಕ ಸಮನ್ಸ್ ಕಳುಹಿಸುವುದು ಮತ್ತು ಅಪರಾಧದ ಸ್ಥಳದಲ್ಲಿ ಕಡ್ಡಾಯವಾಗಿ ವೀಡಿಯೊಗ್ರಫಿ ಮಾಡುವಂತಹ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ನಿಬಂಧನೆಗಳನ್ನು ಅಳವಡಿಸಲಾಗಿದೆ.

ಝೀರೋ ಎಫ್‌ಐಆರ್ ಕೆಲಸ ಮಾಡುವುದು ಹೇಗೆ?
ಯಾರು ನೋಂದಾಯಿಸಬಹುದು?: ಅಪರಾಧದ ಸಂತ್ರಸ್ತರು ಅಥವಾ ಅವರ ಪರವಾಗಿ ಘಟನೆಯನ್ನು ಬಲ್ಲ ಯಾರು ಬೇಕಾದರೂ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ದೂರನ್ನು ದಾಖಲಿಸಬಹುದು. ದೂರು ಸ್ವೀಕರಿಸಿದ ಪೊಲೀಸರು ತಕ್ಷಣವೇ ಪ್ರಾಥಮಿಕ ತನಿಖೆ ಅಥವಾ ವೈದ್ಯಕೀಯ ನೆರವನ್ನು ಒದಗಿಸುತ್ತಾರೆ.

15 ದಿನಗಳ ಒಳಗಾಗಿ ವರ್ಗಾವಣೆ: ಝೀರೋ ಎಫ್‌ಐಆರ್ ದಾಖಲಿಸಿಕೊಂಡ ನಂತರ, ಆ ಪೊಲೀಸ್ ಠಾಣೆಯು 15 ದಿನಗಳ ಒಳಗಾಗಿ ಇಡೀ ಪ್ರಕರಣದ ದಾಖಲೆಗಳನ್ನು ಅಪರಾಧ ನಡೆದ ಮೂಲ ನ್ಯಾಯವ್ಯಾಪ್ತಿಯ (Original Jurisdiction) ಪೊಲೀಸ್ ಠಾಣೆಗೆ ವರ್ಗಾಯಿಸಬೇಕಾಗುತ್ತದೆ. ಅಲ್ಲಿ ಆ ಪ್ರಕರಣಕ್ಕೆ ನಿಯಮಿತ ಎಫ್‌ಐಆರ್ ಸಂಖ್ಯೆಯನ್ನು ನೀಡಿ ಮುಂದಿನ ಸಮಗ್ರ ತನಿಖೆ ನಡೆಸಲಾಗುತ್ತದೆ.
ಸಾಮಾನ್ಯ ಎಫ್‌ಐಆರ್‌ನಂತೆಯೇ ಝೀರೋ ಎಫ್‌ಐಆರ್ ದಾಖಲಿಸಿದ ನಂತರವೂ ಸಂತ್ರಸ್ತರಿಗೆ ಉಚಿತವಾಗಿ ಎಫ್‌ಐಆರ್ ಪ್ರತಿಯನ್ನು ನೀಡಲಾಗುತ್ತದೆ.

ನಾಗರಿಕರಿಗೆ ಆಗುವ ಭಾರಿ ಅನುಕೂಲಗಳು
ದೇಶಾದ್ಯಂತದ ಪ್ರತಿಯೊಂದು ಪೊಲೀಸ್ ಠಾಣೆಗಳೂ ಈಗ ‘ಅಪರಾಧ ಮತ್ತು ಅಪರಾಧ ಟ್ರ್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್’ (CCTNS) ಅಡಿಯಲ್ಲಿ ಡಿಜಿಟಲ್ ಆಗಿ ಜೋಡಿಸಲ್ಪಟ್ಟಿರುವುದರಿಂದ, ಈ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ನಡೆಯುತ್ತದೆ. ಇದರಿಂದಾಗಿ ದೂರದ ಪ್ರಯಾಣದ ವೇಳೆ ತೊಂದರೆಗೆ ಒಳಗಾಗುವವರು, ಮಹಿಳೆಯರು ಮತ್ತು ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಸಮಯ ವ್ಯರ್ಥವಾಗುವುದು ತಪ್ಪುತ್ತದೆ ಮತ್ತು ಸಾಕ್ಷ್ಯಗಳು ನಾಶವಾಗದಂತೆ ತಕ್ಷಣವೇ ಕಾನೂನು ರಕ್ಷಣೆ ಸಿಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಪೆದ್ದಿ’ ನೋಡಿ ಹಾಡಿಹೊಗಳಿದ ಅಲ್ಲು ಅರ್ಜುನ್; ರಾಮ್ ಚರಣ್, ಜಾನ್ವಿಗೆ ವಿಶೇಷ ಪ್ರೀತಿ

ತೆಲುಗು ನಟ ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆದರೆ, ನಾಯಕಿ ಜಾನ್ವಿ ಕಪೂರ್ ಅವರ ಪಾತ್ರದ ಬಗ್ಗೆ ಕೆಲವರು ಟೀಕೆ ಮಾಡಿದ್ದಾರೆ. ಇತ್ತೀಚಿನ ಸುದ್ದಿಗೋಷ್ಠಿಗಳಲ್ಲಿ ಸ್ವತಃ ಚಿತ್ರತಂಡ ಜಾನ್ವಿ ಹೆಸರನ್ನು ಪ್ರಸ್ತಾಪಿಸಲು ಹಿಂಜರಿಯುತ್ತಿದೆ. ಇಂತಹ ಮುಜುಗರದ ಸನ್ನಿವೇಶದ ನಡುವೆಯೇ, ಚರಣ್ ಅವರ ಸೋದರಸಂಬಂಧಿ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ‘ಪೆದ್ದಿ’ ಚಿತ್ರವನ್ನು ವೀಕ್ಷಿಸಿ ಇಡೀ ಚಿತ್ರತಂಡವನ್ನು ಹೊಗಳಿದ್ದಾರೆ.

ಸೋಮವಾರ ರಾತ್ರಿ ಸಿನಿಮಾ ವೀಕ್ಷಿಸಿದ ಅಲ್ಲು ಅರ್ಜುನ್, ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರದ ಬಗ್ಗೆ ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದಾರೆ. ‘ರಾಮ್ ಚರಣ್ ನಟನೆ ನನ್ನ ಮನಸ್ಸು ಗೆದ್ದಿದೆ. ಅತ್ಯಂತ ರಗಡ್ ಆದ ನಟನೆ, ಅದ್ಭುತವಾದ ಬಾಡಿ ಟ್ರಾನ್ಸ್‌ಫಾರ್ಮೇಷನ್ ಹಾಗೂ ಅವರ ಗ್ರೇಸ್‌ಫುಲ್ ಡ್ಯಾನ್ಸ್ ಮೂವ್ಸ್ ಅದ್ಭುತವಾಗಿವೆ. ಪ್ರತಿಯೊಂದು ಹಂತದಲ್ಲೂ ಚರಣ್ ಅಬ್ಬರಿಸಿದ್ದಾರೆ. ನನ್ನ ಸಹೋದರನ ಸಾಧನೆ ಕಂಡು ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಇದೇ ವೇಳೆ ವಿವಾದದ ಸುಳಿಗೆ ಸಿಲುಕಿರುವ ನಾಯಕಿ ಜಾನ್ವಿ ಕಪೂರ್ ಅವರಿಗೂ ಅಲ್ಲು ಅರ್ಜುನ್ ವಿಶೇಷವಾಗಿ ಬೆಂಬಲ ನೀಡಿದ್ದಾರೆ. ‘ಚಿತ್ರದ ನಾಯಕಿ ಜಾನ್ವಿ ಕಪೂರ್ ಅವರಿಗೆ ನನ್ನ ಪ್ರೀತಿ. ಜಗಪತಿ ಬಾಬು ಸೇರಿದಂತೆ ಚಿತ್ರದ ಉಳಿದ ಕಲಾವಿದರು ಹಾಗೂ ತಂತ್ರಜ್ಞರ ಕೆಲಸ ಅದ್ಭುತವಾಗಿದೆ. ರಾಮ್ ಚರಣ್ ಅವರನ್ನು ಇಷ್ಟು ಎತ್ತರಕ್ಕೆ ಬಿಂಬಿಸಿದ ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು’ ಎಂದು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಬಳಿಕ ಕಿಚ್ಚ ಸುದೀಪ್​​​ಗೆ ಹೊಸ ಬಾಡಿಗಾರ್ಡ್?

300 ಕೋಟಿ ಕ್ಲಬ್ ಸೇರಿದ ‘ಪೆದ್ದಿ’:

ಚಿತ್ರದಲ್ಲಿ ಮಹಿಳಾ ಪಾತ್ರವನ್ನು ವಸ್ತುವಿನಂತೆ ಬಿಂಬಿಸಲಾಗಿದೆ ಎಂಬ ವಿವಾದದ ಬೆನ್ನಲ್ಲೇ, ನಿರ್ದೇಶಕ ಬುಚ್ಚಿ ಬಾಬು ಈಗಾಗಲೇ ಪ್ರೇಕ್ಷಕರ ಕ್ಷಮೆ ಕೇಳಿದ್ದು, ವಿವಾದಿತ ದೃಶ್ಯಗಳನ್ನು ಕತ್ತರಿಸುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಪರ-ವಿರೋಧದ ಚರ್ಚೆಗಳ ನಡುವೆಯೂ ‘ಪೆದ್ದಿ’ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 300 ಕೋಟಿ ರೂಪಾಯಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮುಖ್ಯವಾಗಿ ತೆಲುಗು ರಾಜ್ಯಗಳಲ್ಲಿ ಚಿತ್ರಕ್ಕೆ ಅಭೂತಪೂರ್ವ ರೆಸ್ಪಾನ್ಸ್ ಸಿಗುತ್ತಿದ್ದು, ಹಿಂದಿ, ತಮಿಳು ಹಾಗೂ ಕನ್ನಡ ಆವೃತ್ತಿಗಳಲ್ಲಿ ಸಾಧಾರಣ ಪ್ರದರ್ಶನ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನನ್ನ ಮಗ ಕ್ಯಾಪ್ಟನ್: ಶ್ರೇಯಸ್ ಅಯ್ಯರ್ ತಂದೆಯ ಡ್ಯಾನ್ಸ್ ವಿಡಿಯೋ ವೈರಲ್ – Kannada News

ಟೀಮ್ ಇಂಡಿಯಾದ ನೂತನ ಟಿ20 ನಾಯಕರಾಗಿ ಶ್ರೇಯಸ್ ಅಯ್ಯರ್ ನೇಮಕವಾಗುತ್ತಿದ್ದಂತೆ, ಅವರ ತಂದೆ ಸಂತೋಷ್ ಅಯ್ಯರ್ (ನೀಲಿ ಬಣ್ಣದ ಶರ್ಟ್) ಅವರು ನೃತ್ಯದ ಮೂಲಕ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ. ಸಂತೋಷ್ ಅಯ್ಯರ್ ಅವರು ತಮ್ಮ ನಿವಾಸದಲ್ಲಿ ಸ್ನೇಹಿತರು ಮತ್ತು ಹಿತೈಷಿಗಳೊಂದಿಗೆ ಟೀಮ್ ಇಂಡಿಯಾ ಘೋಷಣೆಗಾಗಿ ಕಾಯುತ್ತಿದ್ದರು.

ಇತ್ತ ನಾಯಕನಾಗಿ ಶ್ರೇಯಸ್ ಅಯ್ಯರ್ ಹೆಸರು ಘೋಷಿಸಿದ ಬೆನ್ನಲ್ಲೇ ಸ್ನೇಹಿತರೊಂದಿಗೆ ಸೇರಿ ಅತ್ಯಂತ ಉತ್ಸಾಹದಿಂದ ನೃತ್ಯ ಮಾಡಿದ್ದಾರೆ. ಈ ಹಿಂದೆ ಶ್ರೇಯಸ್ ಅವರನ್ನು ಟಿ20 ತಂಡದಿಂದ ಕೈಬಿಟ್ಟಾಗ ಅವರ ತಂದೆ ತೀವ್ರ ಬೇಸರ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದರು.

ಇದೀಗ ಭಾರತ ಟಿ20 ತಂಡಕ್ಕೆ ನಾಯಕನಾಗಿ ಶ್ರೇಯಸ್ ಅಯ್ಯರ್ ಕಂಬ್ಯಾಕ್ ಮಾಡಿದ್ದಾರೆ.  ಬಿಸಿಸಿಐ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲೇ ಅಯ್ಯರ್ ಕುಟುಂಬದ ಈ ಅಪೂರ್ವ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದೆ.

ಅಂದಹಾಗೆ ಶ್ರೇಯಸ್ ಅಯ್ಯರ್ ಐರ್ಲೆಂಡ್ ವಿರುದ್ಧದ ಸರಣಿಯ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಜೂನ್ 26 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ ಎರಡು ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ 5 ಮ್ಯಾಚ್​ಗಳ ಟಿ20 ಸರಣಿ ನಡೆಯಲಿದೆ.

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್. ಸಿರಾಜ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ.

Source link

ಕೊಟ್ಟಿಯೂರು ದೇವಾಲಯದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ: ತಾರತಮ್ಯದ ಬಗ್ಗೆಯೂ ಭಕ್ತರ ಅಸಮಾಧಾನ – Kannada News

ತಿರುವನಂತಪುರಂ, ಜೂನ್​​ 09: ಕೇರಳದ ಸುಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ಕರ್ನಾಟಕದ ಭಕ್ತರು ಗಂಭೀರ ಆರೋಪ ಮಾಡಿದ್ದಾರೆ. ದೇವಸ್ಥಾನದಲ್ಲಿ ಅನ್ನದಾನಕ್ಕೆ 1,000 ರೂಪಾಯಿ ಟಿಕೆಟ್ ಪಡೆದಿದ್ದರೂ, ಭಕ್ತರನ್ನು ಸುಮಾರು 30-40 ನಿಮಿಷಗಳ ಕಾಲ ಕ್ಯೂನಲ್ಲಿ ನಿಲ್ಲಿಸಲಾಗಿತ್ತು. ಆದರೆ, ಸ್ಥಳೀಯರಿಗೆ ಮತ್ತು ತಮ್ಮ ಭಾಷೆಯವರಿಗೆ ಹಿಂಬಾಗಿಲಿನಿಂದ ಅಥವಾ ಮಧ್ಯಪ್ರವೇಶಿಸಿ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಭಕ್ತರು ದೂರಿದ್ದಾರೆ. ಈ ತಾರತಮ್ಯವನ್ನು ಪ್ರಶ್ನಿಸಲು ಮತ್ತು ವಿಡಿಯೋ ಮಾಡಲು ಮುಂದಾದಾಗ, ದೇವಸ್ಥಾನದ ಸಿಬ್ಬಂದಿ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿ ದೌರ್ಜನ್ಯ ಮಾಡಿದ್ದಾರೆ. ಕ್ಯೂ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಎದುರಾಗಿದ್ದು, ಭಕ್ತರೊಂದಿಗೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ. ಕರ್ನಾಟಕದಿಂದ ತೆರಳಿದ್ದ ಶೇ.50-60ರಷ್ಟು ಜನರಿಗೆ ದರ್ಶನವೇ ಆಗಿಲ್ಲ. ಹೀಗಾಗಿ ನಿರಾಸೆಯಿಂದ ಹಿಂದಿರುಗಿದ್ದಾರೆ ಎಂದು ಭಕ್ತ ಪವನ್ ವಿವರಿಸಿದ್ದಾರೆ. ದೇವರು, ದೇವಸ್ಥಾನದ ಬಗ್ಗೆ ನಮಗೆ ಯಾವುದೇ ನೆಗೆಟಿವ್ ಭಾವನೆ ಇಲ್ಲ. ಆದರೆ ಕ್ಯೂ ನಿರ್ವಹಣೆಯ ವೈಫಲ್ಯ ಮತ್ತು ದೌರ್ಜನ್ಯದ ವಿರುದ್ಧ ನಮ್ಮ ಆಕ್ಷೇಪವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ DL, ವಾಹನ ನಿಯಮ: ಪರವಾನಗಿ ಅವಧಿ ವಿಸ್ತರಣೆ, ಆನ್​ಲೈನ್​ನಲ್ಲೇ ವಾಹನ ಮಾಲಕತ್ವ ವರ್ಗಾವಣೆ – Kannada News

ಆಟೊರಿಕ್ಷಾ ಚಾಲಕನ ಸಾಂದರ್ಭಿಕ ಚಿತ್ರImage Credit source: triloks/E+/Getty Images

ನವದೆಹಲಿ, ಜೂನ್ 9: ಚಾಲನಾ ಪರವಾನಗಿ (Driving Licence) ಮತ್ತು ವಾಹನಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಕೇಂದ್ರ ಸರ್ಕಾರವು ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಲು ಚಿಂತನೆ ನಡೆಸಿದೆ. ಪ್ರಸ್ತುತ ಚಾಲನಾ ಪರವಾನಗಿಯು ಸಾಮಾನ್ಯವಾಗಿ 20 ವರ್ಷಗಳವರೆಗೆ ಸಿಂಧುವಾಗಿರುತ್ತದೆ. ಇದನ್ನು ಬದಲಾಯಿಸಿ, ಪರವಾನಗಿ ಹೊಂದಿರುವವರಿಗೆ 50 ವರ್ಷ ವಯಸ್ಸಾಗುವವರೆಗೆ ಅದರ ಸಿಂಧುತ್ವವನ್ನು (Validity) ವಿಸ್ತರಿಸುವ ಪ್ರಸ್ತಾವನೆಯನ್ನು ರಸ್ತೆ ಸಾರಿಗೆ ಸಚಿವಾಲಯವು ಪರಿಶೀಲಿಸುತ್ತಿದೆ. ಹಾಗೆಯೇ, ವಾಹನಗಳ ಮಾಲೀಕತ್ವ ವರ್ಗಾವಣೆ (Vehicle Ownership transfer) ಮತ್ತು ಪರ್ಮಿಟ್ ನವೀಕರಣದಂತಹ (Permit renewal) ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ನಿರ್ವಹಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.

ಈ ಬದಲಾವಣೆಗಳ ಹಿಂದಿರುವ ಉದ್ದೇಶ

ನಾಗರಿಕರು ಪದೇ ಪದೇ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಅಲೆದಾಡುವುದನ್ನು ತಪ್ಪಿಸುವುದು ಮತ್ತು ಆಡಳಿತಾತ್ಮಕ ಕೆಲಸಗಳನ್ನು ಸರಳಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದರಿಂದ ಜನಸಾಮಾನ್ಯರಿಗೆ ಮತ್ತು ಸಾರಿಗೆ ಇಲಾಖೆಗೆ ಸಮಯ ಮತ್ತು ಶ್ರಮ ಉಳಿಯಲಿದೆ. ಸರ್ಕಾರವು ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಸುಲಭ ಮತ್ತು ವೇಗಗೊಳಿಸಲೂ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇದನ್ನೂ ಓದಿ: ನಿಜವಾದ ಶ್ರೀಮಂತಿಕೆ ಲಕ್ಷುರಿ ಕಾರು, ಬಂಗಲೆಗಳಲ್ಲ; ಏನೆಲ್ಲಾ ಅಂಶಗಳಲ್ಲಿ ನೀವು ಪಾಸಾಗಬೇಕು?

ಈ ಬದಲಾವಣೆಗಳಿಂದ ರಾಜ್ಯ ಸರ್ಕಾರಗಳಿಗೆ ಯಾವುದೇ ಆದಾಯದ ನಷ್ಟ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಾಲನಾ ಪರವಾನಗಿ ಪಡೆಯಲು ಅಥವಾ ನವೀಕರಿಸಲು ಪಾವತಿಸಬೇಕಾದ ಶುಲ್ಕವನ್ನು ಆನ್‌ಲೈನ್ ವ್ಯವಸ್ಥೆಯ ಮೂಲಕವೇ ಸಂಗ್ರಹಿಸುವುದನ್ನು ಮುಂದುವರಿಸಬಹುದು.

ಸದ್ಯ ಇರುವ ಡ್ರೈವಿಂಗ್ ಲೈಸೆನ್ಸ್ ನಿಯಮಗಳೇನು?

ಖಾಯಂ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಈಗಿರುವ ನಿಯಮಗಳ ಪ್ರಕಾರ, ಖಾಸಗಿ ವಾಹನಗಳಿಗೆ ಡಿಎಲ್ 20 ವರ್ಷಗಳವರೆಗೆ ಮಾನ್ಯವಿರುತ್ತದೆ. ಲೈಸೆನ್ಸ್​ದಾರರ ವಯಸ್ಸು 40 ವರ್ಷ ದಾಟಿದ ಬಳಿಕ ನವೀಕರಣ ಮಾಡಬೇಕಾಗುತ್ತದೆ.

40 ವರ್ಷ ವಯಸ್ಸು ದಾಟಿದ ಬಳಿಕ ಪಡೆಯಲಾಗುವ ಡಿಎಲ್​ನ ಸಿಂಧುತ್ವ 10 ವರ್ಷ ಇರುತ್ತದೆ. ಆ ಬಳಿಕ ಪ್ರತೀ ಐದು ವರ್ಷಕ್ಕೆ ನವೀಕರಣ ಮಾಡಿಸಬೇಕಾಗುತ್ತದೆ. ಕಮರ್ಷಿಯಲ್ ವಾಹನಗಳಾದರೆ ಡಿಎಲ್ ಮಾನ್ಯತೆ 3 ವರ್ಷ ಮಾತ್ರವೇ ಇರುತ್ತದೆ. ಆ ನಂತರ ನವೀಕರಿಸುತ್ತಿರಬೇಕಾಗುತ್ತದೆ.

ಇದನ್ನೂ ಓದಿ: ಎಐ ಅಬ್ಬರದಲ್ಲಿ ಮುಂದೋಡಿದ್ದ ದೇಶಗಳಿಗೆ ಅದೇ ಎಐ ಹೊಡೆತ; ಭಾರತದಕ್ಕಿಂತ ಕೆಳಗೆ ಕುಸಿದ ತೈವಾನ್, ಕೊರಿಯನ್ ಮಾರುಕಟ್ಟೆ

ಒಟ್ಟಾರೆಯಾಗಿ, ಡಿಜಿಟಲೀಕರಣದ ಮೂಲಕ ವಾಹನ ಸವಾರರಿಗೆ ಇರುವ ಕಾಗದಪತ್ರಗಳ ಕಿರಿಕಿರಿ ಮತ್ತು RTO ಕಚೇರಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ಈ ಯೋಜನೆಯ ಗುರಿಯಾಗಿದೆ. ಹಾಗೆಯೇ, ಆರ್​ಟಿಒ ಕಚೇರಿಯೊಳಗೆ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದಾಗುವ ಲಂಚಬಾಕತನದ ಪ್ರಕರಣಗಳಿಗೂ ಕಡಿವಾಣ ಬೀಳಬಹುದು. ಸಚಿವಾಲಯವು ಈ ಬಗ್ಗೆ ವಿವರವಾಗಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಈ ಬದಲಾವಣೆಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link