Category Archives: Blog

Your blog category

ಪೊಲೀಸರ ಸಮಯಪ್ರಜ್ಞೆಯಿಂದ ಬೆಂಗಳೂರಿನಲ್ಲಿ ತಪ್ಪಿದ ಭಾರೀ ದೊಡ್ಡ ದುರಂತ – Kannada News | Akshayanagar Explosives: Bengaluru Police Action Foils Illegal Blasting Operation

ಹುಳಿಮಾವು ಪ್ರದೇಶದಲ್ಲಿ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟ

ಬೆಂಗಳೂರು, ಫೆ.3: ಬೆಂಗಳೂರಿನಲ್ಲಿ ಅನುಮಾನಸ್ಪದ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಈ ಬಗ್ಗೆ ನಗರದಲ್ಲಿ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಷಯನಗರದಲ್ಲಿ ಈ ಘಟನೆ ನಡೆದಿದೆ. ಚಂದ್ರು ಎಂಬುವವರ ಮಾಲೀಕತ್ವದ 100×100 ಅಳತೆಯ ಸೈಟ್‌ನಲ್ಲಿ ಬಂಡೆ ಒಡೆಯಲು ಅನುಮತಿ ಇಲ್ಲದೆ ಜಿಲೆಟಿನ್ ಕಡ್ಡಿಗಳನ್ನು (Bengaluru explosives seizure) ಬಳಸಲಾಗುತ್ತಿತ್ತು. ಮಧ್ಯಾಹ್ನ 10:30 ರಿಂದ 2 ಗಂಟೆಯ ಅವಧಿಯಲ್ಲಿ ಜನನಿಬಿಡ ಪ್ರದೇಶದಲ್ಲೇ ಈ ಸ್ಫೋಟ ನಡೆಸಲಾಗುತ್ತಿತ್ತು. ವಿಷಯ ತಿಳಿದ ತಕ್ಷಣ ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳದಿಂದ 15 ಜಿಲೆಟಿನ್ ಕಡ್ಡಿಗಳು ಮತ್ತು 30 ಡಿಟೋನೇಟರ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಘಟನಾ ಸ್ಥಳದಲ್ಲಿದ್ದ ಒಂದು ಟ್ರ್ಯಾಕ್ಟರ್ ಮತ್ತು ಜೆಸಿಬಿಯನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರೆಲ್ಲರೂ ಪರಾರಿಯಾಗಿದ್ದಾರೆ. ಹುಳಿಮಾವು ಪೊಲೀಸರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ.

ಇದನ್ನೂ ಓದಿ: ಕಟ್ಟಡ ಮಾಲೀಕರಿಗೆ ಬಿಗ್​​ ಶಾಕ್ ನೀಡಿದ GBA: 437 ಕೋಟಿ ರೂ. ತೆರಿಗೆ ಬಾಕಿ

ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಬಾಂಬ್ ಸ್ಕ್ವಾಡ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸೈಟ್ ಮಾಲೀಕ ಚಂದ್ರು ಎಂಬುವವರ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರವಾಗಿ ಸ್ಫೋಟಕಗಳನ್ನು ಸಂಗ್ರಹಿಸಿ ಬಳಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಜನನಿಬಿಡ ಪ್ರದೇಶದಲ್ಲಿ ಯಾವುದೇ ಮುನ್ನೆಚ್ಚರಿಕೆ ಹಾಗೂ ಪರವಾನಗಿ ಇಲ್ಲದೆ ಅಪಾಯಕಾರಿ ಸ್ಫೋಟಕಗಳನ್ನು ಬಳಸಿದ್ದಕ್ಕಾಗಿ ಸೈಟ್ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಬಾಂಬ್ ಸ್ಕ್ವಾಡ್ ಪರಿಶೀಲನೆಯ ನಂತರ ಸ್ಫೋಟಕಗಳ ಮೂಲದ ಬಗ್ಗೆ ವರದಿ ಸಲ್ಲಿಕೆಯಾಗಲಿದ್ದು, ಅದರ ಆಧಾರದ ಮೇಲೆ ನ್ಯಾಯಾಲಯದ ವಿಚಾರಣೆ ಮುಂದುವರಿಯಲಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಶ್ರೀಲಂಕಾ ವಿರುದ್ಧ ಗೆದ್ದ ಓಮನ್ – Kannada News | Oman Delivers Shock Upset in 2026 T20 World Cup Warm up vs Sri Lanka A

2026 ರ ಟಿ20 ವಿಶ್ವಕಪ್ (T20 World Cup 2026) ಆರಂಭಕ್ಕೆ ನಾಲ್ಕೈದು ದಿನ ಬಾಕಿ ಇದೆ. ಇದೇ ಫೆಬ್ರವರಿ 7 ರಿಂದ ಈ ಮಿನಿ ವಿಶ್ವಸಮರಕ್ಕೆ ಚಾಲನೆ ಸಿಗಲಿದೆ. ಆದರೆ ಅದಕ್ಕೂ ಮುನ್ನ ಎಲ್ಲಾ ತಂಡಗಳು ಅಭ್ಯಾಸ ಪಂದ್ಯಗಳನ್ನು ಆಡುತ್ತಿವೆ. ಅದರಂತೆ ಇಂದು ನಡೆದ ಶ್ರೀಲಂಕಾ (Oman vs Sri Lanka) ಹಾಗೂ ಓಮನ್ ನಡುವಿನ ಅಭ್ಯಾಸ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಕ್ರಿಕೆಟ್ ಲೋಕದ ಶಿಶು ಎನಿಸಿಕೊಂಡಿರುವ ಓಮನ್, ಅನುಭವಿ ಶ್ರೀಲಂಕಾ ತಂಡವನ್ನು ಮಣಿಸಿ ಟಿ20 ವಿಶ್ವಕಪ್​ನ ರಂಗು ಹೆಚ್ಚಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 145 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಓಮನ್ ತಂಡ 5 ವಿಕೆಟ್​ಗಳ ಗೆಲುವು ದಾಖಲಿಸಿದೆ.

​ಭಾರತದೊಂದಿಗೆ ಟಿ20 ವಿಶ್ವಕಪ್ ಅನ್ನು ಜಂಟಿಯಾಗಿ ಆಯೋಜಿಸುತ್ತಿರುವ ಶ್ರೀಲಂಕಾ, ಮೊದಲ ಅಭ್ಯಾಸ ಪಂದ್ಯಕ್ಕೆ ತನ್ನ ಎ ತಂಡವನ್ನು ಕಣಕ್ಕಿಳಿಸಿತು. ಶ್ರೀಲಂಕಾಕ್ಕೂ ಮೊದಲು ಭಾರತ ಕೂಡ ಅಮೆರಿಕ ವಿರುದ್ಧದ ಮೊದಲ ಅಭ್ಯಾಸ ಪಂದ್ಯಕ್ಕೆ ಎ ತಂಡವನ್ನು ಕಣಕ್ಕಿಳಿಸಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ, ಈ ಪಂದ್ಯದಲ್ಲಿ ಶ್ರೀಲಂಕಾ ಸೋಲುಂಡಿದೆ.

145 ರನ್‌ ಕಲೆಹಾಕಿದ ಲಂಕಾ

ಶ್ರೀಲಂಕಾ ಎ ತಂಡದಲ್ಲಿ ಕೇವಲ ಇಬ್ಬರು ಆಟಗಾರರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ವಲ್ಪ ಅನುಭವವಿದ್ದರೂ, ಅವರಲ್ಲಿ ಹೆಚ್ಚಿನವರು ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ಶ್ರೀಲಂಕಾ ಎ ಪರ ವ್ಯಾಪಕವಾಗಿ ಆಡಿದ್ದರು. ಆದ್ದರಿಂದ, ಸೀಮಿತ ಸೌಲಭ್ಯಗಳನ್ನು ಹೊಂದಿರುವ ಓಮನಂತಹ ತಂಡದ ವಿರುದ್ಧ ಲಂಕಾ ತಂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು. ಆದರೆ ಅದು ಸಂಭವಿಸಲಿಲ್ಲ. ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ, ಶ್ರೀಲಂಕಾ ಎ ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 145 ರನ್‌ ಕಲೆಹಾಕಿತು. ತಂಡದ ಪರ ವನುಜಾ ಸಹನ್ ಅತಿ ಹೆಚ್ಚು 29 ರನ್​ಗಳ ಇನ್ನಿಂಗ್ಸ್ ಆಡಿದರೆ, ಓಮನ್ ಪರ ಶಾ ಫೈಸಲ್ ಮತ್ತು ಜೇ ಒಡೆದ್ರಾ ತಲಾ 2 ವಿಕೆಟ್‌ಗಳನ್ನು ಪಡೆದರು.

44 ವರ್ಷದ ಕಲೀಮ್ ಅದ್ಭುತ ಸಾಧನೆ

ಈ ಗುರಿ ಬೆನ್ನಟ್ಟಿದ ಓಮನ್ ಕೇವಲ 18 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಈ ಗುರಿಯನ್ನು ತಲುಪುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿತು. ಓಮನ್ ಗೆಲುವಿನಲ್ಲಿ ಆಮಿರ್ ಕಲೀಮ್ ಮತ್ತು ವಿನಾಯಕ್ ಶುಕ್ಲಾ ಪ್ರಮುಖ ಪಾತ್ರವಹಿಸಿದರು. 44 ವರ್ಷದ ಆರಂಭಿಕ ಆಟಗಾರ ಆಮಿರ್ ಕಲೀಮ್ ಕೇವಲ 47 ಎಸೆತಗಳಲ್ಲಿ 80 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು, ಇದರಲ್ಲಿ 8 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳು ಸೇರಿದ್ದವು. ಕಲೀಮ್ ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ತಂಡವು ಕೇವಲ 14 ಓವರ್‌ಗಳಲ್ಲಿ 110 ರನ್​ಗಳ ಗಡಿ ದಾಟಿತು. ಇತ್ತ ವಿನಾಯಕ್ ಶುಕ್ಲಾ ಕೂಡ 24 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಇಂತಹ ಮಕ್ಕಳನ್ನು ಪಡೆದ ಪೋಷಕರೇ ನಿಜವಾದ ಅದೃಷ್ಟವಂತರು ಎನ್ನುತ್ತಾರೆ ಚಾಣಕ್ಯ – Kannada News | Chanakya Niti: Children with these qualities increase the respect of their parents in society

ಪ್ರತಿಯೊಬ್ಬ ಪೋಷಕರು (parents) ತಮ್ಮ ಮಕ್ಕಳು ಉತ್ತಮ ಗುಣವನ್ನು ಹೊಂದಿರಬೇಕು, ಕೊನೆಗಾಲದಲ್ಲಿ ಆಸರೆಯಾಗಿ ನಿಲ್ಲಬೇಕು ಎಂದು ಬಯಸುತ್ತಾರೆ. ಆದರೆ ಕೆಲ ಮಕ್ಕಳು ಕೊನೆಗಾಲದಲ್ಲಿ ತಂದೆತಾಯಿಗೆ ಆಸರೆಯಾಗಿರದೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ, ಪೋಷಕರಿಗೆ ನೋವಾಗುವಂತೆ ನಡೆದುಕೊಳ್ಳುತ್ತಾರೆ. ಇಂತಹ ಮಧ್ಯೆ ಈ ಕೆಲವೊಂದು ಸದ್ಗುಣಗಳನ್ನು ಮೈಗೂಡಿಸಿಕೊಂಡಿರುವ ಮಕ್ಕಳ ಪೋಷಕರೇ ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರು ಎಂದಿದ್ದಾರೆ ಆಚಾರ್ಯ ಚಾಣಕ್ಯರು. ಇಂತಹ ಮಕ್ಕಳನ್ನು ಹೊಂದಿರುವ ಪೋಷಕರು ಗೌರವ, ಸಂತೋಷ ಮತ್ತು ತೃಪ್ತಿಯಿಂದ ಬದುಕುತ್ತಾರಂತೆ. ಹಾಗಿದ್ರೆ ಆ ಗುಣಗಳು ಯಾವುವು ಎಂಬುದನ್ನು ನೋಡೋಣ.

ಈ ಗುಣಗಳಿರುವ ಮಕ್ಕಳನ್ನು ಹೊಂದಿರುವ ಪೋಷಕರು ಅದೃಷ್ಟವಂತರು:

ವಿಧೇಯ ಮತ್ತು ಸಭ್ಯ ಸ್ವಭಾವ: ಚಾಣಕ್ಯ ನೀತಿಯ ಪ್ರಕಾರ, ವಿಧೇಯ ಮಕ್ಕಳು ಪೋಷಕರಿಗೆ ಬಹು ದೊಡ್ಡ ಆಸ್ತಿ ಇದ್ದಂತೆ. ಹಿರಿಯರ ಮಾತನ್ನು ಕೇಳುವ, ನಿಯಮಗಳನ್ನು ಪಾಲಿಸುವ ಮತ್ತು ತಮ್ಮ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮಕ್ಕಳನ್ನು ಸಮಾಜವು ಗೌರವಿಸುತ್ತದೆ. ಅಂತಹ ಮಕ್ಕಳು ತಮ್ಮ ಸ್ವಂತ ಮನೆಯನ್ನು ಮಾತ್ರವಲ್ಲದೆ ಇಡೀ ಕುಟುಂಬ ಮತ್ತು ಕುಲದ ಪ್ರತಿಷ್ಠೆಯನ್ನು ಹೆಚ್ಚಿಸುತ್ತಾರೆ.

ಸರಿ ಮತ್ತು ತಪ್ಪುಗಳ ತಿಳುವಳಿಕೆ: ಒಳ್ಳೆಯ ಮಕ್ಕಳ ಲಕ್ಷಣವೆಂದರೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸುವ ಸಾಮರ್ಥ್ಯ. ಚಾಣಕ್ಯರು ಹೇಳುವಂತೆ ವಿವೇಚನಾಶೀಲ ವ್ಯಕ್ತಿ ಮಾತ್ರ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಚಿಂತನಶೀಲ ಹೆಜ್ಜೆಗಳನ್ನು ಇಡುವ ಮಕ್ಕಳು ಕಷ್ಟದ ಸಮಯದಲ್ಲೂ ತಮ್ಮ ಕುಟುಂಬಕ್ಕೆ ಬೆಂಬಲವಾಗುತ್ತಾರೆ. ಈ ಗುಣವು ಮಕ್ಕಳನ್ನು ಸ್ವಾವಲಂಬಿ ಮತ್ತು ಜವಾಬ್ದಾರಿಯುತವಾಗಿಸುತ್ತದೆ.

ಜ್ಞಾನ ಮತ್ತು ಶ್ರದ್ಧೆಗೆ ಗೌರವ: ಶಿಕ್ಷಣ, ಅನುಭವ ಮತ್ತು ಕಲಿಕೆಯನ್ನು ಗಂಭೀರವಾಗಿ ಪರಿಗಣಿಸುವ ಮಕ್ಕಳು ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಜ್ಞಾನವನ್ನು ಪಡೆಯಲು ಸದಾ ಉತ್ಸುಕರಾಗಿರುವ ಮಕ್ಕಳಿಗೆ  ಸರಸ್ವತಿ ಮತ್ತು ಲಕ್ಷ್ಮಿ ದೇವಿ ಆಶೀರ್ವಾದ ಸದಾ ಇರುತ್ತದೆ.  ಇವರು ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ, ಕುಟುಂಬಕ್ಕೆ ಕೀರ್ತಿ ತರುತ್ತಾರೆ. ಶಿಕ್ಷಣ ಮಾತ್ರವಲ್ಲ, ಲೋಕ ಜ್ಞಾನ, ಕಠಿಣ ಮಕ್ಕಳು ಸಹ ತಮ್ಮ ಪ್ರಯತ್ನಗಳ ಮೂಲಕ ಯಶಸ್ಸನ್ನು ಸಾಧಿಸುತ್ತಾರೆ ಮತ್ತು ಅವರ ಹೆತ್ತವರಿಗೆ ಹೆಮ್ಮೆ ತರುತ್ತಾರೆ.

ಇದನ್ನೂ ಓದಿ: ಸ್ನೇಹಿತರು, ಸಂಬಂಧಿಕರಿಗೆ ಹಣ ಸಾಲ ನೀಡುವ ಮುನ್ನ ನೀವು ಪ್ರಶ್ನೆಗಳನ್ನು ಕೇಳಲೇಬೇಕು

 ಗುರಿಗಳು ಮತ್ತು ಉನ್ನತ ವಿಚಾರಗಳು: ಚಾಣಕ್ಯನ ಪ್ರಕಾರ, ಉನ್ನತ ಆದರ್ಶಗಳನ್ನು ಹೊಂದಿರುವ ಮತ್ತು ಜೀವನದಲ್ಲಿ ಗುರಿಯನ್ನು ಹೊಂದಿಸುವ ಮಕ್ಕಳು ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತಾರೆ. ಗುರಿಗಳನ್ನು ಅನುಸರಿಸುವ ಮಕ್ಕಳು ಶಿಸ್ತು ಮತ್ತು ತಾಳ್ಮೆಯನ್ನು ಕಲಿಯುತ್ತಾರೆ. ಹೀಗೆ ಮಕ್ಕಳು ಜೀವನದಲ್ಲಿ ಏನನ್ನಾದರೂ ಸಾಧಿಸಿದಾಗ, ಪೋಷಕರು ಸಮಾಜದಲ್ಲಿ ಗೌರವವನ್ನು ಪಡೆಯುತ್ತಾರೆ.

ಹೀಗೆ ಸದ್ಗುಣಶೀಲ ಮಕ್ಕಳು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸುವುದರ ಜೊತೆಗೆ ತಮ್ಮ ಪೋಷಕರ ಜೀವನವನ್ನೂ ಅರ್ಥಪೂರ್ಣವಾಗಿಸುತ್ತಾರೆ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಯುಮ್ನಮ್ ಖೇಮ್ಚಂದ್ ಸಿಂಗ್ ಆಯ್ಕೆ – Kannada News | BJP Leader Yumnam Khemchand Singh to be next Manipur Chief Minister

ಮಣಿಪುರ, ಫೆಬ್ರವರಿ 3: ಸುಮಾರು 1 ವರ್ಷದಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಮಣಿಪುರದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಬಿಜೆಪಿ (BJP) ಪಕ್ಷ ಆಯ್ಕೆ ಮಾಡಿದೆ. ಮಣಿಪುರದಲ್ಲಿ ನಡೆದ ದೀರ್ಘಕಾಲದ ಜನಾಂಗೀಯ ಹಿಂಸಾಚಾರದ ನಡುವೆ 2025ರ ಫೆಬ್ರವರಿ 9ರಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ಅಂದಿನಿಂದ ಈ ಹುದ್ದೆ ಖಾಲಿಯಾಗಿತ್ತು. ಅದಾದ ಕೆಲವೇ ದಿನಗಳ ನಂತರ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಯುಮ್ನಮ್ ಖೇಮ್ಚಂದ್ ಸಿಂಗ್ ಅವರು ಈಶಾನ್ಯ ರಾಜ್ಯದಲ್ಲಿ ಬಿಜೆಪಿಯ 2ನೇ ಮುಖ್ಯಮಂತ್ರಿಯಾಗಲಿದ್ದಾರೆ.

ಬಿಜೆಪಿ ಶಾಸಕರ ಗುಂಪೊಂದು ದೆಹಲಿಗೆ ಬಂದು ಮಣಿಪುರದಲ್ಲಿ ಸರ್ಕಾರ ರಚನೆ ಕುರಿತು ಅಮಿತ್ ಶಾ ಸೇರಿದಂತೆ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ವ್ಯಾಪಕ ಮಾತುಕತೆ ನಡೆಸಿತು. ನಂತರ ಶಾಸಕರು ಸಿಂಗ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದರು. ನವದೆಹಲಿಯಲ್ಲಿ ನಡೆದ ಸಭೆಯ ನಂತರ ಮಣಿಪುರದ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಯುಮ್ನಮ್ ಖೇಮ್ಚಂದ್ ಸಿಂಗ್ ಅವರ ಹೆಸರನ್ನು ಘೋಷಿಸಲಾಯಿತು. ಖೇಮ್ಚಂದ್ ಸಿಂಗ್ 2 ಬಾರಿ ಶಾಸಕರಾಗಿದ್ದಾರೆ. ಅವರು 2017ರಲ್ಲಿ ಮತ್ತು ನಂತರ 2022ರಲ್ಲಿ ಸಿಂಗ್ಜಮೈ ವಿಧಾನಸಭಾ ಸ್ಥಾನದಿಂದ ಸತತ ಎರಡು ಅವಧಿಗೆ ಆಯ್ಕೆಯಾಗಿದ್ದರು.

ಇದನ್ನೂ ಓದಿ: ಮಣಿಪುರದ ಕುಗ್ರಾಮದ ಹೆಣ್ಣು ಈಗ ಪ್ರಧಾನಿ ಮೋದಿಯ ಅಂಗರಕ್ಷಕಿ! ಇವರೇ ಮೊದಲ ಮಹಿಳಾ ಎಸ್​​ಪಿಜಿ ಕಮಾಂಡೋ

2017ರ ಮಾರ್ಚ್ ತಿಂಗಳಲ್ಲಿ ಮಣಿಪುರ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದಾಗ ಅವರು ಜನಪ್ರಿಯತೆ ಗಳಿಸಿದರು. ಅವರು ಪೂರ್ಣ 5 ವರ್ಷಗಳ ಅವಧಿಗೆ ಆ ಹುದ್ದೆಯನ್ನು ಅಲಂಕರಿಸಿದರು. 2022ರ ವಿಧಾನಸಭಾ ಚುನಾವಣೆಯ ನಂತರ, ಖೇಮ್ಚಂದ್ ಸಿಂಗ್ ಅವರನ್ನು ಎರಡನೇ ಬಾರಿಗೆ ಬಿರೇನ್ ಸಿಂಗ್ ಸಂಪುಟಕ್ಕೆ ಸಚಿವರನ್ನಾಗಿ ಸೇರಿಸಲಾಯಿತು. ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್, ಪುರಸಭೆ ಆಡಳಿತ, ವಸತಿ ಅಭಿವೃದ್ಧಿ ಮತ್ತು ಶಿಕ್ಷಣ ಸೇರಿದಂತೆ ಹಲವಾರು ಖಾತೆಗಳನ್ನು ವಹಿಸಲಾಯಿತು. ರಾಷ್ಟ್ರಪತಿ ಆಳ್ವಿಕೆ ಹೇರುವವರೆಗೂ ಖೇಮ್ಚಂದ್ ಸಿಂಗ್ ಸಚಿವರಾಗಿ ಸೇವೆ ಸಲ್ಲಿಸುತ್ತಲೇ ಇದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WPL 2026: ಎಲಿಮಿನೇಟರ್​ನಲ್ಲಿ ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ – Kannada News | Gujarat Giants vs Delhi Capitals: WPL 2026 Eliminator Clash toss and playing 11 updates

ಮಹಿಳಾ ಪ್ರೀಮಿಯರ್ ಲೀಗ್ 2026 ( Women’s Premier League) ರ ಎಲಿಮಿನೇಟರ್ ಪಂದ್ಯವು ಗುಜರಾತ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Gujarat Giants vs Delhi Capitals) ನಡುವೆ ನಡೆಯುತ್ತಿದೆ. ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಗುಜರಾತ್ ಈ ಸುತ್ತಿಗೆ ಅರ್ಹತೆ ಪಡೆದಿದ್ದರೆ, ಇತ್ತ ಡೆಲ್ಲಿ ಯುಪಿ ವಾರಿಯರ್ಸ್‌ ತಂಡವನ್ನು ಸೋಲಿಸುವ ಮೂಲಕ ಎಲಿಮಿನೇಟರ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಈಗಾಗಲೇ ಫೈನಲ್ ತಲುಪಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡವು ಎರಡನೇ ತಂಡವಾಗಿ ಫೈನಲ್​ಗೆ ಎಂಟ್ರಿಕೊಡಲಿದ್ದು, ಫೈನಲ್​ನಲ್ಲಿ ಆರ್​ಸಿಬಿ ತಂಡವನ್ನು ಎದುರಿಸಲಿದೆ.

ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ

ಲೀಗ್ ಹಂತದಲ್ಲಿ ಎಂಟು ಪಂದ್ಯಗಳನ್ನು ಆಡಿದ್ದ ಗುಜರಾತ್ ತಂಡ ಐದು ಪಂದ್ಯಗಳನ್ನು ಗೆದ್ದು, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದೆ. ಇತ್ತ ದೆಹಲಿ ತಂಡವು ತನ್ನ ಎಂಟು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು, ಈಗ ನಾಕೌಟ್ ಹಂತದಲ್ಲಿ ಗುಜರಾತ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ನಡೆದಿದ್ದು ಟಾಸ್ ಗೆದ್ದ ಡೆಲ್ಲಿ ಮೊದಲು ಬೌಲಿಂಗ್ ಆಯ್ದುಕೊಂಡಿದೆ.

ಉಭಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್: ಲಿಜೆಲ್ ಲೀ (ವಿಕೆಟ್ ಕೀಪರ್), ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್ಟ್, ಜೆಮಿಮಾ ರಾಡ್ರಿಗಸ್ (ನಾಯಕಿ), ಮರಿಜಾನ್ನೆ ಕಪ್, ಚಿನೆಲ್ಲೆ ಹೆನ್ರಿ, ನಿಕಿ ಪ್ರಸಾದ್, ಸ್ನೇಹ ರಾಣಾ, ಮಿನು ಮಣಿ, ಶ್ರೀ ಚರಣಿ, ನಂದನಿ ಶರ್ಮಾ.

ಗುಜರಾತ್ ಜೈಂಟ್ಸ್: ಬೆತ್ ಮೂನಿ (ವಿಕೆಟ್ ಕೀಪರ್), ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಆಶ್ಲೀಗ್ ಗಾರ್ಡ್ನರ್ (ನಾಯಕಿ), ಜಾರ್ಜಿಯಾ ವೇರ್ಹಮ್, ಭಾರತಿ ಫುಲ್ಮಾಲಿ, ಕನಿಕಾ ಅಹುಜಾ, ಕಶ್ವಿ ಗೌತಮ್, ತನುಜಾ ಕನ್ವರ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಾಯಕ್ವಾಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:13 pm, Tue, 3 February 26

Source link

ಕಟ್ಟಡ ಮಾಲೀಕರಿಗೆ ಬಿಗ್​​ ಶಾಕ್ ನೀಡಿದ GBA: 437 ಕೋಟಿ ರೂ. ತೆರಿಗೆ ಬಾಕಿ – Kannada News | Bengaluru Property Tax Deadline: Pay by Feb 17 or Face Auction

ಗ್ರೇಟರ್ ಬೆಂಗಳೂರು ಪ್ರಾಧಿಕಾರ Image Credit source: Google

ಬೆಂಗಳೂರು, ಫೆ.3: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಬಿಗ್​​ ಶಾಕ್ ನೀಡಿದೆ. GBA ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರಿಗೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಜಿಬಿಎ ವ್ಯಾಪ್ತಿಯ 5 ನಗರಪಾಲಿಕೆಗಳಲ್ಲಿ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಈಗಾಗಲೇ ಎಚ್ಚರಿಕೆ ನೋಟಿಸ್ ನೀಡಲಾಗಿದೆ. ಒಟ್ಟು 7,020 ಆಸ್ತಿ ಮಾಲೀಕರಿಂದ ಸುಮಾರು 437 ಕೋಟಿ ರೂ.ಗಳಿಗಿಂತ ಹೆಚ್ಚಿನ ತೆರಿಗೆ ಹಣ ಬರಬೇಕಿದೆ.

ತೆರಿಗೆ ಪಾವತಿಸದ 7,020 ಮಾಲೀಕರ ಆಸ್ತಿಗಳನ್ನು ಹರಾಜು ಮಾಡಲು ತೀರ್ಮಾನಿಸಲಾಗಿದೆ. ಬಾಕಿ ತೆರಿಗೆ ಪಾವತಿಸಲು ಫೆಬ್ರವರಿ 17 ಕೊನೆಯ ದಿನವಾಗಿದೆ. ನಿಗದಿತ ಸಮಯದೊಳಗೆ ತೆರಿಗೆ ಪಾವತಿಸದಿದ್ದರೆ, ಜಿಬಿಎ ಕಾಯ್ದೆಯ ಪ್ರಕಾರ ಆಸ್ತಿಗಳನ್ನು ಜಪ್ತಿ ಮಾಡಲಾಗುವುದು. ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ ಎಂದು ನೋಟಿಸ್​​​ನಲ್ಲಿ ತಿಳಿಸಲಾಗಿದೆ. ಹರಾಜಿಗೆ ಸಂಬಂಧಿಸಿದ ಆಸ್ತಿಗಳ ಮತ್ತು ನೋಟಿಸ್‌ಗಳ ಪಟ್ಟಿಯನ್ನು ಜಿಬಿಎ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಹಿಂದಿ ಮಾತನಾಡುವವರು ನಿಜವಾದ ಇಂಡಿಯನ್ಸ್​​​​, ದಕ್ಷಿಣ ಭಾರತೀಯರು ಜೋಕರ್​​: ಭಾಷಾ ಸಂಘರ್ಷಕ್ಕೆ ಮತ್ತೊಂದು ಕಿಡಿ

ಹರಾಜು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಆಸ್ತಿ ಮಾಲೀಕರು ತಕ್ಷಣವೇ ಬಾಕಿ ಇರುವ ಪೂರ್ಣ ತೆರಿಗೆಯನ್ನು ಪಾವತಿಸಬೇಕು ಎಂದು ಹೇಳಿದೆ. ಒಂದು ವೇಳೆ ನೀವು ತೆರಿಗೆ ಪಾವತಿಸದಿದ್ದರೆ, ನಿಮ್ಮ ಕಟ್ಟಡವು ಹರಾಜಾಗುವ ಸಾಧ್ಯತೆಯಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ತೆರಿಗೆ ಪಾವತಿಸದಿದ್ದಲ್ಲಿ ಆಯಾ ವಲಯಗಳ ಜಂಟಿ ಆಯುಕ್ತರ ಕಚೇರಿಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಟ್ರೇಡ್ ಲೈಸೆನ್ಸ್ ನವೀಕರಣಕ್ಕೆ ಫೆಬ್ರವರಿ 28ರವರೆಗೆ ಗಡುವು

ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಟ್ರೇಡ್ ಲೈಸೆನ್ಸ್ (ವ್ಯಾಪಾರ ಪರವಾನಗಿ) ನವೀಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಹೇಳಿಕೆಯನ್ನು ಕೂಡ ನೀಡಿದ್ದಾರೆ. ಟ್ರೇಡ್ ಲೈಸೆನ್ಸ್ ನವೀಕರಿಸಲು ಫೆಬ್ರವರಿ 28 ರವರೆಗೆ ಅವಕಾಶ ನೀಡಲಾಗಿದೆ. ಫೆಬ್ರವರಿ 28 ರೊಳಗೆ ಶುಲ್ಕ ಪಾವತಿಸುವ ವ್ಯಾಪಾರಸ್ಥರಿಗೆ ಯಾವುದೇ ದಂಡ ಇರುವುದಿಲ್ಲ.ಮಾರ್ಚ್ 1 ರಿಂದ ಮಾರ್ಚ್ 31 ರೊಳಗೆ ಪಾವತಿಸಿದರೆ, ಒಟ್ಟು ಶುಲ್ಕದ ಮೇಲೆ ಶೇ. 25 ರಷ್ಟು ದಂಡ ವಿಧಿಸಲಾಗುತ್ತದೆ. ಏಪ್ರಿಲ್ 1 ರ ನಂತರ ಶುಲ್ಕ ಪಾವತಿಸಿದರೆ, ಒಟ್ಟು ಶುಲ್ಕದ ಶೇ. 100 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಪರವಾನಗಿ ಶುಲ್ಕವನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಪಾವತಿಸಬೇಕು. ವ್ಯಾಪಾರಸ್ಥರ ಅನುಕೂಲಕ್ಕಾಗಿ ಒಂದೂವರೆ ವರ್ಷದ ಅವಧಿಗೆ ಲೈಸೆನ್ಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ವರದಿ: ಅರುಣ್​​ ಕುಮಾರ್ ಮೆಟ್ರೋ 

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:14 pm, Tue, 3 February 26

Source link

ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ: ವಾಣಿಜ್ಯ ಸಚಿವರ ಟೀಕೆ – Kannada News | This is the best deal from US among Indian neighbours, says Piyush Goyal

ನವದೆಹಲಿ, ಫೆಬ್ರುವರಿ 3: ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದವನ್ನು (India US trade deal) ವಾಣಿಜ್ಯ ಸಚಿವ ಪೀಯೂಶ್ ಗೋಯಲ್ (Piyush Goyal) ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಇದುದೇಶ ಹೆಮ್ಮೆ ಪಡಬಹುದಾದ ಒಪ್ಪಂದವಾಗಿದೆ. ಭಾರತದ ಯಾವುದೇ ನೆರೆಹೊರೆಯವರೊಂದಿಗೆ ಅಮೆರಿಕ ಮಾಡಿಕೊಂಡಿರುವ ಒಪ್ಪಂದಗಳಲ್ಲೇ ಇದು ಅತ್ಯುತ್ತಮ ಡೀಲ್ ಎಂದು ಪೀಯೂಶ್ ಗೋಯಲ್ ಬಣ್ಣಿಸಿದ್ದಾರೆ. ಇಂದು ಮಂಗಳವಾರ ಇದೇ ವಿಚಾರವಾಗಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಾಣಿಜ್ಯ ಸಚಿವರು, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯದ ವೈಯಕ್ತಿಕ ಸ್ನೇಹದಿಂದ ಈ ಡೀಲ್ ಕುದುರಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಅಮೆರಿಕದೊಂದಿಗೆ ಬಹಳ ಪ್ರಬಲ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದಕ್ಕೆ ಇವತ್ತು ದೇಶದ ಪ್ರತಿಯೊಬ್ಬರೂ ಕೂಡ ಪ್ರಧಾನಿ ಮೋದಿಗೆ ಧನ್ಯವಾದ ಹೇಳುತ್ತಿದ್ದಾರೆ. ರಾಷ್ಟ್ರ ಮತ್ತು ಜನರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು, ಭಾರತದ ಭವಿಷ್ಯವನ್ನು ಸುಭದ್ರಗೊಳಿಸಲು ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ’ ಎಂದು ಪೀಯೂಶ್ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: ಏಷ್ಯನ್ ದೇಶಗಳ ಪೈಕಿ ಭಾರತಕ್ಕೆ ಕಡಿಮೆ ಟ್ಯಾರಿಫ್; ಅತಿ ಕಡಿಮೆ ಸುಂಕ ಎದುರಿಸುತ್ತಿರುವ ರಾಷ್ಟ್ರಗಳಿವು…

ಏನಿದು ಭಾರತ-ಅಮೆರಿಕ ಒಪ್ಪಂದ?

ಇತ್ತೀಚೆಗೆ 27 ರಾಷ್ಟ್ರಗಳ ಗುಂಪಾದ ಐರೋಪ್ಯ ಒಕ್ಕೂಟದೊಂದಿಗೆ ಭಾರತ ಟ್ರೇಡ್ ಡೀಲ್ ಮಾಡಿಕೊಂಡಿದೆ. ಅದನ್ನು ಮದರ್ ಆಫ್ ಆಲ್ ಡೀಲ್ಸ್ ಎಂದು ಬಣ್ಣಿಸಲಾಗುತ್ತಿದೆ. ಈಗ ಅಮೆರಿಕದೊಂದಿಗೆ ಭಾರತ ಮಾಡಿಕೊಳ್ಳಲಿರುವ ಒಪ್ಪಂದವು ಅದಕ್ಕಿಂತಲೂ ಬೃಹತ್ತಾಗಿರುವ ನಿರೀಕ್ಷೆ ಇದೆ. ಒಪ್ಪಂದ ಏರ್ಪಟ್ಟಿರುವುದನ್ನು ಟ್ರಂಪ್ ಮತ್ತು ಮೋದಿ ಘೋಷಿಸಿದ್ದಾರಾದರೂ ಮಾತುಕತೆ ಇನ್ನೂ ಅಂತಿಮಗೊಂಡಿಲ್ಲ. ಮಾತುಕತೆ ಮುಗಿದ ಬಳಿಕ ಒಪ್ಪಂದಕ್ಕೆ ಸಹಿ ಆದ ನಂತರ ಅದು ಚಾಲನೆಗೆ ಬರುತ್ತದೆ.

ಈ ಒಪ್ಪಂದದಲ್ಲಿ ಮಾಡಲಾಗಿರುವ ತೀರ್ಮಾನದ ಪ್ರಕಾರ ಭಾರತದ ಸರಕುಗಳಿಗೆ ಅಮೆರಿಕ ವಿಧಿಸುವ ಟ್ಯಾರಿಫ್ ಶೇ. 50ರಿಂದ ಶೇ. 18ಕ್ಕೆ ಇಳಿಕೆಯಾಗುತ್ತದೆ. ಅದೇ ವೇಳೆ, ಅಮೆರಿಕ ಸರಕುಗಳಿಗೆ ಭಾರತದ ಮಾರುಕಟ್ಟೆಗೆ ಮುಕ್ತ ಪ್ರವೇಶ ಸಿಗುತ್ತದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ಟ್ರೇಡ್ ಡೀಲ್; ಭಾರತದ ಕೃಷಿ ಮಾರುಕಟ್ಟೆ ರಕ್ಷಣೆಯಲ್ಲಿ ರಾಜಿ ಇರೋದಿಲ್ಲವಾ?

ದಾರಿತಪ್ಪಿಸುತ್ತಿರುವ ರಾಹುಲ್ ಗಾಂಧಿ: ವಾಣಿಜ್ಯ ಸಚಿವರು ಟೀಕೆ

ಈ ವ್ಯಾಪಾರ ಒಪ್ಪಂದ ಮಾಡಿಕೊಂಡು ಅಮೆರಿಕಕ್ಕೆ ಭಾರತವನ್ನು ಮಾರಲಾಗುತ್ತಿದೆ ಎಂಬರ್ಥದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ. ಇವರ ಹೇಳಿಕೆಯನ್ನು ಪಿಯೂಶ್ ಗೋಯಲ್ ಬಲವಾಗಿ ಖಂಡಿಸಿದ್ದಾರೆ.

ಇಷ್ಟು ದಿನ ರಾಹುಲ್ ಗಾಂಧಿ ಅಮೆರಿಕದೊಂದಿಗೆ ಒಪ್ಪಂದ ಆಗಿಲ್ಲ ಎಂದು ಪ್ರಶ್ನಿಸುತ್ತಿದ್ದರು. ಈಗ ಒಪ್ಪಂದ ಆದಾಗ ಅದನ್ನು ಟೀಕಿಸುತ್ತಿದ್ದಾರೆ. ಇದು ರಾಹುಲ್ ಗಾಂಧಿ ಅವರ ಆಷಾಢಭೂತಿತನ ತೋರುತ್ತದೆ. ಅವರು ದೇಶದ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಣಿಜ್ಯ ಸಚಿವರು ಸಿಡಿಗುಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಮಗಳನ್ನೇ ಕೊಂದ ಅಪ್ಪ! – Kannada News | Maharashtra Man Killed 6 Year Old Daughter To Contest in Panchayat Elections

ಮುಂಬೈ, ಫೆಬ್ರವರಿ 3: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಪಾಂಡುರಂಗ ಕೊಂಡ್ಮಂಗಲೆ ಎಂಬ ವ್ಯಕ್ತಿಗೆ ಮೂವರು ಮಕ್ಕಳು. ಆತನಿಗೆ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಆಸೆಯಾಗಿತ್ತು. ಆದರೆ, ಈ ಚುನಾವಣೆಗೂ ಮೊದಲೇ ಆತನ 6 ವರ್ಷದ ಮಗಳು ಕೊಲೆಯಾಗಿದ್ದಳು. ಆ ಮಗುವಿನ ಸಾವಿನ ಕಾರಣ ಹುಡುಕುತ್ತಾ ಹೊರಟ ಪೊಲೀಸರಿಗೆ ಅಚ್ಚರಿ ಕಾದಿತ್ತು. ಆ ಮಗುವಿನ ಹಂತ ಯಾರಿರಬಹುದು ಎಂಬ ಕುತೂಹಲ ಊರಿನವರಿಗೂ ಇತ್ತು. ಆದರೆ, ಆ ಮಗುವಿನ ಅಪ್ಪನೇ ಕೊಲೆಗಾರ (Killer) ಎಂದು ತಿಳಿದು ಪೊಲೀಸರು, ಊರಿನವರಿಗೆ ಮಾತ್ರವಲ್ಲ ಆತನ ಮನೆಯವರಿಗೂ ಶಾಕ್ ಆಗಿತ್ತು.

ಮುಂಬರುವ ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಲು ಆ ವ್ಯಕ್ತಿಗೆ 2 ಅಥವಾ 2ಕ್ಕಿಂತ ಕಡಿಮೆ ಮಕ್ಕಳಿರಬೇಕು ಎಂದು ನಿಯಮವಿತ್ತು. ಆದರೆ, ಪಾಂಡುರಂಗನಿಗೆ ಮೂವರು ಮಕ್ಕಳಿದ್ದರು. ಹೀಗಾಗಿ, ತನ್ನ ಮಕ್ಕಳ ಕಾರಣದಿಂದ ತಾನು ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅವಕಾಶದಿಂದ ವಂಚಿತನಾಗುವುದು ಆತನಿಗೆ ಇಷ್ಟವಿರಲಿಲ್ಲ. ಹೀಗಾಗಿ, ಕೊನೆಯ ಮಗಳಾದ 6 ವರ್ಷದ ಪ್ರಾಚಿಯನ್ನು ಕೊಂದುಬಿಟ್ಟರೆ ತನಗೆ ಇಬ್ಬರೇ ಮಕ್ಕಳು ಉಳಿಯುತ್ತಾರೆ. ಆಗ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ತಾನು ಕೂಡ ಅರ್ಹನಾಗುತ್ತೇನೆ ಎಂದು ಯೋಚಿಸಿದ ಆತ ಕೊಲೆಯ ಪ್ಲಾನ್ ಮಾಡಿದ್ದ.

ಇದನ್ನೂ ಓದಿ: ಒಂದೇ ಕೋಣೆಯಲ್ಲಿ ಸಿಕ್ತು ಮಹಿಳೆ ಮತ್ತು ಕೆಲಸದವನ ಶವ! ವಿದೇಶದಿಂದ ಮರಳಿದ ಪತಿಗೆ ಕಾದಿತ್ತು ಶಾಕ್

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲ್ಲೂಕಿನ ಕೆರೂರ್ ಗ್ರಾಮದ ನಿವಾಸಿ 28 ವರ್ಷದ ಪಾಂಡುರಂಗ ಕೊಂಡ್ಮಂಗಲೆ ತನ್ನ 6 ವರ್ಷದ ಮಗಳನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದ. ನಿಜಾಮಾಬಾದ್ ಪೊಲೀಸರು ಸೋಮವಾರ ಪಾಂಡುರಂಗ ಮತ್ತು ಗ್ರಾಮದ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆಯನ್ನು ಬಂಧಿಸಿರುವುದಾಗಿ ಘೋಷಿಸಿದ್ದಾರೆ.

ಹಲವು ದಿನಗಳಾದರೂ ನಾಪತ್ತೆಯಾಗಿದ್ದ ಪ್ರಾಚಿ ಪತ್ತೆಯಾಗಿರಲಿಲ್ಲ. ಹೀಗಾಗಿ, ಪೊಲೀಸರು ಆಕೆಯ ತಂದೆಯನ್ನು ವಿಚಾರಣೆಗಾಗಿ ಕರೆದೊಯ್ದಿದ್ದರು. ಆಗ ಆಕೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಹೇಳುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದ. ತನಿಖಾಧಿಕಾರಿ ವಿಚಾರಣೆ ನಡೆಸಿದಾಗ, ತಾನು ಮಗುವನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದ.

ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಹರಿದ ನೆತ್ತರು; ಗಲಾಟೆ ವೇಳೆ ಹೋಯ್ತು ಇಬ್ಬರ ಪ್ರಾಣ!

ತನ್ನ ಗ್ರಾಮದಲ್ಲಿ ಕ್ಷೌರಿಕನ ಅಂಗಡಿ ನಡೆಸುತ್ತಿರುವ ಪಾಂಡುರಂಗ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕನಾಗಿದ್ದ. ಅವನಿಗೆ 3 ವರ್ಷದ ಗಂಡು ಮಗು ಮತ್ತು 6 ವರ್ಷದ ಅವಳಿ ಹೆಣ್ಣು ಮಕ್ಕಳಿದ್ದರು. ಆದರೆ, ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ 2 ಮಕ್ಕಳ ಮಾನದಂಡವಿತ್ತು. ಹೀಗಾಗಿ ಅವನು ಸ್ಪರ್ಧಿಸಲು ಅನರ್ಹನಾಗಿದ್ದನು.

ಹೀಗಾಗಿ, ಅವನು ತನ್ನ ಸ್ನೇಹಿತ ಮತ್ತು ಗ್ರಾಮದ ಪ್ರಸ್ತುತ ಸರಪಂಚ್ ಗಣೇಶ್ ಶಿಂಧೆ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದ. ಆಗ ಆತ ಅವನ ಅವಳಿ ಮಕ್ಕಳಲ್ಲಿ ಒಬ್ಬಳನ್ನು ಕೊಂದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸಲಹೆ ನೀಡಿದ್ದ. ಇದಕ್ಕೆ ಆತ ಮೊದಲು ಒಪ್ಪಿರಲಿಲ್ಲ. ಸಾಯಿಸುವ ಬದಲು ಒಂದು ಮಗುವನ್ನು ಯಾರಿಗಾದರೂ ದತ್ತು ನೀಡಿದರಾಯಿತು ಎಂದು ನಿರ್ಧರಿಸಿದ್ದ. ಆದರೆ, ದತ್ತು ನೀಡಿದರೂ ಕೂಡ ಆ ಮಗುವಿನ ಜನನ ಪ್ರಮಾಣಪತ್ರದಲ್ಲಿ ಆಕೆ ಆತನ ಮಗುವೇ ಎಂದು ರಿಜಿಸ್ಟರ್ ಆಗಿರುತ್ತಿತ್ತು.

ಹೀಗಾಗಿ, ಕೊನೆಗೆ ಆತ ತನ್ನ ಗೆಳೆಯನ ಸಲಹೆಯಂತೆ ಮಗುವನ್ನು ಕೊಲ್ಲುವ ನಿರ್ಧಾರ ಮಾಡಿದ್ದ. ಮಗುವನ್ನು ಕೊಂದು ಅದನ್ನು ಅಪಘಾತದಂತೆ ಕಾಣುವಂತೆ ಮಾಡಲು ಸಂಚು ರೂಪಿಸಿದ್ದ. ನಿಜಾಮಾಬಾದ್ ಜಿಲ್ಲೆ ತನ್ನ ಗ್ರಾಮದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವುದರಿಂದ ಪಾಂಡುರಂಗ ಪ್ರಾಚಿಯನ್ನು ಬೈಕ್​ನಲ್ಲಿ ನಿಜಾಮ್ ಸಾಗರ್ ಕಾಲುವೆಗೆ ಕರೆದೊಯ್ದ. ಅಲ್ಲಿ ಅವನು ಅವಳನ್ನು ಕಾಲುವೆಗೆ ತಳ್ಳಿ ಓಡಿಹೋದ.

ಆ ವೇಳೆ ಹತ್ತಿರದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಗ್ರಾಮಸ್ಥರು ನೀರಿಗೆ ಏನೋ ಬೀಳುವ ಶಬ್ದ ಕೇಳಿ ಅಲ್ಲಿಗೆ ಬಂದು ನೋಡಿದಾಗ ಆ ಬಾಲಕಿಯ ಶವ ಕಾಲುವೆಯಲ್ಲಿ ತೇಲುತ್ತಿರುವುದನ್ನು ಕಂಡರು. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತನಿಖೆ ಆರಂಭಿಸಿದರು. ಆ ಬಾಲಕಿಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಮಹಾರಾಷ್ಟ್ರ ಗ್ರಾಮದ ಯಾರೋ ಒಬ್ಬರು ಪ್ರಾಚಿಯ ಫೋಟೋವನ್ನು ನೋಡಿದಾಗ ಆಕೆಯನ್ನು ಗುರುತಿಸಿದರು. ತಕ್ಷಣ ಪೊಲೀಸ್ ತಂಡ ಗ್ರಾಮಕ್ಕೆ ತಲುಪಿ ತನಿಖೆಯನ್ನು ಪ್ರಾರಂಭಿಸಿತು. ಇದರಿಂದ ಪಾಂಡುರಂಗ ಸಿಕ್ಕಿಬಿದ್ದ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಂಜಾನ್ ಹಿನ್ನೆಲೆ ಉರ್ದು ಶಾಲಾ ಸಮಯ ಬದಲಾವಣೆಗೆ ವಿರೋಧ: ಇದ್ಯಾವ ಸಮಾನತೆ ಎಂದ ಯತ್ನಾಳ್​ – Kannada News | Ramadan School Hours Change in Karnataka Sparks Controversy; Pro Hindu Organisations Oppose

ಬೆಂಗಳೂರು, ಫೆಬ್ರವರಿ 03: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಹಿನ್ನೆಲೆಯಲ್ಲಿ ಕರ್ನಾಟಕದ ಉರ್ದು ಮಾಧ್ಯಮ ಕಿರಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಶಾಲಾ ಸಮಯವನ್ನು ಪರಿಷ್ಕರಿಸಿರೋದಕ್ಕೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಹಿಂದೂಗಳ ಯಾವುದೇ ಹಬ್ಬಗಳಿಗೂ ಶಾಲಾ ಸಮಯ ಬದಲಾವಣೆ ಮಾಡಲ್ಲ. ಇದು ಕಾನೂನು ಸಮಾನತೆಯ ಉಲ್ಲಂಘನೆಯಾಗಿದ್ದು, ಈ ಕೂಡಲೇ ಸುತ್ತೋಲೆ ವಾಪಸ್​ ಪಡೆಯಬೇಕು. ನವರಾತ್ರಿ, ಗಣೇಶ ಚತುರ್ಥಿಯಂತಹ ಹಬ್ಬಗಳ ಸಂದರ್ಭ ಶಾಲಾ ಸಮಯದಲ್ಲಿ ಯಾವುದೇ ಬದಲಾವಣೆ ಇರಲ್ಲ. ಹೀಗಾಗಿ ತಾರತಮ್ಯ ಬೇಡ ಎಂಬ ಒತ್ತಾಯ ಕೇಳಿ ಬಂದಿದೆ.

ರಂಜಾನ್ ಹಿನ್ನೆಲೆ ರಾಜ್ಯದ ಉರ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಅವಧಿ ಬದಲಾವಣೆ ಮಾಡಿ ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿತ್ತು. ಈ ಅವಧಿಯಲ್ಲಿ ಬೆಳಿಗ್ಗೆ 8ಕ್ಕೆ ಶಾಲೆ ಆರಂಭ ಮಾಡಿ ಮಧ್ಯಾಹ್ನ 12:45ಕ್ಕೆ ಶಾಲೆ ಅವಧಿ ಮುಕ್ತಾಯಕ್ಕೆ ಸೂಚಿಸಿತ್ತು. 2025-26ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳು ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ 2026ರ ಮಾರ್ಚ್​​ 20ರವರೆಗೆ ಶಾಲಾ ಅವಧಿಯ ವೇಳಾಪಟ್ಟಿಯ ಬದಲಾವಣೆ ಮಾಡಲಾಗಿತ್ತು. ಈ ನಿರ್ಧಾರವೀಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕರ್ನಾಟಕದ ಉರ್ದು ಪ್ರಾಥಮಿಕ ಹಾಗು ಪ್ರೌಢ ಶಾಲೆ ಅವಧಿ ಬದಲಾವಣೆ, ಕಾರಣವೇನು?

ಸುತ್ತೋಲೆ ಬಗ್ಗೆ ಶಾಸಕ ಯತ್ನಾಳ್​​ ಕಿಡಿ

ಇನ್ನು ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅವರಿಗೆ ಸುಮ್ಮನೆ ಒಂದು ತಿಂಗಳು ರಜಾ ಕೊಟ್ಟು ಬಿಡುವುದು ಒಳ್ಳೆಯದು. ರಂಜಾನ್, ದೀಪಾವಳಿ, ಗಣೇಶ ಚತುರ್ಥಿ ಬೇರೆ ಅಂತಾ ಕಾಂಗ್ರೆಸ್ ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿದೆ. ಸಿದ್ದರಾಮಯ್ಯ ಸರ್ಕಾರ ಎಲ್ಲಿ ಅವಕಾಶ ಸಿಗುತ್ತದೋ ಅಲ್ಲಿ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ. ಕೊಡಗಿನ ಶಾಸಕ ಹಿಂದೂ ಸಮಾಜೋತ್ಸವ ಹಿನ್ನೆಲೆ ರಸ್ತೆಯಲ್ಲಿ ಹೋಗುವಾಗ ಹಿಂದೂ ಕಾರ್ಯಕರ್ತರು ಕರೆದಿದ್ದಕ್ಕೆ ಹೋಗಿ ಶಾಲು ಹಾಕಿಸಿಕೊಂಡಿದ್ದಕ್ಕೂ ಹೈಕಮಾಂಡ್​​ನಲ್ಲಿ ಚರ್ಚೆಯಾಗುತ್ತಿದೆ. ಸಮಾನತೆ ಶಬ್ದಕ್ಕೆ ಅರ್ಥವಿಲ್ಲದ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಇದು ಅತ್ಯಂತ ಹೇಯ ಕೆಲಸ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:21 pm, Tue, 3 February 26

Source link

ವಿದೇಶದಿಂದ ಬರುವಾಗ ತರುವ ಎಷ್ಟು ಲಗೇಜಿಗೆ ಸುಂಕ ವಿನಾಯಿತಿ ಇರುತ್ತೆ? ಎಷ್ಟು ಆಭರಣ ತರಬಹುದು? – Kannada News | New Baggage rules, Indians can bring more imported items and jewellery from abroad

ನವದೆಹಲಿ, ಫೆಬ್ರುವರಿ 3: ವಿದೇಶಕ್ಕೆ ಹೋಗಿ ಭಾರತೀಯರು ಸುಂಕ ಪಾವತಿಸುವ ಅವಶ್ಯಕತೆ ಇಲ್ಲದೆ ಹೆಚ್ಚು ಸಾಮಾನುಗಳನ್ನು (duty-free imports) ಈಗ ತರಬಹುದು. ಬಜೆಟ್​ನಲ್ಲಿ ಪ್ರಕಟಿಸಲಾಗಿದ್ದ ಹೊಸ ಬ್ಯಾಗೇಜ್ ನಿಯಮಗಳು (Baggage Rules 2026) ನಿನ್ನೆ ಮಧ್ಯರಾತ್ರಿಯಿಂದಲೇ (ಜ. 2) ಜಾರಿಗೆ ಬಂದಿದೆ. ಹೊಸ ನಿಯಮಗಳಲ್ಲಿ ಸುಂಕ ರಹಿತವಾಗಿ ತರಬಹುದಾದ ಬ್ಯಾಗೇಜ್ ಅಥವಾ ಲಗೇಜ್ ಮಿತಿಯನ್ನು ಏರಿಸಲಾಗಿದೆ. ಆಮದಿತ ಸರಕುಗಳ ಮಿತಿಯಲ್ಲಿ ಏರಿಕೆ ಮಾಡಲಾಗಿದೆ. ಒಡವೆಗಳ ಮಿತಿಯಲ್ಲೂ ಏರಿಕೆ ಮಾಡಲಾಗಿದೆ.

75,000 ರೂ ಮೌಲ್ಯದ ಸರಕುಗಳಿಗೆ ಸುಂಕದಲ್ಲಿ ವಿನಾಯಿತಿ

ವಿದೇಶಕ್ಕೆ ಹೋಗಿ ಭಾರತಕ್ಕೆ ವಾಪಸ್ ಬರುವ ಭಾರತೀಯ ನಾಗರಿಕರು, ಅಥವಾ ವಿದೇಶದಿಂದ ಭಾರತಕ್ಕೆ ಪ್ರವಾಸ ಬರುವ ಭಾರತ ಮೂಲದ ವ್ಯಕ್ತಿಗಳು 75,000 ರೂ ಮೌಲ್ಯದ ಸರಕುಗಳಿಗೆ ಸುಂಕ ವಿನಾಯಿತಿ ಪಡೆಯುತ್ತಾರೆ. ಈ ಮುಂಚೆ ಇದ್ದ ನಿಯಮಗಳಲ್ಲಿ ಇದರ ಮಿತಿ 50,000 ರೂ ಇತ್ತು. ಈಗ ಅದನ್ನು 75,000 ರೂಗೆ ಏರಿಸಲಾಗಿದೆ.

ವಿದೇಶೀ ಪ್ರವಾಸಿಗರು ಭಾರತಕ್ಕೆ ಬರುವಾಗ ತರುವ ಲಗೇಜಿನಲ್ಲಿ 25,000 ರೂ ಮೌಲ್ಯದ ಸರಕುಗಳಿಗೆ ಸುಂಕ ಇರುವುದಿಲ್ಲ. ಹಳೆಯ ನಿಯಮಗಳ ಪ್ರಕಾರ ಇದರ ಮಿತಿ 15,000 ರೂ ಇತ್ತು.

ಇದನ್ನೂ ಓದಿ: ಬ್ಯಾಂಕ್ ಲಾಕರ್ ಕೀ ಕಳೆದುಹೋದರೆ ಮುಂದೇನು? ಲಾಕರ್ ಒಡೆಯಲಾಗುತ್ತಾ? ಇಲ್ಲಿದೆ ಪ್ರಕ್ರಿಯೆ

ಚಿನ್ನಾಭರಣಗಳ ಮಿತಿಯಲ್ಲಿ ಬದಲಾವಣೆ

ವಿದೇಶದಲ್ಲಿ ಒಂದಕ್ಕಿಂತ ಹೆಚ್ಚು ವರ್ಷ ಇದ್ದು ಭಾರತಕ್ಕೆ ಮರಳುವ ವ್ಯಕ್ತಿಗಳು ಸುಂಕರಹಿತವಾಗಿ ತರಬಹುದಾದ ಆಭರಣದ ಮಿತಿಯನ್ನು ಏರಿಸಲಾಗಿದೆ. ಮಹಿಳೆಯೊಬ್ಬರು 40 ಗ್ರಾಮ್ ಚಿನ್ನಕ್ಕೆ ಸುಂಕ ಕಟ್ಟಬೇಕಿಲ್ಲ. ಇತರರಾದರೆ 20 ಗ್ರಾಮ್​ವರೆಗಿನ ಚಿನ್ನಕ್ಕೆ ಸುಂಕ ಪಾವತಿಸಬೇಕಿಲ್ಲ.

ಈ ಹಿಂದಿನ ನಿಯಮಗಳ ಪ್ರಕಾರ ಮಹಿಳೆಯರು ಸುಂಕರಹಿತವಾಗಿ ತರಬಹುದಾದ ಒಡವೆಯ ಮೌಲ್ಯ 1,00,000 ರೂ ಮೀರುವಂತಿಲ್ಲ. ಪುರುಷರಾದರೆ 50,000 ರೂ ಮೌಲ್ಯ ಮಿತಿ ಇತ್ತು. ಈಗ ಮೌಲ್ಯದ ಮಾನಕ ತೆಗೆದುಹಾಕಿ, ತೂಕವನ್ನು ಅನ್ವಯಿಸಲಾಗುತ್ತದೆ.

ಮಿತಿಗಿಂತ ಹೆಚ್ಚು ಸರಕು ತಂದರೆ ಎಷ್ಟಿರುತ್ತೆ ಸುಂಕ?

ಈ ಬಾರಿಯ ಬಜೆಟ್​ನಲ್ಲಿ ಆಮದಿತ ಸರಕುಗಳ ಮೇಲಿನ ಸುಂಕವನ್ನು ಶೇ. 20ರಿಂದ ಶೇ. 10ಕ್ಕೆ ಇಳಿಸಲಾಗಿದೆ. ಈ ಮುಂಚೆ 50,000 ರೂಗಿಂತ ಹೆಚ್ಚಿನ ಮೌಲ್ಯದ ಸರಕುಗಳ ಮೇಲೆ ಶೇ. 20 ಸುಂಕ ಅನ್ವಯ ಆಗುತ್ತಿತ್ತು. ಈಗ 75,000 ರೂಗಿಂತ ಹೆಚ್ಚಿನ ಮೌಲ್ಯದ ಸರಕುಗಳ ಮೇಲೆ ಸುಂಕವನ್ನು ಶೇ. 10ಕ್ಕೆ ಇಳಿಸಲಾಗಿದೆ.

ಇದನ್ನೂ ಓದಿ: ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ; ಇಗೋ ಇಲ್ಲಿವೆ ಕಾರಣಗಳು

ಉದಾಹರಣೆಗೆ, ಹೊಸ ನಿಯಮಗಳ ಪ್ರಕಾರ, ವಿದೇಶಕ್ಕೆ ಹೋಗಿ ನೀವು 2,00,000 ರೂ ಮೌಲ್ಯದ ಎಲೆಕ್ಟ್ರಾನಿಕ್ಸ್, ಗ್ಯಾಜೆಟ್ಸ್ ಇತ್ಯಾದಿಯನ್ನು ಖರೀದಿಸಿ ಬಂದಿದ್ದರೆ ಆಗ 1.25 ಲಕ್ಷ ರೂಗೆ ಶೇ. 10 ಸುಂಕ ಕಟ್ಟಬೇಕಾಗುತ್ತದೆ. ಅಂದರೆ 12,500 ರೂ ಸುಂಕ ಕಟ್ಟಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link