Category Archives: Blog

Your blog category

IND vs AFG: ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ – Kannada News

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಜೂನ್ 6 ರಂದು ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾ ತಯಾರಿ ನಡೆಸುತ್ತಿದೆ. ಭಾರತ ತಂಡದ ಸಿದ್ಧತೆಗಳ ಮೊದಲ ವೀಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಟೀಂ ಇಂಡಿಯಾ ಆಟಗಾರರು ಮೊದಲಿಗೆ ಫೀಲ್ಡಿಂಗ್, ನಂತರ ಬ್ಯಾಟಿಂಗ್ ಅಭ್ಯಾಸ ಮಾಡುವುದನ್ನು ಕಾಣಬಹುದಾಗಿದೆ. ಕೆಎಲ್ ರಾಹುಲ್, ಕುಲ್ದೀಪ್ ಯಾದವ್ ಮತ್ತು ಇತರ ಭಾರತೀಯ ಸ್ಪಿನ್ನರ್‌ಗಳ ವಿರುದ್ಧ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರೆ, ರಾಹುಲ್ ಜೊತೆಗೆ, ಯಶಸ್ವಿ ಜೈಸ್ವಾಲ್ ಕೂಡ ಕಾಣಿಸಿಕೊಂಡರು.

ಭಾರತ ಮತ್ತು ಅಫ್ಘಾನಿಸ್ತಾನ ಟೆಸ್ಟ್ ಕ್ರಿಕೆಟ್‌ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಮೊದಲ ಬಾರಿಗೆ 2018 ರಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 262 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಎಂಟು ವರ್ಷಗಳ ನಂತರ, ಎರಡೂ ತಂಡಗಳು ಮತ್ತೊಮ್ಮೆ ಪರಸ್ಪರ ಎದುರಾಗುತ್ತಿವೆ. ಈ ಬಾರಿ, ಈ ಪಂದ್ಯವು ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ನಡೆಯುವ ಮೊದಲ ಅಂತರರಾಷ್ಟ್ರೀಯ ಪಂದ್ಯವೂ ಆಗಿದೆ.

Source link

ಬಂದೇ ಬಿಡ್ತು ಬಿಗ್ ಬಾಸ್ ಹೊಸ ಸೀಸನ್: ಸರ್ಪ್ರೈಸ್ ನೀಡಿದ ‘ಕಲರ್ಸ್ ಕನ್ನಡ’ – Kannada News

ನಾಲ್ಕು ತಿಂಗಳ ಹಿಂದಷ್ಟೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಮುಕ್ತಾಯ ಆಗಿತ್ತು. ಗಿಲ್ಲಿ ನಟ ಅವರು ಬಿಗ್ ಬಾಸ್ (Bigg Boss Kannada) ವಿನ್ನರ್ ಆಗಿ ಟ್ರೋಫಿ ಎತ್ತಿದ್ದರು. ಈಗ ಸಡನ್ ಆಗಿ ‘ಕಲರ್ಸ್ ಕನ್ನಡ’ ವಾಹಿನಿ ಒಂದು ಸರ್ಪ್ರೈಸ್ ನೀಡಿದೆ. ಈ ಬಾರಿ ಬಿಗ್ ಬಾಸ್ ಹೊಸ ಸೀಸನ್ (Bigg Boss Kannada Season 13) ಬೇಗ ಶುರುವಾಗಲಿದೆ ಎಂಬುದನ್ನು ವಾಹಿನಿ ಖಚಿತಪಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರೋಮೋ ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ಅಧಿಕೃತವಾಗಿ ತಿಳಿಸಲಾಗಿದೆ. ‘ಈ ವರ್ಷ ಬೇಗ ಶುರುವಾಗ್ತಿದೆ ಕನ್ನಡಿಗರ ಹಬ್ಬ… With something special’ ಎಂಬ ಕ್ಯಾಪ್ಷನ್​ನೊಂದಿಗೆ ಹೊಸ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ.

ಈವರೆಗೂ ಯಶಸ್ವಿಯಾಗಿ 12 ಸೀಸನ್​ಗಳಲ್ಲಿ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ನಡೆದುಕೊಂಡು ಬಂದಿದೆ. ಕಿಚ್ಚ ಸುದೀಪ್ ಅವರು ಎಲ್ಲ ಸೀಸನ್​ಗಳನ್ನು ನಡೆಸಿಕೊಟ್ಟಿದ್ದಾರೆ. ಶೋಗೆ ದೊಡ್ಡ ಪ್ರೇಕ್ಷಕರ ವರ್ಗ ಇದೆ. ಬಿಗ್ ಬಾಸ್ ಕಾರ್ಯಕ್ರಮ ಶುರುವಾದಾಗ ಪ್ರತಿ ಬಾರಿಯೂ ಸೆನ್ಸೇಷನ್ ಸೃಷ್ಟಿ ಆಗುತ್ತದೆ. ಹಾಗಾಗಿ ವೀಕ್ಷಕರ ನಿರೀಕ್ಷೆ ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತಿದೆ.

‘ಬಿಗ್ ಬಾಸ್ ಕನ್ನಡ’ ಶೋ ಆದಷ್ಟು ಬೇಗ ಶುರುವಾಗಲಿದೆ ಎಂಬ ವಿಷಯ ಹೊರಬಿದ್ದ ಕೂಡಲೇ ವೀಕ್ಷಕರು ಥ್ರಿಲ್ ಆಗಿದ್​ದಾರೆ. ಕಮೆಂಟ್ ಮಾಡಿರುವ ಅನೇಕರು ತಮ್ಮ ಕಾತರ ಎಷ್ಟಿದೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ಕೂಡ ಗಿಲ್ಲಿ ನಟ ರೀತಿಯ ಸ್ಪರ್ಧಿಗಳು ಬರಲಿ ಎಂದು ಜನರು ತಮ್ಮ ಅಭಿಲಾಷೆ ತಿಳಿಸಿದ್ದಾರೆ. ಮುಂದಿನ ಅಪ್​ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಪ್ರತಿ ಬಾರಿಯೂ ಬಿಗ್ ಬಾಸ್ ಶೋನಲ್ಲಿ ಒಂದಲ್ಲಾ ಒಂದು ಹೊಸತನ ಇದ್ದೇ ಇರುತ್ತದೆ. ಆಟದ ಮೂಲ ನಿಯಮವನ್ನು ಹಾಗೆಯೇ ಉಳಿಸಿಕೊಂಡು, ಸಾಕಷ್ಟು ಹೊಸ ಅಂಶಗಳನ್ನು ಪರಿಚಯಿಸಲಾಗುತ್ತದೆ. ಆ ಕಾರಣದಿಂದ ಹೊಸ ಸೀಸನ್ ಘೋಷಣೆ ಆದಾಗ ವೀಕ್ಷಕರ ಕೌತುಕ ಹೆಚ್ಚುತ್ತದೆ. ಕಳೆದ ಸೀಸನ್​ಗಿಂದ ಈ ಸೀಸನ್ ಎಷ್ಟು ಡಿಫರೆಂಟ್ ಆಗಿರಲಿದೆ ಎಂಬುದನ್ನು ತಿಳಿಯುವ ಕುತೂಹಲ ನಿರ್ಮಾಣ ಆಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಮುಗಿದ ಬಳಿಕ ಮೊದಲ ಬಾರಿಗೆ ಸಿನಿಮಾ ಘೋಷಿಸಿದ ಸಂಗೀತಾ ಶೃಂಗೇರಿ

ಈವರೆಗೂ ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶ್ರುತಿ, ಪ್ರಥಮ್, ಚಂದನ್ ಶೆಟ್ಟಿ, ಶಶಿಕುಮಾರ್, ಶೈನ್ ಶೆಟ್ಟಿ, ಮಂಜು ಪಾವಗಡ, ರೂಪೇಶ್ ಶೆಟ್ಟಿ, ಕಾರ್ತಿಕ್ ಮಹೇಶ್, ಹನುಮಂತ ಮತ್ತು ಗಿಲ್ಲಿ ನಟ ಅವರು ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಮುಂದಿನ ಸೀಸನ್​ನಲ್ಲಿ ಸ್ಪರ್ಧಿಗಳು ಯಾರೆಲ್ಲ ಇರಲಿದ್ದಾರೆ? ಯಾರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಕಪ್ ಸಿಗಲಿದೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಬಿಜೆಪಿ ವಿರುದ್ಧ ಒಬಿಸಿ ದಾಳ – Kannada News

ಬೆಂಗಳೂರು, (ಜೂನ್ 03): ಕರ್ನಾಟಕದ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಕಾಂಗ್ರೆಸ್ ತನ್ನ ಪಾಲಿನ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಬಿ.ಕೆ.ಹರಿಪ್ರಸಾದ್, ಪಿ.ವಿ.ಮೋಹನ್, ಶಿವಣ್ಣ ಮಳವಳ್ಳಿ ಹಾಗೂ ತಿಪ್ಪಣ್ಣಪ್ಪ ಕಮಕನೂರು ಹೆಸರುಗಳು ಎಐಸಿಸಿ ಪ್ರಕಟಿಸಿದೆ. ಈ ಮೂಲಕ ಬಿ.ಕೆ.ಹರಿಪ್ರಸಾದ್ ಹಾಗೂ ತಿಪ್ಪಣ್ಣಪ್ಪ ಕಮಕನೂರು ಅವರನ್ನು ಮತ್ತೊಂದು ಅವಧಿಗೆ ಮುಂದುವರೆಸಿದ್ದು, ಇನ್ನುಳಿದ ಎರಡು ಸ್ಥಾನಗಳಿಗೆ ಹೊಸ ಮುಖಕ್ಕೆ ಮಣೆ ಹಾಕಲಾಗಿದೆ. ಇನ್ನು ನಾಲ್ಕು ಸ್ಥಾನಕ್ಕೂ ಒಬಿಸಿ ಸಮುದಾಯದವರಿಗೆ ಮಣೆ ಹಾಕಿರುವುದು ಅಚ್ಚರಿಕೆ ಕಾರಣವಾಗಿದೆ.

Source link

ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್ ಅರವಿಂದ್ – Kannada News

ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ನಟ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ಕೂಡ ಸಾಕ್ಷಿಯಾದರು. ಬಳಿಕ ಅವರು ಟಿವಿ9 ಜೊತೆ ಮಾತನಾಡಿದರು. ಡಿಕೆ ಶಿವಕುಮಾರ್ ಮತ್ತು ತಮ್ಮ ನಡುವಿನ ಒಡನಾಟವನ್ನು ರಮೇಶ್ ಅರವಿಂದ್ ಮೆಲುಕು ಹಾಕಿದರು. ‘ಅತ್ಯುನ್ನತವಾದ ಸ್ಥಾನದಲ್ಲಿ ಕುಳಿತರೆ ಅತ್ಯುನ್ನತವಾದ ಜವಾಬ್ದಾರಿ ಕೂಡ ಬರುತ್ತದೆ. ವೀಕೆಂಡ್ ವಿತ್ ರಮೇಶ್ ಶೋಗೆ ಡಿಕೆ ಶಿವಕುಮಾರ್ ಅವರು ಬಂದಾಗ ಒಂದು ಮಾತು ಹೇಳಿದ್ದರು. ರಾಜನಾದಮೇಲೆ ಸಮಸ್ಯೆಗಳಿಗೆ ಕೊನೆ ಇಲ್ಲ. ಒಂದಲ್ಲ ಒಂದು ಸಮಸ್ಯೆ ಬರುತ್ತದೆ. ಅದನ್ನು ಬಗೆಹರಿಸುತ್ತಲೇ ಇರಬೇಕು. ಇತಿಹಾಸ ಮೆಚ್ಚುವಂತಹ ಸರ್ಕಾರವನ್ನು ಅವರು ನಮಗೆ ನೀಡಲಿ. ಮುಂದಿನ ಪೀಳಿಗೆ ಕೂಡ ಡಿಕೆ ಶಿವಕುಮಾರ್ ಅವರ ಸಾಧನೆ ಬಗ್ಗೆ ಮಾತನಾಡಬೇಕು. ಅಂತಹ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು. ಅವರಿಗೆ ಸಿಕ್ಕ ಕರ್ನಾಟಕಕ್ಕಿಂತ ಅವರು ಮುಂದೆ ಬಿಟ್ಟುಹೋಗುವ ಕರ್ನಾಟಕ ಹೆಚ್ಚು ಶ್ರೇಷ್ಠವಾಗಿರಲಿ’ ಎಂದು ರಮೇಶ್ ಅರವಿಂದ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆ ದೇವಸ್ಥಾನದಲ್ಲಿ ಕೂತು ‘ಪೆದ್ದಿ’ ಕತೆ ಬರೆದಿದ್ದರಂತೆ ನಿರ್ದೇಶಕ ಬುಚ್ಚಿಬಾಬು – Kannada News

ರಾಮ್ ಚರಣ್ (Ram Charan) ನಟಿಸಿ, ‘ಉಪ್ಪೇನ’ ಸಿನಿಮಾ ಖ್ಯಾತಿಯ ಬುಚ್ಚಿಬಾಬು ಸಾನಾ ನಿರ್ದೇಶನ ಮಾಡಿರುವ ‘ಪೆದ್ದಿ’ ಸಿನಿಮಾ ನಾಳೆ (ಜೂನ್ 4) ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಇಂದು ರಾತ್ರಿಯೇ ಹಲವೆಡೆ ಸಿನಿಮಾದ ಪ್ರೀಮಿಯರ್ ಶೋ ಪ್ರದರ್ಶಿಸಲಾಗುತ್ತಿದೆ. ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಸನಾ ಅವರಿಗೆ ‘ಪೆದ್ದಿ’ ಎರಡನೇ ಸಿನಿಮಾ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿರುವ ಬುಚ್ಚಿಬಾಬು ಸನಾ, ಸಿನಿಮಾದ ಬಗ್ಗೆ ಹಾಗೂ ಶೂಟಿಂಗ್ ಬಗ್ಗೆ ಕೆಲ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ಉಪ್ಪೇನ’ ಸಿನಿಮಾ ಬಿಡುಗಡೆಯಾಗುವ ಮುನ್ನವೇ, ಕೋವಿಡ್ ಸಮಯದಲ್ಲಿ ‘ಪೆದ್ದಿ’ ಸಿನಿಮಾದ ಕತೆ ಬರೆದಿದ್ದರಂತೆ ಬುಚ್ಚಿಬಾಬು. ‘ಉಪ್ಪೆನ’ ಸಿನಿಮಾ ಬಿಡುಗಡೆ ಗೊಂದಲದಲ್ಲಿದ್ದಾಗ, ಆ ಚಿತ್ರ ಒಟಿಟಿಯಲ್ಲಿ ಬರುತ್ತದೋ ಅಥವಾ ಚಿತ್ರಮಂದಿರಗಳಲ್ಲಿ ಬರುತ್ತದೋ ಎಂಬ ಆತಂಕವಿದ್ದಾಗ ಬುಚ್ಚಿಬಾಬು ತಮ್ಮ ಎರಡನೇ ಸಿನಿಮಾದ ಕಥೆ ಯೋಚಿಸಿದ್ದರಂತೆ. ಪಿಠಾಪುರಂನ ದತ್ತಾತ್ರೇಯ ಸ್ವಾಮಿ ದೇವಸ್ಥಾನದಲ್ಲಿ ಕುಳಿತು, ‘ನನ್ನ ಎರಡನೇ ಸಿನಿಮಾ ಹೀರೊ ರಾಮ್ ಚರಣ್, ಕ್ಯಾರೆಕ್ಟರ್ ಹೆಸರು ಪೆದ್ದಿ, ಹೀರೊ ಬೆಲ್ಲದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾನೆ’ ಎಂದು ಡೈರಿಯಲ್ಲಿ ಬರೆದುಕೊಂಡಿದ್ದಾಗಿ ಬುಚ್ಚಿಬಾಬು ಹೇಳಿದ್ದಾರೆ. ಮೊದಲ ಸಿನಿಮಾ ರಿಲೀಸ್ ಆಗುವ ಮುನ್ನವೇ ಚರಣ್ ಜೊತೆ ಸಿನಿಮಾ ಅಂದುಕೊಳ್ಳುವುದು ದೇವರು ಬರೆದ ಸ್ಕ್ರೀನ್‌ಪ್ಲೇ ಎಂದು ಅವರು ಹೇಳಿದ್ದಾರೆ.

ರಾಮ್ ಚರಣ್ ಎಂದ ತಕ್ಷಣ ಎಲ್ಲರಿಗೂ ‘ರಂಗಸ್ಥಳಂ’ ನೆನಪಿಗೆ ಬರುತ್ತದೆ, ಮತ್ತೆ ಅಂತಹದ್ದೇ ಗ್ರಾಮೀಣ ಹಿನ್ನೆಲೆಯ ಸಿನಿಮಾ ಮಾಡುವುದು ನನ್ನ ಮುಂದಿದ್ದ ಅತಿ ದೊಡ್ಡ ಸವಾಲಾಗಿತ್ತು ಎಂದು ಬುಚ್ಚಿಬಾಬು ತಿಳಿಸಿದ್ದಾರೆ. ಆದರೆ, ‘ಪೆದ್ದಿ’ ನೋಡುವಾಗ ಎಲ್ಲೂ ‘ರಂಗಸ್ಥಳಂ’ನ ಛಾಯೆಗಳು ಕಾಣಿಸುವುದಿಲ್ಲ, ಇದು ಸಂಪೂರ್ಣವಾಗಿ ಬೇರೆಯದೇ ಶೈಲಿಯ ಸಿನಿಮಾ. ಸಿನಿಮಾದಲ್ಲಿ ಚರಣ್ ಅವರ ಗೆಟಪ್ ಒಂದು ವಿಶಿಷ್ಟವಾದ ಬುಡಕಟ್ಟಿಗೆ ಸಂಬಂಧಿಸಿದ್ದಾಗಿದೆ, ಅದಕ್ಕಾಗಿಯೇ ಅವರು ಮೂಗುತಿ ಧರಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ರಾಮ್ ಚರಣ್ ಅಭಿಮಾನಿ; ವಿಡಿಯೋ ವೈರಲ್

ಚರಣ್ ಅವರ ಬಾಡಿ ಲಾಂಗ್ವೇಜ್ ತುಂಬಾ ಮಾಸ್ ಹಾಗೂ ರಗಡ್ ಆಗಿರುತ್ತದೆ, ಆದರೂ ಸಿನಿಮಾದಲ್ಲಿ ಅವರು ಅತ್ಯಂತ ಸುಂದರವಾಗಿ ಕಾಣಿಸುತ್ತಾರೆ ಎಂದು ಬುಚ್ಚಿಬಾಬು ಹೊಗಳಿದ್ದು. ಶೂಟಿಂಗ್ ಸಮಯದಲ್ಲಿ ಚರಣ್ ಕಾರವಾನ್‌ನಲ್ಲೇ ಸ್ವತಃ ಮೇಕಪ್ ಬ್ರಷ್‌ನಿಂದ ಟಚ್ ಅಪ್ ಮಾಡಿಕೊಳ್ಳುತ್ತಿದ್ದರು, ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಎಷ್ಟೋ ಸರಳವಾಗಿದ್ದರು ಎಂದು ಹೇಳಿದ್ದಾರೆ. ಸೆಟ್‌ನಲ್ಲಿ ಇಬ್ಬರ ನಡುವೆ ಅಣ್ಣ-ತಮ್ಮಂದಿರ ಅನುಬಂಧ ಏರ್ಪಟ್ಟಿದೆ ಎಂದು ಭಾವುಕರಾಗಿದ್ದಾರೆ.

ಜಾನ್ಹವಿ ಅವರ ಪಾತ್ರದ ಬಗ್ಗೆ ಮಾತನಾಡಿ, ವಿಜಯನಗರಂ ಪ್ರಾದೇಶಿಕ ಭಾಷೆಯ ಶೈಲಿಯಲ್ಲಿ ಬೈಯುವ ಮಾಸ್ ಕ್ಯಾರೆಕ್ಟರ್ ಅವರದ್ದು, ಅದು ಪ್ರೇಕ್ಷಕರಿಗೆ ತುಂಬಾ ಕ್ಯೂಟ್ ಅನಿಸಲಿದೆ ಎಂದು ತಿಳಿಸಿದ್ದಾರೆ. ಮೊದಲಿನಿಂದಲೂ ತಾವು ಎಆರ್ ರೆಹಮಾನ್ ಅಭಿಮಾನಿ ಆಗಿದ್ದು, ಅವರ ಜೊತೆ ಕೆಲಸ ಮಾಡಬೇಕೆಂಬುದು ನನ್ನ ಕನಸಾಗಿತ್ತು, ಈ ಕಥೆಗೆ ಗ್ಲೋಬಲ್ ರೀಚ್ ಇರುವುದರಿಂದ ಅವರೇ ಸೂಕ್ತ ಎಂದು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಕಥೆಯಲ್ಲಿರುವ ಎಮೋಷನ್, ಡ್ರಾಮಾ ಪ್ರೇಕ್ಷಕರನ್ನು ಕೊನೆಯವರೆಗೂ ಕಟ್ಟಿಹಾಕುತ್ತದೆ ಎಂದು ಬುಚ್ಚಿಬಾಬು ಸಾನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರಂಗಸ್ಥಳಂ’ ಅಂತಹ ಚಿತ್ರಗಳಿಗೆ ಪಾರ್ಟ್ 2 ಗೆ ಅವಕಾಶವಿದ್ದಂತೆ, ‘ಪೆದ್ದಿ’ ಚಿತ್ರಕ್ಕೂ ಭವಿಷ್ಯದಲ್ಲಿ ಸೀಕ್ವೆಲ್ ಮಾಡುವ ಆಲೋಚನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಬುಚ್ಚಿಬಾಬು. ‘ಪೆದ್ದಿ’ ಕತೆ ಒಂದೇ ಬಾರಿ ಬರುತ್ತದೆ. ಅದು ಒಂದೇ ಪಾರ್ಟ್‌ನಲ್ಲಿ ಮುಗಿಯುತ್ತದೆ’ ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಎರಡು ಪಾರ್ಟ್‌ಗಳಲ್ಲಿ ಸಿನಿಮಾ ಮಾಡುವುದನ್ನು ಇಷ್ಟಪಡುವುದಿಲ್ಲ, ಒಂದು ಕಥೆಯನ್ನು ಮುಗಿಸಿ ಮತ್ತೊಂದು ಕಥೆಗೆ ಹೊರಟುಹೋಗಬೇಕು ಎಂಬುದು ತಮ್ಮ ಆಲೋಚನೆ ಎಂದು ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆ ಶಿವಕುಮಾರ್​​ರಿಂದ ದೀರ್ಘದಂಡ ನಮಸ್ಕಾರ – Kannada News

ಬೆಂಗಳೂರು, ಜೂನ್​​ 03: ಮುಖ್ಯಮಂತ್ರಿ ಆದ ನಂತರ ಮೊದಲ ಬಾರಿಗೆ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂಬೇಡ್ಕರ್ ಪ್ರತಿಮೆಗೆ ನಮಿಸಿ ಪುಷ್ಪಾರ್ಚನೆ ಮಾಡಿದ್ದಾರೆ. ಬಸವಣ್ಣನ ಫೋಟೋಗೆ ನಮಿಸಿ ಪುಷ್ಪಾರ್ಚನೆ ಮಾಡಿದ ಡಿಕೆಶಿ, ಕೆಂಪೇಗೌಡರ ಮತ್ತು ಜವಾಹರ್ ಲಾಲ್ ನೆಹರು ಅವರು ಪ್ರತಿಮೆಗಳಿಗೂ ನಮಿಸಿ ಪುಷ್ಪಾರ್ಚನೆ ಮಾಡಿದ್ದಾರೆ. ಉತ್ತರ ಬಾಗಿಲಿನಿಂದ ವಿಧಾನಸೌಧ ಪ್ರವೇಶಿಸಿದ ಸಿಎಂ ಡಿಕೆಶಿ, ವಿಧಾನಸೌಧದ ಮೆಟ್ಟಿಲುಗಳಿಗೆ ದೀರ್ಘದಂಡ ನಮಸ್ಕಾರ ಮಾಡಿದ ಬಳಿಕ ಒಳಗೆ ಪ್ರವೆಶಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ರಾಜೀನಾಮೆ, ಜೈಲಿನಿಂದ ಬಂದು 6 ವರ್ಷ ಪಕ್ಷ ಸಂಘಟಿಸಿದ್ಹೇಗೆ? – Kannada News

ಬೆಂಗಳೂರು, (ಜೂನ್ 03): ಡಿಕೆ ಶಿವಕುಮಾರ್ (DK Shivakumar) ಅವರು ಕರ್ನಾಟಕ 25ನೇ ಮುಖ್ಯಮಂತ್ರಿಯಾಗಿ ಇಂದು (ಜೂನ್ 03) ಪ್ರಮಾಣವಚನ ಸ್ವೀಕರಿಸಿದ್ದು, ಇದರೊಂದಿಗೆ ರಾಜ್ಯದಲ್ಲಿ ಡಿಕೆಶಿ ಯುಗಾರಂಭವಾಗಿದೆ. ಸತತ ಆರು ವರ್ಷಗಳ ಕಾಲ ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷರಾಗಿ ಕಾಲಿಚಕ್ರ ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡಿದ್ದರು. ಅಲ್ಲದೇ 2023ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರ ಪ್ರತಿಫಲ ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರಿಗೆ ರವಾನಿಸಿದ್ದಾರೆ.

ಮುಖ್ಯಾಂಶಗಳು

  • ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆ‌ ಶಿವಕುಮಾರ್ ರಾಜೀನಾಮೆ
  • ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆದ ಡಿಕೆಶಿ
  • 6 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿಕೆ ಶಿವಕುಮಾರ್ ರಾಜೀನಾಮೆ ಪತ್ರ ಎಐಸಿಸಿಗೆ ರವಾನೆ

ಡಿಕೆಶಿಯ 6 ವರ್ಷಗಳ ಪಯಣ ಹೇಗಿತ್ತು?

2020ರ ಜುಲೈ 2ರಂದು ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು, ಬರೋಬ್ಬರಿ 6 ವರ್ಷ ಪೂರೈಸಿದ್ದಾರೆ. ಆದ್ರೆ, ಕೆಪಿಸಿಸಿ ಅಧ್ಯಕ್ಷರಾದ ಆರಂಭದಲ್ಲಿ ಡಿಕೆಶಿ ಪಾಲಿಗೆ ಹೂವಿನ ಹಾಸಿಗೆ ಆಗಿರಲಿಲ್ಲ.ಕೆಪಿಸಿಸಿ ಚುಕ್ಕಾಣಿ ವಹಿಸಿಕೊಂಡ ಸಂದರ್ಭದಲ್ಲಿ ವಾತಾವರಣ ಸುಗಮವಾಗಿರಲಿಲ್ಲ. ಕೋವಿಡ್ ಸಂಕಷ್ಟದ ಸಮಯ ಅದಾಗಿತ್ತು. ಅದಕ್ಕೂ ಮೊದಲು ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪವೂ ಇತ್ತು. ಸಿಬಿಐ, ಇಡಿ ತನಿಖೆಗಳು ನಡೆಯುತ್ತಿದ್ದವು. ತಿಹಾರ್ ಜೈಲು ವಾಸ ಮುಗಿಸಿ ಬಂದ ಅವರಿಗೆ ಎಐಸಿಸಿ ಸೂಚನೆಯಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.

ಇದನ್ನೂ ಓದಿ: CM DK Shivakumar: ಡಿ.ಕೆ. ಶಿವಕುಮಾರ್​ ಎಂಬ ಹೆಸರಿನವನಾದ ನಾನು…, ಕರ್ನಾಟಕದ 25ನೇ ಸಿಎಂ ಆಗಿ ಡಿಕೆಶಿ ಪ್ರಮಾಣವಚನ

ರಾಜ್ಯದಲ್ಲಿ ಅಂದು ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದ ಪರಿಣಾಮವನ್ನು ಡಿಕೆಶಿ ಎದುರಿಸಬೇಕಾಗಿತ್ತು. ಆರೋಪ ಹೊತ್ತವರಿಗೆ ಅಧ್ಯಕ್ಷ ಸ್ಥಾನ ಏಕೆ ಎಂಬ ಪ್ರಶ್ನೆಯೂ ಉದ್ಭವಿಸಿತ್ತು. ಈ ಸವಾಲಿನ ನಡುವೆಯೂ ಡಿಕೆಶಿ ಕೆಪಿಸಿಸಿಗೆ ಹೊಸ ಆಯಾಮ ನೀಡಿದರು. ಗಮನ ಸೆಳೆಯುವಂತಹ ಕಾರ್ಯಕ್ರಮಗನ್ನು ಹಮ್ಮಿಕೊಂಡರು. ಪಕ್ಷ ಸಂಘಟನೆ, ಕಾರ್ಯಕರ್ತರನನ್ನು ನಿಭಾಯಿಸುವಲ್ಲಿ , ಕಚೇರಿಗೆ ಕಾರ್ಯಕರ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ವಿರೋಧ ಪಕ್ಷಗಳು ಆಡಳಿತದಲ್ಲಿದ್ದಾಗ ಸರ್ಕಾರದ ವೈಫಲ್ಯವನ್ನು ತಮ್ಮದೇ ಆದ ಶೈಲಿಯಲ್ಲಿ ಜನರ ಮುಂದೆ ಇಡುವಲ್ಲಿ ಇವರ ಪಾತ್ರ ಇತ್ತು.

ಪಕ್ಷ ಸಂಘಟನೆ, ಯುವ ಕಾಂಗ್ರೆಸ್​​​​​​​​ಗೆ ಹುರುಪು

ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಪ್ರಮಖ ಪಾತ್ರ ನಿರ್ವಹಣೆ ಮಾಡಿದ್ದಾರೆ. ಸಂಘಟನೆಯಲ್ಲಿ ಹಿನ್ನಡೆ ಅನುಭವಿಸಿದ್ದ ಪಕ್ಷಕ್ಕೆ ಹೊಸ ಹುರುಪು ನೀಡಿದ್ದಾರೆ. ಯುವಕರನ್ನು ಸೆಳೆಯುವಲ್ಲಿಯೂ ಯಶಸ್ವಿ ಆಗಿದ್ದಾರೆ. ಡಿಜಿಟಲ್ ಸದಸ್ಯತ್ವ ಅಭಿಯಾನದ ಮೂಲಕ ಪಕ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆ ಡಿಜಿಟಲ್ ಸದಸ್ಯತ್ವವನ್ನು ನೋಂದಾಯಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ನೇರವಾಗಿ ಜನರ ಮನೆಬಾಗಿಲಿಗೆ ಕಳುಹಿಸುವ ಮೂಲಕ ಪಕ್ಷದ ತತ್ವಗಳನ್ನು ತಲುಪಿಸುವ ಪ್ರಯತ್ನ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಪಕ್ಷದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಿದ್ದು ಮತ್ತು ಸ್ವಂತ ಕಟ್ಟಡಗಳ ಅಭಿವೃದ್ಧಿಯಲ್ಲೂ ಡಿಕೆಶಿ ಪಾತ್ರ ಇದೆ. ಹಾಗೇ ಯೂತ್​ ಕಾಂಗ್ರೆಸ್​​ ಅನ್ನು ಬಲಿಷ್ಠಗೊಳಿಸಿದ್ದಾರೆ.

ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ ಎಂದಿದ್ದ ಡಿಕೆಶಿ

ಕಾಂಗ್ರೆಸ್‌ ನಲ್ಲಿ ಮುಖಂಡರಿಗೆ ಆದ್ಯತೆ ಹೊರತಾಗಿ ಕಾರ್ಯಕರ್ತರಿಗೆ ಇಲ್ಲ ಎಂಬ ಅಭಿಪ್ರಾಯ ಹಿಂದಿನಿಂದಲೂ ಇತ್ತು. ಆದ್ರೆ, ಡಿಕೆ ಶಿವಕುಮಾರ್ ಅವರು ಇದನ್ನು ತಕ್ಕ ಮಟ್ಟಿಗೆ ಬದಲಾವಣೆ ಮಾಡಿದ್ದಾರೆ. ಕಾಂಗ್ರೆಸ್‌ ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇಲ್ಲ, ಬದಲಾಗಿ ಪಕ್ಷ ಪೂಜೆ ಮಾಡಬೇಕು ಎಂದು ಹಲವು ಕಾರ್ಯಕ್ರಮಗಳಲ್ಲಿ ಒತ್ತಿ ಒತ್ತಿ ಹೇಳುತ್ತಿದ್ದರು. ಅಲ್ಲದೆ, ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂಬುವುದನ್ನು ಪದೇ ಪದೇ ಹೇಳಿದ್ದರು.

ಪಕ್ಷದ ಕಚೇರಿಯಲ್ಲಿ ಶಿಸ್ತು

ಕಾಂಗ್ರೆಸ್ ಕಾರ್ಯಕ್ರಮಗಳು, ಪತ್ರಿಕಾಗೋಷ್ಠಿಗಳು ಅಶಿಸ್ತಿನಿಂದ ಕೂಡಿರುತ್ತವೆ ಎಂಬ ಅಭಿಪ್ರಾಯಗಳು ಇದ್ದವು. ಪಕ್ಷದ ಕಚೇರಿಯಲ್ಲಿ ಶಿಸ್ತು ಕಡಿಮೆ ಎಂಬ ಆರೋಪಗಳು ಸಹ ಇದ್ದವು. ಡಿಕೆ ಶಿವಕುಮಾರ್ ಅಧ್ಯಕ್ಷರಾದ ಬಳಿಕ ಇದು ತಕ್ಕಮಟ್ಟಿನಲ್ಲಿ ಬಲಾವಣೆ ಕಂಡಿದೆ. ಸಾಮಾನ್ಯವಾಗಿ ಕಾಂಗ್ರೆಸ್ ಕಾರ್ಯಕ್ರಮದ ವೇದಿಕೆಗಳಲ್ಲಿ ನಾಯಕರೇ ತುಂಬಿ ತುಳುಕುತ್ತಿದ್ದರು. ಇದನ್ನು ಬದಲಾವಣೆ ಮಾಡಿ ಭಾಷಣ ಮಾಡುವ ಸಂದರ್ಭದಲ್ಲಿ ಮಾತ್ರ ನಾಯಕರು ವೇದಿಕೆಗೆ ಹೋಗುವ ಸಂಪ್ರದಾಯ ತಂದರು. ಇಂತಹ ಕೆಲವೊಂದು ಭಿನ್ನ ಹಾಗೂ ಹೊಸ ಸಂಪ್ರದಾಯಗಳಿಗೆ ಡಿಕೆಶಿ ನಾಂದಿ ಹಾಡಿದ್ದಾರೆ.

ಪಾದಯಾತ್ರೆ, ಹೋರಾಟಗಳ ಮೂಲಕ ಪಕ್ಷಕ್ಕೆ ಬಲ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹಲವು ಹಗರಣಗಳನ್ನು ಬೆಳಕಿಗೆ ತಂದಿತ್ತು. ಬಿಟ್ ಕಾಯಿನ್, 40% ಕಮಿಷನ್, ಗುತ್ತಿಗೆದಾರರ ಪತ್ರ, ಕೋವಿಡ್ ಹಗರಣ ಹೀಗೆ ಸಂಗತಿಗಳನ್ನು ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಹಲವು ಹೋರಾಟ, ಪಾದಯಾತ್ರೆಗಳು ನಡೆದಿವೆ. ಮೇಕೆ ದಾಟು ಪಾದಯಾತ್ರೆ, ಸ್ವಾತಂತ್ರ ನಡಿಗೆ ಸೇರಿದಂತೆ ಕೆಲವು ಪಾದಯಾತ್ರೆಗಳು, ಹೋರಾಟಗಳು ಮಾಡುವ ಮೂಲಕ ಡಿಕೆಶಿ ಪಕ್ಷಕ್ಕೆ ಬಲ ತುಂಬಿದ್ದರು.

ಬೇರೆ-ಬೇರೆ ಪಕ್ಷಗಳ ನಾಯಕರನ್ನು ಸೆಳೆಯುವಲ್ಲಿ ಯಶಸ್ವಿ

ಚುನಾವಣಾ ಸಂದರ್ಭದಲ್ಲಿ ಹಲವು ಪ್ರಮುಖ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಬಲ ತಂದುಕೊಟ್ಟಿದೆ ಎಂಬುವುದು ಸತ್ಯ. ಬಿಜೆಪಿಯ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದರು. ಆದರೆ ಅವರು ಬಳಿಕ ಕಾಂಗ್ರೆಸ್ ತೊರೆದರು. ಅಷ್ಟೇ ಅಲ್ಲದೆ, ಲಕ್ಷ್ಮಣ ಸವದಿ, ಬಿಎಂ ಸುಕುಮಾರ್ ಶೆಟ್ಟಿ, ಪುಟ್ಟಣ್ಣ, ಎಚ್ ಡಿ ತಮ್ಮಣ್ಣ, ಅಯನೂರು ಮಂಜುನಾಥ್, ಮರಿತಿಬ್ಬೇಗೌಡ ಹೀಗೆ ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಡಿಕೆಶಿ ಪ್ರಮುಖ ಪಾತ್ರವಹಿಸಿದ್ದರು.

ಕೂಲಿ ಕೇಳಿ ಸಿಎಂ ಗಾದಿಗೇರಿದ ಡಿಕೆಶಿ

ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಸ್ಪರ್ಶ ನೀಡಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರು ಮನೆ-ಮಟ ಬಿಟ್ಟು ಪಕ್ಷ ಆರು ವರ್ಷಗಳ ಕಾಲ ಹಗಲು ರಾತ್ರಿ ಎನ್ನದೇ ದುಡಿದ್ದರು. ಹೀಗಾಗಿ ಅವರು 2023ರ ಚುನಾವಣೆಯಲ್ಲಿ ಪಕ್ಷ ಅಭೂತಪೂರ್ವ ಬಹುಮತ ಪಡೆದುಕೊಂಡಿತ್ತು.  ಇದರಿಂದ ಡಿಕೆಶಿ ಕೆಲಸಕ್ಕೆ ತಕ್ಕ ಕೂಲಿ ನೀಡಿ ಎಂದು ಪರೋಕ್ಷವಾಗಿ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಆದ್ರೆ, ಹೈಕಮಾಂಡ್ 2ನೇ ಬಾರಿಗೆ ಸಿದ್ದರಾಮಯ್ಯನವರಿಗೆ ಸಿಎಂ ಪಟ್ಟ ಕಟ್ಟಿದ್ದರು.  ಬಳಿಕ ಸಿದ್ದರಾಮಯ್ಯ ಸರ್ಕಾರ ಎರಡು ವರ್ಷ ಪೂರೈಸುತ್ತಿದ್ದಂತೆಯೇ ನಾಯಕತ್ವ ಬದಲಾವಣೆ ಕೂಗೂ ಜೋರಾಗಿದ್ದು, ಸಿಎಂ ಸ್ಥಾನ ಬೇಕೆಂದು ಡಿಕೆಶಿ ತೆರೆಮರೆಯ ಕಸರತ್ತು ಮಾಡಿದ್ದರು. ಮುಸುಕಿನ ಗುದ್ದಾಟಗಳ ಮಧ್ಯೆ ಸಿದ್ದರಾಮಯ್ಯ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿದ್ದಂತೆಯೇ ಹೈಕಮಾಂಡ್ ನಾಯಕತ್ವ ಬದಲಾವಣೆ ಮಾಡಿದ್ದು, ಎರಡು ವರ್ಷದ ಅವಧಿಗೆ ಸಿಎಂ ಪಟ್ಟವನ್ನು ಡಿಕೆ ಶಿವಕುಮಾರ್ ಕಟ್ಟಿದ್ದಾರೆ. ಇದರೊಂದಿಗೆ ಇನ್ಮುಂದೆ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಆಡಳಿತ ಅಂತ್ಯವಾಗಿ ಡಿಕೆಶಿ ರಾಜ್ಯಭಾರ ಆರಂಭವಾಗಿದೆ.

ಮುಂದಿನ ಕೆಪಿಸಿಸಿ ಅಧ್ಯಕ್ಷ ಯಾರು?

ಡಿಕೆ ಶಿವಕುಮಾರ್ ಅವರು ತಮ್ಮ ಆರು ವರ್ಷದ ಅವಧಿಯಲ್ಲಿ ಪಕ್ಷಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಹಳ್ಳಿ-ಹಳ್ಳಿ ಸುತ್ತಾಡಿ ಪಕ್ಷ ಸಂಘಟಿಸಿ ಈ ಮಟ್ಟಕ್ಕೆ ಬೆಳೆಸಿ ನಿರ್ಗಮಿಸಿದ್ದು, ಮುಂದಿನ ಕೆಪಿಸಿಸಿ ಅಧ್ಯಕ್ಷ ಯಾರು ಎನ್ನುವ ಚರ್ಚೆಗಳ ನಡುವೆ ಮೊದಲ ಸತೀಶ್ ಜಾರಕಿಹೊಳಿ ಹೆಸರು ಕೇಳಿಬಂದಿತ್ತು. ಆದ್ರೆ, ಅವರು ಸಚಿವ ಸ್ಥಾನದ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕೆಂದು ಹೈಕಮಾಂಡ್​​ಗೆ ಹೇಳಿದ್ದರು. ಆದ್ರೆ, ಹೈಕಮಾಂಡ್ ಒಬ್ಬರಿಗೆ ಒಂದೇ ಹುದ್ದೆ ನಿಯಮವಮ್ಮು ಮುಂದಿಟ್ಟಿದ್ದು,  ಜಾರಕಿಹೊಳಿ ಬದಲು ವಿಧಾನಪರಿಷತ್ ಸದಸ್ಯ ಬಿಜೆ ಹರಿಪ್ರಸಾದ್​​​ಗೆ ಕೆಪಿಸಿಸಿ ಪಟ್ಟ ಕಟ್ಟಲು ಹೈಕಮಾಂಡ್ ಮುಂದಾಗಿದೆ ಎಂದು ತಿಳಿದುಬಂದಿದೆ.

ಹೌದು.. ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿ ಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ.ಬಿಕೆ ಹರಿ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಹೈಕಮಾಂಡ್ ಇದೀಗ ಈ ನಿರ್ಧಾರ ಕೈಗೊಂಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಹಿಂದುಳಿದ ವರ್ಗಕ್ಕೆ ಸೂಕ್ತ ಸ್ಥಾನ ಮಾನ ನೀಡುವ ನಿಟ್ಟಿನಲ್ಲಿ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ‌ ಎನ್ನಲಾಗಿದ್ದು, ಹರಿಪ್ರಾಸದ್ ಅವರು ಯಾವ ರೀತಿ ಪಕ್ಷವನ್ನು ಮುನ್ನಡೆಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಯಾವಾಗ? – Kannada News

ಐಪಿಎಲ್ (IPL) ಮುಗಿದ ಬಳಿಕ ಇದೀಗ ಟೀಂ ಇಂಡಿಯಾ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್​ನತ್ತ ಮುಖ ಮಾಡಿದೆ. ಅದರಂತೆ ಟೆಸ್ಟ್ ಮತ್ತು ಏಕದಿನ ಸರಣಿಗಾಗಿ ಅಫ್ಘಾನಿಸ್ತಾನ ತಂಡ ಭಾರತಕ್ಕೆ ಬರುತ್ತಿದ್ದು, ಮೊದಲಿಗೆ ಟೆಸ್ಟ್ ಪಂದ್ಯ ನಡೆಯಲಿದೆ. ಆ ಬಳಿಕ ಏಕದಿನ ಸರಣಿ ಶುರುವಾಗಲಿದೆ. ಈ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಆಡುವುದನ್ನು ಕಾಣಬಹುದಾಗಿದೆ. ಈ ಸರಣಿಗಹಾಗಿ ಇವರಿಬ್ಬರು ಜೂನ್ 9 ರಿಂದ ಮುಲ್ಲನ್‌ಪುರದಲ್ಲಿ ಅಭ್ಯಾಸವನ್ನು ಪ್ರಾರಂಭಿಸಲಿದ್ದಾರೆ. ಜೂನ್ 9 ರಿಂದ 11 ರವರೆಗೆ ಮೂರು ದಿನಗಳ ಕಾಲ ನೆಟ್ಸ್​ನಲ್ಲಿ ಇವರಿಬ್ಬರು ಬೆವರು ಸುರಿಸಲಿದ್ದು ಅದರ ನಂತರ, ಜೂನ್ 13 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

2027 ರ ಏಕದಿನ ವಿಶ್ವಕಪ್‌ಗೆ ತಯಾರಿ

ಈ ಏಕದಿನ ಸರಣಿಯು ಕೇವಲ ದ್ವಿಪಕ್ಷೀಯ ಸರಣಿಯಲ್ಲ, 2027 ರ ಏಕದಿನ ವಿಶ್ವಕಪ್‌ಗೆ ತಯಾರಿಯೂ ಆಗಿದೆ. 2023 ರ ವಿಶ್ವಕಪ್ ಫೈನಲ್‌ನಲ್ಲಿ ಎಡವಿದ್ದ ಟೀಂ ಇಂಡಿಯಾ ಮುಂಬರುವ ಏಕದಿನ ವಿಶ್ವಕಪ್​ನ ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಇದು ಸಾಧ್ಯವಾಗಬೇಕಾದರೆ ರೋಹಿತ್ ಮತ್ತು ಕೊಹ್ಲಿ ಅದ್ಭುತ ಫಾರ್ಮ್​ನಲ್ಲಿರಬೇಕಾಗುತ್ತದೆ. ಅಲ್ಲದೆ ಇವರಿಬ್ಬರು ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿರುವ ಕಾರಣ ತಮ್ಮ ಫಿಟ್‌ನೆಸ್ ಮತ್ತು ಫಾರ್ಮ್ ಅನ್ನು ಕಾಪಾಡಿಕೊಳ್ಳಲು ಈ ಸರಣಿಯನ್ನು ನಿರ್ಣಾಯಕವಾಗಿದೆ. ಇವರಿಬ್ಬರ ಅಭ್ಯಾಸಕ್ಕಾಗಿ ಬಿಸಿಸಿಐ, ಆರು ನೆಟ್ ಬೌಲರ್‌ಗಳನ್ನು ಆಯ್ಕೆ ಮಾಡಿದೆ. ಅವರಲ್ಲಿ ಮಯಾಂಕ್ ಯಾದವ್ ಕೂಡ ಒಬ್ಬರು. ಈಗಾಗಲೇ ಏಕದಿನ ತಂಡದಲ್ಲಿ ಆಯ್ಕೆಯಾಗಿರುವ ಪ್ರಿನ್ಸ್ ಯಾದವ್ ಕೂಡ ರೋಹಿತ್ ಮತ್ತು ಕೊಹ್ಲಿ ಜೊತೆಗೆ ಧರ್ಮಶಾಲಾಗೆ ಹೋಗಲಿದ್ದಾರೆ.

ಇಬ್ಬರ ಪ್ರಸ್ತುತ ಫಾರ್ಮ್​ ಹೇಗಿದೆ?

ವಿರಾಟ್ ಕೊಹ್ಲಿ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಡೀ ಪಂದ್ಯಾವಳಿಯಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಕೊಹ್ಲಿ 675 ರನ್ ಕಲೆಹಾಕಿದ್ದರು. ಮತ್ತೊಂದೆಡೆ, ರೋಹಿತ್ ಶರ್ಮಾಗೆ ಈ ಬಾರಿ ಐಪಿಎಲ್ ನಿರೀಕ್ಷೆಯಂತೆ ನಡೆಯಲಿಲ್ಲ. ರೋಹಿತ್ ಆಡಿದ 9 ಇನ್ನಿಂಗ್ಸ್‌ಗಳಲ್ಲಿ ಕೇವಲ 283 ರನ್ ಗಳಿಸಲಷ್ಟೇ ಶಕ್ತರಾದರು. ಕೆಕೆಆರ್ ಮತ್ತು ಲಕ್ನೋ ವಿರುದ್ಧ ಆಡಿದ ಎರಡು ಇನ್ನಿಂಗ್ಸ್‌ಗಳನ್ನು ಹೊರತುಪಡಿಸಿ, ಇತರ ಪಂದ್ಯಗಳಲ್ಲಿ ಅವರ ಪ್ರದರ್ಶನ ನಿರಾಶಾದಾಯಕವಾಗಿತ್ತು. ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:11 pm, Wed, 3 June 26

Source link

Saving Tips: ಕಷ್ಟಪಟ್ಟು ಗಳಿಸಿದ ಹಣವನ್ನು ಉಳಿಸಬೇಕೇ? ಹಾಗಿದ್ರೆ ಈ ಸರಳ ಸಲಹೆ ಪಾಲಿಸಿ ಸಾಕು – Kannada News

ಹಣ ಸಂಪಾದಿಸುವುದು ಎಷ್ಟು ಮುಖ್ಯವೋ ಉಳಿತಾಯ (Saving) ಮಾಡುವುದು ಕೂಡ ಅಷ್ಟೇ ಮುಖ್ಯ. ಆದರೆ ಇಂದಿನ ಈ ದುಬಾರಿ ದುನಿಯಾದಲ್ಲಿ ಆದಾಯಕ್ಕಿಂತ  ಖರ್ಚೆ ಹೆಚ್ಚು. ಇದು ನಾವು ಆರ್ಥಿಕವಾಗಿ ಬಲಶಾಲಿಯಾಗುವುದನ್ನು ತಡೆಯುತ್ತದೆ. ಆರ್ಥಿಕವಾಗಿ ಬಲಶಾಲಿಯಾಗಲು ಬಯಸಿದರೆ, ಆದಾಯ ಮತ್ತು ಖರ್ಚುಗಳ ಜೊತೆಗೆ ಉಳಿತಾಯಕ್ಕೂ ಆದ್ಯತೆ ನೀಡಬೇಕು. ಇದು ಭವಿಷ್ಯದ ಆರ್ಥಿಕ ತೊಂದರೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ನೀವು ಉಳಿತಾಯದ ಜೊತೆಗೆ ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಿದರೆ ನೀವು ಶ್ರೀಮಂತಿಕೆಯನ್ನು ಗಳಿಸಲು ಸಹ ಸಾಧ್ಯವಾಗುತ್ತದೆ. ಹಾಗಿದ್ರೆ ಉಳಿತಾಯದ ಜೊತೆಗೆ ಶ್ರೀಮಂತಿಕೆಯನ್ನು ಗಳಿಸುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ.

ಗಳಿಸಿದ ಹಣವನ್ನು ಉಳಿಸುವುದು ಹೇಗೆ?

ಉಳಿತಾಯ ಮತ್ತು ಹೂಡಿಕೆಗಳತ್ತ ಗಮನ ಹರಿಸಿ: ಮೊದಲು ನೀವು ಉಳಿತಾಯದ ಅಭ್ಯಾಸವನ್ನು  ಬೆಳೆಸಿಕೊಳ್ಳಬೇಕು. ಉಳಿತಾಯದಂತಹ ಉತ್ತಮ ಅಭ್ಯಾಸವನ್ನು ಅಳವಡಿಸಿಕೊಳ್ಳುವುದರಿಂದ ಬಹಳ ಕಡಿಮೆ ಸಮಯದಲ್ಲಿ ಗಣನೀಯ ಪ್ರಮಾಣದ ಹಣ ನಿಮ್ಮದಾಗುತ್ತದೆ. ಈ ಉಳಿತಾಯವನ್ನು ಸರಿಯಾದ ಸ್ಥಳದಲ್ಲಿ ಅಥವಾ ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಗಣನೀಯ ಲಾಭವನ್ನು ಸಹ ನೀವು  ಪಡೆಯಬಹುದು. ಈ ಮೂಲಕ ನೀವು ಶ್ರೀಮಂತಿಕೆಯನ್ನು ಗಳಿಸಲು ಸಾಧ್ಯವಾಗುತ್ತದೆ.

ಅನಗತ್ಯ ಖರ್ಚು ತಪ್ಪಿಸಿ: ನೀವು ಹಣ ಉಳಿಸಲು ಬಯಸಿದರೆ, ನೀವು ವ್ಯರ್ಥ ಖರ್ಚುಗಳನ್ನು ಆದಷ್ಟು ತಪ್ಪಿಸಬೇಕು. ಇದನ್ನು ಮಾಡಲು, ನಿಮ್ಮ ಖರ್ಚುಗಳಿಗೆ ಮಾಸಿಕ ಬಜೆಟ್ ಅನ್ನು ರಚಿಸುವುದು ಅತ್ಯಗತ್ಯ. ನಂತರ, ಈ ಬಜೆಟ್ ಅನ್ನು ಆಧರಿಸಿ ನಿಮ್ಮ ಆದಾಯವನ್ನು ಖರ್ಚು ಮಾಡಿ. ಈ ಸ್ಮಾರ್ಟ್‌ ನಡೆ ಅನಗತ್ಯ ಖರ್ಚುಗಳನ್ನು ತಡೆಯುತ್ತದೆ. ಈ ರೀತಿಯಲ್ಲಿ ನಿಮ್ಮ ಖರ್ಚುಗಳನ್ನು ನಿರ್ವಹಿಸುವ ಮೂಲಕ, ನೀವು ಸುಲಭವಾಗಿ ಹಣವನ್ನು ಉಳಿಸಬಹುದು.

ಹೊರಗೆ ತಿನ್ನುವುದನ್ನು ನಿಯಂತ್ರಿಸಿ: ಹೋಟೆಲ್, ಆನ್‌ಲೈನ್ ಆಹಾರ ಆರ್ಡರ್‌ಗಳು ಮತ್ತು ಕೆಫೆ ವೆಚ್ಚಗಳು ತಿಂಗಳಿಗೆ ಸಾವಿರಾರು ರೂಪಾಯಿ ವ್ಯಯವಾಗಲು ಕಾರಣವಾಗಬಹುದು. ಹಾಗಾಗಿ ಮನೆ ಊಟಕ್ಕೆ ಹೆಚ್ಚಿನ ಆದ್ಯತೆ ನೀಡಿ ಇದು ಖರ್ಚನ್ನು ಕಮ್ಮಿ ಮಾಡುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು.

ಇದನ್ನೂ ಓದಿ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಚಾಣಕ್ಯರ ಮಾತುಗಳನ್ನು ಪಾಲಿಸಿ

ಸ್ಮಾರ್ಟ್ ಶಾಪಿಂಗ್ ಮಾಡಿ: ನೀವು ಏನೇ ಶಾಪಿಂಗ್‌ ಮಾಡುತ್ತಿದ್ದರೂ, ಯಾವುದೇ ವಸ್ತುಗಳನ್ನು  ಆತುರದಿಂದ ಅಥವಾ ಯೋಚಿಸದೆ ಏನನ್ನೂ ಖರೀದಿಸಬೇಡಿ. ನಿಮ್ಮ ಆದಾಯವನ್ನು ಗಮನದಲ್ಲಿಟ್ಟುಕೊಂಡು ವಸ್ತುಗಳನ್ನು ಖರೀದಿಸಿ. ಶಾಪಿಂಗ್‌ ಮಾಡುವ ಮೊದಲು ಏನೆಲ್ಲಾ ಬೇಕು ಎಂಬುದನ್ನು ಪಟ್ಟಿ ಮಾಡಿ ಮತ್ತು ಈ ಪಟ್ಟಿಯಲ್ಲಿ ಇರುವಂತಹ ವಸ್ತುಗಳನ್ನು ಮಾತ್ರ ಖರೀದಿಸಿ. ನೀವು ಈ ವಸ್ತುಗಳ ಬೆಲೆಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬೇಕು. ಆನ್‌ಲೈನ್‌ನಲ್ಲಿ ಆ ವಸ್ತುಗಳು ಅಗ್ಗವಾಗಿದ್ದರೆ ಅಲ್ಲಿಂದಲೇ ಖರೀದಿಸಿ. ಈ ಸ್ಮಾರ್ಟ್ ಶಾಪಿಂಗ್ ಮಾಡುವ ಮೂಲಕ ಹಣವನ್ನು ಉಳಿಸಬಹುದು.

ಈ ಅಭ್ಯಾಸಗಳನ್ನು ಪಾಲಿಸುವ ಮೂಲಕ, ನೀವು ಯಾವುದೇ ಒತ್ತಡವಿಲ್ಲದೆ ಹಣವನ್ನು ಉಳಿಸಬಹುದು. ಇಂದು ನೀವು ಉಳಿಸುವ ಸಣ್ಣ ಮೊತ್ತವೂ ಸಹ ಭವಿಷ್ಯದಲ್ಲಿ ಅದು ನಿಮ್ಮನ್ನು ಆರ್ಥಿಕವಾಗಿ ಸದೃಢಗೊಳಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:00 pm, Wed, 3 June 26

Source link

ವಿದೇಶಿ ಬಂಡವಾಳ ಸೆಳೆಯಲು ಭರ್ಜರಿ ಪ್ಲಾನ್: ಬಾಂಡ್ ತೆರಿಗೆ ಕಡಿತ ಮತ್ತು ಹೂಡಿಕೆ ನಿಯಮಗಳ ಸಡಿಲಿಕೆಗೆ ಕೇಂದ್ರ ಸರ್ಕಾರ ಮುಂದು – Kannada News

ನವದೆಹಲಿ, ಜೂನ್ 3: ಜಾಗತಿಕ ಮಾರುಕಟ್ಟೆಯಿಂದ ಭಾರತದತ್ತ ದೊಡ್ಡ ಪ್ರಮಾಣದಲ್ಲಿ ವಿದೇಶಿ ಬಂಡವಾಳವನ್ನು (Foreign Funds) ಆಕರ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಆರ್ಥಿಕ ಸುಧಾರಣೆಗಳಿಗೆ ಮುಂದಾಗಿದೆ. ದೇಶದ ಬಾಂಡ್ ಮಾರುಕಟ್ಟೆಯಲ್ಲಿ (Bond Market) ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಮತ್ತು ಹೂಡಿಕೆಗೆ ಸಂಬಂಧಿಸಿದ ಕಠಿಣ ನಿಯಮಗಳನ್ನು ಸಡಿಲಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.

ಸರ್ಕಾರದ ಈ ಮಹತ್ವದ ನಿರ್ಧಾರದ ಹಿಂದಿರುವ ಕಾರಣಗಳೇನು?

ಭಾರತವು ಜಾಗತಿಕ ಬಾಂಡ್ ಸೂಚ್ಯಂಕಗಳಿಗೆ (Global Bond Indexes) ಸೇರ್ಪಡೆಯಾದ ನಂತರ, ವಿದೇಶಿ ಹೂಡಿಕೆದಾರರು ಭಾರತೀಯ ಸರ್ಕಾರಿ ಬಾಂಡ್‌ಗಳಲ್ಲಿ (G-Secs) ಹೂಡಿಕೆ ಮಾಡಲು ಭಾರಿ ಆಸಕ್ತಿ ತೋರಿಸುತ್ತಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ದೇಶದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬಲು ಸರ್ಕಾರ ಕ್ರಮಗಳನ್ನು ಕೈಗೊಳ್ಳಲು ಯೋಜಿಸಿದೆ.

ಪ್ರಸ್ತುತ ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು (FPI) ಭಾರತೀಯ ಬಾಂಡ್‌ಗಳಿಂದ ಗಳಿಸುವ ಬಡ್ಡಿ ಆದಾಯದ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸಲಾಗುತ್ತಿದೆ. ಈ ತೆರಿಗೆಯನ್ನು ಗಣನೀಯವಾಗಿ ಕಡಿತಗೊಳಿಸುವುದರಿಂದ ಜಾಗತಿಕ ಹೂಡಿಕೆದಾರರಿಗೆ ಭಾರತೀಯ ಮಾರುಕಟ್ಟೆ ಹೆಚ್ಚು ಲಾಭದಾಯಕವಾಗಿ ಕಾಣಿಸಲಿದೆ.

ಇದನ್ನೂ ಓದಿ: ಜೊಹೊ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರ ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಪೈಪೋಟಿ

ವಿದೇಶಿ ಹೂಡಿಕೆದಾರರು ಭಾರತೀಯ ಬಾಂಡ್ ಮಾರುಕಟ್ಟೆಯನ್ನು ಪ್ರವೇಶಿಸಲು ಇರುವ ನೋಂದಣಿ, ಪರಿಶೀಲನೆ (KYC) ಮತ್ತು ಇತರ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸರಳಗೊಳಿಸಲು ಹಣಕಾಸು ಸಚಿವಾಲಯ ಹಾಗೂ ರಿಸರ್ವ್ ಬ್ಯಾಂಕ್ (RBI) ಜಂಟಿಯಾಗಿ ಕೆಲಸ ಮಾಡುತ್ತಿವೆ.

ಭಾರತದ ಆರ್ಥಿಕತೆಯ ಮೇಲಾಗುವ ಧನಾತ್ಮಕ ಪರಿಣಾಮಗಳು

ಕೇಂದ್ರ ಸರ್ಕಾರದ ಈ ಪ್ರಸ್ತಾಪಿತ ನಿರ್ಧಾರದಿಂದ ದೇಶದ ಹಣಕಾಸು ವಲಯಕ್ಕೆ ಹಲವು ಪ್ರಯೋಜನಗಳು ಸಿಗಲಿವೆ. ತೆರಿಗೆ ಕಡಿತದಿಂದಾಗಿ ಶತಕೋಟಿ ಡಾಲರ್ ಮೌಲ್ಯದ ವಿದೇಶಿ ಬಂಡವಾಳವು ಭಾರತದ ಮಾರುಕಟ್ಟೆಗೆ ಹರಿದು ಬರಲಿದೆ. ಇದು ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು (Forex Reserves) ಮತ್ತಷ್ಟು ಬಲಿಷ್ಠಗೊಳಿಸಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಕುಸಿಯದಂತೆ ಸ್ಥಿರವಾಗಿಡಲು ಈ ವಿದೇಶಿ ಬಂಡವಾಳದ ಹರಿವು ನೆರವಾಗಲಿದೆ.

ಹೆಚ್ಚಿನ ವಿದೇಶಿ ಹೂಡಿಕೆದಾರರು ಭಾರತೀಯ ಸರ್ಕಾರಿ ಬಾಂಡ್‌ಗಳನ್ನು ಖರೀದಿಸಿದಾಗ, ಸರ್ಕಾರವು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ದೇಶದ ಮೂಲಸೌಕರ್ಯ (Infrastructure) ಅಭಿವೃದ್ಧಿ ಯೋಜನೆಗಳಿಗೆ ಹಣಕಾಸು ಒದಗಿಸುವುದು ಸುಲಭವಾಗುತ್ತದೆ.

ಇದನ್ನೂ ಓದಿ: ಚೀನಾ ಔಟ್, ಭಾರತ ಇನ್: ಜಾಗತಿಕ ಮಾರುಕಟ್ಟೆಯಲ್ಲಿ ಜಪಾನ್ ಹೂಡಿಕೆದಾರರ ಭರ್ಜರಿ ದಿಕ್ಕು ಬದಲಾವಣೆ

ಮುಂಬರುವ ಬಜೆಟ್‌ನಲ್ಲಿ ಅಧಿಕೃತ ಘೋಷಣೆ?

ಮೂಲಗಳ ಪ್ರಕಾರ, ಈ ತೆರಿಗೆ ಕಡಿತ ಮತ್ತು ನಿಯಮಗಳ ಸಡಿಲಿಕೆಗೆ ಸಂಬಂಧಿಸಿದ ಅಧಿಕೃತ ಪ್ರಕಟಣೆಯು ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಹೊರಬೀಳುವ ಸಾಧ್ಯತೆಯಿದೆ. ಹಣಕಾಸು ಸಚಿವಾಲಯವು ಈಗಾಗಲೇ ವಿವಿಧ ಜಾಗತಿಕ ಫಂಡ್ ಮ್ಯಾನೇಜರ್​ಗಳು (Fund Managers) ಮತ್ತು ಬ್ಯಾಂಕುಗಳೊಂದಿಗೆ ಮಾತುಕತೆ ನಡೆಸಿದ್ದು, ಅವರ ಬೇಡಿಕೆಗಳಿಗೆ ಪೂರಕವಾಗಿ ಈ ನೀತಿಯನ್ನು ರೂಪಿಸುತ್ತಿದೆ.

ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕತೆಯು ಅತ್ಯಂತ ವೇಗವಾಗಿ ಬೆಳೆಯುತ್ತಿರುವುದರಿಂದ, ಈ ಹೊಸ ಸುಧಾರಣೆಗಳು ಜಾಗತಿಕ ಬಂಡವಾಳ ಹೂಡಿಕೆಯಲ್ಲಿ ಭಾರತದ ಪಾಲನ್ನು ಮತ್ತಷ್ಟು ಹೆಚ್ಚಿಸಲಿವೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link