Category Archives: Blog

Your blog category

ಯುಪಿಎಸ್‌ಸಿ ಫಲಿತಾಂಶದ ಬಗ್ಗೆ ಜನರ ದಾರಿತಪ್ಪಿಸುವ ಜಾಹೀರಾತು: ಎರಡು ಕೋಚಿಂಗ್ ಸಂಸ್ಥೆಗೆ 7 ಲಕ್ಷ ರೂ. ದಂಡ

ನವದೆಹಲಿ, ಮೇ 30: ಯುಪಿಎಸ್‌ಸಿ (UPSC) ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ದಾರಿತಪ್ಪಿಸುವ ಜಾಹೀರಾತು ನೀಡಿದ ಪ್ರಮುಖ ಕೋಚಿಂಗ್ ಸಂಸ್ಥೆ ‘ವಾಜಿರಾಮ್ ಮತ್ತು ರವಿ ಐಎಎಸ್ ಸ್ಟಡಿ ಸೆಂಟರ್’ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಬರೋಬ್ಬರಿ 7 ಲಕ್ಷ ರೂ. ದಂಡ ವಿಧಿಸಿದೆ. ಗ್ರಾಹಕ ರಕ್ಷಣಾ ಕಾಯ್ದೆ 2019ರ ಉಲ್ಲಂಘನೆ ಮತ್ತು ಉದ್ದೇಶಪೂರ್ವಕವಾಗಿ ಪ್ರಮುಖ ಮಾಹಿತಿಯನ್ನು ಮರೆಮಾಚಿದ್ದಕ್ಕಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತೆ ಅನುಪಮ್ ಮಿಶ್ರಾ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿದೆ.

ದಂಡ ವಿಧಿಸಲು ಮುಖ್ಯ ಕಾರಣಗಳೇನು?
ಮಾಹಿತಿ ಮರೆಮಾಚುವಿಕೆ: 2023ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳ ಹೆಸರು ಮತ್ತು ಫೋಟೋಗಳನ್ನು ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ದೊಡ್ಡದಾಗಿ ಪ್ರದರ್ಶಿಸಿತ್ತು. ಆದರೆ, ಆ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಯಾವ ಕೋರ್ಸ್ ಪಡೆದಿದ್ದರು ಎಂಬ ನಿಖರ ಮಾಹಿತಿಯನ್ನು ಮರೆಮಾಚಿತ್ತು.

ದಾರಿತಪ್ಪಿಸುವ ತಂತ್ರ: ಅಭ್ಯರ್ಥಿಗಳು ಕೇವಲ ಉಚಿತ ಸಂದರ್ಶನ ಮಾರ್ಗದರ್ಶನ (IGP)ಪಡೆದಿದ್ದರೂ, ಅವರು ಸಂಸ್ಥೆಯಲ್ಲೇ ಪೂರ್ಣಾವಧಿ ಹಣ ಪಾವತಿಸಿ ಓದಿದ ವಿದ್ಯಾರ್ಥಿಗಳು ಎನ್ನುವಂತೆ ಬಿಂಬಿಸಿ ಗ್ರಾಹಕರನ್ನು ದಾರಿತಪ್ಪಿಸಲಾಗಿತ್ತು.

ಹಕ್ಕುಗಳ ಉಲ್ಲಂಘನೆ: ಎರಡು ಕಠಿಣ ಹಂತಗಳನ್ನು ಸ್ವಂತವಾಗಿ ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಕೇವಲ ಸಂದರ್ಶನದ ವೇಳೆ ಮಾರ್ಗದರ್ಶನ ನೀಡಿ, ಇಡೀ ಯಶಸ್ಸು ತಮ್ಮದೇ ಎಂದು ತೋರಿಸಿಕೊಳ್ಳುವುದು ಕಾನೂನುಬಾಹಿರ. ಇದು ವಿದ್ಯಾರ್ಥಿಗಳಿಗೆ ‘ಮಾಹಿತಿ ಪಡೆಯುವ ಹಕ್ಕಿನ’ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಿಸಿಪಿಎ ಹೇಳಿದೆ.

ಮತ್ತಷ್ಟು ಓದಿ: ಮಿಡಲ್ ಕ್ಲಾಸ್ ಹುಡುಗ UPSC ಪರೀಕ್ಷೆ ಪಾಸ್ ಮಾಡಿದ್ಹೇಗೆ? ಟಿವಿ9 ಜತೆ ಮನದಾಳ ಬಿಚ್ಚಿಟ್ಟ ಟಾಪರ್

60ಕ್ಕೂ ಹೆಚ್ಚು ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದ ಸಿಸಿಪಿಎ
ತರಬೇತಿ ವಲಯದಲ್ಲಿ ಪಾರದರ್ಶಕತೆ ತರಲು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿ ಕಾಯಲು ಸಿಸಿಪಿಎ ದೇಶಾದ್ಯಂತ ಭಾರಿ ಕಾರ್ಯಾಚರಣೆ ನಡೆಸುತ್ತಿದೆ.

ದಾರಿತಪ್ಪಿಸುವ ಜಾಹೀರಾತು ನೀಡಿದ ಐಐಟಿ-ಜೆಇಇ (IIT-JEE), ನೀಟ್ (NEET), ಆರ್‌ಬಿಐ (RBI) ಮತ್ತು ಯುಪಿಎಸ್‌ಸಿ ತರಬೇತಿ ನೀಡುವ 60 ಕ್ಕೂ ಹೆಚ್ಚು ಕೋಚಿಂಗ್ ಸಂಸ್ಥೆಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಇದುವರೆಗೆ ಇಂತಹ ನಿಯಮ ಉಲ್ಲಂಘಿಸಿದ ಸಂಸ್ಥೆಗಳ ಮೇಲೆ ಒಟ್ಟು 1.46 ಕೋಟಿ ರೂ.ಗೂ ಹೆಚ್ಚು ದಂಡ ವಿಧಿಸಲಾಗಿದೆ.

ಸಿಸಿಪಿಎ ಸಂದೇಶ: ಯಾವುದೇ ತರಬೇತಿ ಸಂಸ್ಥೆಯನ್ನು ಆಯ್ಕೆ ಮಾಡುವ ಮುನ್ನ ಅಲ್ಲಿನ ಕೋರ್ಸ್‌ಗಳ ಬಗ್ಗೆ ನಿಖರ ಮತ್ತು ಪಾರದರ್ಶಕ ಮಾಹಿತಿ ಪಡೆಯುವ ಸಂಪೂರ್ಣ ಹಕ್ಕು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮೊದಲು ರಸ್ತೆ, ಆಮೇಲೆ ಚರಂಡಿ: ಹುಬ್ಬಳ್ಳಿಯಲ್ಲಿ ಉಲ್ಟಾ ಪ್ಲ್ಯಾನ್​​​ಗೆ ಕೋಟ್ಯಂತರ ರೂ ಹಣ ನೀರಿನಲ್ಲಿ ಹೋಮ

ಒಳಚರಂಡಿಗಾಗಿ ಅಗೆಯಲಾಗಿರುವ ರಸ್ತೆImage Credit source: tv9 kannada

ಹುಬ್ಬಳ್ಳಿ, ಮೇ 30: ಹುಬ್ಬಳ್ಳಿ-ಧಾರವಾಡ (Hubballi-Dharwad) ಅವಳಿ ನಗರದಲ್ಲಿ ನೂರಾರು ಕೋಟಿ ರೂ ಖರ್ಚು ಮಾಡಿದರು ಅಭಿವೃದ್ದಿ ಮಾತ್ರ ಹೇಳಿಕೊಳ್ಳುವಂತೆ ಆಗುತ್ತಿಲ್ಲ. ಬದಲಾಗಿ ಜನರ ಕೋಟಿ ಕೋಟಿ ತೆರಿಗೆ ಹಣವನ್ನು ವ್ಯರ್ಥ ಮಾಡುವ ಪ್ರಯತ್ನಗಳೇ ಹೆಚ್ಚಾಗುತ್ತಿವೆ. ವಿವಿಧ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ಕೋಟ್ಯಂತರ ರೂ ಹಣ ಪೋಲಾಗುತ್ತಿದೆ. ಎರಡು ಕೋಟಿ ರೂ ವೆಚ್ಚದಲ್ಲಿ ಸಿಸಿ ರಸ್ತೆ (Road) ನಿರ್ಮಾಣ ಮಾಡಲಾಗಿತ್ತು. ಒಳಚರಂಡಿ ನಿರ್ಮಾಣ ಮಾಡಿ ರಸ್ತೆ ಮಾಡಬೇಕಿತ್ತು. ಆದರೆ ಹುಬ್ಬಳ್ಳಿಯಲ್ಲಿ ಮೊದಲು ರಸ್ತೆ ನಿರ್ಮಾಣ ಮಾಡಿ, ಇದೀಗ ಅದೇ ರಸ್ತೆಯನ್ನು ಅಗೆದು ಒಳಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಇದು  ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಹುಬ್ಬಳ್ಳಿ-ಧಾರವಾಡದಲ್ಲಿ ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ರಸ್ತೆಗಳನ್ನು ಅಗೆದ ಅಧಿಕಾರಿಗಳು
  • ಅಧಿಕಾರಿಗಳ ಸಮನ್ವಯ ಕೊರತೆ: ಸಾರ್ವಜನಿಕರ ತೆರಿಗೆ ಹಣ ಪೋಲು
  • ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ

ಏಕಾಏಕಿ ರಸ್ತೆ ಅಗೆದ ಅಧಿಕಾರಿಗಳು

ಹುಬ್ಬಳ್ಳಿ ನಗರದ ಎರಡೆತ್ತಿನ ಮಠದ ಮುಂದೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ವಿಶೇಷ ಅನುದಾನದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ವೀರಾಪುರ ಓಣಿಯಿಂದ ಯಲ್ಲಾಪುರ ಓಣಿವರಗೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಸಿಸಿ ರಸ್ತೆ ನಿರ್ಮಾಣ ಮಾಡುವಾಗ ಸ್ಥಳೀಯರು, ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ, ಹೀಗಾಗಿ ಮೊದಲು ಒಳಚರಂಡಿ ನಿರ್ಮಾಣ ಮಾಡಿ, ನಂತರ ಸಿಸಿ ರಸ್ತೆ ನಿರ್ಮಾಣ ಮಾಡಿ ಅಂತ ಪಾಲಿಕೆ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದ್ದರಂತೆ. ಆದರೆ ಅಂದು ಸಾರ್ವಜನಿಕರ ಮಾತು ಪರಿಗಣಿಸದ ಅಧಿಕಾರಿಗಳು ಒಳಚಂರಡಿ ಮಾಡದೇ ಸಿಸಿ ರಸ್ತೆ ನಿರ್ಮಾಣ ಮಾಡಿದ್ದರು. ಆದರೆ ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿಸಿ ರಸ್ತೆಯನ್ನು ಇದೀಗ ಏಕಾಏಕಿ ಅಗೆಯಲಾಗುತ್ತಿದೆ.

ಇದನ್ನೂ ಓದಿ: ಧಾರವಾಡ ಜನರ ದಶಕಗಳ ಬೇಡಿಕೆ ಈಡೇರುವ ಸಮಯ ಸನಿಹ: ಇದರಿಂದ ಜಿಲ್ಲೆಯ ಜನರಿಗೆ ಎಷ್ಟು ಲಾಭ?

ಈ ಬಗ್ಗೆ ಕೇಳಿದರೆ ಇಲ್ಲಿ ಒಳಚರಂಡಿ ಕಾಮಗಾರಿ ಮಾಡಲಾಗುತ್ತಿದೆ ಅಂತ ಅಧಿಕಾರಿಗಳು ಹೇಳ್ತಿದ್ದಾರಂತೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಒಳಚರಂಡಿ ಕಾಮಗಾರಿ ಮಾಡಿ ರಸ್ತೆ ನಿರ್ಮಾಣ ಮಾಡುವಂತೆ ಹಲವು ಬಾರಿ ಹೇಳಿದರೂ ಕೇಳದೆ ರಸ್ತೆ ಮಾಡಿದ್ದರು. ಇದೀಗ ಒಳಚರಂಡಿಗಾಗಿ ಎರಡು ವರ್ಷದ ಹಿಂದಷ್ಟೇ ಮಾಡಿದ್ದ ಸಿಸಿ ರಸ್ತೆ ಅಗೆಯುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನರ ತೆರಿಗೆ ಹಣ ಪೋಲು

ಕೆಆರ್​ಐಡಿಎಲ್​​ ಸದ್ಯ ಒಳಚರಂಡಿ ಕಾಮಗಾರಿಯನ್ನು ನಡೆಸುತ್ತಿದೆ. ಅದಕ್ಕಾಗಿ ಸಿಸಿ ರಸ್ತೆಯನ್ನು ಮದ್ಯದಲ್ಲಿಯೇ ಅಗೆಯಲಾಗಿದೆ. ಹೀಗಾಗಿ ಈ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಮಾಡಿದ್ದ ಎರಡು ಕೋಟಿ ರೂ ಜನರ ತೆರಿಗೆ ಹಣ ಪೋಲಾದಂತಾಗಿದೆ. ಇನ್ನು ಹುಬ್ಬಳ್ಳಿಯಲ್ಲಿ ಇದೊಂದೆ ರಸ್ತೆಯಲ್ಲ. ಹುಬ್ಬಳ್ಳಿ-ಧಾರವಾಡದ ಅನೇಕ ಕಡೆ ಹೀಗೆಯೇ ಮಾಡಲಾಗುತ್ತಿದೆ. ವಿವಿಧ ಇಲಾಖೆಯ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಕೋಟಿ ಕೋಟಿ ರೂ ಜನರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ. ರಸ್ತೆ ನಿರ್ಮಾಣ ಮಾಡುವುದು, ಬಳಿಕ ಕೆಲವೇ ತಿಂಗಳು, ವರ್ಷಗಳಲ್ಲಿ ಕುಡಿಯುವ ನೀರಿಗಾಗಿ, ಒಳಚರಂಡಿಗಾಗಿ ಅಗೆಯುವ  ಕೆಲಸ ಮಾಡಲಾಗುತ್ತಿದೆ.

ಪಾಲಿಕೆಯ ಮೇಯರ್​​​ ಜೋತಿ ಪಾಟೀಲ್ ಹೇಳಿದ್ದಿಷ್ಟು​​ 

ಉತ್ತಮ ರಸ್ತೆಗಳನ್ನು ಸರಿಮಾಡುವ ಕೆಲಸ ಕೂಡ ಆಗುತ್ತಿಲ್ಲ. ಹೀಗಾಗಿ ಜನರು ಸಂಕಷ್ಟ ಪಡುವಂತಹ ಸ್ಥಿತಿ  ನಿರ್ಮಾಣವಾಗಿದೆ. ಇನ್ನು ಈ ಬಗ್ಗೆ ಪಾಲಿಕೆಯ ಮೇಯರ್​​​ ಜೋತಿ ಪಾಟೀಲ್​​​​ರನ್ನು ಕೇಳಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರತ್ಯಕ ಪಾಲಿಕೆ ಹೋರಾಟಕ್ಕೆ ತೆರೆ: ಹುಬ್ಬಳ್ಳಿ-ಧಾರವಾಡ ಬೃಹತ್ ಮಹಾನಗರ ಪಾಲಿಕೆ ಠರಾವು ರದ್ದು

ಹುಬ್ಬಳ್ಳಿ-ಧಾರವಾಡದಲ್ಲಿ ಜನರ ತೆರಿಗೆ ಹಣವನ್ನು ಪೋಲು ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಅಧಿಕಾರಿಗಳ ಅಂದಾದರ್ಬಾರ್ ನೋಡಿಯೂ ಜನಪ್ರತಿನಿಧಿಗಳು ಸುಮ್ಮನಾಗಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಇದರಿಂದ ಜನರಿಗೆ ನಿತ್ಯ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ. ಇನ್ನಾದರೂ ವಿವಿಧ ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸುವ ಕೆಲಸವಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಣ್ವೀರ್ ನಿಷೇಧ ಪ್ರಕರಣ: ಒಕ್ಕೂಟಗಳ ನಡುವೆ ಶುರುವಾಯ್ತು ಜಗಳ

ಬಾಲಿವುಡ್​​ನ ಸ್ಟಾರ್ ನಟ ರಣ್ವೀರ್ ಸಿಂಗ್ (Ranveer Singh) ಮೇಲೆ ಸಿನಿಮಾ ನೌಕರರ ಒಕ್ಕೂಟ (FWICE) ಅನಧಿಕೃತ ನಿಷೇಧ ಘೋಷಿಸಿದ್ದು, ರಣ್ವೀರ್ ಸಿಂಗ್ ಕೆಲಸ ಮಾಡುವ ಸಿನಿಮಾನಲ್ಲಿ ತಮ್ಮ ಒಕ್ಕೂಟದ ಯಾವುದೇ ನಟರು, ತಂತ್ರಜ್ಞರು, ಇತರೆ ಕಾರ್ಮಿಕರು ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ‘ಡಾನ್ 3’ ಸಿನಿಮಾದ ಒಪ್ಪಂದ ಮುರಿದು ನಿರ್ಮಾಪಕರಿಗೆ ಆಗಿರುವ ನಷ್ಟವನ್ನು ತುಂಬಿಕೊಡಲು ನಿರಾಕರಿಸಿದ್ದಕ್ಕಾಗಿ ರಣ್ವೀರ್ ವಿರುದ್ಧ ಈ ನಿಷೇಧ ಹೇರಲಾಗಿದೆ. ಆದರೆ ಇದೀಗ ರಣ್ವೀರ್ ಬೆಂಬಲಕ್ಕೆ ಸಿನಿಮಾ ಮತ್ತು ಟಿವಿ ನಟರ ಒಕ್ಕೂಟ ಬಂದಿದ್ದು, ರಣ್ವೀರ್ ಪರವಾಗಿ ನಾವು ನಿಲ್ಲುತ್ತೇವೆ’ ಎಂದಿದ್ದಾರೆ. ಇದೀಗ ಈ ಪ್ರಕರಣ ಎರಡು ಪ್ರಬಲ ಒಕ್ಕೂಟಗಳ ನಡುವಿನ ಯುದ್ಧವಾಗಿ ಮಾರ್ಪಾಟಾಗಿದೆ.

ಸಿನಿ ಆಂಡ್ ಟಿವಿ ಆರ್ಟಿಸ್ಟ್ ಅಸೋಸಿಯೇಷನ್ (CINTAA) ಇದೀಗ ನಟ ರಣ್ವೀರ್ ಸಿಂಗ್​​ಗೆ ಬೆಂಬಲ ಘೋಷಿಸಿದ್ದು, ಸಿನಿ ನೌಕರರ ಒಕ್ಕೂಟ ಘೋಷಿಸಿರುವ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದೆ. ರಣ್ವೀರ್ ಸಿಂಗ್ ಅವರು ಸಿಂಟಾ (CINTAA)ನ ಸದಸ್ಯರಾಗಿದ್ದು, ಇದೇ ಕಾರಣಕ್ಕೆ ಇಂದು (ಮೇ 30) ಪತ್ರಿಕಾಗೋಷ್ಠಿ ನಡೆಸಿರುವ ಸಿಂಟಾದ ಉಪಾಧ್ಯಕ್ಷೆ ಪದ್ಮಿನಿ ಕೊಲ್ಲಾಪುರಿ, ರಣ್ವೀರ್ ಸಿಂಗ್ ಮೇಲೆ ಹೇರಲಾಗಿರುವ ನಿಷೇಧವನ್ನು ವಿರೋಧಿಸಿದ್ದಲ್ಲದೆ, ರಣ್ವೀರ್ ಪರವಾಗಿ ಮುಂದಿನ ದಿನಗಳಲ್ಲಿ ತಮ್ಮ ಸಂಘ ನಿಲ್ಲುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ:ರಣ್ವೀರ್ ಸಿಂಗ್​​ಗೆ ಮುಂಚೆ ಬಾಲಿವುಡ್​​ನಲ್ಲಿ ನಿಷೇಧಕ್ಕೊಳಗಾಗಿದ್ದ ನಟರಿವರು

‘ರಣವೀರ್ ಸಿಂಗ್ ಅವರು ನಮ್ಮ ಸಿಂಟಾ (CINTAA) ಸಂಘದ ಸದಸ್ಯರಾಗಿ ಇರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಅವರಿಗೆ ನಮ್ಮ ಅಗತ್ಯವಿದ್ದಾಗಲೆಲ್ಲಾ ನಾವು ಅವರ ಪರವಾಗಿ ಮತ್ತು ಅವರ ಬೆಂಬಲವಾಗಿ ನಿಲ್ಲುತ್ತೇವೆ. ಈ ಪ್ರಕರಣ ಈಗಾಗಲೇ ಕಾನೂನು ಪ್ರಕ್ರಿಯೆಯ ಅಡಿಯಲ್ಲಿದೆ, ಆದ್ದರಿಂದ ನಾನು ಇದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ನಾವು ಈ ವಿವಾದದಲ್ಲಿ ರಣ್ವೀರ್ ಅವರ ಬೆಂಬಲವಾಗಿ ನಿಲ್ಲುತ್ತೇವೆಂದು ಘೋಷಿಸುತ್ತಿದ್ದೇವೆ. ಅವರಿಗೆ ಎಂದಾದರೂ ನಮ್ಮ ಅಗತ್ಯವಿದ್ದರೆ, ನಾವು ರಣವೀರ್ ಸಿಂಗ್ ಪರವಾಗಿದ್ದೇವೆ’ ಎಂದಿದ್ದಾರೆ. ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಅನು ಮಲ್ಲಿಕ್ ಸಹ ಉಪಾಧ್ಯಕ್ಷೆ ಪದ್ಮಿನಿ ಕೊಲ್ಲಾಪುರಿ ಅವರೊಟ್ಟಿಗಿದ್ದರು.

ರಣ್ವೀರ್ ಸಿಂಗ್ ಅವರು ಫರ್ಹಾನ್ ಅಖ್ತರ್ ನಿರ್ದೇಶಿಸಿ, ನಿರ್ಮಾಣ ಮಾಡಲಿದ್ದ ‘ಡಾನ್ 3’ ಸಿನಿಮಾನಲ್ಲಿ ನಟಿಸುವುದಾಗಿ ಒಪ್ಪಿಕೊಂಡಿದ್ದರು. ಆದರೆ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಯಶಸ್ಸಿನ ಬಳಿಕ ‘ಡಾನ್ 3’ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದು ಹಿಂದೆ ಸರಿದರು. ಆದರೆ ಸಿನಿಮಾದ ಚಿತ್ರೀಕರಣ ಮಾಡಲು ನಿರ್ಮಾಪಕರು ಸಜ್ಜಾಗಿಬಿಟ್ಟಿದ್ದರು. ಕೊನೆಯ ಹಂತದಲ್ಲಿ ಒಪ್ಪಂದ ಮುರಿದ ಕಾರಣ 45 ಕೋಟಿ ರೂಪಾಯಿ ಹಣವನ್ನು ನಷ್ಟಪರಿಹಾರವಾಗಿ ನೀಡುವಂತೆ ಫರ್ಹಾನ್ ಅಖ್ತರ್ ಕೇಳಿದರು. ಆದರೆ ರಣ್ವೀರ್ ಸಿಂಗ್ ಇದಕ್ಕೆ ಒಪ್ಪಲಿಲ್ಲ. ಕೊನೆಗೆ ಫರ್ಹಾನ್ ಅಖ್ತರ್ ಪ್ರಕರಣವನ್ನು ಸಿನಿಮಾ ನೌಕರರ ಒಕ್ಕೂಟ (FWICE)ಕ್ಕೆ ಕೊಂಡೊಯ್ದು ದೂರು ನೀಡಿದರು. ಅಲ್ಲಿ ವಿಚಾರಣೆ ನಡೆದು ರಣ್ವೀರ್ ವಿರುದ್ಧ ಅನಧಿಕೃತ ನಿಷೇಧ ಹೇರಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೂನ್ 1 ರಿಂದ ಘಾಟ್ ಸೆಕ್ಷ​ನಲ್ಲಿ ವಂದೇ ಭಾರತ್ ಟ್ರಯಲ್ ರನ್: ಬೆಂಗಳೂರು – ಸುಬ್ರಹ್ಮಣ್ಯ ಪ್ರಯಾಣಕ್ಕಿನ್ನು ನಾಲ್ಕೈದು ಗಂಟೆ ಸಾಕು!

ವಂದೇ ಭಾರತ್ ಎಕ್ಸ್‌ಪ್ರೆಸ್ (ಸಾಂದರ್ಭಿಕ ಚಿತ್ರ)Image Credit source: TV9 Network

ಮಂಗಳೂರು, ಮೇ 30: ಕರಾವಳಿ ಕರ್ನಾಟಕ (Coastal Karnataka) ಮತ್ತು ರಾಜಧಾನಿ ಬೆಂಗಳೂರು (Bengaluru) ನಡುವೆ ಕೊನೆಗೂ ‘ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (Bengaluru–Mangaluru Vande Bharat Express)’ ಸಂಚಾರಕ್ಕೆ ಮುಹೂರ್ತ ಕೂಡಿಬಂದಿದೆ. ಜೂನ್​ನಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆ ಇದ್ದು, ಅದರ ಪೂರ್ವಭಾವಿಯಾಗಿ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಠಿಣವಾದ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಜೂನ್ 1 ರಿಂದ ಆರಂಭವಾಗಲಿದೆ. ಸದ್ಯ ಈ ಭಾಗದಲ್ಲಿ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಅಂತಿಮ ತಾಂತ್ರಿಕ ಅಡೆತಡೆಗಳು ನಿವಾರಣೆಯಾಗುವ ಹಂತಕ್ಕೆ ತಲುಪಿವೆ. ರೈಲ್ವೆ ಸಚಿವಾಲಯದ ಗುಣಮಟ್ಟ ಮತ್ತು ಮಾನದಂಡಗಳ ವಿಭಾಗವಾದ ಆರ್‌ಡಿಎಸ್‌ಒ (RDSO) ಉನ್ನತ ಮಟ್ಟದ ತಂಡವು ಜೂನ್ 1 ರಿಂದ ಈ ಘಾಟ್ ಪ್ರದೇಶದಲ್ಲಿ ಸುಧಾರಿತ ಪ್ರಾಯೋಗಿಕ ಸಂಚಾರವನ್ನು (Trial Runs) ಆರಂಭಿಸಲಿದೆ.

ಮುಖ್ಯಾಂಶಗಳು

  • ಜೂನ್ 1 ರಿಂದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ಸೆಕ್ಷನ್‌ನಲ್ಲಿ ವಂದೇ ಭಾರತ್ ರೈಲು ಸಂಚಾರದ ಸುರಕ್ಷತಾ ಹೈ-ಲೆವೆಲ್ ಟ್ರಯಲ್ ರನ್.
  • ದುರ್ಗಮ ತಿರುವುಗಳು ಹಾಗೂ 57 ಸುರಂಗಗಳನ್ನು ಹೊಂದಿರುವ 55 ಕಿಮೀ ಕಠಿಣ ಘಾಟ್ ಮಾರ್ಗ.
  • ಜೂನ್​ನಲ್ಲೇ ರೈಲು ಸಂಚಾರ ಶುರು ಮಾಡುವ ಭರವಸೆ ನೀಡಿದ್ದ ಸಚಿವರು.

ಸೋಮಣ್ಣ ಭರವಸೆಯಂತೆ ಜೂನ್‌ನಲ್ಲೇ ರೈಲು ಓಡಾಟ

ಇತ್ತೀಚೆಗೆ ಮೇ 23 ರಂದು ಮಂಗಳೂರಿಗೆ ಭೇಟಿ ನೀಡಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಜೂನ್ ತಿಂಗಳಿನಲ್ಲಿಯೇ ಚಾಲನೆ ನೀಡಲಾಗುವುದು ಎಂದು ಘೋಷಿಸಿದ್ದರು. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಡಿಆರ್‌ಎಂ (DRM) ಮುದಿತ್ ಮಿತ್ತಲ್ ನೀಡಿರುವ ಮಾಹಿತಿ ಪ್ರಕಾರ, ಜೂನ್ 1 ರಿಂದ ಆರಂಭವಾಗಲಿರುವ ಈ ಟೆಸ್ಟಿಂಗ್ ಪ್ರಕ್ರಿಯೆಯು ಸುಮಾರು ಒಂದು ವಾರಗಳ ಕಾಲ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ವಿವಿಧ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಇತ್ತೀಚೆಗಷ್ಟೇ ಎಲೆಕ್ಟ್ರಿಕ್ ಇಂಜಿನ್ ಮೂಲಕ ಖಾಲಿ ಪ್ಯಾಸೆಂಜರ್ ರೇಕ್ ಬಳಸಿ ನಡೆಸಿದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.

ಭಾರತದ ಅತ್ಯಂತ ಸವಾಲಿನ ರೈಲ್ವೆ ಮಾರ್ಗ

ಹಾಸನ-ಮಂಗಳೂರು ಲೈನ್‌ನಲ್ಲಿ ಬರುವ 55 ಕಿಲೋಮೀಟರ್ ಉದ್ದದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಅತ್ಯಂತ ಕಡಿದಾದ ಮಾರ್ಗವಾಗಿದ್ದು, ಭಾರತದಲ್ಲೇ ಅತ್ಯಂತ ಕಠಿಣ ತಾಂತ್ರಿಕ ಸವಾಲುಗಳನ್ನು ಹೊಂದಿರುವ ರೈಲ್ವೆ ಸೆಕ್ಷನ್ ಎಂದು ಗುರುತಿಸಲ್ಪಟ್ಟಿದೆ. ಭೂಕುಸಿತದ ಭೀತಿಯ ನಡುವೆಯೂ 57 ಸುರಂಗಗಳು (Tunnels), 258 ಸೇತುವೆಗಳು ಮತ್ತು 108 ಕಡಿದಾದ ತಿರುವುಗಳನ್ನು ಹೊಂದಿರುವ ಈ ಮಾರ್ಗದಲ್ಲಿ ಓವರ್‌ಹೆಡ್ ವಿದ್ಯುದೀಕರಣದ ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ರೈಲುಗಳು ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

729 ಕೋಟಿ ರೂ.ಗೆ ಏರಿಕೆಯಾದ ಯೋಜನಾ ವೆಚ್ಚ

ಮೈಸೂರು-ಹಾಸನ-ಮಂಗಳೂರು ಸೇರಿದಂತೆ ಒಟ್ಟು 400 ಕಿಲೋಮೀಟರ್ ರೈಲ್ವೆ ಲೈನ್ ವಿದ್ಯುದೀಕರಣದ ಗುತ್ತಿಗೆಯನ್ನು ಆಗಸ್ಟ್ 2021 ರಲ್ಲಿ ‘ರೈಟ್ಸ್ (RITES’ ಸಂಸ್ಥೆಗೆ ನೀಡಲಾಗಿತ್ತು. ಆರಂಭದಲ್ಲಿ ಈ ಯೋಜನೆಗೆ 461.23 ಕೋಟಿ ರೂ. ಅಂದಾಜಿಸಲಾಗಿದ್ದರೂ, ರೈಲ್ವೆ ಸಚಿವಾಲಯವು ಮಾರ್ಚ್ 2026 ರಲ್ಲಿ ಇದರ ಪರಿಷ್ಕೃತ ವೆಚ್ಚವನ್ನು 729.28 ಕೋಟಿ ರೂ.ಗೆ ಹೆಚ್ಚಿಸಿದೆ. ಇದರಲ್ಲಿ ಕೇವಲ ಘಾಟ್ ಸೆಕ್ಷನ್ ವಿದ್ಯುದೀಕರಣಕ್ಕಾಗಿ ಡಿಸೆಂಬರ್ 2023 ರಿಂದ ಡಿಸೆಂಬರ್ 2025 ರ ಅವಧಿಯಲ್ಲಿ 93.55 ಕೋಟಿ ರೂ. ಖರ್ಚು ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ; ಏನಿದರ ವಿಶೇಷತೆ?

ಈ ಆರ್‌ಡಿಎಸ್‌ಒ ಪ್ರಾಯೋಗಿಕ ಸಂಚಾರದ ವರದಿ ಸಲ್ಲಿಕೆಯಾದ ತಕ್ಷಣ ರೈಲ್ವೆ ಮಂಡಳಿಯು ವಂದೇ ಭಾರತ್ ಸಂಚಾರದ ಅಧಿಕೃತ ಉದ್ಘಾಟನಾ ದಿನಾಂಕ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ‘ನಿನ್ನ ವಯಸ್ಸಲ್ಲಿ ನಮಗೆ..’; ವೈಭವ್ ಆಟವನ್ನು ಕೊಂಡಾಡಿದ ಅಮಿತಾಬ್ ಬಚ್ಚನ್‌

ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ಹಾಗೂ ಗುಜರಾತ್ (RR vs GT) ನಡುವಿನ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ತಂಡ ಮೂರನೇ ಬಾರಿಗೆ ಐಪಿಎಲ್ ಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 214 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 18.4 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿತು. ಈ ಪಂದ್ಯದಲ್ಲಿ ರಾಜಸ್ಥಾನ್ ಸೋತಿತ್ತಾದರೂ ತಂಡದ ಪರ ಏಕಾಂಗಿ ಹೋರಾಟ ನೀಡಿದ 15 ವರ್ಷದ ಪೋರ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಆಟಕ್ಕೆ ಇಡೀ ವಿಶ್ವ ಕ್ರಿಕೆಟ್ ಸಲಾಂ ಹೊಡೆದಿದೆ. ಕ್ರಿಕೆಟ್ ದಿಗ್ಗಜರಿಂದ ಹಿಡಿದು ಬಾಲಿವುಡ್ ಸೆಲೆಬ್ರೆಟಿಗಳು ವೈಭವ್ ಆಟವನ್ನು ಕೊಂಡಾಡಿದ್ದಾರೆ. ಅಂತಹವರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್‌ (Amitabh Bachchan) ಕೂಡ ಒಬ್ಬರು.

96 ರನ್​ ಬಾರಿಸಿದ ವೈಭವ್

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಜಸ್ಥಾನದ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆದರೆ ಆರಂಭಿಕನಾಗಿ ಕಣಕ್ಕಿಳಿದಿದ್ದ ವೈಭವ್ ವಿಕೆಟ್​ಗಳ ಪತನದ ನಡುವೆಯೂ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ನೋಡ ನೋಡುತ್ತಲೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದಾದ ಬಳಿಕ ತಮ್ಮ ಎಂದಿನ ಹೊಡಿಬಡಿ ಆಟವನ್ನು ಶುರು ಮಾಡಿದ ವೈಭವ್ ಶತಕದ ಸನಿಹಕ್ಕೂ ಬಂದರು. ಆದರೆ ಮತ್ತೊಮ್ಮೆ ನರ್ವಸ್ 90 ಗೆ ಬಲಿಯಾದ ವೈಭವ್ 96 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತದೆ ಬೇಸರದೊಂದಿಗೆ ವೈಭವ್ ಪೆವಿಲಿಯನ್​ಗೆ ಮರಳಿದರು. ಈ ಆಘಾತದ ಜೊತೆಗೆ ತಂಡದ ಸೋಲು ಕೂಡ ವೈಭವ್​ಗೆ ತೀವ್ರ ನೋವನ್ನುಂಟು ಮಾಡಿತು.

ನಿನ್ನ ವಯಸ್ಸಿನಲ್ಲಿ ನಮಗೆ; ಬಿಗ್ ಬಿ ಶ್ಲಾಘನೆ

ಹೀಗಾಗಿ ಗುಜರಾತ್ ವಿರುದ್ಧ ಸೋತ ಬಳಿಕ ಡಗೌಟ್​ನಲ್ಲಿ ಕುಳಿತು ಕಣ್ಣೀರು ಹಾಕಿದ ವೈಭವ್ ಅವರ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದನ್ನು ಗಮನಿಸಿದ ದಿಗ್ಗಜರು ವೈಭವ್ ಅವರನ್ನು ಸಂತೈಸುವ ಕೆಲಸ ಮಾಡಿದ್ದರು. ಅವರಲ್ಲಿ ಒಬ್ಬರಾದ ಅಮಿತಾಬ್ ಬಚ್ಚನ್ ತಮ್ಮ ಎಕ್ಸ್​ ಖಾತೆಯಲ್ಲಿ ವೈಭವ್ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು, ‘15ನೇ ವಯಸ್ಸಿನಲ್ಲಿ ನಿನ್ನ ಆಟ ಸ್ಮರಣೀಯವಾದದ್ದು ಸೂರ್ಯ (ವೈಭವ್ ಸೂರ್ಯವಂಶಿ). ನಿನ್ನ ವಯಸ್ಸಲ್ಲಿ ನಮಗೆ ಸರಿಯಾಗಿ ಗೋಲಿ ಹಾಗೂ ಗಲ್ಲಿ ಕ್ರಿಕೆಟ್ ಆಡಲು ಬರುತ್ತಿರಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಗುಜರಾತ್ ವಿರುದ್ಧ ವೈಭವ್ ಪ್ರದರ್ಶನ

ಗುಜರಾತ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ವೈಭವ್ ಕೇವಲ 47 ಎಸೆತಗಳಲ್ಲಿ 96 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್​ನಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್​ಗಳನ್ನು ಬಾರಿಸಿದರು. ಈ ಇನ್ನಿಂಗ್ಸ್ ಮೂಲಕ ವೈಭವ್ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದರು. ಆದಾಗ್ಯೂ ರಾಜಸ್ಥಾನ್ ತಂಡದ ಕಳಪೆ ಬೌಲಿಂಗ್ ಹಾಗೂ ಫೀಲ್ಡಿಂಗ್​ನಿಂದಾಗಿ ತಂಡಕ್ಕೆ ಸೋಲಿನ ಆಘಾತ ಎದುರಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

34 ವರ್ಷದ ಸುದೀರ್ಘ ಸೇವೆಯ ನಂತರ ಕೆಎಸ್​ಆರ್​ಟಿಸಿ ಬಸ್ ಚಾಲಕನ ವಿದಾಯ! ನೆಟ್ಟಿಗರ ಮನ ಗೆದ್ದ ವೈರಲ್ ವೀಡಿಯೋ

34 ವರ್ಷದ ಸುದೀರ್ಘ ಸೇವೆಯ ನಂತರ ಕೆಎಸ್​ಆರ್​ಟಿಸಿ ಬಸ್ ಚಾಲಕನ ವಿದಾಯ!

ಬೆಂಗಳೂರು, ಮೇ 30: ದೀರ್ಘಕಾಲದ ಸೇವೆ ಮುಗಿಸಿ ನಿವೃತ್ತರಾಗುವ ಕ್ಷಣ ಪ್ರತಿಯೊಬ್ಬರಿಗೂ ಭಾವುಕವಾಗಿರುತ್ತದೆ. ಅದರಲ್ಲೂ ಸಾರ್ವಜನಿಕ ಸಾರಿಗೆಯಲ್ಲಿ ದಶಕಗಳ ಕಾಲ ಲಕ್ಷಾಂತರ ಜನರನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸಿದ ಚಾಲಕನೊಬ್ಬನ ನಿವೃತ್ತಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕರೊಬ್ಬರು ತಮ್ಮ 34 ವರ್ಷಗಳ ಸುದೀರ್ಘ ಮತ್ತು ಯಶಸ್ವಿ ಸೇವೆಯ ನಂತರ ನಿವೃತ್ತಿ ಹೊಂದಿದ್ದು, ಇಂಟರ್ನೆಟ್ ಈ ಕ್ಷಣವನ್ನು ಅತ್ಯಂತ ಗೌರವದಿಂದ ಸಂಭ್ರಮಿಸುತ್ತಿದೆ.

ಮುಖ್ಯಾಂಶಗಳು

  • ಕೆಎಸ್‌ಆರ್‌ಟಿಸಿ ಚಾಲಕನ 34 ವರ್ಷಗಳ ಸುದೀರ್ಘ ಸೇವೆಗೆ ಭಾವುಕ ವಿದಾಯ ಸಂದಿದೆ.
  • ನಿವೃತ್ತಿ ದಿನದಂದು ಬಸ್ ಸ್ಟೀರಿಂಗ್ ಮುಟ್ಟಿ ಚಾಲಕ ಕಣ್ಣೀರಿಟ್ಟ ವಿಡಿಯೋ ವೈರಲ್ ಆಗಿದೆ.
  • ಅಪಘಾತ ಮುಕ್ತ ಸೇವೆ ಸಲ್ಲಿಸಿದ ಚಾಲಕನ ನಿಷ್ಠೆಗೆ ನೆಟ್ಟಿಗರು ಸಲ್ಯೂಟ್ ಹೊಡೆದಿದ್ದಾರೆ.

ಸ್ಟೀರಿಂಗ್ ಮುಟ್ಟಿ ನಮಸ್ಕರಿಸಿ ಕಣ್ಣೀರಿಟ್ಟ ಚಾಲಕ!

ವೈರಲ್ ಆಗಿರುವ ವಿಡಿಯೋದಲ್ಲಿ, ಸಾರಿಗೆ ಸಂಸ್ಥೆಯ ಹಿರಿಯ ಚಾಲಕರೊಬ್ಬರು ತಮ್ಮ ಸೇವೆಯ ಕೊನೆಯ ದಿನದಂದು ತಾವು ದಿನನಿತ್ಯ ಚಲಾಯಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಸ್ಟೀರಿಂಗ್ ಚಕ್ರವನ್ನು ಅತ್ಯಂತ ಭಕ್ತಿಯಿಂದ ಮುಟ್ಟಿ ಮುಗಿದು, ಪ್ರೀತಿಯಿಂದ ಮುತ್ತಿಕ್ಕಿ ಭಾವುಕರಾಗಿದ್ದಾರೆ. ಇಷ್ಟು ವರ್ಷಗಳ ಕಾಲ ತಮಗೆ ಅನ್ನ ನೀಡಿದ ವಾಹನವನ್ನು ಅಗಲುವ ನೋವಿನಲ್ಲಿ ಅವರ ಕಣ್ಣುಗಳು ತೇವಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

“Going to miss this man” (ಈ ವ್ಯಕ್ತಿಯನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ) ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ಈ ವಿಡಿಯೋ, ಬಸ್ ಚಾಲಕರು ತಮ್ಮ ವೃತ್ತಿ ಮತ್ತು ವಾಹನದೊಂದಿಗೆ ಬೆಳೆಸಿಕೊಳ್ಳುವ ಅಪಾರ ಭಾವನಾತ್ಮಕ ಬಂಧಕ್ಕೆ ಸಾಕ್ಷಿಯಾಗಿದೆ.

ಚಾಲಕನ ನಿಷ್ಠೆಗೆ ತಲೆಬಾಗಿದ ಇಂಟರ್ನೆಟ್

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆಯೇ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ಚಾಲಕನಿಗೆ ಶುಭ ಹಾರೈಕೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಯಾವುದೇ ಅಪಘಾತಗಳಿಲ್ಲದೆ 34 ವರ್ಷಗಳ ಕಾಲ ಜನರನ್ನು ಸುರಕ್ಷಿತವಾಗಿ ಕರೆದೊಯ್ದ ಇವರ ಸೇವೆ ಶ್ಲಾಘನೀಯ, ಇದು ಕೇವಲ ಕೆಲಸವಲ್ಲ, ಅವರ ಪಾಲಿನ ದೇವಸ್ಥಾನ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆಶಿ ಪ್ರಮಾಣವಚನಕ್ಕೆ ಅಧಿಕೃತ ಮುಹೂರ್ತ ಫಿಕ್ಸ್: ಆಡಂಬರವಿಲ್ಲದೇ ಸರಳ ಸಮಾರಂಭಕ್ಕೆ ತೀರ್ಮಾನ

ಬೆಂಗಳೂರು, (ಮೇ 30):ಹಲವು ಗೊಂದಲಗಳ ನಡುವೆ ಕೊನೆಗೂ ಕರ್ನಾಟಕದ (Karnataka) ನೂತನ ಸಿಎಂ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಬುಧವಾರ ಅಂದರೆ ಜೂನ್ 3ರಂದು ಡಿಕೆ ಶಿವಕುಮಾರ್‌ (DK Shivakumar) ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಸಿಎಂ ಆಗುತ್ತಿದ್ದರೂ ಸಹ ಯಾವುದೇ ಆಡಂಬರವಿಲ್ಲದೇ ಲೋಕಭವನದಲ್ಲಿ (ರಾಜಭವನ) ಸರಳವಾದ ಕಾರ್ಯಕ್ರಮದಲ್ಲಿ  ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

Source link

ಕಾವೇರಿ ಪುನರುಜ್ಜೀವನಕ್ಕೆ ‘ಕಾವೇರಿ ಕೂಗು’ ಮಹಾ ಸಂಕಲ್ಪ: 1.2 ಕೋಟಿ ಹೊಸ ಸಸಿ ನೆಡಲು ಸಜ್ಜಾದ 2.6 ಲಕ್ಷ ರೈತರು

ಚೆನ್ನೈ, ಮೇ 30: ಕಾವೇರಿ(Cauvery) ನದಿಯ ನೀರಿನ ಮಟ್ಟ ವೇಗವಾಗಿ ಕುಸಿಯುತ್ತಿರುವ ಆತಂಕದ ನಡುವೆ, ನದಿಗೆ ಮರುಜೀವ ನೀಡಲು ಮತ್ತು ಕೃಷಿ ಸಂಕಷ್ಟಕ್ಕೆ ಮುಕ್ತಿ ಹಾಡಲು ಸದ್ಗುರುಗಳು ಕಲ್ಪಿಸಿದ “ ಸೇವ್ ಸಾಯಿಲ್- ಕಾವೇರಿ ಕಾಲಿಂಗ್’’ ಪರಿಸರ ಆಂದೋಲನವು ಹೊಸ ಮೈಲಿಗಲ್ಲನ್ನು ತಲುಪಿದೆ. ನದಿ ಜಲಾನಯನ ಪ್ರದೇಶದ ಪರಿಸರ ವ್ಯವಸ್ಥೆಯನ್ನು ಪುನಃಸ್ಥಾಪಿಸುವ ನಿರಂತರ ಪ್ರಯತ್ನದ ಭಾಗವಾಗಿ, ಮುಂಬರುವ 2026–27ರ ಸಾಲಿನಲ್ಲಿ ಬರೋಬ್ಬರಿ 1.2 ಕೋಟಿ ಹೊಸ ಸಸಿಗಳನ್ನು ನೆಡುವ ಬೃಹತ್ ಗುರಿಯನ್ನು ಈ ಆಂದೋಲನ ಹೊಂದಿದೆ.

ಕೋಟಿ ಕೋಟಿ ಮರಗಳ ಮಹಾ ಕ್ರಾಂತಿ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಯೋಜನಾ ನಿರ್ದೇಶಕ ಆನಂದ್ ಎಥಿರಾಜಲು, ಈ ಆಂದೋಲನದ ಮೂಲಕ ಇಲ್ಲಿಯವರೆಗೆ 13.4 ಕೋಟಿ ಮರಗಳನ್ನು ನೆಡಲಾಗಿದೆ. ಇದು ಕೇವಲ ಸಂಖ್ಯೆಯಲ್ಲ, ಇದು ತಮ್ಮ ಸಾಂಪ್ರದಾಯಿಕ ಬೇಸಾಯ ಪದ್ಧತಿಯನ್ನು ಬಿಟ್ಟು ಮರ ಆಧಾರಿತ ಕೃಷಿಗೆ ಬದಲಾದ 2.6 ಲಕ್ಷ ರೈತರ ಬದುಕಿನ ಚಿತ್ರಣ ಎಂದರು.

ಅರಣ್ಯ ಆಧಾರಿತ ನದಿಯಾದ ಕಾವೇರಿ, ಕಳೆದ 70 ವರ್ಷಗಳಲ್ಲಿ ತನ್ನ ಶೇ. 40 ಕ್ಕಿಂತ ಹೆಚ್ಚು ನೀರಿನ ಹರಿವನ್ನು ಮತ್ತು ಶೇ. 87 ರಷ್ಟು ಮೂಲ ಹಸಿರು ಹೊದಿಕೆಯನ್ನು ಕಳೆದುಕೊಂಡಿದೆ. ಇದನ್ನು ಪರಿಹರಿಸಲು, ಖಾಸಗಿ ಕೃಷಿ ಭೂಮಿಯಲ್ಲಿ ಒಟ್ಟು 242 ಕೋಟಿ ಮರಗಳನ್ನು ನೆಡಲು ಅನುವು ಮಾಡಿಕೊಡುವುದು ಈ ಆಂದೋಲನದ ಅಂತಿಮ ಗುರಿಯಾಗಿದೆ. ಇದರಿಂದ ನದಿಯನ್ನು ನಂಬಿರುವ 8.4 ಕೋಟಿ ಜನರಿಗೆ ವರ್ಷಪೂರ್ತಿ ನೀರು ಸಿಗಲಿದೆ.

ಕೇವಲ 5 ರೂ.ಗೆ ಸಸಿ: ಮಹಿಳೆಯರ ಸಾರಥ್ಯದ ಏಷ್ಯಾದ ಅತಿ ದೊಡ್ಡ ನರ್ಸರಿ
ಗುಣಮಟ್ಟದ ಸಸಿಗಳನ್ನು ಕಡಿಮೆ ವೆಚ್ಚದಲ್ಲಿ ಒದಗಿಸಲು ಆಂದೋಲನವು ಬೃಹತ್ ಮೂಲಸೌಕರ್ಯವನ್ನು ಹೊಂದಿದೆ. ತಮಿಳುನಾಡಿನ ಕಡಲೂರಿನಲ್ಲಿರುವ ಏಷ್ಯಾದ ಅತಿ ದೊಡ್ಡ ‘ಸಿಂಗಲ್ ಸೈಟ್ ನರ್ಸರಿ’ಯನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸುತ್ತಿದ್ದು, ಇದು 85 ಲಕ್ಷ ಸಸಿಗಳ ಸಾಮರ್ಥ್ಯ ಹೊಂದಿದೆ. ತಿರುವಣ್ಣಾಮಲೈನ ಮತ್ತೊಂದು ನರ್ಸರಿ 15 ಲಕ್ಷ ಸಸಿಗಳನ್ನು ನೆಡುತ್ತಾರೆ.

ಮತ್ತಷ್ಟು ಓದಿ: ನದಿಗೆ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ಜಲಸಮಾಧಿ: ಮೂರೇ ದಿನದಲ್ಲಿ 10 ಮಂದಿ ಕಾವೇರಿ ಪಾಲು!

ತೇಗ, ಕೆಂಪು ಶ್ರೀಗಂಧ, ಮಹೋಗಾನಿ ಸೇರಿದಂತೆ 54 ತಳಿಗಳ ಉನ್ನತ ಮೌಲ್ಯದ ಮರದ ಸಸಿಗಳನ್ನು ರೈತರಿಗೆ ಕೇವಲ 5 ರೂ. ಸಬ್ಸಿಡಿ ದರದಲ್ಲಿ ಹಾಗೂ ಹಣ್ಣು-ಹೂವಿನ ಸಸಿಗಳನ್ನು 10 ರೂ.ಗೆ ನೀಡಲಾಗುತ್ತಿದೆ. ಇದು ತಮಿಳುನಾಡು ಮತ್ತು ಕರ್ನಾಟಕದ 53 ವಿತರಣಾ ಕೇಂದ್ರಗಳ ಮೂಲಕ ರೈತರನ್ನು ತಲುಪುತ್ತಿದೆ.

ಡಿಜಿಟಲ್ ಕ್ರಾಂತಿ ಮತ್ತು ರೈತರಿಗೆ 24 ಗಂಟೆ ಬೆಂಬಲ
ಕ್ಷೇತ್ರ ಭೇಟಿ: ಆಂದೋಲನದ 200 ಕ್ಕೂ ಹೆಚ್ಚು ತಜ್ಞರು 2025 ರಲ್ಲೇ 26,500 ಕ್ಕೂ ಹೆಚ್ಚು ಜಮೀನುಗಳಿಗೆ ಭೇಟಿ ನೀಡಿ ಉಚಿತ ಮಣ್ಣು ಮತ್ತು ನೀರಿನ ತಪಾಸಣೆ ನಡೆಸಿದ್ದಾರೆ. ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಕಾರ್ಯನಿರ್ವಹಿಸುವ ಮೀಸಲಾದ ಸಹಾಯವಾಣಿ ಮತ್ತು 225 ಸಕ್ರಿಯ ವಾಟ್ಸಾಪ್ ಗ್ರೂಪ್‌ಗಳ ಮೂಲಕ 60,000 ಕ್ಕೂ ಹೆಚ್ಚು ರೈತರಿಗೆ 24-48 ಗಂಟೆಗಳ ಒಳಗೆ ತಾಂತ್ರಿಕ ಸಲಹೆ ನೀಡಲಾಗುತ್ತಿದೆ. ಮಣ್ಣು, ಜಲ ಸಂಪನ್ಮೂಲ ಮತ್ತು ಗ್ರಾಮೀಣ ಜೀವನೋಪಾಯವನ್ನು ಒಟ್ಟಿಗೆ ಸುರಕ್ಷಿತಗೊಳಿಸುವ ಈ ರೈತ-ಚಾಲಿತ ಪರಿಸರ ಚಳವಳಿ ದೇಶಕ್ಕೇ ಮಾದರಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಫೈನಲ್ ಪ್ಲೇಯಿಂಗ್ ಇಲೆವೆನ್: RCB ಮುಂದಿದೆ 2 ಆಯ್ಕೆ

IPL 2026: ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಕೊನೆಯ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಭಾನುವಾರ (ಮೇ.31) ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕಾಗಿ ಆರ್​ಸಿಬಿ ತಂಡ ಹೇಗೆ ಪ್ಲೇಯಿಂಗ್ ಇಲೆವೆನ್ ರೂಪಿಸಲಿದೆ ಎಂಬುದೇ ಈಗ ಕುತೂಹಲ.

ಏಕೆಂದರೆ ಈ ಬಾರಿ ಆರ್​ಸಿಬಿ ಗುಜರಾತ್ ಟೈಟಾನ್ಸ್ ವಿರುದ್ಧ ಮೂರು ಪಂದ್ಯಗಳನ್ನಾಡಿದೆ. ಈ ಮೂರು ಮ್ಯಾಚ್​ಗಳಲ್ಲೂ ವಿಭಿನ್ನ ಪ್ಲೇಯಿಂಗ್ ಇಲೆವೆನ್ ರೂಪಿಸಿತ್ತು. ಈ ಸಂಯೋಜನೆಯೊಂದಿಗೆ ಆರ್​ಸಿಬಿ ಎರಡು ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ.

  • ಬೆಂಗಳೂರಿನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧ ಆರ್​ಸಿಬಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು.
  • ಧರ್ಮಶಾಲಾದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 92 ರನ್​ಗಳಿಂದ ಬಗ್ಗು ಬಡಿಯುವಲ್ಲಿ ಆರ್​ಸಿಬಿ ಯಶಸ್ವಿಯಾಗಿತ್ತು.

ಆದರೆ ಈ ಎರಡು ಜಯಗಳ ನಡುವೆ ಆರ್​ಸಿಬಿ ಒಂದು ಪಂದ್ಯದಲ್ಲಿ ಸೋಲನುಭವಿಸಿದೆ. ಅದು ಕೂಡ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ.  ಅಂದರೆ ಇದೀಗ ಅಹಮದಾಬಾದ್​ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ಫೈನಲ್ ಮ್ಯಾಚ್ ನಡೆಯುತ್ತಿದೆ.

  • ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 42ನೇ ಪಂದ್ಯದಲ್ಲಿ​ ಆರ್​ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು 4 ವಿಕೆಟ್​ಗಳ ಜಯ ಸಾಧಿಸಿತ್ತು.

ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಬೌಲರ್​ಗಳು ಪರಾಕ್ರಮ ಮೆರೆದಿದ್ದರು. ಅಂದರೆ ಆರ್​ಸಿಬಿ ತಂಡವನ್ನು ಕೇವಲ 155 ರನ್​ಗಳಿಗೆ ಆಲೌಟ್ ಮಾಡಿದ್ದರು.

ಇದೀಗ ಅದೇ ಮೈದಾನದಲ್ಲಿ ಮತ್ತೆ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲು ಆರ್​ಸಿಬಿ ಸಜ್ಜಾಗಿದೆ. ಆದರೆ ಈ ಪಂದ್ಯಕ್ಕಾಗಿ ಆರ್​ಸಿಬಿ ಕೊನೆಯ ಬಾರಿ ಕಣಕ್ಕಿಳಿದ ಪ್ಲೇಯಿಂಗ್ ಇಲೆವೆನ್ ಅನ್ನೇ ಮುಂದುವರೆಸಲಿದೆಯಾ? ಅಥವಾ ಈ ಹಿಂದೆ ಅಹಮದಾಬಾದ್​ನಲ್ಲಿ ಆಡಿದ 11 ಆಟಗಾರರನ್ನು ಕಣಕ್ಕಿಳಿಸಲಿದೆಯಾ ಎಂಬುದೇ ಪ್ರಶ್ನೆ.

ಆರ್​ಸಿಬಿ ಮುಂದಿದೆ 2 ಆಯ್ಕೆ:

ಮೊದಲ ಕ್ವಾಲಿಫೈಯರ್​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ದಾಖಲೆಯ ವಿಜಯ ಸಾಧಿಸಿದ ಆಡುವ ಬಳಗವನ್ನೇ ಮುಂದುವರೆಸಲು ಬಯಸಿದರೆ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ವಿರಾಟ್ ಕೊಹ್ಲಿ
  • ವೆಂಕಟೇಶ್ ಅಯ್ಯರ್
  • ದೇವದತ್ ಪಡಿಕ್ಕಲ್
  • ರಜತ್ ಪಾಟಿದಾರ್ (ನಾಯಕ)
  • ಟಿಮ್ ಡೇವಿಡ್
  • ಕೃನಾಲ್ ಪಾಂಡ್ಯ
  • ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  • ಭುವನೇಶ್ವರ್ ಕುಮಾರ್
  • ಜೋಶ್ ಹೇಝಲ್​ವುಡ್
  • ರಾಸಿಖ್ ದಾರ್
  • ಜೇಕಬ್ ಢಪಿ
  • ರೊಮಾರಿಯೊ ಶೆಫರ್ಡ್ (ಇಂಪ್ಯಾಕ್ಟ್ ಪ್ಲೇಯರ್).

ಈ ಹಿಂದೆ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ಕಣಕ್ಕಿಳಿದ ಬಳಗವನ್ನು ಆಡಿಸಲು ನಿರ್ಧರಿಸಿದರೆ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿರಲಿದೆ…

  • ವಿರಾಟ್ ಕೊಹ್ಲಿ
  • ಫಿಲ್ ಸಾಲ್ಟ್​
  • ದೇವದತ್ ಪಡಿಕ್ಕಲ್
  • ರಜತ್ ಪಾಟಿದಾರ್ (ನಾಯಕ)
  • ಟಿಮ್ ಡೇವಿಡ್
  • ಕೃನಾಲ್ ಪಾಂಡ್ಯ
  • ಜಿತೇಶ್ ಶರ್ಮಾ (ವಿಕೆಟ್ ಕೀಪರ್)
  • ರೊಮಾರಿಯೊ ಶೆಫರ್ಡ್
  • ಭುವನೇಶ್ವರ್ ಕುಮಾರ್
  • ಜೋಶ್ ಹೇಝಲ್​ವುಡ್
  • ಸುಯಶ್ ಶರ್ಮಾ
  • ರಾಸಿಖ್ ದಾರ್/ ವೆಂಕಟೇಶ್ ಅಯ್ಯರ್ (ಇಂಪ್ಯಾಕ್ಟ್ ಪ್ಲೇಯರ್).

ಇಲ್ಲಿ ಎರಡು ಪ್ಲೇಯಿಂಗ್ ಇಲೆವೆನ್​ನಲ್ಲಿ ಅಂತಹ ದೊಡ್ಡ ಬದಲಾವಣೆ ಕಂಡು ಬರದಿದ್ದರೂ, ಫಿಲ್ ಸಾಲ್ಟ್​ಗೆ ಅವಕಾಶ ನೀಡುವ ಸಲುವಾಗಿ ವೆಂಕಟೇಶ್ ಅಯ್ಯರ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಲಿಸ್ಟ್​ನಲ್ಲಿರಿಸಬಹುದು.

ಇದನ್ನೂ ಓದಿ: IPL 2026: ಐವರು ರಣಬೇಟೆಗಾರರು RCB ಪಾಲಿಗೆ ಡೇಂಜರಸ್!

ಈ ಮೂಲಕ ಬಲಿಷ್ಠ ಬ್ಯಾಟಿಂಗ್ ಲೈನಪ್​ನೊಂದಿಗೆ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಏಕೆಂದರೆ ಇದೇ ಮೈದಾನದಲ್ಲಿ ಕಳೆದ ಬಾರಿ ಆರ್​ಸಿಬಿ ಕೇವಲ 155 ರನ್​ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಈ ಬಾರಿ ಬ್ಯಾಟಿಂಗ್ ಲೈನಪ್ ಮತ್ತಷ್ಟು ಬಲಿಷ್ಠಗೊಳಿಸುವ ಸಾಧ್ಯತೆ ಹೆಚ್ಚು.

 

 

Source link

IPL 2026: ಐವರು ರಣಬೇಟೆಗಾರರು RCB ಪಾಲಿಗೆ ಡೇಂಜರಸ್!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೆ 15 ಪಂದ್ಯಗಳನ್ನಾಡಿದೆ. ಈ ಹದಿನೈದು ಪಂದ್ಯಗಳಲ್ಲಿ ಆರ್​ಸಿಬಿ ತಂಡ ಆಲೌಟ್ ಆಗಿರುವುದು ಏಕೈಕ ಮ್ಯಾಚ್​ನಲ್ಲಿ. ಅಂದರೆ 8 ತಂಡಗಳ ಬೌಲರ್​ಗಳಿಗೆ ಆರ್​ಸಿಬಿ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಲು ಸಾಧ್ಯವಾಗಿಲ್ಲ. ಇನ್ನು ರಾಯಲ್​ ಚಾಲೆಂಜರ್ಸ್ ಬೆಂಗಳೂರು ಪಡೆಯನ್ನು ಆಲೌಟ್ ಮಾಡಿದ ತಂಡ ಮತ್ಯಾವುದೂ ಅಲ್ಲ, ಅದು ಗುಜರಾತ್ ಟೈಟಾನ್ಸ್​. ಅದು ಕೂಡ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ.

ಅಂದರೆ ಈ ಬಾರಿಯ ಐಪಿಎಲ್​ನ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಲೌಟ್ ಆಗಿತ್ತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 19.2 ಓವರ್​ಗಳಲ್ಲಿ 155 ರನ್​ಗಳಿಸಿ ಆಲೌಟ್ ಆಗಿತ್ತು.

ಅಂದು ಆರ್​ಸಿಬಿ ಬ್ಯಾಟರ್​ಗಳ ಪಾಲಿಗೆ ಕಂಟಕವಾಗಿದ್ದು ಗುಜರಾತ್ ಟೈಟಾನ್ಸ್ ತಂಡದ ಐವರು ಬೌಲರ್​ಗಳು ಅವರೆಂದರೆ…

  • ಮೊಹಮ್ಮದ್ ಸಿರಾಜ್
  • ಕಗಿಸೊ ರಬಾಡ
  • ರಶೀದ್ ಖಾನ್
  • ಜೇಸನ್ ಹೋಲ್ಡರ್
  • ಅರ್ಷದ್ ಖಾನ್

ಈ ಐವರು ರಣಬೇಟೆಗಾರರು ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೇವಲ 155 ರನ್​ಗಳಿಗೆ ಆಲೌಟ್ ಮಾಡಿದ್ದರು.

ಇದೀಗ ಅದೇ ಗುಜರಾತ್ ಟೈಟಾನ್ಸ್​ ವಿರುದ್ಧ ಫೈನಲ್ ಪಂದ್ಯವಾಡಲು ಆರ್​ಸಿಬಿ ಸಜ್ಜಾಗಿದೆ. ಅದು ಸಹ ಈ ಹಿಂದೆ ಆಲೌಟ್ ಆಗಿದ್ದ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ.

ಹೀಗಾಗಿ ಗುಜರಾತ್ ಟೈಟಾನ್ಸ್​ ತಂಡವು ಈ ಬಾರಿ ಕೂಡ ಐವರು ರಣಬೇಟೆಗಾರರೊಂದಿಗೆ ಕಣಕ್ಕಿಳಿಯುವುದು ದಿಟ. ಇಲ್ಲಿ ಅರ್ಷದ್ ಖಾನ್ ಆಡದಿದ್ದರೆ, ಅವರ ಸ್ಥಾನದಲ್ಲಿ ಪ್ರಸಿದ್ಧ್ ಕೃಷ್ಣ ಕಾಣಿಸಿಕೊಳ್ಳಬಹುದು. ಇನ್ನುಳಿದ ನಾಲ್ವರು ಫೈನಲ್ ಮ್ಯಾಚ್ ಆಡುವುದು ಖಚಿತ ಎಂದೇ ಹೇಳಬಹುದು.

ಇದನ್ನೂ ಓದಿ: 96 ರನ್​ಗಳಿಸಿ ಬಂದ ವೈಭವ್​ನ ಗದರಿಸಿದ ರಿಯಾನ್ ಪರಾಗ್!

ಹೀಗಾಗಿ ಅಹಮದಾಬಾದ್​ ಪಿಚ್​ನಲ್ಲಿ ಈ ನಾಲ್ವರನ್ನು ಎದುರಿಸಲು ಆರ್​ಸಿಬಿ ತಂಡ ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯಬೇಕಿದೆ. ಏಕೆಂದರೆ ಗುಜರಾತ್ ಟೈಟಾನ್ಸ್ ತಂಡವು ತವರು ಪಿಚ್​ನ ಸಂಪೂರ್ಣ ಲಾಭ ಪಡೆಯಲು ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ. ಈ ಸಿದ್ಧತೆಯೊಂದಿಗೆ ಈ ಬಾರಿಯ ಐಪಿಎಲ್ ಫೈನಲ್ ಬೌಲಿಂಗ್ (GT) vs ಬ್ಯಾಟಿಂಗ್ (RCB) ಎಂಬುದೇ ಸದ್ಯದ ಕುತೂಹಲ.

 

 

 

 

Source link