Category Archives: Blog

Your blog category

‘ಶಾಂತಿ ಕ್ರಾಂತಿ’ ಸಿನಿಮಾದಿಂದ ಆದ ಸಾಲ ತೀರಿಸಲು ರವಿಚಂದ್ರನ್​​ಗೆ ಹಿಡಿದಿತ್ತು 15 ವರ್ಷ

ಕನ್ನಡ ಚಿತ್ರರಂಗದ ‘ಕನಸುಗಾರ’ ಎಂದೇ ಖ್ಯಾತರಾದ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಚಿತ್ರರಂಗದಲ್ಲಿ ಸದಾ ಹೊಸತನ, ಭವ್ಯತೆ ಹಾಗೂ ಅದ್ದೂರಿತನಕ್ಕೆ ಹೆಸರಾದ ರವಿಚಂದ್ರನ್ ಅವರ ಬದುಕಿನಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದೆ. ಆರ್ಥಿಕವಾಗಿ ಈ ಚಿತ್ರ ರವಿಚಂದ್ರನ್ ಅವರನ್ನು ಸಾಲದ ಸುಳಿಗೆ ದೂಡಿತ್ತು. ಅವರ ಜನ್ಮದಿನದ ಈ ಸಂದರ್ಭದಲ್ಲಿ ಆ ದಿನಗಳ ಒಂದು ಮೆಲುಕು ಇಲ್ಲಿದೆ.

1991ರಲ್ಲಿ ತೆರೆಕಂಡ ‘ಶಾಂತಿ ಕ್ರಾಂತಿ’ ಚಿತ್ರವು ಕನ್ನಡ ಸೇರಿದಂತೆ ಒಟ್ಟು 3 ಭಾಷೆಗಳಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿತ್ತು. ಚಿತ್ರದ ಭವ್ಯತೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿತ್ತು. ಆದರೆ, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದಾಗ ರವಿಚಂದ್ರನ್ ಅವರು ದೊಡ್ಡ ಸಾಲದ ಸುಳಿಗೆ ಸಿಲುಕಿದರು. ಆರಂಭದಲ್ಲಿ ಸಿನಿಮಾ ವರ್ಕ್ ಆಗಲ್ಲ ಎಂಬುದು ಗೊತ್ತಾದಾಗ ಚಿತ್ರೀಕರಣವನ್ನು ಅರ್ಧಕ್ಕೇ ನಿಲ್ಲಿಸಿಬಿಡುವ ಆಲೋಚನೆ ಹಾಗೂ ಯೋಜನೆಗಳೂ ಕೂಡ ಮೂಡಿದ್ದವು. ಆದರೆ ತಂದೆಯ ನಿರ್ದೇಶನದಂತೆ ಛಲ ಬಿಡದೆ ಸಿನಿಮಾ ಪೂರ್ಣಗೊಳಿಸಿದ್ದರು.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ರವಿಚಂದ್ರನ್, ‘ಶಾಂತಿ ಕ್ರಾಂತಿ ಚಿತ್ರದಿಂದ ಆದ ಸಾಲ ಸಣ್ಣದೇನಲ್ಲ. ಆ ಸಾಲವನ್ನು ಸಂಪೂರ್ಣವಾಗಿ ತೀರಿಸಲು ನನಗೆ ಬರೋಬ್ಬರಿ 15 ವರ್ಷಗಳ ಸುದೀರ್ಘ ಸಮಯ ಬೇಕಾಯಿತು’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸಿನಿಮಾ ಸೋತರೂ ಧೃತಿಗೆಡದ ಅವರು ಸತತ ಪರಿಶ್ರಮ ಹಾಗೂ ಮುಂದಿನ ಚಿತ್ರಗಳ ಮೂಲಕ ಆ ಸಾಲವನ್ನು ಮೆಟ್ಟಿ ನಿಂತರು.

ಇದನ್ನೂ ಓದಿ: ‘ಸಿಂಪತಿ ಬೇಡ, ಸೋಲು ಪದ ಕೇಳಿದ್ರೆ ಸಿಟ್ಟು ಬರುತ್ತೆ’; ರವಿಚಂದ್ರನ್

ಸಿನಿಮಾ ಮೇಲಿನ ಅತಿಯಾದ ಪ್ರೀತಿಯಿಂದಾಗಿ ಇಂತಹ ನಷ್ಟಗಳನ್ನು ಎದುರಿಸಿದರೂ, ಕನ್ನಡ ಚಿತ್ರರಂಗದ ಭವ್ಯತೆಯನ್ನು ದೇಶಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ರವಿಚಂದ್ರನ್ ಅವರದ್ದು. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನೆಚ್ಚಿನ ನಟನಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:03 am, Sat, 30 May 26

Source link

ಐಪಿಎಲ್ ಫೈನಲ್ ಯಾವಾಗ? ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹೈವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಈ ವೇದಿಕೆಯಲ್ಲಿ ಕಣಕ್ಕಿಳಿಯಲಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು. ಅಂದರೆ ಈ ಬಾರಿಯ ಐಪಿಎಲ್ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ ತಂಡಗಳೇ ಫೈನಲ್​ಗೇರಿದೆ. ಹೀಗಾಗಿ ಉಭಯ ತಂಡಗಳಿಂದ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಬಹುದು. ಈ ಪಂದ್ಯದ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ…

ಫೈನಲ್ ಪಂದ್ಯ ಯಾವಾಗ?

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಐಪಿಎಲ್​ ಫೈನಲ್ ಪಂದ್ಯವು ಮೇ 31 ರಂದು ನಡೆಯಲಿದೆ.

ಫೈನಲ್ ಮ್ಯಾಚ್ ನಡೆಯುವುದು ಎಲ್ಲಿ?

  • ಈ ಬಾರಿಯ ಫೈನಲ್ ಪಂದ್ಯವು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ. ಅಂದರೆ ಗುಜರಾತ್ ಟೈಟಾನ್ಸ್ ತಂಡದ ತವರು ಮೈದಾನದಲ್ಲಿಅಂತಿಮ ಪಂದ್ಯ ನಡೆಯುತ್ತಿರುವುದು ವಿಶೇಷ.

ಎಷ್ಟು ಗಂಟೆಗೆ ಮ್ಯಾಚ್ ಶುರು?

  • ಫೈನಲ್ ಪಂದ್ಯವು ರಾತ್ರಿ 7.30 ರಿಂದ ಶುರುವಾಗಲಿದೆ. ಹಾಗೆಯೇ ಟಾಸ್ ಪ್ರಕ್ರಿಯೆ 7 ಗಂಟೆಗೆ ನಡೆಯಲಿದೆ.

ಉಭಯ ತಂಡಗಳು ಈ ಕೆಳಗಿನಂತಿದೆ:

ಗುಜರಾತ್ ಟೈಟಾನ್ಸ್ ತಂಡ: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್ ಯಾರ್ರಾ, ಲ್ಯೂಕ್ ವುಡ್.

ಇದನ್ನೂ ಓದಿ: ಅದೆಂತಹ ನೋವು… ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್.

 

 

Source link

ಟ್ರಂಪ್ ನೇತೃತ್ವದ ಇರಾನ್ ಸಭೆ ಅಪೂರ್ಣ: ಒಪ್ಪಂದಕ್ಕೆ ಒಪ್ಪದ ಅಮೆರಿಕ, ಇಂಧನ ದರ ಏರಿಕೆ ಆತಂಕ

ವಾಷಿಂಗ್ಟನ್, ಮೇ 30: ಇರಾನ್ ಜೊತೆಗಿನ ಉದ್ವಿಗ್ನತೆಯನ್ನು ಕೊನೆಗೊಳಿಸಲು ಮತ್ತು ಸಂಭಾವ್ಯ ಕದನ ವಿರಾಮ ಒಪ್ಪಂದವನ್ನು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಶ್ವೇತಭವನದ ಕರೆದಿದ್ದ ಉನ್ನತ ಮಟ್ಟದ ಸಭೆಯು ಯಾವುದೇ ನಿರ್ಧಾರವಿಲ್ಲದೆ ಮುಕ್ತಾಯಗೊಂಡಿದೆ. ಜಾಗತಿಕ ಇಂಧನ ಬೆಲೆಗಳು ವೇಗವಾಗಿ ಏರುತ್ತಿದ್ದರೂ ಮತ್ತು ನವೆಂಬರ್‌ನ ಮಧ್ಯಾವಧಿ ಚುನಾವಣೆ ಹತ್ತಿರ ಬರುತ್ತಿದ್ದರೂ, ಟ್ರಂಪ್ ತಮ್ಮ ಕಠಿಣ ನಿಲುವಿನಿಂದ ಹಿಂದೆ ಸರಿದಿಲ್ಲ.

ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಎಂಬುದು ಅಮೆರಿಕದ ಮೊದಲ ಷರತ್ತಾಗಿತ್ತು. ಒಪ್ಪಂದವು ಹತ್ತಿರದಲ್ಲಿದ್ದರೂ, ಇರಾನ್‌ನ ಮುಟ್ಟುಗೋಲು ಹಾಕಿಕೊಳ್ಳಲಾದ ಹಣವನ್ನು ಬಿಡುಗಡೆ ಮಾಡುವ ವಿಷಯದಲ್ಲಿ ಇನ್ನೂ ಭಿನ್ನಾಭಿಪ್ರಾಯಗಳು ಮುಂದುವರೆದಿವೆ ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ರೂತ್ ಸೋಶಿಯಲ್‌ನಲ್ಲಿ ಟ್ರಂಪ್ ಪೋಸ್ಟ್
ಸಭೆಯ ನಂತರ ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಬರೆದುಕೊಂಡಿರುವ ಡೊನಾಲ್ಡ್ ಟ್ರಂಪ್, ಒಪ್ಪಂದಕ್ಕೆ ಮುನ್ನ ಇರಾನ್ ಅನುಸರಿಸಬೇಕಾದ ಕ್ರಮಗಳನ್ನು ಬಿಚ್ಚಿಟ್ಟಿದ್ದಾರೆ.

ಸಮುದ್ರ ಮಾರ್ಗ ಮುಕ್ತ: ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಅಳವಡಿಸಿರುವ ಕಡಲ ಗಣಿಗಳನ್ನು (Mines) ತೆಗೆದುಹಾಕಬೇಕು. ಆಗ ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ಹಿಂಪಡೆಯಲಿದ್ದು, ಹಡಗುಗಳ ಸಂಚಾರ ಪುನರಾರಂಭಗೊಳ್ಳಲಿದೆ.

ಯುರೇನಿಯಂ ನಾಶ: ಇರಾನ್ ಬಳಿ ಇರುವ ಅತಿ ಹೆಚ್ಚು ಪುಷ್ಟೀಕರಿಸಿದ ಯುರೇನಿಯಂ ಅನ್ನು ಹೊರತೆಗೆದು ನಾಶಪಡಿಸಬೇಕು.

ಹಣ ಬಿಡುಗಡೆ ಇಲ್ಲ: ಮುಂದಿನ ಸೂಚನೆ ಬರುವವರೆಗೂ ಇರಾನ್‌ಗೆ ಯಾವುದೇ ಹಣ ವರ್ಗಾವಣೆ ಮಾಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಮಾತುಕತೆ ಮುಂದುವರಿಯುವ ಮುನ್ನ ತನ್ನ 12 ಬಿಲಿಯನ್ ಡಾಲರ್ ಫ್ರೀಜ್ ಆಗಿರುವ ಆಸ್ತಿಯನ್ನು ಬಿಡುಗಡೆ ಮಾಡಬೇಕೆಂಬ ಇರಾನ್ ಬೇಡಿಕೆಯನ್ನು ಟ್ರಂಪ್ ತಿರಸ್ಕರಿಸಿದ್ದಾರೆ.

ಮತ್ತಷ್ಟು ಓದಿ: ಐ ಲವ್ ಇಂಡಿಯಾ, ನಾನು ಪಿಎಂ ಮೋದಿಯ ದೊಡ್ಡ ಅಭಿಮಾನಿ ಎಂದ ಡೊನಾಲ್ಡ್​ ಟ್ರಂಪ್

ಇರಾನ್ ಹೇಳುವುದೇನು?
ಈ ಕುರಿತು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಪ್ರತಿಕ್ರಿಯಿಸಿದ್ದು, ಅಮೆರಿಕದೊಂದಿಗೆ ಇನ್ನೂ ಯಾವುದೇ ಒಪ್ಪಂದ ಅಂತಿಮಗೊಂಡಿಲ್ಲ, ಕೇವಲ ಸಂದೇಶಗಳ ವಿನಿಮಯ ನಡೆಯುತ್ತಿದೆ ಎಂದಿದ್ದಾರೆ.

ಸದ್ಯಕ್ಕೆ ಯುದ್ಧ ನಿಲ್ಲಿಸುವುದಷ್ಟೇ ಇರಾನ್‌ನ ಮೊದಲ ಆದ್ಯತೆಯಾಗಿದ್ದು, ಯುರೇನಿಯಂ ಪುಷ್ಟೀಕರಣದ ಬಗ್ಗೆ ಈಗ ಚರ್ಚಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಹಾರ್ಮುಜ್ ಜಲಸಂಧಿಯ ನಿರ್ವಹಣೆಯು ಕೇವಲ ಇರಾನ್ ಮತ್ತು ಒಮಾನ್‌ ದೇಶಗಳಿಗೆ ಮಾತ್ರ ಸಂಬಂಧಿಸಿದ್ದು ಎಂದು ಅವರು ಪ್ರತಿಪಾದಿಸಿದ್ದಾರೆ. ಒಟ್ಟಾರೆ ಉಭಯ ದೇಶಗಳ ಹಠಮಾರಿ ಧೋರಣೆಯಿಂದಾಗಿ ಸದ್ಯಕ್ಕೆ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅವರಿಗೆ ಅಧಿಕಾರದ ಚಿಂತೆ ನಮಗೆ ಮಳೆಗೆ ಬೆಂಗಳೂರು ರಸ್ತೆಯ ಚಿಂತೆ; ಮಂತ್ರಿಗಿರಿಗಾಗಿ ಲಾಬಿ ಮತ್ತೆ ಮಾಡಿ ಮೊದಲು ನಮ್ಮ ಕಷ್ಟ ನೋಡಿ

ಬೆಂಗಳೂರು, ಮೇ.30 : ಮಳೆಯಿಂದ ಜನರು ಪರದಾಡುತ್ತಿದ್ದಾರೆ. ಆದರೆ ಇದರ ಚಿಂತೆ ಜನಪ್ರತಿನನಿಧಿಗಳಿಗೆ ಇಲ್ಲದಂತೆ ಕಾಣಿಸುತ್ತಿದೆ. ಅವರಿಗೆ ಮಂತ್ರಿಗಿರಿಯ ಚಿಂತೆ ಇರುವಾಗ ಈ ಸಂಕಷ್ಟಗಳು ಕಾಣುವುದಿಲ್ಲ ಎಂದು ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ತೀವ್ರಗೊಂಡಿದ್ದು, ಕೇವಲ ಒಂದೇ ಒಂದು ಭಾರಿ ಮಳೆಗೆ ರಾಜಧಾನಿಯ ಮೂಲಸೌಕರ್ಯದ ಅಸಲಿ ಬಣ್ಣ ಬಯಲಾಗಿದೆ. ನಗರದ ಪ್ರಮುಖ ಐಟಿ ಹಬ್ ಆಗಿರುವ ಮಹದೇವಪುರ ಮತ್ತು ರಾಜರಾಜೇಶ್ವರಿ ನಗರ (RR Nagar) ಸೇರಿದಂತೆ ಹಲವು ಭಾಗಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಗಳು ವಾಹನ ಸವಾರರ ಪಾಲಿಗೆ ನರಕಸದೃಶವಾಗಿ ಮಾರ್ಪಟ್ಟಿವೆ. ಬಿಬಿಎಂಪಿ (BBMP) ಹಾಗೂ ನಗರಾಭಿವೃದ್ಧಿ ಸಚಿವರ ‘ಬ್ರ್ಯಾಂಡ್ ಬೆಂಗಳೂರು’ (Brand Bengaluru) ಪರಿಕಲ್ಪನೆಯನ್ನು ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹದೇವಪುರದ ಮುಖ್ಯ ರಸ್ತೆಗಳು ಮತ್ತು ಲೇಔಟ್‌ಗಳು ಮಳೆನೀರಿನಿಂದ ತುಂಬಿ ತುಳುಕುತ್ತಿದ್ದು, ರಸ್ತೆಗಳು ಇಟಲಿಯ ವೆನಿಸ್ ನಗರದ ಕಾಲುವೆಗಳಂತೆ ಕಾಣಿಸುತ್ತಿವೆ. “ನಮ್ಮ ಇಲಾಖೆಗಳು ರಸ್ತೆಗಳನ್ನು ರಿಪೇರಿ ಮಾಡದಿದ್ದರೂ ನಮಗೆ ರಸ್ತೆಯಲ್ಲೇ ಬೀಚ್ ವೈಬ್ಸ್ (Beach Vibes) ಸಿಗುವಂತೆ ಮಾಡಿದ್ದಾರೆ” ಎಂದು ನಾಗರಿಕರು ವ್ಯಂಗ್ಯವಾಡಿದ್ದಾರೆ. ಸರಿಯಾದ ರಸ್ತೆ ಯೋಜನೆ ಇಲ್ಲದಿರುವುದು ಹಾಗೂ ಮಳೆಗಾಲಕ್ಕೂ ಮುನ್ನ ರಾಜಕಾಲುವೆ ಮತ್ತು ಡ್ರೈನೇಜ್‌ಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದ ಕಾರಣ, ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯ ಮೇಲೆಯೇ ನಿಲ್ಲುತ್ತಿದ್ದು, ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಸೃಷ್ಟಿಸುತ್ತಿದೆ. ಈ ಬಗ್ಗೆ ಕೆಲವೊಂದು ವಿಡಿಯೋಗಳನ್ನು @Karnataka Portfolio ಎಂಬ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ವರುಣಾರ್ಭಟ: ರಸ್ತೆಗಳು ಜಲಾವೃತ, ಸಂಚಾರ ವ್ಯತ್ಯಯ

ಇದು ಆರ್​​​ಆರ್​​​ ನಗರದ ವಿಡಿಯೋ:

ಬೆಂಗಳೂರಿನಲ್ಲಿ ಹೊಸ ‘ಹಿಡನ್ ಲೇಕ್ಸ್’:

ಮಹಾದೇವಪುರದ ಸ್ಥಿತಿ ಹೇಗಿದೆ ನೋಡಿ:

“ಬೆಂಗಳೂರಿನ ಮಳೆಗಾಲದಲ್ಲಿ ನೀವು ಎಲ್ಲೂ ಹೋಗಬೇಕಾಗಿಲ್ಲ, ಬಿಬಿಎಂಪಿಯ ಅಭಿವೃದ್ಧಿ ಕಾಮಗಾರಿಗಳ ದಯೆಯಿಂದ ರಸ್ತೆಗಳಲ್ಲೇ ಹೊಸ ‘ಹಿಡನ್ ಲೇಕ್ಸ್’ (Hidden Lakes) ಸೃಷ್ಟಿಯಾಗಿವೆ, ಇವುಗಳನ್ನು ಒಮ್ಮೆ ವಿಸಿಟ್ ಮಾಡಿ!” ಎಂದು ಸಾರ್ವಜನಿಕರು ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸುವ ನಾಗರಿಕರಿಗೆ ಪ್ರತಿ ಮಳೆಗಾಲದಲ್ಲೂ ಇಂತಹ ಜಲಾವೃತ ರಸ್ತೆಗಳೇ ಸಿಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಬಿಬಿಎಂಪಿ ಮತ್ತು ಮುನ್ಸಿಪಲ್ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ನೀರು ನಿಲ್ಲುವ ಹಾಟ್‌ಸ್ಪಾಟ್‌ಗಳನ್ನು ಮುಕ್ತಗೊಳಿಸಬೇಕೆಂದು ಸಾರ್ವಜನಿಕರು ಕಟ್ಟುನಿಟ್ಟಿನ ಆಗ್ರಹ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:50 am, Sat, 30 May 26

Source link

Snake Village: ಈ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಒಂದೊಂದು ಹಾವು; ವಿಷಕಾರಿ ಹಾವುಗಳನ್ನೇ ಸಾಕುಪ್ರಾಣಿಗಳಂತೆ ಸಾಕುವ ಗ್ರಾಮವಿದು!

ಮನುಷ್ಯ-ಹಾವುಗಳ ಅಪರೂಪದ ಸ್ನೇಹImage Credit source: Pinterest

ಮಹಾರಾಷ್ಟ್ರದ ಪುಣೆ ನಗರದಿಂದ ಸುಮಾರು ಇನ್ನೂರು ಕಿಲೋಮೀಟರ್ ದೂರದಲ್ಲಿರುವ ಶೆಟ್‌ಪಾಲ್ (Shetphal) ಎಂಬ ಪುಟ್ಟ ಗ್ರಾಮವು ಜಗತ್ತಿನಲ್ಲಿಯೇ ಅತ್ಯಂತ ವಿಶಿಷ್ಟವಾದ ಸಂಪ್ರದಾಯಕ್ಕೆ ಹೆಸರಾಗಿದೆ. ಸಾಮಾನ್ಯವಾಗಿ ಹಾವು ಎಂದರೆ ಮನುಷ್ಯರು ಮೈಲಿ ದೂರ ಓಡುತ್ತಾರೆ, ಆದರೆ ಈ ಹಳ್ಳಿಯಲ್ಲಿ ಮಾತ್ರ ಪರಿಸ್ಥಿತಿ ಸಂಪೂರ್ಣ ಉಲ್ಟಾ. ಹೊರಗಿನವರು ಮೊದಲ ಬಾರಿಗೆ ಈ ಗ್ರಾಮಕ್ಕೆ ಭೇಟಿ ನೀಡಿದರೆ ಮುಕ್ತವಾಗಿ ಓಡಾಡುವ ಹಾವುಗಳನ್ನು ನೋಡಿ ಖಂಡಿತವಾಗಿಯೂ ಹೆದರುತ್ತಾರೆ. ಆದರೆ ಸ್ಥಳೀಯರ ಧೈರ್ಯ, ಪ್ರೀತಿ ಮತ್ತು ಅವರು ಹಾವುಗಳೊಂದಿಗೆ ಬೆರೆತಿರುವ ರೀತಿಯನ್ನು ನೋಡಿದರೆ ಆಶ್ಚರ್ಯವಾಗುವುದಂತೂ ಖಂಡಿತಾ. ಪ್ರಾಣಿಗಳ ಮೇಲಿನ ಕ್ರೌರ್ಯ ಹೆಚ್ಚುತ್ತಿರುವ ಈ ದಿನಗಳಲ್ಲಿ, ಮೂಕ ಜೀವಿಗಳ ಬಗ್ಗೆ ಇಷ್ಟೊಂದು ದಯೆ ಮತ್ತು ಕರುಣೆಯನ್ನು ತೋರಿಸುವುದು ಈ ಹಳ್ಳಿಯ ಜನರ ಹೆಮ್ಮೆಯಾಗಿದೆ.

ಪ್ರತಿಯೊಂದು ಮನೆಯಲ್ಲಿಯೂ ಹಾವು:

ಈ ಹಳ್ಳಿಯ ಪ್ರತಿಯೊಂದು ಮನೆಯಲ್ಲಿಯೂ ಹಾವುಗಳಿಗೆಂದೇ ಒಂದು ವಿಶೇಷವಾದ ಸ್ಥಳವನ್ನು ಕಾಯ್ದಿರಿಸಲಾಗಿದೆ. ಮನೆಯ ಛಾವಣಿಯ ಮೇಲೆ ಅವುಗಳು ಬಂದು ವಿಶ್ರಾಂತಿ ಪಡೆಯಲು ಮರದಿಂದ ವಿಶೇಷವಾದ ಜಾಗವನ್ನು ಮಾಡಲಾಗಿದ್ದು, ಸ್ಥಳೀಯರು ಇದನ್ನು ಅತ್ಯಂತ ಭಕ್ತಿಯಿಂದ ‘ದೇವಸ್ಥಾನ’ ಎಂದೇ ಕರೆಯುತ್ತಾರೆ. ವಿಶೇಷವೆಂದರೆ, ಹಳ್ಳಿಯಲ್ಲಿ ಹೊಸದಾಗಿ ಯಾವುದೇ ಮನೆಯನ್ನು ನಿರ್ಮಿಸುವಾಗಲೂ, ಹಾವುಗಳಿಗೆ ಈ ವಿಶ್ರಾಂತಿ ಸ್ಥಳ ಸಿಗುವಂತೆ ಕಟ್ಟುನಿಟ್ಟಿನ ಕಾಳಜಿ ವಹಿಸಲಾಗುತ್ತದೆ. ಇಲ್ಲಿನ ನಾಗರಹಾವುಗಳು ಯಾವುದೇ ಭಯವಿಲ್ಲದೆ ಯಾವಾಗ ಬೇಕಾದರೂ ಮನೆಯೊಳಗೆ ಬಂದು ರಾಜನಂತೆ ವಿಶ್ರಾಂತಿ ಪಡೆಯುತ್ತವೆ.

ನಾಗರಹಾವುಗಳನ್ನು ಸಾಕ್ಷಾತ್ ಶಿವನ ರೂಪ ಎಂಬ ನಂಬಿಕೆ:

ಹಳ್ಳಿಗರು ನಾಗರಹಾವುಗಳನ್ನು ಸಾಕ್ಷಾತ್ ಶಿವನ ರೂಪವೆಂದು ನಂಬಿ ಪೂಜಿಸುತ್ತಾರೆ. ಬೀದಿಯಲ್ಲಾಗಲಿ ಅಥವಾ ಮನೆಯಲ್ಲಾಗಲಿ ಹಾವು ಕಂಡುಬಂದರೆ ಯಾರೂ ಅದನ್ನು ಹೊಡೆಯುವುದಿಲ್ಲ, ಬದಲಿಗೆ ಅವುಗಳನ್ನು ಸಾಮಾನ್ಯ ಸಾಕುಪ್ರಾಣಿಗಳಂತೆ ನೋಡಿಕೊಳ್ಳಲಾಗುತ್ತದೆ. ಹಬ್ಬದ ದಿನಗಳಲ್ಲಂತೂ ಇವುಗಳಿಗೆ ವಿಶೇಷ ಪೂಜೆಗಳನ್ನು ಮಾಡಿ, ಹಾಲನ್ನು ಎರೆದು ಭಕ್ತಿ ಸಮರ್ಪಿಸಲಾಗುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಇದುವರೆಗೆ ಯಾರಿಗೂ ಹಾವು ಕಚ್ಚಿದ ಒಂದೇ ಒಂದು ಉದಾಹರಣೆಯೂ ಇಲ್ಲ:

ವಿಷಕಾರಿ ಹಾವುಗಳು ಮನೆಗೆ ನುಗ್ಗಿದರೆ ಜೀವಕ್ಕೆ ಅಪಾಯಕಾರಿಯಲ್ಲವೇ ಎಂಬ ಅನುಮಾನ ಯಾರಿಗಾದರೂ ಬರುವುದು ಸಹಜ. ಆದರೆ, ಈ ಗ್ರಾಮದಲ್ಲಿ ಇತಿಹಾಸದಲ್ಲೇ ಇದುವರೆಗೆ ಯಾರಿಗೂ ಹಾವು ಕಚ್ಚಿದ ಒಂದೇ ಒಂದು ಉದಾಹರಣೆಯೂ ಇಲ್ಲ ಎಂದು ಸ್ಥಳೀಯರು ಹೆಮ್ಮೆಯಿಂದ ಹೇಳುತ್ತಾರೆ. ಕೆಲವೊಮ್ಮೆ ಈ ಹಾವುಗಳು ಗ್ರಾಮದ ಶಾಲಾ ತರಗತಿಗಳಿಗೂ ನಿರಾಳವಾಗಿ ಪ್ರವೇಶಿಸುತ್ತವೆ. ಆದರೆ ಅಲ್ಲಿನ ಮಕ್ಕಳು ಅವುಗಳನ್ನು ನೋಡಿ ಕಿರುಚಾಡುವುದಿಲ್ಲ ಅಥವಾ ಹೆದರಿ ಓಡುವುದಿಲ್ಲ. ಹಾವು ತನ್ನ ದಾರಿಯಲ್ಲಿ ತಾನು ಹೋಗುತ್ತಿದ್ದರೆ, ಮಕ್ಕಳು ಯಾವುದೇ ಭಯವಿಲ್ಲದೆ ತಮ್ಮ ಪಾಠದ ಕಡೆ ಗಮನ ಹರಿಸುತ್ತಾರೆ. ನಾವು ಪ್ರಾಣಿಗಳಿಗೆ ಹಾನಿ ಮಾಡದಿದ್ದರೆ, ಅವು ನಮಗೆ ಎಂದಿಗೂ ಹಾನಿ ಮಾಡುವುದಿಲ್ಲ ಎಂಬುದಕ್ಕೆ ಈ ಹಳ್ಳಿಯೇ ಜೀವಂತ ಸಾಕ್ಷಿ.

ಒಟ್ಟಾರೆಯಾಗಿ ಹೇಳುವುದಾದರೆ, ಶೆಟ್‌ಪಾಲ್ ಗ್ರಾಮವು ಪ್ರಕೃತಿಯೊಂದಿಗೆ ಮನುಷ್ಯ ಹೇಗೆ ಸಾಮರಸ್ಯದಿಂದ ಬದುಕಬಹುದು ಎಂಬುದಕ್ಕೆ ಜಗತ್ತಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಭಯವನ್ನು ಭಕ್ತಿ ಮತ್ತು ಗೌರವದಿಂದ ಬದಲಾಯಿಸಿದರೆ, ಅತ್ಯಂತ ಕ್ರೂರ ಅಥವಾ ಕಾಡು ಪ್ರಾಣಿ ಕೂಡ ಶಾಂತಿಯುತವಾಗಿ ವರ್ತಿಸುತ್ತದೆ ಎಂಬುದನ್ನು ಈ ಹಳ್ಳಿಯ ಜನರು ಇಡೀ ಜಗತ್ತಿಗೆ ಸಾಬೀತುಪಡಿಸಿದ್ದಾರೆ. ಹಾವುಗಳು ಮತ್ತು ಮನುಷ್ಯರ ನಡುವಿನ ಈ ಅದ್ಭುತ ಹಾಗೂ ಅಪರೂಪದ ಬಾಂಧವ್ಯವನ್ನು ಕಣ್ಣಾರೆ ವೀಕ್ಷಿಸಲು ದೂರದ ಊರುಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಗ್ರಾಮಸ್ಥರು ತಮ್ಮ ಈ ವಿಶಿಷ್ಟ ಮತ್ತು ಪವಿತ್ರವಾದ ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ಅತ್ಯಂತ ಹೆಮ್ಮೆಯಿಂದ ರವಾನಿಸುತ್ತಾ ಸಾಗುತ್ತಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸಿಂಪತಿ ಬೇಡ, ಸೋಲು ಪದ ಕೇಳಿದ್ರೆ ಸಿಟ್ಟು ಬರುತ್ತೆ’; ರವಿಚಂದ್ರನ್

ಹಿರಿಯ ನಟ ರವಿಚಂದ್ರನ್ ಅವರಿಗೆ ಇಂದು (ಮೇ 30) ಜನ್ಮದಿನ. ಅವರು ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶನದಲ್ಲಿ ಅವರಿಗೆ ತುಂಬಾನೇ ಅನುಭವ ಇದೆ. ಅವರ ಜನ್ಮದಿನದ ಪ್ರಯುಕ್ತ ಅವರ ಹಳೆಯ ಸಂದರ್ಶನ ನೆನಪಿಸಿಕೊಳ್ಳೋ ಸಮಯ. ಟಿವಿ9 ಜೊತೆ ಮಾತನಾಡಿದ್ದ ಅವರು, ‘ಸೋಲು’ ಎಂಬ ಪದದ ಬಗ್ಗೆ ಮಾತನಾಡಿದ್ದರು. ‘ಸೋಲು ಎಂಬ ಶಬ್ದ ಕೇಳಿದರೆ ನನಗೆ ಸಿಟ್ಟು ಬರುತ್ತದೆ. ಸೋಲಿನಿಂದ ನಾನು ದುಡ್ಡು ಕಳೆದಿಲ್ಲ. ಬದಲಿಗೆ ಒಂದಷ್ಟು ವಿಷಯಗಳನ್ನು ಕಲಿತಿದ್ದೇನೆ. ಅದು ನನ್ನ ಹೆಗಲಮೇಲಿದೆ. ಅದನ್ನು ಕೇಳಿದರೆ ನನಗೆ ಸಿಟ್ಟು ಬರುತ್ತದೆ. ನನ್ನ ನೋವನ್ನು ಶೇರು ಮಾಡಿಕೊಳ್ಳೋದು ಬೇಡ. ನನಗೆ ಸಿಂಪತಿ ಕೊಡೋದು ಬೇಡ. ಸಿನಿಮಾ ಚೆನ್ನಾಗಿದ್ದರೆ ಮಾತ್ರ ಗೆಲ್ಲಿಸಿ’ ಎಂದಿದ್ದರು ಅವರು.

 

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅದೆಂತಹ ನೋವು… ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಕ್ವಾಲಿಫೈಯರ್-2 ಪಂದ್ಯವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ಮುಲ್ಲನ್​ಪುರ್​ನಲ್ಲಿ ನಡೆದ  ರಾಜಸ್ಥಾನ್ ರಾಯಲ್ಸ್ (RR) ಹಾಗೂ ಗುಜರಾತ್ ಟೈಟನ್ಸ್ (GT) ನಡುವಿನ ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಏಕಾಂಗಿಯಾಗಿ ಹೋರಾಟ ನಡೆಸಿದರೂ ತಂಡವನ್ನು ಫೈನಲ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ಈ ನೋವಿನೊಂದಿಗೆ ಮೈದಾನ ತೊರೆದ ವೈಭವ್ ಸೂರ್ಯವಂಶಿ ನೇರವಾಗಿ ತೆರಳಿದ್ದು ಡಗೌಟ್​ಗೆ. ಇತ್ತ ಪ್ರಶಸ್ತಿ ಸಮಾರೋಪ ನಡೆಯುತ್ತಿದ್ದರೆ ಅತ್ತ ವೈಭವ್ ಏಕಾಂಗಿಯಾಗಿ ಕೂತು ತಮ್ಮ ನೋವನ್ನು ಅದುಮಿಟ್ಟುಕೊಳ್ಳುತ್ತಿದ್ದರು. ಈ ವೇಳೆ ಅವರ ಕಣ್ಣಾಲಿಗಳು ಒದ್ದೆಯಾಗಿತ್ತು.

ಇನ್ನು ಈ ಬಾರಿಯ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಪ್ಲೇಆಫ್ ಹಂತಕ್ಕೇರಲು ಮುಖ್ಯ ಕಾರಣ ವೈಭವ್ ಸೂರ್ಯವಂಶಿ. 16 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದ ವೈಭವ್ ಬರೋಬ್ಬರಿ 776 ರನ್​ ಕಲೆಹಾಕಿದ್ದರು. ಈ ಮೂಲಕ ಆರ್​ಆರ್ ಪಡೆಯನ್ನು ದ್ವಿತೀಯ ಕ್ವಾಲಿಫೈಯರ್​ಗೆ ತಲುಪಿಸಿದ್ದರು.

ಅಷ್ಟೇ ಅಲ್ಲದೆ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಜವಾಬ್ದಾರಿಯುತ 96 ರನ್​ಗಳನ್ನು ಬಾರಿಸಿದರು. ಇದಾಗ್ಯೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲುವು ದಕ್ಕಿರಲಿಲ್ಲ. ಈ ನೋವಿನೊಂದಿಗೆ ಕೂತಿರುವ ವೈಭವ್ ಸೂರ್ಯವಂಶಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್​ಗಳಲ್ಲಿ 214 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಗುಜರಾತ್ ಟೈಟಾನ್ಸ್ ತಂಡವು 18.4 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಫೈನಲ್​ಗೆ ಲಗ್ಗೆಯಿಟ್ಟಿದೆ.

 

Source link

Karnataka CM News Live: ಕೆಪಿಸಿಸಿ ಅಧ್ಯಕ್ಷ ಗಾದಿಗೆ ಮತ್ತೊರ್ವರ ಹೆಸರು ಸಪ್ರೈಸ್​ ಎಂಟ್ರಿ!

ವಿಧಾನಸೌಧದ ಸುತ್ತಮುತ್ತ ರಾಜಕೀಯ ಚಟುವಟಿಕೆ ಚುರುಕು

ಬೆಂಗಳೂರು, ಮೇ 30: ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಹೊಸ ಮುಖ್ಯಮಂತ್ರಿಯ ಆಯ್ಕೆಗೆ ಇಡೀ ರಾಜ್ಯ ಕಾತುರದಿಂದ ಕಾಯುತ್ತಿದೆ. ರಾಜೀನಾಮೆ ಘೊಷಿಸಿದ ನಂತರ, ಮುಂದಿನ ಸಿಎಂ ಆಗಿ ಡಿಕೆ ಶಿವಕುಮಾರ್ ಕುರ್ಚಿ ಏರಲಿದ್ದಾರೆ ಎಂದು ಸಿದ್ದರಾಮಯ್ಯ ಸುಳಿವು ನೀಡಿದ್ದರು. ಅದರಂತೆಯೇ ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ (CLP) ನಡೆಯಲಿದ್ದು, ಈ ವೇಳೆ ಮುಖ್ಯಮಂತ್ರಿಯಾಗಿ ಯಾರು ರಾಜ್ಯಭಾರ ಮಾಡಲಿದ್ದಾರೆ ಎಂಬ ಪ್ರಶ್ನೆಗೆ ತೆರೆ ಬೀಳಲಿದೆ. ನೂತನ ಮುಖ್ಯಮಂತ್ರಿಯ ಪ್ರಮಾಣವಚನದ ಮುಹೂರ್ತವೂ ಸಹ ಇಂದು ಫಿಕ್ಸ್ ಆಗಲಿದೆ. ಕರ್ನಾಟಕ ರಾಜಕಾರಣದ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಅಪ್ಡೇಟ್ ಆಗಲಿದ್ದು, ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:35 am, Sat, 30 May 26

Source link

Pearl Astrology: ಜ್ಯೋತಿಷ್ಯದಲ್ಲಿ ಮುತ್ತುಗಳ ಮಹತ್ವ; ಮನಸ್ಸಿಗೆ ಶಾಂತಿ ಮತ್ತು ಅದೃಷ್ಟ ನೀಡುವ ರತ್ನ!

ಜ್ಯೋತಿಷ್ಯದಲ್ಲಿ ಮುತ್ತುಗಳ ಮಹತ್ವImage Credit source: Pinterest

ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲಿಯೂ ಬಿಳಿ ಮುತ್ತುಗಳನ್ನು ಶುದ್ಧತೆ, ಪ್ರಶಾಂತತೆ, ಸೌಂದರ್ಯ ಮತ್ತು ಸೌಭಾಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ತನ್ನ ನೈಸರ್ಗಿಕ ಹೊಳಪಿನಿಂದ ಆಭರಣ ಲೋಕದಲ್ಲಿ ಸದಾ ರಾಜನಾಗಿರುವ ಮುತ್ತು, ಕೇವಲ ಸೌಂದರ್ಯವರ್ಧಕ ಮಾತ್ರವಲ್ಲ; ಧರಿಸುವವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಅದ್ಭುತ ರತ್ನವೂ ಹೌದು. ಇದಲ್ಲದೆ, ಮುತ್ತುಗಳನ್ನು ಧರಿಸುವುದರಿಂದ ಮನಸ್ಸಿನ ಶಾಂತಿ, ಅದೃಷ್ಟ ಮತ್ತು ಸಕಾರಾತ್ಮಕ ಶಕ್ತಿ ಬರುತ್ತದೆ ಎಂದು ಹಲವರು ನಂಬುತ್ತಾರೆ.

ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

ಜ್ಯೋತಿಷ್ಯದ ಪ್ರಕಾರ, ಬಿಳಿ ಮುತ್ತು ಚಂದ್ರ ಗ್ರಹಕ್ಕೆ ಸಂಬಂಧಿಸಿದ ರತ್ನವಾಗಿದೆ. ನಮ್ಮ ಮನಸ್ಸು, ಭಾವನೆಗಳು, ಆಲೋಚನೆಗಳು ಮತ್ತು ಮಾನಸಿಕ ಶಾಂತಿಗೆ ಚಂದ್ರನೇ ಕಾರಕ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಚಂದ್ರನು ದುರ್ಬಲನಾಗಿದ್ದಾಗ, ಅತಿಯಾದ ಆತಂಕ, ಅಸ್ಥಿರತೆ ಅಥವಾ ಮಾನಸಿಕ ಗೊಂದಲ ಎದುರಿಸುವವರಿಗೆ ಜ್ಯೋತಿಷಿಗಳು ಮುತ್ತನ್ನು ಧರಿಸಲು ಶಿಫಾರಸು ಮಾಡುತ್ತಾರೆ. ಇದು ಮನಸ್ಸಿಗೆ ಶಾಂತಿ, ಚಿಂತನೆಯಲ್ಲಿ ಸ್ಪಷ್ಟತೆ ಮತ್ತು ಜೀವನದಲ್ಲಿ ಸಕಾರಾತ್ಮಕ ದೃಷ್ಟಿಕೋನವನ್ನು ತರುತ್ತದೆ ಎಂದು ನಂಬಲಾಗಿದೆ.

ಇತರ ರತ್ನಗಳಂತೆ ಮುತ್ತು ಭೂಮಿಯ ಒಳಗಿನಿಂದ ಸಿಗುವುದಿಲ್ಲ, ಬದಲಿಗೆ ಸಮುದ್ರದ ಜೀವಿಗಳಿಂದ ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ. ಸಿಂಪಿಗಳ (Oysters) ಒಳಗೆ ಮರಳಿನ ಕಣ ಅಥವಾ ಸಣ್ಣ ಪರಾವಲಂಬಿ ಜೀವಿ ಪ್ರವೇಶಿಸಿದಾಗ, ಆ ಜೀವಿಯು ತನ್ನ ರಕ್ಷಣೆಗಾಗಿ “ನ್ಯಾಕ್ರೆ” (Nacre) ಎಂಬ ವಿಶೇಷ ರಸವನ್ನು ಬಿಡುಗಡೆ ಮಾಡುತ್ತದೆ. ಈ ವಸ್ತುವು ವರ್ಷಗಳ ಕಾಲ ಪದರ ಪದರವಾಗಿ ಸಂಗ್ರಹಗೊಂಡು ಅಂತಿಮವಾಗಿ ಸುಂದರವಾದ ಮುತ್ತಾಗಿ ಬದಲಾಗುತ್ತದೆ.

ಆಧ್ಯಾತ್ಮಿಕ ಮಾತ್ರವಲ್ಲದೆ ಮಾನಸಿಕ ಪ್ರಯೋಜನ:

ಮುತ್ತು ಧರಿಸುವುದರಿಂದ ಕೇವಲ ಆಧ್ಯಾತ್ಮಿಕ ಮಾತ್ರವಲ್ಲದೆ ಮಾನಸಿಕ ಪ್ರಯೋಜನಗಳೂ ಇವೆ. ಅತಿಯಾದ ಕೋಪ, ಕಿರಿಕಿರಿ ಮತ್ತು ಮಾನಸಿಕ ಒತ್ತಡದಿಂದ ಬಳಲುತ್ತಿರುವವರು ಮುತ್ತು ಧರಿಸುವುದರಿಂದ ಅವರ ಮನಸ್ಸು ಶಾಂತವಾಗಲು ಸಹಾಯವಾಗುತ್ತದೆ. ಇದು ಸುತ್ತಮುತ್ತಲಿನ ನಕಾರಾತ್ಮಕ ಯೋಚನೆಗಳನ್ನು ದೂರವಿಟ್ಟು, ಧರಿಸಿದವರಲ್ಲಿ ಆತ್ಮವಿಶ್ವಾಸ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಅದೃಷ್ಟವನ್ನು ತರುತ್ತದೆ. ಸಾಮಾನ್ಯವಾಗಿ ಜನರು ಇದನ್ನು ಉಂಗುರ, ಹಾರ ಅಥವಾ ಬಳೆಯ ರೂಪದಲ್ಲಿ ಧರಿಸುತ್ತಾರೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಸಾಂಪ್ರದಾಯಿಕ ನಂಬಿಕೆ:

ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಮುತ್ತು ದೇಹದ ಆರೋಗ್ಯದ ಮೇಲೆಯೂ ಧನಾತ್ಮಕ ಪರಿಣಾಮ ಬೀರುತ್ತದೆ. ಇದು ರಕ್ತದೊತ್ತಡವನ್ನು (Blood Pressure) ನಿಯಂತ್ರಿಸಲು ಮತ್ತು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸಿ ಗಾಢವಾದ ನಿದ್ರೆ ಬರುವಂತೆ ಮಾಡಲು ಸಹಕಾರಿಯಾಗಿದೆ ಎಂದು ನಂಬಲಾಗಿದೆ. ಇದರೊಂದಿಗೆ, ನವದಂಪತಿಗಳು ಮುತ್ತುಗಳನ್ನು ಧರಿಸುವುದರಿಂದ ಅವರ ನಡುವೆ ಪ್ರೀತಿ, ವಾತ್ಸಲ್ಯ ಮತ್ತು ಪರಸ್ಪರ ತಿಳುವಳಿಕೆ ಹೆಚ್ಚುತ್ತದೆ, ಇದು ಸುಖಮಯ ದಾಂಪತ್ಯ ಜೀವನಕ್ಕೆ ದಾರಿಯಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಜ್ಯೋತಿಷಿಗಳ ಪ್ರಕಾರ, ಮೀನ, ಧನು ಮತ್ತು ಸಿಂಹ ರಾಶಿಯವರಿಗೆ ಬಿಳಿ ಮುತ್ತು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಬಲಗೈಯ ಕಿರುಬೆರಳಿಗೆ (Little Finger) ಧರಿಸುವುದು ವಾಡಿಕೆ. ಆದಾಗ್ಯೂ, ಮುತ್ತು ಚಂದ್ರನಿಗೆ ಸಂಬಂಧಿಸಿರುವುದರಿಂದ, ಅದನ್ನು ಧರಿಸುವ ಮುನ್ನ ನಿಮ್ಮ ಜಾತಕ ಮತ್ತು ರಾಶಿಚಕ್ರದ ಆಧಾರದ ಮೇಲೆ ಒಮ್ಮೆ ಪರಿಣಿತ ಜ್ಯೋತಿಷಿಗಳನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಯಾವಾಗಲೂ ಸೂಕ್ತವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:29 am, Sat, 30 May 26

Source link

ಇಂಧನ ದರ ಏರಿಕೆ ಬರೆ: ಸರಕು ಸಾಗಣೆ ದರ ಹೆಚ್ಚಳಕ್ಕೆ ಲಾರಿ ಮಾಲೀಕರ ನಿರ್ಧಾರ, ಪ್ರಧಾನಿ ಮೋದಿಗೆ ಸಿಮ್ಟಾ ಪತ್ರ

ಬೆಂಗಳೂರು, ಮೇ 30: ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಜಾಗತಿಕ ಪರಿಣಾಮವಾಗಿ ದೇಶದಲ್ಲಿ ಇಂಧನ ದರಗಳು ಪದೇಪದೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಕೇವಲ ಹತ್ತು ದಿನಗಳಲ್ಲಿ ಬರೋಬ್ಬರಿ ನಾಲ್ಕು ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಿಸಲಾಗಿದೆ. ಈ ಹಠಾತ್ ದರ ಏರಿಕೆಯಿಂದ ಕಂಗಾಲಾಗಿರುವ ದಕ್ಷಿಣ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟರ್ಸ್ ಅಸೋಸಿಯೇಷನ್ (SIMTA) ಹಾಗೂ ವಾಹನ ಮಾಲೀಕರು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ತುರ್ತು ಪತ್ರ ಬರೆದಿದ್ದಾರೆ. ಇಂಧನ ಬೆಲೆ ಏರಿಕೆಗೆ ಪರ್ಯಾಯವಾಗಿ ಮುಂದಿನ ಆರು ತಿಂಗಳ ಕಾಲ ಟೋಲ್ ದರ ಮತ್ತು ವ್ಯಾಟ್ (VAT) ತೆರಿಗೆಯನ್ನು ಕಡಿತಗೊಳಿಸಬೇಕು, ಇಲ್ಲದಿದ್ದರೆ ಅನಿವಾರ್ಯವಾಗಿ ಸರಕು ಸಾಗಣೆ ದರವನ್ನು ಹೆಚ್ಚಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಗಡುವು ನೀಡಿ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು

  • ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಲ್ಲಿ 4 ಬಾರಿ ತೈಲ ದರ ಏರಿಕೆ.
  • ಪೆಟ್ರೋಲ್ ₹7.97 ಹಾಗೂ ಡೀಸೆಲ್ ₹7.81 ರಷ್ಟು ದುಬಾರಿ.
  • ಇಂಧನ ಹೊರೆ ತಪ್ಪಿಸಲು ಕನಿಷ್ಠ 6 ತಿಂಗಳು ಟೋಲ್ ಶುಲ್ಕ ಮತ್ತು ವ್ಯಾಟ್ ಕಡಿತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ‘ಸಿಮ್ಟಾ’ ಮನವಿ.

ಬೆಲೆ ಏರಿಕೆಯ ಬಿಸಿ: ಕನಕಪುರ ಟು ಬೆಂಗಳೂರು ಬಾಡಿಗೆ ದುಬಾರಿ

ಯುದ್ಧದ ಪ್ರಕ್ಷುಬ್ಧ ವಾತಾವರಣದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿದ್ದು, ದೇಶದಲ್ಲಿ ಪೆಟ್ರೋಲ್ ಬೆಲೆ 7.97 ರೂ. ಹಾಗೂ ಡೀಸೆಲ್ ದರ 7.81 ರೂ.ನಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಲಾರಿ ಮತ್ತು ಟ್ರಕ್ ಮಾಲೀಕರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಲಾರಿ ಮಾಲೀಕರಾದ ಶಿವಶಂಕರ್, ‘ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದರಿಂದ ವಾಹನ ನಿರ್ವಹಣೆ ಕಷ್ಟವಾಗಿದೆ. ಉದಾಹರಣೆಗೆ, ಕನಕಪುರದಿಂದ ಬೆಂಗಳೂರಿಗೆ 50 ಕೆಜಿ ತೂಕದ ಒಂದು ಚೀಲ ಸಾಗಿಸಲು ಈ ಹಿಂದೆ 50 ರೂ. ಬಾಡಿಗೆ ಪಡೆಯುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಆ ದರವನ್ನು 70 ರೂ.ಗೆ ಏರಿಕೆ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ.

ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಆತಂಕ

ಲಾರಿ ಮಾಲೀಕರ ಸಂಘಟನೆಯು ಪ್ರಧಾನಿ ಅವರಿಗೆ ಬರೆದಿರುವ ಪತ್ರದಲ್ಲಿ, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಟೋಲ್ ದರಗಳನ್ನು ಇಳಿಸದಿದ್ದರೆ ಸಾಗಣೆ ವೆಚ್ಚ ಹೆಚ್ಚಿಸುವುದು ಅನಿವಾರ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಸರಕು ಸಾಗಣೆ ದರಗಳು ಏರಿಕೆಯಾದರೆ ಅದರ ನೇರ ಪರಿಣಾಮ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯ ಮೇಲೆ ಬೀರಲಿದೆ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ಹೋಲ್ ಸೇಲ್ ವ್ಯಾಪಾರಿ ಅಣ್ಣೋಜಿ ರಾವ್, ‘ವಾಹನ ಮಾಲೀಕರು ಸಾಗಣೆ ವೆಚ್ಚವನ್ನು ಹೆಚ್ಚಿಸಿದರೆ, ಮಾರುಕಟ್ಟೆಗೆ ಬರುವ ಧಾನ್ಯಗಳು, ತರಕಾರಿ ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಾಗುತ್ತದೆ. ಅಂತಿಮವಾಗಿ ಇದರ ಸಂಪೂರ್ಣ ಹೊರೆ ಮತ್ತು ಎಫೆಕ್ಟ್ ಸಾಮಾನ್ಯ ಗ್ರಾಹಕರ ಮೇಲೆಯೇ ಬೀಳಲಿದೆ’ ಎಂದಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ನಯಾರಾ ಪೆಟ್ರೋಲ್ ದರ ಹೆಚ್ಚಳ; ಲೀಟರ್​ಗೆ 5 ರೂ ಬೆಲೆ ಏರಿಕೆ

ತೈಲ ದರ ಏರಿಕೆಯ ಸರಣಿ ಪ್ರಭಾವದಿಂದಾಗಿ ಸದ್ಯದಲ್ಲೇ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುವ ಲಕ್ಷಣಗಳು ಕಾಣಿಸುತ್ತಿದ್ದು, ಕೇಂದ್ರ ಸರ್ಕಾರ ಸೂಕ್ತ ಪರಿಹಾರ ಮಾರ್ಗ ಪ್ರಕಟಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link