Category Archives: Blog

Your blog category

‘‘ಟಾಕ್ಸಿಕ್’ ಪ್ರೇಮಕತೆ ಸಂಪೂರ್ಣ ಭಿನ್ನ’: ಕತೆಯ ಬಗ್ಗೆ ನಾಯಕಿ ಕಿಯಾರಾ ಮಾತು

ಯಶ್ (Yash) ನಟನೆಯ ‘ಟಾಕ್ಸಿಕ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ನಿರೀಕ್ಷೆ ಸಿನಿಮಾ. ಈಗಾಗಲೇ ಸಿನಿಮಾದ ಬಿಡುಗಡೆ ದಿನಾಂಕ ಎರಡು ಬಾರಿ ಬದಲಾಗಿದೆ. ಸಿನಿಮಾದ ಬಿಡುಗಡೆ ಯಾವಾಗ ಎಂಬ ಬಗ್ಗೆ ಖಾತ್ರಿ ಸಹ ಇಲ್ಲ. ಯಶ್, ‘ಟಾಕ್ಸಿಕ್’ ಸಿನಿಮಾವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾರೆ. ಇವುಗಳ ನಡುವೆ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ನಾಯಕಿಯರು, ಕೆಲ ತಂತ್ರಜ್ಞರು ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಕೆಲವು ಕಡೆ ಮಾತನಾಡಿದ್ದು, ಎಲ್ಲರೂ ಸಹ ಬಹಳ ಹೆಮ್ಮೆಯಿಂದ ಸಿನಿಮಾದ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲೂ ಸಿನಿಮಾದ ಕತೆಯ ಭಿನ್ನತೆ ಬಗ್ಗೆ ಆಡಿರುವ ಮಾತುಗಳು ಕತೆಯ ಬಗ್ಗೆ ಹೆಚ್ಚು ಕುತೂಹಲ ಮೂಡಿಸುತ್ತಿವೆ. ಇದೀಗ ಸಿನಿಮಾದ ನಾಯಕಿ ಕಿಯಾರಾ ಅಡ್ವಾಣಿ, ‘ಟಾಕ್ಸಿಕ್’ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಗಂಡು-ಹೆಣ್ಣಿನ ಸಂಬಂಧವನ್ನು ಬೇರೆ ರೀತಿಯ ಕೋನದಲ್ಲಿ ನೋಡಲಾಗಿದೆ. ಗಂಡು ಮತ್ತು ಹೆಣ್ಣಿನ ನಡುವಿನ ಸಾಂಪ್ರದಾಯಿಕ ಸಮೀಕರಣದ ಬದಲಿಗೆ ಆ ಸಂಬಂಧವನ್ನು ಭಿನ್ನವಾದ ಬಗೆಯಲ್ಲಿ ನೋಡಲಾಗಿದೆ. ಗಂಡು-ಹೆಣ್ಣಿನ ನಡುವಿನ ಪ್ರೀತಿಯನ್ನು ವಿಭಿನ್ನವಾದ ದೃಷ್ಟಿಕೋನದಿಂದ ಹೇಳಲಾಗಿದೆ ಎಂದು ಕಿಯಾರಾ ಹೇಳಿದ್ದಾರೆ.

ಬಾಂಬೆ ಟೈಮ್ಸ್ ಜೊತೆಗಿನ ಸಂದರ್ಶನದಲ್ಲಿ ಚಿತ್ರದ ಬಗ್ಗೆ ಮಾತನಾಡಿದ ಕಿಯಾರಾ ಅಡ್ವಾಣಿ, ‘ಟಾಕ್ಸಿಕ್ ಸಿನಿಮಾವು ವಿಶಿಷ್ಟವಾದ ಭಾವನಾತ್ಮಕ ಲೋಕವನ್ನು ಹೊಂದಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಮೊದಲು ತಮಗೆ ಕಥೆಯನ್ನು ವಿವರಿಸಿದಾಗ, ಅದು ತಮ್ಮ ಗ್ರಹಿಕೆಗೆ ಬರಲು ತುಸು ಸಮಯ ಬೇಕಾಯ್ತು, ಅಷ್ಟು ಭಿನ್ನವಾದ ಕತಾ ಎಳೆಯನ್ನು ಆ ಸಿನಿಮಾ ಹೊಂದಿದೆ ಎಂದು ಕಿಯಾರಾ ಹೇಳಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್ ಸಿನಿಮಾದ ಮಹಿಳಾ ಪಾತ್ರಗಳು ಸಖತ್ ಬೋಲ್ಡ್’: ಕೌತುಕ ಹೆಚ್ಚಿಸಿದ ಯಶ್

‘ಟಾಕ್ಸಿಕ್’ ಸಿನಿಮಾ ನೋಡಿದ ಮೇಲೆ, ಗಂಡು ಮತ್ತು ಹೆಣ್ಣಿನ ನಡುವಿನ ಸಂಬಂಧವನ್ನು ನೋಡುವ ದೃಷ್ಟಿಕೋನವೇ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನಿಜ ಹೇಳಬೇಕೆಂದರೆ, ಗೀತು ಮೋಹನ್‌ದಾಸ್ ಅವರು ನನಗೆ ಕಥೆಯನ್ನು ವಿವರಿಸಿದಾಗ, ‘ಸರಿ, ಇದು ಕೂಡ ಸಹಜವೇ’ ಎಂದು ಅರ್ಥಮಾಡಿಕೊಳ್ಳಲು ನನಗೇ ಸ್ವಲ್ಪ ಸಮಯ ಹಿಡಿಯಿತು. ಕತೆ ಸ್ವಲ್ಪ ‘ಗ್ರೇ’ (ಹಿಂಸಾತ್ಮಕ ಅಥವಾ ಹೆಚ್ಚು ಗ್ಲಾಮರಸ್) ಆಗಿರಬಹುದು, ಎಲ್ಲರಿಗೂ ಗೊತ್ತಿರುವ ಎಂದಿನ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಇಲ್ಲದೇ ಇರಬಹುದು, ಆದರೆ ಪ್ರೀತಿಯಲ್ಲಿ ಒಂದು ರೀತಿಯ ಲಿಬರೇಷನ್ (ವಿಮೋಚನೆ) ಇರುತ್ತದೆ, ಅದನ್ನು ಈ ಸಿನಿಮಾ ತೋರಿಸಿದೆ’ ಎಂದು ಕಿಯಾರಾ ಹೇಳಿದ್ದಾರೆ.

ಚಿತ್ರದಲ್ಲಿ ತಮ್ಮ ‘ನಾಡಿಯಾ’ ಎಂಬ ಪಾತ್ರದ ಬಗ್ಗೆ ಮಾತನಾಡಿದ ಅವರು, ಆ ಪಾತ್ರದ ಮನಸ್ಥಿತಿ, ಭಾವನಾತ್ಮಕ ಜಟಿಲತೆ ನನ್ನನ್ನು ಕಾಡಿತು. ನಾಡಿಯಾ ಪಾತ್ರದ ಕಥೆಯನ್ನು ನನಗೆ ಹೇಳಿದಾಗ ನಾನು ಆಶ್ಚರ್ಯಚಕಿತಳಾದೆ. ನನ್ನ ಸ್ವಂತ ಆಲೋಚನೆಗಳಲ್ಲಿ ಅಷ್ಟು ಮುಕ್ತವಾಗಿ ಮತ್ತು ಯಾವುದೇ ಬಂಧನಗಳಿಲ್ಲದ ವ್ಯಕ್ತಿಯಾಗಿ ನನಗೆ ಇರಲು ಸಾಧ್ಯವಾಗಿದ್ದಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ನನಗೆ ಹಲವು ಬಾರಿ ಅನಿಸಿದೆ’ ಎಂದು ಅವರು ಹೇಳಿದ್ದಾರೆ.

ಈ ಚಿತ್ರದಲ್ಲಿ ಕೆಲಸ ಮಾಡುವಾಗ ಎದುರಾದ ಸವಾಲುಗಳನ್ನು ನೆನೆದ ಕಿಯಾರಾ, ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ತಮಗೆ ಕನ್ನಡ ಭಾಷೆ ಬರದೇ ಇದ್ದರೂ, ಪ್ರತಿ ದೃಶ್ಯವನ್ನು ಮೊದಲು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಿ ನಂತರ ಕನ್ನಡದಲ್ಲಿ ಶೂಟ್ ಮಾಡಲಾಗುತ್ತಿತ್ತು ಮತ್ತು ಶೂಟಿಂಗ್‌ಗೂ ಮುನ್ನಾ ದಿನ ರಾತ್ರಿ ಅವರು ಸಂಭಾಷಣೆಗಳನ್ನು ಕಂಠಪಾಠ ಮಾಡುತ್ತಿದ್ದುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

40 ಸಾವಿರ ರೂ. ಸಂಬಳ ಇದ್ದಾಗ ಮನೆ ನಡೆಸಲು ಕಷ್ಟಪಟ್ಟಿದ್ದ ಉರ್ಫಿ ಜಾವೇದ್; ಈಗ ಎಷ್ಟು?

ತಮ್ಮ ವಿಭಿನ್ನ ಹಾಗೂ ವಿಚಿತ್ರ ಫ್ಯಾಷನ್ ಸೆನ್ಸ್ ಮೂಲಕವೇ ಇಂಟರ್ನೆಟ್ ಜಗತ್ತಿನಲ್ಲಿ ಸದಾ ಸಂಚಲನ ಮೂಡಿಸುವ ಉರ್ಫಿ ಜಾವೇದ್ (Uorfi Javed), ಇಂದು ದೇಶದ ಅತ್ಯಂತ ಜನಪ್ರಿಯ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿ ಬೆಳೆದಿದ್ದಾರೆ. ಆದರೆ, ಅವರ ಜೀವನದಲ್ಲಿ ಕೂಡ ಕಷ್ಟದ ದಿನಗಳು ಇದ್ದವು. ಇತ್ತೀಚೆಗೆ ನಟಿ ಸೋಹಾ ಅಲಿ ಖಾನ್ ಅವರ ಪಾಡ್‌ಕಾಸ್ಟ್​ನಲ್ಲಿ ಭಾಗವಹಿಸಿದ್ದ ಉರ್ಫಿ, ತಾವು ಟಿವಿ ಇಂಡಸ್ಟ್ರಿಯಲ್ಲಿ ಎದುರಿಸಿದ ಅವಮಾನ ಹಾಗೂ ಕಷ್ಟದ ದಿನಗಳ ಬಗ್ಗೆ ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ. 40 ಸಾವಿರ ಸಂಬಳ ಇದ್ದಾಗ ಜೀವನ ಕಷ್ಟವಾಗಿತ್ತು ಎಂದು ಹೇಳಿದ್ದಾರೆ. ಆದರೆ ಫೇಮಸ್ ಆದ ನಂತರ ಅವರು ತಿಂಗಳಿಗೆ 2 ಲಕ್ಷ ರೂಪಾಯಿ ಸಂಪಾದಿಸುವ ಮಟ್ಟಕ್ಕೆ ಬೆಳೆದರು.

ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಉರ್ಫಿ, ‘ನನ್ನ ತಂದೆಯ ಕಿರುಕುಳ ತಾಳಲಾರದೆ ನಾನು ಮನೆಯಿಂದ ಓಡಿಬಂದಿದ್ದೆ. ಬದುಕಲು ದೆಹಲಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಿದೆ, ಮನೆಪಾಠ ಹೇಳಿಕೊಟ್ಟೆ. ಆದರೆ ನನ್ನ ಗುರಿ ಮುಂಬೈ ತಲುಪುವುದಾಗಿತ್ತು. ಮುಂಬೈಗೆ ಬಂದರೆ ಐದು ವರ್ಷದಲ್ಲಿ ಸ್ಟಾರ್ ಆಗಬಹುದು, ಕಾರು, ಬಂಗಲೆ ತಾನಾಗಿಯೇ ಬರುತ್ತದೆ ಅಂದುಕೊಂಡಿದ್ದೆ. ಆದರೆ ರಿಯಾಲಿಟಿ ತುಂಬಾನೇ ಭಿನ್ನವಾಗಿತ್ತು’ ಎಂದಿದ್ದಾರೆ.

ಬಾಲಿವುಡ್ ಸಿನಿಮಾಗಳಿಗೆ ಆಡಿಷನ್ ನೀಡಿದಾಗ ಗಾಡ್‌ಫಾದರ್ ಅಥವಾ ಬ್ಯಾಕ್‌ಗ್ರೌಂಡ್ ಇಲ್ಲದೆ ಇಲ್ಲಿ ಕೆಲಸ ಸಿಗುವುದು ಅಸಾಧ್ಯ ಎಂಬುದು ಅವರಿಗೆ ಅರ್ಥವಾಯಿತು. ‘ನನ್ನ ಸುಂದರ ಮುಖ ನೋಡಿ ಯಾರೂ ರಿಜೆಕ್ಟ್ ಮಾಡಲ್ಲ ಅಂದುಕೊಂಡು ಟಿವಿ ಸೀರಿಯಲ್‌ಗಳ ಆಡಿಷನ್ ನೀಡಲು ಪ್ರಾರಂಭಿಸಿದೆ. ಆದರೆ ನನಗೆ ಸಿಕ್ಕಿದ್ದು ಕೇವಲ ಪೋಷಕ ಪಾತ್ರಗಳು ಮಾತ್ರ’ ಎಂದು ಉರ್ಫಿ ಹೇಳಿದ್ದಾರೆ.

‘ಧಾರಾವಾಹಿ ಲೋಕದ ಅನುಭವ ಅತ್ಯಂತ ಕೆಟ್ಟದಾಗಿತ್ತು. ನೀವು ಮುಖ್ಯ ಭೂಮಿಕೆಯಲ್ಲಿ ಇಲ್ಲದಿದ್ದರೆ ಅಥವಾ ಸ್ಟಾರ್ ಆಗದಿದ್ದರೆ ಸೆಟ್‌ನಲ್ಲಿ ನಿಮ್ಮನ್ನು ಮನುಷ್ಯರೆಂದೇ ಪರಿಗಣಿಸುವುದಿಲ್ಲ. ಸೈಡ್ ಕ್ಯಾರೆಕ್ಟರ್ ಮಾಡುವವರಿಗೆ ಅಲ್ಲಿ ಒಳ್ಳೆಯ ಮರ್ಯಾದೆ ಸಿಗುವುದಿಲ್ಲ. ನನಗೆ ಅಲ್ಲಿ ನೆಮ್ಮದಿ ಇರಲಿಲ್ಲ, ನಾನು ಇದಕ್ಕಿಂತ ದೊಡ್ಡ ಸಾಧನೆ ಮಾಡಲು ಹುಟ್ಟಿದವಳು ಎಂಬ ನಂಬಿಕೆ ನನಗಿತ್ತು’ ಎಂದು ಅವರು ಹೇಳಿದ್ದಾರೆ.

‘ಆದರೆ ಮುಂಬೈನಂತಹ ದುಬಾರಿ ನಗರದಲ್ಲಿ ಬದುಕಲು, ಮನೆ ಬಾಡಿಗೆ ಕಟ್ಟಲು ಹಣ ಬೇಕಿತ್ತು. ಹಾಗಾಗಿ ತಿಂಗಳಿಗೆ ಸಿಗುತ್ತಿದ್ದ 40 ಸಾವಿರ ರೂಪಾಯಿಗಾಗಿ ಮನಸ್ಸಿಲ್ಲದಿದ್ದರೂ ಟಿವಿ ಧಾರಾವಾಹಿಗಳಲ್ಲಿ ನಟಿಸುವುದನ್ನು ಮುಂದುವರಿಸಿದೆ. ಆದರೆ ನನಗೆ ತೃಪ್ತಿ ಇರಲಿಲ್ಲ, ನಾನು ಯಾವಾಗಲೂ ಜನಪ್ರಿಯತೆಯಲ್ಲಿ ಇರಬೇಕೆಂದು ಬಯಸಿದ್ದೆ’ ಎಂದಿದ್ದಾರೆ ಉರ್ಫಿ ಜಾವೇದ್.

ಇದನ್ನೂ ಓದಿ: ತುಟಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋಗಿ ಇಂಥ ಸ್ಥಿತಿಗೆ ಬಂದ ಉರ್ಫಿ ಜಾವೇದ್

ಫ್ಯಾಷನ್‌ನಲ್ಲಿ ಆಸಕ್ತಿ ಇದ್ದರೂ ಉರ್ಫಿ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾ ಬೆಳೆದಂತೆ ತಾವೇ ವಿನ್ಯಾಸಗೊಳಿಸಿದ ಉಡುಪುಗಳನ್ನು ಧರಿಸಿ ವಿಡಿಯೋ ಮಾಡಲು ಆರಂಭಿಸಿದರು. ಈ ನಡುವೆ ಅವರಿಗೆ ‘ಬಿಗ್ ಬಾಸ್ ಒಟಿಟಿ’ ಶೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಅಲ್ಲಿ ಅವರು ಕಸದ ಚೀಲದಿಂದ ಮಾಡಿದ ಉಡುಪನ್ನು ಧರಿಸಿದ್ದು ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಯಿತು. ಅದೇ ಅವರ ಜೀವನದ ಬಿಗ್ ಟರ್ನಿಂಗ್ ಪಾಯಿಂಟ್.

ತಮ್ಮ ಸೋಶಿಯಲ್ ಮೀಡಿಯಾ ಇಮೇಜ್ ಬಗ್ಗೆ ಮಾತನಾಡಿದ ಉರ್ಫಿ, ‘ನಾನು ಯಾವುದೇ ಪ್ಲಾನಿಂಗ್ ಮಾಡಿ ಈ ಇಮೇಜ್ ಕ್ರಿಯೇಟ್ ಮಾಡಿಲ್ಲ. ಎಲ್ಲವೂ ತಾನಾಗಿಯೇ ನಡೆದುಹೋಯಿತು. ಒಂದು ಕಾಲದಲ್ಲಿ ಟಿವಿ ಸೀರಿಯಲ್‌ಗಳಲ್ಲಿ ತಿಂಗಳಿಗೆ 40 ಸಾವಿರ ರೂಪಾಯಿ ಗಳಿಸಲು ಒದ್ದಾಡುತ್ತಿದ್ದ ನಾನು, ಇಂದು ಸೋಶಿಯಲ್ ಮೀಡಿಯಾ ಬ್ರ್ಯಾಂಡ್ ಕೊಲಾಬರೇಷನ್‌ಗಳ ಮೂಲಕ ತಿಂಗಳಿಗೆ ಕನಿಷ್ಠ 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಸಂಪಾದಿಸುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೂನ್ ತಿಂಗಳಲ್ಲಿ ಮೊಹರಂ ಸೇರಿ 12 ದಿನಗಳವರೆಗೆ ಬ್ಯಾಂಕ್ ರಜೆ; ಕರ್ನಾಟಕ ಹಾಗೂ ದೇಶವ್ಯಾಪಿ ಎಷ್ಟಿದೆ ರಜೆ?

ನವದೆಹಲಿ, ಮೇ 29: ಮುಂದಿನ ತಿಂಗಳು (2026ರ ಜೂನ್) ಬ್ಯಾಂಕುಗಳಿಗೆ 12 ದಿನಗಳವರೆಗೆ ರಜೆ (Bank Holidays) ಇರುತ್ತದೆ. ರಾಜ್ಯದಿಂದ ರಾಜ್ಯಕ್ಕೆ ರಜೆಗಳಲ್ಲಿ ವ್ಯತ್ಯಯ ಇರುತ್ತದೆ. ಮೊಹರಂ, ಮಹಾರಾಣಾ ಪ್ರತಾಪ್ ಜಯಂತಿ, ಗುರು ಅರ್ಜುನದೇವ ಬಲಿದಾನ ದಿನ, ಕಬೀರ್ ಜಯಂತಿ ಇತ್ಯಾದಿ ಕೆಲ ವಿಶೇಷ ದಿನಗಳು ಮತ್ತು ಆಚರಣೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಇವೆ. ಈ 12 ರಜಾದಿನಗಳಲ್ಲಿ ಆರು ದಿನಗಳು ರೆಗ್ಯುಲರ್ ವೀಕೆಂಡ್ ರಜಾ ದಿನಗಳೇ ಆಗಿವೆ. ಮಿಝೋರಾಂ, ಹಿಮಾಚಲ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ. ಬೇರೆ ರಾಜ್ಯಗಳಿಗಿಂತ ಎರಡು ಹೆಚ್ಚು ರಜೆಗಳಿವೆ. ಮೊಹರಂ ಹಬ್ಬಕ್ಕೆ ಹೆಚ್ಚಿನ ರಾಜ್ಯಗಳಲ್ಲಿ ರಜೆ ಇದೆ. ಕರ್ನಾಟಕದಲ್ಲಿ ಏಳು ದಿನ ಬ್ಯಾಂಕುಗಳು ಜೂನ್​ನಲ್ಲಿ ಬಂದ್ ಆಗಿರುತ್ತವೆ.

2026ರ ಜೂನ್​ನಲ್ಲಿ ಬ್ಯಾಂಕ್ ರಜಾದಿನಗಳು

  • ಜೂನ್ 7: ಭಾನುವಾರದ ರಜೆ
  • ಜೂನ್ 13: ಎರಡನೇ ಶನಿವಾರದ ರಜೆ
  • ಜೂನ್ 14: ಭಾನುವಾರದ ರಜೆ
  • ಜೂನ್ 15, ಸೋಮವಾರ: ರಾಜ ಸಂಕ್ರಾಂತಿ, ವೈಎಂಎ ದಿನ (ಒಡಿಶಾ, ಮಿಝೋರಾಂ ರಾಜ್ಯಗಳಲ್ಲಿ ರಜೆ)
  • ಜೂನ್ 17, ಬುಧವಾರ: ಮಹಾರಾಣ ಪ್ರತಾಪ್ ಜಯಂತಿ (ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ರಜೆ)
  • ಜೂನ್ 18, ಗುರುವಾರ: ಶ್ರೀ ಗುರು ಅರ್ಜುನ ದೇವ್ ಬಲಿದಾನ ದಿನ (ಪಂಜಾಬ್​ನಲ್ಲಿ ರಜೆ)
  • ಜೂನ್ 21: ಭಾನುವಾರದ ರಜೆ
  • ಜೂನ್ 26, ಶುಕ್ರವಾರ: ಮೊಹರಂ ಹಬ್ಬ (ಹೆಚ್ಚಿನ ಕಡೆ ರಜೆ)
  • ಜೂನ್ 27: ನಾಲ್ಕನೇ ಶನಿವಾರದ ರಜೆ
  • ಜೂನ್ 28: ಭಾನುವಾರದ ರಜೆ
  • ಜೂನ್ 29, ಸೋಮವಾರ: ಸಂತ ಗುರು ಕಬೀರ್ ಜಯಂತಿ (ಹಿಮಾಚಲ ಪ್ರದೇಶದಲ್ಲಿ ರಜೆ)
  • ಜೂನ್ 30, ಮಂಗಳವಾರ: ರೆಮ್ನಾ ನೀ (ಮಿಝೋರಾಂ ರಾಜ್ಯದಲ್ಲಿ ರಜೆ)

ಇದನ್ನೂ ಓದಿ: PM Kisan Scheme: ಪಿಎಂ ಕಿಸಾನ್ 23ನೇ ಕಂತಿನ ಹಣ ಜೂನ್​ನಲ್ಲಿ ಬರುತ್ತಾ? ಈ ಕಾರ್ಯ ಮಾಡದವರಿಗೆ ಸಿಕ್ಕೋದಿಲ್ಲಾ ಹಣ

ಕರ್ನಾಟಕದಲ್ಲಿ ಜೂನ್​ನಲ್ಲಿರುವ ಬ್ಯಾಂಕ್ ರಜಾದಿನಗಳು

  • ಜೂನ್ 7: ಭಾನುವಾರದ ರಜೆ
  • ಜೂನ್ 13: ಎರಡನೇ ಶನಿವಾರದ ರಜೆ
  • ಜೂನ್ 14: ಭಾನುವಾರದ ರಜೆ
  • ಜೂನ್ 21: ಭಾನುವಾರದ ರಜೆ
  • ಜೂನ್ 26, ಶುಕ್ರವಾರ: ಮೊಹರಂ ಹಬ್ಬಕ್ಕೆ ರಜೆ
  • ಜೂನ್ 27: ನಾಲ್ಕನೇ ಶನಿವಾರದ ರಜೆ
  • ಜೂನ್ 28: ಭಾನುವಾರದ ರಜೆ

ಬ್ಯಾಂಕುಗಳಿಗೆ ರಜೆ ಎಂದರೆ ಕಚೇರಿ ಮಾತ್ರವೇ ಬಂದ್ ಆಗಿರುತ್ತದೆ. ಆದರೆ, ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳು ಆನ್​ಲೈನ್​ನಲ್ಲಿ ಲಭ್ಯ ಇರುತ್ತವೆ. ಆರ್​ಟಿಜಿಎಸ್ ಪೇಮೆಂಟ್, ಹೊಸ ಬ್ಯಾಂಕ್ ಖಾತೆಗೆ ಅರ್ಜಿ ಸಲ್ಲಿಕೆ ಇತ್ಯಾದಿ ಕಾರ್ಯಕ್ಕೆ ಭೌತಿಕ ಕಚೇರಿ ಬೇಕು. ಉಳಿದಂತೆ, ಹೆಚ್ಚಿನ ಪೇಮೆಂಟ್​ಗಳನ್ನು ಯುಪಿಐ, ನೆಟ್​ಬ್ಯಾಂಕಿಂಗ್ ಇತ್ಯಾದಿ ಮೂಲಕ ಮಾಡಬಹುದು. ಕ್ಯಾಷ್ ಪಡೆಯಲು ಎಟಿಎಂಗಳು ಕೂಡ 24 ಗಂಟೆ ಲಭ್ಯ ಇರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಉದ್ಯೋಗ ಭವಿಷ್ಯ: ಈ 4 ರಾಶಿಯವರಿಗೆ ಸಿಗಲಿದೆ ಉನ್ನತ ಹುದ್ದೆ, ಸಂಬಳ ಹೆಚ್ಚಳದ ಬಿಗ್ ಆಫರ್!

ಮೇ 31ರಿಂದ ಜೂನ್‌ 06ರವರೆಗಿನ ಮೊದಲ ವಾರದಲ್ಲಿ ಉದ್ಯೋಗ ಅವಕಾಶಗಳು ಬರಲಿದ್ದು, ಅದನ್ನು ದೂರಸರಿಸದೇ ಅನುಭವಕ್ಕಾಗಿ ಸೇರಿಕೊಳ್ಳುವುದು ಸೂಕ್ತ. ನಿಮ್ಮ ಮಾರ್ಗವನ್ನು ತಪ್ಪಿಸಲು ಹಲವರು ಪ್ರಯತ್ನಶೀಲರಾದರೂ ಅದನ್ನು ಮೀರುವ ಸಾಮರ್ಥ್ಯ ಬೇಕಾಗಲಿದೆ. ಉದ್ಯಮವನ್ನು ಯಶಸ್ಸನ್ನು ಕಾಣಲಿ.

​ಮೇಷ ರಾಶಿ :

​ನಿಮ್ಮ ರಾಶಿಯಲ್ಲಿ ಮಂಗಳನಿರುವುದರಿಂದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಕೆಲಸದ ಸ್ಥಳದಲ್ಲಿ ನಿಮ್ಮ ದಕ್ಷತೆಗೆ ಮೆಚ್ಚುಗೆ ದೊರೆಯುತ್ತದೆ. ಆದರೆ, ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಆತುರ ಅಥವಾ ಸಿಟ್ಟಿನ ನಿರ್ಧಾರಗಳು ಬೇಡ, ತಾಳ್ಮೆ ಇರಲಿ.

​ವೃಷಭ ರಾಶಿ :

​ರಾಶಿಯಲ್ಲಿ ಸೂರ್ಯನಿರುವುದರಿಂದ ಸರ್ಕಾರಿ ವಲಯದ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಮೇಲಧಿಕಾರಿಗಳ ಬೆಂಬಲ ಸಿಗಲಿದೆ. ಆದರೆ ಅಹಂಕಾರದ ನಡವಳಿಕೆಯಿಂದ ದೂರವಿರಿ. ಹೊಸ ಉದ್ಯೋಗದ ಹುಡುಕಾಟದಲ್ಲಿದ್ದವರಿಗೆ ಉತ್ತಮ ಅವಕಾಶಗಳು ಕೈಸೇರಲಿವೆ.

ಮಿಥುನ ರಾಶಿ :

​ಬುಧ ಮತ್ತು ಶುಕ್ರರು ನಿಮ್ಮ ರಾಶಿಯಲ್ಲಿರುವುದರಿಂದ ಬುದ್ಧಿವಂತಿಕೆಯಿಂದ ಕಾರ್ಯ ಸಾಧಿಸುವಿರಿ. ವ್ಯಾಪಾರ ಮತ್ತು ಕಲಾ ರಂಗದಲ್ಲಿರುವವರಿಗೆ ಅತ್ಯುತ್ತಮ ಲಾಭವಿದೆ. ನಿಮ್ಮ ಸಂಪರ್ಕ ಕೌಶಲ್ಯದಿಂದ ಉದ್ಯೋಗದಲ್ಲಿ ಹೊಸ ಒಪ್ಪಂದಗಳನ್ನು ಪಡೆದುಕೊಳ್ಳುವಿರಿ.

​ಕರ್ಕಾಟಕ ರಾಶಿ :

​ಗುರು ಉಚ್ಛಸ್ಥಿತಿಯಲ್ಲಿರುವುದರಿಂದ ಉದ್ಯೋಗದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಉನ್ನತ ಸ್ಥಾನ ಅಥವಾ ಸಂಬಳ ಹೆಚ್ಚಳದ ಸುದ್ದಿ ಕೇಳುವಿರಿ. ವಿದೇಶಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರ ವಾತಾವರಣವಿರಲಿದ್ದು, ಗೌರವ ವೃದ್ಧಿಸಲಿದೆ.

​ಸಿಂಹ ರಾಶಿ :

​ರಾಶಿಯಲ್ಲಿ ಕೇತು ಇರುವುದರಿಂದ ಕೆಲಸದಲ್ಲಿ ಕೆಲವು ಗೊಂದಲಗಳು ಅಥವಾ ತೃಪ್ತಿಯಿಲ್ಲದ ಭಾವನೆ ಮೂಡಬಹುದು. ಸಹೋದ್ಯೋಗಿಗಳ ರಾಜಕೀಯಕ್ಕೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಕೆಲಸದ ಮೇಲೆ ಮಾತ್ರ ಗಮನವಿಟ್ಟರೆ ವಾರಾಂತ್ಯಕ್ಕೆ ಪರಿಸ್ಥಿತಿ ಸುಧಾರಿಸಲಿದೆ.

​ಕನ್ಯಾ ರಾಶಿ :

​ಉದ್ಯೋಗದಲ್ಲಿ ಈ ವಾರ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಜಾಗರೂಕರಾಗಿರಿ. ವೃತ್ತಿಜೀವನದಲ್ಲಿ ಸಣ್ಣ ಬದಲಾವಣೆಗಳನ್ನು ನಿರೀಕ್ಷಿಸಬಹುದು, ಹಿರಿಯರ ಮಾರ್ಗದರ್ಶನ ನಿಮಗೆ ಧನಾತ್ಮಕ ದಾರಿ ತೋರಿಸುತ್ತದೆ.
ತುಲಾ ರಾಶಿ :

​ವೃತ್ತಿರಂಗದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ನಿಮ್ಮ ಕ್ರಿಯಾಶೀಲತೆಗೆ ತಕ್ಕ ಮನ್ನಣೆ ದೊರೆಯಲಿದ್ದು, ಹೊಸ ಆಫರ್‌ಗಳು ಬರಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಾಗಲಿದೆ. ದೀರ್ಘಾವಧಿಯ ಹೂಡಿಕೆಗಳಿಗೆ ಈ ವಾರ ಅತ್ಯಂತ ಸೂಕ್ತವಾಗಿದೆ.

ವೃಶ್ಚಿಕ ರಾಶಿ :

​ಕೆಲಸದ ಒತ್ತಡ ಹೆಚ್ಚಾಗಿದ್ದರೂ ನಿಮ್ಮ ಕಾರ್ಯದಕ್ಷತೆಯಿಂದ ಎಲ್ಲವನ್ನೂ ನಿಭಾಯಿಸುವಿರಿ. ಕಚೇರಿಯಲ್ಲಿ ರಹಸ್ಯ ಶತ್ರುಗಳ ಬಗ್ಗೆ ಎಚ್ಚರವಿರಲಿ. ಸಹನೆ ಕಳೆದುಕೊಳ್ಳದೆ ಕೆಲಸ ಮಾಡಿದರೆ, ಮೇಲಧಿಕಾರಿಗಳು ನಿಮ್ಮ ಪರಿಶ್ರಮವನ್ನು ಗುರುತಿಸಿ ಪುರಸ್ಕರಿಸುತ್ತಾರೆ.

ಧನು ರಾಶಿ :

​ಈ ವಾರ ಬಲದಿಂದ ಉದ್ಯೋಗದಲ್ಲಿ ನಾಯಕತ್ವದ ಗುಣಗಳು ಹೊರಹೊಮ್ಮಲಿವೆ. ಹೊಸ ಉದ್ಯಮ ಆರಂಭಿಸಲು ಯೋಚಿಸುತ್ತಿದ್ದರೆ ಈ ವಾರ ಶುಭಪ್ರದವಾಗಿದೆ. ಉದ್ಯೋಗಿಗಳಿಗೆ ಅಪೇಕ್ಷಿತ ವರ್ಗಾವಣೆ ಅಥವಾ ಹೊಸ ಹುದ್ದೆ ಸಿಗುವ ಯೋಗವಿದೆ.

​ಮಕರ ರಾಶಿ :

​ಉದ್ಯೋಗ ಕ್ಷೇತ್ರದಲ್ಲಿ ಹಠಾತ್ ಸವಾಲುಗಳು ಎದುರಾಗಬಹುದು. ಕೆಲಸದಲ್ಲಿ ಯಾವುದೇ ಶಾರ್ಟ್‌ಕಟ್ ಬಳಸಬೇಡಿ. ದಾಖಲೆಗಳಿಗೆ ಸಹಿ ಮಾಡುವ ಮುನ್ನ ಎಚ್ಚರವಿರಲಿ. ಸಹೋದ್ಯೋಗಿಗಳೊಂದಿಗೆ ವಾದ ಮಾಡದೆ, ಶಾಂತವಾಗಿ ಕಾರ್ಯ ನಿರ್ವಹಿಸುವುದು ಪ್ರಗತಿಗೆ ಪೂರಕ.

ಕುಂಭ ರಾಶಿ :

​ರಾಶಿಯಲ್ಲಿ ಚಂದ್ರ ಮತ್ತು ರಾಹು ಇರುವುದರಿಂದ ಕೆಲಸದ ಜಾಗದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು. ಭ್ರಮೆಯ ಆಧಾರದ ಮೇಲೆ ಕೆಲಸ ಬಿಡುವ ನಿರ್ಧಾರ ಬೇಡ. ಸ್ಥಿರತೆಯಿಂದ ಕಾರ್ಯನಿರ್ವಹಿಸಿದರೆ ವಾರದ ಕೊನೆಯಲ್ಲಿ ಯಶಸ್ಸು ನಿಮ್ಮದಾಗುತ್ತದೆ.

ಇದನ್ನೂ ಓದಿ: ಮಾಸ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಜೂನ್ ತಿಂಗಳ ಭವಿಷ್ಯ ಇಲ್ಲಿ ತಿಳಿಯಿರಿ

ಮೀನ ರಾಶಿ :

​ನಿಮ್ಮ ರಾಶಿಯಲ್ಲಿ ಶನಿ ಇರುವುದರಿಂದ ಉದ್ಯೋಗದಲ್ಲಿ ಜವಾಬ್ದಾರಿಗಳು ಮತ್ತು ಶ್ರಮ ಹೆಚ್ಚಾಗಲಿದೆ. ಶಿಸ್ತು ಮತ್ತು ಸಮಯ ಪಾಲನೆ ನಿಮಗೆ ಯಶಸ್ಸು ತರಲಿದೆ. ನಿಧಾನಗತಿಯಲ್ಲಾದರೂ ನಿಮ್ಮ ವೃತ್ತಿಜೀವನದಲ್ಲಿ ಸ್ಥಿರವಾದ ಪ್ರಗತಿ ಮತ್ತು ಆರ್ಥಿಕ ಭದ್ರತೆ ಕಂಡುಬರಲಿದೆ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

1956ರಿಂದ ರಾಜ್ಯದಲ್ಲಿ ಪೂರ್ಣಾವಧಿ ಸಿಎಂ ಆಗಿದ್ದು ಕೇವಲ ಮೂವರು!: ಉಳಿದವರದ್ದೆಲ್ಲ ಅಲ್ಪಾವಧಿ ಅಧಿಕಾರ

ಕರ್ನಾಟಕದ ಪೂರ್ಣಾವಧಿ ಮುಖ್ಯಮಂತ್ರಿಗಳು

ಬೆಂಗಳೂರು, ಮೇ 29: 2013-18ರ ವರೆಗೆ ಕರ್ನಾಟಕದ ಸಿಎಂ ಆಗಿ ಅವಧಿ ಪೂರ್ಣಗೊಳಿಸಿದ್ದ ಸಿದ್ದರಾಮಯ್ಯ (Siddaramaiah) ಈ ಬಾರಿ ಕೇವಲ 3 ವರ್ಷವಷ್ಟೇ ಆಡಳಿತ ನಡೆಸಿ ಪದತ್ಯಾಗ ಮಾಡಿದ್ದಾರೆ. ಅಷ್ಟಕ್ಕೂ ರಾಜಕೀಯ ಅಸ್ಥಿರತೆ, ನಾಯಕತ್ವ ಬದಲಾವಣೆಗಳು ಕರ್ನಾಟಕ ರಾಜಕೀಯದಲ್ಲಿ ಹೊಸತೇನಲ್ಲ. 1956ರಿಂದ ಇಂದಿನವರೆಗೆ ಕೇವಲ 3 ಮುಖ್ಯಮಂತ್ರಿಗಳು ಮಾತ್ರ ಪೂರ್ಣಾವಧಿಯ ಆಡಳಿತ ನಡೆಸಿದ್ದಾರೆ. ಎಸ್​​. ನಿಜಲಿಂಗಪ್ಪ (1962-68), ಡಿ. ದೇವರಾಜ ಅರಸ್​​ (1972-77) ಮತ್ತು ಸಿದ್ದರಾಮಯ್ಯ (2013-18) ಅವರನ್ನು ಬಿಟ್ಟರೆ ಉಳಿದವರೆಲ್ಲ ಅಲ್ಪಾವಧಿಯ ಸಿಎಂಗಳೆ!

ಎಸ್. ನಿಜಲಿಂಗಪ್ಪ (1956-1958)

ಮೈಸೂರು ರಾಜ್ಯ ಏಕೀಕರಣದ ಬಳಿಕ ಮುಖ್ಯಮಂತ್ರಿ ಪಟ್ಟಕ್ಕೇರಿದ ಕಾಂಗ್ರೆಸ್ ಹಿರಿಯ ನಾಯಕ ಎಸ್. ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್‌ನ ಲಿಂಗಾಯತ ಶಾಸಕರ ಬಂಡಾಯ ಮುಳುವಾಗಿತ್ತು. ಹೈಕಮಾಂಡ್ ಬಂಡಾಯಗಾರರ ಪರ ನಿಂತ ಪರಿಣಾಮ, ಅವಧಿ ಪೂರ್ಣಗೊಳಿಸುವ ಮುನ್ನವೇ ನಿಜಲಿಂಗಪ್ಪ ರಾಜೀನಾಮೆ ನೀಡಬೇಕಾಯಿತು. ಬಳಿಕ ಬಿ.ಡಿ. ಜತ್ತಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲಾಯಿತು.

ವೀರೇಂದ್ರ ಪಾಟೀಲ್ (1968-71)

1969ರ ಕಾಂಗ್ರೆಸ್ ವಿಭಜನೆಯ ಬಳಿಕ ಕಾಂಗ್ರೆಸ್ (ಆರ್ಗನೈಸೇಶನ್) ಬಣದೊಂದಿಗೆ ಗುರುತಿಸಿಕೊಂಡಿದ್ದ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ಆದರೆ 1971ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಭರ್ಜರಿ ಗೆಲುವು ಸಾಧಿಸಿದ ನಂತರ ಹಲವಾರು ಸಚಿವರು ಮತ್ತು ಶಾಸಕರು ಅವರ ಬಣಕ್ಕೆ ಸೇರ್ಪಡೆಯಾದರು. ಸರ್ಕಾರ ಬಹುಮತ ಕಳೆದುಕೊಂಡ ಪರಿಣಾಮ ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು.

ಇದನ್ನೂ ಓದಿ: ವಿಪಕ್ಷ ಬಿಜೆಪಿಯ ಸಮೀಕರಣ ಬದಲಿಸಲಿದ್ಯಾ ಸಿದ್ದರಾಮಯ್ಯ ರಾಜೀನಾಮೆ?; ಹೀಗೊಂದು ಲೆಕ್ಕಾಚಾರ

ದೇವರಾಜ್ ಅರಸು (1978-80)

ಹಿಂದುಳಿದ ವರ್ಗಗಳ ಪ್ರಬಲ ನಾಯಕನಾಗಿದ್ದ ದೇವರಾಜ್ ಅರಸು ಇಂದಿರಾ ಗಾಂಧಿಯವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ ಕಾಂಗ್ರೆಸ್ (ಅರಸು) ಬಣ ಸ್ಥಾಪಿಸಿದ್ದರು. ಆದರೆ 1980ರಲ್ಲಿ ಇಂದಿರಾ ಗಾಂಧಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಬಳಿಕ ಅರಸು ಬಣದ ಅನೇಕ ಶಾಸಕರು ಕಾಂಗ್ರೆಸ್‌ಗೆ ಮರಳಿದರು. ಸರ್ಕಾರ ಬಹುಮತ ಕಳೆದುಕೊಂಡು ಅರಸು ರಾಜೀನಾಮೆ ನೀಡಿದರು. ನಂತರ ಆರ್​​. ಗುಂಡೂರಾವ್​ ಅಧಿಕಾರ ವಹಿಸಿಕೊಂಡರು.

ರಾಮಕೃಷ್ಣ ಹೆಗಡೆ (1985-88)

ರಾಮಕೃಷ್ಣ ಹೆಗಡೆ ಅವರು ಕರ್ನಾಟಕದ ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿ. ವಿರೋಧ ಪಕ್ಷದ ನಾಯಕರು ಹಾಗೂ ತಮ್ಮ ಪಕ್ಷದ ಅಸಮಾಧಾನಿತ ನಾಯಕರ ಫೋನ್ ಟ್ಯಾಪಿಂಗ್ ಆರೋಪದ ನಡುವೆ ನೈತಿಕ ಹೊಣೆ ಹೊತ್ತು ಮಧ್ಯಾವಧಿಯಲ್ಲೇ ಅವರು ರಾಜೀನಾಮೆ ನೀಡಿದ್ದರು. ಬಳಿಕ ಎಸ್​​.ಆರ್​​. ಬೊಮ್ಮಾಯಿ ಮುಖ್ಯಮಂತ್ರಿಯಾದರು.

ವೀರೇಂದ್ರ ಪಾಟೀಲ್ (1989-90)

1989ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ ವೀರೇಂದ್ರ ಪಾಟೀಲ್ ಮತ್ತೆ ಮುಖ್ಯಮಂತ್ರಿಯಾದರು. ಆದರೆ ಚನ್ನಪಟ್ಟಣ ಮತ್ತು ದಾವಣಗೆರೆಯಲ್ಲಿ ನಡೆದ ಕೋಮು ಗಲಭೆಗಳು ಕಾನೂನು ಸುವ್ಯವಸ್ಥೆ ಸಮಸ್ಯೆ ಸೃಷ್ಟಿಸಿತ್ತು. ಪಾರ್ಶ್ವವಾಯು ಚಿಕಿತ್ಸೆಯಲ್ಲಿದ್ದ ಪಾಟೀಲ್ ಅವರನ್ನು ಬದಲಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಜೀವ್​​ ಗಾಂಧಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲೇ ಘೋಷಿಸಿದ್ದರು. ನಂತರ ಎಸ್​​. ಬಂಗಾರಪ್ಪ ಅವರನ್ನು ಸಿಎಂ ಮಾಡಲಾಗಿತ್ತು.

ಇದನ್ನೂ ಓದಿ: 40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ; ಯಾರ್ಯಾರು? ಇಲ್ಲಿದೆ ಲಿಸ್ಟ್​

ಎಸ್. ಬಂಗಾರಪ್ಪ (1990-92)

ಭ್ರಷ್ಟಾಚಾರ ಆರೋಪಗಳು ಮತ್ತು ಒಳಬಂಡಾಯದಿಂದ ಬಂಗಾರಪ್ಪ ಅವರ ಆಡಳಿತ ಸಂಕಷ್ಟಕ್ಕೆ ಸಿಲುಕಿತು. ಹಿರಿಯ ನಾಯಕ ವೀರಪ್ಪ ಮೊಯಿಲಿ ನೇತೃತ್ವದಲ್ಲಿ ಅಸಮಾಧಾನಿತರು ಮುಕ್ತವಾಗಿ ವಿರೋಧ ವ್ಯಕ್ತಪಡಿಸಿದರು. ಹೈಕಮಾಂಡ್ ಸೂಚನೆಯ ಮೇರೆಗೆ ಬಂಗಾರಪ್ಪ ರಾಜೀನಾಮೆ ನೀಡಿ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದರು.

ಹೆಚ್.ಡಿ. ದೇವೇಗೌಡ (1994-96)

1994ರಲ್ಲಿ ಜನತಾದಳ ಕಾಂಗ್ರೆಸ್‌ನ್ನು ಸೋಲಿಸಿದ ಬಳಿಕ ಹೆಚ್​​.ಡಿ. ದೇವೇಗೌಡ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ 1996ರ ಲೋಕಸಭೆ ಚುನಾವಣೆಯ ಬಳಿಕ ಅವರು ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಕಾರಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಜೆ.ಹೆಚ್​​. ಪಟೇಲ್​​ ಅಧಿಕಾರ ವಹಿಸಿಕೊಂಡರು.

ಎನ್. ಧರ್ಮಸಿಂಗ್ ( 2004-06)

2004ರ ಚುನಾವಣೆಯಲ್ಲಿ ತ್ರಿಶಂಕು ಸ್ಥಿತಿ ಉಂಟಾದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿತು. ಎನ್. ಧರ್ಮಸಿಂಗ್ ಮುಖ್ಯಮಂತ್ರಿಯಾದರು. ಆದರೆ 2006ರಲ್ಲಿ ಜೆಡಿಎಸ್ ಬೆಂಬಲ ಹಿಂಪಡೆದು ಬಿಜೆಪಿಯೊಂದಿಗೆ ಕೈಜೋಡಿಸಿದ ಪರಿಣಾಮ ಧರ್ಮಸಿಂಗ್ ರಾಜೀನಾಮೆ ನೀಡಿದರು.

ಹೆಚ್.ಡಿ. ಕುಮಾರಸ್ವಾಮಿ (2006-07)

20 ತಿಂಗಳ ಆಡಳಿತದ ಬಳಿಕ ಮೈತ್ರಿ ಒಪ್ಪಂದದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಕುಮಾರಸ್ವಾಮಿ ನಿರಾಕರಿಸಿದರು. ಹೀಗಾಗಿ ಉಂಟಾದ ರಾಜಕೀಯ ಗೊಂದಲದ ಕಾರಣಕ್ಕೆ ಅವರು ರಾಜೀನಾಮೆ ನೀಡಬೇಕಾಯಿತು. ಬಳಿಕ ಬಿ.ಎಸ್​​. ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಜೆಡಿಎಸ್ ಬೆಂಬಲ ಹಿಂಪಡೆಯುತ್ತಿದ್ದಂತೆ ಸರ್ಕಾರ ಪತನಗೊಂಡಿತ್ತು.

ಯಡಿಯೂರಪ್ಪ – ಸದಾನಂದ ಗೌಡ – ಜಗದೀಶ್​​ ಶೆಟ್ಟರ್ (2008-2013)

2008ರಲ್ಲಿ ಬಿಜೆಪಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿತು. ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆದರೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತ ಎಫ್‌ಐಆರ್ ದಾಖಲಿಸಿದ ಬಳಿಕ ಬಿಜೆಪಿ ಹೈಕಮಾಂಡ್ ಅವರು ರಾಜೀನಾಮೆ ನೀಡುವಂತೆ ಸೂಚಿಸಿತು. ಬಳಿಕ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾದರೂ, ಪಕ್ಷದ ಒಳ ಅಸಮಾಧಾನದಿಂದ 11 ತಿಂಗಳಲ್ಲೇ ರಾಜೀನಾಮೆ ನೀಡಿದರು. ನಂತರ ಜಗದೀಶ್​​ ಶೆಟ್ಟರ್​​ ಕೊನೆಯ ಒಂದು ವರ್ಷ ಆಡಳಿತ ನಡೆಸಿದ್ದರು.

ಕುಮಾರಸ್ವಾಮಿ – ಯಡಿಯೂರಪ್ಪ – ಬಸವರಾಜ ಬೊಮ್ಮಾಯಿ (2019-2023)

2018ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಯಾರಿಗೂ ಸಿಗದ ಹಿನ್ನೆಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಮೈತ್ರಿ ಸರ್ಕಾರ ರಚಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಅಸಮಾಧಾನ ಮತ್ತು 17 ಶಾಸಕರ ರಾಜೀನಾಮೆಯಿಂದ ಸರ್ಕಾರ ಬಹುಮತ ಕಳೆದುಕೊಂಡಿತು. ಬಳಿಕ ಯಡಿಯೂರಪ್ಪ ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರು. 2021ರಲ್ಲಿ ಅವರನ್ನು ಬದಲಿಸಿ ಬಿಜೆಪಿ ಹೈಕಮಾಂಡ್ ಬಸವರಾಜ್​​ ಬೊಮ್ಮಾಯಿ ಅವರನ್ನು ಸಿಎಂ ಆಗಿ ನೇಮಿಸಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:45 pm, Fri, 29 May 26

Source link

ಬೆಂಗಳೂರಿನಲ್ಲಿ ಕೋಟ್ಯಂತರ ರೂ ಮೌಲ್ಯದ ಬಿಡಿಎ ಸೈಟ್ ಕಬಳಿಕೆ ಪ್ರಕರಣ ಬೆಳಕಿಗೆ: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಬೆಂಗಳೂರು, ಮೇ 29: ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಯತ್ನಿಸಿದ ಬೃಹತ್ ಭೂಗಳ್ಳತನ (Land)  ಹಗರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ವಂಚಕ ಶಾಲೂಮ್ ಕುಮಾರ್ ಎಂಬಾತನನ್ನು ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಸದ್ಯ ಶೇಷಾದ್ರಿಪುರಂ ಠಾಣೆಯಲ್ಲಿ ಈ ಕುರಿತು ಎಫ್​​ಐಆರ್​ ದಾಖಲಾಗಿದೆ.

ಮುಖ್ಯಾಂಶಗಳು

  • ಕೋಟ್ಯಂತರ ರೂಪಾಯಿ ಮೌಲ್ಯದ ಭೂಗಳ್ಳತನ ಪ್ರಕರಣ ರಿವೀಲ್​​
  • ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಆಸ್ತಿ ಕಬಳಿಸಲು ಯತ್ನ
  • ಶೇಷಾದ್ರಿಪುರಂ ಠಾಣೆ ಪೊಲೀಸರಿಂದ ಆರೋಪಿ ಬಂಧನ

ಎಫ್‌ಐಆರ್ ದಾಖಲು

ಬಿಡಿಎ ವಿಜಿಲೆನ್ಸ್ ವಿಭಾಗದ ಅಧಿಕಾರಿ ಗೋವಿಂದರಾಜು ದೂರಿನ ಆಧಾರದ ಮೇಲೆ ಶೇಷಾದ್ರಿಪುರಂ ಪೊಲೀಸರು ಆರೋಪಿ ಶಾಲೂಮ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 471, 419, 465, 420, 120B, 468 ಹಾಗೂ 34ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ತದನಂತರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ.

ನಕಲಿ ಜಿಪಿಎ ದಂಧೆ: ಸಾರ್ವಜನಿಕರಿಂದ ದೂರು

ಬಂಧಿತ ಆರೋಪಿ ಶಾಲೂಮ್ ಕುಮಾರ್ ಗ್ರೇಟರ್ ಬೆಂಗಳೂರು ಅಥಾರಿಟಿ ಹೆಸರಿನಲ್ಲಿ ನಕಲಿ ದಾಖಲೆ ಹಾಗೂ ನಕಲಿ ಜಿಪಿಎ ಪತ್ರಗಳನ್ನು ಸೃಷ್ಟಿಸುತ್ತಿದ್ದ. ಈ ನಕಲಿ ದಾಖಲೆಗಳ ಮೂಲಕ ಅರ್ಕಾವತಿ ಲೇಔಟ್ ಹಾಗೂ ಒಎಂಬಿಆರ್ ಲೇಔಟ್‌ಗಳಲ್ಲಿರುವ ಬಿಡಿಎಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಸೈಟ್‌ಗಳನ್ನು ಕಬಳಿಸಲು ಸಂಚು ರೂಪಿಸಿದ್ದ. ಈ ಅಕ್ರಮ ದಂಧೆ ಬಗ್ಗೆ ತಿಳಿದ ಸಾರ್ವಜನಿಕರು ಬಿಡಿಎ ವಿಜಿಲೆನ್ಸ್ ವಿಭಾಗಕ್ಕೆ ದೂರು ನೀಡಿದ್ದರು.

ಇದನ್ನೂ ಓದಿ: ಕಾರಾಗೃಹ ಇಲಾಖೆಯ ಕೋಟ್ಯಂತರ ರೂ ಮೌಲ್ಯದ ಕಟ್ಟಡವನ್ನೇ ಕಬ್ಜ ಮಾಡಿದ ಭಲೇ ಕಿಲಾಡಿಗಳು

ಸಾರ್ವಜನಿಕರ ದೂರು ಬೆನ್ನಲ್ಲೇ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಬಿಡಿಎ ವಿಜಿಲೆನ್ಸ್ ವಿಭಾಗದ ಎಸ್‌ಪಿ ನಾಗರಾಜ್, ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿದ್ದರು. ತನಿಖೆ ಪೂರ್ಣಗೊಳಿಸಿದ ಎಸ್‌ಪಿ ನಾಗರಾಜ್, ಅಕ್ರಮ ನಡೆದಿರುವುದನ್ನು ದೃಢಪಡಿಸಿ, ಬಿಡಿಎ ಆಯುಕ್ತರಾದ ಮೇಜರ್ ಮಣಿವಣ್ಣನ್ ಅವರಿಗೆ ವರದಿ ಸಲ್ಲಿಸಿದ್ದರು. ವಿಜಿಲೆನ್ಸ್ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಬಿಡಿಎ ಆಯುಕ್ತ ಮೇಜರ್ ಮಣಿವಣ್ಣನ್, ವಂಚಕನ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.

ಇತರರ ಬಂಧನಕ್ಕಾಗಿ ವಿಶೇಷ ತಂಡ ರಚನೆ

ಇನ್ನು ಈ ಕೋಟ್ಯಂತರ ರೂ ಮೌಲ್ಯದ ಭೂಕಬಳಿಕೆ ದಂಧೆಯಲ್ಲಿ ಕೇವಲ ಶಾಲೂಮ್ ಕುಮಾರ್ ಮಾತ್ರವಲ್ಲದೆ, ಬಿಡಿಎ ಒಳಗಿನ ಸಿಬ್ಬಂದಿ ಅಥವಾ ಇತರ ಪ್ರಭಾವಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಪ್ರಕರಣದಲ್ಲಿ ಶಾಮೀಲಾಗಿರುವ ಉಳಿದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಶೇಷಾದ್ರಿಪುರಂ ಠಾಣೆ ಪೊಲೀಸರು ಈಗಾಗಲೇ ವಿಶೇಷ ಅಧಿಕಾರ ತಂಡವನ್ನು ರಚಿಸಲಾಗಿದ್ದು, ಶೋಧ ಕಾರ್ಯ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಒಟ್ಟಿಗೆ ಎರಡು ಸಿನಿಮಾಗಳಲ್ಲಿ ‘ಪಿಶಾಚಿ’ ಆಗಲಿದ್ದಾರೆ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ (Rashmika Mandanna) ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಒಟ್ಟೊಟ್ಟಿಗೆ ಮೂರು 1000 ಕೋಟಿ ಸಿನಿಮಾಗಳಲ್ಲಿ ನಟಿಸಿರುವ ಏಕೈಕ ನಟಿ ಎನಿಸಿಕೊಂಡಿದ್ದಾರೆ ಅವರು. ಪ್ರಸ್ತುತ ಚಿತ್ರರಂಗದ ಕ್ಯೂಟ್ ನಟಿಯರಲ್ಲಿ ಒಬ್ಬರು. ಹಲವು ಒಳ್ಳೆಯ ಪ್ರೇಮಕತೆಗಳು, ರೊಮ್ಯಾಂಟಿಕ್, ಗ್ಲಾಮರಸ್ ಸಿನಿಮಾಗಳು ಅವರಿಗೆ ಆಫರ್ ಆಗುತ್ತಿವೆ. ಆದರೆ ರಶ್ಮಿಕಾ ಇವುಗಳ ನಡುವೆ ಒಟ್ಟಿಗೆ ಎರಡು ಸಿನಿಮಾನಲ್ಲಿ ದೆವ್ವ-ಭೂತದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ರಶ್ಮಿಕಾಗೆ ಹಾರರ್ ಸಿನಿಮಾ ಹೊಸದಲ್ಲ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಥಾಮ’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಅವರು ಭೂತದ (ವ್ಯಾಂಪೈರ್) ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು, ಆ ಸಿನಿಮಾನಲ್ಲಿ ಸಖತ್ ಹಾಟ್ ಆಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಇದೀಗ ರಶ್ಮಿಕಾ ಅವರು ಒಟ್ಟಿಗೆ ಎರಡು ಹಾರರ್ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

ರಶ್ಮಿಕಾ ಇದೀಗ ತಮಿಳಿನ ‘ಕಾಂಚನಾ 4’ ಸಿನಿಮಾನಲ್ಲಿ ನಟಿಸಲಿದ್ದಾರೆ. ಈ ಸಿನಿಮಾನಲ್ಲಿ ರಶ್ಮಿಕಾ ಮತ್ತೊಮ್ಮೆ ಭೂತದ ಪಾತ್ರದಲ್ಲಿ ನಟಿಸಲಿದ್ದಾರೆ. ಆದರೆ ಸಿನಿಮಾನಲ್ಲಿ ಅವರದ್ದು ಒಂದು ರೀತಿ ಅತಿಥಿ ಪಾತ್ರವಂತೆ. ಅವರು ಕೇವಲ ಫ್ಲ್ಯಾಷ್​​ಬ್ಯಾಕ್​ ನಲ್ಲಿ ದೆವ್ವವಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಸಿನಿಮಾನಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಅನ್ನು ರಾಘವ್ ಲಾರೆನ್ಸ್ ನಿರ್ದೇಶನ ಮಾಡುತ್ತಿದ್ದು, ಖುದ್ದು ನಾಯಕನಾಗಿ ನಟಿಸಲಿದ್ದಾರೆ.

ಇದನ್ನೂ ಓದಿ:ಕೃತಿ ಸನೋನ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ರಶ್ಮಿಕಾ ಮಂದಣ್ಣ

‘ಕಾಂಚನಾ 4’ ಮಾತ್ರವೇ ಅಲ್ಲದೆ, ‘ಥಾಮ’ ಸಿನಿಮಾದ ಸೀಕ್ವೆಲ್​​ನಲ್ಲಿಯೂ ನಟಿಸಲಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ‘ಥಾಮ’ ಸಿನಿಮಾದ ಸೀಕ್ವೆಲ್ ಕೆಲವೇ ತಿಂಗಳಲ್ಲಿ ಘೋಷಣೆ ಆಗಲಿದ್ದು, ಸೀಕ್ವೆಲ್​​ನಲ್ಲಿ ರಶ್ಮಿಕಾ ಮತ್ತೊಮ್ಮೆ ಭೂತವಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆ ‘ಮೈಸಾ’ ಹೆಸರಿನ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ರಶ್ಮಿಕಾ ಈ ಸಿನಿಮಾನಲ್ಲಿ ಭಿನ್ನ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಲವು ನಟಿಯರು ಮದುವೆ ಆದ ಬಳಿಕ ತಮ್ಮನ್ನು ಕೆಲ ರೀತಿಯ ಪಾತ್ರಗಳಿಗೆ ಸೀಮಿತಗೊಳಿಸಿಕೊಳ್ಳುತ್ತಾರೆ. ಕೇವಲ ಮಹಿಳಾ ಪ್ರಧಾನ ಸಿನಿಮಾಗಳು, ಗ್ಲಾಮರ್ ರಹಿತ ಪಾತ್ರಗಳಲ್ಲಿ ಮಾತ್ರವೇ ನಟಿಸುತ್ತಾರೆ. ಆದರೆ ರಶ್ಮಿಕಾ, ತಮ್ಮ ಮೇಲೆ ಆ ರೀತಿಯ ಯಾವುದೇ ಮಿತಿಗಳನ್ನು ಹೇರಿಕೊಂಡಿಲ್ಲ. ಮದುವೆಯ ಬಳಿಕ ಬಿಡುಗಡೆ ಆಗುತ್ತಿರುವ ರಶ್ಮಿಕಾರ ಸಿನಿಮಾ ‘ಕಾಕ್​​ಟೇಲ್ 2’ ನಲ್ಲಿ ರಶ್ಮಿಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಪತಿ ವಿಜಯ್ ಜೊತೆಗೆ ‘ರಣಬಲಿ’ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ‘ಮೈಸಾ’ ಅವರ ಕೈಯಲ್ಲಿದೆ. ಅಜಿತ್ ನಾಯಕನಾಗಿ ನಟಿಸಲಿರುವ ಹೊಸ ಸಿನಿಮಾಕ್ಕೂ ರಶ್ಮಿಕಾ ನಾಯಕಿ. ಹಿಂದಿಯಲ್ಲಿ ಮತ್ತೊಂದು ಸಿನಿಮಾ ಸಹ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್ ಮೇಲೆ ವಯಸ್ಸಿನ ವಂಚನೆಯ ಆರೋಪ; ಬಿಸಿಸಿಐ ಪರೀಕ್ಷೆಯಲ್ಲಿ ಹೊರಬಂದ ಸತ್ಯಾಂಶವೇನು?

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT  vs RR) ತಂಡಗಳು ಐಪಿಎಲ್‌ನ ಎರಡನೇ ಕ್ವಾಲಿಫೈಯರ್‌ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Sooryavanshi) ಬಗ್ಗೆ ಬಹಳ ವರ್ಷಗಳಿಂದ ಕೇಳಿಬರುತ್ತಿರುವ ಆರೋಪ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ವಾಸ್ತವವಾಗಿ ವೈಭವ್ ಅದ್ಭುತ ಪ್ರದರ್ಶನ ನೀಡಿದಾಗಲೆಲ್ಲ ಅವರ ವಯಸ್ಸಿನ ಬಗ್ಗೆಗಿನ ಆರೋಪಗಳು ಸದ್ದು ಮಾಡುತ್ತವೆ. ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೆಟರ್ ಪಂದ್ಯದಲ್ಲಿ ವೈಭವ್ 29 ಎಸೆತಗಳಲ್ಲಿ 97 ರನ್ ಬಾರಿಸಿದ್ದನ್ನು ನೋಡಿದವರು ಮತ್ತೆ ವೈಭವ್ ಅವರ ವಯಸ್ಸಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಹಾಗೆಯೇ ವೈಭವ್ ತಮ್ಮ ನಿಜವಾದ ವಯಸ್ಸನ್ನು ಮುಚ್ಚಿಟ್ಟು ಎಲ್ಲರನ್ನೂ ವಂಚಿಸುತ್ತಿದ್ದಾರೆ ಎಂಬ ಆರೋಪವನ್ನು ಹೊರಿಸುತ್ತಿದ್ದಾರೆ.

ವೈಭವ್ ಮೇಲೆ ವಯಸ್ಸಿನ ವಂಚನೆಯ ಆರೋಪ

ವಾಸ್ತವವಾಗಿ ವೈಭವ್ ಅವರ ಬಗ್ಗೆ ಈ ರೀತಿಯ ಆರೋಪಗಳು ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಯಾವಾಗ ವೈಭವ್ ತಮ್ಮ ವಯಸ್ಸಿಗೂ ಮೀರಿದ ಪ್ರದರ್ಶನ ನೀಡಲಾರಂಭಿಸಿದರೋ ಆಗಿನಿಂದಲೂ ಅವರ ವಯಸ್ಸಿನ ಬಗ್ಗೆ ನಾನಾ ಅನುಮಾನಗಳು ಹುಟ್ಟಿಕೊಂಡಿವೆ. ನೆಟ್ಟಿಗರಿಂದ ಹಿಡಿದು, ಮಾಜಿ ಕ್ರಿಕೆಟಿಗರು, ಮಾಜಿ ಕುಸ್ತಿಪಟುಗಳು ಕೂಡ ವೈಭವ್ ಅವರ ವಯಸ್ಸಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಂಡರ್ 19 ಏಷ್ಯಾಕಪ್‌ನಲ್ಲಿ ವೈಭವ್ ಅವರ ಅಬ್ಬರದ ಆಟ ನೋಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜುನೈದ್ ಖಾನ್ ವೈಭವ್ ಮೇಲೆ ವಯಸ್ಸಿನ ವಂಚನೆ ಆರೋಪ ಹೊರಿಸಿದ್ದರು. 13 ವರ್ಷದ ಬಾಲಕನೊಬ್ಬ ಇಂತಹ ಶಕ್ತಿಯನ್ನು ಹೊಂದಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಇವರ ಜೊತೆಗೆ ಭಾರತದ ಮಾಜಿ ಬಾಕ್ಸರ್ ಒಲಂಪಿಕ್ ಗೇಮ್ಸ್ ಕಂಚಿನ ಪದಕ ವಿಜೇತ ವಿಜೇಂದರ್ ಸಿಂಗ್ ಕೂಡ ವೈಭವ್ ಅವರ ವಯಸ್ಸಿನ ಬಗ್ಗೆ ಪ್ರಶ್ನೆಗಳ ಎತ್ತಿದ್ದರು.

ವೈಭವ್ ಹಳೆಯ ವಿಡಿಯೋ ವೈರಲ್

ಇದಕ್ಕೆ ಪುಷ್ಠಿ ನೀಡುವಂತೆ ವೈಭವ್ ಅವರ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 2025 ರಲ್ಲಿ ವೈರಲ್ ಆಗಿದ್ದ ವಿಡಿಯೋ 2 ವರ್ಷ ಹಿಂದಿನದ್ದಾಗಿತ್ತು. ಅಂದರೆ ವೈಭವ್ 2023 ರಲ್ಲಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬರುವ ಸೆಪ್ಟೆಂಬರ್​ಗೆ ನನಗೆ 14 ವರ್ಷ ತುಂಬುತ್ತದೆ ಎಂದು ಹೇಳಿಕೆ ನೀಡಿದ್ದರು. ಹಾಗಿದ್ದರೆ 2023 ರಲ್ಲಿ ವೈಭವ್​ಗೆ 14 ವರ್ಷ ತುಂಬಿದರೆ ಈಗ ಅವರಿಗೆ 17 ವರ್ಷ ವಯಸ್ಸಾಗಿರಬೇಕು. ಆದರೆ ವೈಭವ್ ಬಿಸಿಸಿಐಗೆ ನೀಡಿದ ಅಧಿಕೃತ ದಾಖಲೆಗಳ ಪ್ರಕಾರ, ಅವರ ಜನ್ಮ ದಿನಾಂಕ ಮಾರ್ಚ್ 27, 2011. ಇದರರ್ಥ ದಾಖಲೆಗಳ ಪ್ರಕಾರ ವೈಭವ್ ಅವರಿಗೀಗ 15 ವರ್ಷ. ವೈರಲ್ ಆದ ಈ ವಿಡಿಯೋವನ್ನು ದಾಖಲೆಯಾಗಿ ತೋರಿಸಿ ಹಲವರು ವೈಭವ್ ಮೇಲೆ ಆರೋಪಗಳನ್ನು ಹೊರಿಸಿದ್ದರು. ಈ ಆರೋಪಗಳ ಪಟ್ಟಿ ಹೆಚ್ಚಾದ ಬಳಿಕ ಬಿಸಿಸಿಐ ಕೂಡ ವೈಭವ್ ಅವರ ನಿಜವಾದ ವಯಸ್ಸನ್ನು ಪತ್ತೆ ಹಚ್ಚಲು ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ತಿಳಿದು ಬಂದ ಫಲಿತಾಂಶವೆಂದರೆ…

ಬಿಸಿಸಿಐ ನಡೆಸುವ ಪರೀಕ್ಷೆ ಹೇಗಿರುತ್ತದೆ?

ವಾಸ್ತವವಾಗಿ ಬಿಸಿಸಿಐ ಈ ರೀತಿಯ ವಯಸ್ಸಿನ ವಂಚನೆಯನ್ನು ತಡೆಯಲು Tanner-Whitehouse 3 (TW3) ಎಂಬ ವೈಜ್ಞಾನಿಕ ಮೂಳೆ ಪರೀಕ್ಷಾ ವಿಧಾನವನ್ನು ಬಳಸುತ್ತದೆ. ಮಣಿಕಟ್ಟು ಮತ್ತು ಕೈಯಿನ ಎಕ್ಸ್‌-ರೇ ಮೂಲಕ ಮೂಳೆಯ ಬೆಳವಣಿಗೆಯನ್ನು ಪರೀಕ್ಷಿಸಿ ಆಟಗಾರರ ನಿಖರವಾದ ವಯಸ್ಸನ್ನು ನಿರ್ಧರಿಸಲಾಗುತ್ತದೆ. ಈ TW3 ಪರೀಕ್ಷೆಯಲ್ಲಿ ಆಟಗಾರನ ಎಡಗೈ ಮತ್ತು ಮಣಿಕಟ್ಟಿನ ಎಕ್ಸ್‌-ರೇ ಮೂಲಕ ಮೂಳೆಯ ಬೆಳವಣಿಗೆಯನ್ನು ಅಳೆಯಲಾಗುತ್ತದೆ.

ಸಿಕ್ಸರ್‌ಗಳ ಮಳೆಗರೆಯುವ ವೈಭವ್ ವಿರುದ್ಧ ಮೇಡನ್ ಓವರ್ ಎಸೆದ ಬೌಲರ್ ಯಾರು ಗೊತ್ತಾ?

ವೈಭವ್ ಬಾಲ್ಯದ ಕೋಚ್ ಹೇಳಿದ್ದೇನು?

ಈ ಪರೀಕ್ಷೆಯಿಂದ ಬಂದ ಫಲಿತಾಂಶಕ್ಕೆ, ಬಿಸಿಸಿಐ ನಿಯಮದಂತೆ ಹೆಚ್ಚುವರಿಯಾಗಿ 1 ವರ್ಷವನ್ನು ಸೇರಿಸುವ ಮೂಲಕ ಆಟಗಾರನ ವಯಸ್ಸನ್ನು ಅಳೆಯಲಾಗುತ್ತದೆ. ಉದಾಹರಣೆಗೆ TW3 ಪರೀಕ್ಷೆಯಲ್ಲಿ ಆಟಗಾರನ ವಯಸ್ಸು 14.8 ಆಗಿದ್ದರೆ, ಅದಕ್ಕೆ 1 ವರ್ಷವನ್ನು ಸೇರಿಸಿ ಆಟಗಾರನ ವಯಸ್ಸನ್ನು 15.8 ಎಂದು ಲೆಕ್ಕ ಹಾಕಲಾಗುತ್ತದೆ. ಆ ಪ್ರಕಾರ, ವೈಭವ್ ಸೂರ್ಯವಂಶಿ ಅವರನ್ನು ಈ ಪರೀಕ್ಷೆಗೆ ಒಳಪಡಿಸಿದ್ದು ಅದರಲ್ಲಿ ಅವರು ಉತೀರ್ಣರಾಗಿದ್ದಾರೆ ಎಂದು ವೈಭವ್ ಅವರ ಬಾಲ್ಯದ ಕೋಚ್ ಈಗಾಗಲೇ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

‘2022 ರ ರಣಜಿ ಟ್ರೋಫಿಗೆ ವೈಭವ್ ಅವರನ್ನು ಬಿಹಾರ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ರಣಜಿ ಸೀಸನ್ ಆರಂಭಕ್ಕೆ ಮೂರು ವಾರಗಳ ಮೊದಲು ಬಿಸಿಸಿಐ ವೈಭವ್ ಅವರನ್ನು ಮೂಳೆ ಪರೀಕ್ಷೆಗೆಂದು ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಕಳಿಸಿತ್ತು. ವಿವಿಎಸ್ ಲಕ್ಷ್ಮಣ್ ಮುಂದಾಳತ್ವದಲ್ಲಿ ನಡೆದಿದ್ದ ಈ ಪರೀಕ್ಷೆಯಲ್ಲಿ ವೈಭವ್ ಅವರು ತಮ್ಮ ವಯಸ್ಸಿನ ವಿಚಾರದಲ್ಲಿ ಯಾವುದೇ ಸುಳ್ಳು ಮಾಹಿತಿ ನೀಡಿಲ್ಲ ಎಂಬುದು ಸಾಭೀತಾಗಿದೆ’ ಎಂದು ವೈಭವ್ ಅವರ ಬಾಲ್ಯದ ಕೋಚ್ ರವಿಪ್ರಕಾಶ್ ಝಾ ಹೇಳಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಮುಗಿಯುವ ಮುನ್ನವೇ ರಿಷಭ್ ತಲೆದಂಡ..! ಲಕ್ನೋ ನಾಯಕತ್ವಕ್ಕೆ ಪಂತ್ ರಾಜೀನಾಮೆ

ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ ಪಂದ್ಯ ಇಂದು ನಡೆಯಬೇಕಿದೆ. ಇದಾದ ಬಳಿಕ ಮೇ 30 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಆದರೆ ಆ ಪಂದ್ಯಕ್ಕೂ ಮುನ್ನವೇ ಲಕ್ನೋ ಸೂಪರ್​ಜೈಂಟ್ಸ್ ತಂಡದಿಂದ ಆಘಾತಕ್ಕಾರಿ ಮಾಹಿತಿಯೊಂದು ಹೊರಬಿದ್ದಿದೆ.. ಕಳೆದ ಎರಡು ಆವೃತ್ತಿಗಳಿಂದ ಲಕ್ನೋ ತಂಡದ ನಾಯಕತ್ವವಹಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಾಸ್ತವವಾಗಿ ಈ ಆವೃತ್ತಿಯಲ್ಲಿ ಲಕ್ನೋ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಹೀಗಾಗಿ ಐಪಿಎಲ್ ಮುಗಿದ ಬಳಿಕ ಪಂತ್ ತಲೆದಂಡ ಖಚಿತ ಎಂದು ಹೇಳಲಾಗುತ್ತಿತ್ತು. ಅದರಂತೆ ಈಗ ಫ್ರಾಂಚೈಸಿ ಹಂಚಿಕೊಂಡಿರುವ ಸೋಶಿಯಲ್ ಮೀಡಿಯಾ ಪೋಸ್ಟ್​ನಲ್ಲಿ ರಿಷಭ್ ಪಂತ್ ನಾಯಕತ್ವ ತ್ಯಜಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿದೆ.

Source link

ಮೆಟ್ರೋ ಪ್ರಯಾಣಿಕರೇ ಗಮನಿಸಿ!: ಭಾನುವಾರ ನೇರಳೆ ಮಾರ್ಗದ ಈ ನಿಲ್ದಾಣಗಳ ನಡುವೆ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ!

ಬೆಂಗಳೂರು, ಮೇ.31: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ. ಮುಂಬರುವ ಭಾನುವಾರ (ಮೇ 31, 2026) ನೇರಳೆ ಮಾರ್ಗದ (Purple Line) ಪ್ರಮುಖ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ನೇರಳೆ ಮಾರ್ಗದಲ್ಲಿರುವ ಅತ್ತಿಗುಪ್ಪೆ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಭಾಗದಲ್ಲಿ ಅತ್ಯಗತ್ಯ ತುರ್ತು ನಿರ್ವಹಣಾ ಕಾಮಗಾರಿಗಳನ್ನು (Maintenance Works) ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾಮಗಾರಿಗಳನ್ನು ಸುಗಮವಾಗಿ ಮತ್ತು ಸುರಕ್ಷಿತವಾಗಿ ನಿರ್ವಹಿಸುವ ಉದ್ದೇಶದಿಂದ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಯಾವ ನಿಲ್ದಾಣಗಳ ನಡುವೆ ಸಂಚಾರ ಇರಲ್ಲ?:

ಮೇ 31ರ ಭಾನುವಾರದಂದು ನೇರಳೆ ಮಾರ್ಗದ ದೀಪಾಂಜಲಿನಗರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್ ಮೆಜೆಸ್ಟಿಕ್) ಮೆಟ್ರೋ ನಿಲ್ದಾಣಗಳ ನಡುವೆ ಬೆಳಿಗ್ಗೆ 07:00 ಗಂಟೆಯಿಂದ 09:00 ಗಂಟೆಯವರೆಗೆ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ. ಬೆಳಿಗ್ಗೆ 09:00 ಗಂಟೆಯ ನಂತರ ಇಡೀ ನೇರಳೆ ಮಾರ್ಗದಲ್ಲಿ ಎಂದಿನಂತೆ ಸಾಮಾನ್ಯ ಸೇವೆಗಳು ಪುನರಾರಂಭಗೊಳ್ಳಲಿವೆ.

ಇದನ್ನೂ ಓದಿ: ಮಂಗಳೂರಿನ ಜನರೇ ಸಂಜೆ 6ರೊಳಗೆ ಮನೆಗೆ ತಲುಪಿ!: ಇಂದು ಕರಾವಳಿ ಹಾಗೂ ಬೆಂಗಳೂರಿನಲ್ಲಿ ಭಾರೀ ಮಳೆ

ಈ ಅವಧಿಯಲ್ಲಿ ಎಲ್ಲೆಲ್ಲಿ ಮೆಟ್ರೋ ಇರಲಿದೆ?:

ಬೆಳಿಗ್ಗೆ 7 ರಿಂದ 9 ಗಂಟೆಯವರೆಗಿನ ತಾತ್ಕಾಲಿಕ ವ್ಯತ್ಯಯದ ಅವಧಿಯಲ್ಲಿ ಕೆಳಗಿನ ಮಾರ್ಗಗಳಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯಂತೆ ಮೆಟ್ರೋ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಚಲ್ಲಘಟ್ಟ – ಮೈಸೂರು ರಸ್ತೆ

ಕೆಂಪೇಗೌಡ (ಮೆಜೆಸ್ಟಿಕ್) – ವೈಟ್‌ಫೀಲ್ಡ್ (ಕಾಡುಗೋಡಿ)

ಮಾದಾವರ – ಸಿಲ್ಕ್ ಇನ್‌ಸ್ಟಿಟ್ಯೂಟ್ (ಹಸಿರು ಮಾರ್ಗ)

ಆರ್.ವಿ. ರಸ್ತೆ – ಬೊಮ್ಮಸಂದ್ರ (ಹಳದಿ ಮಾರ್ಗ)

ಭಾನುವಾರ ಬೆಳಿಗ್ಗೆ ಪ್ರಯಾಣಿಸುವ ನಾಗರಿಕರು ಈ ತಾತ್ಕಾಲಿಕ ಸೇವಾ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿನಂತಿಸಿದ್ದಾರೆ. ಉಂಟಾಗುವ ಅನಾಕೂಲತೆಗೆ ಸಂಸ್ಥೆಯು ವಿಷಾದ ವ್ಯಕ್ತಪಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link