Category Archives: Blog

Your blog category

ರೋಹಿತ್ 200 ಹೊಡಿಲಿ, ಸೂರ್ಯವಂಶಿ ಡಕೌಟ್ ಆಗಲಿ: ಚಹಲ್ ಪ್ರಾರ್ಥನೆ! – Kannada News | IPL 2026: Yuzvendra Chahal’s Hilarious Playoff Qualification Logic Goes Viral

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 68 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಮೂಲಕ ಮೂರು ತಂಡಗಳು ಪ್ಲೇಆಫ್​ಗೇರಿದರೆ, ಮೂರು ತಂಡಗಳ ನಡುವೆ ಒಂದು ಸ್ಥಾನಕ್ಕಾಗಿ ಪೈಪೋಟಿ ಮುಂದುವರೆದಿದೆ. ಈ ಪೈಪೋಟಿಯಲ್ಲಿರುವ ತಂಡಗಳೆಂದರೆ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್. ಈ ಮೂರು ತಂಡಗಳ ಭವಿಷ್ಯ ನಿರ್ಧರಿಸುವುದು ಮುಂಬೈ ಇಂಡಿಯನ್ಸ್ ಎಂಬುದು ವಿಶೇಷ.

ಅಂದರೆ ಐಪಿಎಲ್​ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ ಮಾತ್ರ ಪಂಜಾಬ್ ಕಿಂಗ್ಸ್​ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪ್ಲೇಆಫ್​ ರೇಸ್​ನಲ್ಲಿರಲಿವೆ. ಒಂದು ವೇಳೆ ಮುಂಬೈ ಇಂಡಿಯನ್ಸ್​ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆದ್ದರೆ ಆರ್​ಆರ್​ ತಂಡ ಪ್ಲೇಆಫ್​ಗೇರಲಿದೆ. ಹೀಗಾಗಿಯೇ ಮುಂಬೈ ಇಂಡಿಯನ್ಸ್ ತಂಡದ ಗೆಲುವನ್ನು ಪಂಜಾಬ್ ಕಿಂಗ್ಸ್ ಎದುರು ನೋಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪಂಜಾಬ್ ಕಿಂಗ್ಸ್ ಆಟಗಾರ ಯುಜ್ವೇಂದ್ರ ಚಹಲ್, “ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 200 ರನ್ ಗಳಿಸಲಿ ಮತ್ತು ರಾಜಸ್ಥಾನ್ ರಾಯಲ್ಸ್‌ನ ವೈಭವ್ ಸೂರ್ಯವಂಶಿ ಮೊದಲ ಎಸೆತದಲ್ಲೇ (ಗೋಲ್ಡನ್ ಡಕ್) ಔಟ್ ಆಗಲಿ. ಹೀಗಾದ್ರೆ ನಾವು ಸುಲಭವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯಬಹುದು” ಎಂದು ಹಾಸ್ಯಭರಿತವಾಗಿ ಆಶಿಸಿದ್ದಾರೆ.

ಪ್ರಸ್ತುತ ಅಂಕಪಟ್ಟಿಯ ಲೆಕ್ಕಾಚಾರದ ಪ್ರಕಾರ, ನಾಲ್ಕನೇ ಪ್ಲೇಆಫ್ ಸ್ಥಾನಕ್ಕಾಗಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್  ತಂಡಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಪಂಜಾಬ್ ಕಿಂಗ್ಸ್​ ತಂಡ ಮುಂದಿನ ಹಂತಕ್ಕೆ ಲಗ್ಗೆ ಇಡಬೇಕಾದರೆ ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲೇಬೇಕು. ಹೀಗಾಗಿಯೇ ಚಹಲ್ ರೋಹಿತ್ ಶರ್ಮಾ ಡಬಲ್ ಸೆಂಚುರಿ ಬಾರಿಸಿ ಮುಂಬೈ ಇಂಡಿಯನ್ಸ್ ಗೆಲ್ಲಲಿ ಎಂದು ಆಶಿಸಿದ್ದಾರೆ.

ಸೆಂಚುರಿ ಪ್ರಾರ್ಥನೆ!

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಒಬ್ಬ ಬ್ಯಾಟರ್ ಇನಿಂಗ್ಸ್‌ ಒಂದರಲ್ಲಿ 200 ರನ್ ಗಳಿಸುವುದು ಸದ್ಯಕ್ಕಂತೂ ಅಸಾಧ್ಯದ ಮಾತು. ಆದರೆ ತಮ್ಮ ತಂಡವನ್ನು ಪ್ಲೇಆಫ್ ತಲುಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ‘ಯುಝಿ’, ಮುಂಬೈ ಇಂಡಿಯನ್ಸ್‌ನ ಮಾಜಿ ನಾಯಕ ರೋಹಿತ್ ಶರ್ಮಾ ಅಬ್ಬರಿಸಿ ಟಿ20 ಯಲ್ಲೇ ಚೊಚ್ಚಲ ದ್ವಿಶತಕ ಬಾರಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್ ತಾಳ್ಮೆಯನ್ನೂ ಪರೀಕ್ಷಿಸುತ್ತದೆ… ಸಚಿನ್ ತೆಂಡೂಲ್ಕರ್ ಭಾವುಕ ಪೋಸ್ಟ್ !

ಮತ್ತೊಂದೆಡೆ, ರಾಜಸ್ಥಾನ್ ರಾಯಲ್ಸ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಲು, ಅವರ 15 ವರ್ಷದ ಯುವ ಸ್ಫೋಟಕ ಓಪನರ್ ವೈಭವ್ ಸೂರ್ಯವಂಶಿ ಮೊದಲ ಬಾಲ್‌ನಲ್ಲೇ ಖಾತೆ ತೆರೆಯದೆ ಪೆವಿಲಿಯನ್ ಸೇರಲಿ ಎಂದು ಚಹಲ್ ಕಾಲೆಳೆದಿದ್ದಾರೆ.

ಚಹಲ್ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ಮತ್ತು ಫೇಸ್‌ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಮೀಮ್ಸ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.  “ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಹತಾಶೆಯ ಮತ್ತು ಅಷ್ಟೇ ತಮಾಷೆಯ ಪ್ಲೇಆಫ್ ಪ್ರಾರ್ಥನೆ ಇದು” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Source link

ಕ್ರಿಕೆಟ್ ತಾಳ್ಮೆಯನ್ನೂ ಪರೀಕ್ಷಿಸುತ್ತದೆ… ಸಚಿನ್ ತೆಂಡೂಲ್ಕರ್ ಭಾವುಕ ಪೋಸ್ಟ್ ! – Kannada News | Sachin Tendulkar’s Emotional Post for Son Arjun’s IPL Debut Goes Viral

ಕ್ರಿಕೆಟ್ ಜಗತ್ತಿನ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಮಗ ಅರ್ಜುನ್ ತೆಂಡೂಲ್ಕರ್ ಅವರ ಐಪಿಎಲ್ 2026ರ ಸೀಸನ್‌ನ ಮೊದಲ ಪಂದ್ಯದ ಪ್ರದರ್ಶನವನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೃದಯಸ್ಪರ್ಶಿ ಸಂದೇಶವೊಂದು ಸದ್ಯ ಭಾರಿ ವೈರಲ್ ಆಗಿದೆ. ಶನಿವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಪರ ಅರ್ಜುನ್ ತೆಂಡೂಲ್ಕರ್ ಈ ಸೀಸನ್‌ನ ತಮ್ಮ ಮೊದಲ ಪಂದ್ಯವನ್ನು ಆಡಿದರು.

ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ತಂಡಕ್ಕೆ ಟ್ರೇಡ್ ಆಗಿದ್ದ ಅರ್ಜುನ್, ಇಡೀ ಸೀಸನ್ ಬೆಂಚ್ ಕಾಯ್ದ ನಂತರ ಕೊನೆಯ ಲೀಗ್ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶ ಪಡೆದರು. ಈ ಸುದೀರ್ಘ ಕಾಯುವಿಕೆ ಮತ್ತು ಅವರ ಶ್ರಮವನ್ನು ಕಂಡು ತಂದೆಯಾಗಿ ಸಚಿನ್ ಭಾವುಕರಾಗಿದ್ದಾರೆ.

“ತಾಳ್ಮೆಯಿಂದ ಕಾಯ್ದು ಗೆದ್ದೆ”

ಪಂದ್ಯ ಮುಗಿದ ತಕ್ಷಣ ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ X (ಟ್ವಿಟರ್) ಖಾತೆಯಲ್ಲಿ ಮಗನನ್ನು ಬೆನ್ನುತಟ್ಟಿ ಸುದೀರ್ಘ ಸಂದೇಶ ಬರೆದಿದ್ದಾರೆ:

“ಅರ್ಜುನ್, ನಿನ್ನ ಬಗ್ಗೆ ಹೆಮ್ಮೆಯಾಗುತ್ತಿದೆ. ಈ ಇಡೀ ಸೀಸನ್‌ನಲ್ಲಿ ನಿನ್ನನ್ನು ನೀನು ಮುನ್ನಡೆಸಿಕೊಂಡ ರೀತಿ ಅದ್ಭುತ. ನಿನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು, ಅತ್ಯಂತ ತಾಳ್ಮೆಯಿಂದ, ಸದ್ದಿಲ್ಲದೆ ಕಠಿಣ ಪರಿಶ್ರಮ ಪಡುತ್ತಾ ಪಾಸಿಟಿವ್ ಆಗಿದ್ದೆ. ಕೊನೆಯ ಪಂದ್ಯದವರೆಗೂ ಅವಕಾಶಕ್ಕಾಗಿ ಕಾಯಬೇಕಾಗಿ ಬಂದರೂ ನೀನು ಧೃತಿಗೆಡಲಿಲ್ಲ. ಕ್ರಿಕೆಟ್ ಕೌಶಲ್ಯದಷ್ಟೇ ಮನುಷ್ಯನ ತಾಳ್ಮೆಯನ್ನೂ ಪರೀಕ್ಷಿಸುತ್ತದೆ. ಇಂದು ನೀನು ಇವೆರಡನ್ನೂ ಅತ್ಯಂತ ಸುಂದರವಾಗಿ ನಿಭಾಯಿಸಿದ್ದೀಯಾ. ಸದಾ ನೆಲದ ಮೇಲೆಯೇ ನಿನ್ನ ಕಾಲುಗಳಿರಲಿ, ಆಟದ ಮೇಲಿನ ನಿನ್ನ ಪ್ರೀತಿ ಹೀಗೆಯೇ ಮುಂದುವರಿಯಲಿ.” ಎಂದು ಸಚಿನ್ ತೆಂಡೂಲ್ಕರ್ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಗೌತಮ್ ಗಂಭೀರ್ ಕೊಕ್ಕೆ?

ಅರ್ಜುನ್ ಪ್ರದರ್ಶನ ಹೇಗಿತ್ತು?

ಲಕ್ನೋ ಸೂಪರ್ ಜೈಂಟ್ಸ್​ ತಂಡವು ಈ ಪಂದ್ಯದಲ್ಲಿ ಸೋಲನ್ನು ಅನುಭವಿಸಿದರೂ, ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ತಮ್ಮ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದರು.

    •  ಅತ್ಯುತ್ತಮ ಯಾರ್ಕರ್: ಪಂಜಾಬ್ ಕಿಂಗ್ಸ್ ತಂಡದ ಅಪಾಯಕಾರಿ ಓಪನರ್ ಪ್ರಭ್‌ಸಿಮ್ರಾನ್ ಸಿಂಗ್ ಅವರಿಗೆ ತೀಕ್ಷ್ಣವಾದ ಯಾರ್ಕರ್ ಎಸೆಯುವ ಮೂಲಕ ಕ್ಲೀನ್ ಬೌಲ್ ಮಾಡಿ, ಐಪಿಎಲ್ 2026ರ ತಮ್ಮ ಮೊದಲ ವಿಕೆಟ್ ಪಡೆದರು.
    • ಮಿತವ್ಯಯದ ಬೌಲಿಂಗ್: ಲಕ್ನೋ ತಂಡದ ಇತರ ಅನುಭವಿ ಬೌಲರ್‌ಗಳು ರನ್ ಬಿಟ್ಟುಕೊಡಲು ಪರದಾಡುತ್ತಿದ್ದಾಗ, ಅರ್ಜುನ್ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 36 ರನ್ ನೀಡಿ 1 ವಿಕೆಟ್ ಪಡೆದು ಅತ್ಯಂತ ಕಂಟ್ರೋಲ್ಡ್ ಬೌಲಿಂಗ್ ಪ್ರದರ್ಶಿಸಿದರು.

ನೆಟ್ಟಿಗರ ಮನಗೆದ್ದ ಸಚಿನ್ ಮಾತು:

ಸ್ಟಾರ್ ಕ್ರಿಕೆಟರ್ ಮಗನಾಗಿದ್ದರೂ ಯಾವುದೇ ಹಮ್ಮು-ಬಿಮ್ಮಿಲ್ಲದೆ, ತಂಡದಲ್ಲಿ ಅವಕಾಶ ಸಿಗದಿದ್ದರೂ ಸದ್ದಿಲ್ಲದೆ ನೆಟ್ಸ್‌ನಲ್ಲಿ ಬೆವರು ಹರಿಸುತ್ತಿದ್ದ ಅರ್ಜುನ್ ತೆಂಡೂಲ್ಕರ್ ಅವರ ಶಿಸ್ತು ಹಾಗೂ ಅದಕ್ಕೆ ತಕ್ಕಂತೆ ಸಚಿನ್ ನೀಡಿರುವ ಮಾರ್ಗದರ್ಶನಕ್ಕೆ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಂದೆಯಾಗಿ ಸಚಿನ್ ನೀಡಿರುವ ಈ ಕಿವಿಮಾತು ಕೇವಲ ಅರ್ಜುನ್ ಗೆ ಮಾತ್ರವಲ್ಲ, ಅವಕಾಶಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬ ಯುವ ಕ್ರಿಕೆಟಿಗನಿಗೂ ಪ್ರೇರಣೆಯಾಗಿದೆ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

Source link

Hanuman Flag Vastu: ಮನೆಯ ಮೇಲೆ ಹಾರಾಡಲಿ ಹನುಮದ್ ಧ್ವಜ; ಇಲ್ಲಿದೆ ಅಸಲಿ ವಾಸ್ತು ರಹಸ್ಯ! – Kannada News | Hanuman Flag Vastu: Benefits, Placement and Home Protection

ಮನೆಯ ಮೇಲ್ಛಾವಣಿಯ ಮೇಲೆ ಹನುಮದ್ ಧ್ವಜImage Credit source: Pinterest

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ವಸ್ತುವಿಗೂ ವಿಶೇಷ ಪ್ರಾಮುಖ್ಯತೆ ಇರುತ್ತದೆ. ಸನಾತನ ಧರ್ಮದಲ್ಲಿ ಆಂಜನೇಯ ಸ್ವಾಮಿಯನ್ನು ಸಕಲ ಭಯ ನಿವಾರಕ, ಸಂಕಟಮೋಚನ ಎಂದು ಆರಾಧಿಸಲಾಗುತ್ತದೆ. ಸಾಮಾನ್ಯವಾಗಿ ಅನೇಕರು ತಮ್ಮ ಮನೆಯ ಮೇಲ್ಛಾವಣಿಯ (ಟೆರೇಸ್) ಮೇಲೆ ಹನುಮಂತನ ಚಿತ್ರವಿರುವ ಕೆಂಪು ಅಥವಾ ಕೇಸರಿ ಧ್ವಜವನ್ನು ಹಾರಿಸುವುದನ್ನು ನೀವು ನೋಡಿರಬಹುದು. ಕೆಲವರು ಇದನ್ನು ಕೇವಲ ಒಂದು ಧಾರ್ಮಿಕ ಪದ್ಧತಿ ಎಂದು ಭಾವಿಸುತ್ತಾರೆ. ಆದರೆ ಇದರ ಹಿಂದೆ ಅತ್ಯಂತ ಶಕ್ತಿಶಾಲಿ ವಾಸ್ತು ನಿಯಮಗಳು ಮತ್ತು ಧನಾತ್ಮಕ ಶಕ್ತಿ ಅಡಗಿದೆ ಎಂದು ತಜ್ಞರು ಹೇಳುತ್ತಾರೆ.

ಮನೆಯ ಮೇಲೆ ಹನುಮದ್ ಧ್ವಜವನ್ನು ಸ್ಥಾಪಿಸುವುದರಿಂದ ಸಿಗುವ ಲಾಭಗಳು ಮತ್ತು ವಾಸ್ತು ನಿಯಮಗಳು ಇಲ್ಲಿವೆ:

ನಕಾರಾತ್ಮಕ ಶಕ್ತಿಗಳ ನಾಶ (ದುಷ್ಟ ಶಕ್ತಿಗಳಿಂದ ರಕ್ಷಣೆ):

ಯಾವ ಮನೆಯ ಮೇಲೆ ಹನುಮಂತನ ಧ್ವಜವು ಸದಾ ಹಾರಾಡುತ್ತಿರುತ್ತದೆಯೋ, ಅಲ್ಲಿ ನಕಾರಾತ್ಮಕ ಶಕ್ತಿಗಳು (Negative Energy) ಪ್ರವೇಶಿಸಲು ಸಾಧ್ಯವಿಲ್ಲ. ಗಾಳಿಯಲ್ಲಿ ಧ್ವಜವು ಹಾರಾಡುವಾಗ ಉಂಟಾಗುವ ಕಂಪನಗಳು ಮನೆಯ ಸುತ್ತಮುತ್ತಲಿರುವ ಕೆಟ್ಟ ದೃಷ್ಟಿ, ಮಾಟ-ಮಂತ್ರದಂತಹ ಕೆಟ್ಟ ಪ್ರಭಾವಗಳು ಮತ್ತು ದುಷ್ಟ ಶಕ್ತಿಗಳನ್ನು ಸಂಪೂರ್ಣವಾಗಿ ದೂರವಿಡುತ್ತದೆ ಎಂದು ನಂಬಲಾಗಿದೆ.

ಧನಾತ್ಮಕ ಶಕ್ತಿಯ ವೃದ್ಧಿ ಮತ್ತು ಮಾನಸಿಕ ಶಾಂತಿ:

ಮನೆಯ ಮೇಲಿರುವ ಧ್ವಜವು ಸದಾ ಧನಾತ್ಮಕ ಶಕ್ತಿಯನ್ನು (Positive Energy) ಆಕರ್ಷಿಸುತ್ತದೆ. ಇದು ಮನೆಯಲ್ಲಿ ವಾಸಿಸುವ ಸದಸ್ಯರಿಗೆ ನೆಮ್ಮದಿ, ಧೈರ್ಯ ಮತ್ತು ಮಾನಸಿಕ ಶಾಂತಿಯನ್ನು ನೀಡುತ್ತದೆ. ಕೌಟುಂಬಿಕ ಕಲಹಗಳು ದೂರವಾಗಿ, ಶಾಂತಿ-ಸಹಬಾಳ್ವೆ ನೆಲೆಸುತ್ತದೆ.

ಆರ್ಥಿಕ ಅಡಚಣೆಗಳ ನಿವಾರಣೆ:

ಮನೆಯ ಆರ್ಥಿಕ ಪರಿಸ್ಥಿತಿಯಲ್ಲಿ ಪದೇ ಪದೇ ಏರುಪೇರಾಗುತ್ತಿದ್ದರೆ ಅಥವಾ ಸಾಲದ ಬಾಧೆ ಕಾಡುತ್ತಿದ್ದರೆ ಹನುಮದ್ ಧ್ವಜವನ್ನು ಹಾರಿಸುವುದು ಒಳ್ಳೆಯದು. ಇದು ವ್ಯಾಪಾರ-ಉದ್ಯೋಗದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಿ, ಸಂಪತ್ತು ಮತ್ತು ಹೊಸ ಪ್ರಗತಿಯ ಅವಕಾಶಗಳು ಹುಡುಕಿಕೊಂಡು ಬರುವಂತೆ ಮಾಡುತ್ತದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಧ್ವಜವನ್ನು ಸ್ಥಾಪಿಸಲು ವಾಸ್ತು ಪ್ರಕಾರ ಸರಿಯಾದ ದಿಕ್ಕು ಯಾವುದು?

ಮನೆಯ ಮೇಲೆ ಧ್ವಜವನ್ನು ಸ್ಥಾಪಿಸುವುದು ಎಷ್ಟು ಮುಖ್ಯವೋ, ಅದನ್ನು ಸರಿಯಾದ ದಿಕ್ಕಿನ ಆಯ್ಕೆ ಅಷ್ಟೇ ಮುಖ್ಯ. ತಪ್ಪು ದಿಕ್ಕಿನಲ್ಲಿ ಧ್ವಜವನ್ನು ಹಾಕುವುದರಿಂದ ಧನಾತ್ಮಕ ಫಲಿತಾಂಶಗಳ ಬದಲಿಗೆ ತೊಂದರೆಗಳು ಎದುರಾಗಬಹುದು.

ನೈಋತ್ಯ ಮೂಲೆ (South-West Corner):

ವಾಸ್ತು ಶಾಸ್ತ್ರದ ಪ್ರಕಾರ, ಹನುಮದ್ ಧ್ವಜವನ್ನು ಯಾವಾಗಲೂ ಮನೆಯ ನೈಋತ್ಯ (ದಕ್ಷಿಣ-ಪಶ್ಚಿಮ) ಮೂಲೆಯಲ್ಲಿ ಸ್ಥಾಪಿಸಬೇಕು. ಈ ದಿಕ್ಕು ಸ್ಥಿರತೆ ಮತ್ತು ರಕ್ಷಣೆಯನ್ನು ಸೂಚಿಸುತ್ತದೆ. ಈ ಮೂಲೆಯಲ್ಲಿ ಧ್ವಜವನ್ನು ಸ್ಥಾಪಿಸುವುದರಿಂದ ಮನೆಗೆ ಭದ್ರತೆ ದೊರೆಯುತ್ತದೆ ಮತ್ತು ರಾಹು-ಕೇತುಗಳ ದೋಷಗಳು ನಿವಾರಣೆಯಾಗುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜಸ್ಥಾನ ಸರ್ಕಾರದಲ್ಲಿ ವಿದೇಶಿ ಪ್ರಯಾಣಕ್ಕೆ ಅವಕಾಶವಿಲ್ಲ, ಇವಿ ಅಳವಡಿಕೆಗೆ ಆದೇಶ – Kannada News | No foreign travel in the Rajasthan government, orders issued for EV adoption

ನವದೆಹಲಿ, ಮೇ 24: ರಾಜಸ್ಥಾನ (Rajasthan) ಸರ್ಕಾರವು ತನ್ನ ಆಡಳಿತಾತ್ಮಕ ವೆಚ್ಚಗಳನ್ನು ಗಣನೀಯವಾಗಿ ಕಡಿತಗೊಳಿಸಲು ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಉತ್ತೇಜಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಹಣದಲ್ಲಿ ವಿದೇಶದ ಪ್ರವಾಸದ ಮೇಲೆ ನಿರ್ಬಂಧ, ಕಾರ್‌ಪೂಲಿಂಗ್ ಕಡ್ಡಾಯ ಮತ್ತು ಇವಿ (ಎಲೆಕ್ಟ್ರಿಕ್ ವಾಹನ) ಅಳವಡಿಕೆ ಮುಂತಾದ ಪ್ರಮುಖ ನಿರ್ಧಾರಗಳನ್ನು ಒಳಗೊಂಡ ಅಧಿಕೃತ ಆದೇಶವನ್ನು ರಾಜ್ಯ ಹಣಕಾಸು ಇಲಾಖೆ ಹೊರಡಿಸಿದೆ.

ರಾಜಸ್ಥಾನ ಸರ್ಕಾರದ ಪ್ರಮುಖ ನಿರ್ಧಾರಗಳು ಹೀಗಿವೆ:

ಸರ್ಕಾರಿ ವೆಚ್ಚದಲ್ಲಿ ವಿದೇಶ ಪ್ರವಾಸಕ್ಕೆ ಬ್ರೇಕ್:

ರಾಜಸ್ಥಾನ ಸರ್ಕಾರದ ಯಾವುದೇ ಸಚಿವರು, ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳು ಅಥವಾ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುವಂತಿಲ್ಲ. ಅತ್ಯಂತ ತುರ್ತು ಅಥವಾ ಅನಿವಾರ್ಯ ಪರಿಸ್ಥಿತಿಗಳಿದ್ದಲ್ಲಿ ಮಾತ್ರ ಮುಖ್ಯಮಂತ್ರಿಗಳ ನೇರ ಅನುಮತಿಯನ್ನು ಪಡೆದು ವಿದೇಶಕ್ಕೆ ತೆರಳಬೇಕಾಗುತ್ತದೆ. ದೇಶದ ಒಳಗಿನ ಪ್ರಯಾಣಗಳಿಗೂ ಸಹ ಕಟ್ಟುನಿಟ್ಟಿನ ಮಿತಿಗಳನ್ನು ಹೇರಲಾಗಿದ್ದು, ಅನಗತ್ಯ ವಿಮಾನ ಪ್ರಯಾಣಗಳಿಗೆ ಕಡಿವಾಣ ಹಾಕಲಾಗಿದೆ.

ಇದನ್ನೂ ಓದಿ: 51 ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡಿ, ತಾವು 5 ರಾಷ್ಟ್ರಗಳಿಗೆ ಪ್ರವಾಸ ಹೋಗಿದ್ದೇಕೆ ಎಂದು ವಿವರಿಸಿದ ಪ್ರಧಾನಿ ಮೋದಿ

ಕಾರ್‌ಪೂಲಿಂಗ್ ಕಡ್ಡಾಯ:

ಸರ್ಕಾರಿ ಅಧಿಕಾರಿಗಳು ಕಚೇರಿ ಕೆಲಸಗಳಿಗಾಗಿ ಅಥವಾ ಸಭೆ ಸಮಾರಂಭಗಳಿಗೆ ಹೋಗುವಾಗ ಪ್ರತ್ಯೇಕ ವಾಹನಗಳನ್ನು ಬಳಸುವ ಬದಲಿಗೆ ‘ಕಾರ್‌ಪೂಲಿಂಗ್’ (ವಾಹನ ಹಂಚಿಕೆ) ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದೇ ಇಲಾಖೆಯ ಅಥವಾ ಒಂದೇ ದಿಕ್ಕಿನಲ್ಲಿ ಪ್ರಯಾಣಿಸುವ ಅಧಿಕಾರಿಗಳು ಒಂದೇ ವಾಹನವನ್ನು ಬಳಸಬೇಕಾಗುತ್ತದೆ. ಇದರಿಂದ ಇಂಧನ ವೆಚ್ಚ ಮತ್ತು ಸಾರಿಗೆ ಭತ್ಯೆಗಳು ಗಣನೀಯವಾಗಿ ಉಳಿತಾಯವಾಗಲಿವೆ.

ಎಲೆಕ್ಟ್ರಿಕ್ ವಾಹನಗಳ (EV) ಅಳವಡಿಕೆ:

ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ತೈಲ ವೆಚ್ಚವನ್ನು ಕಡಿಮೆ ಮಾಡುವ ದ್ವಿಮುಖ ಉದ್ದೇಶದಿಂದ ಸರ್ಕಾರಿ ಇಲಾಖೆಗಳಲ್ಲಿ ಇನ್ಮುಂದೆ ಇವಿ ವಾಹನಗಳ ಬಳಕೆಗೆ ಆದ್ಯತೆ ನೀಡಲು ಆದೇಶಿಸಲಾಗಿದೆ. ಹೊಸ ವಾಹನಗಳನ್ನು ಖರೀದಿಸುವಾಗ ಅಥವಾ ಬಾಡಿಗೆಗೆ ಪಡೆಯುವಾಗ ಎಲೆಕ್ಟ್ರಿಕ್ ವಾಹನಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಐಷಾರಾಮಿ ಹೋಟೆಲ್‌ಗಳಲ್ಲಿ ಸಭೆ ನಿಷೇಧ:

ಸರ್ಕಾರಿ ಸಭೆಗಳು, ಸೆಮಿನಾರ್‌ಗಳು ಅಥವಾ ಕಾರ್ಯಾಗಾರಗಳನ್ನು ಅನಗತ್ಯವಾಗಿ ಪಂಚತಾರಾ ಹೋಟೆಲ್‌ಗಳಲ್ಲಿ ಆಯೋಜಿಸುವಂತಿಲ್ಲ. ಇಲಾಖೆಯ ಸ್ವಂತ ಸಭಾಂಗಣಗಳು ಅಥವಾ ಸರ್ಕಾರಿ ಕಟ್ಟಡಗಳಲ್ಲೇ ಇವುಗಳನ್ನು ನಡೆಸಬೇಕು.

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಸಿಲಿಗೆ 16 ಜನ ಸಾವು! ಭೀಕರ ಉಷ್ಣಗಾಳಿಗೆ ನಡುಗಿದ 7 ಜಿಲ್ಲೆಗಳು

ಹೊಸ ಹುದ್ದೆಗಳ ಸೃಷ್ಟಿಗೆ ನಿರ್ಬಂಧ:

ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ, ಇಲಾಖೆಗಳಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸುವುದಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.

ಅಲಂಕಾರಿಕ ವೆಚ್ಚಗಳಿಗೆ ಬ್ರೇಕ್:

ಕಚೇರಿಗಳ ನವೀಕರಣ, ಐಷಾರಾಮಿ ಪೀಠೋಪಕರಣಗಳ ಖರೀದಿ ಮತ್ತು ಅಲಂಕಾರಿಕ ವಸ್ತುಗಳಿಗಾಗಿ ಸಾರ್ವಜನಿಕ ಹಣವನ್ನು ವ್ಯಯ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಡಾ. ರಾಜ್ ಸಮಾಧಿ ಬಗ್ಗೆ ನಾನು ಹೇಳಿದ್ದರಲ್ಲಿ ಸತ್ಯ ಇದೆ ಅಂತ ಜನ ಒಪ್ಪಿದ್ದಾರೆ: ಚೇತನ್ ಅಹಿಂಸಾ – Kannada News | Chetan Ahimsa says Karnataka people approved his statement on Dr Rajkumar Samadhi

‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಅಹಿಂಸಾ ಅವರು ಡಾ. ರಾಜ್​ಕುಮಾರ್ ಸಮಾಧಿ (Dr Rajkumar Samadhi) ಬಗ್ಗೆ ನೀಡಿದ್ದ ಹೇಳಿಕೆಯಿಂದ ಸಾಕಷ್ಟು ವಿವಾದ ಆಗಿತ್ತು. ರಾಜ್​ಕುಮಾರ್ ಸಮಾಧಿಗೆ ಸರ್ಕಾರ ಎಕರೆಗಟ್ಟಲೆ ಜಾಗ ನೀಡಿದ್ದನ್ನು ಚೇತನ್ ಪ್ರಶ್ನಿಸಿದ್ದರು. ಅವರ ಹೇಳಿಕೆಯನ್ನು ರಾಜ್​ಕುಮಾರ್ (Dr Rajkumar) ಅಭಿಮಾನಿಗಳು ವಿರೋಧಿಸಿದರು. ಹಾಗಿದ್ದರೂ ಕೂಡ ಚೇತನ್ ಅವರು ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ‘ಸರ್ಕಾರದ ಪಾಲಿಸಿಗೆ ಸಂಬಂಧಪಟ್ಟಂತೆ ನಾನು ಪ್ರಸ್ತಾಪ ಮಾಡಿದ್ದು. ನಾವೆಲ್ಲರೂ ಕೂಡ ರಾಜ್​ಕುಮಾರ್ ಅವರ ಅಭಿಮಾನಿಗಳು. ಅವರ ಕಲಾಸೇವೆ ಅಪಾರ. ಆದರೆ ಸರ್ಕಾರ ಪಕ್ಷಪಾತ ಮಾಡಿದ ತಕ್ಷಣ ಏನು ಸಮಸ್ಯೆ ಆಗುತ್ತದೆ ಎಂಬುದನ್ನು ನಾನು ಸಣ್ಣದಾಗಿ ಮೂರು ಸಾಲಿನ ಪೋಸ್ಟ್ ಮಾಡಿದ್ದೆ. ಕೆಲವರಿಂದ ಅದು ದೊಡ್ಡದಾಗಿದೆ. ನಾನು ಹೇಳಿದ್ದರಲ್ಲಿ ಸತ್ಯ ಇದೆ ಎಂದು ಕರ್ನಾಟಕದ ಜನರು ದೊಡ್ಡ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದಾರೆ. ಜಾಗೃತಿಗೆ ಕಾರಣ ಆಯಿತು ಅಂತ ಜನ ಹೇಳಿದ್ದಾರೆ. ನಮಗೆ ಸಮಾನತೆಯ, ನ್ಯಾಯದ, ವೈಜ್ಞಾನಿಕತೆಯ ಸಮಾಜಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡೋಣ’ ಎಂದು ಚೇತನ್ ಅಹಿಂಸಾ (Chetan Ahimsa) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂತ್ರಾಲಯದಲ್ಲಿ ಭಾರಿ ಮಳೆಯಿಂದ ಭಕ್ತರಿಗೆ ತೊಂದರೆ: ಭೋಜನಶಾಲೆ, ಕಲ್ಯಾಣ ಮಂಟಪದಲ್ಲಿ ವಸತಿ ವ್ಯವಸ್ಥೆ – Kannada News | Mantralaya Mutt Arranges Shelter for Devotees After Heavy Downpour

ರಾಯಚೂರು, ಮೇ 22: ಮಂತ್ರಾಲಯದಲ್ಲಿ ಭಾರಿ ಮಳೆಯ ಅಬ್ಬರದಿಂದ ಭಕ್ತರು ತೀವ್ರ ತೊಂದರೆಗೊಳಗಾದ ಘಟನೆ ನಡೆದಿದೆ. ರಾತ್ರಿ ಮಠದ ಪ್ರಾಂಗಣದಲ್ಲಿ ಮಲಗಿದ್ದ ಭಕ್ತರು ತಡರಾತ್ರಿ ಸುರಿದ ಅನಿರೀಕ್ಷಿತ ಮಳೆಯಿಂದ ನೆನೆದು ಪರದಾಡಿದರು. ಈ ಪರಿಸ್ಥಿತಿಯಲ್ಲಿ, ರಾಯರ ಭಕ್ತರ ನೆರವಿಗೆ ಮಂತ್ರಾಲಯ ಮಠ ಧಾವಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶ್ರೀಗಳು ತಕ್ಷಣವೇ ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲು ಮುಂದಾದರು. ಮಳೆಯಿಂದ ತೊಂದರೆಗೊಳಗಾದ ಭಕ್ತರನ್ನು ಅನ್ನಪೂರ್ಣೇಶ್ವರಿ ಭೋಜನಶಾಲೆ ಮತ್ತು ಕಲ್ಯಾಣ ಮಂಟಪಗಳಿಗೆ ತೆರಳುವಂತೆ ಸೂಚಿಸಲಾಯಿತು. ಖುದ್ದು ಸುಭುದೇಂದ್ರ ತೀರ್ಥ ಸ್ವಾಮೀಜಿಯೇ ಬಂದು ವ್ಯವಸ್ಥೆ ಮಾಡಿದ್ದು ಗಮನಸೆಳೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Minimum Wage: ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ 60ರಷ್ಟು ಹೆಚ್ಚಳ! – Kannada News | Karnataka Hikes Minimum Wages by 60 percent in 81 Sectors: Check Details

ಕರ್ನಾಟಕದಲ್ಲಿ ಕಾರ್ಮಿಕರ ಕನಿಷ್ಠ ವೇತನ ಶೇ 60 ರಷ್ಟು ಹೆಚ್ಚಳ

ಬೆಂಗಳೂರು, ಮೇ 24: ರಾಜ್ಯದ ಲಕ್ಷಾಂತರ ಕಾರ್ಮಿಕರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿರುವ ಕರ್ನಾಟಕ ಸರ್ಕಾರ, ವಿವಿಧ 81 ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು (Minimum Wage) ಶೇಕಡಾ 60 ರಷ್ಟು ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿ ಹೆಚ್ಚಳ ಮಾಡಿದೆ. ಈ ಐತಿಹಾಸಿಕ ನಿರ್ಧಾರವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಕಟಿಸಿದ್ದಾರೆ.

ಮುಖ್ಯಾಂಶಗಳು

  • ರಾಜ್ಯದ 81 ವಲಯಗಳ ಕಾರ್ಮಿಕರ ಕನಿಷ್ಠ ವೇತನ ಶೇಕಡಾ 60 ಹೆಚ್ಚಳವಾಗಿದೆ.
  • ಬೆಂಗಳೂರಿನ ಉನ್ನತ ಕುಶಲ ಕಾರ್ಮಿಕರ ಮಾಸಿಕ ಸಂಬಳ 31,114ರೂ.ಗೆ ಏರಿಕೆಯಾಗಿದೆ.
  • ಇ-ಕಾಮರ್ಸ್ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೂ ಹೊಸ ವೇತನ ಅನ್ವಯ.

ಕಾರ್ಮಿಕ ಇಲಾಖೆಯು ಶುಕ್ರವಾರವೇ (ಮೇ 22) ಈ ಪರಿಷ್ಕೃತ ಅಧಿಕೃತ ಆದೇಶ ಹೊರಡಿಸಿದ್ದು, ಅಸಂಘಟಿತ ಮತ್ತು ನಿರ್ದಿಷ್ಟ ವಲಯಗಳ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ, ಈ ಹಿಂದೆ ಇದ್ದ 4 ಪ್ರತ್ಯೇಕ ವಲಯಗಳ ವರ್ಗೀಕರಣ ಪದ್ಧತಿಯನ್ನು ರದ್ದುಗೊಳಿಸಿ, ಎಲ್ಲಾ ಪರಿಶಿಷ್ಟ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ.

ರಾಜ್ಯದ 3 ವಲಯಗಳು ಮತ್ತು 4 ವರ್ಗಗಳು

ಹೊಸ ನಿಯಮದ ಪ್ರಕಾರ ಇಡೀ ರಾಜ್ಯವನ್ನು ಮೂರು ವೇತನ ವಲಯಗಳಾಗಿ (Zones) ವಿಂಗಡಿಸಲಾಗಿದೆ

  • ವಲಯ-1: ಬೃಹತ್ ಬೆಂಗಳೂರು ಪ್ರದೇಶ (Greater Bengaluru Area)
  • ವಲಯ-2: ಇತರ ಮಹಾನಗರ ಪಾಲಿಕೆಗಳು ಮತ್ತು ಜಿಲ್ಲಾ ಕೇಂದ್ರಗಳು.
  • ವಲಯ-3: ಉಳಿದ ಗ್ರಾಮೀಣ ಮತ್ತು ಸಣ್ಣ ಪಟ್ಟಣ ಪ್ರದೇಶಗಳು.

ಅಲ್ಲದೆ, ಕಾರ್ಮಿಕರನ್ನು ಅವರ ಕೌಶಲ್ಯದ ಆಧಾರದ ಮೇಲೆ ಅಕುಶಲ (Unskilled), ಅರೆ-ಕುಶಲ (Semi-skilled), ಕುಶಲ (Skilled) ಮತ್ತು ಉನ್ನತ ಕುಶಲ (Highly skilled) ಎಂದು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಲಾಗಿದೆ.

ಯಾರಿಗೆ ಎಷ್ಟು ಸಂಬಳ ಸಿಗಲಿದೆ?

ಬೆಂಗಳೂರು (ವಲಯ-1) ವ್ಯಾಪ್ತಿಯಲ್ಲಿ ಉನ್ನತ ಕುಶಲ ಕಾರ್ಮಿಕರಿಗೆ 31,114 ರೂ., ಕುಶಲ ಕಾರ್ಮಿಕರಿಗೆ 28,285 ರೂ., ಅರೆ-ಕುಶಲ ಕಾರ್ಮಿಕರಿಗೆ 25,714 ರೂ. ಮತ್ತು ಅಕುಶಲ ಕಾರ್ಮಿಕರಿಗೆ 23,376 ರೂ. ಮಾಸಿಕ ಕನಿಷ್ಠ ವೇತನ ಸಿಗಲಿದೆ. ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ಅಕುಶಲ ಕಾರ್ಮಿಕರಿಗೆ ಕನಿಷ್ಠ ಮಾಸಿಕ ವೇತನವನ್ನು 19,319 ರೂ. ಹಾಗೂ ಉನ್ನತ ಕುಶಲ ಕಾರ್ಮಿಕರಿಗೆ 25,714 ರೂ. ನಿಗದಿಪಡಿಸಲಾಗಿದೆ.

ಲಿಂಗ ತಾರತಮ್ಯಕ್ಕೆ ಬ್ರೇಕ್

ಈ ಅಧಿಸೂಚನೆಯಲ್ಲಿ ಲಿಂಗ ತಾರತಮ್ಯವನ್ನು ಸಂಪೂರ್ಣವಾಗಿ ನಿವಾರಿಸಲಾಗಿದೆ. ಸಮಾನ ಕೆಲಸಕ್ಕೆ ಪುರುಷರು, ಮಹಿಳೆಯರು, ತೃತೀಯ ಲಿಂಗಿಗಳು (Transgenders) ಹಾಗೂ ವಿಕಲಚೇತನರಿಗೆ ಸಮಾನ ವೇತನವನ್ನು ಕಡ್ಡಾಯಗೊಳಿಸಲಾಗಿದೆ. ಹೆಚ್ಚುವರಿ ಸಮಯ (Overtime) ಅಥವಾ ವಾರದ ರಜಾದಿನಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದುಪ್ಪಟ್ಟು ವೇತನ ನೀಡಬೇಕು ಎಂದು ಸರ್ಕಾರ ಸೂಚಿಸಿದೆ.

ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರು ಹಾಗೂ ಉಷ್ಣ, ಜಲ, ಸೌರ ಮತ್ತು ಪವನ ವಿದ್ಯುತ್ ಉತ್ಪಾದನಾ ಘಟಕಗಳ ಕಾರ್ಮಿಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಬೆಂಗಳೂರಿನಲ್ಲಿ ಯಾಂತ್ರೀಕೃತ ನೈರ್ಮಲ್ಯ ಕೆಲಸ ಮಾಡುವ ಕಾರ್ಮಿಕರ ವೇತನ 25,700 ರೂ. ದಾಟಲಿದೆ.

ಹೊಸದಾಗಿ ಸೇರ್ಪಡೆಯಾದ ವಲಯಗಳು

ಖಾಸಗಿ ಶಾಲೆ ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಇ-ಕಾಮರ್ಸ್ ಮತ್ತು ಕೊರಿಯರ್ ಸೇವೆಗಳು, ಧಾರ್ಮಿಕ ಸಂಸ್ಥೆಗಳು, ಅಮ್ಯೂಸ್‌ಮೆಂಟ್ ಪಾರ್ಕ್‌ಗಳು, ಮೊಬೈಲ್ ಟವರ್ ನಿರ್ವಹಣೆ, ಎಲ್‌ಪಿಜಿ ವಿತರಣಾ ಘಟಕಗಳು, ಎಂ-ಸ್ಯಾಂಡ್ (M-sand) ಘಟಕಗಳು ಹಾಗೂ ಕಂಪ್ಯೂಟರ್ ಮತ್ತು ಸೈಬರ್ ಸೆಂಟರ್‌ಗಳನ್ನು ಸಹ ಹೊಸದಾಗಿ ಈ ಕನಿಷ್ಠ ವೇತನ ವ್ಯಾಪ್ತಿಗೆ ತರಲಾಗಿದೆ.

ಬ್ಯಾಂಕ್ ಖಾತೆಗೆ ನೇರ ಜಮೆ

ಬದಲಾಗುವ ತುಟ್ಟಿಭತ್ಯೆಯನ್ನು (VDA) ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಪ್ರತಿ ವರ್ಷ ಪರಿಷ್ಕರಿಸಲಾಗುತ್ತದೆ. ಮಾಲೀಕರು ಕಾರ್ಮಿಕರ ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಅಥವಾ ಅಧಿಕೃತ ಪಾವತಿ ವ್ಯವಸ್ಥೆಗಳ ಮೂಲಕವೇ ಪಾವತಿಸಬೇಕು. ತಿಂಗಳ ದಿನಗೂಲಿಯನ್ನು 26 ಕೆಲಸದ ದಿನಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುವುದು ಮತ್ತು ವಾರದ ರಜೆ ದಿನಗಳಿಗೂ ವೇತನ ಸಹಿತ ರಜೆ ಸೌಲಭ್ಯವಿರಲಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಳಗಾವಿಯಲ್ಲಿ 4,500 ಕೋಟಿ ರೂ. ವಂಚನೆ ಪ್ರಕರಣ: ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದವರಿಗೂ ಶುರುವಾಯ್ತು ನಡುಕ – Kannada News | Shivanand Neelannavar Scam: 35,000 Investors Await Justice as CID Probe Deepens

ಬೆಳಗಾವಿ, ಮೇ 24: 4,500 ಕೋಟಿ ವಂಚನೆ ಪ್ರಕರಣದಲ್ಲಿ ಸಿಐಡಿ ತನಿಖೆ ಚುರುಕುಗೊಂಡಿದೆ. ಶಿವಾನಂದ ನೀಲಣ್ಣವರ್ ಮಾಲೀಕತ್ವದ ಶಿವಂ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಸುಮಾರು 35,000 ಜನರು ಹೂಡಿಕೆ ಮಾಡಿದ್ದರು. ಇದೀಗ ಹಣ ಸಂದಾಯದ ಪರಿಶೀಲನೆ ನಡೆಯುತ್ತಿದ್ದು, ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದವರಿಗೂ ಆತಂಕ ಶುರುವಾಗಿದೆ. ಆರಂಭಿಕ ಹಂತದಲ್ಲಿ, ಹೂಡಿಕೆ ಮಾಡಿದ ಹಲವರು ತಮ್ಮ ಮೂಲ ಹೂಡಿಕೆಗಿಂತ ದುಪ್ಪಟ್ಟು ಲಾಭ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉದಾಹರಣೆಗೆ, 50 ಲಕ್ಷ ಹೂಡಿಕೆ ಮಾಡಿದವರು 1 ಕೋಟಿವರೆಗೂ ಲಾಭಾಂಶ ಪಡೆದಿದ್ದಾರೆ. ಸಿಐಡಿ ಡಿಐಜಿ ಭೀಮಶಂಕರ್ ಗುಳೆದ್ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ತಂಡ, ಈ ಹೆಚ್ಚಿನ ಲಾಭ ಪಡೆದ ಹೂಡಿಕೆದಾರರನ್ನು ಪತ್ತೆಹಚ್ಚಿ ಅವರಿಂದ ಹೆಚ್ಚುವರಿ ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಇದರಿಂದ ವಂಚನೆಗೊಳಗಾದ ಉಳಿದ ಹೂಡಿಕೆದಾರರಿಗೆ ನ್ಯಾಯ ಒದಗಿಸುವುದು ಸಿಐಡಿ ಉದ್ದೇಶವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಗೌತಮ್ ಗಂಭೀರ್ ಕೊಕ್ಕೆ? – Kannada News | Gautam Gambhir’s Veto: Will It Block Shreyas Iyer’s T20I Captaincy?

ಭಾರತ ಟಿ20 ತಂಡದ ಮುಂದಿನ ನಾಯಕ ಯಾರು? ಈ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಆದರೆ ನೂತನ ನಾಯಕನ ಆಯ್ಕೆಯಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರವೇ ಅಂತಿಮವಾಗುವ ಸಾಧ್ಯತೆ ದಟ್ಟವಾಗಿದೆ. ಪ್ರಸ್ತುತ ನಾಯಕ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಕೈಕೊಟ್ಟಿರುವ ಕಾರಣ ಸೆಲೆಕ್ಟರ್‌ಗಳು ಹೊಸ ನಾಯಕನ ಹುಡುಕಾಟದಲ್ಲಿದ್ದಾರೆ. ಆದರೆ, ರೇಸ್‌ನಲ್ಲಿ ಮುಂಚೂಣಿಯಲ್ಲಿರಬೇಕಾಗಿದ್ದ ಶ್ರೇಯಸ್ ಅಯ್ಯರ್ ಅವರ ಹಾದಿಗೆ ಗಂಭೀರ್ ಅಡ್ಡಿಯಾಗಬಹುದು ಎಂಬ ವರದಿಗಳು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.

ಕ್ರೆಡಿಟ್ ವಾರ್ ಮತ್ತು ಮುನಿಸು!

ವರದಿಗಳ ಪ್ರಕಾರ, ಕೋಚ್ ಗೌತಮ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಎಲ್ಲವೂ ಸರಿಯಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ (KKR) ಐಪಿಎಲ್ ಚಾಂಪಿಯನ್ ಆದಾಗ, ತಂಡದ ನಾಯಕನಾಗಿದ್ದ ಅಯ್ಯರ್ ಅವರಿಗಿಂತ ಮೆಂಟರ್ ಆಗಿದ್ದ ಗಂಭೀರ್ ಅವರಿಗೆ ಮಾಧ್ಯಮಗಳಲ್ಲಿ ಹೆಚ್ಚಿನ ಕ್ರೆಡಿಟ್ ಸಿಕ್ಕಿತ್ತು. ಇದು ಅಯ್ಯರ್ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಇದೇ ಮುನಿಸಿನಿಂದಾಗಿ ಕೆಕೆಆರ್ ತಂಡದಿಂದ ಹೊರ ನಡೆದಿದ್ದ ಶ್ರೇಯಸ್ ಅಯ್ಯರ್, ಬಳಿಕ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದರು. ಇತ್ತ ಗಂಭೀರ್ ಭಾರತ ತಂಡದ ಕೋಚ್ ಆದಾಗಿನಿಂದ ಅಯ್ಯರ್ ಟೀಮ್ ಇಂಡಿಯಾದ ಖಾಯಂ ಸದಸ್ಯನಾಗಿ ಕಾಣಿಸಿಕೊಂಡಿಲ್ಲ. ಅದರಲ್ಲೂ ದೇಶಿ ಕ್ರಿಕೆಟ್‌ನಲ್ಲಿ ಅಯ್ಯರ್ ರನ್ ಮಳೆ ಹರಿಸಿದರೂ ಅವರನ್ನು ಟೆಸ್ಟ್ ಹಾಗೂ ಏಷ್ಯಾ ಕಪ್ ತಂಡದಿಂದ ಕೈಬಿಡಲಾಗಿತ್ತು.

ಅಯ್ಯರ್ ಭರ್ಜರಿ ಫಾರ್ಮ್!

ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. 55.33 ರ ಸರಾಸರಿಯಲ್ಲಿ, 198.03 ರ ಸ್ಟ್ರೈಕ್ ರೇಟ್‌ನೊಂದಿಗೆ 498 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಸೂರ್ಯಕುಮಾರ್ ಯಾದವ್ ಕೇವಲ 210 ರನ್ ಗಳಿಸಿ ಫಾರ್ಮ್​ಗಾಗಿ ತಡಕಾಡುತ್ತಿದ್ದಾರೆ. ಹೀಗಾಗಿ ನಾಯಕತ್ವ ಬದಲಾಗುವುದು ಖಚಿತ. ಆದರೆ ಸೆಲೆಕ್ಟರ್‌ಗಳ ನಾಯಕತ್ವ ಬದಲಾವಣೆ ತೀರ್ಮಾನಕ್ಕೆ ಗಂಭೀರ್ ತಮ್ಮ ‘ವೀಟೋ ಪವರ್’ ಬಳಸಿ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಂದರೆ ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲು ಆಸಕ್ತರಾಗಿದ್ದಾರೆ. ಇದಾಗ್ಯೂ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ತೀರ್ಮಾನವೇ ಅಂತಿಮ.

ಏಕೆಂದರೆ ಕಳೆದ ಬಾರಿ ಟಿ20 ತಂಡದ ನಾಯಕನ ರೇಸ್​ನಲ್ಲಿ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಗಂಭೀರ್, ಸೂರ್ಯಕುಮಾರ್ ಯಾದವ್ ಅವರನ್ನು ಕ್ಯಾಪ್ಟನ್ ಮಾಡುವಂತೆ ಪಟ್ಟು ಹಿಡಿದಿದ್ದರು.

ಗೌತಮ್ ಗಂಭೀರ್ ಅವರ ಈ ನಿರ್ಧಾರವು ಫಲ ನೀಡಿತು. ಪರಿಣಾಮ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಇದೀಗ ಇದೇ ಯಶಸ್ಸನ್ನು ಮುಂದಿಟ್ಟುಕೊಂಡು ಗೌತಮ್ ಗಂಭೀರ್ ನಾಯಕನ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದು ವರದಿಯಾಗಿದೆ.

ಅಂದರೆ ಇಲ್ಲಿ ಗೌತಮ್ ಗಂಭೀರ್ ತಮಗೆ ಬೇಕಾದವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ಅವರಿಗೆ ಟಿ20 ತಂಡದ ನಾಯಕತ್ವ ಒಲಿಯುವುದು ಅನುಮಾನ ಎನ್ನಲಾಗುತ್ತಿದೆ.

ಅತ್ತ ಗೌತಮ್ ಗಂಭೀರ್ ಅವರ ಸಲಹೆಯಂತೆ ಈಗಾಗಲೇ ಶುಭ್​​ಮನ್ ಗಿಲ್ ಅವರನ್ನು ಏಕದಿನ ಹಾಗೂ ಟೆಸ್ಟ್ ತಂಡಗಳಿಗೆ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಇತ್ತ ಈ ಬಾರಿಯ ಐಪಿಎಲ್​ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್​ನೊಂದಿಗೆ ಭರ್ಜರಿ ಪ್ರದರ್ಶನ ನೀಡಿರುವ ಶುಭ್​ಮನ್ ಗಿಲ್ ನಾಯಕನಾಗಿ ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಪ್ಲೇಆಫ್​ನತ್ತ ಮುನ್ನಡೆಸಿದ್ದಾರೆ.

ಇದನ್ನೂ ಓದಿ:  ಸೋಲಿಗೆ ನಾನೊಬ್ಬನೇ ಜವಾಬ್ದಾರನಲ್ಲ… ಅವರು ಸಹ ಕಾರಣ!

ಈ ಎಲ್ಲಾ ಕಾರಣಗಳನ್ನು ಮುಂದಿಟ್ಟು ಗೌತಮ್ ಗಂಭೀರ್ ಶುಭ್​ಮನ್ ಗಿಲ್ ಅವರನ್ನು ಟಿ20 ತಂಡದ ಕ್ಯಾಪ್ಟನ್ ಮಾಡಬೇಕೆಂಬ ಬೇಡಿಕೆ ಮುಂದಿಡುವ ಸಾಧ್ಯತೆಯಿದೆ. ಈ ಬೇಡಿಕೆಯನ್ನು ಆಯ್ಕೆ ಸಮಿತಿ ಒಪ್ಪಿಕೊಂಡರೆ ಭಾರತ ತಂಡದ ಏಕೈಕ ಕ್ಯಾಪ್ಟನ್ ಆಗಿ ಶುಭ್​ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ.

Source link

ರಾಜ್ಯಸಭಾ ಚುನಾವಣೆಗೆ ‘ಕೈ’ನಲ್ಲಿ ಭಾರಿ ಪೈಪೋಟಿ: ಮುಂಚೂಣಿಯಲ್ಲಿವೆ ಕೆಲ ನಾಯಕರ ಹೆಸರು – Kannada News | Intense Race in Congress for Karnataka Rajya Sabha Seats: Supriya Shrinate, Pawan Khera, and BK Hariprasad in Frontrunners List

ಬೆಂಗಳೂರು, ಮೇ 24: ಜೂನ್ 18ರಂದು ನಡೆಯಲಿರುವ ಕರ್ನಾಟಕದ ನಾಲ್ಕು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಕಾಂಗ್ರೆಸ್​​ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದ್ದು, ಪಕ್ಷದ ರಾಷ್ಟ್ರೀಯ ನಾಯಕರುಗಳಾದ ಸುಪ್ರಿಯಾ ಶ್ರಿನೇಟ್ ಮತ್ತು ಪವನ್​​ ಖೇರಾ ಅವರ ಹೆಸರುಗಳು ಮುಂಚೂಣಿಯಲ್ಲಿವೆ ಎನ್ನಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕರ್ನಾಟಕದಿಂದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸೇರಿದಂತೆ ಹಾಲಿ ಶಾಸಕರ ಅವಧಿ ಪೂರ್ಣಗೊಂಡ ನಂತರ ಜೂನ್ ಮತ್ತು ಜುಲೈನಲ್ಲಿ 24 ಸ್ಥಾನಗಳು ತೆರವಾಗಲಿರುವ ಹಿನ್ನೆಲೆ ಪೈಪೋಟಿ ಜೋರಾಗಿದೆ.

ಮುಖ್ಯಾಂಶಗಳು

  • ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್​​ನಲ್ಲಿ ಭಾರಿ ಪೈಪೋಟಿ
  • ಕರ್ನಾಟಕದಿಂದ ಸುಪ್ರಿಯಾ, ಖೇರಾ ಹೆಸರು ಮುಂಚೂಣಿಯಲ್ಲಿ
  • ಬಿ.ಕೆ. ಹರಿಪ್ರಸಾದ್​​ ಸೇರಿ ಪೈಪೋಟಿಯಲ್ಲಿವೆ ಹಲವರ ಹೆಸರು

2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಈ ಇಬ್ಬರು ನಾಯಕರು ರಾಜ್ಯ ಕಾಂಗ್ರೆಸ್ ಘಟಕದೊಂದಿಗೆ ಸಕ್ರಿಯವಾಗಿ ಕೆಲಸ ಮಾಡಿದ್ದ ಹಿನ್ನೆಲೆ ಅವರನ್ನು ರಾಜ್ಯಸಭೆ ಚುನಾವಣೆಗೆ ಪರಿಗಣಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜೊತೆಗೆ ಜೂನ್ 30ರಂದು ವಿಧಾನ ಪರಿಷತ್ ಸದಸ್ಯತ್ವ ಅವಧಿ ಮುಗಿಯಲಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್​​ ಹೆಸರೂ ರಾಜ್ಯಸಭಾ ಚುನಾವಣೆ ಸಂಬಂಧ ಕೇಳಿಬರುತ್ತಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಶಾಶ್ವತ ಸದಸ್ಯರಾಗಿರುವ ಹರಿಪ್ರಸಾದ್, ಹರಿಯಾಣದ ಎಐಸಿಸಿ ಉಸ್ತುವಾರಿಯೂ ಆಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಣೆ

ಆದರೆ ಪಕ್ಷದ ಕೆಲ ನಾಯಕರು, ಸುಪ್ರಿಯಾ ಶ್ರೀನೇಟ್ ಮತ್ತು ಪವನ್ ಖೇರಾ ಅವರನ್ನು ಅವರವರ ರಾಜ್ಯಗಳಿಂದಲೇ ರಾಜ್ಯಸಭೆಗೆ ಕಳುಹಿಸಬೇಕು. ಕರ್ನಾಟಕದ ನಾಯಕರಿಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನಿತರ ಆಕಾಂಕ್ಷಿಗಳ ಪಟ್ಟಿಯಲ್ಲಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಮೋಹನ್ ಕಟಾರ್ಕಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್​​, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್​​ ಗೌಡ, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಬಿ.ಸಿ. ಮುದ್ದುಗಂಗಾಧರ್ ಹಾಗೂ ಮಾಜಿ ಕೇಂದ್ರ ಸಚಿವ ಕೆ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿ ಖಾನ್ ಅವರ ಹೆಸರುಗಳೂ ಚರ್ಚೆಯಲ್ಲಿವೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 9:11 am, Sun, 24 May 26

Source link