Category Archives: Blog

Your blog category

WPL 2026: 2 ದಿನಗಳಲ್ಲಿ ಒಂದೇ ತಂಡದ ವಿರುದ್ಧ 2ನೇ ಬಾರಿಗೆ ಸೋತ ಮುಂಬೈ – Kannada News | UP Warriorz Defeat Mumbai Indians by 22 Runs: MI Suffers Second Consecutive Loss

ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಹಾಗೂ ಯುಪಿ ವಾರಿಯರ್ಸ್ (MI vs UPW)​ ತಂಡಗಳು ಮುಖಾಮುಖಿಯಾಗಿದ್ದವು. ಕಳೆದ 48 ಗಂಟೆಗಳಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿತ್ತು. ಜನವರಿ 15 ರ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ಗೆಲುವು ಸಾಧಿಸಿದ್ದರಿಂದ ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಲು ಎಲ್ಲರೂ ಕಾತುರರಾಗಿದ್ದರು. ಅದರಂತೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತು. ಇತ್ತ ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ತಂಡ 187 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡು 20 ಓವರ್​ಗಳಲ್ಲಿ 165 ರನ್ ಕಲೆಹಾಕಲಷ್ಟೇ ಶಕ್ತವಾಗಿ 22 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಆವೃತ್ತಿಯಲ್ಲಿ ಮುಂಬೈ ತಂಡದ ಮೂರನೇ ಸೋಲು ಇದಾಗಿದ್ದು, ಯುಪಿ ವಾರಿಯರ್ಸ್​ ವಿರುದ್ಧ ಸತತ ಎರಡನೇ ಸೋಲು ಕಂಡಿದೆ. ಆದಾಗ್ಯೂ ಪಾಯಿಂಟ್ ಪಟ್ಟಿಯಲ್ಲಿ ಮುಂಬೈ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ.

ಲ್ಯಾನಿಂಗ್ ಮತ್ತು ಲಿಚ್‌ಫೀಲ್ಡ್ ಅರ್ಧಶತಕ

ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ಗೆ ಮೊದಲ ಓವರ್‌ನಲ್ಲೇ ಆಘಾತ ಎದುರಾಯಿತು. ನಿಕೋಲಾ ಕ್ಯಾರಿ ಕಿರಣ್ ನವ್‌ಗಿರೆ ಅವರನ್ನು ಬೌಲ್ಡ್ ಮಾಡಿದರು. ಆರಂಭಿಕ ಹಿನ್ನಡೆಯ ನಂತರ, ನಾಯಕಿ ಮೆಗ್ ಲ್ಯಾನಿಂಗ್, ಫೋಬೆ ಲಿಚ್‌ಫೀಲ್ಡ್ ಅವರೊಂದಿಗೆ ಯುಪಿ ವಾರಿಯರ್ಸ್‌ನ ಇನ್ನಿಂಗ್ಸ್ ಸ್ಥಿರಗೊಳಿಸಿದರು. ಇಬ್ಬರೂ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಲ್ಯಾನಿಂಗ್ ಮತ್ತು ಲಿಚ್‌ಫೀಲ್ಡ್ ಎರಡನೇ ವಿಕೆಟ್‌ಗೆ 119 ರನ್‌ಗಳನ್ನು ಸೇರಿಸಿದರು. ಲ್ಯಾನಿಂಗ್ ಮತ್ತು ಲಿಚ್‌ಫೀಲ್ಡ್ ತಮ್ಮ ತಮ್ಮ ಅರ್ಧಶತಕವನ್ನು ಪೂರೈಸಿದರು. ಲಿಚ್‌ಫೀಲ್ಡ್ ಅವರನ್ನು ಔಟ್ ಮಾಡುವ ಮೂಲಕ ಅಮನ್‌ಜೋತ್ ಕೌರ್ ಈ ಪಾಲುದಾರಿಕೆಯನ್ನು ಮುರಿದರು. ಲಿಚ್‌ಫೀಲ್ಡ್ 37 ಎಸೆತಗಳಲ್ಲಿ 61 ರನ್‌ಗಳಿಗೆ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ ಬಾರಿಸಿ ಔಟಾದರು. ಲಿಚ್‌ಫೀಲ್ಡ್ ಔಟಾದ ಸ್ವಲ್ಪ ಸಮಯದ ನಂತರ ಲ್ಯಾನಿಂಗ್ ಕೂಡ ಪೆವಿಲಿಯನ್‌ಗೆ ಮರಳಿದರು. ಅವರು 45 ಎಸೆತಗಳಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 70 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು

ಕೆರ್ ಮೂರು ವಿಕೆಟ್

ಇದಾದ ನಂತರ, ಹರ್ಲೀನ್ ಡಿಯೋಲ್ ಮತ್ತು ಕ್ಲೋಯ್ ಟ್ರಯಾನ್ ತಂಡವನ್ನು ಮುನ್ನಡೆಸಿದರು. ಇಬ್ಬರ ನಡುವೆ ಉತ್ತಮ ಜೊತೆಯಾಟ ಬೆಳೆಯುತ್ತಿತ್ತು. ಆದರೆ ನಟಾಲಿ ಟ್ರಯಾನ್ 13 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 21 ರನ್ ಗಳಿಸಿ ಔಟಾದರು. ಮುಂದಿನ ಎಸೆತದಲ್ಲಿ ಬ್ರಂಟ್, ಶ್ವೇತಾ ಸೆಹ್ರಾವತ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಯುಪಿ ವಾರಿಯರ್ಸ್ ಪರ, ಹರ್ಲೀನ್ ಡಿಯೋಲ್ 25 ಮತ್ತು ಸೋಫಿ ಎಕ್ಲೆಸ್ಟೋನ್ ಒಂದು ರನ್ ಗಳಿಸಿದರು. ಮುಂಬೈ ಪರ ಅಮೆಲಿಯಾ ಕೆರ್ ಮೂರು ವಿಕೆಟ್ ಪಡೆದರೆ, ನ್ಯಾಟ್ ಶೀವರ್ ಬ್ರಂಟ್ ಎರಡು ವಿಕೆಟ್ ಪಡೆದರು. ಇದಲ್ಲದೆ, ನಿಕೋಲಾ ಕ್ಯಾರಿ, ಹೇಲಿ ಮ್ಯಾಥ್ಯೂಸ್ ಮತ್ತು ಅಮನ್‌ಜೋತ್ ಕೌರ್ ತಲಾ ಒಂದು ವಿಕೆಟ್ ಪಡೆದರು.

ಮುಂಬೈಗೆ ಆರಂಭಿಕ ಆಘಾತ

ಗುರಿ ಬೆನ್ನಟ್ಟಿದ ಮುಂಬೈಗೂ ಸಾಧಾರಣ ಆರಂಭ ಸಿಕ್ಕಿತು. ಸ್ಫೋಟಕ ಬ್ಯಾಟರ್ ಹೇಲಿ ಮ್ಯಾಥ್ಯೂಸ್ 13 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 13 ರನ್ ಗಳಿಸಿದ ನಂತರ ಔಟಾದರು. ನಂತರ ಬ್ರಂಟ್ ಕೂಡ 15 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆ ಬಳಿಕ ಬಂದ ನಿಕೋಲಾ ಕ್ಯಾರಿ, ಹರ್ಮನ್‌ಪ್ರೀತ್ ಕೌರ್ ಬೇಗನೇ ಪೆವಿಲಿಯನ್ ಸೇರಿಕೊಂಡರು. ಇದು ಮುಂಬೈ ತಂಡದ ಒತ್ತಡ ಹೆಚ್ಚಿಸಿತು.

ಕೆರ್, ಕೌರ್ ಜೊತೆಯಾಟ ವ್ಯರ್ಥ

ಐದು ವಿಕೆಟ್‌ಗಳ ಪತನದ ನಂತರ ಜೊತೆಯಾದ ಅಮೆಲಿಯಾ ಕೆರ್ ಮತ್ತು ಅಮನ್‌ಜೋತ್ ಕೌರ್ ಅದ್ಭುತ ಬ್ಯಾಟಿಂಗ್ ಮಾಡಿ 45 ಎಸೆತಗಳಲ್ಲಿ 83 ರನ್‌ಗಳ ಪಾಲುದಾರಿಕೆಯನ್ನು ಮಾಡುವ ಮೂಲಕ ಗೆಲುವಿಗೆ ಹೋರಾಟ ನೀಡಿದರು. ಆದಾಗ್ಯೂ ಶಿಖಾ ಪಾಂಡೆ, ಅಮನ್‌ಜೋತ್ ಅವರನ್ನು ಔಟ್ ಮಾಡುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು. 24 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 41 ರನ್ ಗಳಿಸಿದ ನಂತರ ಅಮನ್‌ಜೋತ್ ಔಟಾದರೆ, 28 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ಗಳ ಸಹಾಯದಿಂದ 49 ರನ್ ಗಳಿಸಿದ ಅಮೇಲಿಯಾ ಅಜೇಯರಾಗಿ ಉಳಿದರು. ಯುಪಿ ಪರ ಶಿಖಾ ಎರಡು ವಿಕೆಟ್ ಪಡೆದರೆ, ಕ್ರಾಂತಿ ಗೌರ್, ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ ಮತ್ತು ಟ್ರಿಯಾನ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:42 pm, Sat, 17 January 26

Source link

ಮುಂಬೈನಲ್ಲಿ ರೆಸಾರ್ಟ್ ರಾಜಕೀಯ ಶುರು; ಶಿಂಧೆ ಬಣದ ಶಿವಸೇನೆ ಕಾರ್ಪೋರೇಟರ್​​ಗಳು ಫೈವ್ ಸ್ಟಾರ್​​ ಹೋಟೆಲ್‌ಗೆ ಶಿಫ್ಟ್ – Kannada News | Resort politics returns to Mumbai as Eknath Shinde Shiv Sena moves corporators to 5 star hotel

ಮುಂಬೈ, ಜನವರಿ 17: ಮಹಾರಾಷ್ಟ್ರದ ಮುಂಬೈ ಮಹಾನಗರ ಪಾಲಿಕೆ ಚುನಾವಣೆ (BMC Election) ನಡೆದು ನಿನ್ನೆ ಮತ ಎಣಿಕೆ ನಡೆದಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಿಜೆಪಿಗೆ ಬಹುಮತ ಸಿಕ್ಕಿಲ್ಲ. ಹೀಗಾಗಿ, ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆಯ (ಶಿಂಧೆ ಬಣ) ಕಾರ್ಪೋರೇಟರ್​​ಗಳ ಬೆಂಬಲ ಬಿಜೆಪಿಗೆ ಅತ್ಯಗತ್ಯ. ಹೀಗಾಗಿ, ಶಿವಸೇನೆಯ ಕಾರ್ಪೋರೇಟರ್​​ಗಳನ್ನು ಬೇರೆ ಪಕ್ಷದವರು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬ ಭಯದಿಂದ ಏಕನಾಥ್ ಶಿಂಧೆ ತಮ್ಮ ಪಕ್ಷದ ಕಾರ್ಪೋರೇಟರ್​​ಗಳನ್ನು ಬಾಂದ್ರಾದ ಫೈವ್ ಸ್ಟಾರ್ ಹೋಟೆಲ್​ಗೆ ಶಿಫ್ಟ್ ಮಾಡುವ ಮೂಲಕ ರೆಸಾರ್ಟ್ ರಾಜಕೀಯ ಆರಂಭಿಸಿದ್ದಾರೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ನಲ್ಲಿ ಅಧಿಕಾರ ರಚನೆಯ ಬಗ್ಗೆ ತೀವ್ರ ಚೌಕಾಶಿ ಆರಂಭವಾಗುತ್ತಿದ್ದಂತೆ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮ ಶಿವಸೇನಾ ಬಣದಿಂದ ಹೊಸದಾಗಿ ಆಯ್ಕೆಯಾದ ಎಲ್ಲಾ ಕಾರ್ಪೊರೇಟರ್‌ಗಳನ್ನು ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಇರುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಜನರೊಂದಿಗಿನ ಎನ್​ಡಿಎ ಬಾಂಧವ್ಯವನ್ನು ಸೂಚಿಸುತ್ತದೆ; ಬಿಎಂಸಿ ಚುನಾವಣೆಯ ಗೆಲುವಿಗೆ ಪ್ರಧಾನಿ ಮೋದಿ ಧನ್ಯವಾದ

ಪಕ್ಷದ ಮೂಲಗಳ ಪ್ರಕಾರ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಪಕ್ಷದ ಟಿಕೆಟ್‌ನಲ್ಲಿ ಆಯ್ಕೆಯಾದ 29 ಕಾರ್ಪೊರೇಟರ್‌ಗಳು ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್​ನಲ್ಲಿಯೇ ಇರಲು ಸೂಚಿಸಲಾಗಿದೆ. ಬಿಎಂಸಿ ಮೇಯರ್ ಕುರಿತು ಮಾತುಕತೆ ನಡೆಯುತ್ತಿರುವ ಈ ಸಮಯದಲ್ಲಿ “ಕುದುರೆ ವ್ಯಾಪಾರ”ದ ಪ್ರಯತ್ನಗಳನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

29 ಸ್ಥಾನಗಳೊಂದಿಗೆ ಶಿಂಧೆ ಬಣವು ಬಿಜೆಪಿಗೆ ನಿರ್ಣಾಯಕ ಮಿತ್ರಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಗೆ ಬಹುಮತವಿಲ್ಲದ ಕಾರಣದಿಂದ ಶಿವಸೇನೆ ಕಿಂಗ್ ಮೇಕರ್ ಆಗಿದೆ. ಹೀಗಾಗಿ, ಏಕನಾಥ್ ಶಿಂಧೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾದ ಬಿಎಂಸಿಯಲ್ಲಿ ಅಧಿಕಾರಕ್ಕೆ ಔಪಚಾರಿಕ ಹಕ್ಕು ಸಾಧಿಸುವವರೆಗೆ ಎಲ್ಲಾ ಕಾರ್ಪೊರೇಟರ್‌ಗಳು ಒಟ್ಟಿಗೆ ಇರಬೇಕೆಂದು ಅವರು ರೆಸಾರ್ಟ್ ರಾಜಕೀಯದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮುಂಬೈ ಕಿರೀಟವನ್ನು ಮುಡಿಗೇರಿಸಿಕೊಂಡ ಬಿಜೆಪಿ ನೇತೃತ್ವದ ಮಹಾಯುತಿ; 25 ವರ್ಷಗಳ ಬಳಿಕ ಠಾಕ್ರೆ ಭದ್ರಕೋಟೆ ಪತನ

2019ರ ಚುನಾವಣಾ ನಂತರದ ಬಿಕ್ಕಟ್ಟಿನ ಸಮಯದಲ್ಲಿ ಕೂಡ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿಯ ಪ್ರತಿಸ್ಪರ್ಧಿಗಳು ತಮ್ಮ ಶಾಸಕರನ್ನು ಮುಂಬೈನಾದ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಇಟ್ಟಿದ್ದವು. 2022ರ ಶಿವಸೇನೆ ವಿಭಜನೆಯ ಸಮಯದಲ್ಲಿ ಕೂಡ ಇದೇ ರೀತಿಯ ತಂತ್ರವನ್ನು ಅನುಸರಿಸಲಾಗಿತ್ತು. ಇದೀಗ ಮತ್ತೆ ಶಿವಸೇನೆಯಲ್ಲಿ ರೆಸಾರ್ಟ್ ರಾಜಕೀಯ ಶುರುವಾಗಿದೆ.

ಬಿಎಂಸಿ ಚುನಾವಣೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಬಿಜೆಪಿ 227 ವಾರ್ಡ್‌ಗಳಲ್ಲಿ 89 ಅನ್ನು ಗೆದ್ದು 2017ರಲ್ಲಿ ತನ್ನ ಹಿಂದಿನ ಗರಿಷ್ಠ 82 ಸ್ಥಾನಗಳನ್ನು ಮೀರಿಸುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಶಿಂಧೆ ನೇತೃತ್ವದ ಶಿವಸೇನೆ 29 ಸ್ಥಾನಗಳನ್ನು ಪಡೆಯಿತು. ಇದರಿಂದ ಮಹಾಯುತಿ ಮೈತ್ರಿಕೂಟದ ಸಂಖ್ಯೆಯನ್ನು 118ಕ್ಕೆ ಏರಿತು. ಈ ಮೂಲಕ ಮಹಾಯುತಿ ಬಹುಮತದ ಸಂಖ್ಯೆಯಾದ 114 ಸ್ಥಾನಗಳನ್ನು ಪಡೆದುಕೊಂಡಿದೆ. ಆದರೂ ಬೇರೆ ಪಕ್ಷದವರು ತಮ್ಮ ಕಾರ್ಪೋರೇಟರ್​​ಗಳಿಗೆ ಆಮಿಷವೊಡ್ಡಿ ತನ್ನತ್ತ ಸೆಳೆಯುವ ಭಯ ಇರುವುದರಿಂದ ಮೇಯರ್ ಆಯ್ಕೆಯ ಬಗ್ಗೆ ಅಂತಿಮವಾಗುವವರೆಗೂ ಶಿವಸೇನಾ ಕಾರ್ಪೋರೇಟರ್​​ಗಳನ್ನು ರೆಸಾರ್ಟ್​ನಲ್ಲಿರಿಸಲು ನಿರ್ಧರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜನ್ಮ ಕೊಟ್ಟ ತಂದೆಯನ್ನೇ ಕೊಂದು ಮೃತ ದೇಹವನ್ನು ಆ್ಯಂಬುಲೆನ್ಸ್​​​ನಲ್ಲಿ ಕಳಿಸಿದ ಮಗಳು – Kannada News | Anil Murder Case: Father Stabbed to Death After Visiting Daughter in Bellavara

ಹಾಸನ,ಜ.17: ಜಿಲ್ಲೆಯ ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ನಡೆದ ಘಟನೆಯೊಂದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಜನ್ಮ ಕೊಟ್ಟ ಅಪ್ಪನನ್ನೇ ಮನೆ ಕರೆಸಿ ಮಗಳು ಕೊಲೆ ಮಾಡಿದ್ದಾಳೆ. ಅನಿಲ್‌ ಎಂಬವವರನ್ನು ಬರ್ಬರ ಹತ್ಯೆ ಮಾಡಲಾಗಿದೆ. ಮಗಳನ್ನು ಭೇಟಿಯಾಗಲು ಹೋಗಿದ್ದ ಅನಿಲ್‌ ಅವರನ್ನು ಆಕೆಯ ಪ್ರಿಯಕರ ಮತ್ತು ಆರು ಜನ ಸೇರಿ ಕೊಲೆ ಮಾಡಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಅನಿಲ್‌ ಅವರ ಮಗಳು ಅನೀಶಾ ಪ್ರಿಯಕರನ ಜೊತೆ ಓಡಿ ಹೋಗಿದ್ದಳು. ಈ ವಿಷಯ ಅನಿಲ್‌ ಅವರಿಗೆ ತೀವ್ರ ನೋವುಂಟು ಮಾಡಿತ್ತು. ಇತ್ತೀಚೆಗೆ ಅನೀಶಾ ಬೆಳ್ಳಾವರ ಗ್ರಾಮದಲ್ಲಿ ಇದ್ದಾಳೆ ಎಂದು ಅನಿಲ್‌ ಅವರಿಗೆ ತಿಳಿದುಬಂದಿತ್ತು. ಆಗ ಅನೀಶಾ ತನ್ನ ತಂದೆಗೆ ಫೋನ್ ಮಾಡಿ, ಅಪ್ಪ ಮನೆಗೆ ಬಾ ಎಂದು ಕರೆಸಿಕೊಂಡಿದ್ದಾಳೆ. ಎಷ್ಟದಾರೂ ನಾನು ಜನ್ಮ ಕೊಟ್ಟ ಮಗಳು, ಪ್ರೀತಿಯಿಂದ ಕರೆದಿದ್ದಾಳೆ ಎಂದು ಹೋಗಿದ್ದಾರೆ. ಅಲ್ಲಿ ಹೋದ ಅನಿಲ್​​​ ಅವರಿಗೆ ಶಾಕ್ ಕಾದಿತ್ತು. ಮನೆಯಲ್ಲಿ ಮಗಳ ಗಂಡ ಮತ್ತು ಇತರ ಆರು ಮಂದಿ ದೊಣ್ಣೆಯಿಂದ ಹೊಡೆದು, ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಆರು-ಏಳು ಬಾರಿ ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅನಿಲ್‌ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಹಾಕಿ ಆಕೆಯೇ ಮನೆಗೆ ಕಳಿಸಿದ್ದಳು ಎಂದು ಆಕೆಯ ಚಿಕ್ಕಪ್ಪ ಹೇಳಿದ್ದಾರೆ. ನಂತರ ಕುಟುಂಬದವರು ಅನಿಲ್‌ ಅವರನ್ನು ಮೊದಲು ಬೇಲೂರು, ನಂತರ ಹಾಸನ ಮತ್ತು ಕೊನೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಯಕೃತ್‌ಗೆ ಗಂಭೀರ ಪೆಟ್ಟಾಗಿರುವ ಕಾರಣ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿನ್ನಸ್ವಾಮಿಯಲ್ಲಿ IPL ಪಂದ್ಯಗಳಿಗೆ ಗೃಹ ಇಲಾಖೆ ಗ್ರೀನ್‌ಸಿಗ್ನಲ್‌: ತವರಿಗೆ ಮರಳುತ್ತಾ ಆರ್​ಸಿಬಿ? – Kannada News | Karnataka Home Department Grants Permission for International and IPL Matches at Bangaluru Chinnaswamy Stadium

ಬೆಂಗಳೂರು, ಜನವರಿ 17: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣ ಬಳಿಕ ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಮ್ಯಾಚ್‌ಗಳು ನಡೆಯುವುದು ಡೌಟು ಎನ್ನಲಾಗುತ್ತಿತ್ತು. ಆದರೆ ಕರ್ನಾಟಕ ಗೃಹ ಇಲಾಖೆಯು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದೆ. ಆ ಮೂಲಕ ಆರ್​​ಸಿಬಿ ಅಭಿಮಾನಿಗಳಿಗೆ ಗುಡ್​ನ್ಯೂಸ್ ಸಿಕ್ಕಿದೆ. ಎನ್. ಕುನ್ನಾ ಸಮಿತಿಯು ನೀಡಿದ ಭದ್ರತೆ ಸೇರಿದಂತೆ ಹಲವು ಷರತ್ತುಗಳನ್ನು ಕೆಎಸ್‌ಸಿಎ ಪೂರೈಸಿದ ನಂತರವಷ್ಟೇ ಅಂತಿಮ ಅನುಮತಿ ನೀಡಲಾಗುವುದು ಎಂದು ಗೃಹ ಇಲಾಖೆ ತಿಳಿಸಿತ್ತು. ಈ ಬೆನ್ನಲ್ಲೇ ಕೆಎಸ್‌ಸಿಎ ಈಗಾಗಲೇ ಈ ಷರತ್ತುಗಳನ್ನು ಪೂರೈಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದು, ಹೀಗಾಗಿ ಇದೀಗ ಗೃಹ ಇಲಾಖೆ ಪಂದ್ಯಗಳ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಆರ್‌ಸಿಬಿ ತನ್ನ ತವರು ನೆಲವಾದಲ್ಲಿ ಆಡಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಗಂಡನ ಜತೆ ಜಗಳ: 4 ವರ್ಷ ಮಗಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ – Kannada News | Sanjayanagar Incident: Woman, Child Perish in Fire Amidst Family Dispute

ಬೆಂಗಳೂರು, ಜ.17: ಗಂಡನ ಜತೆಗೆ ಜಗಳ ಮಾಡಿಕೊಂಡ ಮಹಿಳೆಯೊಬ್ಬರು 4 ವರ್ಷ ಮಗಳು ಜತೆಗೆ ಬೆಂಕಿ ಹಚ್ಚಿಕೊಂಡ ಘಟನೆ ಬೆಂಗಳೂರಿನ (Bengaluru Tragedy) ಸಂಜಯನಗರದಲ್ಲಿ ನಡೆದಿದೆ. ಮನೆ.. ಮನೆ.. ಹೋಗಿ ಕೆಲಸ ಮಾಡಿಕೊಂಡಿದ್ದ ಈ ಮಹಿಳೆ, ಗಂಡ ಮತ್ತು ಮಗಳ ಜತೆಗೆ ಸುಂದರ ಜೀವನ ನಡೆಸುತ್ತಿದ್ದರು. ಅದ್ಯಾಕೋ ಗೊತ್ತಿಲ್ಲ ಮನೆ ಕೆಲಸ ಮಾಡುತ್ತಿದ್ದ ವೇಳೆ ಪತಿಯೊಂದಿಗೆ ಫೋನ್‌ನಲ್ಲಿ ಜಗಳ ಮಾಡಿಕೊಂಡಿದ್ದಾಳೆ. ನಂತರ ಮಹಿಳೆ ಮನೆ ಹೋಗಿ ನಾಲ್ಕು ವರ್ಷದ ಮಗಳ ಜತೆಗೆ ಬೆಂಕಿ ಹಚ್ಚಿಕೊಂಡಿದ್ದಾಳೆ. ತಾಯಿ ಮತ್ತು ಮಗಳು ಇಬ್ಬರೂ ಸುಟ್ಟ ಗಾಯಗೊಂಡಿದ್ದರು. ಆಸ್ಪತ್ರೆ ಸೇರಿಸಿದ್ರು ಯಾವುದೇ ಪ್ರಯೋಜನ ಆಗಿಲ್ಲ, ಇಬ್ಬರೂ ಕೂಡ ಸಾವನ್ನಪ್ಪಿದ್ದಾರೆ. ಸೀತಾಲಕ್ಷ್ಮಿ ಎಂಬ ಈ ಮಹಿಳೆ ತನ್ನ ಮೇಲೆ ಮತ್ತು ಮಗಳ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ನಗರದ ಸಂಜಯನಗರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ತಾಯಿ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ, ನೋವು ತಡೆಯಲಾರದೆ ಮಗಳು ಸಹಾಯಕ್ಕಾಗಿ ಕಿರುಚಿದ್ದಾಳೆ. ಈ ವೇಳೆ ಅಕ್ಕ ಪಕ್ಕದಲ್ಲಿದ್ದ ಮನೆಯವರು ಧಾವಿಸಿ, ಬಾಗಿಲು ಒಡೆದು ನೋಡಿದಾಗ, ತಾಯಿ ಮತ್ತು ಮಗಳು ಇಬ್ಬರೂ ತೀವ್ರವಾಗಿ ಸುಟ್ಟುಹೋಗಿದ್ದಾರೆ. ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಬ್ಬರು ಸಾವನ್ನಪ್ಪಿದ್ದಾರೆ. ಅಮ್ಮ ಘಟನೆ ನಡೆದ ದಿನ ಸಾವನ್ನಪ್ಪಿದ್ದಾರೆ. ಮಗಳು ಮರುದಿನ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸೀತಾಲಕ್ಷ್ಮಿ ತನ್ನ ಪತಿ ಗೋವಿಂದ್ ಬಹದ್ದೂರ್ ಜೊತೆ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಜಗಳ ಆಡುತ್ತಿದ್ದರು.

ಇದನ್ನೂ ಓದಿ: ನಾಯಿ – ನಾಗರ ಹಾವಿನ ಮಧ್ಯೆ ಬಿಗ್​ ಫೈಟ್​​​​​​​​​​​​​​​: ಸಾವನ್ನಪ್ಪಿದ ಹಾವು, ನಾಯಿ ಸ್ಥಿತಿ ಏನಾಯಿತು ನೋಡಿ?

ದಂಪತಿಗಳು ಸುಮಾರು ಏಳು ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ವಾಸವಾಗಿದ್ದರು. ಗೋವಿಂದ್ ಸೆಕ್ಯುರಿಟಿ ಗಾರ್ಡ್ ಮತ್ತು ದಿನಗೂಲಿ ಕಾರ್ಮಿಕ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದರು. ಕೆಲವು ತಿಂಗಳ ಹಿಂದೆ, ಅವರು ತಮ್ಮ ಆರು ವರ್ಷದ ಮಗನೊಂದಿಗೆ ನೇಪಾಳಕ್ಕೆ ಮರಳಿದ್ದರು. ಈ ವೇಳೆ ಸೀತಾಲಕ್ಷ್ಮಿ ತನ್ನ ಗಂಡ ಗೋವಿಂದ್​​​​​​​​​​ ಕರೆ ಮಾಡುತ್ತ ಮತ್ತೆ ಯಾವ ಬೆಂಗಳೂರಿಗೆ ಬರುತ್ತಿರಾ? ಎಂದು ಪ್ರತಿದಿನ ಹೇಳುತ್ತಿದ್ದರು. ಪತಿ ಎಷ್ಟು ಹೇಳಿದ್ರೂ ಕೇಳುತ್ತಿರಲಿಲ್ಲ. ಕೆಲಸ ಮುಗಿಸಿಕೊಂಡು ಬರುವೇ ಎಂದು ಹೇಳಿದ್ರೂ ಕೇಳುತ್ತಿರಲಿಲ್ಲ. ಪ್ರತಿದಿನ ಈ ವಿಚಾರವಾಗಿ ಅವರ ಮಧ್ಯೆ ಜಗಳು ಆಗುತ್ತಿತ್ತು ಎಂದು ಹೇಳಿದ್ದಾರೆ. ಇದರಿಂದ ಮನನೊಂದು ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದೀಗ ಈ ಬಗ್ಗೆ ತನಿಖೆಗಳು ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಬೇರೆಯವರ ಜಗಳದಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ – Kannada News | Numerology Prediction: Birth Numbers 1, 2, 3 Horoscope for January 18

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನೀವು ಮನೆಯಲ್ಲಿ ಹಳೆಯ ವಸ್ತುಗಳನ್ನು ವಿಂಗಡಿಸುವಾಗ ಅಥವಾ ಶುಚಿಗೊಳಿಸುವಾಗ ಪ್ರಮುಖವಾದ ದಾಖಲೆ ಅಥವಾ ಕಳೆದುಹೋಗಿದ್ದ ವಸ್ತುಗಳನ್ನು ಮರಳಿ ಪಡೆಯುವಿರಿ. ಸಂಜೆ ವೇಳೆ ಬಾಲ್ಯದ ಸ್ನೇಹಿತರ ಭೇಟಿಯಿಂದ ಮನಸ್ಸು ಹಗುರವಾಗಲಿದೆ. ನೀವು ತೆಗೆದುಕೊಳ್ಳುವ ನಿರ್ಧಾರವೊಂದು ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ದಾರಿಯಾಗಲಿದೆ. ವಿನಾಕಾರಣ ಬೇರೆಯವರ ಜಗಳದಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ. ನೀವು ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ ನಡೆಸಲು ಸೂಕ್ತ ಸಮಯ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಸಣ್ಣ ವಿಷಯಕ್ಕೂ ನೀವು ಅತಿಯಾಗಿ ಆಲೋಚಿಸಿ ದಿನದ ನೆಮ್ಮದಿ ಹಾಳುಮಾಡಿಕೊಳ್ಳುವ ಸಾಧ್ಯತೆ ಇದೆ. ಯಾರದೋ ಮಾತಿಗೆ ಮರುಳಾಗಿ ಇಂದು ಯಾವುದೇ ಹೊಸ ವಸ್ತುಗಳನ್ನು ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಬೇಡಿ. ನಿಮ್ಮ ಸೃಜನಶೀಲ ಹವ್ಯಾಸಗಳಿಗೆ ಮನೆಯವರಿಂದ ಪ್ರೋತ್ಸಾಹ ಸಿಗಲಿದೆ. ನೀರಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡುವಾಗ ಸ್ವಲ್ಪ ಜಾಗರೂಕರಾಗಿರುವುದು ಒಳಿತು. ನಿಮ್ಮ ಮನಸ್ಸು ಅಧ್ಯಾತ್ಮದ ಕಡೆಗೆ ಹೆಚ್ಚು ಒಲಿಯಲಿದೆ. ಕುಟುಂಬದವರೊಂದಿಗೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಸಂಭವವಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಹತ್ತಿರದ ಸಂಬಂಧಿಗಳ ಶುಭ ಸಮಾರಂಭದಲ್ಲಿ ಭಾಗವಹಿಸುವ ಯೋಗವಿದೆ. ದೀರ್ಘಕಾಲದ ನಂತರ ಹಿರಿಯರ ಆಶೀರ್ವಾದ ಪಡೆಯುವುದರಿಂದ ಮನಸ್ಸಿನ ಗೊಂದಲಗಳು ತಿಳಿಯಾಗಲಿವೆ. ನಿಮ್ಮ ಬುದ್ಧಿವಂತಿಕೆಯನ್ನು ಮೆಚ್ಚಿ ಯಾರಾದರೂ ಸಲಹೆ ಕೇಳಿ ಬರಬಹುದು. ಉದ್ಯೋಗದಲ್ಲಿರುವವರಿಗೆ ನಾಳೆಯ ಕೆಲಸದ ಸಿದ್ಧತೆಗಾಗಿ ಸ್ವಲ್ಪ ಸಮಯ ವ್ಯಯಿಸಬೇಕಾದ ಅನಿವಾರ್ಯ ಎದುರಾಗಬಹುದು. ಮನೆಯ ಶುಭ ಕಾರ್ಯಗಳ ಕುರಿತು ಚರ್ಚೆಗಳು ನಡೆಯಲಿವೆ. ಆರ್ಥಿಕವಾಗಿ ಇದು ಲಾಭದಾಯಕ ದಿನವಾಗಿದ್ದು, ಮಕ್ಕಳ ಅಗತ್ಯತೆಗಳಿಗಾಗಿ ಹಣ ವ್ಯಯಿಸುವಿರಿ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 18ರ ದಿನಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನೀವು ಅಧ್ಯಾತ್ಮ ಅಥವಾ ಯೋಗಾಭ್ಯಾಸದಲ್ಲಿ ಅತಿ ಹೆಚ್ಚು ಸಮಯ ಕಳೆಯುವಿರಿ. ನೀವು ತುಂಬ ನಂಬಿಕೆ ಇರಿಸಿದ್ದ ವ್ಯಕ್ತಿಯಿಂದ ವಂಚನೆ ಆಗಿರುವ ಬಗ್ಗೆ ಮಾಹಿತಿ ತಿಳಿಯಲಿದೆ. ಪ್ರಾಪಂಚಿಕ ವಿಷಯಗಳಿಗಿಂತ ಒಳಮನಸ್ಸಿನ ಶಾಂತಿ ಮುಖ್ಯವೆಂದು ನಿಮಗನಿಸುತ್ತದೆ. ಹತ್ತಿರದ ಕಾಡು ಅಥವಾ ಗುಡ್ಡಗಾಡು ಪ್ರದೇಶಗಳಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಆದಾಯ ಹೆಚ್ಚಿಸಿಕೊಳ್ಳಲು ಬೇಕಾದ ಪ್ರಯತ್ನಗಳನ್ನು ಮಾಡುವಿರಿ. ಮಕ್ಕಳ ವರ್ತನೆಯಿಂದ ಸ್ವಲ್ಪ ಬೇಸರವಾಗಬಹುದು, ಆದರೆ ಪ್ರೀತಿಯಿಂದ ಅವರಿಗೆ ಬುದ್ಧಿ ಹೇಳುವುದು ಸೂಕ್ತ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಸ್ನೇಹಿತರ ವರ್ತನೆಯಿಂದ ಸ್ವಲ್ಪ ಮಟ್ಟಿಗೆ ಕಿರಿಕಿರಿ ಆಗಲಿದೆ. ಇತರರು ಮಾಡಬೇಕಿದ್ದ ಕೆಲಸಗಳನ್ನು ನೀವೇ ಮಾಡಬೇಕಾಗುವುದರಿಂದ ದೈಹಿಕ ಶ್ರಮ ನಿಮ್ಮನ್ನು ಆವರಿಸಿಕೊಳ್ಳಲಿವೆ. ಮನೆ ರಿಪೇರಿ ಅಥವಾ ತೋಟದ ಕೆಲಸಗಳಲ್ಲಿ ಬಿಡುವಿಲ್ಲದೆ ತೊಡಗಿಕೊಳ್ಳುವಿರಿ. ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಹಣಕಾಸಿನ ಲಾಭವು ಅಲ್ಪ ಪ್ರಮಾಣದಲ್ಲಿ ಇರಲಿದೆ. ಹಳೆಯ ಸಾಲವನ್ನು ಮರುಪಾವತಿಸಲು ಅಥವಾ ನೀಡಿದ ಹಣವನ್ನು ವಾಪಸ್ ಪಡೆಯಲು ಗಟ್ಟಿಯಾಗಿ ಪ್ರಯತ್ನಿಸಿ. ಕಾಲುನೋವು ಅಥವಾ ಕೀಲು ನೋವಿನ ಬಗ್ಗೆ ಎಚ್ಚರವಿರಲಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನೀವು ಅನಿರೀಕ್ಷಿತವಾಗಿ ದೂರದ ಊರಿನಿಂದ ಬಂದ ಅತಿಥಿಗಳನ್ನು ಸ್ವಾಗತಿಸುವಿರಿ. ಅವರಿಗೆ ಆಗಬೇಕಾದ ಕೆಲಸದ ಸಲುವಾಗಿ ಓಡಾಟ ಹೆಚ್ಚಾಗಿ ಇರಲಿದೆ. ನೀವು ಈ ಹಿಂದೆ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಅವಕಾಶವೊಂದನ್ನು ಪಡೆದುಕೊಳ್ಳಲು ಉತ್ತಮ ಯೋಗ ಸಿಗಲಿದೆ. ಕೋಪ ಮಾಡಿಕೊಳ್ಳುವುದೋ ಅಥವಾ ಹಣಕಾಸನ್ನು ನೀಡುವ ಮೂಲಕವೋ ಮಾಡುವ ಬದಲಾಗಿ, ಪ್ರೀತಿ ಮತ್ತು ಅನುಕಂಪದ ಮೂಲಕ ಜನರ ಮನಸ್ಸನ್ನು ಗೆಲ್ಲುವಿರಿ. ಆಧ್ಯಾತ್ಮಿಕ ಗ್ರಂಥಗಳ ಓದಿನಲ್ಲಿ ಆಸಕ್ತಿ ಮೂಡಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಇಂದು ಸಣ್ಣ ಮಟ್ಟಿನ ಮೋಸ ಹೋಗುವ ಸಂಭವವಿದೆ! – Kannada News | Numerology Prediction: Birth Numbers 4, 5, 6 Horoscope for January 18

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಬೇಕು ಎಂದು ಪ್ರಯತ್ನಿಸುತ್ತಾ ಇರುವವರಿಗೆ ಯಾವುದಾದರೂ ಮೂಲದಿಂದ ಮುಖ್ಯವಾದ ಮಾಹಿತಿ ದೊರೆಯಲಿದೆ. ನಿಗೂಢ ಅಥವಾ ರಹಸ್ಯವಾದ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿರುತ್ತದೆ. ಆನ್ ಲೈನ್ ವ್ಯವಹಾರಗಳಲ್ಲಿ ಸಣ್ಣ ಮಟ್ಟಿನ ಮೋಸ ಹೋಗುವ ಸಂಭವವಿರುವುದರಿಂದ ಜಾಗ್ರತೆ ಇರಲಿ. ವಾಹನದಲ್ಲಿ ಸಂಚರಿಸುವಾಗ ದಾಖಲೆಗಳನ್ನು ಮರೆಯಬೇಡಿ. ಸಂಜೆ ವೇಳೆ ಮನೆಯಲ್ಲಿ ಸಣ್ಣ ಮಟ್ಟಿನ ವಾಗ್ವಾದ ನಡೆಯಬಹುದು, ಮೌನವೇ ಅದಕ್ಕೆ ಉತ್ತಮ ಪರಿಹಾರ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಹೊಸಬರ ಪರಿಚಯದಿಂದ ನಾನಾ ಬಗೆಯಲ್ಲಿ ಅನುಕೂಲ ಆಗುವ ಯೋಗವಿದೆ. ನೀವು ಹೊಸ ತಂತ್ರಜ್ಞಾನ ಅಥವಾ ಸಾಮಾಜಿಕ ಜಾಲತಾಣದ ಮೂಲಕ ಲಾಭದಾಯಕ ಸುದ್ದಿಯೊಂದನ್ನು ಪಡೆಯುವಿರಿ. ಹಳೆಯ ಗೆಳೆಯರೊಂದಿಗೆ ಸೇರಿ ಪಿಕ್ನಿಕ್ ಹೋಗಲು ಅಥವಾ ಔತಣಕೂಟ ಆಯೋಜಿಸಲು ಇದು ಸಕಾಲ. ನಿಮ್ಮ ಮಾತಿನ ಚಾಕಚಕ್ಯತೆಯಿಂದ ನಿಂತುಹೋಗಿದ್ದ ಕಾರ್ಯವೊಂದಕ್ಕೆ ಮರುಜೀವ ಸಿಗಲಿದೆ. ಆರೋಗ್ಯದ ದೃಷ್ಟಿಯಿಂದ ನಿದ್ರೆಯ ಕಡೆಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಖರ್ಚನ್ನು ಕಡಿಮೆ ಮಾಡಬೇಕು ಎಂದು ದಿನದ ಆರಂಭದಲ್ಲಿಯೇ ಅಂದುಕೊಳ್ಳಲಿದ್ದೀರಿ. ಆದರೆ ನಿಮ್ಮ ಮನಸ್ಸು ಅಲಂಕಾರ ಮತ್ತು ಸೌಂದರ್ಯದ ಕಡೆಗೆ ಹೆಚ್ಚು ವಾಲುವುದರಿಂದ ಸ್ವಂತಕ್ಕಾಗಿ ಅಥವಾ ಮನೆಯ ಅಲಂಕಾರಕ್ಕಾಗಿ ಖರ್ಚು ಮಾಡುವಿರಿ. ಪ್ರೇಮ ಸಂಬಂಧಗಳಲ್ಲಿ ಇದ್ದ ಒಡಕುಗಳು ದೂರವಾಗಿ ಹೊಸ ಒಪ್ಪಂದಗಳು ಏರ್ಪಡಲಿವೆ. ಮನೆಯಲ್ಲಿ ಮದುವೆ ಪ್ರಸ್ತಾವ ಮಾಡುವ ಯೋಗ ಸಹ ಇದೆ. ಮಹಿಳೆಯರಿಗೆ ತವರು ಮನೆಯಿಂದ ವಿಶೇಷ ಕಾಣಿಕೆ ಸಿಗಬಹುದು. ಆಹಾರದಲ್ಲಿ ಸಿಹಿ ಪದಾರ್ಥಗಳ ಅತಿಯಾದ ಸೇವನೆ ಬೇಡ.

ಲೇಖನ- ಸ್ವಾತಿ ಎನ್.ಕೆ.

Source link

U19 World Cup 2026: ಬಾಂಗ್ಲಾವನ್ನು ಬಗ್ಗುಬಡಿದು ಸತತ 2ನೇ ಗೆಲುವು ದಾಖಲಿಸಿದ ಭಾರತ – Kannada News | U 19 World Cup 2026: India Dominates Bangladesh with DLS Win, Second Victory Secured!

ಅಂಡರ್-19 ವಿಶ್ವಕಪ್ 2026 (U19 World Cup 2026) ಅನ್ನು ಗೆಲುವಿನೊಂದಿಗೆ ಆರಂಭಿಸಿದ್ದ ಭಾರತ ಯುವ ಪಡೆ ಇದೀಗ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಮಣಿಸಿದ್ದ ಆಯುಷ್ ಪಡೆ, ಇದೀಗ ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಬಗ್ಗುಬಡಿದಿದೆ. ಮೊದಲ ಪಂದ್ಯದಂತೆ ಈ ಪಂದ್ಯಕ್ಕೂ ಮಳೆ ಸಾಕಷ್ಟು ಬಾರಿ ಅಡ್ಡಿಪಡಿಸಿತು. ಅಂತಿಮವಾಗಿ ಈ ಮಳೆ ಪೀಡಿತ ಪಂದ್ಯವನ್ನು ಡಕ್ವರ್ತ್-ಲೂಯಿಸ್ ವಿಧಾನದಡಿಯಲ್ಲಿ 10 ರನ್‌ಗಳಿಂದ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಭಾರತದ ಗೆಲುವಿನಲ್ಲಿ ವೈಭವ್ ಸೂರ್ಯವಂಶಿ ಮತ್ತು ಅಭಿಗ್ಯಾನ್ ಕುಂಡು ಅವರ ನಿರ್ಣಾಯಕ ಇನ್ನಿಂಗ್ಸ್ ಜೊತೆಗೆ ಬೌಲರ್‌ಗಳ ಸಾಂಘೀಕ ಪ್ರದರ್ಶನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ಸೂರ್ಯವಂಶಿ, ಕುಂಡು ಅರ್ಧಶತಕ

ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದಾಗ್ಯೂ, ಮಳೆಯಿಂದಾಗಿ, ಪಂದ್ಯವನ್ನು ತಲಾ 49 ಓವರ್‌ಗಳಿಗೆ ಇಳಿಸಲಾಯಿತು. ಭಾರತವು ಆರಂಭದಲ್ಲಿಯೇ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿತು. ತಂಡದ ನಾಯಕ ಆಯುಷ್ ಮ್ಹಾತ್ರೆ, ವೇದಾಂತ್ ತ್ರಿವೇದಿ ಮತ್ತು ವಿಹಾನ್ ಮಲ್ಹೋತ್ರಾ ಬೇಗನೆ ಪೆವಿಲಿಯನ್ ಸೇರಿಕೊಂಡರು. ಆ ನಂತರ ವೈಭವ್ ಸೂರ್ಯವಂಶಿ ಮತ್ತು ಅಭಿಗ್ಯಾನ್ ಕುಂಡು ಉತ್ತಮ ಜೊತೆಯಾಟವನ್ನಾಡಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಸೂರ್ಯವಂಶಿ 67 ಎಸೆತಗಳನ್ನು ಎದುರಿಸಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡಂತೆ 72 ರನ್ ಗಳಿಸಿ ಔಟಾದರು.

ಅಭಿಗ್ಯಾನ್ ಕುಂಡು ಕೂಡ 112 ಎಸೆತಗಳಲ್ಲಿ 80 ರನ್ ಗಳಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಕುಂಡು ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಇವರಿಬ್ಬರನ್ನು ಹೊರತುಪಡಿಸಿ ಕನಿಷ್ಕ್ ಚೌಹಾಣ್ ಕೂಡ 26 ಎಸೆತಗಳಲ್ಲಿ 28 ರನ್ ಗಳಿಸಿದರು. ಅಂತಿಮವಾಗಿ ಭಾರತ ತಂಡವು 48.4 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 238 ರನ್‌ ಗಳಿಸಿತು. ಬಾಂಗ್ಲಾದೇಶ ಪರ ಅಲ್ ಫಹಾದ್ ಅದ್ಭುತ ಬೌಲಿಂಗ್ ಮಾಡಿ ಐದು ವಿಕೆಟ್‌ಗಳನ್ನು ಪಡೆದರು.

U19 ವಿಶ್ವಕಪ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದ ಯಂಗ್ ಇಂಡಿಯಾ

ವಿಹಾನ್ ಮಲ್ಹೋತ್ರಾ ಮಾರಕ ದಾಳಿ

ಈ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಉತ್ತಮ ಆರಂಭವನ್ನು ಪಡೆಯಿತು. ಒಂದು ಹಂತದಲ್ಲಿ 17.2 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 90 ರನ್‌ಗಳಿಸಿತ್ತು. ಆದಾಗ್ಯೂ, ನಂತರ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಪಂದ್ಯ ಪುನರಾರಂಭವಾದಾಗ, ಬಾಂಗ್ಲಾದೇಶಕ್ಕೆ 29 ಓವರ್‌ಗಳಲ್ಲಿ 165 ರನ್‌ಗಳ ಗುರಿಯನ್ನು ನೀಡಲಾಯಿತು. ಆದಾಗ್ಯೂ, ಟೀಂ ಇಂಡಿಯಾ, ಬಾಂಗ್ಲಾದೇಶವನ್ನು 28.3 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಮಾಡಿತು. ವಿಹಾನ್ ಮಲ್ಹೋತ್ರಾ 4 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದರೆ, ಖಿಲನ್ ಪಟೇಲ್ ಕೂಡ 2 ವಿಕೆಟ್ ಪಡೆದರು. ದೀಪೇಶ್ ದೇವೇಂದ್ರನ್, ಹೆನಿಲ್ ಪಟೇಲ್ ಮತ್ತು ಕನಿಷ್ಕ್ ಚೌಹಾಣ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:40 pm, Sat, 17 January 26

Source link

Horoscope Today 18 January : ಇಂದು ಈ ರಾಶಿಯವರಿಗೆ ಸಿಕ್ಕಿದ್ದಕ್ಕಿಂತ ಸಿಗದಿದ್ದುದರ ಚಿಂತೆ

ಮೇಷ ರಾಶಿ:

ನೋವನ್ನು ಮನಸ್ಸನಲ್ಲಿ ಇಟ್ಟುಕೊಂಡೂ ಸಂತೋಷದಿಂದ ಇರುವುದು ಗೊತ್ತು. ಹೊಸ ವಸ್ತ್ರಗಳನ್ನು ಧರಿಸುವಿರಿ. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು. ಇಂದು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ರಹಸ್ಯದಿಂದ ಇಂದಿನ‌ ಕೆಲಸವನ್ನು ಮಾಡುವಿರಿ. ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಆಗಬಹುದು. ಬದಲಾಣೆಗೆ ನೀವು ತೆರೆದುಕೊಳ್ಳಬೇಕಾದೀತು. ಸಂಗಾತಿಯನ್ನು ಭೇಟಿಯಾಗಲು ನಾನಾ ಕಾರಣವನ್ನು ಹುಡುಕುವಿರಿ. ನಿಮ್ಮ ಮಾತಿನಿಂದ ತಾಯಿಗೆ ನೋವಾಗಬಹುದು.

ವೃಷಭ ರಾಶಿ:

ಕೆಲಸಕ್ಕೆ ಸಂಬಂಧಿಸಿದಂತೆ ನೀವು ಕುಟುಂಬದಿಂದ ದೂರ ಉಳಿಯಬೇಕಾದ ಸಂದರ್ಭ ಬರಬಹುದು. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ಒಗ್ಗಟ್ಟಿನ ಕೆಲಸದಲ್ಲಿ ಜಯವಿರಲಿದೆ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಲಾರಿರಿ. ಎಂದೋ ಕಳೆದುಕೊಂಡ ವಸ್ತುವು ಇಂದು ಪ್ರಾಪ್ತವಾಗುವುದು. ಹಣದ ಅಭಾವವಿದ್ದರೂ ಖರ್ಚನ್ನು‌ ಮಾಡಬೇಕಾದ ಸ್ಥಿತಿಯು ಬರಬಹುದು. ಮನೆಯಿಂದ ದೂರವಿದ್ದು ಬೇಸರವಾಗಲಿದೆ. ಭವಿಷ್ಯದ ಬಗ್ಗೆ ಗಂಭೀರವಾದ ಚಿಂತನೆ ಮಾಡುವಿರಿ.

ಮಿಥುನ ರಾಶಿ:

ನಿಮ್ಮ‌ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ಬೇಕಾದಷ್ಟು ಹಣವಿದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದು. ನಿಮ್ಮ ನಿರ್ಧಾರಕ್ಕೆ ಮನೆಯಿಂದ ನಿಮಗೆ ಬೆಂಬಲವಿರುವುದು. ಸೋಲಿಗೆ ದುಃಖ ಪಡುವುದಕ್ಕಿಂತ ಕಾರಣ ಹುಡುಕಿದರೆ ನೆಮ್ಮದಿ ಹೆಚ್ಚು‌. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಬೇಕಾಗುವುದು. ವಾತಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಉತ್ಸಾಹಕ್ಕೆ ಭಂಗ.

ಕರ್ಕಾಟಕ ರಾಶಿ:

ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ತಂದೆಯ ಕಾರ್ಯಕ್ಕೆ ನಿಮ್ಮ ಸಹಕಾರವು ಇರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭಯವು ಇರಲಿದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ಎಲ್ಲರ ದೃಷ್ಟಿಯಲ್ಲಿ ಸ್ವಾರ್ಥಿಯಂತೆ ಕಾಣಿಸುವಿರಿ. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡುವಿರಿ. ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ. ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ವಿಫಲರಾಗುವಿರಿ. ಇಂದು ಮನೋರಂಜನೆಗೆ ಹೆಚ್ಚಿನ ಒತ್ತು ಕೊಡುವಿರಿ.

ಸಿಂಹ ರಾಶಿ:

ನೀವು ಪೂರ್ವಿಕರ ಆಸ್ತಿಯಿಂದಲೂ ಲಾಭ ಪಡೆಯಬಹುದು. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಮನೋಭಿಲಾಶೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಒಂಟಿಯಾಗಿ ಸುತ್ತಾಡಬೇಕೆನಿಸುವುದು. ಕೆಲವರ ಮಾತಿಗೆ ಉತ್ತರವನ್ನು ಕೊಡುವುದು ಇಷ್ಟವಾಗದು. ಇಂದು ನಿಮ್ಮ‌ ಬಳಿ ಸಾಮಾಜಿಕ ಕಳಕಳಿಯಿರುವ ಜನರು ಬರುವರು. ಇನ್ನು ಬಾರದು ಎಂದುಕೊಂಡ ಹಣವು ಇಂದು ನಿಮ್ಮ ಕೈ ಸೇರುವುದು. ಕರ್ತವ್ಯದತ್ತ ನಿಮ್ಮ ಗಮನಹರಿಸುವಿರಿ.

ಕನ್ಯಾ ರಾಶಿ:

ಇಂದು ನಿಮ್ಮ ಆದಾಯದ ಮೂಲ ಹೆಚ್ಚಾಗಲಿದೆ. ತಂದೆ ಮತ್ತು ಮಕ್ಕಳ ನಡುವೆ ಪ್ರೀತಿ ಇರುತ್ತದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಹಳೆಯ ಅನುಭವದ ಆಧಾರದ ಮೇಲೆ ನೀವು ಕೆಲಸವನ್ನು ಮಾಡುವಿರಿ. ಹೂಡಿಕೆಯನ್ನು ಬೇರೆಯವರ ಹೆಸರಿನಲ್ಲಿ ಮಾಡುವಿರಿ. ನಿಮ್ಮ ಕಾಳಜಿಯನ್ನು ವಹಿಸಿಕೊಂಡವರಿಗೆ ಬೇಸರ ಮಾಡದಂತೆ ನಿಮ್ಮನ್ನು ತೋರಿಸಿಕೊಳ್ಳಿ. ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ.

ತುಲಾ ರಾಶಿ:

ಮತ್ತೊಬ್ಬರ ಜೊತೆ ಮಾತನಾಡುವಾಗ ಪದಗಳ ಮೇಲೆ ಎಚ್ಚರ ಇರಲಿ. ಶ್ರಮ ಹಾಗೂ ಆರ್ಥಿಕ ವೆಚ್ಚಗಳು ಹೆಚ್ಚಾಗಬಹುದು. ಆದಾಯ ಮತ್ತು ವೆಚ್ಚಗಳ ನಡುವೆ ತುಲನೆ ಬೇಕು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವಿರು. ಕಳೆದು ಹೋದ ಪ್ರೇಮವನ್ನು ಮತ್ತೆ ಯಾರಾದರೂ ನೆನಪಿಸುವರು. ತಪ್ಪನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರಿಸುವಿರಿ. ನಿಮ್ಮ ಬಗ್ಗೆ ಬೇರೆಯವರಿಗೆ ಔದಾರ್ಯಭಾವವು ಇರಲಿದೆ.

ವೃಶ್ಚಿಕ ರಾಶಿ:

ವ್ಯಾಪಾರಿಗಳಿಗೆ ಇಂದು ಸುಲಭವಾ ಲಾಭವಾಗಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ‌ ಮೇಲೆ ಬರಲಿದೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ‌ ಅಂತಸ್ಸಾಕ್ಷಿಗೆ ಸತ್ಯವನ್ನು ಹೇಳುವ ಧೈರ್ಯ ಬರುವುದು. ವಿದೇಶದಿಂದ ಆಹ್ವಾನವು ಬರಬಹುದು. ಆತುರದ ಪ್ರಯಾಣವನ್ನು ಇಂದು ಮಾಡಬೇಡಿ.

ಧನು ರಾಶಿ:

ನೀವು ಮಾಡಿಕೊಂಡ ಎಡವಟ್ಟಿನಿಂದ ಅವಕಾಶದಿಂದ ವಂಚಿತರಾಗಬೇಕಾಗುವುದು. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯಾದೀತು. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ‌ ಬೇಡ. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ಮುಕ್ತ‌ ಮನಸ್ಸಿನಿಂದ ಮಾತನಾಡುವಿರಿ.‌ ದಾಂಪತ್ಯದಲ್ಲಿ ಹೊಂದಾಣಿಕೆ ಅವಶ್ಯಕತೆ ಅಧಿಕವಾಗಿ ಇರಲಿದೆ. ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತನ್ನು ಕಳೆದುಕೊಳ್ಳುವಿರಿ. ನಿಮಗೆ ಇಂದು ಪ್ರೀತಿ ಪಾತ್ರರಿಂದ ಉಡುಗೊರೆ ಬರಲಿದೆ.

ಮಕರ ರಾಶಿ:

ಶೈಕ್ಷಣಿಕ ಕೆಲಸದಲ್ಲಿ ಯಶಸ್ವಿಯಾಗುವಿರಿ. ಬುದ್ಧಿವಂತಿಕೆಗೆ ಸಂಬಂಧಿಸಿದ ಕಾರ್ಯಗಳಿಂದ ಆದಾಯ ಹೆಚ್ಚಾಗುತ್ತದೆ. ನೀವು ಸ್ನೇಹಿತರಿಂದ ಬೆಂಬಲ ಪಡೆಯಬಹುದು. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ. ಸಂಬಂಧದಲ್ಲಿ ಒಡಕು ಬರಬಹುದು.‌ ವ್ಯವಹಾರವು ಸರಿಯಾಗಿ ಇರಲಿ. ಅತಿಯಾದ ಕೋಪದಿಂದ ಎಲ್ಲ ಕೆಲಸವನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ಆಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ. ಅಧಿಕಾರಿಯ ವಿಶ್ವಾಸವನ್ನು ಪಡೆದು ಹೆಚ್ಚಿನ ಸ್ಥಾನ ಪಡೆಯುವಿರಿ.

ಕುಂಭ ರಾಶಿ:

ನಿಮ್ಮ ಪ್ರೀತಿಪಾತ್ರರಿಂದ ನೀವು ಬೆಂಬಲ ಪಡೆಯುತ್ತೀರಿ. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು. ವಾಹನದಿಂದ ಬಿದ್ದು ಪೆಟ್ಟಾಗಬಹುದು. ದುರ್ಬಲರ‌ ಜೊತೆ ಸಂಘರ್ಷ ಬೇಡ. ಆತುರದಲ್ಲಿ ವಾಹನ ಚಾಲನೆಯಿಂದ ತೊಂದರೆಯಾದೀತು. ಇಂದು ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ಮನಸ್ಸಿನ ನೋವನ್ನು ಮರೆಯಲು ಒಂಟಿಯಾಗಿ ದೂರ ಹೋಗುವಿರಿ. ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ಅನಾರೋಗ್ಯದಿಂದ ಕೆಲಸಗಳಿಗೆ ವಿಘ್ನವು ಬರುವುದು.

ಮೀನ ರಾಶಿ:

ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ಆದರೆ ಕೆಲಸದ ಸ್ಥಳದಲ್ಲಿ ಬದಲಾವಣೆಯಾಗಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆಸ್ತಿಯನ್ನು ಖರೀದಿಸುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುವುದು. ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ. ಇಂದಿನ ಉತ್ಸಾಹವು ಕೆಲಸಕ್ಕೆ ಪೂರಕವಾಗವುವುದು. ಹಣದ ಹರಿವು ಸಾಧಾರಣವಾಗಿ ಇರಲಿದೆ. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಆಗಬಹುದು. ಹೇಳಲಾಗದ ಮರೆಯಲಾಗದ ಸ್ಥಿತಿ ಇರಲಿದೆ.

ಜನವರಿ 18,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಮಕರ, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಉತ್ತರಾಷಾಢ ಯೋಗ : ಹರ್ಷಣ, ಕರಣ : ನಾಗವಾನ್, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 15 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16-50 – 18:16, ಯಮಗಂಡ ಕಾಲ 12:35 – 14:00, ಗುಳಿಕ ಕಾಲ 15:25 – 16:50

-ಲೋಹಿತ ಹೆಬ್ಬಾರ್ – 8762924271 (what’s app only)

Source link