Category Archives: Blog

Your blog category

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಮುಂದುವರೆದ ಶುಷ್ಕ ವಾತಾವರಣ – Kannada News | Bengaluru temperature: Dry Weather Persists allover the state including Bengaluru

ರಾಜ್ಯದಲ್ಲಿ ಮುಂದುವರೆದ ಶುಷ್ಕ ವಾತಾವರಣ

ಬೆಂಗಳೂರು, ಜನವರಿ 16: ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಒಣ ಹವೆಯ ವಾತಾವರಣವಿದೆ. ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದೆ (Weather Forecast) ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಚಳಿ

ಇಂದು ನಗರದಲ್ಲಿ ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 15°C ಇದ್ದು, ಗರಿಷ್ಠ 28°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೂ ತಲುಪಿದ ರಾಜೀವ್ ಗೌಡ ಪ್ರಕರಣ: ‘ಕೈ’ ಮುಖಂಡನ ವಿರುದ್ಧ ಇದೆ 9 ಕ್ರಿಮಿನಲ್ ಕೇಸ್ – Kannada News | Police Launch 3 Search Teams to Arrest Rajeev Gowda as Sidlaghatta Abuse Case Reaches Congress High Command

ಚಿಕ್ಕಬಳ್ಳಾಪುರ, ಜನವರಿ 16: ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ನಗರಸಭೆ ಪೌರಾಯುಕ್ತೆಗೆ ಅಶ್ಲೀಲವಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಕಾಂಗ್ರೆಸ್ (Congress) ಮುಖಂಡ ರಾಜೀವ್ ಗೌಡ ವಿರುದ್ಧ ಈಗಾಗಲೇ ಎಫ್​ಐಆರ್ ದಾಖಲಾಗಿದೆ. ಎರಡು ದಿನಗಳಿಂದ ರಾಜೀವ್‌ ಗೌಡ (Rajeev Gowda) ತಲೆಮರೆಸಿಕೊಂಡಿದ್ದು, ಫೋನ್‌ ಸ್ವಿಚ್‌ಆಫ್ ಮಾಡಿಕೊಂಡಿದ್ದಾರೆ. ರಾಜೀವ್ ಗೌಡ ಬಂಧನಕ್ಕೆ ಪೊಲೀಸರು 3 ತಂಡ ರಚನೆ ಮಾಡಿದ್ದಾರೆ. ಗುರುವಾರ ರಾಜೀವ್ ಗೌಡ ಮನೆ, ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ಶೋಧ ನಡೆಸಲಾಯಿತು. ರಾಜೀವ್ ಗೌಡ ಪತ್ನಿ ಪೊಲೀಸರ ಜೊತೆ ರಂಪಾಟ ಮಾಡಿದ್ದಾರೆ. ಸರ್ಚ್ ವಾರಂಟ್ ಇಲ್ಲದೇ ಮನೆಗೆ ಬರಬೇಡಿ ಎಂದು ಆವಾಜ್ ಹಾಕಿದ್ದಾರೆ.

ಏತನ್ಮಧ್ಯೆ, ರಾಜೀವ್‌ಗೌಡ ವರ್ತನೆ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೂ ಮುಜುಗರ ತಂದಿದೆ. ಇದೇ ಪ್ರಕರಣ ಹೈಕಮಾಂಡ್ ಅಂಗಳಕ್ಕೂ ತಲುಪಿದೆ. ಈ ಬಗ್ಗೆ ವರದಿ ನೀಡುವಂತೆ ಕೆಪಿಸಿಸಿ ಸೂಚಿಸಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​​ಗೆ ನೇರವಾಗಿ ಫೋನ್ ಕರೆ ಮಾಡಿ ವರದಿ ಕೇಳಿರುವ ಬಗ್ಗೆ ಎಐಸಿಸಿ ಉನ್ನತ ಮೂಲಗಳಿಂದ ‘ಟಿವಿ9’ಗೆ ಮಾಹಿತಿ ಲಭ್ಯವಾಗಿದೆ. ಎಐಸಿಸಿ ಸೂಚನೆ ಬೆನ್ನಲ್ಲೇ ಕೆಪಿಸಿಸಿ ರಾಜೀವ್‌ ಗೌಡಗೆ ನೋಟಿಸ್ ನೀಡಿದ್ದು, ವಾರದೊಳಗೆ ಸೂಕ್ತ ಉತ್ತರ ನೀಡದಿದ್ದರೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದೆ.

ರಾಜೀವ್ ಗೌಡ ಬಂಧನಕ್ಕೆ ಆಗ್ರಹಿಸಿ ಇಂದು ಪ್ರತಿಭಟನೆ

ಮಹಿಳಾ ಅಧಿಕಾರಿಗೆ ಅನ್ಯಾಯವಾದರೂ ಸರ್ಕಾರಿ ನೌಕರರ ಸಂಘ ಮೌನವಾಗಿದ್ದ ಬಗ್ಗೆ ‘ಟಿವಿ9’ ವರದಿ ಮಾಡಿತ್ತು. ಸುದ್ದಿಪ್ರಸಾರದ ಬೆನ್ನಲ್ಲೇ ರಾಜೀವ್ ಗೌಡ ವಿರುದ್ಧ ಜಿಲ್ಲಾ ಸರ್ಕಾರಿ ನೌಕರರ ಸಂಘ ತಿರುಗಿಬಿದ್ದಿದೆ. ರಾಜೀವ್ ಗೌಂಡ ಬಂಧನಕ್ಕಾಗಿ ಆಗ್ರಹಿಸಿ ಇಂದು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಲಿದೆ.
ಇನ್ನೊಂದೆಡೆ ಪೌರಾಡಳಿತ ಸಚಿವ ರಹೀಂ ಖಾನ್, ತಮ್ಮ ಇಲಾಖೆಯ ಮಹಿಳಾ ಅಧಿಕಾರಿಗೆ ಅನ್ಯಾಯವಾದರೂ ತುಟಿ ಬಿಚ್ಚದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ರಾಜೀವ್ ಗೌಡ ವಿರುದ್ಧ ಇದೆ 9 ಕ್ರಿಮಿನಲ್ ಕೇಸ್

ಈ ಮಧ್ಯೆ, ಪೊಲೀಸರು ರಾಜೀವ್ ಗೌಡನ ಕ್ರಿಮಿನಲ್ ಇತಿಹಾಸ ಕೆದಕಲು ಶುರುಮಾಡಿದ್ದಾರೆ. ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ ಈವರೆಗೆ 9 ಕೇಸ್‌ ಕೇಸ್ ದಾಖಲಾಗಿರುವುದು ಬಯಲಾಗಿದೆ. ಶಿಡ್ಲಘಟ್ಟ ನಗರ, ಹೊಸಕೋಟೆ, ದೇವನಹಳ್ಳಿ ಸೇರಿ ಬೆಂಗಳೂರಲ್ಲಿ ಕೇಸ್‌ಗಳಿವೆ. ರಿಯಲ್ ಎಸ್ಟೇಟ್‌ನಲ್ಲಿ ಮೋಸ, ವಂಚನೆ ಸೇರಿ ವಿವಿಧ ಪ್ರಕರಣಗಳು ದಾಖಲಾಗಿದ್ದ ಬಗ್ಗೆ ‘ಟಿವಿ9’ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೈಕ್​ನಲ್ಲಿ ಬರುವಾಗ ಗಾಳಿಪಟದ ದಾರ ತಪ್ಪಿಸಲು ಹೋಗಿ ಪತ್ನಿ, ಮಗಳ ಸಮೇತ ಸೇತುವೆಯಿಂದ ಬಿದ್ದ ಸವಾರ, ಮೂವರು ಸಾವು – Kannada News | Surat Kite String Tragedy: Family of 3 Dies After Bike Falls 70 Feet from Bridge

ಸೂರತ್, ಜನವರಿ 16: ಹುಟ್ಟು ಸಾವು ಎರಡೂ ದೈವ ನಿರ್ಣಯ ಅಂತಾರೆ, ಯಾವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ತಪ್ಪಿಸಲು ಹೋದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬೈಕ್​ನಲ್ಲಿ ಬರುವಾಗ ಗಾಳಿಪಟ(Kite)ದ ದಾರವನ್ನು ತಪ್ಪಿಸಲು ಹೋಗಿ ವ್ಯಕ್ತಿಯೊಬ್ಬ ಪತ್ನಿ, ಮಗಳ ಸಮೇತ ಸೇತುವೆಯಿಂದ ಕೆಳಗೆಬಿದ್ದು ಸಾವನ್ನಪ್ಪಿರುವ ಘಟನೆ ಗುಜರಾತಿನ ಸೂರತ್​ನಲ್ಲಿ ನಡೆದಿದೆ. ಮಕರ ಸಂಕ್ರಾಂತಿ ದಿನದಂದು ಆಕಸ್ಮಿಕವಾಗಿ ಸೇತುವೆಯಿಂದ ಕೆಳಗೆ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದ 35 ವರ್ಷದ ರೆಹಾನ್ ರಹೀಮ್ ಶೇಖ್ ಎಂಬ ವ್ಯಕ್ತಿ ತನ್ನ ಪತ್ನಿ ರೆಹಾನಾ (33) ಮತ್ತು ಮಗಳು ಅಲಿಶಾ (10) ಅವರೊಂದಿಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ ಗಾಳಿಪಟದ ದಾರ ಇದ್ದಕ್ಕಿದ್ದಂತೆ ಅವರ ಎದುರು ಬಂದಿತ್ತು. ಅದನ್ನು ತಪ್ಪಿಸಲು ಹೋಗಿ ಬೈಕ್ ಸೇತುವೆಯ ಮೇಲಿನ ವಿಭಜಕಕ್ಕೆ ಡಿಕ್ಕಿ ಹೊಡೆದು 70 ಅಡಿ ಕೆಳಗೆ ಬಿದ್ದಿದೆ.

ಆ ವ್ಯಕ್ತಿ ಮತ್ತು ಅವರ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಆದರೆ ಅವರ ಪತ್ನಿ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಸಮೀಪದಲ್ಲಿ ಇರಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಅಪಘಾತದ ದೃಶ್ಯಗಳನ್ನು ಸೆರೆಹಿಡಿದಿದೆ. ಜನವರಿ 14 ರಂದು ಸಂಜೆ 5 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಗಾಳಿಪಟದ ದಾರವೊಂದು ಬೈಕಿನ ಮುಂದೆ ಬಂದಿರುವುದನ್ನು ಅದು ತೋರಿಸಿದೆ.

ಮತ್ತಷ್ಟು ಓದಿ: ಮಕರ ಸಂಕ್ರಾಂತಿಯಂದು ಗಾಳಿಪಟಗಳನ್ನು ಏಕೆ ಹಾರಿಸಲಾಗುತ್ತದೆ ಎಂದು ತಿಳಿದಿದೆಯೇ?

ರೆಹಮಾನ್ ಒಂದು ಕೈಯಿಂದ ಅದನ್ನು ತೆಗೆದುಹಾಕಲು ಪ್ರಯತ್ನಿಸಿದಾಗ, ಅವರ ನಿಯಂತ್ರಣ ತಪ್ಪಿತು, ಮತ್ತು ಬೈಕ್ ವಿಭಜಕಕ್ಕೆ ಡಿಕ್ಕಿ ಹೊಡೆದು, ತಕ್ಷಣವೇ ಸೇತುವೆಯಿಂದ ಬಿದ್ದು, ಆಟೋ ರಿಕ್ಷಾದ ಮೇಲೆ ಬಿದ್ದಿತು.

ಆಟೋ ಚಾಲಕ ಮತ್ತು ಪ್ರತ್ಯಕ್ಷದರ್ಶಿ ಇಕ್ಬಾಲ್ ಮಾತನಾಡಿ, ನಾನು ಸಂಜೆ 5.15 ರ ಸುಮಾರಿಗೆ ಚಹಾ ಕುಡಿಯಲು ಇಲ್ಲಿಗೆ ಬಂದಿದ್ದೆ. ಚಹಾ ಕುಡಿದು ನನ್ನ ರಿಕ್ಷಾದೊಳಗೆ ಕುಳಿತ ತಕ್ಷಣ, ಮೂವರು ಮೇಲಿನಿಂದ ಬಿದ್ದರು, ಒಬ್ಬ ಮಹಿಳೆ, ಒಬ್ಬ ಪುಟ್ಟ ಹುಡುಗಿ ಮತ್ತು ಒಬ್ಬ ಪುರುಷ. ಅವರೆಲ್ಲರೂ ನನ್ನ ಮತ್ತು ನನ್ನ ರಿಕ್ಷಾದ ಮೇಲೆ ಬಿದ್ದರು. ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ, ಮತ್ತು ನನಗೂ ಕೆಲವು ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಿದರು.

ಅಪಘಾತದ ಬಗ್ಗೆ ವರದಿಯಾದ ತಕ್ಷಣ, ಪೊಲೀಸರು ಸ್ಥಳಕ್ಕೆ ಬಂದು ಶವಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ತರೆಹಾನ್ ಆಭರಣ ತಯಾರಕರಾಗಿದ್ದು, ಅವರ ಕುಟುಂಬದ ಏಕೈಕ ಜೀವನಾಧಾರವಾಗಿದ್ದರು ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಯಾವ ದೇವರಿಗೆ ಯಾವ ಹಣ್ಣುಅರ್ಪಿಸಿದ್ರೆ ಏನೇನು ಫಲ ಗೊತ್ತಾ?

ಬೆಂಗಳೂರು, ಜನವರಿ 16: ದೇವಸ್ಥಾನಗಳಿಗೆ ಭೇಟಿ ನೀಡಿದಾಗ, ಗುರುಗಳನ್ನು, ಮಕ್ಕಳು ಅಥವಾ ಹಿರಿಯರನ್ನು ಭೇಟಿಯಾದಾಗ ಕೈಯಲ್ಲಿ ಹಣ್ಣು ಅಥವಾ ಆಹಾರ ಪದಾರ್ಥಗಳನ್ನು ಕೊಂಡೊಯ್ಯುವುದು ನಮ್ಮ ಸನಾತನ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ನಡೆದುಬಂದ ಪದ್ಧತಿ. ಭಕ್ತಿ ಮತ್ತು ಭಾವನೆ ಮುಖ್ಯವಾದರೂ, ಕೆಲವು ಹಣ್ಣುಗಳನ್ನು ದೇವರಿಗೆ ಅರ್ಪಿಸುವುದರಿಂದ ನಿರ್ದಿಷ್ಟ ಫಲಗಳನ್ನು ಪಡೆಯಬಹುದು ಎಂದು ನಂಬಲಾಗಿದೆ.

ಉದಾಹರಣೆಗೆ, ಬಾಳೆಹಣ್ಣನ್ನು ಅರ್ಪಿಸುವುದರಿಂದ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ತೆಂಗಿನಕಾಯಿ ಅರ್ಪಣೆಯು ಹೊಸ ಯೋಜನೆಗಳಿಗೆ ಆಲೋಚನೆಗಳನ್ನು ನೀಡಿ ಉದ್ಯೋಗದಲ್ಲಿ ಶುಭವನ್ನು ತರುತ್ತದೆ ಮತ್ತು ಅಧಿಕಾರಿಗಳೊಂದಿಗಿನ ಸಂಬಂಧಗಳನ್ನು ಸುಧಾರಿಸುತ್ತದೆ. ಸೇಬು ಹಣ್ಣು ರೋಗಗಳನ್ನು ನಿವಾರಿಸಿ ದಾರಿದ್ರ್ಯವನ್ನು ಕಡಿಮೆ ಮಾಡುತ್ತದೆ. ದ್ರಾಕ್ಷಿ ಸುಖ, ಸಂತೋಷ, ಮಾನಸಿಕ ತೃಪ್ತಿ ಮತ್ತು ಒಳ್ಳೆಯ ಆಲೋಚನೆಗಳನ್ನು ನೀಡುತ್ತದೆ. ಈ ರೀತಿ, ಪ್ರತಿಯೊಂದು ಹಣ್ಣಿಗೂ ತನ್ನದೇ ಆದ ಮಹತ್ವ ಮತ್ತು ಫಲವಿದೆಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

ಇಂದಿನಿಂದ 2 ದಿನಗಳ ಕಾಲ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿಯಾಗ್ತಾರಾ, ಸಿಗುತ್ತಾ ಕುರ್ಚಿ ಅಭಯ? – Kannada News | DK Shivakumar Two Day Delhi Visit Sparks Speculation: Rahul Gandhi Meeting and Power Play Buzz in Karnataka Congress

ಇಂದಿನಿಂದ 2 ದಿನಗಳ ಕಾಲ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ

ಬೆಂಗಳೂರು, ಜನವರಿ 16: ಸಂಕ್ರಮಣದ ದಿನ ಸೂರ್ಯ ತನ್ನ ಪಥ ಬದಲಿಸಿದ್ದಾನೆ. ಆದರೆ ಸಂಕ್ರಾಂತಿಗೆ ಕಾಂಗ್ರೆಸ್‌ನಲ್ಲಿ (Congress)  ಪಥಬದಲಾಗುತ್ತದೆ, ಕ್ರಾಂತಿಯಾಗುತ್ತದೆ ಎಂಬೆಲ್ಲ ಗೊಂದಲಗಳಿಗೆ ತೆರೆಬಿದ್ದಿಲ್ಲ. ಅಧಿಕಾರ ಹಂಚಿಕೆಗೆ ಸಂಬಂಧಪಟ್ಟಂತೆ ಸದ್ಯಕ್ಕೆ ಕಾಂಗ್ರೆಸ್‌ನಲ್ಲಿ ಅಂತಾ ಮಹತ್ವದ ಬೆಳವಣಿಗೆ ನಡೆಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಮೈಸೂರಿಗೆ ಬಂದಿದ್ದ ರಾಹುಲ್ ಗಾಂಧಿಯನ್ನು ವಿಮಾನ ನಿಲ್ದಾಣದಲ್ಲೇ ಸಿಎಂ, ಡಿಸಿಎಂ ಭೇಟಿ ಮಾಡಿದ್ದರು. ಅದರಲ್ಲೂ ಡಿಕೆ ಶಿವಕುಮಾರ್‌ (DK Shivakumar) ಪ್ರತ್ಯೇಕವಾಗಿ ನಿಂತು ಅಧಿಕಾರ ಹಂಚಿಕೆ ಗೊಂದಲವನ್ನು ಬಗೆಹರಿಸುವಂತೆ ಒತ್ತಾಯಿಸಿದ್ದರು ಎನ್ನಲಾಗಿತ್ತು. ಏರ್‌ಪೋರ್ಟ್‌ ರನ್‌ವೇನಲ್ಲಿ ಇಂತಹ ಚರ್ಚೆ ಬೇಡ. ದೆಹಲಿಗೆ ಬನ್ನಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದೂ ಮೂಲಗಳು ತಿಳಿಸಿದ್ದವು. ಅದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯಗೂ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದರು.

ರಾಹುಲ್ ಗಾಂಧಿ ಭೇಟಿಯಾಗೋದು ಹೊಸದೇನು ಅಲ್ಲ ಎಂದ ಡಿಕೆಶಿ!

ರಾಹುಲ್‌ ಗಾಂಧಿಯವರ ಆಹ್ವಾನ ದೊರೆಯುತ್ತಿದ್ದಂತೆಯೇ ಡಿಕೆ ಶಿವಕುಮಾರ್‌ ಉತ್ಸಾಹದಲ್ಲಿ ಸಂಕ್ರಾಂತಿ ಹಬ್ಬದ ನಡುವೆಯೇ ಇಂದು ದೆಹಲಿಯತ್ತ ಮುಖ ಮಾಡಿದ್ದಾರೆ. ಮುಂದಿನ ವಾರ ರಾಹುಲ್‌ ಗಾಂಧಿ ವಿದೇಶ ಪ್ರವಾಸಕ್ಕಾಗಿ ತೆರಳುತ್ತಿದ್ದು, ಅದಕ್ಕೂ ಮುನ್ನವೇ ದೆಹಲಿಯಲ್ಲಿ ಭೇಟಿ ಮಾಡಿ ತಮ ಗೊಂದಲವನ್ನು ಬಗೆ ಹರಿಸಿಕೊಳ್ಳಲು ಡಿಕೆ ಶಿವಕುಮಾರ್‌ ಕಾತರರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ದೆಹಲಿಗೆ ಹೋಗುತ್ತಿದ್ದೇನೆ. ಪಕ್ಷದ ಎಲ್ಲ ನಾಯಕರನ್ನು ಅಲ್ಲಿ ಭೇಟಿ ಮಾಡುತ್ತೇನೆ. ರಾಹುಲ್ ಗಾಂಧಿ ಭೇಟಿಯಾಗುವುದು ಹೊಸದೇನು ಅಲ್ಲ. ಅವುಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ ಎಂದರು. ಇನ್ನು ರಾಹುಲ್ ಗಾಂಧಿ ಭೇಟಿ ನಂತರ ನಿಮ್ಮ ಬೆಂಬಲಿಗ ಶಾಸಕರು ಸಂತೋಷವಾಗಿದ್ದಾರೆ. ಅವರ ಅಪೇಕ್ಷೆಯನ್ನು ರಾಹುಲ್ ಬಳಿ ಹೇಳಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ರಾಹುಲ್ ನಮ್ಮ ಪಕ್ಷದ ನಾಯಕರು. ಬಯಕೆಯನ್ನು ಅವರ ಮುಂದೆ ಪ್ರಸ್ತಾಪಿಸುತ್ತೇನೆ ಎಂದು ಹೇಳಿರುವುದು ಕುತೂಹಲ ಹುಟ್ಟಿಸಿದೆ.

ಅಸ್ಸಾಂ ಚುನಾವಣೆ ನೆಪ: ಕುರ್ಚಿ ಆಟದ್ದೇ ಜಪ!

ಇಂದು ಬೆಳಗ್ಗೆ 10.55ಕ್ಕೆ ಡಿಕೆಶಿ ದೆಹಲಿಗೆ ತೆರಳುತ್ತಿದ್ದಾರೆ. ಅಸ್ಸಾಂ, ಪಶ್ಚಿಮಬಂಗಾಳ, ಕೇರಳ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಕಾಂಗ್ರೆಸ್ಸಿನ ಉಸ್ತುವಾರಿ ನಾಯಕರ ಮಹತ್ವದ ಸಭೆ ನಡೆಯಲಿದೆ. ಅಸ್ಸಾಂ ಚುನಾವಣೆಗೆ ಕಾಂಗ್ರೆಸ್‌‍ ವೀಕ್ಷಕರಾಗಿರುವ ಡಿ.ಕೆ.ಶಿವಕುಮಾರ್‌, ಸಂಸದೆ ಪ್ರಿಯಾಂಕಾ ಗಾಂಧಿ ಅವರ ಜೊತೆ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಆದರೆ ಅಸ್ಸಾಂ ಚುನಾವಣೆ ಕೇವಲ ನೆಪಮಾತ್ರವಾಗಿದ್ದು ಅಧಿಕಾರ ಹಂಚಿಕೆ ವಿಚಾರವೇ ಡಿಕೆ ದೆಹಲಿ ಭೇಟಿಗೆ ಪ್ರಧಾನ ಕಾರಣ ಎನ್ನಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಜೊತೆ ಡಿಕೆಶಿ ಚರ್ಚಿಸಿದ್ದೇನು?

ಸಂಕ್ರಾಂತಿ ದಿನ ರಾಜಕೀಯ ಚಟುವಟಿಕೆಗೆಳು ಗಮನ ಸೆಳೆದವು. ಡಿಸಿಎಂ ಡಿಕೆ ಎಐಸಿಸಿ ಅಧ್ಯಕ್ಷಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ದು, ಇದಕ್ಕೂ ಮುನ್ನ ಸಚಿವ ಪ್ರಿಯಾಂಕ್ ಖರ್ಗೆ ಡಿಸಿಎಂ ಡಿಕೆಶಿ ನಿವಾಸಕ್ಕೆ ಭೇಟಿಯಾಗಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಜೊತೆ ಮಾತುಕತೆ ನಡೆಸಿದ್ದು ಕುತೂಹಲ ಹುಟ್ಟಿಸಿತು. ಸಂದೇಶ ವಾಹಕರಂತೆ ಕೆಲಸ ಮಾಡುತ್ತಿರುವ ಪ್ರಿಯಾಂಕ ಖರ್ಗೆ, ಡಿ.ಕೆ.ಶಿವಕುಮಾರ್‌ ಅವರಿಗೆ ಸಿದ್ದರಾಮಯ್ಯ ಮತ್ತು ಹೈಕಮಾಂಡ್‌ ನೀಡಿದ ಸಂದೇಶಗಳನ್ನು ತಲುಪಿಸಿದರಾ ಎಂಬ ಪ್ರಶ್ನೆ ಮೂಡಿದೆ.

ಕರ್ನಾಟಕ ಕಾಂಗ್ರೆಸ್ ಕ್ರಾಂತಿ, ಶಿವರಾತ್ರಿಗೆ ಮುಂದೂಡಿಕೆ?

ಸಂಕ್ರಾಂತಿ ಬಳಿಕ ನಡೆಯಬೇಕಿದ್ದ ಕಾಂಗ್ರೆಸ್​​​ನ ಕ್ರಾಂತಿ, ಶಿವರಾತ್ರಿಗೆ ಮುಂದೂಡಿಕೆ ಆಗುತ್ತಾ ಎಂಬ ಅನುಮಾನ ಶುರುವಾಗಿದೆ. ಜನವರಿ 22ರ ಒಳಗಾಗಿ ಗೊಂದಲ ಬಗೆಹರಿದರೆ ಸರಿ. ಇಲ್ಲದಿದ್ದರೆ ಮತ್ತೆ ಒಂದರ ಹಿಂದೊಂದು ಬೆಳವಣಿಗೆಗಳ ಅಡೆತಡೆ ರಾಜ್ಯ ಕಾಂಗ್ರೆಸ್ ಗೊಂದಲವನ್ನು ಹೆಚ್ಚು ಮಾಡಲಿದೆ‌‌.

ದಾಳ ಉರುಳಿಸಿದ್ರಾ ಸಿದ್ದರಾಮಯ್ಯ?

ಡಿಸಿಎಂ ಡಿಕೆ ಇಂದು ದೆಹಲಿಗೆ ತೆರಳುತ್ತಿದ್ದಾರೆ. ಮತ್ತೆ ಜನವರಿ 22ರ ಬಳಿಕ ದೆಹಲಿಗೆ ಪ್ಲ್ಯಾನ್ ಮಾಡಿದ್ದಾರೆ. ಆದರೆ ಜನವರಿ 22 ರಿಂದ 31ವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ಆಯೋಜನೆ ಮಾಡಲಾಗಿದೆ. ಹೀಗಾಗಿ ದೆಹಲಿಯ ನಾಯಕರು ಸಿಎಂಗೆ ದೆಹಲಿ ಬುಲಾವ್ ಕೊಡೋದು ಬಹುತೇಕ ಅನುಮಾನ. ಈ ಮಧ್ಯೆ ಜನವರಿ 28ರಿಂದ ಸಂಸತ್ ಬಜೆಟ್ ಅಧಿವೇಶ ಆರಂಭವಾಗಲಿದೆ. ಹೈಕಮಾಂಡ್ ನಾಯಕರು ಸಂಸತ್​​ನಲ್ಲಿಯೇ 1 ತಿಂಗಳು ವ್ಯಸ್ತರಾಗಿರಲಿದ್ದಾರೆ. ಈ ಹಿನ್ನೆಲೆ ಸಂಕ್ರಾಂತಿಯ ಕ್ರಾಂತಿ ಮತ್ತೆ ಫೆಬ್ರವರಿಗೆ ಮುಂದೂಡಿಕೆ ಆಗುತ್ತದಯೇ ಎಂಬ ಚರ್ಚೆ ಕಾಂಗ್ರೆಸ್​ ಆಂತರಿಕ ವಲದಲ್ಲಿ ಶುರುವಾಗಿದೆ.

ಇದನ್ನೂ ಓದಿ: ಜನವರಿ 22ರಿಂದ 31ರ ವರೆಗೆ ವಿಶೇಷ ಅಧಿವೇಶನಕ್ಕೆ ಕ್ಯಾಬಿನೆಟ್​​ ನಿರ್ಧಾರ: ಕಾರಣ ಏನು?

ಒಟ್ಟಾರೆ, ಉತ್ತರಾಯಣದ ಪುಣ್ಯ ಕಾಲದಲ್ಲಿ ಸೂರ್ಯನ ಪಥ ಬದಲಾಗಿದೆ. ರಾಜ್ಯ ಕಾಂಗ್ರೆಸ್​​​ನ ಗೊಂದಲದ ದಿಕ್ಕು ಯಾವಾಗ ಬದಲಾಗುತ್ತದೆ ಎಂಬುದಷ್ಟೇ ಬಾಕಿ ಉಳಿದಿರುವ ಕುತೂಹಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೆದ್ರೆ ತಾನೇ? ಧ್ರುವಂತ್ ಕುರಿತ ಫನ್ ಮೀಮ್ ವೈರಲ್ – Kannada News | Dhruvanth Fun Meme Goes viral after Bigg Boss Elimination

ಧ್ರುವಂತ್ ಅವರಿಗೆ ಸೀಸನ್ ಚಪ್ಪಾಳೆ ಸಿಕ್ಕಿತ್ತು. ಅದಕ್ಕೂ ಮೊದಲು ಅವರು ಅಷ್ಟಾಗಿ ಸ್ಟ್ರಾಂಗ್ ಸ್ಪರ್ಧಿಯೇ ಅಲ್ಲ ಎಂಬಂತೆ ಆಗಿತ್ತು. ಯಾವಾಗ ಅವರು ಸೀಕ್ರೆಟ್ ರೂಂ ಹೋದರೋ ಅಲ್ಲಿಂದ ಅವರ ಆಟ ಸಂಪೂರ್ಣವಾಗಿ ಬದಲಾಗಿತ್ತು ಎಂದರೂ ತಪ್ಪಾಗಲಿಕ್ಕಿಲ್ಲ. ಈಗ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ಬೆನ್ನಲ್ಲೇ ಅವರ ಕುರಿತ ಮೀಮ್ ಒಂದು ವೈರಲ್ ಆಗಿ ಗಮನ ಸೆಳೆದಿದೆ. ಅಷ್ಟಕ್ಕೂ ಏನು ಆ ಮೀಮ್? ಇಲ್ಲಿದೆ ವಿವರ.

ಧ್ರುವಂತ್ ಅವರು ಫಿನಾಲೆಗೂ ಮೊದಲು ವಾರದ ಮಧ್ಯವೇ ಎಲಿಮಿನೇಟ್ ಆಗಿದ್ದಾರೆ. ಕಡಿಮೆ ವೋಟ್ ಪಡೆದು ಅವರು ಹೊರ ಹೋದರು. ಇದಕ್ಕೂ ಮೊದಲು ಬಿಗ್ ಬಾಸ್ ಮನೆಗೆ ಬಂದ ಜನರ ಎದುರು ಅವರು ಆವೇಶದಿಂದ ಮಾತನಾಡಿದ್ದರು. ಆ ವಿಡಿಯೋನ ವೈರಲ್ ಮಾಡಿ ಚಿಕ್ಕಣ್ಣನ ಮೀಮ್ ಹಾಕಲಾಗಿದೆ.

‘ಬಿಗ್ ಬಾಸ್ ಮನೆಯಲ್ಲಿ 24 ಜನರು ಇದ್ದರು. ನಾನು ಅದನ್ನು 6ಕ್ಕೆ ಇಳಿಸಿದ್ದೇನೆ. ನನಗೆ ಕಾಂಪಿಟೇಟರ್ ಇರಬಾರದು’ ಎಂದು ಬಿಗ್ ಬಾಸ್ ಮನೆಗೆ ಬಂದ ಅತಿಥಿಗಳ ಎದುರು ಹೇಳಿದ್ದರು. ಈ ವಿಡಿಯೋಗೆ ‘ಮಾಸ್ಟರ್​​ಪೀಸ್’ ಸಿನಿಮಾದಲ್ಲಿ ಬರೋ ಚಿಕ್ಕಣ್ಣನ ವಿಡಿಯೋ ಕ್ಲಿಪ್ ಹಾಕಲಾಗಿದೆ. ‘ನೀನು ಗೆದ್ರೆ ತಾನೆ’ ಎಂದು ಚಿಕ್ಕಣ್ಣ ಹೇಳುತ್ತಾರೆ. ಈ ವಿಡಿಯೋ ಗಮನ ಸೆಳೆಯುತ್ತಿದೆ.

ಧ್ರುವಂತ್ ಅವರು ಈ ಮೊದಲು ಸ್ಪರ್ಧಿ ಎಂದೇ ಎನಿಸಿಕೊಂಡಿರಲಿಲ್ಲ. ಅವರು ಬೇಗ ಎಲಿಮಿನೇಷನ್ ಆಗುವ ಸಾಧ್ಯತೆ ಇತ್ತು. ಆದರೆ, ನಂತರ ಅವರ ಆಟದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡರು. ಇತ್ತೀಚೆಗೆ ಅವರು ಸಾಕಷ್ಟು ಹೈಪ್ ಪಡೆದುಕೊಂಡರು. ಇದರಿಂದ ಅವರು ತಾವು ಫಿನಾಲೆ ಏರಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆಯಲ್ಲಿ ಇದ್ದಂತೆ ಕಾಣಿಸುತ್ತದೆ.

ಇದನ್ನೂ ಓದಿ: ಎಲಿಮಿನೇಷನ್ ವಿಷಯದಲ್ಲಿ ಕಣ್ಣೀರು ಹಾಕಿ ನಾಟಕ ಆಡಿದ್ದ ಧ್ರುವಂತ್; ಕರ್ಮ ಹೇಗೆ ತಿರುಗುತ್ತೆ ನೋಡಿ

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈಗ ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯಾ ಶೈವ, ರಕ್ಷಿತಾ ಶೆಟ್ಟಿ, ಧನುಶ್ ಹಾಗೂ ರಘು ಇದ್ದಾರೆ. ಇವರ ಪೈಕಿ ಒಬ್ಬರು ಕಪ್ ಗೆಲ್ಲುತ್ತಾರೆ. ಶನಿವಾರ ಒಬ್ಬರನ್ನು ಎಲಿಮಿನೇಷನ್ ಮಾಡಿ, ಉಳಿದವರನ್ನು ಎರಡನೇ ದಿನದ ಫಿನಾಲೆಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎರಡು ಬಾರಿ ವಿಚ್ಛೇದನ ಪಡೆದ ನಟಿಗೆ ಈಗ ಮೂರನೇ ಮದುವೆ ಚಿಂತೆ – Kannada News | Deepshikha Nagpal ready to marry for three times She explain why

ಸಿನಿಮಾ ರಂಗದಿಂದ ಟಿವಿ ಉದ್ಯಮದವರೆಗೆ ಅನೇಕ ಸೆಲೆಬ್ರಿಟಿಗಳು ವಿವಾಹ ಹಾಗೂ ವಿಚ್ಛೇದನದ ಮೂಲಕ ಸುದ್ದಿ ಆಗುತ್ತಾ ಇರುತ್ತಾರೆ. ನಟನೆ ಮತ್ತು ಸೌಂದರ್ಯದಿಂದ ಲಕ್ಷಾಂತರ ಅಭಿಮಾನಿಗಳ ಹೃದಯಗಳನ್ನು ಆಳಿದ ನಟಿಯೊಬ್ಬರು, 48 ನೇ ವಯಸ್ಸಿನಲ್ಲಿ ಮೂರನೇ ಬಾರಿಗೆ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಇಬ್ಬರು ಮಕ್ಕಳ ತಾಯಿ. ಆ ಬಗ್ಗೆ ಇಲ್ಲಿದೆ ವಿವರ.

ದೀಪ್ಶಿಖಾ ನಾಗ್ಪಾಲ್ ಅವರು ಹಿಂದಿ ನಟಿ. ಇದರ ಜೊತೆ ಕಿರುತೆರೆ ನಟಿ ಕೂಡ ಹೌದು. ಅವರು ಪ್ರಸ್ತುತ ತಮ್ಮ ಸೌಂದರ್ಯ ಮತ್ತು ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ.ಎರಡು ಬಾರಿ ವಿಚ್ಛೇದನ ಪಡೆದ ನಂತರ, ನಟಿ ದೀಪ್ಶಿಖಾ ಅನೇಕ ವಿಷಯಗಳನ್ನು ಎದುರಿಸಬೇಕಾಯಿತು. ಅವರು ಇಬ್ಬರು ಮಕ್ಕಳನ್ನು ಒಂಟಿಯಾಗಿ ಬೆಳೆಸಿದರು. ಅವರು ನೀಡಿದ ಸಂದರ್ಶನದಲ್ಲಿ ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

‘ಮತ್ತೊಮ್ಮೆ ಮದುವೆಯಾಗುವ ಬಗ್ಗೆ ಯೋಚಿಸುತ್ತೀರಾ’ ಎಂದು ದೀಪ್ಶಿಖಾ ಅವರನ್ನು ಕೇಳಲಾಯಿತು. ಅವರು ಈ ಕಲ್ಪನೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡರು. ‘ಈಗಾಗಲೇ ಎರಡು ವಿಚ್ಛೇದನಗಳನ್ನು ಅನುಭವಿಸಿದ್ದೇನೆ. ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಮೂರು ಬಾರಿ, ನಾಲ್ಕು ಬಾರಿ ಮದುವೆಯಾಗಬಹುದು. ಇದರಲ್ಲಿ ನನಗೆ ಯಾವುದೇ ನಾಚಿಕೆ ಇಲ್ಲ. ಕನಿಷ್ಠ ನಾನು ನನ್ನ ಜೀವನವನ್ನು ನಡೆಸುತ್ತಿದ್ದೇನೆ’ ಅವರು ಹೇಳಿದರು.

‘ನಾನು ಯಾವಾಗಲೂ ತಪ್ಪು ಕಾರಣಗಳಿಗಾಗಿ ಮದುವೆಯಾಗುತ್ತಿದ್ದೆ. ನೀವು ಯಾವಾಗಲೂ ಸರಿಯಾದ ಕಾರಣಗಳಿಗಾಗಿ ಮದುವೆಯಾಗಬೇಕು. ಆದ್ದರಿಂದ ನಾನು ಎಲ್ಲದಕ್ಕೂ ಆ ವ್ಯಕ್ತಿಯನ್ನು ದೂಷಿಸಲು ಸಾಧ್ಯವಿಲ್ಲ. ನಾನು ಒಬ್ಬ ಪ್ರೇಮಿ ಎಂದು ನಾನು ಭಾವಿಸುತ್ತೇನೆ. ನಾನು ಪ್ರೀತಿಯಲ್ಲಿ ನಂಬಿಕೆ ಇಡುತ್ತೇನೆ, ಪ್ರಣಯದಲ್ಲಿ ನಂಬಿಕೆ ಇಡುತ್ತೇನೆ, ಮದುವೆಯಲ್ಲಿ ನಂಬಿಕೆ ಇಡುತ್ತೇನೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಕಾಮುಕ ನವೀನ್​ ಕರಾಳತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಕಿರುತೆರೆ ನಟಿ

ದೀಪ್ಶಿಖಾ ಅವರು ಮೊದಲ ಬಾರಿಗೆ ಮದುವೆ ಆಗಿದ್ದು 1997ರಲ್ಲಿ. ಜೀತ್ ಉಪೇಂದ್ರ ಅವರನ್ನು ವಿವಾಹಾ ಆಗಿದ್ದರು. 2005ರಲ್ಲಿ ಇವರು ಬೇರೆ ಆದರು. ನಂತರ 2012ರಲ್ಲಿ ಕೇಶವ್ ಅರೋರಾ ಅವರನ್ನು ಇವರು ಮದುವೆ ಆದರು, ನಾಲ್ಕು ವರ್ಷಕ್ಕೆ ಇವರು ಬೇರೆ ಆದರು. ಇವರಿಗೆ ಇಬ್ಬರು ಮಕ್ಕಳು. ಅದನ್ನು ಅವರು ಮೊದಲ ಪತಿಯಿಂದ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 16 January : ಇಂದು ಈ ರಾಶಿಯವರು ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವರು – Kannada News | Horoscope Today: January 16, Friday 2026 Daily Zodiac Predictions and Lucky Signs

ಮೇಷ ರಾಶಿ:

ಅಸಂಗತ ಸಮಾಚಾರವನ್ನು ಒಪ್ಪಬೇಕಿಲ್ಲ. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ಕಣ್ಣಿಗೆ ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವಂತೆ ಪರಿಶೀಲಿಸಿ ಕಾರ್ಯ ಪ್ರವೃತ್ತರಾಗಿ. ಅತಿಥಿಗಳ ಬಗ್ಗೆ ತೋರುವ ಗೌರವ ಇರಲಿ. ನಿಮ್ಮ ಪ್ರಯತ್ನವನ್ನು ಇತರರಿಗೂ ತಿಳಿಸುವ ಸಮಯ ಇಂದು. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ನಿಮ್ಮ ಮೇಲೆ ಅರೋಪವು ಬರುವ ಸಾಧ್ಯತೆ ಇದ್ದೆ. ಕೆಲವು ಸಮಸ್ಯೆಯು ನಿಮ್ಮ ಮಾನಸಿಕತೆಯಿಂದಾಗಿಯೇ ಇರುವುದು.

ವೃಷಭ ರಾಶಿ:

ಸ್ನೇಹಿತರ ಬೆಂಬಲವನ್ನು ನೀವು ಪೂರ್ಣವಾಗಿ ಒಪ್ಪಲಾರಿರಿ. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ತಾಯಿ ಪಡುವ ಕಷ್ಟಕ್ಕೆ ಪೂರ್ಣವಿರಾಮ ಹಾಕುವಿರಿ. ನಿಮ್ಮ ಏಳಿಗೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ಪ್ರೀತಿಯ ಸುಖದಿಂದ ವಂಚಿತರಾಗುವಿರಿ. ಹಿತಶತ್ರುಗಳ ನಡುವೆ ಹಿತಚಿಂತಕರನ್ನು ಗುರುತಿಸುವುದು ಕಷ್ಟ. ವಿದೇಶಪ್ರಯಾಣದ ಗುಂಗಿನಿಂದ ಹೊರಬನ್ನಿ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗಬಹುದು. ಸಂಗಾತಿಯ ಜೊತೆ ಸಮಯವನ್ನು ಕಳೆಯಬೇಕು ಎನಿಸಬಹುದು.

ಮಿಥುನ ರಾಶಿ:

ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಕೆ ಆದೀತು. ಜಾಗರೂಕರಾಗಿ ಜನರಿಂದ ದೂರವಿರುವುದು ಒಳ್ಳೆಯದು. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಪ್ರತ್ಯಕ್ಷವಾಗಿ ಕಾಣುವ ವ್ಯಕ್ತಿಗಳಿಗೆ ನಿಮ್ಮ ಬಗೆಗಿನ ದೃಷ್ಟಿಕೋನವೇ ಬದಲಾಗುವುದು. ಬಂಧುಗಳ ಕಿರಿಕಿರಿ ಇಷ್ಟವಾಗದು. ಆರ್ಥಿಕತೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕೈಯಲ್ಲಿ ಹಣವಿದ್ದಷ್ಟು ಖರ್ಚು ತಾನಾಗಿಯೇ ಹುಡುಕಿಕೊಂಡು ಬರಬಹುದು. ಕೃಷಿ ಚಟುವಟಿಕೆಗಳ ಬಗ್ಗೆ ನಿಮಗೆ ಅಸಕ್ತಿಯು ಹೆಚ್ಚಿರುವುದು. ಅನನುಕೂಲತೆಯನ್ನು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ.

ಕರ್ಕಾಟಕ ರಾಶಿ:

ಇಂದು ನಿಮ್ಮ ಜೇಬು ತುಂಬಿದಂತೆ ಕಂಡರೂ ಒಳಗೆ ರಂಧ್ರವಿರುವುದು ಗೊತ್ತಾಗದೇ ಹೋಗುವುದು. ಅತಿಯಾದ ಮುತುವರ್ಜಿಯಿಂದ ದುಃಖ ಬರುವ ಸಾಧ್ಯತೆ ಇದೆ. ಆಹಾರ ವಿವಾಹರ ಸರಿಯಾಗಿ ಆಗದ ಕಾರಣ ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನವು ಅಸಾರವಾದುದ್ದು ಎಂಬ ಭಾವವು ಬರಬಹುದು. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ಒತ್ತಡವನ್ನು ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ವಿಚಾರದಲ್ಲಿ ಅನ್ಯರ ಹಸ್ತಕ್ಷೇಪ, ಮೇಲಧಿಕಾರಿಗಳಿಗೆ ಗುಟ್ಟಾಗಿ ನಿಮ್ಮ ಬಗ್ಗೆ ಚಾಡಿ ಮಾತುಗಳು ಒಂದಾದಮೇಲೊಂದು ಬರಬಹುದು.

ಸಿಂಹ ರಾಶಿ:

ವಿಳಂಬವಾದರೂ ತೀರ್ಮಾನ ಸರಿಯಾಗಿ ಬರಲಿ. ಮಕ್ಕಳ ವಿವಾಹದ ಚಿಂತೆಯು ಕಾಡಬಹುದು. ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶ ಬರುವುದು. ಸಕಾರಾತ್ಮಕ ಯೋಚನೆಯಿಂದ ಮುಂದಡಿ ಇಡಬೇಕಾದೀತು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ. ಹಣದ ಹೊಂದಾಣಿಕೆಗೆ ಭೂಮಾರಾಟ ಮಾಡಬೇಕಾಗುವುದು. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಇಂದು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ.

ಕನ್ಯಾ ರಾಶಿ:

ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವವಿರಲಿದೆ. ಇಷ್ಟದೇವರ ಕ್ಷೇತ್ರಕ್ಕೆ ತೆರಳುವಿರಿ. ವರ ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ಮರೆವು ನಿಮಗೆ ವರವಾದಂತೆ ಅನ್ನಿಸುವುದು. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿರ್ಧಾರ ಮಾಡುವಿರಿ. ತಾಯಿಯ ಆಸೆಯನ್ನು ಈಡೇರಿಸಲಾಗದು. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ನೀವು ತಲುಪುವ ಸ್ಥಾನಕ್ಕೆ ವಿಳಂಬವಾಗಿ ಹೋಗುವಿರಿ. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು.

ತುಲಾ ರಾಶಿ:

ಮಾಡಲು ಹೊರಟ ಕೆಲಸದಲ್ಲಿ ಸಂಪೂರ್ಣ ಯಶಸ್ಸು ನಿಮ್ಮದಾಗುವುದು. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ವ್ಯವಹಾರದಲ್ಲಿ ಇರುವಾಗ ಬೇರೆ ಯಾವುದನ್ನೂ ಪರಿಗಣಿಸಲಾರಿರಿ. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖಿಸುವಿರಿ. ಕುಟುಂಬವನ್ನು ಸಂತೋಷವಾಗಿಡಲು ಇಷ್ಟವಾಗುವುದು. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಲಾಗದು. ಸ್ಥಿರಾಸ್ತಿಯಲ್ಲಿ ಲಾಭವನ್ನು ಪಡೆಯಲು ತಂತ್ರವನ್ನು ಬಳಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು.

ವೃಶ್ಚಿಕ ರಾಶಿ:

ಇಂದು ಮಡದಿ, ಮಕ್ಕಳಿಂದಲೇ ಟೀಕೆಯನ್ನು ಕೇಳಬೇಕಾದೀತು. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಕುಟುಂಬಕ್ಕಾಗಿ ಮಾಡಿದ ಸಾಲವನ್ನು ತೀರಿಸಲು ಮತ್ತೆಲ್ಲೋ ಸಾಲ ಮಾಡಬೇಕಾದೀತು. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗಿ ಸ್ಪಂದಿಸುವ್ವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ನಿಮ್ಮ ದುರಭ್ಯಾಸವನ್ನು ಮಿತಿಯಲ್ಲಿ ಇರಿಸಿಕೊಳ್ಳಿ. ನಿಮ್ಮವರ ಬಗ್ಗೆ ಇರುವ ಕಲ್ಪನೆಯು ರೂಪವನ್ನು ಕಳೆದುಕೊಳ್ಳಬಹುದು.

ಧನು ರಾಶಿ:

ನಿಮ್ಮ ಕಣ್ಣು ಆಯಾಸವನ್ನು ಸ್ಪಷ್ಟವಾಗಿ ಹೇಳುವುದು. ಸಕಾರಾತ್ಮಕವಾಗಿ ಚಿಂತಿಸಿ ಕಾರ್ಯದಲ್ಲಿ ತೊಡಗಿಕೊಳ್ಳಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ಕಂಡು ಸಂತಸವಾಗಬಹುದು. ಸ್ಥಿರಾಸ್ತಿಯನ್ನು ಖರೀದಿಸಲು ಉತ್ತಮ ಕಾಲವಲ್ಲ. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವುದು ಬೇಡ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಮಕ್ಕಳು ನಿಮ್ಮ ಮಾತನ್ನು ವಿರೋಧಿಸಬಹುದು. ಭಕ್ತಿಯಿಂದ ಮನಸ್ಸು ನಿರ್ಮಲವಾಗಿ ತೋರುವುದು. ಸ್ಪರ್ಧೆಗೆ ನಿಂತರೆ ಯಾರನ್ನೂ ಸೋಲಿಸಬಲ್ಲಿರಿ. ಅಂತರಂಗವನ್ನು ಆದಷ್ಟು ಗೌಪ್ಯವಾಗಿ ಇಡುವುದು ಮುಖ್ಯ. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು.

ಮಕರ ರಾಶಿ:

ನಿಮ್ಮ ಸಮಸ್ಯೆಗಳಿಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡಬಹುದು. ಸಲಹೆಯನ್ನು ಏಕಚಿತ್ತದಿಂದ ಸ್ವೀಕರಿಸಿ, ನಿಮ್ಮ ವಿವೇಕದಿಂದ ಬಳಸಿಕೊಳ್ಳಿ. ಅನ್ಯರಿಂದ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸನ್ನಿವೇಶವು ಬರಬಹುದು. ನೋಡದೇ ಖರೀದಿಸಿದ ವಸ್ತುಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ಎಲ್ಲವೂ ನಿಮ್ಮಿಂದ ಆದರೂ ಹೇಳಿಕೊಳ್ಳುವಾಗ ಗೌಣವಾಗಿರಲಿ. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ತಂದೆಯಿಂದ ಧನಾಗಮನವನ್ನು ನಿರೀಕ್ಷಿಸುವಿರಿ. ಇಂದಿನ ಬೇಸರವನ್ನು ಕಳೆಯಲು ಒಂಟಿಯಾಗಿ ದೂರ ತೆರಳುವಿರಿ.

ಕುಂಭ ರಾಶಿ:

ಇಂದು ಕೇಳದೇ ಯಾರಿಗೂ ಉಪದೇಶ ನೀಡಲು ಹೋಗಬೇಡಿ. ಇಂದು ನಿಮ್ಮಲ್ಲಿ ಆತ್ಮಸ್ಥೈರ್ಯವು ಇರಲಿದೆ. ಮಾನಸಿಕವಾಗಿ ಸದೃಢರಾಗುವಿರಿ. ನೀವು ಅಂದುಕೊಂಡ ರೀತಿಯಲ್ಲಿ ಸಹೋದರಿಯರಿಂದ ಸಹಕಾರ ದೊರೆಯುವುದಿಲ್ಲ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಬಹುದು. ಕುಟುಂಬದಲ್ಲಿ ನಿಮ್ಮ ಬಗ್ಗೆ ಭಯವು ಇರಲಿದೆ. ಮಾತು ಎಷ್ಟೇ ಸಹೃದಯತೆಯಿಂದ ಇದ್ದರೂ ಕೇಳಿಸಿಕೊಳ್ಳುವ ಸಹೃದಯರು ಸಿಗುವುದಿಲ್ಲ. ಉದ್ವಿಗ್ನತೆಯು ಉಂಟಾದಾಗ ಏನನ್ನಾದರೂ ಮಾಡಿಕೊಳ್ಳುವಿರಿ.

ಮೀನ ರಾಶಿ:

ಇಂದು ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತತೆಯನ್ನು ಪಡೆಯುವಿರಿ. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ನಿಮ್ಮ ಕೆಲಸದಲ್ಲಿ ಆತ್ಮತೃಪ್ತಿಯಾಗುವಂತೆ ಮಾಡುವಿರಿ. ವಾಹನ ಚಲಾಯಿಸುವಾಗ ಉದ್ವೇಗ ಬೇಡ. ಏಕತಾನತೆಯ ಜೀವನವು ನಿಮಗೆ ಬೇಸರವನ್ನು ಕೊಟ್ಟಿದ್ದು, ಹೊಸತನ್ನು ನೀವು ಬಯಸುವಿರಿ. ಇಂದು ನೀವು ಹೊಸ ಹೂಡಿಕೆಗೆ ಮನಸ್ಸು ಮಾಡುವಿರಿ.

ಜನವರಿ 16,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಮಕರ, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಮೂಲಾ ಯೋಗ : ಧ್ರುವ, ಕರಣ : ವಣಿಜ, ಸೂರ್ಯೋದಯ – 06 – 53 am, ಸೂರ್ಯಾಸ್ತ – 06 – 14 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11-09 – 12:34, ಯಮಗಂಡ ಕಾಲ 15:24 – 16:49, ಗುಳಿಕ ಕಾಲ 08:19 – 09:44

-ಲೋಹಿತ ಹೆಬ್ಬಾರ್ – 8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರಿಗೆ ಆದಾಯ ಹೆಚ್ಚು ಮಾಡಿಕೊಳ್ಳಲು ಬಾಗಿಲು ತೆರೆದುಕೊಳ್ಳಲಿದೆ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ವೃತ್ತಿ ಅಥವಾ ಉದ್ಯೋಗಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಸಹಾಯ ಆಗುವಂಥ ಮಾಹಿತಿಗಳು ದೊರೆಯಲಿವೆ. ನಿಮ್ಮಲ್ಲಿ ಯಾರು ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಾ ಇದ್ದೀರಿ, ಅಂಥವರಿಗೆ ಪ್ರಭಾವಶಾಲಿ ಆದ ವ್ಯಕ್ತಿಯೊಬ್ಬರ ಮೂಲಕ ಹಲವು ಸಂಸ್ಥೆಗಳ ಸಂಪರ್ಕ ದೊರೆಯಲಿದ್ದು, ಆದಾಯದ ಪ್ರಮಾಣ ಹೆಚ್ಚು ಮಾಡಿಕೊಳ್ಳಲು ಬಾಗಿಲು ತೆರೆದುಕೊಳ್ಳಲಿದೆ. ಇನ್ನು ನಿಮ್ಮಲ್ಲಿ ಕೆಲವರು ಸಂಗಾತಿಯ ಸಲುವಾಗಿ ಕೆಲವು ದುಬಾರಿ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಅಚಾನಕ್ಕಾಗಿ ದೂರ ಪ್ರಯಾಣ ಮಾಡಬೇಕಾಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಪೊಂಜಿ ಯೋಜನೆಗಳಿಂದ ದೂರ ಇರುವುದು ಬಹಳ ಮುಖ್ಯ. ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ರಿಟರ್ನ್ಸ್ ಸಿಗುತ್ತದೆ ಎಂಬ ಆಸೆ ತೋರಿಸಿ, ನಿಮ್ಮ ಸ್ನೇಹಿತರೋ ಸಂಬಂಧಿಗಳೋ ನಿಮಗಿಂತ ಮೇಲಿನ ಹುದ್ದೆಯಲ್ಲಿ ಕೆಲಸ ಮಾಡುವಂಥವರೋ ಒತ್ತಾಯ ಮಾಡಿದಲ್ಲಿ ಅಂಥವುಗಳಿಂದ ದೂರ ಉಳಿಯುವುದು ಸವಾಲಾಗಲಿದೆ. “ಇಲ್ಲ” ಎಂಬುದನ್ನು ಗಟ್ಟಿಯಾಗಿ ಹೇಳಿ. ಬಾಯಿ ರುಚಿಗೆ ಬಿದ್ದು, ನಿಮ್ಮ ದೇಹ ಪ್ರಕೃತಿಗೆ ಒಗ್ಗದ ಖಾದ್ಯ- ತಿನಿಸುಗಳನ್ನು ಸೇವಿಸಿ, ಕೆಲವು ದೈಹಿಕ ತೊಂದರೆ ಅನುಭವಿಸುವಂತೆ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಹಳೇ ಸ್ನೇಹ- ಪರಿಚಯಗಳನ್ನು ಮತ್ತೊಮ್ಮೆ ಮುಂದುವರಿಸಲು ಬೇಕಾದ ವೇದಿಕೆಯೊಂದು ಈ ದಿನ ನಿಮಗೆ ಸಿಗಲಿದೆ. ಹಣದ ವಿಚಾರಕ್ಕೆ ಸೋದರ- ಸೋದರಿಯರ ಜೊತೆಗೆ ಇರುವ ಅಭಿಪ್ರಾಯ ಭೇದಗಳನ್ನು ಬಗೆಹರಿಸಿಕೊಳ್ಳಲು ತಂದೆ- ತಾಯಿ ಸಹಾಯ ಮಾಡಲಿದ್ದಾರೆ. ದೂರ ಪ್ರಯಾಣ ಮಾಡುವುದರಿಂದ ನಿಮ್ಮಲ್ಲಿ ಕೆಲವರಿಗೆ ದೈಹಿಕವಾಗಿ ಒತ್ತಡ ಏರ್ಪಡಲಿದೆ. ಇತರರ ವೈಯಕ್ತಿಕ ವಿಷಯಗಳಿಗೆ ತಲೆ ಹಾಕಬೇಡಿ. ಸಿವಿಲ್ ಎಂಜಿನಿಯರ್ ಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಬರಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಬಹಳ ಪ್ರೀತಿಸುವ ವ್ಯಕ್ತಿಯನ್ನ ಈ ದಿನ ತುಂಬ ನೆನಪು ಮಾಡಿಕೊಳ್ಳಲಿದ್ದೀರಿ – Kannada News | Numerology Prediction: Birth Numbers 4,5,6 Horoscope for January 16

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಶೀತ, ಕಫ, ಕೆಮ್ಮು ಈ ರೀತಿಯ ತೊಂದರೆಗಳು ಜಾಸ್ತಿ ಆಗಲಿದ್ದು, ವೈದ್ಯರಿಗೆ ತೋರಿಸಿದ ನಂತರದಲ್ಲಿಯೂ ಹತೋಟಿಗೆ ಬಾರದೆ ಆತಂಕಕ್ಕೆ ಕಾರಣ ಆಗಲಿದೆ. ಹೆಣ್ಣುಮಕ್ಕಳ ಜೊತೆ ಮಾತನಾಡುವಾಗ, ಅದರಲ್ಲಿಯೂ ನಿಮ್ಮ ಸಹೋದ್ಯೋಗಿಗಳ ಜೊತೆಗೆ ಮಾತನಾಡುವಾಗ ಬಳಕೆ ಮಾಡುವ ಪದಗಳ ಬಗ್ಗೆ ಜಾಗ್ರತೆಯಿಂದ ಇರಿ. ಅತ್ಯುತ್ಸಾಹದಲ್ಲೋ ಅಥವಾ ತಮಾಷೆ ಎಂದುಕೊಂಡು ನೀವಾಡಿದ ಮಾತುಗಳಿಂದ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ತನಕ ಹೋಗಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನೀವು ಒಪ್ಪಿಸಿದ ಕೆಲಸಗಳನ್ನು ಆಗ- ಈಗ ಎಂದು ಮುಂದಕ್ಕೆ ಹಾಕುತ್ತಾ ಇರುವವರ ಬಳಿ ಗೆರೆ ಕೊಯ್ದಂತೆ ಮಾತನಾಡಲಿದ್ದೀರಿ. ಒಂದು ವೇಳೆ ಈಗಾಗಲೇ ಆ ಕೆಲಸದ ಸಲುವಾಗಿ ಅಡ್ವಾನ್ಸ್ ರೂಪದಲ್ಲಿ ಹಣವನ್ನು ನೀಡಿದ್ದಲ್ಲಿ ಅದನ್ನು ಹಿಂತಿರುಗಿಸುವಂತೆ ಕೇಳಲಿದ್ದೀರಿ. ನಿಮ್ಮ ಸ್ನೇಹಿತರ ಪೈಕಿ ಒಬ್ಬರು ತಮಗೆ ಸಾಲದ ಅಗತ್ಯ ಇದ್ದು, ಜಾಮೀನು ನೀವು ನೀಡಬೇಕು ಎಂದು ಕೇಳಿಕೊಂಡು ಬರಬಹುದು. ಆಟೋ ಚಾಲಕರು ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಹೆಚ್ಚಿನ ಮೊತ್ತದ ದಂಡವನ್ನು ಪಾವತಿಸುವಂತೆ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ರಾಜಕಾರಣಿಗಳಿಗೆ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಮಹತ್ವಾಕಾಂಕ್ಷೆಯಿಂದ ನಡೆಸುವಂಥ ಸಮಾವೇಶದ ಮುಂದಾಳತ್ವ ನೀವೇ ವಹಿಸಬೇಕು ಎಂದು ತಿಳಿಸಲಿದ್ದಾರೆ. ನೀವು ಬಹಳ ಪ್ರೀತಿಸುವ ವ್ಯಕ್ತಿಗಳನ್ನು ಈ ದಿನ ತುಂಬ ನೆನಪು ಮಾಡಿಕೊಳ್ಳಲಿದ್ದೀರಿ. ಬಿಡುವೇ ಸಿಗದಷ್ಟು ಕೆಲಸಗಳಲ್ಲಿ ಮುಳುಗಿ ಹೋಗುವಂತೆ ಆಗಲಿದ್ದು, ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಸಹ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ. ಮಾರ್ಕೆಟಿಂಗ್- ಜಾಹೀರಾತು ವಿಭಾಗದಲ್ಲಿ ಇರುವವರಿಗೆ ಬಡ್ತಿ ಸಿಗುವ ಮಾಹಿತಿ ಸಿಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link