Category Archives: Blog

Your blog category

‘ನಾನು ಅಷ್ಟು ಚೀಪ್ ಅಲ್ಲ, ಸಿಎಂ ವಿಜಯ್ ಮೇಲೆ ಅಸೂಯೆ ಇಲ್ಲ’: ರಜನಿಕಾಂತ್ ಸ್ಪಷ್ಟನೆ – Kannada News | Rajinikanth clarifies rumors of jealousy after Vijay became Tamil Nadu CM

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ (Thalapathy Vijay) ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ ಬಹುಮತ ಪಡೆದು ಸರ್ಕಾರ ರಚಿಸಿದ ಬೆನ್ನಲ್ಲೇ, ಸೂಪರ್‌ಸ್ಟಾರ್ ರಜನಿಕಾಂತ್ ಅವರ ನಡೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದವು. ಚುನಾವಣೆಯಲ್ಲಿ ಸೋಲುಂಡ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರನ್ನು ರಜನಿಕಾಂತ್ ಭೇಟಿಯಾಗಿದ್ದನ್ನು ನೋಡಿ ಕೆಲವರು ಟೀಕೆ ಮಾಡಿದ್ದರು. ವಿಜಯ್ ಸಿಎಂ ಆಗಿರುವುದಕ್ಕೆ ರಜನಿ ಅವರಿಗೆ ಇಷ್ಟವಿಲ್ಲ ಎಂದು ಹಲವರು ಬಿಂಬಿಸಿದ್ದರು. ಸದ್ಯ ಈ ಎಲ್ಲಾ ವದಂತಿಗಳಿಗೆ ರಜನಿಕಾಂತ್ (Rajinikanth) ಭಾನುವಾರ (ಮೇ 17) ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ.

ಚೆನ್ನೈನ ಪೋಯಿಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಜನಿಕಾಂತ್, ‘ಚುನಾವಣೆಯ ನಂತರ ನನ್ನ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ. ನಾನು ಈಗ ಪ್ರತಿಕ್ರಿಯಿಸದಿದ್ದರೆ ಆ ಸುಳ್ಳುಗಳೇ ನಿಜವಾಗಿಬಿಡುತ್ತವೆ. ಚುನಾವಣಾ ಫಲಿತಾಂಶದ ನಂತರ ನಾನು ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿದ್ದನ್ನು ಟೀಕಿಸಲಾಗುತ್ತಿದೆ. ಆದರೆ ನಮ್ಮ ಸ್ನೇಹ ರಾಜಕೀಯಕ್ಕೂ ಮೀರಿದ್ದು. ಸ್ಟಾಲಿನ್ ಸೋತಿದ್ದಕ್ಕೆ ನನಗೆ ಬೇಸರವಾಗಿತ್ತು, ಹಾಗಾಗಿ ಒಬ್ಬ ಸ್ನೇಹಿತನಾಗಿ ಅವರನ್ನು ಭೇಟಿಯಾಗಿದ್ದೆ’ ಎಂದು ವಿವರಿಸಿದರು.

ನಟ ವಿಜಯ್ ಸಿಎಂ ಆಗಿದ್ದಕ್ಕೆ ರಜನಿಕಾಂತ್ ಅಸೂಯೆ ಪಡುತ್ತಿದ್ದಾರೆ ಮತ್ತು ಅವರಿಗೆ ಶುಭ ಕೋರಿಲ್ಲ ಎಂಬ ಆರೋಪಗಳಿಗೆ ಉತ್ತರಿಸಿದ ಅವರು, ‘ವಿಜಯ್ ಸಿಎಂ ಆದ ಸುದ್ದಿ ಕೇಳಿ ನನಗೆ ಭಾರಿ ಆಶ್ಚರ್ಯ ಮತ್ತು ಅಪಾರ ಸಂತೋಷವಾಯಿತು. ಅವರು ಗೆಲ್ಲುತ್ತಲೇ ನಾನು ಎಕ್ಸ್ (ಟ್ವಿಟರ್) ಖಾತೆಯ ಮೂಲಕ ಶುಭ ಹಾರೈಸಿದ್ದೆ. ನಾನು ರಾಜಕೀಯದಲ್ಲೇ ಇಲ್ಲದಿರುವಾಗ ನನಗೆ ವಿಜಯ್ ಮೇಲೆ ಏಕೆ ಅಸೂಯೆ ಇರುತ್ತದೆ? ಒಂದು ವೇಳೆ ನನ್ನ ಸಮಕಾಲೀನರಾದ ಕಮಲ್ ಹಾಸನ್ ಸಿಎಂ ಆಗಿದ್ದರೆ ನನಗೆ ಒಂದು ಚೂರು ಅಸೂಯೆ ಆಗಬಹುದಿತ್ತೇನೋ. ವಿಜಯ್‌ಗೂ ನನಗೂ 25 ವರ್ಷಗಳ ತಲೆಮಾರಿನ ಅಂತರವಿದೆ, ನಮ್ಮಿಬ್ಬರ ನಡುವೆ ಸ್ಪರ್ಧೆ ಎಲ್ಲಿಂದ ಬರುತ್ತದೆ?’ ಎಂದು ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ರಜನಿಕಾಂತ್, ‘ಅನಗತ್ಯವಾಗಿ ಮಾತನಾಡಲು ರಜನಿ ಅಷ್ಟು ಕೀಳು ಮಟ್ಟದ ಅಥವಾ ಚೀಪ್ ವ್ಯಕ್ತಿಯಲ್ಲ. ವಿಜಯ್ ಅವರು 52ನೇ ವಯಸ್ಸಿನಲ್ಲಿ ಎಂಜಿಆರ್ ಮತ್ತು ಎನ್‌ಟಿಆರ್ ಅವರಿಗಿಂತಲೂ ದೊಡ್ಡ ಸಾಧನೆ ಮಾಡಿದ್ದಾರೆ. ಕೇಂದ್ರದಲ್ಲಿರುವ ಬಿಜೆಪಿ ಹಾಗೂ ಇಲ್ಲಿನ ಎರಡು ಪ್ರಮುಖ ದ್ರಾವಿಡ ಪಕ್ಷಗಳನ್ನು ಎದುರಿಸಿ ಅವರು ಗೆದ್ದಿದ್ದಾರೆ. ಇದು ಸಾಮಾನ್ಯ ವಿಷಯವಲ್ಲ. ಅವರ ಮೇಲೆ ನನಗೆ ಯಾವುದೇ ಅಸೂಯೆ ಇಲ್ಲ. ಬದಲಿಗೆ ದೊಡ್ಡ ನಿರೀಕ್ಷೆಗಳಿವೆ. ನನ್ನ ಬೆಸ್ಟ್ ವಿಶಸ್ ಯಾವಾಗಲೂ ವಿಜಯ್ ಜೊತೆ ಇರುತ್ತದೆ’ ಎಂದು ತಲೈವಾ ಹೊಗಳಿದ್ದಾರೆ.

ಇದನ್ನೂ ಓದಿ: ಸಿಎಂ ವಿಜಯ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಸಿಎಂ ಆಗಿರುವ ವಿಜಯ್ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಉಹಾಪೋಹಗಳಿಗೆ ರಜನಿಕಾಂತ್ ಅವರ ಈ ಹೇಳಿಕೆಯು ಸಂಪೂರ್ಣ ಬ್ರೇಕ್ ಹಾಕಿದೆ. ಸುದ್ದಿಗೋಷ್ಠಿಯ ಮೂಲಕ ಅವರು ಎಲ್ಲ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯ ಕೊಲೆ; ಸಂಬಂಧಿಕರೇ ಹಣ ದೋಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇಂಡೋನೇಷ್ಯಾದ ಪೆಕನ್‌ಬಾರು ನಗರದ ರುಂಬೈನಲ್ಲಿ ದುಮರಿಸ್ ಬೋರು ಸಿಟಿಯೊ (60) ಎಂಬ ವೃದ್ಧೆಯನ್ನು ಕೊಲೆ ಮಾಡಿ ದರೋಡೆ ಮಾಡಿರುವುದು ವರದಿಯಾಗಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಘಟನಾ ಸ್ಥಳದ ಮರು ಪರಿಶೀಲನೆ ನಡೆಸಿ ನಾಲ್ಕು ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಮರದ ದಿಂಬಿನಿಂದ ವೃದ್ಧೆಯ ಮೇಲೆ ಹಲ್ಲೆ ನಡೆಸಿರುವುದು ಮತ್ತು ಕ್ಯಾಮೆರಾಗಳನ್ನು ಧ್ವಂಸಗೊಳಿಸಿರುವುದು ಪತ್ತೆಯಾಗಿದೆ. ಸಿಸಿಟಿವಿ ಮತ್ತು ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಮೃತರ ಸಂಬಂಧಿಯೇ ಆದ ‘AF’ ಎಂಬ ಮಹಿಳೆಯ ಮೇಲೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಸದ್ಯ ಆಕೆ ತಲೆಮರೆಸಿಕೊಂಡಿದ್ದು, ಪೊಲೀಸರು ಆಕೆ ಮತ್ತು ಉಳಿದ ನಾಲ್ವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

RCB ಪಂದ್ಯಕ್ಕೆ 80,000 ರೂ: ಐಪಿಎಲ್ ಟಿಕೆಟ್ ದಂಧೆ ಬಯಲು! – Kannada News | IPL 2026 Ticket Scam: rs 80,000 For RCB’s Match, DDCA Official Involved

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ 2026 ಪಂದ್ಯಗಳ ಉಚಿತ ಪಾಸ್‌ಗಳನ್ನು (Complimentary Passes) ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ದೆಹಲಿ ಪೊಲೀಸರು ಪತ್ತೆಹಚ್ಚಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಪಂದ್ಯ ವೀಕ್ಷಿಸಲು ಇರುವ ಭಾರಿ ಬೇಡಿಕೆಯನ್ನು ಬಳಸಿಕೊಂಡು, ಕೇವಲ ಒಂದು ಟಿಕೆಟ್ ಅನ್ನು ಬರೋಬ್ಬರಿ ₹80,000 ವರೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಈ ದಂಧೆಯ ಹಿಂದೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (DDCA) ಉನ್ನತ ಅಧಿಕಾರಿಯೊಬ್ಬರ ಕೈವಾಡ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಾಸ್ಟರ್ ಮೈಂಡ್ ಯಾರು?

  •  ಅಧಿಕಾರಿಯ ಕೈವಾಡ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (DDCA) ಹಿರಿಯ ಅಧಿಕಾರಿಯೊಬ್ಬರು ಈ ದಂಧೆಯ ಮಾಸ್ಟರ್‌ಮೈಂಡ್ ಆಗಿದ್ದು, ಸಾರ್ವಜನಿಕರಿಗೆ ಸಿಗಬೇಕಾದ ಪಾಸ್‌ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರು ಪೆಟ್ರೋಲ್ ಬಂಕ್ ಉದ್ಯೋಗಿಯೊಬ್ಬರ ಮೂಲಕ ಈ ಟಿಕೆಟ್‌ಗಳನ್ನು ರಸ್ತೆ ಬದಿಯ ಏಜೆಂಟರಿಗೆ ತಲುಪಿಸುತ್ತಿದ್ದರು.
  • ಬೇಡಿಕೆಗೆ ತಕ್ಕಂತೆ ದರ: ಆಟಗಾರರ ಜನಪ್ರಿಯತೆಗೆ ಅನುಗುಣವಾಗಿ ಟಿಕೆಟ್ ದರವನ್ನು ₹8,000 ರಿಂದ ₹80,000 ರವರೆಗೆ ನಿಗದಿಪಡಿಸಲಾಗಿತ್ತು. ವಿರಾಟ್ ಕೊಹ್ಲಿ ಆಡುವ RCB ಪಂದ್ಯಗಳಿಗೆ ಗರಿಷ್ಠ ₹80,000 ವರೆಗೆ ವಸೂಲಿ ಮಾಡಲಾಗುತ್ತಿತ್ತು.

  • ಮೃತ ಸದಸ್ಯರ ಹೆಸರಲ್ಲಿ ಪಾಸ್: ಸ್ಟೇಡಿಯಂನ ಸಾಮಾನ್ಯ ವಿತರಣಾ ವ್ಯವಸ್ಥೆಯನ್ನು ಬೈಪಾಸ್ ಮಾಡಿ, ಪ್ರತಿ ಪಂದ್ಯಕ್ಕೆ 1,000 ರಿಂದ 1,200 ಉಚಿತ ಪಾಸ್‌ಗಳನ್ನು ಸೈಡ್ ಮಾಡಲಾಗುತ್ತಿತ್ತು. ದಂಧೆಕೋರರು ಮೃತಪಟ್ಟ ಅಥವಾ ವಿದೇಶದಲ್ಲಿರುವ (NRI) ಸದಸ್ಯರ ಹೆಸರಿನಲ್ಲೂ ಪಾಸ್‌ಗಳನ್ನು ಪಡೆದು ಮಾರಾಟ ಮಾಡಿದ್ದಾರೆ.

ಇದನ್ನೂ  ಓದಿ: ವಿರಾಟ್ ಕೊಹ್ಲಿ ಯಾರಿಗೆ ಏನು ಸಾಬೀತುಪಡಿಸಬೇಕು? ಅಶ್ವಿನ್ ನೇರ ಪ್ರಶ್ನೆ!

  • ಪೊಲೀಸ್ ಕಾರ್ಯಾಚರಣೆ: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ವೇಳೆ ಕ್ರೀಡಾಂಗಣದ ಹೊರಗೆ ಟಿಕೆಟ್ ಮಾರುತ್ತಿದ್ದ ಮೂವರನ್ನು ಪೊಲೀಸರು ರೆಡ್-ಹ್ಯಾಂಡ್ ಆಗಿ ಹಿಡಿದಾಗ ಈ ಹಗರಣ ಬಯಲಾಗಿದೆ. ಈ ಸಂಬಂಧ ಈಗಾಗಲೇ ನಾಲ್ಕು ಡಿಡಿಸಿಎ ಅಧಿಕಾರಿಗಳನ್ನು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ.

ನಿಯಮಗಳ ದುರುಪಯೋಗ:

ಐಪಿಎಲ್ ನಿಯಮಗಳ ಪ್ರಕಾರ, ಪಂದ್ಯ ಆಯೋಜಿಸುವ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕ್ರೀಡಾಂಗಣದ ಒಟ್ಟು ಆಸನ ಸಾಮರ್ಥ್ಯದ ಶೇ. 10 ರಿಂದ 15 ರಷ್ಟು ಟಿಕೆಟ್‌ಗಳನ್ನು ಉಚಿತ ಪಾಸ್‌ಗಳಾಗಿ ನೀಡಬೇಕಾಗುತ್ತದೆ. ದೆಹಲಿ ಸ್ಟೇಡಿಯಂನಲ್ಲಿ ಪ್ರತಿ ಪಂದ್ಯಕ್ಕೆ ಡಿಡಿಸಿಎಗೆ ಸುಮಾರು 6,000 ಪಾಸ್‌ಗಳು ಸಿಗುತ್ತವೆ. ಆದರೆ ಅರ್ಹರಿಗೆ ತಲುಪಬೇಕಾದ ಈ ಪಾಸ್‌ಗಳ ಪೈಕಿ ಐದನೇ ಒಂದು ಭಾಗವನ್ನು ಬ್ಲಾಕ್ ಮಾರ್ಕೆಟ್‌ಗೆ ತಳ್ಳಲಾಗಿತ್ತು.

ಈ ಹಿಂದೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಕ್ಯಾಂಟೀನ್ ಸಿಬ್ಬಂದಿ ಮತ್ತು ಕೆಎಸ್‌ಸಿಎ (KSCA) ಅಧಿಕಾರಿಯೊಬ್ಬರು ಆರ್‌ಸಿಬಿ ಪಂದ್ಯದ ಟಿಕೆಟ್‌ಗಳನ್ನು ಬ್ಲಾಕ್‌ನಲ್ಲಿ ಮಾರಿ ಸಿಕ್ಕಿಬಿದ್ದಿದ್ದರು. ಈಗ ದೆಹಲಿಯಲ್ಲೂ ಇಂತಹುದೇ ದೊಡ್ಡ ಹಗರಣ ಬೆಳಕಿಗೆ ಬಂದಿದೆ.

ಕಾನೂನು ಸೆಕ್ಷನ್‌ಗಳು:

ಈ ಐಪಿಎಲ್ ಟಿಕೆಟ್ ದಂಧೆಯ ವಿರುದ್ಧ ಹೊಸ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಈ ಕೆಳಗಿನ ಕಠಿಣ ಸೆಕ್ಷನ್‌ಗಳನ್ನು ಹೂಡಲಾಗಿದೆ…

ಸೆಕ್ಷನ್ 316(2) BNS (ಕ್ರಿಮಿನಲ್ ನಂಬಿಕೆ ದ್ರೋಹ): ಸಾರ್ವಜನಿಕರಿಗೆ ಅಥವಾ ಅರ್ಹ ಸದಸ್ಯರಿಗೆ ವಿತರಿಸಬೇಕಾದ ಉಚಿತ ಪಾಸ್‌ಗಳನ್ನು ಸ್ವಂತ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಡಿಡಿಸಿಎ (DDCA) ಅಧಿಕಾರಿಗಳ ವಿರುದ್ಧ ಈ ಸೆಕ್ಷನ್ ಹಾಕಲಾಗಿದೆ.

ಸೆಕ್ಷನ್ 318(2) ಮತ್ತು 319 BNS (ವಂಚನೆ ಮತ್ತು ನಕಲಿ ವೇಷ ಧರಿಸುವುದು): ಬಂಧಿತ ಆರೋಪಿಗಳು ತಾವು “ಡಿಡಿಸಿಎ ಸಂಸ್ಥೆಯ ಅಧಿಕೃತ ಪ್ರತಿನಿಧಿಗಳು” ಎಂದು ಸುಳ್ಳು ಹೇಳಿ ಕ್ರಿಕೆಟ್ ಪ್ರೇಮಿಗಳನ್ನು ನಂಬಿಸಿ ವಂಚಿಸಿದ್ದಕ್ಕಾಗಿ ಈ ಸೆಕ್ಷನ್ ಅನ್ವಯಿಸಲಾಗಿದೆ.

ಸೆಕ್ಷನ್ 61(2) BNS (ಅಪರಾಧ ಸಂಚು / ಕ್ರಿಮಿನಲ್ ಪಿತೂರಿ): ಉನ್ನತ ಅಧಿಕಾರಿಗಳು, ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ದಲ್ಲಾಳಿಗಳು ಒಟ್ಟಾಗಿ ಸೇರಿ ಯೋಜಿತವಾಗಿ ಬ್ಲಾಕ್ ಮಾರ್ಕೆಟ್ ದಂಧೆ ನಡೆಸಲು ನೆಟ್‌ವರ್ಕ್ ರೂಪಿಸಿದ್ದಕ್ಕಾಗಿ ಈ ಸೆಕ್ಷನ್ ಹಾಕಲಾಗಿದೆ.

ಸೆಕ್ಷನ್ 3(5) BNS (ಸಾಮಾನ್ಯ ಉದ್ದೇಶ): ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಒಂದೇ ಕ್ರಿಮಿನಲ್ ಉದ್ದೇಶದಿಂದ ಒಟ್ಟಾಗಿ ಅಪರಾಧ ಎಸಗಿರುವುದನ್ನು ಇದು ಸೂಚಿಸುತ್ತದೆ. ಹೀಗಾಗಿ ಈ ಸೆಕ್ಷನ್ ಅನ್ನು ಅನ್ವಯಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟ್ ಅಭಿಮಾನಿಗಳ ನಿಷ್ಕಲ್ಮಶ ಪ್ರೀತಿ ಮತ್ತು ಕ್ರೇಝ್ ಅನ್ನೇ ಬಂಡವಾಳ ಮಾಡಿಕೊಂಡು ನಡೆಯುತ್ತಿದ್ದ ಬೃಹತ್ ದಂಧೆಯ ಮುಖವಾಡ ಈಗ ಕಳಚಿದೆ. ಸಾಮಾನ್ಯ ಜನರಿಗೆ ಸಿಗಬೇಕಾದ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್‌ಗೆ ತಳ್ಳಿ, ₹80,000 ವರೆಗೆ ಸುಲಿಗೆ ಮಾಡುತ್ತಿದ್ದ ಈ ಜಾಲದಲ್ಲಿ ಸ್ವತಃ ಕ್ರಿಕೆಟ್ ಮಂಡಳಿಯ (DDCA) ಅಧಿಕಾರಿಗಳೇ ಭಾಗಿಯಾಗಿರುವುದು ವ್ಯವಸ್ಥೆಯ ದುರಂತ ಎನ್ನದೇ ವಿಧಿಯಿಲ್ಲ.

Source link

ರೈಲ್ವೇ ಪ್ರಯಾಣಿಕರಿಗೆ ಗುಡ್​​ನ್ಯೂಸ್​​: ಬೆಂಗಳೂರು, ಮುಂಬೈ ಎಕ್ಸ್​​ಪ್ರೆಸ್​​ ಟ್ರೈನ್​​ಗೆ ಹಸಿರು ನಿಶಾನೆ – Kannada News | New Bengaluru Mumbai Express: Two Day Weekly Service Starts for Travelers

ಬೆಂಗಳೂರು, ಮುಂಬೈ ಎಕ್ಸ್ಪ್ರೆಸ್ ಟ್ರೈನ್​​ಗೆ ಹಸಿರು ನಿಶಾನೆImage Credit source: Tv9 Kannada

ಬೆಂಗಳೂರು, ಮೇ 17: ಬೆಂಗಳೂರು-ಮುಂಬೈ ನಡುವೆ ಸಂಚಾರ ಮಾಡಲಿರುವ ಹೊಸ ಎಕ್ಸ್​​ಪ್ರೆಸ್​​ ರೈಲಿಗೆ ಬೈಯ್ಯಪ್ಪನಹಳ್ಳಿ ಬಳಿಯ ಎಸ್ಎಂವಿಟಿ ರೈಲ್ವೇ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ವರ್ಚುವಲ್​​ ಮೂಲಕ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ರೈಲ್ವೇ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಸಂಸದರಾದ ಪಿಸಿ ಮೋಹನ್ ರೈಲಿಗೆ ಹಸಿರು ನಿಶಾನೆ ತೋರಿದ್ದಾರೆ. ಬೆಂಗಳೂರು ಟು ಮುಂಬೈಗೆ ಸಂಚರಿಸುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಇಲಾಖೆ ಈ ಹೊಸ ರೈಲನ್ನು ಘೋಷಿಸಿತ್ತು.

ವಾರದಲ್ಲಿ ಎರಡು ದಿನ ಸಂಚಾರ

ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​​ನಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್​​ ನಡುವೆ
ವಾರಕ್ಕೆ ಎರಡು ದಿನ ಬೆಂಗಳೂರು ಟು ಮುಂಬೈ ನಡುವೆ ಈ ಎಕ್ಸ್​​ಪ್ರೆಸ್​​ ರೈಲು ಸಂಚಾರ ‌ಮಾಡಲಿದೆ. ಶನಿವಾರ ಮತ್ತು ಮಂಗಳವಾರದಂದು ಬೆಂಗಳೂರಿನಿಂದ ಮುಂಬೈಗೆ, ಭಾನುವಾರ ಮತ್ತು ಬುಧವಾರ ಮುಂಬೈನಿಂದ ಬೆಂಗಳೂರಿಗೆ ಓಡಾಟ ನಡೆಸಲಿದೆ. ಬೆಂಗಳೂರು, ಉತ್ತರ ಕರ್ನಾಟಕದ ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಮಹಾರಾಷ್ಟ್ರದ ಪುಣೆ, ಮುಂಬೈ ನಗರಗಳ ನಡುವೆ ಸಂಪರ್ಕ ಕಲ್ಪಿಸಲಿದೆ. ಈ ರೈಲು 17 ಕೋಚ್​​ಗಳನ್ನು ಹೊಂದಿದ್ದು, ಒಂದು ಎಸಿ 2-ಟೈರ್, ನಾಲ್ಕು ಎಸಿ 3-ಟೈರ್, ಆರು ಸ್ಲೀಪರ್ ಮತ್ತು ನಾಲ್ಕು ಸಾಮಾನ್ಯ ದರ್ಜೆಯ ಬೋಗಿಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ದರ ಏರಿಕೆ ಬಿಸಿ​​; ಸರ್ಕಾರದ ಮೊರೆ ಹೋದ ಆಟೋ ಚಾಲಕರು

ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಬಂದ ಸೋಮಣ್ಣ

ಪೆಟ್ರೋಲ್ ಮಿತ ಬಳಕೆ, ಚಿನ್ನ ಖರೀದಿಸದಂತೆ ಮೋದಿ ಕರೆ ಹಿನ್ನೆಲೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಬಂದಿದ್ದಾರೆ. ಎಂ.ಜಿ.ರಸ್ತೆ ನಿಲ್ದಾಣದಿಂದ ಸ್ವಾಮಿ ವಿವೇಕಾನಂದ ನಿಲ್ದಾಣದವರೆಗೆ ಮೆಟ್ರೋ ಪ್ರಯಾಣ ಮಾಡಿದ ಸಚಿವರು, ಅಲ್ಲಿಂದ SMVT ರೈಲು ನಿಲ್ದಾಣದವರೆಗೆ ಎಲೆಕ್ಟ್ರಿಕ್ ಬೈಕ್​ನಲ್ಲಿ ಪ್ರಯಾಣಿಸಿ ಗಮನ ದೆಳೆದಿದ್ದಾರೆ. ಈ ವೇಳೆ ವಿ.ಸೋಮಣ್ಣಗೆ ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಜೊತೆಯಾಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:39 am, Sun, 17 May 26

Source link

ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ, ಇಂಧನ ಮಾರಾಟ ಶೇ.50ರಷ್ಟು ಕುಸಿತ – Kannada News | PM Modis Call for Economic Patriotism Sees Sharp Drop in Bengaluru Gold and Fuel Consumption

ಬೆಂಗಳೂರು, ಮೇ 17: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಹಿತಾಸಕ್ತಿ ಕಾಪಾಡಲು ನೀಡಿರುವ ಕರೆಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ ಮತ್ತು ಇಂಧನ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ನಗರದಲ್ಲಿ ಚಿನ್ನ ಹಾಗೂ ಬೆಳ್ಳಿ ಮಾರಾಟವು ಶೇಕಡ 50ರಷ್ಟು ಕಡಿಮೆಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟವು ಸಹ ಕೊಂಚ ಇಳಿಕೆಯನ್ನು ಕಂಡಿದೆ. ಬಂಕ್‌ಗಳಲ್ಲಿ ಪ್ರತಿದಿನ 150 ರಿಂದ 250 ಲೀಟರ್ ಇಂಧನ ಮಾರಾಟ ಕಡಿಮೆಯಾಗಿದ್ದು, ನಾಗರಿಕರು ತಮ್ಮ ಸ್ವಂತ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಮೆಟ್ರೋ ಮತ್ತು ಸಾರಿಗೆ ಬಸ್‌ಗಳತ್ತ ಮುಖ ಮಾಡಿದ್ದಾರೆ. ಆಭರಣ ಪ್ರಿಯರು ಸಹ ಚಿನ್ನಾಭರಣ ಖರೀದಿಯನ್ನು ಕಡಿಮೆ ಮಾಡಿಕೊಂಡಿದ್ದು, ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಮದುವೆ ಸೇರಿದಂತೆ ಅನಿವಾರ್ಯ ಕಾರ್ಯಕ್ರಮಗಳಿಗಾಗಿ ತಾಳಿ ಬೊಟ್ಟು, ಉಂಗುರಗಳಂತಹ ಅಗತ್ಯ ಚಿನ್ನಾಭರಣಗಳನ್ನು ಮಾತ್ರ ಜನರು ಖರೀದಿಸುತ್ತಿದ್ದಾರೆ ಎಂದು ವರ್ತಕರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸುಧಾಕರ್ ನುಡಿ ನಮನ ಕಾರ್ಯಕ್ರಮದಲ್ಲಿ ಭಾವುಕರಾದ ಶಾಸಕ ರಘುಮೂರ್ತಿ!

ಚಿತ್ರದುರ್ಗ, ಮೇ 17: ಚಳ್ಳಕೆರೆಯಲ್ಲಿ ನಡೆದ ದಿವಂಗತ ಶಾಸಕ ಡಿ. ಸುಧಾಕರ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಹಾಲಿ ಶಾಸಕ ಟಿ. ರಘುಮೂರ್ತಿ ಭಾವುಕರಾಗಿ ಮಾತನಾಡಿದ್ದಾರೆ. ಡಿ. ಸುಧಾಕರ್ ಅವರೊಂದಿಗಿನ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಅವರಿಬ್ಬರ ನಡುವೆ ಸಹೋದರ ಸಂಬಂಧವಿತ್ತು ಎಂದು ರಘುಮೂರ್ತಿ ಸ್ಮರಿಸಿಕೊಂಡರು. 2008ರಲ್ಲಿ ತಾವು ಶಾಸಕರಾಗಲು ಬಂದ ದಿನಗಳಿಂದ ಸುಧಾಕರ್ ಅವರೊಂದಿಗಿನ ಸಂಪರ್ಕವನ್ನು ನೆನಪಿಸಿಕೊಂಡರು.

 

 

Source link

ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್; ವಿಡಿಯೋ ನೋಡಿ – Kannada News | Actress Rachita Ram offers Koragajja Daiva Kola Seva at Bantwal

ನಟಿ ರಚಿತಾ ರಾಮ್ (Rachita Ram) ಅವರು ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷಗಳು ಕಳೆದಿವೆ. ಈಗಲೂ ಅವರಿಗೆ ಅಷ್ಟೇ ಬೇಡಿಕೆ ಇದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದಿಂದಲೂ ಅವರಿಗೆ ಅವಕಾಶಗಳು ಬರುತ್ತಿವೆ. ರಚಿತಾ ಅವರು ದೈವ ಭಕ್ತೆ ಕೂಡ ಹೌದು. ಈಗ ಅವರು ಕೊರಗಜ್ಜ ದೈವದ ಕೋಲ ಸೇವೆಯಲ್ಲಿ ಭಾಗಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ (Koragajja) ಸನ್ನಿಧಿಯಲ್ಲಿ ರಚಿತಾ ರಾಮ್ ಅವರು ಕೋಲ ಸೇವೆ ನೀಡಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿ ಕೋಲ ಸೇವೆಯಲ್ಲಿ ಭಾಗಿಯಾದ ರಚಿತಾ ರಾಮ್ ಅವರ ವಿಡಿಯೋ ಲಭ್ಯವಾಗಿದೆ. ಧ್ರುವ ಸರ್ಜಾ ಜೊತೆ ‘ಕ್ರಿಮಿನಲ್’ ಹಾಗೂ ಸತೀಶ್ ನೀನಾಸಂ ಜೊತೆ ‘ಅಯೋಗ್ಯ 2’ ಸಿನಿಮಾಗಳಲ್ಲಿ ರಚಿತಾ ರಾಮ್ ಅವರು ಬ್ಯುಸಿ ಆಗಿದ್ದಾರೆ. ಶೀಘ್ರದಲ್ಲೇ ಅವರ ಹೊಸ ಸಿನಿಮಾಗಳು ಘೋಷಣೆ ಆಗಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿರಾಟ್ ಕೊಹ್ಲಿ ಯಾರಿಗೆ ಏನು ಸಾಬೀತುಪಡಿಸಬೇಕು? ಅಶ್ವಿನ್ ನೇರ ಪ್ರಶ್ನೆ! – Kannada News | Nothing Left to Prove: Ashwin Backs Virat Kohli

ಭಾರತ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ದಿಢೀರ್ ನಿವೃತ್ತಿಯ ಹಿಂದಿನ ಅಸಲಿ ಕಾರಣ ಈಗ ಬಯಲಾಗಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರತಿ ಪಂದ್ಯದ ಬಳಿಕವೂ ಸಾಮರ್ಥ್ಯ ಸಾಬೀತುಪಡಿಸಬೇಕಾದ ‘ವಿಷಕಾರಿ ವಾತಾವರಣ’ದಿಂದ ಬೇಸತ್ತು ತಾವು ರೆಡ್-ಬಾಲ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾಗಿ ಕೊಹ್ಲಿ ನೀಡಿದ್ದ ಸ್ಪೋಟಕ ಹೇಳಿಕೆಯನ್ನು ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ.

ಭಾರತಕ್ಕೆ ಅಸಂಖ್ಯಾತ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಕೊಹ್ಲಿ, ಇನ್ನು ಯಾರಿಗಾಗಿ ತನ್ನ ಯೋಗ್ಯತೆ ಸಾಬೀತುಪಡಿಸಬೇಕು?” ಎಂದು ಪ್ರಶ್ನಿಸಿರುವ ಅಶ್ವಿನ್, ವಿಮರ್ಶಕರ ಧೋರಣೆಗೆ ಖಡಕ್ ಚಾಟಿಯೇಟು ನೀಡಿದ್ದಾರೆ. ಟೀಕಾಕಾರರ ಬಾಯಿ ಮುಚ್ಚಿಸಿದ ಇಬ್ಬರು ದಿಗ್ಗಜರ ಈ ರೋಚಕ ಒಡನಾಟದ ಸಂಪೂರ್ಣ ವಿವರ ಇಲ್ಲಿದೆ.

ವಿಷಕಾರಿ ವಾತಾವರಣ!

ತಮ್ಮ ನಿವೃತ್ತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ವಿರಾಟ್ ಕೊಹ್ಲಿ, “ನಾನು ಪ್ರತಿ ಪಂದ್ಯ ಆಡಿದ ನಂತರವೂ ನನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಬೇಕಾದ ವಾತಾವರಣ ಇತ್ತು. ಇಷ್ಟು ವರ್ಷ ದೇಶಕ್ಕಾಗಿ ಆಡಿದ ಮೇಲೂ ಈ ರೀತಿ ನಿರಂತರವಾಗಿ ಕಠಿಣ ಪರೀಕ್ಷೆಗೆ ಒಳಗಾಗುವುದು ನನಗೊಂದು ವಿಷಕಾರಿ ವಾತಾವರಣದಂತೆ ಭಾಸವಾಯಿತು. ಅದಕ್ಕಾಗಿಯೇ ನಾನು ರೆಡ್-ಬಾಲ್ ಕ್ರಿಕೆಟ್‌ನಿಂದ ದೂರ ಸರಿಯಲು ನಿರ್ಧರಿಸಿದೆ” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದರು. 123 ಟೆಸ್ಟ್ ಪಂದ್ಯಗಳಿಂದ 9,230 ರನ್ ಗಳಿಸಿರುವ ರನ್ ಮಷಿನ್ ಕೊಹ್ಲಿ ಅವರ ಈ ಮಾತುಗಳು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.

ಅಶ್ವಿನ್ ಖಡಕ್ ಪ್ರಶ್ನೆ!

ವಿರಾಟ್ ಕೊಹ್ಲಿಯ ಈ ಸ್ಪೋಟಕ ಹೇಳಿಕೆಗೆ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಧ್ವನಿಗೂಡಿಸಿರುವ ರವಿಚಂದ್ರನ್ ಅಶ್ವಿನ್, ವಿರಾಟ್ ನಿರ್ಧಾರವನ್ನು ಸಂಪೂರ್ಣವಾಗಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಕೊಹ್ಲಿ ಯಾರಿಗೆ ಸಾಬೀತುಪಡಿಸಬೇಕು ಎಂದು ನೇರ ಪ್ರಶ್ನೆ ಮಾಡಿದ್ದಾರೆ.

ತನ್ನ ಜೀವಮಾನದಲ್ಲಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಆಟಗಾರ, ಯಾರಿಗೆ ಏನನ್ನು ಸಾಬೀತುಪಡಿಸಬೇಕು ಎಂಬುದು ಗೊತ್ತಾಗಬೇಕು. ದಶಕಕ್ಕೂ ಹೆಚ್ಚು ಕಾಲ ದೇಶಕ್ಕಾಗಿ ಆಡಿ, ಸಾವಿರಾರು ರನ್ ಹಾಗೂ ನೂರಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಆಟಗಾರನ ಸಾಮರ್ಥ್ಯಕ್ಕೆ ಆತನ ಅಂಕಿ-ಅಂಶಗಳೇ ಅತಿ ದೊಡ್ಡ ಪುರಾವೆಯಾಗಿರುತ್ತವೆ.

ಇಷ್ಟು ಸಾಧನೆ ಮಾಡಿದ ಮೇಲೂ ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲೂ ತಮ್ಮ ಯೋಗ್ಯತೆಯನ್ನು ಸಾಬೀತುಪಡಿಸಬೇಕಾಗಿ ಬಂದರೆ, ಅದು ವಿಮರ್ಶಕರ ಮತ್ತು ಈ ವ್ಯವಸ್ಥೆಯ ದೋಷವೇ ಹೊರತು ಆಟಗಾರನದ್ದಲ್ಲ ಎಂದು ಅಶ್ವಿನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  • ಯಾರಿಗೂ ಏನೂ ಸಾಬೀತುಪಡಿಸಬೇಕಾಗಿಲ್ಲ: “ಭಾರತ ತಂಡಕ್ಕೆ ನೂರಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಕೊಹ್ಲಿ ಅವರಂತಹ ಶ್ರೇಷ್ಠ ಆಟಗಾರ ಇನ್ನು ಯಾರ ಮುಂದೆ ತನ್ನ ಯೋಗ್ಯತೆಯನ್ನು ಸಾಬೀತುಪಡಿಸಬೇಕು? ಸಾರ್ವಜನಿಕರು ಮತ್ತು ವಿಮರ್ಶಕರು ನೀಡುವ ಈ ನಿರಂತರ ಒತ್ತಡ ಅರ್ಥಹೀನ” ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.
  • ಪ್ರಬುದ್ಧತೆಯ ಸಂಕೇತ: “ಒಬ್ಬ ಕ್ರೀಡಾಪಟು ಹೊರಗಿನ ಜಗತ್ತಿನ ಕಹಿ ವಿಮರ್ಶೆಗಳೊಂದಿಗೆ ಹೋರಾಡುವುದನ್ನು ನಿಲ್ಲಿಸಿ, ಕೇವಲ ತನ್ನ ಆಂತರಿಕ ನೆಮ್ಮದಿಯತ್ತ ಗಮನ ಹರಿಸಲು ಮುಂದಾಗುತ್ತಾನೋ, ಅದೇ ಆತನ ನಿಜವಾದ ಮಾನಸಿಕ ಪ್ರಬುದ್ಧತೆ. ಕೊಹ್ಲಿ ಈಗ ಆ ಹಂತದಲ್ಲಿದ್ದಾರೆ” ಎಂದು ಅಶ್ವಿನ್ ಶ್ಲಾಘಿಸಿದ್ದಾರೆ.
  • ನನ್ನ ಪರಿಸ್ಥಿತಿಯೂ ಇದೇ ಆಗಿತ್ತು: ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಅಶ್ವಿನ್, ತಮಗೂ ಇಂತಹದ್ದೇ ಆಲೋಚನೆಗಳು ಬಂದಿದ್ದವು ಎಂದಿದ್ದಾರೆ. ಯಾವುದೇ ಪಶ್ಚಾತ್ತಾಪವಿಲ್ಲದೆ, ಯೋಚಿಸಿಯೇ ತಾವು ಕೂಡ ನಿವೃತ್ತಿಯ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.

ಅಂದರೆ ಇಲ್ಲಿ ವಿರಾಟ್ ಕೊಹ್ಲಿಯಂತೆ ಅಶ್ವಿನ್ ಅವರನ್ನು ಕೂಡ ಟೀಮ್ ಮ್ಯಾನೇಜ್ಮೆಂಟ್​ ಗುರಿಯಾಗಿಸಿದ್ದಾರಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾ ಸರಣಿಯ ಮಧ್ಯೆದಲ್ಲೇ ನಿವೃತ್ತಿ ಘೋಷಿಸಿದ್ದರು. ವಿರಾಟ್ ಕೊಹ್ಲಿ ಸರಣಿ ಬಳಿಕ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಅಂದರೆ ಇಬ್ಬರು ದಿಗ್ಗಜ ಆಟಗಾರರು ಆಸ್ಟ್ರೇಲಿಯಾ ಸರಣಿ ವೇಳೆ ಒತ್ತಡಕ್ಕೆ ಸಿಲುಕಿದ್ದು ದಿಟ. ಹೀಗಾಗಿಯೇ ಅಶ್ವಿನ್ ಕೂಡ ತಮಗೂ ಇಂತಹದ್ದೇ ಆಲೋಚನೆಗಳು ಬಂದಿದ್ದವು ಎಂದಿದ್ದಾರೆ.

ಒಟ್ಟಾರೆಯಾಗಿ, ವಿರಾಟ್ ಕೊಹ್ಲಿ ಮತ್ತು ಅಶ್ವಿನ್ ಅವರ ಈ ಮಾತುಗಳು ಕೇವಲ ನಿವೃತ್ತಿಯ ಬಗೆಗಿನ ಹೇಳಿಕೆಗಳಲ್ಲ. ಬದಲಿಗೆ, ಇದು ಆಧುನಿಕ ಕ್ರಿಕೆಟ್ ವಲಯದಲ್ಲಿ ಆಟಗಾರರ ಮೇಲೆ ಹೇರಲಾಗುವ ಅತಿಯಾದ ನಿರೀಕ್ಷೆ ಮತ್ತು ಒತ್ತಡದ ವಿರುದ್ಧದ ದನಿಯಾಗಿದೆ.

ಇದನ್ನೂ ಓದಿ: RCB vs PBKS: ವೇಗಿಗಳದ್ದೇ ಸಾಮ್ರಾಜ್ಯ: ಆದರೂ ರನ್ ಮಳೆ ಗ್ಯಾರಂಟಿ!

ದಾಖಲೆಗಳ ಶಿಖರವನ್ನೇ ನಿರ್ಮಿಸಿದ ಮೇಲೂ ನಿರಂತರವಾಗಿ ಯೋಗ್ಯತೆ ಸಾಬೀತುಪಡಿಸಬೇಕಾದ ಅನಿವಾರ್ಯತೆ ಕ್ರಿಕೆಟ್‌ನ ವಾಣಿಜ್ಯೀಕರಣವನ್ನು ಎತ್ತಿ ತೋರಿಸುತ್ತದೆ. ಟೆಸ್ಟ್ ಕ್ರಿಕೆಟ್‌ನಿಂದ ಈ ಇಬ್ಬರು ದಿಗ್ಗಜರು ಹೊರನಡೆದಿರಬಹುದು, ಆದರೆ ಅವರು ಮೈದಾನದಲ್ಲಿ ಬಿಟ್ಟುಹೋಗಿರುವ ಪ್ರಬುದ್ಧ ಆಲೋಚನೆಗಳು ಭಾರತೀಯ ಕ್ರಿಕೆಟ್‌ನ ಮುಂದಿನ ತಲೆಮಾರಿಗೆ ಅತ್ಯಂತ ಮುಖ್ಯವಾದ ಪಠ್ಯವಾಗಲಿವೆ.

Source link

ನೂತನ ರೈಲಿಗೆ ಚಾಲನೆ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯ: ಸಚಿವ ವಿ. ಸೋಮಣ್ಣ ಹೇಳಿದ್ದೇನು? – Kannada News | Kannada Language Ignored at Bengaluru Mumbai Train Inauguration

ನೂತನ ರೈಲಿಗೆ ಚಾಲನೆ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯImage Credit source: Tv9 Kannada

ಬೆಂಗಳೂರು, ಮೇ 17: ಬೆಂಗಳೂರು-ಮುಂಬೈ ನಡುವೆ ಸಂಚಾರ ಮಾಡಲಿರುವ ಹೊಸ ಎಕ್ಸ್ಪ್ರೆಸ್ ರೈಲಿಗೆ ಬೈಯ್ಯಪ್ಪನಹಳ್ಳಿ ಬಳಿಯ ಎಸ್ಎಂವಿಟಿ ರೈಲ್ವೇ ನಿಲ್ದಾಣದಲ್ಲಿ ಇಂದು (ಮೇ 17) ಚಾಲನೆ ನೀಡಲಾಗಿದೆ. ದುರ್ದೈವ ಅಂದ್ರೆ ರೈಲ್ವೇ ಇಲಾಖೆಯ ಈ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯವಾಗಿತ್ತು. ಮುಖ್ಯ ವೇದಿಕೆಯಲ್ಲಿ ಹಾಕಿರುವ ಫ್ಲೆಕ್ಸ್​​ನಲ್ಲಿಇಂಗ್ಲಿಷ್​​ನಲ್ಲಿ ಮಾತ್ರ ನಾಮ ಫಲಕ ಹಾಕಲಾಗಿದ್ದು, ಕರ್ನಾಟಕದ ಸಂಸದ ವಿ.ಸೋಮಣ್ಣ ಅವರೇ ರೈಲ್ವೇ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದರೂ ಕನ್ನಡದ ಬಗ್ಗೆ ಇಷ್ಟು ನಿರ್ಲಕ್ಷ್ಯ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಮುಖ್ಯಾಂಶಗಳು

  • ಬೆಂಗಳೂರು-ಮುಂಬೈ ನಡುವೆ ಹೊಸ ಎಕ್ಸ್​​ಪ್ರೆಸ್​ ರೈಲಿಗೆ ಚಾಲನೆ
  • ರೈಲ್ವೇ ಇಲಾಖೆಯ ಈ ಕಾರ್ಯಕ್ರಮದಲ್ಲಿ ಕನ್ನಡ ಮಂಗಮಾಯ
  • ಬೇಕಂತಲೇ ಕನ್ನಡವನ್ನು ನಿರ್ಲಕ್ಷಿಸಿದರಾ ಹಿರಿಯ ಅಧಿಕಾರಿಗಳು?

ಕನ್ನಡ ಫೆಕ್ಸ್ ಹಾಕಲು ಹಿರಿಯ ಅಧಿಕಾರಿಗಳ ಅಡ್ಡಿ?

ಇನ್ನು ಕಾರ್ಯಕ್ರಮ ಸಂಬಂಧ ಕನ್ನಡದಲ್ಲಿ ಫ್ಲೆಕ್ಸ್​​ ಹಾಕಲು ಅಡ್ಡಿಪಡಿಸಿರೋದು ಇಲಾಖೆಯ ಹಿರಿಯ ಅಧಿಕಾರಿಗಳು ಎಂಬ ಮಾತುಗಳೂ ಕೇಳಿಬಂದಿವೆ. ರಾಜ್ಯದ ರೈಲ್ವೆ ಅಧಿಕಾರಿಗಳು ಸ್ಥಳೀಯ ಭಾಷೆಯಾದ ಕನ್ನಡದಲ್ಲಿಯೇ ಫ್ಲೆಕ್ಸ್​ ಹಾಕಲು ಮುಂದಾಗಿದ್ದರು. ಆದರೆ ಹಿರಿಯ ರೈಲ್ವೇ ಅಧಿಕಾರಿಗಳು ಈ ಫ್ಲೆಕ್ಸ್​​ ಅಳವಡಿಸಲು ಅವಕಾಶ ನೀಡಿಲ್ಲವಂತೆ. ಹೀಗಾಗಿ ಕನ್ನಡದಲ್ಲಿ ಪ್ರಿಂಟ್​​ ಆಗಿದ್ದ ಫ್ಲೆಕ್ಸ್​​ಗಳನ್ನು ವೇದಿಕೆಯ ಹಿಂಭಾಗದಲ್ಲಿ ಇಟ್ಟಿರುವುದು ಕಂಡುಬಂದಿದೆ.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರಿಗೆ ಗುಡ್​​ನ್ಯೂಸ್​​; ಬೆಂಗಳೂರು, ಮುಂಬೈ ಎಕ್ಸ್​​ಪ್ರೆಸ್​​ ಟ್ರೈನ್​​ಗೆ ಹಸಿರು ನಿಶಾನೆ

ಸಚಿವ ಸೋಮಣ್ಣ ಏನಂದ್ರು?

ಇನ್ನು ಕಾರ್ಯಕ್ರಮದ ಫ್ಲೆಕ್ಸ್​​ನಲ್ಲಿ ಕನ್ನಡದಲ್ಲಿ ಒಂದೇ ಒಂದು ಪದ ಇಲ್ಲದಿರುವ ಬಗ್ಗೆ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇದು ದಿಢೀರ್​​ ಕಾರ್ಯಕ್ರಮ. ನಿನ್ನೆ ನಾನು ಬೇರೆ ಕಾರ್ಯಕ್ರಮದಲ್ಲಿ ಇದ್ದೆ. ನಾನು ಸಚಿವನಾದ ಮೇಲೆ ಕನ್ನಡಕ್ಕೆ ಆದ್ಯತೆ ಕೊಟ್ಟಿದ್ದೇನೆಯೋ ಇಲ್ಲವೋ ನೀವೇ ಹೇಳಿ. ಮುಂದೆ ಈ ರೀತಿಯ ಘಟನೆಗಳು ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Gold Rate: ಚಿನ್ನ, ಬೆಳ್ಳಿ ಬೆಲೆ ಸತತ ಇಳಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 17th May 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಮೇ 17: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ವಾರಾಂತ್ಯದಲ್ಲಿ 290 ರೂಗಳಷ್ಟು ಬೆಲೆ ತಗ್ಗಿದೆ. ಈ ವಾರ ಬಂಗಾರದ ದರ (Gold Rate) ಗ್ರಾಮ್​ಗೆ ಹೆಚ್ಚೂಕಡಿಮೆ ಒಂದು ಸಾವಿರ ರೂಗಳಷ್ಟು ಇಳಿದಿರುವುದು ಗಮನಾರ್ಹ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಸತತ ಇಳಿಕೆ ಆಗುತ್ತಿದೆ. ಚಿನ್ನದಂತೆ ಬೆಳ್ಳಿ ಬೆಲೆಯೂ ಭರ್ಜರಿ ಇಳಿಕೆಯಾಗಿದೆ. ಈ ವಾರ ಬಹುತೇಕ 30 ರೂಗಳಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,43,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,56,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,43,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 17ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,693 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,385 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,770 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,693 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,385 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 290 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,385 ರೂ
  • ಚೆನ್ನೈ: 14,750 ರೂ
  • ಮುಂಬೈ: 14,385 ರೂ
  • ದೆಹಲಿ: 14,400 ರೂ
  • ಕೋಲ್ಕತಾ: 14,385 ರೂ
  • ಕೇರಳ: 14,385 ರೂ
  • ಅಹ್ಮದಾಬಾದ್: 14,390 ರೂ
  • ಜೈಪುರ್: 14,400 ರೂ
  • ಲಕ್ನೋ: 14,400 ರೂ
  • ಭುವನೇಶ್ವರ್: 14,385 ರೂ

ಇದನ್ನೂ ಓದಿ: ಆಟೋ, ಟ್ಯಾಕ್ಸಿ​ ಚಾಲಕರಿಗೆ ಮತ್ತೆ ಶಾಕ್​​ ಕೊಟ್ಟ ಕೇಂದ್ರ ಸರ್ಕಾರ: CNG ದರ ಕೆಜಿಗೆ 1 ರೂ. ಹೆಚ್ಚಳ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 558 ರಿಂಗಿಟ್ (13,558 ರುಪಾಯಿ)
  • ದುಬೈ: 506.50 ಡಿರಾಮ್ (13,238 ರುಪಾಯಿ)
  • ಅಮೆರಿಕ: 142 ಡಾಲರ್ (13,632 ರುಪಾಯಿ)
  • ಸಿಂಗಾಪುರ: 180.70 ಸಿಂಗಾಪುರ್ ಡಾಲರ್ (13,546 ರುಪಾಯಿ)
  • ಕತಾರ್: 504 ಕತಾರಿ ರಿಯಾಲ್ (13,273 ರೂ)
  • ಸೌದಿ ಅರೇಬಿಯಾ: 515 ಸೌದಿ ರಿಯಾಲ್ (13,175 ರುಪಾಯಿ)
  • ಓಮನ್: 53.70 ಒಮಾನಿ ರಿಯಾಲ್ (13,390 ರುಪಾಯಿ)
  • ಕುವೇತ್: 41.71 ಕುವೇತಿ ದಿನಾರ್ (13,070 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link