Category Archives: Blog

Your blog category

RBI Recruitment 2026: ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ನ್ಯೂಸ್; RBIನಲ್ಲಿ 60 ಗ್ರೇಡ್ ಬಿ ಹುದ್ದೆಗಳಿಗೆ ನೇಮಕಾತಿ – Kannada News | RBI Grade B Officer Recruitment 2026: 60 Vacancies – Apply Now!

ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ (RBI) ವೃತ್ತಿ ಜೀವನ ಆರಂಭಿಸುವ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶವೊಂದು ಒದಗಿಬಂದಿದೆ. ಆರ್‌ಬಿಐ ವಿವಿಧ ಇಲಾಖೆಗಳಲ್ಲಿ ‘ಗ್ರೇಡ್ ಬಿ’ ಅಧಿಕಾರಿಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಜನರಲ್, ಡಿಎಸ್‌ಐಎಂ (DSIM) ಮತ್ತು ಡಿಇಪಿಆರ್ (DEPR) ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 60 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಹುದ್ದೆ ಅಲಂಕರಿಸಲು ಬಯಸುವವರಿಗೆ ಇದು ಉತ್ತಮ ವೇದಿಕೆಯಾಗಿದೆ.

ಈ ನೇಮಕಾತಿ ಪ್ರಕ್ರಿಯೆಯು ಏಪ್ರಿಲ್ 29 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಅಭ್ಯರ್ಥಿಗಳು ಮೇ 20 ರೊಳಗೆ ಆರ್‌ಬಿಐನ ಅಧಿಕೃತ ವೆಬ್‌ಸೈಟ್ rbi.org.in ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಒಟ್ಟು 60 ಹುದ್ದೆಗಳಲ್ಲಿ, ಗ್ರೇಡ್ ಬಿ ಅಧಿಕಾರಿ (ಸಾಮಾನ್ಯ) ವಿಭಾಗಕ್ಕೆ 40 ಹುದ್ದೆಗಳು, ಆರ್ಥಿಕತೆ ಮತ್ತು ನೀತಿ ಸಂಶೋಧನಾ ಇಲಾಖೆ (DEPR) ಗೆ 10 ಹಾಗೂ ಅಂಕಿಅಂಶ ಮತ್ತು ಮಾಹಿತಿ ನಿರ್ವಹಣಾ ಇಲಾಖೆ (DSIM) ಗೆ 10 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

ಪ್ರಮುಖ ದಿನಾಂಕಗಳು ಮತ್ತು ಅರ್ಹತೆ:

ಅಭ್ಯರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸುವುದು ಅಗತ್ಯವಾಗಿದೆ. ಸಾಮಾನ್ಯ ವಿಭಾಗದ ಮೊದಲ ಹಂತದ ಪರೀಕ್ಷೆಯು ಜೂನ್ 13 ರಂದು ನಡೆದರೆ, DEPR ಮತ್ತು DSIM ವಿಭಾಗಗಳ ಪರೀಕ್ಷೆ ಜೂನ್ 14 ರಂದು ನಡೆಯಲಿದೆ. ಇನ್ನು ಎರಡನೇ ಹಂತದ ಪರೀಕ್ಷೆಗಳು ಜುಲೈ 25 ಮತ್ತು 26 ರಂದು ನಿಗದಿಯಾಗಿವೆ. ಅರ್ಹತೆಯ ವಿಷಯಕ್ಕೆ ಬಂದರೆ, ಸಾಮಾನ್ಯ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು ಪದವಿಯಲ್ಲಿ ಕನಿಷ್ಠ ಶೇ. 60 ಅಥವಾ ಸ್ನಾತಕೋತ್ತರ ಪದವಿಯಲ್ಲಿ ಶೇ. 55 ಅಂಕಗಳನ್ನು ಹೊಂದಿರಬೇಕು. ಇತರೆ ವಿಶೇಷ ವಿಭಾಗಗಳಿಗೆ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕಡ್ಡಾಯವಾಗಿದೆ. ಅಭ್ಯರ್ಥಿಗಳ ವಯೋಮಿತಿ 21 ರಿಂದ 30 ವರ್ಷಗಳ ಒಳಗೆ ಇರಬೇಕು.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಯ್ಕೆ ಪ್ರಕ್ರಿಯೆ ಮತ್ತು ಆಕರ್ಷಕ ವೇತನ:

ಆರ್‌ಬಿಐ ಗ್ರೇಡ್ ಬಿ ಅಧಿಕಾರಿಗಳ ಆಯ್ಕೆಯು ಮೂರು ಹಂತದ ಕಠಿಣ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಮೊದಲಿಗೆ ಪ್ರಾಥಮಿಕ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಅರ್ಹತೆ ಪಡೆದವರು ಮುಖ್ಯ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಅಂತಿಮವಾಗಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸಂದರ್ಶನಕ್ಕೆ ಕರೆಯಲಾಗುವುದು. ಈ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ. ವಿಶೇಷವೆಂದರೆ, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ಸುಮಾರು 1.50 ಲಕ್ಷದವರೆಗೆ ಆಕರ್ಷಕ ವೇತನ ಮತ್ತು ಇತರೆ ಸೌಲಭ್ಯಗಳು ಲಭ್ಯವಿರುತ್ತವೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಮಳೆಗೆ ಮರಗಳು ಧರೆಗೆ; ಕಮಿಷನರ್ ಕಚೇರಿ ಬಳಿ ಕಾರು ಜಖಂ! – Kannada News | Bengaluru Witnessed Intense Storm with Gusty Winds and Significant Damage

ಬೆಂಗಳೂರು, ಏ.29: ಭಾರಿ ಗುಡುಗು ಸಿಡಿಲು ಸಹಿತ ಮಳೆ ಮತ್ತು ಬಿರುಗಾಳಿ ಸಹಿತ ಹವಾಮಾನವು ನಗರದಾದ್ಯಂತ ಅವಾಂತರ ಸೃಷ್ಟಿಸಿದೆ. ಸಂಜೆಯ ವೇಳೆಗೆ ಶುರುವಾದ ಈ ಮಳೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರು ಮತ್ತು ಪಾದಚಾರಿಗಳು ತೊಂದರೆಗೊಳಗಾಗಿದ್ದಾರೆ. ಬಿರುಗಾಳಿಯ ರಭಸಕ್ಕೆ ಹಲವು ಕಡೆಗಳಲ್ಲಿ ಮರದ ರೆಂಬೆ ಕೊಂಬೆಗಳು ಮುರಿದು ಬಿದ್ದಿವೆ. ನಿರ್ದಿಷ್ಟವಾಗಿ ಕಮಿಷನರ್ ಕಚೇರಿ ಸಮೀಪದ ಪ್ರದೇಶಗಳಲ್ಲಿ ದೊಡ್ಡ ಕೊಂಬೆಗಳು ನೆಲಕ್ಕುರುಳಿವೆ. ಈ ಸಂದರ್ಭದಲ್ಲಿ, ಗಾಳಿಯ ತೀವ್ರತೆಗೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರೊಂದಕ್ಕೆ ಹಾನಿಯಾಗಿದೆ. ವೀಡಿಯೊದಲ್ಲಿ ಸೆರೆಯಾದ ದೃಶ್ಯಗಳ ಪ್ರಕಾರ, ಗಾಳಿಯ ರಭಸಕ್ಕೆ ಕಾರು ಒಂದು ಕಡೆಗೆ ಜಾರಿದ್ದು, ಅದರ ಮೇಲೆ ದೊಡ್ಡ ವಸ್ತು ಬಿದ್ದಂತೆ ಅಥವಾ ಕಾರು ಜಖಂಗೊಂಡಂತೆ ಕಾಣುತ್ತದೆ. “ಕಾರ್ ಯಾರ್ದೋ ಕಾರ್ ಕಥೆ ಮುಗೀತು” ಎಂದು ವೀಕ್ಷಕರು ಆಘಾತದಿಂದ ಹೇಳುತ್ತಿರುವುದು ಘಟನೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ಈ ಘಟನೆಗಳು ಬೆಂಗಳೂರಿನಲ್ಲಿ ಮಳೆಯಿಂದ ಉಂಟಾದ ಹಾನಿಯ ಪರಿಣಾಮವನ್ನು ಸ್ಪಷ್ಟಪಡಿಸುತ್ತವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡು ಚುನಾವಣೆ ಫಲಿತಾಂಶಕ್ಕೂ ಮುನ್ನ ಶಿರಡಿ ಸಾಯಿಬಾಬಾ ದರ್ಶನ ಪಡೆದ ವಿಜಯ್ – Kannada News | Tamil Nadu Assembly Elections TVK Chief Vijay Visits Shirdi Seeks Sai Baba Blessings

ಶಿರಡಿ, ಏಪ್ರಿಲ್ 29: ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu Assembly Elections) ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ (Vijay) ಇಂದು ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸಾಮಾಜಿಕ ಮಾಧ್ಯಮಗಳಲ್ಲಿ ವಿಜಯ್ ಅವರ ಈ ವಿಡಿಯೋ ವೈರಲ್ ಆಗಿವೆ. ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ವಿಜಯ್ ದೇವಾಲಯದ ಅಧಿಕಾರಿಗಳಿಂದ ಪ್ರಸಾದ ಸ್ವೀಕರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Guide: ವಾಸ್ತು ಪ್ರಕಾರ ದೇವರ ಕೋಣೆ ಎಲ್ಲಿರಬೇಕು? ತಪ್ಪಾದ ದಿಕ್ಕಿನಲ್ಲಿದ್ದರೆ ಎದುರಾಗಬಹುದು ಈ ಸಮಸ್ಯೆಗಳು – Kannada News | Vastu Guide: Pooja Room Placement for Harmony and Prosperity in Your Home

ಹಿಂದೂ ಧರ್ಮದಲ್ಲಿ ಮನೆಯ ದೇವರ ಕೊಠಡಿಯನ್ನು ಕೇವಲ ಒಂದು ಸ್ಥಳವೆಂದು ಪರಿಗಣಿಸದೆ, ಅದನ್ನು ಸಕಾರಾತ್ಮಕ ಶಕ್ತಿಯ ಕೇಂದ್ರವೆಂದು ನಂಬಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಪೂಜಾ ಮಂದಿರವು ಸರಿಯಾದ ದಿಕ್ಕು ಮತ್ತು ಸ್ಥಳದಲ್ಲಿದ್ದರೆ ಮಾತ್ರ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲು ಸಾಧ್ಯ. ಒಂದು ವೇಳೆ ಪೂಜಾ ಸ್ಥಳವು ವಾಸ್ತು ನಿಯಮಗಳಿಗೆ ವಿರುದ್ಧವಾಗಿದ್ದರೆ, ಅದು ಕುಟುಂಬದ ಪ್ರಗತಿಗೆ ಅಡ್ಡಿಪಡಿಸುವುದಲ್ಲದೆ ಮಾನಸಿಕ ಅಶಾಂತಿಗೂ ಕಾರಣವಾಗಬಹುದು. ಆದ್ದರಿಂದ ದೈವಿಕ ಕೃಪೆಗೆ ಪಾತ್ರರಾಗಲು ಪೂಜಾ ಕೊಠಡಿಯನ್ನು ಸ್ಥಾಪಿಸುವ ಮುನ್ನ ಕೆಲವು ಪ್ರಮುಖ ಅಂಶಗಳನ್ನು ಅರಿಯುವುದು ಅತ್ಯಗತ್ಯ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಈಶಾನ್ಯ ಮೂಲೆಯು (ಈಶಾನ್ಯ ದಿಕ್ಕು) ದೇವಾಲಯಕ್ಕೆ ಅತ್ಯಂತ ಮಂಗಳಕರವಾದ ಸ್ಥಳವಾಗಿದೆ. ಈ ದಿಕ್ಕಿನಲ್ಲಿ ಧನಾತ್ಮಕ ಶಕ್ತಿಯ ಹರಿವು ಅಧಿಕವಾಗಿರುತ್ತದೆ, ಇದು ಆಧ್ಯಾತ್ಮಿಕ ಸಾಧನೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ. ಆದರೆ ದಕ್ಷಿಣ ದಿಕ್ಕನ್ನು ಪಿತೃದೇವತೆಗಳ ಮತ್ತು ಯಮನ ದಿಕ್ಕು ಎಂದು ಪರಿಗಣಿಸುವುದರಿಂದ, ಈ ದಿಕ್ಕಿನಲ್ಲಿ ಪೂಜಾ ಮಂದಿರವನ್ನು ನಿರ್ಮಿಸುವುದನ್ನು ತಪ್ಪಿಸಬೇಕು. ಹಾಗೆಯೇ, ದೇವರ ವಿಗ್ರಹ ಅಥವಾ ಪಟಗಳನ್ನು ನೇರವಾಗಿ ನೆಲದ ಮೇಲೆ ಇರಿಸುವ ಬದಲು, ಸ್ವಚ್ಛವಾದ ಮರದ ಪೀಠ ಅಥವಾ ಎತ್ತರದ ಸ್ಥಳದಲ್ಲಿ ಇರಿಸುವುದು ಪದ್ಧತಿ.

ಇದನ್ನೂ ಓದಿ: ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮೋದಿ ವಿಶೇಷ ಪೂಜೆ; ಸರ್ವಾರ್ಥ ಸಿದ್ಧಿ ಯೋಗದ ಮಹತ್ವವೇನು ಗೊತ್ತಾ?

ಪೂಜಾ ಸ್ಥಳದ ಸುತ್ತಮುತ್ತಲಿನ ಪರಿಸರವು ಪವಿತ್ರವಾಗಿರುವುದು ಅಷ್ಟೇ ಮುಖ್ಯ. ಅಡುಗೆಮನೆಯು ಬೆಂಕಿಯ ಸಂಕೇತವಾಗಿರುವುದರಿಂದ ಮತ್ತು ದೇವಾಲಯವು ಶಾಂತಿಯ ಸಂಕೇತವಾಗಿರುವುದರಿಂದ, ಅಡುಗೆಮನೆಯಲ್ಲಿ ಪೂಜಾ ಸ್ಥಳವನ್ನು ಇರಿಸುವುದರಿಂದ ಮನೆಯಲ್ಲಿ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅದೇ ರೀತಿ, ವಿಶ್ರಾಂತಿಯ ಸ್ಥಳವಾದ ಮಲಗುವ ಕೋಣೆಯಲ್ಲಿ ಪೂಜಾ ಮಂದಿರವನ್ನು ಇರಿಸುವುದು ದೈವಕ್ಕೆ ತೋರುವ ಅಗೌರವವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯ ಮಾನಸಿಕ ಅಸ್ಥಿರತೆಗೆ ಕಾರಣವಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಇನ್ನು ಮನೆಯ ಮೆಟ್ಟಿಲುಗಳ ಕೆಳಗಿನ ಜಾಗವನ್ನು ಅಸ್ಥಿರತೆಯ ಸಂಕೇತವೆಂದು ನೋಡಲಾಗುವುದರಿಂದ, ಅಲ್ಲಿ ದೇವರ ಕೊಠಡಿ ನಿರ್ಮಿಸುವುದು ವಾಸ್ತು ದೋಷಕ್ಕೆ ನಾಂದಿಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಶೌಚಾಲಯ ಅಥವಾ ಸ್ನಾನಗೃಹದ ಪಕ್ಕದಲ್ಲಿ ಅಥವಾ ಅದರ ಗೋಡೆಗೆ ಹೊಂದಿಕೊಂಡಂತೆ ಪೂಜಾ ಮಂದಿರ ಇರಬಾರದು. ಅಶುದ್ಧ ಸ್ಥಳಗಳ ಸನಿಹದಲ್ಲಿ ದೇವರನ್ನು ಇರಿಸುವುದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗಿ ಪೂಜೆಯ ಫಲ ಲಭಿಸುವುದಿಲ್ಲ ಎಂಬ ನಂಬಿಕೆಯಿದೆ. ಒಟ್ಟಾರೆಯಾಗಿ, ಪೂಜಾ ಸ್ಥಳವು ಯಾವಾಗಲೂ ಸ್ವಚ್ಛ, ಶಾಂತ ಮತ್ತು ಪವಿತ್ರವಾಗಿದ್ದಾಗ ಮಾತ್ರ ಮನೆಯಲ್ಲಿ ದೈವಿಕ ಚೈತನ್ಯ ಸದಾ ಜಾಗೃತವಾಗಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾವುದೇ ಭಾಷೆಯಲ್ಲಾದರೂ ಕರೆ ಮಾಡಿ, ಪೊಲೀಸರು ಓಡಿ ಬರ್ತಾರೆ! ನಮ್ಮ 112 ಗೆ ಹೈಟೆಕ್ AI ಟಚ್; ಇದು ಜನರಿಗೆ ಹೇಗೆ ಪ್ರಯೋಜನ? – Kannada News | VANKI AI Transforms Bengaluru Emergency Calls: Namma 112 Now Multilingual and Faster

ಬೆಂಗಳೂರು, ಏ.29: ಸಿಲಿಕಾನ್ ಸಿಟಿಯ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರ ಪೊಲೀಸರು ತಮ್ಮ ತುರ್ತು ಸ್ಪಂದನಾ ವ್ಯವಸ್ಥೆಯಾದ ‘ನಮ್ಮ 112’ ಗೆ ಭರ್ಜರಿ ಅಪ್‌ಗ್ರೇಡ್ ನೀಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಭಾಷೆಯ ಅಡೆತಡೆಯನ್ನು ನಿವಾರಿಸಲು ಭಾರತದಲ್ಲೇ ಮೊದಲ ಬಾರಿಗೆ ಬಹುಭಾಷಾ AI ಚಾಲಿತ ‘VANKI’ (Voice AI for Nationwide Key Interventions) ವ್ಯವಸ್ಥೆಯನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಇದು ಜನರಿಗೆ ಹೇಗೆ ಪ್ರಯೋಜನ ಆಗಲಿದೆ ಎಂಬುದನ್ನು ಕೂಡ ಹೇಳಿದೆ. ಈ ಬಗ್ಗೆ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಏನಿದು VANKI ತಂತ್ರಜ್ಞಾನ?

ಬೆಂಗಳೂರು ಜಾಗತಿಕ ನಗರವಾಗಿದ್ದು, ಇಲ್ಲಿ ದೇಶ-ವಿದೇಶಗಳ ಜನರು ವಾಸಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಕರೆ ಮಾಡುವವರಿಗೆ ಕನ್ನಡ ಅಥವಾ ಇಂಗ್ಲಿಷ್ ತಿಳಿಯದಿದ್ದರೆ ಸಹಾಯ ಪಡೆಯುವುದು ವಿಳಂಬವಾಗುತ್ತಿತ್ತು. ಇದನ್ನು ತಪ್ಪಿಸಲು ಅಭಿವೃದ್ಧಿಪಡಿಸಲಾದ ಈ AI ವ್ಯವಸ್ಥೆಯು ಕರೆ ಮಾಡುವವರು ಮಾತನಾಡುವ ಭಾಷೆಯನ್ನು ತಕ್ಷಣವೇ ಅರ್ಥೈಸಿಕೊಂಡು, ಅದನ್ನು ಕಂಟ್ರೋಲ್ ರೂಂ ಅಧಿಕಾರಿಗಳಿಗೆ ರವಾನಿಸುತ್ತದೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ: ಇದರ ವಿಶೇಷತೆಗಳೇನು:

ಪ್ರಸ್ತುತ ಬೆಂಗಾಲಿ, ಗುಜರಾತಿ, ಒಡಿಯಾ, ಮಣಿಪುರಿ, ಕಾಶ್ಮೀರಿ, ನೇಪಾಳಿ ಮತ್ತು ಅಸ್ಸಾಮಿಯಂತಹ ಭಾರತೀಯ ಭಾಷೆಗಳು ಹಾಗೂ ಸ್ಪ್ಯಾನಿಷ್, ಫ್ರೆಂಚ್ ಮತ್ತು ಅರೇಬಿಕ್‌ನಂತಹ ಅಂತರರಾಷ್ಟ್ರೀಯ ಭಾಷೆಗಳನ್ನು ಇದು ಬೆಂಬಲಿಸುತ್ತದೆ. ಭಾಷೆಯ ಸಮಸ್ಯೆಯಿಂದಾಗಿ ಮಾಹಿತಿ ಪಡೆಯುವಲ್ಲಿ ಆಗುತ್ತಿದ್ದ ವಿಳಂಬ ತಪ್ಪಲಿದೆ, ಇದರಿಂದ ಪೊಲೀಸರು ಘಟನಾ ಸ್ಥಳಕ್ಕೆ ತಲುಪುವ ವೇಗ ಹೆಚ್ಚಾಗಲಿದೆ. ಮಂಡೇ ವೆಂಚರ್ಸ್ ಮತ್ತು ಅಯೋಸ್ (Monday Ventures and Aeos) ಸಹಯೋಗದೊಂದಿಗೆ ಈ ಸುಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಭಾಷೆಗಳನ್ನು ಈ ವ್ಯವಸ್ಥೆಗೆ ಸೇರ್ಪಡೆಗೊಳಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತಂತ್ರಜ್ಞಾನದ ಬಳಕೆಯ ಮೂಲಕ ನಾಗರಿಕ ಸ್ನೇಹಿ ಪೊಲೀಸಿಂಗ್‌ನಲ್ಲಿ ಬೆಂಗಳೂರು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ; ಜನರು ಪರದಾಟ

ಇದು ಜನರಿಗೆ ಹೇಗೆ ಪ್ರಯೋಜನ:

ಬೆಂಗಳೂರು ಒಂದು ಜಾಗತಿಕ ನಗರ. ಇಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳ ಜನರು ಹಾಗೂ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅನೇಕರಿಗೆ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಸ್ಪಷ್ಟವಾಗಿ ಮಾಹಿತಿ ನೀಡಲು ಬರುವುದಿಲ್ಲ. ಈ AI ವ್ಯವಸ್ಥೆಯು ಕರೆ ಮಾಡುವವರ ಭಾಷೆಯಲ್ಲೇ (ಉದಾಹರಣೆಗೆ: ಬೆಂಗಾಲಿ, ಒಡಿಯಾ, ಸ್ಪ್ಯಾನಿಷ್ ಇತ್ಯಾದಿ) ದೂರು ಆಲಿಸುವುದರಿಂದ, ಯಾವುದೇ ಭಾಷೆಯ ವ್ಯಕ್ತಿ ಭಯವಿಲ್ಲದೆ ಕರೆ ಮಾಡಬಹುದು. ಹಿಂದೆ ಕರೆ ಮಾಡುವವರ ಭಾಷೆ ಅರ್ಥವಾಗದಿದ್ದಾಗ, ಕಂಟ್ರೋಲ್ ರೂಂ ಸಿಬ್ಬಂದಿ ಅದನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದ್ದರು ಅಥವಾ ಬೇರೆ ಭಾಷೆ ತಿಳಿದವರನ್ನು ಸಂಪರ್ಕಿಸಬೇಕಿತ್ತು. ಇದರಿಂದ ಪೊಲೀಸರು ಸ್ಥಳಕ್ಕೆ ತಲುಪುವುದು ವಿಳಂಬವಾಗುತ್ತಿತ್ತು. ಈಗ AI ತಕ್ಷಣವೇ ಭಾಷೆಯನ್ನು ಭಾಷಾಂತರಿಸುವುದರಿಂದ, ಪೊಲೀಸರು ಘಟನಾ ಸ್ಥಳಕ್ಕೆ ತಲುಪುವ ಸಮಯ ಗಣನೀಯವಾಗಿ ಉಳಿತಾಯವಾಗುತ್ತದೆ.

ತುರ್ತು ಸಂದರ್ಭದಲ್ಲಿ ಜನರು ಆತಂಕದಲ್ಲಿರುತ್ತಾರೆ. ಆಗ ಅವರಿಗೆ ಸರಿಯಾಗಿ ಪದಗಳು ಸಿಗದೆ ಇರಬಹುದು. ‘VANKI’ ತಂತ್ರಜ್ಞಾನವು ಕರೆ ಮಾಡುವವರ ಆಡುಭಾಷೆಯನ್ನು ಅರ್ಥೈಸಿಕೊಂಡು, ಘಟನೆ ನಡೆದ ಸ್ಥಳ ಮತ್ತು ಸಮಸ್ಯೆಯ ಸ್ವರೂಪವನ್ನು ನಿಖರವಾಗಿ ಕಂಟ್ರೋಲ್ ರೂಂಗೆ ರವಾನಿಸುತ್ತದೆ. ಇದರಿಂದ ತಪ್ಪು ಮಾಹಿತಿಯಿಂದ ಆಗುವ ಅನಾಹುತಗಳು ತಪ್ಪುತ್ತವೆ. ಕಡಿಮೆ ಓದಿದವರು ಅಥವಾ ಸ್ಥಳೀಯ ಭಾಷೆ ತಿಳಿಯದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದಾಗ ಈ ವ್ಯವಸ್ಥೆ ಅವರಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಇದು ಸಮಾಜದ ಎಲ್ಲಾ ವರ್ಗದ ಜನರಿಗೂ ಸಮಾನವಾಗಿ ರಕ್ಷಣೆ ಒದಗಿಸಲು ಸಹಕಾರಿಯಾಗಿದೆ. ಅಪಘಾತ ಅಥವಾ ಅಪರಾಧಗಳು ನಡೆದಾಗ ಸೆಕೆಂಡುಗಳ ಕಾಲವೂ ಮುಖ್ಯವಾಗಿರುತ್ತದೆ. ಅಂತಹ ‘ಹೈ-ಪ್ರೆಶರ್’ ಸಮಯದಲ್ಲಿ ಭಾಷಾಂತರಕ್ಕಾಗಿ ಪರದಾಡುವ ಅಗತ್ಯವಿಲ್ಲದೆ, ಈ AI ವ್ಯವಸ್ಥೆಯು ಸಂವಹನವನ್ನು ಸರಳಗೊಳಿಸುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:09 pm, Wed, 29 April 26

Source link

ಅಂದೊಂದಿತ್ತು ಕಾಲ, ಕನ್ನಡ ಹಾಡುಗಳ ಮಾಧುರ್ಯ ನೆರೆ ರಾಜ್ಯಗಳಲ್ಲೂ ತುಂಬಿತ್ತು – Kannada News | Many Kannada songs were remade in Telugu here are some list

ಕಳೆದ ಕೆಲ ವರ್ಷಗಳಲ್ಲಿ ದಕ್ಷಿಣ ಭಾರತ ಚಿತ್ರರಂಗ (Movie Industry) ಬಹು ಎತ್ತರಕ್ಕೇರಿದೆ. ವಿಶೇಷವಾಗಿ ತೆಲುಗು ಚಿತ್ರರಂಗ ಕೆಲವು ಅಸಾಮಾನ್ಯ ಬಾಕ್ಸ್ ಆಫೀಸ್ ದಾಖಲೆಗಳನ್ನು ಮಾಡುವ ಜೊತೆಗೆ ಚಿತ್ರ ನಿರ್ಮಾಣದಲ್ಲಿಯೂ ಸಹ ಹೊಸ ಎತ್ತರಗಳನ್ನು ಏರಿದೆ. ನೆರೆಯ ಮಲಯಾಳಂ ಚಿತ್ರರಂಗವಂತೂ ಒಂದು ಸೀಮಿತ ಬಜೆಟ್​ನ ಚಿತ್ರರಂಗ ಕೇವಲ ಕಂಟೆಂಟ್​ನಿಂದ ಹೇಗೆ ವಿಶ್ವ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಬಹುದು ಎಂಬುದನ್ನು ತೋರಿಸುತ್ತಿದೆ. ತಮಿಳು ಚಿತ್ರರಂಗವೂ ಸಹ ಹಿಂದೆ ಬಿದ್ದಿಲ್ಲ, ಸೂಪರ್ ಸ್ಟಾರ್​​ಗಳ ನೆರವಿನಿಂದ ಅದ್ಭುತ ಸಿನಿಮಾಗಳನ್ನು ನೀಡುತ್ತಿದೆ. ಆದರೆ ಕನ್ನಡ ಚಿತ್ರರಂಗ ಎಂದರೆ ‘ಕೆಜಿಎಫ್’, ‘ಕಾಂತಾರ’ದ ಮುಂದೆ ಮಾತೇ ಹೋಗುವುದಿಲ್ಲ. ಆದರೆ ಒಂದು ಕಾಲವಿತ್ತು, ಕನ್ನಡ ಸಿನಿಮಾ, ಕನ್ನಡ ಹಾಡುಗಳು ನೆರೆಯ ಚಿತ್ರರಂಗಗಳಿಗೆ ಸ್ಪೂರ್ತಿ ತುಂಬುತ್ತಿತ್ತು.

ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ತೆಲುಗು ಚಿತ್ರರಂಗಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು, ಖ್ಯಾತ ಸಂಗೀತ ನಿರ್ದೇಶಕ ಜೋಡಿಯಾದ ರಾಜನ್-ನಾಗೇಂದ್ರ ಅವರ ಬಗ್ಗೆ ಮಾತನಾಡುತ್ತಾ, ‘ಹಲವಾರು ಅದ್ಭುತ ಹಾಡುಗಳನ್ನು ನೀಡಿದ ಅವರು, ತಮ್ಮ ಸಮಕಾಲೀನರು ಮತ್ತು ಈಗಿನ ಹಲವು ಸಂಗೀತ ನಿರ್ದೇಶಕರುಗಳಷ್ಟು ಪ್ರಚಾರವನ್ನು ಪಡೆಯಲಿಲ್ಲ’ ಎಂದರು. ಅದೇ ಸಂದರ್ಶನದಲ್ಲಿ, ತೆಲುಗಿನಲ್ಲಿ ಸೂಪರ್ ಹಿಟ್ ಆಗಿರುವ ಹಲವು ಕನ್ನಡ ಸಿನಿಮಾ ಹಾಡುಗಳನ್ನು ಸಹ ಹೆಸರಿಸಿದ್ದಾರೆ.

70-80ರ ದಶಕದಲ್ಲಿ ಕನ್ನಡ ಚಿತ್ರರಂಗ ಬಹಳ ಉಚ್ರಾಯ ಸ್ಥಿತಿಯಲ್ಲಿತ್ತು. ಕನ್ನಡದಲ್ಲಿ ಎಲ್ಲ ರೀತಿಯ ಹೊಸ ಪ್ರಯೋಗಗಳು ನಡೆಯುತ್ತಿದ್ದವು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಸೂಕ್ಷ್ಮ ಕತೆಗಳನ್ನು ಸಹ ಸಿನಿಮಾಕ್ಕೆ ತರಲಾಗುತ್ತಿತ್ತು. ಆ ಸಮಯದಲ್ಲಿ ಕನ್ನಡದ ಹಲವು ಸಿನಿಮಾಗಳು ನೆರೆ-ಹೊರೆಯ ಭಾಷೆಗಳಿಗೆ ರೀಮೇಕ್ ಸಹ ಆದವು. ಆಗಿನ ಕನ್ನಡ ಹಾಡುಗಳಂತೂ ತೆಲುಗು, ತಮಿಳಿಗೆ ಹೇರಳವಾಗಿ ಆಮದಾಯ್ತು.

ಇದನ್ನೂ ಓದಿ:45ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಕಪೂರ್ ಕುಟುಂಬದ ಕುಡಿ

‘ಎಂದೆಂದೂ ನಿನ್ನನು ಅಗಲಿ’ ಹಾಡು ‘ಪೂಜಾ’ ಹೆಸರಿನ ತೆಲುಗು ಸಿನಿಮಾನಲ್ಲಿ ತೆಲುಗಿನಲ್ಲಿದೆ. ಯೂಟ್ಯೂಬ್ ಸಂದರ್ಶನದಲ್ಲಿ ಹಿರಿಯ ಸಿನಿಮಾ ಕರ್ಮಿ ಹೇಳಿರುವಂತೆ, ಈಗಲೂ ಸಹ ಆ ಹಾಡನ್ನು ತೆಲುಗು ಜನರ ಮದುವೆಗಳಲ್ಲಿ ಆರ್ಕೆಸ್ಟ್ರಾದವರು ಬಾರಿಸುತ್ತಾರಂತೆ. 1977 ರಲ್ಲಿ ಬಿಡುಗಡೆ ಆದ ‘ಪಂತುಲಮ್ಮ’ ಸಿನಿಮಾದ ‘ಮಾನಸ ವೀಣಾ ಮಧುಗೀತಂ’ ಹಾಡು ಸಹ ಕನ್ನಡದಿಂದ ತೆಲುಗಿಗೆ ಹೋಗಿದ್ದೆ. ಕನ್ನಡದ ‘ಬಾನಲ್ಲು ನೀನೆ, ಭುವಿಯಲ್ಲೂ ನೀನೆ’ ಹಾಡು ತೆಲುಗಿನಲ್ಲಿ ‘ಸಿರಿಮಲ್ಲೆ ನೂವೆ, ವರದಲ್ಲೆ ನೂವೆ’ ಎಂದಾಗಿದೆ. ಕಮಲ್ ನಟನೆಯ ‘ಸೊಮ್ಮೊಕ್ಕಡದಿ ಸೋಗೊಕ್ಕಡದಿ’ ಸಿನಿಮಾನಲ್ಲೂ ಹಲವು ಕನ್ನಡ ಹಾಡುಗಳನ್ನು ತೆಲುಗಿನಲ್ಲಿ ಬಳಸಲಾಗಿದೆ.

ಹೊಂಬಿಸಿಲು ಸಿನಿಮಾದ ‘ಜೀವ ವೀಣೆ ನೀಡು ಮಿಡಿತದ ಸಂಗೀತ’ ಹಾಡು ತೆಲುಗಿನ ‘ಇಂಟಿಂಟಿ ರಾಮಾಯಣಂ’ ಸಿನಿಮಾನಲ್ಲಿ ಬಳಕೆ ಆಗಿದೆ. ‘ನಾಗಮಲ್ಲಿ’ ಹೆಸರಿನ ತೆಲುಗು ಸಿನಿಮಾನಲ್ಲಿನ ಎಲ್ಲ ಹಾಡುಗಳು ಕನ್ನಡದ ಬೇರೆ ಬೇರೆ ಸಿನಿಮಾಗಳಿಂದ ತೆಗೆದುಕೊಂಡು ಹೋಗಿ ಬಳಸಿಕೊಳ್ಳಲಾಗಿದೆ. ಕನ್ನಡದ ‘ಕನಸಲೂ ನೀನೆ, ಮನಸಲೂ ನೀನೆ’ ಹಾಡು, ತೆಲುಗಿನಲ್ಲಿ ‘ಚಿನಕುಲುಗಾ ರಾಲಿ’ ಎಂದಾಗಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ಆರಂಭದ ಕೆಲ ಸಿನಿಮಾಗಳಲ್ಲಿಯೂ ಸಹ ಕನ್ನಡ ಹಾಡುಗಳನ್ನು ತೆಲುಗಿನಲ್ಲಿ ರೀಮೇಕ್ ಮಾಡಿದ್ದಿದೆ. ವಿಶೇಷವೆಂದರೆ ರಾಜನ್ ನಾಗೇಂದ್ರ ಅವರೇ ಹಲವಾರು ಕನ್ನಡ ಹಾಡುಗಳನ್ನು ತೆಲುಗಿಗೆ ತೆಗೆದುಕೊಂಡು ಹೋಗಿದ್ದರು.

ಹಾಡುಗಳ ಈ ವರ್ಗಾ-ವರ್ಗಿ ಹೊಸತೂ ಅಲ್ಲ, ನಿಲ್ಲುವುದೂ ಇಲ್ಲ. ತೀರ ಇತ್ತೀಚೆಗಿನ ವರೆಗೂ ಸಹ ಬೇರೆ ಭಾಷೆಗಳಲ್ಲಿ ಸೂಪರ್ ಹಿಟ್ ಆದ ಹಾಡುಗಳನ್ನು ಬೇರೊಂದು ಭಾಷೆಯ ಸಿನಿಮಾಗಳಲ್ಲಿ ಬಳಸಲಾಗುತ್ತದೆ. ಆದರೆ ಇತ್ತೀಚೆಗೆ ಟ್ರೆಂಡ್ ಬದಲಾಗಿದ್ದು, ಅದೇ ಭಾಷೆಯ ಹಳೆಯ ಹಾಡುಗಳನ್ನು ರೀಮಿಕ್ಸ್ ಮೂಲಕ ಬಳಸಲಾಗುತ್ತಿದೆ. ಮಾತ್ರವಲ್ಲದೆ, ಒಟ್ಟಾರೆಯಾಗಿ ಸಿನಿಮಾ ಸಂಗೀತದ ಗುಣಮಟ್ಟವೂ ಕಡಿಮೆ ಆಗಿದೆ ಎಂಬ ದೂರು ಸಹ ಇದೆ. ಇತ್ತೀಚೆಗೆ ಸಿನಿಮಾ ಸಂಗೀತದಲ್ಲಿ ಮಾಧುರ್ಯ ಹೋಗಿ ಅಬ್ಬರ ಬಂದಿದೆ ಎಂಬ ದೂರಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Infosys Hiring: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ – Kannada News | Infosys Hiring 20,000 Freshers for FY27: Boosts AI and Digital Capabilities

ಐಟಿ ದೈತ್ಯ ಇನ್ಫೋಸಿಸ್ ಕಂಪನಿಯು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಮುಂಬರುವ 2026-27ರ ಹಣಕಾಸು ವರ್ಷದಲ್ಲಿ ಕನಿಷ್ಠ 20,000 ಹೊಸ ಪದವೀಧರರನ್ನು (Freshers) ನೇಮಿಸಿಕೊಳ್ಳುವುದಾಗಿ ಘೋಷಿಸಿದೆ. 2026ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಫಲಿತಾಂಶಗಳ ಪ್ರಕಟಣೆಯ ನಂತರ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಮತ್ತು ಸಿಎಫ್‌ಒ ಜಯೇಶ್ ಸಂಘರ್ಷ್ಕಾ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧದಂತಹ ಜಾಗತಿಕ ಆರ್ಥಿಕ ಸವಾಲುಗಳ ನಡುವೆಯೂ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ವಿಭಾಗದಲ್ಲಿ ಹೂಡಿಕೆಗಳು ಉತ್ತಮವಾಗಿದ್ದು, ಈ ನೇಮಕಾತಿ ಪ್ರಕ್ರಿಯೆಯು ಡಿಜಿಟಲ್, ಕ್ಲೌಡ್ ಮತ್ತು AI ಆಧಾರಿತ ಸೇವೆಗಳಲ್ಲಿ ಕಂಪನಿಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ಆಶಯ ವ್ಯಕ್ತಪಡಿಸಲಾಗಿದೆ.

ಕಂಪನಿಯು ತನ್ನ ಆರ್ಥಿಕ ಸ್ಥಿತಿಗತಿಯಲ್ಲೂ ಬಲವಾದ ಬೆಳವಣಿಗೆಯನ್ನು ದಾಖಲಿಸಿದ್ದು, 2026ರ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡಾ 20.8 ರಷ್ಟು ಏರಿಕೆಯಾಗಿ 8,501 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಲಾಭವು 7,033 ಕೋಟಿ ರೂಪಾಯಿಗಳಷ್ಟಿತ್ತು. ಅಲ್ಲದೆ, ಕಂಪನಿಯ ಒಟ್ಟು ಆದಾಯವು ಶೇಕಡಾ 13.4 ರಷ್ಟು ಏರಿಕೆಯಾಗಿದ್ದು, 46,402 ಕೋಟಿ ರೂಪಾಯಿಗಳನ್ನು ತಲುಪಿದೆ. ಮಾರ್ಚ್ 31, 2026 ರ ವೇಳೆಗೆ ಒಟ್ಟು 3,28,594 ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್, ಕ್ಯಾಂಪಸ್ ನೇಮಕಾತಿ ಮತ್ತು ನೇರ ಸಂದರ್ಶನಗಳ ಮೂಲಕ ಹೊಸ ಪ್ರತಿಭೆಗಳನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಸಜ್ಜಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಂಪನಿಯ ಮಂಡಳಿಯು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಅರ್ಹ ಉದ್ಯೋಗಿಗಳಿಗೆ ಕಾರ್ಯಕ್ಷಮತೆ ಆಧಾರಿತ ಷೇರು ಪ್ರೋತ್ಸಾಹ ಧನ (Performance-based Stock Incentives) ಮತ್ತು ಹಣಕಾಸು ಹಾಗೂ ಇಎಸ್‌ಜಿ ಮೆಟ್ರಿಕ್‌ಗಳಿಗೆ ಸಂಬಂಧಿಸಿದ ಇಕ್ವಿಟಿ ಅನುದಾನಗಳನ್ನು ಅನುಮೋದಿಸಲಾಗಿದೆ. ಇದಲ್ಲದೆ, ಹೂಡಿಕೆದಾರರಿಗೂ ಲಾಭದ ಹಂಚಿಕೆ ಮಾಡಲಾಗಿದ್ದು, ಪ್ರತಿ ಈಕ್ವಿಟಿ ಷೇರಿಗೆ 25 ರೂಪಾಯಿಗಳ ಅಂತಿಮ ಲಾಭಾಂಶವನ್ನು (Dividend) ಶಿಫಾರಸು ಮಾಡಲಾಗಿದೆ. ಇದರ ದಾಖಲೆ ದಿನಾಂಕವನ್ನು ಜೂನ್ 10 ಎಂದು ನಿಗದಿಪಡಿಸಲಾಗಿದ್ದು, ಜೂನ್ 25 ರಂದು ಪಾವತಿ ಮಾಡಲಾಗುವುದು. ಕಂಪನಿಯ 45ನೇ ವಾರ್ಷಿಕ ಸಾಮಾನ್ಯ ಸಭೆಯು ಜೂನ್ 23 ರಂದು ನಡೆಯಲಿದ್ದು, ಅಲ್ಲಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿಎಂಸಿ ಅಭ್ಯರ್ಥಿಯ ಭದ್ರಕೋಟೆಯಲ್ಲಿ ಇವಿಎಂ ಮೇಲಿನ ಬಿಜೆಪಿ ಬಟನ್​​ಗೆ ಟೇಪ್! ಮರು ಮತದಾನಕ್ಕೆ ಆಗ್ರಹ – Kannada News | West Bengal Elections Tape on BJP button on EVM in West Bengal Falta BJP demands immediate repoll

ಕೊಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ (West Bengal Assembly Elections) ಈ ಬಾರಿ ಬಿಜೆಪಿ ಮತ್ತು ಟಿಎಂಸಿ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುತೂಹಲಕ್ಕೆ ಮೇ 4ರಂದು ತೆರೆ ಬೀಳಲಿದೆ. ಟಿಎಂಸಿ ನಾಯಕರಾದ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ವಿಧಾನಸಭಾ ಸ್ಥಾನವಾದ ಫಾಲ್ಟಾ ಭಾರೀ ಸುದ್ದಿಯಲ್ಲಿದೆ. ಫಾಲ್ಟಾ ಕ್ಷೇತ್ರದ ಕೆಲವು ಭಾಗಗಳಲ್ಲಿ ತಕ್ಷಣ ಮರು ಮತದಾನಕ್ಕೆ ಭಾರತೀಯ ಜನತಾ ಪಕ್ಷ ಒತ್ತಾಯಿಸಿದ ನಂತರ ಇಂದಿನ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ವಿವಾದಾತ್ಮಕ ತಿರುವು ಪಡೆದುಕೊಂಡಿತು.

ಹಲವಾರು ಮತಗಟ್ಟೆಗಳಲ್ಲಿ ಮತದಾರರಿಗೆ ಇವಿಎಂನಲ್ಲಿ ಬೇಕಾದ ಚಿಹ್ನೆಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಫಾಲ್ಟಾದಲ್ಲಿ ಇವಿಎಂ ಮೇಲಿನ ಬಿಜೆಪಿ ಅಭ್ಯರ್ಥಿಯ ಚಿಹ್ನೆಯ ಬಟನ್ ಮೇಲೆ ಟೇಪ್ ಅಂಟಿಸಿರುವ ಫೋಟೋ ವೈರಲ್ ಆಗಿದೆ. ಟಿಎಂಸಿಗೆ ಮಾತ್ರ ಮತ ಹಾಕಬೇಕೆಂದು ಈ ರೀತಿ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಆಗ್ರಗಹಿಸಿದೆ.

ತಮ್ಮ ಪಕ್ಷಕ್ಕೆ ಮತ ಚಲಾಯಿಸುವ ಆಯ್ಕೆಯನ್ನು ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಟೇಪ್‌ನಿಂದ ಮುಚ್ಚಲಾಗಿದೆ ಎಂದು ಹೇಳಿಕೊಂಡು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳನ್ನು ಹಂಚಿಕೊಂಡ ನಂತರ ವಿವಾದ ಪ್ರಾರಂಭವಾಯಿತು. ಅವರ ಪ್ರಕಾರ, ಈ ವಿಷಯವು ಸ್ಥಳೀಯ ಶಾಲೆಯಲ್ಲಿ ಒಂದು ಸೇರಿದಂತೆ ಅನೇಕ ಬೂತ್‌ಗಳಲ್ಲಿ ವರದಿಯಾಗಿದೆ. ಇದು ಮತದಾರರು ತಮ್ಮ ಮತಗಳನ್ನು ಮುಕ್ತವಾಗಿ ಚಲಾಯಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿರಬಹುದು ಎಂದು ಅಮಿತ್ ಮಾಳವಿಯಾ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Video: ಬಂಗಾಳ ಅಂತಿಮ ಸಮರದಲ್ಲಿ ಆರಂಭಿಕ ವಿಘ್ನ: ಹಲವೆಡೆ ಇವಿಎಂ ದೋಷ, ಮತಗಟ್ಟೆಗಳ ಬಳಿ ಹಿಂಸಾಚಾರ

ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗವು, ಅಂತಹ ದೂರುಗಳನ್ನು ಪರಿಶೀಲಿಸುತ್ತೇವೆ. ಒಂದುವೇಳೆ ಆ ಆರೋಪ ನಿಜವೆಂದು ಕಂಡುಬಂದರೆ, ಆ ಬೂತ್‌ಗಳಲ್ಲಿ ಮರು ಮತದಾನ ನಡೆಸಲಾಗುವುದು ಎಂದು ಹೇಳಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಡೈಮಂಡ್ ಹಾರ್ಬರ್ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಕೇಂದ್ರ ಪಡೆಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಶಾಂತಿಯುತ ಮತದಾನಕ್ಕಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bangalore Rain: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ; ಜನರು ಪರದಾಟ – Kannada News | Bangalore rain Severe Hailstorm Lashes Bengaluru; Traffic Gridlock Reported

ಬೆಂಗಳೂರು, ಏಪ್ರಿಲ್​ 29: ಹಲವು ದಿನಗಳಿಂದ ಸತತ ಬಿಸಿಲ ಝಳಕ್ಕೆ ಕಂಗಾಲಾಗಿದ್ದ ಸಿಲಿಕಾನ್ ಸಿಟಿ ಜನತೆಗೆ ವರುಣ ಶಾಕ್​ ನೀಡಿದೆ. ಸಂಜೆಯಾಗುತ್ತಿದ್ದಂತೆ ನಗರದಾದ್ಯಂತ ಬಿರುಗಾಳಿ ಸಮೇತ ದಿಢೀರ್ ಧಾರಾಕಾರ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಏಲ್ಲೆಲ್ಲಿ ಮಳೆ?

ಮೆಜೆಸ್ಟಿಕ್, ಮಾರುಕಟ್ಟೆ (ಮಾರ್ಕೆಟ್), ಶಾಂತಿನಗರ, ರಿಚ್ಮಂಡ್ ಸರ್ಕಲ್ ಹಾಗೂ ಕೋರಮಂಗಲ ಸೇರಿದಂತೆ ಹಲವಡೆ ಭಾರಿ ಮಳೆ ಸುರಿಯುತ್ತಿದೆ.

ಮತ್ತಷ್ಟು ಮಾಹಿತಿ ಅಪ್​ಡೇಟ್ ಆಗಲಿದೆ.

Source link

ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಬಿದ್ದ ಕಾರು: ಒಂದೂವರೆ ವರ್ಷದ ಮಗು ಸೇರಿ ತಾಯಿ ಸಾವು – Kannada News | Hassan Swift Car Tragedy: Mother, Child Die as Vehicle Plunges into Hemavathi Canal

ನಾಲೆಗೆ ಬಿದ್ದ ಸ್ವಿಫ್ಟ್ ಕಾರುImage Credit source: tv9 kannada

ಹಾಸನ, ಏಪ್ರಿಲ್​ 29: ಚಾಲಕನ ನಿಯಂತ್ರಣ ತಪ್ಪಿ (Accident) ಹೇಮಾವತಿ ನಾಲೆಗೆ ಸ್ವಿಫ್ಟ್ ಕಾರು ಬಿದ್ದು ಪರಿಣಾಮ  ತಾಯಿ ಸೇರಿದಂತೆ ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಲ್ಲನಘಟ್ಟ ಬಳಿ ನಡೆದಿದೆ. ಪ್ರಿಯಾಂಕಾ(30) ಮತ್ತು ಮಗು ವೈಭವ್ ಮೃತರು. ಘಟನೆಯಲ್ಲಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬೆಂಗಳೂರಿನ ದೇವನಹಳ್ಳಿ ಮೂಲದ ಕುಟುಂಬವು ಸ್ವಿಫ್ಟ್ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಮುಗಿಸಿಕೊಂಡು ಮರಳಿ ಬರುತ್ತಿದ್ದರು. ಚನ್ನರಾಯಪಟ್ಟಣ ತಾಲೂಕಿನ ಮಲ್ಲನಘಟ್ಟ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದಲ್ಲಿದ್ದ ಹೇಮಾವತಿ ನಾಲೆಗೆ ಬಿದ್ದಿದೆ. ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ದಂಪತಿ ತೆರಳುತ್ತಿದ್ದ ಬೈಕ್​ಗೆ ಲಾರಿ ಡಿಕ್ಕಿ: ಪತ್ನಿ ಸಾವು, ಪತಿಗೆ ಗಾಯ

ದಂಪತಿ ತೆರಳುತ್ತಿದ್ದ ಬೈಕ್​ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪತ್ನಿ ಸಾವನ್ನಪ್ಪಿದ್ದು, ಪತಿ ಗಾಯಗೊಂಡಿರುವಂತಹ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಫ್ಲೈಓವರ್ ಬಳಿ ನಡೆದಿದೆ. ರಾಣಿ ಮೃತ ಪತ್ನಿ. ಗಂಭೀರವಾಗಿ ಗಾಯಗೊಂಡಿರುವ ಪತಿ ನಾಗೇಂದ್ರರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಉಡುಪಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್ ಹಾಗೂ ಟ್ರಕ್‌ಗೆ ಡಿಕ್ಕಿಯಾದ ಪ್ರವಾಸಿ ಬಸ್; ಇಬ್ಬರು ವಿದ್ಯಾರ್ಥಿಗಳು ಸಾವು!

ದಂಪತಿ ಮದುವೆ ಕಾರ್ಯಕ್ರಮ ಮುಗಿಸಿ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ, ಬೈಕ್​​ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ನಂಜನಗೂಡು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಎಕ್ಸೆಲ್​ ವೈಯರ್​ ತುಂಡಾಗಿ ಜಮೀನಿಗೆ ನುಗ್ಗಿದ ಸಾರಿಗೆ ಬಸ್

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜಾಲಿಹಾಳ ಗ್ರಾಮದ ಬಳಿ ಎಕ್ಸೆಲ್​ ವೈಯರ್​ ತುಂಡಾಗಿ ಸಾರಿಗೆ ಬಸ್ ಜಮೀನಿಗೆ ನುಗ್ಗಿದ ಘಟನೆ ನಡೆದಿದೆ. ಬಸ್​ನಲ್ಲಿ ಇದ್ದ 55ಕ್ಕೂ ಹೆಚ್ಚು ಪ್ರಯಾಣಿಕರು ಸುರಕ್ಷಿತವಾಗಿದ್ದು, ಭಾರೀ ಅಪಘಾತವೊಂದು ತಪ್ಪಿದೆ.

ಇದನ್ನೂ ಓದಿ: ಕೊಳ್ಳೇಗಾಲ: ಮದುವೆ ಮನೆಯಲ್ಲಿ ಚಿನ್ನದ ವಿಚಾರಕ್ಕೆ ಭಾರಿ ಗಲಾಟೆ, ಚಾಕುವಿನಿಂದ ಇರಿದು ಮರ್ಮಾಂಗಕ್ಕೆ ಒದ್ದು ಹಲ್ಲೆ

ಓರ್ವ ಮಹಿಳೆಗೆ ಗಾಯವಾಗಿದ್ದು, ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೆ.ಬಸಾಪುರ ಗ್ರಾಮದಿಂದ ಸಿಂಧನೂರಿಗೆ ಸರ್ಕಾರಿ ಬಸ್ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಸಿಂಧನೂರು ಗ್ರಾಮೀಣ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link