ಬೆಂಗಳೂರು, ಏಪ್ರಿಲ್ 29: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಕನ್ನಡ ಮತ್ತು ಮರಾಠಿ ಭಾಷೆಗಳ ನಡುವಿನ ಸಂಬಂಧವನ್ನು ತಾಯಿ ಮತ್ತು ಮೌಶಿ (ಚಿಕ್ಕಮ್ಮ) ಬಾಂಧವ್ಯಕ್ಕೆ ಹೋಲಿಸಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಧಾಮೂರ್ತಿ ತಮ್ಮ ಜೀವನದಲ್ಲಿ ಈ ಎರಡು ಭಾಷೆಗಳ ಸ್ಥಾನವನ್ನು ಸುಂದರವಾಗಿ ಬಣ್ಣಿಸುತ್ತಾರೆ. ನನಗೆ ಕನ್ನಡ ನನ್ನ ಹೆತ್ತ ತಾಯಿಯಿದ್ದಂತೆ, ಆದರೆ ಮರಾಠಿ ಭಾಷೆ ನನಗೆ ಚಿಕ್ಕಮ್ಮನಿದ್ದಂತೆ. ಶ್ರೀಕೃಷ್ಣನಿಗೆ ದೇವಕಿ ಮತ್ತು ಯಶೋದೆಯೆಂಬ ಇಬ್ಬರು ತಾಯಂದಿರಿದ್ದಂತೆ, ನನಗೂ ಈ ಎರಡು ಭಾಷೆಗಳು ಅಷ್ಟೇ ಪ್ರಿಯವಾದವು ಎಂದು ಹೇಳಿದ್ದಾರೆ.
ನಾವು ಎಲ್ಲಿ ವಾಸಿಸುತ್ತೇವೆಯೋ ಆ ರಾಜ್ಯದ ಭಾಷೆಯನ್ನು ಕಲಿಯಬೇಕು ಎಂದ ಅವರು, ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಮರಾಠಿ ಕಲಿಯಬೇಕು, ಕರ್ನಾಟಕದಲ್ಲಿರುವ ಮರಾಠಿಗರು ಕನ್ನಡ ಕಲಿಯಬೇಕು. ಭಾಷೆ ಎಂಬುದು ಮನುಷ್ಯರನ್ನು ಬೆಸೆಯುವ ಸೇತುವೆಯಾಗಬೇಕೇ ಹೊರತು ಗೋಡೆಯಾಗಬಾರದು ಎಂದಿದ್ದಾರೆ.
ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ ‘ಮ್ಯಾಂಗೋ ಪಚ್ಚ’ ಪೋಸ್ಟರ್ ಹಾಗೂ ಟೀಸರ್ಗಳ ಮೂಲಕ ಗಮನ ಸೆಳೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜನವರಿಯಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆ ಕಾರಣಾಂತರಗಳಿಂದ ವಿಳಂಬ ಆಯಿತು. ಈಗ ಸಿನಿಮಾಗೆ ಹೊಸ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಜೂನ್ 5ರಂದು ಸಿನಿಮಾ ತೆರೆಗೆ ಬರಲಿದೆ.
ಈ ಮೊದಲು ‘ಟಾಕ್ಸಿಕ್’ ಸಿನಿಮಾ ಜೂನ್ 4ರಂದು ಬರುವುದಾಗಿ ಘೋಷಣೆ ಮಾಡಿತ್ತು. ಆದರೆ, ಇಂದು (ಏಪ್ರಿಲ್ 29) ಯಶ್ ಅವರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದರು. ಸಿನಿಮಾ ವಿಳಂಬ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಬೆನ್ನಲ್ಲೇ ಆ ದಿನಾಂಕವನ್ನು ‘ಮ್ಯಾಂಗೋ ಪಚ್ಚ’ ಚಿತ್ರ ಲಾಕ್ ಮಾಡಿಕೊಂಡಿದೆ. ಆ ದಿನಾಂಕದಂದು ಸಿನಿಮಾ ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ನೀಡಿದೆ. ಸುದೀಪ್ ಟ್ವೀಟ್ ಮಾಡಿ ರಿಲೀಸ್ ದಿನಾಂಕ ಘೋಷಣೆ ಮಾಡಿದ್ದಾರೆ.
‘ಮ್ಯಾಂಗೋ ಪಚ್ಚ’ ಸಿನಿಮಾದ ಟೀಸರ್ ಈ ಮೊದಲು ರಿಲೀಸ್ ಆಗಿ ಗಮನ ಸೆಳೆದಿತ್ತು. ಈಗ ಮೇ ತಿಂಗಳಲ್ಲಿ ಸಿನಿಮಾದ ಟ್ರೇಲರ್ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.
ಮ್ಯಾಂಗೋ ಪಚ್ಚ ಈ ವರ್ಷದ ಸಂಕ್ರಾಂತಿಗೆ ಅಂದರೆ ಜನವರಿ 15ಕ್ಕೆ ಅದ್ದೂರಿಯಾಗಿ ತೆರೆಗೆ ಬರಲು ಸಜ್ಜಾಗಿತ್ತು. ಆದರೆ, ಇದನ್ನು ತಂಡ ಮುಂದೂಡಿಕೊಂಡಿತ್ತು. ಮ್ಯಾಂಗೋ ಪಚ್ಚ ವಿವೇಕ ನಿರ್ದೇಶನದ ಚೊಚ್ಚಲ ಸಿನಿಮಾ . ಸಿನಿಮಾದ ಕತೆ ಮೈಸೂರಿನಲ್ಲಿ ನಡೆಯುತ್ತದೆ. ಕ್ರೈಂ ಥ್ರಿಲ್ಲರ್ ಕತೆ ಒಳಗೊಂಡಿದೆ. 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿವೆ. ಸಿನಿಮಾದ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ.
ಸಂಚಿತ್ ಚೊಚ್ಚಲ ಚಿತ್ರ ಇದು. ಈ ಚಿತ್ರಕ್ಕೆ ಕಾಜಲ್ ಕುಂದರ್ ನಾಯಕಿ. ಮಯೂರ್ ಪಟೇಲ್, ಭಾವನಾ, ಹರಿಣಿ ಶ್ರೀಕಾಂತ್, ಹಂಸ, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್, ಪ್ರಶಾಂತ್ ಹಿರೇಮಠ್, ಇನ್ನೂ ಅನೇಕರು ಬಣ್ಣ ಹಚ್ಚಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ, ರವಿವರ್ಮ ಹಾಗೂ ರಿಯಲ್ ಸತೀಶ್ ಮ್ಯಾಂಗೋ ಪಚ್ಚ ಸಿನಿಮಾಗೆ ಸ್ಟಂಟ್ ಡೈರೆಕ್ಟ್ ಮಾಡಿದ್ದಾರೆ. ಸಿನಿಮಾದ ಮೆಲೋಡಿ ಹಾಡೊಂದಕ್ಕೆ ಎ ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ.
ಬರೇಲಿ, ಏಪ್ರಿಲ್ 29: ದಿನಸಿ ಅಂಗಡಿ ಮಾಲೀಕರೊಬ್ಬರು 1,200 ರೂ. ಹಣಕ್ಕಾಗಿ ಮಹಿಳೆಯ ಕಪಾಳಕ್ಕೆ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ ಕಂಡುಬರುವಂತೆ, ಆ ಮಹಿಳೆ ಯುವತಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿದ್ದರೂ, ದಿನಸಿ ಅಂಗಡಿಯ ಕೌಂಟರ್ನಲ್ಲಿ ಕುಳಿತ ವ್ಯಕ್ತಿ ತನಗೇನೂ ಗೊತ್ತಿಲ್ಲ ಎಂಬಂತೆಯೇ ಇದ್ದರು. ಹಲ್ಲೆಗೊಳಗಾದ ಯುವತಿಯು ಪ್ರತಿರೋಧವನ್ನೂ ತೋರದೆ ಸುಮ್ಮನೆ ಹೊಡೆತಗಳನ್ನು ತಿನ್ನುತ್ತಾ ನಿಂತಿರುವುದರ ಬಗ್ಗೆಯೂ ಕೂಡ ಬೇಸರ ವ್ಯಕ್ತವಾಗಿದೆ. @gharkekalesh’ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.ಹಣದ ಅಹಂನಿಂದ ಒಬ್ಬ ಅಸಹಾಯಕ ವ್ಯಕ್ತಿಯ ಮೇಲೆ ಇಷ್ಟೊಂದು ಕ್ರೌರ್ಯ ತೋರುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಉಡುಪಿ, ಏಪ್ರಿಲ್ 29: ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿಯೇ ಹತ್ತಕ್ಕೂ ಹೆಚ್ಚು ಮರಗಳ ಮಾರಣಹೋಮ ನಡೆದಿದೆ. ಏ.24ರಂದು ಮಾವಿನ ಕಾಯಿ ಕೀಳುವಾಗ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮೃತಪಟ್ಟಿದ್ದರು. ಮರದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಕಾರಣ ಪ್ರಾಣ ಬಿಟ್ಟಿದ್ದರು. ಆದರೆ ಇದೀಗ ನೆಗಡಿ ಆಯ್ತು ಎಂದು ಉಡುಪಿ ಜಿಲ್ಲಾಡಳಿತ ಮೂಗನ್ನೇ ಕತ್ತರಿಸಿಕೊಂಡಿದೆ. ವಿದ್ಯುತ್ ತಂತಿಯನ್ನು ಬೇರೆಡೆಗೆ ಶಿಫ್ಟ್ ಮಾಡುವಂತೆ ವಿವಿಧ ಸಂಘಟನೆಗಳು ಒತ್ತಾಯಿಸಿದ್ದವು. ಅದರಂತೆ ತಂತಿ ವರ್ಗಾವಣೆ ಬದಲು ಹಲವು ವರ್ಷಗಳಿಂದ ಹಣ್ಣು ನೀಡುತ್ತಿದ್ದ ಮರಗಳಿಗೇ ಕೊಡಲಿಯೇಟು ನೀಡಿರೋದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಧಿಕಾರಿ ಕೂರುವ ಕೊಠಡಿ ಹೊರಭಾಗದಲ್ಲಿದ್ದ ಬೃಹದಾದ ಮರಗಳು ಪಕ್ಷಿಗಳಿಗೆ ಆಶ್ರಯತಾಣವೂ ಆಗಿತ್ತು. ಹೀಗಾಗಿ ಜಿಲ್ಲಾಡಳಿತದ ಕ್ರಮಕ್ಕೆ ಪರಿಸರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್ (DC) ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಾಳೆ (ಏ.30) ನಡೆಯಲಿರುವ ಈ ಪಂದ್ಯಕ್ಕೆ ಆರ್ಸಿಬಿ ತಂಡದ ಸ್ಟಾರ್ ಬ್ಯಾಟರ್ ಅಲಭ್ಯರಾಗುವ ಸಾಧ್ಯತೆಯಿದೆ.
ಕಳೆದ ವಾರ ನಡೆದ ಅಭ್ಯಾಸ ಶಿಬಿರದ ವೇಳೆ ಫಿಲ್ ಸಾಲ್ಟ್ ಅವರಿಗೆ ಗಾಯವಾಗಿತ್ತು. ಈ ಕಾರಣದಿಂದಾಗಿ ಅವರು ಏಪ್ರಿಲ್ 24 ರಂದು ಗುಜರಾತ್ ಟೈಟಾನ್ಸ್ ಮತ್ತು ಏಪ್ರಿಲ್ 27 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಿಂದ ಹೊರಗುಳಿಯಬೇಕಾಯಿತು.
ಇದೀಗ ದೆಹಲಿಯಿಂದ ಅಹಮದಾಬಾದ್ಗೆ ಪ್ರಯಾಣಿಸಿದ ಆರ್ಸಿಬಿ ಬಳಗದಲ್ಲಿ ಫಿಲ್ ಸಾಲ್ಟ್ ಕಾಣಿಸಿಕೊಂಡಿಲ್ಲ. ಹೀಗಾಗಿಯೇ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಫಿಲ್ ಸಾಲ್ಟ್ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.
ಪ್ರಸ್ತುತ ಮಾಹಿತಿ ಪ್ರಕಾರ, ಫಿಲ್ ಸಾಲ್ಟ್ ಅವರು ಇನ್ನೂ ನೆಟ್ಸ್ನಲ್ಲಿ ಅಭ್ಯಾಸ ಆರಂಭಿಸಿಲ್ಲ. ಸಾಲ್ಟ್ ಅವರ ಗಾಯವು ಗಂಭೀರವಲ್ಲದಿದ್ದರೂ, ತಂಡವು ಅವರ ಚೇತರಿಕೆಯ ವಿಷಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುತ್ತಿದೆ. ಹೀಗಾಗಿ ಅವರು ಸಂಪೂರ್ಣ ಫಿಟ್ ಆಗುವವರೆಗೆ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎನ್ನಬಹುದು.
ಫಿಲ್ ಸಾಲ್ಟ್ ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ನ ಯುವ ಪ್ರತಿಭೆ ಜೇಕಬ್ ಬೆಥೆಲ್ ಅವರಿಗೆ ತಂಡದಲ್ಲಿ ಮತ್ತೊಮ್ಮೆ ಸ್ಥಾನ ಸಿಗಲಿದೆ. ಅದರಂತೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಜೇಕಬ್ ಬೆಥೆಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.
ಬೆಂಗಳೂರು (ಏ. 29): ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದು (Viral Video) ಕಳೆದ ಕೆಲವು ದಿನಗಳಿಂದ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದೆ. ಕಾರ್ಖಾನೆಯೊಂದರಿಂದ ಬಂದ ಈ ಕ್ಲಿಪ್, ಆಲೂಗೆಡ್ಡೆ ಚಿಪ್ಸ್ ಉತ್ಪಾದನಾ ಪ್ರಕ್ರಿಯೆಯನ್ನು ಚಿತ್ರಿಸಿದ್ದು, ನೆಟಿಜನ್‌ಗಳಿಗೆ ವಾಕರಿಕೆ ಬರುವಂತೆ ಮಾಡಿದೆ. ನೈರ್ಮಲ್ಯ ಮಾನದಂಡಗಳನ್ನು ಉಲ್ಲಂಘಿಸುವ ಈ ಕೆಲವೇ ಸೆಕೆಂಡುಗಳ ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸಾಬೂನು ನೀರಿನಲ್ಲಿ ಆಲೂಗಡ್ಡೆ ಕ್ಲೀನ್, ಅಜಾಗರೂಕ ಕೆಲಸಗಾರರು
ಈ ವೈರಲ್ ವಿಡಿಯೋದಲ್ಲಿ, ಒಬ್ಬ ವ್ಯಕ್ತಿ ತನ್ನ ಒಳ ಉಡುಪುಗಳನ್ನು ಮಾತ್ರ ಧರಿಸಿ ದೊಡ್ಡ ಟ್ಯಾಂಕ್ ಒಳಗೆ ನಿಂತಿರುವುದನ್ನು ಕಾಣಬಹುದು. ಟ್ಯಾಂಕ್ ಕೊಳಕು ಸೋಪ್ ನೀರು ಮತ್ತು ಹಸಿ ಆಲೂಗಡ್ಡೆ ಚಿಪ್ಸ್‌ನಿಂದ ತುಂಬಿದೆ ಎಂದು ವರದಿಯಾಗಿದೆ. ಶಾಕಿಂಗ್ ಎಂದರೆ, ಆ ವ್ಯಕ್ತಿ ಟ್ಯಾಂಕ್ ಒಳಗೆ ನಿಂತು ಸಿಗರೇಟ್ ಸೇದುತ್ತಿರುವುದು ಮಾತ್ರವಲ್ಲದೆ, ಕ್ಯಾಮೆರಾವನ್ನು ನೋಡಿ ನಗುತ್ತಿದ್ದಾರೆ.
ಈ ಕ್ಲಿಪ್ ನೋಡಿದಾಗ, ಆಲೂಗಡ್ಡೆಯನ್ನು ಹುರಿಯುವ ಮೊದಲು ಸ್ವಚ್ಛಗೊಳಿಸುವ ಸ್ಥಳೀಯ ಚಿಪ್ ಕಾರ್ಖಾನೆಯ ದೃಶ್ಯದಂತೆ ಕಾಣುತ್ತದೆ. ಆದರೆ, ಟ್ಯಾಂಕ್‌ನಲ್ಲಿರುವ ನೀರು ತುಂಬಾ ಕೊಳಕು ಮತ್ತು ಕೆಸರುಮಯವಾಗಿದ್ದು, ಅದನ್ನು ನೋಡಿದರೆ ಜನರಿಗೆ ವಾಕರಿಕೆ ಬರುವುದು ಖಚಿತ.
@fact.flow_india ಎಂಬ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಬಾರಿ ವೀಕ್ಷಿಸಲಾಗಿದೆ. ನೆಟಿಜನ್‌ಗಳು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ಇದನ್ನು ನೋಡಿದರೆ ನನಗೆ ವಾಂತಿ ಬರುತ್ತಿದೆ”, “ಬಹುಶಃ ಅದಕ್ಕಾಗಿಯೇ ಈ ಚಿಪ್ಸ್ ತುಂಬಾ ಖಾರವಾಗಿದೆ”, “ಹೇ, ದಯವಿಟ್ಟು ಬ್ರಾಂಡ್ ಹೆಸರನ್ನು ಸಹ ಬಹಿರಂಗಪಡಿಸಿ, ಇದರಿಂದ ಜನರು ಜಾಗೃತರಾಗಬಹುದು ಮತ್ತು ಅವುಗಳನ್ನು ಖರೀದಿಸದಿರಬಹುದು” ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಆಹಾರ ಸುರಕ್ಷತೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಕೋಲಾಹಲ ಉಂಟಾಗಿರುವುದು ಇದೇ ಮೊದಲಲ್ಲ. ಬೀದಿ ವ್ಯಾಪಾರಿಯೊಬ್ಬರು ತಮ್ಮ ಪ್ಯಾಂಟ್ ಕೆಳಗೆ ಕೈ ಹಾಕಿ ನಂತರ ಅದೇ ಕೊಳಕು ಕೈಯಿಂದ ಗ್ರಾಹಕರಿಗೆ ಸಮೋಸಾ ಬಡಿಸುತ್ತಿರುವುದನ್ನು ತೋರಿಸುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.
ಹಕ್ಕುತ್ಯಾಗ: ಈ ಸುದ್ದಿಯು ಸಾಮಾಜಿಕ ಮಾಧ್ಯಮದ ವೈರಲ್ ಪೋಸ್ಟ್‌ಗಳು ಮತ್ತು ನೆಟಿಜನ್‌ಗಳ ಪ್ರತಿಕ್ರಿಯೆಗಳನ್ನು ಆಧರಿಸಿದೆ. ಈ ವಿಡಿಯೋದಲ್ಲಿ ಮಾಡಲಾದ ಯಾವುದೇ ಹಕ್ಕುಗಳ ಸತ್ಯಾಸತ್ಯತೆಯನ್ನು TV9 ಕನ್ನಡ ಪರಿಶೀಲಿಸುವುದಿಲ್ಲ.
ಬೆಂಗಳೂರು, ಏಪ್ರಿಲ್ 29: ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮುಲ್) ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪವನ್ನು ಪೂರೈಸುವ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದ ಅಡಿಯಲ್ಲಿ, ಬಮುಲ್ ಮುಂದಿನ ಆರು ತಿಂಗಳ ಅವಧಿಗೆ ಸುಮಾರು 2 ಲಕ್ಷ ಕೆಜಿ ತುಪ್ಪವನ್ನು ಟಿಟಿಡಿಗೆ ಸರಬರಾಜು ಮಾಡಲಿದೆ. ಪ್ರತಿದಿನ 11.5 ರಿಂದ 12 ಟನ್ ನಂದಿನಿ ತುಪ್ಪವನ್ನು ತಿರುಪತಿಗೆ ಕಳುಹಿಸಲಾಗುವುದು ಎಂದು ಡಿಕೆ ಸುರೇಶ್ ತಿಳಿಸಿದ್ದಾರೆ. ಸುಮಾರು 136 ಕೋಟಿ ರೂ. ವೆಚ್ಚದಲ್ಲಿ ತುಪ್ಪ ಪೂರೈಕೆ ಮಾಡುತ್ತೇವೆ. ನಂದಿನಿ ತುಪ್ಪವು ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಗ್ರಾಹಕರ ವಿಶ್ವಾಸ ಗಳಿಸಿದೆ. ಕಲಬೆರಕೆ ತಡೆಗಟ್ಟಲು ಡಿಜಿಟಲ್ ಲಾಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ.
ದಕ್ಷಿಣ ಭಾರತದ ಹಲವು ಪ್ರಸಿದ್ಧ ದೇವಾಲಯಗಳಲ್ಲಿ ಈಗಾಗಲೇ ಕಟ್ಟುನಿಟ್ಟಾದ ವಸ್ತ್ರ ಸಂಹಿತೆ ಜಾರಿಯಲ್ಲಿದ್ದು, ಇದೀಗ ಅದೇ ಮಾದರಿಯನ್ನು ಒಡಿಶಾದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದಲ್ಲೂ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಗಂಭೀರ ಆಲೋಚನೆ ನಡೆಸುತ್ತಿದೆ. ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಭಕ್ತರಿಗೆ ನಿರ್ದಿಷ್ಟ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸುವಂತೆ ಒಡಿಶಾ ರಾಜ್ಯ ಕಾನೂನು ಆಯೋಗವು ಶಿಫಾರಸು ಮಾಡಿದೆ.
ನ್ಯಾಯಮೂರ್ತಿ ಬಿಶ್ವನಾಥ್ ರಾತ್ ನೇತೃತ್ವದ ಕಾನೂನು ಆಯೋಗವು ಈ ಕುರಿತು ವರದಿಯನ್ನು ಸಿದ್ಧಪಡಿಸಿದ್ದು, ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಪೂರಕವಾದ ಉಡುಪುಗಳನ್ನು ಧರಿಸಿದವರಿಗೆ ಮಾತ್ರ ದೇವಾಲಯದೊಳಗೆ ಪ್ರವೇಶ ನೀಡಬೇಕು ಎಂದು ಸಲಹೆ ನೀಡಿದೆ. ಪ್ರಮುಖವಾಗಿ ಮಹಿಳೆಯರು ಜೀನ್ಸ್, ಟಿ-ಶರ್ಟ್ ಅಥವಾ ಶರ್ಟ್ ಧರಿಸಿ ದೇವಾಲಯಕ್ಕೆ ಬರುವುದನ್ನು ನಿಷೇಧಿಸಬೇಕೆಂದು ಆಯೋಗವು ಸರ್ಕಾರಕ್ಕೆ ತಿಳಿಸಿದೆ. ಈ ಹೊಸ ನಿಯಮವನ್ನು ಜಾರಿಗೆ ತರಲು ‘ಶ್ರೀ ಜಗನ್ನಾಥ ದೇವಾಲಯ ಕಾಯ್ದೆ’ಗೆ ಅಗತ್ಯ ತಿದ್ದುಪಡಿ ತರಲು ಕೂಡ ಪ್ರಸ್ತಾಪಿಸಲಾಗಿದೆ.
ಆಯೋಗದ ಶಿಫಾರಸಿನ ಪ್ರಕಾರ, ಪುರುಷ ಭಕ್ತರು ಧೋತಿ-ಕುರ್ತಾ, ಪಂಚೆ ಅಥವಾ ಸಾಂಪ್ರದಾಯಿಕ ಪೈಜಾಮ-ಕುರ್ತಾವನ್ನು ಧರಿಸಬಹುದು. ಮಹಿಳೆಯರಿಗೆ ಸೀರೆ, ಬ್ಲೌಸ್ ಅಥವಾ ಸಲ್ವಾರ್-ಕಮೀಜ್ ಧರಿಸಲು ಸೂಚಿಸಲಾಗಿದೆ. 10 ವರ್ಷದೊಳಗಿನ ಬಾಲಕಿಯರು ಫ್ರಾಕ್ ಅಥವಾ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ಅವಕಾಶ ನೀಡಲಾಗಿದೆ. ದೇವಾಲಯದ ಆಡಳಿತ ಮಂಡಳಿಯು ಈ ಹಿಂದೆಯೇ ಅರ್ಧ ಪ್ಯಾಂಟ್, ಹರಿದ ಜೀನ್ಸ್ ಮತ್ತು ಸ್ಲೀವ್‌ಲೆಸ್ ಬಟ್ಟೆಗಳನ್ನು ಧರಿಸದಂತೆ ಭಕ್ತರಲ್ಲಿ ಮನವಿ ಮಾಡಿತ್ತು. ಆದರೆ ಕಾಯ್ದೆಯಲ್ಲಿ ಸ್ಪಷ್ಟ ನಿಯಮಗಳಿಲ್ಲದ ಕಾರಣ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ.
ದೇವಾಲಯವು ಕೇವಲ ದರ್ಶನದ ಸ್ಥಳವಲ್ಲ, ಅದು ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗಿದೆ. ಅಲ್ಲಿಗೆ ಬರುವ ಭಕ್ತರು ಶಿಸ್ತು ಮತ್ತು ಭಕ್ತಿಯಿಂದ ಕೂಡಿದ ಉಡುಪುಗಳನ್ನು ಧರಿಸುವುದರಿಂದ ದೇವಾಲಯದ ಪವಿತ್ರ ವಾತಾವರಣವು ಮತ್ತಷ್ಟು ವೃದ್ಧಿಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಒಡಿಶಾ ಸರ್ಕಾರವು ಈ ಶಿಫಾರಸುಗಳನ್ನು ಸದ್ಯ ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಈ ಕುರಿತು ಅಧಿಕೃತ ಕಾನೂನು ರೂಪಿಸುವ ಸಾಧ್ಯತೆಯಿದೆ. ಕರ್ನಾಟಕದ ಉಡುಪಿ ಶ್ರೀಕೃಷ್ಣ ಮಠ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ದೇವಾಲಯ ಸೇರಿದಂತೆ ದೇಶದ ಹಲವು ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಈಗಾಗಲೇ ಇಂತಹ ನಿಯಮಗಳು ಜಾರಿಯಲ್ಲಿರುವುದು ಗಮನಾರ್ಹ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೈಸೂರು, ಏಪ್ರಿಲ್ 29: ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ವೈದ್ಯ ಕೆಲಸದ ಸಮಯದಲ್ಲೇ ಮದ್ಯ ಸೇವಿಸಿ ರಂಪಾಟ ನಡೆಸಿದ್ದಾರೆ.ಕುಡಿದ ಅಮಿಲಿನಲ್ಲಿ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಅಶ್ಲೀಲ ಮೇಸೆಜ್ ಕೂಡ ಕಳುಹಿಸಿದ್ದ ಹಿನ್ನೆಲೆ ವೈದ್ಯ ಡಾ. ಅನಿಲ್ ಕುಮಾರ್ಗೆ ಸಾರ್ವಜನಿಕರು ಧರ್ಮದೇಟು ಕೊಟ್ಟಿದ್ದಾರೆ. ಆಸ್ಪತ್ರೆ ಒಳಭಾಗದಲ್ಲೇ ಸಿಗರೇಟ್ ಸೇದುತ್ತಾ ಡಾ.ಅನಿಲ್ ಕುಮಾರ್ ಗಲಾಟೆ ಮಾಡಿದ್ದು, ಪ್ರತಿನಿತ್ಯ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಕುಡಿದ ಅಮಿಲಿನಲ್ಲಿ ವೈದ್ಯ ರಂಪಾಟ ಮಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಮಾ.27ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸಿಬ್ಬಂದಿ ದೂರು ಕೂಡ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಏಪ್ರಿಲ್ 29: ಬೆಂಗಳೂರು (Bengaluru) ನಗರದಲ್ಲಿ ಡ್ರಗ್ಸ್ ಮಾಫಿಯಾದ (Drugs Mafia) ಬೆನ್ನೆಲುಬು ಮುರಿಯಲು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೇವಲ ಒಂದು ವಾರದಲ್ಲಿ ಬರೋಬ್ಬರಿ 50 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿವಿಧ ವಿಭಾಗಗಳ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಅಕ್ರಮ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಡ್ರಗ್ಸ್ ವಿರುದ್ಧ ಕಾರ್ಯಾಚರಣೆಗಳ ವಿವರ
ಬಾಗಲೂರು ಪೊಲೀಸರು ಸುಮಾರು 16 ಕೋಟಿ ರೂಪಾಯಿ ಮೌಲ್ಯದ ಎಲ್‌ಎಸ್‌ಡಿ (LSD) ಸ್ಟ್ರಿಪ್‌ಗಳನ್ನು ಜಪ್ತಿ ಮಾಡಿದ್ದಾರೆ.
ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ 17.5 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಪತ್ತೆಯಾಗಿದೆ.
ಆಡುಗೋಡಿ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ 1.5 ಕೋಟಿ ರೂಪಾಯಿ ಬೆಲೆಯ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ.
ಯಶವಂತಪುರ ಮತ್ತು ಜಾಲಹಳ್ಳಿ ಭಾಗಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ 6.47 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.
ಚಿಕ್ಕಜಾಲ ಪೊಲೀಸರು 1.6 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಜಪ್ತಿ ಮಾಡಿದ್ದಾರೆ.
ನಗರದ ಯುವಜನತೆಯನ್ನು ಗುರಿಯಾಗಿಸಿಕೊಂಡು ಸರಬರಾಜು ಮಾಡಲಾಗುತ್ತಿದ್ದ ಈ ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯುವ ಮೂಲಕ ಪೊಲೀಸರು ಡ್ರಗ್ಸ್ ಜಾಲಕ್ಕೆ ದೊಡ್ಡ ಏಟು ನೀಡಿದ್ದಾರೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ