ಬೆಂಗಳೂರು/ದೆಹಲಿ, ಏಪ್ರಿಲ್ 29: ಕರ್ನಾಟಕದ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು ದೆಹಲಿಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಕಿಶೋರ್ ಮಕ್ವಾನ ಅವರನ್ನು ಭೇಟಿ ಮಾಡಿ ರಾಜ್ಯದ ಪ್ರಮುಖ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ. ವಿಶೇಷವಾಗಿ ಕರ್ನಾಟಕದಲ್ಲಿ ಜಾರಿಗೆ ತರಲಾದ ‘ಒಳ ಮೀಸಲಾತಿ’ ಕುರಿತು ಅವರು ಆಯೋಗಕ್ಕೆ ಮಾಹಿತಿ ನೀಡಿದ್ದು, ಈ ನಿರ್ಧಾರಕ್ಕೆ ಕಿಶೋರ್ ಮಕ್ವಾನ ಸಂತಸ ವ್ಯಕ್ತಪಡಿಸಿದ್ದಾರೆ. ಇತರೆ ರಾಜ್ಯಗಳೂ ಕರ್ನಾಟಕದ ಮಾದರಿಯನ್ನು ಅನುಸರಿಸಬೇಕು ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ಕುತೂಹಲ ಮೂಡಿಸಿದ ಡಿನ್ನರ್ ಮೀಟಿಂಗ್
ಆಯೋಗದ ಅಧ್ಯಕ್ಷರ ಭೇಟಿಯ ನಂತರ ಸಚಿವ ಮಹದೇವಪ್ಪ ಅವರು ಸಂಸದ ಸುನಿಲ್ ಬೋಸ್ ನಿವಾಸದಲ್ಲಿ ಆಯೋಜಿಸಲಾಗಿದ್ದ ಡಿನ್ನರ್ ಮೀಟಿಂಗ್ನಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್ ಹಾಗೂ ಮುಖಂಡ ಹಂಪನಗೌಡ ಬಾದರ್ಲಿ ಉಪಸ್ಥಿತರಿದ್ದರು. ರಾಜ್ಯದಲ್ಲಿ ಕೇಳಿಬರುತ್ತಿರುವ ಸಿಎಂ ಬದಲಾವಣೆ ಚರ್ಚೆ, ಸಚಿವ ಸಂಪುಟ ಪುನಾರಚನೆ ಮತ್ತು ಅಹಿಂದ ವರ್ಗದ ನಾಯಕರ ಸ್ಥಾನಮಾನಗಳ ಕುರಿತು ಇಲ್ಲಿ ಸುದೀರ್ಘ ಚರ್ಚೆ ನಡೆದಿದೆ ಎನ್ನಲಾಗಿದೆ. ಮುಂಬರುವ ರಾಜಕೀಯ ಬೆಳವಣಿಗೆಗಳ ದೃಷ್ಟಿಯಿಂದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಕುರಿತೂ ಈ ನಾಯಕರು ಸಮಾಲೋಚನೆ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ (Babar Azam) ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ವಿಶ್ವ ದಾಖಲೆಯೊಂದಿಗೆ ಬಾಬರ್ ಸೌತ್ ಆಫ್ರಿಕಾದ ಫಾಫ್ ಡುಪ್ಲೆಸಿಸ್ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಮುರಿದಿದ್ದಾರೆ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ಬೆಂಗಳೂರು (ಏ. 29): ಐಪಿಎಲ್ 2026 ರಲ್ಲಿ ಏಪ್ರಿಲ್ 28 ರಂದು ನಡೆದ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿತು. ಈ ಟೂರ್ನಿಯಲ್ಲಿ ಪಂಜಾಬ್ ಪಡೆ ಮೊದಲ ಸೋಲು ಕಂಡಿತು. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಈ ಹೈ-ಸ್ಕೋರ್ ಪಂದ್ಯದಲ್ಲಿ ಕೆಲ ಅಚ್ಚರಿಯ ಘಟನೆ ಕೂಡ ನಡೆಯಿತು. ಮುಖ್ಯವಾಗಿ ಈ ಪಂದ್ಯದ ಸಮಯದಲ್ಲಿ ಕ್ರೀಡಾಂಗಣದಲ್ಲಿ ನೆತ್ತರು ಹರಿಯಿತು. ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಇದಕ್ಕೆ ಕಾರಣವಾಗಿದ್ದು ಪ್ರಿಯಾಂಶ್ ಆರ್ಯ. ಪ್ರಿಯಾಂಶ್ ಆರ್ಯ ಸಿಡಿಸಿದ ಒಂದು ಸಿಕ್ಸ್ ಕ್ರೀಡಾಂಗಣದಲ್ಲಿ ಕುಳಿತಿದ್ದ ವೃದ್ಧರೊಬ್ಬರಿಗೆ ತಾಗಿ ತೀವ್ರವಾಗಿ ಗಾಯಗೊಂಡು ರಕ್ತಸ್ರಾವ ಸಂಭವಿಸಿತು.
ಪ್ರಿಯಾಂಶ್ ಆರ್ಯ ಸಿಕ್ಸರ್ನಿಂದ ಪಂಜಾಬ್ ಅಭಿಮಾನಿಗೆ ಗಾಯ
ಪ್ರಿಯಾಂಶ್ ಆರ್ಯ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ಎಸೆತಗಳಲ್ಲಿ 29 ರನ್ ಗಳಿಸಿದರು, ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಅವರು ಹೊಡೆದ ಏಕೈಕ ಸಿಕ್ಸರ್ ಕ್ರೀಡಾಂಗಣದಲ್ಲಿ ಕುಳಿತಿದ್ದ ಹಿರಿಯ ಪಂಜಾಬ್ ಕಿಂಗ್ಸ್ ಅಭಿಮಾನಿಗೆ ಮಾರಕವಾಯಿತು. ಚೆಂಡು ಹಿರಿಯ ಕ್ರಿಕೆಟ್ ಅಭಿಮಾನಿಯ ಮುಖಕ್ಕೆ ನೇರವಾಗಿ ಬಂದು, ಅವರ ಕಣ್ಣು ಮತ್ತು ಮೂಗಿನ ನಡುವಿನ ಪ್ರದೇಶಕ್ಕೆ ತಾಗಿತು. ಪರಿಣಾಮ, ಚೆಂಡು ತಗುಲಿದ ಪ್ರದೇಶದಿಂದ ರಕ್ತಸ್ರಾವ ಆಗಿದೆ.
🚨 BIG INJURY IN PBKS FAN’S !😭😲
– Priyansh Arya hits a shot, and the ball goes beyond the boundary and strikes an elderly man in the eye. Blood immediately starts coming out of his eye, and as the bleeding does not stop, he is taken to the hospital right away pic.twitter.com/AciRYAbjZW
ಪ್ರಿಯಾಂಶ್ ಆರ್ಯ ಅವರ ಸಿಕ್ಸರ್ನಿಂದ ಗಂಭೀರವಾಗಿ ಗಾಯಗೊಂಡ ನಂತರ, ಕ್ರೀಡಾಂಗಣದ ವೈದ್ಯಕೀಯ ತಂಡವು ತಕ್ಷಣವೇ ಆ ವ್ಯಕ್ತಿಯನ್ನು ಪರೀಕ್ಷಿಸಿ ಬ್ಯಾಂಡೇಜ್ ಹಾಕಿ ಚಿಕಿತ್ಸೆ ನೀಡಿತು. ಸಾಮಾನ್ಯವಾಗಿ, ಕ್ರೀಡಾಂಗಣದೊಳಗೆ ಉಂಟಾಗುವ ಯಾವುದೇ ಗಾಯಗಳು ಅಥವಾ ಹಾನಿಗೆ ಐಪಿಎಲ್ ಸಂಘಟಕರು ನೇರವಾಗಿ ಜವಾಬ್ದಾರರಾಗಿರುವುದಿಲ್ಲ. ಇದನ್ನು ಟಿಕೆಟ್ ನಿಯಮಗಳಲ್ಲಿಯೂ ಹೇಳಲಾಗಿದೆ. ಆದಾಗ್ಯೂ, ಸಂಘಟಕರು ಯಾವುದೇ ಅಪಾಯಗಳ ಬಗ್ಗೆ ಪ್ರೇಕ್ಷಕರಿಗೆ ಎಚ್ಚರಿಕೆ ನೀಡುತ್ತಾರೆ. ವೈದ್ಯಕೀಯ ಪ್ರೋಟೋಕಾಲ್‌ಗಳ ಅಡಿಯಲ್ಲಿ, ಅವರು ಪ್ರಾಥಮಿಕ ಪರೀಕ್ಷೆಯನ್ನು ಮತ್ತು ಅಗತ್ಯವಿದ್ದರೆ, ಅವರನ್ನು ಆಸ್ಪತ್ರೆಗೆ ಸಾಗಿಸಲು ಸಹಾಯವನ್ನು ಮಾಡುತ್ತಾರೆ.
ಕೆಲವು ಸಂದರ್ಭಗಳಲ್ಲಿ, ಆಟಗಾರರು ಗಾಯಗೊಂಡ ಫ್ಯಾನ್ಗೆ ಸಹಾಯ ಮಾಡುವುದನ್ನು ನಾವು ನೋಡಿದ್ದೇವೆ. ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದಕ್ಕೆ ಉದಾಹರಣೆಗಳಾಗಿದ್ದು, ತಮ್ಮ ಹೊಡೆತಗಳಿಂದ ಗಾಯಗೊಂಡ ಕ್ರಿಕೆಟ್ ಅಭಿಮಾನಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡಿದ್ದಾರೆ ಅಥವಾ ಪಂದ್ಯಗಳ ನಂತರ ಅವರ ಯೋಗಕ್ಷೇಮವನ್ನು ವಿಚಾರಿಸಲು ಸಂಪರ್ಕಿಸಿದ್ದೂ ಇದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವಾರಣಾಸಿ,ಏಪ್ರಿಲ್ 29: ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಶಿಯ ಜನತೆ ಅಭೂತಪೂರ್ವ ಸ್ವಾಗತ ಕೋರಿದ್ದಾರೆ. ವಿಶ್ವನಾಥನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. ಬುಧವಾರ ಪವಿತ್ರ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿಯವರನ್ನು ಶಂಖನಾದ ಮತ್ತು ಸಾಂಪ್ರದಾಯಿಕ ಡ್ರಮ್‌ಗಳ ಮೊಳಗಿನೊಂದಿಗೆ ಬರಮಾಡಿಕೊಳ್ಳಲಾಯಿತು. ಲಾಹುರಾಬಿರ್ ಕ್ರಾಸಿಂಗ್ ಸೇರಿದಂತೆ ನಗರದಾದ್ಯಂತ ಕಿಕ್ಕಿರಿದು ಸೇರಿದ್ದ ಭಕ್ತರು ‘ಹರ ಹರ ಮಹಾದೇವ್’ ಘೋಷಣೆಗಳೊಂದಿಗೆ ಪುಷ್ಪವೃಷ್ಟಿ ಮಾಡಿದರು.
ಈ ಭೇಟಿಯ ವೇಳೆ ಪ್ರಧಾನಿಯವರು ಕಾಶಿಯ ಸಮಗ್ರ ಅಭಿವೃದ್ಧಿಗಾಗಿ ಸುಮಾರು 6,350 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ 1,050 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 48 ಪೂರ್ಣಗೊಂಡ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಯಿತು.
ಇದಕ್ಕೂ ಮುನ್ನ ಮಂಗಳವಾರ ನಡೆದ ಬನಾರಸ್ ಲೋಕೋಮೋಟಿವ್ ವರ್ಕ್ಸ್ ಮೈದಾನದ ‘ಮಹಿಳಾ ಸಮ್ಮೇಳನ’ದಲ್ಲಿ ಭಾಗವಹಿಸಿದ್ದ ಪ್ರಧಾನಿ, ಸ್ತ್ರೀ ಶಕ್ತಿಯ ಮಹತ್ವವನ್ನು ಸಾರಿದರು. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ನಾಯಕ ನಿತಿನ್ ನಬಿನ್ ಉಪಸ್ಥಿತರಿದ್ದರು. ಒಟ್ಟಾರೆಯಾಗಿ ಪ್ರಧಾನಿಯವರ ಈ ಭೇಟಿಯು ಕಾಶಿಯ ಧಾರ್ಮಿಕ ಮತ್ತು ಆರ್ಥಿಕ ಚಿತ್ರಣವನ್ನು ಬದಲಿಸುವ ಸಂಕಲ್ಪವನ್ನು ಪುನರುಚ್ಚರಿಸಿದೆ.
ಆಡುಗೋಡಿಯ ನಿವಾಸ ಹಾಗೂ ಪೂಜಾ ದತ್ತಾImage Credit source: tv9
ಬೆಂಗಳೂರು, ಏಪ್ರಿಲ್ 29: ಬೆಂಗಳೂರಿನ (Bengaluru) ಆಡುಗೋಡಿಯ ಮನೆಯಲ್ಲಿ ಜಾರ್ಖಂಡ್ ಮೂಲದ ಟೆಕ್ಕಿ ಪೂಜಾ ದತ್ತಾ (Pooja Dutta)(34) ಅವರ ನಿಗೂಢ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪೂಜಾ ಅವರ ಮೃತದೇಹ ನಗ್ನ ಹಾಗೂ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ, ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರಿಗೆ ಹಲವು ಆಘಾತಕಾರಿ ಮತ್ತು ಆಸಕ್ತಿದಾಯಕ ಮಾಹಿತಿಗಳು ಲಭ್ಯವಾಗುತ್ತಿವೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಪೂಜಾ ದತ್ತಾ, ಸುಮಾರು ಒಂದು ವರ್ಷದ ಹಿಂದೆಯೇ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಅವರು ಮೊಬೈಲ್ ಆಫ್ ಮಾಡಿಕೊಂಡಿದ್ದು, ಹಳೆಯ ಸಿಮ್ ಕಾರ್ಡ್ ಬದಲಿಸಿ ಹೊಸ ಸಿಮ್ ಬಳಸುತ್ತಿದ್ದರು.
ಒಂದು ವರ್ಷದಿಂದ ಕುಟುಂಬದವರು, ಸ್ನೇಹಿತರ ಸಂಪರ್ಕದಲ್ಲೇ ಇರದಿದ್ದ ಪೂಜಾ!
ವಿಶೇಷವೆಂದರೆ, ಪೂಜಾ ದತ್ತಾ ಕಳೆದ ಒಂದು ವರ್ಷದಿಂದ ಕುಟುಂಬದವರು ಅಥವಾ ಸ್ನೇಹಿತರೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಮೂರು ತಿಂಗಳ ಹಿಂದೆ ಅವರ ಹೊಸ ಸಿಮ್‌ನ ವ್ಯಾಲಿಡಿಟಿ ಕೂಡ ಮುಗಿದಿದ್ದು, ಫೋನ್ ಸಂಪೂರ್ಣ ಸ್ಥಗಿತಗೊಂಡಿತ್ತು. ಅಕ್ಕಪಕ್ಕದ ನಿವಾಸಿಗಳೂ ಕೂಡ ಪೂಜಾ ಅವರನ್ನು ಕಳೆದ ಮೂರು ತಿಂಗಳಿನಿಂದ ನೋಡಿರಲಿಲ್ಲ ಎಂಬ ಮಾಹಿತಿ ಪ್ರಾಥಮಿಕ ತನಿಖೆ ವೇಳೆ ಪೊಲೀಸರಿಗೆ ಲಭ್ಯವಾಗಿದೆ.
ಗೋಡೆಯ ಮೇಲಿನ ರಹಸ್ಯ ಬರಹಗಳು ಮತ್ತು ಖಿನ್ನತೆ
ಪೊಲೀಸರು ಮನೆ ತಪಾಸಣೆ ನಡೆಸಿದಾಗ ಗೋಡೆಗಳ ಮೇಲೆ ಕೆಲವು ರಹಸ್ಯ ಬರಹಗಳು (Secret Notes) ಪತ್ತೆಯಾಗಿವೆ. ಇದು ಪೂಜಾ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಿರಬಹುದು ಎಂಬ ಅನುಮಾನವನ್ನು ಬಲಪಡಿಸಿದೆ. ‘ಪೂಜಾ ದತ್ತಾ ಹೆಚ್ಚಾಗಿ ಒಬ್ಬ ಸ್ನೇಹಿತನ ಜೊತೆ ಗಲಾಟೆ ಮಾಡುತ್ತಿದ್ದರು’ ಎಂದು ಮನೆ ಮಾಲೀಕರು ಹೇಳಿಕೆ ನೀಡಿದ್ದು, ಸಾವಿನ ಸುತ್ತಲಿನ ನಿಗೂಢತೆ ಹೆಚ್ಚಿಸಿದೆ. ಸದ್ಯದ ಮಾಹಿತಿ ಪ್ರಕಾರ ಪೂಜಾ ದತ್ತಾ ಕೊಲೆಯಾಗಿದ್ದಾರೆ ಎನ್ನಲು ಸಾಕ್ಷ್ಯಗಳು ಸಿಕ್ಕಿಲ್ಲ. ಸಾವಿಗೆ ಪ್ರೇಮ ವೈಫಲ್ಯ ಅಥವಾ ಕೌಟುಂಬಿಕ ಕಾರಣಗಳಿವೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಡುಗೋಡಿಯ ಮನೆಯಲ್ಲಿ ಸೋಮವಾರ ಸಂಜೆ ಪೂಜಾ ದತ್ತಾ ಮೃತದೇಹ ನಗ್ನ ಹಾಗೂ ಅರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಕೊಲೆ ಇರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದ ಕಾರಣ ರಹಸ್ಯ ಮತ್ತಷ್ಟು ಗಾಢವಾಗಿತ್ತು. ಸದ್ಯ ಆಡುಗೋಡಿ ಪೊಲೀಸರು ಕಳೆದ ಒಂದು ವರ್ಷದ ಸಿಡಿಆರ್ (CDR) ವರದಿಯನ್ನು ಕಲೆಹಾಕುತ್ತಿದ್ದು, ಸಾವಿನ ಹಿಂದಿನ ಅಸಲಿ ಸತ್ಯ ಶೀಘ್ರವೇ ಹೊರಬೀಳುವ ನಿರೀಕ್ಷೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮನೆ ಪೂಜೆ ಮತ್ತು ದೇವಾಲಯ ಪೂಜೆImage Credit source: Pinterest
ಅನೇಕ ಭಕ್ತರು ಪದೇ ಪದೇ ಕೇಳುವ “ಮನೆ ಪೂಜೆಗೂ ದೇವಾಲಯದ ಭೇಟಿಗೂ ವ್ಯತ್ಯಾಸವೇನು? ಎರಡೂ ಅನಿವಾರ್ಯವೇ?” ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಮನೆಯಲ್ಲೇ ಪೂಜೆ, ಜಪ ಮಾಡಿದರೆ ಸಾಕು, ದೇವಾಲಯಕ್ಕೆ ಏಕೆ ಹೋಗಬೇಕು ಎಂಬ ಭಾವನೆ ಹಲವರಲ್ಲಿ ಇರುತ್ತದೆ. ಆದರೆ, ಎರಡೂ ಪೂಜಾ ವಿಧಾನಗಳು ತಮ್ಮದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿವೆ ಮತ್ತು ಆಧ್ಯಾತ್ಮಿಕ ಪೂರ್ಣತೆಗೆ ಪರಸ್ಪರ ಪೂರಕವಾಗಿವೆ ಎಂದು ಗುರೂಜಿ ತಿಳಿಸಿದ್ದಾರೆ.
ಮನೆಯಲ್ಲಿ ಮಾಡುವ ಪೂಜೆ ಮುಖ್ಯವಾಗಿ ನಮ್ಮ ವೈಯಕ್ತಿಕ ತೃಪ್ತಿ ಮತ್ತು ಅಂತರಾತ್ಮದ ಶುದ್ಧೀಕರಣಕ್ಕಾಗಿ. ಮನೆಗಳಲ್ಲಿ ಇಡಲಾದ ವಿಗ್ರಹಗಳನ್ನು ಸಾಮಾನ್ಯವಾಗಿ ಶಾಸ್ತ್ರಬದ್ಧವಾಗಿ ಭೂಸ್ಥಾಪನೆ ಅಥವಾ ಪ್ರತಿಷ್ಠಾಪನೆ ಮಾಡಲಾಗುವುದಿಲ್ಲ. ಅವು ನಮ್ಮ ಭಕ್ತಿಯ ಸಂಕೇತವಾಗಿರುತ್ತವೆ ಮತ್ತು ಆಂತರಿಕ ಮನಸ್ಸನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ಸ್ನಾನ ಮಾಡಿ, ಶುದ್ಧ ಮನಸ್ಸಿನಿಂದ ಮನೆಯಲ್ಲಿ ಮಾಡುವ ಪೂಜೆ ನಮ್ಮ ದೇಹದ ಒಳಗಿರುವ ಅಂತರಾತ್ಮವನ್ನು ಶುದ್ಧಿ ಮಾಡುತ್ತದೆ. ಇದನ್ನು ಭಾವಿ ನೀರಿಗೆ ಹೋಲಿಸಬಹುದು – ಶುದ್ಧ ಮತ್ತು ವೈಯಕ್ತಿಕ.
ಇದಕ್ಕೆ ವ್ಯತಿರಿಕ್ತವಾಗಿ, ದೇವಾಲಯಗಳು ಶಕ್ತಿ ಕೇಂದ್ರಗಳಾಗಿವೆ. ಇಲ್ಲಿ ವಿಗ್ರಹಗಳನ್ನು ಶಾಸ್ತ್ರಬದ್ಧವಾಗಿ, ವೇದ ಮಂತ್ರಗಳೊಂದಿಗೆ ಭೂಸ್ಥಾಪನೆ ಮಾಡಿ ಪ್ರತಿಷ್ಠಾಪಿಸಲಾಗುತ್ತದೆ. ದೇವಾಲಯಗಳಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ, ಪರಿವಾರ ದೇವತೆಗಳು ಇರುತ್ತಾರೆ, ಮತ್ತು ಅವು ಪಂಚಭೂತಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿರುತ್ತವೆ. ಅರ್ಚಕರು ತಮ್ಮ ಶ್ರದ್ಧಾ ಭಕ್ತಿಯಿಂದ ಶಿಲೆಯನ್ನೂ ಶಂಕರನನ್ನಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿರುತ್ತಾರೆ (“ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರ”). ಈ ಪೂಜಿತ ಸ್ಥಳಗಳು ನಮ್ಮ ದೇಹದ ಹೊರಭಾಗಕ್ಕೆ, ಅಂದರೆ ಕಣ್ಣು, ಕಿವಿ, ಮೂಗು, ಕೈಗಳಿಗೆ ವಿಶೇಷವಾದ ಪ್ರಭಾವಳಿಯನ್ನು ನೀಡುತ್ತವೆ. ದೇವಾಲಯದ ಶಕ್ತಿಯು ದೈವಾಂಶವನ್ನು ಹೆಚ್ಚಿಸಿ, ನಾವು ಎಲ್ಲೇ ಹೋದರೂ ಯಶಸ್ಸು ಸಿಗುವಂತೆ ಮಾಡುತ್ತದೆ. ಇದನ್ನು ಪುಣ್ಯ ನದಿಗೆ ಹೋಲಿಸಲಾಗುತ್ತದೆ – ಸಾರ್ವತ್ರಿಕವಾಗಿ ಶುದ್ಧಿಕರಿಸುವ ಶಕ್ತಿ.
ಮನೆಯ ಪೂಜೆಯಿಂದ ಅಂತರಾತ್ಮವನ್ನು ಶುದ್ಧಿ ಮಾಡಿಕೊಂಡು, ಆ ಶುದ್ಧ ದೇಹ ಮತ್ತು ಮನಸ್ಸಿನೊಂದಿಗೆ ದೇವಸ್ಥಾನಕ್ಕೆ ಹೋದಾಗ, ದೇವಾಲಯದ ಶಕ್ತಿ ನಮ್ಮ ಬಾಹ್ಯ ದೇಹವನ್ನೂ ಶುದ್ಧೀಕರಿಸಿ, ದೈವಿಕ ಪ್ರಭಾವವನ್ನು ನೀಡುತ್ತದೆ. ಇದು ನಮ್ಮ ಜೀವನವನ್ನು ಪರಿಪೂರ್ಣಗೊಳಿಸುತ್ತದೆ. ಮನೆಯ ದೇವರನ್ನು “ಬೇರು” ಎಂದು ಪರಿಗಣಿಸಿದರೆ, ದೇವಾಲಯವು ಆ ಬೇರಿನಿಂದ ಬೆಳೆದ “ವೃಕ್ಷ” ಇದ್ದಂತೆ, ಅದು ಫಲಗಳನ್ನು ನೀಡುತ್ತದೆ.
ಹಾಗಾಗಿ, ಮನೆಯ ಪೂಜೆ ಮತ್ತು ದೇವಾಲಯದ ಭೇಟಿ ಎರಡೂ ಸಮಾನವಾಗಿ ಮುಖ್ಯ. ಎರಡರಲ್ಲಿ ಒಂದನ್ನು ಆರಿಸಿಕೊಳ್ಳುವ ಆಯ್ಕೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಮನಸ್ಸಿನ ಪ್ರಶಾಂತತೆ, ಜಪ, ಹೋಮ, ತಪಸ್ಸು ಇವು ದೇವಾಲಯದಲ್ಲಿ ಮಾಡಿದಾಗ ಸಿಗುವ ಫಲ ಸರ್ವರಿಗೂ ಸಿಗುತ್ತದೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ ನಂಬಿಕೆಯೇ ಆಧಾರವಾಗಿದ್ದು, ಈ ಎರಡೂ ಪೂಜಾ ವಿಧಾನಗಳು ನಮ್ಮ ಆಧ್ಯಾತ್ಮಿಕ ಮತ್ತು ಲೌಕಿಕ ಜೀವನದ ಸಮೃದ್ಧಿಗೆ ಅತ್ಯಗತ್ಯ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಐಪಿಎಲ್ ಪಂದ್ಯಗಳು ನಿಗದಿತ ಸಮಯ ಮೀರಿ ಅತಿಯಾಗಿ ವಿಳಂಬವಾಗುತ್ತಿರುವುದಕ್ಕೆ ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರು ಮತ್ತು ತಂಡಗಳು ನೀಡಲಾಗುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಕಿಡಿಕಾರಿರುವ ಅವರು, 2026ರ ಆವೃತ್ತಿಯಿಂದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ವಿಶೇಷ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ನಾಲ್ಕು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದು, ಈ ನಿಯಮಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ. ಸುನಿಲ್ ಗವಾಸ್ಕರ್ ನೀಡಿರುವ ಪ್ರಮುಖ ಸಲಹೆಗಳು ಈ ಕೆಳಗಿನಂತಿವೆ…
ಮೈದಾನಕ್ಕೆ ಬರುವವರ ಸಂಖ್ಯೆ ಇಳಿಕೆಯಾಗಲಿ: ತಂತ್ರಗಾರಿಕೆಯ ವಿರಾಮದ (Strategic Timeout) ಸಮಯದಲ್ಲಿ ಕೋಚಿಂಗ್ ಸ್ಟಾಫ್ ಮತ್ತು ಮೀಸಲು ಆಟಗಾರರು ತಂಡೋಪತಂಡವಾಗಿ ಮೈದಾನಕ್ಕೆ ನುಗ್ಗುವುದನ್ನು ಗವಾಸ್ಕರ್ ಖಂಡಿಸಿದ್ದಾರೆ. ಕೇವಲ ಇಬ್ಬರು ಮೀಸಲು ಆಟಗಾರರು (ಪಾನೀಯ ನೀಡಲು) ಮತ್ತು ಇಬ್ಬರು ತರಬೇತುದಾರರಿಗೆ ಮಾತ್ರ ಮೈದಾನ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಗವಾಸ್ಕರ್ ಬಿಸಿಸಿಐಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬ್ಯಾಟರ್‌ಗಳ ಸಮಯ ಮಿತಿ ಕಡಿತ: ಪ್ರಸ್ತುತ ಒಬ್ಬ ಬ್ಯಾಟರ್ ಔಟಾದ ನಂತರ ಮತ್ತೊಬ್ಬ ಬ್ಯಾಟರ್ ಕ್ರೀಸ್‌ಗೆ ಬರಲು ಎರಡು ನಿಮಿಷಗಳ ಕಾಲಾವಕಾಶವಿದೆ. ಆದರೆ, ಬ್ಯಾಟರ್‌ಗಳು ಈಗಾಗಲೇ ಡಗೌಟ್‌ನಲ್ಲಿ ಸಿದ್ಧವಾಗಿ ಕುಳಿತಿರುವುದರಿಂದ, ಈ ಸಮಯವನ್ನು ಒಂದು ನಿಮಿಷಕ್ಕೆ ಇಳಿಸಬೇಕು ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.
ದಂಡದ ಬದಲಿಗೆ ‘ಪೆನಾಲ್ಟಿ ರನ್’ ಶಿಕ್ಷೆ: ಸ್ಲೋ ಓವರ್ ರೇಟ್ ಅಥವಾ ಪಂದ್ಯ ವಿಳಂಬವಾದರೆ ಪ್ರಸ್ತುತ ಪಂದ್ಯದ ಶುಲ್ಕದಲ್ಲಿ ದಂಡ ವಿಧಿಸಲಾಗುತ್ತದೆ. ಆದರೆ ಫ್ರಾಂಚೈಸಿಗಳೇ ಈ ದಂಡವನ್ನು ಪಾವತಿಸುವುದರಿಂದ ಆಟಗಾರರ ಮೇಲೆ ಇದು ಯಾವುದೇ ಪರಿಣಾಮ ಬೀರುತ್ತಿಲ್ಲ. ಇದರ ಬದಲಿಗೆ ಪಂದ್ಯದ ಸಮಯದಲ್ಲಿ ಪೆನಾಲ್ಟಿ ರನ್ ನೀಡುವುದು ಅಥವಾ ಅಂಕ ಪಟ್ಟಿಯಲ್ಲಿ ಅಂಕಗಳನ್ನು ಕಡಿತಗೊಳಿಸುವ ನಿಯಮ ತಂದರೆ ಮಾತ್ರ ಆಟಗಾರರು ಮತ್ತು ತಂಡಗಳು ಗಂಭೀರವಾಗಿ ವರ್ತಿಸುತ್ತಾರೆ ಎಂದು ಗವಾಸ್ಕರ್ ತಿಳಿಸಿದ್ದಾರೆ.
ಮೈದಾನದ ಪವಿತ್ರತೆ ಕಾಪಾಡಿ: ಲೆಜೆಂಡರಿ ಕಾಮೆಂಟೇಟರ್ ರಿಚಿ ಬೆನೊ ಅವರ ಮಾತನ್ನು ನೆನಪಿಸಿರುವ ಸುನಿಲ್ ಗವಾಸ್ಕರ್, “ಕ್ರಿಕೆಟ್ ಮೈದಾನವು ಅತ್ಯಂತ ಪವಿತ್ರವಾದ ಸ್ಥಳ. ಅಲ್ಲಿ ಆಡುವವರು ಮತ್ತು ಅಂಪೈರ್‌ಗಳನ್ನು ಹೊರತುಪಡಿಸಿ ಅನಗತ್ಯವಾಗಿ ಉಳಿದವರು ಪ್ರವೇಶಿಸಬಾರದು”. ಹೀಗಾಗಿ ಅನಗತ್ಯವಾಗಿ ಆಟಗಾರರು ಹಾಗೂ ಇತರೆ ಸಿಬ್ಬಂದಿಗಳು ಮೈದಾನ ಪ್ರವೇಶಿಸುವುದಕ್ಕೆ ಕಡಿವಾಣ ಹಾಕಬೇಕೆಂದು ಸುನಿಲ್ ಗವಾಸ್ಕರ್ ಆಗ್ರಹಿಸಿದ್ದಾರೆ.
ಈ ಸಲಹೆಗಳಿಗೆ ಕಾರಣವೇನು?
ಇತ್ತೀಚಿಗೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವಿನ ಪಂದ್ಯವು ಯಾವುದೇ ಸೂಪರ್ ಓವರ್ ಇಲ್ಲದಿದ್ದರೂ 4 ಗಂಟೆ 22 ನಿಮಿಷಗಳ ಕಾಲ ನಡೆದಿತ್ತು. ಡಿಆರ್‌ಎಸ್ ಮೇಲ್ಮನವಿಗಳು, ಓವರ್‌ಗಳ ನಡುವಿನ ಚರ್ಚೆಗಳು ಮತ್ತು ಪದೇ ಪದೇ ಮೈದಾನಕ್ಕೆ ಬರುವ ಮೀಸಲು ಆಟಗಾರರು ಪಂದ್ಯದ ಅವಧಿಯನ್ನು ಹೆಚ್ಚಿಸುತ್ತಿದ್ದಾರೆ ಎಂಬ ಆರೋಪ ಈ ಪಂದ್ಯದ ಬಳಿಕ ಕೇಳಿ ಬಂದಿತ್ತು. ಇದಾದ ಬಳಿಕ ಕೂಡ ಕೆಲ ಪಂದ್ಯಗಳು ನಿಗದಿತ ಸಮಯ ಮೀರಿತ್ತು. ಹೀಗಾಗಿಯೇ ಸುನಿಲ್ ಗವಾಸ್ಕರ್ ಐಪಿಎಲ್ನಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸುವಂತೆ ಸೂಚಿಸಿದ್ದಾರೆ.
ಈಗಾಗಲೇ ಬಿಸಿಸಿಐ ಕೆಲವು ಶಿಸ್ತಿನ ಕ್ರಮಗಳನ್ನು ಕೈಗೊಂಡಿದೆಯಾದರೂ, ಸುನಿಲ್ ಗವಾಸ್ಕರ್ ಸೂಚಿಸಿರುವಂತೆ ಪೆನಾಲ್ಟಿ ರನ್‌ಗಳಂತಹ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ ಪಂದ್ಯಗಳು ರಾತ್ರಿ 11:30 ಅಥವಾ 12 ಗಂಟೆಯವರೆಗೆ ಸಾಗುವುದರಿಂದ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳೂ ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಕೂಡ ಬಿಸಿಸಿಐ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.
ಬೆಂಗಳೂರು, ಏಪ್ರಿಲ್ 29: ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನದ ಕುರಿತಾದ ಗೊಂದಲಗಳು ಮತ್ತೆ ತಾರಕಕ್ಕೇರಿವೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ಅಧಿಕಾರಕ್ಕಾಗಿ ಪೈಪೋಟಿ ಜೋರಾಗಿದೆ. ಸಿದ್ದರಾಮಯ್ಯ ಬಣದಿಂದ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಹೆಚ್.ಸಿ. ಮಹದೇವಪ್ಪ ದೆಹಲಿಗೆ ತೆರಳಿ ಹೈಕಮಾಂಡ್ ಎದುರು ಅಹಿಂದ ಕಾರ್ಡ್ ಅಸ್ತ್ರ ಪ್ರಯೋಗಿಸಿದ್ದಾರೆ. ದಲಿತ ಮುಖ್ಯಮಂತ್ರಿ ಹುದ್ದೆಯ ಬೇಡಿಕೆಯನ್ನೂ ಇವರು ಮುಂದಿಟ್ಟಿದ್ದಾರೆ. ಮತ್ತೊಂದೆಡೆ, ಡಿಕೆ ಶಿವಕುಮಾರ್ ಬಣ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಬದಲಾವಣೆಯ ಶುಭಸುದ್ದಿಯ ನಿರೀಕ್ಷೆಯಲ್ಲಿದೆ.
ಸಿದ್ದರಾಮಯ್ಯ ಮೌನದಿಂದ ಆತಂಕಗೊಂಡಿರುವ ಅಹಿಂದ ನಾಯಕರು ತಮ್ಮ ರಾಜಕೀಯ ಭವಿಷ್ಯ ಮತ್ತು ಸ್ಥಾನಮಾನಗಳ ಬಗ್ಗೆ ಸ್ಪಷ್ಟತೆ ಪಡೆಯಲು ದೆಹಲಿಗೆ ಧಾವಿಸಿದ್ದಾರೆ. ಅಹಿಂದ ಹೋರಾಟ ಆರಂಭವಾಗಿ 25 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ, ಅಹಿಂದ ನಾಯಕರನ್ನು ಬಿಟ್ಟು ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಕಾಂಗ್ರೆಸ್ ಹಿರಿಯ ನಾಯಕ ರಾಜಣ್ಣ, ಸಿದ್ದರಾಮಯ್ಯ ನಂತರ ದಲಿತ ಮುಖ್ಯಮಂತ್ರಿ ಕೂಗಿಗೆ ತಾವು ಬದ್ಧವಾಗಿರುವುದಾಗಿ ಹೇಳಿದ್ದಾರೆ. ಹೈಕಮಾಂಡ್ ನಿರ್ದೇಶನಕ್ಕೆ ಸಿದ್ದರಾಮಯ್ಯ ಬದ್ಧರಾಗಿದ್ದು, ಅಧಿಕಾರ ತ್ಯಾಗ ಮಾಡಲೂ ಸಿದ್ಧರಿದ್ದಾರೆ ಎಂದು ರಾಜಣ್ಣ ತಿಳಿಸಿದ್ದಾರೆ. ಒಟ್ಟಾರೆ, ಮೇ ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ನಿರೀಕ್ಷೆಗಳಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಭಿಷೇಕ್ ಬಚ್ಚನ್ ಅವರನ್ನು ಎಲ್ಲರೂ ಆಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಅವರ ತಂದೆ ಅಮಿತಾಭ್ ಬಚ್ಚನ್ ಅವರ ಲೆಗಸಿ. ಅಷ್ಟು ದೊಡ್ಡ ಸ್ಟಾರ್ ಹೀರೋನ ಮಗನಾದರೂ ಅಭಿಷೇಕ್ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ, ಅವಕಾಶ ಸಿಕ್ಕಾಗಲೆಲ್ಲ ಅವರನ್ನು ಟ್ರೋಲ್ ಮಾಡುವ ಕೆಲಸ ಆಗುತ್ತಿದೆ. ಹೀಗಿರುವಾಗಲೇ ಅಭಿಷೇಕ್ ಬಚ್ಚನ್ ಅವರ ಈ ಹಿಂದಿನ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಕೆಣಕಲು ಬಂದವರಿಗೆ ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ.
ಅಭಿಷೇಕ್ ಬಚ್ಚನ್ ಚಿತ್ರರಂಗಕ್ಕೆ ಬಂದು ಹಲವು ವರ್ಷಗಳು ಕಳೆದಿವೆ. ಅವರು ‘ಗುರು’ ರೀತಿಯ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಅವರು ಸಿನಿಮಾ ರಂಗದಲ್ಲಿ ಹೆಚ್ಚು ಸಕ್ರಿಯವಾಲ್ಲ. ಅವರು ನಟಿಸುತ್ತಿರುವ ಬಹುತೇಕ ಸಿನಿಮಾಗಳು ಮಲ್ಟಿ ಸ್ಟಾರರ್ ಚಿತ್ರಗಳು. ಹೀಗಾಗಿ, ಸುದ್ದಿಗೋಷ್ಠಿ ಒಂದರಲ್ಲಿ ಅವರಿಗೆ ಪ್ರಶ್ನೆ ಒಂದು ಎದುರಾಯಿತು.
ಅಭಿಷೇಕ್ ಬಚ್ಚನ್ ಇದ್ದ ವೇದಿಕೆ ಮೇಲೆ ಅಕ್ಷಯ್ ಕುಮಾರ್, ರಿತೇಷ್ ದೇಶ್ಮುಖ್ ಮೊದಲಾದವರು ಇದ್ದರು. ಆಗ ರಿಪೋರ್ಟರ್, ‘ನೀವು ಸೋಲೋ ಹೀರೋ ಆಗಿ ಕಾಣಿಸಿಕೊಳ್ಳೋದು ಯಾವಾಗ’ ಎಂದು ಕೇಳಿದರು. ಪ್ರಶ್ನೆ ಅರ್ಥವಾದರೂ ಅಭಿಷೇಕ್ ಬಚ್ಚನ್ ಪ್ರಶ್ನೆ ಅರ್ಥವಾಗಿಲ್ಲ ಎಂದರು. ‘ಮೇಲ್ (ಪುರುಷ) ಲೀಡ್ ಆಗಿ ಕಾಣಿಸಿಕೊಳ್ಳೋದು ಯಾವಾಗ’ ಎಂದು ಕೇಳಿದರು. ಇದು ಅಭಿಷೇಕ್ ಕೋಪ ಹೆಚ್ಚಿಸಿತು. ‘ನಾನೇನು ಈಗ ಹೀರೋಯಿನ್ ಆಗಿ ನಟಿಸುತ್ತಿದ್ದೇನಾ’ ಎಂದು ನೇರವಾಗಿ ಕೇಳಿದರು.
‘ನೀವು ಯಾವ ಅರ್ಥದಲ್ಲಿ ಕೇಳುತ್ತಿದ್ದೀರಿ ಅನ್ನೋದು ನನಗೆ ಗೊತ್ತಾಯ್ತು’ ಎಂದು ಅಭಿಷೇಕ್ ಹೇಳಿದರು. ಇದು ಅವರನ್ನು ಟ್ರೋಲ್ ಮಾಡುವ ರೀತಿಯಲ್ಲಿ ಇತ್ತು. ಇದನ್ನು ಅರಿತುಕೊಂಡ ಅಭಿಷೇಕ್ ಖಡಕ್ ಆಗಿ ಪ್ರತಿಕ್ರಿಯಿಸಿದರು. ಆ ಬಳಿಕ ವರದಿಗಾರ ಕೂಡ ಸೈಲೆಂಟ್ ಆದರು.
ಹಾಸನ, ಏಪ್ರಿಲ್ 29: ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಜಿ.ಅಂಕನಹಳ್ಳಿಯಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ. ಬೇಸಿಗೆ ಮಳೆಯ ತೀವ್ರತೆಗೆ ಹಲವು ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗುರುಳಿವೆ. ಈ ಘಟನೆಯಿಂದಾಗಿ ಜಿ.ಅಂಕನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಆರ್ಭಟಕ್ಕೆ ರಸ್ತೆಗೆ ಅಡ್ಡಲಾಗಿ ಬಿದ್ದ ಮರದ ಕೊಂಬೆಗಳಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯತ್ ಸಿಬ್ಬಂದಿ ರಸ್ತೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಸೇರಿ ಹಲವೆಡೆ ಭಾರಿ ಮಳೆ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ