ಯಶಸ್ಸನ್ನು (success) ಸಾಧಿಸಬೇಕು, ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಅದಕ್ಕಾಗಿ ಕಠಿಣ ಪರಿಶ್ರಮವನ್ನೂ ಪಡುತ್ತಾರೆ. ಪರಿಶ್ರಮದ ಜೊತೆಗೆ ದೃಢ ಮನಸ್ಸು ಸಾಧಿಸುವ ಛಲ ಇದ್ದರೆ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ದೃಢ ಮನಸ್ಸಿನ ಜೊತೆಗೆ ಈ ಕೆಲವೊಂದಿಷ್ಟು ಗುಣಗಳನ್ನು ಸಹ ಬೆಳೆಸಿಕೊಳ್ಳಬೇಕು. ಅಂತಹ ಗುಣಗಳಿರುವ ಯಾರೇ ಆದರೂ ಸಹ ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತಾರಂತೆ. ಹಾಗಿದ್ರೆ ಲೈಫಲ್ಲಿ ಸಕ್ಸಸ್ ಆಗಲು ಚಾಣಕ್ಯರು ಹೇಳಿರುವ ಯಾವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಅನ್ನೋದನ್ನು ನೋಡೋಣ ಬನ್ನಿ.
ಯಶಸ್ಸು ಗಳಿಸಲು ಬೆಳೆಸಿಕೊಳ್ಳಬೇಕಾದ ಗುಣಗಳಿವು:
ಕಷ್ಟದ ಸಮಯದಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳುವುದು: ಆಚಾರ್ಯ ಚಾಣಕ್ಯರ ಪ್ರಕಾರ, ಕಠಿಣ ಸನ್ನಿವೇಶಗಳು ನಿಜವಾಗಿಯೂ ವ್ಯಕ್ತಿಯನ್ನು ಪರೀಕ್ಷಿಸುತ್ತವೆ. ಮಾನಸಿಕವಾಗಿ ಬಲಿಷ್ಠವಾಗಿರುವ ವ್ಯಕ್ತಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಎಂದಿಗೂ ಭಯಭೀತರಾಗುವುದಿಲ್ಲ, ಬದಲಾಗಿ ಶಾಂತ ಮತ್ತು ತಾಳ್ಮೆಯ ಮನಸ್ಥಿತಿಯಿಂದ ಇರುತ್ತಾರೆ. ಮತ್ತು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಬದಲಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ರೀತಿಯ ಗುಣವನ್ನು ಬೆಳೆಸಿಕೊಂಡರೆ ಜೀವನದಲ್ಲಿ ನೀವು ಸಹ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತೀರಿ.
ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು: ಚಾಣಕ್ಯರ ಪ್ರಕಾರ, ಕೋಪ, ಭಯ ಮತ್ತು ದುರಾಸೆಗಳು ವ್ಯಕ್ತಿಯ ದೊಡ್ಡ ಶತ್ರುಗಳು. ಆದ್ದರಿಂದ, ತಮ್ಮ ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕೆಂದು ತಿಳಿದಿರುವವರು ಮಾತ್ರ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಬಲವಾದ ಮನಸ್ಸಿನ ವ್ಯಕ್ತಿಗಳು ಕೋಪದಲ್ಲಿ ಏನನ್ನಾದರೂ ಮಾಡುವ ಅಥವಾ ಹೇಳುವ ಮೊದಲು ವಿಷಯಗಳನ್ನು ಎಚ್ಚರಿಕೆಯಿಂದ ಯೋಚಿಸಿ ಸಮಯ ಸಂದರ್ಭವನ್ನು ಅರ್ಥಮಾಡಿಕೊಳ್ಳುತ್ತಾರೆ. ಈ ಗುಣ ತಪ್ಪುಗಳಾಗುವುದನ್ನು ತಡೆಯುತ್ತದೆ ಮತ್ತು ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.
ಹಿತಮಿತ ಮತ್ತು ಚಿಂತನಶೀಲ ಮಾತು: ಮಾತು ಬೆಳ್ಳಿ, ಮೌನ ಬಂಗಾರ ಎಂಬ ಮಾತಿದೆ. ಅದೇ ರೀತಿ ಹಿತಮಿತವಾಗಿ ಚಿಂತನಶೀಲರಾಗಿ ಮಾತನಾಡುವವರು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆಂತರಿಕ ಆಲೋಚನೆಗಳನ್ನು ಅಥವಾ ಜೀವನದ ಘಟನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳದಿರುವುದು ತುಂಬಾನೇ ಒಳ್ಳೆಯದು. ಹೆಚ್ಚು ಮಾತು ಮತ್ತು ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುವ ಅಭ್ಯಾಸ ಹಾನಿಕಾರಕವಾಗಬಹುದು ಮತ್ತು ಯಶಸ್ಸಿಗೆ ತಡೆಯುಂಟು ಮಾಡಬಹುದು.
ಇದನ್ನೂ ಓದಿ: ಉಚಿತವಾಗಿ ಪಡೆಯುವ ವಸ್ತುಗಳು ಮನುಷ್ಯನನ್ನು ಹೇಗೆ ದುರ್ಬಲಗೊಳಿಸುತ್ತೆ ಗೊತ್ತಾ?
ನಿರಂತರ ಕಲಿಕೆ: ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ಕಲಿಯುವುದನ್ನು ನಿಲ್ಲಿಸಿದರೆ, ಆತ ಎಂದಿಗೂ ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದ ನಿರಂತರವಾಗಿ ಹೊಸ ವಿಷಯಗಳನ್ನು, ಸಂಗತಿಗಳನ್ನು ಕಲಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು, ತಪ್ಪುಗಳಿಂದ, ಇತರರ ಅನುಭವಗಳಿಂದ ಜೀವನ ಪಾಠವನ್ನು ಕಲಿಯಬೇಕು, ಈ ಗುಣವನ್ನು ಬೆಳೆಸಿದರೆ ಮಾತ್ರ ಮಾನಸಿಕವಾಗಿ ಬಲಿಷ್ಠರಾಗಲು ಮತ್ತು ಯಶಸ್ಸನ್ನು ಗಳಿಸಲು ಸಾಧ್ಯ.
ಆತ್ಮ ವಿಶ್ವಾಸ: ಚಾಣಕ್ಯರ ಪ್ರಕಾರ, ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಯು ಕಠಿಣ ಸಂದರ್ಭಗಳಲ್ಲಿಯೂ ಸಹ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ದೃಢ ಮನಸ್ಸಿನ ಜನರು ಇತರರ ಹುಸಿ ಮಾತುಗಳಿಗೆ ಪ್ರಭಾವಿತರಾಗುವುದಿಲ್ಲ ಬದಲಾಗಿ ಅವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಆತ್ಮವಿಶ್ವಾಸವು ಅವರನ್ನು ಇತರರಿಗಿಂತ ವಿಭಿನ್ನ ಮತ್ತು ಬಲಶಾಲಿಗಳನ್ನಾಗಿ ಮಾಡುತ್ತದೆ. ಮತ್ತು ಯಶಸ್ಸನ್ನು ಗಳಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
