2027ರ ಐಸಿಸಿ ಏಕದಿನ ವಿಶ್ವಕಪ್‌ನ ಪ್ರಧಾನ ಸುತ್ತಿಗೂ ಮುನ್ನ ನಡೆಯಲಿರುವ ಅರ್ಹತಾ ಸುತ್ತಿನಲ್ಲಿ ಒಟ್ಟು 36 ದೇಶಗಳು ವಿವಿಧ ಹಂತಗಳಲ್ಲಿ ಕಣಕ್ಕಿಳಿಯುತ್ತಿವೆ. ಅಂತಿಮವಾಗಿ ಇವುಗಳಲ್ಲಿ ಕೇವಲ 4 ತಂಡಗಳು ಮಾತ್ರ ಮುಖ್ಯ ವಿಶ್ವಕಪ್ ಟೂರ್ನಿಗೆ ಲಗ್ಗೆ ಇಡಲಿವೆ. ಅರ್ಹತಾ ಸುತ್ತಿನ ವಿವಿಧ ಹಂತಗಳು ಮತ್ತು ಅದರಲ್ಲಿ ಆಡಲಿರುವ ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ಗ್ಲೋಬಲ್ ಕ್ವಾಲಿಫೈಯರ್ (10 ತಂಡಗಳು):
ಈ ಬಾರಿಯ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಕಣಕ್ಕಿಳಿಯಲಿವೆ. ಈ ಹದಿನಾಲ್ಕು ತಂಡಗಳಲ್ಲಿ 10 ತಂಡಗಳು ನೇರ ಅರ್ಹತೆಯ ಮೂಲಕ ಲಗ್ಗೆ ಇಡಲಿವೆ. ಇದರಲ್ಲಿ ಜಂಟಿ ಆತಿಥೇಯರಾದ ಸೌತ್ ಆಫ್ರಿಕಾ ಮತ್ತು ಝಿಂಬಾಬ್ವೆ ಸ್ವಯಂಚಾಲಿತವಾಗಿ ಅರ್ಹತೆ ಪಡೆದರೆ, ಇನ್ನುಳಿದ 8 ತಂಡಗಳನ್ನು ಐಸಿಸಿ ಏಕದಿನ ರ‍್ಯಾಂಕಿಂಗ್ ಆಧಾರದ ಮೇಲೆ ನೇರವಾಗಿ ಎಂಟ್ರಿ ಕೊಡಲಿವೆ.
ಇನ್ನುಳಿದ 4 ಅಂತಿಮ ಸ್ಥಾನಗಳಿಗಾಗಿ ವಿವಿಧ ಲೀಗ್‌ಗಳ ಮೂಲಕ ತಂಡಗಳನ್ನು ಶೋಧಿಸಿ, ಕೊನೆಯಲ್ಲಿ 10 ತಂಡಗಳ ಬೃಹತ್ ‘ಗ್ಲೋಬಲ್ ಕ್ವಾಲಿಫೈಯರ್’ ಟೂರ್ನಿಯನ್ನು ನಡೆಸಲಾಗುತ್ತದೆ. ಈ ಮುಖ್ಯ ಕ್ವಾಲಿಫೈಯರ್ ಸುತ್ತಿನಲ್ಲಿ ಕಣಕ್ಕಿಳಿಯುವ 10 ತಂಡಗಳ ರಚನೆ ಹೀಗಿರುತ್ತದೆ:
- ಮೊದಲ ಹಂತ (ಪೂರ್ಣ ಸದಸ್ಯರು): ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅತ್ಯಂತ ಕೆಳಗಿನ ಸ್ಥಾನಕ್ಕೆ ಕುಸಿಯುವ 2 ಪೂರ್ಣಾವಧಿ ಸದಸ್ಯ ರಾಷ್ಟ್ರಗಳು ನೇರವಾಗಿ ಈ ಕ್ವಾಲಿಫೈಯರ್ ಟೂರ್ನಿಗೆ ಬರಲಿವೆ.
- ದ್ವಿತೀಯ ಹಂತ (ಐಸಿಸಿ ಲೀಗ್-2): ಪ್ರಸ್ತುತ ನಡೆಯುತ್ತಿರುವ ಐಸಿಸಿ ಸಿಡಬ್ಲ್ಯೂಸಿ ಲೀಗ್-2 ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ 4 ಅತ್ಯುತ್ತಮ ತಂಡಗಳು ನೇರವಾಗಿ ಇಲ್ಲಿಗೆ ಪ್ರವೇಶಿಸುತ್ತವೆ.
- ತೃತೀಯ ಹಂತ (ಕ್ವಾಲಿಫೈಯರ್ ಪ್ಲೇ-ಆಫ್): ಲೀಗ್-2 ರ ಕೊನೆಯ 4 ತಂಡಗಳು ಮತ್ತು ಕೆಳಹಂತದ ಚಾಲೆಂಜ್ ಲೀಗ್‌ನ 4 ತಂಡಗಳ ನಡುವೆ ‘ಪ್ಲೇ-ಆಫ್’ ಪಂದ್ಯಗಳು ನಡೆದು, ಅದರಿಂದ ಜಯಗಳಿಸಿ ಬರುವ ಉಳಿದ 4 ತಂಡಗಳು ಇಲ್ಲಿ ಕಣಕ್ಕಿಳಿಯಲಿವೆ.
CWC ಲೀಗ್-2 (8 ತಂಡಗಳು):
ಈ ಎಂಟು ಅಸೋಸಿಯೇಟ್ ತಂಡಗಳು ಗ್ಲೋಬಲ್ ಕ್ವಾಲಿಫೈಯರ್‌ಗೆ ಪ್ರವೇಶ ಪಡೆಯಲು ಪ್ರಸ್ತುತ ಲೀಗ್ ಪಂದ್ಯಗಳನ್ನು ಆಡುತ್ತಿವೆ. ಆ ತಂಡಗಳಾವುವು ಎಂದರೆ…
- ಯುನೈಟೆಡ್ ಸ್ಟೇಟ್ಸ್
- ಸ್ಕಾಟ್ಲೆಂಡ್
- ನೆದರ್ಲ್ಯಾಂಡ್ಸ್
- ಒಮಾನ್
- ನಮೀಬಿಯಾ
- ಕೆನಡಾ
- ನೇಪಾಳ
- ಯುಎಇ
CWC ಚಾಲೆಂಜ್ ಲೀಗ್ (12 ತಂಡಗಳು):
ಈ 12 ತಂಡಗಳನ್ನು ಎರಡು ಗುಂಪುಗಳಾಗಿ (Group A & Group B) ವಿಂಗಡಿಸಲಾಗಿದ್ದು, ಇವು ಕ್ವಾಲಿಫೈಯರ್ ಪ್ಲೇ-ಆಫ್ ಹಂತ ತಲುಪಲು ಹೋರಾಡುತ್ತಿವೆ. ಆ ತಂಡಗಳಾವುವು ಎಂದರೆ…
- ಗುಂಪು A
- ಜರ್ಸಿ
- ಕುವೈತ್
- ಪಪುವಾ ನ್ಯೂ ಗಿನಿಯಾ
- ಡೆನ್ಮಾರ್ಕ್
- ಖತಾರ್
- ರ್ಗುಂಪು B
- ಉಗಾಂಡಾ
- ಇಟಲಿ
- ತಾಂಜಾನಿಯಾ
- ಹಾಂಗ್ ಕಾಂಗ್
- ಬಹ್ರೇನ್
- ಸಿಂಗಾಪುರ್
ಪ್ರಾದೇಶಿಕ ಅರ್ಹತಾ ಸುತ್ತುಗಳು (ಉಳಿದ 16 ತಂಡಗಳು):
ಮೇಲಿನ ಚಾಲೆಂಜ್ ಲೀಗ್‌ಗೆ ಅರ್ಹತೆ ಪಡೆಯಲು ಆಫ್ರಿಕಾ, ಅಮೆರಿಕ, ಏಷ್ಯಾ, ಈಸ್ಟ್-ಏಷ್ಯಾ ಪೆಸಿಫಿಕ್ ಮತ್ತು ಯುರೋಪ್ ವಲಯಗಳ ಸ್ಥಳೀಯ ಟೂರ್ನಿಗಳಿಂದ ಒಟ್ಟು 16 ಕೆಳಹಂತದ ಕ್ರಿಕೆಟ್ ತಂಡಗಳು ಚಾಲೆಂಜ್ ಲೀಗ್ ಪ್ಲೇ-ಆಫ್ಸ್ ಮೂಲಕ ತಮ್ಮ ಅರ್ಹತಾ ಪ್ರಯಾಣವನ್ನು ಆರಂಭಿಸಿವೆ.
ಇದನ್ನೂ ಓದಿ: 12 ಸ್ಟೇಡಿಯಂ, 57 ಪಂದ್ಯಗಳು: ಹೀಗಿರಲಿದೆ ಏಕದಿನ ವಿಶ್ವಕಪ್ ಟೂರ್ನಿ!
ಅಂತಿಮವಾಗಿ, ಈ ಎಲ್ಲಾ ವಿಭಾಗಗಳಿಂದ ಒಟ್ಟುಗೂಡುವ 10 ತಂಡಗಳ ನಡುವೆ ಫೆಬ್ರವರಿ-ಮಾರ್ಚ್ 2027ರಲ್ಲಿ ಮುಖ್ಯ ಕ್ವಾಲಿಫೈಯರ್ ಪಂದ್ಯಗಳು ನಡೆದು, ಅದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಕೊನೆಯ 4 ತಂಡಗಳು ವಿಶ್ವಕಪ್‌ನ ಪ್ರಧಾನ 14ರ ಘಟ್ಟವನ್ನು ತಲುಪಲಿದೆ. ಅಂದರೆ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ.
