ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶನಿವಾರ (ಆಗಸ್ಟ್ 1) ಭಾರತೀಯ ಕ್ರೀಡಾಪಟುಗಳು ಐತಿಹಾಸಿಕ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದೊಂದಿಗೆ ಒಂದೇ ದಿನ ಗೆದ್ದ ಪದಕಗಳ ಸಂಖ್ಯೆ ಬರೋಬ್ಬರಿ 16. ಈ ಹದಿನಾರು ಪದಕಗಳಲ್ಲಿ 8 ಚಿನ್ನ, 5 ಬೆಳ್ಳಿ ಹಾಗೂ 3 ಕಂಚಿನ ಮೆಡಲ್ಗಳು ಇರುವುದು ವಿಶೇಷ.
ಚಿನ್ನಕ್ಕೆ ಬಾಕ್ಸರ್ಗಳ ಪಂಚ್:
ಶನಿವಾರ ನಡೆದ ಬಾಕ್ಸಿಂಗ್ ಫೈನಲ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಒಟ್ಟು 7 ಚಿನ್ನದ ಪದಕ ಗೆದ್ದಿದ್ದಾರೆ. ಇದರಲ್ಲಿ ಐದು ಚಿನ್ನದ ಪದಕ ತಂದುಕೊಟ್ಟಿರುವುದು ಮಹಿಳಾ ಬಾಕ್ಸರ್ಗಳು ಎಂಬುದು ಹೆಮ್ಮೆಯ ವಿಷಯ.
- ಪ್ರೀತಿ ಪವಾರ್ (54 ಕೆಜಿ)
- ಜೈಸ್ಮಿನ್ ಲ್ಯಾಂಬೋರಿಯಾ (60 ಕೆಜಿ)
- ಸಾಕ್ಷಿ ಚೌಧರಿ (51 ಕೆಜಿ)
- ಪ್ರಿಯಾ ಘಂಘಾಸ್ (60 ಕೆಜಿ)
- ಅರುಂಧತಿ ಚೌಧರಿ (70 ಕೆಜಿ)
ಇನ್ನು ಪುರುಷರ ವಿಭಾಗದ ಬಾಕ್ಸಿಂಗ್ನಲ್ಲೂ ಎರಡು ಪದಕಗಳು ದೊರೆತಿವೆ. ಈ ಪದಕಗಳನ್ನು ತಂದುಕೊಟ್ಟಿರುವುದು…
- ಸಚಿನ್ ಸಿವಾಚ್ (ಪುರುಷರ 60 ಕೆಜಿ ವಿಭಾಗ)
- ಅಂಕುಶ್ ಪಂಘಾಲ್ (ಪುರುಷರ 80 ಕೆಜಿ ವಿಭಾಗ)
ಮೂವರಿಗೆ ಬೆಳ್ಳಿ ಪದಕ:
ಬಾಕ್ಸಿಂಗ್ ರಿಂಗ್ನಲ್ಲಿ ಏಳು ಮಂದಿ ಚಿನ್ನದ ಪದಕ ಗೆದ್ದರೆ, ಮೂವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
- ಲವ್ಲಿನಾ ಬೊರ್ಗೊಹೈನ್ (ಮಹಿಳೆಯ 70 ಕೆ.ಜಿ)
- ಜಾದುಮಣಿ ಸಿಂಗ್ (ಪುರುಷರ 55 ಕೆಜಿ)
- ನರೇಂದರ್ ಬರ್ವಾಲ್ (ಪುರುಷರ 90 ಕೆಜಿ)
ಸೋಮನ್ ರಾಣಾಗೆ ಚಿನ್ನ:
ಬಾಕ್ಸಿಂಗ್ ಮಾತ್ರವಲ್ಲದೆ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲೂ ಭಾರತೀಯರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಪುರುಷರ ಶಾಟ್‌ಪುಟ್ F57 (ಪ್ಯಾರಾ ಅಥ್ಲೆಟಿಕ್ಸ್) ಸ್ಪರ್ಧೆಯಲ್ಲಿ ಭಾರತದ ಸೋಮನ್ ರಾಣಾ ಚಿನ್ನದ ಪದಕ ಗೆದ್ದರೆ, ಸಹ ಆಟಗಾರ ಶುಭಂ ಜುಯಲ್ ಬೆಳ್ಳಿ ಪದಕ ಗೆದ್ದು ಕ್ರೀಡಾಂಗಣದಲ್ಲಿ ಏಕಕಾಲಕ್ಕೆ ಎರಡು ಭಾರತದ ಧ್ವಜಗಳು ಹಾರಾಡುವಂತೆ ಮಾಡಿದರು.
ಟ್ರಿಪಲ್ ಜಂಪ್‌ನಲ್ಲಿ ಎರಡು ಪದಕ:
ಪುರುಷರ ಟ್ರಿಪಲ್ ಜಂಪ್‌ನಲ್ಲಿ ಪ್ರವೀಣ್ ಚಿತ್ರವೇಲ್ ಬೆಳ್ಳಿ ಪದಕ ಗೆದ್ದರೆ, ಸೆಲ್ವ ಪ್ರಭು ತಿರುಮಾರನ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ದಾಖಲೆ ಬರೆದ ಗುಲ್ವೀರ್ ಸಿಂಗ್:
ಪುರುಷರ 5000 ಮೀಟರ್ ಓಟದಲ್ಲಿ ಗುಲ್ವೀರ್ ಸಿಂಗ್ ಕಂಚಿನ ಪದಕ ಗೆದ್ದರು. ಇದರೊಂದಿಗೆ, ಗ್ಲಾಸ್ಗೋ 2026ರ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಗುಲ್ವೀರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಗುಲ್ವೀರ್ 10,000 ಮೀಟರ್ ಓಟದ ಫೈನಲ್‌ನಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದರು.
ಇದನ್ನೂ ಓದಿ: ಐಸಿಸಿ ರ್ಯಾಂಕಿಂಗ್ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1
ಜೂಡೋದಲ್ಲಿ ಪದಕ:
ಮಹಿಳೆಯರ 63 ಕೆಜಿ ಜೂಡೋ ವಿಭಾಗದಲ್ಲಿ ಉನ್ನತಿ ಶರ್ಮಾ ಕಂಚಿನ ಪದಕ ಗೆದ್ದು ಭಾರತದ ಪದಕದ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಿದರು. ಈ ಭರ್ಜರಿ ಪದಕದ ಬೇಟೆಯೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 39 ಕ್ಕೇರಿದೆ.
Published On – 7:33 am, Sun, 2 August 26
