ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಮಹಾ ಅವಘಡವೊಂದು ಸಂಭವಿಸಿದೆ. ಕ್ಯಾಚ್ ಹಿಡಿಯುವ ಯತ್ನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ವೇಗದ ಬೌಲರ್ ಲುಂಗಿ ಎನ್ಗಿಡಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪಂಜಾಬ್ ಬ್ಯಾಟರ್ ಪ್ರಿಯಾಂಶ್ ಆರ್ಯ ನೀಡಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ಎನ್ಗಿಡಿ ಅವರ ತಲೆ ನೆಲಕ್ಕೆ ಜೋರಾಗಿ ಅಪ್ಪಳಿಸಿತು. ಇದರಿಂದ ಎನ್ಗಿಡಿ ಮೈದಾನದಲ್ಲೇ ಬಿದ್ದು ನೋವಿನಲ್ಲಿ ನರಳಾಡಲಾರಂಬಿಸಿದರು.
ಎನ್ಗಿಡಿ ಅವರ ಗಾಯದ ತೀವ್ರತೆ ಎಷ್ಟಿತ್ತೆಂದರೆ ಅವರಿಗೆ ಮೇಲೇಳಲು ಸಾಧ್ಯವಾಗಲಿಲ್ಲ. ಕೂಡಲೇ ಮೈದಾನಕ್ಕೆ ಆಗಮನಿಸಿದ ಡೆಲ್ಲಿ ತಂಡದ ಫಿಸಿಯೋ ಎನ್ಗಿಡಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೂ ಎನ್ಗಿಡಿ ಚೇತರಿಸಿಕೊಳ್ಳುವಂತೆ ಕಾಣಲಿಲ್ಲ. ಕೂಡಲೇ ಸ್ಟ್ರೆಚರ್ ಮೂಲಕ ಎನ್ಗಿಡಿ ಅವರನ್ನು ಡಗೌಟ್ಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಗಾಯದ ಗಂಭೀರತೆಯನ್ನು ಅರಿತು ಕೂಡಲೇ ಆಂಬುಲೆನ್ಸ್ ಅನ್ನು ಮೈದಾನಕ್ಕೆ ಕರೆತರಲಾಯಿತು. ನಂತರ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
Lungi Ngidi got Injured while going for a catch
Looks very serious 😰. Ambulance was called on ground 🚨. pic.twitter.com/GgU9g68Zsw
— Jeet (@JeetN25) April 25, 2026
ಪ್ರಸ್ತುತ ಎನ್ಗಿಡಿ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿದ ಬಳಿಕವಷ್ಟೇ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂದು ತಿಳಿಯಲಿದೆ. ಎನ್ಗಿಡಿ ಅವರನ್ನು ಸ್ಕ್ಯಾನಿಂಗ್ ಒಳಪಡಿಸುವ ಸಾಧ್ಯತೆ ಇದ್ದು, ಅದರ ವರದಿ ಬಂದ ಬಳಿಕವಷ್ಟೇ ಅವರ ಚೇತರಿಕೆಯ ಬಗ್ಗೆ ಹಾಗೂ ಅವರ ಲಭ್ಯತೆಯ ಬಗ್ಗೆ ಮಾಹಿತಿ ತಿಳಿಯಲಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಎನ್ಗಿಡಿ ಚೇತರಿಸಿಕೊಳ್ಳಲು ಸಾಕಷ್ಟು ದಿನಗಳು ಬೇಕಾಗಬಹುದು. ಇದರಿಂದ ಅವರು ಐಪಿಎಲ್ನಿಂದ ಹೊರಬೀಳುವ ಸಾಧ್ಯತೆಗಳೆ ಹೆಚ್ಚಿವೆ. ಅದೇನೆ ಆಗಲಿ ಎನ್ಗಿಡಿ ಬೇಗ ಗುಣಮುಖರಾಗಿ ಆಟಕ್ಕೆ ಮರಳುವಂತ್ತಾಗಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ವಾಸ್ತವವಾಗಿ ಕಳೆದ 24 ಗಂಟೆಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದು ಎರಡನೇ ಆಘಾತವಾಗಿದೆ. ಈ ಪಂದ್ಯಕ್ಕೂ ಒಂದು ದಿನ ಮೊದಲು ಅಭ್ಯಾಸದ ವೇಳೆ ತಂಡದ ಯುವ ಆಟಗಾರ ಮುಖಕ್ಕೆ ಚೆಂಡು ಬಡಿದು ತೀವ್ರವಾಗಿ ಗಾಯಗೊಂಡಿದ್ದರು. ಹೀಗಾಗಿ ಅವರನ್ನು ಕೂಡ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಎನ್ಗಿಡಿ ಹೂಡ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ. ಇವರಿಬ್ಬರ ಗಾಯದ ತೀವ್ರತೆ ಎಷ್ಟಿದೆ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
