ದುಲೀಪ್ ಟ್ರೋಫಿ (Duleep Trophy) ಆರಂಭದೊಂದಿಗೆ 2026-27ರ ಭಾರತೀಯ ದೇಶೀಯ ಕ್ರಿಕೆಟ್ ಸೀಸನ್ ಕೂಡ ಪ್ರಾರಂಭವಾಗಲಿದೆ. ಆಗಸ್ಟ್ 23 ರಿಂದ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಆರು ವಲಯ ತಂಡಗಳ ನಡುವೆ ಪುರುಷರ ದುಲೀಪ್ ಟ್ರೋಫಿಗೆ ಚಾಲನೆ ಸಿಗಲಿದೆ. ಈ ಪಂದ್ಯಾವಳಿ ಆಗಸ್ಟ್ 23 ರಿಂದ ಆರಂಭವಾಗಿ ಸೆಪ್ಟೆಂಬರ್ 10 ರವರೆಗೆ ನಡೆಯಲಿದೆ. ಈ ಪ್ರತಿಷ್ಠಿತ ಟೂರ್ನಮೆಂಟ್‌ಗಾಗಿ ಇತ್ತೀಚೆಗೆ ಕೇಂದ್ರ ವಲಯ, ಪಶ್ಚಿಮ ವಲಯ ಮತ್ತು ಪೂರ್ವ ವಲಯ ತಂಡಗಳನ್ನು ಪ್ರಕಟಿಸಲಾಗಿದೆ.
ಕೇಂದ್ರ ವಲಯಕ್ಕೆ ರಜತ್ ಕ್ಯಾಪ್ಟನ್
ದುಲೀಪ್ ಟ್ರೋಫಿಗಾಗಿ ಕೇಂದ್ರ ವಲಯ ತಂಡದ ನಾಯಕರಾಗಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸತತ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಪಾಟಿದಾರ್ ಮೇಲೆ ಆಯ್ಕೆ ಮಂಡಳಿ ನಂಬಿಕೆ ಇರಿಸಿದೆ. ಹಾಗೆಯೇ ರಿಂಕು ಸಿಂಗ್ ಅವರನ್ನು ಉಪನಾಯಕನನ್ನಾಗಿ ಹೆಸರಿಸಲಾಗಿದೆ. ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ಆಫ್-ಸ್ಪಿನ್ ಆಲ್‌ರೌಂಡರ್ ಸಾರಂಶ್ ಜೈನ್ ಕೂಡ ತಂಡದಲ್ಲಿದ್ದಾರೆ. ಆದರೆ ಲಂಕಾ ಸರಣಿಯ ಕಾರಣದಿಂದಾಗಿ ಅವರು ದುಲೀಪ್ ಟ್ರೋಫಿಯ ಆರಂಭಿಕ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
ದುಲೀಪ್ ಟ್ರೋಫಿಗೆ ಕೇಂದ್ರ ವಲಯ ತಂಡ: ರಜತ್ ಪಾಟಿದಾರ್ (ನಾಯಕ), ರಿಂಕು ಸಿಂಗ್ (ಉಪನಾಯಕ), ಆರ್ಯನ್ ಜುಯಲ್ (ವಿಕೆಟ್ ಕೀಪರ್), ಸರನ್ಶಾ ಜೈನ್, ಅಮನ್ ಮೊಖಾಡೆ, ಕುನಾಲ್ ಚಾಂಡೇಲಾ, ಜೀಶನ್ ಅನ್ಸಾರಿ, ಆರ್ಯನ್ ಪಾಂಡೆ, ಅರ್ಷದ್ ಖಾನ್, ಆಯುಷ್ ಪಾಂಡೆ, ಯಶ್ ಸಿಂಗ್ ರಾಥೋಡ್, ಯಶ್ ರಾಥೋಡ್, ಪರ್ವ್ ರಾಥೋಡ್, ಯಶ್ ಠಾಕೂರ್, ನಚಿಕೇತ್ ಭೂತೆ,
ಸ್ಟ್ಯಾಂಡ್‌ಬೈ ಆಟಗಾರರು: ಅಮನದೀಪ್ ಖರೆ, ಮಯಾಂಕ್ ಮಿಶ್ರಾ, ಸೌರಭ್ ರಾವತ್, ಭಾರ್ಗವ್ ಮೆರಾಯ್, ಕುನಾಲ್ ಯಾದವ್, ಕುಮಾರ್ ಕಾರ್ತಿಕೇಯ.
ಪಶ್ಚಿಮ ವಲಯಕ್ಕೆ ರುತುರಾಜ್, ಪೂರ್ವ ವಲಯಕ್ಕೆ ಕಿಶನ್
ಮತ್ತೊಂದೆಡೆ, ಆಯ್ಕೆ ಸಮಿತಿಯು ಭಾರತದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು ಪಶ್ಚಿಮ ವಲಯ ತಂಡದ ನಾಯಕನನ್ನಾಗಿ ನೇಮಿಸಿದೆ. ಹಿರಿಯ ಸ್ಪಿನ್ ಆಲ್‌ರೌಂಡರ್ ಶಮ್ಸ್ ಮುಲ್ಲಾನಿ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಏತನ್ಮಧ್ಯೆ, ಪೂರ್ವ ವಲಯ ತಂಡವನ್ನು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮುನ್ನಡೆಸಲಿದ್ದು, ವೈಭವ್ ಸೂರ್ಯವಂಶಿ ಉಪನಾಯಕರಾಗಿ ಸೇವೆ ಸಲ್ಲಿಸಲಿದ್ದಾರೆ.
Duleep Trophy 2025: ರಜತ್ ಪಾಟಿದರ್ ನಾಯಕತ್ವದಲ್ಲಿ ದುಲೀಪ್ ಟ್ರೋಫಿ ಗೆದ್ದ ಕೇಂದ್ರ ವಲಯ
ಇರಾನಿ ಕಪ್, ರಣಜಿ ಟ್ರೋಫಿ ವೇಳಾಪಟ್ಟಿ
ದುಲೀಪ್ ಟ್ರೋಫಿ ನಂತರ, ಅಕ್ಟೋಬರ್ 1 ರಿಂದ ಪ್ರತಿಷ್ಠಿತ ಇರಾನಿ ಕಪ್ ನಡೆಯಲಿದೆ. ಇದರಲ್ಲಿ, ರೆಸ್ಟ್ ಆಫ್ ಇಂಡಿಯಾ ತಂಡವು ಪ್ರಸ್ತುತ ರಣಜಿ ಟ್ರೋಫಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಎದುರಿಸಲಿದೆ. ಅದರ ನಂತರ, ಅಕ್ಟೋಬರ್ ನಿಂದ ಎರಡು ಹಂತಗಳಲ್ಲಿ ರಣಜಿ ಟ್ರೋಫಿ ನಡೆಯಲಿದೆ. ಇದರಲ್ಲಿ, 32 ತಂಡಗಳು ಎಲೈಟ್ ಗುಂಪಿನಲ್ಲಿ ಮತ್ತು 6 ತಂಡಗಳು ಪ್ಲೇಟ್ ಗುಂಪಿನಲ್ಲಿ ಸ್ಪರ್ಧಿಸಲಿವೆ.
