ನವದೆಹಲಿ, ಜುಲೈ 3: ಸಾಮಾಜಿಕ ಮಾಧ್ಯಮಗಳಲ್ಲಿ E20 ಎಥೆನಾಲ್ (Ethanol) ಇಂಧನದ ಕುರಿತು ಹರಡುತ್ತಿರುವ ಸುಳ್ಳು ಸುದ್ದಿಗಳು ಮತ್ತು ತಪ್ಪು ಕಲ್ಪನೆಗಳಿಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಜುಲೈ 2026ರಲ್ಲಿ ಬಿಡುಗಡೆ ಮಾಡಿದ ಅಧಿಕೃತ ವರದಿಯ ಆಧಾರದ ಮೇಲೆ ಸತ್ಯಾಸತ್ಯತೆಗಳ ವಿವರ ಇಲ್ಲಿದೆ. E20 ಎಥೆನಾಲ್ ಬಳಕೆಯಿಂದ ವಾಹನ ಹಾಳಾಗುತ್ತದೆ, ಮೈಲೇಜ್ ಗಣನೀಯವಾಗಿ ಕುಸಿಯುತ್ತದೆ ಎಂಬುದೆಲ್ಲಾ ಆಧಾರರಹಿತ ವದಂತಿಗಳು. ಎಥೆನಾಲ್ ಬಳಕೆಯಿಂದ ವಾಹನದ ವಾರಂಟಿ ಅಥವಾ ಇನ್ಶೂರೆನ್ಸ್ (ವಿಮೆ) ರದ್ದಾಗುವುದಿಲ್ಲ ಎಂದು ಸರ್ಕಾರ ಮತ್ತು ವಾಹನ ತಯಾರಕರು (SIAM) ಸ್ಪಷ್ಟಪಡಿಸಿದ್ದಾರೆ. ಭಾರತದ E20 ಯೋಜನೆ ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿದ್ದು, ARAI ಸಂಸ್ಥೆಯಿಂದ ಕಠಿಣ ತಪಾಸಣೆಗೆ ಒಳಪಟ್ಟ ನಂತರವೇ ಜಾರಿಗೆ ತರಲಾಗಿದೆ.
ಸಾಮಾಜಿಕ ಜಾಲತಾಣದ 10 ತಪ್ಪು ಕಲ್ಪನೆಗಳು ಮತ್ತು ಸತ್ಯ ಸಂಗತಿಗಳು:
1. “1 ಲೀಟರ್ ಎಥೆನಾಲ್ ತಯಾರಿಸಲು 10,000 ಲೀಟರ್ ನೀರು ಬೇಕು” ಎಂಬ ವದಂತಿ.
ನಿಜಾಂಶ: ಎಥೆನಾಲ್ ಕಾರ್ಖಾನೆಯಲ್ಲಿ 1 ಲೀಟರ್ ಎಥೆನಾಲ್ ಉತ್ಪಾದಿಸಲು ಕೇವಲ 3 ರಿಂದ 5 ಲೀಟರ್ ಸಂಸ್ಕರಿಸಿದ ನೀರು ಮಾತ್ರ ಬಳಕೆಯಾಗುತ್ತದೆ. ಅಲ್ಲದೆ, ಈ ಕಾರ್ಖಾನೆಗಳು ಶೂನ್ಯ ದ್ರವ ವಿಸರ್ಜನೆ (Zero Liquid Discharge) ತಂತ್ರಜ್ಞಾನದ ಮೂಲಕ ನೀರನ್ನು ಮರುಬಳಕೆ ಮಾಡುತ್ತವೆ. ಆಹಾರ ಭದ್ರತೆಯ ನಂತರ ಉಳಿಯುವ ಹೆಚ್ಚುವರಿ ಅಕ್ಕಿ ಮತ್ತು ಕಡಿಮೆ ನೀರು ಬೇಡುವ ಮೆಕ್ಕೆಜೋಳದಿಂದ 40%ಕ್ಕಿಂತ ಹೆಚ್ಚು ಎಥೆನಾಲ್ ತಯಾರಿಸಲಾಗುತ್ತಿದೆ.
ಇದನ್ನೂ ಓದಿ: ನನ್ನ ವಿರುದ್ಧ ಪೇಯ್ಡ್ ಅಭಿಯಾನ; ಆನ್‌ಲೈನ್‌ನಲ್ಲಿ ಎಥೆನಾಲ್ ಮಿಶ್ರಿತ ಇಂಧನ ಬಿಡುಗಡೆ ಕುರಿತ ಟೀಕೆಗೆ ನಿತಿನ್ ಗಡ್ಕರಿ ಬೇಸರ
2. “E20 ಭಾರತೀಯರ ಮೇಲಿನ ಅಪಾಯಕಾರಿ ಪ್ರಯೋಗ” ಎಂಬ ಆರೋಪ.
ನಿಜಾಂಶ: ಎಥೆನಾಲ್ ಮಿಶ್ರಿತ ಇಂಧನ ಬಳಕೆಗೆ ನೂರಾರು ವರ್ಷಗಳ ಇತಿಹಾಸವಿದೆ. ಅಮೆರಿಕಾದಲ್ಲಿ E10 ಸಾಮಾನ್ಯ ಇಂಧನವಾಗಿದ್ದು, E15ಗೆ ವಿಸ್ತರಿಸಲಾಗುತ್ತಿದೆ. ಬ್ರೆಜಿಲ್ ದೇಶದಲ್ಲಿ ಈಗಾಗಲೇ 27% ಎಥೆನಾಲ್ ಮಿಶ್ರಣ ಕಡ್ಡಾಯವಾಗಿದ್ದು, ಅದನ್ನು 35% ಗೆ ಏರಿಸಲು ನಿರ್ಧರಿಸಲಾಗಿದೆ. ಕೆನಡಾ, ಥೈಲ್ಯಾಂಡ್ ಮತ್ತು ಜಪಾನ್ ಕೂಡ ಇದನ್ನು ಬಳಸುತ್ತಿವೆ. ಇದು ಜಾಗತಿಕವಾಗಿ ಯಶಸ್ವಿಯಾದ ಮಾದರಿಯಾಗಿದೆ.
3. “ವಾಹನದ ಮೈಲೇಜ್ ಭೀಕರವಾಗಿ ಕುಸಿಯುತ್ತದೆ” ಎಂಬ ಆತಂಕ.
ನಿಜಾಂಶ: ARAI ನೇತೃತ್ವದಲ್ಲಿ ಕಾರುಗಳ ಮೇಲೆ 40,000 ಕಿ.ಮೀ ಮತ್ತು ದ್ವಿಚಕ್ರ ವಾಹನಗಳ ಮೇಲೆ 20,000 ಕಿ.ಮೀ ನಡೆಸಿರುವ ಸುದೀರ್ಘ ರಸ್ತೆ ಪ್ರಯೋಗಗಳಲ್ಲಿ ಮೈಲೇಜ್ ಮೇಲೆ ಯಾವುದೇ ಗಣನೀಯ ನಕಾರಾತ್ಮಕ ಪರಿಣಾಮ ಬೀರದಿರುವುದು ಸಾಬೀತಾಗಿದೆ. ಬದಲಿಗೆ ಎಥೆನಾಲ್‌ನ ಹೆಚ್ಚಿನ ಆಕ್ಟೇನ್ (108.5 RON) ಸಾಮರ್ಥ್ಯದಿಂದಾಗಿ ವಾಹನದ ಪಿಕ್-ಅಪ್ ಮತ್ತು ರೈಡಿಂಗ್ ಗುಣಮಟ್ಟ ಉತ್ತಮಗೊಳ್ಳುತ್ತದೆ.
4. “ಎಂಜಿನ್ ಭಾಗಗಳು ತುಕ್ಕು ಹಿಡಿಯುತ್ತವೆ ಮತ್ತು ಹಾಳಾಗುತ್ತವೆ” ಎಂಬ ಭಯ.
ನಿಜಾಂಶ: ತಜ್ಞರ ಸಮಿತಿಯ ಸಂಶೋಧನೆಯ ಪ್ರಕಾರ E20 ಇಂಧನದಿಂದ ಯಾವುದೇ ಮೆಟಲ್ ಅಥವಾ ಪ್ಲಾಸ್ಟಿಕ್ ಭಾಗಗಳಿಗೆ ಹಾನಿಯಾಗುವುದಿಲ್ಲ. ಕೇವಲ ಅತ್ಯಂತ ಹಳೆಯ ವಾಹನಗಳಲ್ಲಿ ಕೆಲವು ರಬ್ಬರ್ ಗ್ಯಾಸ್ಕೆಟ್‌ಗಳನ್ನು ಸ್ವಲ್ಪ ಮುಂಚಿತವಾಗಿ ಬದಲಾಯಿಸಬೇಕಾಗಬಹುದು, ಅಷ್ಟೆ. ಜೊತೆಗೆ, ಇದು ವಾಯುಮಾಲಿನ್ಯವನ್ನು (ಕಾರ್ಬನ್ ಮೊನಾಕ್ಸೈಡ್) 30% ರಿಂದ 50% ರಷ್ಟು ಕಡಿಮೆ ಮಾಡುತ್ತದೆ.
5. “ಕಾರ್ ಕಂಪನಿಗಳು ವಾರಂಟಿ ಮತ್ತು ಇನ್ಶೂರೆನ್ಸ್ ನಿರಾಕರಿಸುತ್ತವೆ” ಎಂಬ ಸುಳ್ಳು ಸುದ್ದಿ.
ನಿಜಾಂಶ: ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಜೂನ್ 2026 ರಲ್ಲಿ ಈ ಸುದ್ದಿಯನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಭಾರತೀಯ ಆಟೋಮೊಬೈಲ್ ಉದ್ಯಮದ ಒಕ್ಕೂಟ (SIAM) ಮತ್ತು ವಿಮಾ ಕಂಪನಿಗಳು E20 ಇಂಧನ ಬಳಸುವುದರಿಂದ ಯಾವುದೇ ವಾರಂಟಿ ಅಥವಾ ವಿಮೆ ಕ್ಲೈಮ್‌ಗೆ ಧಕ್ಕೆಯಾಗುವುದಿಲ್ಲ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿವೆ.
6. “ಪೆಟ್ರೋಲ್ ಟ್ಯಾಂಕ್‌ಗೆ ಇರುವೆ ಮತ್ತು ಜೇನುನೊಣಗಳು ಮುತ್ತಿಕೊಳ್ಳುತ್ತವೆ” ಎಂಬ ವೈರಲ್ ವಿಡಿಯೋ.
ನಿಜಾಂಶ: ಬಿಪಿಸಿಎಲ್ (BPCL) ಈ ಕುರಿತು ವೈಜ್ಞಾನಿಕ ಸ್ಪಷ್ಟನೆ ನೀಡಿದೆ. ಎಥೆನಾಲ್ ತಯಾರಿಕೆಯಲ್ಲಿ ಸಕ್ಕರೆಯ ಅಂಶ ಸಂಪೂರ್ಣವಾಗಿ ನಾಶವಾಗಿರುತ್ತದೆ. ಅಲ್ಲದೆ ಇದಕ್ಕೆ ಕೀಟಗಳನ್ನು ವಿಕರ್ಷಿಸುವ ಕೆಮಿಕಲ್‌ಗಳನ್ನು ಬೆರೆಸಲಾಗಿರುತ್ತದೆ. ಪೆಟ್ರೋಲ್ ವಾಸನೆಯ ಮುಂದೆ ಎಥೆನಾಲ್ ವಾಸನೆ ಇರುವುದೇ ಇಲ್ಲ. ಆದ್ದರಿಂದ ಕೀಟಗಳು ಆಕರ್ಷಿತವಾಗುತ್ತವೆ ಎಂಬುದು ಕೇವಲ ಕಲ್ಪನೆ.
ಇದನ್ನೂ ಓದಿ: ಇಂಧನ ಕ್ರಾಂತಿ: ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಸಂಪೂರ್ಣ ಮನ್ನಾ
7. “ಸರ್ಕಾರವೇ ಕೋರ್ಟ್‌ನಲ್ಲಿ ಇದೊಂದು ಪ್ರಯೋಗ ಎಂದಿದೆ” ಎಂಬ ತಪ್ಪು ವರದಿ.
ನಿಜಾಂಶ: ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಪ್ರಕರಣವು ತೈಲ ಕಂಪನಿಗಳ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ್ದೇ ವಿನಃ ಇಂಧನದ ಗುಣಮಟ್ಟದ ಮೇಲಲ್ಲ. ಭಾರತದ ಅಟಾರ್ನಿ ಜನರಲ್ (AGI) ಜೂನ್ 30, 2026 ರಂದು ಅಧಿಕೃತ ನೋಟಿಸ್ ಬಿಡುಗಡೆ ಮಾಡಿ, ಸರ್ಕಾರ ಎಲ್ಲೂ ಇಂತಹ ಹೇಳಿಕೆ ನೀಡಿಲ್ಲ ಎಂದು ಮಾಧ್ಯಮಗಳ ವರದಿಯನ್ನು ತಿದ್ದಿದ್ದಾರೆ.
8. “E20 ಪೆಟ್ರೋಲ್ ಟ್ಯಾಂಕ್ ಒಳಗೆ ನೀರು ಸೇರಿಕೊಳ್ಳುವಂತೆ ಮಾಡುತ್ತದೆ” ಎಂಬ ವದಂತಿ.
ನಿಜಾಂಶ: ಪೆಟ್ರೋಲ್ ಬಂಕ್‌ಗಳ ಭೂಗತ ಟ್ಯಾಂಕ್‌ಗಳಲ್ಲಿ ಮತ್ತು ಇಂದಿನ ಆಧುನಿಕ ವಾಹನಗಳಲ್ಲಿ ನೀರು ಒಳಹೋಗದಂತೆ ತಡೆಯಲು ಸಿಲಿಕಾ ಜೆಲ್ ಟ್ರ್ಯಾಪ್ಸ್, ವಿಶೇಷ ಗ್ಯಾಸ್ಕೆಟ್ ಮತ್ತು ಸೀಲೆಂಟ್‌ಗಳಂತಹ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಇರುತ್ತದೆ. ನೀರು ಇಂಧನ ಟ್ಯಾಂಕ್ ಸೇರಲು ತಪ್ಪು ನಿರ್ವಹಣೆ ಕಾರಣವೇ ಹೊರತು ಎಥೆನಾಲ್ ಅಲ್ಲ.
9. “ಪೆಟ್ರೋಲ್‌ಗೆ ನೇರವಾಗಿ ಕಬ್ಬಿನ ಹಾಲು ಮಿಕ್ಸ್ ಮಾಡಲಾಗುತ್ತಿದೆ” ಎಂಬ ನಕಲಿ ವಿಡಿಯೋಗಳು.
ನಿಜಾಂಶ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಂತಹ ವಿಡಿಯೋಗಳು ಸಂಪೂರ್ಣ ನಕಲಿ. ಕಬ್ಬಿನ ಹಾಲನ್ನು ನೇರವಾಗಿ ಪೆಟ್ರೋಲ್‌ಗೆ ಬೆರೆಸಲಾಗುವುದಿಲ್ಲ. ಅದನ್ನು ಅತ್ಯಂತ ಕಠಿಣ ಕೈಗಾರಿಕಾ ಸಂಸ್ಕರಣೆ ಮತ್ತು ಶುದ್ಧೀಕರಣ ಪ್ರಕ್ರಿಯೆಗೆ ಒಳಪಡಿಸಿ, ಇಂಧನದ ದರ್ಜೆಗೆ ತಂದ ನಂತರವೇ ತೈಲ ಕಂಪನಿಗಳು ವೈಜ್ಞಾನಿಕವಾಗಿ ಮಿಶ್ರಣ ಮಾಡುತ್ತವೆ.
10. “ಎಥೆನಾಲ್ ಮಿಶ್ರಣದಿಂದ ವಾಹನ ಸವಾರರಿಗೆ ಯಾವುದೇ ಲಾಭವಿಲ್ಲ” ಎಂಬ ವಾದ.
ನಿಜಾಂಶ: ಎಥೆನಾಲ್ ಸ್ಥಳೀಯವಾಗಿ ಉತ್ಪಾದನೆಯಾಗುವುದರಿಂದ ದೇಶದ ಆಮದು ವೆಚ್ಚ ಇಳಿಕೆಯಾಗಿ ಆರ್ಥಿಕತೆಗೆ ಬಲ ಸಿಗುತ್ತದೆ. ಮಾಲಿನ್ಯ ಮುಕ್ತ ಪರಿಸರ ನಿರ್ಮಾಣವಾಗುತ್ತದೆ ಮತ್ತು ಈ ಹಣ ವಿದೇಶಿ ತೈಲ ಕಂಪನಿಗಳಿಗೆ ಹೋಗುವ ಬದಲು ನೇರವಾಗಿ ನಮ್ಮ ದೇಶದ ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ತಲುಪುತ್ತದೆ.
E20 ಎಂದರೇನು?:
E20 ಎಂದರೆ 80% ಪೆಟ್ರೋಲ್ ಮತ್ತು 20% ಎಥೆನಾಲ್ ಮಿಶ್ರಣವಿರುವ ಇಂಧನವಾಗಿದೆ. ಎಥೆನಾಲ್ ಒಂದು ಜೈವಿಕ ಇಂಧನವಾಗಿದ್ದು, ಇದನ್ನು ಕಬ್ಬು, ಜೋಳ, ಹಾಳಾದ ಅಕ್ಕಿ ಮತ್ತು ಧಾನ್ಯಗಳ ಹುದುಗುವಿಕೆ ಪ್ರಕ್ರಿಯೆಯಿಂದ ತಯಾರಿಸಲಾಗುತ್ತದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ, ಏಪ್ರಿಲ್ 1ರಿಂದ ಭಾರತದಾದ್ಯಂತ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ E20 ಮಿಶ್ರಿತ ಪೆಟ್ರೋಲ್ ಮಾರಾಟವನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾನ್ಯ ಶುದ್ಧ ಪೆಟ್ರೋಲ್ ಮಾರುಕಟ್ಟೆಯಲ್ಲಿ ಬಹುತೇಕ ಲಭ್ಯವಿಲ್ಲ.
ಭಾರತ ಸರ್ಕಾರವು ನಿಗದಿಪಡಿಸಿಕೊಂಡಿದ್ದ ಕಾಲಮಿತಿಗಿಂತ ಮುಂಚಿತವಾಗಿಯೇ (ನವೆಂಬರ್ 2025 ರಲ್ಲೇ) ದೇಶಾದ್ಯಂತ 20% ಎಥೆನಾಲ್ ಮಿಶ್ರಣ ಮಾಡುವ ಮೈಲಿಗಲ್ಲನ್ನು ಯಶಸ್ವಿಯಾಗಿ ತಲುಪಿದೆ. ಸರ್ಕಾರವು ಮುಂಬರುವ ವರ್ಷಗಳಲ್ಲಿ ಎಥೆನಾಲ್ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿ E22 ಮತ್ತು E30 ಇಂಧನಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಏಪ್ರಿಲ್ 2023ರ ನಂತರ ಬಿಡುಗಡೆಯಾದ ಬಹುತೇಕ ಎಲ್ಲಾ ಕಾರು ಮತ್ತು ಬೈಕ್‌ಗಳು E20 ಇಂಧನಕ್ಕೆ ಹೊಂದಿಕೊಳ್ಳುವಂತೆ ಸಿದ್ಧಪಡಿಸಲಾಗಿರುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
