ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಸೂಪರ್ 8 ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಇಂಗ್ಲೆಂಡ್ ತಂಡ ಅಜೇಯ ತಂಡವಾಗಿ ಸೆಮಿಫೈನಲ್ಗೆ ಎಂಟ್ರಿಕೊಟ್ಟಿದೆ. ಇತ್ತ 17ನೇ ಓವರ್ವರೆಗೂ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದ ನ್ಯೂಜಿಲೆಂಡ್ ಕೊನೆಯ ಮೂರು ಓವರ್ಗಳಲ್ಲಿ ಹಳಿತಪ್ಪಿದರಿಂದ ಸೋಲಿಗೆ ಕೊರಳೊಡ್ಡಬೇಕಾಯಿತು. ಈ ಪಂದ್ಯದಲ್ಲಿನ ಸೋಲಿನ ಹೊರತಾಗಿಯೂ ನ್ಯೂಜಿಲೆಂಡ್ ತಂಡದ ಸೆಮಿಫೈನಲ್ ಕನಸು ಜೀವಂತವಾಗಿದ್ದು, ನಾಳೆ ನಡೆಯಲಿರುವ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಗೆದ್ದರೆ, ನ್ಯೂಜಿಲೆಂಡ್ ಸೆಮಿಫೈನಲ್ಗೇರಲಿದೆ. ಇತ್ತ ಪಾಕಿಸ್ತಾನ ದೊಡ್ಡ ಗೆಲುವು ದಾಖಲಿಸಿ ನೆಟ್ ರನ್ರೇಟ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿದರೆ, ಅದು ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
