ನವದೆಹಲಿ, ಏಪ್ರಿಲ್ 25: ಬೆಂಗಳೂರು ನಗರ ಪಾಲಿಕೆಗಳ ಚುನಾವಣೆಯ ಕುರಿತಾಗಿ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆಯನ್ನು ಜೂನ್ 30ರೊಳಗೆ ನಡೆಸುವ ಬದಲು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲು ಮನವಿ ಮಾಡಿದೆ.
ಜಾತಿಗಣತಿಯಲ್ಲೇ ನಿರತರಾಗಿರುವ ಸಿಬ್ಬಂದಿ
ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಗಡುವಿನೊಳಗೆ ಚುನಾವಣೆಯನ್ನು ಪೂರ್ಣಗೊಳಿಸಲು ಸಿಬ್ಬಂದಿ ಮತ್ತು ಹಣದ ಕೊರತೆ ಇದೆ ಎಂದು ಆಯೋಗ ತಿಳಿಸಿದೆ. ಇದೇ ವೇಳೆ ಜನಗಣತಿ ಕಾರ್ಯಗಳು ಏಪ್ರಿಲ್ 16ರಿಂದ ಮೇ 15ರವರೆಗೆ ನಡೆಯುತ್ತಿರುವುದರಿಂದ ಕ್ಷೇತ್ರದ ಸಿಬ್ಬಂದಿ ಅದರಲ್ಲಿ ನಿರತರಾಗಿರುತ್ತಾರೆ ಎಂದು ಹೇಳಲಾಗಿದೆ. ಜೊತೆಗೆ, ಮತದಾರರ ಪಟ್ಟಿಯ ವಿಶೇಷ ತಿದ್ದುಪಡಿ (SIR) ಕಾರ್ಯವೂ ನಡೆಯುವ ಸಾಧ್ಯತೆ ಇರುವುದರಿಂದ ಚುನಾವಣಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕ್ಷಣ ಹಣ ಬಿಡುಗಡೆ ಮಾಡುವಂತೆ ಬೇಡಿಕೆ
ಈ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಖ್ಯ ಆಯುಕ್ತರು ಏಪ್ರಿಲ್ 6ರಂದು ಪತ್ರ ಬರೆದು ಚುನಾವಣೆಗೆ ಗಡುವು ವಿಸ್ತರಿಸುವಂತೆ ಕೇಳಿಕೊಂಡಿದ್ದರು. ಬಳಿಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯೂ ಇದೇ ಬೇಡಿಕೆಯನ್ನು ಪುನರಾವರ್ತಿಸಿದೆ. ಆಯೋಗವು ಏಪ್ರಿಲ್ 18ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಚುನಾವಣೆಯನ್ನು ಜೂನ್ 30ರೊಳಗೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದೆ.
ಚುನಾವಣೆ ನಡೆಸಲು ಅಗತ್ಯವಾದ ಸಿಬ್ಬಂದಿ, ಮೂಲಸೌಕರ್ಯ ಹಾಗೂ ಫಂಡ್ಗಾಗಿ ರಾಜ್ಯ ಸರ್ಕಾರದ ಮೇಲೆಯೇ ಸಂಪೂರ್ಣ ಅವಲಂಬಿತವಾಗಿರುವುದಾಗಿ ಆಯೋಗ ಹೇಳಿದ್ದು, ತಕ್ಷಣ ಹಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೇಳಿಕೊಂಡಿದೆ. ಈ ಕುರಿತು ಸೂಕ್ತ ಆದೇಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ