GT vs MI: 6ನೇ ಪಂದ್ಯದಲ್ಲೂ ಭರವಸೆ ಕಳೆದುಕೊಂಡಿದ್ದ ಮುಂಬೈಗೆ ಬಲ ತುಂಬಿದ ತಿಲಕ್ ಶತಕ – Kannada News | IPL 2026: Tilak Varma’s Maiden Century Powers MI to 199 vs GT

ಐಪಿಎಲ್ 2026 ರ 30 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಿತ್ತು. ಈ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ ಮುಂಬೈ ಮುಂದಿನ ಹಂತವನ್ನು ತಲುಪಬೇಕೆಂದರೆ ಉಳಿದ ಎಲ್ಲಾ ಪಂದ್ಯವನ್ನು ಗೆಲ್ಲಬೇಕು. ಅದರಂತೆ ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡ ತಿಲಕ್ ವರ್ಮಾ ಅವರ ಸ್ಫೋಟಕ ಶತಕದ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್​ಗಳನ್ನು ಕಳೆದುಕೊಂಡು 199 ರನ್ ಕಲೆಹಾಕಿತು. ಈ ಮೂಲಕ ಗುಜರಾತ್ ಗೆಲುವಿಗೆ 200 ರನ್​ಗಳ ಗುರಿ ನೀಡಿದೆ.

ಮುಂಬೈಗೆ ಕಳಪೆ ಆರಂಭ

ಎಂದಿನಂತೆ ಈ ಪಂದ್ಯದಲ್ಲೂ ಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ತಂಡ ಪವರ್‌ಪ್ಲೇನಲ್ಲಿಯೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ರಬಾಡ ದಾಳಿಗೆ ತತ್ತರಿಸಿದ ಮುಂಬೈ ಅಗ್ರಕ್ರಮಾಂಕ ಕುಸಿಯಿತು. ಆದಾಗ್ಯೂ ಈ ಸಂಕಷ್ಟದ ಸಮಯದಲ್ಲಿ ತಂಡದ ಇನ್ನಿಂಗ್ಸ್ ಕಟ್ಟಿದ ತಿಲಕ್ ವರ್ಮಾ ಆರಂಭದಲ್ಲಿ ತಾಳ್ಮೆಯ ಆಟಕ್ಕೆ ಮುಂದಾದರು. ನಮನ್ ದೀರ್ ಜೊತೆಗೂಡಿ ತಂಡವನ್ನು ಶತಕದಂಚಿಗೆ ತಂದರು. ಆದರೆ ಅರ್ಧಶತಕದಂಚಿನಲ್ಲಿ ಎಡವಿದ ನಮನ್ 45 ರನ್​ಗಳಿಗೆ ಔಟಾದರು.

ತಿಲಕ್ ಚೊಚ್ಚಲ ಶತಕ

ಇದಾದ ನಂತರ ನಾಯಕ ಹಾರ್ದಿಕ್ ಪಾಂಡ್ಯರಿಂದ ಉತ್ತಮ ಬೆಂಬಲ ಪಡೆದ ತಿಲಕ್ ಗುಜರಾತ್ ವೇಗಿಗಳ ಬೆವರಿಳಿಸಿದರು. ಅದರಲ್ಲೂ ಕೊನೆಯ 4 ಓವರ್‌ಗಳಲ್ಲಿ ಉಗ್ರರೂಪ ತಾಳಿದ ತಿಲಕ್ ತಂಡವನ್ನು 150 ರನ್​ಗಳ ಗಡಿ ದಾಟಿಸಿದಲ್ಲದೆ 200 ರನ್​ಗಳಿಗೆ ಕೊಂಡೊಯ್ದರು. 20 ನೇ ಓವರ್​ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಿಲಕ್ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಶತಕವನ್ನು ಪೂರೈಸಿದರು. ಟಿ20 ಕ್ರಿಕೆಟ್​ನಲ್ಲಿ ಎರಡು ಶತಕಗಳನ್ನು ಬಾರಿಸಿರುವ ತಿಲಕ್​ಗೆ ಇದು ಐಪಿಎಲ್‌ನಲ್ಲಿ ಮೊದಲ ಶತಕವಾಗಿದೆ.

ಅಜೇಯ101 ರನ್

ಮೇಲೆ ಹೇಳಿದಂತೆ 17ನೇ ಓವರ್​ನಿಂದ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿದ ತಿಲಕ್ ಈ ಓವರ್​ನಲ್ಲಿ ಒಂದು ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಈ ಓವರ್​ಗೂ ಮುನ್ನ ತಿಲಕ್ 28 ಎಸೆತಗಳಲ್ಲಿ 37ರನ್ ಕಲೆಹಾಕಿದ್ದರು. ಇದಾದ ಬಳಿಕ 18ನೇ ಓವರ್​ನಲ್ಲಿ ಬೌಂಡರಿಗಳ ಮಳೆಗರೆದ ತಿಲಕ್ ಈ ಓವರ್​ನಲ್ಲಿ 3 ಸಿಕ್ಸರ್ ಹಾಗೂ 2 ಭರ್ಜರಿ ಬೌಂಡರಿಗಳನ್ನು ಬಾರಿಸಿದರು. ಇದರೊಂದಿಗೆ ಅರ್ಧಶತಕವನ್ನು ಪೂರೈಸಿದರು. 19ನೇ ಓವರ್​ನಲ್ಲಿ ತಿಲಕ್ ಬ್ಯಾಟ್​ನಿಂದ 1 ಬೌಂಡರಿ ಬಂದರೆ, 20ನೇ ಓವರ್​ನಲ್ಲಿ ತಿಲಕ್ 2 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ತಮ್ಮ ಶತಕ ಪೂರೈಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 45 ಎಸೆತಗಳನ್ನು ಎದುರಿಸಿದ ತಿಲಕ್ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಅಜೇಯ101 ರನ್ ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:33 pm, Mon, 20 April 26

Source link

Leave a Reply

Your email address will not be published. Required fields are marked *