ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ತಂಡ 2026 ರ ಐಪಿಎಲ್ ಫೈನಲ್ಗೆ ಟಿಕೆಟ್ ಪಡೆದುಕೊಂಡಿದೆ. ಈ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 214 ರನ್ ಬಾರಿಸಿ ಗುಜರಾತ್ಗೆ 215 ರನ್ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 18.4 ಓವರ್ಗಳಲ್ಲಿ ಗೆಲುವಿನ ದಡ ಮುಟ್ಟಿತು. ಇದೀಗ ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ತಂಡವನ್ನು ಎದುರಿಸಲಿದೆ. ವಾಸ್ತವವಾಗಿ ಇದೇ ಗುಜರಾತ್ ವಿರುದ್ಧ ಕ್ವಾಲಿಫೈಯರ್ 1 ರಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ಫೈನಲ್ಗೇರಿತ್ತು. ಇದೀಗ ಈ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.
