ಅರಣ್ಯ ಇಲಾಖೆ ನಡೆಗೆ ವ್ಯಕ್ತವಾಯ್ತು ಭಾರಿ ಅನುಮಾನ
ಚಾಮರಾಜನಗರ, ಆಗಸ್ಟ್ 19: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಮೂವರ ಎನ್ಕೌಂಟರ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಸಂಪೂರ್ಣ ಘಟನೆ ಗೊಂದಲದ ಗೂಡಾಗಿ ಪರಿಣಮಿಸಿದೆ. ಪ್ರಸ್ತುತ ಅರಣ್ಯ ಸಿಬ್ಬಂದಿಯ ನಡೆ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಕಳ್ಳ ಬೇಟೆ ಶಿಬಿರ ಸ್ಪೋಟ: ಮುಚ್ಚಿಡಲಾಯಿತೇ ಮಾಹಿತಿ?
ದಟ್ಟ ಕಾನನದ ಒಳಗಿರುವ ಹೊಳೆ ಮುರುದಟ್ಟಿ ಕಳ್ಳ ಬೇಟೆ ತಡೆ (APC) ಕ್ಯಾಂಪ್ಗೆ ಆಗಸ್ಟ್ 17 ರಂದು ದುಷ್ಕರ್ಮಿಗಳು ನುಗ್ಗಿ, ಜಿಲೆಟಿನ್ ಕಡ್ಡಿಗಳನ್ನು ಇಟ್ಟು ಕಟ್ಟಡವನ್ನು ಸ್ಪೋಟಿಸಿದ್ದಾರೆ. ಕಾಡಿನೊಳಗೆ ರಾಜಾರೋಷವಾಗಿ ತೆರಳಿ ಅರಣ್ಯ ಇಲಾಖೆಯ ಕಟ್ಟಡಗಳನ್ನೇ ಟಾರ್ಗೆಟ್ ಮಾಡಿದ್ದು ಯಾರು? ಎನ್ಕೌಂಟರ್ಗೆ ಪ್ರತಿಯಾಗಿ ಉದ್ರಿಕ್ತರು ಕೌಂಟರ್ ಅಟ್ಯಾಕ್ ಮಾಡಿದರೇ ಅಥವಾ ಇಷ್ಟೊಂದು ಜಿಲೆಟಿನ್ ಸ್ಪೋಟಕಗಳು ಅವರ ಕೈಗೆ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆಗಳು ಕಾಡುತ್ತಿವೆ. ಇಷ್ಟೆಲ್ಲಾ ದೊಡ್ಡ ಘಟನೆ ನಡೆದರೂ ಅರಣ್ಯ ಸಿಬ್ಬಂದಿ ಈ ಮಾಹಿತಿಯನ್ನು ಹೊರಗೆ ಲೀಕ್ ಆಗದಂತೆ ಮುಚ್ಚಿಟ್ಟಿರುವುದು ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ.
4 ಆಂಟಿ ಪೋಚಿಂಗ್ ಕ್ಯಾಂಪ್ಗಳ ಬ್ಲಾಸ್ಟ್
ಶೂಟೌಟ್ ಘಟನೆಯ ಬೆನ್ನಲ್ಲೇ ಕಾವೇರಿ ವನ್ಯಜೀವಿ ಧಾಮದಲ್ಲಿ ಮತ್ತೊಂದು ಭೀಕರ ಹಾಗೂ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ಘಟನೆಯನ್ನು ದುರುಪಯೋಗಪಡಿಸಿಕೊಂಡ ಕಿಡಿಗೇಡಿಗಳು ಅರಣ್ಯ ಇಲಾಖೆಯ ನಾಲ್ಕು ಆಂಟಿ ಪೋಚಿಂಗ್ ಕ್ಯಾಂಪ್ಗಳನ್ನು (APC) ಜಿಲೆಟಿನ್ ಬಳಸಿ ಬ್ಲಾಸ್ಟ್ ಮಾಡಿದ್ದಾರೆ! ವನ್ಯಧಾಮದ ಒಳ್ಳಮರದ ಹಟ್ಟಿ, ಮತ್ತಿಪುರ, ಬೂದಿಕೆರೆ ಹಾಗೂ ಕಳ್ಳಿದೊಡ್ಡಿ ಕ್ಯಾಂಪ್ಗಳು ಸಂಪೂರ್ಣ ದ್ವಂಸಗೊಂಡಿದ್ದು, ಅರಣ್ಯ ರಕ್ಷಣಾ ವ್ಯವಸ್ಥೆಯನ್ನೇ ಧ್ವಂಸಗೊಳಿಸುವ ಹಂತಕ್ಕೆ ದುಷ್ಕರ್ಮಿಗಳು ತಲುಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ ಹನೂರು ಪ್ರಕರಣ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ
4ನೇ ಆರೋಪಿ ನಾಪತ್ತೆ ಮತ್ತು ಆಸ್ಪತ್ರೆಯ ಡ್ರಾಮಾ
ಇನ್ನೊಂದೆಡೆ, ಪ್ರಕರಣದ ನಾಲ್ಕನೇ ಆರೋಪಿ ಮಹಿಮ್ ದಾಸ್ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ದಿಢೀರ್ ನಾಪತ್ತೆಯಾಗಿದ್ದಾನೆ. ಆಸ್ಪತ್ರೆಯಲ್ಲಿದ್ದಾಗ ಆತನನ್ನು ವಶಕ್ಕೆ ಪಡೆಯಲು ಅರಣ್ಯ ಸಿಬ್ಬಂದಿ ಯಾಕೆ ಮುಂದಾಗಲಿಲ್ಲ? ಪ್ರಸ್ತುತ ಅಜ್ಞಾತ ಸ್ಥಳದಲ್ಲಿ ಕುಳಿತು ವಿಡಿಯೋಗಳನ್ನು ಹರಿಬಿಡುತ್ತಿರುವ ಮಹಿಮ್ ದಾಸ್ ನಡೆ ಅರಣ್ಯ ಇಲಾಖೆಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ