ಇಂದಿನ ಈ ಕಾರ್ಯನಿರತ ಜೀವನದಲ್ಲಿ ಹೆಚ್ಚಿನವರು ಒತ್ತಡಕ್ಕೊಳಗಾಗಿದ್ದಾರೆ. ಕೆಲಸ, ಕುಟುಂಬದ ಜವಾಬ್ದಾರಿಯ ಚಿಂತೆಯಿಂದಾಗಿ ಸಂತೋಷವಾಗಿರುವುದನ್ನೇ (Happy) ಮರೆತುಬಿಟ್ಟಿದ್ದಾರೆ. ಇನ್ನೂ ಅನೇಕರು ಸಂತೋಷವವನ್ನು ಕಂಡುಕೊಳ್ಳುವುದು ಸವಾಲಿನ ಕೆಲಸವೇ ಸರಿ ಎಂಬು ಭಾವಿಸುತ್ತಾರೆ. ಆದರೆ ಹ್ಯಾಪಿ ಆಗಿರೋದು ಅಷ್ಟು ಕಷ್ಟದ ಕೆಲಸವೇನಲ್ಲ, ಕೆಲವು ಸರಳ ಅಭ್ಯಾಸಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂತೋಷವಾಗಿರಬಹುದು. ಸಂತೋಷದಾಯಕ ಜೀವನಕ್ಕೆ ಸಹಕಾರಿಯಾದ ಆ ಅಭ್ಯಾಸಗಳು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.
ಸಂತೋಷವಾಗಿರಲು ಏನು ಮಾಡಬೇಕು?
ಸಕಾರಾತ್ಮಕ ಮನಸ್ಥಿತಿಯನ್ನು ಇಟ್ಟುಕೊಳ್ಳಿ: ಸಂತೋಷದ ಮೊದಲ ಹೆಜ್ಜೆ ನಿಮ್ಮ ಆಲೋಚನೆಯಲ್ಲಿ ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳುವುದು. ಪ್ರತಿಯೊಂದು ಸನ್ನಿವೇಶದಲ್ಲೂ ನಿಮಗೆ ಏನಾದರೂ ಒಳ್ಳೆಯದೇ ಆಗುತ್ತದೆ ಎಂದು ನೀವು ನಂಬಿದಾಗ, ನೀವು ಸಂತೋಷವಾಗಿರುತ್ತೀರಿ. ಆಗ ನಿಮ್ಮ ತಲೆಯಲ್ಲಿ ಚಿಂತೆಗಳು ಓಡಾಡುವುದಿಲ್ಲ. ಅದೇ ನೀವು ಎಲ್ಲದರ ಬಗ್ಗೆಯೂ ಅತಿಯಾಗಿ ಯೋಚಿಸಲು ಪ್ರಾರಂಭಿಸಿದಾಗ ಒತ್ತಡ ಹೆಚ್ಚಾಗುತ್ತದೆ.
ನೃತ್ಯ ಮಾಡಿ: ನೃತ್ಯವು ಕೇವಲ ವ್ಯಾಯಾಮದ ಒಂದು ರೂಪವಲ್ಲ, ಅದು ನಿಮ್ಮ ಮನಸ್ಥಿತಿಯನ್ನು ಸಹ ಸುಧಾರಿಸುತ್ತದೆ. ನಿಮ್ಮನ್ನು ಸಂತೋಷವಾಗಿರಿಸುವುದರ ಜೊತೆಗೆ, ನೃತ್ಯವು ನಿಮ್ಮ ದೇಹದ ನಮ್ಯತೆಯನ್ನು ಹೆಚ್ಚಿಸುತ್ತದೆ, ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಇದು ನಿಮ್ಮ ಹೃದಯವನ್ನು ಸಹ ಆರೋಗ್ಯವಾಗಿಡುತ್ತದೆ. ಹಾಗಾಗಿ ಪ್ರತಿನಿತ್ಯ ಸ್ವಲ್ಪ ಹೊತ್ತು ಡಾನ್ಸ್ ಮಾಡಿ.
ಸಂಬಂಧಗಳನ್ನು ಬಲಪಡಿಸಿ: ಸಂತೋಷವಾಗಿರಲು, ಬಲವಾದ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ, ನಿಮ್ಮ ಆಲೋಚನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಹೀಗೆ ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳುವ ಮೂಲಕ ನೀವು ಸಂತೋಷವಾಗಿರುತ್ತೀರಿ.
ಹೊಸ ಚಟುವಟಿಕೆಗಳನ್ನು ಮಾಡುತ್ತಿರಿ: ನಾವೆಲ್ಲರೂ ಪ್ರತಿದಿನ ಹೊಸದನ್ನು ಕಲಿಯಬೇಕು. ಹೊಸ ಅನುಭವಗಳು ಮನಸ್ಸನ್ನು ಸಂತೋಷಗೊಳಿಸುತ್ತದೆ ಮತ್ತು ಜೀವನಕ್ಕೆ ತಾಜಾತನವನ್ನು ತರುತ್ತವೆ. ಹೊಸ ಪುಸ್ತಕಗಳನ್ನು ಓದುವುದು, ಹೊಸ ಸ್ಥಳಗಳಿಗೆ ಭೇಟಿ ನೀಡುವುದು, ಹೊಸ ಕೌಶಲ್ಯಗಳನ್ನು ಕಲಿಯುವುದು ಈ ಎಲ್ಲಾ ಚಟುವಟಿಕೆಗಳು ನಿಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತವೆ.
ನಿಮಗೆ ನೀವು ಸಮಯ ಕೊಡಿ: ನೀವು ಎಷ್ಟೇ ಕಾರ್ಯನಿರತರಾಗಿದ್ದರೂ ಸಹ, ನಿಮಗಾಗಿ ನೀವು ಸಮಯವನ್ನು ಮೀಸಲಿಡುವುದು ಬಹಳ ಮುಖ್ಯ. ನಿಮ್ಮ ಹವ್ಯಾಸಗಳತ್ತ ಗಮನಹರಿಸಿ, ಧ್ಯಾನ ಮಾಡಿ ಅಥವಾ ಸ್ವಲ್ಪ ಸಮಯ ಒಂಟಿಯಾಗಿ ಪ್ರಕೃತಿಯೊಂದಿಗೆ ಸಮಯ ಕಳೆಯಿರಿ. ಇದು, ಹೆಚ್ಚು ಶಾಂತಿಯಿಂದಿರಲು ಮತ್ತು ಸಂತೋಷವಾಗಿರಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮಹಿಳೆಯರು ತಮ್ಮ ಈ ಪರ್ಸನಲ್ ವಿಷಯಗಳನ್ನು ಯಾರ ಬಳಿಯೂ ಶೇರ್ ಮಾಡಬಾರದು
ವ್ಯಾಯಾಮ ಮಾಡಿ: ವ್ಯಾಯಾಮವು ನಿಮ್ಮ ದೇಹಕ್ಕೆ ಮಾತ್ರವಲ್ಲ, ನಿಮ್ಮ ಮಾನಸಿಕ ಆರೋಗ್ಯಕ್ಕೂ ಮುಖ್ಯವಾಗಿದೆ. ವ್ಯಾಯಾಮ ಮಾಡುವುದರಿಂದ ನೀವು ಒತ್ತಡ ಮುಕ್ತರಾಗುತ್ತೀರಿ. ಅಲ್ಲದೆ ವ್ಯಾಯಾಮವು ಸಂತೋಷವನ್ನು ಹೆಚ್ಚಿಸುತ್ತದೆ, ಇದು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ: ನಿಮ್ಮನ್ನು ನೀವು ಯಾವತ್ತಿಗೂ ಇತರರೊಂದಿಗೆ ಹೋಲಿಸಿಕೊಳ್ಳಬೇಡಿ. ನೀವು ನಿಮ್ಮನ್ನು ಹೋಲಿಸಿಕೊಳ್ಳಲು ಪ್ರಾರಂಭಿಸಿದಾಗ, ನೀವು ಸ್ವಯಂಚಾಲಿತವಾಗಿ ಅತೃಪ್ತರಾಗುತ್ತೀರಿ ಮತ್ತು ಚಿಂತೆ ನಿಮ್ಮನ್ನು ಆವರಿಸುತ್ತದೆ. ಅದೇ ನಿಮ್ಮಲ್ಲಿ ಏನಿದೆಯೋ ಅದರಲ್ಲಿಯೇ ತೃಪ್ತಿಪಟ್ಟಾಗ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುತ್ತದೆ. ಮುಖ್ಯವಾಗಿ ಆಗಿ ಹೋದ ವಿಚಾರಗಳಿಗೆ ಚಿಂತಿಸುವ ಬದಲು ವರ್ತಮಾನದಲ್ಲಿ ಬದುಕಲು ಪ್ರಯತ್ನಿಸಿ.
ಸಣ್ಣ ವಿಷಯಗಳನ್ನು ಸಹ ಆಚರಿಸಿ: ಜನ ಜೀವನದಲ್ಲಿ ಪ್ರತಿಯೊಂದು ಸಣ್ಣ ವಿಷಯದ ಬಗ್ಗೆಯೂ ಚಿಂತಿಸುತ್ತಾರೆ, ಆದರೆ ಸಣ್ಣ ಸಂತೋಷಗಳನ್ನು ಆಚರಿಸುವುದಿಲ್ಲ. ಜೀವನದಲ್ಲಿ ಪ್ರತಿಯೊಂದು ಸಣ್ಣ ಸಂತೋಷವನ್ನು ಹಬ್ಬದಂತೆ ಆಚರಿಸಿ. ಇದು ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದರಿಂದ ಒತ್ತಡವೂ ನಿವಾರಣೆಯಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:11 pm, Mon, 10 August 26