ದೇವಾಲಯಗಳಲ್ಲಿ, ಪೂರ್ವಿಕರ ಸಮಾಧಿಗಳ ಬಳಿ ಅಥವಾ ಅಶ್ವತ್ಥ ವೃಕ್ಷಗಳ ಸುತ್ತಲೂ ಪ್ರದಕ್ಷಿಣೆಗಳನ್ನು ಮಾಡುವುದು ಭಾರತೀಯ ಸಂಸ್ಕೃತಿಯಲ್ಲಿ ಅಸ್ತಿತ್ವದಲ್ಲಿದೆ. ಸಾಮಾನ್ಯವಾಗಿ, ಜನರು ಮೂರು ಪ್ರದಕ್ಷಿಣೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಆದರೆ, ಕೆಲವೊಂದು ದೇವರುಗಳಿಗೆ ನಿರ್ದಿಷ್ಟ ಸಂಖ್ಯೆಯ ಪ್ರದಕ್ಷಿಣೆಗಳು ಪರಿಪೂರ್ಣ ಫಲವನ್ನು ನೀಡುತ್ತವೆ ಎಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿ ಹೇಳುವಂತೆ, ಪ್ರದಕ್ಷಿಣೆ ಎಂದರೆ ಗೌರವವನ್ನು ಸಲ್ಲಿಸುವುದು, ಭಗವಂತನನ್ನು ನೆನಪಿಸಿಕೊಳ್ಳುವುದು ಮತ್ತು ನಮ್ಮ ಭಾವನೆಗಳನ್ನು ನಿವೇದಿಸುವುದು. ದೇವಾಲಯ ಅಥವಾ ಸಮಾಧಿಗಳಲ್ಲಿ ಮೂರು ಪ್ರದಕ್ಷಿಣೆಗಳನ್ನು ಹಾಕುವುದು ವೈಜ್ಞಾನಿಕವಾಗಿ ಮತ್ತು ಧಾರ್ಮಿಕವಾಗಿ ವಿಶೇಷ ಮಹತ್ವವನ್ನು ಹೊಂದಿದೆ. ಈ ಮೂರು ಸಂಖ್ಯೆಯು ಈ ಪ್ರಪಂಚದ ತ್ರಿಗುಣಗಳಾದ ಸತ್ವಗುಣ, ರಜೋಗುಣ ಮತ್ತು ತಮೋಗುಣಗಳ ಸಂಕೇತವಾಗಿದೆ. ಹಾಗೆಯೇ, ಇದು ಮೂರು ಲೋಕಗಳಾದ ಮತ್ಸ್ಯಲೋಕ, ಸ್ವರ್ಗಲೋಕ ಮತ್ತು ಪಾತಾಳಲೋಕಗಳ ಪ್ರತೀಕವೂ ಆಗಿದೆ. ಪ್ರದಕ್ಷಿಣೆ ಹಾಕುವಾಗ, ಈ ಮೂರು ಲೋಕಗಳಲ್ಲಿರುವ ಭಗವಂತನ ಪ್ರಭಾವವನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ಆತನು ನಮ್ಮ ಕಷ್ಟಗಳನ್ನು ಆಲಿಸಿ ವಿಮುಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
ಗದ್ದುಗೆಗಳಲ್ಲಿ ಪ್ರದಕ್ಷಿಣೆ ಮಾಡುವಾಗ, ನಾವು ನಮ್ಮ ತ್ರಿಗುಣಗಳನ್ನು ಸಮತೋಲನದಲ್ಲಿ ಇಡಲು ಆಶೀರ್ವಾದವನ್ನು ಕೋರುತ್ತೇವೆ. ಸತ್ವಗುಣ, ರಜೋಗುಣ ಮತ್ತು ತಮೋಗುಣಗಳ ಸಮತೋಲನವು ಮನಸ್ಸಿನ ಶಾಂತಿಗೆ ಮತ್ತು ಸರಿಯಾದ ನಿರ್ಧಾರಗಳಿಗೆ ಕಾರಣವಾಗುತ್ತದೆ. ಕೋಪ, ತಾಪಗಳಿಂದ ಜೀವನದಲ್ಲಿ ಉಂಟಾಗುವ ಕಷ್ಟಗಳನ್ನು ನಿವಾರಿಸಲು ಈ ತ್ರಿಗುಣಗಳ ಸಮತೋಲನ ಅತ್ಯಗತ್ಯ. ಕಾಯ (ದೇಹ), ವಾಚ (ಮಾತು) ಮತ್ತು ಮನಸ (ಮನಸ್ಸು) ಈ ಮೂರು ರೀತಿಯಲ್ಲಿ ಸಂಪೂರ್ಣವಾಗಿ ಶರಣಾಗತಿಯಾಗುವುದರ ಸಂಕೇತವಾಗಿ ಪ್ರದಕ್ಷಿಣೆಗಳನ್ನು ಮಾಡಲಾಗುತ್ತದೆ.
ಹಿಂದೂ ಸನಾತನ ಸಂಸ್ಕೃತಿಯಲ್ಲಿ ಕೆಲವು ದೇವರುಗಳಿಗೆ ಪ್ರದಕ್ಷಿಣೆಯ ಸಂಖ್ಯೆಯು ಭಿನ್ನವಾಗಿದೆ:
- ಗಣಪತಿಗೆ (ವಿನಾಯಕನಿಗೆ): ಒಂದು ಪೂರ್ಣ ಪ್ರದಕ್ಷಿಣೆ ಸಾಕು ಎಂದು ಹೇಳಲಾಗುತ್ತದೆ. ಹೆಜ್ಜೆಗಳನ್ನು ಅಕ್ಕಪಕ್ಕದಲ್ಲಿ ಇಟ್ಟು ನಿಧಾನವಾಗಿ ಸುತ್ತುವುದು ಹೆಚ್ಚು ಶ್ರೇಷ್ಠವೆಂದು ಹಿರಿಯರು ಹೇಳುತ್ತಾರೆ.
- ಶಿವನಿಗೆ: ಪರಿಪೂರ್ಣ ಪ್ರದಕ್ಷಿಣೆ ಬೇಕಾಗಿಲ್ಲ. ಅರ್ಧ ಪ್ರದಕ್ಷಿಣೆ (ಸೋಮಸೂತ್ರ ಪ್ರದಕ್ಷಿಣೆ) ಸಾಕು.
- ದೇವಿಯ ದೇವಸ್ಥಾನಗಳಲ್ಲಿ: ನಾಲ್ಕು ಪ್ರದಕ್ಷಿಣೆಗಳನ್ನು ಮಾಡಬೇಕು. ಇದು ನಾಲ್ಕು ದಿಕ್ಕುಗಳ ಪ್ರತೀಕವಾಗಿದೆ.
- ಸೂರ್ಯ ಭಗವಾನರಿಗೆ: ಆತ್ಮ ನಮಸ್ಕಾರದ ರೂಪದಲ್ಲಿ ನಾವು ಇರುವ ಜಾಗದಲ್ಲೇ ಏಳು ಸುತ್ತು ಸುತ್ತಿದರೆ ಸೂರ್ಯನ ಪರಿಪೂರ್ಣ ಅನುಗ್ರಹ ದೊರೆಯುತ್ತದೆ.
ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!
ಸಾಮಾನ್ಯವಾಗಿ, ಮೂರು ಪ್ರದಕ್ಷಿಣೆಗಳು ಶುಭ ಫಲಗಳನ್ನು ನೀಡುತ್ತವೆ. ಕೆಲವರು ಹರಕೆಗಳನ್ನು ಹೊತ್ತುಕೊಂಡು ನೂರು ಅಥವಾ ಹನ್ನೊಂದು ಪ್ರದಕ್ಷಿಣೆಗಳನ್ನು ಮಾಡುತ್ತಾರೆ. ಇದು ಅವರ ವೈಯಕ್ತಿಕ ಭಕ್ತಿ ಮತ್ತು ಸಂತೃಪ್ತಿಗೆ ಸಂಬಂಧಿಸಿದೆ. “ಯದ್ಭಾವಂ ತದ್ಭವತಿ” ಎಂಬಂತೆ, ಭಕ್ತಿಯಿಂದ ಮಾಡಿದ ಪ್ರದಕ್ಷಿಣೆಗಳು ಫಲಕಾರಿಯಾಗುತ್ತವೆ. ದೇವಾಲಯಗಳಲ್ಲಿ ಗರ್ಭಗುಡಿಯ ಪ್ರದಕ್ಷಿಣೆ, ಪ್ರಾಕಾರದ ಪ್ರದಕ್ಷಿಣೆ ಮತ್ತು ಸಂಪೂರ್ಣ ದೇವಸ್ಥಾನದ ಪ್ರದಕ್ಷಿಣೆ ಹೀಗೆ ಹಲವು ರೀತಿಯ ಪ್ರದಕ್ಷಿಣೆಗಳು ಅಸ್ತಿತ್ವದಲ್ಲಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
