ಕೇಂದ್ರ ಸರ್ಕಾರದ ಪ್ರಮುಖ ತೈಲ ಕಂಪನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL), 2026-27ನೇ ಸಾಲಿಗೆ ಗ್ರಾಜುಯೇಟ್ ಅಪ್ರೆಂಟಿಸ್ (ಎಂಜಿನಿಯರಿಂಗ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಅಭಿಯಾನದ ಅಡಿಯಲ್ಲಿ ದೇಶಾದ್ಯಂತ ಒಟ್ಟು 358 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಎಂಜಿನಿಯರಿಂಗ್ ಪದವೀಧರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಸಿವಿಲ್ ಎಂಜಿನಿಯರಿಂಗ್, ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಲಭ್ಯವಿವೆ.
ರಾಜ್ಯವಾರು ಖಾಲಿ ಹುದ್ದೆಗಳ ವಿವರ:
ರಾಜ್ಯವಾರು ಖಾಲಿ ಹುದ್ದೆಗಳ ವಿವರಗಳನ್ನು ನೋಡುವುದಾದರೆ, ಮಹಾರಾಷ್ಟ್ರದಲ್ಲಿ ಗರಿಷ್ಠ 64 ಹುದ್ದೆಗಳು, ಕರ್ನಾಟಕದಲ್ಲಿ 14, ಉತ್ತರ ಪ್ರದೇಶದಲ್ಲಿ 37, ಗುಜರಾತ್‌ನಲ್ಲಿ 32, ತಮಿಳುನಾಡಿನಲ್ಲಿ 20, ತೆಲಂಗಾಣದಲ್ಲಿ 19, ದೆಹಲಿಯಲ್ಲಿ 18, ರಾಜಸ್ಥಾನದಲ್ಲಿ 17, ಪಂಜಾಬ್‌ನಲ್ಲಿ 16 ಹಾಗೂ ಆಂಧ್ರಪ್ರದೇಶದಲ್ಲಿ 15 ಹುದ್ದೆಗಳು ಲಭ್ಯವಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ (B.E/B.Tech) ಪೂರ್ಣಗೊಳಿಸಿರಬೇಕು.
ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!
ವಯೋಮಿತಿಗೆ ಸಂಬಂಧಿಸಿದ ವಿವರ:
ವಯೋಮಿತಿಗೆ ಸಂಬಂಧಿಸಿದಂತೆ, ಜುಲೈ 31, 2026 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳ ವಯಸ್ಸು 18 ರಿಂದ 25 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಪ್ರತಿ ತಿಂಗಳಿಗೆ 25,000ರೂ. ಸ್ಟೈಫಂಡ್ ನೀಡಲಾಗುತ್ತದೆ.
ಯಾವುದೇ ಲಿಖಿತ ಪರೀಕ್ಷೆಯಿಲ್ಲ:
ಈ ನೇಮಕಾತಿಯ ವಿಶೇಷತೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ, ಪ್ರಮಾಣಪತ್ರಗಳ ಪರಿಶೀಲನೆ ಮತ್ತು ಸಂಸ್ಥೆಯ ನಿಯಮಾವಳಿಗಳನ್ನು ಅನುಸರಿಸಿ ನೇರ ಆಯ್ಕೆ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 31 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
