Human Fridge: ಮಾರುಕಟ್ಟೆಗೆ ಬಂತು ಮನುಷ್ಯರನ್ನು ತಂಪಾಗಿಸುವ ವಿಶೇಷ ಫ್ರಿಡ್ಜ್ – Kannada News | Human fridge Japan do hiemon box cools body in 10 minutes

ಬೇಸಿಗೆಯ ತೀವ್ರ ಬಿಸಿಲು (Summer) ಮತ್ತು ಹೀಟ್‌ಸ್ಟ್ರೋಕ್‌ನಿಂದ ಜನರನ್ನು ರಕ್ಷಿಸಲು ಜಪಾನ್‌ನಲ್ಲಿ ವಿಶೇಷ ರೀತಿಯ ‘ಹ್ಯೂಮನ್ ಫ್ರಿಡ್ಜ್’ (Human Fridge) ಅಭಿವೃದ್ಧಿಪಡಿಸಲಾಗಿದೆ. ಸಾಮಾನ್ಯವಾಗಿ “ಬಿಸಿಲು ತುಂಬಾ ಇದೆ, ಫ್ರಿಡ್ಜ್ ಒಳಗೆ ಕುಳಿತುಕೊಳ್ಳಬೇಕು ಅನಿಸುತ್ತಿದೆ” ಎಂದು ಹಲವರು ತಮಾಷೆಗೆ ಹೇಳುತ್ತಾರೆ. ಆದರೆ ಜಪಾನ್ ಈ ಕಲ್ಪನೆಯನ್ನು ನಿಜವಾಗಿಸಿದೆ. ಡೋ ಹಿಯೆಮನ್ ಬಾಕ್ಸ್ (Do Hiemon Box) ಎಂದು ಕರೆಯಲಾಗುವ ಈ ಸಾಧನವು ನೋಡಲು ಸಾಮಾನ್ಯ ಫ್ರಿಡ್ಜ್‌ನಂತೆಯೇ ಕಾಣಿಸಿದರೂ, ಆಹಾರ ವಸ್ತುಗಳನ್ನು ತಂಪಾಗಿಡಲು ಅಲ್ಲ, ಮನುಷ್ಯರ ದೇಹವನ್ನು ಶೀಘ್ರವಾಗಿ ತಂಪಾಗಿಸಲು ವಿನ್ಯಾಸಗೊಳಿಸಲಾಗಿದೆ. ಕಂಪನಿಯ ಪ್ರಕಾರ, ಇದರಲ್ಲಿ ಸುಮಾರು 10 ನಿಮಿಷ ಕುಳಿತರೆ ದೇಹದ ಉಷ್ಣತೆಯನ್ನು ಸಾಮಾನ್ಯ ಮಟ್ಟಕ್ಕೆ ತರಲು ಸಹಾಯವಾಗುತ್ತದೆ.

ಜಪಾನ್‌ನಲ್ಲಿ ವೆಂಡಿಂಗ್ ಮೆಷಿನ್‌ಗಳ ಬಳಕೆ ಹೆಚ್ಚಿರುವುದರಿಂದ, ಅದೇ ಮಾದರಿಯಲ್ಲಿ ಈ ಸಾಧನವನ್ನು ರೂಪಿಸಲಾಗಿದೆ. ಇದನ್ನು ತಯಾರಿಸಿರುವ SDRC ಕಂಪನಿ ಮುಖ್ಯವಾಗಿ ವೆಂಡಿಂಗ್ ಮೆಷಿನ್‌ಗಳನ್ನು ನಿರ್ಮಿಸುವ ಸಂಸ್ಥೆಯಾಗಿದೆ. ಈ ಫ್ರಿಡ್ಜ್ ಮಾದರಿಯ ಕ್ಯಾಬಿನ್‌ನ ಒಳಗಿನ ತಾಪಮಾನವನ್ನು ಯಾವಾಗಲೂ ಸುಮಾರು 15 ಡಿಗ್ರಿ ಸೆಲ್ಸಿಯಸ್ ಮಟ್ಟದಲ್ಲಿ ಕಾಯ್ದುಕೊಳ್ಳಲಾಗುತ್ತದೆ. ಒಳಗೆ ಕಾಲಿಟ್ಟ ತಕ್ಷಣವೇ ತಂಪಿನ ಅನುಭವವಾಗುತ್ತದೆ. ಅದರೊಳಗೆ ಒಂದು ವಿಶೇಷ ಕುರ್ಚಿಯೂ ಇದ್ದು, ಅದರಲ್ಲಿ ಕುಳಿತಾಗ ತಲೆ, ಕುತ್ತಿಗೆ, ಭುಜ ಮತ್ತು ಬೆನ್ನಿನ ಭಾಗಕ್ಕೆ ಸುಮಾರು 5 ಡಿಗ್ರಿ ಸೆಲ್ಸಿಯಸ್ ತಂಪಾದ ಗಾಳಿಯನ್ನು ಬೀಸಲಾಗುತ್ತದೆ. ಇದರಿಂದ ದೇಹದ ಉಷ್ಣತೆ ವೇಗವಾಗಿ ಕಡಿಮೆಯಾಗುತ್ತದೆ.

ಹ್ಯೂಮನ್ ಫ್ರಿಡ್ಜ್:

ಈ ಸಾಧನದಲ್ಲಿ ಸುಮಾರು 5 ನಿಮಿಷ ಕುಳಿತರೆ ಸಾಕಷ್ಟು ನಿರಾಳತೆ ಸಿಗುತ್ತದೆ ಎಂದು ಕಂಪನಿ ಹೇಳಿದೆ. ಸುಮಾರು 10 ನಿಮಿಷ ಬಳಸಿದರೆ ತೀವ್ರ ಬಿಸಿಲು ಅಥವಾ ಲೂನಿಂದ ಉಂಟಾಗುವ ಆಯಾಸವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು. ಅತಿಯಾದ ತಂಪಿನಿಂದ ಬಳಕೆದಾರರಿಗೆ ತೊಂದರೆಯಾಗದಂತೆ, ಈ ಯಂತ್ರವು 20 ನಿಮಿಷಗಳ ನಂತರ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ. ಮತ್ತೊಂದು ವಿಶೇಷವೆಂದರೆ, ಇದು ಸಾಮಾನ್ಯ ಏರ್ ಕಂಡೀಷನರ್‌ಗಿಂತ ಸುಮಾರು ಅರ್ಧದಷ್ಟು ವಿದ್ಯುತ್ ಮಾತ್ರ ಬಳಸುತ್ತದೆ. ಜೊತೆಗೆ, ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಿ ಬಳಸಬಹುದಾಗಿದೆ.

ಗ್ರಾಹಕರಿಗೆ DND ಆಯ್ಕೆ ತೋರಿಸಿ, ಬ್ಲಾಕ್ಡ್ ಬ್ಯಾಡ್ಜ್ ಅಲ್ಲ; ಟ್ರೂಕಾಲರ್​ಗೆ ಸರ್ಕಾರ ನಿರ್ದೇಶನ

ಜಪಾನ್‌ನಲ್ಲಿ ಈ ಹ್ಯೂಮನ್ ಫ್ರಿಡ್ಜ್ ಈ ವರ್ಷದ ಏಪ್ರಿಲ್‌ನಿಂದ ಮಾರಾಟಕ್ಕೆ ಲಭ್ಯವಿದೆ. ವರದಿಗಳ ಪ್ರಕಾರ, ಇದರ ಒಂದು ಘಟಕವನ್ನು ಗುನ್ಮಾ ಪ್ರಾಂತ್ಯದ ಮಯೆಬಾಶಿ ಸಿಟಿ ಹಾಲ್‌ಗೆ ದಾನ ಮಾಡಲಾಗಿದ್ದು, ಸಾರ್ವಜನಿಕರು ಅದನ್ನು ಉಚಿತವಾಗಿ ಬಳಸುತ್ತಿದ್ದಾರೆ. ವಿಶೇಷವಾಗಿ ಕಾರ್ಖಾನೆಗಳು, ಕಟ್ಟಡ ನಿರ್ಮಾಣ ಸ್ಥಳಗಳು, ಗೋದಾಮುಗಳು ಹಾಗೂ ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಇದು ಬಹಳ ಉಪಯುಕ್ತ ಸಾಧನವಾಗಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ ಸುಮಾರು 15 ಲಕ್ಷ ಯೆನ್ (ಸುಮಾರು 9 ಲಕ್ಷ ರೂಪಾಯಿ) ಆಗಿದ್ದು, ಮುಖ್ಯವಾಗಿ ಕಂಪನಿಗಳು ಮತ್ತು ಸಂಸ್ಥೆಗಳ ಬಳಕೆಗೆ ಉದ್ದೇಶಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *